०२१ वसिष्ठवचनाद् रामप्रेषणम्

वाचनम्
ಭಾಗಸೂಚನಾ

ವಿಶ್ವಾಮಿತ್ರರ ರೋಷದ ಮಾತುಗಳು, ವಸಿಷ್ಠರು ದಶರಥನನ್ನು ಸಂತೈಸಿದುದು

ಮೂಲಮ್ - 1

ತಚ್ಛ್ರುತ್ವಾ ವಚನಂ ತಸ್ಯ ಸ್ನೇಹಪರ್ಯಾಕುಲಾಕ್ಷರಮ್ ।
ಸಮನ್ಯುಃ ಕೌಶಿಕೋ ವಾಕ್ಯಂ ಪ್ರತ್ಯುವಾಚ ಮಹೀಪತಿಮ್ ॥

ಅನುವಾದ

ದಶರಥನಿಗೆ ಒಂದೆಡೆ ಪುತ್ರವಾತ್ಸಲ್ಯ, ಮತ್ತೊಂದೆಡೆಯಲ್ಲಿ ಮಹರ್ಷಿಯ ಶಾಪದ ಭಯ. ಇದರಿಂದಾಗಿ ದಶರಥನು ಮಾತನಾಡುತ್ತಿದ್ದಾಗ ಸ್ವರಗದ್ಗದವಾಗಿತ್ತು. ಅದನ್ನು ಕೇಳಿ ಕೋಪಗೊಂಡು ವಿಶ್ವಾಮಿತ್ರರು ರಾಜನಲ್ಲಿ ಹೇಳಿದರು .॥1॥

ಮೂಲಮ್ - 2

ಪೂರ್ವಮರ್ಥಂ ಪ್ರತಿಶ್ರುತ್ಯ ಪ್ರತಿಜ್ಞಾಂ ಹಾತುಮಿಚ್ಛಸಿ ।
ರಾಘವಾಣಾಮಯುಕ್ತೋಽಯಂ ಕುಲಸ್ಯಾಸ್ಯ ವಿಪರ್ಯಯಃ ॥

ಅನುವಾದ

ರಾಜನೇ! ಮೊದಲು ನಾನು ಕೇಳಿದ ವಸ್ತುವನ್ನು ಕೊಡುವುದಾಗಿ ಪ್ರತಿಜ್ಞೆ ಮಾಡಿ, ಈಗ ಅದನ್ನು ನೀನು ಮುರಿಯುತ್ತಿರುವೆ. ಪ್ರತಿಜ್ಞೆಯ ತ್ಯಾಗವು ರಘುವಂಶಿಯರಿಗೆ ಯೋಗ್ಯವಲ್ಲ. ಈ ವರ್ತನೆ ನಿನ್ನ ಕುಲದ ವಿನಾಶಕ ಸೂಚಕವಾಗಿದೆ.॥2॥

ಮೂಲಮ್ - 3

ಯದೀದಂ ತೇ ಕ್ಷಮಂ ರಾಜನ್ ಗಮಿಷ್ಯಾಮಿ ಯಥಾಗತಮ್ ।
ಮಿಥ್ಯಾಪ್ರತಿಜ್ಞಃ ಕಾಕುತ್ಸ್ಥ ಸುಖೀ ಭವ ಸುಹೃದ್ ವೃತಃ ॥

ಅನುವಾದ

ನರೇಶ್ವರ! ನಿನಗೆ ಹಾಗೆಯೇ ಉಚಿತವೆಂದು ಕಂಡರೆ ನಾನು ಬಂದ ಹಾಗೆ ಮರಳಿ ಹೋಗುವೆನು. ಕಕುಸ್ಥಕುಲ ರತ್ನನೇ! ಈಗ ನಿನ್ನ ಪ್ರತಿಜ್ಞೆಯನ್ನು ಸುಳ್ಳಾಗಿಸಿ ಹಿತೈಷಿ ಸುಹೃದರೊಂದಿಗೆ ಮನೆಯಲ್ಲೇ ಸುಖವಾಗಿ ಇರು.॥3॥

