०३२ कैशिकवंशकथा

वाचनम्
ಭಾಗಸೂಚನಾ

ಬ್ರಹ್ಮಪುತ್ರ ಕುಶನ ನಾಲ್ಕು ಮಕ್ಕಳ ವರ್ಣನೆ, ಶೋಣಾನದಿಯ ತೀರ ಪ್ರದೇಶಕ್ಕೆ ವಸುಭೂಮಿ ಎಂದು ಹೆಸರು ಬರಲು ಕಾರಣ, ವಾಯುವಿನ ಕೋಪದಿಂದ ಕುಶನಾಭನ ನೂರು ಕನ್ಯೆಯರು ಕುಬ್ಜರಾದುದು

ಮೂಲಮ್ - 1

ಬ್ರಹ್ಮಯೋನಿರ್ಮಹಾನಾಸೀತ್ ಕುಶೋ ನಾಮ ಮಹಾತಪಾಃ ।
ಅಕ್ಲಿಷ್ಟವ್ರತಧರ್ಮಜ್ಞಃ ಸಜ್ಜನಪ್ರತಿಪೂಜಕಃ ॥

ಅನುವಾದ

ವಿಶ್ವಾಮಿತ್ರರು ಹೇಳುತ್ತಾರೆ - ಶ್ರೀರಾಮಾ! ಹಿಂದೆ ಬ್ರಹ್ಮದೇವರ ಪುತ್ರನಾದ ಕುಶನೆಂಬ ಮಹಾತಪಸ್ವೀ ಪ್ರಸಿದ್ಧ ರಾಜನೊಬ್ಬನಿದ್ದನು. ಅವನು ವ್ರತನಿಷ್ಠನೂ, ಧರ್ಮಜ್ಞನೂ ಆಗಿದ್ದನು. ಧರ್ಮಾತ್ಮರನ್ನೂ, ಮಹಾತ್ಮರನ್ನೂ ಸದಾ ಆದರಿಸುತ್ತಾ ಸತ್ಕರಿಸುತ್ತಿದ್ದನು.॥1॥

ಮೂಲಮ್ - 2

ಸ ಮಹಾತ್ಮಾ ಕುಲೀನಾಯಾಂ ಯುಕ್ತಾಯಾಂ ಸುಮಹಾಬಲಾನ್ ।
ವೈದರ್ಭ್ಯಾಂ ಜನಯಾಮಾಸ ಚತುರಃ ಸದೃಶಾನ್ಸುತಾನ್ ॥

ಅನುವಾದ

ಸತ್ಕುಲ ಪ್ರಸೂತೆಯಾದ ವಿದರ್ಭ ರಾಜಕುಮಾರಿ ವೈದರ್ಭಿ ಎಂಬ ಭಾರ್ಯೆಯಲ್ಲಿ ಮಹಾತ್ಮನಾದ ನರೇಶನು ತನಗೆ ಅನುರೂಪರಾದ ನಾಲ್ಕು ಪುತ್ರರನ್ನು ಪಡೆದನು.॥2॥

ಮೂಲಮ್ - 3

ಕುಶಾಬಂ ಕುಶನಾಭಂ ಚ ಅಸೂರ್ತರಜಸಂ ವಸುಮ್ ।
ದೀಪ್ತಿಯುಕ್ತಾನ್ಮಹೋತ್ಸಾಹಾನ್ ಕ್ಷತ್ರಧರ್ಮಚಿಕೀರ್ಷಯಾ ॥

ಮೂಲಮ್ - 4

ತಾನುವಾಚ ಕುಶಃ ಪುತ್ರಾನ್ ಧರ್ಮಿಷ್ಠಾನ್ಸತ್ಯವಾದಿನಃ ।
ಕ್ರಿಯತಾಂ ಪಾಲನಂ ಪುತ್ರಾ ಧರ್ಮಂ ಪ್ರಾಪ್ಸ್ಯಥ ಪುಷ್ಕಲಮ್ ॥

