०१२ अश्वमेधारम्भः

वाचनम्
ಭಾಗಸೂಚನಾ

ದಶರಥನು ಋಷಿಗಳೊಡನೆ ಯಜ್ಞ ಮಾಡಿಸುವಂತೆ ಪ್ರಸ್ತಾಪಿಸಿದುದು, ಋಷಿಗಳು ರಾಜನಿಗೂ, ರಾಜನು ಮಂತ್ರಿಗಳಿಗೆ ಯಜ್ಞದ ಸಿದ್ಧತೆ ಮಾಡುವಂತೆ ನಿರ್ದೇಶಿಸಿದುದು

ಮೂಲಮ್ - 1

ತತಃ ಕಾಲೇ ಬಹುತಿಥೇ ಕಸ್ಮಿಂಶ್ಚಿತ್ ಸುಮನೋಹರೇ ।
ವಸಂತೇ ಸಮನುಪ್ರಾಪ್ತೇ ರಾಜ್ಞೋ ಯಷ್ಟುಂ ಮನೋಽಭವತ್ ॥

ಅನುವಾದ

ಋಷ್ಯಶೃಂಗನು ಬಂದು ಅನೇಕ ದಿನಗಳು ಕಳೆದನಂತರ ಅತಿಮನೋಹರವಾದ ವಸಂತಋತುವು ಆರಂಭವಾಯಿತು. ಆಗ ದಶರಥನಿಗೆ ಅಶ್ವಮೇಧಯಜ್ಞವನ್ನು ಮಾಡಬೇಕೆಂಬ ಮನಸ್ಸುಂಟಾಯಿತು.॥1॥

ಮೂಲಮ್ - 2

ತತಃ ಪ್ರಣಮ್ಯಶಿರಸಾ ತಂ ವಿಪ್ರಂ ದೇವವರ್ಣಿನಮ್ ।
ಯಜ್ಞಾಯ ವರಯಾಮಾಸ ಸಂತಾನಾರ್ಥಂ ಕುಲಸ್ಯ ಚ ॥

ಅನುವಾದ

ಅನಂತರ ಅವನು ದೇವೋಪಮ ಕಾಂತಿಯುಳ್ಳ ವಿಪ್ರವರ ಋಷ್ಯಶೃಂಗನಿಗೆ ತಲೆಬಾಗಿ ನಮಸ್ಕರಿಸಿ, ವಂಶಪರಂಪರೆಯ ರಕ್ಷಣೆಗಾಗಿ, ಪುತ್ರಪ್ರಾಪ್ತಿಯ ನಿಮಿತ್ತ ಯಜ್ಞ ಮಾಡಿಸುವ ಉದ್ದೇಶದಿಂದ ಅವರನ್ನು ವರಣ ಮಾಡಿಕೊಂಡನು.॥2॥

ಮೂಲಮ್ - 3½

ತಥೇತಿ ಚ ಸ ರಾಜಾನಮುವಾಚ ವಸುಧಾಧಿಪಮ್ ।
ಸಂಭಾರಾಃ ಸಂಭ್ರಿಯಂತಾಂ ತೇ ತುರಗಶ್ಚ ವಿಮುಚ್ಯತಾಮ್ ॥
ಸರಯ್ವಾಶ್ಚೋತ್ತರೇ ತೀರೇ ಯಜ್ಞಭೂಮಿರ್ವಿಧೀಯತಾಮ್ ।

ಅನುವಾದ

ಋಷ್ಯಶಂಗನು ಅದನ್ನು ಒಪ್ಪಿ ಅವನ ಪ್ರಾರ್ಥನೆಯನ್ನು ಸ್ವೀಕರಿಸಿದನು ಹಾಗೂ ರಾಜನೇ! ಯಜ್ಞದ ಸಾಮಗ್ರಿಗಳನ್ನು ಸಿದ್ಧಗೊಳಿಸು, ನಿನ್ನ ಅಶ್ವಮೇಧದ ಕುದುರೆಯು ದಿಗ್ವಿಜಯಕ್ಕೆ ಹೊರಡಲಿ, ಸರಯೂ ನದಿಯ ಉತ್ತರ ತೀರದಲ್ಲಿ ಯಜ್ಞ ಭೂಮಿಯ ನಿರ್ಮಾಣವಾಗಲಿ, ಎಂದು ಹೇಳಿದನು.॥3½॥

