०३६ उमामाहत्म्यम्

वाचनम्
ಭಾಗಸೂಚನಾ

ದೇವತೆಗಳು ಶಿವ-ಪಾರ್ವತಿಯರನ್ನು ಸುರತಕ್ರೀಡೆಯಿಂದ ವಿಮುಖರನ್ನಾಗಿ ಮಾಡಿದುದು, ದೇವತೆಗಳಿಗೆ ಮತ್ತು ಭೂಮಿಗೆ ಉಮಾದೇವಿಯ ಶಾಪ

ಮೂಲಮ್ - 1

ಉಕ್ತವಾಕ್ಯೇ ಮುನೌ ತಸ್ಮಿನ್ನುಭೌ ರಾಘವಲಕ್ಷ್ಮಣೌ ।
ಅಭಿನಂದ್ಯ ಕಥಾಂ ವೀರಾವೂಚತುರ್ಮುನಿಪುಂಗವಮ್ ॥

ಅನುವಾದ

ವಿಶ್ವಾಮಿತ್ರರು ಇಷ್ಟು ಹೇಳಿ ಸುಮ್ಮನಾದಾಗ ಶ್ರೀರಾಮ-ಲಕ್ಷ್ಮಣ ವೀರರಿಬ್ಬರು ಅವರು ಹೇಳಿದ ಕಥೆಯನ್ನು ಪ್ರಶಂಸಿಸುತ್ತಾ ಮುನಿವರ ವಿಶ್ವಾಮಿತ್ರರಲ್ಲಿ ಇಂತೆಂದರು.॥1॥

ಮೂಲಮ್ - 2

ಧರ್ಮಯುಕ್ತಮಿದಂ ಬ್ರಹ್ಮನ್ ಕಥಿತಂಪರಮಂ ತ್ವಯಾ ।
ದುಹಿತುಃ ಶೈಲರಾಜಸ್ಯ ಜ್ಯೇಷ್ಠಾಯಾ ವಕ್ತುಮರ್ಹಸಿ ।
ವಿಸ್ತರಂ ವಿಸ್ತರಜ್ಞೋಽಸಿ ದಿವ್ಯಮಾನುಷಸಂಭವಮ್ ॥

ಅನುವಾದ

ಬ್ರಹ್ಮರ್ಷಿಗಳೇ! ತಾವು ಬಹಳ ಉತ್ತಮ ಧರ್ಮಯುಕ್ತ ಕಥೆಯನ್ನು ಹೇಳಿದಿರಿ. ಈಗ ತಾವು ಗಿರಿರಾಜ ಹಿಮವಂತನ ಜೇಷ್ಠಪುತ್ರಿ ಗಂಗೆಯು ದೇವಲೋಕಕ್ಕೆ ಹೋದುದು, ಅಲ್ಲಿಂದ ಮನುಷ್ಯಲೋಕಕ್ಕೆ ಬಂದುದು, ಮುಂತಾದ ಸಂಗತಿಗಳನ್ನು ವಿಸ್ತಾರವಾಗಿ ತಿಳಿಸಿರಿ. ಏಕೆಂದರೆ ನೀವು ವಿಸ್ತೃತ ವೃತ್ತಾಂತವನ್ನು ಬಲ್ಲವರಾಗಿದ್ದೀರಿ.॥2॥

ಮೂಲಮ್ - 3

ತ್ರೀನ್ ಪಥೋ ಹೇತುನಾ ಕೇನ ಪ್ಲಾವಯೇಲ್ಲೋಕಪಾವನೀ ।
ಕಥಂ ಗಂಗಾ ತ್ರಿಪಥಗಾ ವಿಶ್ರುತಾ ಸರಿದುತ್ತಮಾ ॥

ಅನುವಾದ

ಲೋಕಗಳನ್ನು ಪವಿತ್ರಗೊಳಿಸುವ ಗಂಗೆಯು ಯಾವ ಕಾರಣದಿಂದ ಮೂರು ಲೋಕಗಳಲ್ಲಿ ಹರಿದಳು. ನದಿಗಳಲ್ಲಿ, ಶ್ರೇಷ್ಠ ಗಂಗೆಯು ‘ತ್ರಿಪಥಗೆ’ ಎಂದು ಹೇಗೆ ಪ್ರಸಿದ್ಧಳಾದಳು.॥3॥

