वाचनम्
ಭಾಗಸೂಚನಾ
ಭಗೀರಥನ ತಪಸ್ಸಿನಿಂದ ಸಂತುಷ್ಟನಾದ ಶ್ರೀಶಂಕರನು ಗಂಗೆಯನ್ನು ಶಿರದಲ್ಲಿ ಧರಿಸಿ ಬಿಂದು ಸರೋವರದಲ್ಲಿ ಬಿಡುವುದು, ಅದು ಏಳು ಪ್ರವಾಹಗಳಾಗಿ ಭಗೀರಥನೊಂದಿಗೆ ಪಾತಾಳಕ್ಕೆ ಹೋಗಿ ಅವನ ಪಿತೃಗಳನ್ನು ಉದ್ಧರಿಸಿದುದು
ಮೂಲಮ್ - 1
ದೇವದೇವೇ ಗತೇ ತಸ್ಮಿನ್ ಸೋಽಂಗುಷ್ಠಾಗ್ರನಿ ಪೀಡಿತಾಮ್ ।
ಕೃತ್ವಾ ವಸುಮತೀಂ ರಾಮ ವತ್ಸರಂ ಸಮುಪಾಸತ ॥
ಅನುವಾದ
ಶ್ರೀರಾಮಾ! ದೇವಾದಿದೇವ ಬ್ರಹ್ಮನು ಹೊರಟು ಹೋದಮೆಲೆ ಭಗೀರಥ ರಾಜನು ಪೃಥ್ವಿಯಲ್ಲಿ ಕೇವಲ ಕಾಲಿನ ಹೆಬ್ಬೆರಳಿನ ಮೇಲೆ ನಿಂತು ಒಂದು ವರ್ಷ ಭಗವಾನ್ ಶಂಕರನ ಉಪಾಸನೆಯಲ್ಲಿ ತೊಡಗಿದನು.॥1॥
ಮೂಲಮ್ - 2
ಅಥ ಸಂವತ್ಸರೇ ಪೂರ್ಣೇ ಸರ್ವಲೋಕ ನಮಸ್ಕೃತಃ ।
ಉಮಾಪತಿಃ ಪಶುಪತಿಃ ರಾಜಾನಮಿದಮಬ್ರವೀತ್ ॥
ಅನುವಾದ
ಒಂದು ವರ್ಷ ಪೂರ್ಣವಾದಾಗ ಸರ್ವಲೋಕವಂದಿತ ಉವಾಪತಿ ಪಶುಪತಿಯು ಪ್ರಕಟನಾಗಿ ರಾಜನಲ್ಲಿ ಈ ಪ್ರಕಾರ ಹೇಳಿದನು.॥2॥
ಮೂಲಮ್ - 3
ಪ್ರೀತಸ್ತೇಽಹಂ ನರಶ್ರೇಷ್ಠ ಕರಿಷ್ಯಾಮಿ ತವ ಪ್ರಿಯಮ್ ।
ಶಿರಸಾ ಧಾರಯಿಷ್ಯಾಮಿ ಶೈಲರಾಜ ಸುತಾಮಹಮ್ ॥
ಅನುವಾದ
ನರಶ್ರೇಷ್ಠನೇ! ನಾನು ನಿನ್ನ ಮೇಲೆ ಬಹಳ ಪ್ರಸನ್ನನಾಗಿರುವೆನು. ನಿನ್ನ ಪ್ರಿಯವನ್ನು ಅವಶ್ಯವಾಗಿ ಮಾಡುವೆನು. ನಾನು ಗಿರಿರಾಜಕುಮಾರಿ ಗಂಗಾದೇವಿಯನ್ನು ಮಸ್ತಕದಲ್ಲಿ ಧರಿಸುವೆನು.॥3॥
ಮೂಲಮ್ - 4½
ತತೋ ಹೈಮವತೀ ಜ್ಯೇಷ್ಠಾ ಸರ್ವಲೋಕನಮಸ್ಕೃತಾ ।
ತದಾ ಸಾತಿಮಹದ್ರೂಪಂ ಕೃತ್ವಾ ವೇಗಂ ಚ ದುಃಸಹಮ್ ॥
ಆಕಾಶಾದಪತದ್ ರಾಮ ಶಿವೇ ಶಿವಶಿರಸ್ಯುತ ।
ಅನುವಾದ
ಶ್ರೀರಾಮಾ! ಪರಶಿವನು ಭಗೀರಥನಿಗೆ ಹೀಗೆ ಹೇಳಿದೊಡನೆಯೇ ಸರ್ವಲೋಕ ನಮಸ್ಕೃತೆಯಾದ ಹಿಮವಂತನ ಹಿರಿಯ ಮಗಳಾದ ಗಂಗಾದೇವಿಯು ಮಹಾರೂಪವನ್ನು ತಾಳಿ ತಡೆಯಲಸಾಧ್ಯವಾದ ವೇಗದಿಂದ ಕೂಡಿ ಸಕಲ ಕಲ್ಯಾಣ ಗುಣಗಳಿಗೂ ಮೂಲಭೂತನಾದ ಪರಶಿವನ ತಲೆಯ ಮೇಲೆ ಆಕಾಶದಿಂದ ಧುಮುಕಿದಳು.॥4½॥
ಮೂಲಮ್ - 5½
