वाचनम्
ಭಾಗಸೂಚನಾ
ಸಗರ ಪುತ್ರರು ವಿನಾಶಹೊಂದುವರೆಂಬುದನ್ನು ಸೂಚಿಸಿ ಬ್ರಹ್ಮನು ದೇವತೆಗಳನ್ನು ಸಮಾಧಾನಗೊಳಿಸಿದುದು, ಸಗರನ ಮಕ್ಕಳು ಭೂಮಿಯನ್ನು ಅಗೆಯುತ್ತಾ ಕಪಿಲ ಮಹರ್ಷಿಗಳ ಬಳಿಗೆ ಹೋದುದು, ಕಪಿಲರು ಕುಪಿತರಾಗಿ ಸಗರನ ಮಕ್ಕಳನ್ನು ಭಸ್ಮವಾಗಿಸಿದುದು
ಮೂಲಮ್ - 1
ದೇವತಾನಾಂ ವಚಃ ಶ್ರುತ್ವಾ ಭಗವಾನ್ ವೈ ಪಿತಾಮಹಃ ।
ಪ್ರತ್ಯುವಾಚ ಸುಸಂತ್ರಸ್ತಾನ್ ಕೃತಾಂತ ಬಲಮೋಹಿತಾನ್ ॥
ಅನುವಾದ
ದೇವತೆಗಳ ಮಾತನ್ನು ಕೇಳಿ ಭಗವಾನ್ ಬ್ರಹ್ಮದೇವರು - ಎಷ್ಟೋ ಪ್ರಾಣಿಗಳನ್ನು ಕೊಲ್ಲುವ ಸಗರ ಪುತ್ರರ ಬಲದಿಂದ ಮೋಹಿತರಾದ ಹಾಗೂ ಭಯಭೀತರಾದ ಆ ದೇವತೆಗಳಲ್ಲಿ ಹೇಳಿದರು .॥1॥
ಮೂಲಮ್ - 2
ಯಸ್ಯೇಯಂ ವಸುಧಾ ಕೃತ್ಸ್ನಾ ವಾಸುದೇವಸ್ಯ ಧೀಮತಃ ।
ಮಹಿಷೀ ಮಾಧವಸ್ಯೈಷಾಸ ಏವ ಭಗವಾನ್ ಪ್ರಭುಃ ॥
ಮೂಲಮ್ - 3
ಕಾಪಿಲಂ ರೂಪಮಾಸ್ಥಾಯ ಧಾರಯತ್ಯನಿಶಂ ಧರಾಮ್ ।
ತಸ್ಯ ಕೋಪಾಗ್ನಿನಾ ದಗ್ಧಾ ಭವಿಷ್ಯಂತಿ ನೃಪಾತ್ಮಜಾಃ ॥
ಅನುವಾದ
ದೇವತೆಗಳಿರಾ! ಈ ಇಡೀ ಪೃಥ್ವಿಯು ಭಗವಾನ್ ವಾಸುದೇವನ ವಸ್ತುವಾಗಿದೆ ಹಾಗೂ ಈಕೆಯು ಭಗವಾನ್ ಲಕ್ಷ್ಮೀಪತಿಯ ರಾಣಿಯಾಗಿರುವಳು. ಆ ಸರ್ವಶಕ್ತಿವಂತ ಭಗವಾನ್ ಶ್ರೀಹರಿಯು ಕಪಿಲ ಮುನಿಯ ರೂಪವನ್ನು ಧರಿಸಿ ನಿರಂತರ ಈ ಪಥ್ವಿಯನ್ನು ಧರಿಸಿರುತ್ತಾನೆ. ಅವನ ಕೋಪಾಗ್ನಿಯಿಂದ ಈ ಎಲ್ಲ ರಾಜಕುಮಾರರು ಸುಟ್ಟು ಬೂದಿಯಾಗುವರು.॥2-3॥
ಮೂಲಮ್ - 4
ಪೃಥಿವ್ಯಾಶ್ಚಾಪಿ ನಿರ್ಭೇದೋ ದೃಷ್ಟ ಏವ ಸನಾತನಃ ।
ಸಗರಸ್ಯ ಚ ಪುತ್ರಾಣಾಂ ವಿನಾಶೋದೀರ್ಘಜೀವಿನಾಮ್ ॥
ಅನುವಾದ