ಮೂಲಮ್ - 4

ತ್ರಿಷು ಲೋಕೇಷು ಧರ್ಮಜ್ಞ ಕರ್ಮಭಿಃ ಕೈಃ ಸಮನ್ವಿತಾ ।
ತಥಾ ಬ್ರುವತಿ ಕಾಕುತ್ಸ್ಥೇ ವಿಶ್ವಾಮಿತ್ರಸ್ತಪೋಧನಃ ॥
ನಿಖಿಲೇನ ಕಥಾಂ ಸರ್ವಾಮೃಷಿಮಧ್ಯೇ ನ್ಯವೇದಯತ್ ।

ಅನುವಾದ

ಧರ್ಮಜ್ಞರಾದ ಮಹರ್ಷಿಯೇ! ಮೂರು ಲೋಕಗಳಲ್ಲಿ ಆಕೆಯು ಮೂರು ಪ್ರವಾಹದಿಂದ ಯಾವ-ಯಾವ ಕಾರ್ಯ ಮಾಡುತ್ತಿರುವಳು? ಶ್ರೀರಾಮಚಂದ್ರನು ಹೀಗೆ ಪ್ರಶ್ನಿಸಿದಾಗ ತಪೋಧನರಾದ ವಿಶ್ವಾಮಿತ್ರರು ಮುನಿಗಳ ಸಮಾಜದಲ್ಲಿ ಗಂಗೆಗೆ ಸಂಬಂಧಿಸಿದ ಎಲ್ಲ ಕಥೆಯನ್ನು ವಿಸ್ತಾರವಾಗಿ ತಿಳಿಸತೊಡಗಿದರು.॥4॥

ಮೂಲಮ್ - 5

ಪುರಾ ರಾಮ ಕೃತೋದ್ವಾಹಃ ಶಿತಿಕಂಠೋ ಮಹಾತಪಾಃ ॥
ದೃಷ್ಟ್ವಾಚ ಭಗವಾನ್ ದೇವೀಂ ಮೈಥುನಾಯೋಪಚಕ್ರಮೇ ।

ಅನುವಾದ

ಶ್ರೀರಾಮಾ! ಹಿಂದೆ ಮಹಾತಪಸ್ವೀ ಭಗವಾನ್ ನೀಲಕಂಠನು ಉಮಾದೇವಿಯೊಂದಿಗೆ ವಿವಾಹ ಮಾಡಿಕೊಂಡು ಆಕೆಯನ್ನು ನವವಧುವಾಗಿ ತನ್ನ ಬಳಿಗೆ ಬಂದಾಗ ರತಿಕ್ರೀಡೆಯನ್ನು ಆರಂಭಿಸಿದನು.॥5॥

ಮೂಲಮ್ - 6

ತಸ್ಯ ಸಂಕ್ರೀಡಮಾನಸ್ಯ ಮಹಾದೇವಸ್ಯ ಧೀಮತಃ ।
ಶಿತಿಕಂಠಸ್ಯ ದೇವಸ್ಯ ದಿವ್ಯಂ ವರ್ಷಶತಂ ಗತಮ್ ॥

ಅನುವಾದ

ಪರಮ ಧೀಮಂತ ಮಹಾದೇವ ಭಗವಾನ್ ನೀಲಕಂಠನು ಉಮಾದೇವಿಯೊಂದಿಗೆ ಕ್ರಿಡಿಸುತ್ತಾ ನೂರು ದಿವ್ಯ ವರ್ಷಗಳು ಕಳೆದುಹೋದವು.॥6॥