ಅಚಿಂತಯಚ್ಚ ಸಾ ದೇವೀ ಗಂಗಾ ಪರಮದುರ್ಧರಾ ॥
ವಿಶಾಮ್ಯಹಂ ಹಿ ಪಾತಾಲಂ ಸ್ರೋತಸಾ ಗೃಹ್ಯ ಶಂಕರಮ್ ।
ಅನುವಾದ
ಆಗ ಪರಮ ದುರ್ಧರ ಗಂಗಾದೇವಿಯು ಯೋಚಿಸಿದಳು. ನಾನು ನನ್ನ ಪ್ರಖರ ಪ್ರವಾಹದೊಂದಿಗೆ ಶಂಕರನನ್ನು ಎತ್ತಿಕೊಂಡು ಪಾತಾಳಲೋಕಕ್ಕೆ ಹೊರಟು ಹೋಗುತ್ತೇನೆ.॥5½॥
ಮೂಲಮ್ - 6½
ತಸ್ಯಾವಲೇಪನಂ ಜ್ಞಾತ್ವಾಕ್ರುದ್ಧಸ್ತು ಭಗವಾನ್ ಹರಃ ॥
ತಿರೋಭಾವಯಿತುಂ ಬುದ್ಧಿಂ ಚಕ್ರೇ ತ್ರಿಣಯನಸ್ತದಾ ।
ಅನುವಾದ
ಗಂಗೆಯ ಈ ಅಹಂಕಾರವನ್ನು ತಿಳಿದ ತ್ರಿನೇತ್ರಧಾರಿ ಭಗವಾನ್ ಹರನು ಕುಪಿತನಾಗಿ ಗಂಗೆಯನ್ನು ಅದಶ್ಯ ಗೊಳಿಸಲು ಯೋಚಿಸಿದನು.॥6½॥
ಮೂಲಮ್ - 7
ಸಾ ತಸ್ಮಿನ್ ಪತಿತಾ ಪುಣ್ಯಾ ಪುಣ್ಯೇ ರುದ್ರಸ್ಯ ಮೂರ್ಧನಿ ॥
ಮೂಲಮ್ - 8
ಹಿಮವತ್ ಪ್ರತಿಮೇ ರಾಮ ಜಟಾಮಂಡಲಗಹ್ವರೇ ।
ಸಾ ಕಥಂಚಿನ್ಮಹೀಂ ಗಂತುಂ ನಾಶಕ್ನೋದ್ಯತ್ನಮಾಸ್ಥಿತಾ ॥
ಅನುವಾದ
ಪುಣ್ಯಸ್ವರೂಪೆ ಗಂಗೆಯು ಭಗವಾನ್ ರುದ್ರನ ಪವಿತ್ರ ಮಸ್ತಕದಲ್ಲಿ ಧುಮುಕಿದಳು. ಶಿವನ ಮಸ್ತಕದ ಜಟಾ ಮಂಡಲವು ಗುಹೆಗಳಿಂದ ಸುಶೋಭಿತ ಹಿಮಾಲಯದಂತೆ ಕಂಡುಬರುತ್ತಿತ್ತು. ಅದರಲ್ಲಿ ಬಿದ್ದು ಗಂಗೆಯು ಎಷ್ಟೇ ಪ್ರಯತ್ನ ಮಾಡಿದರೂ ಯಾವ ರೀತಿಯಿಂದಲೂ ಪೃಥ್ವಿಗೆ ಹೋಗಲು ಸಾಧ್ಯವಾಗಲಿಲ್ಲ.॥7-8॥
ಮೂಲಮ್ - 9
ನೈವ ಸಾ ನಿರ್ಗಮಂ ಲೇಭೇ ಜಟಾಮಂಡಲಮಂತತಃ ।
ತತ್ರೈವಾಬಭ್ರಮದ್ದೇವೀ ಸಂವತ್ಸರಗಣಾನ್ ಬಹೂನ್ ॥
ಅನುವಾದ
ಭಗವಾನ್ ಶಿವನ ಜಟಾಮಂಡಲದಲ್ಲಿ ಸಿಕ್ಕಿಹಾಕಿಕೊಂಡು ಗಂಗಾದೇವಿಗೆ ಹೊರಗೆ ಹೊರಡುವ ಮಾರ್ಗವೇ ಸಿಗಲಿಲ್ಲ. ಹೀಗೆ ಅನೇಕ ವರ್ಷಗಳ ತನಕ ಜಟಾಜೂಟದಲ್ಲೇ ಸಿಲುಕಿಕೊಂಡಿದ್ದಳು.॥9॥
ಮೂಲಮ್ - 10
ತಾಮಪಶ್ಯತ್ ಪುನಸ್ತತ್ರ ತಪಃ ಪರಮಮಾಸ್ಥಿತಃ ।
ಸ ತೇನ ತೋಷಿತಶ್ಚಾಸೀದತ್ಯಂತಂ ರಘುನಂದನ ॥
ಅನುವಾದ
ರಘುನಂದನ! ಗಂಗೆಯು ಭಗವಾನ್ ಶಂಕರನ ಜಟಾಮಂಡಲದಲ್ಲಿ ಅದೃಶ್ಯಳಾಗಿರುವುದನ್ನು ನೋಡಿ ಭಗೀರಥನು ಪುನಃ ಕಠಿಣ ತಪಸ್ಸಿಗೆ ತೊಡಗಿದನು. ಆ ತಪಸ್ಸಿನಿಂದ ಭಗವಾನ್ ಶಿವನನ್ನು ಸಂತುಷ್ಟಗೊಳಿಸಿದನು.॥10॥
