वाचनम्
ಭಾಗಸೂಚನಾ
ಸುಮಂತ್ರನಿಂದ ಋಷ್ಯಶೃಂಗರ ಮಹಿಮೆಯನ್ನು ಕೇಳಿ, ದಶರಥನು ಸಪರಿವಾರ ಸಹಿತ ಅಂಗದೇಶಕ್ಕೆ ಹೋಗಿ ಅವರನ್ನು ಕರೆತಂದುದು
ಮೂಲಮ್ - 1
ಭೂಯ ಏವ ಹಿ ರಾಜೇಂದ್ರ ಶೃಣು ಮೇ ವಚನಂ ಹಿತಮ್ ।
ಯಥಾ ಸ ದೇವಪ್ರವರಃ ಕಥಾಯಾಸ ಬುದ್ಧಿಮಾನ್ ॥
ಅನುವಾದ
ಅನಂತರ ಸುಮಂತ್ರನು ಪುನಃ ಹೇಳಿದನು - ರಾಜೇಂದ್ರನೇ! ದೇವತೆಗಳಲ್ಲಿ ಶ್ರೇಷ್ಠರಾದ ಬುದ್ಧಿವಂತ ಸನತ್ಕುವಾರರು ಋಷಿಗಳಿಗೆ ಹೇಳಿದುದನ್ನು ತಮ್ಮ ಹಿತದ ಮಾತನ್ನು ಪುನಃ ಕೇಳಿರಿ.॥1॥
ಮೂಲಮ್ - 2
ಇಕ್ಷ್ವಾಕೂಣಾಂ ಕುಲೇ ಜಾತೋ ಭವಿಷ್ಯತಿ ಸುಧಾರ್ಮಿಕಃ ।
ನಾಮ್ನಾ ದಶರಥೋ ರಾಜಾಶ್ರೀಮಾನ್ಸತ್ಯಪ್ರತಿಶ್ರವಃ ॥
ಅನುವಾದ
ಅವರು ಹೇಳಿದ್ದರು - ಇಕ್ವಾಕ್ಷು ವಂಶದಲ್ಲಿ ದಶರಥನೆಂಬ ಪ್ರಸಿದ್ಧ, ಪರಮಧಾರ್ಮಿಕ ಸತ್ಯಪ್ರತಿಜ್ಞ, ರಾಜನೊಬ್ಬನು ಆಗುವನು.॥2॥
ಮೂಲಮ್ - 3
ಅಂಗರಾಜೇನ ಸಖ್ಯಂ ಚ ತಸ್ಯ ರಾಜ್ಞೋ ಭವಿಷ್ಯತಿ ।
ಕನ್ಯಾ ಚಾಸ್ಯ ಮಹಾಭಾಗಾ ಶಾಂತಾ ನಾಮ ಭವಿಷ್ಯತಿ ॥
ಮೂಲಮ್ - 4
ಪುತ್ರಸ್ತ್ವಂಗಸ್ಯ ರಾಜ್ಞಸ್ತು ರೋಮಪಾದ ಇತಿ ಶ್ರುತಃ ।
ತಂ ಸ ರಾಜಾ ದಶರಥೋ ಗಮಿಷ್ಯತಿ ಮಹಾಯಶಾಃ ॥
ಮೂಲಮ್ - 5
ಅನಪತ್ಯೋಽಸ್ಮಿ ಧರ್ಮಾತ್ಮನ್ ಶಾಂತಾಭರ್ತಾ ಮಮ ಕ್ರತುಮ್ ।
ಆಹರೇತ ತ್ವಯಾಽಽಜ್ಞಪ್ತಃ ಸಂತಾನಾರ್ಥಂ ಕುಲಸ್ಯ ಚ ॥
ಅನುವಾದ