ಮೂಲಮ್ - 7

ನ ಚಾಪಿ ತನಯೋ ರಾಮ ತಸ್ಯಾಮಾಸೀತ್ಪರಂತಪ ।
ಸರ್ವೇ ದೇವಾಃ ಸಮುದ್ಯುಕ್ತಾಃ ಪಿತಾಮಹ ಪುರೋಗಮಾಃ ॥

ಅನುವಾದ

ಪರಂತಪ ರಾಮಾ! ಇಷ್ಟು ವರ್ಷಗಳವರೆಗೆ ವಿಹಾರ ಮುಗಿದ ಮೇಲೆಯೂ ಮಹಾದೇವನಿಗೆ ಉವಾದೇವಿಯ ಗರ್ಭದಿಂದ ಯಾವ ಸಂತಾನವೂ ಆಗಲಿಲ್ಲ. ಇದನ್ನು ನೋಡಿ ಬ್ರಹ್ಮಾದಿದೇವತೆಗಳು ಅವನನ್ನು ತಡೆಯಲು ಉದ್ಯುಕ್ತರಾದರು.॥7॥

ಮೂಲಮ್ - 8

ಯದಿಹೋತ್ಪದ್ಯತೇ ಭೂತಂ ಕಸ್ತತ್ ಪ್ರತಿಸಹಿಷ್ಯತಿ ।
ಅಭಿಗಮ್ಯ ಸುರಾಃ ಸರ್ವೇ ಪ್ರಣಿಪತ್ಯೇದಮಬ್ರುವನ್ ॥

ಅನುವಾದ

ಇಷ್ಟು ದೀರ್ಘ ಕಾಲದ ಬಳಿಕ ರುದ್ರನ ತೇಜದಿಂದ ಉಮಾದೇವಿಯ ಗರ್ಭದಿಂದ ಯಾವುದಾದರೂ ಮಹಾಪ್ರಾಣಿ ಪ್ರಕಟವಾದರೆ ಆ ತೇಜವನ್ನು ಯಾರು ಸಹಿಸಬಲ್ಲರು? ಎಂದು ಯೋಚಿಸುತ್ತಾ ದೇವತೆಗಳೆಲ್ಲ ಶಿವನ ಬಳಿಗೆ ಹೋಗಿ ಇಂತೆಂದರು.॥8॥

ಮೂಲಮ್ - 9

ದೇವದೇವ ಮಹಾದೇವ ಲೋಕಸ್ಯಾಸ್ಯ ಹಿತೇ ರತ ।
ಸುರಾಣಾಂ ಪ್ರಣಿಪಾತೇನ ಪ್ರಸಾದಂ ಕರ್ತುಮರ್ಹಸಿ ॥

ಅನುವಾದ

ಲೋಕಹಿತದಲ್ಲಿ ತತ್ಪರನಾಗಿರುವ ದೇವ ದೇವ ಮಹಾದೇವನೇ! ದೇವತೆಗಳು ನಿನಗೆ ವಂದಿಸುತ್ತಿರುವರು. ಇದರಿಂದ ಪ್ರಸನ್ನನಾಗಿ ನೀನು ಈ ದೇವತೆಗಳ ಮೇಲೆ ಕೃಪೆ ಮಾಡು.॥9॥

ಮೂಲಮ್ - 10

ನ ಲೋಕಾ ಧಾರಯಿಷ್ಯಂತಿ ತವ ತೇಜಃ ಸುರೋತ್ತಮ ।
ಬ್ರಾಹ್ಮೇಣ ತಪಸಾ ಯುಕ್ತೋದೇವ್ಯಾಸಹ ತಪಶ್ಚರ ॥

ಅನುವಾದ

ಸುರಶ್ರೇಷ್ಠನೇ! ಈ ಲೋಕ ನಿನ್ನ ತೇಜವನ್ನು ಧರಿಸಲಾರದು. ಆದ್ದರಿಂದ ನೀನು ಕ್ರೀಡೆಯಿಂದ ನಿವೃತ್ತನಾಗಿ ದೇವಬೋಧಿತ ತಪಸ್ಸಿನಿಂದ ಯುಕ್ತನಾಗಿ ಉವಾದೇವಿಯೊಂದಿಗೆ ತಪಸ್ಸನ್ನು ಮಾಡು.॥10॥

ಮೂಲಮ್ - 11

ತ್ರೈಲೋಕ್ಯಹಿತಕಾಮಾರ್ಥಂ ತೇಜಸ್ತೇಜಸಿ ಧಾರಯ ।
ರಕ್ಷ ಸರ್ವಾನಿಮಾಂಲ್ಲೋಕಾನ್ನಾಲೋಕಂ ಕರ್ತುಮರ್ಹಸಿ ॥

