वाचनम्
ಭಾಗಸೂಚನಾ
ಶ್ರೀರಾಮನಿಂದ ತಾಟಕಾವಧೆ
ಮೂಲಮ್ - 1
ಮುನೇರ್ವಚನಮಕ್ಲೀಬಂ ಶ್ರುತ್ವಾ ನರವರಾತ್ಮಜಃ ।
ರಾಘವಃ ಪ್ರಾಂಜಲೀರ್ಭೂತ್ವಾ ಪ್ರತ್ಯುವಾಚ ದೃಢವ್ರತಃ ॥
ಅನುವಾದ
ಮುನಿಯ ಉತ್ಸಾಹ ಭರಿತ ಈ ಮಾತನ್ನು ಕೇಳಿ ದೃಢವ್ರತನಾದ ರಾಜಕುಮಾರ ಶ್ರೀರಾಮನು ಕೈಮುಗಿದು ಉತ್ತರಿಸಿದನು.॥1॥
ಮೂಲಮ್ - 2
ಪಿತುರ್ವಚನನಿರ್ದೇಶಾತ್ ಪಿತುರ್ವಚನಗೌರವಾತ್ ।
ವಚನಂ ಕೌಶಿಕಸ್ಯೇತಿ ಕರ್ತವ್ಯಮವಿಶಂಕಯಾ ॥
ಮೂಲಮ್ - 3
ಅನುಶಿಷ್ಟೋಽಸ್ಮ್ಯಯೋಧ್ಯಾಯಾಂ ಗುರುಮಧ್ಯೇ ಮಹಾತ್ಮನಾ ।
ಪಿತ್ರಾ ದಶರಥೇನಾಹಂ ನಾವಜ್ಞೇಯಂ ಹಿ ತದ್ವಚಃ ॥
ಅನುವಾದ
ಪೂಜ್ಯರೇ! ಅಯೋಧ್ಯೆಯಲ್ಲಿ ನನ್ನ ತಂದೆ ಮಹಾತ್ಮಾ ದಶರಥ ರಾಜರು ಇತರ ಗುರುಜನರ ನಡುವೆ ನನಗೆ ಹೀಗೆ ಉಪದೇಶವನ್ನು ನೀಡಿದ್ದರು - ಮಗು! ನಾನು ಹೇಳುವುದರಿಂದ, ಪಿತೃವಾಕ್ಯದಲ್ಲಿ ಗೌರವವನ್ನಿಡಲು ನೀನು ಕುಶಿಕನಂದನ ವಿಶ್ವಾಮಿತ್ರರ ಆಜ್ಞೆಯನ್ನು ಸಂಶಯ ಬಿಟ್ಟು ಪಾಲಿಸು. ಎಂದೂ ಮಾತಿನ ಅವಜ್ಞತೆ ಮಾಡಬೇಡ.॥2-3॥
ಮೂಲಮ್ - 4
ಸೋಽಹಂ ಪಿತುರ್ವಚಃ ಶ್ರುತ್ವಾ ಶಾಸನಾದ್ಬ್ರಹ್ಮವಾದಿನಃ ।
ಕರಿಷ್ಯಾಮಿ ನ ಸಂದೇಹಸ್ತಾಟಕಾವಧಮುತ್ತಮಮ್ ॥
ಅನುವಾದ
ಆದ್ದರಿಂದ ನಾನು ತಂದೆಯ ಆ ಉಪದೇಶದಂತೆ ಬ್ರಹ್ಮವಾದೀ ಮಹಾತ್ಮರಾದ ತಮ್ಮ ಆಜ್ಞೆಯಿಂದ ತಾಟಕಾವಧೆಯನ್ನು ಉತ್ತಮವೆಂದು ತಿಳಿದು ಮಾಡುವೆನು. ಇದರಲ್ಲಿ ಸಂದೇಹವೇ ಇಲ್ಲ.॥4॥
ಮೂಲಮ್ - 5
ಗೋಬ್ರಾಹ್ಮಣ ಹಿತಾರ್ಥಾಯ ದೇಶಸ್ಯ ಚ ಹಿತಾಯ ಚ ।
ತವ ಚೈವಾಪ್ರಮೇಯಸ್ಯ ವಚನಂ ಕರ್ತುಮುದ್ಯತಃ ॥
ಅನುವಾದ
ಗೋ, ಬ್ರಾಹ್ಮಣ ಹಾಗೂ ದೇಶದ ಹಿತಕ್ಕಾಗಿ ನಾನು ನಿಮ್ಮಂತಹ ಅನುಪಮ ಪ್ರಭಾವಶಾಲಿ ಮಹಾತ್ಮರಾದ ನಿಮ್ಮ ಆದೇಶವನ್ನು ಪಾಲಿಸಲು ಎಲ್ಲ ರೀತಿಯಿಂದ ಸಿದ್ಧನಿದ್ದೇನೆ.॥5॥
