०२२ रामलक्ष्मणनिष्क्रमणम्

वाचनम्
ಭಾಗಸೂಚನಾ

ದಶರಥನು ರಾಮ - ಲಕ್ಷ್ಮಣರನ್ನು ವಿಶ್ವಾಮಿತ್ರರೊಂದಿಗೆ ಬೀಳ್ಕೊಟ್ಟಿದ್ದು, ಮಾರ್ಗದಲ್ಲಿ ರಾಮನಿಗೆ ಬಲಾ-ಅತಿಬಲಾ ಎಂಬ ವಿದ್ಯೆಗಳ ಉಪದೇಶ

ಮೂಲಮ್ - 1

ತಥಾ ವಸಿಷ್ಠೇ ಬ್ರುವತಿ ರಾಜಾ ದಶರಥಃ ಸ್ವಯಮ್ ।
ಪ್ರಹೃಷ್ಟವದನೋ ರಾಮಮಾಜುಹಾವ ಸಲಕ್ಷ್ಮಣಮ್ ॥

ಮೂಲಮ್ - 2

ಕೃತಸ್ವಸ್ತ್ಯಯನಂ ಮಾತ್ರಾ ಪಿತ್ರಾ ದಶರಥೇನ ಚ ।
ಪುರೋಧಸಾ ವಸಿಷ್ಠೇನ ಮಂಗಲೈರಭಿಮಂತ್ರಿತಮ್ ॥

ಅನುವಾದ

ವಸಿಷ್ಠರು ಹೀಗೆ ಹೇಳಿದಾಗ ದಶರಥನ ಮುಖ ಪ್ರಸನ್ನತೆಯಿಂದ ಅರಳಿತು. ಅವನು ಸ್ವತಃ ಲಕ್ಷ್ಮಣ ಸಹಿತ ಶ್ರೀರಾಮನನ್ನು ಬಳಿಗೆ ಕರೆಸಿದನು. ಮತ್ತೆ ಮಾತೆ ಕೌಸಲ್ಯೆ ಮತ್ತು ಪಿತಾ ದಶರಥನು ಪುರೋಹಿತ ವಸಿಷ್ಠರಿಂದ ಸ್ವಸ್ತಿ ವಾಚನಾದಿ ಯಾತ್ರಾ ಸಂಬಂಧೀ ಮಂಗಲ ಕಾರ್ಯವನ್ನು ನೆರವೇರಿಸಿ, ಶ್ರೀರಾಮನಿಗೆ ಮಾರ್ಗಸೂಚಕ ಮಂತ್ರಗಳಿಂದ ಅಭಿಮಂತ್ರಿಸಿದನು.॥1-2॥

ಮೂಲಮ್ - 3

ಸ ಪುತ್ರಂ ಮೂರ್ಧ್ನುಪಾಘ್ರಾಯ ರಾಜಾ ದಶರಥಸ್ತದಾ ।
ದದೌ ಕುಶಿಕಪುತ್ರಾಯ ಸುಪ್ರೀತೇನಾಂತರಾತ್ಮನಾ ॥

ಅನುವಾದ

ಅನಂತರ ದಶರಥರಾಜನು ಶ್ರೀರಾಮನ ನೆತ್ತಿಯನ್ನು ಆಘ್ರಾಣಿಸಿ ಅತ್ಯಂತ ಸಂತೋಷದಿಂದ ಅವನನ್ನು ಮತ್ತು ಲಕ್ಷ್ಮಣನನ್ನು ವಿಶ್ವಾಮಿತ್ರರಿಗೆ ಒಪ್ಪಿಸಿದನು.॥3॥

ಮೂಲಮ್ - 4

ತತೋ ವಾಯುಃ ಸುಖಸ್ಪರ್ಶೋ ನಿರಜಸ್ಕೋ ವವೌ ತದಾ ।
ವಿಶ್ವಾಮಿತ್ರಗತಂ ರಾಮಂ ದೃಷ್ಟ್ವಾ ರಾಜೀವಲೋಚನಮ್ ॥

