०४२ भगीरथ-यत्नः

वाचनम्
ಭಾಗಸೂಚನಾ

ಗಂಗೆಯನ್ನು ತರುವ ಸಲುವಾಗಿ ಅಂಶುಮಂತನ ಪ್ರಯತ್ನ. ಭಗೀರಥನ ತಪಸ್ಸಿನಿಂದ ಪ್ರಸನ್ನನಾದ ಬ್ರಹ್ಮದೇವರು ವರವನ್ನಿತ್ತು ಗಂಗೆಯನ್ನು ಧರಿಸುವಂತೆ ಈಶ್ವರನನ್ನು ಪ್ರಾರ್ಥಿಸುವಂತೆ ಸಲಹೆಯನ್ನಿತ್ತದು

ಮೂಲಮ್ - 1

ಕಾಲಧರ್ಮಂ ಗತೇ ರಾಮ ಸಗರೇ ಪ್ರಕೃತೀಜನಾಃ ।
ರಾಜಾನಂ ರೋಚಯಾಮಾಸುರಂಶುಮಂತಂ ಸುಧಾರ್ಮಿಕಮ್ ॥

ಅನುವಾದ

ಶ್ರೀರಾಮಾ! ಸಗರನ ಮೃತ್ಯುವಾದಾಗ ಪ್ರಜಾಜನರು ಅಮಾತ್ಯರು ಪರಮಧಾರ್ಮಿಕ ಅಂಶುಮಂತನನ್ನು ರಾಜನನ್ನಾಗಿಸಲು ತಮ್ಮ ಇಚ್ಛೆಯನ್ನು ಪ್ರಕಟಿಸಿದರು.॥1॥

ಮೂಲಮ್ - 2

ಸ ರಾಜಾ ಸುಮಹಾನಾಸೀದಂಶುಮಾನ್ ರಘುನಂದನ ।
ತಸ್ಯಪುತ್ರೋ ಮಹಾನಾಸೀದ್ ದಿಲೀಪ ಇತಿ ವಿಶ್ರುತಃ ॥

ಅನುವಾದ

ರಘುನಂದನ! ಅಂಶುಮಂತನು ಮಹಾ ಪ್ರತಾಪಿ ರಾಜನಾದನು. ಅವನ ಪುತ್ರ ದಿಲೀಪನೂ ಒಬ್ಬ ಮಹಾ ಪುರುಷನಾಗಿದ್ದನು.॥2॥

ಮೂಲಮ್ - 3

ತಸ್ಮೈ ರಾಜ್ಯಂ ಸಮಾದಿಶ್ಯ ದಿಲೀಪೇ ರಘುನಂದನ ।
ಹಿಮವಚ್ಛಿಖರೇ ರಮ್ಯೇ ತಪಸ್ತೇಪೇ ಸುದಾರುಣಮ್ ॥

ಅನುವಾದ

ರಘುಕುಲನಂದನ! ಅಂಶುಮಂತನು ದಿಲೀಪನಿಗೆ ರಾಜ್ಯವನ್ನು ಒಪ್ಪಿಸಿ, ಹಿಮಾಲಯದ ರಮಣಿಯ ಶಿಖರಕ್ಕೆ ಹೋಗಿ ಅತ್ಯಂತ ಕಠೋರ ತಪಸ್ಸು ಮಾಡತೊಡಗಿದನು.॥3॥

ಮೂಲಮ್ - 4

ದ್ವಾತ್ರಿಂಶಚ್ಛತಸಾಹಸ್ರಂ ವರ್ಷಾಣಿ ಸುಮಹಾಯಶಾಃ ।
ತಪೋವನಗತೋ ರಾಜಾ ಸ್ವರ್ಗಂ ಲೇಭೇ ತಪೋಧನಃ ॥

ಅನುವಾದ

ಮಹಾನ್ ಯಶಸ್ವೀ ರಾಜಾ ಅಂಶುಮಂತನು ಆ ತಪೋವನದಲ್ಲಿ ಮೂವತ್ತೆರಡು ಸಾವಿರ ವರ್ಷ ತಪಸ್ಸು ಮಾಡಿದನು. ತಪೋಧನ ಸಂಪನ್ನನಾದ ಆ ನರೇಶನು ಅಲ್ಲೇ ಶರೀರವನ್ನು ತ್ಯಜಿಸಿ ಸ್ವರ್ಗಲೋಕವನ್ನು ಪಡೆದನು.॥4॥

