०२३ बलातिबलप्राप्तिः

वाचनम्
ಭಾಗಸೂಚನಾ

ವಿಶ್ವಾಮಿತ್ರರ ಸಹಿತ ರಾಮ-ಲಕ್ಷ್ಮರು ಸರಯೂ-ಗಂಗಾನದಿಗಳ ಸಂಗಮದ ಸಮೀಪದಲ್ಲಿದ್ದ ಆಶ್ರಮದಲ್ಲಿ ರಾತ್ರಿ ತಂಗಿದುದು

ಮೂಲಮ್ - 1

ಪ್ರಭಾತಾಯಾಂ ತು ಶರ್ವರ್ಯಾಂ ವಿಶ್ವಾಮಿತ್ರೋ ಮಹಾಮುನಿಃ ।
ಅಭ್ಯಭಾಷತ ಕಾಕುತ್ಸ್ಥೌ ಶಯಾನೌ ಪರ್ಣಸಂಸ್ತರೇ ॥

ಅನುವಾದ

ರಾತ್ರಿ ಕಳೆದು ಸುಪ್ರಭಾತವಾದಾಗ ಮಹಾಮುನಿ ವಿಶ್ವಾಮಿತ್ರರು ಹುಲ್ಲು ತರಗೆಲೆಗಳ ಹಾಸಿಗೆಯಲ್ಲಿ ಮಲಗಿದ್ದ ರಾಮ-ಲಕ್ಷ್ಮಣರಲ್ಲಿ ಇಂತೆಂದರು.॥1॥

ಮೂಲಮ್ - 2

ಕೌಸಲ್ಯಾಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ ।
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ॥

ಅನುವಾದ

ನರಶ್ರೇಷ್ಠ ಶ್ರೀರಾಮಾ! ನಿನ್ನಿಂದಾಗಿ ಕೌಸಲ್ಯೆಯು ಸುಪುತ್ರವತಿಯಾದಳು. ಮಗು! ನೋಡು ಪ್ರಾತಃ ಸಂಧ್ಯೆಯು ಉದಯಿಸಿದೆ. ದೈವಸಂಬಂಧವಾದ ಆಹ್ನಿಕವನ್ನು ಮಾಡಬೇಕಾಗಿದೆ. ರಾಮಾ! ಹಾಸಿಗೆಯಿಂದ ಮೇಲೇಳು.॥2॥

ಮೂಲಮ್ - 3

ತಸ್ಯರ್ಷೇಃ ಪರಮೋದಾರಂ ವಚಃ ಶ್ರುತ್ವಾ ನರೋತ್ತಮೌ ।
ಸ್ನಾತ್ವಾ ಕೃತೋದಕೌ ವೀರೌ ಜೇಪತುಃ ಪರಮಂ ಜಪಮ್ ॥

ಅನುವಾದ

ಮಹರ್ಷಿಯ ಈ ಪರಮೋದಾರ ಮಾತನ್ನು ಕೇಳಿ ನರಶ್ರೇಷ್ಠರಾದ ವೀರರಿಬ್ಬರೂ ಸ್ನಾನಮಾಡಿ ಕುಲದೇವತೆಗೆ ಅರ್ಘ್ಯವನ್ನಿತ್ತು ಪರಮೋತ್ತಮ ಗಾಯತ್ರೀ ಮಂತ್ರವನ್ನು ಜಪಿಸತೊಡಗಿದರು.॥3॥

ಮೂಲಮ್ - 4

ಕೃತಾಹ್ನಿಕೌ ಮಹಾವೀರ್ಯೌ ವಿಶ್ವಾಮಿತ್ರಂ ತಪೋಧನಮ್ ।
ಅಭಿವಾದ್ಯಾತಿಸಂಹೃಷ್ಟೌ ಗಮನಾಯಾಭಿತಸ್ಥತುಃ ॥

