वाचनम्
ಭಾಗಸೂಚನಾ
ಯಜ್ಞವನ್ನು ಮಾಡಿಸುವಂತೆ ದಶರಥನು ವಸಿಷ್ಠರನ್ನು ಪ್ರಾರ್ಥಿಸಿದುದು; ವಸಿಷ್ಠರು ಪರಿವಾರದವರಿಗೆ ಯಜ್ಞದ ಸಿದ್ಧತೆಗಳನ್ನು ಮಾಡುವಂತೆ ಆದೇಶವಿತ್ತುದು; ಸುಮಂತ್ರನು ಎಲ್ಲಾ ರಾಜರಿಗೂ ಯಜ್ಞಕ್ಕಾಗಿ ಆಮಂತ್ರಿಸಿದುದು; ಆಗಮಿಸಿದ ರಾಜರ ಸತ್ಕಾರ; ಪತ್ನಿಯರೊಡನೆ ದಶರಥನ ಯಜ್ಞ ದೀಕ್ಷೆ
ಮೂಲಮ್ - 1
ಪುನಃ ಪ್ರಾಪ್ತೇ ವಸಂತೇ ತು ಪೂರ್ಣಃ ಸಂವತ್ಸರೋಽಭವತ್ ।
ಪ್ರಸವಾರ್ಥಂ ಗತೋ ಯಷ್ಟುಂ ಹಯಮೇಧೇನ ವೀರ್ಯವಾನ್ ॥
ಅನುವಾದ
ಒಂದು ವರ್ಷ ಕಳೆದು ಪುನಃ ವಸಂತಋತು ಆಗಮಿಸಿದಾಗ ಪರಾಕ್ರಮಶಾಲಿ ದಶರಥ ರಾಜನು ಸಂತಾನದ ಇಚ್ಛೆಯಿಂದ ಅಶ್ವಮೇಧ ಯಜ್ಞದ ದೀಕ್ಷೆಯನ್ನು ಪಡೆಯಲು ವಸಿಷ್ಠರ ಬಳಿಗೆ ಹೋದನು.॥1॥
ಮೂಲಮ್ - 2
ಅಭಿವಾದ್ಯ ವಸಿಷ್ಠಂ ಚ ನ್ಯಾಯತಃ ಪ್ರತಿಪೂಜ್ಯ ಚ ।
ಅಬ್ರವೀತ್ ಪ್ರಶ್ರಿತಂ ವಾಕ್ಯಂ ಪ್ರಸವಾರ್ಥಂ ದ್ವಿಜೋತ್ತಮಮ್ ॥
ಅನುವಾದ
ವಸಿಷ್ಠರನ್ನು ಅಭಿವಾದನ ಮಾಡಿ ರಾಜನು ಯಥಾಯೋಗ್ಯವಾಗಿ ಅವರನ್ನು ಪೂಜಿಸಿದನು. ಪುತ್ರ ಪ್ರಾಪ್ತಿಯ ಉದ್ದೇಶದಿಂದ ಆ ದ್ವಿಜಶ್ರೇಷ್ಠ ಮುನಿಗಳಲ್ಲಿ ವಿನಯಯುಕ್ತ ಈ ಮಾತನ್ನು ಹೇಳಿದನು .॥2॥
ಮೂಲಮ್ - 3
ಯಜ್ಞೋ ಮೇ ಕ್ರಿಯತಾಂ ಬ್ರಹ್ಮನ್ ಯಥೋಕ್ತಂ ಮುನಿಪುಂಗವ ।
ಯಥಾ ನ ವಿಘ್ನಾಃ ಕ್ರಿಯಂತೇ ಯಜ್ಞಾಂಗೇಷು ವಿಧೀಯತಾಮ್ ॥
ಅನುವಾದ
ಬ್ರಾಹ್ಮಣಶ್ರೇಷ್ಠ ಮುನಿಗಳೇ! ತಾವು ಶಾಸ್ತ್ರವಿಧಿಗಳಿಗನುಸಾರ ನನ್ನ ಯಜ್ಞವನ್ನು ಮಾಡಿಸಿರಿ. ಯಜ್ಞದ ಅಂಗವಾಗಿ ಅಶ್ವಸಂಚಾರಣ ಮೊದಲಾದವುಗಳಲ್ಲಿ ಬ್ರಹ್ಮರಾಕ್ಷಸಾದಿಗಳು ಯಾವ ರೀತಿಯಿಂದಲೂ ವಿಘ್ನವನ್ನು ಮಾಡದಿರುವಂತೆ ಉಪಾಯಮಾಡಿರಿ.॥3॥
ಮೂಲಮ್ - 4
ಭವಾನ್ ಸ್ನಿಗ್ಧಃ ಸುಹೃನ್ಮಹ್ಯಂ ಗುರುಶ್ಚ ಪರಮೋ ಮಹಾನ್ ।
ವೋಢವ್ಯೋ ಭವತಾ ಚೈವ ಭಾರೋ ಯಜ್ಞಸ್ಯ ಚೋದ್ಯತಃ ॥
ಅನುವಾದ
ತಮಗೆ ನನ್ನ ಮೇಲೆ ವಿಶೇಷ ಸ್ನೇಹವಿದೆ, ನೀವು ನನ್ನ ಕುರಿತು ಸುಹೃದ್, ಅಕಾರಣ ಹಿತೈಷಿಗಳು, ಗುರುಗಳೂ ಹಾಗೂ ಪರಮ ಪೂಜ್ಯರಾಗಿರುವಿರಿ. ಈ ಯಜ್ಞದ ಭಾರವನ್ನು ನೀವೇ ಹೊರಬೇಕು ಎಂದು ವಿನಂತಿಸಿಕೊಂಡನು.॥4॥