ಮೂಲಮ್ - 5

ದಿಲೀಪಸ್ತು ಮಹಾತೇಜಾಃ ಶ್ರುತ್ವಾ ಪೈತಾಮಹಂ ವಧಮ್
ದುಃಖೋಪಹತಯಾ ಬುದ್ಧ್ಯಾ ನಿಶ್ಚಯಂ ನಾಧ್ಯಗಚ್ಛತ ॥

ಅನುವಾದ

ತನ್ನ ಪಿತಾಮಹರ ವಧೆಯ ವೃತ್ತಾಂತವನ್ನು ಕೇಳಿ ಮಹಾ ತೇಜಸ್ವೀ ದಿಲೀಪನೂ ಬಹಳ ದುಃಖಿತನಾಗಿದ್ದನು. ತನ್ನ ಬುದ್ಧಿಯಿಂದ ಬಹಳ ವಿಚಾರ ಮಾಡಿದ ಬಳಿಕವೂ ಅವನಿಂದ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ.॥5॥

ಮೂಲಮ್ - 6

ಕಥಂ ಗಂಗಾವತರಣಂ ಕಥಂ ತೇಷಾಂ ಜಲಕ್ರಿಯಾ ।
ತಾರಯೇಯಂ ಕಥಂ ಚೈತಾನಿತಿ ಚಿಂತಾಪರೋಽಭವತ್ ॥

ಅನುವಾದ

ಪೃಥ್ವಿಗೆ ಗಂಗೆಯನ್ನು ಹೇಗೆ ತರುವುದು? ಗಂಗಾಜಲದಿಂದ ಅವರಿಗೆ ಹೇಗೆ ತರ್ಪಣ ಕೊಡುವುದು? ಯಾವ ವಿಧದಿಂದ ಆ ಪಿತೃಗಳನ್ನು ನಾನು ಉದ್ಧರಿಸಬಲ್ಲೆನು? ಎಂಬ ಚಿಂತೆಯಲ್ಲೇ ಸದಾ ಅವನು ಮುಳುಗುತ್ತಿದ್ದನು.॥6॥

ಮೂಲಮ್ - 7

ತಸ್ಯ ಚಿಂತಯತೋ ನಿತ್ಯಂ ಧರ್ಮೇಣ ವಿದಿತಾತ್ಮನಃ ।
ಪುತ್ರೋ ಭಗೀರಥೋ ನಾಮ ಜಜ್ಞೇ ಪರಮಧಾರ್ಮಿಕಃ ॥

ಅನುವಾದ

ಪ್ರತಿದಿನ ಇದೇ ಚಿಂತೆಯಲ್ಲಿ ಮುಳುಗಿದ್ದ ದಿಲೀಪರಾಜನಿಗೆ ತನ್ನ ಧರ್ಮಾಚರಣೆಯಿಂದ ವಿಖ್ಯಾತನಾದ ಭಗೀರಥನೆಂಬ ಒಬ್ಬ ಪರಮಧಾರ್ಮಿಕ ಪುತ್ರನು ಹುಟ್ಟಿದನು.॥7॥

ಮೂಲಮ್ - 8

ದಿಲೀಪಸ್ತು ಮಹಾತೇಜಾ ಯಜ್ಞೈರ್ಬಹುಭಿರಿಷ್ಟವಾನ್ ।
ತ್ರಿಂಶದ್ವರ್ಷಸಹಸ್ರಾಣಿ ರಾಜಾ ರಾಜ್ಯಮಕಾರಯತ್ ॥

