०३० यज्ञरक्षणम्

वाचनम्
ಭಾಗಸೂಚನಾ

ಶ್ರೀರಾಮನಿಂದ ವಿಶ್ವಾಮಿತ್ರರ ಯಜ್ಞದ ರಕ್ಷಣೆ, ರಾಕ್ಷಸರ ಸಂಹಾರ

ಮೂಲಮ್ - 1

ಅಥ ತೌ ದೇಶಕಾಲಜ್ಞೌ ರಾಜಪುತ್ರಾವರಿಂದಮೌ ।
ದೇಶೇ ಕಾಲೇ ಚ ವಾಕ್ಯಜ್ಞಾವಬ್ರೂತಾಂ ಕೌಶಿಕಂ ವಚಃ ॥

ಅನುವಾದ

ಅನಂತರ ದೇಶ ಕಾಲವನ್ನು ತಿಳಿದಿರುವ ಶತ್ರುದಮನ ರಾಜಕುಮಾರ ಶ್ರೀರಾಮ-ಲಕ್ಷ್ಮಣರು ದೇಶ - ಕಾಲಕ್ಕನುಸಾರ ಮಾತನಾಡುವುದರಲ್ಲಿ ಮರ್ಮಜ್ಞರಾಗಿದ್ದ ಅವರು ಕೌಶಿಕ ಮುನಿಯಲ್ಲಿ ಇಂತೆಂದರು .॥1॥

ಮೂಲಮ್ - 2

ಭಗವನ್ ಶ್ರೋತುಮಿಚ್ಛಾವೋ ಯಸ್ಮಿನ್ಕಾಲೇ ನಿಶಾಚರೌ ।
ಸಂರಕ್ಷಣೀಯೌ ತೌ ಬ್ರೂಹಿ ನಾತಿವರ್ತೇತ ತತ್ಕ್ಷಣಮ್ ॥

ಅನುವಾದ

ಪೂಜ್ಯರೇ! ಯಾವ ಸಮಯದಲ್ಲಿ ಆ ಇಬ್ಬರು ನಿಶಾಚರ ಆಕ್ರಮಣವಾಗುತ್ತದೆ? ಇದನ್ನು ನಾವು ತಿಳಿಯಲು ಬಯಸುತ್ತಿದ್ದೇವೆ. ಏಕೆಂದರೆ, ಅವರಿಬ್ಬರು ಯಜ್ಞ ಭೂಮಿಗೆ ಬರುವುದನ್ನು ನಾವು ತಡೆಯಬೇಕಾಗಿದೆ. ಎಲ್ಲಾದರೂ ಎಚ್ಚರ ತಪ್ಪಿ ಆ ಸಂದರ್ಭವು ತಪ್ಪಿಹೋಗಬಾರದು, ಅದಕ್ಕಾಗಿ ತಿಳಿಸಿರಿ.॥2॥

ಮೂಲಮ್ - 3

ಏವಂ ಬ್ರುವಾಣೌ ಕಾಕುತ್ಸ್ಥೌ ತ್ವರಮಾಣೌ ಯುಯುತ್ಸಯಾ ।
ಸರ್ವೇ ತೇ ಮುನಯಃ ಪ್ರೀತಾಃ ಪ್ರಶಶಂಸುರ್ನೃಪಾತ್ಮಜೌ ॥

ಅನುವಾದ

ಹೀಗೆ ಹೇಳಿದ, ಯುದ್ಧದ ಇಚ್ಛೆಯಿಂದ ಆತುರರಾದ ಆ ಇಬ್ಬರು ಕಕುತ್ಸ್ಥವಂಶೀ ರಾಜಕುಮಾರರನ್ನು ನೋಡಿ ಆ ಎಲ್ಲ ಮುನಿಗಳು ಸಂತೋಷಗೊಂಡರು ಹಾಗೂ ಆ ಇಬ್ಬರು ಸಹೋದರರನ್ನು ಭೂರಿ-ಭೂರಿ ಪ್ರಶಂಸಿಸಿದರು.॥3॥