ಮೂಲಮ್ - 5

ಪುಷ್ಪವೃಷ್ಟಿರ್ಮಹತ್ಯಾಸೀದ್ ದೇವದುಂದುಭಿನಿಃಸ್ವನೈಃ ।
ಶಂಖದುಂದುಭಿನಿರ್ಘೋಷಃ ಪ್ರಯಾತೇ ತು ಮಹಾತ್ಮನಿ ॥

ಅನುವಾದ

ಆಗ ಶುಭಶಕುನ ಸೂಚಕವಾಗಿ ಧೂಳಿಲ್ಲದೆ ವಾಯು ಮಂದವಾಗಿ ಬೀಸತೊಡಗಿತು. ಕಮಲನಯನ ಶ್ರೀರಾಮ ವಿಶ್ವಾಮಿತ್ರರೊಂದಿಗೆ ಹೊರಟಿರುವುದನ್ನು ನೋಡಿ ದೇವತೆಗಳು ಪುಷ್ಪ ವೃಷ್ಟಿಗೈದರು. ದೇವದುಂದುಭಿಗಳು ಮೊಳಗಿದವು. ಮಹಾತ್ಮ ಶ್ರೀರಾಮನ ಪ್ರಯಾಣ ಕಾಲದಲ್ಲಿ ಶಂಖ ದುಂದುಭಿಗಳ ಧ್ವನಿಗಳು ಕೇಳಿಬಂದವು.॥4-5॥

ಮೂಲಮ್ - 6

ವಿಶ್ವಾಮಿತ್ರೋ ಯಯಾವಗ್ರೇ ತತೋ ರಾಮೋ ಮಹಾಯಶಾಃ ।
ಕಾಕಪಕ್ಷಧರೋ ಧನ್ವೀ ತಂ ಚ ಸೌಮಿತ್ರಿರನ್ವಗಾತ್ ॥

ಅನುವಾದ

ವಿಶ್ವಾಮಿತ್ರರು ಮುಂದೆ ನಡೆಯುತಿದ್ದರೆ ಅವರ ಹಿಂದೆ ಕಾಕಪಕ್ಷಧರ ಮಹಾಯಶಸ್ವೀ ಧನುರ್ಧಾರಿಯಾದ ಶ್ರೀರಾಮನು ಹಾಗೂ ಅವನ ಹಿಂದೆ ಸುಮಿತ್ರಾಕುಮಾರ ಲಕ್ಷ್ಮಣನು ಹೋಗುತ್ತಿದ್ದನು.॥6॥

ಮೂಲಮ್ - 7

ಕಲಾಪಿನೌ ಧನುಷ್ಪಾಣೀ ಶೋಭಯಾನೌ ದಿಶೋ ದಶ ।
ವಿಶ್ವಾಮಿತ್ರಂ ಮಹಾತ್ಮಾನಂ ತ್ರಿಶೀರ್ಷಾವಿವ ಪನ್ನಗೌ ॥

ಅನುವಾದ

ಇಬ್ಬರು ಸಹೋದರರು ಬೆನ್ನಿಗೆ ಬತ್ತಳಿಕೆ ಕಟ್ಟಿಕೊಂಡಿದ್ದರು, ಕೈಯಲ್ಲಿ ಧನುಸ್ಸು ಶೋಭಿಸುತ್ತಿತ್ತು. ಅವರಿಬ್ಬರೂ ಹತ್ತು ದಿಕ್ಕುಗಳನ್ನು ಬೆಳಗಿಸುತ್ತಾ ಮಹಾತ್ಮಾ ವಿಶ್ವಾಮಿತ್ರರ ಹಿಂದೆ ಮೂರು ಮೂರು ತಲೆಗಳ ಎರಡು ಸರ್ಪಗಳಂತೆ ನಡೆಯುತ್ತಿದ್ದರು. (ಒಂದು ಹೆಗಲಲ್ಲಿ ಧನುಸ್ಸು, ಮತ್ತೊಂದರಲ್ಲಿ ಬತ್ತಳಿಕೆ, ನಡುವಿನಲ್ಲಿ ಅವರ ಮಸ್ತಕ ಹೀಗೆ ಮೂರನ್ನೂ ಮೂರು ತಲೆಗಳ ಉಪಮೆ ಕೊಡಲಾಗಿದೆ..॥7॥

