०१४ अश्वमेधयजनम्

वाचनम्
ಭಾಗಸೂಚನಾ

ದಶರಥ ಮಹಾರಾಜನು ಅಶ್ವಮೇಧಯಜ್ಞವನ್ನು ಸಾಂಗೋಪಾಂಗವಾಗಿ ನೆರವೇರಿಸಿದುದು

ಮೂಲಮ್ - 1

ಅಥ ಸಂವತ್ಸರೇ ಪೂರ್ಣೇ ತಸ್ಮಿನ್ ಪ್ರಾಪ್ತೇ ತುರಂಗಮೇ ।
ಸರಯ್ವಾಶ್ಚೋತ್ತರೇ ತೀರೇ ರಾಜ್ಞೋಽಯಜ್ಞೋಭ್ಯವರ್ತತ ॥

ಅನುವಾದ

ಅಶ್ವವಿಮೋಚನೆಯಾದ ಬಳಿಕ ಒಂದು ವರ್ಷ ಪೂರ್ತಿ ಅದು ತಿರುಗಾಡಿ ಹಿಂತಿರುಗಿತು. ಮತ್ತೆ ಸರಯೂ ನದಿಯ ಉತ್ತರ ತೀರದಲ್ಲಿ ರಾಜನು ಯಜ್ಞವನ್ನು ಪ್ರಾರಂಭಿಸಿದನು.॥1॥

ಮೂಲಮ್ - 2

ಋಷ್ಯಶೃಂಗಂ ಪುರಸ್ಕೃತ್ಯಕರ್ಮ ಚಕ್ರುರ್ದ್ವಿಜರ್ಷಭಾಃ ।
ಅಶ್ವಮೇಧೇ ಮಹಾಯಜ್ಞೇ ರಾಜ್ಞೋಽಸ್ಯ ಸುಮಹಾತ್ಮನಃ ॥

ಅನುವಾದ

ಮಹಾತ್ಮನಾದ ದಶರಥನ ಅಶ್ವಮೇಧ ಎಂಬ ಮಹಾ ಯಜ್ಞದಲ್ಲಿ ಋಷ್ಯಶೃಂಗರನ್ನು ಮುಂದಿರಿಸಿಕೊಂಡು ಇತರ ಶ್ರೇಷ್ಠ ಬ್ರಾಹ್ಮಣರು ಯಜ್ಞಸಂಬಂಧೀ ಕಾರ್ಯ ಮಾಡತೊಡಗಿದರು.॥2॥

ಮೂಲಮ್ - 3

ಕರ್ಮ ಕುರ್ವಂತಿ ವಿಧಿವದ್ ಯಾಜಕಾ ವೇದಪಾರಗಾಃ ।
ಯಥಾವಿಧಿ ಯಥಾನ್ಯಾಯಂ ಪರಿಕ್ರಾಮಂತಿ ಶಾಸ್ತ್ರತಃ ॥

ಅನುವಾದ

ಯಜ್ಞಮಾಡುವ ಎಲ್ಲ ಬ್ರಾಹ್ಮಣರು ವೇದಪಾರಂಗತ ವಿದ್ವಾಂಸರಾಗಿದ್ದು, ನ್ಯಾಯ ಮತ್ತು ವಿಧಿಗನುಸಾರ ಎಲ್ಲ ಕರ್ಮಗಳನ್ನು ಉಚಿತ ರೀತಿಯಿಂದ ನೆರವೇರಿಸುತ್ತಿದ್ದರು. ಶಾಸ್ತ್ರಕ್ಕನುಸಾರ ಯಾವ ಕ್ರಮದಿಂದ, ಯಾವ ಸಮಯದಲ್ಲಿ ಯಾವ ಕ್ರಿಯೆ ಮಾಡಬೇಕೆಂದು ತಿಳಿದು ಪ್ರತಿಯೊಂದು ಕಾರ್ಯದಲ್ಲಿ ಪ್ರವೃತ್ತರಾಗಿದ್ದರು.॥3॥

ಮೂಲಮ್ - 4

ಪ್ರವರ್ಗ್ಯಂ ಶಾಸ್ತ್ರತಃ ಕೃತ್ವಾ ತಥೈವೋಪಸದಂ ದ್ವಿಜಾಃ ।
ಚಕ್ರುಶ್ಚ ವಿಧಿವತ್ಸರ್ವಮಧಿಕಂ ಕರ್ಮ ಶಾಸ್ತ್ರತಃ ॥

ಅನುವಾದ

ಬ್ರಾಹ್ಮಣರು ಪ್ರವರ್ಗ್ಯ (ಅಶ್ವಮೇಧದ ಅಂಗಭೂತ ಒಂದು ಕರ್ಮ)ವನ್ನು ವಿಧಿ, ಮೀಮಾಂಸಾ ಮತ್ತು ಕಲ್ಪಸೂತ್ರಕ್ಕನುಸಾರ ನಡೆಸಿ, ಉಪಸದ ಎಂಬ ಇಷ್ಟಿ ವಿಶೇಷವನ್ನು ಶಾಸ್ತ್ರಕ್ಕನುಸಾರ ನೆರವೇರಿಸಿದರು. ಬಳಿಕ ಶಾಸ್ತ್ರದ ಉಪದೇಶದಂತೆ ಅತಿದೇಶತಃ ಮೊದಲಾದ ಎಲ್ಲವನ್ನೂ ವಿಧಿವತ್ತಾಗಿ ನಡೆಸಿದರು.॥4॥

ಮೂಲಮ್ - 5

ಅಭಿಪೂಜ್ಯ ತದಾ ಹೃಷ್ಟಾಃ ಸರ್ವೇ ಚಕ್ರುರ್ಯಥಾವಿಧಿ ।
ಪ್ರಾತಃಸವನಪೂರ್ವಾಣಿ ಕರ್ಮಾಣಿ ಮುನಿಪುಂಗವಾಃ ॥

ಅನುವಾದ

ಅನಂತರ ಆಯಾಯ ಕರ್ಮಗಳ ಅಂಗಭೂತ ದೇವತೆಗಳನ್ನು ಪೂಜಿಸಿ ಹರ್ಷಿತರಾದ ಆ ಮುನಿಗಳೆಲ್ಲ ವಿಧಿವತ್ತಾಗಿ ಪ್ರಾತಃ ಸವನಾದಿ (ಪ್ರಾತಃ ಸವನ, ಮಾಧ್ಯಂದಿನ ಸವನ, ತೃತೀಯ ಸವನ) ಕರ್ಮಗಳನ್ನು ಮಾಡಿದರು.॥5॥

ಮೂಲಮ್ - 6

ಐಂದ್ರಶ್ಚ ವಿಧಿವದ್ ದತ್ತೋ ರಾಜಾ ಚಾಭಿಷುತೋಽನಘಃ ।
ಮಧ್ಯಂದಿನಂ ಚ ಸವನಂ ಪ್ರಾವರ್ತತ ಯಥಾಕ್ರಮಮ್ ॥

ಅನುವಾದ

ಇಂದ್ರ ದೇವತೆಗೆ ವಿಧಿಪೂರ್ವಕ ಹವಿಸ್ಸನ್ನು ಅರ್ಪಿಸಲಾಯಿತು. ಮತ್ತೆ ಪಾಪಹರನಾದ ಸೋಮರಾಜನನ್ನು ಸ್ತುತಿಸಿ ಸೋಮಲತೆಯನ್ನು ಅರೆದು ಸೋಮರಸ ತೆಗೆಯಲಾಯಿತು. ಮತ್ತೆ ಮಾಧ್ಯಂದಿನ ಸವನದ ಕಾರ್ಯ ಪ್ರಾರಂಭವಾಯಿತು.॥6॥

ಮೂಲಮ್ - 7

ತೃತೀಯಸವನಂ ಚೈವ ರಾಜ್ಞೋಽಸ್ಯ ಸುಮಹಾತ್ಮನಃ ।
ಚಕ್ರುಸ್ತೇ ಶಾಸ್ತ್ರತೋ ದೃಷ್ಟ್ವಾ ಯಥಾ ಬ್ರಾಹ್ಮಣ ಪುಂಗವಾಃ ॥

ಅನುವಾದ

ಅನಂತರ ಆ ಶ್ರೇಷ್ಠ ಬ್ರಾಹ್ಮಣರು ಶಾಸ್ತ್ರಕ್ಕನುಸಾರ ಮಹಾತ್ಮನಾದ ದಶರಥ ರಾಜನ ತೃತೀಯ ಸವನ ಕರ್ಮವನ್ನು ವಿಧಿವತ್ತಾಗಿ ನೆರವೇರಿಸಿದರು.॥7॥

