वाचनम्
ಭಾಗಸೂಚನಾ
ರಾಜಾ ಸಗರನ ಪುತ್ರರ ಉತ್ಪತ್ತಿ ಹಾಗೂ ಯಜ್ಞದ ಸಿದ್ಧತೆ
ಮೂಲಮ್ - 1
ತಾಂ ಕಥಾಂ ಕೌಶಿಕೋ ರಾಮೇ ನಿವೇದ್ಯ ಮಧುರಾಕ್ಷರಾಮ್ ।
ಪುನರೇವಾಪರಂ ವಾಕ್ಯಂ ಕಾಕುತ್ಸ್ಥಮಿದಮಬ್ರವೀತ್ ॥
ಅನುವಾದ
ವಿಶ್ವಾಮಿತ್ರರು ಮಧುರಾಕ್ಷರಗಳಿಂದ ಕೂಡಿದ ಕಾರ್ತಿಕೇಯ ವೃತ್ತಾಂತದ ಕಥೆಯನ್ನು ಶ್ರೀರಾಮನಿಗೆ ತಿಳಿಸಿ ಮತ್ತೆ ಇನ್ನೊಂದು ಪ್ರಸಂಗವನ್ನು ಈ ಪ್ರಕಾರ ಹೇಳಿದರು.॥1॥
ಮೂಲಮ್ - 2
ಅಯೋಧ್ಯಾಧಿಪತಿರ್ವೀರ ಪೂರ್ವಮಾಸೀನ್ನರಾಧಿಪಃ ।
ಸಗರೋ ನಾಮ ಧರ್ಮಾತ್ಮಾ ಪ್ರಜಾಕಾಮಃ ಸ ಚಾಪ್ರಜಃ ॥
ಅನುವಾದ
ವೀರನೇ! ಬಹಳ ಹಿಂದಿನ ಮಾತು, ಅಯೋಧ್ಯೆಯಲ್ಲಿ ಸಗರ ಎಂಬ ಪ್ರಸಿದ್ಧ, ಧರ್ಮಾತ್ಮಾ ರಾಜನು ರಾಜ್ಯವಾಳುತ್ತಿದ್ದನು. ಅವನಿಗೆ ಯಾವುದೇ ಸಂತಾನ ಇರದೆ, ಅವನು ಪುತ್ರಪ್ರಾಪ್ತಿಗಾಗಿ ಸದಾ ಉತ್ಸುಕನಾಗಿದ್ದನು.॥2॥
ಮೂಲಮ್ - 3
ವೈದರ್ಭದುಹಿತಾ ರಾಮ ಕೇಶಿನೀ ನಾಮ ನಾಮತಃ ।
ಜ್ಯೇಷ್ಠಾ ಸಗರಪತ್ನೀ ಸಾ ಧರ್ಮಿಷ್ಠಾ ಸತ್ಯವಾದಿನೀ ॥
ಅನುವಾದ
ಶ್ರೀರಾಮಾ! ವಿದರ್ಭರಾಜಕುಮಾರಿ ಕೇಶಿನೀ ಎಂಬುವಳು ಸಗರನ ಜ್ಯೇಷ್ಠ ಪತ್ನಿಯಾಗಿದ್ದಳು. ಅವಳು ಧರ್ಮಾತ್ಮಳೂ, ಸತ್ಯವಾದಿನಿಯೂ ಆಗಿದ್ದಳು.॥3॥
ಮೂಲಮ್ - 4
ಅರಿಷ್ಟನೇಮೇರ್ದುಹಿತಾ ಸುಪರ್ಣಭಗಿನೀ ತು ಸಾ ।
ದ್ವಿತೀಯಾ ಸಗರಸ್ಯಾಸೀತ್ ಪತ್ನೀ ಸುಮತಿಸಂಜ್ಞಿತಾ ॥
ಅನುವಾದ