ಮೂಲಮ್ - 4

ಅದ್ಯಪ್ರಭೃತಿ ಷಡ್ರಾತ್ರಂ ರಕ್ಷತಾಂ ರಾಘವೌ ಯುವಾಮ್ ।
ದೀಕ್ಷಾಂ ಗತೋ ಹ್ಯೇಷ ಮುನಿರ್ಮೌನಿತ್ವಂ ಚ ಗಮಿಷ್ಯತಿ ॥

ಅನುವಾದ

ಅವರು ಹೇಳಿದರು - ಈ ಮುನಿವರ್ಯ ವಿಶ್ವಾಮಿತ್ರರು ಯಜ್ಞದ ದೀಕ್ಷೆಯನ್ನು ಕೈಗೊಂಡಿರುವರು. ಆದ್ದರಿಂದ ಈಗ ಮೌನವಾಗಿ ಇರುವರು. ರಘುವಂಶೀ ವೀರರಾದ ನೀವಿಬ್ಬರೂ ಎಚ್ಚರವಾಗಿದ್ದು ಇಂದಿನಿಂದ ಆರು ರಾತ್ರೆಗಳವರೆಗೆ ಇವರ ಯಜ್ಞವನ್ನು ರಕ್ಷಿಸುತ್ತಾ ಇರಿ.॥4॥

ಮೂಲಮ್ - 5

ತೌ ತು ತದ್ವಚನಂ ಶ್ರುತ್ವಾ ರಾಜಪುತ್ರೌ ಯಶಸ್ವಿನೌ ।
ಅನಿದ್ರಂ ಷಡಹೋರಾತ್ರಂ ತಪೋವನಮರಕ್ಷತಾಮ್ ॥

ಅನುವಾದ

ಮುನಿಗಳ ಈ ಮಾತನ್ನು ಕೇಳಿ ಆ ಇಬ್ಬರು ಯಶಸ್ವೀ ರಾಜಕುಮಾರರು ಒಂದೇ ಸಮನೇ ಆರು ಹಗಲು ಮತ್ತು ಆರು ರಾತ್ರಿಗಳವರೆಗೆ ಆ ತಪೋವನವನ್ನು ರಕ್ಷಿಸುತ್ತಾ ಇದ್ದರು. ಇಷ್ಟು ದಿನ ಅವರು ನಿದ್ದೆಯನ್ನು ಮಾಡಲಿಲ್ಲ.॥5॥

ಮೂಲಮ್ - 6

ಉಪಾಸಾಂಚಕ್ರತುರ್ವೀರೌ ಯತ್ತೌ ಪರಮಧನ್ವಿನೌ ।
ರರಕ್ಷತುರ್ಮುನಿವರಂ ವಿಶ್ವಾಮಿತ್ರಮರಿಂದಮೌ ॥

ಅನುವಾದ

ಶತ್ರುಗಳನ್ನು ದಮನ ಮಾಡುವ ಆ ಪರಮ ಧನುರ್ಧರ ವೀರರು ಸತತ ಎಚ್ಚರವಾಗಿದ್ದು, ಮುನಿವರ ವಿಶ್ವಾಮಿತ್ರರ ಬಳಿ ನಿಂತುಕೊಂಡು ಅವರ ಮತ್ತು ಅವರ ಯಜ್ಞದ ರಕ್ಷಣೆಯಲ್ಲಿ ತತ್ಪರರಾಗಿದ್ದರು.॥6॥

ಮೂಲಮ್ - 7

ಅಥಕಾಲೇ ಗತೇ ತಸ್ಮಿನ್ ಷಷ್ಠೇಽಹನಿ ತದಾಗತೇ ।
ಸೌಮಿತ್ರಿಮಬ್ರವೀದ್ ರಾಮೋ ಯತ್ತೋ ಭವ ಸಮಾಹಿತಃ ॥

ಅನುವಾದ

ಈ ಪ್ರಕಾರ ಐದು ದಿನಗಳು ಕಳೆದು ಆರನೆಯ ದಿನ ಬಂದಾಗ ಶ್ರೀರಾಮನು ಸೌಮಿತ್ರಿಯಲ್ಲಿ ಹೇಳಿದನು - ‘‘ಸುಮಿತ್ರಾ ನಂದನ! ನೀನು ನಿನ್ನ ಚಿತ್ತವನ್ನು ಏಕಾಗ್ರಗೊಳಿಸಿ ಎಚ್ಚರವಾಗಿರು.’.॥7॥