ಮೂಲಮ್ - 5
ತಥೇತಿ ಚ ಸ ರಾಜಾನಮಬ್ರವೀದ್ ದ್ವಿಜಸತ್ತಮಃ ।
ಕರಿಷ್ಯೇ ಸರ್ವಮೇವೈತದ್ ಭವತಾ ಯತ್ಸಮರ್ಥಿತಮ್ ॥
ಅನುವಾದ
ಆಗ ವಿಪ್ರವರ ಮುನಿ ವಸಿಷ್ಠರು ‘ಹಾಗೆಯೇ ಆಗಲಿ’ ಎಂದು ಹೇಳಿ ರಾಜನಲ್ಲಿ ಈ ಪ್ರಕಾರ ನುಡಿದರು - ಮಹಾರಾಜಾ! ನೀನು ಪ್ರಾರ್ಥಿಸಿಕೊಂಡಂತೆ ನಾನು ಎಲ್ಲವನ್ನೂ ಮಾಡುವೆನು.॥5॥
ಮೂಲಮ್ - 6
ತತೋಽಬ್ರವೀದ್ವಜಾನ್ ವೃದ್ಧಾನ್ ಯಜ್ಞಕರ್ಮಸು ನಿಷ್ಠಿತಾನ್ ।
ಸ್ಥಾಪತ್ಯೇ ನಿಷ್ಠಿತಾಂಶ್ಚೈವ ವೃದ್ಧಾನ್ ಪರಮಧಾರ್ಮಿಕಾನ್ ॥
ಮೂಲಮ್ - 7
ಕರ್ಮಾಂತಿಕಾನ್ ಶಿಲ್ಪಕಾರಾನ್ ವರ್ಧಕೀನ್ ಖನಕಾನಪಿ ।
ಗಣಕಾನ್ ಶಿಲ್ಪಿನಶ್ಚೈವ ತಥೈವ ನಟನರ್ತಕಾನ್ ॥
ಮೂಲಮ್ - 8
ತಥಾ ಶುಚೀನ್ ಶಾಸ್ತ್ರವಿದಃ ಪುರುಷಾನ್ ಸುಬಹುಶ್ರುತಾನ್ ।
ಯಜ್ಞಕರ್ಮ ಸಮೀಹಂತಾಂ ಭವಂತೋ ರಾಜಶಾಸನಾತ್ ॥
ಅನುವಾದ
ಅನಂತರ ಯಜ್ಞಕರ್ಮ ನಿಪುಣ ವಸಿಷ್ಠರು ಬ್ರಾಹ್ಮಣರನ್ನು, ಶ್ರೌತಪ್ರಯೋಗ ಕುಶಲರನ್ನು, ಸ್ಥಪತಿಗಳನ್ನು, ಪರಮ ಧಾರ್ಮಿಕರಾದ ವೃದ್ಧ ಬ್ರಾಹ್ಮಣರನ್ನು, ಯಜ್ಞಕರ್ಮವು ಮುಗಿಯುವವರೆಗೂ ಸಂದರ್ಭೋಚಿತ ಕಾರ್ಯಗಳಲ್ಲಿ ನಿಯುಕ್ತರಾದ ಸೇವಕರನ್ನು, ಶಿಲ್ಪಿಗಳನ್ನು, ಬಡಗಿಗಳನ್ನು, ನೆಲ ಅಗೆಯುವವರನ್ನು, ಜ್ಯೋತಿಷಿಗಳನ್ನು, ಕುಶಲ ಕರ್ಮಿಗಳನ್ನು, ನಟ ನರ್ತಕರನ್ನು, ವಿಶುದ್ಧ ಶಾಸ್ತ್ರವೇತ್ತರನ್ನು, ಬಹುಶ್ರುತ ವಿದ್ವಾಂಸರನ್ನು ಕರೆಸಿ ಅವರಲ್ಲಿ ನೀವೆಲ್ಲರೂ ಮಹಾರಾಜನ ಅಪ್ಪಣೆಯಂತೆ ಯಜ್ಞಕರ್ಮಕ್ಕೆ ಅವಶ್ಯವಾದ ಎಲ್ಲ ವ್ಯವಸ್ಥೆಯನ್ನು ಮಾಡಿರಿ ಎಂದು ಹೇಳಿದರು.॥6-8॥
ಮೂಲಮ್ - 9
ಇಷ್ಟಕಾ ಬಹುಸಾಹಸ್ರೀ ಶೀಘ್ರಮಾನೀಯತಾಮಿತಿ ।
ಉಪಕಾರ್ಯಾಃ ಕ್ರಿಯಂತಾ ಚ ರಾಜ್ಞೋ ಬಹುಗುಣಾನ್ವಿತಾಃ ॥
ಅನುವಾದ
ಕೂಡಲೇ ಸಾವಿರಾರು ಇಟ್ಟಿಗೆಗಳು ಸಿದ್ಧವಾಗಲಿ. ರಾಜರಿಗೆ ಉಳಿದುಕೊಳ್ಳಲು ಉಚಿತವಾದ ಬಿಡದಿಗಳನ್ನು, ಅವರಿಗೆ ಯೋಗ್ಯವಾದ ಅನ್ನ ಪಾನಾದಿಗಳು, ಇತರ ಸಲಕರಣೆಗಳು ಸಿದ್ಧವಾಗಲಿ.॥9॥
