०१७ ऋक्षवानरोत्पत्तिः

वाचनम्
ಭಾಗಸೂಚನಾ

ಬ್ರಹ್ಮದೇವರ ಆದೇಶದಂತೆ ದೇವತೆಗಳಿಂದ ಬೇರೆ ಬೇರೆ ವಾನರಯೂಥಪತಿಗಳ ಉತ್ಪತ್ತಿ

ಮೂಲಮ್ - 1

ಪುತ್ರತ್ವಂತು ಗತೇ ವಿಷ್ಣೌ ರಾಜ್ಞಸ್ತಸ್ಯ ಮಹಾತ್ಮನಃ ।
ಉವಾಚ ದೇವತಾಃ ಸರ್ವಾಃ ಸ್ವಯಂ ಭೂರ್ಭಗವಾನಿದಮ್ ॥

ಅನುವಾದ

ಭಗವಾನ್ ಮಹಾವಿಷ್ಣು ಮಹಾತ್ಮನಾದ ದಶರಥನ ಪುತ್ರನಾಗಿ ಅವತರಿಸಲು ಉದ್ಯುಕ್ತನಾದಾಗ, ಭಗವಾನ್ ಬ್ರಹ್ಮ ದೇವರು ಸಮಸ್ತ ದೇವತೆಗಳನ್ನು ಉದ್ದೇಶಿಸಿ ಇಂತೆಂದರು .॥1॥

ಮೂಲಮ್ - 2

ಸತ್ಯಸಂಧಸ್ಯ ವೀರಸ್ಯ ಸರ್ವೇಷಾಂ ನೋ ಹಿತೈಷಿಣಃ ।
ವಿಷ್ಣೋಃ ಸಹಾಯಾನ್ಬಲಿನಃ ಸೃಜಧ್ವಂ ಕಾಮರೂಪಿಣಃ ॥

ಮೂಲಮ್ - 3

ಮಾಯಾವಿದಶ್ಚ ಶೂರಾಂಶ್ಚ ವಾಯುವೇಗಸಮಾಂಜವೇ ।
ನಯಜ್ಞಾನ್ಬುದ್ಧಿಸಂಪನ್ನಾನ್ ವಿಷ್ಣುತುಲ್ಯಪರಾಕ್ರಮಾನ್ ॥

ಮೂಲಮ್ - 4

ಅಸಂಹಾರ್ಯಾನುಪಾಯಜ್ಞಾನ್ ದಿವ್ಯಸಂಹನನಾನ್ವಿತಾನ್ ।
ಸರ್ವಾಸ್ತ್ರಗುಣಸಂಪನ್ನಾನಮೃತಪ್ರಾಶನಾನಿವ ॥

ಅನುವಾದ

ದೇವತೆಗಳಿರಾ! ಭಗವಾನ್ ವಿಷ್ಣು ಸತ್ಯಪ್ರತಿಜ್ಞ ಪರಾಕ್ರಮಿ ಹಾಗೂ ನಮ್ಮೆಲ್ಲರ ಹಿತೈಷಿಯಾಗಿರುವನು. ನೀವು ಅವನಿಗೆ ಸಹಾಯಕರಾದ ಬಲಿಷ್ಠರಾದ, ಇಚ್ಛಾನುಸಾರ ರೂಪವನ್ನು ಧರಿಸಬಲ್ಲ, ಮಾಯಾ ವಿದ್ಯೆಯನ್ನು ತಿಳಿದಿರುವ, ಶೂರವೀರ ವಾಯುವಿನಂತೆ ವೇಗಶಾಲಿ, ನೀತಿಜ್ಞ, ಬುದ್ಧಿವಂತ, ವಿಷ್ಣುವಿನಂತೆ ಪರಾಕ್ರಮಿ, ಯಾರಿಂದಲೂ ಸೋಲದಿರುವ, ಬಗೆ-ಬಗೆಯ ಉಪಾಯಗಳನ್ನು ಬಲ್ಲ, ದಿವ್ಯ ಶರೀರಧಾರೀ ಹಾಗೂ ಅಮೃತಭೋಜೀ ದೇವತೆಗಳಂತೆ ಎಲ್ಲ ರೀತಿಯ ಅಸ್ತ್ರವಿದ್ಯೆಯ ಗುಣಗಳಿಂದ ಕೂಡಿದ ಪುತ್ರರನ್ನು ಸೃಷ್ಟಿಸಿರಿ.॥2-4॥

