०३७ स्कन्दोत्पत्तिः

वाचनम्
ಭಾಗಸೂಚನಾ

ಗಂಗೆಯಿಂದ ಕಾರ್ತಿಕೇಯನ ಉತ್ಪತ್ತಿಯ ಪ್ರಸಂಗ

ಮೂಲಮ್ - 1

ತಪ್ಯಮಾನೇ ತದಾ ದೇವೇ ಸೇಂದ್ರಾಃ ಸಾಗ್ನಿಪುರೋಗಮಾಃ ।
ಸೇನಾಪತಿಮಭೀಪ್ಸಂತಃ ಪಿತಾಮಹಮುಪಾಗಮನ್ ॥

ಅನುವಾದ

ಮಹಾದೇವನು ತಪಸ್ಸು ಮಾಡುತ್ತಿರುವಾಗ ಇಂದ್ರ ಮತ್ತು ಅಗ್ನಿಯೇ ಮೊದಲಾದ ಸಮಸ್ತ ದೇವತೆಗಳು ತಮಗೆ ಓರ್ವ ಸೇನಾಪತಿ ಬೇಕೆಂಬ ಇಚ್ಛೆಯಿಂದ ಬ್ರಹ್ಮದೇವರ ಬಳಿಗೆ ಹೋದರು.॥1॥

ಮೂಲಮ್ - 2

ತತೋಽಬ್ರುವನ್ಸುರಾಃ ಸರ್ವೇ ಭಗವಂತಂ ಪಿತಾಮಹಮ್ ।
ಪ್ರಣಿಪತ್ಯ ಸುರಾರಾಮ ಸೇಂದ್ರಾಃ ಸಾಗ್ನಿಪುರೋಗಮಾಃ ॥

ಅನುವಾದ

ದೇವತೆಗಳಿಗೆ ಸುಖ ಕೊಡುವ ರಾಮಾ! ಇಂದ್ರಾಗ್ನಿ ಸಹಿತ ಸಮಸ್ತ ದೇವತೆಗಳು ಬ್ರಹ್ಮದೇವರಿಗೆ ವಂದಿಸಿ ಇಂತು ನುಡಿದರು.॥2॥

ಮೂಲಮ್ - 3

ಯೇನ ಸೇನಾಪತಿರ್ದೇವ ದತ್ತೋ ಭಗವತಾ ಪುರಾ ।
ಸ ತಪಃ ಪರಮಾಸ್ಥಾಯ ತಪ್ಯತೇ ಸ್ಮ ಸಹೋಮಯಾ ॥

ಅನುವಾದ

ಪ್ರಭೋ! ಹಿಂದೆ ಭಗವಾನ್ ಮಹೇಶ್ವರನು ನಮಗೆ (ಬೀಜರೂಪದಲ್ಲಿ) ಸೇನಾಪತಿಯನ್ನು ಕೊಟ್ಟಿದ್ದನು. ಅವನು ಉವಾದೇವಿಯೊಂದಿಗೆ ಉತ್ತಮ ತಪಸ್ಸನ್ನು ಆಶ್ರಯಿಸಿ ತಪಸ್ಸು ಮಾಡುತ್ತಿದ್ದಾನೆ.॥3॥

ಮೂಲಮ್ - 4

ಯದತ್ರಾನಂತರಂ ಕಾರ್ಯಂ ಲೋಕಾನಾಂ ಹಿತಕಾಮ್ಯಯಾ ।
ಸಂವಿಧತ್ಸ್ವ ವಿಧಾನಜ್ಞ ತ್ವಂ ಹಿ ನಃ ಪರಮಾ ಗತಿಃ ॥

ಅನುವಾದ

ವಿಧಿ-ವಿಧಾನ ತಿಳಿದ ಪಿತಾಮಹನೇ! ಈಗ ಲೋಕಹಿತಕ್ಕಾಗಿ ಪ್ರಾಪ್ತ ಕರ್ತವ್ಯವನ್ನು ತಾವು ಪೂರ್ಣಗೊಳಿಸಿರಿ, ಏಕೆಂದರೆ ನೀನೇ ನಮಗೆ ಪರಮಾಶ್ರಯನಾಗಿರುವೆ.॥4॥

