०३५ गङ्गोत्पत्तिः

वाचनम्
ಭಾಗಸೂಚನಾ

ಶೋಣಭದ್ರೆಯನ್ನು ದಾಟಿ ವಿಶ್ವಾಮಿತ್ರಾದಿಗಳು ಗಂಗಾತೀರಕ್ಕೆ ಬಂದು ಅಲ್ಲೇ ರಾತ್ರಿ ಕಳೆಯುವುದು, ಶ್ರೀರಾಮನು ಕೇಳಿದಾಗ ವಿಶ್ವಾಮಿತ್ರರು ಗಂಗೆಯ ಉತ್ಪತ್ತಿಯ ಕಥೆ ಹೇಳುವುದು

ಮೂಲಮ್ - 1

ಉಪಾಸ್ಯ ರಾತ್ರಿಶೇಷಂ ತು ಶೋಣಾಕೂಲೇ ಮಹರ್ಷಿಭಿಃ ।
ನಿಶಾಯಾಂ ಸುಪ್ರಭಾತಾಯಾಂ ವಿಶ್ವಾಮಿತ್ರೋಽಭ್ಯಭಾಷತ ॥

ಅನುವಾದ

ಮಹರ್ಷಿಗಳ ಸಹಿತ ವಿಶ್ವಾಮಿತ್ರರು ರಾತ್ರಿಯ ಉಳಿದ ಭಾಗದಲ್ಲಿ ಶೋಣಭದ್ರಾ ತೀರದಲ್ಲಿ ನಿದ್ದೆಮಾಡಿದರು. ರಾತ್ರಿ ಕಳೆದು ಬೆಳಗಾಗಿ ಪ್ರಭಾತಕಾಲವಾದಾಗ ಅವರು ಶ್ರೀರಾಮಚಂದ್ರನಲ್ಲಿ ಇಂತೆಂದರು .॥1॥

ಮೂಲಮ್ - 2

ಸುಪ್ರಭಾತಾ ನಿಶಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ ।
ಉತ್ತಿಷ್ಠೋತ್ತಿಷ್ಠ ಭದ್ರಂ ತೇ ಗಮನಾಯಾಭಿರೋಚಯ ॥

ಅನುವಾದ

ಶ್ರೀರಾಮಾ! ರಾತ್ರೆ ಕಳೆದು ಬೆಳಗಾಗಿದೆ. ನಿನಗೆ ಮಂಗಳವಾಗಲಿ, ಏಳು, ಮುಂದಿನ ಪಯಣಕ್ಕೆ ಸಿದ್ಧನಾಗು.॥2॥

ಮೂಲಮ್ - 3

ತಚ್ಛ್ರುತ್ವಾ ವಚನಂ ತಸ್ಯ ಕೃತಪೂರ್ವಾಹ್ಣಿಕಕ್ರಿಯಃ ।
ಗಮನಂ ರೋಚಯಾಮಾಸ ವಾಕ್ಯಂ ಚೇದಮುವಾಚ ಹ ॥

ಅನುವಾದ

ಮುನಿಯ ಮಾತನ್ನು ಕೇಳಿ ಪ್ರಾತಃ ಸಂಧ್ಯಾದಿ ನಿತ್ಯನಿಯಮ ಪೂರೈಸಿ ಶ್ರೀರಾಮನು ಪ್ರಯಾಣಕ್ಕೆ ಸಿದ್ಧನಾಗಿ ಇಂತೆಂದನು.॥3॥

ಮೂಲಮ್ - 4

ಅಯಂ ಶೋಣಃ ಶುಭಜಲೋಽಗಾಧಃ ಪುಲಿನಮಂಡಿತಃ ।
ಕತರೇಣ ಪಥಾಬ್ರಹ್ಮನ್ ಸಂತರಿಷ್ಯಾಮಹೇ ವಯಮ್ ॥

ಅನುವಾದ

ಬ್ರಹ್ಮರ್ಷಿಗಳೇ! ಪುಣ್ಯಜಲದಿಂದ ಪರಿಪೂರ್ಣವಾಗಿ ತಟಗಳಿಂದ ಸುಶೋಭಿತವಾದ ಈ ಶೋಣಭದ್ರ ನದಿಯು ಆಳವಾಗಿರುವಂತೆ ಕಾಣುತ್ತದೆ. ನಾವು ಯಾವ ದಾರಿಯಿಂದ ಇದನ್ನು ದಾಟುವುದು.॥4॥