ಸಗರನ ಇನ್ನೊಂದು ಪತ್ನಿಯ ಹೆಸರು ಸುಮತಿ ಎಂದಿತ್ತು. ಆಕೆಯು ಅರಿಷ್ಟನೇಮಿಯ ಪುತ್ರಿ ಹಾಗೂ ಗರುಡನ ತಂಗಿಯಾಗಿದ್ದಳು.॥4॥
ಮೂಲಮ್ - 5
ತಾಭ್ಯಾಂ ಸಹ ಮಹಾರಾಜಃ ಪತ್ನೀಭ್ಯಾಂ ತಪ್ತವಾಂಸ್ತಪಃ ।
ಹಿಮವಂತಂ ಸಮಾಸಾದ್ಯ ಭೃಗುಪ್ರಸ್ರವಣೇ ಗಿರೌ ॥
ಅನುವಾದ
ಮಹಾರಾಜಾ ಸಗರನು ತನ್ನ ಆ ಇಬ್ಬರೂ ಪತ್ನಿಯರೊಂದಿಗೆ ಹಿಮಾಲಯ ಪರ್ವತಕ್ಕೆ ಹೋಗಿ ಭೃಗುಪ್ರಸ್ರವಣ ಎಂಬ ಶಿಖರದಲ್ಲಿ ತಪಸ್ಸನ್ನಾಚರಿಸಿದನು.॥5॥
ಮೂಲಮ್ - 6
ಅಥ ವರ್ಷಶತೇ ಪೂರ್ಣೇ ತಪಸಾಽಽರಾಧಿತೋ ಮುನಿಃ ।
ಸಗರಾಯ ವರಂ ಪ್ರಾದಾದ್ ಭೃಗುಃ ಸತ್ಯವತಾಂ ವರಃ ॥
ಅನುವಾದ
ನೂರು ವರ್ಷಗಳು ಪೂರ್ಣವಾದಾಗ ತಪಸ್ಸಿಗೆ ಒಲಿದ ಸತ್ಯವಾದಿಗಳಲ್ಲಿ ಶ್ರೇಷ್ಠರಾದ ಮಹರ್ಷಿ ಭೃಗುವು ರಾಜಾ ಸಗರನಿಗೆ ವರವನ್ನು ಕೊಟ್ಟನು.॥6॥
ಮೂಲಮ್ - 7
ಅಪತ್ಯಲಾಭಃ ಸುಮಹಾನ್ ಭವಿಷ್ಯತಿ ತವಾನಘ ।
ಕೀರ್ತಿಂ ಚಾಪ್ರತಿಮಾಂ ಲೋಕೇ ಪ್ರಾಪ್ಸ್ಯಸೇ ಪುರುಷರ್ಷಭ ॥
ಅನುವಾದ
ಪುಣ್ಯಾತ್ಮನಾದ ರಾಜನೇ! ನಿನಗೆ ಅನೇಕ ಪುತ್ರರು ಪ್ರಾಪ್ತರಾಗುವರು. ಪುರುಷಶ್ರೇಷ್ಠನೇ! ನೀನು ಈ ಲೋಕದಲ್ಲಿ ಅನುಪಮ ಕೀರ್ತಿಯನ್ನು ಪಡೆಯುವೆ.॥7॥
ಮೂಲಮ್ - 8
ಏಕಾ ಜನಯಿತಾ ತಾತ ಪುತ್ರಂ ವಂಶಕರಂ ತವ ।
ಷಷ್ಟಿಂ ಪುತ್ರಸಹಸ್ರಾಣಿ ಅಪರಾ ಜನಯಿಷ್ಯತಿ ॥
ಅನುವಾದ
ಅಯ್ಯಾ! ನಿನ್ನ ಒರ್ವ ಪತ್ನಿಯಾದರೋ ಒಂದೇ ಪುತ್ರನಿಗೆ ಜನ್ಮ ನೀಡುವಳು. ಅವನು ನಿನ್ನ ವಂಶವನ್ನು, ಪರಂಪರೆಯನ್ನೂ ವಿಸ್ತಾರ ಮಾಡುವವನಾಗುವನು ಹಾಗೂ ಇನ್ನೋರ್ವ ಪತ್ನಿಯು ಅರವತ್ತು ಸಾವಿರ ಪುತ್ರರ ಜನನಿಯಾಗುವಳು.॥8॥