ಮೂಲಮ್ - 11
ವಿಸಸರ್ಜ ತತೋ ಗಂಗಾಂ ಹರೋ ಬಿಂದುಸರಃ ಪ್ರತಿ ।
ತಸ್ಯಾಂ ವಿಸೃಜ್ಯಮಾನಾಯಾಂ ಸಪ್ತ ಸ್ರೋತಾಂಸಿ ಜಜ್ಞಿರೇ ॥
ಅನುವಾದ
ಆಗ ಮಹಾದೇವನು ಗಂಗೆಯನ್ನು ಬಿಂದು ಸರೋವರಕ್ಕೆ ಕೊಂಡು ಹೋಗಿಬಿಟ್ಟನು. ಅಲ್ಲಿ ಬಿಡುತ್ತಲೇ ಗಂಗೆಯ ಏಳು ಪ್ರವಾಹಗಳಾಗಿ ಹರಿದಳು.॥11॥
ಮೂಲಮ್ - 12
ಹ್ಲಾದಿನೀ ಪಾವನೀ ಚೈವ ನಲಿನೀ ಚ ತಥೈವ ಚ ।
ತಿಸ್ರಃ ಪ್ರಾಚೀಂ ದಿಶಂ ಜಗ್ಮುರ್ಗಂಗಾಃ ಶಿವಜಲಾಃ ಶುಭಾಃ ॥
ಅನುವಾದ
ಹ್ಲಾದಿನೀ, ಪಾವನೀ ಮತ್ತು ನಲಿನೀ ಹೀಗೆ ಕಲ್ಯಾಣಮಯ ಜಲದಿಂದ ಸುಶೋಭಿತಳಾದ ಗಂಗೆಯ ಮೂರು ಪ್ರವಾಹಗಳು ಪೂರ್ವ ದಿಕ್ಕಿಗೆ ಹರಿದವು.॥12॥
ಮೂಲಮ್ - 13
ಸುಚಕ್ಷುಶ್ಚೈವ ಸೀತಾ ಚ ಸಿಂಧುಶ್ಚೈವ ಮಹಾನದೀ ।
ತಿಸ್ರಶ್ಚೈತಾ ದಿಶಂ ಜಗ್ಮುಃ ಪ್ರತೀಚೀಂ ತು ದಿಶಂ ಶುಭಾಃ ॥
ಅನುವಾದ
ಸುಚಕ್ಷು, ಸೀತಾ ಮತ್ತು ಮಹಾನದಿ ಸಿಂಧು - ಈ ಮೂರು ಶುಭಪ್ರವಾಹಗಳು ಪಶ್ಚಿಮ ದಿಕ್ಕಿಗೆ ಹರಿದವು.॥13॥
ಮೂಲಮ್ - 14
ಸಪ್ತಮೀ ಚಾನ್ವಗಾತ್ ತಾಸಾಂ ಭಗೀರಥರಥಂ ತದಾ ।
ಭಗೀರಥೋಽಪಿ ರಾಜರ್ಷಿರ್ದಿವ್ಯಂ ಸ್ಯಂದನಮಾಸ್ಥಿತಃ ॥
ಮೂಲಮ್ - 15
ಪ್ರಾಯಾದಗ್ರೇ ಮಹಾತೇಜಾ ಗಂಗಾ ತಂ ಚಾಪ್ಯನುವ್ರಜತ್ ।
ಗಗನಾಚ್ಛಂಕರಶಿರಸ್ತತೋ ಧರಣಿಮಾಗತಾ ॥
ಅನುವಾದ
ಏಳನೆಯ ಪ್ರವಾಹವು ಮಹಾರಾಜ ಭಗೀರಥನ ಬಯಕೆಯಂತೆ ಅವನ ರಥದ ಹಿಂದೆ-ಹಿಂದೆ ಹೊರಟಳು. ಮಹಾತೇಜಸ್ವೀ ರಾಜರ್ಷಿ ಭಗೀರಥನೂ ಕೂಡ ದಿವ್ಯ ರಥದಲ್ಲಿ ಮುಂದೆ ಮುಂದೆ ಸಾಗುತ್ತಿದ್ದನು. ಗಂಗೆಯು ಅವನನ್ನು ಅನುಸರಿಸಿ ಹೋಗುತ್ತಿದ್ದಳು. ಈ ಪ್ರಕಾರ ಆಕೆಯು ಆಕಾಶದಿಂದ ಭಗವಾನ್ ಶಂಕರನ ಮಸ್ತಕದಲ್ಲಿ ಮತ್ತು ಅಲ್ಲಿಂದ ಈ ಪೃಥ್ವಿಗೆ ಬಂದಳು.॥14-15॥
ಮೂಲಮ್ - 16½
ಅಸರ್ಪತ ಜಲಂ ತತ್ರ ತೀವ್ರಶಬ್ದಪುರಸ್ಕೃತಮ್ ।
ಮತ್ಸ್ಯಕಚ್ಛಪಸಂಘೈಶ್ಚ ಶಿಂಶುಮಾರಗಣೈಸ್ತಥಾ ॥
