वाचनम्
ಭಾಗಸೂಚನಾ
ಋಷ್ಯಶೃಂಗರು ದಶರಥನಿಂದ ಪುತ್ರಿಕಾಮೇಷ್ಟಿಯನ್ನು ಮಾಡಿಸಿದುದು, ದೇವತೆಗಳ ಪ್ರಾರ್ಥನೆಯಂತೆ ಬ್ರಹ್ಮದೇವರು ರಾವಣನ ವಧೋಪಾಯವನ್ನು ಹುಡುಕಿದುದು, ಮಹಾವಿಷ್ಣು ದೇವತೆಗಳಿಗೆ ಆಶ್ವಾಸನೆ ಇತ್ತುದು
ಮೂಲಮ್ - 1
ಮೇಧಾವೀ ತು ತತೋ ಧ್ಯಾತ್ವಾ ಸಕಿಂಚಿದಿದಮುತ್ತರಮ್ ।
ಲಬ್ಧಸಂಜ್ಞಸ್ತತಸ್ತಂ ತು ವೇದಜ್ಞೋ ನೃಪಮಬ್ರವೀತ್ ॥
ಅನುವಾದ
ಮಹಾತ್ಮಾ ಋಷ್ಯಶೃಂಗರು ದೊಡ್ಡ ಮೇಧಾವಿಗಳು ಮತ್ತು ವೇದಗಳನ್ನು ಬಲ್ಲವರು ಆಗಿದ್ದರು. ಅವರು ಸ್ವಲ್ಪ ಹೊತ್ತು ಧ್ಯಾನಸ್ಥರಾಗಿ ಮುಂದಿನ ತನ್ನ ಕರ್ತವ್ಯವನ್ನು ನಿಶ್ಚಯಿಸಿದರು ಮತ್ತು ಬಹಿರ್ಮುಖರಾಗಿ ರಾಜನಲ್ಲಿ ಇಂತೆಂದರು-॥1॥
ಮೂಲಮ್ - 2
ಇಷ್ಟಿಂ ತೇಽಹಂ ಕರಿಷ್ಯಾಮಿ ಪುತ್ರೀಯಾಂ ಪುತ್ರಕಾರಣಾತ್ ।
ಅಥರ್ವಶಿರಸಿ ಪ್ರೋಕ್ತೈರ್ಮಂತ್ರೈಃ ಸಿದ್ಧಾಂ ವಿಧಾನತಃ ॥
ಅನುವಾದ
ಮಹಾರಾಜನೇ! ನಿನಗೆ ಪುತ್ರರು ಪ್ರಾಪ್ತವಾಗುವಂತಹ ಅಥರ್ವವೇದದ ಮಂತ್ರಗಳಿಂದ ನಾನು ಪುತ್ರೇಷ್ಟಿ ಎಂಬ ಯಜ್ಞ ಮಾಡುವೆನು. ವೇದೋಕ್ತ ಅನುಷ್ಠಾನ ಮಾಡಿದಾಗ ಆ ಯಜ್ಞವು ಖಂಡಿತವಾಗಿ ಸಫಲವಾಗುವುದು.॥2॥
ಮೂಲಮ್ - 3
ತತಃ ಪ್ರಾಕ್ರಮದಿಷ್ಟಿಂ ತಾಂ ಪುತ್ರೀಯಾಂ ಪುತ್ರಕಾರಣಾತ್ ।
ಜುಹಾವಾಗ್ನೌ ಚ ತೇಜಸ್ವೀ ಮಂತ್ರದೃಷ್ಟೇನ ಕರ್ಮಣಾ ॥
ಅನುವಾದ
ಹೀಗೆ ಹೇಳಿ ಆ ತೇಜಸ್ವೀ ಋಷಿಯು ಪುತ್ರಪ್ರಾಪ್ತಿಯ ಉದ್ದೇಶದಿಂದ ಪುತ್ರಕಾಮೇಷ್ಟಿ ಎಂಬ ಯಜ್ಞವನ್ನು ಪ್ರಾರಂಭಿಸಿದರು. ಶ್ರೌತವಿಧಿಗೆ ಅನುಸಾರವಾಗಿ ಅಗ್ನಿಯಲ್ಲಿ ಆಹುತಿಗಳನ್ನು ಅರ್ಪಿಸಿದರು.॥3॥
ಮೂಲಮ್ - 4
ತತೋ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ ।
ಭಾಗಪ್ರತಿಗ್ರಹಾರ್ಥಂ ವೈ ಸಮವೇತಾ ಯಥಾವಿಧಿ ॥
