०२४ कामाश्रमदर्शनम्

वाचनम्
ಭಾಗಸೂಚನಾ

ಗಂಗೆಯನ್ನು ದಾಟುತ್ತಿದ್ದಾಗ ನೀರಿನಿಂದ ಹೊರಬರುತ್ತಿದ್ದ ಶಬ್ದದ ವಿಷಯವಾಗಿ ರಾಮ-ಲಕ್ಷ್ಮಣರ ಪ್ರಶ್ನೆ, ವಿಶ್ವಾಮಿತ್ರರಿಂದ ವಿವರಣೆ, ಮಲದ-ಕರೂಷ ಮತ್ತು ತಾಟಕಾವನಗಳ ಪರಿಚಯ ಮಾಡಿಕೊಡುತ್ತಾ ತಾಟಕಿಯನ್ನು ವಧಿಸಲು ಶ್ರೀರಾಮನಿಗೆ ಆಜ್ಞಾಪಿಸಿದುದು

ಮೂಲಮ್ - 1

ತತಃ ಪ್ರಭಾತೇ ವಿಮಲೇ ಕೃತಾಹ್ನಿಕಮರಿಂದಮೌ ।
ವಿಶ್ವಾಮಿತ್ರಂ ಪುರಸ್ಕೃತ್ಯ ನದ್ಯಾಸ್ತೀರಮುಪಾಗತೌ ॥

ಅನುವಾದ

ಸುಪ್ರಭಾತವಾದ ನಂತರ ನಿರ್ಮಲವಾದ ಗಂಗೆಯಲ್ಲಿ ನಿತ್ಯಾಹ್ನಿಕಗಳನ್ನು ಮುಗಿಸಿ, ವಿಶ್ವಾಮಿತ್ರ ಮಹರ್ಷಿಯನ್ನು ಮುಂದು ಮಾಡಿಕೊಂಡು ಶತ್ರುದಮನರಾದ ರಾಮ-ಲಕ್ಷ್ಮಣರು ಗಂಗಾನದಿಯನ್ನು ದಾಟುವಲ್ಲಿಗೆ ಬಂದರು.॥1॥

ಮೂಲಮ್ - 2

ತೇ ಚ ಸರ್ವೇ ಮಹಾತ್ಮಾನೋ ಮುನಯಃ ಸಂಶಿತವ್ರತಾಃ ।
ಉಪಸ್ಥಾಪ್ಯ ಶುಭಾಂ ನಾವಂ ವಿಶ್ವಾಮಿತ್ರಮಥಾಬ್ರುವನ್ ॥

ಅನುವಾದ

ಆಗ ಉತ್ತಮ ವ್ರತಗಳನ್ನು ಪಾಲಿಸುವ ಆ ಪುಣ್ಯಾಶ್ರಮದ ಮಹಾತ್ಮಮುನಿಗಳು ಒಂದು ಸುಂದರ ನಾವೆಯನ್ನು ತರಿಸಿ ವಿಶ್ವಾಮಿತ್ರರಲ್ಲಿ ಹೇಳಿದರು.॥2॥

ಮೂಲಮ್ - 3

ಆರೋಹತು ಭವಾನ್ನಾವಂ ರಾಜಪುತ್ರಪುರಸ್ಕೃತಃ ।
ಅರಿಷ್ಟಂ ಗಚ್ಛ ಪಂಥಾನಂ ಮಾ ಭೂತ್ಕಾಲಸ್ಯ ಪರ್ಯಯಃ ॥

ಅನುವಾದ

ಮಹರ್ಷಿಗಳೇ! ರಾಜಕುಮಾರರನ್ನು ಮುಂದುಮಾಡಿ ನೀವು ನಾವೆಯನ್ನು ಹತ್ತಿರಿ. ನಿರ್ವಿಘ್ನವಾಗಿ ಗಂಗೆಯನ್ನು ದಾಟಿ ಮುಂದಿನ ಮಾರ್ಗಕ್ರಮಣ ಮಾಡಿರಿ. ವಿಳಂಬವಾಗುವುದು ಬೇಡ.॥3॥

