वाचनम्
ಭಾಗಸೂಚನಾ
ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕಳುಹಿಸಿಕೊಡುವಂತೆ ಕೇಳಿದುದು, ದಶರಥನ ದುಃಖ
ಮೂಲಮ್ - 1
ತಚ್ಛ್ರುತ್ವಾ ರಾಜಸಿಂಹಸ್ಯ ವಾಕ್ಯಮದ್ಭುತಮಿಸ್ತರಮ್ ।
ಹೃಷ್ಟರೋಮಾ ಮಹಾತೇಜಾ ವಿಶ್ವಾಮಿತ್ರೋಽಭ್ಯಭಾಷತ ॥
ಅನುವಾದ
ಅದ್ಭುತವಾಗಿಯೂ, ವಿಸ್ತಾರವಾಗಿಯೂ ಇದ್ದ ನೃಪಶ್ರೇಷ್ಠ ದಶರಥನ ಮಾತನ್ನು ಕೇಳಿದ ಮಹಾತೇಜಸ್ವೀ ವಿಶ್ವಾಮಿತ್ರರು ಪುಳಕಿತರಾಗಿ ಇಂತು ನುಡಿದರು.॥1॥
ಮೂಲಮ್ - 2
ಸದೃಶಂ ರಾಜ ಶಾರ್ದೂಲ ತವೈವ ಭುವಿ ನಾನ್ಯತಃ ।
ಮಹಾವಂಶಪ್ರಸೂತಸ್ಯ ವಸಿಷ್ಠವ್ಯಪದೇಶಿನಃ ॥
ಅನುವಾದ
ರಾಜಸಿಂಹನೇ! ನೀನಾಡಿದ ಮಾತು ನಿನಗೆ ಯೋಗ್ಯವೇ ಆಗಿದೆ. ಈ ಪೃಥ್ವಿಯಲ್ಲಿ ಬೇರೆಯವರ ಬಾಯಿಯಿಂದ ಇಂತಹ ಉದಾರ ಮಾತುಗಳು ಬರುವ ಸಂಭವವೇ ಇಲ್ಲ. ಏಕೆಂದರೆ, ನೀನು ಮಹಾಕುಲದಲ್ಲಿ ಹುಟ್ಟಿರುವೆ ಹಾಗೂ ವಸಿಷ್ಠರಂತಹ ಮಹರ್ಷಿಗಳು ನಿನಗೆ ಉಪದೇಶಕರಾಗಿದ್ದಾರೆ.॥2॥
ಮೂಲಮ್ - 3
ಯತ್ತು ಮೇ ಹೃದ್ಗತಂ ವಾಕ್ಯಂ ತಸ್ಯ ಕಾರ್ಯಸ್ಯ ನಿಶ್ಚಯಮ್ ।
ಕುರುಷ್ವ ರಾಜಶಾರ್ದೂಲ ಭವ ಸತ್ಯಪ್ರತಿಶ್ರವಃ ॥
ಅನುವಾದ
ಸರಿ, ನನ್ನ ಮನಸ್ಸಿನಲ್ಲಿರುವ ಮಾತನ್ನು ಈಗ ಕೇಳು, ನೃಪಶ್ರೇಷ್ಠನೇ! ನಾನು ಹೇಳಿದುದನ್ನು ಕೇಳಿ ಆ ಕಾರ್ಯವನ್ನು ಪೂರ್ಣಗೊಳಿಸಲು ನಿಶ್ಚಯಿಸಿ, ನನ್ನ ಕಾರ್ಯವನ್ನು ಪೂರ್ಣಗೊಳಿಸುವಂತೆ ಪ್ರತಿಜ್ಞೆ ಮಾಡಿರುವಿ. ಪ್ರತಿಜ್ಞೆಯನ್ನು ಸತ್ಯವಾಗಿಸು.॥3॥