ಮೂಲಮ್ - 4

ತಸ್ಯ ರೋಷಪರೀತಸ್ಯ ವಿಶ್ವಾಮಿತ್ರಸ್ಯ ಧೀಮತಃ ।
ಚಚಾಲ ವಸುಧಾ ಕೃತ್ನ್ಸಾ ದೇವಾನಾಂ ಚ ಭಯಂ ಮಹತ್ ॥

ಅನುವಾದ

ಧೀಮಂತರಾದ ವಿಶ್ವಾಮಿತ್ರರು ಕುಪಿತರಾದಾಗ ಭೂಮಿಯು ಕಂಪಿಸತೊಡಗಿತು. ದೇವತೆಗಳ ಮನಸ್ಸಿನಲ್ಲಿ ಮಹಾಭಯ ಆವರಿಸಿತು.॥4॥

ಮೂಲಮ್ - 5

ತ್ರಸ್ತರೂಪಂ ತು ವಿಜ್ಞಾಯ ಜಗತ್ಸರ್ವಂ ಮಹಾನೃಷಿಃ ।
ನೃಪತಿಂ ಸುವ್ರತೋ ಧೀರೋ ವಸಿಷ್ಠೋ ವಾಕ್ಯಮಬ್ರವೀತ್ ॥

ಅನುವಾದ

ಅವರ ರೋಷದಿಂದ ಜಗತ್ತು ತಲ್ಲಣಗೊಂಡಿರುವುದನ್ನು ತಿಳಿದ ಸುವ್ರತರಾದ ಧೀರಚಿತ್ತರಾದ ಮಹರ್ಷಿ ವಸಿಷ್ಠರು ರಾಜನಲ್ಲಿ ಇಂತೆಂದರು .॥5॥

ಮೂಲಮ್ - 6

ಇಕ್ಷ್ವಾಕೂಣಾಂ ಕುಲೇ ಜಾತಃ ಸಾಕ್ಷಾದ್ಧರ್ಮ ಇವಾಪರಃ ।
ಧೃತಿಮಾನ್ಸುವ್ರತಃ ಶ್ರೀಮಾನ್ ನ ಧರ್ಮಂ ಹಾತುಮರ್ಹಸಿ ॥

ಅನುವಾದ

ಮಹಾರಾಜನೇ! ನೀನು ಇಕ್ಷ್ವಾಕುವಂಶೀ ರಾಜರ ಕುಲದಲ್ಲಿ ಸಾಕ್ಷಾತ್ ಇನ್ನೊಂದು ಧರ್ಮದಂತೆ ಹುಟ್ಟಿರುವೆ. ಧೈರ್ಯಶಾಲಿಯಾಗಿದ್ದು, ಸತ್ಯಸಂಕಲ್ಪನಾಗಿರುವೆ. ಸಕಲ ಸಂಪತ್ತುಗಳಿಂದ ಕೂಡಿರುವೆ, ನೀನು ನಿನ್ನ ಧರ್ಮವನ್ನು ಪರಿತ್ಯಜಿಸಬಾರದು.॥6॥

ಮೂಲಮ್ - 7

ತ್ರಿಷು ಲೋಕೇಷು ವಿಖ್ಯಾತೋ ಧರ್ಮಾತ್ಮಾ ಇತಿ ರಾಘವಃ ।
ಸ್ವಧರ್ಮಂ ಪ್ರತಿಪದ್ಯಸ್ವ ನಾಧರ್ಮಂ ವೋಢುಮರ್ಹಸಿ ॥

ಅನುವಾದ

‘ರಘುಕುಲಭೂಷಣ ದಶರಥನು ದೊಡ್ಡ ಧರ್ಮಾತ್ಮನಾಗಿದ್ದಾನೆ.’ ಈ ಮಾತು ಮೂರು ಲೋಕಗಳಲ್ಲಿ ಪ್ರಸಿದ್ಧವಾಗಿದೆ. ಆದ್ದರಿಂದ ನೀನು ನಿನ್ನ ಧರ್ಮವನ್ನು ಪಾಲಿಸು, ಅಧರ್ಮದ ಭಾರವನ್ನು ತಲೆಯ ಮೇಲೆ ಹೊರ ಬೇಡ.॥7॥

ಮೂಲಮ್ - 8

ಪ್ರತಿಶ್ರುತ್ಯ ಕರಿಷ್ಯೇತಿ ಉಕ್ತಂ ವಾಕ್ಯಮಕುರ್ವತಃ ।
ಇಷ್ಟಾಪೂರ್ತವಧೋ ಭೂಯಾತ್ತಸ್ಮಾದ್ರಾಮಂ ವಿಸರ್ಜಯ ॥