ಅನುವಾದ
ಆಗ ದೇವತೆಗಳು, ಸಿದ್ಧರು, ಗಂಧರ್ವರು, ಮಹರ್ಷಿಗಳು ವಿಧಿಗೆ ಅನುಸಾರ ತಮ್ಮ-ತಮ್ಮ ಭಾಗವನ್ನು ಸ್ವೀಕರಿಸಲು ಆ ಯಜ್ಞದಲ್ಲಿ ಬಂದು ಸೇರಿದರು.॥4॥
ಮೂಲಮ್ - 5
ತಾಃ ಸಮೇತ್ಯ ಯಥಾನ್ಯಾಯಂ ತಸ್ಮಿನ್ ಸದಸಿ ದೇವತಾಃ ।
ಅಬ್ರುವಂಲ್ಲೋಕಕರ್ತಾರಂ ಬ್ರಹ್ಮಾಣಂ ವಚನಂ ತತಃ ॥
ಅನುವಾದ
ಆ ಯಜ್ಞ-ಸಭೆಯಲ್ಲಿ ಕ್ರಮಶಃ ಒಟ್ಟಿಗೆ ಸೇರಿದ (ಬೇರೆಯವರ ದೃಷ್ಟಿಗೆ ಅದಶ್ಯರಾಗಿದ್ದು) ಎಲ್ಲ ದೇವತೆಗಳು ಲೋಕ ಕರ್ತಾ ಬ್ರಹ್ಮ ದೇವರಲ್ಲಿ ಈ ಪ್ರಕಾರ ನುಡಿದರು.॥5॥
ಮೂಲಮ್ - 6
ಭಗವಂಸ್ತ್ವತ್ಪ್ರಸಾದೇನ ರಾವಣೋ ನಾಮ ರಾಕ್ಷಸಃ ।
ಸರ್ವಾನ್ನೋ ಬಾಧತೇ ವೀರ್ಯಾಚ್ಛಾಸಿತುಂ ತಂ ನ ಶಕ್ನುಮಃ ॥
ಅನುವಾದ
ಭಗವಂತರೇ! ರಾವಣನೆಂಬ ರಾಕ್ಷಸನು ತಮ್ಮ ವರ ಪ್ರಸಾದ ಪಡೆದು ತನ್ನ ಬಲದಿಂದ ನಮ್ಮೆಲ್ಲರಿಗೆ ಬಹಳ ಕಷ್ಟ ಕೊಡುತ್ತಿದ್ದಾನೆ. ನಮ್ಮ ಪರಾಕ್ರಮದಿಂದ ಅವನನ್ನು ಶಿಕ್ಷಿಸಲು ನಾವು ಸಮರ್ಥರಾಗಿಲ್ಲ.॥6॥
ಮೂಲಮ್ - 7
ತ್ವಯಾ ತಸ್ಮೈವರೋ ದತ್ತಃ ಪ್ರೀತೇನ ಭಗವಂಸ್ತದಾ ।
ಮಾನಯಂತಶ್ಚ ತಂ ನಿತ್ಯಂ ಸರ್ವಂ ತಸ್ಯ ಕ್ಷಮಾಮಹೇ ॥
ಅನುವಾದ
ಸ್ವಾಮಿ! ತಾವು ಒಲಿದು ಅವನಿಗೆ ವರವನ್ನು ಕೊಟ್ಟಿರುವಿರಿ. ಆಗಿನಿಂದ ನಾವು ಆ ವರವನ್ನು ಗೌರವಿಸುತ್ತಾ ಅವನ ಎಲ್ಲ ಅಪರಾಧಗಳನ್ನು ಸಹಿಸುತ್ತಾ ಬಂದಿದ್ದೇವೆ.॥7॥
ಮೂಲಮ್ - 8
ಉದ್ವೇಜಯತಿ ಲೋಕಾಂಸ್ತ್ರೀನುಚ್ಛ್ರಿತಾನ್ ದ್ವೇಷ್ಟಿದುರ್ಮತಿಃ ।
ಶಕ್ರಂ ತ್ರಿದಶರಾಜಾನಂ ಪ್ರಧರ್ಷಯಿತುಮಿಚ್ಛತಿ ॥
ಅನುವಾದ
ಅವನು ಮೂರು ಲೋಕಗಳನ್ನೂ ಭಯಪಡಿಸುತ್ತಿದ್ದಾನೆ. ಆ ದುಷ್ಟಾತ್ಮನು ಯಾರು ಶ್ರೇಷ್ಠಸ್ಥಿತಿಯಲ್ಲಿದ್ದಾರೋ ಅವರೊಂದಿಗೆ ದ್ವೇಷವಿರಿಸುತ್ತಾನೆ; ದೇವೇಂದ್ರನನ್ನೂ ಸೋಲಿಸಲು ಇಚ್ಛಿಸುತ್ತಿರುವನು.॥8॥