ಮೂಲಮ್ - 6
ಏವಮುಕ್ತ್ವಾ ಧನುರ್ಮಧ್ಯೇ ಬದ್ಧ್ವಾ ಮುಷ್ಟಿಮರಿಂದಮಃ ।
ಜ್ಯಾಘೋಷಮಕರೋತ್ತೀವ್ರಂ ದಿಶಃ ಶಬ್ದೇನ ನಾದಯನ್ ॥
ಅನುವಾದ
ಹೀಗೆ ಹೇಳಿ ಶತ್ರುದಮನ ಶ್ರೀರಾಮನು ಧನುಸ್ಸನ್ನು ಭದ್ರವಾಗಿ ಹಿಡಿದುಕೊಂಡು ಜೋರಾಗಿ ಧನುಷ್ಟಂಕಾರ ಮಾಡಿದನು. ಆ ಶಬ್ದದಿಂದ ಎಲ್ಲ ದಿಕ್ಕುಗಳು ಪ್ರತಿಧ್ವನಿಸಿದವು.॥6॥
ಮೂಲಮ್ - 7
ತೇನ ಶಬ್ದೇನ ವಿತ್ರಸ್ತಾಸ್ತಾಟಕಾವನವಾಸಿನಃ ।
ತಾಟಕಾ ಚಸುಸಂಕ್ರುದ್ಧಾ ತೇನ ಶಬ್ದೇನ ಮೋಹಿತಾ ॥
ಅನುವಾದ
ಆ ಶಬ್ದದಿಂದ ತಾಟಕಾವನದಲ್ಲಿ ಇರುವ ಸಮಸ್ತ ಪ್ರಾಣಿಗಳೂ ನಡುಗಿಹೋದವು. ತಾಟಕೆಯೂ ಕೂಡ ಆ ಧನುಷ್ಟಂಕಾರದಿಂದ ಮೊದಲಿಗೆ ಕಿಂಕರ್ತವ್ಯ ಮೂಢಳಾದಳು. ಆದರೆ ಮತ್ತೆ ಯೋಚಿಸಿ ಅತ್ಯಂತ ಕ್ರೋಧಗೊಂಡಳು.॥7॥
ಮೂಲಮ್ - 8
ತಂ ಶಬ್ದಮಭಿನಿಧ್ಯಾಯ ರಾಕ್ಷಸೀ ಕ್ರೋಧಮೂರ್ಛಿತಾ ।
ಶ್ರುತ್ವಾ ಚಾಭ್ಯದ್ರವತ್ ಕ್ರುದ್ಧಾ ಯತ್ರಃ ಶಬ್ದೋ ವಿನಿಃಸೃತಃ ॥
ಅನುವಾದ
ಆ ಶಬ್ದವನ್ನು ಕೇಳಿದ ಆ ರಾಕ್ಷಸಿಯು ಕ್ರೋಧದಿಂದ ಮೂರ್ಛಿತಳಾದಳು. ಮತ್ತೆ ಆಕೆಯು ಶಬ್ದ ಕೇಳಿ ಬಂದ ದಿಕ್ಕನ್ನ ಹಿಡಿದು ರೋಷಪೂರ್ವಕ ಓಡಿದಳು.॥8॥
ಮೂಲಮ್ - 9
ತಾಂ ದೃಷ್ಟ್ವಾ ರಾಘವಃ ಕ್ರುದ್ಧಾಂ ವಿಕೃತಾಂ ವಿಕೃತಾನನಾಮ್ ।
ಪ್ರಮಾಣೇನಾತಿವೃದ್ಧಾಂ ಚ ಲಕ್ಷ್ಮಣಂ ಸೋಽಭ್ಯಭಾಷತ ॥
ಅನುವಾದ
ಆಕೆಯ ಶರೀರ ಬಹಳ ಎತ್ತರವಾಗಿತ್ತು, ಮುಖಾಕೃತಿಯು ವಿಕೃತವಾಗಿ ಕಂಡುಬರುತ್ತಿತ್ತು. ಕ್ರೋಧ ತುಂಬಿದ ಆ ವಿಕರಾಳ ರಾಕ್ಷಸಿಯ ಕಡೆಗೆ ನೋಡಿ ಶ್ರೀರಾಮನು ಲಕ್ಷ್ಮಣನಲ್ಲಿ ಹೇಳುತ್ತಾನೆ-॥9॥
ಮೂಲಮ್ - 10
ಪಶ್ಯ ಲಕ್ಷ್ಮಣ ಯಕ್ಷಿಣ್ಯಾ ಭೈರವಂ ದಾರುಣಂ ವಪುಃ ।
ಭಿದ್ಯೇರನ್ ದರ್ಶನಾದಸ್ಯಾ ಭೀರೂಣಾಂ ಹೃದಯಾನಿ ಚ ॥