ಮೂಲಮ್ - 10
ಬ್ರಾಹ್ಮಣಾವಸಥಾಶ್ಚೈವ ಕರ್ತವ್ಯಾಃ ಶತಶಃ ಶುಭಾಃ ।
ಭಕ್ಷ್ಯಾನ್ನಪಾನೈರ್ಬಹುಭಿಃ ಸಮುಪೇತಾಃ ಸುನಿಷ್ಠಿತಾಃ ॥
ಅನುವಾದ
ಬ್ರಾಹ್ಮಣರ ವಸತಿಗಾಗಿ ನೂರಾರು ಸುಂದರ ಮನೆಗಳನ್ನು ಕಟ್ಟಿಸಬೇಕು. ಆ ಎಲ್ಲ ಮನೆಗಳು ಧಾರಾಳವಾದ ಅನ್ನ ಪಾನಾದಿ ಭೋಜನ ಸಾಮಗ್ರಿಗಳಿಂದ ತುಂಬಿರಲಿ, ಮಳೆಗಾಳಿಗಳನ್ನು ತಡೆಯುವಂತೆ ಭದ್ರವಾಗಿರಲಿ.॥10॥
ಮೂಲಮ್ - 11
ತಥಾ ಪೌರಜನಸ್ಯಾಪಿ ಕರ್ತವ್ಯಾಶ್ಚ ಸುವಿಸ್ತರಾಃ ।
ಆಗತಾನಾಂ ಸುದೂರಾಚ್ಚ ಪಾರ್ಥಿವಾನಾಂ ಪೃಥಕ್ ಪೃಥಕ್ ॥
ಅನುವಾದ
ಇದೇ ರೀತಿ ಪುರವಾಸಿಗಳಿಗೂ ವಿಶಾಲ ಮನೆಗಳೂ ನಿರ್ಮಾಣವಾಗಬೇಕು. ಅತಿಥಿಗಳಾಗಿ ಬಂದ ಅರಸರಿಗೂ ಪ್ರತ್ಯೇಕ ಸೌಧಗಳು ನಿರ್ಮಾಣವಾಗಬೇಕು.॥11॥
ಮೂಲಮ್ - 12
ವಾಜಿವಾರಣಶಾಲಾಶ್ಚ ತಥಾ ಶಯ್ಯಾಗೃಹಾಣಿ ಚ ।
ಭಟಾನಾಂ ಮಹದಾವಾಸಾ ವೈದೇಶಿಕನಿವಾಸಿನಾಮ್ ॥
ಅನುವಾದ
ಅಶ್ವಶಾಲೆಗಳು, ಗಜಶಾಲೆಗಳನ್ನು ಕಟ್ಟಿಸಬೇಕು. ಸಾಮಾನ್ಯ ಜನರಿಗೂ ಉಳಕೊಳ್ಳಲು ಮನೆಗಳ ವ್ಯವಸ್ಥೆಯಾಗಲಿ. ವಿದೇಶಿ ಸೈನಿಕರಿಗೂ ವಿಶಾಲವಾದ ಸೈನಿಕ ಶಿಬಿರಗಳನ್ನು ಮಾಡಿಸಬೇಕು.॥12॥
ಮೂಲಮ್ - 13½
ಆವಾಸಾ ಬಹುಭಕ್ಷ್ಯಾ ವೈ ಸರ್ವಕಾಮೈರುಪಸ್ಥಿತಾಃ ।
ತಥಾ ಪೌರಜನಸ್ಯಾಪಿ ಜನಸ್ಯ ಬಹುಶೋಭನಮ್ ॥
ದಾತವ್ಯಮನ್ನಂ ವಿಧಿವತ್ಸತ್ಕೃತ್ಯ ನ ತು ಲೀಲಯಾ ।
ಅನುವಾದ
ನಿರ್ಮಿಸುವ ಮನೆಗಳಲ್ಲಿ ಊಟ ತಿಂಡಿಯ ವಸ್ತುಗಳು ಸಾಕಷ್ಟು ಇರಬೇಕು. ಅವುಗಳಲ್ಲಿ ಎಲ್ಲ ಮನೋವಾಂಛಿತ ಪದಾರ್ಥಗಳು ತುಂಬಿರಲಿ ಹಾಗೂ ನಗರವಾಸಿಗಳಿಗೂ ಉತ್ತಮ ಊಟವನ್ನು ಕೊಡಬೇಕು. ಅದನ್ನೂ ಕೂಡ ಸತ್ಕಾರಪೂರ್ವಕ ಒದಗಿಸಬೇಕು. ಯಾರನ್ನು ಅವಹೇಳನ ಮಾಡಬಾರದು.॥13½॥
ಮೂಲಮ್ - 14½
ಸರ್ವೇ ವರ್ಣಾ ಯಥಾ ಪೂಜಾಂ ಪ್ರಾಪ್ನುವಂತಿ ಸುಸತ್ಕೃತಾಃ ॥
ನ ಚಾವಜ್ಞಾ ಪ್ರಯೋಕ್ತವ್ಯಾ ಕಾಮಕ್ರೋಧವಶಾದಪಿ ।
ಅನುವಾದ
ಎಲ್ಲ ವರ್ಣದ ಜನರು ಚೆನ್ನಾಗಿ ಸತ್ಕೃತರಾಗಿ ಸಮ್ಮಾನಿತರಾಗುವಂತಹ ವ್ಯವಸ್ಥೆ ಆಗಬೇಕು. ಕಾಮ-ಕ್ರೋಧಕ್ಕೆ ವಶರಾಗಿ ಯಾರನ್ನೂ ಅನಾದರಿಸಬಾರದು.॥14½॥
