०१६ पायसप्रदानम्

वाचनम्
ಭಾಗಸೂಚನಾ

ಶ್ರೀಹರಿಯು ರಾವಣನನ್ನು ಸಂಹರಿಸಲು ಮಾನವನಾಗಿ ಅವತರಿಸುವೆನೆಂದು ದೇವತೆಗಳಿಗೆ ಆಶ್ವಾಸನೆಯನ್ನಿತ್ತಿದುದು, ಪುತ್ರಕಾಮೇಷ್ಟಿಯಜ್ಞದ ಅಗ್ನಿಕುಂಡದಿಂದ ಪ್ರಾಜಾಪತ್ಯ ಪುರುಷನು ಪ್ರಕಟನಾಗಿ ದಿವ್ಯಪಾಯಸವನ್ನು ಕೊಟ್ಟಿದುದು, ಅದನ್ನು ಹಂಚಿಕೊಂಡು ತಿಂದ ರಾಣಿಯರು ಗರ್ಭವತಿಯರಾದುದು

ಮೂಲಮ್ - 1

ತತೋ ನಾರಾಯಣೋ ವಿಷ್ಣುರ್ನಿಯುಕ್ತಃ ಸುರಸತ್ತಮೈಃ ।
ಜಾನನ್ನಪಿ ಸುರಾನೇವಂ ಶ್ಲಕ್ಷ್ಣಂ ವಚನಮಬ್ರವೀತ್ ॥

ಅನುವಾದ

ರಾವಣನನ್ನು ಸಂಹರಿಸಲು ದೇವತೆಗಳಿಂದ ನಿಯುಕ್ತನಾದ ಶ್ರೀಹರಿಯು ಮುಂದಿನ ಕರ್ತವ್ಯವನ್ನು ತಿಳಿದಿದ್ದರೂ ದೇವತೆಗಳನ್ನು ಉದ್ದೇಶಿಸಿ ಈ ಮಧುರವಾದ ಮಾತನ್ನು ಹೇಳಿದನು.॥1॥

ಮೂಲಮ್ - 2

ಉಪಾಯಃ ಕೋ ವಧೇ ತಸ್ಯ ರಾಕ್ಷಸಾಧಿಪತೇ ಸುರಾಃ ।
ಯಮಹಂ ತಂ ಸಮಾಸ್ಥಾಯ ನಿಹನ್ಯಾಮೃಷಿಕಂಟಕಮ್ ॥

ಅನುವಾದ

ದೇವತೆಗಳಿರಾ! ರಾಕ್ಷಸಾಧಿಪ ರಾವಣನನ್ನು ಸಂಹರಿಸುವ ಯಾವ ಉಪಾಯವಿದೆ? ಋಷಿಗಳ ಕಂಟಕನಾದ ನಿಶಾಚರನನ್ನು ವಧಿಸಲು ಯಾರನ್ನು ನಾನು ಆಶ್ರಯಿಸಲಿ.॥2॥

ಮೂಲಮ್ - 3

ಏವಮುಕ್ತಾಃ ಸುರಾಃ ಸರ್ವೇ ಪ್ರತ್ಯೂಚುರ್ವಿಷ್ಣುಮವ್ಯಯಮ್ ।
ಮಾನುಷಂ ರೂಪಮಾಸ್ಥಾಯ ರಾವಣಂ ಜಹಿ ಸಂಯುಗೇ ॥

ಅನುವಾದ

ಹೀಗೆ ಶ್ರೀ ಹರಿಯು ಕೇಳಿದಾಗ ಎಲ್ಲ ದೇವತೆಗಳು ಅವಿನಾಶಿಯಾದ ಭಗವಾನ್ ವಿಷ್ಣುವಿನಲ್ಲಿ ‘ಪ್ರಭೋ ನೀನು ಮನುಷ್ಯರೂಪವನ್ನು ಧರಿಸಿ ಯುದ್ಧದಲ್ಲಿ ರಾವಣನನ್ನು ಕೊಂದುಬಿಡು’ ಎಂದು ಹೇಳಿದರು.॥3॥

ಮೂಲಮ್ - 4

ಸ ಹಿ ತೇಪೇ ತಪಸ್ತೀವ್ರಂ ದೀರ್ಘಕಾಲಮರಿಂದಮಃ ।
ಯೇನ ತುಷ್ಟೋಽಭವದ್ಬ್ರಹ್ಮಾ ಲೋಕಕೃಲ್ಲೋಕಪೂರ್ವಜಃ ॥