ಅನುವಾದ

ಕುಶಾಂಬ, ಕುಶನಾಭ, ಅಮೂರ್ತರಜಸ ಹಾಗೂ ವಸು ಎಂಬ ಈ ನಾಲ್ವರು ತೇಜಸ್ವಿಗಳೂ, ಮಹಾ ಉತ್ಸಾಹಿಗಳೂ ಆಗಿದ್ದರು. ರಾಜಾ ಕುಶನು ಪ್ರಜಾರಕ್ಷಣ ರೂಪೀ, ಕ್ಷಾತ್ರಧರ್ಮ ಪಾಲಿಸುವ ಇಚ್ಛೆಯಿಂದ ತನ್ನ ಧರ್ಮಿಷ್ಠರೂ ಸತ್ಯವಾದಿಗಳೂ ಆದ ಪುತ್ರರಲ್ಲಿ - ಮಕ್ಕಳಿರಾ! ಪ್ರಜೆಯನ್ನು ಪಾಲಿಸಿರಿ, ಇದರಿಂದ ನಿಮಗೆ ಧರ್ಮದ ಪೂರ್ಣಫಲ ಸಿಗುವುದು ಎಂದು ಹೇಳಿದರು.॥3-4॥

ಮೂಲಮ್ - 5

ಕುಶಸ್ಯ ವಚನಂ ಶ್ರುತ್ವಾ ಚತ್ವಾರೋ ಲೋಕಸತ್ತಮಾಃ ।
ನಿವೇಶಂ ಚಕ್ರಿರೇ ಸರ್ವೇ ಪುರಾಣಾಂ ನೃವರಾಸ್ತದಾ ॥

ಅನುವಾದ

ತನ್ನ ಪಿತನಾದ ಮಹಾರಾಜಾ ಕುಶನ ಈ ಮಾತನ್ನು ಕೇಳಿ ಲೋಕೋತ್ತರರಾದ ಆ ನಾಲ್ವರು ನರಶ್ರೇಷ್ಠ ರಾಜಕುಮಾರರು ಆಗ ತಮ-ತಮಗಾಗಿ ಬೇರೆ ಬೇರೆ ನಗರಗಳನ್ನು ನಿರ್ಮಿಸಿಕೊಂಡರು.॥5॥

ಮೂಲಮ್ - 6

ಕುಶಾಂಬಸ್ತು ಮಹಾತೇಜಾಃ ಕೌಶಾಂಬೀಮಕರೋತ್ಪುರೀಮ್ ।
ಕುಶನಾಭಸ್ತು ಧರ್ಮಾತ್ಮಾ ಪುರಂ ಚಕ್ರೇ ಮಹೋದಯಮ್ ॥

ಅನುವಾದ

ಮಹಾತೇಜಸ್ವೀ ಕುಶಾಂಬನು ‘ಕೌಶಾಂಬಿ’ ಎಂಬ ಪುರವನ್ನು ನೆಲೆಗೊಳಿಸಿದನು. (ಅದನ್ನು ಇಂದು ‘ಕೋಸಲ’ ಎಂದು ಹೇಳುತ್ತಾರೆ.) ಧರ್ಮಾತ್ಮಾ ಕುಶನಾಭನು ‘ಮಹೋದಯ’ ಎಂಬ ನಗರವನ್ನು ನಿರ್ಮಾಣ ಮಾಡಿದನು.॥6॥

