००७ मन्त्रिगुणगौरवम्

वाचनम्
ಭಾಗಸೂಚನಾ

ಅಮಾತ್ಯರ ಗುಣ-ನೀತಿಗಳ ವರ್ಣನೆ

ಮೂಲಮ್ - 1

ತಸ್ಯಾಮಾತ್ಯಾ ಗುಣೈರಾಸನ್ನಿಕ್ಷ್ವ ಕೋಃ ಸುಮಹಾತ್ಮನಃ ।
ಮಂತ್ರಜ್ಞಾಶ್ಚೇಂಗಿತಜ್ಞಾಶ್ಚ ನಿತ್ಯಂಪ್ರಿಯಹಿತೇ ರತಾಃ ॥

ಮೂಲಮ್ - 2

ಅಷ್ಟೌಬಭೂವುರ್ವೀರಸ್ಯ ತಸ್ಯಾಮಾತ್ಯಾ ಯಶಸ್ವಿನಃ ।
ಶುಚಯಶ್ಚಾನುರಕ್ತಾಶ್ಚ ರಾಜಕೃತ್ಯೇಷು ನಿತ್ಯಶಃ ॥

ಅನುವಾದ

ಮಹಾತ್ಮನಾದ ಇಕ್ವಾಕ್ಷುವಂಶ ಸಂಭೂತ ದಶರಥನಿಗೆ ಮಂತ್ರಾಲೋಚನೆಯಲ್ಲಿ ಸಮರ್ಥರಾದ ಕಾರ್ಯ ವಿಚಾರ ಪರರಾದ, ಪರೇಂಗಿತಜ್ಞರಾದ ಎಂಟು ಮಂತ್ರಿಗಳಿದ್ದರು. ಅವರು ಸದಾಕಾಲ ರಾಜನ ಹಿತರಕ್ಷಣೆಯಲ್ಲೇ ನಿರತರಾಗಿದ್ದು, ಕೀರ್ತಿಶಾಲಿಗಳಾದ ಅವರೆಲ್ಲರೂ ಶುದ್ಧ ಆಚಾರ-ವಿಚಾರಗಳಿಂದ ಯುಕ್ತರಾಗಿದ್ದರು. ಯಶಸ್ವಿಗಳಾದ ಆ ಮಂತ್ರಿ ಮಂಡಲವು ರಾಜಕೀಯ ಕಾರ್ಯಗಳಲ್ಲಿ ನಿರಂತರ ತತ್ಪರವಾಗಿತ್ತು.॥1-2॥

ಮೂಲಮ್ - 3

ಧೃಷ್ಟಿರ್ಜಯಂತೋ ವಿಜಯಃ ಸುರಾಷ್ಟ್ರೋ ರಾಷ್ಟ್ರವಧನಃ ।
ಅಕೋಪೋ ಧರ್ಮಪಾಲಶ್ಚ ಸುಮಂತ್ರಶ್ಚಾಷ್ಟಮೋಽರ್ಥವಿತ್ ॥

ಅನುವಾದ

ದೃಷ್ಟಿ, ಜಯಂತ, ವಿಜಯ, ಸುರಾಷ್ಟ್ರ, ರಾಷ್ಟ್ರವರ್ಧನ, ಅಕೋಪ, ಧರ್ಮಪಾಲ, ಅರ್ಥಶಾಸ್ತ್ರ ನಿಪುಣನಾದ ಎಂಟನೆಯ ಸುಮಂತ್ರ ಹೀಗೆ ಆ ಅಮಾತ್ಯರ ಹೆಸರುಗಳಾಗಿದ್ದವು.॥3॥

ಮೂಲಮ್ - 4

ಋತ್ವಿಜೌ ದ್ವಾವಭಿಮತೌ ತಸ್ಯಾಸ್ತಾಮೃಷಿಸತ್ತಮೌ ।
ವಸಿಷ್ಠೋ ವಾಮದೇವಶ್ಚ ಮಂತ್ರಿಣಶ್ಚ ತಥಾಪರೇ ॥

ಮೂಲಮ್ - 5

ಸುಯಜ್ಞೋಽಪ್ಯಥ ಜಾಬಾಲಿಃ ಕಾಶ್ಯಪೋಽಪ್ಯಥ ಗೌತಮಃ ।
ಮಾರ್ಕಂಡೇಯಸ್ತು ದೀರ್ಘಾಯುಸ್ತಥಾ ಕಾತ್ಯಾಯನೋ ದ್ವಿಜಃ ॥