ಪೃಥ್ವಿಯ ಈ ಭೇದನವು ಸನಾತನವಾಗಿದೆ-ಪ್ರತಿಯೊಂದು ಕಲ್ಪದಲ್ಲಿ ಅವಶ್ಯವಾಗಿ ನಡೆಯುವುದು. (ಶ್ರುತಿಗಳಲ್ಲಿ ಮತ್ತು ಸ್ಮೃತಿಗಳಲ್ಲಿ ಬಂದಿರುವ ಸಾಗರಾದಿ ಶಬ್ದಗಳಿಂದ ಈ ಮಾತು ಸ್ಪಷ್ಟವಾಗಿ ತಿಳಿಯುತ್ತದೆ.) ಹೀಗೆಯೇ ದೂರದರ್ಶಿ ಪುರುಷರು ಸಗರನ ಪುತ್ರರ ಮುಂದಿನ ವಿನಾಶವನ್ನು ನೋಡಿರುವರು. ಆದ್ದರಿಂದ ಈ ವಿಷಯದಲ್ಲಿ ಶೋಕಿಸಬೇಡಿ.॥4॥
ಮೂಲಮ್ - 5
ಪಿತಾಮಹವಚಃ ಶ್ರುತ್ವಾ ತ್ರಯಸ್ತ್ರಿಂಶದರಿಂದಮಾಃ ।
ದೇವಾಃ ಪರಮಸಂಹೃಷ್ಟಾಃ ಪುನರ್ಜಗ್ಮುರ್ಯಥಾಗತಮ್ ॥
ಅನುವಾದ
ಬ್ರಹ್ಮದೇವರ ಈ ಮಾತನ್ನು ಕೇಳಿ ಶತ್ರುದಮನರಾದ ಮೂವತ್ತಮೂರು ದೇವತೆಗಳು ಬಹಳ ಹರ್ಷಗೊಂಡು ತಮ್ಮ-ತಮ್ಮ ಸ್ಥಾನಗಳಿಗೆ ತೆರಳಿದರು.॥5॥
ಮೂಲಮ್ - 6
ಸಗರಸ್ಯ ಚ ಪುತ್ರಾಣಾಂ ಪ್ರಾದುರಾಸೀನ್ಮಹಾಸ್ವನಃ ।
ಪೃಥಿವ್ಯಾಂ ಭಿದ್ಯಮಾನಾಯಾಂ ನಿರ್ಘಾತಸಮನಿಃಸ್ವನಃ ॥
ಅನುವಾದ
ಸಗರ ಪುತ್ರರು ಕೈಗಳಿಂದ ಪೃಥ್ವಿಯನ್ನು ಅಗೆಯುತ್ತಿರುವ ಸಮಯದಲ್ಲಿ ವಜ್ರಪಾತದಂತೆ ಭಾರೀ ಭಯಂಕರ ಶಬ್ದವಾಗುತ್ತಿತ್ತು.॥6॥
ಮೂಲಮ್ - 7
ತತೋ ಭಿತ್ವಾ ಮಹೀಂ ಸರ್ವಾಂ ಕೃತ್ವಾ ಚಾಪಿ ಪ್ರದಕ್ಷಿಣಮ್ ।
ಸಹಿತಾಃ ಸಾಗರಾಃ ಸರ್ವೇ ಪಿತರಂ ವಾಕ್ಯಮಬ್ರುವನ್ ॥
ಅನುವಾದ
ಈ ವಿಧವಾಗಿ ಇಡೀ ಪೃಥ್ವಿಯನ್ನು ಅಗೆದು ಅದರ ಪ್ರದಕ್ಷಿಣೆ ಮಾಡಿ ಆ ಎಲ್ಲ ಸಗರಪುತ್ರರು ತಂದೆಯ ಬಳಿಗೆ ಬರಿ ಕೈಯಲ್ಲೇ ಮರಳಿ ಬಂದು ಹೀಗೆಂದರು .॥7॥
ಮೂಲಮ್ - 8
ಪರಿಕ್ರಾಂತಾ ಮಹೀ ಸರ್ವಾ ಸತ್ತ್ವವಂತಶ್ಚಸೂದಿತಾಃ ।
ದೇವದಾನವರಕ್ಷಾಂಸಿ ಪಿಶಾಚೋರಗಪನ್ನಗಾಃ ॥
ಮೂಲಮ್ - 9
ನ ಚ ಪಶ್ಯಾಮಹೇಽಶ್ವಂ ತೇ ಅಶ್ವಹರ್ತಾರಮೇವ ಚ ।