ಅನುವಾದ

ನಿತ್ಯಾಹ್ನಿಕವನ್ನು ಮುಗಿಸಿ ಮಹಾಪರಾಕ್ರಮಿ ಶ್ರೀರಾಮ-ಲಕ್ಷ್ಮಣರು ಅತ್ಯಂತ ಪ್ರಸನ್ನರಾಗಿ ತಪೋಧನ ವಿಶ್ವಾಮಿತ್ರರಿಗೆ ಅಭಿವಾದನ ಮಾಡಿ ಮುಂದಿನ ಪ್ರಯಾಣಕ್ಕೆ ಸಿದ್ಧರಾದರು.॥4॥

ಮೂಲಮ್ - 5

ತೌ ಪ್ರಯಾಂತೌ ಮಹಾವೀರ್ಯೌ ದಿವ್ಯಾಂ ತ್ರಿಪಥಗಾಂ ನದೀಮ್ ।
ದದೃಶಾತೇ ತತಸ್ತತ್ರ ಸರಯ್ವಾಃ ಸಂಗಮೇ ಶುಭೇ ॥

ಅನುವಾದ

ದಾರಿ ನಡೆಯುತ್ತಾ ಆ ಮಹಾಬಲಿ ರಾಜಕುಮಾರರು ಗಂಗಾ ಸರಯೂ ಶುಭ ಸಂಗಮಕ್ಕೆ ತಲುಪಿ, ಅಲ್ಲಿ ದಿವ್ಯ ತ್ರಿಪಥಗೆ ದೇವನದೀ ಗಂಗೆಯನ್ನು ದರ್ಶಿಸಿದರು.॥5॥

ಮೂಲಮ್ - 6

ತತ್ರಾಶ್ರಮಪದಂ ಪುಣ್ಯಮೃಷೀಣಾಂ ಭಾವಿತಾತ್ಮನಾಮ್ ।
ಬಹುವರ್ಷಸಹಸ್ರಾಣಿ ತಪ್ಯತಾಂ ಪರಮಂ ತಪಃ ॥

ಅನುವಾದ

ಸಂಗಮದ ಬಳಿಯಲ್ಲೇ ಶುದ್ಧಾಂತಃಕರಣವುಳ್ಳ ಮಹರ್ಷಿಗಳ ಒಂದು ಪವಿತ್ರ ಆಶ್ರಮವಿತ್ತು. ಅಲ್ಲಿ ಅವರು ಅನೇಕ ಸಾವಿರ ವರ್ಷಗಳಿಂದ ತೀವ್ರವಾದ ತಪಸ್ಸನ್ನಾಚರಿಸುತ್ತಿದ್ದರು.॥6॥

ಮೂಲಮ್ - 7

ತಂ ದೃಷ್ಟ್ವಾಪರಮಪ್ರೀತೌ ರಾಘವೌ ಪುಣ್ಯಮಾಶ್ರಮಮ್ ।
ಊಚತುಸ್ತಂ ಮಹಾತ್ಮಾನಂ ವಿಶ್ವಾಮಿತ್ರಮಿದಂ ವಚಃ ॥

ಅನುವಾದ

ಆ ಪವಿತ್ರ ಆಶ್ರಮವನ್ನು ನೋಡಿ ರಘುಕುಲತಿಲಕ ಶ್ರೀರಾಮ ಲಕ್ಷ್ಮಣರು ಬಹಳ ಸಂತಸ ಹೊಂದಿದರು. ಅವರು ಮಹಾತ್ಮಾ ವಿಶ್ವಾಮಿತ್ರರಲ್ಲಿ ಇಂತೆಂದರು.॥7॥

ಮೂಲಮ್ - 8

ಕಸ್ಯಾಯಮಾಶ್ರಮಃ ಪುಣ್ಯಃ ಕೋ ನ್ವಸ್ಮಿನ್ವಸತೇ ಪುಮಾನ್ ।
ಭಗವನ್ ಶ್ರೋತುಮಿಚ್ಛಾವಃ ಪರಂ ಕೌತೂಹಲಂ ಹಿ ನೌ ॥