(ಶ್ಲೋಕ 4)

ಮೂಲಮ್

ತತೋಽಬ್ರವೀನ್ ನೃಪೋ ವಾಕ್ಯಂ ಬ್ರಾಹ್ಮಣಾನ್ ವೇದಪಾರಗಾನ್ ॥

ಮೂಲಮ್ - 5½

ಸುಮಂತ್ರಾವಾಹಯ ಕ್ಷಿಪ್ರಮೃತ್ವಿಜೋ ಬ್ರಹ್ಮವಾದಿನಃ ।
ಸುಯಜ್ಞಂ ವಾಮದೇವಂ ಚ ಜಾಬಾಲಿಮಥ ಕಾಶ್ಯಪಮ್ ॥
ಪುರೋಹಿತಂ ವಸಿಷ್ಠಂ ಚ ಯೇ ಚಾನ್ಯೇ ದ್ವಿಜಸತ್ತಮಾಃ ।

ಅನುವಾದ

ಋಷ್ಯಶೃಂಗನು ಹೀಗೆ ಹೇಳಿದೊಡನೆ ರಾಜನು ಮಂತ್ರಿಶ್ರೇಷ್ಠನಾದ ಸುಮಂತ್ರನನ್ನು ಕರೆಯಿಸಿ ಹೇಳಿದನು - ನೀನು ಶೀಘ್ರವಾಗಿ ವೇದವಿದ್ಯೆಯಲ್ಲಿ ಪಾರಂಗತರಾದ ಬ್ರಾಹ್ಮಣರನ್ನು ಹಾಗೂ ಬ್ರಹ್ಮವಾದೀ ಋತ್ವಿಜರನ್ನು ಕರೆದುಕೊಂಡು ಬಾ. ಸುಯಜ್ಞ, ವಾಮದೇವ, ಜಾಬಾಲಿ, ಕಾಶ್ಯಪ, ಪುರೋಹಿತರಾದ ವಸಿಷ್ಠರು ಹಾಗೂ ಇತರ ಶ್ರೇಷ್ಠ ಎಲ್ಲಾ ಬ್ರಾಹ್ಮಣರನ್ನು ಕರೆದುಕೊಂಡು ಬಾ.॥4-5½॥

ಮೂಲಮ್ - 6½

ತತಃ ಸುಮಂತ್ರಸ್ತ್ವರಿತಂ ಗತ್ವಾ ತ್ವರಿತವಿಕ್ರಮಃ ॥
ಸಮಾನಯತ್ ಸತಾನ್ ಸರ್ವಾನ್ ಸಮಸ್ತಾನ್ ವೇದಪಾರಗಾನ್ ।

ಅನುವಾದ

ಆಗ ಶೀಘ್ರಗಾಮಿ ಸುಮಂತ್ರನು ಕೂಡಲೇ ಹೋಗಿ ವೇದವಿದ್ಯೆಯಲ್ಲಿ ಪಾರಂಗತರಾದ ಸಮಸ್ತ ಬ್ರಾಹ್ಮಣರನ್ನು ಕರೆದುಕೊಂಡು ಬಂದನು.॥6½॥

ಮೂಲಮ್ - 7½

ತಾನ್ಪೂಜಯಿತ್ವಾ ಧರ್ಮಾತ್ಮಾ ರಾಜಾ ದಶರಥಸ್ತದಾ ॥
ಧರ್ಮಾರ್ಥಸಹಿತಂ ಯುಕ್ತಂ ಶ್ಲಕ್ಷ್ಣಂ ವಚನಮಬ್ರವೀತ್ ।