ಅನುವಾದ
ಲಕ್ಷ್ಮಣನೇ! ನೋಡು ಈ ಯಕ್ಷಿಣಿಯ ಶರೀರ ಹೇಗೆ ದಾರುಣ ಹಾಗೂ ಭಯಂಕರವಾಗಿದೆ. ಈಕೆಯ ದರ್ಶನದಿಂದ ಹೇಡಿ ಮನುಷ್ಯನ ಹೃದಯ ಒಡೆದುಹೋದೀತು.॥10॥
ಮೂಲಮ್ - 11
ಏತಾಂ ಪಶ್ಯ ದುರಾಧರ್ಷಾಂ ಮಾಯಾಬಲ ಸಮನ್ವಿತಾಮ್ ।
ವಿನಿವೃತ್ತಾಂ ಕರೋಮ್ಯದ್ಯ ಹೃತಕರ್ಣಾಗ್ರನಾಸಿಕಾಮ್ ॥
ಅನುವಾದ
ಮಾಯಾಬಲವನ್ನು ಹೊಂದಿದ ಕಾರಣ ಈಕೆ ಅತ್ಯಂತ ದುರ್ಜಯಳಾಗಿದ್ದಾಳೆ. ನೋಡು, ನಾನು ಈಗ ಈಕೆಯ ಕಿವಿ ಮತ್ತು ಮೂಗನ್ನು ಕತ್ತರಿಸಿ ಹಿಂದಕ್ಕೆ ಹೋಗುವಂತೆ ವಿವಶಳನ್ನಾಗಿ ಮಾಡುವೆನು.॥11॥
ಮೂಲಮ್ - 12
ನ ಹ್ಯೇನಾಮುತ್ಸಹೇ ಹಂತುಂ ಸ್ತ್ರೀಸ್ವಭಾವೇನ ರಕ್ಷಿತಾಮ್ ।
ವೀರ್ಯಂ ಚಾಸ್ಯಾ ಗತಿಂ ಚೈವ ಹವ್ಯಾಮಿತಿ ಹಿಮೇ ಮತಿಃ ॥
ಅನುವಾದ
ಇವಳು ತನ್ನ ಸ್ತ್ರೀ ಸ್ವಭಾವದಿಂದಾಗಿ ರಕ್ಷಿತವಾಗಿದ್ದಾಳೆ; ಆದ್ದರಿಂದ ಈಕೆಯನ್ನು ಕೊಲ್ಲಲು ನನಗೆ ಉತ್ಸಾಹವೇ ಉಂಟಾಗುತ್ತಿಲ್ಲ. ಈಕೆಯ ಬಲ ಪರಾಕ್ರಮ ಹಾಗೂ ಗಮನ ಶಕ್ತಿಯನ್ನು ನಾಶಮಾಡಬೇಕೆಂಬುದು ನನ್ನ ವಿಚಾರವಾಗಿದೆ. (ಅರ್ಥಾತ್ ಈಕೆಯ ಕೈ ಕಾಲುಗಳನ್ನು ಕತ್ತರಿಸಿ ಬಿಡುವೆನು.॥12॥
ಮೂಲಮ್ - 13
ಏವಂ ಬ್ರುವಾಣೇ ರಾಮೇ ತು ತಾಟಕಾ ಕ್ರೋಧಮೂರ್ಛಿತಾ ।
ಉದ್ಯಮ್ಯ ಬಾಹೂ ಗರ್ಜಂತೀ ರಾಮಮೇವಾಭ್ಯಧಾವತ ॥
ಅನುವಾದ
ಶ್ರೀರಾಮನು ಹೀಗೆ ಹೇಳುತ್ತಿರುವಂತೆಯೇ ಕ್ರೋಧೋನ್ಮತ್ತ ತಾಟಕೆಯು ಅಲ್ಲಿಗೆ ಬಂದಳು. ಕೈಯನ್ನು ಎತ್ತಿ ಗರ್ಜಿಸುತ್ತಾ ರಾಮನ ಕಡೆಗೆ ನುಗ್ಗಿದಳು.॥13॥
ಮೂಲಮ್ - 14
ವಿಶ್ವಾಮಿತ್ರಸ್ತು ಬ್ರಹ್ಮರ್ಷಿರ್ಹುಂಕಾರೇಣಾಭಿಭರ್ತ್ಸ್ಯ ತಾಮ್ ।
ಸ್ವಸ್ತಿ ರಾಘವಯೋರಸ್ತು ಜಯಂ ಚೈವಾಭ್ಯಭಾಷತ ॥
ಅನುವಾದ