ಅನುವಾದ

‘ನಾನು ಇಂತಹ ಕಾರ್ಯ ಮಾಡುವೆನು’ ಎಂದು ಪ್ರತಿಜ್ಞೆ ಮಾಡಿ, ಆ ಮಾತನ್ನು ಪಾಲಿಸದವನ ಯಜ್ಞ-ಯಾಗಾದಿ, ಇಷ್ಟಾ-ಪೂರ್ತ ಕರ್ಮಗಳ ಪುಣ್ಯವು ನಾಶವಾಗುತ್ತದೆ. ಆದ್ದರಿಂದ ನೀನು ಶ್ರೀರಾಮನನ್ನು ವಿಶ್ವಾಮಿತ್ರರೊಂದಿಗೆ ಕಳಿಸಿಕೊಡು.॥8॥

ಮೂಲಮ್ - 9

ಕೃತಾಸ್ತ್ರಮಕೃತಾಸ್ತ್ರಂ ವಾ ನೈನಂ ಶಕ್ಷ್ಯಂತಿ ರಾಕ್ಷಸಾಃ ।
ಗುಪ್ತಂ ಕುಶಿಕಪುತ್ರೇಣ ಜ್ವಲನೇನಾಮೃತಂ ಯಥಾ ॥

ಅನುವಾದ

ಶ್ರೀರಾಮನು ಅಸ್ತ್ರವಿದ್ಯೆ ತಿಳಿಯಲಿ ಅಥವಾ ತಿಳಿಯದಿರಲಿ, ರಾಕ್ಷಸರು ಇವನನ್ನು ಎದುರಿಸಲಾರರು. ಅಗ್ನಿಚಕ್ರದಿಂದ ಆವೃತವಾಗಿರುವ ಅಮೃತವನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲವೋ ಹಾಗೆಯೇ ಕುಶಿಕನಂದನ ವಿಶ್ವಾಮಿತ್ರರಿಂದ ಸುರಕ್ಷಿತನಾದ ಶ್ರೀರಾಮನನ್ನು ರಾಕ್ಷಸರು ಏನನ್ನೂ ಮಾಡಲಾರರು.॥9॥

ಮೂಲಮ್ - 10

ಏಷವಿಗ್ರಹವಾನ್ ಧರ್ಮ ಏಷ ವೀರ್ಯವತಾಂ ವರಃ ।
ಏಷ ವಿದ್ಯಾಧಿಕೋ ಲೋಕೇ ತಪಸಶ್ಚ ಪರಾಯಣಮ್ ॥

ಅನುವಾದ

ಈ ಮಹರ್ಷಿ ವಿಶ್ವಾಮಿತ್ರರು ಸಾಕ್ಷಾತ್ ಧರ್ಮದ ಮೂರ್ತಿಯಾಗಿದ್ದಾರೆ. ಇವರು ಬಲಿಷ್ಠರಲ್ಲಿ ಶ್ರೇಷ್ಠರಾಗಿದ್ದಾರೆ. ವಿದ್ಯೆಯಲ್ಲಿ ಎಲ್ಲರಿಗಿಂತ ಅಧಿಕವಾಗಿದ್ದಾರೆ. ತಪಸ್ಸಿನ ವಿಶಾಲ ಭಂಡಾರವೇ ಆಗಿದ್ದಾರೆ.॥10॥

ಮೂಲಮ್ - 11

ಏಷೋಽಸ್ತ್ರಾನ್ ವಿವಿಧಾನ್ವೇತ್ತಿ ತ್ರೈಲೋಕ್ಯೇ ಸ ಚರಾಚರೇ ।
ನೈನಮನ್ಯಃ ಪುಮಾನ್ವೇತ್ತಿ ನ ಚ ವೇತ್ಸ್ಯಂತಿ ಕೇಚನ ॥