ಮೂಲಮ್ - 4

ವಿಶ್ವಾಮಿತ್ರಸ್ತಥೇತ್ಯುಕ್ತ್ವಾ ತಾನೃಷೀನ್ ಪ್ರತಿಪೂಜ್ಯ ಚ ।
ತತಾರ ಸಹಿತಸ್ತಾಭ್ಯಾಂ ಸರಿತಂ ಸಾಗರಂಗಮಾಮ್ ॥

ಅನುವಾದ

ವಿಶ್ವಾಮಿತ್ರರು ಹಾಗೆಯೇ ಆಗಲಿ, ಎಂದು ಹೇಳಿ ಆ ಮಹರ್ಷಿಗಳನ್ನು ಯಥೋಚಿತವಾಗಿ ಸತ್ಕರಿಸಿ, ರಾಮ-ಲಕ್ಷ್ಮಣರೊಂದಿಗೆ ಸಮುದ್ರಗಾಮಿನಿಯಾದ ಗಂಗಾನದಿಯನ್ನು ದಾಟಲನುವಾದರು.॥4॥

ಮೂಲಮ್ - 5½

ತತಃ ಶುಶ್ರಾವ ವೈ ಶಬ್ದಂ ತೋಯಸಂರಂಭವರ್ಧಿತಮ್ ।
ಮಧ್ಯಮಾಗಮ್ಯ ತೋಯಸ್ಯ ತಸ್ಯ ಶಬ್ದಸ್ಯ ನಿಶ್ಚಯಮ್ ॥
ಜ್ಞಾತು ಕಾಮೋ ಮಹಾತೇಜಾಃ ಸಹ ರಾಮಃ ಕನೀಯಸಾ ।

ಅನುವಾದ

ನಾವೆಯು ನದಿಯ ನಡುಭಾಗಕ್ಕೆ ಬಂದಾಗ ಅಲೆಗಳ ಹೊಡೆತದಿಂದ ನದಿಯ ಭೋರ್ಗರೆಯುವ ಶಬ್ದವು ಕೇಳುತ್ತಿತ್ತು. ಇದರ ಕಾರಣವನ್ನು ತಿಳಿಯಬೇಕೆಂಬ ಕುತೂಹಲ ರಾಮ-ಲಕ್ಷ್ಮಣರಿಬ್ಬರಿಗೂ ಉಂಟಾಯಿತು.॥5½॥

ಮೂಲಮ್ - 6½

ಅಥ ರಾಮಃ ಸರಿನ್ಮಧ್ಯೇ ಪ್ರಪಚ್ಛ ಮುನಿಪುಂಗವಮ್ ॥
ವಾರಿಣೋ ಭಿದ್ಯಮಾನಸ್ಯ ಕಿಮಯಂ ತುಮುಲೋ ಧ್ವನಿಃ ।

ಅನುವಾದ

ಆಗ ಶ್ರೀರಾಮನು ನದಿಯ ಮಧ್ಯಭಾಗದಲ್ಲೇ ಮುನಿವರ ವಿಶ್ವಾಮಿತ್ರರಲ್ಲಿ ಶ್ರೀರಾಮನು ಅಲೆಗಳ ಪರಸ್ಪರ ಹೊಡೆತದಿಂದ ಇಲ್ಲಿ ಇಂತಹ ತುಮುಲ ಧ್ವನಿ ಏಕೆ ಉಂಟಾಗುತ್ತಿದೆ? ಎಂದು ಕೇಳಿದನು.॥6½॥

ಮೂಲಮ್ - 7½

ರಾಘವಸ್ಯ ವಚಃ ಶ್ರುತ್ವಾ ಕೌತೂಹಲ ಸಮನ್ವಿತಮ್ ॥
ಕಥಯಾಮಾಸ ಧರ್ಮಾತ್ಮಾ ತಸ್ಯ ಶಬ್ದಸ್ಯ ನಿಶ್ಚಯಮ್ ।

ಅನುವಾದ

ಶ್ರೀರಾಮನ ಮಾತಿನಲ್ಲಿ ಇದನ್ನು ತಿಳಿಯುವ ಉತ್ಕಂಠತೆ ಇತ್ತು. ಅದನ್ನು ಕೇಳಿ ಧರ್ಮಾತ್ಮಾ ವಿಶ್ವಾಮಿತ್ರರು ಆ ಮಹಾಶಬ್ದದ ನಿಶ್ಚಿತ ಕಾರಣವನ್ನು ತಿಳಿಸುತ್ತಾ ಹೇಳಿದರು.॥7½॥