ಕಿಂ ಕರಿಷ್ಯಾಮ ಭದ್ರಂ ತೇ ಬುದ್ಧಿರತ್ರ ವಿಚಾರ್ಯತಾಮ್ ॥
ಅನುವಾದ
ಅಪ್ಪಾ! ನಾವು ಎಲ್ಲಾ ಭೂಮಿಯನ್ನು ಹುಡುಕಿಬಿಟ್ಟೆವು. ದೇವತೆ, ದಾನವ, ರಾಕ್ಷಸ, ಪಿಶಾಚ, ನಾಗ ಮೊದಲಾದ ದೊಡ್ಡ-ದೊಡ್ಡ ಬಲಿಷ್ಠ ಪ್ರಾಣಿಗಳನ್ನು ಕೊಂದು ಹಾಕಿದೆವು. ಹೀಗಾದರೂ ಕುದುರೆಯಾಗಲೀ, ಕುದುರೆ ಕಳ್ಳನಾಗಲೀ ಕಂಡುಬರಲಿಲ್ಲ. ನಿಮಗೆ ಮಂಗಳವಾಗಲಿ. ಈಗ ನಾವೇನು ಮಾಡಬೇಕು? ಈ ವಿಷಯದಲ್ಲಿ ನೀವೇ ಉಪಾಯ ಯೋಚಿಸಿರಿ.॥8-9॥
ಮೂಲಮ್ - 10
ತೇಷಾಂ ತದ್ವಚನಂ ಶ್ರುತ್ವಾ ಪುತ್ರಾಣಾಂ ರಾಜಸತ್ತಮಃ ।
ಸಮನ್ಯುರಬ್ರವೀದ್ ವಾಕ್ಯಂ ಸಗರೋ ರಘುನಂದನ ॥
ಅನುವಾದ
ರಘುನಂದನ! ಪುತ್ರರ ಈ ಮಾತನ್ನು ಕೇಳಿ ಶ್ರೇಷ್ಠ ಸಗರರಾಜನು ಸಿಟ್ಟಿನಿಂದ ಹೇಳಿದನು-॥10॥
ಮೂಲಮ್ - 11
ಭೂಯಃ ಖನತ ಭದ್ರಂ ವೋ ವಿಭೇದ್ಯ ವಸುಧಾತಲಮ್ ।
ಅಶ್ವಹರ್ತಾರಮಾಸಾದ್ಯ ಕೃತಾರ್ಥಾಶ್ಚ ನಿವರ್ತತ ॥
ಅನುವಾದ
ಹೋಗಿರಿ ಪುನಃ ಇಡೀ ಪೃಥ್ವಿಯನ್ನು ಅಗೆಯಿರಿ ಹಾಗೂ ವಿದೀರ್ಣಗೊಳಿಸಿ ಕಳ್ಳನನ್ನು ಹುಡುಕಿರಿ. ಕಳ್ಳನನ್ನು ಹಿಡಿದು ಕೆಲಸ ಪೂರ್ಣವಾದ ಬಳಿಕವೇ ಬರಬೇಕು.॥11॥
ಮೂಲಮ್ - 12
ಪಿತುರ್ವಚನಮಾಸಾದ್ಯ ಸಗರಸ್ಯ ಮಹಾತ್ಮನಃ ।
ಷಷ್ಟಿಃ ಪುತ್ರಸಹಸ್ರಾಣಿ ರಸಾತಲಮಭಿದ್ರವನ್ ॥
ಅನುವಾದ
ಮಹಾತ್ಮಾ ಪಿತನ ಆಜ್ಞೆಯನ್ನು ಶಿರಸಾವಹಿಸಿ ಆ ಅರವತ್ತು ಸಾವಿರ ರಾಜಕುಮಾರರು ರಸಾತಲದ ಕಡೆಗೆ ಹೊರಟರು. (ರೋಷದಿಂದ ಪೃಥ್ವಿಯನ್ನು ಅಗೆಯತೊಡಗಿದರು..॥12॥
ಮೂಲಮ್ - 13
ಖನ್ಯಮಾನೇ ತತಸ್ತಸ್ಮಿನ್ ದದೃಶುಃ ಪರ್ವತೋಪಮಮ್ ।
ದಿಶಾಗಜಂ ವಿರೂಪಾಕ್ಷಂ ಧಾರಯಂತಂ ಮಹೀತಲಮ್ ॥
ಅನುವಾದ