ಅನುವಾದ

ಧರ್ಮಾತ್ಮಾ ದಶರಥ ರಾಜನು ಅವರೆಲ್ಲರನ್ನು ಪೂಜಿಸಿ, ಅವರಲ್ಲಿ ಧರ್ಮ, ಅರ್ಥದಿಂದ ಕೂಡಿದ ಮಧುರ ಮಾತನ್ನು ಹೇಳಿದನು.॥7½॥

ಮೂಲಮ್ - 8½

ಮಮ ತಾತಪ್ಯಮಾನಸ್ಯ ಪುತ್ರಾರ್ಥಂ ನಾಸ್ತಿ ವೈ ಸುಖಮ್ ॥
ಪುತ್ರಾರ್ಥಂ ಹಯಮೇಧೇನ ಯಕ್ಷ್ಯಾಮೀತಿ ಮತಿರ್ಮಮ ।

ಅನುವಾದ

ಮಹರ್ಷಿಗಳೇ! ನಾನು ಪುತ್ರರಿಗಾಗಿ ನಿರಂತರ ಹಂಬಲಿಸುತ್ತಿದ್ದೇನೆ. ಮಕ್ಕಳಿಲ್ಲದೆ ಈ ರಾಜ್ಯಾದಿಗಳಿಂದ ನನಗೆ ಸುಖ ಸಿಗುವುದಿಲ್ಲ. ಆದ್ದರಿಂದ ಪುತ್ರಪ್ರಾಪ್ತಿಗಾಗಿ ಅಶ್ವಮೇಧ ಯಜ್ಞದ ಅನುಷ್ಠಾನ ಮಾಡುವುದಾಗಿ ನಾನು ನಿಶ್ಚಯಿಸಿರುವೆನು.॥8½॥

ಮೂಲಮ್ - 9½

ತದಹಂ ಯಷ್ಟುಮಿಚ್ಛಾಮಿ ಹಯಮೇಧೇನ ಕರ್ಮಣಾ ॥
ಋಷಿಪುತ್ರ ಪ್ರಭಾವೇಣ ಕಾಮಾನ್ಪ್ರಾಪ್ಸ್ಯಾಮಿ ಚಾಪ್ಯಹಮ್ ।

ಅನುವಾದ

ಈ ಸಂಕಲ್ಪಕ್ಕನುಸಾರ ನಾನು ಅಶ್ವಮೇಧ ಯಜ್ಞವನ್ನು ಪ್ರಾರಂಭಿಸಲು ಬಯಸುವೆನು. ಋಷಿಪುತ್ರ ಋಷ್ಯಶಂಗರ ಪ್ರಭಾಮಹಿಮೆಯಿಂದ ನಾನು ನನ್ನ ಸಮಸ್ತ ಕಾಮನೆಗಳನ್ನು ಪಡೆಯುವೆ ಎಂಬ ವಿಶ್ವಾಸ ನನಗಿದೆ.॥9½॥

ಮೂಲಮ್ - 10½

ತತಃ ಸಾಧ್ವಿತಿ ತದ್ವಾಕ್ಯಂ ಬ್ರಾಹ್ಮಣಾಃ ಪ್ರತ್ಯಪೂಜಯನ್ ॥
ವಸಿಷ್ಠಪ್ರಮುಖಾಃ ಸರ್ವೇ ಪಾರ್ಥಿವಸ್ಯ ಮುಖಾಚ್ಚ್ಯುತಮ್ ।

ಅನುವಾದ

ದಶರಥ ಮಹಾರಾಜನು ಹೇಳಿದ ಮಾತನ್ನು ವಸಿಷ್ಠಾದಿ ಎಲ್ಲ ಬ್ರಾಹ್ಮಣರು ಸಾಧು-ಸಾಧು ಎಂದು ಹೇಳಿ ಗೌರವಿಸಿದರು.॥10½॥