ಮೂಲಮ್ - 8½

ಕೈಲಾಸಪರ್ವತೇ ರಾಮ ಮನಸಾ ನಿರ್ಮಿತಂ ಪರಮ್ ॥
ಬ್ರಹ್ಮಣಾ ನರಶಾರ್ದೂಲ ತೇನೇದಂ ಮಾನಸಂ ಸರಃ ।

ಅನುವಾದ

ನರಶ್ರೇಷ್ಠ ರಾಮನೇ! ಕೈಲಾಸ ಪರ್ವತದಲ್ಲಿ ಒಂದು ಸುಂದರ ಪರ್ವತವಿದೆ. ಬ್ರಹ್ಮದೇವರು ಅದನ್ನು ಮಾನಸಿಕ ಸಂಕಲ್ಪದಿಂದ ಪ್ರಕಟಪಡಿಸಿದ್ದನು. ಮನಸ್ಸಿನಿಂದ ಉಂಟಾದ್ದರಿಂದಲೇ ಅದನ್ನು ಉತ್ತಮ ಮಾನಸ ಸರೋವರ ಎಂದು ಹೇಳುತ್ತಾರೆ.॥8½॥

ಮೂಲಮ್ - 9½

ತಸ್ಮಾತ್ಸುಸ್ರಾವ ಸರಸಃ ಸಾಯೋಧ್ಯಾಮುಪಗೂಹತೇ ॥
ಸರಃ ಪ್ರವೃತ್ತಾ ಸರಯೂಃ ಪುಣ್ಯಾ ಬ್ರಹ್ಮಸರಶ್ಚ್ಯುತಾ ।

ಅನುವಾದ

ಆ ಸರೋವರದಿಂದ ಒಂದು ನದಿ ಹೊರಟು ಅಯೋಧ್ಯಾಪುರಿಯನ್ನು ಸುತ್ತುವರಿದು ಹರಿಯುತ್ತಿದೆ. ಬ್ರಹ್ಮ ಸರಸ್ಸಿನಿಂದ ಹೊರಟ ಕಾರಣ ಅದು ಪವಿತ್ರ ಸರಯೂ ನದಿ ಎಂದು ವಿಖ್ಯಾತವಾಗಿದೆ.॥9½॥

ಮೂಲಮ್ - 10½

ತಸ್ಯಾಯಮತುಲಃ ಶಬ್ದೋ ಜಾಹ್ನವೀಮಭಿವರ್ತತೇ ॥
ವಾರಿಸಂಕ್ಷೋಭಜೋ ರಾಮ ಪ್ರಣಾಮಂ ನಿಯತಃ ಕುರು ।

ಅನುವಾದ

ಅದರ ಜಲವು ಗಂಗೆಯಲ್ಲಿ ಸೇರುತ್ತದೆ. ಎರಡು ನದಿಗಳ ಸಂಘರ್ಷದಿಂದ ಈ ತುಮುಲ ಶಬ್ದ ಕೇಳುತ್ತದೆ. ರಾಮಾ! ನಿಯತ ಮನಸ್ಕನಾಗಿ ಈ ಸಂಗಮ ಜಲವನ್ನು ನಮಸ್ಕರಿಸು.॥10½॥

ಮೂಲಮ್ - 11½

ತಾಭ್ಯಾಂ ತು ತಾವುಭೌ ಕೃತ್ವಾ ಪ್ರಣಾಮಮತಿಧಾರ್ಮಿಕೌ ॥
ತೀರಂ ದಕ್ಷಿಣಮಾಸಾದ್ಯ ಜಗ್ಮತುರ್ಲಘುವಿಕ್ರವೌ ।

