वाचनम्
ಭಾಗಸೂಚನಾ
ಸಗರನ ಆಜ್ಞೆಯಂತೆ ಅಂಶುಮಂತನು ರಸಾತಳಕ್ಕೆ ಹೋಗಿ ಕುದುರೆಯನ್ನು ತಂದುದು, ಮಕ್ಕಳ ನಿಧನವಾರ್ತೆಯನ್ನು ತಿಳಿದು ಸಗರನು ಶೋಕಾಕುಲನಾದುದು
ಮೂಲಮ್ - 1
ಪುತ್ರಾಂಶ್ಚಿರಗತಾನ್ ಜ್ಞಾತ್ವಾ ಸಗರೋ ರಘುನಂದನ ।
ನಪ್ತಾರಮಬ್ರವೀದ್ರಾಜಾ ದೀಪ್ಯಮಾನಂ ಸ್ವತೇಜಸಾ ॥
ಅನುವಾದ
ರಘುನಂದನ! ‘ಪುತ್ರರು ಹೋಗಿ ಬಹಳ ದಿನಗಳಾದವು’ ಎಂದು ತಿಳಿದು ಸಗರರಾಜನು ತನ್ನ ತೇಜದಿಂದ ಕಂಗೊಳಿಸುವ ಮೊಮ್ಮಗ ಅಂಶುಮಂತನಲ್ಲಿ ಇಂತೆಂದನು .॥1॥
ಮೂಲಮ್ - 2
ಶೂರಶ್ಚ ಕೃತವಿದ್ಯಶ್ಚ ಪೂರ್ವೈಸ್ತುಲ್ಯೋಽಸಿ ತೇಜಸಾ ।
ಪಿತೃಣಾಂ ಗತಿಮನ್ವಿಚ್ಛ ಯೇನ ಚಾಶ್ವೋಽಪಹಾರಿತಃ ॥
ಅನುವಾದ
ಮಗು! ನೀನು ಶೂರ, ವೀರ, ವಿದ್ವಾಂಸ ಹಾಗೂ ನಮ್ಮ ಪೂರ್ವಜರಂತೆ ತೇಜಸ್ವೀಯಾಗಿರುವೆ. ನೀನೂ ನಿನ್ನ ಚಿಕ್ಕಪ್ಪಂದಿರನ್ನು ಅನುಸರಿಸಿ ಹೋಗಿ ನನ್ನ ಯಜ್ಞಾಶ್ವವನ್ನು ಕದ್ದಿರುವ ಆ ಕಳ್ಳನನ್ನು ಹುಡುಕು.॥2॥
ಮೂಲಮ್ - 3
ಅಂತರ್ಭೌಮಾನಿ ಸತ್ತ್ವಾನಿ ವೀರ್ಯವಂತಿ ಮಹಾಂತಿ ಚ ।
ತೇಷಾಂ ತುಂ ಪ್ರತಿಘಾತಾರ್ಥಂ ಸಾಸಿಂ ಗೃಹ್ಣೀಷ್ವ ಕಾರ್ಮುಕಮ್ ॥
ಅನುವಾದ
ನೋಡು, ಪೃಥ್ವಿಯ ಒಳಗೆ ಭಾರೀ ಬಲಿಷ್ಠರಾದ ಜೀವಿಗಳು ಇರುತ್ತಾರೆ. ಅವರನ್ನು ಎದುರಿಸಲು ನೀನು ಖಡ್ಗ-ಧನುರ್ಬಾಣಗಳನ್ನು ಎತ್ತಿಕೊಂಡು ಹೋಗು.॥3॥
ಮೂಲಮ್ - 4
ಅಭಿವಾದ್ಯಾಭಿವಾದ್ಯಾಂಸ್ತ್ವಂ ಹತ್ವಾ ವಿಘ್ನಕರಾನಪಿ ।
ಸಿದ್ಧಾರ್ಥಃ ಸಂನಿವರ್ತಸ್ವ ಮಮ ಯಜ್ಞಸ್ಯ ಪಾರಗಃ ॥
ಅನುವಾದ