ಮೂಲಮ್ - 9
ಋಷೀನ್ ಯಕ್ಷಾನ್ಸಗಂಧರ್ವಾನ್ ಬ್ರಾಹ್ಮಣಾನಸುರಾಂಸ್ತದಾ ।
ಅತಿಕ್ರಾಮತಿ ದುರ್ಧರ್ಷೋ ವರದಾನೇನ ಮೋಹಿತಃ ॥
ಅನುವಾದ
ಅವನು ಗರ್ವದಿಂದ ಉನ್ಮತ್ತನಾಗಿ ಋಷಿಗಳನ್ನು, ಯಕ್ಷರನ್ನು, ಗಂಧರ್ವರನ್ನು, ಅಸುರರನ್ನು, ಬ್ರಾಹ್ಮಣರನ್ನು ಪೀಡಿಸುತ್ತಾ, ಅವರನ್ನು ಅಪಮಾನ ಮಾಡುತ್ತಿದ್ದಾನೆ.॥9॥
ಮೂಲಮ್ - 10
ನೈನಂ ಸೂರ್ಯಃ ಪ್ರತಪತಿ ಪಾರ್ಶ್ವೇ ವಾತಿ ನ ಮಾರುತಃ ।
ಚಲೋರ್ಮಿಮಾಲೀ ತಂ ದೃಷ್ಟ್ವಾಸಮುದ್ರೋಽಪಿ ನ ಕಂಪತೇ ॥
ಅನುವಾದ
ರಾವಣನು ಪ್ರವಾಸಕ್ಕೆ ಹೊರಟಾಗ ಸೂರ್ಯನು ತಾಪವನ್ನುಂಟುಮಾಡುವುದಿಲ್ಲ. ಗಾಳಿಯು ಅವನ ಬಳಿ ಜೋರಾಗಿ ಬೀಸುವುದಿಲ್ಲ. ಉತ್ತಾಲ ತರಂಗಗಳುಳ್ಳ ಸಮುದ್ರರಾಜನೂ ಅವನನ್ನು ಕಂಡು ಶಾಂತನಾಗುತ್ತಾನೆ.॥10॥
ಮೂಲಮ್ - 11
ತನ್ಮಹನ್ನೋ ಭಯಂ ತಸ್ಮಾದ್ರಾಕ್ಷಸಾದ್ ಘೋರದರ್ಶನಾತ್ ।
ವಧಾರ್ಥಂ ತಸ್ಯ ಭಗವನ್ನುಪಾಯಂ ಕರ್ತುಮರ್ಹಸಿ ॥
ಅನುವಾದ
ಆ ಭಯಂಕರ ರಾಕ್ಷಸನಿಂದ ನಮಗೆ ಭಯ ಉಂಟಾಗಿದೆ. ಆದ್ದರಿಂದ ಭಗವಂತನೇ! ಅವನ ವಧೆಗಾಗಿ ನೀವು ಯಾವುದಾದರೂ ಉಪಾಯವನ್ನು ಅವಶ್ಯವಾಗಿ ಮಾಡಬೇಕು.॥11॥
ಮೂಲಮ್ - 12
ಏವಮುಕ್ತಃ ಸುರೈಃ ಸರ್ವೈಶ್ಚಿಂತಯಿತ್ವಾ ತತೋಽಬ್ರವೀತ್ ।
ಹಂತಾಯಂ ವಿದಿತಸ್ತಸ್ಯ ವಧೋಪಾಯೋ ದುರಾತ್ಮನಃ ॥
ಮೂಲಮ್ - 13
ತೇನ ಗಂಧರ್ವ ಯಕ್ಷಾಣಾಂ ದೇವತಾನಾಂ ಚ ರಕ್ಷಸಾಮ್ ।
ಅವಧ್ಯೋಽಸ್ಮೀತಿ ವಾಗುಕ್ತಾ ತಥೇತ್ಯುಕ್ತಂ ಚ ತನ್ಮಯಾ ॥
ಅನುವಾದ