ಅನುವಾದ

ಇದನ್ನು ಕೇಳಿ ಅತ್ಯಂತ ಧರ್ಮಾತ್ಮರಾದ ಆ ಇಬ್ಬರು ಸಹೋದರರೂ ನದಿಗಳಿಗೆ ವಂದಿಸಿದರು. ಗಂಗೆಯ ದಕ್ಷಿಣ ತೀರದಲ್ಲಿ ಅವರು ಇಳಿದು ವಿಶ್ವಾಮಿತ್ರರೊಂದಿಗೆ ಶೀಘ್ರವಾಗಿ ನಡೆಯತೊಡಗಿದರು.॥11½॥

ಮೂಲಮ್ - 12½

ಸ ವನಂ ಘೋರಸಂಕಾಶಂ ದೃಷ್ಟ್ವಾನರವರಾತ್ಮಜಃ ॥
ಅವಿಪ್ರಹತಮೈಕ್ಷ್ವಾಕಃ ಪಪ್ರಚ್ಛ ಮುನಿಪುಂಗವಮ್ ।

ಅನುವಾದ

ಆಗ ಇಕ್ಷ್ವಾಕುನಂದನ ರಾಜಕುಮಾರ ಶ್ರೀರಾಮನು ತನ್ನ ಮುಂದೆ ಇರುವ ನಿರ್ಜನವಾದ ಒಂದು ವನವನ್ನು ನೋಡಿ ವಿಶ್ವಾಮಿತ್ರರಲ್ಲಿ ಕೇಳಿದನು.॥12½॥

ಮೂಲಮ್ - 13

ಅಹೋ ವನಮಿದಂ ದುರ್ಗಂ ಝಿಲ್ಲಿಕಾಗಣಸಂಯುತಮ್ ॥

ಮೂಲಮ್ - 14

ಭೈರವೈಃ ಶ್ವಾಪದೈಃ ಕೀರ್ಣಂ ಶಕುಂತೈರ್ದಾರುಣಾರವೈಃ ।
ನಾನಾ ಪ್ರಕಾರೈಃ ಶಕುನೈರ್ವಾಶ್ಯದ್ಛಿರ್ಭೈರವಸ್ವನೈಃ ॥

ಅನುವಾದ

ಗುರುದೇವ! ಈ ವನವಾದರೋ ಬಹಳ ಅದ್ಭುತ ಹಾಗೂ ದುರ್ಗಮವಾಗಿದೆ. ಜೀರುಂಡೆಗಳ ನಾದದಿಂದ ನಾಲ್ಕು ದಿಕ್ಕುಗಳು ತುಂಬಿಹೋಗಿದೆ. ಭಯಾನಕ ಕ್ರೂರ ಮೃಗಗಳಿಂದ ತುಂಬಿ ನಿಬಿಡವಾಗಿದೆ. ಭಯಂಕರ ಧ್ವನಿ ಮಾಡುವ ಪಕ್ಷಿಗಳು ಎಲ್ಲೆಡೆ ತುಂಬಿಕೊಂಡಿವೆ. ನಾನಾ ರೀತಿಯ ವಿಹಂಗಮಗಳು ಭೀಷಣಸ್ವರದಿಂದ ಕೂಗುತ್ತಿರುವವು.॥13-14॥

ಮೂಲಮ್ - 15½

ಸಿಂಹವ್ಯಾಘ್ರವರಾಹೈಶ್ಚ ವಾರಣೈಶ್ಚಾಪಿ ಶೋಭಿತಮ್ ।
ಧವಾಶ್ವಕರ್ಣಕಕುಭೈರ್ಬಿಲ್ವತಿಂದುಕಪಾಟಲೈಃ ॥
ಸಂಕೀರ್ಣಂ ಬದರೀಭಿಶ್ಚ ಕಿಂ ನ್ವಿದಂ ದಾರುಣಂ ವನಮ್ ।

ಅನುವಾದ

ಸಿಂಹ, ವ್ಯಾಘ್ರ, ವರಾಹ, ಗಜಾದಿ ಪ್ರಾಣಿಗಳಿಂದ ಈ ವನವು ಶೋಭಿಸುತ್ತಿದೆ. ಧವ, ಅಶ್ವಕರ್ಣ, ಕಕುಭ, ಬಿಲ್ವ ತಿಂದುಕ, ಪಾಟಲ, ಬದರಿ ವೃಕ್ಷಗಳಿಂದ ನಿಬಿಡವಾಗಿರುವ ದಾರುಣವಾದ ಈ ವನವು ಯಾವುದು? ಇದರ ಹೆಸರೇನು.॥15½॥