ಅನುವಾದ

ಚರಾಚರ ಪ್ರಾಣಿಗಳಿಂದ ಕೂಡಿದ ಈ ಮೂರು ಲೋಕಗಳಲ್ಲಿ ಯಾವ ಯಾವ ಅಸ್ತ್ರಗಳಿವೆಯೋ ಅವೆಲ್ಲವನ್ನೂ ಇವರು ಬಲ್ಲವರಾಗಿದ್ದಾರೆ. ಇವರನ್ನು ನನ್ನ ಹೊರತು ಬೇರೆ ಯಾವ ಪುರುಷನೂ ಚೆನ್ನಾಗಿ ತಿಳಿದಿಲ್ಲ, ತಿಳಿಯುವುದೂ ಇಲ್ಲ.॥11॥

ಮೂಲಮ್ - 12

ನ ದೇವಾ ನರ್ಷಯಃ ಕೇಚಿನ್ನಾಮರಾನ ಚ ರಾಕ್ಷಸಾಃ ।
ಗಂಧರ್ವಯಕ್ಷಪ್ರವರಾಃ ಸಕಿನ್ನರಮಹೋರಗಾಃ ॥

ಅನುವಾದ

ದೇವತೆಗಳು, ಋಷಿಗಳು, ರಾಕ್ಷಸ, ಗಂಧರ್ವ, ಯಕ್ಷ, ಕಿನ್ನರ ಹಾಗೂ ದೊಡ್ಡ ದೊಡ್ಡ ನಾಗ ಇವರಾರೂ ಇವರ ಪ್ರಭಾವವನ್ನು ತಿಳಿಯುತ್ತಿಲ್ಲ.॥12॥

ಮೂಲಮ್ - 13

ಸರ್ವಾಸ್ತ್ರಾಣಿ ಕೃಶಾಶ್ವಸ್ಯ ಪುತ್ರಾಃ ಪರಮಧಾರ್ಮಿಕಾಃ ।
ಕೌಶಿಕಾಯ ಪುರಾ ದತ್ತಾ ಯದಾ ರಾಜ್ಯಂ ಪ್ರಶಾಸತಿ ॥

ಅನುವಾದ

ಎಲ್ಲ ಅಸ್ತ್ರಗಳು ಪ್ರಜಾಪತಿ ಕೃಶಾಶ್ವನ ಪರಮ ಧರ್ಮಾತ್ಮಾ ಪುತ್ರರಾಗಿದ್ದಾರೆ. ಅವನ್ನು ಪ್ರಜಾಪತಿಯು ಹಿಂದೆ ಕುಶಿಕನಂದನ ವಿಶ್ವಾಮಿತ್ರನು ರಾಜ್ಯವನ್ನಾಳುತ್ತಿದ್ದಾಗ ಅವನಿಗೆ ಸಮರ್ಪಿಸಿದ್ದನು.॥13॥

ಮೂಲಮ್ - 14

ತೇಽಪಿ ಪುತ್ರಾಃ ಕೃಶಾಶ್ವಸ್ಯ ಪ್ರಜಾಪತಿಸುತಾಸುತಾಃ ।
ನೈಕರೂಪಾ ಮಹಾವೀರ್ಯಾ ದೀಪ್ತಿಮಂತೋ ಜಯಾವಹಾಃ ॥

ಅನುವಾದ

ಅನೇಕ ರೂಪಿಗಳಾದ ಕಶಾಶ್ವನ ಆ ಪುತ್ರರು ಪ್ರಜಾಪತಿ ದಕ್ಷನ ಇಬ್ಬರು ಪುತ್ರಿಯರ ಸಂತಾನರಾಗಿದ್ದಾರೆ. ಅವರೆಲ್ಲರೂ ಮಹಾಶಕ್ತಿಶಾಲಿಗಳೂ, ಪ್ರಕಾಶವಾನರೂ, ವಿಜಯವನ್ನು ತಂದುಕೊಡುವವರೂ ಆಗಿದ್ದಾರೆ.॥14॥

ಮೂಲಮ್ - 15

ಜಯಾ ಚಸುಪ್ರಭಾ ಚೈವ ದಕ್ಷಕನ್ಯೇ ಸುಮಧ್ಯಮೇ ।
ತೇ ಸುತೇಽಸ್ತ್ರಾಣಿ ಶಸ್ತ್ರಾಣಿ ಶತಂ ಪರಮಭಾಸ್ವರಮ್ ॥