ಮೂಲಮ್ - 11

ಋಷ್ಯಶೃಂಗ ಪುರೋಗಾಶ್ಚ ಪ್ರತ್ಯೂಚುರ್ನೃಪತಿಂ ತದಾ ॥

ಮೂಲಮ್ - 12

ಸಂಭಾರಾಃ ಸಂಭ್ರಿಯಂತಾಂತೇ ತುರಗಶ್ಚ ವಿಮುಚ್ಯತಾಮ್ ।
ಸರಯ್ವಾಶ್ಚೋತ್ತರೇ ತೀರೇ ಯಜ್ಞಭೂಮಿರ್ವಿಧೀಯತಾಮ್ ॥

ಅನುವಾದ

ಅನಂತರ ಋಷ್ಯಶೃಂಗರೇ ಮೊದಲಾದ ಎಲ್ಲ ಮಹರ್ಷಿಗಳು ದಶರಥನಲ್ಲಿ ಪುನಃ ಹೇಳಿದರು- ಮಹಾರಾಜನೇ! ಯಜ್ಞಕ್ಕೆ ಬೇಕಾದ ಸಾಮಗ್ರಿಗಳ ಸಂಗ್ರಹವಾಗಲಿ. ಯಜ್ಞಸಂಬಂಧಿ ಅಶ್ವವನ್ನು ಬಿಡಲಾಗಲಿ, ಸರಯೂವಿನ ಉತ್ತರ ತೀರದಲ್ಲಿ ಯಜ್ಞ ಭೂಮಿಯ ನಿರ್ಮಾಣವಾಗಲಿ.॥11-12॥

ಮೂಲಮ್ - 13

ಸರ್ವಥಾ ಪ್ರಾಪ್ಸ್ಯಸೇ ಪುತ್ರಾಂಶ್ಚತುರೋಽಮಿತವಿಕ್ರಮಾನ್ ।
ಯಸ್ಯ ತೇ ಧಾರ್ಮಿಕೀ ಬುದ್ಧಿರಿಯಂ ಪುತ್ರಾರ್ಥಮಾಗತಾ ॥

ಅನುವಾದ

ನೀನು ಯಜ್ಞದ ಮೂಲಕ ನಿಶ್ಚಯವಾಗಿ ನಾಲ್ಕು ಪುತ್ರರನ್ನು ಪಡೆಯುವೆ; ಏಕೆಂದರೆ ಮಕ್ಕಳಿಗಾಗಿ ನಿನ್ನ ಮನಸ್ಸಿನಲ್ಲಿ ಇಂತಹ ಧಾರ್ಮಿಕ ವಿಚಾರ ಉದಯಿಸಿದೆ.॥13॥

ಮೂಲಮ್ - 14

ತತಃ ಪ್ರೀತೋಽಭವದ್ರಾಜಾ ಶ್ರುತ್ವಾ ತುದ್ವಿಜಭಾಷಿತಮ್ ।
ಅಮಾತ್ಯಾನಬ್ರವೀದ್ರಾಜಾ ಹರ್ಷೇಣೇದಂ ಶುಭಾಕ್ಷರಮ್ ॥

ಅನುವಾದ

ಬ್ರಾಹ್ಮಣರ ಈ ಮಾತನ್ನು ಕೇಳಿ ರಾಜನಿಗೆ ಬಹಳ ಸಂತೋಷವಾಯಿತು. ಅವನು ಬಹಳ ಹರ್ಷದಿಂದ ತನ್ನ ಮಂತ್ರಿಗಳಲ್ಲಿ ಈ ಶುಭಾಕ್ಷರವುಳ್ಳ ಮಾತನ್ನು ಹೇಳಿದನು.॥14॥

ಮೂಲಮ್ - 15

ಗುರೂಣಾಂ ವಚನಾಚ್ಛೀಘ್ರಂ ಸಂಭಾರಾಃ ಸಂಭ್ರಿಯಂತು ಮೇ ।
ಸಮರ್ಥಾಧಿಷ್ಠಿತಶ್ಚಾಶ್ವಃ ಸೋಪಾಧ್ಯಾಯೋ ವಿಮುಚ್ಯತಾಮ್ ॥