ಮೂಲಮ್ - 4
ಅಹಂ ನಿಯಮಮಾತಿಷ್ಠೇ ಸಿದ್ಧ್ಯರ್ಥಂ ಪುರುಷರ್ಷಭ ।
ತಸ್ಯ ವಿಘ್ನಕರೌ ದ್ವೌ ತು ರಾಕ್ಷಸೌ ಕಾಮರೂಪಿಣೌ ॥
ಅನುವಾದ
ಪುರುಷಶ್ರೇಷ್ಠನೇ! ಸಿದ್ಧಿಗಾಗಿ ನಾನು ಒಂದು ನಿಯಮವನ್ನು ಅನುಷ್ಠಾನ ಮಾಡುತ್ತಿದ್ದೇನೆ; ಅದರಲ್ಲಿ ಕಾಮರೂಪಿಗಳಾದ ಇಬ್ಬರು ರಾಕ್ಷಸರು ವಿಘ್ನವನ್ನೊಡುತ್ತಿದ್ದಾರೆ.॥4॥
ಮೂಲಮ್ - 5
ವ್ರತೇ ತು ಬಹುಶಶ್ಚೀರ್ಣೇ ಸಮಾಪ್ತ್ಯಾಂ ರಾಕ್ಷಸಾವಿಮೌ ।
ಮಾರೀಚಶ್ಚ ಸುಬಾಹುಶ್ಚ ವೀರ್ಯವಂತೌ ಸುಶಿಕ್ಷಿತೌ ॥
ಅನುವಾದ
ನನ್ನ ಈ ನಿಯಮ ಕಾರ್ಯವು ಹೆಚ್ಚಿನಂಶ ಪೂರ್ಣವಾಗಿದೆ. ಈಗ ಅದರ ಸಮಾಪ್ತಿಯ ಸಮಯದಲ್ಲಿ ಆ ಇಬ್ಬರು ರಾಕ್ಷಸರು ವಿಘ್ನ ತಂದೊಡ್ಡಿದ್ದಾರೆ. ಮಾರೀಚ ಮತ್ತು ಸುಬಾಹು ಎಂಬ ಆ ಇಬ್ಬರು ಮಹಾಬಲಶಾಲಿಗಳೂ, ನಿಪುಣರೂ ಆಗಿದ್ದಾರೆ.॥5॥
ಮೂಲಮ್ - 6½
ತೌ ಮಾಂಸರುಧಿರೌಘೇಣೇ ವೇದಿಂ ತಾಮಭ್ಯವರ್ಷತಾಮ್ ।
ಅವಧೂತೇ ತಥಾಭೂತೇ ತಸ್ಮಿನ್ನಿಯಮನಿಶ್ಚಯೇ ॥
ಕೃತಶ್ರಮೋ ನಿರುತ್ಸಾಹಸ್ತಸ್ಮಾದ್ದೇಶಾದಪಾಕ್ರಮೇ ।
ಅನುವಾದ
ಅವರು ನನ್ನ ಯಜ್ಞವೇದಿಕೆಯಲ್ಲಿ ರಕ್ತ-ಮಾಂಸದ ಮಳೆ ಸುರಿಸಿರುವರು. ಹೀಗೆ ಕೊನೆಯ ಗಳಿಗೆಯಲ್ಲಿ ನಿಯಮದಲ್ಲಿ ವಿಘ್ನ ಉಂಟಾದ್ದರಿಂದ ನನ್ನ ಪರಿಶ್ರಮವೆಲ್ಲ ವ್ಯರ್ಥವಾಗಿ, ಉತ್ಸಾಹ ಕಳೆದುಕೊಂಡು ಅಲ್ಲಿಂದ ಹೊರಟು ಬಂದಿರುವೆನು.॥6½॥
ಮೂಲಮ್ - 7
ನ ಚ ಮೇ ಕ್ರೋಧಮುತ್ಸ್ರಷ್ಟುಂ ಬುದ್ಧಿರ್ಭವತಿಪಾರ್ಥಿವ ॥
ಅನುವಾದ