ಹೀಗೆ ಅಗೆಯುವಾಗಲೇ ಅವರಿಗೆ ಪರ್ವತಾಕಾರದ ಒಂದು ದಿಗ್ಗಜ ಕಂಡು ಬಂತು. ಅದರ ಹೆಸರು ವಿರೂಪಾಕ್ಷ ಎಂದಿತ್ತು. ಅದು ಈ ಭೂಮಂಡಲವನ್ನು ಧರಿಸಿಕೊಂಡಿದ್ದಿತು.॥13॥
ಮೂಲಮ್ - 14
ಸಪರ್ವತವನಾಂ ಕೃತ್ನ್ಸಾಂ ಪೃಥಿವೀಂ ರಘುನಂದನ ।
ಧಾರಯಾಮಾಸ ಶಿರಸಾ ವಿರೂಪಾಕ್ಷೋ ಮಹಾಗಜಃ ॥
ಅನುವಾದ
ರಘುನಂದನ! ಮಹಾ ಗಜರಾಜ ವಿರೂಪಾಕ್ಷನು ಪರ್ವತ ಮತ್ತು ವನಗಳ ಸಹಿತ ಈ ಸಮಸ್ತ ಪೃಥ್ವಿಯನ್ನು ತನ್ನ ಮಸ್ತಕದಲ್ಲಿ ಧರಿಸಿಕೊಂಡಿದ್ದನು.॥14॥
ಮೂಲಮ್ - 15
ಯದಾ ಪರ್ವಣಿ ಕಾಕುತ್ಸ್ಥ ವಿಶ್ರಮಾರ್ಥಂ ಮಹಾಗಜಃ ।
ಖೇದಾಚ್ಚಾಲಯತೇ ಶೀರ್ಷಂ ಭೂಮಿಕಂಪಸ್ತದಾ ಭವೇತ್ ॥
ಅನುವಾದ
ಕಾಕುತ್ಸ್ಥನೇ! ಆ ಮಹಾದಿಗ್ಗಜರು ಬಳಲಿ ವಿಶ್ರಾಂತಿಗಾಗಿ ತನ್ನ ಮಸ್ತಕವನ್ನು ಅತ್ತ - ಇತ್ತ ತಿರುಗಿಸಿದಾಗ ಭೂಕಂಪವಾಗತೊಡಗುತ್ತದೆ.॥15॥
ಮೂಲಮ್ - 16
ತೇ ತಂ ಪ್ರದಕ್ಷಿಣಂ ಕೃತ್ವಾ ದಿಶಾಪಾಲಂ ಮಹಾಗಜಮ್ ।
ಮಾನಯಂತೋ ಹಿ ತೇ ರಾಮ ಜಗ್ಮುರ್ಭಿತ್ವಾ ರಸಾತಲಮ್ ॥
ಅನುವಾದ
ಶ್ರೀರಾಮಾ! ಪೂರ್ವ ದಿಕ್ಕನ್ನು ರಕ್ಷಿಸುತ್ತಿರುವ ವಿಶಾಲ ಗಜರಾಜ ವಿರೂಪಾಕ್ಷನಿಗೆ ಪ್ರದಕ್ಷಿಣೆ ಬಂದು, ಅವನನ್ನು ಸಮ್ಮಾನಿಸಿ, ಆ ಸಗರ ಪುತ್ರರು ರಸಾತಲವನ್ನು ಭೇದಿಸುತ್ತಾ ಮುಂದೆ ಸಾಗಿದರು.॥16॥
ಮೂಲಮ್ - 17
ತತಃ ಪೂರ್ವಾಂ ದಿಶಂ ಭಿತ್ವಾ ದಕ್ಷಿಣಾಂ ಬಿಭಿದುಃ ಪುನಃ ।
ದಕ್ಷಿಣಸ್ಯಾಮಪಿ ದಿಶಿ ದದೃಶುಸ್ತೇ ಮಹಾಗಜಮ್ ॥
ಅನುವಾದ
ಪೂರ್ವದಿಕ್ಕನ್ನು ಭೇದಿಸಿದ ಬಳಿಕ ಅವರು ದಕ್ಷಿಣದ ದಿಕ್ಕನ್ನು ಅಗೆಯಲು ತೊಡಗಿದರು. ದಕ್ಷಿಣ ದಿಕ್ಕಿನಲ್ಲಿಯೂ ಅವರಿಗೆ ಒಂದು ಮಹಾ ದಿಗ್ಗಜ ಕಂಡುಬಂತು.॥17॥
