वाचनम्
ಭಾಗಸೂಚನಾ
ಶ್ರೀರಾಮ-ಲಕ್ಷ್ಮಣ ಹಾಗೂ ಋಷಿಗಳೊಂದಿಗೆ ವಿಶ್ವಾಮಿತ್ರರು ಮಿಥಿಲೆಯ ಕಡೆಗೆ ಪ್ರಯಾಣ, ಮಾರ್ಗದಲ್ಲಿ ಶೋಣಾನದಿಯ ತೀರದಲ್ಲಿ ವಿಶ್ರಾಂತಿ
ಮೂಲಮ್ - 1
ಅಥ ತಾಂ ರಜನೀಂ ತತ್ರ ಕೃತಾರ್ಥೌ ರಾಮಲಕ್ಷ್ಮಣೌ ।
ಊಷತುರ್ಮುದಿತೌ ವೀರೌ ಪ್ರಹೃಷ್ಟೇನಾಂತರಾತ್ಮನಾ ।।
ಅನುವಾದ
ವಿಶ್ವಾಮಿತ್ರರ ಯಜ್ಞವನ್ನು ರಕ್ಷಿಸಿ ಕೃತಕೃತ್ಯರಾದ ರಾಮ-ಲಕ್ಷ್ಮಣರು ಆ ಯಜ್ಞಶಾಲೆಯಲ್ಲಿ ಇರುಳನ್ನು ಕಳೆದರು. ಆಗ ಅವರಿಬ್ಬರು ವೀರರ ಹೃದಯ ಹರ್ಷೋಲ್ಲಾಸಗೊಂಡು ಪ್ರಸನ್ನವಾಗಿತ್ತು.॥1॥
ಮೂಲಮ್ - 2
ಪ್ರಭಾತಾಯಾಂ ತು ಶರ್ವರ್ಯಾಂ ಕೃತಪೌರ್ವಾಹ್ಣಿಕಕ್ರಿಯೌ ।
ವಿಶ್ವಾಮಿತ್ರಮೃಷೀಂಶ್ಚಾನ್ಯಾನ್ ಸಹಿತಾವಭಿಜಗ್ಮತುಃ ॥
ಅನುವಾದ
ರಾತ್ರೆ ಕಳೆದು ಪ್ರಾತಃಕಾಲವಾದಾಗ ಅವರಿಬ್ಬರೂ ನಿತ್ಯಾಹ್ನಿಕಗಳಿಂದ ನಿವೃತ್ತರಾಗಿ ವಿಶ್ವಾಮಿತ್ರರು ಹಾಗೂ ಇತರ ಋಷಿಗಳ ಬಳಿಗೆ ಜೊತೆ ಜೊತೆಯಲ್ಲಿ ಬಂದರು.॥2॥
ಮೂಲಮ್ - 3
ಅಭಿವಾದ್ಯ ಮುನಿಶ್ರೇಷ್ಠಂ ಜ್ವಲಂತಮಿವ ಪಾವಕಮ್ ।
ಊಚತುಃ ಪರಮೋದಾರಂ ವಾಕ್ಯಂ ಮಧುರಭಾಷಿಣೌ ॥
ಅನುವಾದ
ಅಲ್ಲಿಗೆ ಹೋಗಿ ಪ್ರಜ್ವಲಿತ ಅಗ್ನಿಯಂತಹ ಮುನಿಶ್ರೇಷ್ಠ ವಿಶ್ವಾಮಿತ್ರರಿಗೆ ಪ್ರಣಾಮಮಾಡಿ, ಮಧುರವಾಗಿ ಹೀಗೆ ಪರಮೋದಾರ ಮಾತನ್ನು ಹೇಳಿದರು .॥3॥
ಮೂಲಮ್ - 4
ಇಮೌ ಸ್ಮ ಮುನಿಶಾರ್ದೂಲ ಕಿಂಕರೌ ಸಮುಪಾಗತೌ ।
ಆಜ್ಞಾಪಯ ಮುನಿಶ್ರೇಷ್ಠ ಶಾಸನಂ ಕರವಾವ ಕಿಮ್ ॥
ಅನುವಾದ
