वाचनम्
ಭಾಗಸೂಚನಾ
ಸುಮಂತ್ರನು ದಶರಥನಿಗೆ ಋಷ್ಯಶೃಂಗನನ್ನು ಕರೆತರಲು ಸಲಹೆ ನೀಡಿದುದು, ಶಾಂತಾದೇವಿಯ ವಿವಾಹ ಪ್ರಸಂಗವನ್ನು ವಿವರಿಸಿ ಹೇಳಿದುದು
ಮೂಲಮ್ - 1
ಏತಚ್ಛ್ರುತ್ವಾ ರಹಃ ಸೂತೋ ರಾಜಾನಮಿದಮಬ್ರವೀತ್ ।
ಶ್ರೂಯತಾಂ ತತ್ಪುರಾವೃತ್ತಂ ಪುರಾಣೇ ಚ ಮಯಾ ಶ್ರುತಮ್ ॥
ಅನುವಾದ
ಪುತ್ರಪ್ರಾಪ್ತಿಗಾಗಿ ಅಶ್ವಮೇಧ ಯಜ್ಞವನ್ನು ಮಾಡುವ ಮಾತನ್ನು ಕೇಳಿ, ಸುಮಂತ್ರನು ಏಕಾಂತದಲ್ಲಿ ರಾಜನ ಬಳಿ ಹೇಳಿದನು - ಮಹಾರಾಜರೇ! ನಾನು ಪುರಾಣದಲ್ಲಿ ಕೇಳಿದ ಒಂದು ಪುರಾತನ ಇತಿಹಾಸವನ್ನು ಆಲಿಸಿರಿ.॥1॥
ಮೂಲಮ್ - 2½
ಋತ್ವಿಗ್ಭಿರುಪದಿಷ್ಟೋಽಯಂ ಪುರಾವೃತ್ತೋಮಯಾಶ್ರುತಃ ।
ಸನತ್ಕುಮಾರೋ ಭಗವಾನ್ಪೂರ್ವಂ ಕಥಿತವಾನ್ಕಥಾಮ್ ॥
ಋಷೀಣಾಂ ಸನ್ನಿಧೌ ರಾಜಂ ಸ್ತವ ಪುತ್ರಾಗಮಂ ಪ್ರತಿ ।
ಅನುವಾದ
ಮಕ್ಕಳ ಸಲುವಾಗಿ ಈ ಅಶ್ವಮೇಧಯಜ್ಞರೂಪೀ ಉಪಾಯವನ್ನು ಋತ್ವಿಜರು ಉಪದೇಶಿಸಿರುವರು, ಆದರೆ ನಾನು ಇತಿಹಾಸದಲ್ಲಿ ಕೆಲವು ವಿಶೇಷ ಮಾತುಗಳನ್ನು ಕೇಳಿರುವೆನು. ರಾಜನೇ! ಹಿಂದೆ ಪೂಜ್ಯರಾದ ಸನತ್ಕುಮಾರರು ಋಷಿಗಳಲ್ಲಿ ನಿನ್ನ ಪುತ್ರಪ್ರಾಪ್ತಿಯ ಸಂಬಂಧದಲ್ಲಿ ಹೇಳಿದ ಒಂದು ಕಥೆಯನ್ನು ಹೇಳಿದ್ದರು. ಅದನ್ನು ಕೇಳು.॥2½॥
ಮೂಲಮ್ - 3
ಕಾಶ್ಯಪಸ್ಯತು ಪುತ್ರೋಽಸ್ತಿ ವಿಭಾಂಡಕ ಇತಿಶ್ರುತಃ ॥
ಮೂಲಮ್ - 4
ಋಶ್ಯಶೃಙ್ಗ ಇತಿ ಖ್ಯಾತಸ್ತಸ್ಯ ಪುತ್ರೋ ಭವಿಷ್ಯತಿ ।
ಸ ವನೇ ನಿತ್ಯಸಂವೃದ್ಧೋ ಮುನಿರ್ವನಚರಃ ಸದಾ ॥
ಅನುವಾದ
ಅವರು ಹೇಳಿದರು-ಮುನಿಗಳಿರಾ! ಮಹರ್ಷಿ ಕಾಶ್ಯಪರಿಗೆ ವಿಭಾಂಡಕ ಎಂಬ ಪುತ್ರನಿರುವನು. ಅವನಿಗೆ ಋಷ್ಯ ಶೃಂಗನೆಂದು ಪ್ರಸಿದ್ಧನಾದ ಓರ್ವ ಪುತ್ರನಾಗುವನು. ಆ ಋಷ್ಯಶೃಂಗನು ಅರಣ್ಯದಲ್ಲೇ ಇದ್ದು ಪ್ರವರ್ಧಮಾನನಾಗುವನು.॥3-4॥