ಅನುವಾದ

ಗುರುಗಳ ಅಪ್ಪಣೆಯಂತೆ ನೀವೆಲ್ಲರೂ ಬೇಗನೇ ನನ್ನ ಯಜ್ಞಕ್ಕಾಗಿ ಬೇಕಾದ ಸಾಮಗ್ರಿಗಳನ್ನು ಹೊಂದಿಸಿರಿ. ಸಮರ್ಥರಾದ ವೀರರ ರಕ್ಷಣೆಯಲ್ಲಿ ಯಜ್ಞಾಶ್ವವನ್ನು ಬಿಡಲಾಗುವುದು, ಅದರೊಂದಿಗೆ ಪ್ರಧಾನ ಋತ್ವಿಜರೂ ಇರುವರು.॥15॥

ಮೂಲಮ್ - 16

ಸರಯ್ವಾಶ್ಚೋತ್ತರೇ ತೀರೇ ಯಜ್ಞಭೂಮಿರ್ವಿಧೀಯತಾಮ್ ।
ಶಾಂತಯಶ್ಚಾಭಿವರ್ಧಂತಾಂ ಯಥಾಕಲ್ಪಂ ಯಥಾವಿಧಿ ॥

ಅನುವಾದ

ಸರಯೂವಿನ ಉತ್ತರ ತೀರದಲ್ಲಿ ಯಜ್ಞಭೂಮಿಯ ನಿರ್ಮಾಣವಾಗಲೀ, ಶಾಸ್ತ್ರೋಕ್ತ ವಿಧಾನದಿಂದ ಕ್ರಮವಾಗಿ ಶಾಂತಿಕರ್ಮ- ಪುಣ್ಯಾಹವಾಚನ ಮುಂತಾದವನ್ನು ವಿಸ್ತಾರವಾಗಿ ಅನುಷ್ಠಾನ ಮಾಡಲಾಗುವುದು, ಇದರಿಂದ ಎಲ್ಲ ವಿಘ್ನಗಳ ನಿವಾರಣೆ ಆಗುತ್ತದೆ.॥16॥

ಮೂಲಮ್ - 17

ಶಕ್ಯಃ ಕರ್ತುಮಯಂ ಯಜ್ಞಃ ಸರ್ವೇಣಾಪಿ ಮಹೀಕ್ಷಿತಾ ।
ನಾಪರಾಧೋ ಭವೇತ್ಕಷ್ಟೋ ಯದ್ಯಸ್ಮಿನ್ ಕ್ರತುಸತ್ತಮೇ ॥

ಅನುವಾದ

ಈ ಶ್ರೇಷ್ಠವಾದ ಯಜ್ಞದಲ್ಲಿ ಗುರುತರ ಅಪರಾಧವಾಗುವ ಭಯವಿಲ್ಲದಿದ್ದರೆ ಎಲ್ಲ ರಾಜರೂ ಇದನ್ನು ನೆರವೇರಿಸಬಲ್ಲರು.॥17॥

ಮೂಲಮ್ - 18

ಛಿದ್ರಂ ಹಿ ಮೃಗಯಂತ್ಯೇತೇ ವಿದ್ವಾಂಸೋ ಬ್ರಹ್ಮರಾಕ್ಷಸಾಃ ।
ವಿಧಿಹೀನಸ್ಯ ಯಜ್ಞಸ್ಯ ಸದ್ಯಃ ಕರ್ತಾ ವಿನಶ್ಯತಿ ॥

ಅನುವಾದ

ಆದರೆ ಹೀಗಾಗುವುದು ಕಠಿಣವೇ ಆಗಿದೆ; ಏಕೆಂದರೆ ಈ ವಿದ್ವಾಂಸರಾದ ಬ್ರಹ್ಮರಾಕ್ಷಸರು ಯಜ್ಞದಲ್ಲಿ ವಿಘ್ನವನ್ನೊಡ್ಡಲು ತಪ್ಪುಗಳನ್ನು ಹುಡುಕುತ್ತಲೇ ಇರುತ್ತಾರೆ. ವಿಧಿಹೀನ ಯಜ್ಞವನ್ನು ಮಾಡುವ ಯಜಮಾನನು ಕೂಡಲೇ ನಾಶವಾಗುತ್ತಾನೆ.॥18॥