ಅನುವಾದ

ಮೂರು ಲೋಕಗಳನ್ನು ಹಿತದ ಕಾಮನೆಯಿಂದ ನಿನ್ನ ತೇಜ (ವೀರ್ಯ)ವನ್ನು ನಿನ್ನಲ್ಲಿಯೇ ಧರಿಸಿಕೊಂಡು ಇವೆಲ್ಲ ಲೋಕಗಳನ್ನು ರಕ್ಷಿಸು. ಲೋಕಗಳನ್ನು ವಿನಾಶ ಮಾಡಬೇಡ.॥11॥

ಮೂಲಮ್ - 12

ದೇವತಾನಾಂ ವಚಃ ಶ್ರುತ್ವಾ ಸರ್ವಲೋಕಮಹೇಶ್ವರಃ ।
ಬಾಢಮಿತ್ಯಬ್ರವೀತ್ಸರ್ವಾನ್ ಪುನಶ್ಚೇದಮುವಾಚ ಹ ॥

ಅನುವಾದ

ದೇವತೆಗಳ ಈ ಮಾತನ್ನು ಕೇಳಿ ಸರ್ವಲೋಕ ಮಹೇಶ್ವರ ಶಿವನು ‘ಬಹಳ ಒಳ್ಳೆಯದು’ ಎಂದು ಹೇಳಿ ಅವರ ವಿನಂತಿಯನ್ನು ಸ್ವೀಕರಿಸಿ ಮತ್ತೆ ಅವರಲ್ಲಿ ಇಂತೆಂದನು-॥12॥

ಮೂಲಮ್ - 13

ಧಾರಯಿಷ್ಯಾಮ್ಯಹಂ ತೇಜಸ್ತೇಜಸೈವ ಸಹೋಮಯಾ ।
ತ್ರಿದಶಾಃ ಪೃಥಿವೀ ಚೈವ ನಿರ್ವಾಣಮಧಿಗಚ್ಛತು ॥

ಅನುವಾದ

ದೇವತೆಗಳಿರಾ! ಉಮಾ ಸಹಿತ ನಾವಿಬ್ಬರು ನಮ್ಮ ತೇಜವನ್ನು ನಮ್ಮಲ್ಲೇ ಧರಿಸಿಕೊಳ್ಳುವೆವು. ಪೃಥ್ವಿವಿಯೇ ಆದಿ ಎಲ್ಲ ಲೋಕಗಳ ನಿವಾಸಿಗಳು ಶಾಂತಿಯನ್ನು ಪಡೆಯಲಿ.॥13॥

ಮೂಲಮ್ - 14

ಯದಿದಂ ಕ್ಷುಭಿತಂ ಸ್ಥಾನಾನ್ಮಮ ತೇಜೋಹ್ಯನುತ್ತಮಮ್ ।
ಧಾರಯಿಷ್ಯತಿ ಕಸ್ತನ್ಮೇ ಬ್ರುವಂತು ಸುರಸತ್ತಮಾಃ ॥

ಅನುವಾದ

ಆದರೆ ಸುರಶ್ರೇಷ್ಠರೇ! ನನ್ನ ಈ ಸರ್ವೋತ್ತಮ ತೇಜ (ವೀರ್ಯ) ಕ್ಷುಬ್ಧವಾಗಿ ಸ್ಖಲಿತವಾದರೆ ಅದನ್ನು ಯಾರು ಧರಿಸಬಲ್ಲರು? - ಇದನ್ನು ಹೇಳಿರಿ.॥14॥

ಮೂಲಮ್ - 15

ಏವಮುಕ್ತಾಸ್ತತೋ ದೇವಾಃ ಪ್ರತ್ಯೂಚುರ್ವೃಷಭದ್ವಜಮ್ ।
ಯತ್ತೇಜಃ ಕ್ಷುಭಿತಂ ಹ್ಯೇದ್ಯ ತ್ತದ್ಧರಾ ಧಾರಯಿಷ್ಯತಿ ॥