ಅವನಿಗೆ ಅಂಗರಾಜನೊಂದಿಗೆ ಸ್ನೇಹ ಉಂಟಾದೀತು. ಅಂಗರಾಜನಿಗೆ ಓರ್ವಳು ಪರಮ ಸೌಭಾಗ್ಯಶಾಲಿನಿ ಶಾಂತಾ ಎಂಬ ಕನ್ಯೆ ಹುಟ್ಟುವಳು. ಅಂಗದೇಶದ ರಾಜಕುಮಾರನ ಹೆಸರು ‘ರೋಮಪಾದ’ ಎಂದಿರುವುದು. ಮಹಾಯಶಸ್ವೀ ದಶರಥರಾಜನು ಅವನ ಬಳಿಗೆ ಹೋಗಿ ಹೇಳುವನು - ಧರ್ಮಾತ್ಮಾ! ನಾನು ಸಂತಾನಹೀನನಾಗಿದ್ದೇನೆ, ನೀವು ಅಪ್ಪಣೆ ಕೊಟ್ಟರೆ ಶಾಂತಾಳ ಪತಿ ಋಷ್ಯಶೃಂಗ ಮುನಿಯು ನಮ್ಮಲ್ಲಿಗೆ ಬಂದು ಯಜ್ಞಮಾಡಿಸಲಿ. ಇದರಿಂದ ನನಗೆ ಪುತ್ರಪ್ರಾಪ್ತಿಯಾಗುವುದು ಹಾಗೂ ನನ್ನ ವಂಶದ ರಕ್ಷಣೆ ಆಗುವುದು.॥3-5॥
ಮೂಲಮ್ - 6
ಶ್ರುತ್ವಾ ರಾಜ್ಞೋಽಥ ತದ್ವಾಕ್ಯಂ ಮನಸಾಸ ವಿಚಿಂತ್ಯ ಚ ।
ಪ್ರದಾಸ್ಯತೇ ಪುತ್ರವಂತಂ ಶಾಂತಾಭರ್ತಾರಮಾತ್ಮವಾನ್ ॥
ಅನುವಾದ
ರಾಜನ ಮಾತನ್ನು ಕೇಳಿ ಮನಸ್ಸಿನಲ್ಲೇ ವಿಚಾರಮಾಡಿ ಮಹಾತ್ಮನಾದ ರೋಮಪಾದ ರಾಜನು ಸಪುತ್ರಕನಾದ ಶಾಂತಾಳ ಪತಿ ಋಷ್ಯಶೃಂಗರನ್ನು ಅವರೊಂದಿಗೆ ಕಳಿಸಿಕೊಡುತ್ತಾನೆ.॥6॥
ಮೂಲಮ್ - 7
ಪ್ರತಿಗೃಹ್ಯ ಚ ತಂ ವಿಪ್ರಂ ಸ ರಾಜಾ ವಿಗತಜ್ವರಃ ।
ಆಹರಿಷ್ಯತಿ ತಂ ಯಜ್ಞಂ ಪ್ರಹೃಷ್ಟೇನಾಂತರಾತ್ಮನಾ ॥
ಅನುವಾದ
ಬ್ರಾಹ್ಮಣ ಋಷ್ಯಶೃಂಗರನ್ನು ಪಡೆದು ದಶರಥನ ಎಲ್ಲ ಚಿಂತೆ ದೂರವಾಗುವುದು. ಸಂತೋಷಭರಿತನಾಗಿ ಅವನು ಆ ಯಜ್ಞದ ಅನುಷ್ಠಾನ ಮಾಡುವನು.॥7॥
ಮೂಲಮ್ - 8
ತಂ ಚ ರಾಜಾ ದಶರಥೋ ಯಶಸ್ಕಾಮಃ ಕೃತಾಂಜಲಿಃ ।
ಋಷ್ಯಶೃಂಗಂ ದ್ವಿಜಶ್ರೇಷ್ಠಂ ವರಯಿಷ್ಯತಿ ಧರ್ಮವಿತ್ ॥
ಮೂಲಮ್ - 9
ಯಜ್ಞಾರ್ಥಂ ಪ್ರಸವಾರ್ಥಂ ಚ ಸ್ವರ್ಗಾರ್ಥಂ ಚ ನರೇಶ್ವರಃ ।
