वाचनम्
ಭಾಗಸೂಚನಾ
ರಾಮನನ್ನು ಕಳುಹಿಸಿಕೊಡಲು ದಶರಥನ ಅಸಮ್ಮತಿ, ವಿಶ್ವಾಮಿತ್ರರ ಕೋಪ
ಮೂಲಮ್ - 1
ತಚ್ಛ್ರುತ್ವಾ ರಾಜಶಾರ್ದೂಲೋ ವಿಶ್ವಾಮಿತ್ರಸ್ಯ ಭಾಷಿತಮ್ ।
ಮುಹೂರ್ತಮಿವ ನಿಃಸಂಜ್ಞಃ ಸಂಜ್ಞಾವಾನಿದಮಬ್ರವೀತ್ ॥
ಅನುವಾದ
ವಿಶ್ವಾಮಿತ್ರರ ಮಾತನ್ನು ಕೇಳಿ ನೃಪಶ್ರೇಷ್ಠ ದಶರಥನು ಎರಡುಗಳಿಗೆ ಮೂರ್ಛಿತನಾದನು. ಮತ್ತೆ ಎಚ್ಚರಗೊಂಡು ಈ ಪ್ರಕಾರ ನುಡಿದನು.॥1॥
ಮೂಲಮ್ - 2
ಊನಷೋಡಶವರ್ಷೋ ಮೇ ರಾಮೋ ರಾಜೀವಲೋಚನಃ ।
ನ ಯುದ್ಧಯೋಗ್ಯತಾಮಸ್ಯ ಪಶ್ಯಾಮಿ ಸಹ ರಾಕ್ಷಸೈಃ ॥
ಅನುವಾದ
ಮಹರ್ಷಿಗಳೇ! ಕಮಲನಯನ ನನ್ನ ರಾಮನಿಗೆ ಇನ್ನು ಹದಿನಾರು ವರ್ಷ ತುಂಬಿಲ್ಲ. ರಾಕ್ಷಸರೊಡನೆ ಯುದ್ಧ ಮಾಡುವ ಅರ್ಹತೆ ಅವನಲ್ಲಿ ನಾನು ಕಾಣುವುದಿಲ್ಲ.॥2॥
ಮೂಲಮ್ - 3
ಇಯಮಕ್ಷೌಹಿಣೀ ಸೇನಾ ಯಸ್ಯಾಹಂ ಪತಿರೀಶ್ವರಃ ।
ಅನಯಾ ಸಹಿತೋ ಗತ್ವಾ ಯೋದ್ಧಾಹಂ ತೈರ್ನಿಶಾಚರೈಃ ॥
ಅನುವಾದ
ನನ್ನಲ್ಲಿ ಒಂದು ಅಕ್ಷೌಣಿ ಸೈನ್ಯವಿದೆ. ಈ ಅಪಾರ ಸೈನ್ಯಕ್ಕೆ ನಾನು ಒಡೆಯನಾಗಿದ್ದೇನೆ. ಈ ಸೈನ್ಯದೊಂದಿಗೆ ನಾನೇ ಬಂದು ಆ ನಿಶಾಚರರೊಂದಿಗೆ ಯುದ್ಧ ಮಾಡುವೆನು.॥3॥
ಮೂಲಮ್ - 4
ಇಮೇ ಶೂರಾಶ್ಚ ವಿಕ್ರಾಂತಾ ಭೃತ್ಯಾ ಮೇಽಸ್ತ್ರವಿಶಾರದಾಃ ।
ಯೋಗ್ಯಾ ರಕ್ಷೋಗಣೈರ್ಯೋದ್ಧುಂ ನ ರಾಮಂ ನೇತುಮರ್ಹಸಿ ॥
ಅನುವಾದ
ಈ ನನ್ನ ಶೂರವೀರ ಸೈನಿಕರು ಅಸ್ತ್ರವಿದ್ಯೆಯಲ್ಲಿ ಕುಶಲರೂ, ಪರಾಕ್ರಮಿಗಳೂ ಆಗಿದ್ದು, ರಾಕ್ಷಸರೊಂದಿಗೆ ಕಾದಾಡಲು ಯೋಗ್ಯರಾಗಿದ್ದಾರೆ. ಆದ್ದರಿಂದ ಇವರನ್ನು ಕೊಂಡುಹೋಗಿರಿ. ರಾಮನನ್ನು ಕರೆದುಕೊಂಡು ಹೋಗುವುದು ಉಚಿತವಲ್ಲ.॥4॥
