०१८ रामजन्म

वाचनम्
ಭಾಗಸೂಚನಾ

ಋಷ್ಯಶೃಂಗರೂ, ರಾಜರೂ, ತಮ್ಮ - ತಮ್ಮ ದೇಶಗಳಿಗೆ ಪ್ರಯಾಣ ಮಾಡಿದುದು, ರಾಣಿಯರೊಂದಿಗೆ ದಶರಥನು ಪುರ ಪ್ರವೇಶಿಸಿದುದು, ರಾಮ, ಭರತ, ಲಕ್ಷ್ಮಣ, ಶತ್ರುಘ್ನರ ಜನನ, ಮಕ್ಕಳ ಶೀಲ-ಸ್ವಭಾವಗಳ ಮತ್ತು ಗುಣಗಳ ವರ್ಣನೆ, ದಶರಥನ ಸಭೆಗೆ ವಿಶ್ವಾಮಿತ್ರರ ಆಗಮನ

ಮೂಲಮ್ - 1

ನಿರ್ವೃತ್ತೇ ತು ಕ್ರತೌ ತಸ್ಮಿನ್ ಹಯಮೇಧೇ ಮಹಾತ್ಮನಃ ।
ಪ್ರತಿಗೃಹ್ಯಾಮರಾ ಭಾಗಾನ್ ಪ್ರತಿಜಗ್ಮುರ್ಯಥಾಗತಮ್ ॥

ಅನುವಾದ

ದಶರಥನು ಪುತ್ರಪ್ರಾಪ್ತಿಗಾಗಿ ಆರಂಭಿಕ ಅಶ್ವಮೇಧ ಯಾಗ ಹಾಗೂ ಪುತ್ರಕಾಮೇಷ್ಟಿಯೂ ಮುಗಿದು, ದೇವತೆಗಳೆಲ್ಲರೂ ತಮ್ಮ-ತಮ್ಮ ಹವಿಭಾರ್ಗವನ್ನು ಸ್ವೀಕರಿಸಿ ಸ್ವಸ್ಥಾನಗಳಿಗೆ ತೆರಳಿದರು.॥1॥

ಮೂಲಮ್ - 2

ಸಮಾಪ್ತದೀಕ್ಷಾನಿಯಮಃ ಪತ್ನೀಗಣಸಮನ್ವಿತಃ ।
ಪ್ರವಿವೇಶ ಪುರೀಂ ರಾಜಾ ಸಭೃತ್ಯಬಲವಾಹನಃ ॥

ಅನುವಾದ

ದೀಕ್ಷಾ ನಿಯಮ ಮುಗಿದಾಗ ರಾಜನು ತನ್ನ ರಾಣಿಯರೊಂದಿಗೆ, ಸೇವಕರೊಂದಿಗೆ, ವಾಹನಗಳೊಂದಿಗೆ ಅಯೋಧ್ಯಾ ಪುರಿಯನ್ನು ಪ್ರವೇಶಿಸಿದನು.॥2॥

ಮೂಲಮ್ - 3

ಯಥಾರ್ಹಂ ಪೂಜಿತಾಸ್ತೇನ ರಾಜ್ಞಾ ಚ ಪೃಥಿವೀಶ್ವರಾಃ ।
ಮುದಿತಾಃ ಪ್ರಯಯುರ್ದೇಶಾನ್ ಪ್ರಣಮ್ಯ ಮುನಿಪುಂಗವಮ್ ॥

ಅನುವಾದ

ಯಜ್ಞಕ್ಕಾಗಿ ಬಂದ ಬೇರೆ-ಬೇರೆ ದೇಶದ ರಾಜರೂ ಕೂಡ ಮಹಾರಾಜಾ ದಶರಥನಿಂದ ಸಮ್ಮಾನಿತರಾಗಿ, ಮುನಿವರ ವಸಿಷ್ಠರನ್ನು ಹಾಗೂ ಋಷ್ಯಶೃಂಗರನ್ನು ವಂದಿಸಿ ಸಂತೋಷದಿಂದ ತಮ್ಮ-ತಮ್ಮ ದೇಶಗಳಿಗೆ ತೆರಳಿದರು.॥3॥

ಮೂಲಮ್ - 4

ಶ್ರೀಮತಾಂ ಗಚ್ಛತಾಂ ತೇಷಾಂ ಸ್ವಗೃಹಾಣಿ ಪುರಾತ್ತತಃ ।
ಬಲಾನಿ ರಾಜ್ಞಾಂ ಶುಭ್ರಾಣಿ ಪ್ರಹೃಷ್ಟಾನಿ ಚಕಾಶಿರೇ ॥

ಅನುವಾದ

ಶ್ರೀಮಂತರಾದ ರಾಜರ ಸೈನ್ಯಗಳಿಗೆ ದಶರಥನು ನೂತನ ವಸ್ತ್ರಾದಿಗಳನ್ನು ಇತ್ತು ಸತ್ಕರಿಸಿದನು. ಅವುಗಳನ್ನು ಧರಿಸಿ ಸಂತೋಷದಿಂದ ತೆರಳುತ್ತಿದ್ದ ರಾಜರ ಸೈನ್ಯಗಳು ವಿಶೇಷವಾಗಿ ಶೋಭಿಸಿದವು.॥4॥

ಮೂಲಮ್ - 5

ಗತೇಷು ಪೃಥವೀಶೇಷು ರಾಜಾ ದಶರಥಃ ಪುನಃ ।
ಪ್ರವಿವೇಶ ಪುರೀಂ ಶ್ರೀಮಾನ್ಪುರಸ್ಕೃತ್ಯ ದ್ವಿಜೋತ್ತಮಾನ್ ॥

ಅನುವಾದ

ಆ ರಾಜರನ್ನು ಬೀಳ್ಕೊಟ್ಟು ಶ್ರೀಮಾನ್ ಮಹಾರಾಜಾ ದಶರಥನು ಶ್ರೇಷ್ಠ ಬ್ರಾಹ್ಮಣರನ್ನು ಮುಂದಿಟ್ಟುಕೊಂಡು ತನ್ನ ಅರಮನೆಯನ್ನು ಪ್ರವೇಶಿಸಿದನು.॥5॥

ಮೂಲಮ್ - 6

ಶಾಂತಯಾ ಪ್ರಯಯೌ ಸಾರ್ಧಂ ಋಷ್ಯಶೃಂಗಃ ಸುಪೂಜಿತಃ ।
ಅನುಗಮ್ಯಮಾನೋ ರಾಜ್ಞಾ ಚ ಸಾನುಯಾತ್ರೇಣ ಧೀಮತಾ ॥

ಅನುವಾದ

ರಾಜನಿಂದ ಅತ್ಯಂತ ಸಮ್ಮಾನಿತರಾದ ಋಷ್ಯಶಂಗ ಮುನಿಗಳು ಶಾಂತಾಳೊಂದಿಗೆ ತನ್ನ ಸ್ಥಾನಕ್ಕೆ ಹೊರಟು ಹೋದರು. ಆಗ ಸೇವಕರ ಸಹಿತ ಧೀಮಂತನಾದ ದಶರಥನು ಸ್ವಲ್ಪ ದೂರದವರೆಗೆ ಅವರ ಹಿಂದೆ ಹಿಂದೆ ಹೋಗಿ ಬೀಳ್ಕೊಟ್ಟನು.॥6॥

ಮೂಲಮ್ - 7

ಏವಂ ವಿಸೃಜ್ಯ ತಾನ್ಸರ್ವಾನ್ರಾಜಾ ಸಂಪೂರ್ಣಮಾನಸಃ ।
ಉವಾಸ ಸುಖಿತಸ್ತತ್ರ ಪುತ್ರೋತ್ಪತ್ತಿಂ ವಿಚಿಂತಯನ್ ॥

ಅನುವಾದ

ಈ ಪ್ರಕಾರ ಆ ಎಲ್ಲ ಅತಿಥಿಗಳನ್ನು ಬೀಳ್ಕೊಟ್ಟು ಸಲ ಮನೋರಥನಾದ ದಶರಥನು ಪುತ್ರೋತ್ಪತ್ತಿಯನ್ನು ನಿರೀಕ್ಷಿಸುತ್ತಾ ಬಹಳ ಸುಖದಿಂದ ಇರತೊಡಗಿದನು.॥7॥