ಲಭತೇ ಚ ಸ ತಂ ಕಾಮಂ ದ್ವಿಜಮುಖ್ಯಾದ್ ವಿಶಾಂಪತಿಃ ॥
ಅನುವಾದ
ಯಶೋಕಾಮಿಯಾದ ಧರ್ಮಜ್ಞ ದಶರಥನು ಕೈಮುಗಿದು ದ್ವಿಜ ಶ್ರೇಷ್ಠ ಋಷ್ಯಶೃಂಗರನ್ನು ತನ್ನ ಯಜ್ಞಕ್ಕಾಗಿ ವರಣ ಮಾಡುವನು. ಆ ಪ್ರಜಾಪಾಲಕ ಅರಸು ಆ ಶ್ರೇಷ್ಠ ಬ್ರಹ್ಮರ್ಷಿಗಳ ಮೂಲಕ ತನ್ನ ಅಭೀಷ್ಟವಾದ ಸ್ವರ್ಗ ಹಾಗೂ ಪುತ್ರರನ್ನು ಪಡೆದುಕೊಳ್ಳುವನು.॥8-9॥
ಮೂಲಮ್ - 10
ಪುತ್ರಾಶ್ಚಾಸ್ಯ ಭವಿಷ್ಯಂತಿ ಚತ್ವಾರೋಽಮಿತವಿಕ್ರಮಾಃ ।
ವಂಶಪ್ರತಿಷ್ಠಾನಕರಾಃ ಸರ್ವಭೋಕ್ತ್ರೇಷು ವಿಶ್ರುತಾಃ ॥
ಅನುವಾದ
ದಶರಥನಿಗೆ ನಾಲ್ಕು ಪುತ್ರರು ಆಗುವರು. ಅವರು ಅಪ್ರಮೇಯ ಪರಾಕ್ರಮೀ, ವಂಶದ ಕೀರ್ತಿಯನ್ನು ಹೆಚ್ಚಿಸುವವರೂ, ಎಲ್ಲೆಡೆ ವಿಖ್ಯಾತರೂ ಆಗುವರು.॥10॥
ಮೂಲಮ್ - 11
ಏವಂ ಸ ದೇವಪ್ರವರಃ ಪೂರ್ವಂ ಕಥಿತವಾನ್ ಕಥಾಮ್ ।
ಸನತ್ಕುಮಾರೋ ಭಗವಾನ್ಪುರಾ ದೇವಯುಗೇ ಪ್ರಭುಃ ॥
ಅನುವಾದ
ಮಹಾರಾಜಾ! ಮೊದಲು ಕೃತಯುಗದಲ್ಲಿ ದೇವಶ್ರೇಷ್ಠರಾದ, ಪೂಜ್ಯರಾದ, ಸಮರ್ಥರಾದ ಸನತ್ಕುವಾರರು ಋಷಿಗಳ ಮುಂದೆ ಹೀಗೆ ಹೇಳಿದ್ದರು.॥11॥
ಮೂಲಮ್ - 12
ಸ ತ್ವಂ ಪುರುಷಶಾರ್ದೂಲ ಸಮಾನಯ ಸುಸತ್ಕೃತಮ್ ।
ಸ್ವಯಮೇವ ಮಹಾರಾಜ ಗತ್ವಾ ಸಬಲವಾಹನಃ ॥
ಅನುವಾದ
ಪುರುಷಸಿಂಹ ಮಹಾರಾಜನೇ! ಆದ್ದರಿಂದ ನೀವು ಸ್ವತಃ ಪರಿವಾರ ಸಹಿತ ಅಂಗದೇಶಕ್ಕೆ ಹೋಗಿ ಮುನಿಕುವಾರ ಋಷ್ಯಶಂಗರನ್ನು ಸತ್ಕಾರ ಪೂರ್ವಕ ಇಲ್ಲಿಗೆ ಕರೆದುಕೊಂಡು ಬನ್ನಿ.॥12॥