ಮೂಲಮ್ - 16½

ತಮುವಾಚ ಮಹಾತೇಜಾ ವಿಶ್ವಾಮಿತ್ರೋ ಮಹಾಮುನಿಃ ॥
ಶ್ರೂಯತಾಂ ವತ್ಸ ಕಾಕುತ್ಸ್ಥ ಯಸ್ಯೈತದ್ದಾರುಣಂ ವನಮ್ ।

ಅನುವಾದ

ಹೀಗೆ ಪ್ರಶ್ನಿಸಿದ ರಾಮನಿಗೆ ಮಹಾತೇಜಸ್ವಿಗಳಾದ ವಿಶ್ವಾಮಿತ್ರರು ಹೇಳಿದರು-ವತ್ಸ, ಕಕುಸ್ಥನಂದನ! ಈ ಮಹಾರಣ್ಯವು ಯಾವುದೆಂಬುದನ್ನು ಹೇಳುವೆನು ಕೇಳು.॥16½॥

ಮೂಲಮ್ - 17½

ಏತೌ ಜನಪದೌ ಸ್ಫೀತೌ ಪೂರ್ವಮಾಸ್ತಾಂ ನರೋತ್ತಮ ॥
ಮಲದಾಶ್ಚ ಕರೂಶಾಶ್ಚ ದೇವನಿರ್ಮಾಣ ನಿರ್ಮಿತೌ ।

ಅನುವಾದ

ನರಶ್ರೇಷ್ಠ! ಹಿಂದೆ ಇಲ್ಲಿ ಮಲದ ಮತ್ತು ಕರೂಷ ಎಂಬ ಎರಡು ಸಮೃದ್ಧಶಾಲಿ ದೇಶಗಳು ಇದ್ದವು. ಇವೆರಡೂ ದೇಶಗಳು ದೇವತೆಗಳ ಪ್ರಯತ್ನದಿಂದ ನಿರ್ಮಾಣಗೊಂಡಿದ್ದವು.॥17½॥

ಮೂಲಮ್ - 18½

ಪುರಾ ವೃತ್ರವಧೇರಾಮ ಮಲೇನ ಸಮಭಿಪ್ಲುತಮ್ ॥
ಕ್ಷುಧಾ ಚೈವ ಸಹಸ್ರಾಕ್ಷಂ ಬ್ರಹ್ಮಹತ್ಯಾ ಸಮಾವಿಶತ್ ।

ಅನುವಾದ

ರಾಮಾ! ಹಿಂದೆ ವೃತ್ರಾಸುರನ ವಧೆ ಮಾಡಿದ ಬಳಿಕ ದೇವೇಂದ್ರನು ಮಲದಿಂದ ಲಿಪ್ತನಾದನು. ಹಸಿವೂ ಕೂಡ ಬಾಧಿಸುತ್ತಿರುವಾಗ ಅವನೊಳಗೆ ಬ್ರಹ್ಮಹತ್ಯೆಯು ಪ್ರವೇಶಿಸಿತು.॥18½॥

ಮೂಲಮ್ - 19½

ತಮಿಂದ್ರಂ ಮಲಿನಂ ದೇವಾ ಋಷಯಶ್ಚ ತಪೋಧನಾಃ ॥
ಕಲಶೈಃ ಸ್ನಾಪಯಾಮಾಸುರ್ಮಲಂ ಚಾಸ್ಯ ಪ್ರಮೋಚಯನ್ ।

ಅನುವಾದ

ಆಗ ದೇವತೆಗಳು ಹಾಗೂ ತಪೋಧನರಾದ ಋಷಿಗಳು ಮಲಿನ ಇಂದ್ರನನ್ನು ಇಲ್ಲಿ ಗಂಗಾಜಲ ತುಂಬಿದ ಕಲಶಗಳಿಂದ ಅಭಿಷೇಕ ಮಾಡಿ ಅವನ ಮಲ (ಮತ್ತು ಕರೂಷ-ಹಸಿವು)ದಿಂದ ಬಿಡುಗಡೆಗೊಳಿಸಿದರು.॥19½॥