ಇದನ್ನು ಬ್ರಹ್ಮರ್ಷಿ ವಿಶ್ವಾಮಿತ್ರರು ತಮ್ಮ ಹುಂಕಾರದಿಂದ ಆಕೆಯನ್ನು ಗದರಿಸಿ ಹೇಳಿದರು- ರಘುಕುಲದ ಇವರಿಬ್ಬರು ರಾಜಕುಮಾರರ ಕಲ್ಯಾಣವಾಗಲಿ ಇವರಿಗೆ ವಿಜಯವಾಗಲೀ.॥14॥
ಮೂಲಮ್ - 15
ಉದ್ ಧುನ್ವಾನಾ ರಜೋ ಘೋರಂ ತಾಟಕಾ ರಾಘವಾವುಭೌ ।
ರಜೋಮೇಘೇನ ಮಹತಾ ಮುಹೂರ್ತಂ ಸಾವ್ಯಮೋಹಯತ್ ॥
ಅನುವಾದ
ಆಗ ತಾಟಕೆಯು ಆ ಇಬ್ಬರು ರಘುವಂಶಿ ವೀರರ ಮೇಲೆ ಭಯಂಕರ ಧೂಳನ್ನು ಹಾರಿಸಲು ತೊಡಗಿದಳು. ಅಲ್ಲಿ ವಿಶಾಲ ಮೋಡಗಳು ಮುಸುಕಿದಂತೆ ಧೂಳು ತುಂಬಿಹೋಯಿತು. ಅದರಿಂದ ಆಕೆಯು ಮುಹೂರ್ತಕಾಲ ರಾಮ ಲಕ್ಷ್ಮಣರನ್ನು ವಿಹ್ವಲಗೊಳಿಸಿದಳು.॥15॥
ಮೂಲಮ್ - 16
ತತೋ ಮಾಯಾಂ ಸಮಾಸ್ಥಾಯ ಶಿಲಾವರ್ಷೇಣ ರಾಘವೌ ।
ಅವಾಕಿರತ್ಸು ಮಹತಾ ತತಶ್ಚುಕ್ರೋಧ ರಾಘವಃ ॥
ಅನುವಾದ
ಬಳಿಕ ಮಾಯೆಯನ್ನು ಆಶ್ರಯಿಸಿ ಅವಳು ಇಬ್ಬರೂ ಸಹೋದರರ ಮೇಲೆ ಕಲ್ಲಿನ ಮಳೆಗರೆದಳು. ಇದನ್ನು ನೋಡಿ ರಘುನಾಥನು ಆಕೆಯ ಮೇಲೆ ಕ್ರೋಧಗೊಂಡನು.॥16॥
ಮೂಲಮ್ - 17
ಶಿಲಾವರ್ಷಂ ಮಹತ್ತಸ್ಯಾಃ ಶರವರ್ಷೇಣ ರಾಘವಃ ।
ಪ್ರತಿವಾರ್ಯೋಪಧಾವಂತ್ಯಾಃ ಕರೌ ಚಿಚ್ಛೇದ ಪತ್ರಿಭಿಃ ॥
ಅನುವಾದ
ರಾಮನು ಬಾಣಗಳಿಂದ ಕಲ್ಲಿನ ಮಳೆಯನ್ನು ನಿವಾರಿಸಿ, ತನ್ನತ್ತ ಧಾವಿಸಿಬರುವ ನಿಶಾಚರಿಯ ಎರಡೂ ಕೈಗಳನ್ನು ಹರಿತವಾದ ಬಾಣಗಳಿಂದ ಕತ್ತರಿಸಿ ಹಾಕಿದನು.॥17॥
ಮೂಲಮ್ - 18
ತತಶ್ಛಿನ್ನಭುಜಾಂ ಶ್ರಾಂತಾಮಭ್ಯಾಶೇ ಪರಿಗರ್ಜತೀಮ್ ।
ಸೌಮಿತ್ರಿರಕರೋತ್ ಕ್ರೋಧಾದ್ಧೃತಕರ್ಣಾಗ್ರನಾಸಿಕಾಮ್ ॥
ಅನುವಾದ
ಎರಡು ಭುಜಗಳು ತುಂಡಾದ್ದರಿಂದ ಬಳಲಿದ ತಾಟಕೆಯು ಅವರ ಬಳಿ ನಿಂತು ಜೋರಾಗಿ ಗರ್ಜಿಸಿದಳು. ಇದನ್ನು ನೋಡಿ ಸುಮಿತ್ರಾಕುಮಾರ ಲಕ್ಷ್ಮಣನು ಕ್ರೋಧಗೊಂಡು ಆಕೆಯ ಕಿವಿ, ಮೂಗನ್ನು ಕತ್ತರಿಸಿ ಬಿಟ್ಟನು.॥18॥
ಮೂಲಮ್ - 19