ಮೂಲಮ್ - 8

ರಾಮಸ್ಯೈವಂ ಬ್ರುವಾಣಸ್ಯ ತ್ವರಿತಸ್ಯ ಯುಯುತ್ಸಯಾ ।
ಪ್ರಜಜ್ವಾಲ ತತೋವೇದಿಃ ಸೋಪಾಧ್ಯಾಯ ಪುರೋಹಿತಾ ॥

ಅನುವಾದ

ಯುದ್ಧದ ಇಚ್ಛೆಯಿಂದ ಅವಸರಪಡಿಸುತ್ತಾ ಶ್ರೀರಾಮನು ಹೀಗೆ ಹೇಳುತ್ತಿರುವಾಗಲೇ ಉಪಾಧ್ಯಾಯ (ಬ್ರಹ್ಮಾ), ಪುರೋಹಿತ (ಉಪದ್ರಷ್ಟಾ) ಹಾಗೂ ಇತರ ಋತ್ವಿಜರಿಂದ ತುಂಬಿದ ಯಜ್ಞದ ವೇದಿಕೆಯು ಒಮ್ಮೆಲೆ ಪ್ರಜ್ವಲಿತವಾಯಿತು. (ವೇದಿಯು ಹೀಗೆ ಉರಿಯುವುದು ರಾಕ್ಷಸರ ಆಗಮನದ ಸೂಚಕ ಉತ್ಪಾತವಾಗಿತ್ತು..॥8॥

ಮೂಲಮ್ - 9

ಸದರ್ಭಚಮಸಸ್ರುಕ್ಕಾ ಸಸಮಿತ್ಕುಸುಮೋಚ್ಚಯಾ ।
ವಿಶ್ವಾಮಿತ್ರೇಣ ಸಹಿತಾ ವೇದಿರ್ಜಜ್ವಾಲ ಸರ್ತ್ವಿಜಾ ॥

ಅನುವಾದ

ಅನಂತರ ಕುಶ, ಚಮಸ, ಸ್ರುಕ್, ಸಮಿಧೆ ಹಾಗೂ ಹೂವುಗಳ ರಾಶಿಯಿಂದ ಸುಶೋಭಿತವಾದ ವಿಶ್ವಾಮಿತ್ರ ಹಾಗೂ ಋತ್ವಿಜರಸಹಿತ ಯಜ್ಞದ ವೇದಿಯಲ್ಲಿ ಆಹವನೀಯ ಅಗ್ನಿಯು ಪ್ರಜ್ವಲಿತವಾಯಿತು. (ಅಗ್ನಿಯು ಹೀಗೆ ಪ್ರಜ್ವಲಿತವಾಗುವುದು ಯಜ್ಞದ ಉದ್ದೇಶದಿಂದ ಆಗಿತ್ತು).॥9॥

ಮೂಲಮ್ - 10

ಮಂತ್ರವಚ್ಚ ಯಥಾನ್ಯಾಯಂ ಯಜ್ಞೋಽಸೌ ಸಂಪ್ರವರ್ತತೇ ।
ಆಕಾಶೇ ಚ ಮಹಾನ್ ಶಬ್ದಃ ಪ್ರಾದುರಾಸೀದ್ಭಯಾನಕಃ ॥

ಅನುವಾದ

ಮತ್ತೆ ಶಾಸ್ತ್ರವಿಧಿಗನುಸಾರ ವೇದಮಂತ್ರಗಳ ಉಚ್ಚಾರಣಪೂರ್ವಕ ಆ ಯಜ್ಞದ ಕಾರ್ಯಪ್ರಾರಂಭ ಗೊಂಡಿತು. ಇದೇ ಸಮಯದಲ್ಲಿ ಆಕಾಶದಲ್ಲಿ ಭಯಾನಕ ಭಾರೀ ಶಬ್ಧ ಉಂಟಾಯಿತು.॥10॥

ಮೂಲಮ್ - 11

ಆವಾರ್ಯ ಗಗನಂ ಮೇಘೋ ಯಥಾ ಪ್ರಾವೃಷಿ ದೃಶ್ಯತೇ ।
ತಥಾ ಮಾಯಾಂ ವಿಕುರ್ವಾಣೌ ರಾಕ್ಷಸಾವಭ್ಯಧಾವತಾಮ್ ॥