ಮೂಲಮ್ - 8

ತತೋ ಯಜ್ಞೇ ಸಮಾಪ್ತೇ ತು ಋತೂನಾಂ ಷಟ್ ಸಮತ್ಯಯುಃ ।
ತತಶ್ಚ ದ್ವಾದಶೇ ಮಾಸೇ ಚೈತ್ರೇ ನಾವಮಿಕೇ ತಿಥೌ ॥

ಮೂಲಮ್ - 9

ನಕ್ಷತ್ರೇಽದಿತಿದೈವತ್ಯೇ ಸ್ಪೋಚ್ಚಸಂಸ್ಥೇಷು ಪಂಚಸು ।
ಗ್ರಹೇಷು ಕರ್ಕಟೇ ಲಗ್ನೇ ವಾಕ್ಪತಾವಿಂದುನಾ ಸಹ ॥

ಮೂಲಮ್ - 10

ಪ್ರೋದ್ಯಮಾನೇ ಜಗನ್ನಾಥಂ ಸರ್ವಲೋಕನಮಸ್ಕೃತಮ್
ಕೌಸಲ್ಯಾಜನಯದ್ರಾಮಂ ದಿವ್ಯಲಕ್ಷಣಸಂಯುತಮ್ ॥

ಅನುವಾದ

ಯಜ್ಞಸಮಾಪ್ತಿಯ ಬಳಿಕ ಆರು ಋತುಗಳು ಕಳೆದು ಹೋದಾಗ, ಹನ್ನೆರಡನೆಯ ತಿಂಗಳಾದ ಚೈತ್ರದ ಶುಕ್ಲಪಕ್ಷದ ನವಮೀ ತಿಥಿಯಲ್ಲಿ ಪುನರ್ವಸು ನಕ್ಷತ್ರ ಹಾಗೂ ಕರ್ಕಾಟಕ ಲಗ್ನದಲ್ಲಿ ಕೌಸಲ್ಯಾದೇವಿಯು ದಿವ್ಯ ಲಕ್ಷಣಗಳಿಂದ ಕೂಡಿದ ಸರ್ವಲೋಕ ವಂದಿತ ಜಗದೀಶ್ವರ ಶ್ರೀರಾಮನಿಗೆ ಜನ್ಮ ನೀಡಿದಳು. ಆಗ ಸೂರ್ಯ, ಮಂಗಳ, ಶನಿ, ಗುರು ಮತ್ತು ಶುಕ್ರ ಈ ಐದು ಗ್ರಹಗಳು ತಮ್ಮ ತಮ್ಮ ಉಚ್ಚಸ್ಥಾನದಲ್ಲಿ ಇದ್ದರು. ಲಗ್ನದಲ್ಲಿ ಚಂದ್ರನೊಡನೆ ಬೃಹಸ್ಪತಿ ವಿರಾಜಮಾನನಾಗಿದ್ದನು.॥8-10॥

ಮೂಲಮ್ - 11

ವಿಷ್ಣೋರರ್ಧಂ ಮಹಾಭಾಗಂ ಪುತ್ರಮೈಕ್ಷ್ವಾಕುನಂದನಮ್ ।
ಲೋಹಿತಾಕ್ಷಂ ಮಹಾಬಾಹುಂ ರಕ್ತೋಷ್ಠಂ ದುಂದುಭಿಸ್ವನಮ್ ॥

ಅನುವಾದ

ವಿಷ್ಣು ಸ್ವರೂಪವು ಪಾಯಸದ ಅರ್ಧಭಾಗದಿಂದ ಪ್ರಕಟವಾಗಿತ್ತು. ಕೌಸಲ್ಯೆಯ ಪುತ್ರ ಮಹಾಭಾಗ ಶ್ರೀರಾಮನು ಈಕ್ಷ್ವಾಕು ಕುಲದ ಆನಂದವನ್ನು ಹೆಚ್ಚಿಸುವವನಾಗಿದ್ದನು. ಅವನ ನೇತ್ರಗಳು ಸ್ವಲ್ಪ ಕೆಂಪಾಗಿದ್ದವು. ಅವನ ತುಟಿಗಳು ಕೆಂಪಾಗಿದ್ದು ಭುಜಗಳು ಉದ್ದವಾಗಿದ್ದವು ಮತ್ತು ಸ್ವರವು ದುಂದುಭಿಯ ಶಬ್ದದಂತೆ ಗಂಭೀರವಾಗಿತ್ತು.॥11॥

ಮೂಲಮ್ - 12

ಕೌಸಲ್ಯಾ ಶುಶುಭೇ ತೇನ ಪುತ್ರೇಣಾಮಿತತೇಜಸಾ ।
ಯಥಾ ವರೇಣ ದೇವಾನಾಮದಿತಿರ್ವಜ್ರಪಾಣಿನಾ ॥

ಅನುವಾದ

ಆ ಅಮಿತ ತೇಜಸ್ವೀ ಪುತ್ರನಿಂದ ಮಹಾರಾಣಿ ಕೌಸಲ್ಯೆಯು-ಸುರಶ್ರೇಷ್ಠ ವಜ್ರಪಾಣಿ ಇಂದ್ರನಿಂದ ದೇವ ಮಾತೆ ಅದಿತಿಯು ಶೋಭಿತಳಾಗಿರುವಂತೆ ಬಹಳ ಸುಶೋಭಿತಳಾದಳು.॥12॥

ಮೂಲಮ್ - 13

ಭರತೋ ನಾಮ ಕೈಕಯ್ಯಾಂ ಜಜ್ಞೇ ಸತ್ಯಪರಾಕ್ರಮಃ ।
ಸಾಕ್ಷಾದ್ ವಿಷ್ಣೋಶ್ಚತುರ್ಭಾಗಂ ಸರ್ವೈಃ ಸಮುದಿತೋ ಗುಣೈಃ ॥

ಅನುವಾದ

ಅನಂತರ ಕೈಕೇಯಿಯಲ್ಲಿ ಸತ್ಯಪರಾಕ್ರಮಿ ಭರತನ ಜನ್ಮವಾಯಿತು. ಅವನು ಸಾಕ್ಷಾತ್ ಭಗವಾನ್ ವಿಷ್ಣುವಿನ (ಸ್ವರೂಪ ಭೂತ ಪಾಯಸದ) ಚತುರ್ಥಾಂಶ ಭಾಗದಿಂದ ಪ್ರಕಟನಾಗಿದ್ದನು ಅವನು ಸಮಸ್ತ ಸದ್ಗುಣಗಳಿಂದ ಸಂಪನ್ನನಾಗಿದ್ದನು.॥13॥

ಮೂಲಮ್ - 14

ಅಥ ಲಕ್ಷ್ಮಣಶತ್ರುಘ್ನೌ ಸುಮಿತ್ರಾಜನಯತ್ಸುತೌ ।
ವೀರೌ ಸರ್ವಾಸ್ತ್ರಕುಶಲೌ ವಿಷ್ಣೋರರ್ಧಸಮನ್ವಿತೌ ॥

ಅನುವಾದ

ಬಳಿಕ ರಾಣಿ ಸುಮಿತ್ರೆಯು ಲಕ್ಷ್ಮಣ ಮತ್ತು ಶತ್ರುಘ್ನ ಹೀಗೆ ಎರಡು ಪುತ್ರರಿಗೆ ಜನ್ಮ ನೀಡಿದಳು. ಇವರಿಬ್ಬರೂ ವೀರರು ಸಾಕ್ಷಾತ್ ಭಗವಾನ್ ವಿಷ್ಣುವಿನ ಅರ್ಧಭಾಗದಿಂದ ಸಂಪನ್ನರಾಗಿದ್ದರು. ಮತ್ತು ಎಲ್ಲ ರೀತಿಯ ಅಸ್ತ್ರಗಳ ವಿದ್ಯೆಯಲ್ಲಿ ಕುಶಲರಾಗಿದ್ದರು.॥14॥

ಮೂಲಮ್ - 15

ಪುಷ್ಯೇಜಾತಸ್ತು ಭರತೋ ಮೀನಲಗ್ನೇ ಪ್ರಸನ್ನಧೀಃ ।
ಸಾರ್ಪೇ ಜಾತೌ ತು ಸೌಮಿತ್ರೀ ಕುಲೀರೇಽಭ್ಯುದಿತೇ ರವೌ ॥