ಸಮಸ್ತ ದೇವತೆಗಳು ಹೀಗೆ ಹೇಳಿದಾಗ ಬ್ರಹ್ಮದೇವರು ಸ್ವಲ್ಪ ಹೊತ್ತು ಯೋಚಿಸಿ ನುಡಿದರು - ದೇವತೆಗಳಿರಾ! ಆ ದುರಾತ್ಮನ ವಧೆಯ ಉಪಾಯ ನನಗೆ ಹೊಳೆದಿದೆ, ಕೇಳಿರಿ. ಅವನು ವರವನ್ನು ಬೇಡುವಾಗ - ನಾನು ಗಂಧರ್ವ, ಯಕ್ಷರು, ದೇವತೆಗಳು, ರಾಕ್ಷಸರು ಇವರಾರ ಕೈಯಿಂದಲೂ ಸಾಯದಂತೆ ವರವನ್ನು ಕೊಡು ಎಂದು ಬೇಡಿದ್ದನು. ನಾನೂ ‘ತಥಾಸ್ತು’ ಎಂದು ಹೇಳಿ ಅವನ ಪ್ರಾರ್ಥನೆಯನ್ನು ಮನ್ನಿಸಿದ್ದೆ.॥12-13॥
ಮೂಲಮ್ - 14
ನಾಕೀರ್ತಯದವಜ್ಞಾನಾತ್ ತದ್ ರಕ್ಷೋ ಮಾನುಷಾಂಸ್ತದಾ ।
ತಸ್ಮಾತ್ಸಮಾನುಷಾದ್ವಧ್ಯೋ ಮೃತ್ಯುರ್ನಾನ್ಯೋಽಸ್ಯ ವಿದ್ಯತೇ ॥
ಅನುವಾದ
ಮನುಷ್ಯರನ್ನಾದರೋ ಅವನು ತುಚ್ಛರೆಂದು ತಿಳಿದು, ಅವರನ್ನು ಅವಹೇಳನ ಮಾಡುತ್ತಾ, ಅವರಿಂದ ತಾನು ಅವಧ್ಯ ನಾಗುವ ವರವನ್ನು ಕೇಳಲಿಲ್ಲ. ಆದ್ದರಿಂದ ಈಗ ಮನುಷ್ಯನ ಕೈಯಿಂದಲೇ ಅವನ ವಧೆಯಾಗುವುದು. ಮನುಷ್ಯರಲ್ಲದೆ ಬೇರೆ ಯಾರೂ ಅವನನ್ನು ಕೊಲ್ಲಲಾರರು.॥14॥
ಮೂಲಮ್ - 15
ಏತಚ್ಛ್ರುತ್ವಾ ಪ್ರಿಯಂ ವಾಕ್ಯಂ ಬ್ರಹ್ಮಣಾ ಸಮುದಾಹೃತಮ್
ದೇವಾ ಮಹರ್ಷಯಃ ಸರ್ವೇಪ್ರಹೃಷ್ಟಾಸ್ತೇಽಭವಂಸ್ತದಾ ॥
ಅನುವಾದ
ಬ್ರಹ್ಮದೇವರು ಹೇಳಿದ ಈ ಪ್ರಿಯವಾದ ಮಾತನ್ನು ಕೇಳಿ ಆಗ ಸಮಸ್ತದೇವತೆಗಳು, ಮಹರ್ಷಿಗಳು ಸಂತೋಷಗೊಂಡರು.॥15॥
ಮೂಲಮ್ - 16
ಏತಸ್ಮಿನ್ನಂತರೇ ವಿಷ್ಣುರುಪಯಾತೋ ಮಹಾದ್ಯುತಿಃ ।
ಶಂಖಚಕ್ರಗಾದಾಪಾಣಿಃ ಪೀತವಾಸಾ ಜಗತ್ಪತಿಃ ॥
ಮೂಲಮ್ - 17½
ವೈನತೇಯಂ ಸಮಾರುಹ್ಯ ಭಾಸ್ಕರಸ್ತೋಯದಂ ಯಥಾ ।
ತಪ್ತಹಾಟಕಕೇಯೂರೋ ವಂದ್ಯಮಾನಃ ಸುರೋತ್ತಮೈಃ ॥
ಬ್ರಹ್ಮಣಾ ಚ ಸಮಾಗತ್ಯ ತತ್ರ ತಸ್ಥೌ ಸಮಾಹಿತಃ ।
ಅನುವಾದ
ಆಗಲೇ ಮಹಾತೇಜಸ್ವಿಯಾದ, ಶಂಖ-ಚಕ್ರ ಗದಾಪಾಣಿಯಾದ, ಜಗತ್ಪತಿಯಾದ, ಪೀತಾಂಬರಧಾರಿಯಾದ ಶ್ರೀ ಮಹಾವಿಷ್ಣು ಪುಟಕ್ಕೆ ಹಾಕಿದ ಚಿನ್ನದಿಂದ ಮಾಡಿದ ಕೇಯೂರಗಳನ್ನು ಧರಿಸಿ, ಸೂರ್ಯದೇವನು ಮೋಡದ ಮೇಲೇರಿ ಬರುವಂತೆ ಗರುಡವಾಹನನಾಗಿ ಅಲ್ಲಿಗೆ ಆಗಮಿಸಿದನು. ಆಗ ಸಮಸ್ತ ದೇವತೆಗಳು ಅವನನ್ನು ವಂದಿಸಿದರು. ಮಹಾವಿಷ್ಣುವು ಬ್ರಹ್ಮದೇವರೊಡನೆ ಆ ಸಭೆಯಲ್ಲಿ ವಿರಾಜಮಾನನಾದನು.॥16-17½॥