ಮೂಲಮ್ - 8

ಅಹ್ವಯಾಞ್ಚಕ್ರಿರೇ ತತ್ರ ಶಕ್ರಾದೀನ್ ವಿಬುಧೋತ್ತಮಾನ್ ।
ಋಷ್ಯಶೃಂಗಾದಯೋ ಮಂತ್ರೈಃ ಶಿಕ್ಷಾಕ್ಷರಸಮನ್ವಿತೈಃ ॥

ಅನುವಾದ

ಋಷ್ಯಶಂಗಾದಿ ಮಹರ್ಷಿಗಳು ಶಿಕ್ಷಾಕ್ಷರ ಸಮನ್ವಿತವಾದ ಸ್ವರ-ವರ್ಣಗಳಿಂದ ಸಂಪನ್ನ ಮಂತ್ರಗಳಿಂದ ಇಂದ್ರಾದಿ ಶ್ರೇಷ್ಠ ದೇವತೆಗಳನನ್ನು ಆವಾಹಿಸಿದರು.॥8॥

ಮೂಲಮ್ - 9

ಗತಿಭಿರ್ಮಧುರೈಃ ಸ್ನಿಗ್ಧೈರ್ಮಂತ್ರಾಹ್ವಾನೈರ್ಯಥಾರ್ಹತಃ ।
ಹೋತಾರೋ ದದುರಾವಾಹ್ಯ ಹವಿರ್ಭಾಗಾನ್ ದಿವೌಕಸಾಮ್ ॥

ಅನುವಾದ

ಮಧುರ ಮತ್ತು ಮನೋಹರ ಸಾಮಗಾನ ಲಯದಲ್ಲಿ ಹಾಡಿದ ಆಹ್ವಾನ ಮಂತ್ರಗಳಿಂದ ದೇವತೆಗಳನ್ನು ಆಹ್ವಾನಿಸಿ ಹೋತೃವು ಅವರಿಗೆ ಯೋಗ್ಯ ಹವಿರ್ಭಾಗವನ್ನು ಸಮರ್ಪಿಸಿದರು.॥9॥

ಮೂಲಮ್ - 10

ನ ಚಾಹುತಮಭೂತ್ತತ್ರ ಸ್ಖಲಿತಂ ವಾ ನ ಕಿಂಚನ ।
ದೃಶ್ಯತೇ ಬ್ರಹ್ಮವತ್ಸರ್ವಂ ಕ್ಷೇಮಯುಕ್ತಂ ಹಿ ಚಕ್ರಿರೇ ॥

ಅನುವಾದ

ಯಜ್ಞದಲ್ಲಿ ಯಾವುದೇ ವಿಪರೀತ ಆಹುತಿ ಕೊಡಲಾಗಲಿಲ್ಲ. ಎಲ್ಲಿಯೂ ಯಾವುದೇ ತಪ್ಪು ನಡೆಯಲಿಲ್ಲ. ಏಕೆಂದರೆ, ಎಲ್ಲ ಕರ್ಮಗಳು ಮಂತ್ರೋಚ್ಚಾರಪೂರ್ವಕ ನಡೆಯುತ್ತಿದ್ದು ಎಲ್ಲವೂ ಬ್ರಹ್ಮಮಯವಾಗಿ ಕಾಣುತ್ತಿತ್ತು. ಮಹರ್ಷಿಗಳು ಎಲ್ಲ ಕರ್ಮಗಳನ್ನು ಕ್ಷೇಮ ಯುಕ್ತ ಹಾಗೂ ನಿರ್ವಿಘ್ನವಾಗಿ ಪೂರ್ಣಮಾಡಿದರು.॥10॥

ಮೂಲಮ್ - 11

ನ ತೇಷ್ವಹಸ್ಸು ಶ್ರಾಂತೋ ವಾ ಕ್ಷುಧಿತೋ ವಾ ನ ದೃಶ್ಯತೇ ।
ನಾವಿದ್ವಾನ್ ಬ್ರಾಹ್ಮಣಃ ಕಶ್ಚಿನ್ನಾಶತಾನುಚರಸ್ತಥಾ ॥

ಅನುವಾದ

ಆ ಯಜ್ಞದಲ್ಲಿ ಯಾವ ಋತ್ವಿಜನು ಬಳಲಿದಂತೆ, ಹಸಿದವನಂತೆ ಕಂಡುಬರಲಿಲ್ಲ. ಅದರಲ್ಲಿ ವಿದ್ವಾಂಸನಲ್ಲದ ನೂರಕ್ಕೂ ಕಡಿಮೆ ಶಿಷ್ಯರುಳ್ಳ ಬ್ರಾಹ್ಮಣರು ಯಾರೂ ಇರಲಿಲ್ಲ.॥11॥

ಮೂಲಮ್ - 12

ಬ್ರಾಹ್ಮಣಾ ಭುಂಜತೇ ನಿತ್ಯಂ ನಾಥವಂತಶ್ಚ ಭುಂಜತೇ ।
ತಾಪಸಾ ಭುಂಜತೇ ಚಾಪಿಶ್ರಮಣಾಶ್ಚೈವ ಭುಂಜತೇ ॥

ಅನುವಾದ

ಆ ಯಜ್ಞದಲ್ಲಿ ಪ್ರತಿದಿನ ಬ್ರಾಹ್ಮಣ ಭೋಜನ ನಡೆಯುತ್ತಿದ್ದು, ಕ್ಷತ್ರಿಯ, ವೈಶ್ಯರು ಭೋಜನ ಮಾಡುತ್ತಿದ್ದರು, ಹಾಗೂ ಶೂದ್ರರಿಗೂ ಉತ್ತಮ ಭೋಜನ ನಡೆಯುತ್ತಿತ್ತು. ತಪಸ್ವಿಗಳೂ, ಸಂನ್ಯಾಸಿಗಳೂ ಭೋಜನ ಮಾಡುತ್ತಿದ್ದರು.॥12॥

ಮೂಲಮ್ - 13

ವೃದ್ಧಾಶ್ಚ ವ್ಯಾಧಿತಾಶ್ಚೈವ ಸ್ತ್ರೀಬಾಲಾಶ್ವತ್ತಥೈವ ಚ ।
ಅನಿಶಂ ಭುಂಜಮಾನಾನಾಂ ನ ತೃಪ್ತಿರುಪಲಭ್ಯತೇ ॥

ಅನುವಾದ

ವೃದ್ಧರು, ರೋಗಿಗಳು, ಸ್ತ್ರೀಯರು, ಮಕ್ಕಳು ಇವರೆಲ್ಲ ಯಥೇಚ್ಚವಾಗಿ ಊಟ ಮಾಡುತ್ತಿದ್ದರು. ಯಾವಾಗಲೂ ತಿನ್ನುತ್ತಾ ಇದ್ದರೂ, ಯಾರ ಮನಸ್ಸು ಬೇಸರಿಸದಂತಹ ಆ ಭೋಜನ ರುಚಿಕರವಾಗಿತ್ತು.॥13॥

ಮೂಲಮ್ - 14

ದೀಯತಾಂ ದೀಯತಾಮನ್ನಂ ವಾಸಾಂಸಿ ವಿವಿಧಾನಿ ಚ ।
ಇತಿ ಸಂಚೋದಿತಾಸ್ತತ್ರ ತಥಾ ಚಕ್ರುರನೇಕಶಃ ॥

ಅನುವಾದ

ಅಧಿಕಾರಿಗಳ ಅಪ್ಪಣೆ ಪಡೆದು ಕಾರ್ಯಕರ್ತರು ಎಲ್ಲರಿಗೂ ಪದೇ ಪದೇ ಊಟ ಮಾಡಿ ನಾನಾ ಪ್ರಕಾರದ ವಸ್ತ್ರ ಸ್ವೀಕರಿಸಿ ಎಂದು ವಿನಂತಿಸುತಿದ್ದರು.॥14॥

ಮೂಲಮ್ - 15

ಅನ್ನಕೂಟಾಶ್ಚ ದೃಶ್ಯಂತೇ ಬಹವಃ ಪರ್ವತೋಪಮಾಃ ।
ದಿವಸೇ ದಿವಸೇ ತತ್ರ ಸಿದ್ಧಸ್ಯ ವಿಧಿವತ್ತದಾ ॥

ಅನುವಾದ

ಅಲ್ಲಿ ಪ್ರತಿದಿನ ವಿಧಿವತ್ತಾಗಿ ಮಾಡಿದ ಅಡಿಗೆಗಳು ಪರ್ವತದಂತೆ ರಾಶಿ ರಾಶಿಯಾಗಿ ಕಾಣುತ್ತಿದ್ದವು.॥15॥