ಅನುವಾದ

ಸದಾ ಪ್ರಸನ್ನಚಿತ್ತನಾಗಿದ್ದ ಭರತನು ಪುಷ್ಯನಕ್ಷತ್ರ, ಮೀನ ಲಗ್ನದಲ್ಲಿ ಹುಟ್ಟಿದನು. ಸುಮಿತ್ರೆಯ ಇಬ್ಬರು ಪುತ್ರರು ಆಶ್ಲೇಷಾ ನಕ್ಷತ್ರ, ಕರ್ಕಾಟಕ ಲಗ್ನದಲ್ಲಿ ಹುಟ್ಟಿದ್ದು, ಆಗ ಸೂರ್ಯನು ತನ್ನ ಉಚ್ಚಸ್ಥಾನದಲ್ಲಿ ವಿರಾಜಿಸುತ್ತಿದ್ದರು.॥15॥

ಮೂಲಮ್ - 16

ರಾಜ್ಞಃ ಪುತ್ರಾ ಮಹಾತ್ಮಾನಶ್ಚತ್ವಾರೋ ಜಜ್ಞಿರೇ ಪೃಥಕ್ ।
ಗುಣವಂತೋಽನುರೂಪಾಶ್ಚ ರುಚ್ಯಾ ಪ್ರೋಷ್ಠಪದೋಪಮಾಃ ॥

ಅನುವಾದ

ದಶರಥನ ಈ ಮಹಾತ್ಮರಾದ ನಾಲ್ವರು ಪುತ್ರರು ಪ್ರತ್ಯೇಕ ಪ್ರತ್ಯೇಕ ಗುಣಗಳಿಂದ ಸಂಪನ್ನ ಹಾಗೂ ಸುಂದರರಾಗಿದ್ದರು. ಇವರು ಭಾದ್ರಪದ ಎಂಬ ನಾಲ್ಕು ನಕ್ಷತ್ರಗಳಂತೆ ಕಾಂತಿಯುಕ್ತರಾಗಿದ್ದರು. (ಭಾದ್ರಪದಾ ನಕ್ಷತ್ರವನ್ನು ಪ್ರೋಷ್ಟಪದಾ ಎಂದು ಹೇಳುತ್ತಾರೆ. ಅದರಲ್ಲಿ ಎರಡು ಭೇದಗಳಿವೆ. ಪೂರ್ವಾಭಾದ್ರಾ ಮತ್ತು ಉತ್ತರಾ ಭಾದ್ರಪದಾ. ಇವೆರಡರಲ್ಲಿ ಎರಡೆರಡು ನಕ್ಷತ್ರಗಳಿವೆ. ಈ ಮಾತು ಜ್ಯೋತಿಷ ಶಾಸ್ತ್ರದಲ್ಲಿ ಪ್ರಸಿದ್ಧವಾಗಿದೆ.) (ರಾ,ತಿ..॥1.॥

ಮೂಲಮ್ - 17

ಜಗುಃ ಕಲಂ ಚ ಗಂಧರ್ವಾ ನನೃತುಶ್ಚಾಪ್ಸರೋಗಣಾಃ ।
ದೇವದುಂದುಭಯೋ ನೇದುಃ ಪುಷ್ಪವೃಷ್ಟಿಶ್ಚ ಖಾತ್ ಪತತ್ ॥

ಅನುವಾದ

ಇವರ ಜನ್ಮದ ಸಮಯದಲ್ಲಿ ಗಂಧರ್ವರು ಮಧುರವಾಗಿ ಹಾಡಿದರು. ಅಪ್ಸರೆಯರು ನೃತ್ಯಮಾಡಿದರು. ದೇವತೆಗಳ ದುಂದುಭಿ ಮೊಳಗಿದವು ಹಾಗೂ ಆಕಾಶದಿಂದ ಪುಷ್ಪಪೃಷ್ಟಿಯಾಯಿತು.॥17॥

ಮೂಲಮ್ - 18

ಉತ್ಸವಶ್ಚ ಮಹಾನಾಸೀದಯೋಧ್ಯಾಯಾಂ ಜನಾಕುಲಃ ।
ರಥ್ಯಾಶ್ಚ ಜನಸಂಬಾಧಾ ನಟನರ್ತಕಸಂಕುಲಾಃ ॥

ಅನುವಾದ

ಅಯೋಧ್ಯೆಯಲ್ಲಿ ಬಹಳ ದೊಡ್ಡ ಉತ್ಸವ ನಡೆಯಿತು. ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ರಾಜಬೀದಿಗಳು ಜನರಿಂದ ತುಂಬಿಹೋಗಿದ್ದವು. ಅನೇಕ ನಟ-ನರ್ತಕರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದರು.॥18॥

ಮೂಲಮ್ - 19

ಗಾಯನೈಶ್ಚ ವಿರಾವಿಣ್ಯೋ ವಾದನೈಶ್ಚ ತಥಾಪರೈಃ ।
ವಿರೇಜುರ್ವಿಪುಲಾಸ್ತತ್ರ ಸರ್ವರತ್ನಸಮನ್ವಿತಾಃ ॥

ಅನುವಾದ

ಅಲ್ಲಿ ಹಾಡು ವಾದ್ಯಗಳ ಹಾಗೂ ಇತರ ಜನರ ಶಬ್ದಗಳು ಎಲ್ಲೆಡೆ ತುಂಬಿಹೋಗಿದ್ದವು. ದೀನ-ದುಃಖಿಗಳಿಗೆ ಹಂಚಿದ ಎಲ್ಲ ಪ್ರಕಾರದ ರತ್ನಗಳು ಎಲ್ಲೆಡೆ ಚೆಲ್ಲಿಹೋಗಿದ್ದವು.॥19॥

ಮೂಲಮ್ - 20

ಪ್ರದೇಯಾಂಶ್ಚ ದದೌ ರಾಜಾ ಸೂತಮಾಗಧವಂದಿನಾಮ್ ।
ಬ್ರಾಹ್ಮಣೇಭ್ಯೋ ದದೌ ವಿತ್ತಂ ಗೋಧನಾನಿ ಸಹಸ್ರಶಃ ॥

ಅನುವಾದ

ದಶರಥ ರಾಜನು ಸೂತ, ಮಾಗಧ, ವಂದೀಜನರಿಗೆ ಯೋಗ್ಯವಾದ ಪುರಸ್ಕಾರ ಕೊಟ್ಟನು. ಹಾಗೂ ಬ್ರಾಹ್ಮಣರಿಗೂ ಧನ ಮತ್ತು ಸಾವಿರಾರು ಗೋವುಗಳನ್ನು ದಾನಮಾಡಿದನು.॥20॥

ಮೂಲಮ್ - 21

ಅತೀತ್ಯೈಕಾದಶಾಹಂ ತು ನಾಮಕರ್ಮ ತಥಾಕರೋತ್ ।
ಜ್ಯೇಷ್ಠಂ ರಾಮಂ ಮಹಾತ್ಮಾನಂ ಭರತಂ ಕೈಕಯೀಸುತಮ್ ॥

ಮೂಲಮ್ - 22

ಸೌಮಿತ್ರಿಂ ಲಕ್ಷ್ಮಣಮಿತಿ ಶತ್ರುಘ್ನಮಪರಂ ತಥಾ ।
ವಸಿಷ್ಠಃ ಪರಮಪ್ರೀತೋ ನಾಮಾನಿ ಕುರುತೇ ತದಾ ॥

ಅನುವಾದ

ಹನ್ನೊಂದು ದಿನ ಕಳೆದ ಬಳಿಕ ಮಹಾರಾಜನು ಬಾಲಕರ ನಾಮಕರಣ ಸಂಸ್ಕಾರ ಮಾಡಿದನು.* ಆಗ ಮಹರ್ಷಿ ವಸಿಷ್ಠರು ಸಂತೋಷದಿಂದ ಎಲ್ಲರಿಗೆ ಹೆಸರಿಟ್ಟರು. ಜ್ಯೇಷ್ಠ ಪುತ್ರನ ಹೆಸರು ‘ರಾಮ’ ಎಂದಿಟ್ಟರು. ಶ್ರೀರಾಮನು ಮಹಾತ್ಮಾ (ಪರಮಾತ್ಮಾ) ಆಗಿದ್ದನು. ಕೈಕೇಯಿ ಕುಮಾರನ ಹೆಸರು ಭರತ, ಹಾಗೂ ಸುಮಿತ್ರೆಯ ಒಬ್ಬ ಪುತ್ರನ ಹೆಸರು ಲಕ್ಷ್ಮಣ ಹಾಗೂ ಮತ್ತೊಬ್ಬ ಪುತ್ರನ ಹೆಸರು ಶತ್ರುಘ್ನ ಎಂದು ನಿಶ್ಚಯಿಸಿದರು.॥21-22॥