ಮೂಲಮ್ - 5

ಏವಮುಕ್ತಸ್ತು ರಾಮೇಣವಿಶ್ವಾಮಿತ್ರೋಽಬ್ರವೀದಿದಮ್ ।
ಏಷ ಪಂಥಾ ಮಯೋದ್ದಿಷ್ಟೋ ಯೇನ ಯಾಂತಿ ಮಹರ್ಷಯಃ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ವಿಶ್ವಾಮಿತ್ರರು ಹೇಳಿದರು - ಮಹರ್ಷಿಗಳು ಶೋಣಭದ್ರೆಯನ್ನು ದಾಟುವ ಮಾರ್ಗವನ್ನೇ ನಾನು ಮೊದಲಿನಿಂದಲೇ ನಿಶ್ಚಯಿಸಿರುವೆನು. ಆ ಮಾರ್ಗವು ಇದೇ ಆಗಿದೆ.॥5॥

ಮೂಲಮ್ - 6

ಏವಮುಕ್ತಾ ಮಹರ್ಷಯೋ ವಿಶ್ವಾಮಿತ್ರೇಣ ಧೀಮತಾ ।
ಪಶ್ಯಂತಸ್ತೇ ಪ್ರಯಾತಾ ವೈ ವನಾನಿ ವಿವಿಧಾನಿ ಚ ॥

ಅನುವಾದ

ಧೀಮಂತರಾದ ವಿಶ್ವಾಮಿತ್ರರು ಹೀಗೆ ಹೇಳಿದಾಗ ಆ ಮಹರ್ಷಿಗಳು ನಾನಾ ರೀತಿಯ ವನಗಳ ಶೋಭೆಯನ್ನು ನೋಡುತ್ತಾ ಅಲ್ಲಿಂದ ಮುಂದಕ್ಕೆ ಹೊರಟರು.॥6॥

ಮೂಲಮ್ - 7

ತೇ ಗತ್ವಾ ದೂರಮಧ್ವಾನಂ ಗತೇಽರ್ಧದಿವಸೇ ತದಾ ।
ಜಾಹ್ನವೀಂ ಸರಿತಾಂ ಶ್ರೇಷ್ಠಾಂ ದದೃಶುರ್ಮುನಿ ಸೇವಿತಾಮ್ ॥

ಅನುವಾದ

ಬಹು ದೂರ ದಾರಿ ಸಾಗಿ ಮಧ್ಯಾಹ್ನವಾಗುತ್ತಿರುವಂತೆ ಅವರೆಲ್ಲರೂ ಮುನಿಜನ ಸೇವಿತ, ನದಿಗಳಲ್ಲಿ ಶ್ರೇಷ್ಠ ಗಂಗಾನದಿಯ ತೀರಕ್ಕೆ ತಲುಪಿ ಅದನ್ನು ದರ್ಶಿಸಿದರು.॥7॥

ಮೂಲಮ್ - 8

ತಾಂ ದೃಷ್ಟ್ವಾ ಪುಣ್ಯಸಲಿಲಾಂ ಹಂಸಸಾರಸಸೇವಿತಾಮ್ ।
ಬಭೂವುರ್ಮುನಯಃ ಸರ್ವೇ ಮುದಿತಾಃ ಸಹ ರಾಘವಾಃ ॥

ಅನುವಾದ

ಹಂಸ, ಸಾರಸಗಳಿಂದ ಸೇವಿತ ಪುಣ್ಯಸಲಿಲೆ ಭಾಗಿರಥಿಯ ದರ್ಶನ ಮಾಡಿ, ಶ್ರೀರಾಮಚಂದ್ರನ ಸಹಿತ ಸಮಸ್ತ ಮುನಿಗಳು ಬಹಳ ಸಂತೋಷಗೊಂಡರು.॥8॥

ಮೂಲಮ್ - 9

ತಸ್ಯಾಸ್ತೀರೇ ತದಾ ಸರ್ವೇ ಚಕುರ್ವಾಸ ಪರಿಗ್ರಹಮ್ ।
ತತಃ ಸ್ನಾತ್ವಾ ಯಥಾನ್ಯಾಯಂ ಸಂತರ್ಪ್ಯ ಪಿತೃದೇವತಾಃ ॥

