वाचनम्
ಭಾಗಸೂಚನಾ
ವಾಮನರೂಪಿ ಭಗವಾನ್ ವಿಷ್ಣುವಿನ ಸಿದ್ಧಾಶ್ರಮದ ದರ್ಶನ ಮತ್ತು ವಿಶ್ವಾಮಿತ್ರರಿಂದ ಸಿದ್ಧಾಶ್ರಮದ ಉಪಾಖ್ಯಾನ
ಮೂಲಮ್ - 1
ಅಥ ತಸ್ಯಾಪ್ರಮೇಯಸ್ಯ ವಚನಂ ಪರಿಪೃಚ್ಛತಃ ।
ವಿಶ್ವಾಮಿತ್ರೋ ಮಹಾತೇಜಾ ವ್ಯಾಖ್ಯಾತುಮುಪಚಕ್ರಮೇ ॥
ಅನುವಾದ
ಅಪ್ರಮೇಯನಾದ ಶ್ರೀರಾಮನ ಮಾತನ್ನು ಕೇಳಿ ಮಹಾತೇಜಸ್ವೀ ವಿಶ್ವಾಮಿತ್ರರು ಅವನ ಪ್ರಶ್ನೆಗೆ ಉತ್ತರಿಸ ತೊಡಗಿದರು.॥1॥
ಮೂಲಮ್ - 2
ಇಹ ರಾಮ ಮಹಾಬಾಹೋ ವಿಷ್ಣುರ್ದೇವ ನಮಸ್ಕೃತಃ।
ವರ್ಷಾಣಿ ಸುಬಹೂನೀಹ ತಥಾ ಯುಗಶತಾನಿ ಚ ॥
ಮೂಲಮ್ - 3
ತಪಶ್ಚರಣಯೋಗಾರ್ಥಮುವಾಸ ಸುಮಹಾತಪಾಃ ।
ಏಷ ಪೂರ್ವಾಶ್ರಮೋ ರಾಮ ವಾಮನಸ್ಯ ಮಹಾತ್ಮನಃ ॥
ಅನುವಾದ
ಮಹಾಬಾಹು ಶ್ರೀರಾಮನೇ! ಬಹಳ ಹಿಂದೆ ದೇವವಂದಿತ ಭಗವಾನ್ ವಿಷ್ಣುವು ನೂರು ಯುಗಗಳವರೆಗೆ ಅನೇಕ ವರ್ಷ ತಪಸ್ಸನ್ನು ಇಲ್ಲಿ ಮಾಡಿದ್ದನು. ಈ ಸ್ಥಾನವು ವಾಮನನದ್ದಾಗಿದೆ. ಶ್ರೀವಿಷ್ಣುವು ವಾಮನ ಅವತಾರ ಮಾಡುವ ಮೊದಲಿನಿಂದಲೂ ಈ ಆಶ್ರಮವಿತ್ತು.॥2-3॥
ಮೂಲಮ್ - 4
ಸಿದ್ಧಾಶ್ರಮ ಇತಿ ಖ್ಯಾತಃ ಸಿದ್ಧೋಹ್ಯತ್ರ ಮಹಾತಪಾಃ ।
ಏತಸ್ನಿನ್ನೇವ ಕಾಲೇ ತು ರಾಜಾ ವೈರೋಚನಿರ್ಬಲಿಃ ॥
ಮೂಲಮ್ - 5
ನಿರ್ಜಿತ್ಯ ದೈವತಗಣಾನ್ ಸೇಂದ್ರಾನ್ ಸಹಮರುದ್ಗಣಾನ್ ।
ಕಾರಯಾಮಾಸ ತದ್ರಾಜ್ಯಂ ತ್ರಿಷು ಲೋಕೇಷು ವಿಶ್ರುತಃ ॥
ಅನುವಾದ