ಮೂಲಮ್ - 5

ಅಪ್ಸರಸ್ಸು ಚ ಮುಖ್ಯಾಸು ಗಂಧರ್ವೀಣಾಂ ತನೂಷು ಚ ।
ಯಕ್ಷಪನ್ನಗಕನ್ಯಾಸು ಋಕ್ಷವಿದ್ಯಾಧರೀಷು ಚ ॥

ಮೂಲಮ್ - 6

ಕಿನ್ನರೀಣಾಂ ಚ ಗಾತ್ರೇಷು ವಾನರೀಣಾಂ ತನೂಷು ಚ ।
ಸೃಜಧ್ವಂ ಹರಿರೂಪೇಣ ಪುತ್ರಾಂಸ್ತುಲ್ಯ ಪರಾಕ್ರಮಾನ್ ॥

ಅನುವಾದ

ಮುಖ್ಯ ಮುಖ್ಯ ಅಪ್ಸರೆಯರಿಂದ, ಗಂಧರ್ವ ಸ್ತ್ರೀಯರಿಂದ, ಯಕ್ಷ ಮತ್ತು ನಾಗಕನ್ಯೆಯರಿಂದ, ಕರಡಿ ಸ್ತ್ರೀಯರಿಂದ, ವಿದ್ಯಾಧರಿಯರಿಂದ, ಕಿನ್ನರಿಯರಿಂದ, ವಾನರ ಸ್ತ್ರೀಯರ ಗರ್ಭದಿಂದ ವಾನರರೂಪದಲ್ಲಿ ನಿಮ್ಮಂತೆ ಪರಾಕ್ರಮೀ ಪುತ್ರರನ್ನು ಉತ್ಪನ್ನ ಮಾಡಿರಿ.॥5-6॥

ಮೂಲಮ್ - 7

ಪೂರ್ವಮೇವ ಮಯಾ ಸೃಷ್ಟೋಜಾಂಬವಾನೃಕ್ಷಪುಂಗವಃ ।
ಜೃಂಭಮಾಣಸ್ಯ ಸಹಸಾ ಮಮ ವಕ್ತ್ರಾದಯತ ॥

ಅನುವಾದ

ನಾನು ಮೊದಲೇ ಋಕ್ಷರಾಜ ಜಾಂಬವಂತನನ್ನು ಸೃಷ್ಟಿಸಿರುವೆನು. ಒಮ್ಮೆ ನಾನು ಆಕಳಿಸುತ್ತಿದ್ದಾಗ ಅವನು ಕೂಡಲೇ ನನ್ನ ಬಾಯಿಂದ ಪ್ರಕಟನಾದನು.॥7॥

ಮೂಲಮ್ - 8

ತೇ ತಥೋಕ್ತಾ ಭಗವತಾ ತತ್ ಪ್ರತಿಶ್ರುತ್ಯಶಾಸನಮ್ ।
ಜನಯಾಮಾಸುರೇವಂ ತೇ ಪುತ್ರಾನ್ ವಾನರರೂಪಿಣಃ ॥

ಅನುವಾದ

ಭಗವಾನ್ ಬ್ರಹ್ಮನು ಹೀಗೆ ಹೇಳಿದಾಗ ದೇವತೆಗಳು ಅವರ ಆಜ್ಞೆಯನ್ನು ಶಿರದಲ್ಲಾಂತು ವಾನರರೂಪಗಳಲ್ಲಿ ಅನೇಕಾನೇಕ ಪುತ್ರರನ್ನು ಉತ್ಪನ್ನ ಮಾಡಿದರು.॥8॥

ಮೂಲಮ್ - 9

ಋಷಯಶ್ಚ ಮಹಾತ್ಮಾನಃ ಸಿದ್ಧವಿದ್ಯಾಧರೋರಗಾಃ ।
ಚಾರಣಾಶ್ಚ ಸುತಾನ್ ವೀರಾನ್ ಸಸೃಜುರ್ವನಚಾರಿಣಃ ॥

ಅನುವಾದ

ಮಹಾತ್ಮರಾದ ಋಷಿಗಳೂ, ಸಿದ್ಧರೂ, ವಿದ್ಯಾಧರರೂ, ನಾಗರೂ ಮತ್ತು ಚಾರಣರೂ ಕೂಡ ವನಚರರಾದ ವಾನರ ಕರಡಿಗಳ ರೂಪದಲ್ಲಿ ವೀರ ಪುತ್ರರನ್ನು ಹುಟ್ಟಿಸಿದರು.॥9॥