ಮೂಲಮ್ - 12

ಮಾರೀಚಶ್ಚ ಸುಬಾಹುಶ್ಚ ತಯೋರನುಚರಾಸ್ತಥಾ ।
ಆಗಮ್ಯ ಭೀಮಸಂಕಾಶಾ ರುಧಿರೌಘಾನವಾಸೃಜನ್ ॥

ಅನುವಾದ

ಮಳೆಗಾಲದಲ್ಲಿ ಕರಿಮೋಡಗಳು ಆಕಾಶವನ್ನು ಮುಚ್ಚಿ ಬಿಡುವಂತೆಯೇ, ಮಾರೀಚ ಮತ್ತು ಸುಬಾಹು ಎಂಬ ರಾಕ್ಷಸರು ಎಲ್ಲೆಡೆ ತಮ್ಮ ಮಾಯೆಯನ್ನು ಹರಡುತ್ತಾ ಯಜ್ಞಮಂಟಪದ ಕಡೆಗೆ ಓಡಿ ಬರುತ್ತಿದ್ದರು. ಅವರ ಅನುಚರರೂ ಜೊತೆಗೇ ಇದ್ದರು. ಆ ಭಯಂಕರ ರಾಕ್ಷಸರು ಅಲ್ಲಿಗೆ ಬಂದು ರಕ್ತದ ಮಳೆಗರೆಯಲು ಪ್ರಾರಂಭಿಸಿದರು.॥11-12॥

ಮೂಲಮ್ - 13

ತಾಂ ತೇನ ರುಧಿರೌಘೇಣ ವೇದಿಂ ವೀಕ್ಷ್ಯ ಸಮುಕ್ಷಿತಾಮ್ ।
ಸಹಸಾಭಿದ್ರುತೋ ರಾಮಸ್ತಾನಪಶ್ಯತ್ತತೋ ದಿವಿ ॥

ಮೂಲಮ್ - 14

ತಾವಾಪತಂತೌ ಸಹಸಾ ದೃಷ್ಟ್ವಾ ರಾಜೀವಲೋಚನಃ ।
ಲಕ್ಷ್ಮಣಂ ತ್ವಭಿಸಂಪ್ರೇಕ್ಷ್ಯ ರಾಮೋ ವಚನಮಬ್ರವೀತ್ ॥

ಅನುವಾದ

ರಕ್ತಪ್ರವಾಹದಿಂದ ಯಜ್ಞವೇದಿಯ ಸುತ್ತಲಿನ ಭೂಮಿಯು ನೆನೆದಿರುವುದನ್ನು ನೋಡಿ ಶ್ರೀರಾಮಚಂದ್ರನು ತಕ್ಷಣ ಓಡಿ, ಅತ್ತ - ಇತ್ತ ನೋಡಿದಾಗ ಆಕಾಶದಲ್ಲಿರುವ ರಾಕ್ಷಸರನ್ನು ನೋಡಿದನು. ಮಾರೀಚ ಮತ್ತು ಸುಬಾಹುಗಳು ಒಮ್ಮೆಲೆ ಬರುತ್ತಿರುವುದನ್ನು ನೋಡಿ ಕಮಲನಯನ ಶ್ರೀರಾಮನ ಲಕ್ಷ್ಮಣರ ಕಡೆಗೆ ನೋಡಿ ಹೇಳಿದನು .॥13-14॥

(ಶ್ಲೋಕ 15½)

ಮೂಲಮ್

ಪಶ್ಯ ಲಕ್ಷ್ಮಣ ದುರ್ವೃತ್ತಾನ್ ರಾಕ್ಷಸಾನ್ ಪಿಶಿತಾಶನಾನ್ ।
ಮಾನವಾಸ್ತ್ರ ಸಮಾಧೂತಾನನಿಲೇನ ಯಥಾ ಘನಾನ್ ॥
ಕರಿಷ್ಯಾಮಿ ನ ಸಂದೇಹೋ ನೋತ್ಸಹೇ ಹಂತುಮೀದೃಶಾನ್ ।