ಇದು ಸಿದ್ಧಾಶ್ರಮವೆಂದು ಪ್ರಸಿದ್ಧವಾಗಿತ್ತು. ಏಕೆಂದರೆ ಇಲ್ಲಿ ಮಹಾ ತಪಸ್ವಿ ವಿಷ್ಣುವಿಗೆ ಸಿದ್ಧಿ ಉಂಟಾಗಿತ್ತು. ಅವನು ತಪಸ್ಸು ಮಾಡುತ್ತಿದ್ದಾಗಲೇ ವಿರೋಚನ ಕುಮಾರ ಬಲಿ ಚಕ್ರವರ್ತಿಯು ಇಂದ್ರನನ್ನು ಮರುದ್ಗಣಗಳ ಸಹಿತ ಸೋಲಿಸಿ ಅವರ ರಾಜ್ಯವನ್ನು ವಶಪಡಿಸಿಕೊಂಡಿದ್ದನು. ಅವನು ಮೂರು ಲೋಕಗಳಲ್ಲಿಯೂ ವಿಖ್ಯಾತನಾಗಿದ್ದನು.॥4-5॥
ಮೂಲಮ್ - 6
ಯಜ್ಞಂ ಚಕಾರ ಸುಮಹಾನಸುರೇಂದ್ರೋ ಮಹಾಬಲಃ ।
ಬಲೇಸ್ತು ಯಜಮಾನಸ್ಯ ದೇವಾಃ ಸಾಗ್ನಿಪುರೋಗಮಾಃ ।
ಸಮಾಗಮ್ಯ ಸ್ವಯಂ ಚೈವ ವಿಷ್ಣುಮೂಚುರಿಹಾಶ್ರಮೇ ॥
ಅನುವಾದ
ಆ ಮಹಾಬಲಿ ಅಸುರನು ಒಂದು ಯಜ್ಞವನ್ನು ಆಯೋಜಿಸಿದ್ದನು. ಅತ್ತ ಬಲಿಯು ಯಜ್ಞದಲ್ಲಿ ತೊಡಗಿದ್ದಾಗ, ಇತ್ತ ಅಗ್ನಿಯೇ ಮೊದಲಾದ ದೇವತೆಗಳು ಈ ಆಶ್ರಮಕ್ಕೆ ಬಂದು ಭಗವಾನ್ ವಿಷ್ಣುವಿನಲ್ಲಿ ಪ್ರಾರ್ಥಿಸಿದರು.॥6॥
ಮೂಲಮ್ - 7
ಬಲಿರ್ವೈರೋಚನಿರ್ವಿಷ್ಣೋ ಯಜತೇ ಯಜ್ಞಮುತ್ತಮಮ್ ।
ಅಸಮಾಪ್ತವ್ರತೇ ತಸ್ಮಿನ್ ಸ್ವಕಾರ್ಯಮಭಿಪದ್ಯತಾಮ್ ॥
ಅನುವಾದ
ಸರ್ವವ್ಯಾಪೀ ಪರಮೇಶ್ವರನೇ! ವಿರೋಚನ ಕುಮಾರ ಬಲಿಯು ಒಂದು ಉತ್ತಮ ಯಜ್ಞವನ್ನು ಮಾಡುತ್ತಿದ್ದಾನೆ. ಅವನ ಆ ಯಜ್ಞವು ಪೂರ್ಣವಾಗುವ ಮೊದಲೇ ನೀನು ನಮ್ಮ ಕಾರ್ಯವನ್ನು ಸಿದ್ಧಪಡಿಸಿಕೊಡಬೇಕು.॥7॥
ಮೂಲಮ್ - 8
ಯೇ ಚೈನಮಭಿವರ್ತಂತೇ ಯಾಚಿತಾರ ಇತಸ್ತತಃ ।
ಯಚ್ಚ ಯತ್ರ ಯಥಾವಚ್ಚ ಸರ್ವಂತೇಭ್ಯಃ ಪ್ರಯಚ್ಛತಿ ॥
ಅನುವಾದ
ಈ ಸಮಯದಲ್ಲಿ ಯಾವನೇ ದೇಶದೇಶಾಂತರದ ಯಾಚಕನು ಬಂದು ಅವನಲ್ಲಿ ಬೇಡಿದರೆ ಗೋ, ಭೂಮಿ, ಸುವರ್ಣ ಮುಂತಾದ ಎಲ್ಲ ವಸ್ತುಗಳನ್ನು ರಾಜಾ ಬಲಿಯು ಅವರಿಗೆ ಅರ್ಪಿಸುವನು.॥8॥
ಮೂಲಮ್ - 9
ಸ ತ್ವಂ ಸುರಹಿತಾರ್ಥಾಯ ಮಾಯಾಯೋಗಮುಪಾಶ್ರಿತಃ ।