ಮೂಲಮ್ - 15½
ಯಜ್ಞ ಕರ್ಮಸು ಯೇ ವ್ಯಗ್ರಾಃ ಪುರುಷಾಃ ಶಿಲ್ಪಿನಸ್ತಥಾ ॥
ತೇಷಾಮಪಿ ವಿಶೇಷೇಣ ಪೂಜಾ ಕಾರ್ಯಾ ಯಥಾಕ್ರಮಮ್ ।
ಅನುವಾದ
ಯಜ್ಞಕರ್ಮದ ಆವಶ್ಯಕ ಸಿದ್ಧತೆಯಲ್ಲಿ ತೊಡಗಿರುವ ಶಿಲ್ಪಿಗಳನ್ನು, ಹಿರಿಯ-ಕಿರಿಯ ಸೇವಕರನ್ನು ಕುರಿತು ಗಮನ ವಿಡುತ್ತಾ ವಿಶೇಷರೂಪದಿಂದ ಅವರನ್ನು ಸಮ್ಮಾನಿಸಬೇಕು.॥15½॥
ಮೂಲಮ್ - 16
ತೇ ಸ್ಯುಃ ಸಂಪೂಜಿತಾಃ ಸರ್ವೇ ವಸುಭಿರ್ಭೋಜನೇನ ಚ ॥
ಮೂಲಮ್ - 17
ಯಥಾ ಸರ್ವಂ ಸುವಿಹಿತಂ ನ ಕಿಂಚಿತ್ಪರಿಹೀಯತೇ ।
ತಥಾ ಭವಂತಃ ಕುರ್ವಂತು ಪ್ರೀತಿಯುಕ್ತೇನ ಚೇತಸಾ ॥
ಅನುವಾದ
ಹಣ, ಭೋಜನಾದಿಗಳಿಂದ ಸಮ್ಮಾನಿತರಾದ ಸೇವಕರು, ಕುಶಲಕರ್ಮಿಗಳೆಲ್ಲರೂ ಪರಿಶ್ರಮಪೂರ್ವಕ ಕಾರ್ಯ ಮಾಡುತ್ತಾರೆ. ಅವರು ಮಾಡಿದ ಎಲ್ಲ ಕಾರ್ಯಗಳು ಸುಂದರವಾಗಿ ಚೆನ್ನಾಗಿ ನೆರವೇರುತ್ತವೆ. ಅವರು ಯಾವುದೇ ಕೆಲಸವನ್ನು ಕೆಡಿಸಲಾರರು; ಆದ್ದರಿಂದ ನೀವೆಲ್ಲರೂ ಪ್ರಸನ್ನ ಚಿತ್ತದಿಂದ ಹೀಗೆ ಮಾಡಿರಿ.॥16-17॥
ಮೂಲಮ್ - 18½
ತತಃ ಸರ್ವೇ ಸಮಾಗಮ್ಯ ವಸಿಷ್ಠಮಿದಮಬ್ರುವನ್ ।
ಯಥೇಷ್ಟಂ ತತ್ಸುವಿಹಿತಂ ನ ಕಿಂಚಿತ್ ಪರಿಹೀಯತೇ ॥
ಯಥೋಕ್ತಂ ತತ್ಕರಿಷ್ಯಾಮೋ ನ ಕಿಂಚಿತ್ ಪರಿಹಾಸ್ಯತೇ ।
ಅನುವಾದ
ಆಗ ಅವರೆಲ್ಲರೂ ಸೇರಿ ವಸಿಷ್ಠರಲ್ಲಿ ಹೇಳಿದರು - ತಮಗೆ ಇಷ್ಟವಾಗಿರುವಂತೆ ಚೆನ್ನಾಗಿ ವ್ಯವಸ್ಥೆ ಮಾಡಲಾಗುವುದು. ಯಾರೂ ಕೆಲಸವನ್ನು ಕೆಡಿಸಲಾರರು. ನೀವು ಹೇಳಿದಂತೆಯೇ ನಾವೆಲ್ಲರೂ ಕಾರ್ಯಮಾಡುವೆವು. ಅದರಲ್ಲಿ ಯಾವುದೇ ಕೊರತೆ ಬರಲಾರದು.॥18½॥
ಮೂಲಮ್ - 19
ತತಃ ಸುಮಂತ್ರಮಾಹೂಯ ವಸಿಷ್ಠೋ ವಾಕ್ಯಮಬ್ರವೀತ್ ॥
ಮೂಲಮ್ - 20
ನಿಮಂತ್ರಯಸ್ವ ನೃಪತೀನ್ ವೃಥಿವ್ಯಾಂ ಯೇ ಚ ಧಾರ್ಮಿಕಾಃ ।
ಬ್ರಾಹ್ಮಣಾನ್ ಕ್ಷತ್ರಿಯಾನ್ ವೈಶ್ಯಾನ್ ಶೂದ್ರಾಂಶ್ಚೈವ ಸಹಸ್ರಶಃ ॥
ಅನುವಾದ
ಅನಂತರ ವಸಿಷ್ಠರು ಸುಮಂತ್ರನನ್ನು ಕರೆದು - ಈ ಪೃಥ್ವಿಯಲ್ಲಿರುವ ಧಾರ್ಮಿಕ ರಾಜರು, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಸಾವಿರಾರು ಶೂದ್ರರು ಹೀಗೆ ಎಲ್ಲರನ್ನೂ ಈ ಯಜ್ಞಕ್ಕೆ ಬರುವಂತೆ ಆಮಂತ್ರಿಸು.॥19-20॥