ಮೂಲಮ್ - 18
ಮಹಾಪದ್ಮಂ ಮಹಾತ್ಮಾನಂ ಸುಮಹತ್ಪರ್ವತೋಪಮಮ್ ।
ಶಿರಸಾ ಧಾರಯಂತಂ ಗಾಂ ವಿಸ್ಮಯಂ ಜಗ್ಮುರುತ್ತಮಮ್ ॥
ಅನುವಾದ
ಅದು ಮಹಾಪರ್ವತದಂತೆ ಎತ್ತರವಾಗಿದ್ದು ವಿಶಾಲಕಾಯ ಗಜರಾಜ ಮಹಾಪದ್ಮವು ತನ್ನ ಮಸ್ತಕದಲ್ಲಿ ಪೃಥ್ವಿಯನ್ನು ಧರಿಸಿದ್ದನು. ಅದನ್ನು ನೋಡಿ ರಾಜಕುಮಾರರಿಗೆ ಬಹಳ ಆಶ್ಚರ್ಯವಾಯಿತು.॥18॥
ಮೂಲಮ್ - 19
ತೇ ತಂ ಪ್ರದಕ್ಷಿಣಂ ಕೃತ್ವಾ ಸಗರಸ್ಯ ಮಹಾತ್ಮನಃ ।
ಷಷ್ಟಿಃ ಪುತ್ರಸಹಸ್ರಾಣಿ ಪಶ್ಚಿಮಾಂ ಬಿಭಿದುರ್ದಿಶಮ್ ॥
ಅನುವಾದ
ಮಹಾತ್ಮಾ ಸಗರನ ಆ ಅರವತ್ತು ಸಾವಿರ ಪುತ್ರರು ಆ ದಿಗ್ಗಜನನ್ನು ಪ್ರದಕ್ಷಿಣೆ ಬಂದು ಪಶ್ಚಿಮ ದಿಕ್ಕಿನ ಭೂಮಿಯನ್ನು ಅಗೆಯಲು ತೊಡಗಿದರು.॥19॥
ಮೂಲಮ್ - 20
ಪಶ್ಚಿಮಾಯಾಮಪಿ ದಿಶಿ ಮಹಾಂತಮಚಲೋಪಮಮ್ ।
ದಿಶಾಗಜಂ ಸೌಮನಸಂ ದದೃಶುಸ್ತೇ ಮಹಾಬಲಾಃ ॥
ಅನುವಾದ
ಪಶ್ಚಿಮ ದಿಕ್ಕಿನಲ್ಲಿಯೂ ಆ ಮಹಾಬಲಿ ಸಗರ ಪುತ್ರರು ಮಹಾ ಪರ್ವತಾಕಾರ ಸೌಮನಸ ಎಂಬ ದಿಗ್ಗಜನನ್ನು ನೋಡಿದರು.॥20॥
ಮೂಲಮ್ - 21
ತೇ ತಂ ಪ್ರದಕ್ಷಿಣಂ ಕೃತ್ವಾ ಪೃಷ್ಟ್ವಾ ಚಾಪಿ ನಿರಾಮಯಮ್ ।
ಖನಂತಃ ಸಮುಪಕ್ರಾಂತಾ ದಿಶಂ ಹೈಮವತೀಂ ತದಾ ॥
ಅನುವಾದ
ಅದಕ್ಕೂ ಪ್ರದಕ್ಷಿಣೆ ಮಾಡಿ ಅದರ ಕ್ಷೇಮ ಸಮಾಚಾರ ಕೇಳಿ ಆ ರಾಜಕುಮಾರರು ಭೂಮಿಯನ್ನು ಅಗೆಯುತ್ತಾ ಉತ್ತರ ದಿಕ್ಕಿಗೆ ಬಂದರು.॥21॥
ಮೂಲಮ್ - 22
ಉತ್ತರಸ್ಯಾಂ ರಘುಶ್ರೇಷ್ಠ ದದೃಶುರ್ಹಿಮಪಾಂಡುರಮ್ ।
ಭದ್ರಂ ಭದ್ರೇಣ ವಪುಷಾ ಧಾರಯಂತಂ ಮಹೀಮಿಮಾಮ್ ॥
ಅನುವಾದ