ಅನುವಾದ

ಋಷಿಗಳಲ್ಲಿ ಶ್ರೇಷ್ಠರಾದ ವಸಿಷ್ಠ ಮತ್ತು ವಾಮದೇವರು ಇವರಿಬ್ಬರು ದಶರಥನಿಗೆ ಮಾನ್ಯ ಪುರೋಹಿತರಾಗಿದ್ದರು. ಇವರಲ್ಲದೆ ಸುಯಜ್ಞ, ಜಾಬಾಲಿ, ಕಾಶ್ಯಪ, ಗೌತಮ, ದೀರ್ಘಾಯು ಮಾರ್ಕಂಡೇಯ ಹಾಗೂ ದ್ವಿಜವರ್ಯ ಕಾತ್ಯಾಯನರು ಮಹಾರಾಜನ ಮಂತ್ರಿಗಳಾಗಿದ್ದರು.॥4-5॥

ಮೂಲಮ್ - 6

ಏತೈರ್ಬ್ರಹ್ಮರ್ಷಿಭಿರ್ನಿತ್ಯಮೃತ್ವಿಜಸ್ತಸ್ಯ ಪೌರ್ವಕಾಃ ।
ವಿದ್ಯಾವಿನೀತಾ ಹ್ರೀಮಂತಃ ಕುಶಲಾ ನಿಯತೇಂದ್ರಿಯಾಃ ॥

ಮೂಲಮ್ - 7

ಶ್ರೀಮಂತಶ್ಚ ಮಹಾತ್ಮಾನಃ ಶಾಸ್ತ್ರಜ್ಞಾ ದೃಢವಿಕ್ರಮಾಃ ।
ಕೀರ್ತಿಮಂತಃ ಪ್ರಣಿಹಿತಾ ಯಥಾವಚನಕಾರಿಣಃ ॥

ಮೂಲಮ್ - 8

ತೇಜಃಕ್ಷಮಾಯಶಃಪ್ರಾಪ್ತಾಃ ಸ್ಮಿತಪೂರ್ವಾಭಿಭಾಷಿಣಃ ।
ಕ್ರೋಧಾತ್ಕಾಮಾರ್ಥಹೇತೋರ್ವಾ ನ ಬ್ರೂಯುರನೃತಂ ವಚಃ ॥

ಅನುವಾದ

ಈ ಬ್ರಹ್ಮರ್ಷಿಗಳ ಜೊತೆಗೆ ರಾಜನ ವಂಶಪರಂಪರಾಗತ ಋತ್ವಿಜರೂ ಸದಾ ಮಂತ್ರಾಲೋಚನೆಯ ಕಾರ್ಯದಲ್ಲಿ ನೆರವಾಗುತ್ತಿದ್ದರು. ಇವರೆಲ್ಲರೂ ವಿದ್ವಾಂಸರಾದ್ದರಿಂದ ವಿನಯಶೀಲರೂ, ಅಕಾರ್ಯ ಮಾಡಲು ನಾಚುತ್ತಿದ್ದವರೂ, ಕಾರ್ಯಕುಶಲರೂ, ಜಿತೇಂದ್ರಿಯರೂ, ಶ್ರೀಸಂಪನ್ನರೂ, ಮಹಾತ್ಮರೂ, ಶಸ್ತ್ರವಿದ್ಯೆಯನ್ನು ಬಲ್ಲ ಮಹಾಪರಾಕ್ರಮಿಗಳೂ, ಯಶಸ್ವಿಗಳೂ, ಸಮಸ್ತ ರಾಜಕಾರ್ಯಗಳಲ್ಲಿ ಕುಶಲರೂ, ರಾಜನ ಅಪ್ಪಣೆಯಂತೆ ಕಾರ್ಯಮಾಡುವವರೂ ತೇಜಸ್ವಿಗಳೂ, ಕ್ಷಮಾಶೀಲರೂ, ಕೀರ್ತಿವಂತರೂ, ಬೇರೆಯವರು ಮಾತನಾಡಿಸುವ ಮೊದಲೇ ಮುಗಳ್ನಕ್ಕು ಮಾತನಾಡವವರೂ ಆಗಿದ್ದರು. ಅವರೆಲ್ಲರೂ ಕಾಮ, ಕ್ರೋಧ, ಸ್ವಾರ್ಥಕ್ಕೆ ವಶರಾಗಿ ಎಂದೂ ಸುಳ್ಳು ಹೇಳುತ್ತಿರಲಿಲ್ಲ.॥6-8॥