ಮೂಲಮ್ - 13½
ಸಮಂತ್ರಸ್ಯ ವಚಃ ಶ್ರುತ್ವಾ ಹೃಷ್ಟೋ ದಶರಥೋಽಭವತ್ ।
ಅನುಮಾನ್ಯ ವಸಿಷ್ಠಂ ಚ ಸೂತವಾಕ್ಯಂ ನಿಶಾಮ್ಯ ಚ ॥
ಸಾಂತಃಪುರಃ ಸಹಾಮಾತ್ಯಃ ಪ್ರಯಯೌ ಯತ್ರ ಸ ದ್ವಿಜಃ ।
ಅನುವಾದ
ಸುಮಂತ್ರನ ಮಾತಿನಿಂದ ದಶರಥನಿಗೆ ಅತೀವ ಹರ್ಷವಾಯಿತು. ಅವನು ಮುನಿವರ ವಸಿಷ್ಠರಿಗೂ ಈ ಮಾತನ್ನು ತಿಳಿಸಿ, ಅವರ ಅನುಮತಿಯನ್ನು ಪಡೆದು ಪಟ್ಟದ ರಾಣಿಯರೊಂದಿಗೆ ಹಾಗೂ ಮಂತ್ರಿಗಳೊಂದಿಗೆ ಋಷ್ಯಶೃಂಗನಿದ್ದ ಅಂಗ ದೇಶಕ್ಕೆ ಪ್ರಯಾಣ ಮಾಡಿದನು.॥13½॥
ಮೂಲಮ್ - 14
ವನಾನಿ ಸರಿತಶ್ಚೈವ ವ್ಯತಿಕ್ರಮ್ಯ ಶನೈಃ ಶನೈಃ ॥
ಅಭಿಚಕ್ರಾಮ ತಂ ದೇಶಂ ಯತ್ರ ವೈ ಮುನಿಪುಂಗವಃ ।
ಅನುವಾದ
ಮಾರ್ಗದಲ್ಲಿ ಅನೇಕಾನೇಕ ವನಗಳ, ನದಿ-ವನಗಳ ಸೊಬಗನ್ನು ನೋಡುತ್ತಾ, ನಿಧಾನವಾಗಿ ನಡೆಯುತ್ತಾ ಮುನಿವರ ಋಷ್ಯಶೃಂಗ ವಿರಾಜಿಸುತ್ತಿದ್ದ ದೇಶಕ್ಕೆ ತಲುಪಿದನು.॥14॥
ಮೂಲಮ್ - 15
ಆಸಾದ್ಯ ತಂ ದ್ವಿಜಶ್ರೇಷ್ಠಂ ರೋಮಪಾದಸಮೀಪಗಮ್ ॥
ಋಷಿಪುತ್ರಂ ದದರ್ಶಾಥೋ ದೀಪ್ಯಮಾನಮಿವಾನಲಮ್ ।
ಅನುವಾದ
ಅಲ್ಲಿಗೆ ಹೋಗಿ ಅವನು ದ್ವಿಜಶ್ರೇಷ್ಠ ಪ್ರಜ್ವಲಿತ ಅಗ್ನಿಯಂತೆ ತೇಜಸ್ವಿಯಾದ ಋಷಿಕುಮಾರನು ರೋಮಪಾದನ ಬಳಿ ಕುಳಿತಿರುವುದನ್ನು ನೋಡಿದನು.॥15॥
ಮೂಲಮ್ - 16
ತತೋ ರಾಜಾ ಯಥಾಯೋಗ್ಯಂ ಪೂಜಾಂ ಚಕ್ರೇ ವಿಶೇಷತಃ ॥
ಮೂಲಮ್ - 17½
ಸಖಿತ್ವಾತ್ತಸ್ಯ ವೈ ರಾಜ್ಞಃ ಪ್ರಹೃಷ್ಟೇನಾಂತರಾತ್ಮನಾ ।