ಮೂಲಮ್ - 8

ಅನುಜಗ್ಮತುರಕ್ಷುದ್ರೌ ಪಿತಾಮಹಮಿವಾಶ್ವಿನೌ ।
ಅನುಯಾತೌ ಶ್ರಿಯಾ ದೀಪ್ತೌ ಶೋಭಯಂತಾಮನಿಂದಿತೌ ॥

ಅನುವಾದ

ಇಂತಹ ಅದ್ಭುತ ರೂಪ ವೀರ್ಯಾದಿ ವೈಭವಯುಕ್ತರಾದ ಶ್ರೀರಾಮ-ಲಕ್ಷ್ಮಣರು-ಬ್ರಹ್ಮದೇವರನ್ನು ಅನುಸರಿಸಿ ಹೋಗುವ ಅಶ್ವಿನೀ ದೇವತೆಗಳಂತೆ ವಿಶ್ವಾಮಿತ್ರರನ್ನು ಅನುಸರಿಸಿಹೋಗುತ್ತಿದ್ದರು.॥8॥

ಮೂಲಮ್ - 9

ತದಾ ಕುಶಿಕಪುತ್ರಂ ತು ಧನುಷ್ಪಾಣೀ ಸ್ವಲಂಕೃತೌ ।
ಬದ್ಧಗೋಧಾಂಗುಲಿತ್ರಾಣೌ ಖಡ್ಗವಂತೌ ಮಹಾದ್ಯುತೀ ॥

ಮೂಲಮ್ - 10

ಕುಮಾರೌ ಚಾರುವಪುಷೌ ಭ್ರಾತರೌ ರಾಮಲಕ್ಷ್ಮಣೌ ।
ಅನುಯಾತೌ ಶ್ರಿಯಾ ದೀಪ್ತೌ ಶೋಭಯೇತಾಮನಿಂದಿತೌ ॥
ಸ್ಥಾಣುಂ ದೇವಮಿವಾಚಿಂತ್ಯಂ ಕುಮಾರಾವಿವ ಪಾವಕೀ ॥

ಅನುವಾದ

ಆಗ ಶ್ರೀರಾಮ-ಲಕ್ಷ್ಮಣರು ವಸ್ತ್ರಾಭೂಷಣಗಳಿಂದ ಚೆನ್ನಾಗಿ ಅಲಂಕೃತರಾಗಿದ್ದರು. ನೀರುಡದ ಚರ್ಮದಿಂದ ಮಾಡಿರುವ ಬೆರಳು ರಕ್ಷಣೆಯ ಚೀಲಗಳನ್ನು ಧರಿಸಿದ್ದರು. ಖಡ್ಗಪಾಣಿಗಳಾದ, ಮಹಾಕಾಂತಿಮಂತರಾದ, ಸುಕುಮಾರರಾದ, ಸುಮನೋಹರವಾದ ಶರೀರಗಳಿಂದ ಕೂಡಿದ್ದು, ಶರೀರ ಕಾಂತಿಯಿಂದ ಪ್ರಕಾಶಿತರಾದ ನಿಷ್ಕಳಂಕ ಸಹೋದರ ಇಬ್ಬರು-ಅಗ್ನಿಕುಮಾರ ಸ್ಕಂದ ಮತ್ತು ವಿಶಾಖರು ಅಚಿಂತ್ಯನಾದ ಮಹಾದೇವನನ್ನು ಅನುಸರಿಸಿ ಹೋದಂತೆ ಕುಶಿಕಪುತ್ರ ವಿಶ್ವಾಮಿತ್ರರನ್ನು ಅನುಸರಿಸಿ ನಡೆಯುತ್ತಿದ್ದರು.॥9-10॥

