०२५ ताटकावधप्रेरणा

वाचनम्
ಭಾಗಸೂಚನಾ

ರಾಮನು ಕೇಳಿದಾಗ ವಿಶ್ವಾಮಿತ್ರರು ತಾಟಕಾ - ಮಾರೀಚರ ಜನ್ಮ ವೃತ್ತಾಂತ ತಿಳಿಸಿದುದು ಹಾಗೂ ತಾಟಕಿಯ ವಧೆಗೆ ಪ್ರೇರಿತಗೊಳಿಸುವುದು

ಮೂಲಮ್ - 1

ಅಥ ತಸ್ಯಾಪ್ರಮೇಯಸ್ಯ ಮುನೇರ್ವಚನಮುತ್ತಮಮ್ ।
ಶ್ರುತ್ವಾ ಪುರುಷಶಾರ್ದೂಲಃ ಪ್ರತ್ಯುವಾಚ ಶುಭಾಂ ಗಿರಮ್ ॥

ಅನುವಾದ

ಅಪ್ರಮೇಯರಾದ ವಿಶ್ವಾಮಿತ್ರ ಮಹರ್ಷಿಗಳ ಮಾತನ್ನು ಕೇಳಿ ನರಪುಂಗವನಾದ ಶ್ರೀರಾಮನು ಮಹರ್ಷಿಗಳಲ್ಲಿ ಈ ಶುಭದಾಯಕವಾದ ಮಾತನ್ನು ಕೇಳಿದನು.॥1॥

ಮೂಲಮ್ - 2

ಅಲ್ಪವೀರ್ಯಾ ಯದಾ ಯಕ್ಷೀ ಶ್ರೂಯತೇ ಮುನಿಪುಂಗವ ।
ಕಥಂ ನಾಗಸಹಸ್ರಸ್ಯ ಧಾರಯತ್ಯಬಲಾ ಬಲಮ್ ॥

ಅನುವಾದ

ಮುನಿಶ್ರೇಷ್ಠರೇ! ಈ ಯಕ್ಷಿಣಿಯು ಓರ್ವ ಅಬಲೆ ಎಂದು ಹೇಳಲಾಗುತ್ತದೆ, ಆಗ ಅವಳ ಶಕ್ತಿಯು ಸ್ವಲ್ಪವೇ ಆಗಿರಬೇಕಲ್ಲ! ಹಾಗಿರುವಾಗ ಅವಳು ಒಂದು ಸಾವಿರ ಆನೆಗಳ ಬಲವನ್ನು ಹೇಗೆ ಪಡೆದಳು.॥2॥

ಮೂಲಮ್ - 3

ಇತ್ಯುಕ್ತಂ ವಚನಂ ಶ್ರುತ್ವಾ ರಾಘವಸ್ಯಾಮಿತೌಜಸಃ ।
ಹರ್ಷಯನ್ ಶ್ಲಕ್ಷ್ಣಯಾ ವಾಚಾ ಸಲಕ್ಷ್ಮಣಮರಿಂದಮಮ್ ॥

ಮೂಲಮ್ - 4

ವಿಶ್ವಾಮಿತ್ರೋಽಬ್ರವೀದ್ವಾಕ್ಯಂ ಶೃಣು ಯೇನ ಬಲೋತ್ಕಟಾ ।
ವರದಾನಕೃತಂ ವೀರ್ಯಂ ಧಾರಯತ್ಯಬಲಾ ಬಲಮ್ ॥

ಅನುವಾದ

ಅಮಿತ ತೇಜಸ್ವೀ ಶ್ರೀ ರಘುನಾಥನು ಹೇಳಿದ ಮಾತನ್ನು ಕೇಳಿ ವಿಶ್ವಾಮಿತ್ರರು ಮಧುರ ವಾಣಿಯಿಂದ ಲಕ್ಷ್ಮಣ ಸಹಿತ ಶತ್ರುದಮನ ಶ್ರೀರಾಮನಿಗೆ ಹರ್ಷವನ್ನುಂಟು ಮಾಡುತ್ತಾ ನುಡಿದರು - ರಘುನಂದನ! ತಾಟಕೆಯು ಇಷ್ಟು ಬಲಶಾಲಿ ಹೇಗಾದಳು ಅದನ್ನು ಹೇಳುತ್ತೇನೆ ಕೇಳು. ಆಕೆಯಲ್ಲಿ ವರಬಲದಿಂದ ಇಂತಹ ಬಲವಿದೆ. ಆದ್ದರಿಂದ ಆಕೆಯು ಅಬಲೆಯಾಗಿದ್ದರೂ ಸಬಲಳಾಗಿದ್ದಾಳೆ.॥3-4॥