ಮುನಿವರ್ಯರೇ! ನಾವಿಬ್ಬರೂ ಕಿಂಕರರು ನಿಮ್ಮ ಸೇವೆಯಲ್ಲಿ ಉಪಸ್ಥಿತರಾಗಿದ್ದೇವೆ. ಮುನಿಶ್ರೇಷ್ಠರೇ! ನಾವು ಏನು ಸೇವೆ ಮಾಡಬೇಕೆಂದು ಆಜ್ಞಾಪಿಸಿರಿ.॥4॥
ಮೂಲಮ್ - 5
ಏವಮುಕ್ತೇತಯೋರ್ವಾಕೈ ಸರ್ವ ಏವ ಮಹರ್ಷಯಃ ।
ವಿಶ್ವಾಮಿತ್ರಂ ಪುರಸ್ಕೃತ್ಯ ರಾಮಂ ವಚನಮಬ್ರುವನ್ ॥
ಅನುವಾದ
ಅವರಿಬ್ಬರು ಹೀಗೆ ನುಡಿದಾಗ ಆ ಎಲ್ಲ ಮಹರ್ಷಿಗಳು ವಿಶ್ವಾಮಿತ್ರರನ್ನು ಮುಂದುಮಾಡಿ ಶ್ರೀರಾಮಚಂದ್ರನಲ್ಲಿ ಇಂತೆಂದರು.॥5॥
ಮೂಲಮ್ - 6
ಮೈಥಿಲಸ್ಯ ನರಶ್ರೇಷ್ಠ ಜನಕಸ್ಯ ಭವಿಷ್ಯತಿ ।
ಯಜ್ಞಃ ಪರಮಧರ್ಮಿಷ್ಠಸ್ತತ್ರ ಯಾಸ್ಯಾಮಹೇ ವಯಮ್ ॥
ಅನುವಾದ
ನರಶ್ರೇಷ್ಠನೇ! ಮಿಥಿಲೆಯ ರಾಜಾ ಜನಕನ ಪರಮ ಧರ್ಮಮಯ ಯಜ್ಞವು ಪ್ರಾರಂಭವಾಗುವುದಿದೆ. ಅದರಲ್ಲಿ ನಾವೆಲ್ಲರೂ ಭಾಗವಹಿಸುವಾ.॥6॥
ಮೂಲಮ್ - 7
ತ್ವಂ ಚೈವ ನರಶಾರ್ದೂಲ ಸಹಾಸ್ಮಾಭಿರ್ಗಮಿಷ್ಯಸಿ ।
ಅದ್ಭುತಂ ಚ ಧನೂರತ್ನಂ ತತ್ರ ತ್ವಂ ದ್ರಷ್ಟುಮರ್ಹಸಿ ॥
ಅನುವಾದ
ಪುರುಷಸಿಂಹನೇ! ನೀವು ನಮ್ಮ ಜೊತೆಗೆ ಹೊರಡಿರಿ. ಅಲ್ಲಿ ಒಂದು ದೊಡ್ಡ ಅದ್ಭುತವಾದ ಧನುಸ್ಸು ಇದೆ. ಅದನ್ನು ನೀನೂ ನೋಡುವೆಯಂತೆ.॥7॥
ಮೂಲಮ್ - 8
ತದ್ಧಿ ಪೂರ್ವಂ ನರಶ್ರೇಷ್ಠ ದತ್ತಂ ಸದಸಿ ದೈವತೈಃ ।
ಅಪ್ರಮೇಯ ಬಲಂ ಘೋರಂ ಮಖೇ ಪರಮಭಾಸ್ವರಮ್ ॥
ಅನುವಾದ
ಪುರುಷಪುಂಗವನೇ! ಮೊದಲು ಎಂದೋ ಯಜ್ಞದಲ್ಲಿ ಬಂದಿರುವ ದೇವತೆಗಳು ಜನಕನ ಪೂರ್ವಿಕರಿಗೆ ಆ ಧನುಸ್ಸನ್ನು ಕೊಟ್ಟಿದ್ದರು. ಅದು ಎಷ್ಟು ಪ್ರಬಲ ಮತ್ತು ಭಾರೀ ಇದೆ ಎಂಬುದರ ಅಳತೆಯೇ ಇಲ್ಲ. ಅದು ಬಹಳ ಪ್ರಕಾಶಮಾನ ಹಾಗೂ ಭಯಂಕರವಾಗಿದೆ.॥8॥