ರಘುಶ್ರೇಷ್ಠನೇ! ಉತ್ತರ ದಿಕ್ಕಿನಲ್ಲಿ ಅವರಿಗೆ ಹಿಮಾಲಯದಂತಹ ಶ್ವೇತಭದ್ರ ಎಂಬ ದಿಗ್ಗಜವು ಕಂಡು ಬಂತು. ಅದು ತನ್ನ ಕಲ್ಯಾಣಮಯ ಶರೀರದಿಂದ ಈ ಪೃಥ್ವಿಯನ್ನು ಧರಿಸಿಕೊಂಡಿತ್ತು.॥22॥
ಮೂಲಮ್ - 23
ಸಮಾಲಭ್ಯ ತತಃ ಸರ್ವೇ ಕೃತ್ವಾ ಚೈನಂ ಪ್ರದಕ್ಷಿಣಮ್ ।
ಷಷ್ಟಿಃ ಪುತ್ರಸಹಸ್ರಾಣಿ ಬಿಭಿದುರ್ವಸುಧಾತಲಮ್ ॥
ಅನುವಾದ
ಕ್ಷೇಮ-ಸಮಾಚಾರ ಕೇಳಿ ಸಗರನ ಆ ಅರವತ್ತುಸಾವಿರ ಪುತ್ರರು ಪ್ರದಕ್ಷಿಣೆ ಬಂದು, ಬಳಿಕ ಭೂಮಿಯನ್ನು ಅಗೆಯಲು ತೊಡಗಿದರು.॥23॥
ಮೂಲಮ್ - 24
ತತಃ ಪ್ರಾಗುತ್ತರಾಂ ಗತ್ವಾ ಸಾರಗಾಃ ಪ್ರಥಿತಾಂ ದಿಶಮ್ ।
ರೋಷಾದಭ್ಯಖನನ್ ಸರ್ವೇ ಪೃಥಿವೀಂ ಸಗರಾತ್ಮಜಾಃ ॥
ಅನುವಾದ
ಅನಂತರ ಪೂರ್ವೋತ್ತರ ದಿಕ್ಕಿಗೆ ಹೋಗಿ ಆ ರಾಜಕುಮಾರರು ಒಟ್ಟಿಗೆ ಪೃಥ್ವಿಯನ್ನು ಅಗೆಯಲು ಪ್ರಾರಂಭಿಸಿದರು.॥24॥
ಮೂಲಮ್ - 25
ತೇ ತು ಸರ್ವೇ ಮಹಾತ್ಮಾನೋ ಭೀಮವೇಗಾ ಮಹಾಬಲಾಃ ।
ದದೃಶುಃ ಕಪಿಲಂ ತತ್ರ ವಾಸುದೇವಂ ಸನಾತನಮ್ ॥
ಅನುವಾದ
ಈಗ ಮಹಾತ್ಮರಾದ, ಮಹಾಬಲಿ ಹಾಗೂ ಭಯಂಕರ ವೇಗಶಾಲಿಗಳಾದ ರಾಜಕುಮಾರರೆಲ್ಲರೂ ಅಲ್ಲಿ ಸನಾತನ ವಾಸುದೇವ ಸ್ವರೂಪೀ ಭಗವಾನ್ ವಾಸುದೇವ ಕಪಿಲನನ್ನು ನೋಡಿದರು.॥25॥
ಮೂಲಮ್ - 26
ಹಯಂ ಚ ತಸ್ಯ ದೇವಸ್ಯ ಚರಂತಮವಿದೂರತಃ ।
ಪ್ರಹರ್ಷಮತುಲಂ ಪ್ರಾಪ್ತಾಃ ಸರ್ವೇ ತೇ ರಘುನಂದನ ॥
ಅನುವಾದ
ಸಗರ ರಾಜನ ಯಜ್ಞಾಶ್ವವೂ ಭಗವಾನ್ ಕಪಿಲರ ಬಳಿಯಲ್ಲೇ ಅಲೆಯುತ್ತಾ ಇತ್ತು. ರಘುನಂದನ! ಅದನ್ನು ನೋಡಿ ಅವರಿಗೆ ಅಪಾರ ಹರ್ಷವಾಯಿತು.॥26॥
ಮೂಲಮ್ - 27
ತೇ ತಂ ಯಜ್ಞಹನಂ ಜ್ಞಾತ್ವಾ ಕ್ರೋಧಪರ್ಯಾಕುಲೇಕ್ಷಣಾಃ ।
ಖನಿತ್ರಲಾಂಗಲಧರಾ ನಾನಾವೃಕ್ಷಶಿಲಾಧರಾಃ ॥
ಅನುವಾದ