ಮೂಲಮ್ - 5

ಪೂರ್ವಮಾಸೀನ್ಮಹಾಯಕ್ಷಃ ಸುಕೇತುರ್ನಾಮ ವೀರ್ಯವಾನ್ ।
ಅನಪತ್ಯಃ ಶುಭಾಚಾರಃ ಸ ಚ ತೇಪೇ ಮಹತ್ತಪಃ ॥

ಅನುವಾದ

ಹಿಂದಿನ ಕಾಲದಲ್ಲಿ ಸುಕೇತು ಎಂಬ ಪ್ರಸಿದ್ಧ ಮಹಾ ಯಕ್ಷನೊಬ್ಬನು ಇದ್ದನು. ಅವನು ಬಹಳ ಪರಾಕ್ರಮಿ ಮತ್ತು ಸದಾಚಾರಿಯಾಗಿದ್ದನು. ಆದರೆ ಅವನಿಗೆ ಸಂತಾನ ಇರಲಿಲ್ಲ. ಅದಕ್ಕಾಗಿ ಅವನು ಭಾರೀ ತಪಸ್ಸುಮಾಡಿದನು.॥5॥

ಮೂಲಮ್ - 6

ಪಿತಾಮಹಸ್ತು ಸುಪ್ರೀತಸ್ತಸ್ಯ ಯಕ್ಷಪತೇಸ್ತದಾ ।
ಕನ್ಯಾರತ್ನಂ ದದೌ ರಾಮ ತಾಟಕಾಂ ನಾಮ ನಾಮತಃ ॥

ಅನುವಾದ

ಶ್ರೀರಾಮಾ! ಯಕ್ಷರಾಜ ಸುಕೇತುವಿನ ತಪಸ್ಸಿಗೆ ಬ್ರಹ್ಮದೇವರು ಒಲಿದು, ಆ ಸುಕೇತುವಿಗೆ ಒಂದು ಕನ್ಯಾರತ್ನವನ್ನು ಕರುಣಿಸಿದನು. ಆಕೆಯ ಹೆಸರು ತಾಟಕಾ ಎಂದಿತ್ತು.॥6॥

ಮೂಲಮ್ - 7

ದದೌ ನಾಗಸಹಸ್ರಸ್ಯ ಬಲಂ ಚಾಸ್ಯಾಃ ಪಿತಾಮಹಃ ।
ನ ತ್ವೇವ ಪುತ್ರಂ ಯಕ್ಷಾಯ ದದೌ ಚಾಸೌ ಮಹಾಯಶಾಃ ॥

ಅನುವಾದ

ಬ್ರಹ್ಮದೇವರು ಆಕೆಗೆ ಒಂದು ಸಾವಿರ ಆನೆಗಳ ಬಲವನ್ನು ಕೊಟ್ಟರು. ಆದರೆ ಆ ಮಹಾಯಶಸ್ವೀ ಪಿತಾಮಹನು ಆ ಯಕ್ಷನಿಗೆ ಪುತ್ರನನ್ನು ಕೊಡಲಿಲ್ಲ. (ಪುತ್ರರಾದರೆ ಅವರಿಂದ ಜನತೆಯು ಪೀಡಿತವಾದೀತು ಎಂದು ಯೋಚಿಸಿ ಬ್ರಹ್ಮ ದೇವರು ಪುತ್ರನನ್ನು ಕರುಣಿಸಲಿಲ್ಲ).॥7॥