ಮೂಲಮ್ - 11

ಅಧ್ಯರ್ಧಯೋಜನಂ ಗತ್ವಾ ಸರಯ್ವಾ ದಕ್ಷಿಣೇ ತಟೇ ।
ರಾಮೇತಿ ಮಧುರಾಂ ವಾಣೀಂ ವಿಶ್ವಾಮಿತ್ರೋಽಭ್ಯಭಾಷತ ॥

ಮೂಲಮ್ - 12

ಗೃಹಾಣ ವತ್ಸ ಸಲಿಲಂ ಮಾ ಭೂತ್ಕಾಲಸ್ಯ ಪರ್ಯಯಃ ॥

ಅನುವಾದ

ಅಯೋಧ್ಯೆಯಿಂದ ಒಂದೂವರೆ ಯೋಜನ ದೂರ ಹೋಗಿ ಸರಯೂ ನದಿಯ ದಕ್ಷಿಣ ತೀರಕ್ಕೆ ಬಂದು ವಿಶ್ವಾಮಿತ್ರರು ಮಧುರವಾಣಿಯಿಂದ ರಾಮನನ್ನು ಸಂಬೋಧಿಸುತ್ತಾ ಹೇಳಿದರು. ವತ್ಸ ರಾಮಾ! ಈಗ ಸರಯೂ ಜಲದಿಂದ ಆಚಮನ ಮಾಡು. ಈ ಅವಶ್ಯಕವಾದ ಕಾರ್ಯದಲ್ಲಿ ವಿಳಂಬ ಮಾಡಬಾರದು.॥11-12॥

ಮೂಲಮ್ - 13

ಮಂತ್ರಗ್ರಾಮಂ ಗೃಹಾಣ ತ್ವಂ ಬಲಾಮತಿಬಲಾಂ ತಥಾ ।
ನ ಶ್ರಮೋ ನ ಜ್ವರೋ ವಾ ತೇ ನ ರೂಪಸ್ಯ ವಿಪರ್ಯಯಃ ।।

ಅನುವಾದ

ಬಲಾ ಮತ್ತು ಅತಿಬಲಾ ಎಂದು ಪ್ರಸಿದ್ಧವಾದ ಈ ಮಂತ್ರಗ್ರಾಮವನ್ನು ಸ್ವೀಕರಿಸು. ಇದರ ಪ್ರಭಾವದಿಂದ ನಿನಗೆ ಎಂದೂ ಶ್ರಮದ ಅನುಭವವಾಗದು, ಜ್ವರ ಬಾರದು, ನಿನ್ನ ರೂಪದಲ್ಲಿ ಯಾವುದೇ ಪ್ರಕಾರದ ವಿಪರ್ಯಾಸವಾಗಲಾರದು.॥13॥

ಮೂಲಮ್ - 14

ನ ಚ ಸುಪ್ತಂ ಪ್ರಮತ್ತಂ ವಾ ಧರ್ಷಯಿಷ್ಯಂತಿ ನೈರ್ಋತಾಃ॥
ನ ಬಾಹ್ವೋಃ ಸದೃಶೋ ವೀರ್ಯೇ ಪೃಥಿವ್ಯಾಮಸ್ತಿ ಕಶ್ಚನ ।

ಅನುವಾದ

ಮಲಗಿದ್ದಾಗ ಇಲ್ಲವೇ ಎಚ್ಚರವಾಗಿರುವಾಗ ರಾಕ್ಷಸರು ನಿನ್ನ ಮೇಲೆ ಆಕ್ರಮಣ ಮಾಡಲಾರರು. ಈ ಭೂತಳದಲ್ಲಿ ಬಾಹುಬಲದಲ್ಲಿ ನಿನಗೆ ಸಮಾನರಾದವರು ಯಾರೂ ಇರಲಾರರ.॥14॥