ವಂದನೀಯ ಪುರುಷನಿದ್ದರೆ ವಂದಿಸು, ನಿನ್ನ ಮಾರ್ಗದಲ್ಲಿ ವಿಘ್ನವನ್ನೊಡ್ಡುವವರನ್ನು ಕೊಂದುಬಿಡು. ಹೀಗೆ ಮಾಡುತ್ತಾ ಸಫಲ ಮನೋರಥನಾಗಿ ಮರಳಿ ಬಂದು, ನನ್ನ ಯಜ್ಞವು ಪೂರ್ಣವಾಗುವಂತೆ ಮಾಡು.॥4॥
ಮೂಲಮ್ - 5
ಏವಮುಕ್ತೋಂಽಶುಮಾನ್ಸಮ್ಯಕ್ ಸಗರೇಣ ಮಹಾತ್ಮನಾ ।
ಧನುರಾದಾಯ ಖಡ್ಗಂ ಚ ಜಗಾಮ ಲಘುವಿಕ್ರಮಃ ॥
ಅನುವಾದ
ಮಹಾತ್ಮಾ ಸಗರನು ಹೀಗೆ ಹೇಳಿದಾಗ ಶೀಘ್ರವಾಗಿ ಪರಾಕ್ರಮವನ್ನು ತೋರುವ ವೀರವರ ಅಂಶುಮಂತನು ಧನುರ್ಬಾಣ-ಖಡ್ಗವನ್ನೆತ್ತಿಕೊಂಡು ಹೊರಟನು.॥5॥
ಮೂಲಮ್ - 6
ಸ ಖಾತಂ ಪಿತೃಭಿರ್ಮಾರ್ಗಮಂತರ್ಭೌಮಂ ಮಹಾತ್ಮಭಿಃ ।
ಪ್ರಾಪದ್ಯತ ನರಶ್ರೇಷ್ಠ ಸ್ತೇನ ರಾಜ್ಞಾಭಿಚೋದಿತಃ ॥
ಅನುವಾದ
ನರಶ್ರೇಷ್ಠನೇ! ಮಹಾತ್ಮರಾದ ಅವನ ಚಿಕ್ಕಪ್ಪಂದಿರು ಭೂಮಿಯ ಒಳಗೆ ನಿರ್ಮಿಸಿದ ಮಾರ್ಗವಾಗಿ ಅವನು ರಾಜಾ ಸಗರನಿಂದ ಪ್ರೇರಿತನಾಗಿ ಹೋದನು.॥6॥
ಮೂಲಮ್ - 7
ದೇವದಾನವರಕ್ಷೋಭಿಃ ಪಿಶಾಚಪತಗೋರಗೈಃ ।
ಪೂಜ್ಯಮಾನಂ ಮಹಾತೇಜಾ ದಿಶಾಗಜಮಪಶ್ಯತ ॥
ಅನುವಾದ
ಅಲ್ಲಿ ಆ ಮಹಾತೇಜಸ್ವೀ ವೀರನು ಒಂದು ದಿಗ್ಗಜವನ್ನು ನೋಡಿದನು. ಅದನ್ನು ದೇವತೆಗಳು, ದಾನವರು, ರಾಕ್ಷಸರು, ಪಿಶಾಚಿಗಳು, ಪಕ್ಷಿಗಳು, ನಾಗರು ಹೀಗೆ ಎಲ್ಲರೂ ಪೂಜಿಸುತ್ತಿದ್ದರು.॥7॥
ಮೂಲಮ್ - 8
ಸ ತಂ ಪ್ರದಕ್ಷಿಣಂ ಕೃತ್ವಾ ಪೃಷ್ಟ್ವಾ ಚೈವನಿರಾಮಯಮ್ ।
ಪಿತೃನ್ ಸ ಪರಿಪಪ್ರಚ್ಛ ವಾಜಿಹರ್ತಾರಮೇವ ಚ ॥
ಅನುವಾದ
ಅದಕ್ಕೆ ಪ್ರದಕ್ಷಿಣೆ ಬಂದು, ಅದರ ಕುಶಲವನ್ನು ಕೇಳಿ ಕುದುರೆ ಕಳ್ಳನ ಕುರಿತು ವಿಚಾರಿಸಿದನು.॥8॥
ಮೂಲಮ್ - 9
ದಿಶಾಗಜಸ್ತು ತಚ್ಛ್ರುತ್ವಾ ಪ್ರತ್ಯುವಾಚ ಮಹಾಮತಿಃ ।
ಅಸಮಂಜಕೃತಾರ್ಥಸ್ತ್ವಂ ಸಹಾಶ್ವಃ ಶೀಘ್ರಮೇಷ್ಯಸಿ ॥