ಮೂಲಮ್ - 5

ದೇವತಾನಾಂ ವಚಃ ಶ್ರುತ್ವಾ ಸರ್ವಲೋಕಪಿತಾಮಹಃ ।
ಸಾಂತ್ವಯನ್ ಮಧುರೈರ್ವಾಕ್ಯೈಸ್ತ್ರಿದಶಾನಿದಮಬ್ರವೀತ್ ॥

ಅನುವಾದ

ದೇವತೆಗಳ ಮಾತನ್ನು ಕೇಳಿ ಸಮಸ್ತ ಲೋಕಗಳ ಪಿತಾಮಹ ಬ್ರಹ್ಮದೇವರು ಮಧುರ ವಚನಗಳಿಂದ ಅವರನ್ನು ಸಾಂತ್ವನಗೊಳಿಸುತ್ತಾ ಇಂತೆಂದರು.॥5॥

ಮೂಲಮ್ - 6

ಶೈಲಪುತ್ರ್ಯಾಯದುಕ್ತಂ ತನ್ನ ಪ್ರಜಾಃ ಸ್ವಾಸು ಪತ್ನಿಷು ।
ತಸ್ಯಾ ವಚನಮಕ್ಲಿಷ್ಟಂ ಸತ್ಯಮೇವ ನ ಸಂಶಯಃ ॥

ಅನುವಾದ

ದೇವತೆಗಳಿರಾ! ಗಿರಿರಾಜಕುಮಾರಿ ಪಾರ್ವತಿಯ ಶಾಪದಿಂದ ನಿಮಗೆ ನಿಮ್ಮ ಪತ್ನಿಯರಿಂದ ಯಾವುದೇ ಸಂತಾನ ಆಗಲಾರದು. ಉಮಾದೇವಿಯ ವಾಣಿಯು ಅಮೋಘವಾಗಿದೆ. ಅದು ಸತ್ಯವೇ ಆಗುವುದು. ಇದರಲ್ಲಿ ಸಂದೇಹವೇ ಇಲ್ಲ.॥6॥

ಮೂಲಮ್ - 7

ಇಯಮಾಕಾಶಗಂಗಾ ಚ ಯಸ್ಯಾಂ ಪುತ್ರಂ ಹುತಾಶನಃ ।
ಜನಯಿಷ್ಯತಿ ದೇವಾನಾಂ ಸೇನಾಪತಿಮರಿಂದಮಮ್ ॥

ಅನುವಾದ

ಈ ಆಕಾಶಗಂಗೆಯು ಉಮೆಯ ಹಿರಿಯಕ್ಕಳಾಗಿರುವಳು. ಆಕೆಯ ಗರ್ಭದಲ್ಲಿ ಶಂಕರನ ಆ ತೇಜವನ್ನು ಸ್ಥಾಪಿಸಿ ಅಗ್ನಿಯು ಒಂದು ಪುತ್ರನನ್ನು ಪಡೆಯುವನು. ಅವನು ದೇವಶತ್ರುಗಳನ್ನು ದಮನ ಮಾಡಲು ಸಮರ್ಥ ಸೇನಾಪತಿ ಆಗುವನು.॥7॥

ಮೂಲಮ್ - 8

ಜ್ಯೇಷ್ಠಾ ಶೈಲೇಂದ್ರದುಹಿತಾ ಮಾನಯಿಷ್ಯತಿತಂ ಸುತಮ್ ।
ಉಮಾಯಾಸ್ತದ್ಬಹುಮತಂ ಭವಿಷ್ಯತಿ ನ ಸಂಶಯಃ ॥

ಅನುವಾದ

ಈ ಗಂಗೆಯು ಗಿರಿರಾಜನ ಜ್ಯೇಷ್ಠ ಪುತ್ರಿಯಾಗಿದ್ದಾಳೆ. ಆದ್ದರಿಂದ ತನ್ನ ತಂಗಿಯ ಪುತ್ರನನ್ನು ತನ್ನ ಪುತ್ರನೆಂದೇ ತಿಳಿಯುವಳು. ಉಮೆಗೂ ಇದು ಪ್ರಿಯವಾಗಬಹುದು. ಇದರಲ್ಲಿ ಸಂಶಯವೇ ಇಲ್ಲ.॥8॥