ಮೂಲಮ್ - 18½
ತಮಬ್ರುವನ್ಸುರಾಃ ಸರ್ವೇ ಸಮಭಿಷ್ಟೂಯ ಸಂನತಾಃ ॥
ತ್ವಾಂ ನಿಯೋಕ್ಷ್ಯಾಮಹೇ ವಿಷ್ಣೋ ಲೋಕಾನಾಂ ಹಿತಕಾಮ್ಯಯಾ ।
ಅನುವಾದ
ಆಗ ಸಮಸ್ತ ದೇವತೆಗಳು ವಿನೀತರಾಗಿ ಅವನನ್ನು ಸ್ತುತಿಸುತ್ತಾ ಹೇಳಿದರು-ಸರ್ವವ್ಯಾಪಿ ಪರಮೇಶ್ವರನೇ! ನಾವು ಮೂರು ಲೋಕಗಳ ಹಿತದ ಇಚ್ಛೆಯಿಂದ ನಿನ್ನ ಮೇಲೆ ಒಂದು ಮಹತ್ಕಾರ್ಯದ ಭಾರವನ್ನು ಹೊರಿಸುತ್ತಿದ್ದೇವೆ.॥18½॥
ಮೂಲಮ್ - 19
ರಾಜ್ಞೋ ದಶರಥಸ್ಯ ತ್ವಮಯೋಧ್ಯಾಧಿಪತೇರ್ವಿಭೋ ॥
ಮೂಲಮ್ - 20
ಧರ್ಮಜ್ಞಸ್ಯ ವದಾನ್ಯಸ್ಯ ಮಹರ್ಷಿ ಸಮತೇಜಸಃ ।
ಅಸ್ಯ ಭಾರ್ಯಾಸು ತಿಸೃಷು ಹ್ರೀಶ್ರೀಕೀರ್ತ್ಯುಪಮಾಸು ಚ ॥
ಮೂಲಮ್ - 21½
ವಿಷ್ಣೋ ಪುತ್ರತ್ವಮಾಗಚ್ಛ ಕೃತ್ವಾಽಽತ್ಮಾನಂ ಚತುರ್ವಿಧಮ್ ।
ತತ್ರ ತ್ವಂ ಮಾನುಷೋ ಭೂತ್ವಾ ಪ್ರವೃದ್ಧಂ ಲೋಕ ಕಂಟಕಮ್ ॥
ಅವಧ್ಯಂ ದೈವತೈರ್ವಿಷ್ಣೋ ಸಮರೇ ಜಹಿ ರಾವಣಮ್ ।
ಅನುವಾದ
ಪ್ರಭೋ! ಅಯೋಧ್ಯೆಯ ಅರಸು ದಶರಥನು ಧರ್ಮಜ್ಞನೂ, ಉದಾರನೂ, ಮಹರ್ಷಿಗಳಂತೆ ತೇಜಸ್ವಿಯೂ ಆಗಿದ್ದಾನೆ. ಅವನಿಗೆ ಹ್ರೀ, ಶ್ರೀ, ಕೀರ್ತಿ - ಈ ದೇವಿಯರಂತೆ ಮೂವರು ರಾಣಿಯರಿದ್ದಾರೆ. ಮಹಾವಿಷ್ಣುವೇ! ನೀನು ನಾಲ್ಕು ಸ್ವರೂಪನಾಗಿ ರಾಜನ ಮೂವರು ರಾಣಿಯರ ಗರ್ಭದಿಂದ ಪುತ್ರರೂಪದಿಂದ ಅವತರಿಸು. ಹೀಗೆ ಮನುಷ್ಯ ರೂಪದಲ್ಲಿ ನೀನು ಪ್ರಕಟನಾಗಿ, ದೇವತೆಗಳಿಗೆ ಅವಧ್ಯನಾದ, ಜಗತ್ತಿಗೆ ಪ್ರಬಲ ಕಂಟಕಪ್ರಾಯನಾದ ರಾವಣನನ್ನು ಯುದ್ಧದಲ್ಲಿ ಕೊಂದುಬಿಡು.॥19-21½॥
ಮೂಲಮ್ - 22½