ವಾಮನತ್ವಂ ಗತೋ ವಿಷ್ಣೋ ಕುರು ಕಲ್ಯಾಣಮುತ್ತಮಮ್ ॥
ಅನುವಾದ
ಆದ್ದರಿಂದ ವಿಷ್ಣೋ! ನೀನು ದೇವತೆಗಳ ಹಿತಕ್ಕಾಗಿ ತನ್ನ ಯೋಗಮಾಯೆಯಿಂದ ವಾಮನ ರೂಪವನ್ನು ಧರಿಸಿ ಆ ಯಜ್ಞಕ್ಕೆ ಹೋಗಿ ನಮ್ಮ ಉತ್ತಮ ಕಲ್ಯಾಣ ಸಾಧನವನ್ನು ಮಾಡು.॥9॥
ಮೂಲಮ್ - 10
ಏತಸ್ನಿನ್ನಂತರೇ ರಾಮ ಕಾಶ್ಯಪೋಽಗ್ನಿ ಸಮಪ್ರಭಃ ।
ಆದಿತ್ಯಾ ಸಹಿತೋ ರಾಮ ದೀಪ್ಯಮಾನ ಇವೌಜಸಾ ॥
ಮೂಲಮ್ - 11
ದೇವೀ ಸಹಾಯೋ ಭಗವಾನ್ ದಿವ್ಯಂ ವರ್ಷ ಸಹಸ್ರಕಮ್ ।
ವ್ರತಂ ಸಮಾಪ್ಯ ವರದಂ ತುಷ್ಟಾವ ಮಧುಸೂದನಮ್ ॥
ಅನುವಾದ
ಶ್ರೀರಾಮಾ! ಆಗಲೇ ಅಗ್ನಿಯಂತೆ ತೇಜಸ್ವೀ ಮಹರ್ಷಿ ಕಶ್ಯಪರು ಧರ್ಮಪತ್ನಿ ಅದಿತಿಯ ಜೊತೆಗೆ ತನ್ನ ತೇಜದಿಂದ ಬೆಳಗುತ್ತಾ ಇಲ್ಲಿಗೆ ಬಂದರು. ಅವರು ಒಂದು ಸಾವಿರ ದಿವ್ಯ ವರ್ಷಗಳವರೆಗೆ ಮಹಾನ್ ವ್ರತವನ್ನು ಅದಿತಿದೇವಿಯೊಂದಿಗೆ ಮುಗಿಸಿ ಬಂದಿದ್ದರು. ಅವರು ವರದಾಯಕ ಭಗವಾನ್ ಮಧುಸೂದನನನ್ನು ಇಂತು ಸ್ತುತಿಸಿದರ.॥10-11॥
ಮೂಲಮ್ - 12
ತಪೋಮಯಂ ತಪೋರಾಶಿಂ ತಪೋಮೂರ್ತಿಂ ತಪಾತ್ಮಕಮ್ ।
ತಪಸಾ ತ್ವಾಂ ಸುತಪ್ತೇನ ಪಶ್ಯಾಮಿ ಪುರುಷೋತ್ತಮಮ್ ॥
ಅನುವಾದ
ಭಗವಂತನೇ! ನೀನು ತಪೋಮಯ ತೇಜದ ರಾಶಿಯಾಗಿರುವೆ. ತಪಸ್ಸೇ ನಿನ್ನ ಸ್ವರೂಪವಾಗಿದೆ. ಜ್ಞಾನಗಮ್ಯವಾಗಿರುವೆ. ನಾನು ಚೆನ್ನಾಗಿ ತಪಸ್ಸು ಮಾಡಿ ಅದರ ಪ್ರಭಾವದಿಂದ ಪುರುಷೋತ್ತಮನಾದ ನಿನ್ನನ್ನು ದರ್ಶಿಸುತ್ತಾ ಇದ್ದೇನೆ.॥12॥
ಮೂಲಮ್ - 13
ಶರೀರೇ ತವ ಪಶ್ಯಾಮಿ ಜಗತ್ ಸರ್ವಮಿದಂ ಪ್ರಭೋ ।
ತ್ವಮನಾದಿರನಿರ್ದೇಶ್ಯಸ್ತ್ವಾಮಹಂ ಶರಣಂ ಗತಃ ॥