ಮೂಲಮ್ - 5
ಅಹಮೇವ ಧನುಷ್ಪಾಣಿರ್ಗೋಪ್ತಾ ಸಮರಮೂರ್ಧನಿ ।
ಯಾವತ್ಪ್ರಾಣಾನ್ ಧರಿಷ್ಯಾಮಿ ತಾವದ್ಯೋತ್ಸ್ಯೇ ನಿಶಾಚರೈಃ ॥
ಅನುವಾದ
ನಾನು ಸ್ವತಃ ಕೈಯಲ್ಲಿ ಧನುರ್ಬಾಣಗಳನ್ನು ಧರಿಸಿ ಯುದ್ಧಕ್ಕೆ ಸನ್ನದ್ಧನಾಗಿ ನಿಮ್ಮ ಯಜ್ಞವನ್ನು ರಕ್ಷಿಸುವೆನು. ಈ ದೇಹದಲ್ಲಿ ಪ್ರಾಣಗಳು ಇರುವತನಕ ನಾನು ನಿಶಾಚರರೊಂದಿಗೆ ಯುದ್ಧ ಮಾಡುತ್ತಾ ಇರುವೆನು.॥5॥
ಮೂಲಮ್ - 6
ನಿರ್ವಿಘ್ನಾ ವ್ರತಚರ್ಯಾ ಸಾ ಭವಿಷ್ಯತಿ ಸುರಕ್ಷಿತಾ ।
ಅಹಂ ತತ್ರ ಗಮಿಷ್ಯಾಮಿ ನ ರಾಮಂ ನೇತುಮರ್ಹಸಿ ॥
ಅನುವಾದ
ನನ್ನಿಂದ ಸುರಕ್ಷಿತವಾಗಿ ನಿಮ್ಮ ಅನುಷ್ಠಾನವು ಯಾವುದೇ ವಿಘ್ನಗಳಿಲ್ಲದೆ ಪೂರ್ಣವಾಗುವುದು; ಆದ್ದರಿಂದ ನಾನೇ ನಿಮ್ಮೊಂದಿಗೆ ಬರುವೆನು. ನೀವು ರಾಮನನ್ನು ಕರೆದುಕೊಂಡು ಹೋಗಬೇಡಿ.॥6॥
ಮೂಲಮ್ - 7
ಬಾಲೋ ಹ್ಯಕೃತಮಿದ್ಯಶ್ಚ ನ ಚ ವೇತ್ತಿ ಬಲಾಬಲಮ್ ।
ನ ಚಾಸ್ತ್ರಬಲಸಂಯುಕ್ತೋ ನ ಚ ಯುದ್ಧವಿಶಾರದಃ ॥
ಅನುವಾದ
ನನ್ನ ರಾಮನು ಇನ್ನೂ ಬಾಲಕನಾಗಿದ್ದಾನೆ. ಅವನು ಇಷ್ಟರವರೆಗೆ ಯುದ್ಧವಿದ್ಯೆಯನ್ನು ಕಲಿಯಲೇ ಇಲ್ಲ. ಇವನು ಬೇರೆಯವರ ಬಲಾಬಲಗಳನ್ನು ತಿಳಿಯುವುದಿಲ್ಲ. ಇವನು ಅಸ್ತ್ರ ಬಲದಿಂದ ಸಂಪನ್ನನಾಗಿಲ್ಲ ಹಾಗೂ ಯುದ್ಧ ಕಲೆಯಲ್ಲಿಯೂ ನಿಪುಣನಲ್ಲ.॥7॥
ಮೂಲಮ್ - 8
ನ ಚಾಸೌ ರಕ್ಷಸಾಂ ಯೋಗ್ಯಃ ಕೂಟಯುದ್ಧಾ ಹಿ ರಾಕ್ಷಸಾಃ ।
ವಿಪ್ರಯುಕ್ತೋ ಹಿ ರಾಮೇಣ ಮುಹೂರ್ತಮಪಿ ನೋತ್ಸಹೇ ॥
ಮೂಲಮ್ - 9½
ಜೀವಿತುಂ ಮುನಿಶಾರ್ದೂಲಂ ನ ರಾಮಂ ನೇತುಮರ್ಹಸಿ ।
ಯದಿ ವಾ ರಾಘವಂ ಬ್ರಹ್ಮನ್ನೇತುಮಿಚ್ಛಸಿ ಸುವ್ರತ ॥