ಅನುವಾದ

ಲಕ್ಷ್ಮಣ! ಅದೋ ನೋಡು, ಮಾಂಸಭಕ್ಷಿ ದುರಾಚಾರಿ ರಾಕ್ಷಸರು ಬಂದಿರುವರು. ನಾನು ಮಾನವಾಸ್ತ್ರದಿಂದ ವಾಯುವಿನ ವೇಗದಿಂದ ಮೋಡಗಳು ಭಿನ್ನ-ಭಿನ್ನವಾಗುವಂತೆ ಇವರೆಲ್ಲರನ್ನು ಹೊಡೆದು ಓಡಿಸಿಬಿಡುವೆನು. ನನ್ನ ಮಾತಿನಲ್ಲಿ ಯಾವುದೇ ಸಂದೇಹವಿಲ್ಲ. ಇಂತಹ ಹೇಡಿಗಳನ್ನು ಕೊಲ್ಲಲು ನಾನು ಬಯಸುವುದಿಲ್ಲ.॥15½॥

ಮೂಲಮ್ - 16

ಇತ್ಯುಕ್ತ್ವಾ ವಚನಂ ರಾಮಶ್ಚಾಪೇ ಸಂಧಾಯ ವೇಗವಾನ್ ॥

ಮೂಲಮ್ - 17

ಮಾನವಂ ಪರಮೋದಾರಮಸ್ತ್ರಂ ಪರಮಭಾಸ್ವರಮ್ ।
ಚಿಕ್ಷೇಪ ಪರಮಕ್ರುದ್ಧೋ ಮಾರೀಚೋರಸಿ ರಾಘವಃ ॥

ಅನುವಾದ

ಹೀಗೆ ಹೇಳಿ ವೇಗಶಾಲಿ ಶ್ರೀರಾಮನು ತನ್ನ ಧನುಸ್ಸಿಗೆ ಪರಮ ಉದಾರ ಮಾನವಾಸ್ತ್ರವನ್ನು ಸಂಧಾನ ಮಾಡಿದನು. ಆ ಅಸ್ತ್ರವು ಅತ್ಯಂತ ತೇಜಸ್ವಿಯಾಗಿತ್ತು. ಶ್ರೀರಾಮನು ರೋಷಭರಿತನಾಗಿ ಮಾರೀಚನ ಎದೆಗೆ ಆ ಬಾಣವನ್ನು ಪ್ರಯೋಗಿಸಿದನು.॥16-17॥

ಮೂಲಮ್ - 18

ಸ ತೇನ ಪರಮಾಸ್ತ್ರೇಣ ಮಾನವೇನ ಸಮಾಹಿತಃ ।
ಸಂಪೂರ್ಣಂ ಯೋಜನಶತಂ ಕ್ಷಿಪ್ತಃ ಸಾಗರಸಂಪ್ಲವೇ ॥

ಅನುವಾದ

ಆ ಉತ್ತಮ ಮಾನವಾಸ್ತ್ರದ ಆಳವಾದ ಏಟಿನಿಂದ ಮಾರೀಚನು ನೂರು ಯೋಜನ ದೂರ ಸಮುದ್ರದಲ್ಲಿ ಹೋಗಿ ಬಿದ್ದನು.॥18॥

ಮೂಲಮ್ - 19

ವಿಚೇತನಂ ವಿಘೂರ್ಣಂತಂ ಶೀತೇಷು ಬಲಪೀಡಿತಮ್ ।
ನಿರಸ್ತಂ ದೃಶ್ಯ ಮಾರೀಚಂ ರಾಮೋ ಲಕ್ಷ್ಮಣಮಬ್ರವೀತ್ ॥

ಅನುವಾದ

ಶೀತೇಷು ಎಂಬ ಮಾನವಾಸ್ತ್ರದಿಂದ ಪೀಡಿತನಾದ ಮಾರೀಚನು ನಿಶ್ಚೇಷ್ಟಿತನಂತಾಗಿ ದೂರ ಹೋಗುತ್ತಿರುವುದನ್ನು ನೋಡಿ ಶ್ರೀರಾಮನು ಲಕ್ಷ್ಮಣನಲ್ಲಿ ಹೇಳಿದನು .॥19॥