ಮೂಲಮ್ - 7

ಅಸೂರ್ತರಜಸೋ ನಾಮ ಧರ್ಮಾರಣ್ಯಂ ಮಹಾಮತಿಃ ।
ಚಕ್ರೇ ಪುರವರಂ ರಾಜಾ ವಸುನಾಮ ಗಿರಿವ್ರಜಮ್ ॥

ಅನುವಾದ

ಪರಮ ಬುದ್ಧಿವಂತನಾದ ಅಮೂರ್ತ ರಜಸ್ಸನು ‘ಧರ್ಮಾರಣ್ಯ’ ಎಂಬ ಒಂದು ಶ್ರೇಷ್ಠನಗರವನ್ನು ನೆಲೆಗೊಳಿಸಿದನು ಹಾಗೂ ವಸುವು ‘ಗಿರಿವ್ರಜ’ ಎಂಬ ನಗರವನ್ನು ಸ್ಥಾಪಿಸಿದನು.॥7॥

ಮೂಲಮ್ - 8

ಏಷಾ ವಸುಮತೀ ನಾಮ ವಸೋಸ್ತಸ್ಯ ಮಹಾತ್ಮನಃ ।
ಏತೇ ಶೈಲವರಾಃ ಪಂಚ ಪ್ರಕಾಶಂತೇ ಸಮಂತತಃ ॥

ಅನುವಾದ

ಮಹಾತ್ಮಾ ವಸುವಿನ ಈ ‘ಗಿರಿವ್ರಜ’ ಎಂಬ ರಾಜಧಾನಿಯು ವಸುಮತಿ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಇದರ ಸುತ್ತಲೂ (ವಿಪುಲ, ವರಾಹ, ಋಷಭ, ಋಷಗಿರಿ ಮತ್ತು ಚೈತ್ಯಕ ಎಂಬ ಐದು ಶ್ರೇಷ್ಠಪರ್ವತಗಳು ಸುಶೋಭಿತವಾಗಿವೆ.॥8॥

ಮೂಲಮ್ - 9

ಸುಮಾಗಧೀ ನದೀ ರಮ್ಯಾ ಮಾಗಧಾನ್ ವಿಶ್ರುತಾಽಽಯಯೌ ।
ಪಂಚಾನಾಂ ಶೈಲಮುಖ್ಯಾನಾಂ ಮಧ್ಯೇ ಮಾಲೇವ ಶೋಭತೇ ॥

ಅನುವಾದ

ಈ ರಮಣೀಯ (ಸೋನಾ) ನದಿಯು ದಕ್ಷಿಣ ಪಶ್ಚಿಮವಾಗಿ ಹರಿಯುತ್ತಾ ಮಗಧ ದೇಶಕ್ಕೆ ಬಂದಿದೆ. ಅದಕ್ಕಾಗಿ ಇಲ್ಲಿ ‘ಸುವಾಗಧೀ’ ಎಂಬ ಹೆಸರಿನಿಂದ ವಿಖ್ಯಾತವಾಗಿದೆ. ಇದು ಈ ಐದು ಶ್ರೇಷ್ಠ ಪರ್ವತಗಳ ನಡುವೆ ಮಾಲೆಯಂತೆ ಸುಶೋಭಿತವಾಗಿದೆ.॥9॥