ಮೂಲಮ್ - 15

ತ್ರಿಷು ಲೋಕೇಷುವಾ ರಾಮ ನ ಭವೇತ್ಸದೃಶಸ್ತವ ॥
ಬಲಾಮತಿಬಲಾಂ ಚೈವ ಪಠತಸ್ತಾತ ರಾಘವ ॥

ಅನುವಾದ

ಅಯ್ಯಾ! ರಘುಕುಲನಂದನ ರಾಮಾ! ಬಲಾ ಮತ್ತು ಅತಿಬಲಾ ಮಂತ್ರಗಳ ಪಠಣದಿಂದ ಮೂರು ಲೋಕಗಳಲ್ಲಿ ನಿನ್ನನ್ನು ಯಾರೂ ಎದುರಿಸಲಾರರು.॥15॥

ಮೂಲಮ್ - 16

ನ ಸೌಭಾಗ್ಯೇ ನ ದಾಕ್ಷಿಣ್ಯೇನ ಜ್ಞಾನೇ ಬುದ್ಧಿ ನಿಶ್ಚಯೇ ।
ನೋತ್ತರೇ ಪ್ರತಿವಕ್ತವ್ಯೇ ಸಮೋ ಲೋಕೇ ತವಾನಘ ॥

ಅನುವಾದ

ಪುಣ್ಯಾತ್ಮನೇ! ಸೌಭಾಗ್ಯ, ಚಾತುರ್ಯ, ಜ್ಞಾನ, ಬುದ್ಧಿಯ ನಿಶ್ಚಯದಲ್ಲಿ ಹಾಗೂ ಯಾರಿಗಾದರೂ ಉತ್ತರಿಸು ವುದರಲ್ಲಿ ನಿನಗೆ ಸಮಾನರಾದರು ಯಾರೂ ಇರಲಾರರು.॥16॥

ಮೂಲಮ್ - 17

ಏತದ್ವಿದ್ಯಾದ್ವಯೇ ಲಬ್ಧೇ ನ ಭವೇತ್ ಸದೃಶಸ್ತವ ।
ಬಲಾ ಚಾತಿಬಲಾ ಚೈವ ಸರ್ವಜ್ಞಾನಸ್ಯ ಮಾತರೌ ॥

ಅನುವಾದ

ಇವೆರಡು ವಿದ್ಯೆಗಳು ಪ್ರಾಪ್ತವಾದಮೇಲೆ ಯಾರೂ ನಿನಗೆ ಸಮಾನರಾಗಲಾರರು; ಏಕೆಂದರೆ ಈ ಬಲಾ ಮತ್ತು ಅತಿಬಲಾ ಎಂಬ ವಿದ್ಯೆಗಳು ಎಲ್ಲ ಪ್ರಕಾರದ ಜ್ಞಾನದ ಜನನಿಯಾಗಿದೆ.॥17॥

ಮೂಲಮ್ - 18½

ಕ್ಷುತ್ಪಿಪಾಸೇ ನ ತೇ ರಾಮ ಭವಿಷ್ಯೇತೇ ನರೋತ್ತಮ ।
ಬಲಾಮತಿಬಲಾಂ ಚೈವ ಪಠತಸ್ತಾತ ರಾಘವ ॥
ಗೃಹಾಣ ಸರ್ವಲೋಕಸ್ಯ ಗುಪ್ತಯೇ ರಘುನಂದನ ।