ಮೂಲಮ್ - 20

ಪಶ್ಯ ಲಕ್ಷ್ಮಣ ಶೀತೇಷುಂ ಮಾನವಂ ಮನುಸಂಹಿತಮ್ ।
ಮೋಹಯಿತ್ವಾ ನಯತ್ಯೇನಂ ನ ಚ ಪ್ರಾಣೈರ್ವಿಯುಜ್ಯತೇ ॥

ಅನುವಾದ

ಲಕ್ಷ್ಮಣ! ನೋಡು ಮನುವಿನಿಂದ ಪ್ರಯುಕ್ತವಾದ ಶೀತೇಷು ಎಂಬ ಮಾನವಾಸ್ತ್ರವು ಈ ರಾಕ್ಷಸನನ್ನು ಮೂರ್ಛಿತ ಗೊಳಿಸಿ ದೂರ ಎತ್ತಿಕೊಂಡು ಹೋಗುತ್ತಾ ಇದೆ. ಆದರೆ ಅವನ ಪ್ರಾಣವನ್ನು ಕಳೆಯಲಿಲ್ಲ.॥20॥

ಮೂಲಮ್ - 21

ಇಮಾನಪಿ ವಧಿಷ್ಯಾಮಿ ನಿರ್ಘೃಣಾನ್ ದುಷ್ಟಚಾರಿಣಃ ।
ರಾಕ್ಷಸಾನ್ ಪಾಪಕರ್ಮಸ್ಥಾನ್ಯಜ್ಞಘ್ನಾನ್ ರುಧೀರಾಶನಾನ್ ॥

ಅನುವಾದ

ಈಗ ಯಜ್ಞದಲ್ಲಿ ವಿಘ್ನವನ್ನು ಮಾಡುವ ಈ ಇತರ ನಿರ್ದಯಿ, ದುರಾಚಾರೀ, ಪಾಪಕರ್ಮ ಹಾಗೂ ರಕ್ತಭೋಜೀ ರಾಕ್ಷಸರನ್ನೂ ಕೂಡ ಕೊಂದುಹಾಕುವೆನು.॥21॥

ಮೂಲಮ್ - 22

ಇತ್ಯುಕ್ತ್ವಾ ಲಕ್ಷ್ಮಣಂ ಚಾಶು ಲಾಘವಂ ದರ್ಶಯನ್ನಿವ ।
ವಿಗೃಹ್ಯ ಸುಮುಹಚ್ಚಾಸ್ತ್ರಮಾಗ್ನೇಯಂ ರಘುನಂದನಃ ॥

ಮೂಲಮ್ - 23

ಸುಬಾಹೂರಸಿ ಚಿಕ್ಷೇಪ ಸ ವಿದ್ಧಃ ಪ್ರಾಪತದ್ಭುವಿ ।
ಶೇಷಾನ್ವಾಯವ್ಯಮಾದಾಯ ನಿಜಘಾನ ಮಹಾಯಶಾಃ ।
ರಾಘವಃ ಪರಮೋದಾರೋ ಮುನೀನಾಂ ಮುದಮಾವಹನ್ ॥

ಅನುವಾದ

ಲಕ್ಷ್ಮಣನಲ್ಲಿ ಹೀಗೆ ಹೇಳಿ ರಘುನಂದನ ಶ್ರೀರಾಮನು ತನ್ನ ಕೈಚಳಕವನ್ನು ತೋರಿಸುತ್ತಾ ಶೀಘ್ರವಾಗಿ ಮಹಾ ಆಗ್ನೇಯಾಸ್ತ್ರವನ್ನು ಅನುಸಂಧಾನ ಮಾಡಿ ಅದನ್ನು ಸುಬಾಹುವಿನ ಎದೆಗೆ ಪ್ರಯೋಗಿಸಿದನು. ಅದು ತಗಲುತ್ತಲೇ ಅವನು ಸತ್ತು ಭೂಮಿಗೆ ಬಿದ್ದನು. ಮತ್ತೆ ಮಹಾಯಶಸ್ವೀ ಪರಮೋದ್ಧಾರ ರಘುವೀರನು ವಾಯವ್ಯಾಸ್ತ್ರದಿಂದ ಉಳಿದ ನಿಶಾಚರರನ್ನು ಸಂಹರಿಸಿ ಮುನಿಗಳನ್ನು ಸಂತೋಷಪಡಿಸಿದನು.॥22-23॥