ಅನುವಾದ
ಪ್ರಭೂ! ಇಡೀ ಜಗತ್ತೇ ನಿನ್ನ ಶರೀರದಲ್ಲಿ ಸ್ಥಿತವಿರುವಂತೆ ನಾನು ನೋಡುತ್ತಿದ್ದೇನೆ. ನೀನು ಅನಾದಿಯಾಗಿರುವೆ. ದೇಶ, ಕಾಲ, ವಸ್ತುಗಳ ಸೀಮೆಯಿಂದ ಅತೀತನಾದ್ದರಿಂದ ನಿನ್ನನ್ನು ಇದೇ ಎಂದು ನಿರ್ದೇಶಿಸಲಾಗುವುದಿಲ್ಲ. ನಾನು ನಿನಗೆ ಶರಣು ಬಂದಿರುವೆನು.॥13॥
ಮೂಲಮ್ - 14
ತಮುವಾಚ ಹರಿಃ ಪ್ರೀತಃಕಶ್ಯಪಂ ಗತಕಲ್ಮಷಮ್ ।
ವರಂ ವರಯ ಭದ್ರಂ ತೇ ವರಾರ್ಹೋಽಸಿ ಮತೋ ಮಮ ॥
ಅನುವಾದ
ಕಶ್ಯಪರ ಎಲ್ಲ ಪಾಪಗಳು ತೊಳೆದುಹೋಗಿತ್ತು. ಭಗವಾನ್ ಶ್ರೀಹರಿಯು ಅತ್ಯಂತ ಪ್ರಸನ್ನನಾಗಿ ಅವರಲ್ಲಿ ಹೇಳಿದನು-ಮಹರ್ಷಿಯೇ! ನಿನಗೆ ಮಂಗಳವಾಗಲಿ. ನೀನು ಇಚ್ಛಿತ ವರವನ್ನು ಬೇಡು, ಏಕೆಂದರೆ ನೀನು ವರ ಪಡೆಯಲು ಯೋಗ್ಯನಾಗಿರುವೆ ಎಂದೆ ನಾನು ಭಾವಿಸುತ್ತೇನೆ.॥14॥
ಮೂಲಮ್ - 15
ತಚ್ಛ್ರುತ್ವಾ ವಚನಂ ತಸ್ಯ ಮಾರೀಚಃ ಕಶ್ಯಪೋಽಬ್ರವೀತ್ ।
ಅದಿತ್ಯಾ ದೇವತಾನಾಂ ಚ ಮಮ ಚೈವಾನುಯಾಚಿತಮ್ ॥
ಮೂಲಮ್ - 16
ವರಂ ವರದ ಸುಪ್ರೀತೋ ದಾತುಮರ್ಹಸಿ ಸುವ್ರತ ।
ಪುತ್ರತ್ವಂ ಗಚ್ಛ ಭಗವನ್ನದಿತ್ಯಾ ಮಮ ಚಾನಘ ॥
ಅನುವಾದ
ಭಗವಂತನ ಈ ಮಾತನ್ನು ಕೇಳಿ ಮರೀಚಿನಂದನ ಕಶ್ಯಪನು ಹೇಳಿದನು - ಸುವ್ರತನಾದ ವರದಾಯಕ ಪರಮೇಶ್ವರನೇ! ದೇವತೆಗಳು ಹಾಗೂ ಅದಿತಿಯೊಂದಿಗೆ ನಾನೂ ನಿನ್ನಲ್ಲಿ ಒಂದೇ ಮಾತಿಗಾಗಿ ಪದೇ-ಪದೇ ಯಾಚಿಸುತ್ತೇನೆ. ನೀನು ಅತ್ಯಂತ ಪ್ರಸನ್ನನಾಗಿ ಭಗವಂತನೇ! ನಿಷ್ಪಾಪ ನಾರಾಯಣನೇ! ‘ನೀನೇ ನಮಗೆ ಪುತ್ರನಾಗಬೇಕು’ ಇದೊಂದೇ ವರವನ್ನು ಕರುಣಿಸು.॥15-16॥
ಮೂಲಮ್ - 17