ಮೂಲಮ್ - 9

ತಚ್ಛ್ರುತ್ವಾ ವಚನಂ ತಸ್ಯ ಕೃತಾರ್ಥಾ ರಘುನಂದನ ।
ಪ್ರಣಿಪತ್ಯ ಸುರಾಃ ಸರ್ವೇ ಪಿತಾಮಹಮಪೂಜಯನ್ ॥

ಅನುವಾದ

ರಘುನಂದನ! ಬ್ರಹ್ಮದೇವರ ಈ ಮಾತನ್ನು ಕೇಳಿ ಎಲ್ಲ ದೇವತೆಗಳು ಕೃತಕೃತ್ಯರಾದರು. ಅವರು ಪಿತಾಮಹರನ್ನು ಪೂಜಿಸಿ ನಮಸ್ಕರಿಸಿದರು.॥9॥

ಮೂಲಮ್ - 10

ತೇ ಗತ್ವಾ ಪರ್ವತಂ ರಾಮ ಕೈಲಾಸಂ ಧಾತುಮಂಡಿತಮ್ ।
ಅಗ್ನಿಂ ನಿಯೋಜಯಾಮಾಸುಃ ಪುತ್ರಾರ್ಥಂ ಸರ್ವದೇವತಾಃ ॥

ಅನುವಾದ

ಶ್ರೀರಾಮಾ! ವಿವಿಧ ಧಾತುಗಳಿಂದ ಅಲಂಕೃತ ಉತ್ತಮ ಕೈಲಾಸ ಪರ್ವತಕ್ಕೆ ಹೋಗಿ ಆ ಸಮಸ್ತ ದೇವತೆಗಳು ಅಗ್ನಿಗೆ ಪುತ್ರನನ್ನು ಉತ್ಪನ್ನ ಮಾಡುವ ಕಾರ್ಯದಲ್ಲಿ ನಿಯುಕ್ತಗೊಳಿಸಿದರು.॥10॥

ಮೂಲಮ್ - 11

ದೇವಕಾರ್ಯಮಿದಂ ದೇವ ಸಮಾಧತ್ಸ್ವ ಹುತಾಶನ ।
ಶೈಲಪುತ್ರ್ಯಾಂ ಮಹಾತೇಜೋ ಗಂಗಾಯಾಂ ತೇಜ ಉತ್ಸೃಜ ॥

ಅನುವಾದ

ಅವರು ಹೇಳಿದರು - ಹುತಾಶನ! ಅಗ್ನಿದೇವನೇ! ಈ ದೇವತೆಗಳ ಕಾರ್ಯವನ್ನು ಸಿದ್ಧಗೊಳಿಸು. ಭಗವಾನ್ ರುದ್ರನ ಆ ಮಹಾತೇಜಸ್ಸನ್ನು ಈಗ ನೀನು ಗಂಗೆಯಲ್ಲಿ ಸ್ಥಾಪಿಸು.॥11॥

ಮೂಲಮ್ - 12

ದೇವತಾನಾಂ ಪ್ರತಿಜ್ಞಾಯ ಗಂಗಾಮಭ್ಯೇತ್ಯ ಪಾವಕಃ ।
ಗರ್ಭಂ ಧಾರಯ ವೈ ದೇವಿ ದೇವತಾನಾಮಿದಂ ಪ್ರಿಯಮ್ ॥

ಅನುವಾದ

‘ಹಾಗೆಯೇ ಆಗಲಿ’ ಎಂದು ದೇವತೆಗಳಲ್ಲಿ ಹೇಳಿ ಅಗ್ನಿದೇವನು ಗಂಗೆಯ ಬಳಿಗೆ ಬಂದು ‘ದೇವಿ! ನೀನು ಈ ಗರ್ಭವನ್ನು ಧರಿಸು. ಇದು ದೇವತೆಗಳ ಪ್ರಿಯಕಾರ್ಯವಾಗಿದೆ’ ಎಂದು ಹೇಳಿದನು.॥12॥

ಮೂಲಮ್ - 13

ಇತ್ಯೇತದ್ ವಚನಂ ಶ್ರುತ್ವಾ ದಿವ್ಯಂ ರೂಪಮಧಾರಯತ್ ।
ಸ ತಸ್ಯಾ ಮಹಿಮಾಂ ದೃಷ್ಟ್ವಾ ಸಮಂತಾದವಶೀರ್ಯತ ॥