ಅನುವಾದ

ಪೂಜ್ಯರೇ! ಇದು ಯಾರ ಆಶ್ರಮವಾಗಿದೆ? ಇದರಲ್ಲಿ ಯಾರು ವಾಸಿಸುತ್ತಾರೆ? ಇದನ್ನು ನಾವಿಬ್ಬರೂ ಕೇಳಲು ಬಯಸುತ್ತಿರುವೆವು. ಇದರ ಕುರಿತು ನಮ್ಮ ಮನಸ್ಸಿನಲ್ಲಿ ಉತ್ಕಂಠತೆ ಉಂಟಾಗಿದೆ.॥8॥

ಮೂಲಮ್ - 9

ತಯೋಸ್ತದ್ವಚನಂ ಶ್ರುತ್ವಾ ಪ್ರಹಸ್ಯ ಮುನಿಪುಂಗವಃ ।
ಅಬ್ರವೀಚ್ಛ್ರೂಯತಾಂ ರಾಮ ಯಸ್ಯಾಯಂ ಪೂರ್ವ ಆಶ್ರಮಃ ॥

ಅನುವಾದ

ಅವರಿಬ್ಬರ ಮಾತನ್ನು ಕೇಳಿ ಮುನಿಶ್ರೇಷ್ಠ ವಿಶ್ವಾಮಿತ್ರರು ನಗುತ್ತಾ - ‘ರಾಮಾ! ಈ ಆಶ್ರಮವು ಯಾರ ಅಧೀನದಲ್ಲಿತ್ತು’ ಇದರ ಪರಿಚಯ ಕೇಳಿರಿ ಹೇಳುತ್ತೇನೆ.॥9॥

ಮೂಲಮ್ - 10

ಕಂದರ್ಪೋ ಮೂರ್ತಿಮಾನಾಸೀತ್ ಕಾಮ ಇತ್ಯುಚ್ಯತೇ ಬುಧೈಃ ।
ತಪಸ್ಯಂತಮಿಹ ಸ್ಥಾಣುಂ ನಿಯಮೇನ ಸಮಾಹಿತಮ್ ॥

ಅನುವಾದ

ವಿದ್ವಾಂಸರು ಕಾಮವೆಂದು ಹೇಳುವ ಕಂದರ್ಪನು ಹಿಂದೆ ಸಶರೀರಿಯಾಗಿ ವಿಹರಿಸುತ್ತಿದ್ದನು. ಆಗ ಭಗವಾನ್ ಸ್ಥಾಣು (ಶಿವನು) ಇದೇ ಆಶ್ರಮದಲ್ಲಿ ಏಕಾಗ್ರಚಿತ್ತನಾಗಿ ತಪಸ್ಸನ್ನಾಚರಿಸುತ್ತಿದ್ದನು.॥10॥

ಮೂಲಮ್ - 11

ಕೃತೋದ್ವಾಹಂ ತು ದೇವೇಶಂ ಗಚ್ಛನ್ತಂ ಸಮರುದ್ಗಣಮ್ ।
ಧರ್ಷಯಾಮಾಸ ದುರ್ಮೇಧಾ ಹುಂಕೃತಶ್ಚ ಮಹಾತ್ಮನಾ ॥

ಅನುವಾದ

ಒಂದು ದಿನ ಸಮಾಧಿಯಿಂದ ಎದ್ದ ದೇವೇಶ್ವರ ಶಿವನು ಮರುದ್ಗಣಗಳೊಂದಿಗೆ ಎಲ್ಲೊ ಹೋಗುತ್ತಿದ್ದನು. ಆಗಲೇ ದುರ್ಬುದ್ಧಿಯಾದ ಕಾಮನು ಅವನ ಮೇಲೆ ಆಕ್ರಮಣ ಮಾಡಿದನು. ಇದನ್ನು ನೋಡಿದ ಶಿವನು ಹುಂಕಾರದಿಂದ ಅವನನ್ನು ತಡೆದನು.॥11॥