ಅನುವಾದ
ಅವನ ಪ್ರಶ್ನೆಯನ್ನು ಕೇಳಿ ಪರಮಬುದ್ಧಿವಂತ ದಿಗ್ಗಜವು - ‘ಅಸಮಂಜ ಕುಮಾರಾ! ನೀನು ನಿನ್ನ ಕಾರ್ಯವನ್ನು ಸಿದ್ಧಗೊಳಿಸಿ ಕುದುರೆ ಸಹಿತ ಮರಳಿ ಬರುವೆ ಎಂದು ನುಡಿಯಿತು.॥9॥
ಮೂಲಮ್ - 10
ತಸ್ಯ ತದ್ವಚನಂ ಶ್ರುತ್ವಾ ಸರ್ವಾನೇವ ದಿಶಾಗಜಾನ್ ।
ಯಥಾಕ್ರಮಂ ಯಥಾನ್ಯಾಯಂ ಪ್ರಷ್ಟುಂ ಸಮುಪಚಕ್ರಮೇ ॥
ಅನುವಾದ
ಅದರ ಈ ಮಾತನ್ನು ಕೇಳಿ ಅಂಶುಮಂತನು ಕ್ರಮವಾಗಿ ಎಲ್ಲ ದಿಗ್ಗಜರಲ್ಲಿ ನ್ಯಾಯಯುಕ್ತ ಮೇಲಿನಂತೆ ಪ್ರಶ್ನೆಮಾಡಲು ಪ್ರಾರಂಭಿಸಿದನು.॥10॥
ಮೂಲಮ್ - 11
ತೈಶ್ಚ ಸರ್ವೈರ್ದಿಶಾಪಾಲೈರ್ವಾಕ್ಯಜ್ಞೈರ್ವಾಕ್ಯಕೋವಿದೈಃ ।
ಪೂಜಿತಃ ಸಹಯಶ್ಚೈವಗಂತಾಸೀತ್ಯಭಿಚೋದಿತಃ ॥
ಅನುವಾದ
ಮಾತಿನ ಮರ್ಮವನ್ನು ಅರಿತ, ಮಾತಿನಲ್ಲಿ ಕುಶಲರಾದ ಆ ಎಲ್ಲ ದಿಗ್ಗಜಗಳೂ ಅಂಶುಮಂತನನ್ನು ಸತ್ಕರಿಸಿ, ನೀನು ಕುದುರೆ ಸಹಿತ ಮರಳುವೆ ಎಂದು ಹಾರೈಸಿದರು.॥11॥
ಮೂಲಮ್ - 12
ತೇಷಾಂ ತದ್ವಚನಂ ಶ್ರುತ್ವಾ ಜಗಾಮ ಲಘುವಿಕ್ರಮಃ ।
ಭಸ್ಮರಾಶೀಕೃತಾ ಯತ್ರ ಪಿತರಸ್ತಸ್ಯ ಸಾಗರಾಃ ॥
ಅನುವಾದ
ಅವರ ಆಶೀರ್ವಾದ ಪಡೆದು ಅಂಶುಮಂತನು ಶೀಘ್ರವಾಗಿ ನಡೆಯುತ್ತಾ ಸಗರ ಪುತ್ರರಾದ ಚಿಕ್ಕಪ್ಪಂದಿರು ಬೂದಿಯಾಗಿಬಿದ್ದ ಸ್ಥಾನಕ್ಕೆ ಬಂದನು.॥12॥
ಮೂಲಮ್ - 13
ಸ ದುಃಖವಶಮಾಪನ್ನಸ್ತ್ವಸಮಂಜಸುತಸ್ತದಾ ।
ಚುಕ್ರೋಶ ಪರಮಾರ್ತಸ್ತು ವಧಾತ್ತೇಷಾಂ ಸುದುಃಖಿತಃ ॥
ಅನುವಾದ
ಅವರ ವಧೆಯಿಂದ ಅಸಮಂಜಸ ಪುತ್ರ ಅಂಶುಮಂತನಿಗೆ ಬಹಳ ದುಃಖವಾಯಿತು. ಅವನು ಶೋಕಕ್ಕೆ ವಶನಾಗಿ ಅತ್ಯಂತ ಆರ್ತಭಾವದಿಂದ ಗಟ್ಟಿಯಾಗಿ ಅಳತೊಡಗಿದನು.॥13॥
ಮೂಲಮ್ - 14