ಸ ಹಿ ದೇವಾನ್ಸಗಂಧರ್ವಾನ್ಸಿದ್ಧಾಂಶ್ಚ ಋಷಿಸತ್ತಮಾನ್ ॥
ರಾಕ್ಷಸೋ ರಾವಣೋ ಮೂರ್ಖೋ ವೀರ್ಯೋದ್ರೇಕೇಣ ಬಾಧತೇ ।
ಅನುವಾದ
ಆ ಮೂರ್ಖ ರಾಕ್ಷಸ ರಾವಣನು ವರಬಲ ಪರಾಕ್ರಮದಿಂದ ದೇವತೆಗಳು ಗಂಧರ್ವ, ಸಿದ್ಧ, ಶ್ರೇಷ್ಠ ಮಹರ್ಷಿ ಇವರಿಗೆ ಬಹಳ ಕಷ್ಟಕೊಡುತ್ತಿದ್ದಾನೆ.॥22½॥
ಮೂಲಮ್ - 23½
ಋಷಯಶ್ಚ ತತಸ್ತೇನ ಗಂಧರ್ವಾಪ್ಸರಸಸ್ತಥಾ ॥
ಕ್ರೀಡಂತೋ ನಂದನವನೇ ರೌದ್ರೇಣ ವಿನಿಪಾತಿತಾಃ ।
ಅನುವಾದ
ಆ ರೌದ್ರ ನಿಶಾಚರನು ಋಷಿಗಳನ್ನು ಹಾಗೂ ನಂದನವನದಲ್ಲಿ ಕ್ರೀಡಿಸುವ ಗಂಧರ್ವ, ಅಪ್ಸರೆಯರನ್ನು ಸ್ವರ್ಗದಿಂದ ಭೂಮಿಗೆ ಕೆಡಹಿ ಬಿಟ್ಟಿರುವನು.॥23½॥
ಮೂಲಮ್ - 24½
ವಧಾರ್ಥಂ ವಯಮಾಯಾತಾಸ್ತಸ್ಯ ವೈ ಮುನಿಭಿಃ ಸಹ ॥
ಸಿದ್ಧ ಗಂಧರ್ವಯಕ್ಷಾಶ್ಚ ತತಸ್ತ್ವಾಂ ಶರಣಂ ಗತಾಃ ।
ಅನುವಾದ
ಅದಕ್ಕಾಗಿ ಮುನಿಗಳ ಸಹಿತ ನಾವೆಲ್ಲರೂ, ಸಿದ್ಧರೂ, ಗಂಧರ್ವರೂ, ಯಕ್ಷರೂ, ದೇವತೆಗಳೂ ಅವನ ವಧೆಗಾಗಿ ನಿನಗೆ ಶರಣು ಬಂದಿರುವೆವು.॥24½॥
ಮೂಲಮ್ - 25½
ತ್ವಂ ಗತಿಃ ಪರಮಾ ದೇವ ಸರ್ವೇಷಾಂ ನಃ ಪರಂತಪ ॥
ವಧಾಯ ದೇವಶತ್ರೂಣಾಂ ನೃಣಾಂ ಲೋಕೇ ಮನಃ ಕುರು ।
ಅನುವಾದ
ದೇವದೇವನಾದ ಪರಂತಪನೇ! ನೀನೇ ನಮ್ಮೆಲ್ಲರಿಗೆ ಪರಮಗತಿಯಾಗಿರುವೆ. ಆದ್ದರಿಂದ ಈ ದೇವದ್ರೋಹಿಗಳನ್ನು ವಧಿಸಲು ನೀನು ಮನುಷ್ಯಲೋಕದಲ್ಲಿ ಅವತರಿಸಲು ನಿಶ್ಚಯ ಮಾಡು.॥25½॥
ಮೂಲಮ್ - 26
ಏವಂ ಸ್ತುತಸ್ತು ದೇವೇಶೋ ವಿಷ್ಣುಸ್ತ್ರಿದಶಪುಂಗವಃ ॥
ಮೂಲಮ್ - 27
ಪಿತಾಮಹಪುರೋಗಾಂಸ್ತಾನ್ಸರ್ವಲೋಕನಮಸ್ಕೃತಃ ।
ಅಬ್ರವೀತ್ತ್ರಿದಶಾನ್ ಸರ್ವಾನ್ ಸಮೇತಾನ್ ಧರ್ಮ ಸಂಹಿತಾನ್ ॥
ಅನುವಾದ
ದೇವತೆಗಳು ಹೀಗೆ ಸ್ತುತಿಸಿದಾಗ ಸರ್ವಲೋಕವಂದಿತ ದೇವೇಶ ಭಗವಾನ್ ವಿಷ್ಣುವು ಅಲ್ಲಿ ನೆರೆದ ಸಮಸ್ತ ಬ್ರಹ್ಮಾದಿ ಧರ್ಮಪರಾಯಣ ದೇವತೆಗಳಲ್ಲಿ ಇಂತೆಂದನು.॥26-27॥