ಮೂಲಮ್ - 5½
ನಾನ್ಯಂ ಜಾನಾತಿ ವಿಪ್ರೇಂದ್ರೋ ನಿತ್ಯಂ ಪಿತ್ರನುವರ್ತನಾತ್ ।
ದ್ವೈವಿಧ್ಯಂ ಬ್ರಹ್ಮಚರ್ಯಸ್ಯ ಭವಿಷ್ಯತಿ ಮಹಾತ್ಮನಃ ॥
ಲೋಕೇಷು ಪ್ರಥಿತಂ ರಾಜನ್ ವಿಪ್ರೈಶ್ಚ ಕಥಿತಂ ಸದಾ ।
ಅನುವಾದ
ಸದಾಕಾಲ ತಂದೆಯೊಂದಿಗೆ ಇರುತ್ತಿದ್ದ ಕಾರಣ ಋಷ್ಯಶೃಂಗನಿಗೆ ಬೇರೆ ಯಾರೂ ಗೊತ್ತಿರಲಿಲ್ಲ. ರಾಜನೇ! ಜಗತ್ತಿನಲ್ಲಿ ಬ್ರಹ್ಮಚರ್ಯದ ಎರಡು ರೂಪಗಳು ವಿಖ್ಯಾತವಾಗಿವೆ ಮತ್ತು ಬ್ರಾಹ್ಮಣರು ಅವೆರಡನ್ನು ವರ್ಣಿಸಿರುವರು. ಒಂದು ದಂಡ-ಮೇಖಲೆ ಮುಂತಾದವನ್ನು ಧಾರಣಾರೂಪೀ ಮುಖ್ಯ ಬ್ರಹ್ಮಚರ್ಯ ಹಾಗೂ ಇನ್ನೊಂದು ಋತುಕಾಲದಲ್ಲಿ ಮಾತ್ರ ಸ್ವಪತ್ನೀ ಸಮಾಗಮರೂಪೀ ಗೌಣ ಬ್ರಹ್ಮಚರ್ಯ. ಆ ಮಹಾತ್ಮನಿಂದ ಈ ಎರಡೂ ರೀತಿಯ ಬ್ರಹ್ಮಚರ್ಯಗಳ ಪಾಲನೆ ಆಗುವುದು.॥5½॥
ಮೂಲಮ್ - 6½
ತಸ್ಯೈವಂ ವರ್ತಮಾನಸ್ಯ ಕಾಲಃ ಸಮಭಿವರ್ತತ ॥
ಅಗ್ನಿಂ ಶುಶ್ರೂಷಮಾಣಸ್ಯ ಪಿತರಂ ಚ ಯಶಸ್ವಿನಮ್ ।
ಅನುವಾದ
ಹೀಗೆ ಇರುತ್ತಿರುವಾಗ ಮುನಿಯ ಸಮಯ ಅಗ್ನಿ ಮತ್ತು ಯಶಸ್ವೀ ತಂದೆಯ ಸೇವೆಯಲ್ಲೇ ಕಳೆಯಬಹುದು.॥6½॥
ಮೂಲಮ್ - 7
ಏತಸ್ಮಿನ್ನೇವ ಕಾಲೇ ತು ರೋಮಪಾದಃಪ್ರತಾಪವಾನ್ ॥
ಮೂಲಮ್ - 8½
ಅಂಗೇಷು ಪ್ರಥಿತೋ ರಾಜಾ ಭವಿಷ್ಯತಿ ಮಹಾಬಲಃ ।
ತಸ್ಯ ವ್ಯತಿಕ್ರಮಾದ್ರಾಜ್ಞೋ ಭವಿಷ್ಯತಿ ಸುದಾರುಣಾ ॥
ಅನಾವೃಷ್ಟಿಃ ಸುಘೋರಾ ವೈಸರ್ವಲೋಕಭಯಾವಹಾ ।
ಅನುವಾದ
ಆಗಲೇ ಅಂಗದೇಶದಲ್ಲಿ ರೋಮಪಾದ ಎಂಬ ದೊಡ್ಡ ಪ್ರತಾಪಿ ಮತ್ತು ಬಲಿಷ್ಠನಾದ ರಾಜನಾಗುವನು. ಅವನಿಂದ ಧರ್ಮದ ಉಲ್ಲಂಘನೆಯಾದ ಕಾರಣ ಆ ದೇಶದಲ್ಲಿ ಎಲ್ಲ ಜನರನ್ನು ಅತ್ಯಂತ ಭಯಪಡಿಸುವ ಘೋರವಾದ ಅನಾವೃಷ್ಟಿಯು ತಲೆದೋರುವುದು.॥7-8½॥