ಅನುವಾದ

ಮಹಾತೇಜಸ್ವೀ ದಿಲೀಪನು ಬಹಳಷ್ಟು ಯಜ್ಞಗಳನ್ನು ಮಾಡಿ, ಮೂವತ್ತು ಸಾವಿರ ವರ್ಷರಾಜ್ಯವಾಳಿದನು.॥8॥

ಮೂಲಮ್ - 9

ಅಗತ್ವಾ ನಿಶ್ಚಯಂ ರಾಜಾ ತೇಷಾಮುದ್ಧರಣಂ ಪ್ರತಿ ।
ವ್ಯಾಧಿನಾ ನರಶಾರ್ದೂಲ ಕಾಲಧರ್ಮಮುಪೇಯಿವಾನ್ ॥

ಅನುವಾದ

ಪುರುಷಸಿಂಹನೇ! ಆ ಪಿತೃಗಳ ಉದ್ಧಾರದ ವಿಷಯದಲ್ಲಿ ಯಾವುದೇ ನಿಶ್ಚಯಕ್ಕೆ ಬರದೆ ರಾಜಾ ದಿಲೀಪನು ರೋಗಪೀಡಿತನಾಗಿ ಮರಣವನ್ನೈದಿದನು.॥9॥

ಮೂಲಮ್ - 10

ಇಂದ್ರಲೋಕಂ ಗತೋ ರಾಜಾ ಸ್ವಾರ್ಜಿತೇನೈವ ಕರ್ಮಣಾ ।
ರಾಜ್ಯೇ ಭಗೀರಥಂ ಪುತ್ರಮಭಿಷಿಚ್ಯ ನರರ್ಷಭಃ ॥

ಅನುವಾದ

ದಿಲೀಪನು ತನ್ನ ಪುತ್ರ ಭಗೀರಥನಿಗೆ ಪಟ್ಟಕಟ್ಟಿ ತಾನು ಗಳಿಸಿದ ಪುಣ್ಯಕರ್ಮಗಳ ಪ್ರಭಾವದಿಂದ ಇಂದ್ರಲೋಕಕ್ಕೆ ತೆರಳಿದನು.॥10॥

ಮೂಲಮ್ - 11

ಭಗೀರಥಸ್ತು ರಾಜರ್ಷಿರ್ಧಾರ್ಮಿಕೋ ರಘುನಂದನ ।
ಅನಪತ್ಯೋ ಮಹಾರಾಜಃ ಪ್ರಜಾಕಾಮಃ ಸ ಚ ಪ್ರಜಾಃ ॥

ಮೂಲಮ್ - 12

ಮಂತ್ರಿಷ್ವಾಧಾಯ ತದ್ರಾಜ್ಯಂ ಗಂಗಾವತರಣೇ ರತಃ ।
ತಪೋ ದೀರ್ಘಂ ಸಮಾತಿಷ್ಠದ್ ಗೋಕರ್ಣೇ ರಘುನಂದನ ॥

ಅನುವಾದ

ರಘುನಂದನ! ಧರ್ಮಾತ್ಮಾ ರಾಜರ್ಷಿ ಭಗೀರಥನಿಗೆ ಯಾವುದೇ ಸಂತಾನವಿರಲಿಲ್ಲ. ಅವನು ಸಂತಾನ ಪ್ರಾಪ್ತಿಯನ್ನು ಇಚ್ಛಿಸುತ್ತಿದ್ದರೂ ರಾಜ್ಯ ಮತ್ತು ಪ್ರಜೆಯ ರಕ್ಷಣೆಯ ಭಾರವನ್ನು ಮಂತ್ರಿಗಳಿಗೆ ಒಪ್ಪಿಸಿ ಗಂಗೆಯನ್ನು ಭೂತಳಕ್ಕೆ ತರುವ ಪ್ರಯತ್ನದಲ್ಲಿ ತೊಡಗಿ, ಗೋಕರ್ಣ ತೀರ್ಥದಲ್ಲಿ ಭಾರೀ ತಪಸ್ಸು ಮಾಡತೊಡಗಿದನ.॥11-12॥

ಮೂಲಮ್ - 13

ಊರ್ಧ್ವಬಾಹುಃ ಪಂಚತಪಾ ಮಾಸಾಹಾರೋ ಜಿತೇಂದ್ರಿಯಃ ।
ತಸ್ಯ ವರ್ಷಸಹಸ್ರಾಣಿ ಘೋರೇ ತಪಸಿ ತಿಷ್ಠತಃ ॥
ಅತೀತಾನಿ ಮಹಾಬಾಹೋ ತಸ್ಯ ರಾಜ್ಞೋ ಮಹಾತ್ಮನಃ ।