ಮೂಲಮ್ - 12

ಅವಧ್ಯಾತಶ್ಚ ರುದ್ರೇಣ ಚಕ್ಷುಷಾ ರಘುನಂದನಃ ।
ವ್ಯಶೀರ್ಯಂತ ಶರೀರಾತ್ ಸ್ವಾತ್ ಸರ್ವಗಾತ್ರಾಣಿ ದುರ್ಮತೇ ॥

ಅನುವಾದ

ರಘುನಂದನ! ಭಗವಾನ್ ರುದ್ರನು ರೋಷ ತುಂಬಿದ ದೃಷ್ಟಿಯಿಂದ ತಿರಸ್ಕಾರಪೂರ್ವಕ ಅವನ ಕಡೆ ನೋಡಿದನು, ಮತ್ತೆ ಆ ದುರ್ಬುದ್ಧಿಯ ಶರೀರವು ಶಿವನ ನೇತ್ರಾಗ್ನಿಯಿಂದ ಸುಟ್ಟುಹೋಯಿತು.॥12॥

ಮೂಲಮ್ - 13

ತತ್ರ ಗಾತ್ರಂ ಹತಂ ತಸ್ಯ ನಿರ್ದಗ್ಧಸ್ಯ ಮಹಾತ್ಮನಃ ।
ಅಶರೀರಃ ಕೃತಃ ಕಾಮಃ ಕ್ರೋಧಾದ್ದೇವೇಶ್ವರೇಣ ಹ ॥

ಅನುವಾದ

ಅಲ್ಲಿ ದಗ್ಧನಾದ ಮನಸ್ವೀ ಕಂದರ್ಪನ ಶರೀರ ನಾಶವಾಯಿತು. ದೇವೇಶ್ವರ ರುದ್ರನು ತನ್ನ ಕ್ರೋಧದಿಂದ ಕಾಮನನ್ನು ಅಂಗಹೀನನನ್ನಾಗಿಸಿದನು.॥13॥

ಮೂಲಮ್ - 14

ಅನಂಗ ಇತಿ ವಿಖ್ಯಾತಸ್ತದಾಪ್ರಭೃತಿ ರಾಘವ ।
ಸ ಚಾಂಗವಿಷಯಃ ಶ್ರೀಮಾನ್ಯತ್ರಾಂಗಂ ಸಮುಮೋಚ ಹ ॥

ಅನುವಾದ

ರಾಮ! ಅಂದಿನಿಂದ ಅವನು ಅನಂಗನೆಂದು ವಿಖ್ಯಾತನಾದನು. ಶೋಭಾಮಯ ಕಂದರ್ಪನು ತನ್ನ ಅಂಗವನ್ನು ಬಿಟ್ಟ ಪ್ರದೇಶವು ಅಂಗದೇಶವೆಂದು ವಿಖ್ಯಾತವಾಯಿತು.॥14॥

ಮೂಲಮ್ - 15

ತಸ್ಯಾಯಮಾಶ್ರಮಃ ಪುಣ್ಯಸ್ತಸ್ಯೇಮೇ ಮುನಯಃ ಪುರಾ ।
ಶಿಷ್ಯಾ ಧರ್ಮಪರಾ ವೀರ ತೇಷಾಂ ಪಾಪಂ ನ ವಿದ್ಯತೇ ॥

ಅನುವಾದ

ಇಲ್ಲಿ ಅದೇ ಮಹಾದೇವನ ಪುಣ್ಯ ಆಶ್ರಮವಿದೆ. ವೀರನೇ! ಈ ಮುನಿಗಳು ಆ ಸ್ಥಾಣು ಮಹಾದೇವನ ಧರ್ಮಪರಾಯಣ ಶಿಷ್ಯರಾಗಿದ್ದರು. ಇವರ ಪಾಪವೆಲ್ಲ ನಾಶವಾಗಿ ಹೋಗಿದೆ.॥15॥

