०३९ सगराश्वमेधः

वाचनम्
ಭಾಗಸೂಚನಾ

ಸಗರನ ಅಶ್ವಮೇಧಾಶ್ವವು ಇಂದ್ರನಿಂದ ಅಪಹರಣ, ಸಗರನ ಮಕ್ಕಳು ಕುದುರೆಯನ್ನು ಹುಡುಕಲು ಪೃಥ್ವಿಯನ್ನೇ ಭೇದಿಸಿದುದು, ದೇವತೆಗಳು ಬ್ರಹ್ಮದೇವರನ್ನು ಪ್ರಾರ್ಥಿಸಿದುದು

ಮೂಲಮ್ - 1

ವಿಶ್ವಾಮಿತ್ರವಚಃ ಶ್ರುತ್ವಾ ಕಥಾಂತೇ ರಘುನಂದನಃ ।
ಉವಾಚ ಪರಮಪ್ರೀತೋ ಮುನಿಂ ದೀಪ್ತಮಿವಾನಲಮ್ ॥

ಅನುವಾದ

ವಿಶ್ವಾಮಿತ್ರರು ಹೇಳಿದ ಕಥೆಯನ್ನು ಕೇಳಿ ಶ್ರೀರಾಮಚಂದ್ರನು ಪರಮಪ್ರೀತನಾದನು. ಕಥೆಯ ಕೊನೆಯಲ್ಲಿ ಅವನು ಯಜ್ಞೇಶ್ವರನಂತೆ ತೇಜಸ್ವೀ ವಿಶ್ವಾಮಿತ್ರರಲ್ಲಿ ಹೇಳಿದನು.॥1॥

ಮೂಲಮ್ - 2

ಶ್ರೋತುಮಿಚ್ಛಾಮಿ ಭದ್ರಂ ತೇ ವಿಸ್ತರೇಣಕಥಾಮಿಮಾಮ್ ।
ಪೂರ್ವಜೋ ಮೇ ಕಥಂ ಬ್ರಹ್ಮನ್ಯಜ್ಞಂ ವೈ ಸಮುಪಾಹರತ್ ॥

ಅನುವಾದ

ಬ್ರಹ್ಮರ್ಷಿಗಳೇ! ನಿಮಗೆ ಮಂಗಳವಾಗಲಿ. ನಮ್ಮ ಪೂರ್ವಜನಾದ ಸಗರ ಮಹಾರಾಜನು ಯಜ್ಞವನ್ನು ಹೇಗೆ ನೆರವೇರಿಸಿದನು? ಎಂಬುದನ್ನು ವಿಸ್ತಾರವಾಗಿ ಕೇಳಲು ಬಯಸುತ್ತಿರುವೆನು.॥2॥

ಮೂಲಮ್ - 3

ತಸ್ಯ ತದ್ವಚನಂ ಶ್ರುತ್ವಾ ಕೌತೂಹಲಸಮನ್ವಿತಃ ।
ವಿಶ್ವಾಮಿತ್ರಸ್ತು ಕಾಕುತ್ಸ್ಥಮುವಾಚ ಪ್ರಹಸನ್ನಿವ ॥

ಅನುವಾದ

ಅವನ ಮಾತನ್ನು ಕೇಳಿ ವಿಶ್ವಾಮಿತ್ರರು ಕುತೂಹಲಗೊಂಡು ನಾನು ಹೇಳಬೇಕೆಂದಿರುವುದನ್ನೇ ಇವನು ಪ್ರಶ್ನಿಸುತ್ತಿರುವನು ಎಂದು ಯೋಚಿಸಿ ನಸುನಗುತ್ತಾ ರಾಮನಲ್ಲಿ ಹೇಳತೊಡಗಿದರು.॥3॥