ಚತುರಂಗಸಮಾಯುಕ್ತಂ ಮಯಾ ಸಹ ಚ ತಂನಯ ।
ಅನುವಾದ
ಆದ್ದರಿಂದ ರಾಕ್ಷಸರೊಡನೆ ಯುದ್ಧಮಾಡಲು ಯೋಗ್ಯನಲ್ಲ; ಏಕೆಂದರೆ, ರಾಕ್ಷಸರು ಮಾಯೆಯಿಂದ, ಕಪಟದಿಂದ ಯುದ್ಧ ಮಾಡುತ್ತಾರೆ. ಅಲ್ಲದೆ ರಾಮವಿಯೋಗವಾದಾಗ ನಾನು ಎರಡು ಗಳಿಗೆಯೂ ಬದುಕಿರಲಾರೆನು. ಮುನಿಶ್ರೇಷ್ಠರೇ! ಅದಕ್ಕಾಗಿ ತಾವು ನನ್ನ ರಾಮನನ್ನು ಕರೆದುಕೊಂಡು ಹೋಗಬೇಡಿ. ನಿಮಗೆ ರಾಮನನ್ನೇ ಕರೆದುಕೊಂಡು ಹೋಗುವ ಇಚ್ಛೆ ಇದ್ದರೆ, ಚತುರಂಗಿಣಿ ಸೈನ್ಯದೊಂದಿಗೆ ನಾನೂ ಬರುವೆನು. ನನ್ನೊಂದಿಗೆ ಇವನು ಬರಲಿ.॥8-9½॥
ಮೂಲಮ್ - 10½
ಷಷ್ಟಿರ್ವರ್ಷಸಹಸ್ರಾಣಿ ಜಾತಸ್ಯ ಮಮ ಕೌಶಿಕ ॥
ಕೃಚ್ಛ್ರೇಣೋತ್ಪಾದಿತಶ್ಚಾಯಂ ನ ರಾಮಂ ನೇತುಮರ್ಹಸಿ ।
ಅನುವಾದ
ಕುಶಿಕನಂದನರೇ! ನಾನು ಅರವತ್ತು ಸಾವಿರ ವರ್ಷದ ಮುದುಕನಾಗಿದ್ದೇನೆ. ಈ ವೃದ್ಧಾಪ್ಯದಲ್ಲಿ ಬಹಳ ಕಷ್ಟದಿಂದ ನನಗೆ ಪುತ್ರಪ್ರಾಪ್ತಿಯಾಗಿದೆ. ಆದ್ದರಿಂದ ತಾವು ರಾಮನನ್ನು ಕರೆದುಕೊಂಡು ಹೋಗಬೇಡಿ.॥10½॥
ಮೂಲಮ್ - 11½
ಚತುರ್ಣಾಮಾತ್ಮಜಾನಾಂ ಹಿ ಪ್ರೀತಿಃ ಪರಮಿಕಾ ಮಮ ॥
ಜ್ಯೇಷ್ಠೇ ಧರ್ಮಪ್ರಧಾನೇ ಚ ನ ರಾಮಂ ನೇತುಮರ್ಹಸಿ ।
ಅನುವಾದ
ಧರ್ಮಪ್ರಧಾನವಾದ ರಾಮನು ನನ್ನ ನಾಲ್ವರು ಪುತ್ರರಲ್ಲಿ ಹಿರಿಯವನಾಗಿದ್ದಾನೆ. ಆದ್ದರಿಂದ ಅವನ ಮೇಲೆ ನನಗೆ ಪ್ರೇಮವು ಎಲ್ಲರಿಗಿಂತ ಹೆಚ್ಚಾಗಿದೆ. ಆದ್ದರಿಂದ ರಾಮನನ್ನು ಕರೆದುಕೊಂಡು ಹೋಗಬೇಡಿರಿ.॥11½॥
ಮೂಲಮ್ - 12
ಕಿಂ ವೀರ್ಯಾ ರಾಕ್ಷಸಾಸ್ತೇ ಚ ಕಸ್ಯ ಪುತ್ರಾಶ್ಚ ಕೇಚ ತೇ ॥
ಮೂಲಮ್ - 13
ಕಥಂ ಪ್ರಮಾಣಾಃ ಕೇ ಚೈತಾನ್ ರಕ್ಷಂತಿ ಮುನಿಪುಂಗವ ।