ಭೂಪಾಲನೇ! ಅವರ ಮೇಲೆ ಸಿಟ್ಟಾಗಲು, ಶಾಪ ಕೊಡಲು ನನ್ನ ಮನಸ್ಸು ಒಪ್ಪುತ್ತಿಲ್ಲ.॥7॥
ಮೂಲಮ್ - 8½
ತಥಾಭೂತಾ ಹಿ ಸಾ ಚರ್ಯಾ ನ ಶಾಪಸ್ತತ್ರ ಮುಚ್ಯತೇ ।
ಸ್ವಪುತ್ರಂ ರಾಜಶಾರ್ದೂಲ ರಾಮಂ ಸತ್ಯಪರಾಕ್ರಮಮ್ ॥
ಕಾಕಪಕ್ಷಧರಂ ವೀರಂ ಜ್ಯೇಷ್ಠಂ ಮೇ ದಾತುಮರ್ಹಸಿ ।
ಅನುವಾದ
ಏಕೆಂದರೆ ಅದನ್ನು ಪ್ರಾರಂಭಿಸಿದ ಬಳಿಕ ಯಾರಿಗೂ ಶಾಪ ಕೊಡುವಂತಿಲ್ಲ. ಅದರ ನಿಯಮವೇ ಹಾಗಿದೆ, ಆದ್ದರಿಂದ ನೃಪ ಶ್ರೇಷ್ಠನೇ! ನೀನು ನಿನ್ನ ಕಾಕಪಕ್ಷಧರ, ಸತ್ಯಪರಾಕ್ರಮೀ, ಶೂರ-ವೀರ ಜೇಷ್ಠ ಪುತ್ರನಾದ ಶ್ರೀರಾಮನನ್ನು ನನಗೆ ಕೊಡು.॥8½॥
ಮೂಲಮ್ - 9
ಶಕ್ತೋ ಹ್ಯೇಷ ಮಯಾ ಗುಪ್ತೋ ದಿವ್ಯೇನ ಸ್ವೇನ ತೇಜಸಾ ॥
ಮೂಲಮ್ - 10
ರಾಕ್ಷಸಾ ಯೇ ವಿಕರ್ತಾರಸ್ತೇಷಾಮಪಿ ವಿನಾಶನೇ ।
ಶ್ರೇಯಶ್ಚಾಸ್ಮೈ ಪ್ರದಾಸ್ಯಾಮಿ ಬಹುರೂಪಂ ನ ಸಂಶಯಃ ॥
ಅನುವಾದ
ಇವನು ನನ್ನಿಂದ ಸುರಕ್ಷಿತನಾಗಿ ತನ್ನ ದಿವ್ಯ ತೇಜದಿಂದ ಆ ವಿಘ್ನಕಾರೀ ರಾಕ್ಷಸರನ್ನು ನಾಶಮಾಡಲು ಸಮರ್ಥನಾಗಿದ್ದಾನೆ. ನಾನು ಇವನಿಗೆ ಅನೇಕ ಪ್ರಕಾರದ ಶ್ರೇಯಸ್ಸನ್ನು ಕೊಡುವೆನು, ಇದರಲ್ಲಿ ಸಂಶಯವೇ ಬೇಡ.॥9-10॥
ಮೂಲಮ್ - 11
ತ್ರಯಾಣಾಮಪಿ ಲೋಕಾನಾಂ ಯೇನ ಖ್ಯಾತಿಂ ಗಮಿಷ್ಯತಿ ।
ನ ಚ ತೌ ರಾಮಮಾಸಾದ್ಯ ಶಕ್ತೊ ಸ್ಥಾತುಂ ಕಥಂಚನ ॥
ಅನುವಾದ
ಆ ಶ್ರೇಯಸ್ಸನ್ನು ಪಡೆದು ಇವನು ಮೂರು ಲೋಕಗಳಲ್ಲಿಯೂ ವಿಖ್ಯಾತನಾಗುವನು. ಶ್ರೀರಾಮನ ಮುಂದೆ ಆ ರಾಕ್ಷಸರು ಯಾವ ರೀತಿಯಿಂದಲೂ ಬಂದು ನಿಲ್ಲಲಾರರು.॥11॥