ಮೂಲಮ್ - 16

ಇಹಾದ್ಯ ರಜನೀಂ ರಾಮ ವಸೇಮ ಶುಭದರ್ಶನ ।
ಪುಣ್ಯಯೋಃ ಸರಿತೋರ್ಮಧ್ಯೇ ಶ್ವಸ್ತರಿಷ್ಯಾಮಹೇ ವಯಮ್ ॥

ಅನುವಾದ

ಶುಭದರ್ಶನ ರಾಮ! ಇಂದಿನ ರಾತ್ರಿಯಲ್ಲಿ ನಾವು ಈ ಪುಣ್ಯ ಸಲಿಲ-ಸರಿತೆಗಳ ನಡುವೆ ವಾಸಿಸೋಣ. ನಾಳೆ ಬೆಳಗ್ಗೆ ಇದನ್ನು ದಾಟಿ ಮುಂದೆ ಪಯಣಿಸುವಾ.॥16॥

ಮೂಲಮ್ - 17½

ಅಭಿಗಚ್ಛಾಮಹೇ ಸರ್ವೇ ಶುಚಯಃ ಪುಣ್ಯಮಾಶ್ರಮಮ್ ।
ಇಹ ವಾಸಃ ಪರೋಽಸ್ಮಾಕಂ ಸುಖಂ ವತ್ಸ್ಯಾಮಹೇ ನಿಶಾಮ್ ॥
ಸ್ನಾತಾಶ್ಚ ಕೃತಜಪ್ಯಾಶ್ಚ ಹುತಹವ್ಯಾ ನರೋತ್ತಮ ।

ಅನುವಾದ

ಈಗ ನಾವೆಲ್ಲರೂ ಪವಿತ್ರರಾಗಿ ಈ ಪುಣ್ಯಾಶ್ರಮಕ್ಕೆ ಹೋಗೋಣ. ಇಲ್ಲಿ ಇರುವುದು ನಮಗೆ ಬಹಳ ಒಳ್ಳೆಯದಾಗಬಹುದು. ನರಶ್ರೇಷ್ಠನೇ! ಇಲ್ಲಿ ಸ್ನಾನ ಮಾಡಿ ಜಪ ಮತ್ತು ಸಾಯಂ ಅಗ್ನಿಕಾರ್ಯ ಮುಗಿಸಿ ಬಳಿಕ ರಾತ್ರಿ ಸುಖವಾಗಿ ನಿದ್ರಿಸೋಣ.॥17½॥

ಮೂಲಮ್ - 18½

ತೇಷಾಂ ಸಂವದತಾಂ ತತ್ರ ತಪೋದೀರ್ಘೇಣ ಚಕ್ಷುಷಾ ॥
ವಿಜ್ಞಾಯ ಪರಮಪ್ರೀತಾ ಮುನಯೋ ಹರ್ಷಮಾಗಮನ್ ।

ಅನುವಾದ

ಇವರು ಹೀಗೆ ಪರಸ್ಪರ ಮಾತನಾಡುತ್ತಿದ್ದಾಗ ಆ ಆಶ್ರಮವಾಸಿಗಳಾದ ಮುನಿಗಳು ತಪಸ್ಸಿನಿಂದ ಗಳಿಸಿದ ದೂರದೃಷ್ಟಿಯಿಂದ ಇವರ ಆಗಮನವನ್ನು ತಿಳಿದು ಮನಸ್ಸಿನಲ್ಲಿ ಹರ್ಷಿತರಾದರು.॥18½॥

ಮೂಲಮ್ - 19½

ಅರ್ಘ್ಯಂ ಪಾದ್ಯಂ ತಥಾಽಽತಿಥ್ಯಂ ನಿವೇದ್ಯ ಕುಶಿಕಾತ್ಮಜೇ ॥
ರಾಮಲಕ್ಷ್ಮಣಯೋಃ ಪಶ್ಚಾದಕುರ್ವನ್ನತಿಥಿಕ್ರಿಯಾಮ್ ।