ಅನುವಾದ

ನರೋತ್ತಮ ಶ್ರೀರಾಮಾ! ಅಯ್ಯಾ ರಘುನಂದನ! ಬಲಾ ಮತ್ತು ಅತಿಬಲಾ ಇವನ್ನು ಅಭ್ಯಾಸ ಮಾಡಿದಾಗ ಹಸಿವು, ಬಾಯಾರಿಕೆಗಳ ತೊಂದರೆ ಆಗಲಾರದು. ರಘುಕುಲವನ್ನು ಬೆಳಗುವ ಶ್ರೀರಾಮಾ! ನೀನು ಸಮಸ್ತ ಜಗತ್ತನ್ನು ರಕ್ಷಿಸಲಿಕ್ಕಾಗಿ ಇವೆರಡು ವಿದ್ಯೆಗಳನ್ನು ಸ್ವೀಕರಿಸು.॥18½॥

ಮೂಲಮ್ - 19½

ವಿದ್ಯಾದ್ವಯಮಧೀಯಾನೇ ಯಶಶ್ಚಾಥ ಭವೇದ್ ಭುವಿ ॥
ಪಿತಾಮಹಸುತೇ ಹ್ಯೇತೇ ವಿದ್ಯೇ ತೇಜಃಸಮನ್ವಿತೇ ।

ಅನುವಾದ

ಈ ಎರಡು ವಿದ್ಯೆಗಳನ್ನು ಅಧ್ಯಯನ ಮಾಡಿದಾಗ ಈ ಭೂತಳದಲ್ಲಿ ನಿನ್ನ ಕೀರ್ತಿಯ ವಿಸ್ತಾರವಾಗುವುದು. ಇವೆರಡು ವಿದ್ಯೆಗಳು ಬ್ರಹ್ಮದೇವರ ತೇಜಸ್ವೀ ಪುತ್ರಿಯರಾಗಿದ್ದಾರೆ.॥19½॥

ಮೂಲಮ್ - 20½

ಪ್ರದಾತುಂ ತವ ಕಾಕುತ್ಸ್ಥ ಸದೃಶಸ್ತ್ವಂ ಹಿ ಪಾರ್ಥಿವ ॥
ಕಾಮಂ ಬಹುಗಣಾಃ ಸರ್ವೇ ತ್ವಯ್ಯೇತೇ ನಾತ್ರ ಸಂಶಯಃ ।
ತಪಸಾ ಸಂಭೃತೇ ಚೈತೇ ಬಹುರೂಪೇ ಭವಿಷ್ಯತಃ ॥

ಅನುವಾದ

ಕಕುಸ್ಥನಂದನ! ನಾನು ಇವೆರಡನ್ನು ನಿನಗೆ ಕೊಡುತ್ತಿದ್ದೇನೆ. ರಾಜಕುಮಾರ! ಇದಕ್ಕೆ ನೀನೇ ಯೋಗ್ಯ ಪಾತ್ರನಾಗಿರುವೆ. ನಿನ್ನಲ್ಲಿ ಈ ವಿದ್ಯೆಯನ್ನು ಪಡೆಯುವ ಅನೇಕ ಸದ್ಗುಣಗಳಿವೆ. ನಾನು ತಪೋಬಲದಿಂದ ಇದನ್ನು ಗಳಿಸಿದ್ದೇನೆ, ಆದ್ದರಿಂದ ನನ್ನ ತಪಸ್ಸಿನಿಂದ ಪರಿಪೂರ್ಣವಾಗಿ ಇವು ನಿನಗೆ ಬಹುರೂಪೀ ಫಲಗಳನ್ನು ನೀಡುವವು.॥20½॥

ಮೂಲಮ್ - 21½

ತತೋ ರಾಮೋ ಜಲಂ ಸ್ಪೃಷ್ಟ್ವಾ ಪ್ರಹೃಷ್ಟವದನಃ ಶುಚಿಃ ।
ಪ್ರತಿಜಗ್ರಾಹ ತೇ ವಿದ್ಯೇ ಮಹರ್ಷೇರ್ಭಾವಿತಾತ್ಮನಃ ॥