ಕಥಂ ಚ ಪ್ರತಿಕರ್ತವ್ಯಂ ತೇಷಾಂ ರಾಮೇಣ ರಕ್ಷಸಾಮ್ ॥
ಅನುವಾದ
ಆ ರಾಕ್ಷಸರು ಎಂತಹ ಪರಾಕ್ರಮಿಗಳಾಗಿದ್ದಾರೆ? ಯಾರ ಪುತ್ರರು? ಅವರ ನಿಲುವು ಹೇಗಿದೆ? ಅವರನ್ನು ಯಾರು ರಕ್ಷಿಸುತ್ತಾರೆ? ಮುನೀಶ್ವರರೇ! ಅಂತಹ ರಾಕ್ಷಸರನ್ನು ರಾಮನು ಹೇಗೆ ಎದುರಿಸಬಲ್ಲನು.॥12-13॥
ಮೂಲಮ್ - 14½
ಮಾಮಕೈರ್ವಾ ಬಲೈರ್ಬ್ರಹ್ಮನ್ಮಯಾ ವಾ ಕೂಟಯೋಧಿನಾಮ್ ।
ಸರ್ವಂ ಮೇ ಶಂಸ ಭಗವನ್ಕಥಂ ತೇಷಾಂ ಮಯಾ ರಣೇ ॥
ಸ್ಥಾತವ್ಯಂ ದುಷ್ಟಭಾವಾನಾಂ ವೀರ್ಯೋತ್ಸಿಕ್ತಾ ಹಿ ರಾಕ್ಷಸಾಃ ।
ಅನುವಾದ
ಬ್ರಹ್ಮನ್! ನನ್ನ ಸೈನಿಕರಿಗೆ ಅಥವಾ ಸ್ವತಃ ನನಗೆ ಆ ಮಾಯಾವೀ ರಾಕ್ಷಸರ ಪ್ರತೀಕಾರ ಹೇಗೆ ಮಾಡಬೇಕು ಇವೆಲ್ಲವನ್ನು ನನಗೆ ತಿಳಿಸಿರಿ. ಪೂಜ್ಯರೇ! ಅದು ರಾಕ್ಷಸರನ್ನು ಯುದ್ಧದಲ್ಲಿ ನಾನು ದುಷ್ಟರನ್ನು ಹೇಗೆ ಎದುರಿಸಬೇಕು ತಿಳಿಸಿರಿ, ಏಕೆಂದರೆ ರಾಕ್ಷಸರು ತುಂಬಾ ಬಲಾಢ್ಯರಾಗಿರುತ್ತಾರೆ.॥14½॥
ಮೂಲಮ್ - 15
ತಸ್ಯ ತದ್ವಚನಂ ಶ್ರುತ್ವಾ ವಿಶ್ವಾಮಿತ್ರೋಽಭ್ಯಭಾಷತ ॥
ಮೂಲಮ್ - 16
ಪೌಲಸ್ತ್ಯವಂಶಪ್ರಭವೋ ರಾವಣೋ ನಾಮ ರಾಕ್ಷಸಃ ।
ಸ ಬ್ರಹ್ಮಣಾ ದತ್ತವರ ಸ್ತ್ರೈಲೋಕ್ಯಂ ಬಾಧತೇ ಭೃಶಮ್ ॥
ಮೂಲಮ್ - 17½
ಮಹಾಬಲೋ ಮಹಾವೀರ್ಯೋ ರಾಕ್ಷಸೈರ್ಬಹುಭಿರ್ವೃತಃ ।
ಶ್ರೂಯತೇ ಚ ಮಹಾರಾಜ ರಾವಣೋ ರಾಕ್ಷಸಾಧಿಪಃ ॥
ಸಾಕ್ಷಾದ್ವೈಶ್ರಣಭ್ರಾತಾ ಪುತ್ರೋ ವಿಶ್ರವಸೋ ಮುನೇಃ ।
ಅನುವಾದ