ರೋಮಪಾದೇನ ಚಾಖ್ಯಾತಮೃಷಿಪುತ್ರಾಯ ಧೀಮತೇ ॥
ಸಖ್ಯಂ ಸಂಬಂಧಕಂ ಚೈವ ತದಾ ತಂ ಪ್ರತ್ಯಪೂಜಯತ್ ।
ಅನುವಾದ
ಬಳಿಕ ರೋಮಪಾದ ರಾಜನು ಮಿತ್ರನಾದ್ದರಿಂದ ಅತ್ಯಂತ ಸಂತೋಷದಿಂದ ಮಹಾರಾಜಾ ದಶರಥನನ್ನು ಶಾಸ್ತ್ರೋಕ್ತವಿಧಿಯಿಂದ ವಿಶೇಷವಾಗಿ ಪೂಜಿಸಿದನು. ಬುದ್ಧಿವಂತ ಋಷಿಕುಮಾರ ಋಷ್ಯಶಂಗನಿಗೆ ದಶರಥನೊಂದಿಗೆ ತನ್ನ ಮಿತ್ರತೆಯನ್ನು ತಿಳಿಸಿದನು. ಆಗ ಅವನೂ ಕೂಡ ರಾಜನನ್ನು ಸನ್ಮಾನಿಸಿದನು.॥16-17½॥
ಮೂಲಮ್ - 18
ಏವಂ ಸುಸತ್ಕೃತಸ್ತೇನ ಸಹೋಷಿತ್ವಾ ನರರ್ಷಭಃ ॥
ಮೂಲಮ್ - 19½
ಸಪ್ತಾಷ್ಟ ದಿವಸಾನ್ರಾಜಾ ರಾಜಾನಮಿದಮ ಬ್ರವೀತ್ ।
ಶಾಂತಾ ತವ ಸುತಾರಾಜನ್ಸಹ ಭರ್ತ್ರಾ ವಿಶಾಂಪತೇ ॥
ಮದೀಯಂ ನಗರಂ ಯಾತು ಕಾರ್ಯಂ ಹಿ ಮಹದುದ್ಯತಮ್ ।
ಅನುವಾದ
ಹೀಗೆ ಚೆನ್ನಾದ ಆದರ ಸತ್ಕಾರ ಪಡೆದು ನರಶ್ರೇಷ್ಠ ದಶರಥನು ರೋಮಪಾದನಲ್ಲಿ ಏಳೆಂಟು ದಿನ ಉಳಿದು ಕೊಂಡನು. ಅನಂತರ ಅವನು ಅಂಗರಾಜನಲ್ಲಿ - ಪ್ರಜಾಪಾಲಕ ನರೇಶನೇ! ನಿನ್ನ ಪುತ್ರೀ ಶಾಂತಾಳ ಪತಿಯೊಂದಿಗೆ ನನ್ನ ನಗರಕ್ಕೆ ಪದಾರ್ಪಣ ಮಾಡಬೇಕು; ಏಕೆಂದರೆ ಅಲ್ಲಿ ಒಂದು ಮಹತ್ತರ ಕಾರ್ಯ ಎದುರಾಗಿದೆ, ಎಂದು ಹೇಳಿದನು.॥18-19½॥
ಮೂಲಮ್ - 20
ತಥೇತಿ ರಾಜಾ ಸಂಶ್ರುತ್ಯ ಗಮನಂ ತಸ್ಯ ಧೀಮತಃ ॥
ಮೂಲಮ್ - 21
ಉವಾಚ ವಚನಂ ವಿಪ್ರಂ ಗಚ್ಛ ತ್ವಂ ಸಹ ಭಾರ್ಯಯಾ ।
ಋಷಿಪುತ್ರಃ ಪ್ರತಿಶ್ರುತ್ಯ ತಥೇತ್ಯಾಹ ನೃಪಂ ತದಾ ॥
ಅನುವಾದ