ಮೂಲಮ್ - 10½

ಹುತ್ವಾ ಚೈವಾಗ್ನಿಹೋತ್ರಾಣಿ ಪ್ರಾಶ್ಯ ಚಾಮೃತವದ್ಧವಿಃ ।
ವಿವಿಶುರ್ಜಾಹ್ನವೀತೀರೇ ಶುಭಾ ಮುದಿತಮಾನಸಾಃ ॥
ವಿಶ್ವಾಮಿತ್ರಂ ಮಹಾತ್ಮಾನಂಪರಿವಾರ್ಯ ಸಮಂತತಃ ।

ಅನುವಾದ

ಆಗ ಎಲ್ಲರೂ ಗಂಗೆಯ ತೀರದಲ್ಲಿ ಬೀಡುಬಿಟ್ಟರು, ತದನಂತರ ವಿಧಿವತ್ತಾಗಿ ಸ್ನಾನ ಮಾಡಿ ದೇವತೆಗಳಿಗೆ ಮತ್ತು ಪಿತೃಗಳಿಗೆ ತರ್ಪಣ ಕೊಟ್ಟರು. ಬಳಿಕ ಅಗ್ನಿಹೋತ್ರ ಮಾಡಿ, ಅಮೃತದಂತಹ ಮಧುರ ಯಜ್ಞ ಶಿಷ್ಟ ಹವಿಷ್ಯಾನ್ನವನ್ನು ಭೋಜನ ಮಾಡಿದರು. ಅನಂತರ ಆ ಎಲ್ಲ ಮಹರ್ಷಿಗಳು ಪ್ರಸನ್ನಚಿತ್ತರಾಗಿ ಮಹಾತ್ಮಾ ವಿಶ್ವಾಮಿತ್ರರನ್ನು ಸುತ್ತುವರಿದು ಗಂಗಾ ತೀರದಲ್ಲಿ ಕುಳಿತುಕೊಂಡರು.॥9-10½॥

ಮೂಲಮ್ - 11

ವಿಷ್ಠಿತಾಶ್ಚ ಯಥಾನ್ಯಾಯಂ ರಾಘವೌ ಚ ಯಥಾರ್ಹತಃ ।
ಸಂಪ್ರಹೃಷ್ಟಮನಾ ರಾಮೋ ವಿಶ್ವಾಮಿತ್ರಮಥಾಬ್ರವೀತ್ ॥

ಅನುವಾದ

ಆ ಎಲ್ಲ ಮುನಿಗಳು ಸ್ಥಿರಭಾವದಿಂದ ಉಪಸ್ಥಿತರಾದರು ಹಾಗೂ ಶ್ರೀರಾಮ-ಲಕ್ಷ್ಮಣರೂ ಯಥಾಯೋಗ್ಯ ಸ್ಥಾನದಲ್ಲಿ ಕುಳಿತುಕೊಂಡು, ಶ್ರೀರಾಮನು ಸಂತೋಷಚಿತ್ತನಾಗಿ ವಿಶ್ವಾಮಿತ್ರರಲ್ಲಿ ಕೇಳಿದನು.॥11॥

ಮೂಲಮ್ - 12

ಭಗವನ್ ಶ್ರೋತುಮಿಚ್ಛಾಮಿ ಗಂಗಾಂ ತ್ರಿಪಥಗಾಂ ನದೀಮ್ ।
ತ್ರೈಲೋಕ್ಯಂ ಕಥಮಾಕ್ರಮ್ಯ ಗತಾ ನದನದೀಪತಿಮ್ ॥

ಅನುವಾದ

ಪೂಜ್ಯರೇ! ಮೂರು ಮಾರ್ಗಗಳಿಂದ ಹರಿಯುವ ಈ ಗಂಗಾನದಿಯು ಮೂರು ಲೋಕಗಳನ್ನು ಆಕ್ರಮಿಸಿ, ನದ ಮತ್ತು ನದಿಗಳ ಸ್ವಾಮಿ ಸಮುದ್ರವನ್ನು ಹೇಗೆ ಸೇರುತ್ತದೆ? ಇದನ್ನು ಕೇಳಬೇಕೆಂದು ಬಯಸುತ್ತೇನೆ.॥12॥