ಅನುವಾದ

ಮಹಾಬಾಹುವೇ! ಅವನು ಎರಡೂ ಭುಜಗಳನ್ನು ಮೇಲಕ್ಕೆತ್ತಿ ಪಂಚಾಗ್ನಿ ಸಾಧನೆ ಮಾಡುತ್ತಾ, ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ತಿಂಗಳಲ್ಲಿ ಒಂದೇ ಸಲ ಆಹಾರ ಸ್ವೀಕರಿಸುತ್ತಿದ್ದನು. ಈ ಪ್ರಕಾರ ಘೋರ ತಪಸ್ಸಿನಲ್ಲಿ ತೊಡಗಿರುವ ಭಗೀರಥ ಮಹಾರಾಜನ ಒಂದು ಸಾವಿರ ವರ್ಷಗಳು ಕಳೆದವು.॥13॥

ಮೂಲಮ್ - 14

ಸುಪ್ರೀತೋ ಭಗವಾನ್ ಬ್ರಹ್ಮಾ ಪ್ರಜಾನಾಂ ಪ್ರಭುರೀಶ್ವರಃ ॥

ಮೂಲಮ್ - 15

ತತಃ ಸುರಗಣೈಃ ಸಾರ್ಧುಮುಪಾಗಮ್ಯ ಪಿತಾಮಹಃ ।
ಭಗೀರಥಂ ಮಹಾತ್ಮಾನಂ ತಪ್ಯಮಾನಮಥಾಬ್ರವೀತ್ ॥

ಅನುವಾದ

ಇದರಿಂದ ಪ್ರಜೆಗಳ ಸ್ವಾಮಿ ಭಗವಾನ್ ಬ್ರಹ್ಮದೇವರು ಅವನ ಮೇಲೆ ಪ್ರಸನ್ನರಾಗಿ, ಪಿತಾಮಹ ಬ್ರಹ್ಮನು ದೇವತೆಗಳೊಂದಿಗೆ ಬಂದು ತಪಸ್ಸಿನಲ್ಲಿ ತೊಡಗಿರುವ ಮಹಾತ್ಮಾ ಭಗೀರಥನಲ್ಲಿ ಇಂತೆಂದರು.॥14-15॥

ಮೂಲಮ್ - 16

ಭಗೀರಥ ಮಹಾಭಾಗ ಪ್ರೀತಸ್ತೇಽಹಂ ಜನಾಧಿಪ ।
ತಪಸಾ ಚ ಸುತಪ್ತೇನ ವರಂ ವರಯ ಸುವ್ರತ ॥

ಅನುವಾದ

ಭಗೀರಥ ಮಹಾರಾಜಾ! ನಿನ್ನ ಈ ಉತ್ತಮ ತಪಸ್ಸಿನಿಂದ ನಾನು ಬಹಳ ಪ್ರಸನ್ನನಾಗಿದ್ದೇನೆ. ಶ್ರೇಷ್ಠವ್ರತವನ್ನು ಪಾಲಿಸುವ ಜನಾಧಿಪನೇ! ನೀನು ಯಾವುದಾದರೂ ವರವನ್ನು ಕೇಳು, ಎಂದು ಹೇಳಿದರು.॥16॥

ಮೂಲಮ್ - 17

ತಮುವಾಚ ಮಹಾತೇಜಾಃ ಸರ್ವಲೋಕ ಪಿತಾಮಹಮ್ ।
ಭಗೀರಥೋ ಮಹಾಭಾಗಃ ಕೃತಾಂಜಲಿಪುಟಃ ಸ್ಥಿತಃ ॥

ಅನುವಾದ

ಆಗ ಮಹಾತೇಜಸ್ವೀ! ಮಹಾಬಾಹು ಭಗೀರಥನು ಕೈಮುಗಿದು ಅವನ ಎದುರಿಗೆ ನಿಂತು ಆ ಸರ್ವಲೋಕ ಪಿತಾಮಹ ಬ್ರಹ್ಮದೇವರಲ್ಲಿ ಈ ಪ್ರಕಾರ ನುಡಿದನು.॥17॥