ಮೂಲಮ್ - 8

ತಾಂ ತು ಬಾಲಾಂ ವಿವರ್ಧಂತೀಂ ರೂಪಯೌವನಶಾಲಿನೀಮ್ ।
ಜುಂಭಪುತ್ರಾಯ ಸುಂದಾಯ ದದೌ ಭಾರ್ಯಾಂ ಯಶಸ್ವಿನೀಮ್ ॥

ಅನುವಾದ

ದಿನಕಳೆದಂತೆ ಆ ಯಕ್ಷಕನ್ಯೆಯು ಬೆಳೆದು ರೂಪ-ಯೌವನದಿಂದ ಸುಶೋಭಿತಳಾದಳು. ಆಗ ಆ ತರುಣಿಯನ್ನು ಸುಕೇತುವು ತನ್ನ ಯಶಸ್ವೀ ಪುತ್ರಿಯನ್ನು ಜಂಭಪುತ್ರ ಸುಂದನಿಗೆ ಮದುವೆ ಮಾಡಿಕೊಟ್ಟನು.॥8॥

ಮೂಲಮ್ - 9

ಕಸ್ಯಚಿತ್ತ್ವಥ ಕಾಲಸ್ಯ ಯಕ್ಷೀ ಪುತ್ರಂ ವ್ಯಜಾಯತ ।
ಮಾರೀಚಂ ನಾಮ ದುರ್ಧರ್ಷಂ ಯಃ ಶಾಪಾದ್ರಾಕ್ಷಸೋಽಭವತ್ ॥

ಅನುವಾದ

ಕೆಲ ಕಾಲಾಂತರದಲ್ಲಿ ಯಕ್ಷಿ ತಾಟಕೆಯು ಮಾರೀಚನೆಂಬ ಪ್ರಸಿದ್ಧ ದುರ್ಜಯ ಪುತ್ರನಿಗೆ ಜನ್ಮನೀಡಿದಳು. ಅವನು ಅಗಸ್ತ್ಯಮುನಿಯ ಶಾಪದಿಂದ ರಾಕ್ಷಸನಾದನು.॥9॥

ಮೂಲಮ್ - 10

ಸುಂದೇ ತು ನಿಹತೇ ರಾಮ ಸಾಗಸ್ತ್ಯಮೃಷಿಸತ್ತಮಮ್ ।
ತಾಟಕಾ ಸಹಪುತ್ರೇಣ ಪ್ರಧರ್ಷಯಿತುಮಿಚ್ಛತಿ ॥

ಅನುವಾದ

ಶ್ರೀರಾಮಾ! ಅಗಸ್ತ್ಯರು ಶಾಪವನ್ನು ಕೊಟ್ಟು ತಾಟಕಾಪತಿ ಸುಂದನನ್ನು ಕೊಂದುಹಾಕಿದರು. ಪತಿಯು ಸತ್ತುಹೋದಾಗ ತಾಟಕೆಯು ಪುತ್ರನೊಂದಿಗೆ ಹೋಗಿ ಮುನಿವರ್ಯ ಅಗಸ್ತ್ಯರನ್ನೇ ಕೊಲ್ಲಲು ಮುಂದಾದಳು.॥10॥

ಮೂಲಮ್ - 11½

ಭಕ್ಷ್ಯಾರ್ಥಂ ಜಾತಸಂರಂಭಾ ಗರ್ಜಂತೀ ಸಾಭ್ಯಧಾವತ ।
ಅಪತಂತೀಂ ತು ತಾಂ ದೃಷ್ಟ್ವಾ ಅಗಸ್ತ್ಯೋ ಭಗವಾನೃಷಿಃ ॥
ರಾಕ್ಷಸತ್ವಂ ಭಜಸ್ವೇತಿ ಮಾರೀಚಂ ವ್ಯಾಜಹಾರ ಸಃ ।