ಅನುವಾದ

ಆ ನಿಶಾಚರನು ದೀರ್ಘ ಕಾಲ ತೀವ್ರ ತಪಸ್ಸನ್ನಾಚರಿಸಿದ್ದನು. ಅದಕ್ಕೆ ಸರ್ವ ಲೋಕಗಳ ಪೂರ್ವಜನಾದ ಲೋಕಸ್ರಷ್ಟಾ ಬ್ರಹ್ಮದೇವರು ಪ್ರಸನ್ನನಾಗಿ ದರ್ಶನ ಕೊಟ್ಟನು.॥4॥

ಮೂಲಮ್ - 5

ಸಂತುಷ್ಟಃ ಪ್ರದದೌ ತಸ್ಮೈ ರಾಕ್ಷಸಾಯ ವರಂ ಪ್ರಭುಃ ।
ನಾನಾ ವಿಧೇಭ್ಯೋ ಭೂತೇಭ್ಯೋ ಭಯಂ ನಾನ್ಯತ್ರ ಮಾನುಷಾತ್ ॥

ಅನುವಾದ

ಅವನಿಗೆ ಒಲಿದ ಭಗವಾನ್ ಬ್ರಹ್ಮದೇವರು ಆ ರಾಕ್ಷಸನಿಗೆ ನಿನಗೆ ಮನುಷ್ಯರಲ್ಲದೆ ಬೇರೆ ಯಾವ ಪ್ರಾಣಿಯಿಂದಲೂ ಭಯವಿಲ್ಲ ಎಂದು ವರವನ್ನು ಕೊಟ್ಟನು.॥5॥

ಮೂಲಮ್ - 6

ಅವಜ್ಞಾತಾಃ ಪುರಾ ತೇನ ವರದಾನೇ ಹಿ ಮಾನವಾಃ ।
ಏವಂ ಪಿತಾಮಹಾತ್ತಸ್ಮಾದ್ ವರದಾನೇನ ಗರ್ವಿತಃ ॥

ಅನುವಾದ

ಹಿಂದೆ ವರ ಪಡೆದಾಗ ಆ ರಾಕ್ಷಸನು ಮನುಷ್ಯರನ್ನು ದುರ್ಬಲರೆಂದು ತಿಳಿದು ಅವರನ್ನು ಅವಹೇಳನ ಮಾಡಿದ್ದ. ಈ ಪ್ರಕಾರ ಪಿತಾಮಹರಿಂದ ದೊರೆತ ವರದ ಕಾರಣ ಆತ ಅತಿಗರ್ವಿಷ್ಠನಾದನು.॥6॥

ಮೂಲಮ್ - 7

ಉತ್ಸಾದಯತಿ ಲೋಕಾಂ ಸ್ತ್ರೀನ್ ಸ್ತ್ರಿಯಶ್ಚಾಪ್ಯುಪಕರ್ಷತಿ ।
ತಸ್ಮಾತ್ತಸ್ಯ ವಧೋ ದೃಷ್ಟೋ ಮಾನುಷ್ಯೇಭ್ಯಃ ಪರಂತಪ ॥

ಅನುವಾದ

ಶತ್ರುಗಳಿಗೆ ತಾಪವನ್ನು ಕೊಡುವ ದೇವನೇ! ಅವನು ಮೂರು ಲೋಕಗಳನ್ನು ಪೀಡಿಸುತ್ತಾ ಸ್ತ್ರೀಯರನ್ನೂ ಅಪಹರಿ ಸುತ್ತಿದ್ದಾನೆ. ಆದ್ದರಿಂದ ಅವನ ವಧೆ ಮನುಷ್ಯರ ಕೈಯಲ್ಲೇ ನಿಶ್ಚಿತವಾಗಿದೆ.॥7॥

ಮೂಲಮ್ - 8

ಇತ್ಯೇತದ್ವಚನಂ ಶ್ರುತ್ವಾ ಸುರಾಣಾಂ ವಿಷ್ಣುರಾತ್ಮವಾನ್ ।
ಪಿತರಂ ರೋಚಯಾ ಮಾಸ ತದಾ ದಶರಥಂ ನೃಪಮ್ ॥