ಮೂಲಮ್ - 18

ಯದಿ ಮೇ ಭಗವನ್ ಪ್ರೀತೋ ಯದ್ಯಸ್ತಿ ತಪಸಃ ಫಲಮ್ ।
ಸಗರಸ್ಯಾತ್ಮಜಾಃ ಸರ್ವೇ ಮತ್ತಃ ಸಲಿಲಮಾಪ್ನುಯುಃ ॥

ಅನುವಾದ

ಭಗವಂತನೇ! ನೀನು ನನ್ನ ಮೇಲೆ ಪ್ರಸನ್ನನಾಗಿದ್ದರೆ, ಈ ತಪಸ್ಸಿಗೆ ಉತ್ತಮ ಫಲವಿದ್ದರೆ, ಸಗರನ ಎಲ್ಲ ಪುತ್ರರಿಗೆ ನನ್ನ ಕೈಯಿಂದ ಗಂಗಾಜಲ ಪ್ರಾಪ್ತವಾಗಲೀ.॥18॥

ಮೂಲಮ್ - 19

ಗಂಗಾಯಾಃ ಸಲಿಲಕ್ಲಿನ್ನೇ ಭಸ್ಮನ್ಯೇಷಾಂ ಮಹಾತ್ಮನಾಮ್ ।
ಸ್ವರ್ಗಂ ಗಚ್ಛೇಯುರತ್ಯಂತಂ ಸರ್ವೇ ಚ ಪ್ರಪಿತಾಮಹಾಃ ॥

ಅನುವಾದ

ಈ ಮಹಾತ್ಮರ ಭಸ್ಮರಾಶಿಯು ಗಂಗಾಜಲದಿಂದ ತೊಳೆದು ಹೋಗಿ ಆ ಎಲ್ಲ ಪಿತಾಮಹರಿಗೆ ಅಕ್ಷಯ ಸ್ವರ್ಗಲೋಕ ಪ್ರಾಪ್ತವಾಗಲಿ.॥19॥

ಮೂಲಮ್ - 20

ದೇವ ಯಾಚೇ ಹ ಸಂತತ್ಯೈ ನಾವಸೀದೇತ್ಕುಲಂ ಚ ನಃ ।
ಇಕ್ಷ್ವಾಕೂಣಾಂ ಕುಲೇ ದೇವ ಏಷ ಮೇಸ್ತು ವರಃ ಪರಃ ॥

ಅನುವಾದ

ದೇವ! ನಾನು ಸಂತತಿಗಾಗಿಯೂ ನಿನ್ನಲ್ಲಿ ಪ್ರಾರ್ಥಿಸುತ್ತಿದ್ದೇನೆ. ನಮ್ಮ ಕುಲಪರಂಪರೆಯು ನಾಶವಾಗದಿರಲಿ. ಭಗವಂತನೇ! ನಾನು ಕೇಳಿದ ಉತ್ತಮ ವರವು ಸಂಪೂರ್ಣ ಇಕ್ವಾಕ್ಷುವಂಶಕ್ಕೆ ಅನ್ವಯವಾಗಬೇಕು.॥20॥

ಮೂಲಮ್ - 21

ಉಕ್ತವಾಕ್ಯಂ ತು ರಾಜಾನಂ ಸರ್ವಲೋಕಪಿತಾಮಹಃ ।
ಪ್ರತ್ಯುವಾಚ ಶುಭಾಂ ವಾಣೀಂ ಮಧುರಾಂ ಮಧುರಾಕ್ಷರಾಮ್ ॥

ಅನುವಾದ

ಭಗೀರಥ ರಾಜನು ಹೀಗೆ ಹೇಳಿದಾಗ ಸರ್ವಲೋಕ ಪಿತಾಮಹ ಬ್ರಹ್ಮದೇವರು ಮಧುರಾಕ್ಷರವುಳ್ಳ ಪರಮ ಶ್ರೇಯಸ್ಕರ ಮಾತನ್ನು ಹೇಳಿದರು.॥21॥