ಮೂಲಮ್ - 13

ಚೋದಿತೋ ರಾಮವಾಕ್ಯೇನ ವಿಶ್ವಾಮಿತ್ರೋ ಮಹಾಮುನಿಃ ।
ವೃದ್ಧಿಂ ಜನ್ಮ ಚ ಗಂಗಾಯಾ ವಕ್ತುಮೇವೋಪಚಕ್ರಮೇ ॥

ಅನುವಾದ

ಶ್ರೀರಾಮನ ಈ ಪ್ರಶ್ನೆಯಿಂದ ಪ್ರೇರಿತರಾದ ಮಹಾಮುನಿ ವಿಶ್ವಾಮಿತ್ರರು ಗಂಗೆಯ ಉತ್ಪತ್ತಿ ಹಾಗೂ ವೃದ್ಧಿಯ ಕಥೆಯನ್ನು ಹೇಳ ತೊಡಗಿದರು.॥13॥

ಮೂಲಮ್ - 14

ಶೆಲೇಂದ್ರೋ ಹಿಮವಾನ್ ರಾಮ ಧಾತೂನಾಮಾಕರೋ ಮಹಾನ್ ।
ತಸ್ಯ ಕನ್ಯಾದ್ವಯಂ ರಾಮ ರೂಪೇಣಾಪ್ರತಿಮಂ ಭುವಿ ॥

ಅನುವಾದ

ಶ್ರೀರಾಮಾ! ಹಿಮವಂತ ಎಂಬ ಒಂದು ಪರ್ವತವಿದೆ. ಅದು ಸಮಸ್ತ ಪರ್ವತಗಳ ರಾಜ ಮತ್ತು ಎಲ್ಲ ರೀತಿಯ ಧಾತುಗಳ ದೊಡ್ಡ ಭಂಡಾರವಾಗಿದೆ. ಹಿಮವಂತನಿಗೆ ಇಬ್ಬರು ಕನ್ಯೆಯರಿದ್ದರು. ಅವರ ಸೌಂದರ್ಯಕ್ಕೆ ಭೂತಳದಲ್ಲಿ ತುಲನೆಯೇ ಇಲ್ಲ.॥14॥

ಮೂಲಮ್ - 15

ಯಾ ಮೇರುದುಹಿತಾ ರಾಮ ತಯೋರ್ಮಾತಾ ಸುಮಧ್ಯಮಾ ।
ನಾಮ್ನಾ ಮೇನಾ ಮನೋಜ್ಞಾ ವೈ ಪತ್ನೀ ಹಿಮವತಃ ಪ್ರಿಯಾ ॥

ಅನುವಾದ

ಮೇರು ಪರ್ವತದ ಮನೋಹರ ಪುತ್ರಿ ಮೇನಾದೇವಿಯೇ ಹಿಮವಂತನ ಪ್ರಿಯಪತ್ನಿ. ಸುಂದರ ಕಟಿಯುಳ್ಳ ಮೇನಾದೇವಿಯೇ ಆ ಇಬ್ಬರು ಕನ್ಯೆಯರ ತಾಯಿಯಾಗಿರುವಳು.॥15॥

ಮೂಲಮ್ - 16

ತಸ್ಯಾಂ ಗಂಗೇಯಮಭವಜ್ಜ್ಯೇಷ್ಠಾ ಹಿಮವತಃ ಸುತಾ ।
ಉಮಾ ನಾಮ ದ್ವೀತಿಯಾಭೂತ್ಕನ್ಯಾ ತಸ್ಯೈವ ರಾಘವ ॥

ಅನುವಾದ

ರಘುನಂದನ! ಮೇನಾದೇವಿಯ ಗರ್ಭದಿಂದ ಮೊದಲಿಗೆ ಹುಟ್ಟಿದವಳೇ ಈ ಗಂಗೆಯು. ಈಕೆ ಹಿಮವಂತನ ಹಿರಿಯ ಮಗಳು. ಮೇನಾದೇವಿಯ ಗರ್ಭದಿಂದ ಉತ್ಪನ್ನಳಾದ ಹಿಮವಂತನ ಎರಡನೆಯ ಕನ್ಯೆಯ ಹೆಸರು ಉಮಾ ಎಂದು ಪ್ರಸಿದ್ಧವಾಗಿದೆ.॥16॥