ಕಾಮರೂಪಧರಾ ಸಾ ತು ಕೃತ್ವಾ ರೂಪಾಣ್ಯನೇಕಶಃ ।
ಅಂತರ್ಧಾನಂ ಗತಾ ಯಕ್ಷೀ ಮೋಹಯಂತೀ ಚ ಸ್ವಮಾಯಯಾ ॥
ಅನುವಾದ
ಆದರೆ ಆ ಯಕ್ಷಿಣಿಯು ಇಚ್ಛಾರೂಪಿಣಿಯಾಗಿದ್ದಳು. ಆದ್ದರಿಂದ ಅನೇಕ ಪ್ರಕಾರದ ರೂಪಗಳನ್ನು ಧರಿಸಿ ತನ್ನ ಮಾಯೆಯಿಂದ ಶ್ರೀರಾಮ-ಲಕ್ಷ್ಮಣರನ್ನು ಮರಳುಗೊಳಿಸುತ್ತಾ ಅದೃಶ್ಯಳಾದಳು.॥19॥
ಮೂಲಮ್ - 20
ಅಶ್ಮವರ್ಷಂ ವಿಮುಂಚಂತೀ ಭೈರವಂ ವಿಚಚಾರ ಸಾ ।
ತತಸ್ತಾವಶ್ಮವರ್ಷೇಣ ಕೀರ್ಯಮಾಣೌ ಸಮಂತತಃ ॥
ಮೂಲಮ್ - 21
ದೃಷ್ಟ್ವಾಗಾಧಿಸುತಃ ಶ್ರೀಮಾನಿದಂ ವಚನಮಬ್ರವೀತ್ ।
ಅಲಂ ತೇ ಘೃಣಯಾ ರಾಮ ಪಾಪೈಷಾ ದುಷ್ಟಚಾರಿಣೀ ॥
ಮೂಲಮ್ - 22½
ಯಜ್ಞವಿಘ್ನಕರೀ ಯಕ್ಷೀ ಪುರಾ ವರ್ಧೇತ ಮಾಯಯಾ ।
ವಧ್ಯತಾಂ ತಾವದೇವೈಷಾ ಪುರಾ ಸಂಧ್ಯಾ ಪ್ರವರ್ತತೇ ॥
ರಕ್ಷಾಂಸಿ ಸಂಧ್ಯಾಕಾಲೇ ತು ದುರ್ಧರ್ಷಾಣಿ ಭವಂತಿ ಹಿ ।
ಅನುವಾದ
ಈಗ ಅವಳು ಭಯಂಕರ ಕಲ್ಲುಗಳ ಮಳೆ ಸುರಿಸುತ್ತಾ ಆಕಾಶದಲ್ಲಿ ಸಂಚರಿಸತೊಡಗಿದಳು. ಶ್ರೀರಾಮ-ಲಕ್ಷ್ಮಣರ ಮೇಲೆ ಎಲ್ಲೆಡೆಗಳಿಂದ ಆಗುತ್ತಿದ್ದ ಶಿಲಾವೃಷ್ಟಿಯನ್ನು ನೋಡಿ ಗಾಧಿನಂದನ ವಿಶ್ವಾಮಿತ್ರರು ನುಡಿದರು - ಶ್ರೀರಾಮಾ! ಈಕೆಯ ಮೇಲೆ ನೀನು ದಯೆ ತೋರುವುದು ವ್ಯರ್ಥವಾಗಿದೆ. ಈಕೆ ಭಾರೀಪಾಪಿಣಿ, ದುರಾಚಾರಿಣಿಯಾಗಿದ್ದಾಳೆ. ಯಾವಾಗಲೂ ಯಜ್ಞದಲ್ಲಿ ವಿಘ್ನವನ್ನು ಮಾಡುತ್ತಿರುತ್ತಾಳೆ. ಇವಳು ತನ್ನ ಮಾಯೆಯಿಂದ ಪುನಃ ಪ್ರಬಲವಾಗುವ ಮೊದಲೇ ಕೊಂದು ಹಾಕು. ಈಗ ಸಂಧ್ಯಾಕಾಲ ಸಮೀಪಿಸುತ್ತಿದೆ. ಅದಕ್ಕೆ ಮೊದಲೇ ಕಾರ್ಯವಾಗಬೇಕು. ಏಕೆಂದರೆ, ಸಂಧ್ಯಾ ಸಮಯದಲ್ಲಿ ರಾಕ್ಷಸರು ದುರ್ಜಯರಾಗುತ್ತಾರೆ.॥20-22½॥
ಮೂಲಮ್ - 23½
ಇತ್ಯುಕ್ತಃ ಸ ತು ತಾಂ ಯಕ್ಷೀಮಶ್ಮವೃಷ್ಟ್ಯಾಭಿವರ್ಷೀಮ್ ॥