ಅನುವಾದ

ಸಮಸ್ತ ಜೀವಾತ್ಮರನ್ನು ವಶದಲ್ಲಿರಿಸಿಕೊಂಡ ಭಗವಾನ್ ವಿಷ್ಣುವು ದೇವತೆಗಳ ಮಾತನ್ನು ಕೇಳಿ, ಅವತಾರ ಕಾಲದಲ್ಲಿ ದಶರಥನನ್ನೇ ತಂದೆಯಾಗಿಸಿಕೊಳ್ಳಲು ಇಚ್ಛಿಸಿದನು.॥8॥

ಮೂಲಮ್ - 9

ಸ ಚಾಪ್ಯಪುತ್ರೋ ನೃಪತಿಸ್ತಸ್ಮಿನ್ಕಾಲೇ ಮಹಾದ್ಯುತಿಃ ।
ಅಜಯತ್ಪುತ್ರಿಯಾಮಿಷ್ಟಿಂ ಪುತ್ರೇಪ್ಸುರರಿಸೂದನಃ ॥

ಅನುವಾದ

ಅದೇ ಸಮಯದಲ್ಲಿ ಶತ್ರುಸೂದನ ಮಹಾತೇಜಸ್ವೀ ದಶರಥನು ಪುತ್ರಹೀನನಾದ ಕಾರಣ ಪುತ್ರಪ್ರಾಪ್ತಿಗಾಗಿ ಪುತ್ರಕಾಮೇಷ್ಟಿ ಯಜ್ಞವನ್ನು ಮಾಡುತ್ತಿದ್ದನು.॥9॥

ಮೂಲಮ್ - 10

ಸ ಕೃತ್ವಾ ನಿಶ್ಚಯಂ ವಿಷ್ಣುರಾಮಂತ್ರ್ಯ ಚ ಪಿತಾಮಹಮ್ ।
ಅಂತರ್ಧಾನಂ ಗತೋ ದೇವೈಃ ಪೂಜ್ಯಮಾನೋ ಮಹರ್ಷಿಭಿಃ ॥

ಅನುವಾದ

ಅವನನ್ನು ತಂದೆಯಾಗಿಸಿಕೊಳ್ಳುವ ನಿಶ್ಚಯ ಮಾಡಿ ಭಗವಾನ್ ವಿಷ್ಣು ಪಿತಾಮಹನ ಅನುಮತಿಯನ್ನು ಪಡೆದು, ದೇವತೆಗಳಿಂದ ಮತ್ತು ಮಹರ್ಷಿಗಳಿಂದ ಪೂಜಿತನಾಗಿ ಅಂತರ್ಧಾನನಾದನು.॥10॥

ಮೂಲಮ್ - 11

ತತೋ ವೈ ಯಜಮಾನಸ್ಯ ಪಾವಕಾದತುಲಪ್ರಭಮ್ ।
ಪ್ರಾದುಭೂರ್ತಂ ಮಹದ್ಭೂತಂ ಮಹಾವೀರ್ಯಂ ಮಹಾಬಲಮ್ ॥

ಅನುವಾದ

ಅನಂತರ ಪುತ್ರೇಷ್ಟಿಯಜ್ಞ ಮಾಡುತ್ತಿರುವ ರಾಜಾ ದಶರಥನ ಯಜ್ಞದಲ್ಲಿ ಅಗ್ನಿಕುಂಡದಿಂದ ಒಬ್ಬ ವಿಶಾಲ ಕಾಯ ಪುರುಷನು ಪ್ರಕಟನಾದನು. ಅವನ ಶರೀರದಲ್ಲಿ ಅತುಲವಾದ ಪ್ರಕಾಶವಿತ್ತು. ಅವನ ಬಲ ಪರಾಕ್ರಮಗಳು ಮಹತ್ತಾಗಿದ್ದವು.॥11॥

ಮೂಲಮ್ - 12

ಕೃಷ್ಣಂ ರಕ್ತಾಂಬರಧರಂ ರಕ್ತಾಸ್ಯಂ ದುಂದುಭಿಸ್ವನಮ್ ।
ಸಿಗ್ಧಹರ್ಯಕ್ಷತನುಜಶ್ಮಶ್ರುಪ್ರವರಮೂರ್ಧಜಮ್ ॥