ಮೂಲಮ್ - 16

ನಾನಾ ದೇಶಾದನುಪ್ರಾಪ್ತಾಃ ಪುರುಷಾಃ ಸ್ತ್ರೀಗಣಾಸ್ತಥಾ ।
ಅನ್ನಪಾನೈಃ ಸುವಿಹಿತಾಸ್ತಸ್ಮಿನ್ಯಜ್ಞೇ ಮಹಾತ್ಮನಃ ॥

ಅನುವಾದ

ಮಹಾತ್ಮನಾದ ದಶರಥನ ಆ ಯಜ್ಞದಲ್ಲಿ ನಾನಾ ದೇಶಗಳಿಂದ ಬಂದಿರುವ ಸ್ತ್ರೀ ಪುರುಷರೆಲ್ಲರೂ ಅನ್ನ ಪಾನಾದಿಗಳಿಂದ ತೃಪ್ತರಾಗುತ್ತಿದ್ದರು.॥1.॥

ಮೂಲಮ್ - 17

ಅನ್ನಂ ಹಿ ವಿಧಿವತ್ ಸ್ವಾದು ಪ್ರಶಂಸಂತಿ ದ್ವಿಜರ್ಷಭಾಃ ।
ಅಹೋ ತೃಪ್ತಾಃ ಸ್ಮ ಭದ್ರಂ ತ ಇತಿ ಶುಶ್ರಾವ ರಾಘವಃ ॥

ಅನುವಾದ

‘ಭೋಜನವು ವಿಧಿವತ್ತಾಗಿ ಮಾಡಲಾಗಿದ್ದು, ಬಹಳ ರುಚಿಕರವಾಗಿದೆ’ ಎಂದು ಬ್ರಾಹ್ಮಣರು ಹೇಳುತ್ತಾ ಊಟ ಮಾಡುತ್ತಿದ್ದರು. ಊಟ ಮಾಡಿದವರೆಲ್ಲರ ಬಾಯಿಂದ ‘ನಮಗೆ ತುಂಬಾ ತೃಪ್ತಿಯಾಯಿತು’ ಎಂಬ ಉದ್ಗಾರ ಕೇಳಿಬರುತ್ತಿತ್ತು. ತಮಗೆ ಕಲ್ಯಾಣವಾಗಲಿ ಎಂದು ಹರಸುತ್ತಿದ್ದರು.॥1.॥

ಮೂಲಮ್ - 18

ಸ್ವಲಂಕೃತಾಶ್ಚ ಪುರುಷಾ ಬ್ರಾಹ್ಮಣಾನ್ ಪರ್ಯವೇಷಯನ್ ।
ಉಪಾಸಂತೇ ಚ ತಾನನ್ಯೇ ಸುಮೃಷ್ಟಮಣಿಕುಂಡಲಾಃ ॥

ಅನುವಾದ

ಬ್ರಾಹ್ಮಣರಿಗೆ ಬಡಿಸುತ್ತಿದ್ದವರು ವಸ್ತ್ರಾಭೂಷಣಗಳಿಂದ ಅಲಂಕೃತರಾಗಿದ್ದರು. ಅವರಿಗೆ ಸಹಾಯಕರಾದವರೂ ಕೂಡ ಸುಂದರ ಮಣಿಮಯ ಕುಂಡಲಗಳನ್ನು ಧರಿಸಿದ್ದರು.॥18॥

ಮೂಲಮ್ - 19

ಕರ್ಮಾಂತರೇ ತದಾ ವಿಪ್ರಾ ಹೇತುವಾದಾನ್ ಬಹೂನಪಿ ।
ಪ್ರಾಹುಃ ಸುವಾಗ್ಮಿನೋ ಧೀರಾಃ ಪರಸ್ಪರ ಜಿಗೀಷಯಾ ॥

ಅನುವಾದ

ಒಂದು ಸವನ ಮುಗಿದು ಇನ್ನೊಂದು ಸವನ ಪ್ರಾರಂಭವಾಗುವ ಮೊದಲು ದೊರೆಯುವ ಸಮಯದಲ್ಲಿ ಉತ್ತಮ ವಕ್ತೃತ್ವವುಳ್ಳ ಧೈರ್ಯಶಾಲಿ ಬ್ರಾಹ್ಮಣರು ಪರಸ್ಪರ ಯುಕ್ತಿವಾದ ನೀಡುತ್ತಾ ಶಾಸ್ತ್ರಾರ್ಥ ಮಾಡುತ್ತಿದ್ದರು.॥19॥

ಮೂಲಮ್ - 20

ದಿವಸೇ ದಿವಸೇ ತತ್ರ ಸಂಸ್ತರೇ ಕುಶಲಾ ದ್ವಿಜಾಃ ।
ಸರ್ವಕರ್ಮಾಣಿ ಚಕ್ರುಸ್ತೇ ಯಥಾಶಾಸ್ತ್ರಂ ಪ್ರಚೋದಿತಾಃ ॥

ಅನುವಾದ

ಆ ಯಜ್ಞದಲ್ಲಿ ಭಾಗಿಯಾದ ಕರ್ಮಕುಶಲ ಬ್ರಾಹ್ಮಣರು ಪ್ರತಿದಿನವೂ ಶಾಸ್ತ್ರಕ್ಕನುಸಾರ ಎಲ್ಲ ಕಾರ್ಯಗಳನ್ನು ನೆರವೇರಿಸುತ್ತಿದ್ದರು.॥20॥

ಮೂಲಮ್ - 21

ನಾಷಡಂಗವಿದತ್ರಾಸೀನ್ನಾವ್ರತೋ ನಾಬಹುಶ್ರುತಃ ।
ಸದಸ್ಯಾಸ್ತಸ್ಯ ವೈ ರಾಜ್ಞೋ ನಾವಾದಕುಶಲೋ ದ್ವಿಜಃ ॥

ಅನುವಾದ

ರಾಜನ ಯಜ್ಞದಲ್ಲಿ ಸದಸ್ಯರೆಲ್ಲರೂ ವ್ಯಾಕರಣಾದಿ ಆರೂ ಅಂಗಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಎಲ್ಲರೂ ಬ್ರಹ್ಮಚರ್ಯವನ್ನು ಪಾಲಿಸುವವರೂ, ಬಹುಶ್ರುತರೂ, ಆಗಿದ್ದರು. ಎಲ್ಲ ದ್ವಿಜರೂ ವಾದ ವಿವಾದದಲ್ಲಿ ಕುಶಲರಾಗಿದ್ದರ.॥21॥

ಮೂಲಮ್ - 22

ಪ್ರಾಪ್ತೇ ಯೂಪೋಚ್ಛ್ರಯೇ ತಸ್ಮಿನ್ ಷಡ್ ಬೈಲ್ವಾಃ ಖಾದಿರಾಸ್ತಥಾ ।
ತಾವಂತೋ ಬಿಲ್ವಸಹಿತಾಃ ಪರ್ಣಿನಶ್ಚ ತಥಾಪರೇ ॥

ಅನುವಾದ

ಆ ಯಜ್ಞದಲ್ಲಿ ಬಿಲ್ವವೃಕ್ಷದ ಆರು ಯೂಪಸ್ತಂಭ (ಕಂಬ)ಗಳನ್ನು ನಿಲ್ಲಿಸಿದ್ದರು. ಅಷ್ಟೇ ಖದಿರ (ಕಗ್ಗಲಿ) ಕಂಬಗಳನ್ನೂ ಹಾಗೂ ಅಷ್ಟೇ ಪಾಲಾಶದ (ಮುತ್ತುಗ) ಯೂಪಗಳನ್ನು ಬಿಲ್ವದ ಯೂಪಗಳ ಜೊತೆಗೆ ನಿಲ್ಲಿಸಿದ್ದರು.॥22॥

ಮೂಲಮ್ - 23

ಶ್ಲೇಷ್ಮಾತಕಮಯೋ ದಿಷ್ಟೋ ದೇವದಾರುಮಯಸ್ತಥಾ ।
ದ್ವಾವೇವ ತತ್ರ ವಿಹಿತೌ ಬಾಹುವ್ಯಸ್ತಪರಿಗ್ರಹೌ ॥

ಅನುವಾದ

ರಜ್ಜುದಾರ ವೃಕ್ಷದ ಒಂದು ಯೂಪವು ಅಶ್ವಮೇಧ ಯಜ್ಞಕ್ಕಾಗಿ ವಿಹಿತವಾಗಿದೆ. ದೇವದಾರು ವೃಕ್ಷದ ಯೂಪದ ವಿಧಾನವೂ ಇದೆ. ಆದರೆ ದೇವದಾರು ವೃಕ್ಷದ ಎರಡೇ ಯೂಪಗಳು ವಿಹಿತವಾಗಿವೆ. ಎರಡು ಕೈಗಳನ್ನು ಚಾಚಿದಷ್ಟು ದೂರದಲ್ಲಿ ಅವೆರಡನ್ನೂ ಸ್ಥಾಪಿಸಲಾಗಿತ್ತು.॥23॥