ಅನುವಾದ

ಅವಳು ಕುಪಿತಳಾಗಿ ಗರ್ಜಿಸುತ್ತಾ ಮುನಿಯನ್ನು ತಿಂದುಹಾಕಲು ಓಡಿದಳು. ಆಕೆಯು ಬರುತ್ತಿದ್ದನ್ನು ನೋಡಿ ಪೂಜ್ಯರಾದ ಅಗಸ್ತ್ಯ ಮುನಿಗಳು ಮಾರೀಚನಿಗೆ ‘ನೀನು ದೇವಯೋನಿ ರೂಪವನ್ನು ತ್ಯಜಿಸಿ ರಾಕ್ಷಸನಾಗು’ ಎಂದು ಶಪಿಸಿದರು.॥11½॥

ಮೂಲಮ್ - 12

ಅಗಸ್ತ್ಯಃ ಪರಮಾಮರ್ಷಸ್ತಾಟಕಾಮಪಿ ಶಪ್ತವಾನ್ ॥

ಮೂಲಮ್ - 13

ಪುರುಷಾದೀ ಮಹಾಯಕ್ಷೀ ವಿಕೃತಾ ವಿಕೃತಾನನಾ ।
ಇದಂ ರೂಪಂ ವಿಹಾಯಾಶು ದಾರುಣಂ ರೂಪಮಸ್ತು ತೇ ॥

ಅನುವಾದ

ಮತ್ತೆ ಕುಪಿತರಾದ ಋಷಿಗಳು ತಾಟಕೆಗೂ ‘‘ನೀನು ವಿಕರಾಳ ಮುಖವುಳ್ಳ ನರಭಕ್ಷಕಿ ರಾಕ್ಷಸಿಯಾಗು, ನೀನಾದರೋ ಮಹಾಯಕ್ಷಿಯಾಗಿರುವೆ, ಆದರೆ ಈ ನಿನ್ನ ರೂಪವನ್ನು ತ್ಯಜಿಸಿ ಭಯಂಕರ ರೂಪಿಣಿಯಾಗು’’ ಎಂದು ಶಾಪ ಕೊಟ್ಟರು.॥12-13॥

ಮೂಲಮ್ - 14

ಸೈಷಾ ಶಾಪಕೃತಾಮರ್ಷಾ ತಾಟಕಾ ಕ್ರೋಧಮೂರ್ಛಿತಾ ।
ದೇಶಮುತ್ಸಾದಯತ್ಯೇನಮಗಸ್ತ್ಯಾಚರಿತಂ ಶುಭಮ್ ॥

ಅನುವಾದ

ಹೀಗೆ ಶಾಪ ದೊರೆತಾಗ ತಾಟಕೆಯ ಕ್ರೊಧವು ಇನ್ನೂ ಹೆಚ್ಚಾಯಿತು. ಆಕೆಯ ಕ್ರೋಧದಿಂದ ಮೂರ್ಛಿತಳಾದಳು. ಆಗ ಅಗಸ್ತ್ಯರು ವಾಸಿಸುತ್ತಿದ್ದ ಸುಂದರ ದೇಶವನ್ನು ಮೂಲೋತ್ಪಾಟನೆ ಮಾಡತೊಡಗಿದಳು.॥14॥

ಮೂಲಮ್ - 15

ಏನಾಂ ರಾಘವ ದುರ್ವೃತ್ತಾಂ ಯಕ್ಷೀಂ ಪರಮದಾರುಣಾಮ್ ।
ಗೋಬ್ರಾಹ್ಮಣ ಹಿತಾರ್ಥಾಯ ಜಹಿ ದುಷ್ಟಪರಾಕ್ರಮಾಮ್ ॥

ಅನುವಾದ

ರಘುನಂದನಾ! ನೀನು ಗೋ ಮತ್ತು ಬ್ರಾಹ್ಮಣರ ಹಿತಕ್ಕಾಗಿ ದುಷ್ಟ ಪರಾಕ್ರಮವುಳ್ಳ ಈ ಪರಮ ಭಯಂಕರ ದುರಾಚಾರಿಣೀ ಯಕ್ಷಿಣಿಯನ್ನು ಸಂಹಾರ ಮಾಡು.॥15॥

ಮೂಲಮ್ - 16

ನಹ್ಯೇನಾಂ ಶಾಪಸಂಸ್ಪೃಷ್ಟಾಂ ಕಶ್ಚಿದುತ್ಸಹತೇ ಪುಮಾನ್ ।
ನಿಹಂತುಂ ತ್ರಿಷು ಲೋಕೇಷು ತ್ವಾಮೃತೇ ರಘುನಂದನ ॥