ಪತದ್ಭಿಃ ಪತಿತೈಶ್ಚೈವ ವ್ಯರೋಚತ ವಸುಂಧರಾ ।
ಅನುವಾದ
ಗಂಗೆಯ ಆ ಜಲರಾಶಿಯು ಕಲ-ಕಲ ನಿನಾದದೊಂದಿಗೆ ವೇಗವಾಗಿ ಪ್ರವಾಹಿತಳಾದಳು. ಆ ಪ್ರವಾಹದಲ್ಲಿ ಮೀನು, ಆಮೆ, ಶಿಂಶುಮಾರ (ಕಪಿಯ ಆಕಾರದ ಜಲಚರ ಪ್ರಾಣಿ) ಹಿಂಡು-ಹಿಂಡಾಗಿ ಬೀಳುತ್ತಿದ್ದವು. ಆ ಬಿದ್ದಿರುವ ಜಲ ಜಂತುಗಳಿಂದ ವಸುಂಧರೆಯು ಬಹಳ ಶೋಭಿಸುತ್ತಿದ್ದಳು.॥16½॥
ಮೂಲಮ್ - 17
ತತೋ ದೇವರ್ಷಿಗಂಧರ್ವಾ ಯಕ್ಷಸಿದ್ಧಗಣಾಸ್ತಥಾ ॥
ಮೂಲಮ್ - 18
ವ್ಯಲೋಕಯಂತ ತೇತತ್ರಗಗನಾದ್ ಗಾಂ ಗತಾಂ ತದಾ ।
ವಿಮಾನೈರ್ನಗರಾಕಾರೈರ್ಹಯೈರ್ಗಜವರೈಸ್ತದಾ ॥
ಅನುವಾದ
ಅನಂತರ ದೇವತೆಗಳು, ಋಷಿಗಳು, ಗಂಧರ್ವರು, ಯಕ್ಷರು, ಸಿದ್ಧಗಣಗಳು ನಗರದಂತಹ ವಿಮಾನಗಳಲ್ಲಿ ಕುದುರೆಗಳ ಹಾಗೂ ಆನೆಗಳ ಮೇಲೆ ಕುಳಿತು ಆಕಾಶದಿಂದ ಪೃಥ್ವಿಗೆ ಹೋಗಿರುವ ಗಂಗೆಯ ಶೋಭೆಯನ್ನು ನೋಡ ತೊಡಗಿದರು.॥17-18॥
ಮೂಲಮ್ - 19½
ಪಾರಿಪ್ಲವಗತಾಶ್ಚಾಪಿ ದೇವತಾಸ್ತತ್ರ ವಿಷ್ಠಿತಾಃ ।
ತದದ್ಭುತಮಿಮಂ ಲೋಕೇ ಗಂಗಾವತರಮುತ್ತಮಮ್ ॥
ದಿದೃಕ್ಷವೋ ದೇವಗಣಾಃ ಸಮೀಯುರಮಿತೌಜಸಃ ।
ಅನುವಾದ
ದೇವತೆಗಳು ಆಶ್ಚರ್ಯಚಕಿತರಾಗಿ ಅಲ್ಲಿ ನಿಂತಿದ್ದರು. ಜಗತ್ತಿನಲ್ಲಿ ಗಂಗಾವತರಣದ ಈ ಅದ್ಭುತ, ಉತ್ತಮ ದೃಶ್ಯವನ್ನು ನೋಡುವ ಇಚ್ಛೆಯಿಂದ ಅಮಿತ ತೇಜಸ್ವೀ ದೇವತೆಗಳ ಸಮೂಹ ಅಲ್ಲಿ ನೆರದಿತ್ತು.॥19½॥
ಮೂಲಮ್ - 20½
ಸಂಪತದ್ಭಿಃ ಸುರಗಣೈಸ್ತೇಷಾಂ ಚಾಭರಣೌಜಸಾ ॥
ಶತಾದಿತ್ಯಮಿವಾಭಾತಿ ಗಗನಂ ಗತತೋಯದಮ್ ।
ಅನುವಾದ
ತೀವ್ರ ಗತಿಯಿಂದ ಬರುತ್ತಿರುವ ದೇವತೆಗಳ ಹಾಗೂ ಅವರ ದಿವ್ಯ ಆಭೂಷಣಗಳ ಪ್ರಕಾಶದಿಂದ ಅಲ್ಲಿಯ ಮೇರಹಿತ ನಿರ್ಮಲ ಆಕಾಶವು-ನೂರಾರು ಸೂರ್ಯರು ಉದಯಿಸಿದಂತೆ ಪ್ರಕಾಶಿತವಾಗಿತ್ತು.॥20½॥
ಮೂಲಮ್ - 21½
ಶಿಂಶುಮಾರೋರಗಗಣೈರ್ಮೀನೈರಪಿ ಚ ಚಂಚಲೈಃ ॥
ವಿದ್ಯುದ್ಭಿರಿವ ವಿಕ್ಷಿಪ್ತೈರಾಕಾಶಮಭವತ್ತದಾ ।
ಅನುವಾದ