ಮೂಲಮ್ - 20½

ಇಹ ಭೂಮ್ಯಾಂ ಮಲಂ ದತ್ತ್ವಾ ದೇವಾಃ ಕಾರೂಷಮೇವ ಚ ॥
ಶರೀರಜಂ ಮಹೇಂದ್ರಸ್ಯ ತತೋ ಹರ್ಷಂ ಪ್ರಪೇದಿರೇ ।

ಅನುವಾದ

ಈ ಭೂಭಾಗದಲ್ಲಿ ದೇವೇಂದ್ರನ ಶರೀರದಿಂದ ಹೊರಟ ಮಲ ಮತ್ತು ಕರೂಷವನ್ನು ನೋಡಿ ದೇವತೆಗಳು ಹರ್ಷಿಸಿದರು.॥20½॥

ಮೂಲಮ್ - 21

ನಿರ್ಮಲೋ ನಿಷ್ಕರೂಷಶ್ಚ ಶುದ್ಧ ಇಂದ್ರೋ ಯಥಾಭವತ್ ॥

ಮೂಲಮ್ - 22½

ತತೋ ದೇಶಸ್ಯ ಸುಪ್ರೀತೋ ವರಂ ಪ್ರಾದಾದನುತ್ತಮಮ್ ।
ಇಮೌ ಜನಪದೌ ಸ್ಫೀತೌ ಖ್ಯಾತಿಂ ಲೋಕೇ ಗಮಿಷ್ಯತಃ ॥
ಮಲದಾಶ್ಚ ಕರೂಶಾಶ್ಚ ಮಮಾಂಗಮಲಧಾರಿಣೌ ।

ಅನುವಾದ

ಇಂದ್ರನು ಹಿಂದಿನಂತೆ ನಿರ್ಮಲ, ನಿಷ್ಕರೂಪ (ಕ್ಷುಧಾರಹಿತ)ನಾಗಿ ಶುದ್ಧನಾದನು. ಆಗ ಅವನು ಪ್ರಸನ್ನನಾಗಿ ಈ ದೇಶಕ್ಕೆ ಉತ್ತಮ ವರವನ್ನು ಕೊಟ್ಟನು. ಇವೆರಡು ದೇಶಗಳೂ ಲೋಕದಲ್ಲಿ ಮಲದ-ಕರೂಷ ಎಂದು ವಿಖ್ಯಾತವಾಗಲಿ. ನನ್ನ ಅಂಗದ ಮಲವನ್ನು ಧರಿಸಿದ್ದರಿಂದ ಇವೆರಡು ದೇಶಗಳೂ ಸಮೃದ್ಧಿಶಾಲಿಗಳಾಗುವುವು.॥21-22½॥

ಮೂಲಮ್ - 23½

ಸಾಧು ಸಾಧ್ವಿತಿ ತಂದೇವಾಃ ಪಾಕಶಾಸನಮಬ್ರುವನ್ ॥
ದೇಶಸ್ಯ ಪೂಜಾಂ ತಾಂ ದೃಷ್ಟ್ವಾ ಕೃತಾಂ ಶಕ್ರೇಣ ಧೀಮತಾ ।

ಅನುವಾದ

ಬುದ್ಧಿವಂತ ಇಂದ್ರನು ಮಾಡಿದ ಆ ದೇಶದ ಪ್ರಶಂಸೆಯನ್ನು ನೋಡಿ ದೇವತೆಗಳು ಪಾಕಶಾಸನನಿಗೆ ಪದೇ ಪದೇ ಧನ್ಯವಾದಗಳನ್ನು ಅರ್ಪಿಸಿದರು.॥23½॥

ಮೂಲಮ್ - 24½

ಏತೌ ಜನಪದೌ ಸ್ಫೀತೌ ದೀರ್ಘಕಾಲಮರಿಂದಮ ॥
ಮಲದಾಶ್ಚ ಕರೂಶಾಶ್ಚ ಮುದಿತಾ ಧನಧಾನ್ಯತಃ ।

ಅನುವಾದ

ಶತ್ರುದಮನ! ಮಲದ ಮತ್ತು ಕರೂಷ ಇವೆರಡೂ ದೇಶಗಳು ದೀರ್ಘ ಕಾಲದವರೆಗೆ ಸಮೃದ್ಧಿಶಾಲಿಯಾಗಿ ಧನ-ಧಾನ್ಯಗಳಿಂದ ತುಂಬಿ ಸುಖವಾಗಿದ್ದವು.॥24½॥