ಅನುವಾದ

ಪ್ರಜಾಪತಿ ದಕ್ಷನ ಇಬ್ಬರು ಸುಂದರ ಪುತ್ರಿಯರಾದ ಜಯಾ ಮತ್ತು ಸುಪ್ರಭಾ ಇವರಲ್ಲಿ ಒಂದುನೂರು ಪರಮ ಪ್ರಕಾಶಮಾನ ಅಸ್ತ್ರ-ಶಸ್ತ್ರಗಳು ಹುಟ್ಟಿದರು.॥15॥

ಮೂಲಮ್ - 16

ಪಂಚಾಶತಂ ಸುತಾನ್ಲ್ಲೇಭೇ ಜಯಾ ಲಬ್ಧವರಾವರಾನ್ ।
ವಧಾಯಾಸುರಸೈನ್ಯಾನಾಮಪ್ರಮೇಯಾನರೂಪಿಣಃ ॥

ಅನುವಾದ

ಅವರಿಬ್ಬರಲ್ಲಿ ಜಯೆಯು ವರ ಪಡೆದು ಐವತ್ತು ಶ್ರೇಷ್ಠ ಪುತ್ರರನ್ನು ಪಡೆದಳು. ಅವರು ಅಪರಿಮಿತ ಶಕ್ತಿಶಾಲಿ ಮತ್ತು ರೂಪರಹಿತರಾಗಿದ್ದಾರೆ. ಅವರೆಲ್ಲರೂ ಅಸುರರ ಸೈನ್ಯವನ್ನು ವಧಿಸಲು ಪ್ರಕಟರಾಗಿರುವರು.॥16॥

ಮೂಲಮ್ - 17

ಸುಪ್ರಭಾಜನಯಚ್ಚಾಪಿ ಪುತ್ರಾನ್ ಪಂಚಾಶತಂ ಪುನಃ ।
ಸಂಹಾರಾನ್ನಾಮ ದುರ್ಧರ್ಷಾನ್ ದುರಾಕ್ರಾಮಾನ್ಬಲೀಯಸಃ ॥

ಅನುವಾದ

ಮತ್ತೆ ಸುಪ್ರಭೆಯೂ ಸಂಹಾರ ಎಂಬ ಐವತ್ತು ಪುತ್ರರಿಗೆ ಜನ್ಮನೀಡಿದಳು. ಅವರು ಅತ್ಯಂತ ದುರ್ಜಯರಾಗಿದ್ದಾರೆ. ಅವರ ಮೇಲೆ ಆಕ್ರಮಣ ಮಾಡುವುದು ಸರ್ವಥಾ ಕಷ್ಟವಾಗಿದೆ. ಅವರೆಲ್ಲರೂ ಮಹಾ ಬಲಿಷ್ಠರಾಗಿದ್ದಾರೆ.॥17॥

ಮೂಲಮ್ - 18

ತಾನಿ ಚಾಸ್ತ್ರಾಣಿ ವೇತ್ತ್ಯೇಷ ಯಥಾವತ್ಕುಶಿಕಾತ್ಮಜಃ ।
ಅಪೂರ್ವಾಣಾಂ ಚ ಜನನೇ ಶಕ್ತೋ ಭೂಯಶ್ಚ ಧರ್ಮವಿತ್ ॥

ಅನುವಾದ

ಈ ಧರ್ಮಜ್ಞರಾದ ಕುಶಿಕನಂದನ ಆ ಎಲ್ಲ ಅಸ್ತ್ರ-ಶಸ್ತ್ರಗಳನ್ನು ಚೆನ್ನಾಗಿ ತಿಳಿದಿರುವರು. ಇಷ್ಟರವರೆಗೆ ಉಪಲಬ್ಧವಿಲ್ಲದ ಅಸ್ತ್ರಗಳನ್ನು ಉತ್ಪನ್ನ ಮಾಡುವ ಶಕ್ತಿ ಇವರಲ್ಲಿ ಪೂರ್ಣವಾಗಿದೆ.॥18॥

ಮೂಲಮ್ - 19

ತೇನಾಸ್ಯ ಮುನಿಮುಖ್ಯಸ್ಯ ಧರ್ಮಜ್ಞಸ್ಯ ಮಹಾತ್ಮನಃ ।
ನ ಕಿಂಚಿದಸ್ತ್ಯವಿದಿತಂ ಭೂತಂ ಭವ್ಯಂ ಚ ರಾಘವ ॥