ಅನುವಾದ

ರಘುಕುಲವನ್ನು ಆನಂದಗೊಳಿಸುವ ರಾಮಾ! ಈ ಶಾಪಗ್ರಸ್ತ ತಾಟಕೆಯನ್ನು ಕೊಲ್ಲಲು ನೀನಲ್ಲದೆ ಮೂರು ಲೋಕಗಳಲ್ಲಿಯೂ ಸಮರ್ಥ ಪುರುಷನು ಯಾರೂ ಇಲ್ಲ.॥16॥

ಮೂಲಮ್ - 17

ನಹಿ ತೇ ಸ್ತ್ರೀವಧಕೃತೇ ಘೃಣಾ ಕಾರ್ಯಾ ನರೋತ್ತಮ ।
ಚಾತುರ್ವರ್ಣ್ಯಹಿತಾರ್ಥಂ ಹಿ ಕರ್ತವ್ಯಂ ರಾಜಸೂನುನಾ ॥

ಅನುವಾದ

ನರಶ್ರೇಷ್ಠನೇ! ನೀನು ಸ್ತ್ರೀಹತ್ಯೆಯ ವಿಚಾರ ಮಾಡಿ ಈಕೆಯ ಕುರಿತು ದಯೆ ತೋರಬೇಡ. ಒಬ್ಬ ರಾಜಪುತ್ರನಿಗೆ ನಾಲ್ಕು ವರ್ಣಗಳ ಹಿತಕ್ಕಾಗಿ ಸ್ತ್ರೀ ಹತ್ಯೆಯನ್ನು ಮಾಡಲು ಬಂದರೆ ಅದರಿಂದ ಹಿಂದೆಗೆಯಬಾರದು.॥17॥

ಮೂಲಮ್ - 18

ನೃಶಂಸಮನೃಶಂಸಂ ವಾ ಪ್ರಜಾರಕ್ಷಣಕಾರಣಾತ್ ।
ಪಾತಕಂ ವಾ ಸದೋಷಂ ವಾ ಕರ್ತವ್ಯಂ ರಕ್ಷತಾ ಸದಾ ॥

ಅನುವಾದ

ಪ್ರಜಾಪಾಲಕ ನರೇಶನು ಪ್ರಜೆಗಳ ರಕ್ಷಣೆಗಾಗಿ ಕ್ರೂರತಾಪೂರ್ಣ ಅಥವಾ ಕ್ರೂರತಾರಹಿತ, ಪಾಪಯುಕ್ತ ಅಥವಾ ದೋಷಯುಕ್ತ ಕರ್ಮವನ್ನು ಮಾಡಬೇಕಾಗುವುದು. ಇದನ್ನು ಅವನು ಸದಾ ಗಮನದಲ್ಲಿರಿಸಬೇಕು.॥18॥

ಮೂಲಮ್ - 19

ರಾಜ್ಯಭಾರನಿಯುಕ್ತಾನಾಮೇಷ ಧರ್ಮಃ ಸನಾತನಃ ।
ಅಧರ್ಮ್ಯಾಂ ಜಹಿ ಕಾಕುತ್ಸ್ಥ ಧರ್ಮೋ ಹ್ಯಸ್ಯಾಂ ನ ವಿದ್ಯತೇ ॥

ಅನುವಾದ

ರಾಜ್ಯಪಾಲನೆಯ ಭಾರ ಹೊತ್ತಿರುವವನಿಗೆ ಇದಾದರೋ ಸನಾತನ ಧರ್ಮವಾಗಿದೆ. ಕಾಕುತ್ಸ್ಥನೇ! ತಾಟಕೆ ಮಹಾಪಾಪಿನಿಯಾಗಿದ್ದಾಳೆ. ಆಕೆಯಲ್ಲಿ ಧರ್ಮವು ಲೇಶಮಾತ್ರವೂ ಇಲ್ಲ. ಆದ್ದರಿಂದ ಆಕೆಯನ್ನು ಕೊಂದುಹಾಕು.॥19॥