ಮೂಲಮ್ - 24

ಕಾರಿತಾಃ ಸರ್ವ ಏವೈತೇ ಶಾಸ್ತ್ರಜ್ಞೈರ್ಯಜ್ಞಕೋವಿದೈಃ ।
ಶೋಭಾರ್ಥಂ ತಸ್ಯ ಯಜ್ಞಸ್ಯ ಕಾಂಚನಾಲಂಕೃತಾಭವನ್ ॥

ಅನುವಾದ

ಯಜ್ಞಕುಶಲ ಶಾಸ್ತ್ರಜ್ಞ ಬ್ರಾಹ್ಮಣರೇ ಇವೆಲ್ಲ ಯೂಪಗಳನ್ನು ನಿರ್ಮಾಣ ಮಾಡಿದ್ದರು. ಆ ಯಜ್ಞದ ಶೋಭೆಯನ್ನು ಹೆಚ್ಚುಸುವುದಕ್ಕಾಗಿ ಆ ಎಲ್ಲ ಯೂಪಗಳನ್ನು ಚಿನ್ನದಿಂದ ಅಲಂಕರಿಸಲಾಗಿತ್ತು.॥24॥

ಮೂಲಮ್ - 25

ಏಕವಿಂಶತಿಯೂಪಾಸ್ತೇ ಏಕವಿಂಶತ್ಯರತ್ನಯಃ ।
ವಾಸೋಭಿರೇಕವಿಂಶದ್ಭಿರೇಕೈಕಂ ಸಮಲಂಕೃತಾಃ ॥

ಅನುವಾದ

ಹಿಂದೆ ಹೇಳಿದ ಇಪ್ಪತ್ತೊಂದು ಯೂಪಗಳು ಇಪ್ಪತ್ತೊಂದು ಅರತ್ರಿ (ಒಂದು ಅರತ್ರಿ ಎಂದರೆ ಇಪ್ಪತ್ನಾಲ್ಕು ಅಂಗುಲ) ಎತ್ತರವಾಗಿದ್ದವು. ಅವೆಲ್ಲವನ್ನು ಬೇರೆ ಬೇರೆ ಇಪ್ಪತ್ತೊಂದು ಬಟ್ಟೆಗಳಿಂದ ಅಲಂಕರಿಸಲಾಗಿತ್ತು.॥25॥

ಮೂಲಮ್ - 26

ವಿನ್ಯಸ್ತಾ ವಿಧಿವತ್ಸರ್ವೇ ಶಿಲ್ಪಿಭಿಃ ಸುಕೃತಾ ದೃಢಾಃ ।
ಅಷ್ಟಾಸ್ರಯಃ ಸರ್ವ ಏವ ಶ್ಲಕ್ಷ್ಣರೂಪಸಮನ್ವಿತಾಃ ॥

ಅನುವಾದ

ಬಡಗಿಗಳಿಂದ ಚೆನ್ನಾಗಿ ನಿರ್ಮಿಸಿದ ಆ ಎಲ್ಲ ಗಟ್ಟಿಮುಟ್ಟಾದ ಯೂಪಗಳನ್ನು ವಿಧಿವತ್ತಾಗಿ ಸ್ಥಾಪಿಸಲಾಗಿತ್ತು. ಅವೆಲ್ಲವೂ ಎಂಟು ಮೂಲೆಗಳಿಂದ ಸುಶೋಭಿತವಾಗಿ ಆಕೃತಿ ಬಹಳ ಸುಂದರವಾಗಿತ್ತು.॥26॥

ಮೂಲಮ್ - 27

ಆಚ್ಛಾದಿತಾಸ್ತೇ ವಾಸೋಭಿಃ ಪುಷ್ಪೈರ್ಗಂಧೈಶ್ಚ ಪೂಜಿತಾಃ ।
ಸಪ್ತರ್ಷಯೋ ದೀಪ್ತಿಮಂತೋ ವಿರಾಜಂತೇ ಯಥಾ ದಿವಿ ॥

ಅನುವಾದ

ಅದನ್ನು ವಸ್ತ್ರಗಳಿಂದ ಮುಚ್ಚಿ ಪುಷ್ಪ-ಚಂದನಾದಿಗಳಿಂದ ಪೂಜಿಸಲ್ಪಟ್ಟಿದ್ದವು. ಆಕಾಶದಲ್ಲಿ ತೇಜಸ್ವೀ ಸಪ್ತರ್ಷಿಗಳು ಶೋಭಿಸುವಂತೆಯೇ ಯಜ್ಞ ಮಂಟಪದಲ್ಲಿ ಆ ಪ್ರಕಾಶ ಮಾನ ಯೂಪಗಳು ಶೋಭಿಸುತ್ತಿದ್ದವು.॥27॥

ಮೂಲಮ್ - 28

ಇಷ್ಟಕಾಶ್ಚ ಯಥಾನ್ಯಾಯಂ ಕಾರಿತಾಶ್ಚ ಪ್ರಮಾಣತಃ ।
ಚಿತೋಽಗ್ನಿರ್ಬ್ರಾಹ್ಮಣೈಸ್ತತ್ರ ಕುಶಲೈಃ ಶಿಲ್ಪಕರ್ಮಣಿ ॥

ಅನುವಾದ

ಸೂತ್ರಗ್ರಂಥಗಳಲ್ಲಿ ತಿಳಿಸಿದ ಅಳತೆಯಂತೆ ಇಟ್ಟಿಗೆಗಳನ್ನು ಸಿದ್ಧಪಡಿಸಲಾಗಿತ್ತು. ಆ ಇಟ್ಟಿಗೆಗಳಿಂದ ಯಜ್ಞಸಂಬಂಧೀ ಶಿಲ್ಪಕರ್ಮದಲ್ಲಿ ಕುಶಲರಾದ ಬ್ರಾಹ್ಮಣರು ಅಗ್ನಿಚಯನವನ್ನು ಮಾಡಿದರು.॥28॥

ಮೂಲಮ್ - 29

ಸ ಚಿತ್ಯೋ ರಾಜಸಿಂಹಸ್ಯ ಸಂಚಿತಃ ಕುಶಲೈರ್ದ್ವಿಜೈಃ ।
ಗರುಡೋ ರುಕ್ಮಪಕ್ಷೋ ವೈ ತ್ರಿಗುಣೋಽಷ್ಟಾದಶಾತ್ಮಕಃ ॥

ಅನುವಾದ

ರಾಜಸಿಂಹ ದಶರಥ ಮಹಾರಾಜನ ಯಜ್ಞದಲ್ಲಿ ಚಯನದ ಮೂಲಕ ಸಂಪಾದಿತ ಅಗ್ನಿಯನ್ನು ಕರ್ಮಕಾಂಡ ಕುಶಲ ಬ್ರಾಹ್ಮಣರ ಮೂಲಕ ಶಾಸ್ತ್ರವಿಧಿಗನುಸಾರ ಸ್ಥಾಪನೆ ಮಾಡಲಾಯಿತು. ಆ ಅಗ್ನಿಯ ಆಕೃತಿಯು - ಎರಡು ರೆಕ್ಕೆಗಳಿದ್ದು ಬಾಲವನ್ನು ಚಾಚಿ, ಕೆಳಮುಖವಾಗಿ ಪೂರ್ವಾಭಿಮುಖವಾಗಿ ನಿಂತಿರುವ ಗರುಡನಂತೆ ಕಾಣುತ್ತಿತ್ತು. ಬಂಗಾರದ ಇಟ್ಟಿಗೆಗಳಿಂದ ರೆಕ್ಕೆಗಳನ್ನು ನಿರ್ಮಿಸಿದ್ದರಿಂದ ಆ ಗರುಡನ ರೆಕ್ಕೆಗಳು ಸುವರ್ಣಮಯವಾಗಿ ತೋರುತ್ತಿದ್ದವು. ಪ್ರಕತ ಅವಸ್ಥೆಯಲ್ಲಿ ಚಿತ್ಯ- ಅಗ್ನಿಯ ಆರು ಪ್ರಸ್ತಾರವಿರುತ್ತದೆ. ಆದರೆ ಅಶ್ವಮೇಧ ಯಜ್ಞದಲ್ಲಿ ಅದರ ಪ್ರಸ್ತಾರ ಮೂರರಷ್ಟು ಇರುತ್ತದೆ. ಆದ್ದರಿಂದ ಆ ಗರುಡಾಕೃತಿ ಅಗ್ನಿಯು ಹದಿನೆಂಟು ಪ್ರಸ್ತಾರಗಳಿಂದ ಕೂಡಿರುತ್ತದೆ.॥29॥