ಅನುವಾದ

ಅವನು ಕೃಷ್ಣವರ್ಣನಾಗಿದ್ದು, ಶರೀರದಲ್ಲಿ ಕೆಂಪಾದ ವಸ್ತ್ರಗಳನ್ನು ಧರಿಸಿದ್ದನು. ಮುಖವೂ ರಕ್ತವರ್ಣವಾಗಿತ್ತು. ಅವನ ಧ್ವನಿ ದುಂದುಭಿಯಂತೆ ಗಂಭೀರವಾಗಿತ್ತು. ಶರೀರದ ರೋಮಗಳು ಮೃದು-ನಯವಾಗಿದ್ದು, ಗಡ್ಡ-ಮೀಸೆಗಳು ಸಿಂಹದಂತೆ ಇದ್ದುವು.॥12॥

ಮೂಲಮ್ - 13

ಶುಭಲಕ್ಷಣಸಂಪನ್ನಂ ದಿವ್ಯಾಭರಣಭೂಷಿತಮ್ ।
ಶೈಲಶೃಂಗಸಮುತ್ಸೇಧಂ ದೃಪ್ತಶಾರ್ದೂಲವಿಕ್ರಮಮ್ ॥

ಅನುವಾದ

ಶರೀರದಲ್ಲಿ ಶುಭ ಲಕ್ಷಣಗಳಿದ್ದು, ದಿವ್ಯ ಆಭರಣಗಳಿಂದ ಅಲಂಕೃತನಾಗಿ, ಶೈಲಶಿಖರದಂತೆ ಎತ್ತರವಾಗಿದ್ದು, ಅವನ ನಡೆ ಮದಿಸಿದ ಸಿಂಹನಂತೆ ಗಂಭೀರವಾಗಿತ್ತು.॥13॥

ಮೂಲಮ್ - 14

ದಿವಾಕರಸಮಾಕಾರಂ ದೀಪ್ತಾನಲಶಿಖೋಪಮಮ್ ।
ತಪ್ತಜಾಂಬೂನದಮಯೀಂ ರಾಜತಾಂತ ಪರಿಚ್ಛದಾಮ್ ॥

ಮೂಲಮ್ - 15

ದಿವ್ಯಪಾಯಸಸಂಪೂರ್ಣಂ ಪಾತ್ರೀಂ ಪತ್ನೀಮಿವ ಪ್ರಿಯಾಮ್ ।
ಪ್ರಗೃಹ್ಯ ವಿಪುಲಾಂ ದೋರ್ಭ್ಯಾಂ ಸ್ವಯಂ ಮಾಯಾಮಯೀಮಿವ ॥

ಅನುವಾದ

ಅವನ ಆಕೃತಿ ಸೂರ್ಯನಂತೆ ತೇಜೋಮಯವಾಗಿತ್ತು. ಪ್ರಜ್ವಲಿತ ಅಗ್ನಿಶಿಖೆಗಳಂತೆ ದೇದೀಪ್ಯಮಾನನಾಗಿದ್ದನು. ಕೈಯಲ್ಲಿ ಕಾದ ಜಾಂಬೂನದ ಸುವರ್ಣದಿಂದ ನಿರ್ಮಿತ ಪಾತ್ರೆಯಿತ್ತು. ಅದರ ಮುಚ್ಚಳ ಬೆಳ್ಳಿಯದಾಗಿತ್ತು. ಆ ಬಟ್ಟಲು ದೊಡ್ಡದಾಗಿದ್ದು, ದಿವ್ಯಪಾಯಸದಿಂದ ತುಂಬಿತ್ತು. ಆ ಅದ್ಭುತ ಮಾಯಾಮಯ ಬಟ್ಟಲನ್ನು ಯಾರೋ ರಸಿಕನು ತನ್ನ ಪ್ರಿಯತಮೆಯನ್ನು ಅಪ್ಪಿಕೊಂಡಿರುವನೋ ಎಂಬಂತೆ ತನ್ನ ಎರಡು ಕೈಗಳಲ್ಲಿ ಎತ್ತಿಕೊಂಡಿದ್ದನು.॥14-15॥

ಮೂಲಮ್ - 16

ಸಮವೇಕ್ಷ್ಯಾಬ್ರವೀದ್ವಾಕ್ಯಮಿದಂ ದಶರಥಂ ನೃಪಮ್ ।
ಪ್ರಾಜಾಪತ್ಯಂ ನರಂ ವಿದ್ಧಿ ಮಾಮಿಹಾಭ್ಯಾಗತಂ ನೃಪ ॥