ಮೂಲಮ್ - 10

ವಾನರೇಂದ್ರಂ ಮಹೇಂದ್ರಾಭಮಿಂದ್ರೋ ವಾಲಿನಮಾತ್ಮಜಮ್ ।
ಸುಗ್ರೀವಂ ಜನಯಾಮಾಸ ತಪನಸ್ತಪತಾಂ ವರಃ ॥

ಅನುವಾದ

ದೇವೇಂದ್ರನು ವಾನರರಾಜ ವಾಲಿಯನ್ನು ಪುತ್ರರೂಪದಿಂದ ಉತ್ಪನ್ನ ಮಾಡಿದನು ಅವನು ಮಹೇಂದ್ರ ಪರ್ವತದಂತೆ ವಿಶಾಲಕಾಯನೂ, ಬಲಿಷ್ಠನೂ ಆಗಿದ್ದನು. ಭಗವಾನ್ ಸೂರ್ಯನು ಸುಗ್ರೀವನಿಗೆ ಜನ್ಮ ನೀಡಿದನು.॥10॥

ಮೂಲಮ್ - 11

ಬೃಹಸ್ಪತಿಸ್ತ್ವಜನಯತ್ ತಾರಂ ನಾಮ ಮಹಾಕಪಿಮ್ ।
ಸರ್ವವಾನರಮುಖ್ಯಾನಾಂ ಬುದ್ಧಿಮಂತಮನುತ್ತಮಮ್ ॥

ಅನುವಾದ

ಬೃಹಸ್ಪತಿಯು ತಾರನೆಂಬ ಹೆಸರಿನ ಮಹಾಕಾಯ ವಾನರನನ್ನು ಉತ್ಪನ್ನ ಮಾಡಿದನು. ಅವನು ಸಮಸ್ತ ವಾನರ ಸೇನೆಯಲ್ಲಿ ಅತ್ಯಂತ ಬುದ್ಧಿವಂತನೂ ಮತ್ತು ಶ್ರೇಷ್ಠನೂ ಆಗಿದ್ದನು.॥11॥

ಮೂಲಮ್ - 12

ಧನದಸ್ಯ ಸುತಃ ಶ್ರೀಮನ್ವಾನರೋ ಗಂಧಮಾದನಃ ।
ವಿಶ್ವಕರ್ಮಾ ತ್ವಜಯನ್ನಲಂ ನಾಮ ಮಹಾಕಪಿಮ್ ॥

ಅನುವಾದ

ತೇಜಸ್ವೀ ವಾನರ ಗಂಧಮಾದನನು ಕುಬೇರನ ಪುತ್ರನಾಗಿದ್ದನು. ವಿಶ್ವಕರ್ಮನು ನಳನೆಂಬ ಮಹಾವಾನರರನ್ನು ಹುಟ್ಟಿಸಿದನು.॥12॥

ಮೂಲಮ್ - 13

ಪಾವಕಸ್ಯ ಸುತಃ ಶ್ರೀಮಾನ್ ನೀಲೋಽಗ್ನಿಸದೃಶಪ್ರಭಃ ।
ತೇಜಸಾ ಯಶಸಾ ವೀರ್ಯಾದತ್ಯರಿಚ್ಯತ ವೀರ್ಯವಾನ್ ॥

ಅನುವಾದ

ಅಗ್ನಿಯಂತೆ ತೇಜಸ್ವೀ ಶ್ರೀಮಾನ್ ನೀಲನು ಸಾಕ್ಷಾತ್ ಅಗ್ನಿಯ ಪುತ್ರನಾಗಿದ್ದನು. ಆ ಪರಾಕ್ರಮಿ ವಾನರನು ತೇಜ, ಯಶ ಮತ್ತು ಬಲ-ವೀರ್ಯದಲ್ಲಿ ಎಲ್ಲ ವಾನರರನ್ನು ಮೀರಿಸಿದ್ದನು.॥13॥

ಮೂಲಮ್ - 14

ರೂಪದ್ರವಿಣಸಂಪನ್ನಾವಶ್ವಿನೌ ರೂಪಸಮ್ಮತೌ ।
ಮೈಂದಂ ಚ ದ್ವಿವಿದಂ ಚೈವ ಜನಯಾಮಾಸತುಃ ಸ್ವಯಮ್ ॥

ಅನುವಾದ

ರೂಪ ವೈಭವ ಸಂಪನ್ನ, ಸುಂದರರೂಪವುಳ್ಳ ಇಬ್ಬರು ಅಶ್ವಿನಿಕುಮಾರರು ಮೈಂದ ಮತ್ತು ದ್ವಿವಿದರಿಗೆ ಜನ್ಮ ನೀಡಿದರು.॥14॥

ಮೂಲಮ್ - 15

ವರುಣೋ ಜನಯಾಮಾಸ ಸುಷೇಣಂ ನಾಮ ವಾನರಮ್ ।
ಶರಭಂ ಜನಯಾಮಾಸ ಪರ್ಜನ್ಯಸ್ತು ಮಹಾಬಲಃ ॥

ಅನುವಾದ

ವರುಣನು ಸುಷೇಣನೆಂಬ ವಾನರನನ್ನು ಉತ್ಪನ್ನ ಮಾಡಿದನು. ಮಹಾಬಲಿ ಪರ್ಜನ್ಯನು ಶರಭನಿಗೆ ಜನ್ಮ ನೀಡಿದನು.॥15॥