ಮೂಲಮ್ - 9
ಭಾಷಮಾಣಂ ಮಹಾತ್ಮಾನಂ ರಾಜಪುತ್ರ್ಯೌಪ್ರಸಾದ್ಯ ತಮ್ ।
ಊಚತುಃ ಪರಮಪ್ರೀತೇ ಕೃತಾಂಜಲಿಪುಟೇ ತದಾ ॥
ಅನುವಾದ
ಮಹಾತ್ಮ ಭೃಗುವು ಹೀಗೆ ಹೇಳುತ್ತಿರುವಾಗ ಆ ಇಬ್ಬರು ರಾಜಕುಮಾರಿಯರು (ರಾಣಿಯರು) ಅವರನ್ನು ಪ್ರಸನ್ನಗೊಳಿಸಿ, ತಾವೂ ಆನಂದಿತರಾಗಿ ಇಬ್ಬರು ಕೈಮುಗಿದುಕೊಂಡು ಕೇಳಿದರು.॥9॥
ಮೂಲಮ್ - 10
ಏಕಃ ಕಸ್ಯಾಃ ಸುತೋ ಬ್ರಹ್ಮನ್ ಕಾ ಬಹೂಂಜನಯಿಷ್ಯತಿ ।
ಶ್ರೋತುಮಿಚ್ಛಾಮಹೇ ಬ್ರಹ್ಮನ್ ಸತ್ಯಮಸ್ತು ವಚಸ್ತವ ॥
ಅನುವಾದ
ಬ್ರಾಹ್ಮಣೋತ್ತಮರೇ! ಯಾವ ರಾಣಿಗೆ ಒಬ್ಬ ಪುತ್ರನಾಗುವನು ಹಾಗೂ ಯಾರು ಅನೇಕ ಪುತ್ರರ ಜನನಿಯಾಗುವಳು? ಇದನ್ನು ಕೇಳಲು ನಾವು ಬಯಸುತ್ತೇವೆ. ನಿಮ್ಮ ವಾಣಿಯು ಸತ್ಯವಾಗಲಿ.॥10॥
ಮೂಲಮ್ - 11
ತಯೋಸ್ತದ್ವಚನಂ ಶ್ರುತ್ವಾ ಭೃಗುಃ ಪರಮಧಾರ್ಮಿಕಃ ।
ಉವಾಚ ಪರಮಾಂ ವಾಣೀಂ ಸ್ವಚ್ಛಂದೋಽತ್ರ ವಿಧೀಯತಾಮ್ ॥
ಮೂಲಮ್ - 12
ಏಕೋ ವಂಶಕರೋ ವಾಸ್ತು ಬಹವೋ ವಾ ಮಹಾಬಲಾಃ ।
ಕೀರ್ತಿಮಂತೋ ಮಹೋತ್ಸಾಹಾಃ ಕಾ ವಾ ಕಂ ವರಮಿಚ್ಛತಿ ॥
ಅನುವಾದ
ಅವರಿಬ್ಬರ ಮಾತನ್ನು ಕೇಳಿ ಪರಮ ಧಾರ್ಮಿಕ ಭೃಗುವು ಹೇಳಿದರು - ದೇವಿಯರಿರಾ! ನೀವು ನಿಮ್ಮ ಇಚ್ಛೆಯನ್ನು ಪ್ರಕಟಿಸಿರಿ. ನಿಮಗೆ ವಂಶ ನಡೆಸುವ ಒಬ್ಬ ಪುತ್ರ ಬೇಕೋ? ಮಹಾಬಲಶಾಲಿ, ಯಶಸ್ವೀ, ಅತ್ಯಂತ ಉತ್ಸಾಹೀ ಅನೇಕ ಪುತ್ರರು ಬೇಕೋ ನೀವು - ನೀವೇ ತೀರ್ಮಾನಿಸಿರಿ.॥11-12॥