ರೋಮಪಾದ ರಾಜನು ಬಹಳ ಒಳ್ಳೆಯದು ಎಂದು ಹೇಳಿ ಬುದ್ಧಿವಂತ ಮಹರ್ಷಿಯು ಹೋಗಲು ಒಪ್ಪಿ ಕೊಂಡು ಋಷ್ಯಶೃಂಗನಲ್ಲಿ ಹೇಳಿದನು - ವಿಪ್ರವರ್ಯರೇ! ತಾವು ಶಾಂತಾಳೊಂದಿಗೆ ದಶರಥನಲ್ಲಿಗೆ ಬಿಜಯಂಗೈಯಿರಿ. ರಾಜನ ಅಪ್ಪಣೆ ಪಡೆದು ಆ ಋಷಿಪುತ್ರನು ‘ಹಾಗೆಯೇ ಆಗಲಿ’ ಎಂದು ಹೇಳಿ ದಶರಥನೊಂದಿಗೆ ಹೋಗಲು ಸಮ್ಮತಿಸಿದನು.॥20-21॥
ಮೂಲಮ್ - 22
ಸ ನೃಪೇಣಾಭ್ಯನುಜ್ಞಾತಃ ಪ್ರಯಯೌ ಸಹ ಭಾರ್ಯಯಾ ।
ತಾವನ್ಯೋನ್ಯಾಂಜಲಿಂ ಕೃತ್ವಾ ಸ್ನೇಹಾತ್ಸಂಶ್ಲಿಷ್ಯ ಚೋರಸಾ ॥
ಮೂಲಮ್ - 23
ನನಂದತುರ್ದಶರಥೋ ರೋಮಪಾದಶ್ಚ ವೀರ್ಯವಾನ್ ।
ತತಃ ಸುಹೃದಮಾಪೃಚ್ಛ್ಯ ಪ್ರಸ್ಥಿತೋ ರಘುನಂದನಃ ॥
ಅನುವಾದ
ರೋಮಪಾದನ ಅನುಮತಿ ಪಡೆದು ಋಷ್ಯಶಂಗನು ಪತ್ನಿಯೊಂದಿಗೆ ಅಲ್ಲಿಂದ ಹೊರಟನು. ಆಗ ರೋಮಪಾದ ರಾಜನು ಹಾಗೂ ದಶರಥರಾಜನು ಪರಸ್ಪರ ಸ್ನೇಹದಿಂದ ಎದೆಗೊತ್ತಿಕೊಂಡರು ಹಾಗೂ ಅಭಿವಂದಿಸಿದರು. ಮತ್ತೆ ಮಿತ್ರನಿಂದ ಬೀಳ್ಕೊಟ್ಟು ರಘುಕುಲದ ಭೂಷಣ ದಶರಥನು ಅಲ್ಲಿಂದ ಹೊರಟನು.॥22-23॥
ಮೂಲಮ್ - 24½
ಪೌರೇಷು ಪ್ರೇಷಯಾಮಾಸ ದೂತಾನ್ ವೈ ಶೀಘ್ರಗಾಮಿನಃ ।
ಕ್ರಿಯತಾಂ ನಗರಂ ಸರ್ವಂ ಕ್ಷಿಪ್ರಮೇವ ಸ್ವಲಂಕೃತಮ್ ॥
ಧೂಪಿತಂ ಸಿಕ್ತಸಂಮೃಷ್ಟಂ ಪತಾಕಾಭಿರಲಂಕೃತಮ್ ।
ಅನುವಾದ