ಮೂಲಮ್ - 16

ಮಾರುತಸ್ಯೌರಸಃ ಶ್ರೀಮಾನ್ ಹನುಮಾನ್ ನಾಮ ವಾನರಃ ।
ವಜ್ರಸಂಹನನೋಪೇತೋ ವೈನತೇಯಸಮೋ ಜವೇ ॥

ಅನುವಾದ

ಹನುಮಂತ ಎಂಬ ಹೆಸರುಳ್ಳ ಐಶ್ವರ್ಯಶಾಲೀ ವಾನರನು ವಾಯುದೇವರ ಔರಸಪುತ್ರನಾಗಿದ್ದನು. ಅವನ ಶರೀರ ವಜ್ರದಂತೆ ಸುದೃಢವಾಗಿತ್ತು. ಅವನು ವೇಗದಲ್ಲಿ ಗರುತ್ಮಂತನಂತೆ ಇದ್ದನು.॥16॥

ಮೂಲಮ್ - 17

ಸರ್ವವಾನರಮುಖ್ಯೇಷು ಬುದ್ಧಿಮಾನ್ಬಲವಾನಪಿ ।
ತೇ ಸೃಷ್ಟಾ ಬಹುಸಾಹಸ್ರಾ ದಶಗ್ರೀವವಧೊದ್ಯತಾಃ ॥

ಅನುವಾದ

ಎಲ್ಲ ಶ್ರೇಷ್ಠ ವಾನರರಲ್ಲಿ ಅವನು ಎಲ್ಲರಿಗಿಂತ ಹೆಚ್ಚು ಬುದ್ಧಿವಂತ ಹಾಗೂ ಬಲವಂತನಾಗಿದ್ದನು. ಹೀಗೆ ಅನೇಕ ಸಾವಿರ ವಾನರರ ಉತ್ಪತ್ತಿಯಾಯಿತು. ಅವರೆಲ್ಲರೂ ರಾವಣನ ವಧೆಗಾಗಿ ಉದ್ಯುಕ್ತರಾಗಿದ್ದರು.॥17॥

ಮೂಲಮ್ - 18

ಅಪ್ರಮೇಯಬಲಾ ವೀರಾ ವಿಕ್ರಾಂತಾಃ ಕಾಮರೂಪಿಣಃ ।
ತೇ ಗಜಾಚಲಸಂಕಾಶಾ ವಪುಷ್ಮಂತೋ ಮಹಾಬಲಾಃ ॥

ಅನುವಾದ

ಅವರ ಬಲಕ್ಕೆ ಸೀಮೆಯೇ ಇರಲಿಲ್ಲ. ಅವರು ವೀರರು, ಪರಾಕ್ರಮಿಗಳು, ಇಚ್ಛಾನುಸಾರ ರೂಪ ಧರಿಸುವವರೂ ಆಗಿದ್ದರು. ಗಜರಾಜನಂತೆ ಮತ್ತು ಪರ್ವತದಂತೆ ಮಹಾಶೂರರೂ ಹಾಗೂ ಮಹಾಬಲಿಷ್ಠರಾಗಿದ್ದರು.॥18॥

ಮೂಲಮ್ - 19

ಋಕ್ಷವಾನರಗೋಪುಚ್ಛಾಃ ಕ್ಷಿಪ್ರಮೇವಾಭಿಜಜ್ಞಿರೇ ।
ಯಸ್ಯ ದೇವಸ್ಯ ಯದ್ರೂಪಂ ವೇಷೋ ಯಶ್ಚ ಪರಾಕ್ರಮಃ ॥

ಮೂಲಮ್ - 20

ಅಜಾಯತ ಸಮಂತೇನ ತಸ್ಯ ತಸ್ಯ ಪೃಥಕ್ ಪೃಥಕ್ ।
ಗೋಲಾಂಗೂಲೇಷು ಚೋತ್ಪನ್ನಾಃ ಕೇಚಿದುನ್ನತವಿಕ್ರಮಾಃ ॥

ಅನುವಾದ

ಕರಡಿ, ವಾನರ ಮತ್ತು ಗೋಲಾಂಗೂಲ ಮುಂತಾದ ವೀರರು ಶೀಘ್ರವಾಗಿ ಉತ್ಪನ್ನರಾದರು. ಯಾವ ದೇವತೆಯ ರೂಪ, ವೇಷ, ಪರಾಕ್ರಮವಿತ್ತೋ ಅದರಂತೆ ಪ್ರತ್ಯೇಕ-ಪ್ರತ್ಯೇಕ ಪುತ್ರರು ಉತ್ಪನ್ನರಾದರು. ಗೋಲಾಂಗೂಲರು ಯಾವ ದೇವತೆಯಿಂದ ಉತ್ಪನ್ನರಾಗಿದ್ದರೋ ಆ ದೇವತೆಗಿಂತಲೂ ಹೆಚ್ಚು ಪರಾಕ್ರಮಿಗಳಾಗಿದ್ದರು.॥19-20॥