ಅನುವಾದ

ಅವನು ಹೀಗೆ ಹೇಳಿದಾಗ ದೇವತೆಗಳು ವೃಷಭಧ್ವಜ ಶಿವನಲ್ಲಿ ಹೇಳಿದರು - ಭಗವಂತನೇ! ಇಂದು ನಿನ್ನ ತೇಜವು ಕ್ಷುಬ್ಧವಾಗಿ ಸ್ಖಲಿತವಾದರೆ ಅದನ್ನು ಪಥ್ವಿಯು ಧರಿಸುವಳು.॥15॥

ಮೂಲಮ್ - 16

ಏವಮುಕ್ತಃ ಸುರಪತಿಃ ಪ್ರಮುಮೋಚ ಮಹಾಬಲಃ ।
ತೇಜಸಾ ಪೃಥಿವೀ ಯೇನ ವ್ಯಾಪ್ತಾ ಸಗಿರಿಕಾನನಾ ॥

ಅನುವಾದ

ದೇವತೆಗಳ ಈ ಮಾತನ್ನು ಕೇಳಿ ಮಹಾಬಲೀ ದೇವೇಶ್ವರ ಶಿವನು ತನ್ನ ತೇಜವನ್ನು ವಿಸರ್ಜಿಸಿದನು. ಅದರಿಂದ ಪರ್ವತ ವನಗಳ ಸಹಿತ ಪಥ್ವಿಯು ವ್ಯಾಪ್ತಗೊಂಡಿತು.॥16॥

ಮೂಲಮ್ - 17

ತತೋ ದೇವಾಃ ಪುನರಿದಮೂಚುಶ್ಚಾಪಿ ಹುತಾಶನಮ್ ।
ಆವಿಶ ತ್ವಂ ಮಹಾತೇಜೋ ರೌದ್ರಂ ವಾಯುಸಮನ್ವಿತಃ ॥

ಅನುವಾದ

ಆಗ ದೇವತೆಗಳು ಅಗ್ನಿದೇವತೆಗೆ ಹೇಳಿದರು - ಅಗ್ನಿಯೇ! ನೀನು ವಾಯುವಿನ ಸಹಾಯದಿಂದ ಭಗವಾನ್ ಶಿವನ ಈ ಮಹಾ ತೇಜಸ್ಸನ್ನು ನಿನ್ನೊಳಗೆ ಇರಿಸಿಕೋ.॥17॥

ಮೂಲಮ್ - 18

ತದಗ್ನಿನಾ ಪುನರ್ವ್ಯಾಪ್ತಂ ಸಂಜಾತಂ ಶ್ವೇತಪರ್ವತಮ್ ।
ದಿವ್ಯಂ ಶರವಣಂ ಚೈವ ಪಾವಕಾದಿತ್ಯಸಂನಿಭಮ್ ॥

ಅನುವಾದ

ಅಗ್ನಿಯಿಂದ ವ್ಯಾಪ್ತವಾಗಿ ಆ ತೇಜವು ಬಿಳಿಯ ಬೆಟ್ಟವಾಗಿ ಮಾರ್ಪಟ್ಟಿತು. ಜೊತೆಗೆ ಅಲ್ಲಿ ದಿವ್ಯ ಜೊಂಡು ಹುಲ್ಲಿನ ವನವೂ ಪ್ರಕಟಗೊಂಡಿತು. ಅದು ಅಗ್ನಿ ಮತ್ತು ಸೂರ್ಯರಂತೆ ತೇಜಸ್ವಿಯಾಗಿ ಕಾಣುತ್ತಿತ್ತು.॥18॥

ಮೂಲಮ್ - 19½

ಯತ್ರ ಜಾತೋ ಮಹಾತೇಜಾಃ ಕಾರ್ತಿಕೇಯೋಽಗ್ನಿ ಸಂಭವಃ ।
ಅಥೋಮಾಂ ಚ ಶಿವಂ ಚೈವ ದೇವಾಃ ಸರ್ಷಿಗಣಾಸ್ತಥಾ ॥
ಪೂಜಯಾಮಾಸುರತ್ಯರ್ಥಂ ಸುಪ್ರೀತಮನಸಸ್ತದಾ ।