ಅನುವಾದ

ರಘುನಂದನ! ಈ ಮುನಿಶ್ರೇಷ್ಠ ಧರ್ಮಜ್ಞ ಮಹಾತ್ಮ ವಿಶ್ವಾಮಿತ್ರರಿಗೆ ಭೂತ ಅಥವಾ ಭವಿಷ್ಯತ್ತಿನ ಯಾವುದೇ ಮಾತು ಮರೆಯಾಗಲಿಲ್ಲ.॥19॥

ಮೂಲಮ್ - 20

ಏವಂ ವೀರ್ಯೋ ಮಹಾತೇಜಾ ವಿಶ್ವಾಮಿತ್ರೋ ಮಹಾಯಶಾಃ ।
ನ ರಾಮಗಮನೇ ರಾಜನ್ ಸಂಶಯಂ ಗಂತುಮರ್ಹಸಿ ॥

ಅನುವಾದ

ರಾಜನೇ! ಈ ಮಹಾತೇಜಸ್ವೀ, ಮಹಾಯಶಸ್ವೀ ವಿಶ್ವಾಮಿತ್ರರು ಇಂತಹ ಪ್ರಭಾವಶಾಲಿಗಳಾಗಿದ್ದಾರೆ. ಆದ್ದರಿಂದ ಇವರೊಂದಿಗೆ ರಾಮನನ್ನು ಕಳಿಸುವುದರಲ್ಲಿ ಯಾವುದೇ ಸಂದೇಹ ಪಡಬೇಡ.॥20॥

ಮೂಲಮ್ - 21

ತೇಷಾಂ ನಿಗ್ರಹಣೇ ಶಕ್ತಃ ಸ್ವಯಂ ಚ ಕುಶಿಕಾತ್ಮಜಃ ।
ತವ ಪುತ್ರಹಿತಾರ್ಥಾಯ ತ್ವಾಮುಪೇತ್ಯಾಭಿಯಾಚತೇ ॥

ಅನುವಾದ

ಮಹರ್ಷಿ ಕೌಶಿಕರು ಸ್ವತಃ ಆ ರಾಕ್ಷಸರ ಸಂಹಾರ ಮಾಡುವುದರಲ್ಲಿ ಸಮರ್ಥರಾಗಿದ್ದಾರೆ, ಆದರೆ ಇವರು ನಿನ್ನ ಪುತ್ರನ ಕಲ್ಯಾಣವನ್ನು ಬಯಸುತ್ತಿದ್ದಾರೆ. ಅದಕ್ಕಾಗಿ ಇಲ್ಲಿಗೆ ಬಂದು ನಿನ್ನಲ್ಲಿ ಯಾಚಿಸುತ್ತಿದ್ದಾರೆ.॥21॥

ಮೂಲಮ್ - 22

ಇತಿ ಮುನಿವಚನಾತ್ಪ್ರಸನ್ನಚಿತ್ತೋ
ರಘುವೃಷಭಶ್ಚ ಮುಮೋದ ಪಾರ್ಥಿವಾಗ್ರ್ಯಾಃ ।
ಗಮನಮಭಿರುರೋಚ ರಾಘವಸ್ಯ
ಪ್ರಥಿತಯಶಾಃ ಕುಶಿಕಾತ್ಮಜಾಯ ಬುದ್ಧ್ಯಾ॥

ಅನುವಾದ

ಮಹರ್ಷಿ ವಸಿಷ್ಠರ ಈ ಮಾತುಗಳಿಂದ ವಿಖ್ಯಾತ ಕೀರ್ತಿಯುಳ್ಳ ರಘುಕುಲ ಶಿರೋಮಣಿ ನೃಪಶ್ರೇಷ್ಠ ದಶರಥನ ಮನಸ್ಸು ಸಂತಸಗೊಂಡಿತು. ಅವನು ಆನಂದಮಗ್ನನಾಗಿ ಬುದ್ಧಿಯಿಂದ ವಿಚಾರಮಾಡಿದ ಬಳಿಕ ವಿಶ್ವಾಮಿತ್ರರ ಸಂತೋಷಕ್ಕಾಗಿ ಅವರೊಂದಿಗೆ ರಾಮನು ಹೋಗುವುದು ಉಚಿತವೆಂದು ತಿಳಿದನು.॥22॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಇಪ್ಪತ್ತೊಂದನೆಯ ಸರ್ಗ ಪೂರ್ಣವಾಯಿತು. ॥21॥