ಮೂಲಮ್ - 9
ಅನಾವೃಷ್ಟ್ಯಾಂ ತು ವೃತ್ತಾಯಾಂ ರಾಜಾ ದುಃಖಸಮನ್ವಿತಃ ॥
ಮೂಲಮ್ - 10½
ಬ್ರಾಹ್ಮಣಾನ್ ಶ್ರುತಸಂವೃದ್ಧಾನ್ ಸಮಾನೀಯ ಪ್ರವಕ್ಷ್ಯತಿ ।
ಭವಂತಃ ಶ್ರುತಕರ್ಮಾಣೋ ಲೋಕಚಾರಿತ್ರವೇದಿನಃ ॥
ಸಮಾದಿಶಂತು ನಿಯಮಂ ಪ್ರಾಯಶ್ಚಿತ್ತಂ ಯಥಾ ಭವೇತ್ ।
ಅನುವಾದ
ಮಳೆಯು ಬಾರದೇ ಇರುವುದರಿಂದ ರೋಮಪಾದ ರಾಜನಿಗೆ ಬಹಳ ದುಃಖವಾಯಿತು. ಅವನು ಶಾಸ್ತ್ರಜ್ಞರಲ್ಲಿ ನಿಷ್ಣಾತರಾದ ಬ್ರಾಹ್ಮಣರನ್ನು ಕರೆಸಿ - ‘ವಿಪ್ರರಿರಾ! ತಾವೆಲ್ಲರೂ ವೇದಶಾಸ್ತ್ರಕ್ಕನುಸಾರವಾಗಿ ಕರ್ಮಮಾಡುವವರು ಹಾಗೂ ಜನರ ಆಚಾರ-ವಿಚಾರಗಳನ್ನು ಬಲ್ಲವರಾಗಿದ್ದೀರಿ. ಆದ್ದರಿಂದ ನನ್ನ ಪಾಪದ ಪ್ರಾಯಶ್ಚಿತ್ತವಾಗುವಂತಹ ಯಾವುದಾದರೂ ನಿಯಮವನ್ನು ದಯವಿಟ್ಟು ತಿಳಿಸಿರಿ.॥9-10½॥
(ಶ್ಲೋಕ 11½)
ಮೂಲಮ್
ಇತ್ಯುಕ್ತಾಸ್ತೇ ತತೋ ರಾಜ್ಞಾ ಸರ್ವೇ ಬ್ರಾಹ್ಮಣಸತ್ತಮಾಃ ॥
ವಕ್ಷ್ಯಂತಿ ತೇ ಮಹೀಪಾಲಂ ಬ್ರಾಹ್ಮಣಾ ವೇದಪಾರಗಾಃ ।
ಅನುವಾದ
ರಾಜನು ಹೀಗೆ ಹೇಳಿದಾಗ ಆ ವೇದಪಾರಂಗತ ವಿದ್ವಾಂಸರಾದ ಎಲ್ಲ ಶ್ರೇಷ್ಠ ಬ್ರಾಹ್ಮಣರು ಅವನಿಗೆ ಈ ಪ್ರಕಾರ ಸಲಹೆ ನೀಡಿದರು.॥11½॥
ಮೂಲಮ್ - 12
ವಿಭಾಂಡಕ ಸುತಂ ರಾಜನ್ ಸರ್ವೋಪಾಯೈರಿಹಾನಯ ॥
ಮೂಲಮ್ - 13
ಆನಾಯ್ಯ ತು ಮಹೀಪಾಲ ಋಷ್ಯಶೃಙ್ಗಂ ಸುಸತ್ಕೃತಮ್ ।
ವಿಭಾಂಡಕಸುತಂ ರಾಜನ್ ಬ್ರಾಹ್ಮಣಂ ವೇದಪಾರಗಮ್ ॥
ಪ್ರಯಚ್ಛ ಕನ್ಯಾಂ ಶಾಂತಾಂ ವೈವಿಧಿನಾ ಸುಸಮಾಹಿತಃ ।
ಅನುವಾದ