ಮೂಲಮ್ - 10

ಸೈಷಾ ಹಿ ಮಾಗಧೀ ರಾಮ ವಸೋಸ್ತಸ್ಯ ಮಹಾತ್ಮನಃ ।
ಪೂರ್ವಾಭಿಚರಿತಾ ರಾಮ ಸುಕ್ಷೇತ್ರಾ ಸಸ್ಯಮಾಲಿನೀ ॥

ಅನುವಾದ

ಶ್ರೀರಾಮಾ! ಹೀಗೆ ‘ಮಾಗಧೀ’ ಎಂದು ಪ್ರಸಿದ್ಧವಾದ ಈ ಸೋನಾನದಿಯು ಹಿಂದೆ ಹೇಳಿದ ವಸುವಿನೊಂದಿಗೆ ಸಂಬಂಧಿಸಿದೆ. ರಘುನಂದನ! ಇದು ದಕ್ಷಿಣ-ಪಶ್ಚಿಮದಿಂದ ಬಂದು ಪೂರ್ವೋತ್ತರ ದಿಕ್ಕಿನತ್ತ ಪ್ರವಹಿಸುತ್ತದೆ. ಇದರ ಇಕ್ಕೆಲಗಳಲ್ಲಿಯೂ ಫಲವತ್ತಾದ ಭೂಮಿ ಇದೆ. ಆದ್ದರಿಂದ ಇದು ಸದಾ ಸಸ್ಯಶಾಮಲೆಯಾಗಿ ಹಸುರಾಗಿದ್ದು, ಅಲಂಕೃತವಾಗಿರುತ್ತದೆ.॥10॥

ಮೂಲಮ್ - 11

ಕುಶನಾಭಸ್ತು ರಾಜರ್ಷಿಃ ಕನ್ಯಾಶತಮನುತ್ತಮಮ್ ।
ಜನಯಾಮಾಸ ಧರ್ಮಾತ್ಮಾ ಘೃತಾಚ್ಯಾಂ ರಘುನಂದನ ॥

ಅನುವಾದ

ರಘುಕುಲನಂದನ! ರಾಮ! ಧರ್ಮಾತ್ಮಾ ರಾಜರ್ಷಿ ಕುಶನಾಭನಿಂದ ಘೃತಾಚಿ ಅಪ್ಸರೆಯ ಗರ್ಭದಿಂದ ಪರಮೊತ್ತಮರಾದ ನೂರು ಕನ್ಯೆಯರು ಹುಟ್ಟಿದರು.॥11॥

ಮೂಲಮ್ - 12

ತಾಸ್ತು ಯೌವನಶಾಲಿನ್ಯೋ ರೂಪವತ್ಯಃ ಸ್ವಲಂಕೃತಾಃ ।
ಉದ್ಯಾನಭೂಮಿಮಾಗಮ್ಯ ಪ್ರಾವೃಷೀವ ಶತಹ್ರದಾಃ ॥

ಮೂಲಮ್ - 13

ಗಾಯಂತ್ಯೋ ನೃತ್ಯಮಾನಾಶ್ಚ ವಾದಯಂತ್ಯಸ್ತು ರಾಘವ ।
ಆಮೋದಂ ಪರಮಂ ಜಗ್ಮುರ್ವರಾಭರಣಭೂಷಿತಾಃ ॥

ಅನುವಾದ

ಅವರೆಲ್ಲರೂ ರೂಪಲಾವಣ್ಯದಿಂದ ಸುಂದರರಾಗಿ ಶೋಭಿಸುತ್ತಿದ್ದರು. ಯುವತಿಯರಾದಾಗ ಅವರ ಸೌಂದರ್ಯ ಇನ್ನೂ ಹೆಚ್ಚಿತು. ಒಂದು ದಿನ ವಸ್ತ್ರಾಭರಣಗಳಿಂದ ಅಲಂಕೃತರಾದ ಆ ರಾಜಕನ್ಯೆಯರು ಅಂದವಾದ ಉದ್ಯಾನವನಕ್ಕೆ ಬಂದು ವರ್ಷಋತುವಿನಲ್ಲಿ ಪ್ರಕಾಶಿಸುವ ವಿದ್ಯುಲ್ಲತೆಗಳಂತೆ ಶೋಭಿಸುತ್ತಿದ್ದರು. ಸುಂದರಾಂಗಿಯರಾದ ಆ ಅಂಗನೆ ಯರು ಹಾಡುತ್ತಾ-ಕುಣಿಯುತ್ತಾ ಆಮೋದ-ಪ್ರಮೋದದಲ್ಲಿ ಮುಳುಗಿದರು.॥12-13॥