ಮೂಲಮ್ - 30

ನಿಯುಕ್ತಾಸ್ತತ್ರ ಪಶವಸ್ತತ್ತದುದ್ದಿಶ್ಯ ದೈವತಮ್ ।
ಉರಗಾಃ ಪಕ್ಷಿಣಶ್ಚೈವ ಯಥಾಶಾಸ್ತ್ರಂ ಪ್ರಚೋದಿತಾಃ ॥

ಅನುವಾದ

ಅಲ್ಲಿ ಹಿಂದೆ ಹೇಳಿದ ಯೂಪಗಳಲ್ಲಿ ಶಾಸ್ತ್ರವಿಹಿತ ಪಶು, ಸರ್ಪ, ಪಕ್ಷಿ ಮುಂತಾದವುಗಳು ಬೇರೆ ಬೇರೆ ದೇವತೆಗಳ ಉದ್ದೇಶದಿಂದ ಕಟ್ಟಿ ಇಟ್ಟಿದ್ದರು.॥30॥

ಮೂಲಮ್ - 31

ಶಾಮಿತ್ರೇ ತು ಹಯಸ್ತತ್ರ ತಥಾ ಜಲಚರಾಶ್ಚ ಯೇ ।
ಋಷಿಭಿಃ ಸರ್ವಮೇವೈತನ್ನಿಯುಕ್ತಂ ಶಾಸ್ತ್ರತಸ್ತದಾ ॥

ಅನುವಾದ

ಶಾಮಿತ್ರ ಕರ್ಮದಲ್ಲಿ ಯಜ್ಞದ ಅಶ್ವ ಹಾಗೂ ಆಮೆಯೇ ಮೊದಲಾದ ಜಲಚರ ಜಂತುಗಳನ್ನು ಅಲ್ಲಿಗೆ ತರಲಾಗಿತ್ತು. ಋಷಿಗಳು ಅವೆಲ್ಲವನ್ನು ಶಾಸ್ತ್ರವಿಧಿಗನುಸಾರ ಹಿಂದೆ ಹೇಳಿದ ಯೂಪಗಳಲ್ಲಿ ಕಟ್ಟಿದರು.॥31॥

ಮೂಲಮ್ - 32

ಪಶೂನಾಂ ತ್ರಿಶತಂ ತತ್ರ ಯೂಪೇಷುನಿಯತಂ ತದಾ ।
ಅಶ್ವರತ್ನೋತ್ತಮಂ ತತ್ರ ರಾಜ್ಞೋ ದಶರಥಸ್ಯ ಹ ॥

ಅನುವಾದ

ಆ ಯೂಪಗಳಲ್ಲಿ ಮುನ್ನೂರು ಪಶುಗಳನ್ನು ಕಟ್ಟಿದ್ದರು ಹಾಗೂ ದಶರಥನ ಆ ಉತ್ತಮ ಅಶ್ವರತ್ನವನ್ನೂ ಕಟ್ಟಿಹಾಕಿದ್ದರು.॥32॥

ಮೂಲಮ್ - 33

ಕೌಸಲ್ಯಾ ತು ಹಯಂ ತತ್ರ ಪರಿಚರ್ಯ ಸಮಂತತಃ ।
ಕೃಪಾಣೈರ್ವಿಸಸಾರೈನಂ ತ್ರಿಭಿಃ ಪರಮಯಾ ಮುದಾ ॥

ಅನುವಾದ

ರಾಣಿ ಕೌಸಲ್ಯೆಯು ಅಲ್ಲಿ ಪ್ರೋಕ್ಷಣಾದಿಗಳಿಂದ ಸುತ್ತಲೂ ಅಶ್ವದ ಸಂಸ್ಕಾರ ಮಾಡಿ ಬಹಳ ಪ್ರಸನ್ನತೆಯಿಂದ ಮೂರು ಖಡ್ಗಗಳಿಂದ ಅದನ್ನು ಸ್ಪರ್ಶಿಸಿದಳು.॥33॥

ಮೂಲಮ್ - 34

ಪತತ್ರಿಣಾ ತದಾ ಸಾರ್ಧಂ ಸುಸ್ಥಿತೇನ ಚ ಚೇತಸಾ ।
ಅವಸದ್ರಜನೀಮೇಕಾಂ ಕೌಸಲ್ಯಾ ಧರ್ಮಕಾಮ್ಯಯಾ ॥

ಅನುವಾದ

ಬಳಿಕ ಕೌಸಲ್ಯಾದೇವಿಯು ಸ್ಥಿರಚಿತ್ತದಿಂದ ಧರ್ಮಪಾಲನೆಯ ಇಚ್ಛೆಯಿಂದ ಆ ಅಶ್ವದ ಹತ್ತಿರ ಒಂದು ರಾತ್ರಿ ವಾಸಿಸಿದಳು.॥34॥

ಮೂಲಮ್ - 35

ಹೋತಾಧ್ವರ್ಯುಸ್ತಥೋದ್ಗಾತಾ ಹಸ್ತೇನ ಸಮಯೋಜಯನ್ ।
ಮಹಿಷ್ಯಾ ಪರಿವೃತ್ತ್ಯಾಥ ವಾವಾತಾಮಪರಾಂ ತಥಾ ॥

ಅನುವಾದ

ಅನಂತರ ಹೋತಾ, ಅಧ್ವರ್ಯು ಮತ್ತು ಉದ್ಗಾತಾ ಇವರು ರಾಜನ (ಕ್ಷತ್ರಿಯ ಸ್ತ್ರೀ) ಕೌಸಲ್ಯೆ, (ವೈಶ್ಯಜಾತಿಯ ಸ್ತ್ರೀ) ವಾವಾತ ಹಾಗೂ (ಶೂದ್ರಜಾತಿಯ ಸ್ತ್ರೀ) ಪರಿವೃತ್ತಿ ಇವರೆಲ್ಲರ ಕೈಯಿಂದಲೇ ಆ ಅಶ್ವವನ್ನು ಮುಟ್ಟಿಸಿದರು.॥35॥

ಮೂಲಮ್ - 36

ಪತತ್ರಿಣಸ್ತಸ್ಯ ವಪಾಮುದ್ಧೃತ್ಯ ನಿಯತೇಂದ್ರಿಯಃ ।
ಋತ್ವಿಕ್ಪರಮಸಂಪನ್ನಃ ಶ್ರಪಯಾಮಾಸ ಶಾಸ್ತ್ರತಃ ॥

ಅನುವಾದ

ಬಳಿಕ ಅಶ್ವಮೇಧಾಶ್ವದ ವಪಾಸ್ಥಾನದಲ್ಲಿರುವ ತೇಜನಿಯನ್ನು ಶಾಸ್ತ್ರರೀತಿಯಿಂದ ತೆಗೆದು ಕರ್ಮಕ್ರಿಯೆಯಲ್ಲಿಯೇ ಏಕಾಗ್ರಬುದ್ಧಿಯುಳ್ಳ ಋತ್ವಿಜನು ಪಾಕ ಮಾಡಿದನು.॥36॥

ಮೂಲಮ್ - 37

ಧೂಮಗಂಧಂ ವಪಾಯಾಸ್ತು ಜಿಘ್ರತಿ ಸ್ಮ ನರಾಧಿಪಃ ।
ಯಥಾಕಾಲಂ ಯಥಾನ್ಯಾಯಂ ನಿರ್ಣುದನ್ಪಾಪಮಾತ್ಮನಃ ॥

ಅನುವಾದ

ಅನಂತರ ಆ ತೇಜನಿಯನ್ನು ಹೋಮ ಮಾಡಿದರು. ದಶರಥನು ತನ್ನ ಪಾಪವನ್ನು ದೂರಗೊಳಿಸಲು ಸರಿಯಾದ ಅದೇ ಸಮಯಕ್ಕೆ ಬಂದು ವಿಧಿಪೂರ್ವಕ ಅದರ ಹೊಗೆಯನ್ನು ಘ್ರಾಣಿಸಿದನು.॥37॥

ಮೂಲಮ್ - 38

ಹಯಸ್ಯ ಯಾನಿ ಚಾಂಗಾನಿ ತಾನಿ ಸರ್ವಾಣಿ ಬ್ರಾಹ್ಮಣಾಃ ।
ಅಗ್ನೌ ಪ್ರಾಸ್ಯಂತಿ ವಿಧಿವತ್ ಸಮಸ್ತಾಃ ಷೋಡಶರ್ತ್ವಿಜಃ ॥