ಮೂಲಮ್ - 4

ಶ್ರೂಯತಾಂ ವಿಸ್ತರೋ ರಾಮ ಸಗರಸ್ಯ ಮಹಾತ್ಮನಃ ।
ಶಂಕರಶ್ವಶುರೋ ನಾಮ್ನಾ ಹಿಮವಾನಿತಿ ವಿಶ್ರುತಃ ॥

ಮೂಲಮ್ - 5

ವಿಂಧ್ಯಪರ್ವತಮಾಸಾದ್ಯ ನಿರೀಕ್ಷೇತೇ ಪರಸ್ಪರಮ್ ।
ತಯೋರ್ಮಧ್ಯೇ ಸಮಭವದ್ ಯಜ್ಞಃ ಸ ಪುರುಷೋತ್ತಮ ॥

ಅನುವಾದ

ರಾಮಾ! ನೀನು ಮಹಾತ್ಮ ಸಗರನ ಯಜ್ಞದ ಕಥೆಯನ್ನು ವಿಸ್ತಾರವಾಗಿ ಕೇಳು. ಪುರುಷೋತ್ತಮನೇ! ದೇವದೇವ ಶಂಕರನ ಮಾವನು ಹಿಮವಂತ ಎಂದು ವಿಖ್ಯಾತ ಪರ್ವತವು ವಿಂಧ್ಯಾಚಲದವರೆಗೆ ಹೋಗಿ ಹಾಗೂ ವಿಂಧ್ಯಪರ್ವತವು ಹಿಮವಂತನವರೆಗೆ ಹೋಗಿ ಪರಸ್ಪರ ನೋಡುತ್ತಾರೆ. (ಇವೆರಡರ ನಡುವೆ ಬೇರೆ ಯಾವುದೇ ಎತ್ತರವಾದ ಪರ್ವತ ಇರಲಿಲ್ಲ. ಇದರಿಂದ ಪರಸ್ಪರ ನೋಡಲು ತೊಂದರೆ ಇರಲಿಲ್ಲ.) ಈ ಎರಡು ಪರ್ವತಗಳ ನಡುವಿನ ಆರ್ಯಾವರ್ತದ ಪುಣ್ಯ ಭೂಮಿಯಲ್ಲಿ ಆ ಯಜ್ಞದ ಅನುಷ್ಠಾನ ನಡೆದಿತ್ತು.॥4-5॥

ಮೂಲಮ್ - 6½

ಸ ಹಿ ದೇಶೋ ನರವ್ಯಾಘ್ರ ಪ್ರಶಸ್ತೋ ಯಜ್ಞಕರ್ಮಣಿ ।
ತಸ್ಯಾಶ್ವಚರ್ಯಾಂ ಕಾಕುತ್ಸ್ಥ ದೃಢಧನ್ವಾ ಮಹಾರಥಃ ॥
ಅಂಶುಮಾನಕರೋತ್ ತಾತ ಸಗರಸ್ಯ ಮತೇ ಸ್ಥಿತಃ ।

ಅನುವಾದ

ಪುರುಷಸಿಂಹನೇ! ಆ ದೇಶವನ್ನೇ ಯಜ್ಞ ಮಾಡಲು ಉತ್ತಮವೆಂದು ತಿಳಿಯಲಾಗಿದೆ. ಅಯ್ಯಾ ಕಾಕುತ್ಸ್ಥನೇ! ರಾಜಾ ಸಗರನ ಆಜ್ಞೆಯಂತೆ ಯಜ್ಞಾಶ್ವದ ರಕ್ಷಣೆಯ ಭಾರವನ್ನು ಧನುರ್ಧರ ಮಹಾರಥಿ ಅಂಶುಮಂತನು ಸ್ವೀಕರಿಸಿದ್ದನು.॥6½॥

ಮೂಲಮ್ - 7½

ತಸ್ಯ ಪರ್ವಣಿ ತಂ ಯಜ್ಞಂ ಯಜಮಾನಸ್ಯ ವಾಸವಃ ॥
ರಾಕ್ಷಸೀಂ ತನುಮಾಸ್ಥಾಯ ಯಜ್ಞೀಯಾಶ್ವಮಪಾಹರತ್ ।

ಅನುವಾದ

ಆದರೆ ಪರ್ವ ದಿನದಲ್ಲಿ ಯಜ್ಞದಲ್ಲಿ ತೊಡಗಿದ್ದ ಸಗರರಾಜನ ಯಜ್ಞಾಶ್ವವನ್ನು ಇಂದ್ರನು ರಾಕ್ಷಸ ರೂಪ ಧರಿಸಿ ಅಪಹರಿಸಿದನು.॥7½॥