ದರ್ಶಯನ್ ಶಬ್ದವೇಧಿತ್ವಂ ತಾಂ ರುರೋಧ ಸ ಸಾಯಕೈಃ ।
ಅನುವಾದ
ವಿಶ್ವಾಮಿತ್ರರು ಹೀಗೆ ಹೇಳಿದಾಗ ಶ್ರೀರಾಮನು ಶಬ್ದವೇಧಿ ಬಾಣದ ಶಕ್ತಿಯನ್ನು ಪರಿಚಯಿಸುತ್ತಾ ಬಾಣವನ್ನು ಹೂಡಿ ಶಿಲಾವೃಷ್ಟಿ ಮಾಡುತ್ತಿದ್ದ ಆ ಯಕ್ಷಿಣಿಯನ್ನು ಎಲ್ಲ ಕಡೆಯಿಂದಲೂ ಬಂಧಿಸಿಟ್ಟನು.॥23½॥
ಮೂಲಮ್ - 24
ಸಾ ರುದ್ಧಾ ಬಾಣಜಾಲೇನ ಮಾಯಾಬಲಸಮನ್ವಿತಾ ॥
ಅಭಿದುದ್ರಾವ ಕಾಕುತ್ಸ್ಥಂ ಲಕ್ಷ್ಮಣಂ ಚ ವಿನೇದುಷೀ ।
ಮೂಲಮ್ - 25½
ತಾಮಾಪತಂತೀಂ ವೇಗೇನ ವಿಕ್ರಾಂತಾಮಶನೀಮಿವ ॥
ಶರೇಣೋರಸಿ ವಿವ್ಯಾಧ ಸಾ ಪಪಾತ ಮಮಾರ ಚ ।
ಅನುವಾದ
ಅವನ ಬಾಣ ಸಮೂಹದಿಂದ ಸುತ್ತುವರಿದ ಮಾಯಾ ಬಲಯುಕ್ತ ಆ ಯಕ್ಷಿಣಿಯು ಜೊರಾಗಿ ಗರ್ಜಿಸುತ್ತಾ ಶ್ರೀರಾಮಲಕ್ಷ್ಮಣರ ಮೇಲೆ ಎರಗಿದಳು. ಇಂದ್ರನು ಪ್ರಯೋಗಿಸಿದ ವಜ್ರದಂತೆ ವೇಗವಾಗಿ ಬರುತ್ತಿದ್ದ ಆಕೆಯನ್ನು ನೋಡಿ ಶ್ರೀರಾಮನು ಒಂದು ಬಾಣದಿಂದ ಆಕೆಯ ಎದೆಯನ್ನು ಸೀಳಿಬಿಟ್ಟನು. ಆಗ ತಾಟಕಾ ಭೂಮಿಯ ಮೇಲೆ ಬಿದ್ದು ಸತ್ತುಹೋದಳು.॥24-25½॥
ಮೂಲಮ್ - 26½
ತಾಂ ಹತಾಂ ಭೀಮಸಂಕಾಶಾಂ ದೃಷ್ಟ್ವಾ ಸುರಪತಿಸ್ತದಾ ॥
ಸಾಧು ಸಾಧ್ವಿತಿ ಕಾಕುತ್ಸ್ಥಂ ಸುರಾಶ್ಚಾಪ್ಯಭಿಸಮಪೂಜಯನ್ ।
ಅನುವಾದ
ಆ ಭಯಂಕರ ರಾಕ್ಷಸಿಯು ಸತ್ತುಹೋಗಿರುವುದನ್ನು ಕಂಡು ದೇವೇಂದ್ರಾದಿ ದೇವತೆಗಳು ಶ್ರೀರಾಮನಿಗೆ ಧನ್ಯವಾದಗಳನ್ನು ಕೊಡುತ್ತಾ ಅವನನ್ನು ಹೊಗಳಿದರು.॥26½॥
ಮೂಲಮ್ - 27½
ಉವಾಚ ಪರಮಪ್ರೀತಃ ಸಹಸ್ರಾಕ್ಷಃ ಪುರಂದರಃ ॥
ಸುರಾಶ್ಚ ಸರ್ವೇ ಸಂಹೃಷ್ಟಾ ವಿಶ್ವಾಮಿತ್ರಮಥಾಬ್ರುವನ್ ।
ಅನುವಾದ
ಆಗ ಸಹಸ್ರಾಕ್ಷ ಇಂದ್ರನು ಹಾಗೂ ಸಮಸ್ತ ದೇವತೆಗಳು ಅತ್ಯಂತ ಪ್ರಸನ್ನರಾಗಿ ಹರ್ಷೋತ್ಫುಲ್ಲರಾಗಿ ವಿಶ್ವಾಮಿತ್ರರಲ್ಲಿ ನುಡಿದರು.॥27½॥