Misc Detail
  • ರಾಮಾಯಣ ತಿಲಕದ ನಿರ್ಮಾತರು ಮೂಲದಲ್ಲಿ ಏಕಾದಶಾಹ ಶಬ್ದವನ್ನು ಸೂತಕದ ಕೊನೆಯ ದಿನದ ಉಪಲಕ್ಷಣವೆಂದು ತಿಳಿದಿರುವರು. ಅವರು ಹೇಳುತ್ತಾರೆ - ಹೀಗೆ ತಿಳಿಯದಿದ್ದರೆ ‘ಕ್ಷತ್ರಿಯಸ್ಯ ದ್ವಾದಶಾಹಂ ಸೂತಕಮ್’ (ಕ್ಷತ್ರಿಯರಿಗೆ ಹನ್ನೆರಡು ದಿನಗಳ ಸೂತಕ ಇರುತ್ತದೆ.) ಈ ಸ್ಮೃತಿವಾಕ್ಯಕ್ಕೆ ವಿರೋಧ ಬಂದೀತು. ಆದ್ದರಿಂದ ರಾಮ ಜನ್ಮದ ಹನ್ನೆರಡು ದಿನ ಕಳೆದ ಬಳಿಕ ಹದಿಮೂರನೆಯ ದಿನ ರಾಜನು ನಾಮಕರಣ ಸಂಸ್ಕಾರ ಮಾಡಿದನು ಎಂದು ತಿಳಿಯಬೇಕು.
ಮೂಲಮ್ - 23

ಬ್ರಾಹ್ಮಣಾನ್ಭೋಜಯಾಮಾಸ ಪೌರಂಜಾನಪದಾನಪಿ ।
ಅದದದ್ ಬ್ರಾಹ್ಮಣಾನಾಂ ಚ ರತ್ನೌಘಮಮಿತಂ ಬಹು ॥

ಅನುವಾದ

ರಾಜನು ಬ್ರಾಹ್ಮಣರಿಗೆ, ಪುರವಾಸಿಗಳಿಗೆ ಮೃಷ್ಟಾನ್ನ ಭೋಜನ ಮಾಡಿಸಿದನು. ಬ್ರಾಹ್ಮಣರಿಗೆ ಹೇರಳವಾಗಿ ಉಜ್ವಲ ರತ್ನಗಳನ್ನು ದಕ್ಷಿಣೆಯಾಗಿ ದಾನ ಮಾಡಿದನು.॥23॥

ಮೂಲಮ್ - 24

ತೇಷಾಂ ಜನ್ಮಕ್ರಿಯಾದೀನಿ ಸರ್ವಕರ್ಮಾಣ್ಯಕಾರಯತ್ ।
ತೇಷಾಂ ಕೇತುರಿವ ಜ್ಯೇಷ್ಠೋ ರಾಮೋ ರತಿಕರಃ ಪಿತುಃ ॥

ಅನುವಾದ

ಮಹರ್ಷಿ ವಸಿಷ್ಠರು ಸಮಯಕ್ಕೆ ಸರಿಯಾಗಿ ರಾಜನಿಂದ ಬಾಲಕರ ಜಾತಕರ್ಮಾದಿ ಎಲ್ಲ ಸಂಸ್ಕಾರಗಳನ್ನು ಮಾಡಿಸಿದರು. ಎಲ್ಲದರಲ್ಲಿಯೂ ಶ್ರೀರಾಮಚಂದ್ರನು ಜ್ಯೇಷ್ಠನಾದ್ದರಿಂದ, ತನ್ನ ಕುಲದ ಕೀರ್ತಿಯನ್ನು ಬೆಳಗುವುದರಲ್ಲಿ ಶಿಖರಪ್ರಾಯನಾಗಿದ್ದನು. ಅವನು ತನ್ನ ತಂದೆಯ ಸಂತೋಷವನ್ನು ಹೆಚ್ಚಿಸುವವನಾಗಿದ್ದನು.॥24॥

ಮೂಲಮ್ - 25

ಬಭೂವ ಭೂಯೋ ಭೂತಾನಾಂ ಸ್ವಯಂಭೂರಿವ ಸಮ್ಮತಃ ।
ಸರ್ವೇ ವೇದವಿದಃ ಶೂರಾಃ ಸರ್ವೇ ಲೋಕಹಿತೇ ರತಾಃ ॥

ಅನುವಾದ

ಸರ್ವಪ್ರಾಣಿಗಳಿಗೂ ಅವನು ಸ್ವಯಂಭೂ ಬ್ರಹ್ಮದೇವರಂತೆ ವಿಶೇಷಪ್ರಿಯನಾಗಿದ್ದನು. ರಾಜನ ಎಲ್ಲ ಪುತ್ರರು ವೇದಗಳ ವಿದ್ವಾಂಸರೂ, ಶೂರವೀರರೂ ಆಗಿದ್ದರು. ಎಲ್ಲರೂ ಲೋಕ ಹಿತಕಾರಿ ಕಾರ್ಯದಲ್ಲಿ ಸಂಲಗ್ನರಾಗಿದ್ದರು.॥25॥

ಮೂಲಮ್ - 26

ಸರ್ವೇ ಜ್ಞಾನೋಪಸಂಪನ್ನಾಃ ಸರ್ವೇ ಸಮುದಿತಾ ಗುಣೈಃ ।
ತೇಷಾಮಪಿ ಮಹಾತೇಜಾ ರಾಮಃ ಸತ್ಯಪರಾಕ್ರಮಃ ॥

ಮೂಲಮ್ - 27½

ಇಷ್ಟಃ ಸರ್ವಸ್ಯ ಲೋಕಸ್ಯ ಶಶಾಂಕ ಇವ ನಿರ್ಮಲಃ ।
ಗಜಸ್ಕಂಧೇಽಶ್ವಪೃಷ್ಠೇ ಚ ರಥಚರ್ಯಾಸು ಸಮ್ಮತಃ ॥
ಧುನರ್ವೇದೇ ಚ ನಿರತಃ ಪಿತುಃ ಶುಶ್ರೂಷಣೇ ರತಃ ।

ಅನುವಾದ

ಎಲ್ಲರೂ ಜ್ಞಾನಿಗಳೂ, ಸಮಸ್ತ ಸದ್ಗುಣ ಸಂಪನ್ನರಾಗಿದ್ದರು. ಅವರಲ್ಲಿಯೂ ಸತ್ಯಪರಾಕ್ರಮಿ ಶ್ರೀರಾಮಚಂದ್ರನು ಎಲ್ಲರಿಗಿಂತ ಹೆಚ್ಚು ತೇಜಸ್ವೀ ಹಾಗೂ ಎಲ್ಲ ಜನರಿಗೆ ವಿಶೇಷ ಪ್ರಿಯನಾಗಿದ್ದನು. ಅವನು ನಿಷ್ಕಳಂಕ ಚಂದ್ರನಂತೆ ಶೋಭಿಸುತ್ತಿದ್ದನು. ಶ್ರೀರಾಮನು ಆನೆಗಳ ಮೇಲೆ ಸವಾರಿ ಮಾಡುವುದರಲ್ಲಿ, ಅಶ್ವಾರೋಹಣದಲ್ಲಿ, ರಥಾರೋಹಣದಲ್ಲಿ ಕುಶಲನಾಗಿದ್ದನು. ಅವನು ಧನುರ್ವೇದದಲ್ಲಿ ನಿಸ್ಸೀಮನಾಗಿದ್ದು ಪಿತೃಶುಶ್ರೂಷೆಯಲ್ಲಿ ಸದಾ ನಿರತನಾಗಿದ್ದನು.॥26-27॥