ಭ್ರಾತಾ ಭವ ಯವೀಯಾಂಸ್ತ್ವಂ ಶಕ್ರಸ್ಯಾಸುರಸೂದನ ।
ಶೋಕಾರ್ತಾನಾಂ ತು ದೇವಾನಾಂ ಸಾಹಾಯ್ಯಂ ಕರ್ತುಮರ್ಹಸಿ ॥
ಅನುವಾದ
ಅರಿಸೂದನನೇ! ನೀನು ಇಂದ್ರನ ತಮ್ಮನಾಗಿ, ಶೋಕದಿಂದ ಪೀಡಿತರಾದ ದೇವತೆಗಳಿಗೆ ಸಹಾಯ ಮಾಡು.॥17॥
ಮೂಲಮ್ - 18
ಅಯಂ ಸಿದ್ಧಾಶ್ರಮೋ ನಾಮ ಪ್ರಸಾದಾತ್ ತೇ ಭವಿಷ್ಯತಿ ।
ಸಿದ್ಧೇ ಕರ್ಮಣಿ ದೇವೇಶ ಉತ್ತಿಷ್ಠ ಭಗವನ್ನಿತಃ ॥
ಅನುವಾದ
ದೇವೇಶ್ವರ ಭಗವಂತನೇ! ನಿನ್ನ ಕೃಪೆಯಿಂದ ಈ ಸ್ಥಾನವು ಸಿದ್ಧಾಶ್ರಮ ಎಂಬ ಹೆಸರಿನಿಂದ ವಿಖ್ಯಾತವಾಗಲಿ. ಈಗ ನಿನ್ನ ತಪೋರೂಪೀ ಕರ್ಮ ಸಿದ್ಧವಾಗಿದೆ. ಆದ್ದರಿಂದ ಮುಂದಿನ ಅವತಾರಕ್ಕಾಗಿ ಇದನ್ನು ಬಿಟ್ಟು ಬಾ.॥18॥
ಮೂಲಮ್ - 19
ಅಥ ವಿಷ್ಣುರ್ಮಹಾತೇಜಾ ಅದಿತ್ಯಾಂ ಸಮಜಾಯತ ।
ವಾಮನಂ ರೂಪಮಾಸ್ಥಾಯ ವೈರೋಚನಿಮುಪಾಗಮತ್ ॥
ಅನುವಾದ
ಅನಂತರ ಮಹಾತೇಜಸ್ವೀ ಭಗವಾನ್ ವಿಷ್ಣುವು ಅದಿತಿ ದೇವಿಯ ಗರ್ಭದಿಂದ ಪ್ರಕಟನಾಗಿ, ವಾಮನ ರೂಪವನ್ನು ಧರಿಸಿ, ವೀರೋಚನಕುಮಾರ ಬಲಿಯ ಬಳಿಗೆ ತೆರಳಿದನು.॥19॥
ಮೂಲಮ್ - 20
ತ್ರೀನ್ ಪದಾನಥ ಭಿಕ್ಷಿತ್ವಾ ಪ್ರತಿಗೃಹ್ಯ ಚ ಮೇದಿನೀಮ್ ।
ಆಕ್ರಮ್ಯ ಲೋಕಾನ್ ಲೋಕಾರ್ಥಿ ಸರ್ವಲೋಕ ಹಿತೇ ರತಃ ॥
ಮೂಲಮ್ - 21
ಮಹೇಂದ್ರಾಯ ಪುನಃ ಪ್ರಾದಾನ್ನಿಯಮ್ಯ ಬಲಿಮೋಜಸಾ ।
ತ್ರೈಲೋಕ್ಯಂ ಸ ಮಹಾತೇಜಾಶ್ಚಕ್ರೇ ಶಕ್ರವಶಂ ಪುನಃ ॥
ಅನುವಾದ