ಅನುವಾದ

ಅವನು ದಶರಥ ರಾಜನನ್ನು ನೋಡಿ ಹೇಳಿದನು - ನೃಪತಿಯೇ! ನನ್ನನ್ನು ಪ್ರಜಾಪತಿ ಲೋಕದ ಪುರುಷನೆಂದು ತಿಳಿ. ನಾನು ಪ್ರಜಾಪತಿಯ ಆಜ್ಞೆಯಂತೆಯೇ ಬಂದಿರುವೆನು.॥16॥

ಮೂಲಮ್ - 17

ತತಃ ಪರಂ ತದಾ ರಾಜಾ ಪ್ರತ್ಯುವಾಚ ಕೃತಾಂಜಲಿಃ ।
ಭಗವನ್ ಸ್ವಾಗತಂ ತೇಽಸ್ತು ಕಿಮಹಂ ಕರವಾಣಿತೇ ॥

ಅನುವಾದ

ಆಗ ರಾಜನು ಕೈಮುಗಿದು - ‘ಭಗವನ್! ನಿಮಗೆ ಸ್ವಾಗತವು ನಾನು ನಿಮಗೆ ಏನು ಸೇವೆ ಮಾಡಲಿ ತಿಳಿಸಿರಿ’ ಎಂದು ಬೇಡಿಕೊಂಡನು.॥17॥

ಮೂಲಮ್ - 18

ಅಥೋ ಪುನರಿದಂ ವಾಕ್ಯಂ ಪ್ರಾಜಾಪತ್ಯೋ ನರೋಽಬ್ರವೀತ್ ।
ರಾಜನ್ನರ್ಚಯತಾ ದೇವಾನದ್ಯ ಪ್ರಾಪ್ತಮಿದಂ ತ್ವಯಾ ॥

ಅನುವಾದ

ಮತ್ತೆ ಆ ಪ್ರಾಜಾಪತ್ಯ ಪುರುಷನು ನುಡಿದನು-ರಾಜನೇ! ನೀನು ದೇವತೆಗಳನ್ನು ಆರಾಧಿಸುತ್ತಿರುವೆ ಅದಕ್ಕಾಗಿ ನಿನಗೆ ಇಂದು ಈ ವಸ್ತು ದೊರೆತಿದೆ.॥18॥

ಮೂಲಮ್ - 19

ಇದಂ ತು ನೃಪಶಾರ್ದೂಲ ಪಾಯಸಂ ದೇವನಿರ್ಮಿತಮ್ ।
ಪ್ರಜಾಕರಂ ಗೃಹಾಣ ತ್ವಂ ಧನ್ಯಮಾರೋಗ್ಯವರ್ಧನಮ್ ॥

ಅನುವಾದ

ನೃಪಶ್ರೇಷ್ಠನೇ! ಇದು ದೇವತೆಗಳು ನಿರ್ಮಿಸಿದ ಪಾಯಸವು ಸಂತಾನವನ್ನು ಕೊಡುವಂತಹುದು. ನೀನು ಇದನ್ನು ಸ್ವೀಕರಿಸು. ಇದು ಧನ ಮತ್ತು ಆರೋಗ್ಯವನ್ನು ವೃದ್ಧಿಪಡಿಸುವುದ.॥19॥

ಮೂಲಮ್ - 20

ಭಾರ್ಯಾಣಾಮನುರೂಪಾಣಾಮಶ್ನೀತೇತಿ ಪ್ರಯಚ್ಛ ವೈ ।
ತಾಸು ತ್ವಂ ಲಪ್ಸ್ಯಸೇ ಪುತ್ರಾನ್ಯದರ್ಥಂ ಯಜಸೇ ನೃಪ ॥

ಅನುವಾದ

ರಾಜನೇ! ಈ ಪಾಯಸವನ್ನು ನಿನ್ನ ಯೋಗ್ಯ ಪತ್ನಿಯರಿಗೆ ಕೊಟ್ಟು, ಇದನ್ನು ತಿನ್ನುವಂತೆ ಹೇಳು. ಹೀಗೆ ಮಾಡುವುದರಿಂದ ಅವರ ಗರ್ಭದಿಂದ ಅನೇಕ ಪುತ್ರರ ಪ್ರಾಪ್ತಿಯಾಗುವುದು. ಅದಕ್ಕಾಗಿ ತಾನೇ ನೀನು ಯಜ್ಞ ಮಾಡುತ್ತಿರುವೆ.॥20॥