ಮೂಲಮ್ - 28

ಬಾಲಾತ್ಪ್ರಭೃತಿ ಸುಸ್ನಿಗ್ಧೋ ಲಕ್ಷ್ಮಣೋ ಲಕ್ಷ್ಮಿವರ್ಧನಃ ॥

ಮೂಲಮ್ - 29

ರಾಮಸ್ಯ ಲೋಕರಾಮಸ್ಯ ಭ್ರಾತುರ್ಜೇಷ್ಠಸ್ಯ ನಿತ್ಯಶಃ ।
ಸರ್ವಪ್ರಿಯಕರಸ್ತಸ್ಯ ರಾಮಸ್ಯಾಪಿ ಶರೀರತಃ ॥

ಅನುವಾದ

ಲಕ್ಷ್ಮೀವರ್ಧನನಾದ ಲಕ್ಷ್ಮಣನು ಬಾಲ್ಯದಿಂದಲೂ ಹಿರಿಯಣ್ಣನಾದ ಲೋಕಾಭಿರಾಮನಾದ ಶ್ರೀರಾಮಚಂದ್ರನಿಗೆ ಹೆಚ್ಚು ಪ್ರಿಯನಾಗಿದ್ದನು ಮತ್ತು ಶರೀರದಿಂದ ರಾಮನ ಸೇವೆಯಲ್ಲೇ ತೊಡಗಿರುತ್ತಿದ್ದನು.॥28-29॥

ಮೂಲಮ್ - 30½

ಲಕ್ಷ್ಮಣೋ ಲಕ್ಷ್ಮಿಸಂಪನ್ನೋ ಬಹಿಃಪ್ರಾಣ ಇವಾಪರಃ ।
ನ ಚ ತೇನ ವಿನಾ ನಿದ್ರಾಂ ಲಭತೇ ಪುರುಷೋತ್ತಮಃ ॥
ಮೃಷ್ಟಮನ್ನಮುಪಾನೀತಮಶ್ನಾತಿ ನ ಚ ತಂ ವಿನಾ ।

ಅನುವಾದ

ಶೋಭಾ ಸಂಪನ್ನ ಲಕ್ಷ್ಮಣನು ಶ್ರೀರಾಮಚಂದ್ರನಿಗೆ ಬಹಿಃಪ್ರಾಣದಂತೆ ಇದ್ದನು. ಪುರುಷೋತ್ತಮ ಶ್ರೀರಾಮನಿಗೆ ಅವನಿಲ್ಲದೆ ನಿದ್ರೆಯೂ ಬರುತ್ತಿರಲಿಲ್ಲ. ರಾಮನ ಬಳಿಗೆ ಉತ್ತಮ ಮೃಷ್ಟಾನ್ನ ಬಂದರೆ ಅದನ್ನು ಲಕ್ಷ್ಮಣನಿಗೆ ಕೊಡದೆ ತಿನ್ನುತ್ತಿರಲಿಲ್ಲ.॥30½॥

ಮೂಲಮ್ - 31

ಯದಾ ಹಿ ಹಯಮಾರೂಢೋ ಮೃಗಯಾಂ ಯಾತಿ ರಾಘವಃ ॥

ಮೂಲಮ್ - 32½

ಅಥೈನಂ ಪೃಷ್ಠತೋಽಭ್ಯೇತಿ ಸಧನುಃ ಪರಿಪಾಲಯನ್ ।
ಭರತಸ್ಯಾಪಿ ಶತ್ರುಘ್ನೋ ಲಕ್ಷ್ಮಣಾವರಜೋ ಹಿ ಸಃ ॥
ಪ್ರಾಣೈಃ ಪ್ರಿಯತರೋ ನಿತ್ಯಂ ತಸ್ಯ ಚಾಸೀತ್ತಥಾ ಪ್ರಿಯಃ ।

ಅನುವಾದ

ಶ್ರೀರಾಮಚಂದ್ರನು ಕುದುರೆ ಹತ್ತಿ ಬೇಟೆಗೆ ಹೊರಟರೆ ಲಕ್ಷ್ಮಣನು ಧನುಸ್ಸನ್ನೆತ್ತಿಕೊಂಡು ರಾಮನ ಅಂಗರಕ್ಷಕನಾಗಿ ಹಿಂದೆ-ಹಿಂದೆಯೇ ಹೋಗುತ್ತಿದ್ದನು. ಹೀಗೆ ಲಕ್ಷ್ಮಣನ ತಮ್ಮ ಶತ್ರುಘ್ನನು ಭರತನಿಗೆ ಪ್ರಾಣಕ್ಕಿಂತಲೂ ಹೆಚ್ಚು ಪ್ರಿಯನಾಗಿದ್ದನು. ಅವನೂ ಭರತನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದನು.॥31-32½॥

ಮೂಲಮ್ - 33½

ಸ ಚತುರ್ಭಿರ್ಮಹಾಭಾಗೈಃ ಪುತ್ರೈರ್ದಶರಥಃ ಪ್ರಿಯೈಃ ॥
ಬಭೂವ ಪರಮಪ್ರೀತೋ ದೇವೈರಿವ ಪಿತಾಮಹಃ ।

ಅನುವಾದ

ಈ ನಾಲ್ವರೂ ಮಹಾಭಾಗ್ಯಶಾಲೀ ಪ್ರಿಯಪುತ್ರರಿಂದ ರಾಜಾದಶರಥನಿಗೆ ಹೆಚ್ಚು ಸಂತೋಷವಾಗುತ್ತಿತ್ತು. ದಿಕ್ಪಾಲಕರಿಂದ ಬ್ರಹ್ಮದೇವರು ಪ್ರಸನ್ನರಾಗುವಂತೆಯೇ ದಶರಥನು ನಾಲ್ವರು ಪುತ್ರರಿಂದ ಪ್ರಸನ್ನನಾಗುತ್ತಿದ್ದನು.॥33½॥

ಮೂಲಮ್ - 34

ತೇ ಯದಾ ಜ್ಞಾನಸಂಪನ್ನಾಃ ಸರ್ವೇ ಸಮುದಿತಾ ಗುಣೈಃ ॥

ಮೂಲಮ್ - 35½

ಹ್ರೀಮಂತಃ ಕೀರ್ತಿಮಂತಶ್ಚ ಸರ್ವಜ್ಞಾ ದೀರ್ಘದರ್ಶಿನಃ ।
ತೇಷಾಮೇವಂ ಪ್ರಭಾವಾಣಾಂ ಸರ್ವೇಷಾಂ ದೀಪ್ತತೇಜಸಾಮ್ ॥
ಪಿತಾ ದಶರಥೋ ಹೃಷ್ಟೋ ಬ್ರಹ್ಮಾ ಲೋಕಾಧಿಪೋ ಯಥಾ ।

ಅನುವಾದ

ಆ ಎಲ್ಲ ಬಾಲಕರು ಜ್ಞಾನ ಸಂಪನ್ನರೂ, ಸಕಲ ಸದ್ಗುಣ ಸಂಪನ್ನರೂ, ಸಂಕೋಚ ಸ್ವಭಾವದವರೂ ಕೀರ್ತಿಶಾಲಿಗಳೂ, ಸರ್ವಜ್ಞರೂ, ದೂರದರ್ಶಿಗಳೂ ಆಗಿದ್ದರು. ಇಂತಹ ಪ್ರಭಾವಶಾಲೀ ಹಾಗೂ ಅತ್ಯಂತ ತೇಜಸ್ವೀ ಆ ಪುತ್ರರ ಪ್ರಾಪ್ತಿಯಿಂದ ಲೋಕೇಶ್ವರ ಬ್ರಹ್ಮದೇವರಂತೆ ದಶರಥನು ಸಂತುಷ್ಟನಾಗಿದ್ದನು.॥34-35½॥

ಮೂಲಮ್ - 36½

ತೇ ಚಾಪಿ ಮನುಜವ್ಯಾಘ್ರಾ ವೈದಿಕಾಧ್ಯಯನೇ ರತಾಃ ॥
ಪಿತೃ ಶುಶ್ರೂಷಣರತಾ ಧನುರ್ವೇದೇ ಚ ನಿಷ್ಠಿತಾಃ ।