ಶಿಂಶುಮಾರ, ಸರ್ಪ ಹಾಗೂ ಚಂಚಲ ಮೀನುಗಳ ಹಿಂಡು ನೆಗೆಯುವುದರಿಂದ ಗಂಗೆಯ ಮೇಲಿನ ಆಕಾಶವು ಚಂಚಲ ವಿದ್ಯುಲ್ಲತೆಗಳ ಪ್ರಕಾಶ ಎಲ್ಲೆಡೆ ವ್ಯಾಪ್ತವಾಗಿರುವಂತೆ ಕಂಡು ಬರುತಿತ್ತು.॥21½॥
ಮೂಲಮ್ - 22½
ಪಾಂಡುರೈಃ ಸಲಿಲೋತ್ಪೀಡೈಃ ಕೀರ್ಯಮಾಣೈಃ ಸಹಸ್ರಧಾ ॥
ಶಾರದಾಭ್ರೈರಿವಾಕೀರ್ಣಂ ಗಗನಂ ಹಂಸಸಂಪ್ಲವೈಃ ।
ಅನುವಾದ
ವಾಯುವಿನಿಂದ ಸಾವಿರಾರು ಚೂರುಗಳಾಗಿ ಹಂಚಿ ಹೋದ ನೊರೆಯು ಆಕಾಶದಲ್ಲಿ ಎಲ್ಲೆಡೆ ಹರಡಿಕೊಂಡಿತು. ಅದು ಶರದ್ ಋತುವಿನ ಬಿಳಿಯ ಮೋಡಗಳು ಅಥವಾ ಹಂಸಗಳು ಹಾರಾಡುತ್ತಿರುವಂತೆ ಇತ್ತು.॥22½॥
ಮೂಲಮ್ - 23
ಕ್ವಚಿದ್ದ್ರುತತರಂ ಯಾತಿ ಕುಟಿಲಂ ಕ್ವಚಿದಾಯತಮ್ ॥
ಮೂಲಮ್ - 24
ವಿನತಂ ಕ್ವಚಿದುದ್ಭೂತಂ ಕ್ವಿಚಿದ್ಯಾತಿ ಶನೈಃ ಶನೈಃ ।
ಸಲಿಲೇನೈವ ಸಲಿಲಂ ಕ್ವಚಿದಭ್ಯಾಹತಂ ಪುನಃ ॥
ಅನುವಾದ
ಗಂಗೆಯ ಆ ಪ್ರವಾಹವು ಕೆಲವೆಡೆ ವೇಗವಾಗಿ, ಕೆಲವು ಕಡೆ ಅಂಕುಡೊಂಕಾಗಿ ಕೆಲವು ಕಡೆ ಅಗಲವಾಗಿ ಹರಿಯುತ್ತಿತ್ತು. ಕೆಲವೆಡೆ ಕೆಳಕ್ಕೆ ಧುಮುಕಿದರೆ, ಕೆಲವೆಡೆ ತರಂಗಗಳು ಮೇಲಕ್ಕೆ ಏಳುತ್ತಿದ್ದವು. ಕೆಲವೆಡೆ ಸಮತಲ ಭೂಮಿಯಲ್ಲಿ ನಿಧಾನವಾಗಿ ಹರಿಯುತ್ತಿತ್ತು. ಕೆಲವೊಮ್ಮೆ ತರಂಗಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಿದ್ದವು.॥23-24॥
ಮೂಲಮ್ - 25½
ಮುಹೂರೂರ್ಧ್ವಪಥಂ ಗತ್ವಾ ಪಪಾತ ವಸುಧಾಂ ಪುನಃ ।
ತಚ್ಛಂಕರಶಿರೋಭ್ರಷ್ಟಂ ಭ್ರಷ್ಟಂ ಭೂಮಿತಲೇ ಪುನಃ ॥
ವ್ಯರೋಚತ ತದಾ ತೋಯಂ ನಿರ್ಮಲಂ ಗತಕಲ್ಮಷಮ್ ।
ಅನುವಾದ
ಗಂಗೆಯ ತೆರೆಗಳು ಆಗಾಗ ಮೇಲಕ್ಕೆದ್ದು ಕೆಳಗೆ ಬೀಳುತ್ತಿದ್ದವು. ಆಕಾಶದಿಂದ ಭಗವಾನ್ ಶಂಕರನ ಮಸ್ತಕದ ಮೇಲೆ ಹಾಗೂ ಅಲ್ಲಿಂದ ಭೂಮಿಗೆ ಬಿದ್ದ ಆ ನಿರ್ಮಲ, ಪವಿತ್ರ ಗಂಗಾಜಲ ಬಹಳ ಶೋಭಿಸುತ್ತಿತ್ತು.॥25½॥
ಮೂಲಮ್ - 26½
ತತ್ರರ್ಷಿಗಣಗಂಧರ್ವಾ ವಸುಧಾತಲವಾಸಿನಃ ॥
ಭವಾಂಗಪತಿತಂ ತೋಯಂ ಪವಿತ್ರಮಿತಿ ಪಸ್ಪೃಶುಃ ।
ಅನುವಾದ