ಸಮಸ್ತ ಲೋಕಗಳ ಹಿತದಲ್ಲಿ ತತ್ಪರನಾದ ಭಗವಾನ್ ವಿಷ್ಣುವು ಬಲಿಯ ಅಧಿಕಾರದಲ್ಲಿರುವ ಮೂರು ಲೋಕದ ರಾಜ್ಯವನ್ನು ಕಸಿದುಕೊಳ್ಳಲು ಬಯಸುತ್ತಿದ್ದನು. ಆದ್ದರಿಂದ ಅವನು ಮೂರು ಹೆಜ್ಜೆ ಭೂಮಿಯನ್ನು ಯಾಚಿಸಿ ಅವನಿಂದ ಭೂ ದಾನವನ್ನು ಪಡೆದು, ಮೂರು ಲೋಕಗಳನ್ನು ಆಕ್ರಮಿಸಿ ಅವನ್ನು ದೇವೇಂದ್ರನಿಗೆ ಮರಳಿಸಿ ಕೊಟ್ಟನು. ಮಹಾತೇಜಸ್ವೀ ಶ್ರೀಹರಿಯು ತನ್ನ ಶಕ್ತಿಯಿಂದ ಬಲಿಯನ್ನು ನಿಗ್ರಹಿಸಿ ಮೂರು ಲೋಕಗಳನ್ನು ಪುನಃ ಇಂದ್ರನಿಗೆ ಒಪ್ಪಿಸಿಕೊಟ್ಟನು.॥20-21॥
ಮೂಲಮ್ - 22
ತೇನೈವ ಪೂರ್ವಮಾಕ್ರಾಂತ ಅಶ್ರಮಃ ಶ್ರಮನಾಶನಃ ।
ಮಾಯಾಪಿ ಭಕ್ತ್ಯಾ ತಸ್ಯೈವ ವಾಮನಸ್ಯೋಪಭುಜ್ಯತೇ ॥
ಅನುವಾದ
ಅದೇ ಭಗವಂತನು ಹಿಂದೆ ಇಲ್ಲಿ ವಾಸಿಸಿದ್ದನು, ಅದಕ್ಕಾಗಿ, ಈ ಆಶ್ರಮವು ಎಲ್ಲ ವಿಧದ ಶ್ರಮ (ದುಃಖ-ಶೋಕ)ವನ್ನು ನಾಶಮಾಡುವಂತಹುದು. ಆ ಭಗವಾನ್ ವಾಮನನಲ್ಲಿ ಭಕ್ತಿ ಇರುವುದರಿಂದ ನಾನೂ ಕೂಡ ಈ ಸ್ಥಾನವನ್ನು ಉಪಯೋಗಿಸುತ್ತಿದ್ದೇನೆ.॥22॥
ಮೂಲಮ್ - 23
ಏನಮಾಶ್ರಮಮಾಯಾಂತಿ ರಾಕ್ಷಸಾ ವಿಘ್ನಕಾರಿಣಃ ।
ಅತ್ರ ತೇ ಪುರುಷವ್ಯಾಘ್ರ ಹಂತವ್ಯಾ ದುಷ್ಟಚಾರಿಣಃ ॥
ಅನುವಾದ
ಇದೇ ಆಶ್ರಮಕ್ಕೆ ನನ್ನ ಯಜ್ಞದಲ್ಲಿ ವಿಘ್ನವನ್ನೊಡ್ಡುವ ರಾಕ್ಷಸರು ಬರುತ್ತಾರೆ. ಪುರುಷಸಿಂಹನೆ! ನೀನು ಇಲ್ಲೇ ಆ ದುರಾಚಾರಿಗಳನ್ನು ವಧಿಸುವುದಿದೆ.॥23॥
ಮೂಲಮ್ - 24
ಅದ್ಯ ಗಚ್ಛಾಮಹೇ ರಾಮ ಸಿದ್ಧಾಶ್ರಮಮನುತ್ತಮಮ್ ।
ತದಾಶ್ರಮಪದಂ ತಾತ ತವಾಪ್ಯೇತದ್ಯಥಾ ಮಮ ॥
ಅನುವಾದ
ಶ್ರೀರಾಮಾ! ಈಗ ನಾವು ಆ ಪರಮೋತ್ತಮ ಸಿದ್ಧಾಶ್ರಮಕ್ಕೆ ಬಂದಿದ್ದೇವೆ. ಅಯ್ಯಾ! ಈ ಆಶ್ರಮವು ನನ್ನದಿರುವಂತೆಯೇ ನಿನ್ನದೂ ಆಗಿದೆ.॥24॥
ಮೂಲಮ್ - 25
ಇತ್ಯುಕ್ತಾ ಪರಮಪ್ರೀತೋ ಗೃಹ್ಯ ರಾಮಂ ಸಲಕ್ಷ್ಮಣಮ್ ।