ಮೂಲಮ್ - 28½
ಮುನೇ ಕೌಶಿಕ ಭದ್ರಂ ತೇ ಸೇಂದ್ರಾಃ ಸರ್ವೇ ಮರುದ್ಗಣಾಃ ॥
ತೋಷಿತಾಃ ಕರ್ಮಣಾನೇನ ಸ್ನೇಹಂ ದರ್ಶಯ ರಾಘವೇ ।
ಅನುವಾದ
ಕುಶಿಕನಂದನ! ಮುನಿಯೇ! ನಿಮಗೆ ಮಂಗಳವಾಗಲಿ, ತಮ್ಮ ಈ ಕಾರ್ಯದಿಂದ ಇಂದ್ರಾದಿ ಸಮಸ್ತ ದೇವತೆಗಳಾದ ನಾವು ಸಂತುಷ್ಟಗೊಂಡಿರುವೆವು. ಈಗ ರಘುಕುಲ ತಿಲಕ ಶ್ರೀರಾಮನ ಮೇಲೆ ಸ್ನೇಹ ತೋರಿರಿ.॥28॥
ಮೂಲಮ್ - 29½
ಪ್ರಜಾಪತೇಃ ಕೃಶಾಶ್ವಸ್ಯ ಪುತ್ರಾನ್ ಸತ್ಯಪರಾಕ್ರಮಾನ್ ॥
ತಪೋಬಲಭೃತೋ ಬ್ರಹ್ಮನ್ ರಾಘವಾಯ ನಿವೇದಯ ।
ಅನುವಾದ
ಬ್ರಾಹ್ಮಣೋತ್ತಮನೇ! ಸತ್ಯಪರಾಕ್ರಮಿಗಳಾದ ಹಾಗೂ ತಪೋಬಲದಿಂದ ಕೂಡಿದ ಪ್ರಜಾಪತಿ ಕೃಶಾಶ್ವನ ಅಸ್ತ್ರರೂಪ ಧಾರೀ ಪುತ್ರರನ್ನು ಶ್ರೀರಾಮನಿಗೆ ಸಮರ್ಪಿಸಿರಿ.॥29½॥
ಮೂಲಮ್ - 30½
ಪಾತ್ರಭೂತಶ್ಚ ತೇ ಬ್ರಹ್ಮಂಸ್ತವಾನುಗಮನೇ ರತಃ ॥
ಕರ್ತವ್ಯಂ ಸುಮಹತ್ಕರ್ಮ ಸುರಾಣಾಂ ರಾಜಸೂನುನಾ ।
ಅನುವಾದ
ವಿಪ್ರವರ! ಇವರು ನಿನ್ನ ಅಸ್ತ್ರದಾನಕ್ಕೆ ಸುಯೋಗ್ಯ ಪಾತ್ರರಾಗಿದ್ದಾರೆ. ನಿಮ್ಮನ್ನು ಅನುಸರಿಸುವುದರಲ್ಲಿ (ಸೇವಾ-ಸುಶ್ರೂಷೆಯಲ್ಲಿ) ತತ್ಪರರಾಗಿರುತ್ತಾರೆ. ರಾಜಕುಮಾರ ಶ್ರೀರಾಮನಿಂದ ದೇವತೆಗಳ ಮಹಾಕಾರ್ಯವು ನೆರವೇರುವುದಿದೆ.॥30½॥
ಮೂಲಮ್ - 31½
ಏವಮುಕ್ತ್ವಾಸುರಾಃ ಸರ್ವೇ ಜಗ್ಮುರ್ಹೃಷ್ಟಾ ವಿಹಾಯಸಮ್ ॥
ವಿಶ್ವಾಮಿತ್ರಂ ಪೂಜಯಂತಸ್ತತಃ ಸಂಧ್ಯಾ ಪ್ರವರ್ತತೇ ।
ಅನುವಾದ
ಹೀಗೆ ಹೇಳಿ ಸಮಸ್ತ ದೇವತೆಗಳು ವಿಶ್ವಾಮಿತ್ರರನ್ನು ಪ್ರಶಂಸಿಸುತ್ತಾ ಸಂತೋಷವಾಗಿ ಆಕಾಶಮಾರ್ಗದಿಂದ ಹೊರಟು ಹೋದರು. ಬಳಿಕ ಸಂಧ್ಯಾಕಾಲವಾಯಿತು.॥31½॥
ಮೂಲಮ್ - 32½
ತತೋ ಮುನಿವರಃ ಪ್ರೀತಸ್ತಾಟಕಾವಧತೋಷಿತಃ ॥
ಮೂರ್ಧ್ನಿ ರಾಮಮುಪಾಘ್ರಾಯ ಇದಂ ವಚನಮಬ್ರವೀತ್ ।