ಮೂಲಮ್ - 9
ನಾಸ್ಯ ದೇವಾ ನ ಗಂಗರ್ವಾ ನಾಸುರಾ ನ ಚ ರಾಕ್ಷಸಾಃ ।
ಕರ್ತುಮಾರೋಪಣಂ ಶಕ್ತಾ ನ ಕಥಂಚನ ಮಾನುಷಾಃ ॥
ಅನುವಾದ
ದೇವತೆಗಳು, ಗಂಧರ್ವರು, ಅಸುರರು, ರಾಕ್ಷಸರು ಯಾರೂ ಅದನ್ನು ಹೆದೆಯೇರಿಸಲಾರರು. ಹಾಗಿರುವಾಗ ಮನುಷ್ಯರ ಮಾತಾದರೂ ಏನು.॥9॥
ಮೂಲಮ್ - 10
ಧನುಷಸ್ತಸ್ಯ ವೀರ್ಯಂ ಹಿ ಜಿಜ್ಞಾಸಂತೋ ಮಹೀಕ್ಷಿತಃ ।
ನ ಶೇಕುರಾರೋಪಯಿತುಂ ರಾಜಪುತ್ರಾ ಮಹಾಬಲಾಃ ॥
ಅನುವಾದ
ಆ ಧನುಸ್ಸಿನ ಶಕ್ತಿಯನ್ನು ತಿಳಿಯಲು ಎಷ್ಟೋ ಮಹಾಬಲಶಾಲಿ ರಾಜರು, ರಾಜಕುಮಾರರು ಬಂದರೂ ಯಾರೂ ಅದನ್ನು ಹೆದೆಯೇರಿಸದಾದರು.॥10॥
ಮೂಲಮ್ - 11
ತದ್ಧನುರ್ನರಶಾರ್ದೂಲ ಮೈಥಿಲಸ್ಯ ಮಹಾತ್ಮನಃ ।
ತತ್ರ ದ್ರಕ್ಷ್ಯಸಿ ಕಾಕುತ್ಸ್ಥ ಯಜ್ಞಂ ಚ ಪರಮಾದ್ಭುತಮ್ ॥
ಅನುವಾದ
ಕಾಕುತ್ಸ್ಥನೆ! ಪುರುಷಸಿಂಹ ರಾಮಾ! ನೀನು ಅಲ್ಲಿಗೆ ಹೋಗುವುದರಿಂದ ಮಹಾತ್ಮನಾದ ಮಿಥಿಲೆಯ ರಾಜನ ಧನುಸ್ಸನ್ನು ಹಾಗೂ ಅವನ ಯಜ್ಞವನ್ನು ನೋಡುವೆಯಂತೆ.॥11॥
ಮೂಲಮ್ - 12
ತದ್ಧಿ ಯಜ್ಞಫಲಂ ತೇನ ಮೈಥಿಲೇನೋತ್ತಮಂ ಧನುಃ ।
ಯಾಚಿತಂ ನರಶಾರ್ದೂಲ ಸುನಾಭಂ ಸರ್ವದೈವತೈಃ ॥
ಅನುವಾದ
ನರಶ್ರೇಷ್ಠನೇ! ಮಿಥಿಲೆಯ ಅಸರನು ತನ್ನ ಯಜ್ಞದ ಫಲರೂಪದಲ್ಲಿ ಆ ಉತ್ತಮ ಧನುಸ್ಸನ್ನು ಬೇಡಿದ್ದನು. ಆದ್ದರಿಂದ ಸಮಸ್ತ ದೇವತೆಗಳು ಹಾಗೂ ಭಗವಾನ್ ಶಂಕರನು ಆ ಧನುಸ್ಸನ್ನು ಕರುಣಿಸಿದ್ದನು. ಆ ಧನುಸ್ಸಿನ ನಡುವಿನ ಮುಷ್ಟಿಬಂಧ ಸ್ಥಾನವು ಬಹಳ ಸುಂದರವಾಗಿದೆ.॥12॥