ದಶರಥನ ಈ ಮಾತನ್ನು ಕೇಳಿ ವಿಶ್ವಾಮಿತ್ರರು ಹೇಳಿದರು - ಮಹಾರಾಜಾ! ಮಹರ್ಷಿ ಪುಲಸ್ತ್ಯನ ಕುಲದಲ್ಲಿ ಉತ್ಪನ್ನನಾದ ರಾವಣನೆಂಬ ಪ್ರಸಿದ್ಧ ರಾಕ್ಷಸನಿದ್ದಾನೆ. ಅವನಿಗೆ ಬ್ರಹ್ಮದೇವರಿಂದ ಬಯಸಿದ ವರಪ್ರಾಪ್ತವಾಗಿದೆ. ಆದ್ದರಿಂದ ಮಹಾ ಬಲಶಾಲಿಯಾಗಿ, ಪರಾಕ್ರಮಿಯಾದ ಅವನು ಅನೇಕ ರಾಕ್ಷಸರಿಂದ ಕೂಡಿಕೊಂಡು ಮೂರು ಲೋಕದ ನಿವಾಸಿಗಳಿಗೆ ಅತ್ಯಂತ ಕಷ್ಟ ಕೊಡುತ್ತಿದ್ದಾನೆ. ರಾಕ್ಷಸರಾಜ ರಾವಣನು ವಿಶ್ರವಾಮುನಿಯ ಔರಸ ಪುತ್ರನಾಗಿದ್ದು, ಕುಬೇರನ ತಮ್ಮನಾಗಿದ್ದಾನೆ.॥15-17½॥
ಮೂಲಮ್ - 18
ಯದಾ ನ ಖಲು ಯಜ್ಞಸ್ಯ ವಿಘ್ನಕರ್ತಾ ಮಹಾಬಲಃ ॥
ಮೂಲಮ್ - 19
ತೇನ ಸಂಚೋದಿತೌ ತೌ ತು ರಾಕ್ಷಸೌ ಸುಮಹಾಬಲೌ ।
ಮಾರೀಚಶ್ಚ ಸುಬಾಹುಶ್ಚ ಯಜ್ಞವಿಘ್ನಂ ಕರಿಷ್ಯತಃ ॥
ಅನುವಾದ
ಆ ಮಹಾಬಲಿ ಸ್ವತಃ ಬಂದು ಯಜ್ಞದಲ್ಲಿ ವಿಘ್ನವನ್ನುಂಟುಮಾಡುವುದಿಲ್ಲ. (ಇದು ತನಗೆ ತುಚ್ಛವಾದ ಕಾರ್ಯವೆಂದು ತಿಳಿಯುತ್ತಾನೆ.) ಅದಕ್ಕಾಗಿ ಅವನು ಪ್ರೇರೇಪಿಸಿದ ಇಬ್ಬರ ಮಹಾಬಲಶಾಲಿ ರಾಕ್ಷಸರಾದ ಮಾರೀಚ ಮತ್ತು ಸುಬಾಹುಗಳು ಯಜ್ಞದಲ್ಲಿ ವಿಘ್ನವುಂಟುಮಾಡುತ್ತಿದ್ದಾರೆ.॥18-19॥
ಮೂಲಮ್ - 20
ಇತ್ಯುಕ್ತೋ ಮುನಿನಾ ತೇನ ರಾಜೋವಾಚ ಮುನಿಂ ತದಾ ।
ನ ಹಿ ಶಕ್ತೋಽಸ್ಮಿ ಸಂಗ್ರಾಮೇ ಸ್ಥಾತುಂ ತಸ್ಯ ದುರಾತ್ಮನಃ ॥
ಅನುವಾದ
ವಿಶ್ವಾಮಿತ್ರ ಮುನಿಗಳು ಹೀಗೆ ಹೇಳಿದಾಗ ದಶರಥನು ‘ಮುನಿಗಳೇ! ಆ ದುರಾತ್ಮನಾದ ರಾವಣನ ಮುಂದೆ ನಾನೂ ಕೂಡ ನಿಲ್ಲಲಾರೆನು’ ಎಂದು ನುಡಿದನು.॥20॥
ಮೂಲಮ್ - 21
ಸ ತ್ವಂ ಪ್ರಸಾದಂ ಧರ್ಮಜ್ಞ ಕುರುಷ್ವ ಮಮ ಪುತ್ರಕೇ ।
ಮಮ ಚೈವಾಲ್ಪಭಾಗ್ಯಸ್ಯ ದೈವತಂ ಹಿ ಭವಾನ್ಗುರುಃ ॥
ಅನುವಾದ
ಧರ್ಮಜ್ಞರಾದ ಮಹರ್ಷಿಗಳೇ! ತಾವು ನನ್ನ ಪುತ್ರನ ಮೇಲೆ ಹಾಗೂ ಮಂದಭಾಗ್ಯನಾದ ನನ್ನ ಮೇಲೆ ಕೃಪೆದೋರಿರಿ; ಏಕೆಂದರೆ ನೀವು ನನಗೆ ದೇವತೆ ಹಾಗೂ ಗುರುಗಳಾಗಿದ್ದೀರಿ.॥21॥