ಆಗ ಭೂತಳದಲ್ಲಿರುವ ಋಷಿಗಳು ಗಂಧರ್ವರು - ಭಗವಾನ್ ಶಂಕರನ ಮಸ್ತಕದಿಂದ ಬಿದ್ದಿರುವ ಈ ಜಲ ಬಹಳ ಪವಿತ್ರವೆಂದು ತಿಳಿದು, ಅದರಲ್ಲಿ ಆಚಮನ ಮಾಡತೊಡಗಿದರು.॥26½॥
ಮೂಲಮ್ - 27
ಶಾಪಾತ್ ಪ್ರಪತಿತಾ ಯೇ ಚ ಗಗನಾದ್ವಸುಧಾತಲಮ್ ॥
ಮೂಲಮ್ - 28½
ಕೃತ್ವಾ ತತ್ರಾಭಿಷೇಕಂ ತೇ ಬಭೂವುರ್ಗತಕಲ್ಮಷಾಃ ।
ಧೂತಪಾಪಾಃ ಪುನಸ್ತೇನ ತೋಯೇನಾಥ ಶುಭಾನ್ವಿತಾಃ ॥
ಪುನರಾಕಾಶಮಾವಿಶ್ಯ ಸ್ವಾನ್ಲ್ಲೋಕಾನ್ ಪ್ರತಿಪೇದಿರೇ ।
ಅನುವಾದ
ಶಾಪಭ್ರಷ್ಟರಾಗಿ ಆಕಾಶದಿಂದ ಪೃಥ್ವಿಗೆ ಬಂದಿರುವವರು ಗಂಗೆಯ ಜಲದಲ್ಲಿ ಸ್ನಾನಮಾಡಿ ನಿಷ್ಪಾಪರಾದರು. ಆ ಜಲದಿಂದ ಪಾಪಗಳು ತೊಳೆದು ಹೋದ ಕಾರಣ ಮತ್ತೆ ಶುಭ ಪುಣ್ಯದಿಂದ ಕೂಡಿ ಆಕಾಶಕ್ಕೆ ತಲುಪಿ ತಮ್ಮ ಲೋಕಗಳನ್ನು ಪಡೆದುಕೊಂಡರು.॥27-28½॥
ಮೂಲಮ್ - 29½
ಮುಮುದೇ ಮುದಿತೋ ಲೋಕಸ್ತೇನ ತೋಯೇನ ಭಾಸ್ವತಾ ॥
ಕೃತಾಭಿಷೇಕೋ ಗಂಗಾಯಾಂ ಬಭೂವ ಗತಕಲ್ಮಷಃ ।
ಅನುವಾದ
ಆ ಪ್ರಕಾಶಮಾನ ಪುಣ್ಯಮಯ ನೀರಿನ ಸಂಪರ್ಕದಿಂದ ಆನಂದಿತವಾದ ಇಡೀ ಜಗತ್ತಿಗೆ ಸಂತೋಷವಾಯಿತು. ಎಲ್ಲ ಜನರು ಗಂಗೆಯಲ್ಲಿ ಸ್ನಾನಮಾಡಿ ಪಾಪರಹಿತರಾದರು.॥29½॥
ಮೂಲಮ್ - 30½
ಭಗೀರಥೋ ಹಿ ರಾಜರ್ಷಿರ್ದಿವ್ಯಂ ಸ್ಯಂದನಮಾಸ್ಥಿತಃ ॥
ಪ್ರಾಯಾದಗ್ರೇ ಮಹಾರಾಜಸ್ತಂ ಗಂಗಾಪೃಷ್ಠತೋನ್ವಗಾತ್ ।
ಅನುವಾದ
(ನಾವು ಮೊದಲೇ ತಿಳಿಸಿದಂತೆ) ರಾಜರ್ಷಿ ಮಹಾರಾಜ ಭಗೀರಥನು ದಿವ್ಯ ರಥಾರೂಢನಾಗಿ ಮುಂದೆ-ಮುಂದೆ ಹೋಗುತ್ತಿರುವಂತೆ ಗಂಗೆಯು ಹಿಂದೆ-ಹಿಂದೆಯೇ ಹೋಗುತ್ತಿದ್ದಳು.॥30½॥
ಮೂಲಮ್ - 31
ದೇವಾಃ ಸರ್ಷಿಗಣಾಃ ಸರ್ವೇ ದೈತ್ಯದಾನವರಾಕ್ಷಸಾಃ ॥
ಮೂಲಮ್ - 32½
ಗಂಧರ್ವಯಕ್ಷಪ್ರವರಾಃ ಸಕಿನ್ನರಮಹೋರಗಾಃ ।
ಸರ್ವಾಶ್ಚಾಪ್ಸರಸೋ ರಾಮ ಭಗೀರಥರಥಾನುಗಾಃ ॥
ಗಂಗಾಮನ್ವಗಮನ್ ಪ್ರೀತಾಃ ಸರ್ವೇ ಜಲಚರಾಶ್ಚ ಯೇ ।
ಅನುವಾದ