ಮೂಲಮ್ - 9

ತೇಷಾಮವಿದಿತಂ ಕಿಂಚಿತ್ಸ್ವೇಷು ನಾಸ್ತಿ ಪರೇಷು ವಾ ।
ಕ್ರಿಯಮಾಣಂ ಕೃತಂ ವಾಪಿ ಚಾರೇಣಾಪಿ ಚಿಕೀರ್ಷಿತಮ್ ॥

ಅನುವಾದ

ತಮ್ಮ ರಾಜನ ಅಥವಾ ಶತ್ರುಪಕ್ಷದ ರಾಜರ ಎಲ್ಲ ಮಾತುಗಳೂ ಮತ್ತು ಕಾರ್ಯಗಳೂ ಅವರಿಗೆ ತಿಳಿದಿರುತ್ತಿದ್ದವು. ಬೇರೆ ರಾಜರು ಏನು ಮಾಡುತ್ತಿದ್ದಾರೆ, ಏನು ಮಾಡಿದ್ದರು, ಮುಂದೆ ಏನು ಮಾಡಲಿದ್ದಾರೆ ಮುಂತಾದ ಎಲ್ಲ ವಿಷಯಗಳನ್ನು ಗುಪ್ತಚಾರರಿಂದ ತಿಳಿದುಕೊಳ್ಳುತ್ತಿದ್ದರು.॥9॥

ಮೂಲಮ್ - 10

ಕುಶಲಾ ವ್ಯವಹಾರೇಷು ಸೌಹೃದೇಷು ಪರೀಕ್ಷಿತಾಃ ।
ಪ್ರಾಪ್ತಕಾಲಂ ಯಥಾ ದಂಡಂಧಾರಯೇಯುಃ ಸುತೇಷ್ವಪಿ ॥

ಅನುವಾದ

ಅವರೆಲ್ಲರೂ ವ್ಯವಹಾರ ಕುಶಲರಾಗಿದ್ದರು. ಅವರ ಸೌಹಾರ್ದವನ್ನು ಅನೇಕ ಸಂದರ್ಭಗಳಲ್ಲಿ ಪರೀಕ್ಷಿಸಲಾಗಿತ್ತು, ಅವರು ಅವಕಾಶ ಬಂದರೆ ತಮ್ಮ ಪುತ್ರರಿಗೂ ದಂಡನೆ ಮಾಡಲು ಹಿಂಜರಿಯುತ್ತಿರಲಿಲ್ಲ.॥10॥

ಮೂಲಮ್ - 11

ಕೋಶಸಂಗ್ರಹಣೇ ಯುಕ್ತಾ ಬಲಸ್ಯ ಚ ಪರಿಗ್ರಹೇ ।
ಅಹಿತಂ ಚಾಪಿಪುರುಷಂ ನ ಹಿಂಸ್ಯುರವಿದೂಷಕಮ್ ॥

ಅನುವಾದ

ರಾಜ ಭಂಡಾರವನ್ನು ಸಮೃದ್ಧವಾಗಿಸಲು, ಚತುರಂಗ ಸೈನ್ಯದ ಸಂಗ್ರಹಣೆಯಲ್ಲಿ ಸದಾ ತೊಡಗಿರುತ್ತಿದ್ದರು. ಅಪರಾಧ ಮಾಡದಿದ್ದಾಗ ಶತ್ರುಗಳನ್ನು ಹಿಂಸಿಸುತ್ತಿರಲಿಲ್ಲ.॥11॥

ಮೂಲಮ್ - 12

ವೀರಾಶ್ಚ ನಿಯತೋತ್ಸಾಹಾ ರಾಜಶಾಸ್ತ್ರಮನುಷ್ಠಿತಾಃ ।
ಶುಚೀನಾಂ ರಕ್ಷಿತಾರಶ್ಚ ನಿತ್ಯಂ ವಿಷಯವಾಸಿನಾಮ್ ॥