ಅನುವಾದ

ಅವರು ವಿಶ್ವಾಮಿತ್ರರಿಗೆ ಅರ್ಘ್ಯ, ಪಾದ್ಯಾದಿ ಅತಿಥಿ ಸತ್ಕಾರವನ್ನು ಅರ್ಪಿಸಿದ ಬಳಿಕ ರಾಮ-ಲಕ್ಷ್ಮಣರಿಗೂ ಆತಿಥ್ಯ ನೀಡಿದರು.॥19½॥

ಮೂಲಮ್ - 20½

ಸತ್ಕಾರಂ ಸಮನುಪ್ರಾಪ್ಯ ಕಥಾಭಿರಭಿರಂಜಯನ್ ॥
ಯಥಾರ್ಹಮಜಪನ್ ಸಂಧ್ಯಾಮೃಷಯಸ್ತೇ ಸಮಾಹಿತಾಃ ।

ಅನುವಾದ

ಯಥೋಚಿತ ಸತ್ಕಾರ ಮಾಡಿ ಆ ಮುನಿಗಳು ಈ ಅತಿಥಿಗಳಿಗೆ ಬಗೆ-ಬಗೆಯ ಕಥೆಗಳನ್ನು ಹೇಳಿ ಮನೋರಂಜನೆ ಮಾಡಿದರು. ಮತ್ತೆ ಆ ಮಹರ್ಷಿಗಳು ಏಕಾಗ್ರಚಿತ್ತರಾಗಿ ಸಂಧ್ಯಾವಂದನೆ-ಜಪ-ಹೋಮ ಮಾಡಿದರು.॥20½॥

ಮೂಲಮ್ - 21½

ತತ್ರ ವಾಸಿಭಿರಾನೀತಾ ಮುನಿಭಿಃ ಸುವ್ರತೈಃ ಸಹ ॥
ನ್ಯವಸನ್ ಸುಸುಖಂ ತತ್ರ ಕಾಮಾಶ್ರಮಪದೇ ತಥಾ ।

ಅನುವಾದ

ಅನಂತರ ಅಲ್ಲಿರುವ ಮುನಿಗಳು ಉತ್ತಮ ವ್ರತಧಾರಿ ಮುನಿಗಳೊಂದಿಗೆ ವಿಶ್ವಾಮಿತ್ರಾದಿಗಳಿಗೆ ಶಯನಕ್ಕಾಗಿ ವ್ಯವಸ್ಥೆ ಮಾಡಿಕೊಟ್ಟರು. ಸಮಸ್ತ ಕಾಮನೆಗಳನ್ನು ಪೂರ್ತಿಗೊಳಿಸುವ ಆ ಪುಣ್ಯಾಶ್ರಮದಲ್ಲಿ ವಿಶ್ವಾಮಿತ್ರಾದಿಗಳು ಸುಖವಾಗಿ ಕಳೆದರು.॥21½॥

ಮೂಲಮ್ - 22

ಕಥಾಭಿರಭಿರಾಮಾಭಿರಭಿರಾಮೌ ನೃಪಾತ್ಮಜೌ ।
ರಮಯಾಮಾಸ ಧರ್ಮಾತ್ಮಾ ಕೌಶಿಕೋ ಮುನಿಪುಂಗವಃ ॥

ಅನುವಾದ

ಧರ್ಮಾತ್ಮಾ ಮುನಿಶ್ರೇಷ್ಠ ವಿಶ್ವಾಮಿತ್ರರು ಆ ಮನೋಹರ ರಾಜಕುಮಾರರಿಗೆ ಸುಂದರ ಕಥೆಗಳನ್ನು ಹೇಳುತ್ತಾ ಮನೋರಂಜನೆ ಮಾಡಿದರು.॥22॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಇಪ್ಪತ್ತಮೂರನೆಯ ಸರ್ಗ ಪೂರ್ಣವಾಯಿತು. ॥23॥