ದಶರಥನು ಪುರವಾಸಿಯರ ಬಳಿಗೆ ತನ್ನ ಶೀಘ್ರಗಾಮಿ ದೂತರನ್ನು ಕಳಿಸಿ - ‘ಎಲ್ಲ ನಾಗರಿಕರು ಶೀಘ್ರವಾಗಿ ಸ್ವಾಗತಕ್ಕೆ ಸಿದ್ಧವಾಗಲಿ, ಎಲ್ಲೆಡೆ ಸುಗಂಧಿತ ಧೂಪವನ್ನು ಹಾಕಲಿ. ನಗರದ ರಾಜಬೀದಿಗಳನ್ನು ಗುಡಿಸಿ, ಸುಗಂಧಿತ ನೀರನ್ನು ಚಿಮುಕಿಸಲಿ ಹಾಗೂ ಧ್ವಜ-ಪತಾಕೆಗಳಿಂದ ನಗರವೆಲ್ಲವನ್ನು ಅಲಂಕರಿಸಲಿ’ ಎಂದು ಹೇಳಿ ಕಳಿಸಿದನು.॥24½॥
ಮೂಲಮ್ - 25½
ತತಃ ಪ್ರಹೃಷ್ಟಾಃ ಪೌರಾಸ್ತೇ ಶ್ರುತ್ವಾ ರಾಜಾನಮಾಗತಮ್ ॥
ತಥಾ ಚಕ್ರುಶ್ಚ ತತ್ ಸರ್ವಂ ರಾಜ್ಞಾ ಯತ್ಪ್ರೇಷಿತಂ ತದಾ ।
ಅನುವಾದ
ರಾಜನ ಆಗಮನವನ್ನು ಕೇಳಿ ಪ್ರಜಾಜನರು ಸಂತೋಷಗೊಂಡರು. ಮಹಾರಾಜನು ಹೇಳಿಕಳಿಸಿದಂತೆಯೇ ಎಲ್ಲ ವ್ಯವಸ್ಥೆಯನ್ನು ಮಾಡಿದರು.॥25½॥
ಮೂಲಮ್ - 26½
ತತಃ ಸ್ವಲಂಕೃತಂ ರಾಜಾ ನಗರಂ ಪ್ರವಿವೇಶ ಹ ॥
ಶಂಖದುಂದುಭಿನಿರ್ಘೋಷೈಃ ಪುರಸ್ಕೃತ್ವಾ ದ್ವಿಜರ್ಷಭಮ್ ।
ಅನುವಾದ
ಅನಂತರ ದಶರಥ ರಾಜನು ಶಂಖ-ದುಂದುಭಿ ಮೊದಲಾದ ವಾದ್ಯಗಳ ಧ್ವನಿಗಳೊಂದಿಗೆ ವಿಪ್ರವರ ಋಷ್ಯಶೃಂಗನನ್ನು ಮುಂದಿಟ್ಟುಕೊಂಡು, ಅಲಂಕೃತವಾದ ತನ್ನ ನಗರವನ್ನು ಪ್ರವೇಶಿಸಿದನು.॥26½॥
ಮೂಲಮ್ - 27
ತತಃ ಪ್ರಮುದಿತಾಃ ಸರ್ವೇ ದೃಷ್ಟ್ವಾ ವೈ ನಾಗರಾ ದ್ವಿಜಮ್ ॥
ಮೂಲಮ್ - 28
ಪ್ರವೇಶ್ಯಮಾನಂ ಸತ್ಕೃತ್ಯ ನರೇಂದ್ರೇಣೇಂದ್ರಕರ್ಮಣಾ ।
ಯಥಾ ದಿವಿ ಸುರೇಂದ್ರೇಣ ಸಹಸ್ರಾಕ್ಷೇಣ ಕಾಶ್ಯಪಮ್ ॥
ಅನುವಾದ
ಆ ದ್ವಿಜಕುಮಾರನನ್ನು ದರ್ಶಿಸಿ ಎಲ್ಲ ನಗರವಾಸಿಗಳು ಬಹಳ ಸಂತಸಗೊಂಡರು. ಅವರು ಇಂದ್ರನಂತಹ ಪರಾಕ್ರಮಿ ನರೇಂದ್ರ ದಶರಥನೊಂದಿಗೆ ಪುರಪ್ರವೇಶ ಮಾಡಿದರು. ದೇವತೆಗಳು ಸಹಸ್ರಾಕ್ಷ ಇಂದ್ರನೊಂದಿಗೆ ಕಶ್ಯಪನಂದನ ಭಗವಾನ್ ವಾಮನನನ್ನು ಆದರಿಸಿದಂತೆ, ಋಷ್ಯಶೃಂಗರನ್ನು ನಾಗರೀಕರು ಸತ್ಕರಿಸಿದರು.॥27-28॥