ಮೂಲಮ್ - 20

ಶ್ರೂಯತೇ ಹಿ ಪುರಾ ಶಕ್ರೋ ವಿರೋಚನಸುತಾಂ ನೃಪ ।
ಪೃಥಿವೀಂ ಹಂತುಮಿಚ್ಛಂತೀಂ ಮಂಥರಾಮಭ್ಯಸೂದಯತ್ ॥

ಅನುವಾದ

ನರೇಶ್ವರನೇ! ಹಿಂದಿನ ಕಾಲದಲ್ಲಿ ವಿರೋಚನನ ಪುತ್ರೀ ಮಂಥರೆಯು ಇಡೀ ಪೃಥ್ವಿಯನ್ನು ನಾಶಮಾಡಿಬಿಡಲು ಬಯಸುತ್ತಿದ್ದಳು. ಆಕೆಯ ವಿಚಾರವನ್ನು ತಿಳಿದ ಇಂದ್ರನು ಆಕೆಯನ್ನು ವಧಿಸಿಬಿಟ್ಟನು ಎಂದು ಕೇಳಿದ್ದೇವೆ.॥20॥

ಮೂಲಮ್ - 21

ವಿಷ್ಣುನಾ ಚ ಪುರಾ ರಾಮ ಭೃಗುಪತ್ನೀ ಪತಿವ್ರತಾ ।
ಅನಿಂದ್ರಂ ಲೋಕಮಿಚ್ಛಂತೀ ಕಾವ್ಯಮಾತಾ ನಿಷೂದಿತಾ ॥

ಅನುವಾದ

ಶ್ರೀರಾಮಾ! ಪ್ರಾಚೀನ ಕಾಲದಲ್ಲಿ ಶುಕ್ರಾಚಾರ್ಯರ ಮಾತೆ, ಭೃಗುವಿನ ಪತಿವ್ರತಾ ಪತ್ನಿಯು ತ್ರಿಭುವನವನ್ನು ಇಂದ್ರ ಶೂನ್ಯನಾಗಿಸಬೇಕೆಂದು ಬಯಸುತ್ತಿದ್ದಳು. ಇದನ್ನು ತಿಳಿದು ಭಗವಾನ್ ವಿಷ್ಣು ಆಕೆಯನ್ನು ಕೊಂದು ಹಾಕಿದನು.॥21॥

ಮೂಲಮ್ - 22

ಏತೈಶ್ಚಾನ್ಯೈಶ್ಚ ಬಹುಭೀ ರಾಜಪುತ್ರೈರ್ಮಹಾತ್ಮಭಿಃ ।
ಅಧರ್ಮಸಹಿತಾ ನಾರ್ಯೋ ಹತಾಃ ಪುರುಷಸತ್ತಮೈಃ
ತಸ್ಮಾದೇನಾಂ ಘೃಣಾಂ ತ್ಯಕ್ತ್ವಾ ಜಹಿ ಮಚ್ಛಾಸನಾನ್ನೃಪ ॥

ಅನುವಾದ

ಇವರು ಹಾಗೂ ಬೇರೆ ಅನೇಕ ಮಹಾತ್ಮಾ ಪುರುಷ ಪುಂಗವ ರಾಜಕುಮಾರರು ಪಾಪಚಾರಿಣಿಯರಾದ ಸ್ತ್ರೀಯರನ್ನು ವಧಿಸಿರುವವರು. ನರೇಶ್ವರನೇ! ಆದ್ದರಿಂದ ನೀನೂ ಕೂಡ ನನ್ನ ಅಪ್ಪಣೆಯಂತೆ ದಯೆ ಅಥವಾ ಕರುಣೆಯನ್ನು ತ್ಯಜಿಸಿ ಈ ರಾಕ್ಷಸಿಯನ್ನು ಕೊಂದುಹಾಕು.॥22॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಇಪ್ಪತ್ತೈದನೆಯ ಸರ್ಗ ಪೂರ್ಣವಾಯಿತು. ॥25॥