ಅನುವಾದ

ಅಗ್ನಿಯ ಮಾತನ್ನು ಕೇಳಿ ಗಂಗಾದೇವಿಯು ದಿವ್ಯರೂಪವನ್ನು ಧರಿಸಿದಳು. ಆಕೆಯ ಈ ಮಹಿಮೆ, ಈ ರೂಪ ವೈಭವವನ್ನು ನೋಡಿ ಅಗ್ನಿದೇವನು ಆ ರುದ್ರತೇಜವನ್ನು ಆಕೆಯ ಸುತ್ತಲೂ ಚೆಲ್ಲಿದನು.॥13॥

ಮೂಲಮ್ - 14

ಸಮಂತತಸ್ತದಾ ದೇವೀಮಭ್ಯಷಿಂಚತ ಪಾವಕಃ ।
ಸರ್ವಸ್ರೋತಾಂಸಿ ಪೂರ್ಣಾನಿ ಗಂಗಾಯಾ ರಘುನಂದನ ॥

ಅನುವಾದ

ರಘುನಂದನ! ಅಗ್ನಿದೇವನು ಗಂಗಾದೇವಿಯ ಸುತ್ತಲೂ ಆ ರುದ್ರತೇಜವನ್ನು ಅಭಿಷೇಕ ಮಾಡಿದಾಗ ಗಂಗೆಯ ಎಲ್ಲ ಪ್ರವಾಹಗಳು ಅದರಿಂದ ಪರಿಪೂರ್ಣವಾದವು.॥14॥

ಮೂಲಮ್ - 15½

ತಮುವಾಚ ತತೋ ಗಂಗಾಸರ್ವದೇವ ಪುರೋಗಮಮ್ ।
ಅಶಕ್ತಾ ಧಾರಣೇ ದೇವ ತೇಜಸ್ತವ ಸಮುದ್ಧತಮ್ ॥
ದಹ್ಯಮಾನಾಗ್ನಿನಾ ತೇನ ಸಂಪ್ರವ್ಯಥಿತಚೇತನಾ ।

ಅನುವಾದ

ಆಗ ಗಂಗೆಯು ಸಮಸ್ತ ದೇವತೆಗಳ ಅಗ್ರೇಸರ ಅಗ್ನಿದೇವನಲ್ಲಿ - ದೇವನೇ! ನೀನು ಸ್ಥಾಪಿಸಿದ ಈ ಮಹಾನ್ ತೇಜವನ್ನು ಧರಿಸಲು ನಾನು ಅಸಮರ್ಥಳಾಗಿದ್ದೇನೆ. ಇದರ ಉರಿಯಿಂದ ಸುಡುತ್ತಾ ಇದ್ದೇನೆ. ಇದರಿಂದ ನಾನು ನೊಂದಿರುವೆನು.॥15½॥

ಮೂಲಮ್ - 16½

ಅಥಾಬ್ರವೀದಿದಂ ಗಂಗಾಂ ಸರ್ವದೇವಹುತಾಶನಃ ॥
ಇಹ ಹೈಮವತೇ ಪಾರ್ಶ್ವೇ ಗರ್ಭೋಽಯಂ ಸಂನಿವೇಶ್ಯತಾಮ್ ।

ಅನುವಾದ

ಸಮಸ್ತ ದೇವತೆಗಳ ಹವಿಸ್ಸನ್ನು ಭಕ್ಷಿಸುವ ಅಗ್ನಿಯು ಗಂಗಾದೇವಿಗೆ ಹೇಳಿದನು - ದೇವಿ! ಹಾಗಾದರೆ ಈ ಗರ್ಭವನ್ನು ಹಿಮಾಲಯದ ಪಾರ್ಶ್ವಭಾಗದಲ್ಲಿ ಸ್ಥಾಪಿಸಿಬಿಡು.॥16½॥

ಮೂಲಮ್ - 17½

ಶ್ರುತ್ವಾ ತ್ವಗ್ನಿವಚೋ ಗಂಗಾ ತಂ ಗರ್ಭಮತಿಭಾಸ್ವರಮ್ ॥
ಉತ್ಸಸರ್ಜ ಮಹಾತೇಜಾಃ ಸ್ರೋತೋಭ್ಯೋ ಹಿ ತದಾನಘ ।