ಮೂಲಮ್ - 13
ಮುನೇಸ್ತು ವಚನಂ ಶ್ರುತ್ವಾ ಕೇಶಿನೀ ರಘುನಂದನ ।
ಪುತ್ರಂ ವಂಶಕರಂ ರಾಮ ಜಗ್ರಾಹ ನೃಪಸಂನಿಧೌ ॥
ಅನುವಾದ
ರಘುಕುಲನಂದನ ಶ್ರೀರಾಮಾ! ಮುನಿಯ ಈ ಮಾತನ್ನು ಕೇಳಿ ಕೇಶಿನಿಯು ಸಗರನ ಬಳಿ ವಂಶವನ್ನು ನಡೆಸುವ ಒಬ್ಬನೇ ಪುತ್ರನ ವರವನ್ನು ಪಡೆದಕೊಂಡಳು.॥13॥
ಮೂಲಮ್ - 14
ಷಷ್ಟಿಂ ಪುತ್ರಸಹಸ್ರಾಣಿ ಸುಪರ್ಣಭಗಿನೀ ತದಾ ।
ಮಹೋತ್ಸಾಹಾನ್ ಕೀರ್ತಿಮತೋ ಜಗ್ರಾಹ ಸುಮತಿಃಸುತಾನ್ ॥
ಅನುವಾದ
ಆಗ ಗರುಡನ ತಂಗಿ ಸುಮತಿಯು ಮಹಾ ಉತ್ಸಾಹೀ ಹಾಗೂ ಯಶಸ್ವೀ ಅರವತ್ತುಸಾವಿರ ಪುತ್ರರಿಗೆ ಜನ್ಮನೀಡುವ ವರವನ್ನು ಪಡೆದುಕೊಂಡಳು.॥14॥
ಮೂಲಮ್ - 15
ಪ್ರದಕ್ಷಿಣಮೃಷಿಂ ಕೃತ್ವಾ ಶಿರಸಾಭಿಪ್ರಣಮ್ಯ ತಮ್ ।
ಜಗಾಮ ಸ್ವಪುರಂ ರಾಜಾ ಸಭಾರ್ಯೋ ರಘುನಂದನ ॥
ಅನುವಾದ
ರಘುನಂದನ! ಅನಂತರ ರಾಣಿಯರೊಂದಿಗೆ ಸಗರ ರಾಜನು ಮಹರ್ಷಿಗಳಿಗೆ ಪ್ರದಕ್ಷಿಣೆ ಬಂದು, ಅವರ ಚರಣಗಳಲ್ಲಿ ತಲೆ ಬಾಗಿ, ತನ್ನ ನಗರಕ್ಕೆ ಪ್ರಯಾಣ ಬೆಳೆಸಿದನು.॥15॥
ಮೂಲಮ್ - 16
ಅಥ ಕಾಲೇ ಗತೇ ತಸ್ಯ ಜ್ಯೇಷ್ಠಾ ಪುತ್ರಂ ವ್ಯಜಾಯತ ।
ಅಸಮಂಜ ಇತಿ ಖ್ಯಾತಂ ಕೇಶಿನೀ ಸಗರಾತ್ಮಜಮ್ ॥
ಅನುವಾದ
ಕೆಲವು ಕಾಲಾಂತರದಲ್ಲಿ ಹಿರಿಯ ರಾಣಿ ಕೇಶಿನಿಯು ಸಗರನ ಔರಸ ಪುತ್ರ ಅಸಮಂಜನಿಗೆ ಜನ್ಮನೀಡಿದಳು.॥16॥
ಮೂಲಮ್ - 17
ಸುಮತಿಸ್ತು ನರವ್ಯಾಘ್ರ ಗರ್ಭತುಂಬಂ ವ್ಯಜಾಯತ ।