ಮೂಲಮ್ - 21
ಸಮಾನಯಸ್ವ ಸತ್ಕೃತ್ಯ ಸರ್ವದೇಶೇಷು ಮಾನವಾನ್ ॥
ಮೂಲಮ್ - 22
ಮಿಥಿಲಾಧಿಪತಿಂ ಶೂರಂ ಜನಕಂ ಸತ್ಯವಾದಿನಮ್ ।
ತಮಾನಯ ಮಹಾಭಾಗಂ ಸ್ವಯಮೇವ ಸುಸತ್ಕೃತಮ್ ।
ಪೂರ್ವ ಸಂಬಂಧಿನಂ ಜ್ಞಾತ್ವಾ ತತಃ ಪೂರ್ವಂ ಬ್ರವೀಮಿ ತೇ ॥
ಅನುವಾದ
ಎಲ್ಲ ದೇಶಗಳಲ್ಲಿರುವ ಒಳ್ಳೆಯ ಜನರನ್ನು ಸತ್ಕಾರಪೂರ್ವಕ ಕರೆದುಕೊಂಡು ಬಾ. ಮಿಥಿಲೆಯ ಒಡೆಯ ಶೂರವೀರ ಮಹಾಭಾಗ ಜನಕನು ಸತ್ಯವಾದಿ ಅರಸನಾಗಿದ್ದಾನೆ. ಅವರನ್ನು ನಮ್ಮ ಹಿಂದಿನ ಸಂಬಂಧಿ ಎಂದು ತಿಳಿದು ನೀನು ಸ್ವತಃ ಹೋಗಿ ಬಹಳ ಆದರ ಸತ್ಕಾರದೊಂದಿಗೆ ಇಲ್ಲಿಗೆ ಕರೆದುಕೊಂಡು ಬಾ. ಅದಕ್ಕಾಗಿ ಮೊದಲೇ ನಿನಗೆ ಹೇಳಿರುವೆನು.॥21-22॥
ಮೂಲಮ್ - 23
ತಥಾ ಕಾಶೀಪತಿಂ ಸ್ನಿಗ್ಧಂ ಸತತಂ ಪ್ರಿಯವಾದಿನಮ್ ।
ಸದ್ ವೃತ್ತಂ ದೇವಸಂಕಾಶಂ ಸ್ವಯಮೇವಾನಯಸ್ವ ಹ ॥
ಅನುವಾದ
ಹಾಗೆಯೇ ಕಾಶಿಯ ಅರಸು ನಮ್ಮ ಮಿತ್ರನಾಗಿದ್ದಾನೆ ಹಾಗೂ ಸದಾ ಪ್ರಿಯನಾಗಿ ಮಾತನಾಡುವವನು. ಅವನು ಸದಾಚಾರೀ ಮತ್ತು ದೇವತೆಗಳಂತೆ ತೇಜಸ್ವಿಯಾಗಿದ್ದಾನೆ. ಅವನನ್ನೂ ನೀನು ಸ್ವತಃ ಹೋಗಿ ಕರೆದುಕೊಂಡು ಬಾ.॥23॥
ಮೂಲಮ್ - 24
ತಥಾ ಕೇಕಯರಾಜಾನಂ ವೃದ್ಧಂ ಪರಮಧಾರ್ಮಿಕಮ್ ।
ಶ್ವಶುರಂ ರಾಜಸಿಂಹಸ್ಯ ಸಪುತ್ರಂ ತಮಿಹಾನಯ ॥
ಅನುವಾದ
ಕೇಕಯ ದೇಶದ ವೃದ್ಧನಾದ ರಾಜನು ಬಹಳ ಧರ್ಮಾತ್ಮನಾಗಿದ್ದು, ಆ ರಾಜಸಿಂಹ ಮಹಾರಾಜನು ದಶರಥನಿಗೆ ಹೆಣ್ಣು ಕೊಟ್ಟ ಮಾವನಾಗಿದ್ದಾನೆ. ಆದ್ದರಿಂದ ಅವರನ್ನೂ ಪುತ್ರರ ಸಹಿತ ಇಲ್ಲಿಗೆ ಕರೆದುಕೊಂಡು ಬಾ.॥24॥
ಮೂಲಮ್ - 25
ಅಂಗೇಶ್ವರಂ ಮಹೇಷ್ವಾಸಂ ರೋಮಪಾದಂ ಸುಸತ್ಕೃತಮ್ ।
ವಯಸ್ಯಂ ರಾಜಸಿಂಹಸ್ಯ ಸಪುತ್ರಂ ತಮಿಹಾನಯ ॥
ಅನುವಾದ
ಅಂಗದೇಶದ ಒಡೆಯ ಮಹಾಧನುರ್ಧರ ರಾಜಾ ರೋಮಪಾದನು ನಮ್ಮ ಮಹಾರಾಜರ ಮಿತ್ರನಾಗಿದ್ದಾನೆ. ಆದ್ದರಿಂದ ಅವನನ್ನು ಪುತ್ರರ ಸಹಿತ ಇಲ್ಲಿ ಸತ್ಕಾರಪೂರ್ವಕ ಕರೆದುಕೊಂಡು ಬಾ.॥25॥