ಅನುವಾದ

ಪುಣ್ಯಾತ್ಮನಾದ ರಾಮಾ! ಅಗ್ನಿಯ ಮಾತನ್ನು ಕೇಳಿ ಮಹಾತೇಜಸ್ವಿ ಗಂಗೆಯು ಆ ಅತ್ಯಂತ ಪ್ರಕಾಶಮಾನವಾದ ಗರ್ಭವನ್ನು ತನ್ನ ಪ್ರವಾಹಗಳಿಂದ ತೆಗೆದು ಯಥೋಚಿತ ಸ್ಥಾನದಲ್ಲಿ ಇರಿಸಿದಳು.॥17½॥

ಮೂಲಮ್ - 18

ಯದಸ್ಯಾ ನಿರ್ಗತಂ ತಸ್ಮಾತ್ತಪ್ತಜಾಂಬೂನದಪ್ರಭಮ್ ॥

ಮೂಲಮ್ - 19

ಕಾಂಚನಂ ಧರಣೀಂ ಪ್ರಾಪ್ತಂ ಹಿರಣ್ಯಮತುಲಪ್ರಭಮ್ ।
ತಾಮ್ರಂ ಕಾರ್ಷ್ಣಾಯಸಂಚೈವ ತೈಕ್ಷ್ಣ್ಯಾದೇವಾಭಿಜಾಯತ ॥

ಅನುವಾದ

ಗಂಗೆಯ ಗರ್ಭದಿಂದ ಹೊರತೆಗೆದ ಆ ತೇಜವು ಕಾಯಿಸಿದ ಜಾಂಬೂನದ ಎಂಬ ಸುವರ್ಣದಂತೆ ಕಾಂತಿಯುಕ್ತವಾಗಿ ಕಾಣಿಸಿತು. (ಗಂಗೆಯು ಸುವರ್ಣಮಯ ಮೇರುಗಿರಿಯಿಂದ ಪ್ರಕಟಳಾದ್ದರಿಂದ ಆಕೆಯ ಬಾಲಕನೂ ಅಂತಹ ರೂಪ, ಬಣ್ಣದ್ದಾಯಿತು.) ಆ ತೇಜಸ್ವೀ ಗರ್ಭವನ್ನು ಸ್ಥಾಪಿಸಿದ ಅಲ್ಲಿಯ ಭೂಮಿ ಹಾಗೂ ಪ್ರತಿಯೊಂದು ವಸ್ತು ಸುವರ್ಣಮಯವಾಯಿತು. ಅದರ ಸುತ್ತಲಿನ ಪ್ರದೇಶವು ಅನುಪಮ ಪ್ರಕಾಶದಿಂದ ಬೆಳಗುವ ಬೆಳ್ಳಿಯಂತಾಯಿತು. ಆ ತೇಜದ ತೀಕ್ಷ್ಣತೆಯಿಂದ ದೂರದ ಭೂಭಾಗವೂ ತಾಮ್ರ ಮತ್ತು ಕಬ್ಬಿಣವಾಗಿ ಪರಿವರ್ತಿತವಾಯಿತು.॥18-19॥

ಮೂಲಮ್ - 20

ಮಲಂ ತಸ್ಯಾಭವತ್ತತ್ರ ತ್ರಪು ಸೀಸಕಮೇವ ಚ ।
ತದೇತದ್ಧರಣೀಂ ಪ್ರಾಪ್ಯ ನಾನಾಧಾತುರವರ್ಧತ ॥

ಅನುವಾದ

ಆ ತೇಜಸ್ವೀ ಗರ್ಭದ ಕೊಳೆಯಿಂದ ಅಲ್ಲಿ ತವರು ಮತ್ತು ಸೀಸಗಳು ಉಂಟಾದವು. ಈ ಪ್ರಕಾರ ಭೂಮಿಗೆ ಬಿದ್ದ ಆ ತೇಜವು ನಾನಾ ಪ್ರಕಾರದ ಧಾತುಗಳಿಂದ ವೃದ್ಧಿಯಾಯಿತು.॥20॥