ಪುಷ್ಟಿಃ ಪುತ್ರ ಸಹಸ್ರಾಣಿ ತುಂಬಭೇದಾದ್ ವಿನಿಃಸೃತಾಃ ॥
ಅನುವಾದ
ಪುರುಷಸಿಂಹನೇ! ಕಿರಿಯರಾಣಿ ಸುಮತಿಯು ಸೋರೆಕಾಯಿ ಆಕಾರದ ಒಂದು ಗರ್ಭಪಿಂಡವನ್ನು ಹೆತ್ತಳು. ಅದನ್ನು ಒಡೆದಾಗ ಅರವತ್ತು ಸಾವಿರ ಬಾಲಕರು ಹೊರ ಬಂದರು.॥17॥
ಮೂಲಮ್ - 18
ಘೃತಪೂರ್ಣೇಷು ಕುಂಭೇಷು ಧಾತ್ರ್ಯಸ್ತಾನ್ ಸಮವರ್ಧಯನ್ ।
ಕಾಲೇನ ಮಹತಾ ಸರ್ವೇ ಯೌವನಂ ಪ್ರತಿಪೇದಿರೇ ॥
ಅನುವಾದ
ಅವನ್ನು ತುಪ್ಪದಿಂದ ತುಂಬಿದ ಗಡಿಗೆಗಳಲ್ಲಿ ಇಟ್ಟು ದಾಸಿಯರು ಅವರ ಪಾಲನೆ-ಪೋಷಣೆ ಮಾಡಿದರು. ನಿಧಾನವಾಗಿ ಬಹಳ ದಿನಗಳು ಕಳೆದಾಗ ಅವರೆಲ್ಲ ಬಾಲಕರು ಯುವಕರಾದರು.॥18॥
ಮೂಲಮ್ - 19
ಅಥ ದೀರ್ಘೇಣ ಕಾಲೇನ ರೂಪಯೌವನಶಾಲಿನಃ ।
ಷಷ್ಟಿಃ ಪುತ್ರಸಹಸ್ರಾಣಿ ಸಗರಸ್ಯಾಭವಂಸ್ತದಾ ॥
ಅನುವಾದ
ಹೀಗೆ ಬಹಳ ಕಾಲದ ಬಳಿಕ ರೂಪ-ಯೌವನದಿಂದ ಸುಶೋಭಿತರಾದ ಅರವತ್ತು ಸಾವಿರ ಸಗರನ ಪುತ್ರರು ಸಿದ್ಧರಾದರು.॥19॥
ಮೂಲಮ್ - 20½
ಸ ಚ ಜ್ಯೇಷ್ಠೋ ನರಶ್ರೇಷ್ಠ ಸಗರಸ್ಯಾತ್ಮಸಂಭವಃ ।
ಬಾಲಾನ್ ಗೃಹೀತ್ವಾ ತು ಜಲೇ ಸರಯ್ವಾ ರಘುನಂದನ ॥
ಪ್ರಕ್ಷಿಪ್ಯ ಪ್ರಹಸನ್ನಿತ್ಯಂ ಮಜ್ಜತಸ್ತಾನ್ ನಿರೀಕ್ಷ್ಯ ವೈ ।
ಅನುವಾದ
ನರಶ್ರೇಷ್ಠ ರಘುನಂದನ! ಸಗರನ ಜ್ಯೇಷ್ಠ ಪುತ್ರ ಅಸಮಂಜನು ಸಗರನ ಬಾಲಕರನ್ನು ಹಿಡಿದು ಸರಯೂ ನದಿಗೆ ಎಸೆದುಬಿಡುತ್ತಿದ್ದನು ಹಾಗೂ ಅವರು ಮುಳುಗುತ್ತಿರುವುದನ್ನು ಕಂಡು ನಗುತ್ತಿದ್ದನು.॥20½॥
ಮೂಲಮ್ - 21½
ಏವಂ ಪಾಪ ಸಮಾಚಾರಃ ಸಜ್ಜನ ಪ್ರತಿಬಾಧಕಃ ॥