ಪ್ರವಿಶನ್ನಾಶ್ರಮಪದಂ ವ್ಯರೋಚತ ಮಹಾಮುನಿಃ ।
ಶಶೀವ ಗತನೀಹಾರಃ ಪುನರ್ವಸುಸಮನ್ವಿತಃ ॥
ಅನುವಾದ
ಹೀಗೆ ಹೇಳಿ ಮಹಾಮುನಿಯು ಬಹಳ ಪ್ರೇಮದಿಂದ ಶ್ರೀರಾಮ-ಲಕ್ಷ್ಮಣರ ಕೈ ಹಿಡಿದು ಕೊಂಡು, ಅವರಿಬ್ಬರೊಂದಿಗೆ ಆಶ್ರಮವನ್ನು ಪ್ರವೇಶಿಸಿದರು. ಆಗ ಪುನರ್ವಸು ಎಂಬ ಎರಡು ನಕ್ಷತ್ರಗಳ ನಡುವೆ ಇರುವ ಮಂಜುರಹಿತ ಚಂದ್ರನಂತೆ ಅವರು ಶೋಭಿಸುತ್ತಿದ್ದರು.॥25॥
ಮೂಲಮ್ - 26
ತಂ ದೃಷ್ಟ್ವಾ ಮುನಯಃ ಸರ್ವೇ ಸಿದ್ಧಾಶ್ರಮ ನಿವಾಸಿನಃ ।
ಉತ್ಪತ್ಯೋತ್ಪತ್ಯ ಸಹಸಾ ವಿಶ್ವಾಮಿತ್ರಮಪೂಜಯನ್ ॥
ಮೂಲಮ್ - 27
ಯಥಾರ್ಹಂ ಚಕ್ರಿರೇ ಪೂಜಾಂ ವಿಶ್ವಾಮಿತ್ರಾಯ ಧೀಮತೇ ।
ತಥೈವ ರಾಜಪುತ್ರಾಭ್ಯಾಮಕುರ್ವನ್ನತಿಥಿಕ್ರಿಯಾಮ್ ॥
ಅನುವಾದ
ವಿಶ್ವಾಮಿತ್ರರು ಬಂದಿರುವುದನ್ನು ನೋಡಿ ಸಿದ್ಧಾಶ್ರಮದಲ್ಲಿ ವಾಸಿಸುವ ಎಲ್ಲ ತಪಸ್ವಿಗಳು ಕುಣಿಯುತ್ತಾ ಕೂಡಲೇ ಅವರ ಬಳಿಗೆ ಬಂದು, ಎಲ್ಲರೂ ಸೇರಿ ಆ ಧೀಮಂತ ವಿಶ್ವಾಮಿತ್ರರನ್ನು ಯಥೋಚಿತವಾಗಿ ಪೂಜಿಸಿದರು. ಹಾಗೆಯೇ ಅವರು ಆ ರಾಜಕುಮಾರರಿಬ್ಬರಿಗೂ ಅತಿಥಿ ಸತ್ಕಾರ ಮಾಡಿದರು.॥26-27॥
ಮೂಲಮ್ - 28
ಮುಹೂರ್ತಮಥ ವಿಶ್ರಾಂತೌ ರಾಜಪುತ್ರಾವರಿಂದಮೌ ।
ಪ್ರಾಂಜಲೀ ಮುನಿಶಾರ್ದೂಲಮೂಚತೂ ರಘುನಂದನೌ ॥
ಅನುವಾದ
ಮುಹೂರ್ತಕಾಲ ವಿಶ್ರಾಂತಿ ಪಡೆದು, ರಘುನಂದನರಾದ ಶ್ರೀರಾಮ-ಲಕ್ಷ್ಮಣರು ಕೈಮುಗಿದು ಮುನಿವರ ವಿಶ್ವಾಮಿತ್ರರಲ್ಲಿ ಇಂತೆಂದರು .॥28॥
ಮೂಲಮ್ - 29
ಆದ್ಯೈವ ದೀಕ್ಷಾಂ ಪ್ರವಿಶ ಭದ್ರಂ ತೇ ಮುನಿಪುಂಗವ ।