ಮೂಲಮ್ - 21

ಋಕ್ಷೀಷು ಚ ತಥಾ ಜಾತಾ ವಾನರಾಃ ಕಿನ್ನರೀಷು ಚ ।
ದೇವಾ ಮಹರ್ಷಿಗಂಧರ್ವಾಸ್ತಾರ್ಕ್ಷ್ಯ ರ್ಯಕ್ಷಾ ಯಶಸ್ವಿನಃ ॥

ಮೂಲಮ್ - 22

ನಾಗಾಃ ಕಿಂಪುರುಷಾಶ್ಚೈವ ಸಿದ್ಧವಿದ್ಯಾಧರೋರಗಾಃ ।
ಬಹವೋ ಜನಯಾಮಾಸುರ್ಹೃಷ್ಟಾಸ್ತತ್ರ ಸಹಸ್ರಶಃ ॥

ಅನುವಾದ

ಕೆಲವು ವಾನರರು, ಕರಡಿಗಳ ಜಾತಿಯ ತಾಯಿಯರಿಂದ, ಕೆಲವರು ಕಿನ್ನರಿಯರಿಂದ ಉತ್ಪನ್ನರಾದರು. ದೇವತೆಗಳು ಮಹರ್ಷಿಗಳು, ಗಂಧರ್ವರು, ಗರುಡ, ಯಶಸ್ವಿಯಾದ ಯಕ್ಷರು, ನಾಗರು, ಕಿಂಪುರುಷರು, ಸಿದ್ಧರು, ವಿದ್ಯಾಧರರು, ಸರ್ಪಜಾತಿಯ ಅನೇಕ ವ್ಯಕ್ತಿಗಳು ಹೀಗೆ ಅತ್ಯಂತ ಹರ್ಷದಿಂದ ಸಾವಿರಾರು ಪುತ್ರರನ್ನು ಉತ್ಪನ್ನ ಮಾಡಿದರು.॥21-22॥

ಮೂಲಮ್ - 23

ಚಾರಣಾಶ್ಚ ಸುತಾನ್ ವೀರಾನ್ ಸಸೃಜುರ್ವನಚಾರಿಣಃ ।
ವಾನರಾನ್ ಸುಮಹಾಕಾಯಾನ್ಸರ್ವಾನ್ ವೈ ವನಚಾರಿಣಃ ॥

ಅನುವಾದ

ದೇವತೆಗಳ ಗುಣಗಳನ್ನು ಹಾಡುವ ವನವಾಸೀ ಚಾರಣರು ಬಹಳಷ್ಟು ವೀರ, ವಿಶಾಲಕಾಯ ವಾನರ ಪುತ್ರರನ್ನು ಉತ್ಪನ್ನ ಮಾಡಿದರು. ಅವರೆಲ್ಲರೂ ಕಾಡಿನ ಫಲ-ಮೂಲಗಳನ್ನು ತಿನ್ನುವವರಾಗಿದ್ದರು.॥23॥

ಮೂಲಮ್ - 24

ಅಪ್ಸರಸ್ಸು ಚ ಮುಖ್ಯಾಸು ತಥಾ ವಿದ್ಯಾಧರೀಷು ಚ ।
ನಾಗಕನ್ಯಾಸು ಚ ತದಾ ಗಂಧರ್ವೀಣಾಂ ತನೂಷು ಚ ।
ಕಾಮರೂಪಬಲೋಪೇತಾ ಯಥಾಕಾಮವಿಚಾರಿಣಃ ॥

ಅನುವಾದ

ಮುಖ್ಯ ಮುಖ್ಯ ಅಪ್ಸರೆಯರ, ವಿದ್ಯಾಧರಿಯರ, ನಾಗಕನ್ಯೆಯರ, ಹಾಗೂ ಗಂಧರ್ವರ ಪತ್ನಿಯರ ಗರ್ಭದಿಂದಲೂ ಇಚ್ಛಾನುರೂಪ ಧರಿಸಬಲ್ಲ, ಬಲಯುಕ್ತ, ಸ್ವೇಚ್ಛಾನುಸಾರ ಎಲ್ಲೆಡೆ ಸಂಚರಿಸಲು ಸಮರ್ಥರಾದ ವಾನರ ಪುತ್ರರು ಉತ್ಪನ್ನರಾದರು.॥24॥