ಅನುವಾದ

ಆ ಅಶ್ವಮೇಧಯಜ್ಞದ ಅಂಗಭೂತವಾಗಿರುವ ಹವನಿಯ ಪದಾರ್ಥಗಳೆಲ್ಲವನ್ನೂ ಎತ್ತಿಕೊಂಡು ಸಮಸ್ತ ಹದಿನಾರು ಋತ್ವಿಕ್ ಬ್ರಾಹ್ಮಣರು ಅಗ್ನಿಯಲ್ಲಿ ವಿಧಿವತ್ತಾಗಿ ಆಹುತಿಯನ್ನು ಕೊಡಲು ತೊಡಗಿದರು.॥38॥

ಮೂಲಮ್ - 39

ಪ್ಲಕ್ಷಶಾಖಾಸು ಯಜ್ಞಾನಾಮನ್ಯೇಷಾಂ ಕ್ರಿಯತೇ ಹವಿಃ ।
ಅಶ್ವಮೇಧಸ್ಯ ಯಜ್ಞಸ್ಯ ವೈತಸೋ ಭಾಗ ಇಷ್ಯತೇ ॥

ಅನುವಾದ

ಅಶ್ವಮೇಧವನ್ನು ಬಿಟ್ಟು ಇತರ ಯಜ್ಞಗಳಲ್ಲಿ ಕೊಡುವ ಹವಿಸ್ಸನ್ನು ಪ್ಲಕ್ಷ (ಆಲ) ಶಾಖೆಯಿಂದ ನಿರ್ಮಿಸಿದ ಸ್ರುಕ್ಕಿನಿಂದ ಕೊಡಲಾಗುತ್ತದೆ. ಆದರೆ ಅಶ್ವಮೇಧಯಜ್ಞದ ಹವಿಸ್ಸನ್ನು ಬೆತ್ತದ ಸ್ರುಕ್ಕಿನಿಂದ ಹೋಮ ಮಾಡುವ ನಿಯಮವಿದೆ.॥39॥

ಮೂಲಮ್ - 40

ತ್ರ್ಯಹೋಽಶ್ವಮೇಧಃ ಸಂಖ್ಯಾತಃ ಕಲ್ಪಸೂತ್ರೇಣ ಬ್ರಾಹ್ಮಣೈಃ ।
ಚತುಷ್ಟೋಮಮಹಸ್ತಸ್ಯ ಪ್ರಥಮಂ ಪರಿಕಲ್ಪಿತಮ್ ॥

ಮೂಲಮ್ - 41

ಉಕ್ಥ್ಯಂ ದ್ವಿತೀಯಂ ಸಂಖ್ಯಾತಮತಿರಾತ್ರಂ ತಥೋತ್ತರಮ್ ।
ಕಾರಿತಾಸ್ತತ್ರ ಬಹವೋ ವಿಹಿತಾಃ ಶಾಸ್ತ್ರದರ್ಶನಾತ್ ॥

ಅನುವಾದ

ಕಲ್ಪಸೂತ್ರ ಮತ್ತು ಬ್ರಾಹ್ಮಣ ಗ್ರಂಥಗಳಲ್ಲಿ ಅಶ್ವಮೇಧದ ಮೂರು ಸವನೀಯ ದಿನಗಳೆಂದು ತಿಳಿಸಲಾಗಿದೆ. ಅವುಗಳಲ್ಲಿ ಮೊದಲನೆಯ ದಿನದ ಸವನವನ್ನು ‘ಚತುಷ್ಟೋಮ’ (ಅಗ್ನಿಷ್ಟೋಮ) ಎಂದು ಹೇಳುತ್ತಾರೆ. ಎರಡನೆಯ ದಿನದ ಸಾಧ್ಯ ಸವನವನ್ನು ‘ಉಕ್ಥ್ಯ’ ಎಂದು ಹೇಳುತ್ತಾರೆ. ಮೂರನೆಯ ದಿನದ ಸವನವನ್ನು ‘ಅತಿರಾತ್ರ’ ಎಂದು ಹೇಳುತ್ತಾರೆ. ಅದರಲ್ಲಿ ಶಾಸ್ತ್ರೀಯ ದೃಷ್ಟಿಯಿಂದ ವಿಹಿತವಾದ ಅನೇಕ ಬೇರೆ ಬೇರೆ ಕ್ರಮಗಳು ನೆರವೇರಿಸಲಾಗುತ್ತದೆ.॥40-41॥

ಮೂಲಮ್ - 42

ಜ್ಯೋತಿಷ್ಟೋಮಾಯುಷೀ ಚೈವಮತಿರಾತ್ರೌ ಚ ನಿರ್ಮಿತೌ ।
ಅಭಿಜಿದ್ವಿಶ್ವಜಿಚ್ಛೈವಮಾಪ್ತೋರ್ಯಾವೌ ಮಹಾಕ್ರತುಃ ॥

ಅನುವಾದ

ಜ್ಯೋತಿಷ್ಟೋಮ, ಆಯುಷ್ಟೋಮ ಯಜ್ಞ, ಎರಡು ಬಾರಿ ಅತಿರಾತ್ರ ಯಜ್ಞ, ಐದನೆಯ ಅಭಿಜಿತ್, ಆರನೆಯ ವಿಶ್ವಜಿತ್ ಹಾಗೂ ಏಳನೆಯ ಎಂಟನೆಯ ಆಪ್ತೋರ್ಯಾಮ-ಇವೆಲ್ಲವನ್ನೂ ಮಹಾಕ್ರತು ಎಂದು ತಿಳಿಯಲಾಗಿದೆ. ಇವುಗಳನ್ನು ಅಶ್ವಮೇಧದ ಉತ್ತರ ಕಾಲದಲ್ಲಿ ನೆರವೇರಿಸಲಾಗುತ್ತದೆ.॥42॥

ಮೂಲಮ್ - 43

ಪ್ರಾಚೀಂ ಹೋತ್ರೇ ದದೌ ರಾಜಾ ದಿಶಂ ಸ್ವಕುಲವರ್ಧನಃ ।
ಅಧ್ವರ್ಯವೇ ಪ್ರತೀಚೀಂ ತು ಬ್ರಹ್ಮಣೇ ದಕ್ಷಿಣಾಂ ದಿಶಮ್ ॥

ಅನುವಾದ

ತನ್ನ ಕುಲದ ವೃದ್ಧಿಗೊಳಿಸುವ ರಾಜಾ ದಶರಥನು ಯಜ್ಞಪೂರ್ಣವಾದ ಮೇಲೆ ಹೋತೃವಿಗೆ ದಕ್ಷಿಣೆಯ ರೂಪದಲ್ಲಿ ಅಯೋಧ್ಯೆಯ ಪೂರ್ವದಿಕ್ಕಿನ ಎಲ್ಲ ರಾಜ್ಯವನ್ನು ಒಪ್ಪಿಸಿದನು. ಅಧ್ವರ್ಯುವಿಗೆ ಪಶ್ಚಿಮ ದಿಕ್ಕಿನ ಹಾಗೂ ಬ್ರಹ್ಮನಿಗೆ ದಕ್ಷಿಣ ದಿಕ್ಕಿನ ರಾಜ್ಯವನ್ನು ದಾನ ಮಾಡಿದನು.॥43॥

ಮೂಲಮ್ - 44

ಉದ್ಗಾತ್ರೇ ತು ತಥೋದೀಚೀಂ ದಕ್ಷಿಣೈಷಾ ವಿನಿರ್ಮಿತಾ ।
ಅಶ್ವಮೇಧೇ ಮಹಾಯಜ್ಞೇ ಸ್ವಯಂಭೂವಿಹಿತೇ ಪುರಾ ॥

ಅನುವಾದ

ಇದೇ ರೀತಿ ಉದ್ಗಾತ್ರನಿಗೆ ಉತ್ತರ ದಿಕ್ಕಿನ ಎಲ್ಲ ಭೂಮಿಯನ್ನು ಕೊಟ್ಟನು. ಹಿಂದಿನ ಕಾಲದಲ್ಲಿ ಭಗವಾನ್ ಬ್ರಹ್ಮದೇವರು ಮಾಡಿದ ಅಶ್ವಮೇಧ ಮಹಾಯಜ್ಞದಲ್ಲಿ ದಕ್ಷಿಣೆಯ ವಿಧಾನವನ್ನು ಹೀಗೆ ಮಾಡಲಾಗಿತ್ತು.॥44॥