ಅನುವಾದ

ಪುರುಷವ್ಯಾಘ್ರರಾದ ರಾಜಕುಮಾರರು ಪ್ರತಿದಿನ ವೇದಗಳ ಸ್ವಾಧ್ಯಾಯದಲ್ಲಿ, ತಂದೆಯ ಸೇವೆಯಲ್ಲಿ ಮತ್ತು ಧನುರ್ವೇದದ ಅಭ್ಯಾಸದಲ್ಲಿ ನಿರತರಾಗಿರುತ್ತಿದ್ದರು.॥36½॥

ಮೂಲಮ್ - 37

ಅಥ ರಾಜಾ ದಶರಥಸ್ತೇಷಾಂ ದಾರಕ್ರಿಯಾಂ ಪ್ರತಿ ॥

ಮೂಲಮ್ - 38½

ಚಿಂತಯಾಮಾಸ ಧರ್ಮಾತ್ಮಾ ಸೋಪಾಧ್ಯಾಯಃ ಸಬಾಂಧವಃ ।
ತಸ್ಯ ಚಿಂತಯಮಾನಸ್ಯ ಮಂತ್ರಿಮಧ್ಯೇ ಮಹಾತ್ಮನಃ ॥
ಅಭ್ಯಾಗಚ್ಛನ್ಮಹಾತೇಜಾ ವಿಶ್ವಾಮಿತ್ರೋ ಮಹಾಮುನಿಃ ।

ಅನುವಾದ

ಒಂದು ದಿನ ಧರ್ಮಾತ್ಮ ದಶರಥನು ಪುರೋಹಿತರು ಹಾಗೂ ಬಂಧು-ಬಾಂಧವರೊಂದಿಗೆ ಕುಳಿತು ಮಕ್ಕಳ ವಿವಾಹದ ಕುರಿತು ವಿಚಾರ ಮಾಡುತ್ತಿದ್ದನು. ಹೀಗೆ ಮಂತ್ರಿಗಳಲ್ಲಿ ವಿಚಾರ ಮಾಡುತ್ತಿದ್ದ ಮಹಾಮುನಿ ನೃಪತಿಯ ಬಳಿಗೆ ಮಹಾತೇಜಸ್ವಿ ಮಹಾಮುನಿ ವಿಶ್ವಾಮಿತ್ರರು ಆಗಮಿಸಿದರು.॥37-38½॥

ಮೂಲಮ್ - 39½

ಸ ರಾಜ್ಞೋ ದರ್ಶನಾಕಾಂಕ್ಷೀ ದ್ವಾರಾಧ್ಯಕ್ಷಾನುವಾಚ ಹ ॥
ಶೀಘ್ರಮಾಖ್ಯಾತ ಮಾಂ ಪ್ರಾಪ್ತಂ ಕೌಶಿಕಂ ಗಾಧಿನಃ ಸುತಮ್ ।

ಅನುವಾದ

ಅವರು ರಾಜನನ್ನು ಭೇಟಿ ಮಾಡಲು ಬಂದಿದ್ದರು. ದ್ವಾರಪಾಲಕರಲ್ಲಿ ಹೇಳಿದರು - ‘ನೀವು ಬೇಗನೆ ರಾಜನ ಬಳಿಗೆ ಹೋಗಿ ಕುಶಿಕವಂಶೀ ಗಾಧಿಪುತ್ರ ವಿಶ್ವಾಮಿತ್ರರು ಬಂದಿದ್ದಾರೆ.’ ಎಂದು ತಿಳಿಸಿ.॥39½॥

ಮೂಲಮ್ - 40½

ತಚ್ಛ್ರುತ್ವಾ ವಚನಂ ತಸ್ಯರಾಜ್ಞೋ ವೇಶ್ಮ ಪ್ರದುದ್ರುವುಃ ॥
ಸಂಭ್ರಾಂತಮನಸಃ ಸರ್ವೇ ತೇನ ವಾಕ್ಯೇನ ಚೋದಿತಾಃ ।

ಅನುವಾದ

ಮುನಿಯ ಮಾತನ್ನು ಕೇಳಿ ದ್ವಾರ ಪಾಲಕರು ಓಡುತ್ತಾ ರಾಜನ ಬಳಿಗೆ ಬಂದರು. ಅವರೆಲ್ಲರೂ ವಿಶ್ವಾಮಿತ್ರರ ಮಾತಿನಿಂದ ಪ್ರೇರಿತರಾಗಿ ಮನಸ್ಸಿನಲ್ಲೇ ಗಾಬರಿಗೊಂಡಿದ್ದರು.॥40½॥

ಮೂಲಮ್ - 41½

ತೇ ಗತ್ವಾ ರಾಜಭವನಂ ವಿಶ್ವಾಮಿತ್ರಮೃಷಿಂ ತದಾ ॥
ಪ್ರಾಪ್ತಮಾವೇದಯಾಮಾಸುರ್ನೃಪಾಯೇಕ್ಷ್ವಾಕವೇ ತದಾ ।

ಅನುವಾದ

ರಾಜನ ಆಸ್ಥಾನಕ್ಕೆ ಹೋಗಿ ಈಕ್ಷ್ವಾಕುಕುಲನಂದನ ದಶರಥನಲ್ಲಿ - ‘ಮಹಾರಾಜರೇ! ಮಹರ್ಷಿ ವಿಶ್ವಾಮಿತ್ರರು ಆಗಮಿಸಿರುವರು’ ಎಂದು ತಿಳಿಸಿದರು.॥41½॥

ಮೂಲಮ್ - 42½

ತೇಷಾಂ ತದ್ವಚನಂ ಶ್ರುತ್ವಾ ಸಪುರೋಧಾಃ ಸಮಾಹಿತಃ ॥
ಪ್ರತ್ಯುಜ್ಜಗಾಮ ಸಂಹೃಷ್ಟೋ ಬ್ರಹ್ಮಾಣಮಿವ ವಾಸವಃ ।

ಅನುವಾದ

ಅವರ ಮಾತನ್ನು ಕೇಳಿ ರಾಜನು ಲಗುಬಗೆಯಿಂದ ಪುರೋಹಿತರನ್ನು ಜೊತೆಗೂಡಿ ಹರ್ಷಚಿತ್ತರಾಗಿ - ದೇವೇಂದ್ರನು ಬೃಹಸ್ಪತಿಯನ್ನು ಸ್ವಾಗತಿಸಿದಂತೆ, ವಿಶ್ವಾಮಿತ್ರರನ್ನು ಇದಿರುಗೊಳ್ಳಲು ನಡೆದನು.॥42½॥

ಮೂಲಮ್ - 43½

ಸಂ ದೃಷ್ಟ್ವಾ ಜ್ವಲಿತಂ ದೀಪ್ತ್ಯಾ ತಾಪಸಂ ಸಂಶಿತವ್ರತಮ್ ॥
ಪ್ರಹೃಷ್ಟವದನೋ ರಾಜಾ ತತೋಽರ್ಘ್ಯಮುಪಹಾರಯತ್ ।

ಅನುವಾದ

ವಿಶ್ವಾಮಿತ್ರರು ಕಠೋರ ವ್ರತವನ್ನು ಆಚರಿಸುವ ತಪಸ್ವಿಗಳಾಗಿದ್ದು, ತನ್ನ ತೇಜದಿಂದ ಪ್ರಜ್ವಲಿತರಾಗಿದ್ದರು. ಅವರನ್ನು ದರ್ಶಿಸಿದ ರಾಜನ ಮುಖ ಪ್ರಸನ್ನವಾಗಿ ಮಹರ್ಷಿಯನ್ನು ಸ್ವಾಗತಿಸುತ್ತಾ ಅರ್ಘ್ಯವನ್ನು ನಿವೇದಿಸಿದನು.॥43½॥

ಮೂಲಮ್ - 44½

ಸ ರಾಜ್ಞಾಃ ಪ್ರತಿಗೃಹ್ಯಾರ್ಘ್ಯಂ ಶಾಸ್ತ್ರದೃಷ್ಟೇನ ಕರ್ಮಣಾ ॥
ಕುಶಲಂ ಚಾವ್ಯಯಂ ಚೈವ ಪರ್ಯಪೃಚ್ಛನ್ನರಾಧಿಪಮ್ ।