ಮೂಲಮ್ - 21

ತಥೇತಿ ನೃಪತಿಃ ಪ್ರೀತಃ ಶಿರಸಾ ಪ್ರತಿಗೃಹ್ಯ ತಾಮ್ ।
ಪಾತ್ರೀಂ ದೇವಾನ್ನಸಂಪೂರ್ಣಾಂ ದೇವದತ್ತಾಂ ಹಿರಣ್ಮಯೀಮ್ ॥

ಮೂಲಮ್ - 22

ಅಭಿವಾದ್ಯ ಚ ತದ್ಭೂತಮದ್ಭುತಂ ಪ್ರಿಯದರ್ಶನಮ್ ।
ಮುದಾ ಪರಮಯಾ ಯುಕ್ತಶ್ಚಕಾರಾಭಿಪ್ರದಕ್ಷಿಣಮ್ ॥

ಅನುವಾದ

ರಾಜನು ಬಹಳ ಸಂತೋಷದಿಂದ ಹಾಗೇ ಆಗಲಿ ಎಂದು ಹೇಳುತ್ತಾ ಆ ದಿವ್ಯಪುರುಷನು ಕೊಟ್ಟ ದೇವಾನ್ನದಿಂದ ತುಂಬಿದ ಚಿನ್ನದ ಬಟ್ಟಲನ್ನು ಪಡೆದು ತನ್ನ ಮಸ್ತಕದಲ್ಲಿ ಧರಿಸಿಕೊಂಡನು. ಮತ್ತೆ ಆ ಅದ್ಭುತ ಹಾಗೂ ಪ್ರಿಯದರ್ಶನ ಪುರುಷನಿಗೆ ನಮಸ್ಕರಿಸಿ ತುಂಬು ಆನಂದದೊಂದಿಗೆ ಅವನಿಗೆ ಪ್ರದಕ್ಷಿಣೆ ಮಾಡಿದನು.॥21-22॥

ಮೂಲಮ್ - 23

ತತೋ ದಶರಥಃ ಪ್ರಾಪ್ಯ ಪಾಯಸಂ ದೇವನಿರ್ಮಿತಮ್ ।
ಬಭೂವ ಪರಮಪ್ರೀತಃ ಪ್ರಾಪ್ಯ ವಿತ್ತಮಿವಾಧನಃ ॥

ಮೂಲಮ್ - 24

ತತಸ್ತದದ್ಭುತಪ್ರಖ್ಯಂ ಭೂತಂ ಪರಮಭಾಸ್ವರಮ್ ।
ಸಂವರ್ತಯಿತ್ವಾ ತತ್ಕರ್ಮ ತತ್ರೈವಾಂತರಧೀಯತ ॥

ಅನುವಾದ

ಹೀಗೆ ದೇವನಿರ್ಮಿತ ಆ ಪಾಯಸವನ್ನು ಪಡೆದು ನಿರ್ಧನನಿಗೆ ಧನ ದೊರೆತಂತೆ ಅಪಾರ ಸಂತೋಷ ಗೊಂಡನು. ಬಳಿಕ ಆ ಪರಮ ತೇಜಸ್ವೀ ಅದ್ಭುತ ಪುರುಷನು ತನ್ನ ಕಾರ್ಯ ಮುಗಿಸಿ ಅಂತರ್ಧಾನನಾದನು.॥23-24॥

ಮೂಲಮ್ - 25

ಹರ್ಷರಶ್ಮಿಭಿರುದ್ಯೋತಂ ತಸ್ಯಾಂತಃ ಪುರಮಾಬಭೌ ।
ಶಾರದಸ್ಯಾಭಿರಾಮಸ್ಯ ಚಂದ್ರಸ್ಯೇವ ನಭೋಂಽಶುಭಿಃ ॥

ಅನುವಾದ

ಆಗ ಶರತ್ಕಾಲದ ಪೂರ್ಣಚಂದ್ರನ ಕಾಂತಿಯಿಂದ ಆಕಾಶವು ಪ್ರಕಾಶಮಾನವಾಗಿರುವಂತೆ, ಪಾಯಸ ಪ್ರಾಪ್ತಿಯಿಂದ ಹರ್ಷೋಲ್ಲಾಸದಿಂದ ರಾಜನ ಪತ್ನಿಯರ ಮುಖ ಕಮಲಗಳು ವಿಕಸಿತಗೊಂಡವು.॥25॥