ಮೂಲಮ್ - 26½
ತಥಾ ಕೋಸಲರಾಜಾನಂ ಭಾನುಮಂತಂ ಸುಸತ್ಕೃತಮ್ ।
ಮಗಧಾಧಿಪತಿಂ ಶೂರಂ ಸರ್ವಶಾಸ್ತ್ರ ವಿಶಾರದಮ್ ॥
ಪ್ರಾಪ್ತಿಜ್ಞಂ ಪರಮೋದಾರಂ ಸತ್ಕೃತಂ ಪುರುಷರ್ಷಭಮ್ ।
ಅನುವಾದ
ಕೋಸಲರಾಜ ಭಾನುವಂತನನ್ನು ಸತ್ಕಾರಪೂರ್ವಕ ಕರೆದುಕೊಂಡು ಬಾ. ಮಗಧದೇಶದ ರಾಜನು ಶೂರವೀರನೂ, ಸರ್ವಶಾಸ್ತ್ರವಿಶಾರದನೂ, ಪರಮ ಉದಾರನೂ, ಪುರುಷ ಶ್ರೇಷ್ಠನೂ, ಶಾಸ್ತ್ರಜ್ಞನೂ ಆದ ಅವನನ್ನು ಸ್ವತಃ ಸತ್ಕಾರಪೂರ್ವಕ ಕರೆದುಕೊಂಡು ಬಾ.॥26½॥
ಮೂಲಮ್ - 27
ರಾಜ್ಞಃ ಶಾಸನಮಾದಾಯ ಚೋದಯಸ್ವ ನೃಪರ್ಷಭಾನ್ ।
ಪ್ರಾಚೀನಾನ್ ಸಿಂಧು ಸೌವೀರಾನ್ ಸೌರಾಷ್ಟ್ರೇಯಾಂಶ್ಚ ಪಾರ್ಥಿವಾನ್ ॥
ಅನುವಾದ
ಮಹಾರಾಜರ ಆಜ್ಞೆ ಪಡೆದು ನೀನು ಪೂರ್ವದೇಶದ ಶ್ರೇಷ್ಠ ನೃಪತಿಗಳನ್ನು ಹಾಗೂ ಸಿಂಧು-ಸೌಮೀರ ಹಾಗೂ ಸುರಾಷ್ಟ್ರ ದೇಶದ ಭೂಪಾಲರನ್ನು ಇಲ್ಲಿಗೆ ಬರಲು ಆಮಂತ್ರಿಸು.॥27॥
ಮೂಲಮ್ - 28
ದಾಕ್ಷಿಣಾತ್ಯಾನ್ನರೇಂದ್ರಾಂಶ್ಚ ಸಮಸ್ತಾನಾನಯಸ್ವ ಹ ।
ಸಂತಿ ಸ್ನಿಗ್ಧಾಶ್ಚ ಯೇ ಚಾನ್ಯೇ ರಾಜಾನಃ ಪೃಥಿವೀತಲೇ ॥
ಮೂಲಮ್ - 29
ತಾನಾನಯ ತಥಾ ಕ್ಷಿಪ್ರಂಸಾನುಗಾನ್ಸಹಬಾಂಧವಾನ್ ।
ಏತಾನ್ ದೂತೈರ್ಮಹಾಭಾಗೈರಾನಯಸ್ವ ನೃಪಾಜ್ಞಯಾ ॥
ಅನುವಾದ
ದಕ್ಷಿಣ ಭಾರತದ ಸಮಸ್ತ ನರೇಶರನ್ನು ಆಮಂತ್ರಿಸು. ಈ ಭೂತಳದಲ್ಲಿ ಇನ್ನೂ ಮಹಾರಾಜರಿಗೆ ಸ್ನೇಹಿತರಾದ ಎಲ್ಲರನ್ನು, ಸೇವಕರು ಸಂಬಂಧಿಗಳ ಸಹಿತ ಶೀಘ್ರವಾಗಿ ಕರೆಸು. ಮಹಾರಾಜರ ಆಜ್ಞೆಯಂತೆ ದೂತರ ಮೂಲಕ ಇವರೆಲ್ಲರಿಗೆ ಕರೆ ಕಳಿಸು.॥28-29॥
ಮೂಲಮ್ - 30
ವಸಿಷ್ಠವಾಕ್ಯಂ ತಚ್ಛ್ರುತ್ವಾ ಸುಮಂತ್ರಸ್ತ್ವರಿತಂ ತದಾ ।
ವ್ಯಾದಿಶತ್ಪುರುಷಾಂಸ್ತತ್ರ ರಾಜ್ಞಾಮಾನಯನೇ ಶುಭಾನ್ ॥
ಅನುವಾದ
ವಸಿಷ್ಠರ ಈ ಮಾತನ್ನು ಕೇಳಿ ಸುಮಂತ್ರನು ಕೂಡಲೇ ಒಳ್ಳೆಯ ಪುರುಷರಿಗೆ ಪ್ರಧಾನ ರಾಜರನ್ನು ಕರೆತರುವಂತೆ ಆದೇಶಿಸಿದನು.॥30॥
ಮೂಲಮ್ - 31
ಸ್ವಯಮೇವ ಹಿ ಧರ್ಮಾತ್ಮಾ ಪ್ರಯಾತೋ ಮುನಿಶಾಸನಾತ್ ।
ಸುಮಂತ್ರಸ್ತ್ವರಿತೋ ಭೂತ್ವಾ ಸಮಾನೇತುಂ ಮಹಾಮತಿಃ ॥