ಮೂಲಮ್ - 25½

ಕಸ್ಯಚಿತ್ತ್ವಥ ಕಾಲಸ್ಯ ಯಕ್ಷಿಣೀ ಕಾಮರೂಪಿಣೀ ॥
ಬಲಂ ನಾಗಸಹಸ್ರಸ್ಯ ಧಾರಯಂತೀ ತದಾ ಹ್ಯಭೂತ್ ।

ಅನುವಾದ

ಕೆಲ ಕಾಲಾಂತರದಲ್ಲಿ ಇಲ್ಲಿಗೆ ಇಚ್ಛಾನುಸಾರ ರೂಪಧರಿಸುವ ಓರ್ವ ಯಕ್ಷಿಣಿಯು ಬಂದಳು. ಆಕೆಯ ಶರೀರದಲ್ಲಿ ಒಂದು ಸಾವಿರ ಆನೆಗಳ ಬಲವಿತ್ತು.॥25½॥

ಮೂಲಮ್ - 26

ತಾಟಕಾ ನಾಮ ಭದ್ರಂ ತೇ ಭಾರ್ಯಾ ಸುಂದಸ್ಯಧೀಮತಃ ॥

ಮೂಲಮ್ - 27

ಮಾರೀಚೋ ರಾಕ್ಷಸಃಪುತ್ರೋ ಯಸ್ಯಾಃ ಶಕ್ರಪರಾಕ್ರಮಃ ।
ವೃತ್ತಬಾಹುರ್ಮಹಾಶೀರ್ಷೋ ವಿಪುಲಾಸ್ಯತನುರ್ಮಹಾನ್ ॥

ಅನುವಾದ

ಆಕೆಯು ಬುದ್ಧಿವಂತ ಸುಂದನೆಂಬ ದೈತ್ಯನ ಪತ್ನಿಯಾಗಿದ್ದು, ಆಕೆಯ ಹೆಸರು ತಾಟಕಾ ಎಂದಿತ್ತು. ಇಂದ್ರನಂತೆ ಪರಾಕ್ರಮಿ ಮಾರೀಚ ಎಂಬ ರಾಕ್ಷಸನು ತಾಟಕೆಯ ಪುತ್ರನಾಗಿದ್ದನು. ಅವನ ಭುಜಗಳು ದುಂಡಾಗಿದ್ದು ತಲೆಯು ಬಹಳ ದೊಡ್ಡದಾಗಿತ್ತು. ಅಗಲವಾದ ಬಾಯಿ ಹಾಗೂ ಶರೀರ ವಿಶಾಲವಾಗಿತ್ತು.॥26-27॥

ಮೂಲಮ್ - 28½

ರಾಕ್ಷಸೋ ಭೈರವಾಕಾರೋ ನಿತ್ಯಂ ತ್ರಾಸಯತೇ ಪ್ರಜಾಃ ।
ಇಮೌ ಜನಪದೌ ನಿತ್ಯಂ ವಿನಾಶಯತಿ ರಾಘವ ॥
ಮಲದಾಂಶ್ಚ ಕರೂಷಾಂಶ್ಚ ತಾಟಕಾ ದುಷ್ಟಚಾರಿಣೀ ।

ಅನುವಾದ

ಆ ಭಯಾನಕ ರಾಕ್ಷಸನು ಇಲ್ಲಿಯ ಪ್ರಜೆಗಳನ್ನು ಸದಾ ಪೀಡಿಸುತ್ತಿದ್ದನು. ರಘುನಂದನ! ಆ ದುರಾಚರಿಣೀ ತಾಟಕೆಯೂ ಯಾವಾಗಲೂ ಮಲದ ಮತ್ತು ಕರೂಷ ಇವೆರಡೂ ದೇಶಗಳನ್ನು ವಿನಾಶ ಮಾಡುತ್ತಾ ಇದ್ದಳು.॥28½॥