ಶ್ರೀರಾಮಾ! ಆಗ ಸಮಸ್ತ ದೇವತೆಗಳು, ಋಷಿಗಳು, ದೈತ್ಯ, ದಾನವ, ರಾಕ್ಷಸ, ಗಂಧರ್ವ, ಯಕ್ಷಪ್ರವರ, ಕಿನ್ನರ, ದೊಡ್ಡ-ದೊಡ್ಡ ನಾಗ, ಸರ್ಪ ಹಾಗೂ ಅಪ್ಸರೆಯರು ಹೀಗೆ ಎಲ್ಲರೂ ಬಹಳ ಸಂತೋಷದಿಂದ ಭಗೀರಥನ ರಥದ ಹಿಂದೆ ಹೋಗುತ್ತಿದ್ದ ಗಂಗೆಯ ಜೊತೆ ಜೊತೆಗೆ ನಡೆಯುತ್ತಿದ್ದರು. ಎಲ್ಲ ಪ್ರಕಾರದ ಜಲಜಂತುಗಳೂ ಗಂಗೆಯ ಆ ಜಲರಾಶಿಯೊಂದಿಗೆ ಆನಂದದಿಂದ ಹೋಗುತ್ತಿದ್ದವು.॥31-32½॥
(ಶ್ಲೋಕ 33½)
ಮೂಲಮ್
ಯತೋ ಭಗೀರಥೋ ರಾಜಾ ತತೋ ಗಂಗಾ ಯಶಸ್ವಿನೀ ॥
ಜಗಾಮ ಸರಿತಾಂ ಶ್ರೇಷ್ಠಾ ಸರ್ವಪಾಪಪ್ರಣಾಶಿನೀ ।
ಅನುವಾದ
ಯಾವ ದಿಕ್ಕಿನಲ್ಲಿ ಭಗೀರಥನು ಸಾಗುತ್ತಿದ್ದನೋ ಅದೇ ದಿಕ್ಕಿನಲ್ಲಿ ಸಮಸ್ತ ಪಾಪಗಳ ನಾಶಮಾಡುವ ನದಿಗಳಲ್ಲೇ ಶ್ರೇಷ್ಠ ಯಶಸ್ವಿನಿಯಾದ ಗಂಗಾ ಕೂಡ ಸಾಗುತ್ತಿದ್ದಳು.॥33½॥
(ಶ್ಲೋಕ 34½)
ಮೂಲಮ್
ತತೋ ಹಿ ಯಜಮಾನಸ್ಯಜಹ್ನೋರದ್ಭುತಕರ್ಮಣಃ ॥
ಗಂಗಾ ಸಂಪ್ಲಾವಯಾಮಾಸ ಯಜ್ಞವಾಟಂ ಮಹಾತ್ಮನಃ ।
ಅನುವಾದ
ಆಗ ಮಾರ್ಗದಲ್ಲಿ ಅದ್ಭುತ ಪರಾಕ್ರಮಿ ಮಹಾತ್ಮಾ ರಾಜಾ ಜಹ್ನುವು ಯಜ್ಞಮಾಡುತ್ತಿದ್ದನು. ಗಂಗೆಯು ತನ್ನ ಜಲಪ್ರವಾಹದಿಂದ ಅವನ ಯಜ್ಞಶಾಲೆಯನ್ನು ತೊಳೆದುಬಿಟ್ಟಳು.॥34½॥
(ಶ್ಲೋಕ 35½)
ಮೂಲಮ್
ತಸ್ಯಾವಲೇಪನಂ ಜ್ಞಾತ್ವಾ ಕ್ರುದ್ಧೋ ಜಹ್ನುಶ್ಚ ರಾಘವ ॥
ಅಪಿಬತ್ ತು ಜಲಂ ಸರ್ವಂ ಗಂಗಾಯಾಃ ಪರಮಾದ್ಭುತಮ್ ।
ಅನುವಾದ
ರಘುನಂದನ! ಜಹ್ನುರಾಜನು ಇದು ಗಂಗೆಯ ಗರ್ವವೆಂದು ತಿಳಿದು ಕುಪಿತನಾಗಿ ಗಂಗೆಯ ಆ ಸಮಸ್ತ ಜಲವನ್ನು ಕುಡಿದುಬಿಟ್ಟನು. ಇದೊಂದು ಜಗತ್ತಿನಲ್ಲಿ ಅದ್ಭುತವಾದ ಸಂಗತಿ ನಡೆಯಿತು.॥35½॥
(ಶ್ಲೋಕ 36½)
ಮೂಲಮ್
ತತೋ ದೇವಾಃ ಸಗಂಧರ್ವಾ ಋಷಯಶ್ಚ ಸುವಿಸ್ಮಿತಾಃ ॥
ಪೂಜಯಂತಿ ಮಹಾತ್ಮನಂ ಜಹ್ನುಂ ಪುರುಷಸತ್ತಮಮ್ ।
ಅನುವಾದ
ಆಗ ದೇವತೆಗಳು, ಗಂಧರ್ವರು, ಋಷಿಗಳು, ಅತ್ಯಂತ ವಿಸ್ಮಿತರಾಗಿ ಪುರುಷ ಪ್ರವರ ಮಹಾತ್ಮಾ ಜಹ್ನುವನ್ನು ಸ್ತುತಿಸತೊಡಗಿದರು.॥36½॥
ಮೂಲಮ್ - 37
ಗಂಗಾಂ ಚಾಪಿ ನಯಂತಿ ಸ್ಮ ದುಹಿತೃತ್ವೇ ಮಹಾತ್ಮನಃ ॥
ಮೂಲಮ್ - 38