ಮೂಲಮ್ - 12½
ನ ಚ ತೌ ರಾಘವಾದನ್ಯೋ ಹಂತುಮುತ್ಸಹತೇ ಪುಮಾನ್ ।
ವೀರ್ಯೋತ್ಸಿಕ್ತೌ ಹಿ ತೌ ಪಾಪೌ ಕಾಲಪಾಶವಶಂ ಗತೌ ॥
ರಾಮಸ್ಯ ರಾಜಶಾರ್ದೂಲ ನ ಪರ್ಯಾಪ್ತೌ ಮಹಾತ್ಮನಃ ।
ಅನುವಾದ
ಈ ರಘುನಂದನನಲ್ಲದೆ ಬೇರೆ ಯಾವನೇ ಪುರುಷನು ಆ ರಾಕ್ಷಸರನ್ನು ಕೊಲ್ಲುವ ಸಾಹಸ ಮಾಡಲಾರರು. ನೃಪಶ್ರೇಷ್ಠನೇ! ತನ್ನ ಬಲಗರ್ವಿತರಾದ ಆ ಇಬ್ಬರು ಪಾಪೀ ನಿಶಾಚರರು ಕಾಲಪಾಶಕ್ಕೆ ಬಲಿಯಾಗಿದ್ದಾರೆ. ಆದ್ದರಿಂದ ಮಹಾತ್ಮಾ ಶ್ರೀರಾಮನ ಮುಂದೆ ನಿಲ್ಲಲಾರರು.॥12½॥
ಮೂಲಮ್ - 13½
ನ ಚ ಪುತ್ರಗತಂ ಸ್ನೇಹಂ ಕರ್ತುಮರ್ಹಸಿ ಪಾರ್ಥಿವ ॥
ಅಹಂ ತೇ ಪ್ರತಿಜಾನಾಮಿ ಹತೌ ತೌ ವಿದ್ಧಿ ರಾಕ್ಷಸೌ ।
ಅನುವಾದ
ಭೂಪಾಲನೇ! ನೀನು ಪುತ್ರಸ್ನೇಹಕ್ಕೆ ಬಲಿಯಾಗಬೇಡ. ಆ ಇಬ್ಬರು ರಾಕ್ಷಸರು ಇವನ ಕೈಯಿಂದ ಸತ್ತರೆಂದೇ ನಾನು ಪ್ರತಿಜ್ಞಾಪೂರ್ವಕ ಹೇಳುತ್ತೇನೆ.॥13½॥
ಮೂಲಮ್ - 14½
ಅಹಂ ವೇದ್ಮಿ ಮಹಾತ್ಮಾನಂ ರಾಮಂ ಸತ್ಯಪರಾಕ್ರಮಮ್ ॥
ವಸಿಷ್ಠೋಽಪಿ ಮಹಾತೇಜಾ ಯೇ ಚೇಮೇ ತಪಸಿ ಸ್ಥಿತಾಃ ।
ಅನುವಾದ
ಸತ್ಯ ಪರಾಕ್ರಮಿಯಾದ ಶ್ರೀರಾಮನು ಯಾರು? ಇದನ್ನು ನಾನು ತಿಳಿದಿರುವೆನು. ಮಹಾ ತೇಜಸ್ವೀ ವಸಿಷ್ಠರು ಹಾಗೂ ಈ ಇತರ ತಪಸ್ವಿಗಳು ಅರಿತಿರುವರ.॥14½॥
ಮೂಲಮ್ - 15½
ಯದಿ ತೇ ಧರ್ಮಲಾಭಂ ತು ಯಶಶ್ಚ ಪರಮಂ ಭುವಿ ॥
ಸ್ಥಿರಮಿಚ್ಛಸಿ ರಾಜೇಂದ್ರ ರಾಮಂ ಮೇ ದಾತುಮರ್ಹಸಿ ।