ರಾಜನೇ! ವಿಭಾಂಡಕರ ಪುತ್ರ ಋಷ್ಯಶೃಂಗನು ವೇದ ಪಾರಂಗತ ವಿದ್ವಾಂಸನಾಗಿರುವನು. ಭೂಪಾಲ! ನೀನು ಎಲ್ಲ ಉಪಾಯಗಳಿಂದ ಅವರನ್ನು ಇಲ್ಲಿಗೆ ಕರೆದುಕೊಂಡು ಬಾ. ಕರೆಸಿ ಅವರನ್ನು ಚೆನ್ನಾಗಿ ಸತ್ಕರಿಸು, ಮತ್ತೆ ಸಂತಸದಿಂದ ವೈದಿಕ ವಿಧಿಗನುಸಾರ ಅವರೊಂದಿಗೆ ನಿನ್ನ ಕನ್ಯೆ ಶಾಂತಳನ್ನು ಮದುವೆ ಮಾಡಿಕೊಡು.॥12-13॥
ಮೂಲಮ್ - 14
ತೇಷಾಂ ತು ವಚನಂ ಶ್ರುತ್ವಾ ರಾಜಾ ಚಿಂತಾ ಪ್ರಪತ್ಸ್ಯತೇ ।
ಕೇನೋಪಾಯೇನ ವೈ ಶಕ್ಯಮಿಹಾನೇತುಂ ಸ ವೀರ್ಯವಾನ್ ॥
ಅನುವಾದ
ಅವರ ಮಾತನ್ನು ಕೇಳಿ ರಾಜನು ಯಾವ ಉಪಾಯದಿಂದ ಆ ಶಕ್ತಿಶಾಲಿ ಮಹರ್ಷಿಯನ್ನು ಇಲ್ಲಿ ಕರೆತರಲಾಗುವುದು? ಎಂದು ಚಿಂತೆಗೊಳಗಾದನು.॥14॥
ಮೂಲಮ್ - 15
ತತೋ ರಾಜಾ ವಿನಿಶ್ಚಿತ್ಯ ಸಹ ಮಂತ್ರಿಭಿರಾತ್ಮವಾನ್ ।
ಪುರೋಹಿತಮಮಾತ್ಯಾಂಶ್ಚ ಪ್ರೇಷಯಿಷ್ಯತಿ ಸತ್ಕೃತಾನ್ ॥
ಅನುವಾದ
ಮತ್ತೆ ಆ ರೋಮಪಾದನು ಮಂತ್ರಿಗಳೊಂದಿಗೆ ಸಮಾಲೋಚಿಸಿ ತನ್ನ ಪುರೋಹಿತರನ್ನು ಮತ್ತು ಮಂತ್ರಿಗಳನ್ನು ಸತ್ಕಾರಪೂರ್ವಕ ಅಲ್ಲಿಗೆ ಕಳಿಸುವನು.॥15॥
ಮೂಲಮ್ - 16
ತೇ ತು ರಾಜ್ಞೋ ವಚಃ ಶ್ರುತ್ವಾ ವ್ಯಥಿತಾ ವಿನತಾನನಾಃ ।
ನ ಗಚ್ಛೇಮ ಋಷೇರ್ಭೀತಾ ಅನುನೇಷ್ಯಂತಿ ತಂ ನೃಪಮ್ ॥
ಅನುವಾದ
ರಾಜನ ಮಾತನ್ನು ಕೇಳಿ ಆ ಮಂತ್ರಿ, ಪುರೋಹಿತರು ತಲೆತಗ್ಗಿಸಿ ದುಃಖಿತರಾಗಿ ಬಹಳ ವಿನೀತರಾಗಿ ‘ಮಹಾರಾಜ! ನಾವು ಮಹರ್ಷಿಗಳಿಗೆ ಹೆದರುತ್ತೇವೆ, ಅದಕ್ಕಾಗಿ ನಾವು ಹೋಗುವುದಿಲ್ಲ’ ಎಂದು ಹೇಳಿದರು.॥16॥
ಮೂಲಮ್ - 17
ವಕ್ಷ್ಯಂತಿ ಚಿಂತಯಿತ್ವಾ ತೇ ತಸ್ಯೋಪಾಯಾಂಶ್ಚ ತಾನ್ ಕ್ಷಮಾನ್ ।
ಆನೇಷ್ಯಾಮೋ ವಯಂ ವಿಪ್ರಂ ನ ಚ ದೋಷೋ ಭವಿಷ್ಯತಿ ॥
ಅನುವಾದ