ಮೂಲಮ್ - 13
ಆಯಾಗಭೂತಂ ನೃಪತೇಸ್ತಸ್ಯ ವೇಶ್ಮನಿ ರಾಘವ ।
ಅರ್ಚಿತಂ ವಿವಿಧೈರ್ಗಂಧೈರ್ಧೂಪೈಶ್ಚಾರುಗಂಧಿಭಿಃ ॥
ಅನುವಾದ
ರಘುನಂದನ! ಜನಕನ ಅರಮನೆಯಲ್ಲಿ ಆ ಧನುಸ್ಸು ದೇವರಂತೆ ಪ್ರತಿಷ್ಠಿತವಾಗಿದ್ದು, ನಾನಾ ರೀತಿಯ ಗಂಧ, ಧೂಪ, ಅಗರು, ಸುಗಂಧಿತ ಪುಷ್ಪಾದಿಗಳಿಂದ ಪ್ರತಿದಿನ ಪೂಜಿತವಾಗಿದೆ.॥13॥
ಮೂಲಮ್ - 14
ಏವಮುಕ್ತ್ವಾ ಮುನಿವರಃ ಪ್ರಸ್ಥಾನಮಕರೋತ್ತದಾ ।
ಸರ್ಷಿಸಂಘಃ ಸಕಾಕುತ್ಸ್ಥ ಆಮಂತ್ರ್ಯ ವನದೇವತಾಃ ॥
ಅನುವಾದ
ಹೀಗೆ ಹೇಳಿ ಮುನಿವರ ವಿಶ್ವಾಮಿತ್ರರು ವನದೇವತೆಗಳಿಂದ ಅಪ್ಪಣೆ ಪಡೆದು, ಋಷಿಮಂಡಳಿ ಹಾಗೂ ರಾಮ - ಲಕ್ಷ್ಮಣರೊಂದಿಗೆ ಅಲ್ಲಿಂದ ಹೊರಟರು.॥14॥
ಮೂಲಮ್ - 15
ಸ್ವಸ್ತಿ ವೋಽಸ್ತು ಗಮಿಷ್ಯಾಮಿ ಸಿದ್ಧಃ ಸಿದ್ಧಾಶ್ರಮಾದಹಮ್ ।
ಉತ್ತರೇ ಜಾಹ್ನವೀತೀರೇ ಹಿಮವಂತಂ ಶಿಲೋಚ್ಚಯಮ್ ॥
ಅನುವಾದ
ಹೊರಡುವಾಗ ಅವರು ವನದೇವತೆಗಳಲ್ಲಿ ನಾನು ನನ್ನ ಯಜ್ಞಕಾರ್ಯವನ್ನು ಸಿದ್ಧಗೊಳಿಸಿ ಈ ಸಿದ್ಧಾಶ್ರಮದಿಂದ ಹೊರಡುತ್ತಿದ್ದೇನೆ. ಗಂಗೆಯ ಉತ್ತರ ತೀರದ ಹಿಮಾಲಯ ಪರ್ವತದ ಕಡೆಗೆ ಹೋಗಿಬರುವೆನು. ನಿಮಗೆ ಮಂಗಳವಾಗಲಿ.॥15॥
ಮೂಲಮ್ - 16
ಇತ್ಯುಕ್ತ್ವಾ ಮುನಿಶಾರ್ದೂಲಃ ಕೌಶಿಕಃ ಸ ತಪೋಧನಃ ।
ಉತ್ತರಾಂ ದಿಶಮುದ್ದಿಶ್ಯ ಪ್ರಸ್ಥಾತುಮುಪಚಕ್ರಮೇ ॥
ಅನುವಾದ
ಹೀಗೆ ಹೇಳಿ ತಪೋಧನ ಮುನಿಶ್ರೇಷ್ಠ ಕೌಶಿಕರು ಉತ್ತರ ದಿಕ್ಕಿಗೆ ಪ್ರಯಾಣವನ್ನು ಪ್ರಾರಂಭಿಸಿದರು.॥16॥
ಮೂಲಮ್ - 17