ಮೂಲಮ್ - 22
ದೇವದಾನವಗಂಧರ್ವಾ ಯಕ್ಷಾಃ ಪತಗಪನ್ನಗಾಃ ।
ನ ಶಕ್ತಾ ರಾವಣಂ ಸೋಢುಂ ಕಿಂ ಪುನರ್ಮಾನವಾ ಯುಧಿ ॥
ಅನುವಾದ
ಯುದ್ಧದಲ್ಲಿ ರಾವಣನ ಪರಾಕ್ರಮವನ್ನು ದೇವತೆಗಳು, ದಾನವರು, ಗಂಧರ್ವರು, ಯಕ್ಷರು, ಗರುಡ ಮತ್ತು ನಾಗರೂ ಕೂಡ ಸಹಿಸಲಾರರು. ಹಾಗಿರುವಾಗ ಮನುಷ್ಯರ ಮಾತಾದರೂ ಏನು.॥22॥
ಮೂಲಮ್ - 23½
ಸ ತು ವೀರ್ಯವತಾಂ ವೀರ್ಯಮಾದತ್ತೇ ಯುಧಿ ರಾವಣಃ ।
ತೇನ ಚಾಹಂ ನ ಶಕ್ತೋಽಸ್ಮಿ ಸಂಯೋದ್ಧುಂ ತಸ್ಯ ವಾ ಬಲೈಃ ॥
ಸಬಲೋ ವಾ ಮುನಿಶ್ರೇಷ್ಠ ಸಹಿತೋ ವಾ ಮಮಾತ್ಮಜೈಃ ।
ಅನುವಾದ
ಮುನಿಶ್ರೇಷ್ಠರೇ! ರಾವಣನು ಸಮರಾಂಗಣದಲ್ಲಿ ಬಲಿಷ್ಠರ ಬಲವನ್ನೂ ಅಪಹರಿಸುವನು, ಆದ್ದರಿಂದ ನಾನು ನನ್ನ ಸೈನ್ಯ ಮತ್ತು ಪುತ್ರರೊಂದಿಗೂ ಕೂಡ, ಅವನೊಂದಿಗೆ ಹಾಗೂ ಅವನ ಸೈನ್ಯದೊಂದಿಗೆ ಯುದ್ಧಮಾಡಲು ಅಸಮರ್ಥನಾಗಿದ್ದೇನೆ.॥23½॥
ಮೂಲಮ್ - 24½
ಕಥಮಪ್ಯಮರಪ್ರಖ್ಯಂ ಸಂಗ್ರಾಮಾಣಾಮಕೋವಿದಮ್ ॥
ಬಾಲಂ ಮೇ ತನಯಂ ಬ್ರಹ್ಮನ್ನೈವ ದಾಸ್ಯಾಮಿ ಪುತ್ರಕಮ್ ।
ಅನುವಾದ
ಬ್ರಹ್ಮರ್ಷಿಯೇ! ಈ ನನ್ನ ದೇಪೋಪಮ ಪುತ್ರನು ಯುದ್ಧ ಕಲೆಯಿಂದ ಸರ್ವಥಾ ಅನಭಿಜ್ಞನಾಗಿದ್ದಾನೆ. ಅವನಿನ್ನೂ ಚಿಕ್ಕವನು ಆದ್ದರಿಂದ ನಾನು ಯಾವ ರೀತಿಯಿಂದಲೂ ಅವನನ್ನು ಕಳುಹಿಸಲಾರೆ.॥24½॥
ಮೂಲಮ್ - 25
ಅಥ ಕಾಲೋಪವೌ ಯುದ್ಧೇ ಸುತೌ ಸುಂದೋಪಸುಂದಯೋಃ ॥
ಮೂಲಮ್ - 26
ಯಜ್ಞವಿಘ್ನಕರೌ ತೌ ತೇ ನೈವ ದಾಸ್ಯಾಮಿ ಪುತ್ರಕಮ್ ।
ಮಾರೀಚಶ್ಚ ಸುಬಾಹುಶ್ಚ ವೀರ್ಯವಂತೌ ಸುಶಿಕ್ಷಿತೌ ॥
ಅನುವಾದ