ಅನುವಾದ
ರಾಜೇಂದ್ರನೇ! ನೀನು ಈ ಭೂಮಂಡಲದಲ್ಲಿ ಧರ್ಮ ಲಾಭ ಮತ್ತು ಉತ್ತಮ ಯಶವನ್ನು ಸ್ಥಿರವಾಗಿಡಲು ಬಯಸುವೆಯಾದರೆ ಶ್ರೀರಾಮನನ್ನು ನನಗೆ ಕೊಡು.॥15½॥
ಮೂಲಮ್ - 16½
ಯದ್ಯಭ್ಯನುಜ್ಞಾಂ ಕಾಕುತ್ಸ್ಥ ದದತೇ ತವ ಮಂತ್ರಿಣಃ ॥
ವಸಿಷ್ಠಪ್ರಮುಖಾಃ ಸರ್ವೇ ತತೋ ರಾಮಂ ವಿಸರ್ಜಯ ।
ಅನುವಾದ
ಕಕುಸ್ಥನಂದನಾ! ವಸಿಷ್ಠರೇ ಆದಿ ನಿನ್ನ ಎಲ್ಲ ಮಂತ್ರಿಗಳು ಅನುಮತಿ ಕೊಟ್ಟರೆ, ನೀನು ಶ್ರೀರಾಮನನ್ನು ನನ್ನ ಜೊತೆಗೆ ಕಳಿಸಿಕೊಡು.॥16½॥
ಮೂಲಮ್ - 17½
ಅಭಿಪ್ರೇತಮಸಂಸಕ್ತಮಾತ್ಮಜಂ ದಾತುಮರ್ಹಸಿ ॥
ದಶರಾತ್ರಂ ಹಿ ಯಜ್ಞಸ್ಯ ರಾಮಂ ರಾಜೀವಲೋಚನಮ್ ।
ಅನುವಾದ
ರಾಮನನ್ನು ಕರೆದುಕೊಂಡು ಹೋಗುವುದು ನನ್ನ ಅಭೀಷ್ಟವಾಗಿದೆ. ಇವನು ದೊಡ್ಡವನಾದ ಕಾರಣ ಈಗ ಆಸಕ್ತಿ ರಹಿತನಾಗಿದ್ದಾನೆ. ಆದ್ದರಿಂದ ನೀನು ಉಳಿದಿರುವ ಯಜ್ಞದ ಹತ್ತು ದಿನಗಳಿಗಾಗಿ ನಿನ್ನ ಪುತ್ರ ಕಮಲನಯನ ಶ್ರೀರಾಮನನ್ನು ನನಗೆ ಕೊಡು.॥17½॥
ಮೂಲಮ್ - 18½
ನಾತ್ಯೇತಿ ಕಾಲೋ ಯಜ್ಞಸ್ಯ ಯಥಾಯಂ ಮಮ ರಾಘವ ॥
ತಥಾ ಕುರುಷ್ವ ಭದ್ರಂ ತೇ ಮಾ ಚ ಶೋಕೇ ಮನಃ ಕೃಥಾಃ ।
ಅನುವಾದ
ರಘುನಂದನ! ನನ್ನ ಯಜ್ಞದ ಅವಧಿ ಕಳೆದು ಹೋಗದಂತೆ ನೀನು ಹೀಗೆ ಮಾಡು. ನಿನಗೆ ಮಂಗಳವಾಗಲೀ ನೀನು ನಿನ್ನ ಮನಸ್ಸನ್ನು ಶೋಕ ಮತ್ತು ಚಿಂತೆಯಲ್ಲಿ ತೊಡಗಿಸಬೇಡ.॥18½॥
ಮೂಲಮ್ - 19½
ಇತ್ಯೇವಮುಕ್ತ್ವಾ ಧರ್ಮಾತ್ಮಾ ಧರ್ಮಾರ್ಥಸಹಿತಂ ವಚಃ ॥