ಅನುವಾದ

ಶಾಸ್ತ್ರವಿಧಿಗನುಸಾರ ರಾಜನು ನೀಡಿದ ಅರ್ಘ್ಯವನ್ನು ಸ್ವೀಕರಿಸಿ ಮಹರ್ಷಿಗಳು ಅವನ ಕ್ಷೇಮ ಸಮಾಚಾರ ಕೇಳಿದರು.॥44½॥

ಮೂಲಮ್ - 45½

ಪುರೇ ಕೋಶೇ ಜನಪದೇ ಬಾಂಧವೇಷು ಸುಹೃತ್ಸು ಚ ॥
ಕುಶಲಂ ಕೌಶಿಕೋ ರಾಜ್ಞಃ ಪರ್ಯಪೃಚ್ಛತ್ಸುಧಾರ್ಮಿಕಃ ।

ಅನುವಾದ

ಧರ್ಮಾತ್ಮರಾದ ವಿಶ್ವಾಮಿತ್ರರು ಕ್ರಮವಾಗಿ ರಾಜನ ನಗರ, ಭಂಡಾರ, ರಾಜ್ಯ, ಬಂಧು-ಬಾಂಧವರು ಹಾಗೂ ಮಿತ್ರವರ್ಗ ಮುಂತಾದವುಗಳ ಕುರಿತು ಕ್ಷೇಮವನ್ನು ಕೇಳಿದರು.॥45½॥

ಮೂಲಮ್ - 46½

ಅಪಿ ತೇ ಸನ್ನತಾಃ ಸರ್ವೇ ಸಾಮಂತರಿಪವೋ ಜಿತಾಃ ॥
ದೈವಂ ಚ ಮಾನುಷಂ ಚೈವ ಕರ್ಮ ತೇ ಸಾಧ್ವನುಷ್ಠಿತಮ್ ।

ಅನುವಾದ

ರಾಜನೇ! ನಿನ್ನ ಶತ್ರುಗಳು, ಸಾಮಂತರೆಲ್ಲ ನಿನಗೆ ವಿಧೇಯರಾಗಿ ಇರುವರು ತಾನೆ? ನೀನು ಅವರ ಮೇಲೆ ವಿಜಯವನ್ನು ಪಡೆದಿರುವೆಯಲ್ಲ? ನಿನ್ನ ಯಜ್ಞ-ಯಾಗ, ದೇವತಾಕರ್ಮ, ಅತಿಥಿ ಸತ್ಕಾರ ಮುಂತಾದ ಮನುಷ್ಯರ ಕರ್ಮಗಳು ಚೆನ್ನಾಗಿ ನಡೆಯುತ್ತಿವೆಯಲ್ಲ.॥46½॥

ಮೂಲಮ್ - 47½

ವಸಿಷ್ಠಂ ಚ ಸಮಾಗಮ್ಯ ಕುಶಲಂ ಮುನಿಪುಂಗವಃ ॥
ಋಷೀಂಶ್ಚತಾನ್ ಯಥಾನ್ಯಾಯಂ ಮಹಾಭಾಗ ಉವಾಚ ಹ ।

ಅನುವಾದ

ಅನಂತರ ಮಹಾಭಾಗ ವಿಶ್ವಾಮಿತ್ರರು ವಸಿಷ್ಠರ ಹಾಗೂ ಇತರ ಎಲ್ಲ ಋಷಿಗಳ ಕ್ಷೇಮವನ್ನು ಕೇಳಿದರು.॥47½॥

ಮೂಲಮ್ - 48½

ತೇ ಸರ್ವೇ ಹೃಷ್ಟಮನಸಸ್ತಸ್ಯ ರಾಜ್ಞೋ ನಿವೇಶನಮ್ ॥
ವಿವಿಶುಃ ಪೂಜಿತಾಸ್ತೇನ ನಿಷೇದುಶ್ಚ ಯಥಾರ್ಹತಃ ।

ಅನುವಾದ

ಜನರು ಸಂತೋಷಗೊಂಡು ರಾಜನ ಆಸ್ಥಾನಕ್ಕೆ ನಡೆದರು. ಅಲ್ಲಿ ರಾಜನಿಂದ ಪೂಜಿತರಾಗಿ ಯಥಾಯೋಗ್ಯ ಆಸನಾರೂಢರಾದರು.॥48½॥

ಮೂಲಮ್ - 49½

ಅಥ ಹೃಷ್ಟಮನಾ ರಾಜಾ ವಿಶ್ವಾಮಿತ್ರಂ ಮಹಾಮುನಿಮ್ ॥
ಉವಾಚ ಪರಮೋದಾರೋ ಹೃಷ್ಟಸ್ತಮಭಿಪೂಜಯನ್ ।

ಅನುವಾದ

ಪ್ರಸನ್ನಚಿತ್ತನಾದ ಪರಮೋದಾರ ದಶರಥನು ಪುಳಕಿತನಾಗಿ ಮಹಾಮುನಿ ವಿಶ್ವಾಮಿತ್ರರನ್ನು ಪ್ರಶಂಸಿಸುತ್ತಾ ಇಂತೆಂದನು.॥49½॥

ಮೂಲಮ್ - 50

ಯಥಾಮೃತಸ್ಯ ಸಂಪ್ರಾಪ್ತಿರ್ಯಥಾ ವರ್ಷಮನೂದಕೇ ॥

ಮೂಲಮ್ - 51

ಯಥಾ ಸದೃಶದಾರೇಷು ಪುತ್ರಜನ್ಮಾಪ್ರಜಸ್ಯ ವೈ ।
ಪ್ರಣಷ್ಟಸ್ಯ ಯಥಾ ಲಾಭೋ ಯಥಾ ಹರ್ಷೋ ಮಹೋದಯಃ ॥

ಮೂಲಮ್ - 52

ತಥೈವಾಗಮನಂ ಮನ್ಯೇ ಸ್ವಾಗತಂ ತೇ ಮಹಾಮುನೇ ।
ಕಂ ಚ ತೇ ಪರಮಂ ಕಾಮಂ ಕರೋಮಿ ಕಿಮು ಹರ್ಷಿತಃ ॥

ಅನುವಾದ

ಮಹಾಮುನಿಯೇ! ಮರ್ತ್ಯರಾದ ಮನುಷ್ಯನಿಗೆ ಅಮೃತದ ಪ್ರಾಪ್ತಿಯಾದಂತೆ, ನಿರ್ಜಲ ಪ್ರದೇಶದಲ್ಲಿ ಮಳೆ ಸುರಿದಂತೆ, ಸಂತಾನಹೀನರಿಗೆ ತನ್ನ ಅನುರೂಪ ಪತ್ನಿಯ ಗರ್ಭದಿಂದ ಪುತ್ರ ಪ್ರಾಪ್ತಿಯಾದಂತೆ, ಕಳೆದುಹೋದ ನಿಧಿಯು ಸಿಕ್ಕಿದಂತೆ, ಯಾವುದೋ ಮಹೋತ್ಸವದಿಂದ ಉಂಟಾದ ಹರ್ಷದಂತೆ ನಿಮ್ಮ ಶುಭಾಗಮನವಾಗಿದೆ ಎಂದು ನಾನು ತಿಳಿಯುತ್ತೇನೆ. ತಮಗೆ ಸ್ವಾಗತ ಕೋರುತ್ತೇನೆ. ನಾನು ಹರ್ಷದಿಂದ ಪೂರ್ಣಮಾಡುವಂತಹ ಯಾವ ಉತ್ತಮ ಕಾಮನೆ ನಿಮ್ಮ ಮನಸ್ಸಿನಲ್ಲಿದೆ? ತಿಳಿಸಿರಿ.॥50-52॥

ಮೂಲಮ್ - 53

ಪಾತ್ರಭೂತೋಽಸಿ ಮೇ ಬ್ರಹ್ಮನ್ ದಿಷ್ಟ್ಯಾ ಪ್ರಾಪ್ತೋಽಸಿ ಮಾನದ ।
ಅದ್ಯ ಮೇ ಸಲಂ ಜನ್ಮ ಜೀವಿತಂ ಚ ಸುಜೀವಿತಮ್ ॥