ಯಜ್ಞಿಯಂ ಚ ಹಯಂ ತತ್ರ ಚರಂತಮವಿದೂರತಃ ।
ದದರ್ಶ ಪುರುಷವ್ಯಾಘ್ರೋ ದುಃಖಶೋಕಸಮನ್ವಿತಃ ॥
ಅನುವಾದ
ಶೋಕ-ದುಃಖದಲ್ಲಿ ಮುಳುಗಿದ ಪುರುಷಸಿಂಹ ಅಂಶುಮಂತನು ತಮ್ಮ ಯಜ್ಞಾಶ್ವವೂ ಮೇಯುತ್ತಾ ಇರುವುದನ್ನು ನೋಡಿದನು.॥14॥
ಮೂಲಮ್ - 15
ಸ ತೇಷಾಂ ರಾಜಪುತ್ರಾಣಾಂ ಕರ್ತುಕಾಮೋ ಜಲಕ್ರಿಯಾಮ್ ।
ಸ ಜಲಾರ್ಥೀ ಮಹಾತೇಜಾ ನ ಚಾಪಶ್ಯಜ್ಜಲಾಶಯಮ್ ॥
ಅನುವಾದ
ಮಹಾತೇಜಸ್ವೀ ಅಂಶುಮಂತನು ಆ ರಾಜಕುಮಾರರಿಗೆ ಜಲಾಂಜಲಿಯನ್ನು ಕೊಡಲು ನೀರನ್ನು ಬಯಸಿದನು. ಆದರೆ ಅಲ್ಲಿ ಎಲ್ಲಿಯೂ ಜಲಾಶಯ ಕಂಡು ಬಂದಿಲ್ಲ.॥15॥
ಮೂಲಮ್ - 16
ವಿಸಾರ್ಯ ನಿಪುಣಾಂ ದೃಷ್ಟೀಂ ತತೋಽಪಶ್ಯತ್ಖಗಾಧಿಪಮ್ ।
ಪಿತೄಣಾಂ ಮಾತುಲಂ ರಾಮ ಸುಪರ್ಣಮನಿಲೋಪಮಮ್ ॥
ಅನುವಾದ
ಶ್ರೀರಾಮಾ! ಆಗ ದೂರದವರೆಗೆ ನೋಡುವ ದೃಷ್ಟಿಯುಳ್ಳ ಅವನು ಕಣ್ಣುಹಾಯಿಸಿ ನೋಡಿದನು. ಆಗ ಅವನಿಗೆ ವಾಯುವಿನಂತೆ ವೇಗಶಾಲಿ ಪಕ್ಷಿರಾಜ ಗರುಡನು ಕಂಡು ಬಂದನು. ಅವನು ಚಿಕ್ಕಪ್ಪಂದಿರ ಮಾವನಾಗಿದ್ದನು.॥16॥
ಮೂಲಮ್ - 17
ಸ ಚೈನಮಬ್ರವೀದ್ವಾಕ್ಯಂ ವೈನತೇಯೋ ಮಹಾಬಲಃ ।
ಮಾ ಶುಚಃ ಪುರುಷವ್ಯಾಘ್ರ ವಧೋಽಯಂ ಲೋಕಸಮ್ಮತಃ ॥
ಅನುವಾದ
ಮಹಾಬಲಿ ವಿನತಾನಂದನ ಗರುಡನು ಅಂಶುಮಂತನಲ್ಲಿ ಪುರುಷಸಿಂಹನೇ! ಶೋಕಿಸಬೇಡ, ಈ ರಾಜಕುಮಾರರ ವಧೆ ಸಮಸ್ತ ಜಗತ್ತಿನ ಮಂಗಲಕ್ಕಾಗಿಯೇ ಆಗಿದೆ ಎಂದು ಹೇಳಿದನು.॥17॥
ಮೂಲಮ್ - 18
ಕಪಿಲೇನಾಪ್ರಮೇಯೇಣ ದಗ್ಧಾ ಹೀಮೇ ಮಹಾಬಲಾಃ ।
ಸಲಿಲಂ ನಾರ್ಹಸಿ ಪ್ರಾಜ್ಞ ದಾತುಮೇಷಾಂ ಹಿ ಲೌಕಿಕಮ್ ॥
ಅನುವಾದ