ಮೂಲಮ್ - 26

ಸೋಽಂತಃಪುರಂ ಪ್ರವಿಶ್ಯೈವ ಕೌಸಲ್ಯಾಮಿದಮಬ್ರವೀತ್ ।
ಪಾಯಸಂ ಪ್ರತಿಗೃಹ್ಣೀಷ್ವ ಪುತ್ರೀಯಂ ತ್ವಿದಮಾತ್ಮನಃ ॥

ಅನುವಾದ

ದಶರಥನು ಆ ಪಾಯಸವನ್ನೆತ್ತಿಕೊಂಡು ಅಂತಃಪುರಕ್ಕೆ ಹೋಗಿ ಕೌಸಲ್ಯೆಯ ಬಳಿ ಹೇಳಿದನು - ದೇವಿ! ಈ ಪುತ್ರಪ್ರಾಪ್ತಿಯಾಗಿಸುವಂತಹ ಪಾಯಸವನ್ನು ನೀನು ಸ್ವೀಕರಿಸು.॥26॥

ಮೂಲಮ್ - 27

ಕೌಸಲ್ಯಾಯೈ ನರಪತಿಃ ಪಾಯಸಾರ್ಧಂ ದದೌ ತದಾ ।
ಅರ್ಧಾದರ್ಧಂ ದದೌ ಚಾಪಿ ಸುಮಿತ್ರಾಯೈ ನರಾಧಿಪಃ ॥

ಅನುವಾದ

ಹೀಗೆ ಹೇಳಿ ನೃಪತಿಯು ಆ ಪಾಯಸದ ಅರ್ಧಭಾಗವನ್ನು ಮಹಾರಾಣಿ ಕೌಸಲ್ಯೆಗೆ ನೀಡಿದನು. ಮತ್ತೆ ಉಳಿದ ಅರ್ಧ ಭಾಗದಲ್ಲಿ ಅರ್ಧಭಾಗವನ್ನು ರಾಣಿ ಸುಮಿತ್ರೆಗೆ ನೀಡಿದನು.॥27॥

ಮೂಲಮ್ - 28

ಕೈಕೇಯ್ಯೈ ಚಾವಶಿಷ್ಟಾರ್ಧಂ ದದೌ ಪುತ್ರಾರ್ಥಕಾರಣಾತ್ ।
ಪ್ರದದೌ ಚಾವಶಿಷ್ಟಾರ್ಧಂ ಪಾಯಸಸ್ಯಾಮೃತೋಪಮಮ್ ॥

ಮೂಲಮ್ - 29

ಅನುಚಿಂತ್ಯ ಸುಮಿತ್ರಾಯೈ ಪುನರೇವ ಮಹೀಪತಿಃ ।
ಏವಂ ತಾಸಾಂ ದದೌ ರಾಜಾ ಭಾರ್ಯಾಣಾಂ ಪಾಯಸಂ ಪೃಥಕ್ ॥

ಅನುವಾದ

ಮತ್ತೆ ಉಳಿದ ಕಾಲುಭಾಗವನ್ನು ಪುನಃ ಎರಡು ಭಾಗ ಮಾಡಿ ಒಂದನ್ನು ಕೈಕೇಯಿಗೆ ಕೊಟ್ಟನು. ಅಮೃತೋಪಮಯವಾದ ಪಾಯಸದ ಎಂಟನೆಯ ಒಂದು ಭಾಗವನ್ನು ಕ್ಷಣಕಾಲ ಯೋಚಿಸಿ ಪುನಃ ಸುಮಿತ್ರೆಗೇ ಕೊಟ್ಟನು. ಈ ಪ್ರಕಾರ ರಾಜನು ತನ್ನ ರಾಣಿಯರಿಗೆ ಬೇರೆ ಬೇರೆಯಾಗಿ ಪಾಯಸವನ್ನು ಹಂಚಿದನು.॥28-29॥