ವಿರರಾಮ ಮಹಾತೇಜಾ ವಿಶ್ವಾಮಿತ್ರೋ ಮಹಾಮತಿಃ ।
ಅನುವಾದ
ಹೀಗೆ ಧರ್ಮ ಮತ್ತು ಅರ್ಥದಿಂದ ಕೂಡಿದ ಮಾತನ್ನು ಹೇಳಿ ಧರ್ಮಾತ್ಮಾ ಮಹಾತೇಜಸ್ವೀ, ಪರಮ ಬುದ್ಧಿವಂತ ವಿಶ್ವಾಮಿತ್ರರು ಸುಮ್ಮನಾದರು.॥19½॥
ಮೂಲಮ್ - 20½
ಸ ತನ್ನಿಶಮ್ಯ ರಾಜೇಂದ್ರೋ ವಿಶ್ವಾಮಿತ್ರ ವಚಃ ಶುಭಮ್ ॥
ಶೋಕೇನ ಮಹತಾವಿಷ್ಟಶ್ಚಚಾಲ ಚ ಮುಮೋಹ ಚ ।
ಅನುವಾದ
ವಿಶ್ವಾಮಿತ್ರರ ಈ ಶುಭ ವಚನವನ್ನು ಕೇಳಿ ಮಹಾರಾಜಾ ದಶರಥನಿಗೆ ಪುತ್ರವಿಯೋಗದ ಆಶಂಕೆಯಿಂದ ಮಹಾ ದುಃಖವಾಯಿತು. ಅವನು ಅದರಿಂದ ಪೀಡಿತನಾಗಿ ನಡುಗುತ್ತಾ ನಿಶ್ಚೇಷ್ಟಿತನಾದನು.॥20½॥
ಮೂಲಮ್ - 21
ಲಬ್ಧಸಂಜ್ಞಸ್ತದೋತ್ಥಾಯ ವ್ಯಷೀದತ ಭಯಾನ್ವಿತಃ ॥
ಮೂಲಮ್ - 22
ಇತಿ ಹೃದಯ ಮನೋವಿದಾರಣಂ
ಮುನಿವಚನಂ ತದತೀವ ಶುಶ್ರುವಾನ್ ।
ನರಪತಿರಭವನ್ಮಹಾನ್ ಮಹಾತ್ಮಾ
ವೃಥಿತಮನಾಃ ಪ್ರಚಚಾಲ ಚಾಸನಾತ್ ॥
ಅನುವಾದ
ಸ್ವಲ್ಪ ಹೊತ್ತಿನಲ್ಲಿ ಅವನು ಎಚ್ಚರಗೊಂಡಾಗ ಭಯಗೊಂಡು ವಿಷಾದಿಸತೊಡಗಿದನು. ವಿಶ್ವಾಮಿತ್ರರ ಮಾತು ರಾಜನ ಹೃದಯ ಮತ್ತು ಮನಸ್ಸನ್ನು ಭೇದಿಸುವಂತಿತ್ತು. ಅದನ್ನು ಕೇಳಿ ಅವನ ಮನಸ್ಸಿಗೆ ತುಂಬಾ ವ್ಯಥೆಯಾಯಿತು. ಆ ಮಹಾತ್ಮಾ ಮಹಾರಾಜನು ತನ್ನ ಆಸನದಿಂದ ವಿಚಲಿತನಾಗಿ ಮೂರ್ಛೆ ಹೋದನು.॥21-22॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಹತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು. ॥19॥