ಅನುವಾದ

ಅದೇ ವನದಲ್ಲಿ ಅಗ್ನಿಜನಿತ ಮಹತೇಜಸ್ವೀ ಕಾರ್ತಿಕೇಯನ ಪ್ರಾದುರ್ಭಾವವಾಯಿತು. ಅನಂತರ ಋಷಿಗಳ ಸಹಿತ ದೇವತೆಗಳು ಅತ್ಯಂತ ಪ್ರಸನ್ನ ಚಿತ್ತರಾಗಿ ಉಮಾದೇವಿಯನ್ನು ಹಾಗೂ ಭಗವಾನ್ ಶಿವನನ್ನು ತುಂಬು ಭಕ್ತಿಭಾವದಿಂದ ಪೂಜಿಸಿದರು.॥19½॥

ಮೂಲಮ್ - 20½

ಅಥ ಶೈಲಸುತಾ ರಾಮ ತ್ರಿದಶಾನಿದಮಬ್ರವೀತ್ ॥
ಸಮನ್ಯುರಶಪತ್ ಸರ್ವಾನ್ ಕ್ರೋಧಸಂರಕ್ತಲೋಚನಾ ।

ಅನುವಾದ

ಶ್ರೀರಾಮಾ! ಬಳಿಕ ಗಿರಿರಾಜನಂದಿನೀ ಉಮೆಯ ಕಣ್ಣುಗಳು ಕ್ರೋಧದಿಂದ ಕೆಂಪಾದವು. ಆಕೆಯು ರೋಷಗೊಂಡು ಸಮಸ್ತ ದೇವತೆಗಳಿಗೆ ಶಪಿಸುತ್ತಾ ಹೀಗೆ ಹೇಳಿದಳು.॥20½॥

ಮೂಲಮ್ - 21

ಯಸ್ಮಾನ್ನಿವಾರಿತಾ ಚಾಹಂ ಸಂಗತಾ ಪುತ್ರಕಾಮ್ಯಯಾ ॥

ಮೂಲಮ್ - 22

ಅಪತ್ಯಂ ಸ್ವೇಷು ದಾರೇಷು ನೋತ್ಪಾದಯಿತುಮರ್ಹಥ ।
ಅದ್ಯಪ್ರಭೃತಿ ಯುಷ್ಮಾಕಮಪ್ರಜಾಃ ಸಂತು ಪತ್ನಯಃ ॥

ಅನುವಾದ

ದೇವತೆಗಳಿರಾ! ನಾನು ಪುತ್ರಪ್ರಾಪ್ತಿಗಾಗಿ ಪತಿಯೊಡನೆ ಸಮಾಗಮ ಮಾಡಿದ್ದೆ, ಆದರೆ ನೀವು ಅದನ್ನು ತಡೆದು ಬಿಟ್ಟಿರಿ. ಆದ್ದರಿಂದ ನೀವೂ ತಮ್ಮ ಪತ್ನಿಯರಿಂದ ಸಂತಾನ ಉತ್ಪನ್ನಮಾಡಲು ಅಯೋಗ್ಯರಾಗಿರಿ. ಇಂದಿನಿಂದ ನಿಮ್ಮ ಪತ್ನಿಯರು ಸಂತಾನಹೀನರಾಗಲಿ.॥21-22॥

ಮೂಲಮ್ - 23

ಏವಮುಕ್ತ್ವಾ ಸುರಾನ್ ಸರ್ವಾನ್ ಶಶಾಪ ಪೃಥಿವೀಮಪಿ ।
ಅವನೇ ನೈಕರೂಪಾ ತ್ವಂ ಬಹುಭಾರ್ಯಾ ಭವಿಷ್ಯಸಿ ॥

ಅನುವಾದ

ಎಲ್ಲಾ ದೇವತೆಗಳಿಗೆ ಹೀಗೆ ಶಪಿಸಿ, ಉಮಾದೇವಿಯು ಭೂಮಿಗೂ ಶಾಪವನ್ನು ಕೊಟ್ಟಳು-ಭೂಮಿಯೇ! ನೀನು ಏಕರೂಪಳಾಗಿ ಇರಲಾರೆ, ನಿನಗೆ ಅನೇಕ ಪತಿಗಳಾಗಲಿ.॥23॥