ಮೂಲಮ್ - 14

ಅಥ ತಾಶ್ಚಾರುಸರ್ವಾಂಗ್ಯೋ ರೂಪೇಣಾಪ್ರತಿಮಾ ಭುವಿ ।
ಉದ್ಯಾನಭೂಮಿಮಾಗಮ್ಯ ತಾರಾ ಇವ ಘನಾಂತರೇ ॥

ಅನುವಾದ

ಅವರ ಸರ್ವಾಂಗಗಳು ಸುಮನೋಹರವಾಗಿದ್ದವು. ಈ ಭೂತಳದಲ್ಲಿ ಇವರ ರೂಪ-ಸೌಂದರ್ಯಕ್ಕೆ ಎಣೆಯೇ ಇರಲಿಲ್ಲ. ಆ ಉದ್ಯಾನ ವನದಲ್ಲಿ-ಮೋಡಗಳಲ್ಲಿ ಕಣ್ಣುಮುಚ್ಚಾಲೆಯಾಡುವ ನಕ್ಷತ್ರಗಳಂತೆ ಅವರು ಶೋಭಿಸುತ್ತಿದ್ದರು.॥14॥

ಮೂಲಮ್ - 15

ತಾಃ ಸರ್ವಾ ಗುಣಸಂಪನ್ನಾರೂಪ ಯೌವನಸಂಯುತಾಃ ।
ದೃಷ್ಟ್ವಾ ಸರ್ವಾತ್ಮಕೋ ವಾಯುರಿದಂ ವಚನಮಬ್ರವೀತ್ ॥

ಅನುವಾದ

ಆಗ ಉತ್ತಮ ಗುಣಸಂಪನ್ನ, ರೂಪ ಯೌವನದಿಂದ ಶೋಭಿಸುವ ಆ ಎಲ್ಲ ರಾಜಕನ್ಯೆಯನ್ನು ನೋಡಿ ಸರ್ವಾತ್ಮನಾದ ವಾಯುದೇವರು ಈ ಪ್ರಕಾರ ಹೇಳಿದರು-॥15॥

ಮೂಲಮ್ - 16

ಅಹಂ ವಃ ಕಾಮಯೇ ಸರ್ವಾ ಭಾರ್ಯಾ ಮಮ ಭವಿಷ್ಯಥ ।
ಮಾನುಷಸ್ತ್ಯಜ್ಯತಾಂ ಭಾವೋ ದೀರ್ಘಮಾಯುರವಾಪ್ಸ್ಯಥ ॥

ಅನುವಾದ

ಸುಂದರಿಯರಿರಾ! ನಾನು ನಿಮ್ಮೆಲ್ಲರನ್ನು ನನ್ನ ಪ್ರೇಯಸಿಯರಾಗಿ ಪಡೆಯಬೇಕೆಂದು ಬಯಸುತ್ತಿರುವೆನು. ನೀವೆಲ್ಲರೂ ನನ್ನ ಭಾರ್ಯೆಯರಾಗುವಿರಿ. ಈಗ ಮನುಷ್ಯ ಭಾವವನ್ನು ತ್ಯಜಿಸಿ ಮತ್ತು ನನ್ನನ್ನು ಸ್ವೀಕರಿಸಿ ದೇವಾಂಗನೆಯರಂತೆ ದೀರ್ಘಾಯುವನ್ನು ಹೊಂದಿರಿ.॥16॥

ಮೂಲಮ್ - 17

ಚಲಂ ಹಿ ಯೌವನಂ ನಿತ್ಯಂ ಮಾನುಷೇಷು ವಿಶೇಷತಃ ।
ಅಕ್ಷಯಂ ಯೌವನಂ ಪ್ರಾಪ್ತಾ ಅಮರ್ಯಶ್ಚ ಭವಿಷ್ಯಥ ॥

ಅನುವಾದ

ಸಾಧಾರಣವಾಗಿ ಮಾನವ ಶರೀರದಲ್ಲಿ ತಾರುಣ್ಯವು ಎಂದೂ ಸ್ಥಿರವಾಗಿ ಇರುವುದಿಲ್ಲ ಪ್ರತಿಕ್ಷಣ ಕ್ಷೀಣವಾಗುತ್ತಾ ಇರುತ್ತದೆ. ನನ್ನ ಸಂಬಂಧ ಪಡೆದರೆ ನೀವೆಲ್ಲ ಅಕ್ಷಯ ಯೌವನ ಪಡೆದು ಅಮರರಾಗುವಿರಿ.॥17॥