ಮೂಲಮ್ - 30

ತಾಶ್ಚೈವಂ ಪಾಯಸಂ ಪ್ರಾಪ್ಯ ನರೇಂದ್ರಸ್ಯೋತ್ತವಸ್ತ್ರಿಯಃ ।
ಸಂಮಾನಂ ಮೇನಿರೇ ಸರ್ವಾಃ ಪ್ರಹರ್ಷೋದಿತ ಚೇತಸಃ ॥

ಅನುವಾದ

ಮಹಾರಾಜನ ಆ ಎಲ್ಲ ಸಾಧ್ವೀ ರಾಣಿಯರು ಪತಿಯ ಕೈಯಿಂದ ಪಾಯಸ ಪಡೆದು ತಮ್ಮನ್ನು ಧನ್ಯರೆಂದು ತಿಳಿದರು. ಅವರ ಮನಸ್ಸಿನಲ್ಲಿ ಅತ್ಯಂತ ಹರ್ಷೋಲ್ಲಾಸ ಆವರಿಸಿತು.॥30॥

ಮೂಲಮ್ - 31

ತತಸ್ತು ತಾಃ ಪ್ರಾಶ್ಯ ತಮುತ್ತಮಸ್ತ್ರಿಯೋ
ಮಹೀಪತೇರುತ್ತಮಪಾಯಸಂ ಪೃಥಕ್ ।
ಹುತಾಶನಾದಿತ್ಯಸಮಾನತೇಜ ಸೋಽ
ಚಿರೇಣ ಗರ್ಭಾನ್ ಪ್ರತಿಪೇದಿರೇ ತದಾ ॥

ಅನುವಾದ

ಆ ಉತ್ತಮ ಪಾಯಸವನ್ನು ಪ್ರತ್ಯೇಕ-ಪ್ರತ್ಯೇಕವಾಗಿ ಪ್ರಾಶನ ಮಾಡಿದರು. ಆ ಮೂವರೂ ರಾಣಿಯರು ಸ್ವಲ್ಪ ಕಾಲದಲ್ಲೇ ಗರ್ಭವತಿಯರಾದರು. ಅವರ ಗರ್ಭಗಳು ಅಗ್ನಿ ಮತ್ತು ಸೂರ್ಯರಂತೆ ತೇಜಸ್ವಿಯಾಗಿದ್ದವು.॥31॥

ಮೂಲಮ್ - 32

ತತಸ್ತು ರಾಜಾ ಪ್ರತಿವೀಕ್ಷ್ಯ ತಾಃ ಸ್ತ್ರಿಯಃ
ಪ್ರರೂಢಗರ್ಭಾಃ ಪ್ರತಿಲಬ್ಧಮಾನಸಃ ।
ಬಭೂವ ಹೃಷ್ಟಸ್ತ್ರಿದಿವೇ ಯಥಾ ಹರಿಃ
ಸುರೇಂದ್ರಸಿದ್ಧರ್ಷಿಗಣಾಭಿಪೂಜಿತಃ ॥

ಅನುವಾದ

ಅನಂತರ ತನ್ನ ರಾಣಿಯರು ಗರ್ಭವತಿಯರಾಗಿರುವುದನ್ನು ಕಂಡು ದಶರಥನಿಗೆ ಬಹಳ ಪ್ರಸನ್ನತೆ ಉಂಟಾ ಯಿತು. ನನ್ನ ಮನೋರಥವು ಸಫಲವಾಯಿತೆಂದು ತಿಳಿದನು. ಸ್ವರ್ಗದಲ್ಲಿ ಇಂದ್ರನಿಂದ, ಸಿದ್ಧರಿಂದ ಹಾಗೂ ಋಷಿಗಳಿಂದ ಪೂಜಿತನಾದ ಶ್ರೀಹರಿಯು ಪ್ರಸನ್ನನಾಗುವಂತೆ, ಭೂತಳದಲ್ಲಿ ದೇವೇಂದ್ರ ಸಿದ್ಧರು ಹಾಗೂ ಮಹರ್ಷಿಗಳಿಂದ ಸಮ್ಮಾನಿತನಾದ ದಶರಥನು ಸಂತುಷ್ಟನಾದನ.॥32॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಹದಿನಾರನೆಯ ಸರ್ಗ ಪೂರ್ಣವಾಯಿತು. ॥16॥