ಮೂಲಮ್ - 28
ಭಯಂ ತ್ಯಜತ ಭದ್ರಂ ವೋ ಹಿತಾರ್ಥಂ ಯುಧಿ ರಾವಣಮ್ ।
ಸುಪುತ್ರಪೌತ್ರಂ ಸಾಮಾತ್ಯಂ ಸಮಂತ್ರಿಜ್ಞಾತಿಬಾಂಧವಮ್ ॥
ಮೂಲಮ್ - 29½
ಹತ್ವಾ ಕ್ರೂರಂ ದುರಾಧರ್ಷಂ ದೇವರ್ಷೀಣಾಂ ಭಯಾವಹಮ್ ।
ದಶ ವರ್ಷ ಸಹಸ್ರಾಣಿ ದಶ ವರ್ಷಶತಾನಿ ಚ ॥
ವತ್ಸ್ಯಾಮಿ ಮಾನುಷೇ ಲೋಕೇ ಪಾಲಯನ್ ಪೃಥಿವೀಮಿಮಾಮ್ ।
ಅನುವಾದ
ದೇವತೆಗಳಿರಾ! ನಿಮಗೆ ಮಂಗಳವಾಗಲಿ. ನೀವು ಭಯವನ್ನು ಬಿಡಿರಿ. ನಾನು ನಿಮ್ಮ ಹಿತಕ್ಕಾಗಿ ರಾವಣನನ್ನು ಮಕ್ಕಳು, ಮೊಮ್ಮಕ್ಕಳು, ಅಮಾತ್ಯ, ಮಂತ್ರಿ, ಬಂಧು ಬಾಂಧವರ ಸಹಿತ ಯುದ್ಧದಲ್ಲಿ ಕೊಂದುಹಾಕುವೆನು. ದೇವತೆಗಳಿಗೆ ಹಾಗೂ ಋಷಿಗಳಿಗೆ ಭಯವನ್ನುಂಟುಮಾಡುವ ಆ ಕ್ರೂರ, ದುರ್ಧರ್ಷ ರಾಕ್ಷಸನನ್ನು ನಾಶ ಮಾಡಿ ನಾನು ಹನ್ನೊಂದು ಸಾವಿರ ವರ್ಷಗಳವರೆಗೆ ಈ ಪೃಥ್ವಿಯನ್ನು ಪಾಲಿಸುತ್ತಾ ಮನುಷ್ಯ ಲೋಕದಲ್ಲಿ ವಾಸಮಾಡುವೆನು.॥28-29½॥
ಮೂಲಮ್ - 30½
ಏವಂ ದತ್ತ್ವಾ ವರಂ ದೇವೋ ದೇವಾನಾಂ ವಿಷ್ಣುರಾತ್ಮವಾನ್ ॥
ಮಾನುಷೇ ಚಿಂತಯಾಮಾಸ ಜನ್ಮಭೂಮಿಮಥಾತ್ಮನಃ ।
ಅನುವಾದ
ದೇವತೆಗಳಿಗೆ ಹೀಗೆ ವರವನ್ನು ಕೊಟ್ಟು ಭಗವಾನ್ ವಿಷ್ಣುವು ಮನುಷ್ಯ ಲೋಕದಲ್ಲಿ ಮೊದಲಿಗೆ ತನ್ನ ಜನ್ಮಭೂಮಿಯ ಕುರಿತು ವಿಚಾರ ಮಾಡಿದನು.॥30½॥
ಮೂಲಮ್ - 31½
ತತಃ ಪದ್ಮಪಲಾಶಾಕ್ಷಃ ಕೃತ್ವಾಽಽತ್ಮಾನಂ ಚತುರ್ವಿಧಮ್ ॥
ಪಿತರಂ ರೋಚಯಾಮಾಸ ತದಾ ದಶರಥಂ ನೃಪಮ್ ।
ಅನುವಾದ
ಅನಂತರ ಕಮಲನಯನ ಶ್ರೀಹರಿಯು ತನ್ನನ್ನು ನಾಲ್ಕು ಸ್ವರೂಪಗಳಲ್ಲಿ ಪ್ರಕಟಪಡಿಸಿಕೊಳ್ಳಲು ದಶರಥನನ್ನು ಪಿತನನ್ನಾಗಿಸಲು ನಿಶ್ಚಯಿಸಿದನು.॥31½॥
ಮೂಲಮ್ - 32