ಅನುವಾದ

ಬ್ರಾಹ್ಮಣೋತ್ತಮರೇ! ಎಲ್ಲ ಪ್ರಕಾರದ ಸೇವೆಯನ್ನು ನನ್ನಿಂದ ಪಡೆಯಲು ತಾವು ಯೋಗ್ಯಪಾತ್ರರಾಗಿರುವಿರಿ. ಮಾನಧನರೇ! ತಾವು ಇಲ್ಲಿಯವರೆಗೆ ಆಗಮಿಸಿದುದು ನನ್ನ ಅಹೋಭಾಗ್ಯವಾಗಿದೆ. ಇಂದು ನನ್ನ ಜನ್ಮ ಸಫಲವಾಗಿ ಜೀವನ ಧನ್ಯವಾಯಿತು.॥53॥

ಮೂಲಮ್ - 54

ಯಸ್ಮಾದ್ವಿಪ್ರೇಂದ್ರಮದ್ರಾಕ್ಷಂ ಸುಪ್ರಭಾತಾ ನಿಶಾ ಮಮ ।
ಪೂರ್ವಂ ರಾಜರ್ಷಿಶಬ್ದೇನ ತಪಸಾ ದ್ಯೋತಿತಪ್ರಭುಃ ॥

ಮೂಲಮ್ - 55

ಬ್ರಹ್ಮರ್ಷಿತ್ವಮನುಪ್ರಾಪ್ತಃ ಪೂಜ್ಯೋಽಸಿ ಬಹುಧಾ ಮಯಾ ।
ತತದ್ಭುತಮಭೂದ್ ವಿಪ್ರ ಪವಿತ್ರಂ ಪರಮಂ ಮಮ ॥

ಅನುವಾದ

ಇಂದು ನಾನು ಬ್ರಾಹ್ಮಣ ಶಿರೋಮಣಿಯಾದ ತಮ್ಮ ದರ್ಶನ ಮಾಡಿದುದು ನನಗೆ ಸುಂದರ ಸುಪ್ರಭಾತವಾಗಿದೆ. ಹಿಂದೆ ತಾವು ರಾಜರ್ಷಿಯಾದವರು; ತಪಸ್ಸಿನ ಅದ್ಭುತ ಪ್ರಭೆಯನ್ನು ಪ್ರಕಾಶಿಸಿ ಬ್ರಹ್ಮರ್ಷಿಯ ಪದವನ್ನು ಪಡೆದಿರುವಿರಿ. ಆದ್ದರಿಂದ ನೀವು ರಾಜರ್ಷಿ ಮತ್ತು ಬ್ರಹ್ಮರ್ಷಿ ಎರಡು ರೂಪಗಳಿಂದಲೂ ನನಗೆ ಪೂಜನೀಯರಾಗಿದ್ದೀರಿ. ನನ್ನ ಬಳಿಗೆ ತಮ್ಮ ಶುಭಾಗಮನವಾದುದು ಪರಮ ಪವಿತ್ರ ಮತ್ತು ಪರಮಾದ್ಭುತವಾಗಿದೆ.॥54-55॥

ಮೂಲಮ್ - 56

ಶುಭಕ್ಷೇತ್ರಗತಶ್ಚಾಹಂ ತವ ಸಂದರ್ಶನಾತ್ಪ್ರಭೋ ।
ಬ್ರೂಹಿ ಯತ್ಪ್ರಾರ್ಥಿತಂ ತುಭ್ಯಂ ಕಾರ್ಯಮಾಗಮನಂ ಪ್ರತಿ ॥

ಅನುವಾದ

ಸ್ವಾಮಿ! ತಮ್ಮ ದರ್ಶನದಿಂದ ಇಂದು ನನ್ನ ಅರಮನೆ ಪಾವನವಾಯಿತು. ಪುಣ್ಯಕ್ಷೇತ್ರಗಳ ದರ್ಶನಮಾಡಿ ಬಂದಂತೆ ನನ್ನನ್ನು ತಿಳಿಯುತ್ತೇನೆ. ನೀವು ಏನು ಬಯಸುವಿರಿ? ನಿಮ್ಮ ಶುಭಾಗಮನದ ಉದ್ದೇಶವೇನು ತಿಳಿಸಿರಿ.॥56॥

ಮೂಲಮ್ - 57

ಇಚ್ಛಾಮ್ಯನಗೃಹೀತೋಽಹಂ ತ್ವದರ್ಥಂ ಪರಿವೃದ್ಧಯೇ ।
ಕಾರ್ಯಸ್ಯ ನ ವಿಮರ್ಶಂ ಚ ಗಂತುಮರ್ಹಸಿ ಸುವ್ರತ ॥

ಅನುವಾದ

ಸುವ್ರತರಾದ ಮಹರ್ಷಿಗಳೇ! ತಮ್ಮ ಕೃಪೆಯಿಂದ ಅನುಗ್ರಹಿತರಾಗಿ ನಿಮ್ಮ ಅಭಿಷ್ಟ ಮನೋರಥವನ್ನು ತಿಳಿದು, ನನ್ನ ಅಭ್ಯುದಯಕ್ಕಾಗಿ ಅದನ್ನು ಪೂರ್ಣಗೊಳಿಸಬೇಕೆಂದು ನಾನು ಬಯಸುತ್ತಿರುವೆನು. ಕಾರ್ಯಸಿದ್ಧವಾಗುವುದೋ ಇಲ್ಲವೋ ಇದರ ಕುರಿತು ಮನಸ್ಸಿನಲ್ಲಿ ಸಂಶಯಪಡಬೇಡಿರಿ.॥57॥

ಮೂಲಮ್ - 58

ಕರ್ತಾ ಚಾಹಮಶೇಷೇಣ ದೈವತಂ ಹಿ ಭವಾನ್ಮಮ ।
ಮಮ ಚಾಯಮನುಪ್ರಾಪ್ತೋ ಮಹಾನಭ್ಯುದಯೋ ದ್ವಿಜ ।
ತವಾಗಮನಜಃ ಕೃತ್ನ್ಸೋ ಧರ್ಮಶ್ಚಾನುತ್ತಮೋ ದ್ವಿಜ ॥

ಅನುವಾದ

ತಾವು ಯಾವುದೇ ಅಪ್ಪಣೆ ಮಾಡಿದರೂ ನಾನು ಅದನ್ನು ಪೂರ್ಣವಾಗಿ ಪಾಲಿಸುವೆನು; ಏಕೆಂದರೆ ತಾವು ಸನ್ಮಾನ್ಯ ಅತಿಥಿಗಳಾದ್ದರಿಂದ ಗೃಹಸ್ಥನಾದ ನನಗೆ ದೇವತೆಯೇ ಆಗಿದ್ದೀರಿ. ಬ್ರಹ್ಮನ್! ಇಂದು ತಮ್ಮ ಆಗಮನದಿಂದ ನನಗೆ ಸಂಪೂರ್ಣ ಧರ್ಮಗಳ ಉತ್ತಮ ಫಲ ಪ್ರಾಪ್ತವಾಯಿತು. ಇದು ನನ್ನ ಮಹಾ ಅಭ್ಯುದಯದ ಸದವಕಾಶವಾಗಿದೆ.॥58॥

ಮೂಲಮ್ - 59

ಇತಿ ಹೃದಯಸುಖಂ ನಿಶಮ್ಯ ವಾಕ್ಯಂ
ಶ್ರುತಿಸುಖಮಾತ್ಮವತಾ ವಿನೀತಮುಕ್ತಮ್ ।
ಪ್ರಥಿತಗುಣಯಶಾ ಗುಣೈರ್ವಿಶಿಷ್ಟಃ
ಪರಮಋಷಿಃ ಪರಮಂ ಜಗಾಮ ಹರ್ಷಮ್ ॥

ಅನುವಾದ

ಹೃದಯ ಮತ್ತು ಕಿವಿಗಳಿಗೆ ಸುಖ ಕೊಡುವಂತಹ ರಾಜನ ವಿನಯಯುಕ್ತ ಮಾತನ್ನು ಕೇಳಿ ವಿಖ್ಯಾತಗುಣ ಮತ್ತು ಕೀರ್ತಿಯುಳ್ಳ, ಶಮದವಾದಿ ಸದ್ಗುಣಗಳಿಂದ ಸಂಪನ್ನರಾದ ಮಹರ್ಷಿ ವಿಶ್ವಾಮಿತ್ರರು ಬಹಳ ಪ್ರಸನ್ನರಾದರು.॥59॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಹದಿನೆಂಟನೆಯ ಸರ್ಗ ಪೂರ್ಣವಾಯಿತು. ॥18॥