ಮೂಲಮ್ - 21

ನಿಕ್ಷಿಪ್ತಮಾತ್ರೇ ಗರ್ಭೇ ತು ತೇಜೋಭಿರಭಿರಂಜಿತಮ್ ।
ಸರ್ವಂ ಪರ್ವತಸಂನದ್ಧಂ ಸೌವರ್ಣಮಭವದ್ವನಮ್ ॥

ಮೂಲಮ್ - 22

ಜಾತರೂಪಮಿತಿ ಖ್ಯಾತಂ ತದಾಪ್ರಭೃತಿ ರಾಘವ ।
ಸುವರ್ಣಂ ಪುರುಷವ್ಯಾಘ್ರ ಹುತಾಶನಸಮಪ್ರಭಮ್ ॥
ತೃಣವೃಕ್ಷಲತಾಗುಲ್ಮಂ ಸರ್ವಂ ಭವತಿ ಕಾಂಚಿನಮ್ ।

ಅನುವಾದ

ಪುರುಷಸಿಂಹ ರಘುನಂದನ! ಅಂದಿನಿಂದ ಅಗ್ನಿಯಂತೆ ಪ್ರಕಾಶಿಸುವ ಸುವರ್ಣದ ಹೆಸರು ಜಾತರೂಪ ಎಂದಾಯಿತು; ಏಕೆಂದರೆ ಅದೇ ಸಮಯದಲ್ಲಿ ಸುವರ್ಣದಂತಹ ತೇಜಸ್ವೀ ರೂಪ ಪ್ರಕಟವಾಗಿತ್ತು. ಆ ಗರ್ಭದ ಸಂಪರ್ಕದಿಂದ ಅಲ್ಲಿನ ಹುಲ್ಲು, ಮರಗಳು, ಲತೆಗಳು, ಪೊದೆಗಳೆಲ್ಲವೂ ಬಂಗಾರದಂತೆ ಆದವು.॥21-22॥

ಮೂಲಮ್ - 23

ತಂ ಕುಮಾರಂ ತತೋ ಜಾತಂ ಸೇಂದ್ರಾಃ ಸಹಮರುದ್ಗಣಾಃ ।
ಕ್ಷೀರಸಂಭಾವನಾರ್ಥಾಯ ಕೃತ್ತಿಕಾಃ ಸಮಯೋಜಯನ್ ॥

ಅನುವಾದ

ಅನಂತರ ಇಂದ್ರ ಮತ್ತು ಮರುದ್ಗಣ ಸಹಿತ ದೇವತೆಗಳು ಅಲ್ಲಿ ಉತ್ಪನ್ನವಾದ ಕುಮಾರನಿಗೆ ಹಾಲುಣಿಸಲು ಆರು ಮಾತೃಕೆಯರನ್ನು ನಿಯುಕ್ತಗೊಳಿಸಿದರು.॥23॥

ಮೂಲಮ್ - 24

ತಾಃ ಕ್ಷೀರಂ ಜಾತಮಾತ್ರಸ್ಯ ಕೃತ್ವಾ ಸಮಯಮುತ್ತಮಮ್ ।
ದದುಃ ಪುತ್ರೋಽಯಮಸ್ಮಾಕಂ ಸರ್ವಾಸಾಮಿತಿ ನಿಶ್ಚಿತಾಃ ॥

ಅನುವಾದ

ಆಗ ಆ ಕೃತ್ತಿಕೆಯರು ‘ಇವನು ನಮ್ಮೆಲ್ಲರ ಪುತ್ರನಾಗಲಿ’ ಎಂಬ ಉತ್ತಮ ಶರತ್ತನ್ನು ಮುಂದಿಟ್ಟರು. ಈ ಮಾತನ್ನು ನಿಶ್ಚಿತಗೊಳಿಸಿ ಆ ನವಜಾತ ಶಿಶುವಿಗೆ ತಮ್ಮ ಹಾಲನ್ನು ಉಣಿಸಿದರು.॥24॥

ಮೂಲಮ್ - 25

ತತಸ್ತು ದೇವತಾಃ ಸರ್ವಾಃ ಕಾರ್ತಿಕೇಯ ಇತಿ ಬ್ರುವನ್ ।
ಪುತ್ರ ಸ್ತ್ರೈಲೋಕ್ಯವಿಖ್ಯಾತೋ ಭವಿಷ್ಯತಿ ನ ಸಂಶಯಃ ॥