ಮೂಲಮ್ - 18

ತಸ್ಯ ತದ್ವಚನಂ ಶ್ರುತ್ವಾ ವಾಯೋರಕ್ಲಿಷ್ಟಕರ್ಮಣಃ ।
ಅಪಹಾಸ್ಯ ತತೋ ವಾಕ್ಯಂ ಕನ್ಯಾಶತಮಥಾಬ್ರವೀತ್ ॥

ಅನುವಾದ

ನಿರಾತಂಕವಾಗಿ ಮಹಾಕಾರ್ಯವನ್ನು ಮಾಡುವ ವಾಯುದೇವರ ಮಾತನ್ನು ಕೇಳಿ ಆ ನೂರು ಕನ್ಯೆಯರು ಅಪಹಾಸ್ಯಮಾಡಿ ನಗುತ್ತಾ ನುಡಿದರು .॥18॥

ಮೂಲಮ್ - 19

ಅಂತಶ್ಚರಸಿ ಭೂತಾನಾಂ ಸರ್ವೇಷಾಂ ಸುರಸತ್ತಮ ।
ಪ್ರಭಾವಜ್ಞಾಶ್ಚ ತೇ ಸರ್ವಾಃ ಕಿಮರ್ಥಮವಮನ್ಯಸೇ ॥

ಅನುವಾದ

ಸುರಶ್ರೇಷ್ಠನೇ! ನೀನು ಪ್ರಾಣವಾಯುವಾಗಿ ಸಮಸ್ತ ಪ್ರಾಣಿಗಳ ಒಳಗೆ ಸಂಚರಿಸುತ್ತಿರುವೆ. ನಮ್ಮಲ್ಲಿಯೂ ನೀನು ವ್ಯಾಪ್ತನಾಗಿರುವೆ. ಹಾಗಿರುವಾಗ ನಮ್ಮೆಲ್ಲರ ಮನಸ್ಸಿನಲ್ಲಿ ನಿನ್ನ ಕುರಿತಾದ ಆಕರ್ಷಣೆ ಇಲ್ಲವೆಂಬುದು ತಿಳಿಯಲಾರೆಯಾ? ನಮಗೆ ನಿನ್ನ ಕುರಿತು ಅನುರಾಗವಿಲ್ಲವೆಂದು ತಿಳಿದಿದ್ದರೂ ಇಂತಹ ಅನುಚಿತ ಪ್ರಸ್ತಾಪವನ್ನು ಮಾಡಿ ನಮ್ಮನ್ನು ಏಕೆ ಅಪಮಾನಪಡಿಸುತ್ತಿರುವೆ.॥19॥

ಮೂಲಮ್ - 20

ಕುಶನಾಭಸುತಾಃ ದೇವ ಸಮಸ್ತಾಃ ಸುರಸತ್ತಮ ।
ಸ್ಥಾನಾಚ್ಚ್ಯಾವಯಿತುಂ ದೇವಂ ರಕ್ಷಾಮಸ್ತು ತಪೋವಯಮ್ ॥

ಅನುವಾದ

ಸುರಶ್ರೇಷ್ಠ ದೇವನೇ! ನಾವೆಲ್ಲರೂ ರಾಜರ್ಷಿ ಕುಶನಾಭನ ಕನ್ಯೆಯರು. ದೇವತೆಯಾಗಿದ್ದರೂ ಶಾಪಕೊಟ್ಟು ನಿನ್ನನ್ನು ವಾಯುಪದವಿಯಿಂದ ಭ್ರಷ್ಟಪಡಿಸಬಲ್ಲೆವು. ಆದರೂ ಹೀಗೆ ಮಾಡಲು ಬಯಸುವುದಿಲ್ಲ; ಏಕೆಂದರೆ ನಾವು ನಮ್ಮ ತಪಸ್ಸನ್ನು ಸುರಕ್ಷಿತವಾಗಿ ಇಡುವೆವು.॥20॥