ಮೂಲಮ್ - 29
ಅಂತಪುರಂ ಪ್ರವೇಶ್ಯೈನಂ ಪೂಜಾಂ ಕೃತ್ವಾ ಚ ಶಾಸ್ತ್ರತಃ ।
ಕೃತಕೃತ್ಯಂ ತದಾತ್ಮಾನಂ ಮೇನೇ ತಸ್ಯೋಪವಾಹನಾತ್ ॥
ಅನುವಾದ
ಋಷಿಯನ್ನು ಅಂತಃಪುರಕ್ಕೆ ಕರೆದುಕೊಂಡು ಹೋಗಿ ರಾಜನು ಶಾಸ್ತ್ರವಿಧಿಯಿಂದ ಅವರನ್ನು ಪೂಜಿಸಿದನು. ಅವರು ತನ್ನಲ್ಲಿಗೆ ಬಂದಿರುವುದರಿಂದ ತಾನು ಕೃತಕೃತ್ಯನೆಂದು ತಿಳಿಸಿದನು.॥29॥
ಮೂಲಮ್ - 30
ಅಂತಃಪುರಾಣಿ ಸರ್ವಾಣಿ ಶಾಂತಾಂ ದೃಷ್ಟ್ವಾ ತಥಾಗತಾಮ್ ।
ಸಹ ಭರ್ತಾ ವಿಶಾಲಾಕ್ಷೀಂ ಪ್ರೀತ್ಯಾನಂದಮುಪಾಗಮನ್ ॥
ಅನುವಾದ
ವಿಶಾಲಾಕ್ಷಿಯಾದ ಶಾಂತಾಳು ಹೀಗೆ ತನ್ನ ಪತಿಯೊಂದಿಗೆ ಕುಳಿತಿರುವುದನ್ನು ಕಂಡು ಅಂತಃಪುರದ ರಾಣಿಯರೆಲ್ಲರಿಗೂ ಬಹಳ ಸಂತೋಷವಾಗಿ ಆನಂದಮಗ್ನರಾದರು.॥30॥
ಮೂಲಮ್ - 31
ಪೂಜ್ಯಮಾನಾ ಚ ತಾಭಿಃ ಸಾ ರಾಜ್ಞಾ ಚೈವ ವಿಶೇಷತಃ ।
ಉವಾಸ ತತ್ರ ಸುಖಿತಾ ಕಂಚಿತ್ಕಾಲಂ ಸಹದ್ವಿಜಾ ॥
ಅನುವಾದ
ಶಾಂತಾಳೂ ಕೂಡ ರಾಣಿಯರಿಂದ ಹಾಗೂ ವಿಶೇಷವಾಗಿ ದಶರಥನಿಂದ ಆದರ ಸತ್ಕಾರ ಪಡೆದು, ಕೆಲವು ಕಾಲದವರೆಗೆ ತನ್ನ ಪತಿಯಾದ ಋಷ್ಯಶೃಂಗರೊಂದಿಗೆ ಬಹಳ ಸುಖವಾಗಿ ಅಲ್ಲಿದ್ದಳು.॥31॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಹನ್ನೊಂದನೆಯ ಸರ್ಗ ಪೂರ್ಣವಾಯಿತು. ॥11॥