ಮಾರೀಚ ಮತ್ತು ಸುಬಾಹು ಇವರು ಸುಪ್ರಸಿದ್ಧ ದೈತ್ಯ ಸುಂದ ಹಾಗೂ ಉಪಸುಂದನ ಮಕ್ಕಳಾಗಿದ್ದಾರೆ. ಅವರಿಬ್ಬರೂ ಯುದ್ಧದಲ್ಲಿ ಯಮನಂತೆ ಇದ್ದಾರೆ. ಅವರೇ ನಿಮ್ಮ ಯಜ್ಞದಲ್ಲಿ ವಿಘ್ನವನ್ನೊಡುವುದಾದರೆ, ಅವರನ್ನು ಎದುರಿಸಲು ನಾನು ನನ್ನ ಪುತ್ರನನ್ನು ಕೊಡಲಾರೆ; ಏಕೆಂದರೆ ಅವರಿಬ್ಬರೂ ಪ್ರಬಲ ಪರಾಕ್ರಮಿ ಮತ್ತು ಯುದ್ಧದಲ್ಲಿ ಉತ್ತಮ ಶಿಕ್ಷಿತರಾಗಿದ್ದಾರೆ.॥25-26॥
ಮೂಲಮ್ - 27
ತಯೋರನ್ಯತರಂ ಯೋದ್ಧುಂ ಯಾಸ್ಯಾಮಿ ಸಸುಹೃದ್ ಗಣಃ ।
ಅನ್ಯಥಾ ತ್ವನುನೇಷ್ಯಾಮಿ ಭವಂತಂ ಸಹಬಾಂಧವಃ ॥
ಅನುವಾದ
ನಾನು ಅವರಿಬ್ಬರಲ್ಲಿ ಒಬ್ಬನ ಜೊತೆಗೆ ಯುದ್ಧ ಮಾಡಲು ನನ್ನ ಸುಹೃದರೊಂದಿಗೆ ಬರುವೆನು. ಅಲ್ಲದೆ ತಾವು ನನ್ನನ್ನು ಕರೆದುಕೊಂಡು ಹೋಗಲು ಬಯಸದಿದ್ದರೆ, ನಾನು ಬಂಧು ಬಾಂಧವರೊಂದಿಗೆ ತಮ್ಮನ್ನು ಬೇಡಿಕೊಳ್ಳುವೆನು-ನೀವು ರಾಮನನ್ನು ಬಿಟ್ಟುಬಿಡಿರಿ.॥27॥
ಮೂಲಮ್ - 28
ಇತಿ ನರಪತಿಜಲ್ಪನಾದ್ ದ್ವಿಜೇಂದ್ರಂ
ಕುಶಿಕಸುತಂ ಸುಮಹಾನ್ವಿವೇಶ ಮನ್ಯುಃ ।
ಸುಹುತ ಇವ ಮಖೇಽಗ್ನಿರಾಜ್ಯಸಿಕ್ತಃ
ಸಮಭವದುಜ್ಜ್ವಲಿತೋ ಮಹರ್ಷಿವಹ್ನಿಃ ॥
ಅನುವಾದ
ದಶರಥನ ಈ ಮಾತನ್ನು ಕೇಳಿ ವಿಪ್ರವರ ಕುಶಿಕನಂದನ ವಿಶ್ವಾಮಿತ್ರರ ಮನಸ್ಸಿನಲ್ಲಿ ಕ್ರೋಧ ಉಂಟಾಯಿತು. ಯಜ್ಞ ಶಾಲೆಯಲ್ಲಿ ಅಗ್ನಿಗೆ ತುಪ್ಪ ಸುರಿದರೆ ಅದು ಉರಿದೇಳುವಂತೆ ಬೆಂಕಿಯಂತಿರುವ ತೇಜಸ್ವೀ ವಿಶ್ವಾಮಿತ್ರರೂ ಕೂಡ ಕ್ರೋಧದಿಂದ ಉರಿದೆದ್ದರು.॥28॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಇಪ್ಪತ್ತನೆಯ ಸರ್ಗ ಪೂರ್ಣವಾಯಿತು. ॥20॥