ಮೂಲಮ್ - 17

ಅಥ ಜ್ಯೇಷ್ಠಾಂ ಸುರಾಃ ಸರ್ವೇ ದೇವಕಾರ್ಯಚಿಕೀರ್ಷಯಾ ।
ಶೈಲೇಂದ್ರಂ ವರಯಾಮಾಸುರ್ಗಂಗಾಂ ತ್ರಿಪಥಗಾಂ ನದೀಮ್ ॥

ಅನುವಾದ

ಕೆಲವು ಕಾಲದ ಬಳಿಕ ಎಲ್ಲ ದೇವತೆಗಳು ದೇವಕಾರ್ಯದ ಸಿದ್ಧಿಗಾಗಿ ಮುಂದೆ ತ್ರಿಪಥಗಾ ನದೀರೂಪದಲ್ಲಿ ಅವತರಿಸುವ ಹಿರಿಯ ಕನ್ಯೆ ಗಂಗೆಯನ್ನು ಗಿರಿರಾಜ ಹಿಮವಂತನಲ್ಲಿ ಬೇಡಿದರು.॥17॥

ಮೂಲಮ್ - 18

ದದೌ ಧರ್ಮೇಣ ಹಿಮವಾಂಸ್ತನಯಾಂ ಲೋಕಪಾವನೀಮ್ ।
ಸ್ವಚ್ಛಂದಪಥಗಾಂ ಗಂಗಾಂ ತ್ರೈಲೋಕ್ಯಹಿತಕಾಮ್ಯಯಾ ॥

ಅನುವಾದ

ಹಿಮವಂತನು ತ್ರಿಭುವನದ ಹಿತದ ಇಚ್ಛೆಯಿಂದ ಸ್ವಚ್ಛಂದಗತಿಯಿಂದ ಸಂಚರಿಸುವ ಲೋಕಪಾವನೀ ತನ್ನ ಪುತ್ರೀ ಗಂಗೆಯನ್ನು ಧರ್ಮಪೂರ್ವಕ ದೇವತೆಗಳಿಗೆ ಒಪ್ಪಿಸಿದನು.॥18॥

ಮೂಲಮ್ - 19

ಪ್ರತಿಗೃಹ್ಯ ತ್ರಿಲೋಕಾರ್ಥಂ ತ್ರಿಲೋಕಹಿತಕಾಂಕ್ಷಿಣಃ ।
ಗಂಗಾಮಾದಾಯ ತೇಽಗಚ್ಛನ್ ಕೃತಾರ್ಥೇನಾಂತರಾತ್ಮನಾ ॥

ಅನುವಾದ

ಮೂರು ಲೋಕಗಳ ಹಿತದ ಇಚ್ಛೆಯುಳ್ಳ ದೇವತೆಗಳು ತ್ರಿಭುವನಗಳ ಒಳಿತಿಗಾಗಿಯೇ ಗಂಗೆಯನ್ನು ಕರೆದುಕೊಂಡು ಮನಸ್ಸಿನಲ್ಲಿ ಕೃತಾರ್ಥತೆಯನ್ನು ಅನುಭವಿಸುತ್ತಾ ಹೊರಟರು ಹೋದರು.॥19॥

ಮೂಲಮ್ - 20

ಯಾ ಚಾನ್ಯಾ ಶೈಲದುಹಿತಾ ಕನ್ಯಾಽಽಸೀದ್ರಘುನಂದನ ।
ಉಗ್ರಂ ಸುವ್ರತಮಾಸ್ಥಾಯ ತಪಸ್ತೇಪೇ ತಪೋಧನಾ ॥

ಅನುವಾದ

ರಘುನಂದನ! ಗಿರಿರಾಜನ ಎರಡನೆಯ ಕನ್ಯೆ ಉಮೆಯು ಉತ್ತಮ ಕಠೋರ ವ್ರತವನ್ನು ಪಾಲಿಸುತ್ತಾ ಘೋರ ತಪಸ್ಸಿಗೆ ತೊಡಗಿದಳು. ಆಕೆಯು ತಪೋಧನವನ್ನು ಗಳಿಸಿದಳು.॥20॥