ಮೂಲಮ್ - 22

ಮನೋರಥೋ ಮಹಾನೇಷ ಭಗೀರಥ ಮಹಾರಥ ।
ಏವಂ ಭವತು ಭದ್ರಂ ತೇ ಇಕ್ಷ್ವಾಕುಕುಲವರ್ಧನ ॥

ಅನುವಾದ

ಇಕ್ಷ್ವಾಕು ಕುಲವರ್ಧನ ಮಹಾರಥೀ ಭಗೀರಥನೇ! ನಿನಗೆ ಮಂಗಳವಾಗಲಿ, ನಿನ್ನ ಈ ಮಹಾಮನೋರಥವು ಹೀಗೆಯೇ ಪೂರ್ಣವಾಗಲೀ.॥22॥

ಮೂಲಮ್ - 23

ಇಯಂ ಹೈಮವತೀ ಗಂಗಾ ಜ್ಯೇಷ್ಠಾ ಹಿಮವತಃ ಸುತಾ ।
ತಾಂ ವೈ ಧಾರಯಿತುಂ ರಾಜನ್ ಹರಸ್ತತ್ರ ನಿಯುಜ್ಯತಾಮ್ ॥

ಅನುವಾದ

ರಾಜನೇ! ಇವಳು ಹಿಮಾಲಯದ ಜೇಷ್ಠ ಪುತ್ರಿ ಹೈಮವತಿ ಗಂಗೆಯಾಗಿದ್ದಾಳೆ. ಈಕೆಯನ್ನು ಧರಿಸಿಕೊಳ್ಳಲು ಭಗವಾನ್ ಶಂಕರನನ್ನು ಒಲಿಸಿಕೋ.॥23॥

ಮೂಲಮ್ - 24

ಗಂಗಾಯಾಃ ಪತನಂ ರಾಜನ್ ಪೃಥಿವೀ ನ ಸಹಿಷ್ಯತೀ ।
ತಾಂ ವೈ ಧಾರಯಿತುಂ ರಾಜನ್ ನಾನ್ಯಂ ಪಶ್ಯಾಮಿ ಶೂಲಿನಃ ॥

ಅನುವಾದ

ಮಹಾರಾಜಾ! ಗಂಗೆಯು ಬೀಳುವ ವೇಗ ಈ ಪೃಥ್ವಿಯು ಸಹಿಸಲಾರಳು. ತ್ರಿಶೂಲಧಾರೀ ಭಗವಾನ್ ಶಂಕರನಲ್ಲದೆ ಬೇರೆ ಯಾರೂ ಈಕೆಯನ್ನು ಧರಿಸಬಲ್ಲವರನ್ನು ನಾನು ನೋಡಿಲ್ಲ.॥24॥

ಮೂಲಮ್ - 25

ತಮೇವಮುಕ್ತ್ವಾ ರಾಜಾನಂ ಗಂಗಾಂ ಚಾಭಾಷ್ಯ ಲೋಕಕೃತ್ ।
ಜಗಾಮ ತ್ರಿದಿವಂ ದೇವೈಃ ಸರ್ವೇ ಸಹ ಮರುದ್ಗಣೈಃ ॥

ಅನುವಾದ

ರಾಜನಲ್ಲಿ ಹೀಗೆ ಹೇಳಿ ಲೋಕಸ್ರಷ್ಟಾ ಬ್ರಹ್ಮದೇವರು ಭಗವತೀ ಗಂಗೆಗೂ ಭಗೀರಥನ ಮೇಲೆ ಅನುಗ್ರಹ ಮಾಡುವಂತೆ ತಿಳಿಸಿದರು. ಬಳಿಕ ಸಮಸ್ತ ದೇವತೆಗಳು ಹಾಗೂ ಮರುದ್ಗಣರೊಂದಿಗೆ ತಮ್ಮ ಲೋಕಕ್ಕೆ ತೆರಳಿದರು.॥25॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ನಲವತ್ತೆರಡನೆಯ ಸರ್ಗ ಪೂರ್ಣವಾಯಿತು.॥42॥