ಮೂಲಮ್ - 25

ಸಿಂಹಶಾರ್ದೂಲಸದೃಶಾ ದರ್ಪೇಣ ಚ ಬಲೇನ ಚ ।
ಶಿಲಾಪ್ರಹರಣಾಃ ಸರ್ವೇ ಸರ್ವೇ ಪರ್ವತಯೋಧಿನಃ ॥

ಅನುವಾದ

ಅವರು ದರ್ಪ ಮತ್ತು ಬಲದಲ್ಲಿ ಸಿಂಹ ಮತ್ತು ಹುಲಿಗಳಂತೆ ಇದ್ದರು. ಕಲ್ಲುಬಂಡೆಗಳನ್ನು ಹಾಗೂ ಪರ್ವತಗಳನ್ನು ಎತ್ತಿ ಬೀಸಿ ಒಗೆಯುತ್ತಾ ಯುದ್ಧ ಮಾಡುತ್ತಿದ್ದರು.॥25॥

ಮೂಲಮ್ - 26

ನಖದಂಷ್ಟ್ರಾಯುಧಾಃ ಸರ್ವೇ ಸರ್ವೇ ಸರ್ವಾಸ್ತ್ರಕೋವಿದಾಃ ।
ವಿಚಾಲಯೇಯುಃ ಶೈಲೇಂದ್ರಾನ್ಭೇದಯೇಯುಃ ಸ್ಥಿರಾನ್ ದ್ರುಮಾನ್ ॥

ಅನುವಾದ

ಅವರೆಲ್ಲರೂ ಉಗುರು ಮತ್ತು ಹಲ್ಲುಗಳನ್ನು ಶಸ್ತ್ರಗಳಂತೆ ಬಳಸುತ್ತಿದ್ದರು. ಅವರೆಲ್ಲರಿಗೆ ಎಲ್ಲ ಪ್ರಕಾರದ ಅಸ್ತ್ರ-ಶಸ್ತ್ರಗಳ ಅರಿವು ಇತ್ತು. ಅವರಲ್ಲಿ ಪರ್ವತಗಳನ್ನು ಅಲುಗಾಡಿಸುವ ಹಾಗೂ ಸ್ಥಿರವಾಗಿದ್ದ ಮರಗಳನ್ನು ಕೂಡ ಮುರಿಯುವ ಸಾಮರ್ಥ್ಯವಿತ್ತು.॥26॥

ಮೂಲಮ್ - 27

ಕ್ಷೋಭಯೇಯುಶ್ಚ ವೇಗೇನ ಸಮುದ್ರಂ ಸರಿತಾಂ ಪತಿಮ್ ।
ದಾರಯೇಯುಃ ಕ್ಷಿತಿಂ ಪದ್ಭ್ಯಾಮಾಪ್ಲವೇಯುರ್ಮಹಾರ್ಣವಾನ್ ॥

ಅನುವಾದ

ನದಿಗಳ ಒಡೆಯನಾದ ಸಮುದ್ರವನ್ನು ಕಲಕಿಬಿಡುವ ಸಾಮರ್ಥ್ಯವಿದ್ದು, ಕಾಲುಗಳಿಂದಲೇ ಭೂಮಿಯನ್ನೇ ಸೀಳುವ ಶಕ್ತಿ ಅವರಿಗೆ ಇತ್ತು. ಅವರು ಮಹಾ ಸಮುದ್ರವನ್ನೂ ದಾಟಿ ಹೋಗುತ್ತಿದ್ದರು.॥27॥

ಮೂಲಮ್ - 28

ನಭಃಸ್ಥಲಂ ವಿಶೇಯುಶ್ಚ ಗೃಹ್ಣೀಯುರಪಿ ತೋಯದಾನ್ ।
ಗೃಹ್ಣೀಯುರಪಿ ಮಾತಂಗಾನ್ಮತ್ತಾನ್ಪ್ರವ್ರಜತೋ ವನೇ ॥

ಅನುವಾದ

ಅವರು ಬಯಸಿದರೆ ಆಕಾಶಕ್ಕೆ ನೆಗೆದು ಮೋಡಗಳನ್ನು ಕೈಯಿಂದ ಹಿಡಿಯುತ್ತಿದ್ದರು. ಕಾಡಿನಲ್ಲಿ ವೇಗವಾಗಿ ನಡೆಯುತ್ತಾ ಮದಭರಿತ ಆನೆಯನ್ನು ಸೆರೆಹಿಡಿಯುತ್ತಿದ್ದರು.॥28॥