ತತಸ್ತುಷ್ಟೋ ಮಹಾತೇಜಾಃ ಶ್ರೋತ್ರಾಭ್ಯಾಮಸೃಜತ್ ಪ್ರಭುಃ ।
ತಸ್ಮಾಜ್ಜಹ್ನುಸುತಾ ಗಂಗಾ ಪ್ರೋಚ್ಯತೇ ಜಾಹ್ನವೀತಿ ಚ ॥
ಅನುವಾದ
ಅವರು ಗಂಗೆಯನ್ನು ಆ ಮಹಾತ್ಮಾ ನರೇಶನ ಕನ್ಯೆಯಾಗಿಸಿದರು. (ಅರ್ಥಾತ್-ಗಂಗೆಯನ್ನು ಪ್ರಕಟಿಸಿ ನೀವು ಈಕೆಯ ತಂದೆ ಎಂದು ಹೇಳಿಸಿಕೊಳ್ಳುವೆ ಎಂದು ವಿಶ್ವಾಸ ಮೂಡಿಸಿದರು) ಇದರಿಂದ ಮಹಾತೇಜಸ್ವೀ ಜಹ್ನುವು ಬಹಳ ಸಂತೋಷಗೊಂಡು ತನ್ನ ಕಿವಿಯಿಂದ ಗಂಗೆಯನ್ನು ಹೊರಗೆ ಬಿಟ್ಟನು. ಇದರಿಂದ ಗಂಗೆಯನ್ನು ಜಹ್ನುವಿನಿಂದ ಪುನಃ ಪ್ರಕಟಗೊಂಡ ಕಾರಣ ಜಹ್ನುವಿನ ಪುತ್ರೀ ಜಾಹ್ನವೀ ಎಂದು ಕರೆದರು.॥37-38॥
ಮೂಲಮ್ - 39½
ಜಗಾಮ ಚ ಪುನರ್ಗಂಗಾ ಭಗೀರಥರಥಾನುಗಾ ।
ಸಾಗರಂ ಚಾಪಿ ಸಂಪ್ರಾಪ್ತಾ ಸಾ ಸರಿತ್ಪ್ರವರಾ ತದಾ ॥
ರಸಾತಲಮುಪಾಗಚ್ಛತ್ ಸಿದ್ಧ್ಯರ್ಥಂ ತಸ್ಯ ಕರ್ಮಣಃ ।
ಅನುವಾದ
ಅಲ್ಲಿಂದ ಮುಂದೆ ಭಗೀರಥನ ರಥವನ್ನು ಅನುಸರಿಸುತ್ತಾ ನಡೆದಳು. ಆಗ ನದಿಗಳಲ್ಲಿ ಶ್ರೇಷ್ಠಳಾದ ಜಾಹ್ನವಿಯು ಸಮುದ್ರದವರೆಗೆ ತಲುಪಿ, ಭಗೀರಥನ ಪಿತೃಗಳನ್ನು ಉದ್ಧರಿಸಲಿಕ್ಕಾಗಿ ರಸಾತಳಕ್ಕೆ ಹೋದಳು.॥39½॥
ಮೂಲಮ್ - 40½
ಭಗೀರಥೋಪಿ ರಾಜರ್ಷಿರ್ಗಂಗಾಮಾದಾಯ ಯತ್ನತಃ ॥
ಪಿತಾಮಹಾನ್ ಭಸ್ಮಕೃತಾನಪಶ್ಯದ್ ಗತಚೇತನಃ ।
ಅನುವಾದ
ರಾಜರ್ಷಿ ಭಗೀರಥನೂ ಕೂಡ ಪ್ರಯತ್ನಪೂರ್ವಕ ಗಂಗೆಯ ಜೊತೆಗೆ ಅಲ್ಲಿಗೆ ಹೋದನು. ಅವನು ಶಾಪದಿಂದ ಭಸ್ಮರಾದ ತಮ್ಮ ಪಿತೃಗಳನ್ನು ನೋಡಿದನು.॥40½॥
ಮೂಲಮ್ - 41
ಅಥ ತದ್ಭಸ್ಮನಾಂ ರಾಶಿಂ ಗಂಗಾಸಲಿಲಮುತ್ತಮಮ್ ।
ಪ್ಲಾವಯತ್ ಪೂತಪಾಪ್ಮಾನಃ ಸ್ವರ್ಗಂ ಪ್ರಾಪ್ತಾರಘೂತ್ತಮ ॥
ಅನುವಾದ
ರಘೋತ್ತಮನೇ! ಅನಂತರ ಗಂಗೆಯ ಉತ್ತಮ ಜಲದಿಂದ ಸಗರ ಪುತ್ರರ ಆ ಭಸ್ಮರಾಶಿಯನ್ನು ತೊಳೆದಾಗ, ಎಲ್ಲ ರಾಜಕುಮಾರರು ಪಾಪರಹಿತರಾಗಿ ಸ್ವರ್ಗಕ್ಕೆ ತೆರಳಿದರು.॥41॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ನಲವತ್ತಮೂರನೆಯ ಸರ್ಗ ಪೂರ್ಣವಾಯಿತು. ॥43॥