ಭಗವಾನ್ ಕಪಿಲನನ್ನು ನಮ್ಮ ಯಜ್ಞದಲ್ಲಿ ವಿಘ್ನವನ್ನುಂಟು ಮಾಡುವವನೆಂದು ತಿಳಿದು ಅವರ ಕಣ್ಣುಗಳು ಕ್ರೋಧದಿಂದ ಕೆಂಪೇರಿದವು. ಅವರು ಕೈಗಳಲ್ಲಿ ಗುದ್ದಲಿ, ನೇಗಿಲು, ವೃಕ್ಷಗಳು, ಕಲ್ಲುಗಳನ್ನು ಧರಿಸಿದ್ದರು.॥27॥
ಮೂಲಮ್ - 28½
ಅಭ್ಯಧಾವಂತ ಸಂಕ್ರುದ್ಧಾಸ್ತಿಷ್ಠ ತಿಷ್ಠೇತಿ ಚಾಬ್ರುವನ್ ।
ಅಸ್ಮಾಕಂ ತ್ವಂ ಹಿ ತುರಗಂ ಯಜ್ಞೀಯಂ ಹೃತವಾನಸಿ ॥
ದುರ್ಮೇಧಸ್ತ್ವಂ ಹಿ ಸಂಪ್ರಾಪ್ತಾನ್ವಿದ್ಧಿ ನಃ ಸಗರಾತ್ಮಜಾನ್ ।
ಅನುವಾದ
ಅವರು ಅತ್ಯಂತ ರೋಷಗೊಂಡು ಕಪಿಲನ ಕಡೆಗೆ ಧಾವಿಸಿ, ಹೇಳಿದರು-ಎಲವೋ! ನಿಲ್ಲು, ನಿಲ್ಲು, ನೀನೇ ನಮ್ಮ ಯಜ್ಞದ ಕುದುರೆಯನ್ನು ಕದ್ದು ಇಲ್ಲಿಗೆ ತಂದಿರುವೆ. ದುರ್ಬುದ್ಧಿಯುಳ್ಳವನೇ! ನಾವೆಲ್ಲರೂ ಬಂದಿರುವೆವು. ನಾವು ಮಹಾರಾಜಾ ಸಗರನ ಪುತ್ರರು ಎಂದು ನೀನು ತಿಳಿ.॥28½॥
ಮೂಲಮ್ - 29½
ಶ್ರುತ್ವಾ ತದ್ವಚನಂ ತೇಷಾಂ ಕಪಿಲೋ ರಘುನಂದನ ॥
ರೋಷೇಣ ಮಹತಾ ವಿಷ್ಟೋ ಹುಂಕಾರಮಕರೋತ್ತದಾ ।
ಅನುವಾದ
ರಘುನಂದನ! ಅವರ ಮಾತನ್ನು ಕೇಳಿ ಭಗವಾನ್ ಕಪಿಲನಿಗೆ ತುಂಬಾ ಸಿಟ್ಟು ಬಂತು. ಆ ರೋಷಾವೇಶದಲ್ಲೇ ಅವನ ಬಾಯಿಯಿಂದ ಹುಂಕಾರವು ಹೊರಟಿತು.॥29½॥
ಮೂಲಮ್ - 30
ತತಸ್ತೇನಾಪ್ರಮೇಯೇಣ ಕಪಿಲೇನ ಮಹಾತ್ಮನಾ ।
ಭಸ್ಮರಾಶೀಕೃತಾಃ ಸರ್ವೇ ಕಾಕುತ್ಸ್ಥ ಸಗರಾತ್ಮಜಾಃ ॥
ಅನುವಾದ
ಶ್ರೀರಾಮಾ! ಆ ಹುಂಕಾರದ ಜೊತೆಗೆ ಅನಂತ ಪ್ರಭಾವಶಾಲಿ ಮಹಾತ್ಮಾ ಕಪಿಲನು ಆ ಎಲ್ಲ ಸಗರ ಪುತ್ರರನ್ನು ಸುಟ್ಟು ಬೂದಿಯಾಗಿಸಿದನು.॥30॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ನಲವತ್ತನೆಯ ಸರ್ಗ ಪೂರ್ಣವಾಯಿತು.॥40॥