ಅನುವಾದ

ಆಗ ಶ್ರೀರಾಮನು ಆಚಮನ ಮಾಡಿ ಪವಿತ್ರನಾದನು; ಅವನ ಮುಖ ಪ್ರಸನ್ನತೆಯಿಂದ ಅರಳಿತು. ಅವನು ಶುದ್ಧಾಂತಃಕರಣ ಮಹರ್ಷಿಗಳಿಂದ ಆ ಎರಡೂ ವಿದ್ಯೆಗಳನ್ನು ಗ್ರಹಿಸಿದನು.॥21½॥

ಮೂಲಮ್ - 22½

ವಿದ್ಯಾಸಮುದಿತೋ ರಾಮಃ ಶುಶುಭೇಭೀಮ ವಿಕ್ರಮಃ ।
ಸಹಸ್ರರಶ್ಮಿರ್ಭಗವಾನ್ ಶರದೀವ ದಿವಾಕರಃ ॥

ಅನುವಾದ

ಆ ವಿದ್ಯೆಗಳನ್ನು ಪಡೆದು ಮಹಾಪರಾಕ್ರಮಿ ಶ್ರೀರಾಮನು ಸಾವಿರಾರು ಕಿರಣಗಳಿಂದ ಕೂಡಿದ ಶರತ್ಕಾಲದ ಭಗವಾನ್ ಸೂರ್ಯನಂತೆ ಶೋಭಿಸತೊಡಗಿದನು.॥22½॥

ಮೂಲಮ್ - 23

ಗುರುಕಾರ್ಯಣಿ ಸರ್ವಾಣಿ ನಿಯುಜ್ಯ ಕುಶಿಕಾತ್ಮಜೇ ।
ಊಷುಸ್ತಾಂ ರಜನೀಂ ತತ್ರ ಸರಯ್ವಾಂ ಸುಸುಖಂ ತ್ರಯಃ ॥

ಅನುವಾದ

ಉಪದೇಶಾನಂತರ ಶ್ರೀರಾಮನು ವಿದ್ಯಾಗುರುಗಳಿಗೆ ಮಾಡಬೇಕಾದ ಶುಶ್ರೂಷೆಗಳೆಲ್ಲವನ್ನೂ ವಿಶ್ವಾಮಿತ್ರರಿಗೆ ಮಾಡಿದನು. ಅವರು ಮೂವರೂ ಅಂದಿನ ಇರುಳನ್ನು ಆ ಸರಯೂ ನದೀ ತೀರದಲ್ಲೇ ಕಳೆದರು.॥23॥

ಮೂಲಮ್ - 24

ದಶರಥನೃಪಸೂನುಸತ್ತಮಾಭ್ಯಾಂ
ತೃಣಶಯನೇಽನುಚಿತೇ ಸದೋಷಿತಾಭ್ಯಾಮ್ ।
ಕುಶಿಕಸುತವಚೋಽನುಲಾಲಿತಾಭ್ಯಾಂ
ಸುಖಮಿವ ಸಾ ವಿಬಭೌ ವಿಭಾವರೀ ಚ ॥

ಅನುವಾದ

ಚಕ್ರವರ್ತಿಯ ಪುತ್ರರಾದ ತಮಗೆ ಮಲಗಲು ಯೋಗ್ಯವಲ್ಲದ ದರ್ಭೆಯ ಹಾಸಿಗೆಯಲ್ಲಿ ಮಲಗಿದ್ದರೂ ವಿಶ್ವಾಮಿತ್ರರ ಮಾತನ್ನು ಬಹಳ ಆಸಕ್ತಿಯಿಂದ ಪಾಲಿಸುತ್ತಿದ್ದರು. ದಶರಥನ ಪುತ್ರಶ್ರೇಷ್ಠರಿಗೆ ಆ ರಾತ್ರಿಯು ಸುಖಮಯವಾಗಿ ಕಳೆಯಿತು.॥24॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಇಪ್ಪತ್ತೆರಡನೆಯ ಸರ್ಗ ಪೂರ್ಣವಾಯಿತು. ॥22॥