ಪೌರಾಣಾಮಹಿತೇ ಯುಕ್ತಃ ಪಿತ್ರಾ ನಿರ್ವಾಸಿತಃ ಪುರಾತ್ ।
ಅನುವಾದ
ಈ ಪ್ರಕಾರ ಪಾಪಾಚಾರದಲ್ಲಿ ಪ್ರವೃತ್ತನಾದಾಗ ಸತ್ಪುರುಷರನ್ನು ಪೀಡಿಸತೊಡಗಿದನು. ನಗರವಾಸಿಗಳಿಗೆ ಅಹಿತವನ್ನು ಮಾಡತೊಡಗಿದನು. ಆಗ ಪಿತನು ಅವನನ್ನು ನಗರದಿಂದ ಹೊರಗೆ ಹಾಕಿದನು.॥21½॥
ಮೂಲಮ್ - 22½
ತಸ್ಯ ಪುತ್ರೋಂಽಶುಮಾನ್ನಾಮ ಅಸಮಂಜಸ್ಯ ವೀರ್ಯವಾನ್ ॥
ಸಮ್ಮತಃ ಸರ್ವಲೋಕಸ್ಯ ಸರ್ವಸ್ಯಾಪಿ ಪ್ರಿಯಂವದಃ ।
ಅನುವಾದ
ಅಸಮಂಜಸನ ಪುತ್ರನ ಹೆಸರು ಅಂಶುಮಾನ ಎಂದಿತ್ತು. ಅವನು ಭಾರೀ ಪರಾಕ್ರಮಿಯೂ, ಎಲ್ಲರೊಡನೆ ಮಧುರವಾಗಿ ಮಾತನಾಡುವವನೂ, ಎಲ್ಲ ಜನರಿಗೆ ಪ್ರಿಯನೂ ಆಗಿದ್ದನು.॥22½॥
ಮೂಲಮ್ - 23½
ತತಃ ಕಾಲೇನ ಮಹತಾ ಮತಿಃ ಸಮಭಿಜಾಯತ ॥
ಸಗರಸ್ಯ ನರಶ್ರೇಷ್ಠ ಯಜೇಯಮಿತಿ ನಿಶ್ಚಿತಾ ।
ಅನುವಾದ
ನರಶ್ರೇಷ್ಠನೇ! ಕೆಲವು ಕಾಲದ ಬಳಿಕ ಮಹಾರಾಜಾ ಸಗರನು - ‘ನಾನು ಯಜ್ಞವನ್ನು ಮಾಡುವೆನು’ ಎಂದು ಮನಸ್ಸಿನಲ್ಲಿ ನಿಶ್ಚಯಿಸಿದನು.॥23½॥
ಮೂಲಮ್ - 24
ಸ ಕೃತ್ವಾ ನಿಶ್ಚಯಂ ರಾಜಾ ಸೋಪಾಧ್ಯಾಯಗಣಸ್ತದಾ ।
ಯಜ್ಞಕರ್ಮಣಿ ವೇದಜ್ಞೋ ಯಷ್ಟುಂ ಸಮುಪಚಕ್ರಮೇ ॥
ಅನುವಾದ
ಹೀಗೆ ದೃಢ ನಿಶ್ಚಯ ಮಾಡಿ ಆ ವೇದವೇತ್ತ ನರೇಶನು ತನ್ನ ಉಪಾಧ್ಯಾಯರೊಂದಿಗೆ ಯಜ್ಞದ ಸಿದ್ಧತೆಗೆ ತೊಡಗಿದನು.॥24॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಮೂವತ್ತೆಂಟನೆಯ ಸರ್ಗ ಪೂರ್ಣವಾಯಿತು. ॥38॥