ಅನುವಾದ

ಆಗ ಎಲ್ಲ ದೇವತೆಗಳು ಹೇಳಿದರು - ‘ಈ ಬಾಲಕನು ಕಾರ್ತಿಕೇಯನೆಂದು ಕರೆಸಿಕೊಂಡು ನಿಮ್ಮೆಲ್ಲರಿಗೆ ತ್ರಿಭುವನ ವಿಖ್ಯಾತ ಪುತ್ರನಾಗುವನು’ ಇದರಲ್ಲಿ ಸಂಶಯಬೇಡ.॥25॥

ಮೂಲಮ್ - 26

ತೇಷಾಂ ತದ್ವಚನಂ ಶ್ರುತ್ವಾ ಸ್ಕನ್ನಂ ಗರ್ಭಪರಿಸ್ರವೇ ।
ಸ್ನಾಪಯನ್ ಪರಯಾ ಲಕ್ಷ್ಮ್ಯಾ ದೀಪ್ಯಮಾನಂ ಯಥಾನಲಮ್ ॥

ಅನುವಾದ

ದೇವತೆಗಳ ಅನುಕೂಲಕರ ಮಾತನ್ನು ಕೇಳಿ ಶಿವ-ಪಾರ್ವತಿಯರಿಂದ ಸ್ಕಂದಿತ (ಸ್ಖಲಿತ) ಹಾಗೂ ಗಂಗೆಯ ಮೂಲಕ ಗರ್ಭಸ್ರಾವವಾದಾಗ ಪ್ರಕಟನಾದ ಅಗ್ನಿಯಂತೆ ಉತ್ತಮ ಪ್ರಭಾವದಿಂದ ಪ್ರಕಾಶಿತನಾದ ಆ ಬಾಲಕನನ್ನು ಕೃತ್ತಿಕೆಯರು ಸ್ನಾನ ಮಾಡಿಸಿದರು.॥26॥

ಮೂಲಮ್ - 27

ಸ್ಕಂದ ಇತ್ಯಬ್ರುವನ್ ದೇವಾಃ ಸ್ಕನ್ನಂ ಗರ್ಭಪರಿಸ್ರವೇ ।
ಕಾರ್ತಿಕೇಯಂ ಮಹಾಬಾಹುಂ ಕಾಕುತ್ಸ್ಥ ಜ್ವಲನೋಪಮಮ್ ॥

ಅನುವಾದ

ಕಾಕುತ್ಸ್ಥನೇ! ಅಗ್ನಿಯಂತಹ ತೇಜಸ್ವೀ ಮಹಾಬಾಹು ಕಾರ್ತಿಕೇಯನು ಗರ್ಭಸ್ರಾವಕಾಲದಲ್ಲಿ ಸ್ಕಂದಿತನಾಗಿದ್ದನು. ಆದ್ದರಿಂದ ದೇವತೆಗಳು ಅವನನ್ನು ಸ್ಕಂದ ಎಂದು ಕರೆದರು.॥27॥

ಮೂಲಮ್ - 28

ಪ್ರಾದುರ್ಭೂತಂ ತತಃ ಕ್ಷೀರಂ ಕೃತ್ತಿಕಾನಾಮನುತ್ತಮಮ್ ।
ಷಣ್ಣಾಂ ಷಡಾನನೋ ಭೂತ್ವಾ ಜಗ್ರಾಹ ಸ್ತನಜಂ ಪಯಃ ॥

ಅನುವಾದ

ಅನಂತರ ಕೃತ್ತಿಕೆಯರ ಸ್ತನಗಳಲ್ಲಿ ಪರಮೋತ್ತಮ ಹಾಲು ಉತ್ಪನ್ನವಾಯಿತು. ಆಗ ಸ್ಕಂದನು ತನ್ನ ಆರು ಮುಖಗಳನ್ನು ಪ್ರಕಟಿಸಿ ಆ ಆರು ಮಾತೃಕೆಯರ ಸ್ತನ್ಯಪಾನ ಮಾಡಿದನು.॥28॥