ತತೋ ದೇವರ್ಷಿಗಂಧರ್ವಾಃ ಸರುದ್ರಾಃ ಸಾಪ್ಸರೋಗಣಾಃ ॥
ಸ್ತುತಿಭಿರ್ದಿವ್ಯರೂಪಾಭಿಸ್ತುಷ್ಟುವುರ್ಮಧುಸೂದನಮ್ ।
ಅನುವಾದ
ಆಗ ದೇವತೆಗಳು, ಋಷಿಗಳು, ಗಂಧರ್ವರು, ರುದ್ರನು ಹಾಗೂ ಅಪ್ಸರೆಯರು ದಿವ್ಯ ಸ್ತೋತ್ರಗಳಿಂದ ಭಗವಾನ್ ಮಧುಸೂದನನನ್ನು ಸ್ತುತಿಸಿದರು.॥32॥
ಮೂಲಮ್ - 33
ತಮುದ್ಧತಂ ರಾವಣಮುಗ್ರತೇಜಸಂ
ಪ್ರವೃದ್ಧದರ್ಪಂ ತ್ರಿದಶೇಶ್ವರದ್ವಿಷಮ್ ।
ವಿರಾವಣಂ ಸಾಧುತಪಸ್ವಿಕಂಟಕಂ
ತಪಸ್ವಿನಾಮುದ್ಧರ ತಂಭಯಾವಹಮ್ ॥
ಅನುವಾದ
ಅವರು ಸ್ತುತಿಸುತ್ತಾರೆ - ಪ್ರಭೋ! ರಾವಣನು ಬಹಳ ಉದ್ಧಂಡನಾಗಿದ್ದಾನೆ. ಅವನ ತೇಜ ಅತ್ಯಂತ ಉಗ್ರವಾಗಿದೆ ಮತ್ತು ಮಹಾಗರ್ವಿಷ್ಠನಾಗಿದ್ದಾನೆ. ಅವನು ದೇವೇಂದ್ರನನ್ನು ಸದಾ ದ್ವೇಷಿಸುತ್ತಾನೆ. ಮೂರೂ ಲೋಕಗಳನ್ನು ಅಳುವಂತೆ ಮಾಡಿದ್ದಾನೆ. ಸಾಧುಗಳಿಗೆ, ತಪಸ್ವಿಗಳಿಗೆ ಅವನು ದೊಡ್ಡ ಕಂಟಕಪ್ರಾಯನಾಗಿದ್ದಾನೆ. ಆದ್ದರಿಂದ ತಪಸ್ವಿಗಳನ್ನು ಭಯ ಪಡಿಸುವ ಆ ಭಯಾನಕ ರಾಕ್ಷಸನ ಬೇರನ್ನೇ ಕಿತ್ತುಬಿಡು.॥33॥
ಮೂಲಮ್ - 34
ತಮೇವ ಹತ್ವಾ ಸಬಲಂ ಸಬಾಂಧವಂ
ವಿರಾವಣಂ ರಾವಣಮುಗ್ರಪೌರುಷಮ್ ।
ಸ್ವರ್ಲೋಕಮಾಗಚ್ಛ ಗತಜ್ವರಶ್ಚಿರಂ
ಸುರೇಂದ್ರ ಗುಪ್ತಂ ಗತದೋಷಕಲ್ಮಷಮ್ ॥
ಅನುವಾದ
ಉಪೇಂದ್ರನೇ! ಇಡೀ ಜಗತ್ತನ್ನು ಪೀಡಿಸುತ್ತಿರುವ ಆ ಉಗ್ರ ಪರಾಕ್ರಮಿ ರಾವಣನನ್ನು ಸೈನ್ಯ, ಬಂಧು-ಬಾಂಧವರ ಸಹಿತ ನಾಶಗೊಳಿಸಿ, ದೇವತೆಗಳ ಬಾಧೆಯನ್ನು ಪೂರ್ಣವಾಗಿ ಹೋಗಲಾಡಿಸಿ, ದೇವೇಂದ್ರನಿಂದ ಸುರಕ್ಷಿತವಾದ, ರಾಗ-ದ್ವೇಷಾದಿ ದೋಷಗಳಿಂದ ವಿಮುಕ್ತವಾದ ವೈಕುಂಠಲೋಕಕ್ಕೆ ಆಗಮಿಸು.॥34॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಹದಿನೈದನೆಯ ಸರ್ಗ ಪೂರ್ಣವಾಯಿತು. ॥15॥