ಮೂಲಮ್ - 45

ಕ್ರತುಂ ಸಮಾಪ್ಯ ತು ತದಾ ನ್ಯಾಯತಃ ಪುರುಷರ್ಷಭಃ ।
ಋತ್ವಿಗ್ಭ್ಯೋ ಹಿ ದದೌ ರಾಜಾ ಧರಾಂ ತಾಂ ಕುಲವರ್ಧನಃ ॥

ಅನುವಾದ

ಈ ಪ್ರಕಾರ ವಿಧಿವತ್ತಾಗಿ ಯಜ್ಞವು ಸಮಾಪ್ತಿಗೊಳಿಸಿ ತನ್ನ ಕುಲದ ವೃದ್ಧಿಮಾಡುವ ಪುರುಷ ಶಿರೋಮಣಿ ರಾಜಾ ದಶರಥನು ಋತ್ವಿಜರಿಗೆ ಎಲ್ಲ ಭೂಮಿಯನ್ನು ದಾನಮಾಡಿದನು.॥45॥

ಮೂಲಮ್ - 46

ಏವಂ ದತ್ತ್ವಾ ಪ್ರಹೃಷ್ಟೋಽಭೂತ್ ಶ್ರೀಮಾನಿಕ್ಷ್ವಾಕುನಂದನಃ ।
ಋತ್ವಿಜಸ್ತ್ವಬ್ರುವನ್ ಸರ್ವೇ ರಾಜಾನಂ ಗತಕಿಲ್ಬಿಷಮ್ ॥

ಅನುವಾದ

ಹೀಗೆ ದಾನಮಾಡಿ ಈಕ್ಷ್ವಾಕು ಕುಲನಂದನ ಶ್ರೀಮಾನ್ ಮಹಾರಾಜಾ ದಶರಥನಿಗೆ ಅಪಾರ ಹರ್ಷವಾಯಿತು. ಆಗ ಸಮಸ್ತ ಋತ್ವಿಜರು ಆ ಪುಣ್ಯಾತ್ಮನಾದ ರಾಜನಲ್ಲಿ ಹೀಗೆ ನುಡಿದರು.॥46॥

ಮೂಲಮ್ - 47

ಭವಾನೇವ ಮಹೀಂ ಕೃತ್ಸ್ನಾಮೇಕೋ ರಕ್ಷಿತುಮರ್ಹತಿ ।
ನ ಭೂಮ್ಯಾ ಕಾರ್ಯಮಸ್ಮಾಕಂ ನಹಿ ಶಕ್ತಾಃ ಸ್ಮ ಪಾಲನೇ ॥

ಅನುವಾದ

ಮಹಾರಾಜಾ! ನೀನೊಬ್ಬನೇ ಈ ಸಮಸ್ತ ಪೃಥ್ವಿಯನ್ನು ರಕ್ಷಿಸಲು ಸಮರ್ಥನಾಗಿರುವೆ. ನಮ್ಮಲ್ಲಿ ಇದನ್ನು ಪಾಲಿಸುವ ಶಕ್ತಿ ಇಲ್ಲ, ಆದ್ದರಿಂದ ಭೂಮಿಯಿಂದ ನಮಗೆ ಯಾವ ಪ್ರಯೋಜನವೂ ಇಲ್ಲ.॥47॥

ಮೂಲಮ್ - 48

ರತಾಃ ಸ್ವಾಧ್ಯಾಯಕರಣೇ ವಯಂ ನಿತ್ಯಂ ಹಿ ಭೂಮಿಪ ।
ನಿಷ್ಕ್ರಯಂ ಕಿಂಚಿದೇವೇಹ ಪ್ರಯಚ್ಛತು ಭವಾನಿತಿ ॥

ಅನುವಾದ

ಭೂಪಾಲನೇ! ನಾವು ಸದಾ ವೇದಾಧ್ಯಾಯನದಲ್ಲೇ ತೊಡಗಿರುವವರು. ಈ ಭೂಮಿಯನ್ನು ಪಾಲಿಸುವುದು ನಮ್ಮಿಂದ ಆಗಲಾರದು, ಆದ್ದರಿಂದ ನೀನು ನಮಗೆ ಈ ಭೂಮಿಯ ನಿಷ್ಕ್ರಿಯ (ಮೌಲ್ಯ)ವನ್ನು ಕೊಡು.॥48॥

ಮೂಲಮ್ - 49

ಮಣಿರತ್ನಂ ಸುವರ್ಣಂ ವಾ ಗಾವೋ ಯದ್ವಾ ಸಮುದ್ಯತಮ್ ।
ತತ್ಪ್ರಯಚ್ಛ ನೃಪಶ್ರೇಷ್ಠ ಧರಣ್ಯಾ ನ ಪ್ರಯೋಜನಮ್ ॥

ಅನುವಾದ

ನೃಪಶ್ರೇಷ್ಠನೇ! ಮಣಿ, ರತ್ನ, ಸುವರ್ಣ, ಗೋವುಗಳು ಅಥವಾ ಇಲ್ಲಿ ಉಪಸ್ಥಿತವಾದ ವಸ್ತುಗಳನ್ನು ದಕ್ಷಿಣೆಯಾಗಿ ಕೊಡು. ಈ ಧರಿತ್ರಿಯಿಂದ ನಮಗೆ ಯಾವ ಪ್ರಯೋಜನವೂ ಇಲ್ಲ.॥49॥

ಮೂಲಮ್ - 50½

ಏವಮುಕ್ತೋ ನರಪತಿರ್ಬ್ರಾಹ್ಮಣೈರ್ವೇದಪಾರಗೈಃ ।
ಗವಾಂ ಶತಸಹಸ್ರಾಣಿ ದಶ ತೇಭ್ಯೋ ದದೌ ನೃಪಃ ॥
ದಶಕೋಟಿಂ ಸುವರ್ಣಸ್ಯ ರಜತಸ್ಯ ಚತುರ್ಗುಣಮ್ ।

ಅನುವಾದ

ವೇದಪಾರಂಗತರಾದ ಬ್ರಾಹ್ಮಣರು ಹೀಗೆ ಹೇಳಿದಾಗ ರಾಜನು ಅವರಿಗೆ ಹತ್ತು ಲಕ್ಷ ಗೋವುಗಳನ್ನು ನೀಡಿದನು. ಹತ್ತು ಕೋಟಿ ಸ್ವರ್ಣಮುದ್ರೆಗಳನ್ನು ಹಾಗೂ ಅದರ ನಾಲ್ಕುಪಟ್ಟು ಬೆಳ್ಳಿಯ ಮುದ್ರೆಗಳನ್ನು ಅರ್ಪಿಸಿದನು.॥50॥

ಮೂಲಮ್ - 51½

ಋತ್ವಿಜಸ್ತು ತತಃ ಸರ್ವೇ ಪ್ರದದುಃ ಸಹಿತಾ ವಸು ॥
ಋಷ್ಯಶೃಂಗಾಯ ಮುನಯೇ ವಸಿಷ್ಠಾಯ ಚ ಧೀಮತೇ ।

ಅನುವಾದ

ಆಗ ಸಮಸ್ತ ಋತ್ವಿಜರು ಒಟ್ಟಾಗಿ ಆ ಎಲ್ಲವನ್ನು ಮುನಿವರ್ಯ ಋಷ್ಯಶೃಂಗರಿಗೆ ಹಾಗೂ ಧೀಮಂತರಾದ ವಸಿಷ್ಠರಿಗೆ ಒಪ್ಪಿಸಿದರು.॥51½॥

ಮೂಲಮ್ - 52½

ತತಸ್ತೇ ನ್ಯಾಯತಃ ಕೃತ್ವಾ ಪ್ರವಿಭಾಗಂ ದ್ವಿಜೋತ್ತಮಾಃ ॥
ಸುಪ್ರೀತಮನಸಃ ಸರ್ವೇ ಪ್ರತ್ಯೂಚುರ್ಮುದಿತಾ ಭೃಶಮ್ ।

ಅನುವಾದ

ಅನಂತರ ಆ ಇರ್ವರು ಮಹರ್ಷಿಗಳ ಸಹಯೋಗದಿಂದ ಆ ಧನವನ್ನು ನ್ಯಾಯವಾಗಿ ಹಂಚಿಕೊಂಡು ಎಲ್ಲ ಶ್ರೇಷ್ಠ ಬ್ರಾಹ್ಮಣರು ಮನಸ್ಸಿನಲ್ಲೇ ಸಂತೋಷಗೊಂಡು ಹೇಳಿದರು - ಮಹಾರಾಜ! ಈ ದಕ್ಷಿಣೆಯಿಂದ ನಾವೆಲ್ಲ ಸಂತುಷ್ಟರಾಗಿದ್ದೇವೆ.॥52½॥