ಪ್ರಾಜ್ಞನೇ! ಅನಂತ ಪ್ರಭಾವಶಾಲಿ ಮಹಾತ್ಮಾ ಕಪಿಲರು ಈ ಮಹಾಬಲಿ ರಾಜಕುಮಾರರನ್ನು ಸುಟ್ಟು ಬಿಟ್ಟಿರುವರು. ಇವರಿಗೆ ನೀನು ಲೌಕಿಕ ನೀರಿನಿಂದ ಜಲಾಂಜಲಿ ಕೊಡುವುದು ಉಚಿತವಲ್ಲ.॥18॥
ಮೂಲಮ್ - 19
ಗಂಗಾ ಹಿಮವತೋ ಜ್ಯೇಷ್ಠಾ ದುಹಿತಾ ಪುರುಷರ್ಷಭ ।
ತಸ್ಯಾಂ ಕುರು ಮಹಾಬಾಹೋ ಪಿತೄಣಾಂ ಸಲಿಲಕ್ರಿಯಾಮ್ ॥
ಅನುವಾದ
ನರಶ್ರೇಷ್ಠ! ಮಹಾಬಾಹೋ! ಹಿಮವಂತನ ಜ್ಯೇಷ್ಠಪುತ್ರಿ ಗಂಗೆಯ ಜಲದಿಂದ ನಿನ್ನ ಚಿಕ್ಕಪ್ಪಂದಿರಿಗೆ ತರ್ಪಣಕೊಡು.॥19॥
ಮೂಲಮ್ - 20
ಭಸ್ಮರಾಶೀಕೃತಾನೇತಾನ್ ಪ್ಲಾವಯೇಲ್ಲೋಕಪಾವನೀ ।
ತಯಾ ಕ್ಲಿನ್ನಮಿದಂ ಭಸ್ಮ ಗಂಗಯಾ ಲೋಕಕಾಂತಯಾ ।
ಷಷ್ಟಿಂ ಪುತ್ರಸಹಸ್ರಾಣಿ ಸ್ವರ್ಗಲೋಕಂ ನಯಿಷ್ಯತಿ ॥
ಅನುವಾದ
ಲೋಕಪಾವನೀ ಗಂಗೆಯು ಬೂದಿರಾಶಿಯಾಗಿ ಬಿದ್ದಿರುವ ಅರವತ್ತು ಸಾವಿರ ರಾಜಕುಮಾರರನ್ನು ನೆನೆಸಿದಾಗ ಅವರೆಲ್ಲರೂ ಸ್ವರ್ಗಲೋಕಕ್ಕೆ ಹೋಗುವರು. ಲೋಕರಂಜನಿ ಗಂಗೆಯು ತನ್ನ ಜಲದಿಂದ ಒದ್ದೆಯಾಗಿಸಿ ಈ ಭಸ್ಮರಾಶಿಯನ್ನು ಸ್ವರ್ಗಕ್ಕೆ ತಲುಪಿಸುವಳು.॥20॥
ಮೂಲಮ್ - 21
ನಿರ್ಗಚ್ಛಾಶ್ವಂ ಮಹಾಭಾಗ ಸಂಗೃಹ್ಯ ಪುರುಷರ್ಷಭ ।
ಯಜ್ಞಂ ಪೈತಾಮಹಂ ವೀರ ನಿರ್ವರ್ತಯಿತುಮರ್ಹಸಿ ॥
ಅನುವಾದ
ಮಹಾಭಾಗ! ಪುರುಷಶ್ರೇಷ್ಠನೇ! ವೀರನೇ! ಈಗ ನೀನು ಕುದುರೆಯನ್ನು ಕರೆದುಕೊಂಡು ಹೋಗು ಮತ್ತು ನಿನ್ನ ಅಜ್ಜನ ಯಜ್ಞವನ್ನು ಪೂರ್ಣಗೊಳಿಸು.॥21॥
ಮೂಲಮ್ - 22
ಸುಪರ್ಣವಚನಂ ಶ್ರುತ್ವಾ ಸೋಂಽಶುಮಾನತಿವೀರ್ಯವಾನ್ ।
ತ್ವರಿತಂ ಹಯಮಾದಾಯ ಪುನರಾಯಾನ್ಮಹಾತಪಾಃ ॥
ಅನುವಾದ
ಗರುಡನ ಮಾತನ್ನು ಕೇಳಿ ಅತ್ಯಂತ ಪರಾಕ್ರಮಿ ಮಹಾತಪಸ್ವೀ ಅಂಶುಮಂತನು ಕುದುರೆಯೊಂದಿಗೆ ಕೂಡಲೇ ಮರಳಿದನು.॥22॥