ಮೂಲಮ್ - 21

ಉಗ್ರೇಣ ತಪಸಾ ಯುಕ್ತಾಂ ದದೌ ಶೈಲವರಃ ಸುತಾಮ್ ।
ರುದ್ರಾಯಾಪ್ರತಿರೂಪಾಯ ಉಮಾಂ ಲೋಕನಮಸ್ಕೃತಾಮ್ ॥

ಅನುವಾದ

ಉಗ್ರ ತಪ್ಪಸ್ಸಿನಲ್ಲಿ ಮುಳುಗಿದ ವಿಶ್ವವಂದಿತೆಯಾದ ತನ್ನ ಪುತ್ರಿ ಉಮೆಯನ್ನು ಹಿಮವಂತನು ಅನುಪಮ ಪ್ರಭಾವಶಾಲಿ ಭಗವಾನ್ ರುದ್ರನಿಗೆ ಮದುವೆ ಮಾಡಿಕೊಟ್ಟನು.॥21॥

ಮೂಲಮ್ - 22

ಏತೇ ತೇ ಶೈಲರಾಜಸ್ಯ ಸುತೇ ಲೋಕನಮಸ್ಕೃತೇ ।
ಗಂಗಾ ಚ ಸರಿತಾಂ ಶ್ರೇಷ್ಠಾ ಉಮಾದೇವೀ ಚ ರಾಘವ ॥

ಅನುವಾದ

ರಘುನಂದನ! ಹೀಗೆ ನದಿಗಳಲ್ಲಿ ಶ್ರೇಷ್ಠಳಾದ ಗಂಗೆ ಹಾಗೂ ಭಗವತಿ ಉಮೆ ಇಬ್ಬರೂ ಹಿಮವಂತನ ಕನ್ಯೆಯರಿಗೆ ಇಡೀ ಜಗತ್ತೇ ತಲೆಬಾಗುತ್ತದೆ.॥22॥

ಮೂಲಮ್ - 23

ಏತತ್ತೇ ಸರ್ವಮಾಖ್ಯಾತಂ ಯಥಾ ತ್ರಿಪಥಗಾಮಿನೀ ।
ಖಂ ಗತಾ ಪ್ರಥಮಂ ತಾತಗತಿಂ ಗತಿಮತಾಂ ವರ ॥

ಮೂಲಮ್ - 24

ಸೈಷಾ ಸುರನದೀ ರಮ್ಯಾ ಶೈಲೇಂದ್ರತನಯಾ ತದಾ ।
ಸುರಲೋಕಂ ಸಮಾರೂಢಾ ವಿಪಾಪಾ ಜಲವಾಹಿನೀ ॥

ಅನುವಾದ

ಅಯ್ಯಾ ರಾಮಾ! ಗಂಗೆಯ ಉತ್ಪತ್ತಿಯ ಎಲ್ಲ ಮಾತನ್ನು ನಾನು ನಿನಗೆ ತಿಳಿಸಿದೆ. ಈಕೆ ತ್ರಿಪಥಗಾಮಿನಿ ಹೇಗಾದಳು? ಇದನ್ನು ಕೇಳು. ಮೊದಲಿಗೆ ಈಕೆ ಆಕಾಶ ಮಾರ್ಗದಿಂದ ಹೋಗಿದ್ದಳು. ಅನಂತರ ಈ ಗಿರಿರಾಜ ಕುಮಾರಿ ಗಂಗೆಯು ರಮಣೀಯ ದೇವನದಿಯ ರೂಪದಲ್ಲಿ ದೇವಲೋಕದಲ್ಲಿ ಆರೂಢಳಾಗಿದ್ದಳು. ಮತ್ತೆ ಜಲರೂಪದಿಂದ ಹರಿಯುತ್ತಾ ಜನರ ಪಾಪಗಳನ್ನು ದೂರಗೊಳಿಸುತ್ತಾ ರಸಾತಳಕ್ಕೆ ತಲುಪಿದಳು.॥23-24॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಮೂವತ್ತೈದನೆಯ ಸರ್ಗ ಪೂರ್ಣವಾಯಿತು. ॥35॥