ಮೂಲಮ್ - 8

ಹ್ರಿಯಮಾಣೇ ತುಕಾಕುತ್ಸ್ಥ ತಸ್ಮಿನ್ನಶ್ವೇ ಮಹಾತ್ಮನಃ ॥

ಮೂಲಮ್ - 9

ಉಪಾಧ್ಯಾಯಗಣಾಃ ಸರ್ವೇಯಜಮಾನಮಥಾಬ್ರುವನ್ ।
ಅಯಂ ಪರ್ವಣಿ ವೇಗೇನ ಯಜ್ಞೀಯಾಶ್ವೋಽಪನೀಯತೇ ॥

ಮೂಲಮ್ - 10½

ಹರ್ತಾರಂ ಜಹಿ ಕಾಕುತ್ಸ್ಥ ಹಯಶ್ಚೈವೋಪನೀಯತಾಮ್ ।
ಯಜ್ಞಚ್ಛಿದ್ರಂ ಭವತ್ಯೇತತ್ ಸರ್ವೇಷಾಮಶಿವಾಯನಃ ॥
ತತ್ ತಥಾ ಕ್ರಿಯತಾಂ ರಾಜನ್ಯಜ್ಞೋಽಚ್ಛಿದ್ರಃ ಕ್ರತೋ ಭವೇತ್ ।

ಅನುವಾದ

ಕಾಕುತ್ಸ್ಥನೇ! ಮಹಾತ್ಮಾ ಸಗರನ ಯಜ್ಞಾಶ್ವದ ಅಪರಣವಾಗುವಾಗ ಸಮಸ್ತ ಋತ್ವಿಜರು ಯಜಮಾನ ಸಗರನ ಬಳಿ ಇಂತೆಂದರು-ಕಕುತ್ಸ್ಥನಂದನ! ಇಂದು ಪರ್ವದ ದಿನ ಯಾರೋ ಈ ಯಜ್ಞದ ಕುದುರೆಯನ್ನು ಕದ್ದುಕೊಂಡು ವೇಗವಾಗಿ ಹೋಗುತ್ತಿದ್ದಾನೆ. ನೀನು ಕಳ್ಳನನ್ನು ಕೊಂದು, ಕುದುರೆಯನ್ನು ಹಿಂದಕ್ಕೆ ತನ್ನಿರಿ. ಇಲ್ಲದಿದ್ದರೆ ಯಜ್ಞದಲ್ಲಿ ವಿಘ್ನವುಂಟಾಗಿ ನಮಗೆಲ್ಲರಿಗೆ ಅಮಂಗಲದ ಕಾರಣವಾದೀತು. ರಾಜನೇ! ಈ ಯಜ್ಞವು ಯಾವುದೇ ವಿಘ್ನ ಬಾಧೆಗಳಿಲ್ಲದೆ ಪೂರ್ಣವಾಗುವಂತೆ ಪ್ರಯತ್ನಿಸಿರಿ.॥8-10½॥

ಮೂಲಮ್ - 11

ಸೋಪಾಧ್ಯಾಯವಚಃ ಶ್ರುತ್ವಾ ಸಸ್ಮಿನ್ಸದಸಿ ಪಾರ್ಥಿವಃ ॥

ಮೂಲಮ್ - 12½

ಷಷ್ಟಿಂ ಪುತ್ರ ಸಹಸ್ರಾಣಿ ವಾಕ್ಯಮೇತದುವಾಚ ಹ ।
ಗತಿಂ ಪುತ್ರಾ ನ ಪಶ್ಯಾಮಿ ರಕ್ಷಸಾಂ ಪುರುಷರ್ಷಭಾಃ ॥
ಮಂತ್ರಪೂತೈರ್ಮಹಾಭಾಗೈರಾಸ್ಥಿತೋಹಿ ಮಹಾಕ್ರತುಃ ।

ಅನುವಾದ

ಆ ಯಜ್ಞ ಮಂಟಪದಲ್ಲಿ ಕುಳಿತಿರುವ ರಾಜಾ ಸಗರನು ಪುರೋಹಿತರ ಮಾತನ್ನು ಕೇಳಿ ತನ್ನ ಅರವತ್ತು ಸಾವಿರ ಪುತ್ರರಲ್ಲಿ ಹೇಳಿದನು - ಪುರುಷಶ್ರೇಷ್ಠ ಮಕ್ಕಳಿರಾ! ಈ ಮಹಾಯಜ್ಞವು ವೇದಮಂತ್ರಗಳಿಂದ, ಪವಿತ್ರ ಅಂತಃಕರಣ ಉಳ್ಳ ಮಹಾತ್ಮರ ಮೂಲಕ ನೆರವೇರುತ್ತಾ ಇದೆ. ಆದ್ದರಿಂದ ಇಲ್ಲಿ ರಾಕ್ಷಸರು ಬರಲಾರದೆಂದೇ ನನಗೆ ಅನಿಸುತ್ತಿದೆ. ಆದ್ದರಿಂದ ಈ ಅಶ್ವವನ್ನು ಕದಿಯುವವನು ಯಾರೋ ದೇವಕೋಟಿಯ ಪುರುಷನೇ ಆಗಿರಬೇಕು.॥11-12½॥