ತಂ ವ್ರಜಂತಂ ಮುನಿವರಮನ್ವಗಾದನುಸಾರಿಣಾಮ್ ।
ಶಕಟೀಶತಮಾತ್ರಂ ತು ಪ್ರಯಾಣೇ ಬ್ರಹ್ಮವಾದಿನಾಮ್ ॥
ಅನುವಾದ
ಆಗ ಯಾತ್ರೆಗೆ ಹೊರಟ ಮುನಿವರ ವಿಶ್ವಾಮಿತ್ರರ ಹಿಂದೆ ಅವರೊಂದಿಗೆ ಹೊರಟ ಬ್ರಹ್ಮವಾದಿ ಮಹರ್ಷಿಗಳ ನೂರು ಬಂಡಿಗಳೂ ಹೊರಟವು.॥17॥
ಮೂಲಮ್ - 18
ಮೃಗಪಕ್ಷಿಗಣಾಶ್ಚೈವ ಸಿದ್ಧಾಶ್ರಮನಿವಾಸಿನಃ ।
ಅನುಜಗ್ಮುರ್ಮಹಾತ್ಮಾನಂ ವಿಶ್ವಾಮಿತ್ರಂ ತಪೋಧನಮ್ ॥
ಅನುವಾದ
ಸಿದ್ಧಾಶ್ರಮದಲ್ಲಿ ವಾಸಿಸುವ ಮೃಗ, ಪಕ್ಷಿಗಳೂ ತಪೋಧನ ವಿಶ್ವಾಮಿತ್ರರ ಹಿಂದೆ-ಹಿಂದೆಯೇ ಹೊರಟವು.॥18॥
ಮೂಲಮ್ - 19
ನಿವರ್ತಯಾಮಾಸ ತತಃ ಸರ್ಷಿಸಂಘಃ ಸ ಪಕ್ಷಿಣಃ ।
ತೇ ಗತ್ವಾ ದೂರಮಧ್ವಾನಂ ಲಂಬಮಾನೇ ದಿವಾಕರೇ ॥
ಮೂಲಮ್ - 20
ವಾಸಂ ಚಕ್ರುರ್ಮುನಿಗಣಾಃ ಶೋಣಾಕೂಲೇ ಸಮಾಹಿತಾಃ ।
ತೇಽಸ್ತಂ ಗತೇ ದಿನಕರೇ ಸ್ನಾತ್ವಾ ಹುತಹುತಾಶನಾಃ ॥
ಅನುವಾದ
ಸ್ವಲ್ಪ ದೂರ ಹೋದ ಬಳಿಕ ಋಷಿಮಂಡಳಿ ಸಹಿತ ವಿಶ್ವಾಮಿತ್ರರು ಆ ಪಶು-ಪಕ್ಷಿಗಳನ್ನು ಹಿಂದಿರುಗಿಸಿದರು ಮತ್ತೆ ಬಹುದೂರ ನಡೆದ ಬಳಿಕ ಸೂರ್ಯನು ಅಸ್ತಾಚಲಕ್ಕೆ ಸರಿದಾಗ ಋಷಿಗಳು ಪೂರ್ಣ ಎಚ್ಚರವಾಗಿದ್ದು ಶೋಣ-ಭದ್ರಾನದಿಯ ತೀರದಲ್ಲಿ ಬೀಡುಬಿಟ್ಟರು. ಸೂರ್ಯನು ಅಸ್ತನಾದಾಗ ಅವರೆಲ್ಲರೂ ಸ್ನಾನಮಾಡಿ ಸಾಯಾಹ್ನಿಕ ಅಗ್ನಿಹೋತ್ರಾದಿ ಕಾರ್ಯವನ್ನು ಪೂರೈಸಿಕೊಂಡರು.॥19-20॥
ಮೂಲಮ್ - 21½
ವಿಶ್ವಾಮಿತ್ರಂ ಪುರಸ್ಕೃತ್ಯ ನಿಷೇದುರಮಿತೌಜಸಃ ।
ರಾಮೋಽಪಿ ಸಹಸೌಮಿತ್ರಿರ್ಮುನೀಂಸ್ತಾನಭಿಪೂಜ್ಯ ಚ ॥