ಮೂಲಮ್ - 24

ಸ ಹತ್ವಾ ರಾಕ್ಷಸಾನ್ಸರ್ವಾನ್ ಯಜ್ಞಘ್ನಾನ್ ರಘುನಂದನಃ ।
ಋಷಿಭಿಃ ಪೂಜಿತಸ್ತತ್ರ ಯಥೇಂದ್ರೋ ವಿಜಯೇ ಪುರಾ ॥

ಅನುವಾದ

ಈ ಪ್ರಕಾರ ರಘುಕುಲನಂದನ ಶ್ರೀರಾಮನು ಯಜ್ಞದಲ್ಲಿ ವಿಘ್ನವನ್ನೊಡ್ಡುವ ಸಮಸ್ತ ರಾಕ್ಷಸರನ್ನು ವಧಿಸಿ, ಹಿಂದೆ ದೇವೇಂದ್ರನು ಅಸುರರ ಮೇಲೆ ವಿಜಯ ಪಡೆದು ಮಹರ್ಷಿಗಳಿಂದ ಪೂಜಿತನಾದಂತೆಯೇ ಋಷಿಗಳಿಂದ ಸಮ್ಮಾನಿತನಾದನು.॥24॥

ಮೂಲಮ್ - 25

ಅಥ ಯಜ್ಞೇ ಸಮಾಪ್ತೇ ತು ವಿಶ್ವಾಮಿತ್ರೋ ಮಹಾಮುನಿಃ ।
ನಿರೀತಿಕಾ ದಿಶೋ ದೃಷ್ಟ್ವಾ ಕಾಕುತ್ಸ್ಥಮಿದಮಬ್ರವೀತ್ ॥

ಅನುವಾದ

ಯಜ್ಞವು ಮುಗಿದಾಗ ಮಹಾಮುನಿ ವಿಶ್ವಾಮಿತ್ರರು ಸಮಸ್ತ ದಿಕ್ಕುಗಳನ್ನು ವಿಘ್ನ-ಬಾಧೆಗಳಿಂದ ರಹಿತವಾಗಿರುವುದನ್ನು ನೋಡಿ ಶ್ರೀರಾಮಚಂದ್ರನಲ್ಲಿ ಹೇಳಿದರು.॥25॥

ಮೂಲಮ್ - 26

ಕೃತಾರ್ಥೋಽಸ್ಮಿ ಮಹಾಬಾಹೋ ಕೃತಂ ಗುರುವಚಸ್ತ್ವಯಾ ।
ಸಿದ್ಧಾಶ್ರಮಮಿದಂ ಸತ್ಯಂಕೃತಂ ವೀರ ಮಹಾಯಶಃ ।
ಸ ಹಿ ರಾಮಂ ಪ್ರಶಸ್ಯೈವಂ ತಾಭ್ಯಾಂ ಸಂಧ್ಯಾಮುಪಾಗಮತ್ ॥

ಅನುವಾದ

ಮಹಾಬಾಹೋ! ನಾನು ನಿನ್ನನ್ನು ಪಡೆದು ಕೃತಾರ್ಥನಾದೆನು. ನೀನು ಗುರುವಿನ ಆಜ್ಞೆಯನ್ನು ಪೂರ್ಣ ರೂಪ ದಿಂದ ಪಾಲಿಸಿರುವೆ. ಮಹಾಯಶಸ್ವೀ ವೀರನೇ! ನೀನು ಈ ಸಿದ್ಧಾಶ್ರಮದ ಹೆಸರನ್ನು ಸಾರ್ಥಕಗೊಳಿಸಿದೆ. ಹೀಗೆ ಶ್ರೀರಾಮ ಚಂದ್ರನನ್ನು ಪ್ರಶಂಸಿಸುತ್ತಾ ಮುನಿಯು ಆ ಇಬ್ಬರು ಸಹೋದರರೊಂದಿಗೆ ಸಂಧ್ಯೋಪಾಸನೆಗೆ ತೊಡಗಿದರು.॥26॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಮೂವತ್ತನೆಯ ಸರ್ಗ ಪೂರ್ಣವಾಯಿತು. ॥30॥