ಮೂಲಮ್ - 23
ತತೋ ರಾಜಾನಮಾಸಾದ್ಯ ದೀಕ್ಷಿತಂ ರಘುನಂದನ ।
ನ್ಯವೇದಯದ್ಯಥಾವೃತ್ತಂ ಸುಪರ್ಣವಚನಂ ತಥಾ ॥
ಅನುವಾದ
ರಘುನಂದನ! ಯಜ್ಞದೀಕ್ಷಿತನಾದ ರಾಜನ ಬಳಿಗೆ ಬಂದು ಎಲ್ಲ ಸಮಾಚಾರವನ್ನು ನಿವೇದಿಸಿಕೊಂಡನು ಹಾಗೂ ಗರುಡನು ತಿಳಿಸಿದ ಮಾತನ್ನು ಹೇಳಿದನು.॥23॥
ಮೂಲಮ್ - 24
ತಚ್ಛ್ರುತ್ವಾ ಘೋರಸಂಕಾಶಂ ವಾಕ್ಯಮಂಶುಮತೋ ನೃಪಃ ।
ಯಜ್ಞಂ ನಿರ್ವರ್ತಯಾಮಾಸ ಯಥಾಕಲ್ಪಂ ಯಥಾವಿಧಿ ॥
ಅನುವಾದ
ಅಂಶುಮಂತನಿಂದ ಈ ಭಯಂಕರ ಸಮಾಚಾರವನ್ನು ಕೇಳಿ ರಾಜಾ ಸಗರನು ಕಲ್ಪೋಕ್ತನಿಯಮದಂತೆ ತನ್ನ ಯಜ್ಞವನ್ನು ವಿಧಿವತ್ತಾಗಿ ಪೂರ್ಣಗೊಳಿಸಿದನು.॥24॥
ಮೂಲಮ್ - 25
ಸ್ವಪುರಂತ್ತ್ವಗಮಚ್ಛ್ರೀಮಾನಿಷ್ಟಯಜ್ಞೋ ಮಹೀಪತಿಃ ।
ಗಂಗಾಯಾಶ್ಚಾಗಮೇ ರಾಜಾ ನಿಶ್ಚಯಂ ನಾಧ್ಯಗಚ್ಛತ ॥
ಅನುವಾದ
ಯಜ್ಞವನ್ನು ಮುಗಿಸಿ ಮಹೀಪತಿ ಸಗರನು ತನ್ನ ರಾಜಧಾನಿಗೆ ಮರಳಿದನು. ಬಂದು ಗಂಗೆಯನ್ನು ತರುವ ವಿಷಯದಲ್ಲಿ ಅವನು ಬಹಳ ವಿಚಾರ ಮಾಡಿದನು. ಆದರೆ ಯಾವುದೇ ನಿಶ್ಚಯಕ್ಕೆ ಬರಲಾಗಲಿಲ್ಲ.॥25॥
ಮೂಲಮ್ - 26
ಅಗತ್ವಾ ನಿಶ್ಚಯಂ ರಾಜಾ ಕಾಲೇನ ಮಹತಾ ಮಹಾನ್ ।
ತ್ರಿಂಶದ್ವರ್ಷಸಹಸ್ರಾಣಿ ರಾಜ್ಯಂ ಕೃತ್ವಾ ದಿವಂ ಗತಃ ॥
ಅನುವಾದ
ಬಹಳ ಹೊತ್ತು ವಿಚಾರ ಮಾಡಿದರೂ ಯಾವುದೇ ನಿಶ್ಚಿತ ಉಪಾಯ ಹೊಳೆಯಲಿಲ್ಲ. ಮತ್ತೆ ಮೂವತ್ತು ಸಾವಿರ ವರ್ಷಗಳವರೆಗೆ ರಾಜ್ಯವಾಳಿ ಅವನು ಸ್ವರ್ಗಲೋಕಕ್ಕೆ ತೆರಳಿದನು.॥26॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ನಲವತ್ತೊಂದನೆಯ ಸರ್ಗ ಪೂರ್ಣವಾಯಿತು.॥41॥