ಮೂಲಮ್ - 53½

ತತಃ ಪ್ರಸರ್ಪಕೇಭ್ಯಸ್ತು ಹಿರಣ್ಯಂ ಸುಸಮಾಹಿತಃ ॥
ಜಾಂಬೂನದಂ ಕೋಟಿಸಂಖ್ಯಂ ಬ್ರಾಹ್ಮಣೇಭ್ಯೋ ದದೌ ತದಾ ।

ಅನುವಾದ

ಬಳಿಕ ಸಮನಸ್ಕನಾದ ದಶರಥನು ಆಮಂತ್ರಿತ ಬ್ರಾಹ್ಮಣರೆಲ್ಲರಿಗೂ ಒಂದು ಕೋಟಿ ಜಾಂಬೂನದ ಸುವರ್ಣನಾಣ್ಯಗಳನ್ನು ಹಂಚಿದನು.॥53½॥ (ಎಲ್ಲ ಧನವು ಮುಗಿದು ಹೋಗಿ ಏನೂ ಉಳಿಯದಿದ್ದಾಗ)

ಮೂಲಮ್ - 54½

ದರಿದ್ರಾಯ ದ್ವಿಜಾಯಾಥ ಹಸ್ತಾಭರಣಮುತ್ತಮಮ್ ॥
ಕಸ್ಮೈಚಿದ್ ಯಾಚಮಾನಾಯ ದದೌ ರಾಘವನಂದನಃ ।

ಅನುವಾದ

ಒಬ್ಬ ದರಿದ್ರ ಬ್ರಾಹ್ಮಣನು ಬಂದು ರಾಜನಲ್ಲಿ ಬೇಡಿದನು. ಆಗ ರಘುಕುಲ ನಂದನ ನರೇಶನು ಅವನಿಗೆ ತನ್ನ ಕೈಯ ಕಂಕಣವನ್ನೇ ತೆಗೆದುಕೊಟ್ಟನು.॥54½॥

ಮೂಲಮ್ - 55½

ತತಃ ಪ್ರೀತೇಷು ವಿಧಿವದ್ ದ್ವಿಜೇಷು ದ್ವಿಜವತ್ಸಲಃ ॥
ಪ್ರಣಾಮಮಕರೋತ್ತೇಷಾಂ ಹರ್ಷವ್ಯಾಕುಲಿತೇಂದ್ರಿಯಃ ।

ಅನುವಾದ

ಅನಂತರ ಎಲ್ಲ ಬ್ರಾಹ್ಮಣರು ಸಂತುಷ್ಟರಾದಾಗ ದ್ವಿಜವತ್ಸಲನಾದ ದಶರಥನು ಅವರೆಲ್ಲರಿಗೆ ವಂದಿಸಿದನು. ನಮಸ್ಕರಿಸುವಾಗ ಅವನ ಎಲ್ಲ ಇಂದ್ರಿಯಗಳು ಹರ್ಷದಿಂದ ವಿಹ್ವಲವಾದವು.॥55½॥

ಮೂಲಮ್ - 56½

ತಸ್ಯಾಶಿಷೋಽಥ ವಿವಿಧಾ ಬ್ರಾಹ್ಮಣೈಃ ಸಮುದಾಹೃತಾಃ ॥
ಉದಾರಸ್ಯ ನೃವೀರಸ್ಯ ಧರಣ್ಯಾಂ ಪತಿತಸ್ಯ ಚ ।

ಅನುವಾದ

ದೀರ್ಘದಂಡ ನಮಸ್ಕರಿಸಿದ ಉದಾರನಾದ ನೃಪತಿಗೆ ಬ್ರಾಹ್ಮಣರು - ‘ಪುತ್ರವಾನ್ ಭವ’ ‘ದೀರ್ಘಾಯುಷ್ಮಾನ್ ಭವ’ ‘ವಿಜಯೀಭವ’ ಮುಂತಾಗಿ ಆಶೀರ್ವದಿಸಿದರು.॥56½॥

ಮೂಲಮ್ - 57½

ತತಃ ಪ್ರೀತಮನಾ ರಾಜಾ ಪ್ರಾಪ್ಯ ಯಜ್ಞಮನುತ್ತಮಮ್ ॥
ಪಾಪಾಪಹಂ ಸ್ವರ್ನಯನಂ ದುಸ್ತರಂ ಪಾರ್ಥಿವರ್ಷಭೈಃ ।

ಅನುವಾದ

ಅನಂತರ ಆ ಪರಮೋತ್ತಮ ಯಜ್ಞದ ಫಲವನ್ನು ಪಡೆದ ರಾಜಾ ದಶರಥನ ಮನಸ್ಸಿನಲ್ಲಿ ತುಂಬಾ ಸಂತೋಷವಾಯಿತು. ಆ ಯಜ್ಞವು ಅವನ ಎಲ್ಲ ಪಾಪಗಳನ್ನು ನಾಶಮಾಡಿ ಸ್ವರ್ಗಲೋಕಕ್ಕೆ ಕೊಂಡು ಹೋಗುವಂತಹುದಾಗಿತ್ತು. ಸಾಮಾನ್ಯ ರಾಜರಿಗೆ ಆ ಯಜ್ಞವನ್ನು ಆದಿಯಿಂದ ಅಂತ್ಯದವರೆಗೆ ಪೂರ್ಣಮಾಡುವುದು ಕಷ್ಟವಾಗಿತ್ತು.॥57½॥

ಮೂಲಮ್ - 58½

ತತೋಽಬ್ರವೀದೃಷ್ಯಶಂಗಂ ರಾಜಾ ದಶರಥಸ್ತದಾ ॥
ಕುಲಸ್ಯ ವರ್ಧನಂತತ್ ತು ಕರ್ತುಮರ್ಹಸಿ ಸುವ್ರತ ।

ಅನುವಾದ

ಯಜ್ಞ ಸಮಾಪ್ತವಾದಾಗ ರಾಜಾ ದಶರಥನು ಋಷ್ಯಶೃಂಗರಲ್ಲಿ - ‘ಸುವ್ರತರೇ! ಇನ್ನು ನನ್ನ ಕುಲಪರಂಪರೆಯನ್ನು ಬೆಳೆಸುವ ಕರ್ಮವನ್ನು ತಾವು ನೆರವೇರಿಸಬೇಕು’ ಎಂದು ಪ್ರಾರ್ಥಿಸಿದನು.॥58½॥

ಮೂಲಮ್ - 59

ತಥೇತಿ ಚ ಸ ರಾಜಾನಮುವಾಚ ದ್ವಿಜಸತ್ತಮಃ ।
ಭವಿಷ್ಯಂತಿ ಸುತಾ ರಾಜಂಶ್ಚತ್ವಾರಸ್ತೇ ಕುಲೋದ್ವಹಾಃ ॥

ಅನುವಾದ

ದ್ವಿಜಶ್ರೇಷ್ಠರಾದ ಋಷ್ಯಶೃಂಗರು ‘ತಥಾಸ್ತು’ ಎಂದು ಹೇಳಿ ರಾಜನಲ್ಲಿ ನುಡಿದರು. ರಾಜನೇ! ನಿನಗೆ ನಾಲ್ಕು ಪುತ್ರರು ಹುಟ್ಟುವರು. ಅವರು ಕುಲದ ಭಾರವನ್ನು ಹೊರಲು ಸಮರ್ಥರಾಗುವರು.॥59॥

ಮೂಲಮ್ - 60

ಸ ತಸ್ಯ ವಾಕ್ಯಂ ಮಧುರಂ ನಿಶಮ್ಯ
ಪ್ರಣಮ್ಯ ತಸ್ಮೈ ಪ್ರಯತೋ ನೃಪೇಂದ್ರಃ ।
ಜಗಾಮ ಹರ್ಷಂ ಪರಮಂ ಮಹಾತ್ಮಾ
ತಮೃಷ್ಯಶೃಂಗಂ ಪುನರಪ್ಯುವಾಚ ॥

ಅನುವಾದ

ಅವರ ಮಧುರವಾದ ಈ ಮಾತನ್ನು ಕೇಳಿ ಮಹಾತ್ಮನಾದ ದಶರಥನು ಅಸವರಿಗೆ ನಮಸ್ಕರಿಸಿ ಹರ್ಷಗೊಂಡನು. ಅವನು ಪುನಃ ಋಷ್ಯಶೃಂಗರನ್ನು ಪುತ್ರಪ್ರಾಪ್ತಿಯಾಗಿಸುವಂತಹ ಕರ್ಮಾನುಷ್ಠಾನ ಮಾಡಲು ಪ್ರೇರೇಪಿಸಿದನು.॥60॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಹದಿನಾಲ್ಕನೆಯ ಸರ್ಗ ಪೂರ್ಣವಾಯಿತು. ॥14॥