ಅಗ್ರತೋ ನಿಷಸಾದಾಥ ವಿಶ್ವಾಮಿತ್ರಸ್ಯ ಧೀಮತಃ ।
ಅನುವಾದ
ಅನಂತರ ಅವರೆಲ್ಲ ಅಮಿತ ತೇಜಸ್ವೀ ಋಷಿ-ಮುನಿಗಳು ವಿಶ್ವಾಮಿತ್ರರ ಮುಂದೆ ಕುಳಿತರು. ಮತ್ತೆ ಶ್ರೀರಾಮನೂ ಋಷಿಗಳನ್ನು ಆದರಿಸುತ್ತಾ ಧೀಮಂತರಾದ ವಿಶ್ವಾಮಿತ್ರರ ಮುಂದೆ ಕುಳಿತುಕೊಂಡನು.॥21½॥
ಮೂಲಮ್ - 22½
ಅಥ ರಾಮೋ ಮಹಾತೇಜಾ ವಿಶ್ವಾಮಿತ್ರಂ ತಪೋಧನಮ್ ॥
ಪಪ್ರಚ್ಛ ಮುನಿಶಾರ್ದೂಲಂ ಕೌತೂಹಲಸಮನ್ವಿತಮ್ ।
ಅನುವಾದ
ಬಳಿಕ ಮಹಾತೇಜಸ್ವೀ ಶ್ರೀರಾಮನು ತಪೋಧನರಾದ ಮುನಿಶ್ರೇಷ್ಠ ವಿಶ್ವಾಮಿತ್ರರಲ್ಲಿ ಕುತೂಹಲದಿಂದ ಕೇಳಿದನು.॥22½॥
ಮೂಲಮ್ - 23½
ಭಗವನ್ ಕೋ ನ್ವಯಂ ದೇಶಃ ಸಮೃದ್ಧವನಶೋಭಿತಃ ॥
ಶ್ರೋತುಮಿಚ್ಛಾಮಿ ಭದ್ರಂ ತೇ ವಕ್ತುಮರ್ಹಸಿ ತತ್ತ್ವತಃ ।
ಅನುವಾದ
ಪೂಜ್ಯರೇ! ಹಸುರಿನಿಂದ ಕಂಗೊಳಿಸುವ ಸುಶೋಭಿತವಾದ ಈ ದೇಶ ಯಾವುದು? ಇದರ ಪರಿಚಯವನ್ನು ಕೇಳಲು ನಾನು ಬಯಸುತ್ತಿರುವೆನು. ನಿಮಗೆ ಮಂಗಳವಾಗಲಿ. ತಾವು ನನಗೆ ಇದರ ರಹಸ್ಯವನ್ನು ತಿಳಿಸಿರಿ.॥23½॥
ಮೂಲಮ್ - 24
ನೋದಿತೋ ರಾಮವಾಕ್ಯೇನ ಕಥಯಾಮಾಸ ಸುವ್ರತಃ ।
ತಸ್ಯ ದೇಶಸ್ಯ ನಿಖಲಮೃಷಿಮಧ್ಯೇ ಮಹಾತಪಾಃ ॥
ಅನುವಾದ
ಶ್ರೀರಾಮಚಂದ್ರನ ಪ್ರಶ್ನೆಯಿಂದ ಪ್ರೇರಿತರಾಗಿ ಸುವ್ರತರಾದ ಮಹಾತಪಸ್ವೀ ವಿಶ್ವಾಮಿತ್ರರು ಎಲ್ಲ ಮುನಿಗಳ ನಡುವೆ ಆ ದೇಶದ ಪರಿಚಯವನ್ನು ಪೂರ್ಣ ರೂಪದಿಂದ ಹೇಳತೊಡಗಿದರು.॥24॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಮೂವತ್ತೊಂದನೆಯ ಸರ್ಗ ಪೂರ್ಣವಾಯಿತು. ॥31॥