ಮೂಲಮ್ - 21

ಮಾ ಭೂತ್ಸಕಾಲೋ ದುರ್ಮೇಧಃ ಪಿತರಂ ಸತ್ಯವಾದಿನಮ್ ।
ಅವಮನ್ಯ ಸ್ವಧರ್ಮೇಣ ಸ್ವಯಂ ವರಮುಪಾಸ್ಮಹೇ ॥

ಅನುವಾದ

ದುರ್ಮತಿಯೇ! ನಾವು ನಮ್ಮ ಸತ್ಯವಾದೀ ತಂದೆಯನ್ನು ಅವಹೇಳನ ಮಾಡಿ ಕಾಮವಶ ಅಥವಾ ಅತ್ಯಂತ ಅಧರ್ಮ ಪೂರ್ವಕ ಸ್ವತಃ ವರನನ್ನು ಹುಡುಕಿಕೊಳ್ಳುವ ಸಮಯ ಎಂದಿಗೂ ಬರದಿರಲಿ.॥21॥

ಮೂಲಮ್ - 22

ಪಿತಾ ಹಿ ಪ್ರಭುರಸ್ಮಾಕಂ ದೈವತಂ ಪರಮಂ ಚ ಸಃ ।
ಯಸ್ಯ ನೋ ದಾಸ್ಯತಿ ಪಿತಾ ಸ ನೋ ಭರ್ತಾ ಭವಿಷ್ಯತಿ ॥

ಅನುವಾದ

ನಮ್ಮ ಮೇಲೆ ತಂದೆಯದೇ ಪ್ರಭುತ್ವವಾಗಿರುವುದು, ಅವರೇ ನಮಗೆ ಸರ್ವಶ್ರೇಷ್ಠ ದೇವತೆಯಾಗಿರುವರು. ನಮ್ಮ ಪಿತನು ನಮ್ಮನ್ನು ಯಾರ ಕೈಗೊಪ್ಪಿಸುವನೋ ಅವನೇ ನಮಗೆ ಪತಿಯಾಗುವನು.॥22॥

ಮೂಲಮ್ - 23½

ತಾಸಾಂ ತು ವಚನಂ ಶ್ರುತ್ವಾ ಹರಿಃ ಪರಮಕೋಪನಃ ।
ಪ್ರವಿಶ್ಯ ಸರ್ವಗಾತ್ರಾಣಿ ಬಭಂಜ ಭಗವಾನ್ ಪ್ರಭುಃ ॥
ಅರತ್ನಿಮಾತ್ರಾಕೃತಯೋ ಭಗ್ನಗಾತ್ರಾ ಭಯಾರ್ದಿತಾಃ ।

ಅನುವಾದ

ಅವರ ಈ ಮಾತನ್ನು ಕೇಳಿ ವಾಯುದೇವರು ಅತ್ಯಂತ ಕುಪಿತರಾದರು. ಆ ಐಶ್ವರ್ಯಶಾಲಿ ಪ್ರಭುವು ಅವರೊಳಗೆ ಪ್ರವೇಶಿಸಿ ಅವರ ಎಲ್ಲ ಅವಯವಗಳನ್ನು ಅಂಕು ಡೊಂಕಾಗಿಸಿದನು. ಶರೀರವು ಮುದುಡಿಹೋದದ್ದರಿಂದ ಅವರು ಕುಳ್ಳಿಯರಾದರು. ಅವರ ಆಕೃತಿ ಮುಷ್ಠಿಬಿಗಿದ ಕೈಯಷ್ಟು ಆಯಿತು. ಅವರು ಭಯದಿಂದ ವ್ಯಾಕುಲರಾದರು.॥23½॥