ಮೂಲಮ್ - 13

ತದ್ ಗಚ್ಛತ ವಿಚಿನ್ವಧ್ವಂ ಪುತ್ರಕಾ ಭದ್ರಮಸ್ತು ವಃ ॥

ಮೂಲಮ್ - 14

ಸಮುದ್ರಮಾಲಿನೀಂ ಸರ್ವಾಂ ಪೃಥಿವೀಮನುಗಚ್ಛಥ ।
ಏಕೈಕಂ ಯೋಜನಂ ಪುತ್ರಾ ವಿಸ್ತಾರಮಭಿಗಚ್ಛತ ॥

ಮೂಲಮ್ - 15

ಯಾವತ್ ತುರಗಸಂದರ್ಶಸ್ತಾವತ್ಖನತ ಮೇದಿನೀಮ್ ।
ತಮೇವ ಹಯಹರ್ತಾರಂ ಮಾರ್ಗಮಾಣಾ ಮಮಾಜ್ಞಯಾ ॥

ಅನುವಾದ

ಆದ್ದರಿಂದ ಪುತ್ರರೇ! ನೀವು ಹೋಗಿ ಕುದುರೆಯನ್ನು ಹುಡುಕಿರಿ. ನಿಮಗೆ ಮಂಗಳವಾಗಲಿ. ಸಮುದ್ರದಿಂದ ಸುತ್ತುವರಿದ ಈ ಎಲ್ಲ ಭೂಮಿಯನ್ನು ಸುತ್ತಾಡಿ ಹುಡುಕಿರಿ. ಒಂದೊಂದು ಯೋಜನ ವಿಸ್ತಾರದ ಭೂಮಿಯನ್ನು ಹಂಚಿಕೊಂಡು ಅಂಗುಲ-ಅಂಗುಲ ನೋಡುತ್ತಾ ಹೋಗಿ ಕುದುರೆಯ ದರ್ಶನವಾಗುವವರೆಗೆ ನನ್ನ ಆಜ್ಞೆಯಂತೆ ಈ ಭೂಮಿಯನ್ನು ಅಗೆದು ಹಾಕಿರಿ. ಕುದುರೆಯನ್ನು ಹುಡುಕುವುದೇ ಪೃಥ್ವಿಯನ್ನು ಅಗೆಯುವುದರ ಗುರಿಯಾಗಿದೆ.॥13-15॥

ಮೂಲಮ್ - 16

ದೀಕ್ಷಿತಃ ಪೌತ್ರ ಸಹಿತಃ ಸೋಪಾಧ್ಯಾಯ ಗಣಸ್ತ್ವಹಮ್ ।
ಇಹ ಸ್ಥಾ ಸ್ಯಾಮಿ ಭದ್ರಂ ವೋ ಯಾವತ್ತುರಗದರ್ಶನಮ್ ॥

ಅನುವಾದ

ನಾನು ಯಜ್ಞ ದೀಕ್ಷಿತನಾಗಿದ್ದೇನೆ, ಆದ್ದರಿಂದ ಅದನ್ನು ಹುಡುಕಲು ಹೋಗಲಾರೆನು. ಅದಕ್ಕಾಗಿ ಯಜ್ಞಾಶ್ವದ ದರ್ಶನವಾಗುವವರೆಗೆ ನಾನು ಪುರೋಹಿತ-ಋತ್ವಿಜರು ಮತ್ತು ಮೊಮ್ಮಗ ಅಂಶುಮಂತನೊಡನೆ ಇಲ್ಲೇ ಇರುವೆನು.॥16॥

ಮೂಲಮ್ - 17

ತೇ ಸರ್ವೇ ಹೃಷ್ಟಮನಸೋ ರಾಜಪುತ್ರಾ ಮಹಾಬಲಾಃ ।
ಜಗ್ಮುರ್ಮಹೀತಲಂ ರಾಮ ಪಿತುರ್ವಚನಯಂತ್ರಿತಾಃ ॥

ಅನುವಾದ

ಶ್ರೀರಾಮಾ! ಪಿತನ ಆದೇಶವನ್ನು ಪಡೆದ ಅವರೆಲ್ಲ ಮಹಾಬಲಿ ರಾಜಕುಮಾರರು ಮನಸ್ಸಿನಲ್ಲೇ ಹರ್ಷಪಡುತ್ತಾ ಭೂತಳದಲ್ಲಿ ಸಂಚರಿಸತೊಡಗಿದರು.॥17॥