ಮೂಲಮ್ - 24

ನ ಚ ಪುತ್ರಕೃತಾಂ ಪ್ರೀತಿಂ ಮತ್ಕ್ರೋಧಕಲುಷೀಕೃತಾ ।
ಪ್ರಾಪ್ಸ್ಯಸಿ ತ್ವಂ ಸುದುರ್ಮೇಧೋ ಮಮ ಪುತ್ರಮನಿಚ್ಛತೀ ॥

ಅನುವಾದ

ದುಷ್ಟಚಿತ್ತಳಾದ ಪೃಥ್ವಿಯೇ! ನನಗೆ ಪುತ್ರನಾಗದಿರಲಿ ಎಂದು ನೀನು ಬಯಸುತ್ತಿದ್ದೆ. ಆದ್ದರಿಂದ ನನ್ನ ಕ್ರೋಧದಿಂದ ಕಲುಷಿತಳಾಗಿ ನೀನೂ ಪುತ್ರಜನಿತ ಸುಖ ಅಥವಾ ಸಂತೋಷವನ್ನು ಪಡೆಯಲಾರೆ.॥24॥

ಮೂಲಮ್ - 25

ತಾನ್ ಸರ್ವಾನ್ಪೀಡಿತಾನ್ ದೃಷ್ಟ್ವಾ ಸುರಾನ್ ಸುರಪತಿಸ್ತದಾ ।
ಗಮನಾಯೋಪಚಕ್ರಾಮ ದಿಶಂ ವರುಣಪಾಲಿತಾಮ್ ॥

ಅನುವಾದ

ದೇವತೆಗಳೆಲ್ಲರೂ ಉಮಾದೇವಿಯ ಶಾಪದಿಂದ ಪೀಡಿತರಾಗಿರುವುದನ್ನು ನೋಡಿ ದೇವೇಶ್ವರ ಶಿವನು ಆಗ ಪಶ್ಚಿಮ ದಿಕ್ಕಿಗೆ ಪ್ರಯಾಣ ಮಾಡಿದನು.॥25॥

ಮೂಲಮ್ - 26

ಸ ಗತ್ವಾ ತಪ ಅತಿಷ್ಠತ್ ಪಾರ್ಶ್ವೇ ತಸ್ಯೋತ್ತರೇ ಗಿರೇಃ ।
ಹಿಮವತ್ಪ್ರಭವೇ ಶೃಂಗೇ ಸಹ ದೇವ್ಯಾ ಮಹೇಶ್ವರಃ ॥

ಅನುವಾದ

ಅಲ್ಲಿಂದ ಹೊರಟು ಹಿವಾಲಯ ಪರ್ವತದ ಉತ್ತರ ಭಾಗದ ಒಂದು ಶಿಖರದಲ್ಲಿ ಉಮಾದೇವಿಯೊಂದಿಗೆ ಭಗವಾನ್ ಮಹೇಶ್ವರನು ತಪಸ್ಸಿಗೆ ತೊಡಗಿದನು.॥26॥

ಮೂಲಮ್ - 27

ಏಷ ತೇ ವಿಸ್ತರೋ ರಾಮ ಶೈಲಪುತ್ರ್ಯಾನಿವೇದಿತಃ ।
ಗಂಗಾಯಾಃ ಪ್ರಭವಂ ಚೈವ ಶೃಣು ಮೇ ಸಹಲಕ್ಷ್ಮಣಃ ॥

ಅನುವಾದ

ಲಕ್ಷ್ಮಣ ಸಹಿತ ಶ್ರೀರಾಮಾ! ಹೀಗೆ ನಿನಗೆ ಹಿಮವಂತನ ಕಿರಿಯ ಪುತ್ರಿ ಉಮಾದೇವಿಯ ವಿಸ್ತಾರವಾದ ವೃತ್ತಾಂತವನ್ನು ನಾನು ಹೇಳಿದೆ. ಇನ್ನು ಗಂಗೆಯ ಪ್ರಾದುರ್ಭಾವದ ಕಥೆಯನ್ನು ಕೇಳು.॥27॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಮೂವತ್ತಾರನೆಯ ಸರ್ಗ ಪೂರ್ಣವಾಯಿತು. ॥36॥