ಸಿದ್ಧಾಶ್ರಮೋಽಯಂ ಸಿದ್ಧಃ ಸ್ಯಾತ್ಸತ್ಯಮಸ್ತು ವಚಸ್ತವ ॥
ಅನುವಾದ
ಮುನಿಶ್ರೇಷ್ಠರೇ! ತಾವು ಇಂದೇ ಯಜ್ಞದೀಕ್ಷೆಯನ್ನು ಕೈಗೊಳ್ಳಿರಿ. ನಿಮಗೆ ಮಂಗಳವಾಗಲಿ, ಈ ಸಿದ್ಧಾಶ್ರಮವು ವಾಸ್ತವವಾಗಿ ಅನ್ವರ್ಥವಾಗಲೀ. ರಾಕ್ಷಸರ ವಧೆಯ ವಿಷಯದಲ್ಲಿ ನೀವು ಹೇಳಿದ ಮಾತು ನಿಜವಾಗಲಿ.॥29॥
ಮೂಲಮ್ - 30
ಏವಮುಕ್ತೋ ಮಹಾತೇಜಾ ವಿಶ್ವಾಮಿತ್ರೋ ಮಹಾನೃಷಿಃ ।
ಪ್ರವಿವೇಶ ತದಾ ದೀಕ್ಷಾಂ ನಿಯತೋ ನಿಯತೇಂದ್ರಿಯಃ ॥
ಮೂಲಮ್ - 31
ಕುಮಾರಾವಪಿ ತಾಂ ರಾತ್ರಿಮುಷಿತ್ವಾ ಸುಸಮಾಹಿತೌ ।
ಪ್ರಭಾತಕಾಲೇ ಚೋತ್ಥಾಯ ಪೂರ್ವಾಂ ಸಂಧ್ಯಾಮುಪಾಸ್ಯ ಚ ॥
ಮೂಲಮ್ - 32
ಪ್ರಶುಚೀ ಪರಮಂ ಚಾಪ್ಯಂ ಸಾಮ್ಯಪಿ ನಿಯಮೇನ ಚ ।
ಹುತಾಗ್ನಿಹೋತ್ರಮಾಸೀನಂ ವಿಶ್ವಾಮಿತ್ರಮವಂದತಾಮ್ ॥
ಅನುವಾದ
ಅವರು ಹೀಗೆ ಹೇಳಿದಾಗ ಮಹಾತೇಜಸ್ವೀ ಮಹರ್ಷಿ ವಿಶ್ವಾಮಿತ್ರರು ಜಿತೇಂದ್ರಿಯ ಭಾವದಿಂದ ನಿಯಮಪೂರ್ವಕ ಯಜ್ಞದೀಕ್ಷೆಯನ್ನು ಪ್ರವೇಶಿಸಿದರು. ಆ ಇಬ್ಬರು ರಾಜಕುಮಾರರು ಜಾಗರೂಕರಾಗಿ ರಾತ್ರಿ ಕಳೆದು ಬೆಳಗ್ಗೆ, ಎದ್ದು, ಸ್ನಾನಾದಿಗಳಿಂದ ಶುದ್ಧರಾಗಿ ಪ್ರಾತಃ ಸಂಧ್ಯೋಪಾಸನೆ ಹಾಗೂ ನಿಯಮಪೂರ್ವಕ ಸರ್ವಶ್ರೇಷ್ಠ ಗಾಯತ್ರಿ ಮಂತ್ರ ಜಪಿಸತೊಡಗಿದರು. ಜಪ ಪೂರೈಸಿ, ಅಗ್ನಿಹೋತ್ರ ಮಾಡಿ ಕುಳಿತಿರುವ ವಿಶ್ವಾಮಿತ್ರರ ಚರಣಗಳಲ್ಲಿ ವಂದಿಸಿಕೊಂಡರು.॥30-32॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಇಪ್ಪತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು. ॥29॥