ಮೂಲಮ್ - 29

ಗೃಹೀತ್ವಾ ಕ್ಷೀರಮೇಕಾಹ್ನಾ ಸುಕುಮಾರವಪುಸ್ತದಾ ।
ಅಜಯತ್ ಸ್ವೇನ ವೀರ್ಯೇಣ ದೈತ್ಯಸೈನ್ಯಗಣಾನ್ ವಿಭುಃ ॥

ಅನುವಾದ

ಒಂದೇ ದಿನ ಹಾಲು ಕುಡಿದು ಆ ಸುಕುಮಾರ ಶರೀರವುಳ್ಳ ಶಕ್ತಿಶಾಲಿ ಕುಮಾರನು ತನ್ನ ಪರಾಕ್ರಮದಿಂದ ದೈತ್ಯರ ಎಲ್ಲ ಸೈನ್ಯಗಳನ್ನು ಗೆದ್ದುಕೊಂಡನು.॥29॥

ಮೂಲಮ್ - 30

ಸುರಸೇನಾಗಣಪತಿಮಭ್ಯಷಿಂಚನ್ಮಹಾದ್ಯುತಿಮ್ ।
ತತಸ್ತಮಮರಾಃ ಸರ್ವೇ ಸಮೇತ್ಯಾಗ್ನಿ ಪುರೋಗಮಾಃ ॥

ಅನುವಾದ

ಅನಂತರ ಅಗ್ನಿಯೇ ಮೊದಲಾದ ಎಲ್ಲ ದೇವತೆಗಳು ಸೇರಿ ಆ ಮಹಾತೇಜಸ್ವೀ ಸ್ಕಂದನನ್ನು ದೇವಸೇನಾಪತಿಯ ಪದವಿಯಲ್ಲಿ ಅಭಿಷೇಕ ಮಾಡಿದರು.॥30॥

ಮೂಲಮ್ - 31

ಏಷ ತೇ ರಾಮ ಗಂಗಾಯಾ ವಿಸ್ತರೋಽಭಿಹಿತೋ ಮಯಾ ।
ಕುಮಾರಸಂಭವಶ್ಚೈವ ಧನ್ಯಃ ಪುಣ್ಯಸ್ತಥೈವ ಚ ॥

ಅನುವಾದ

ಶ್ರೀರಾಮ! ಹೀಗೆ ನಾನು ಗಂಗೆಯ ಚರಿತ್ರೆಯನ್ನು ವಿಸ್ತಾರಪೂರ್ವಕ ತಿಳಿಸಿದೆ; ಜೊತೆಗೆ ಕುಮಾರ ಕಾರ್ತಿಕೇಯನ ಜನ್ಮದ ಪ್ರಸಂಗವನ್ನು ತಿಳಿಸಿದೆ. ಇದನ್ನು ಕೇಳುವವನು ಧನ್ಯ ಹಾಗೂ ಪುಣ್ಯಾತ್ಮನಾಗುತ್ತಾನೆ.॥31॥

ಮೂಲಮ್ - 32

ಭಕ್ತಶ್ಚ ಯಃ ಕಾರ್ತಿಕೇಯೇ ಕಾಕುತ್ಸ್ಥ ಭುವಿ ಮಾನವಃ ।
ಆಯುಷ್ಮಾನ್ಪುತ್ರಪೌತ್ರೈಶ್ಚ ಸ್ಕಂದಸಾಲೋಕ್ಯತಾಂ ವ್ರಜೇತ್ ॥

ಅನುವಾದ

ಕಾಕುತ್ಸ್ಥನೇ! ಈ ಪೃಥ್ವಿಯಲ್ಲಿ ಕಾರ್ತಿಕೇಯನಲ್ಲಿ ಭಕ್ತಿಭಾವವನ್ನಿಡುವ ಮನುಷ್ಯನು ಈ ಲೋಕದಲ್ಲಿ ದೀರ್ಘಾಯಸ್ಸು ಹಾಗೂ ಪುತ್ರ-ಪೌತ್ರರಿಂದ ಕೂಡಿಕೊಂಡು, ಸತ್ತ ಮೇಲೆ ಸ್ಕಂದಲೋಕಕ್ಕೆ ಹೋಗುತ್ತಾನೆ.॥32॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಮೂವತ್ತೇಳನೆಯ ಸರ್ಗ ಪೂರ್ಣವಾಯಿತು.॥37॥