ಮೂಲಮ್ - 24

ತಾಃ ಕನ್ಯಾ ವಾಯುನಾ ಭಗ್ನಾ ವಿವಿಶುರ್ನೃಪತೇರ್ಗೃಹಮ್ ।
ಪ್ರವಿಶ್ಚ ಚ ಸಂಭ್ರಾಂತಾಃ ಸಲಜ್ಜಾಃ ಸಾಸ್ರಲೋಚನಾಃ ॥

ಅನುವಾದ

ವಾಯುದೇವರಿಂದ ಕುಬ್ಜೆಯರಾದ ಆ ಕನ್ಯೆಯರು ಅರಮನೆಯನ್ನು ಪ್ರವೇಶಿಸಿ ನಾಚಿಕೆಯಿಂದ ಉದ್ವಿಗ್ನರಾದರು. ಅವರ ಕಣ್ಣುಗಳಿಂದ ನೀರು ಧಾರಾಕಾರಾವಾಗಿ ಹರಿಯತೊಡಗಿತು.॥24॥

ಮೂಲಮ್ - 25

ಸ ಚ ತಾ ದಯಿತಾ ಭಗ್ನಾಃ ಕನ್ಯಾಃ ಪರಮಶೋಭನಾಃ ।
ದೃಷ್ಟ್ವಾ ದೀನಾಸ್ತದಾ ರಾಜಾ ಸಂಭ್ರಾಂತ ಇದಮಬ್ರವೀತ್ ॥

ಅನುವಾದ

ಪರಮ ಸುಂದರಿಯರಾದ ಪ್ರೀತಿಯ ತನ್ನ ಪುತ್ರಿಯರ ಈ ವಿರೂಪವನ್ನು ಕಂಡು ರಾಜಾ ಕುಶನಾಭನು ಗಾಬರಿಗೊಂಡು ಹೀಗೆ ನುಡಿದನು.॥25॥

ಮೂಲಮ್ - 26

ಕಿಮಿದಂ ಕಥ್ಯತಾಂ ಪುತ್ರ್ಯಃ ಕೋ ಧರ್ಮಮವಮನ್ಯತೇ ।
ಕುಬ್ಜಾಃ ಕೇನ ಕೃತಾಃ ಸರ್ವಾಶ್ಚೇಷ್ಟಂತ್ಯೋ ನಾಭಿಭಾಷಥ ।
ಏವಂ ರಾಜಾ ವಿನಿಃಶ್ವಸ್ಯ ಸಮಾಧಿಂ ಸಮಾಧಿಂ ತತಃ ॥

ಅನುವಾದ

ಪುತ್ರಿಯರಿರಾ! ಇದೇನಾಯಿತು? ತಿಳಿಸಿರಿ. ಯಾವ ಪ್ರಾಣಿಯು ಧರ್ಮವನ್ನು ಅವಹೇಳನ ಮಾಡಿದುದು? ಯಾರು ನಿಮ್ಮನ್ನು ಕುಳ್ಳಿಯರಾಗಿಸಿದರು? ಇದರಿಂದ ನೀವು ಒದ್ದಾಡುತ್ತಿರುವಿರಿ. ನೀವು ಏನನ್ನೂ ಏಕೆ ಹೇಳುವುದಿಲ್ಲ? ಎಂದು ಹೇಳುತ್ತಾ ನಿಟ್ಟುಸಿರುಬಿಟ್ಟನು. ಅವರು ಉತ್ತರ ಹೇಳುವರೆಂದು ಗಮನಿಸುತ್ತಾ ಕುಳಿತನು.॥26॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಮೂವತ್ತೆರಡನೆಯ ಸರ್ಗ ಪೂರ್ಣವಾಯಿತು. ॥32॥