ಮೂಲಮ್ - 19

ತದ್ಯಥಾ ವಿಧಿಪೂರ್ವಂ ಮೇ ಕ್ರತುರೇಷ ಸಮಾಪ್ಯತೇ ।
ತಥಾ ವಿಧಾನಂ ಕ್ರಿಯತಾಂ ಸಮರ್ಥಾಃ ಕರಣೇಷ್ವಿಹ ॥

ಅನುವಾದ

ಆದ್ದರಿಂದ ನನ್ನ ಯಜ್ಞವು ವಿಧಿಪೂರ್ವಕ ಸಾಂಗವಾಗಿ ನಡೆಯುವಂತೆ ಉಪಾಯ ಮಾಡಲಾಗುವುದು. ನೀವೆಲ್ಲರೂ ಇಂತಹ ಸಾಧನೆಗಳನ್ನು ಸಿದ್ಧಗೊಳಿಸಲು ಸಮರ್ಥರಾಗಿರುವಿರಿ.॥19॥

ಮೂಲಮ್ - 20

ತಥೇತಿ ಚ ತತಃ ಸರ್ವೇ ಮಂತ್ರಿಣಃ ಪ್ರತ್ಯಪೂಜಯನ್ ।
ಪಾರ್ಥಿವೇಂದ್ರಸ್ಯ ತದ್ವಾಕ್ಯಂ ಯಥಾಜ್ಞಪ್ತಮಕುರ್ವತ ॥

ಅನುವಾದ

ಆಗ ‘ಸರಿ’ ಎಂದು ಹೇಳಿ ಎಲ್ಲ ಮಂತ್ರಿಗಳು ರಾಜರಾಜೇಶ್ವರ ದಶರಥನ ಮಾತನ್ನು ಆದರಿಸಿ, ಅವನ ಆಜ್ಞೆಗನುಸಾರ ಎಲ್ಲ ವ್ಯವಸ್ಥೆಯನ್ನು ಮಾಡಿದರು.॥20॥

ಮೂಲಮ್ - 21

ತತೋ ದ್ವಿಜಾಸ್ತೇ ಧರ್ಮಜ್ಞಮಸ್ತುವನ್ಪಾರ್ಥಿವರ್ಷಭಮ್ ।
ಅನುಜ್ಞಾತಾಸ್ತತಃ ಸರ್ವೇ ಪುನರ್ಜಗ್ಮುರ್ಯಥಾಗತಮ್ ॥

ಅನುವಾದ

ಅನಂತರ ಆ ಬ್ರಾಹ್ಮಣರೂ ಕೂಡ ಧರ್ಮಜ್ಞ ನೃಪಶ್ರೇಷ್ಠ ದಶರಥನನ್ನು ಪ್ರಶಂಸಿಸುತ್ತಾ ಅವನ ಅಪ್ಪಣೆ ಪಡೆದು ಅವರವರ ಮನೆಗಳಿಗೆ ತೆರಳಿದರು.॥21॥

ಮೂಲಮ್ - 22

ಗತೇಷು ತೇಷು ವಿಪ್ರೇಷು ಮಂತ್ರಿಣಸ್ತಾನ್ನರಾಧಿಪಃ ।
ವಿಸರ್ಜಯಿತ್ವಾ ಸ್ವಂ ವೇಶ್ಮ ಪ್ರವಿವೇಶ ಮಹಾಮತಿಃ ॥

ಅನುವಾದ

ಆ ಬ್ರಾಹ್ಮಣರು ಹೊರಟುಹೋದ ಬಳಿಕ, ಮಂತ್ರಿಗಳನ್ನು ಬೀಳ್ಕೊಟ್ಟು ಮಹಾ ಬುದ್ಧಿವಂತ ನರೇಶನು ತನ್ನ ಅಂತಃಪುರಕ್ಕೆ ನಡೆದನು.॥22॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಹನ್ನರಡನೆಯ ಸರ್ಗ ಪೂರ್ಣವಾಯಿತು. ॥12॥