ಮೂಲಮ್ - 29

ನರ್ದಮಾನಾಶ್ಚ ನಾದೇನ ಪಾತಯೇಯುರ್ವಿಹಂಗಮಾನ್ ।
ಈದೃಶಾನಾಂ ಪ್ರಸೂತಾನಿ ಹರೀಣಾಂ ಕಾಮರೂಪಿಣಾಮ್ ॥

ಮೂಲಮ್ - 30

ಶತಂ ಶತಸಹಸ್ರಾಣಿ ಯೂಥಪಾನಾಂ ಮಹಾತ್ಮನಾಮ್ ।
ತೇ ಪ್ರಧಾನೇಷು ಯೂಥೇಷು ಹರೀಣಾಂ ಹರಿಯೂಥಪಾಃ ॥

ಅನುವಾದ

ಘೋರ ಶಬ್ದ ಮಾಡುತ್ತಾ ಆಕಾಶದಲ್ಲಿ ಹಾರುತ್ತಿದ್ದ ಪಕ್ಷಿಗಳನ್ನು ಅವರು ತಮ್ಮ ಸಿಂಹನಾದದಿಂದ ಕೆಡಹುತ್ತಿದ್ದರು. ಇಂತಹ ಬಲಶಾಲಿ ಮತ್ತು ಇಚ್ಛಾನುಸಾರ ರೂಪಧರಿಸಬಲ್ಲ ಮಹಾಕಾಯ ವಾನರ ಯೂಥಪತಿಗಳಿಂದಲೂ ಶ್ರೇಷ್ಠರಾಗಿದ್ದರು.॥29-30॥

ಮೂಲಮ್ - 31

ಬಭೂವುರ್ಯೂಥಪಶ್ರೇಷ್ಠಾನ್ ವೀರಾಂಶ್ಚಾಜನಯನ್ಹರೀನ್ ।
ಅನ್ಯೇ ಋಕ್ಷವತಃ ಪ್ರಸ್ಥಾನುಪತಸ್ಥುಃ ಸಹಸ್ರಶಃ ॥

ಅನುವಾದ

ಯೂಥಪತಿಗಳಲ್ಲೇ ಶ್ರೇಷ್ಠ ಯೂಥಪತಿಗಳನ್ನು ಅವರು ಸೃಷ್ಟಿಮಾಡಿದರು. ಅವರು ಇನ್ನೂ ಅನೇಕ ಪ್ರಕಾರದ ವಾನರರಾಗಿದ್ದರು. ಇವರು ಪ್ರಾಕೃತ ವಾನರರಿಂದ ವಿಲಕ್ಷಣರಾಗಿದ್ದರು. ಅವುಗಳಲ್ಲಿ ಅನೇಕ ಸಹಸ್ರ ವಾನರ ಯೂಥಪತಿಗಳು ಋಕ್ಷವಾನ್ ಪರ್ವತ ಶಿಖರಗಳಲ್ಲಿ ವಾಸಮಾಡುತ್ತಿದ್ದರು.॥31॥

ಮೂಲಮ್ - 32

ಅನ್ಯೆ ನಾನಾ ವಿಧಾನ್ ಶೈಲಾನ್ ಕಾನನಾನಿ ಚ ಭೇಜಿರೇ ।
ಸೂರ್ಯಪುತ್ರಂ ಚ ಸುಗ್ರೀವಂ ಶಕ್ರಪುತ್ರಂ ಚ ವಾಲಿನಮ್ ॥

ಮೂಲಮ್ - 33

ಭ್ರಾತರಾವುಪತಸ್ಥುಸ್ತೇ ಸರ್ವೇ ಚ ಹರೀಯೂಥಪಾಃ ।
ನಲಂ ನೀಲಂ ಹನೂಮಂತಮನ್ಯಾಂಶ್ಚ ಹರಿಯೂಥಪಾನ್ ॥

ಮೂಲಮ್ - 34

ತೇ ತಾರ್ಕ್ಷ್ಯ ಬಲಸಂಪನ್ನಾಃ ಸರ್ವೇ ಯುದ್ಧವಿಶಾರದಾಃ ।
ವಿಚರಂತೋಽರ್ದಯನ್ ಸರ್ವಾನ್ ಸಿಂಹವ್ಯಾಘ್ರಮಹೋರಗಾನ್ ॥