ಅನುವಾದ
ಪರಮ ಬುದ್ಧಿವಂತ ಧರ್ಮಾತ್ಮಾ ಸುಮಂತ್ರನು ವಸಿಷ್ಠರ ಆಣತಿಯಂತೆ ಮುಖ್ಯ ಮುಖ್ಯ ಅರಸರನ್ನು ಕರೆತರಲು ಸ್ವತಃ ಹೊರಟನು.॥31॥
ಮೂಲಮ್ - 32
ತೇ ಚ ಕರ್ಮಾಂತಿಕಾಃ ಸರ್ವೇವಸಿಷ್ಠಾಯ ಮಹರ್ಷಯೇ ।
ಸರ್ವಂ ನಿವೇದಯಂತಿ ಸ್ಮ ಯಜ್ಞೇ ಯದುಪಕಲ್ಪಿತಮ್ ॥
ಅನುವಾದ
ಯಜ್ಞಕರ್ಮದ ವ್ಯವಸ್ಥೆಗಾಗಿ ನಿಯುಕ್ತರಾದ ಸೇವಕರೆಲ್ಲರೂ ಬಂದು, ಈಗಿನವರೆಗೆ ಆಗಿರುವ ಯಜ್ಞ ಸಂಬಂಧೀ ಕಾರ್ಯಗಳೆಲ್ಲವನ್ನೂ ಮಹರ್ಷಿ ವಸಿಷ್ಠರಲ್ಲಿ ನಿವೇದಿಸಿಕೊಂಡರು.॥32॥
ಮೂಲಮ್ - 33½
ತತಃ ಪ್ರೀತೋ ದ್ವಿಜಶ್ರೇಷ್ಠಸ್ತಾನ್ ಸರ್ವಾನ್ ಮುನಿರಬ್ರವೀತ್ ।
ಅವಜ್ಞಯಾ ನ ದಾತವ್ಯಂ ಕಸ್ಯಚಿಲ್ಲೀಲಯಾಪಿ ವಾ ॥
ಅವಜ್ಞಯಾ ಕೃತಂ ಹನ್ಯಾದ್ದಾತಾರಂ ನಾತ್ರ ಸಂಶಯಃ ।
ಅನುವಾದ
ಇದನ್ನು ಕೇಳಿ ದ್ವಿಜಶ್ರೇಷ್ಠ ಮುನಿಗಳು ಬಹಳ ಸಂತೋಷಗೊಂಡು ಅವರೆಲ್ಲರಲ್ಲಿ ಹೇಳಿದರು - ಸಭ್ಯರೇ! ಯಾರಿಗಾದರೂ ಏನಾದರೂ ಕೊಡುವುದಿದ್ದರೆ ಅವಹೇಳನ ಮಾಡದೆ, ಅನಾದರದಿಂದ ಕೊಡಬಾರದು. ಏಕೆಂದರೆ, ಅನಾದರದಿಂದ ಕೊಟ್ಟ ದಾನವು ದಾತನನ್ನು ನಾಶಮಾಡಿಬಿಡುತ್ತದೆ. ಇದರಲ್ಲಿ ಸಂಶಯವೇ ಬೇ.॥33½॥
ಮೂಲಮ್ - 34½
ತತಃ ಕೈಶ್ಚದಹೋರಾತ್ರೈರುಪಯಾತಾ ಮಹೀಕ್ಷಿತಃ ॥
ಬಹೂನಿ ರತ್ನಾನ್ಯಾದಾಯ ರಾಜ್ಞೋ ದಶರಥಸ್ಯ ಹ ।
ಅನುವಾದ
ಕೆಲವು ದಿನಗಳ ಬಳಿಕ ಅನೇಕ ಮಹಾರಾಜರು ದಶರಥನಿಗೆ ಕಾಣಿಕೆಯಾಗಿ ಕೊಡಲು ಬಹಳಷ್ಟು ನವರತ್ನಗಳನ್ನು ಎತ್ತಿಕೊಂಡು ಅಯೋಧ್ಯೆಗೆ ಆಗಮಿಸಿದರು.॥34॥
ಮೂಲಮ್ - 35
ತತೋ ವಸಿಷ್ಠಃ ಸುಪ್ರೀತೋ ರಾಜಾನಮಿದಮಬ್ರವೀತ್ ॥
ಮೂಲಮ್ - 36
ಉಪಯಾತಾ ನರವ್ಯಾಘ್ರ ರಾಜಾನಸ್ತವ ಶಾಸನಾತ್ ।
ಮಯಾಪಿ ಸತ್ಕೃತಾಃ ಸರ್ವೇ ಯಥಾರ್ಹಂ ರಾಜಸತ್ತಮ ॥
ಅನುವಾದ
ಇದರಿಂದ ವಸಿಷ್ಠರಿಗೆ ಬಹಳ ಸಂತೋಷವಾಯಿತು. ಅವರು ರಾಜನಲ್ಲಿ ಪುರುಷಸಿಂಹನೇ! ನಿನ್ನ ಆಮಂತ್ರಣದಂತೆ ರಾಜರು ಇಲ್ಲಿಗೆ ಬಂದಿರುವರು. ನೃಪಶ್ರೇಷ್ಠನೇ! ನಾನೂ ಕೂಡ ಯಥಾಯೋಗ್ಯವಾಗಿ ಅವರೆಲ್ಲರನ್ನು ಸತ್ಕರಿಸಿರುವೆನು ಎಂದು ಹೇಳಿದರು.॥35-36॥