ಮೂಲಮ್ - 29

ಸೇಯಂ ಪಂಥಾನಮಾವೃತ್ಯ ವಸತ್ಯತ್ಯರ್ಧಯೋಜನೇ ॥

ಮೂಲಮ್ - 30

ಅತ ಏವ ಚ ಗಂತವ್ಯಂತಾಟಕಾಯಾ ವನಂ ಯತಃ ।
ಸ್ವಬಾಹುಬಲಮಾಶ್ರಿತ್ಯ ಜಹೀಮಾಂ ದುಷ್ಟಚಾರಿಣೀಮ್ ॥

ಅನುವಾದ

ಈ ಯಕ್ಷಿಣಿಯು ಒಂದೂವರೆ ಯೋಜನಗಳವೆರೆಗಿನ ಮಾರ್ಗವನ್ನು ಅತಿಕ್ರಮಿಸಿ ಈ ವನದಲ್ಲಿ ಇರುವಳು. ಆದರೂ ನಾವು ನಮ್ಮ ಆಶ್ರಮಕ್ಕೆ ಈ ತಾಟಕಾವನದ ಮೂಲಕವೇ ಹೋಗಬೇಕಾಗಿದೆ. ನೀನು ನಿನ್ನ ಬಾಹುಬಲವನ್ನು ಆಶ್ರಯಿಸಿ ಈ ದುರಾಚಾರಿಣಿಯನ್ನು ಕೊಂದುಹಾಕು.॥29-30॥

ಮೂಲಮ್ - 31

ಮನ್ನಿಯೋಗಾದಿಮಂ ದೇಶಂ ಕುರು ನಿಷ್ಕಂಟಕಂ ಪುನಃ ।
ನ ಹಿ ಕಶ್ಚಿದಿಮಂ ದೇಶಂ ಶಕ್ತೋ ಹ್ಯಾಗಂತುಮೀದೃಶಮ್ ॥

ಅನುವಾದ

ನನ್ನ ಆಜ್ಞೆಯಿಂದ ಈ ದೇಶವನ್ನು ಪುನಃ ನಿಷ್ಕಂಟವಾಗಿಸು. ಈ ದೇಶವು ಹೀಗೆ ರಮಣೀಯವಾಗಿದ್ದರೂ ಈಗ ಯಾರೂ ಇಲ್ಲಿಗೆ ಬರಲಾರರು.॥31॥

ಮೂಲಮ್ - 32

ಯಕ್ಷಿಣ್ಯಾ ಘೋರಯಾ ರಾಮ ಉತ್ಸಾದಿತಮಸಹ್ಯಯಾ ।
ಏತತ್ತೇ ಸರ್ವಮಾಖ್ಯಾತಂ ಯಥೈತದ್ದಾರುಣಂ ವನಮ್ ।।
ಯಕ್ಷ್ಯಾ ಚೋತ್ಸಾದಿತಂ ಸರ್ವಮದ್ಯಾಪಿ ನ ನಿವರ್ತತೇ ॥

ಅನುವಾದ

ರಾಮಾ! ಆ ಅಸಹ್ಯ ಭಯಾನಕ ಯಕ್ಷಿಣಿಯು ಈ ದೇಶವನ್ನು ಹಾಳುಗೆಡಹಿದ್ದಾಳೆ. ಈ ವನವು ಇಷ್ಟು ಭಯಂಕರ ಏಕಿದೆ? ಇದರ ಎಲ್ಲ ರಹಸ್ಯವನ್ನು ನಾನು ನಿನಗೆ ತಿಳಿಸಿರುವೆನು. ಆ ಯಕ್ಷಿಣಿಯೇ ಈ ಇಡೀ ದೇಶವನ್ನು ಕೆಡಿಸಿರುವಳು ಹಾಗೂ ಆಕೆಯು ಇಂದೂ ಕೂಡ ತನ್ನ ಕ್ರೂರ ಕರ್ಮವನ್ನು ಮಾಡುತ್ತಲೇ ಇರುವಳು.॥32॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಇಪ್ಪತ್ತನಾಲ್ಕನೆಯ ಸರ್ಗ ಪೂರ್ಣವಾಯಿತು. ॥24॥