ಮೂಲಮ್ - 18

ಗತ್ವಾ ತು ಪೃಥಿವೀಂ ಸರ್ವಾಮದೃಷ್ಟ್ವಾ ತಂ ಮಹಾಬಲಾಃ ।
ಯೋಜನಾಯಾಮವಿಸ್ತಾರಮೇಕೈಕೋ ಧರಣೀತಲಮ್ ।
ಬಿಭಿದುಃ ಪುರುಷವ್ಯಾಘ್ರ ವಜ್ರಸ್ಪರ್ಶಸಮೈರ್ಭುಜೈಃ ॥

ಅನುವಾದ

ಇಡೀ ಪೃಥ್ವಿಯಲ್ಲಿ ಹುಡುಕಿದರೂ ಕುದುರೆ ಸಿಗಲಿಲ್ಲ, ಆಗ ಆ ಮಹಾಬಲಿ ಪುರುಷಸಿಂಹರು ಒಬ್ಬೊಬ್ಬರು ಒಂದೊಂದು ಯೋಜನ ಭೂಮಿಯನ್ನು ಹಂಚಿಕೊಂಡು ತಮ್ಮ ಭುಜಗಳಿಂದ ಅದನ್ನು ಅಗೆಯಲು ಪ್ರಾರಂಭಿಸಿದರು. ಅವರ ಭುಜಗಳ ಪ್ರಹಾರ ವಜ್ರದಂತೆ ದುಸ್ಸಹವಾಗಿತ್ತು.॥18॥

ಮೂಲಮ್ - 19

ಶೂಲೈರಶನಿಕಲ್ಪೈಶ್ಚ ಹಲೈಶ್ಚಾಪಿ ಸುದಾರುಣೈಃ ।
ಭಿದ್ಯಮಾನಾ ವಸುಮತೀ ನನಾದ ರಘುನಂದನ ॥

ಅನುವಾದ

ರಘುನಂದನ! ಆಗ ವಜ್ರದಂತಹ ಶೂಲಗಳಿಂದ, ಹರಿತವಾದ ನೇಗಿಲುಗಳಿಂದ ಎಲ್ಲ ಕಡೆ ಅಗೆಯುತ್ತಿರುವಾಗ ವಸುಧೆ ಆರ್ತನಾದ ಮಾಡತೊಡಗಿದಳು.॥19॥

ಮೂಲಮ್ - 20

ನಾಗಾನಾಂ ವಧ್ಯಮಾನಾನಾಮಸುರಾಣಾಂ ಚ ರಾಘವ ।
ರಾಕ್ಷಸಾನಾಂ ಚ ದುರಾಧರ್ಷಃ ಸತ್ತ್ವಾನಾಂ ನಿನದೋಽಭವತ್ ॥

ಅನುವಾದ

ರಘುವೀರ! ಆ ರಾಜಕುಮಾರರಿಂದ ಕೊಲ್ಲಲ್ಪಟ್ಟ ನಾಗಗಳ, ಅಸುರ-ರಾಕ್ಷಸರ ಹಾಗೂ ಇತರ ಪ್ರಾಣಿಗಳ ಭಯಂಕರ ಆರ್ತನಾದವು ಎಲ್ಲ ಕಡೆ ತುಂಬಿಹೋಯಿತು.॥20॥

ಮೂಲಮ್ - 21

ಯೋಜನಾನಾಂ ಸಹಸ್ರಾಣಿ ಷಷ್ಟಿಂ ತು ರಘುನಂದನ ।
ಬಿಭಿದುರ್ಧರಣೀಂ ರಾಮ ರಸಾತಲಮನುತ್ತಮಮ್ ॥

ಅನುವಾದ

ರಘುನಂದನ ಶ್ರೀರಾಮಾ! ಅವರು ಅರವತ್ತು ಸಾವಿರ ಯೋಜನ ಭೂಮಿಯನ್ನು ಅಗೆದು ಹಾಕಿದರು. ಅವರು ಉತ್ತಮ ರಸಾತಲವನ್ನೇ ಅನುಸಂಧಾನ ಮಾಡುವಂತಿತ್ತು.॥21॥