ಅನುವಾದ
ಅನಂತರ ತಾಟಕಾವಧೆಯಿಂದ ಸಂತುಷ್ಟರಾದ ಮುನಿವರ ವಿಶ್ವಾಮಿತ್ರರು ಶ್ರೀರಾಮಚಂದ್ರನ ಮಸ್ತಕವನ್ನು ಆಘ್ರಾಣಿಸಿ ಅವನಲ್ಲಿ ಇಂತೆಂದರು.॥32½॥
ಮೂಲಮ್ - 33½
ಇಹಾದ್ಯ ರಜನೀಂ ರಾಮ ವಸಾಮ ಶುಭದರ್ಶನ ॥
ಶ್ವಃ ಪ್ರಭಾತೇ ಗಮಿಷ್ಯಾಮಸ್ತದಾಶ್ರಮಪದಂ ಮಮ
ಅನುವಾದ
ಶುಭದರ್ಶನ ರಾಮಾ! ಇಂದಿನ ಇರುಳನ್ನು ಇಲ್ಲೇ ಕಳೆಯುವಾ. ನಾಳೆ ಬೆಳಗ್ಗೆ ನಮ್ಮ ಆಶ್ರಮಕ್ಕೆ ಹೋಗೋಣ.॥33½॥
ಮೂಲಮ್ - 34½
ವಿಶ್ವಾಮಿತ್ರವಚಃ ಶ್ರುತ್ವಾ ಹೃಷ್ಟೋ ದಶರಥಾತ್ಮಜಃ ॥
ಉವಾಸ ರಜನೀಂ ತತ್ರ ತಾಟಕಾಯಾ ವನೇ ಸುಖಮ್ ।
ಅನುವಾದ
ವಿಶ್ವಾಮಿತ್ರರ ಮಾತನ್ನು ಕೇಳಿದ ದಶರಥನಂದನ ಶ್ರೀರಾಮನು ಸಂತಸಗೊಂಡನು. ಅವರು ತಾಟಕಾವನದಲ್ಲೇ ಇದ್ದು ಆ ರಾತ್ರಿಯನ್ನು ತುಂಬಾ ಸುಖವಾಗಿ ಕಳೆದರು.॥34½॥
ಮೂಲಮ್ - 35
ಮುಕ್ತಶಾಪಂ ವನಂ ತಚ್ಚ ತಸ್ಮಿನ್ನೇವ ತದಾಹನಿ ।
ರಮಣೀಯಂ ವಿಬಭ್ರಾಜ ಯಥಾಚೈತ್ರರಥಂ ವನಮ್ ॥
ಅನುವಾದ
ಅದೇ ದಿನ ಆ ವನವು ಶಾಪಮುಕ್ತವಾಗಿ ರಮಣೀಯ ಶೋಭೆಯಿಂದ ಸಂಪನ್ನನಾಗಿ, ಚೈತ್ರರಥ ವನದಂತೆ ಕಂಗೊಳಿಸಿತು.॥35॥
ಮೂಲಮ್ - 36
ನಿಹತ್ಯ ತಾಂ ಯಕ್ಷಸುತಾಂ ಸ ರಾಮಃ
ಪ್ರಶಸ್ಯಮಾನಃ ಸುರಸಿದ್ಧಸಂಘೈಃ ।
ಉವಾಸ ತಸ್ಮಿನ್ಮುನಿನಾ ಸಹೈವ
ಪ್ರಭಾತವೇಲಾಂ ಪ್ರತಿಬೋಧ್ಯಮಾನಃ ॥
ಅನುವಾದ
ಯಕ್ಷಕನ್ಯೆ ತಾಟಕೆಯನ್ನು ವಧಿಸಿ ಶ್ರೀರಾಮಚಂದ್ರನು ದೇವತೆಗಳ ಹಾಗೂ ಸಿದ್ಧ ಸಮೂಹದ ಪ್ರಶಂಸೆಗೆ ಪಾತ್ರನಾದನು. ಅವನು ಪ್ರಾತಃಕಾಲವನ್ನು ನಿರೀಕ್ಷಿಸುತ್ತಾ ವಿಶ್ವಾಮಿತ್ರರೊಂದಿಗೆ ತಾಟಕಾವನದಲ್ಲಿ ನಿವಾಸ ಮಾಡಿದನು.॥36॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಇಪ್ಪತ್ತಾರನೆಯ ಸರ್ಗ ಪೂರ್ಣವಾಯಿತು. ॥26॥