ಅನುವಾದ

ಇವರು ಬೇರೆ-ಬೇರೆ ಪರ್ವತಗಳನ್ನು, ವನಗಳನ್ನು ಆಶ್ರಯಿಸಿದರು. ಇಂದ್ರಕುಮಾರ ವಾಲಿ ಮತ್ತು ಸೂರ್ಯ ನಂದನ ಸುಗ್ರೀವರು ಸಹೋದರರಾಗಿದ್ದರು. ಸಮಸ್ತ ವಾನರ ಯೂಥಪತಿಗಳು ಆ ಇಬ್ಬರು ಸಹೋದರರ ಸೇವೆಯಲ್ಲಿ ಉಪಸ್ಥಿತರಾಗಿದ್ದರು. ಹಾಗೆಯೇ ಇತರ ವಾನರರು ನಳ-ನೀಲ, ಹನುಮಂತ ಹಾಗೂ ಇತರ ವಾನರ ಸರದಾರರನ್ನು ಆಶ್ರಯಿಸಿದ್ದರು. ಅವರೆಲ್ಲರೂ ಗರುಡನಂತೆ ಬಲಶಾಲಿಗಳು ಹಾಗೂ ಯುದ್ಧಕಲೆಯಲ್ಲಿ ನಿಪುಣರಾಗಿದ್ದರು. ಅವರು ವನದಲ್ಲಿ ಸಂಚರಿಸುವಾಗ ಸಿಂಹ, ಹುಲಿ ಮತ್ತು ದೊಡ್ಡ ದೊಡ್ಡ ನಾಗ ಆದಿ ವನ್ಯಜಂತುಗಳನ್ನು ಹೊಸಕಿಹಾಕುತ್ತಿದ್ದರು.॥32-34॥

ಮೂಲಮ್ - 35

ಮಹಾಬಲೋ ಮಹಾಬಾಹುರ್ವಾಲೀ ವಿಪುಲವಿಕ್ರಮಃ ।
ಜುಗೋಪ ಭುಜವೀರ್ಯೇಣ ಋಕ್ಷಗೋಪುಚ್ಛವಾನರಾನ್ ॥

ಅನುವಾದ

ಮಹಾಬಾಹು ವಾಲಿಯು ಮಹಾಬಲ ಸಂಪನ್ನನಾಗಿದ್ದನು ಹಾಗೂ ವಿಶೇಷ ಪರಾಕ್ರಮಿಯಗಿದ್ದನು. ಅವನು ತನ್ನ ಬಾಹು ಬಲದಿಂದ ಕರಡಿ, ಗೋಲಾಂಗೂಲ ಹಾಗೂ ಇತರ ವಾನರರನ್ನು ರಕ್ಷಿಸುತ್ತಿದ್ದನು.॥35॥

ಮೂಲಮ್ - 36

ತೈರಿಯಂ ಪೃಥಿವೀ ಶೂರೈಃ ಸಪರ್ವತವನಾರ್ಣವಾ ।
ಕೀರ್ಣಾ ವಿವಿಧಸಂಸ್ಥಾನೈರ್ನಾನಾವ್ಯಂಜನಲಕ್ಷಣೈಃ ॥

ಅನುವಾದ

ಅವರೆಲ್ಲರ ಶರೀರಗಳು ಮತ್ತು ಸಾರ್ಥಕ್ಯಸೂಚಕ ಲಕ್ಷಣಗಳು ನಾನಾ ಪ್ರಕಾರದಿಂದ ಇದ್ದವು. ಆ ಶೂರ-ವೀರ ವಾನರರು ಪರ್ವತ, ವನ ಮತ್ತು ಸಮುದ್ರ ಸಹಿತ ಸಮಸ್ತ ಭೂಮಂಡಲದಲ್ಲಿ ಹರಡಿಕೊಂಡರು.॥36॥

ಮೂಲಮ್ - 37

ತೈರ್ಮೇಘವೃಂದಾಚಲಕಟಸಂನಿಭೈ-
ರ್ಮಹಾಬಲೈರ್ವಾ ನರಯೂಥಪಾಧಿಪೈಃ ।
ಬಭೂವ ಭೂರ್ಭೀಮಶರೀರರೂಪೈಃ
ಸಮಾವೃತಾ ರಾಮಸಹಾಯಹೇತೋಃ ॥

ಅನುವಾದ

ಆ ವಾನರ ಯೂಥಪತಿಗಳು ಮೇಘ ಸಮೂಹ ಹಾಗೂ ಪರ್ವತ ಶಿಖರಗಳಂತೆ ವಿಶಾಲಕಾಯರಾಗಿದ್ದರು. ಅವರು ಮಹಾಬಲಶಾಲಿಗಳಾಗಿದ್ದರು. ಅವರ ಶರೀರ ಮತ್ತು ರೂಪ ಭಯಂಕರವಾಗಿತ್ತು. ಭಗವಾನ್ ಶ್ರೀರಾಮನ ಸಹಾಯಕ್ಕಾಗಿ ಪ್ರಕಟರಾದ ಆ ವಾನರ ವೀರರಿಂದ ಇಡೀ ಪೃಥ್ವಿಯು ತುಂಬಿಹೋಯಿತು.॥37॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಹದಿನೇಳನೆಯ ಸರ್ಗ ಪೂರ್ಣವಾಯಿತು. ॥17॥