ಮೂಲಮ್ - 22

ಏವಂ ಪರ್ವತಸಂಬಾಧಂ ಜಂಬೂದ್ವೀಪಂ ನೃಪಾತ್ಮಜಾಃ ।
ಖನಂತೋ ನೃಪಶಾರ್ದೂಲ ಸರ್ವತಃ ಪರಿಚಕ್ರಮುಃ ॥

ಅನುವಾದ

ನೃಪಶ್ರೇಷ್ಠ ರಾಮಾ! ಹೀಗೆ ಪರ್ವತಗಳಿಂದ ಕೂಡಿದ ಜಂಬೂದ್ವೀಪದ ಭೂಮಿಯನ್ನು ಅಗೆಯುತ್ತಾ ಆ ರಾಜಕುಮಾರರು ಎಲ್ಲ ಕಡೆ ಅಲೆಯ ತೊಡಗಿದರು.॥22॥

ಮೂಲಮ್ - 23

ತತೋ ದೇವಾಃ ಸಗಂಧರ್ವಾಃ ಸಾಸುರಾಃ ಸಹಪನ್ನಗಾಃ ।
ಸಂಭ್ರಾಂತಮನಸಃ ಸರ್ವೇ ಪಿತಾಮ ಮುಪಾಗಮನ್ ॥

ಅನುವಾದ

ಆಗ ಗಂಧರ್ವರು, ಅಸುರರು, ನಾಗಗಳ ಸಹಿತ ಸಮಸ್ತ ದೇವತೆಗಳು ಮನಸ್ಸಿನಲ್ಲಿ ಗಾಬರಿಗೊಂಡು ಬ್ರಹ್ಮದೇವರ ಬಳಿಗೆ ಹೋದರು.॥23॥

ಮೂಲಮ್ - 24

ತೇ ಪ್ರಸಾದ್ಯ ಮಹಾತ್ಮಾನಂ ವಿಷಣ್ಣವದನಾಸ್ತದಾ ।
ಊಚುಃ ಪರಮಸಂತ್ರಸ್ತಾಃ ಪಿತಾಮಹಮಿದಂ ವಚಃ ॥

ಅನುವಾದ

ಅವರ ಮುಖದಲ್ಲಿ ವಿಷಾದ ತುಂಬಿತ್ತು. ಅವರೆಲ್ಲ ಭಯದಿಂದ ನಡುಗುತ್ತಿದ್ದರು. ಅವರು ಮಹಾತ್ಮಾ ಬ್ರಹ್ಮದೇವರನ್ನು ಪ್ರಸನ್ನಗೊಳಿಸಿ ಇಂತೆಂದರು.॥24॥

ಮೂಲಮ್ - 25

ಭಗವನ್ ಪೃಥಿವೀ ಸರ್ವಾ ಖನ್ಯತೇ ಸಗರಾತ್ಮಜೈಃ ।
ಬಹವಶ್ಚ ಮಹಾತ್ಮಾನೋ ವಧ್ಯಂತೇ ಜಲಚಾರಿಣಃ ॥

ಅನುವಾದ

ಭಗವಂತನೇ! ಸಗರನ ಪುತ್ರರು ಈ ಇಡೀ ಪೃಥ್ವಿಯನ್ನು ಅಗೆದು ಹಾಕುತ್ತಿದ್ದಾರೆ. ಅನೇಕ ಮಹಾತ್ಮರನ್ನು ಹಾಗು ಜಲಚರಗಳನ್ನು ಕೊಂದುಹಾಕುತ್ತಿದ್ದಾರೆ.॥25॥

ಮೂಲಮ್ - 26

ಅಯಂ ಯಜ್ಞಹರೋಽಸ್ಮಾಕಮನೇನಾಶ್ವೋಽಪನೀಯತೇ ।
ಇತಿ ತೇ ಸರ್ವಭೂತಾನಿ ಹಿಂಸಂತಿ ಸಗರಾತ್ಮಜಾಃ ॥

ಅನುವಾದ

‘ಇವನು ನಮ್ಮ ಯಜ್ಞದಲ್ಲಿ ವಿಘ್ನವನ್ನುಂಟು ಮಾಡುತ್ತಿದ್ದಾನೆ. ಇವನು ನಮ್ಮ ಕುದುರೆಯನ್ನು ಕಟ್ಟಿರುವನು’ ಎಂದು ಹೇಳುತ್ತಾ ಆ ಸಗರನ ಪುತ್ರರು ಸಮಸ್ತ ಪ್ರಾಣಿಗಳನ್ನು ಹಿಂಸಿಸುತ್ತಿದ್ದಾರೆ.॥26॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಮೂವತ್ತೊಂಭತ್ತನೇ ಸರ್ಗ ಪೂರ್ಣವಾಯಿತು.॥39॥