ಮೂಲಮ್ - 37
ಯಜ್ಞಿಯಂ ಚ ಕೃತಂ ಸರ್ವಂ ಪುರುಷೈಃ ಸುಸಮಾಹಿತೈಃ ।
ನಿರ್ಯಾತು ಚ ಭವನ್ ಯಷ್ಟುಂ ಯಜ್ಞಾಯತನಮಂತಿಕಾತ್ ॥
ಅನುವಾದ
ನಮ್ಮ ಕಾರ್ಯಕರ್ತರು ಪೂರ್ಣ ಎಚ್ಚರಿಕೆಯಿಂದ ಇದ್ದು ಯಜ್ಞಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿರುವರು. ಈಗ ನೀನೂ ಕೂಡ ಯಜ್ಞ ಮಾಡಲು ಯಜ್ಞಮಂಟಪಕ್ಕೆ ನಡೆ.॥37॥
ಮೂಲಮ್ - 38
ಸರ್ವಕಾಮೈರುಪಹೃತೈರುಪೇತಂ ವೈ ಸಮಂತತಃ ।
ದ್ರಷ್ಟುಮರ್ಹಸಿ ರಾಜೇಂದ್ರ ಮನಸೇವ ವಿನಿರ್ಮಿತಮ್ ॥
ಅನುವಾದ
ರಾಜೇಂದ್ರ! ಯಜ್ಞ ಮಂಟಪದಲ್ಲಿ ಎಲ್ಲ ದಿಕ್ಕುಗಳಲ್ಲೂ ಅಪೇಕ್ಷಿತ ವಸ್ತುಗಳನ್ನು ಸೇರಿಸಿ ಇಡಲಾಗಿದೆ. ತಾವು ಸ್ವಯಂ ಎಲ್ಲವನ್ನೂ ಪರೀಕ್ಷಿಸಬಹುದು. ಈ ಮಂಟಪವನ್ನು ಎಷ್ಟು ಶೀಘ್ರವಾಗಿ ರಚಿಸಲಾಗಿದೆ ಎಂದರೆ ಮನಸ್ಸಿನಲ್ಲಿ ಸಂಕಲ್ಪ ಮಾಡಿದಾಕ್ಷಣ ಸಿದ್ಧವಾಗಿದೆ.॥38॥
ಮೂಲಮ್ - 39
ತಥಾ ವಸಿಷ್ಠವಚನಾದೃಷ್ಯಶೃಂಗಸ್ಯ ಚೋಭಯೋಃ ।
ದಿವಸೇ ಶುಭನಕ್ಷತ್ರೇ ನಿರ್ಯಾತೋ ಜಗತೀಪತಿಃ ॥
ಅನುವಾದ
ಮುನಿವರ್ಯ ವಸಿಷ್ಠರು ಮತ್ತು ಋಷ್ಯಶೃಂಗರು ಇವರಿಬ್ಬರ ಆದೇಶದಂತೆ ಶುಭನಕ್ಷತ್ರವುಳ್ಳ ದಿವಸ ರಾಜಾ ದಶರಥನು ಅರಮನೆಯಿಂದ ಹೊರಟನು.॥39॥
ಮೂಲಮ್ - 40
ತತೋ ವಸಿಷ್ಠ ಪ್ರಮುಖಾಃ ಸರ್ವ ಏವ ದ್ವಿಜೋತ್ತಮಾಃ ।
ಋಷ್ಯಶೃಂಗಂ ಪುರಸ್ಕೃತ್ಯ ಯಜ್ಞಕರ್ಮಾರಭಂಸ್ತದಾ ॥
ಮೂಲಮ್ - 41
ಯಜ್ಞವಾಟಂ ಗತಾಃ ಸರ್ವೇಯಥಾಶಾಸ್ತ್ರಂ ಯಥಾವಿಧಿ ।
ಶ್ರೀಮಾಂಶ್ಚ ಸಹ ಪತ್ನೀಭೀ ರಾಜಾ ದೀಕ್ಷಾಮುಪಾವಿಶತ್ ॥
ಅನುವಾದ
ಅನಂತರ ವಸಿಷ್ಠಾದಿ ಎಲ್ಲ ಶ್ರೇಷ್ಠದ್ವಿಜರು ಯಜ್ಞ ಮಂಟಪಕ್ಕೆ ಹೋಗಿ ಋಷ್ಯಶೃಂಗರನ್ನು ಮುಂದಿರಿಸಿಕೊಂಡು ಶಾಸ್ತ್ರೋಕ್ತ ವಿಧಿಗನುಸಾರ ಯಜ್ಞಕರ್ಮವನ್ನು ಪ್ರಾರಂಭಿಸಿದರು. ಪತ್ನಿಯರ ಸಹಿತ ಶ್ರೀಮಾನ್ ಅವಧಪತಿ ದಶರಥನು ಯಜ್ಞ ದೀಕ್ಷೆಯನ್ನು ಕೈಗೊಂಡನು.॥40-41॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಹದಿಮೂರನೆಯ ಸರ್ಗ ಪೂರ್ಣವಾಯಿತು. ॥13॥