ಅನಂತರ ವಿಚಾರ ಮಾಡಿ ಅವರು ರಾಜನಲ್ಲಿ ‘ನಾವು ಆ ಬ್ರಾಹ್ಮಣಕುಮಾರನನ್ನು ಯಾವುದೇ ಉಪಾದಿಂದ ಇಲ್ಲಿಗೆ ಕರೆದುಕೊಂಡು ಬಂದರೆ ಯಾವುದೇ ದೋಷ ಉಂಟಾಗಲಾರದು’ ಎಂದು ನುಡಿದರು.॥17॥
ಮೂಲಮ್ - 18
ಏವಮಂಗಾಧಿಪೇನೈವ ಗಣಿಕಾಭಿರ್ ಋಷೇಃ ಸುತಃ ।
ಆನೀತೋಽವರ್ಷಯದ್ದೇವಃ ಶಾಂತಾಚಾಸ್ಮೈ ಪ್ರದೀಯತೇ ॥
ಅನುವಾದ
ಈ ಪ್ರಕಾರ ವೇಶ್ಯೆಯರ ಸಹಾಯದಿಂದ ಅಂಗರಾಜನು ಮುನಿಕುಮಾರ ಋಷ್ಯಶೃಂಗನನ್ನು ತನ್ನಲ್ಲಿಗೆ ಕರೆಸಿಕೊಳ್ಳುವನು. ಅವನು ಬರುತ್ತಲೇ ಇಂದ್ರನು ರಾಜ್ಯದಲ್ಲಿ ಮಳೆಸುರಿಸುವನು ಮತ್ತೆ ರಾಜನು ಅವನಿಗೆ ತನ್ನ ಮಗಳಾದ ಶಾಂತಾದೇವಿಯನ್ನು ಅರ್ಪಿಸುವನು.॥18॥
ಮೂಲಮ್ - 19
ಋಷ್ಯಶೃಂಗಸ್ತುಜಾಮಾತಾ ಪುತ್ರಾಂಸ್ತವ ವಿಧಾಸ್ಯತಿ ।
ಸನತ್ಕುಮಾರಕಥಿತಮೇತಾವದ್ ವ್ಯಾಹೃತಂ ಮಯಾ ॥
ಅನುವಾದ
ಈ ರೀತಿ ಋಷ್ಯಶಂಗನು ತಮಗೆ ಅಳಿಯನಾದನು. ಅವನೇ ನಿಮಗಾಗಿ ಪುತ್ರರು ದೊರಕುವಂತಹ ಯಜ್ಞ ಕರ್ಮವನ್ನು ನೆರವೇರಿಸುವನು. ಸನತ್ಕುಮಾರರು ಹೇಳಿದ ಈ ಮಾತನ್ನು ನಿಮಗೆ ತಿಳಿಸಿರುವೆನು.॥19॥
ಮೂಲಮ್ - 20
ಅಥ ಹೃಷ್ಟೋ ದಶರಥಃ ಸುಮನ್ತ್ರಂ ಪ್ರತ್ಯಭಾಷತ ।
ಯಥರ್ಷಶೃಂಗಸ್ತ್ವಾನೀತೋ ಯೇನೋಪಾಯೇನ ಸೋಚ್ಯತಾಮ್ ॥
ಅನುವಾದ
ಇದನ್ನು ಕೇಳಿ ದಶರಥ ರಾಜನಿಗೆ ಬಹಳ ಸಂತೋಷವಾಯಿತು. ಅವರು ಸುಮಂತ್ರನಲ್ಲಿ - ‘ಮುನಿಕುಮಾರ ಋಷ್ಯಶೃಂಗನನ್ನು ಇಲ್ಲಿಗೆ ಹೇಗೆ ಮತ್ತು ಯಾವ ಉಪಾಯದಿಂದ ಕರೆಸಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಸು’ ಎಂದು ಕೇಳಿದನು.॥20॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಒಂಭತ್ತನೆಯ ಸರ್ಗ ಪೂರ್ಣವಾಯಿತು. ॥9॥