ಅನುವಾದ

ಅವರೆಲ್ಲರಲ್ಲಿ ಸದಾಕಾಲ ಶೌರ್ಯ ಹಾಗೂ ಉತ್ಸಾಹ ತುಂಬಿರುತ್ತಿತ್ತು. ಅವರು ರಾಜನೀತಿಗನುಸಾರ ಕಾರ್ಯ ಮಾಡುತ್ತಾ ರಾಜ್ಯದಲ್ಲಿ ಇರುವ ಸತ್ಪುರುಷರನ್ನು ಸದಾ ಕಾಲ ರಕ್ಷಿಸುತ್ತಿದ್ದರು.॥12॥

ಮೂಲಮ್ - 13

ಬ್ರಹ್ಮಕ್ಷತ್ರಮಹಿಂಸಂತಸ್ತೇ ಕೋಶಂ ಸಮಪೂರಯನ್ ।
ಸುತೀಕ್ಷ್ಣದಂಡಾಃ ಸಂಪ್ರೇಕ್ಷ್ಯಪುರುಷಸ್ಯ ಬಲಾಬಲಮ್ ॥

ಅನುವಾದ

ಬ್ರಾಹ್ಮಣರಿಗೆ ಮತ್ತು ಕ್ಷತ್ರಿಯರಿಗೆ ಕಷ್ಟಕೊಡದೆ ನ್ಯಾಯ ಸಮ್ಮತವಾದ ಧನದಿಂದ ರಾಜನ ಖಜಾನೆ ತುಂಬುತ್ತಿದ್ದರು. ಅವರು ಅಪರಾಧಿಯ ಬಲಾಬಲವನ್ನು ನೋಡಿ ಅವರ ಕುರಿತು ತೀಕ್ಷ್ಣ ಅಥವಾ ಮೃದುದಂಡವನ್ನು ವಿಧಿಸುತ್ತಿದ್ದರು.॥13॥

ಮೂಲಮ್ - 14

ಶುಚೀನಾಮೇಕಬುದ್ಧೀನಾಂ ಸರ್ವೇಷಾಂ ಸಂಪ್ರಜಾನತಾಮ್ ।
ನಾಸೀತ್ಪುರೇ ವಾ ರಾಷ್ಟ್ರೇ ವಾ ಮೃಷಾವಾದೀ ನರಃ ಕ್ವಚಿತ್ ॥

ಮೂಲಮ್ - 15

ಕ್ವಶ್ಚಿನ್ನ ದುಷ್ಟಸ್ತತ್ರಾಸೀತ್ ಪರದಾರರತಿರ್ನರಃ ।
ಪ್ರಶಾಂತಂ ಸರ್ವಮೇವಾಸೀದ್ರಾಷ್ಟ್ರಂ ಪುರವರಂ ಚ ತತ್ ॥

ಅನುವಾದ

ಎಲ್ಲರ ಭಾವಗಳು ಶುದ್ಧವಾಗಿದ್ದು, ವಿಚಾರ ಒಂದೇ ಆಗಿದ್ದವು. ಅಯೋಧ್ಯೆಯಲ್ಲಿ ಅಥವಾ ಕೋಸಲ ರಾಜ್ಯದಲ್ಲಿ ಅವರ ಅರಿವಿನಲ್ಲಿ ಸುಳ್ಳುಹೇಳುವವರು, ದುಷ್ಟರು, ಪರಸ್ತ್ರೀ ಲಂಪಟರು ಯಾರೂ ಇರಲಿಲ್ಲ. ನಗರದಲ್ಲಿ ಶಾಂತಿ ನೆಲೆಸಿತ್ತು.॥14-15॥

ಮೂಲಮ್ - 16

ಸುವಾಸಸಃ ಸುವೇಷಾಶ್ಚ ತೇ ಚ ಸರ್ವೇ ಶುಚಿವ್ರತಾಃ ।
ಹಿತಾರ್ಥಾಶ್ಚ ನರೇಂದ್ರಸ್ಯ ಜಾಗ್ರತೋ ನಯಚಕ್ಷುಷಾ ॥

ಅನುವಾದ

ಆ ಎಲ್ಲ ಮಂತ್ರಿಗಳ ಬಟ್ಟೆ, ವೇಷ ಸ್ವಚ್ಛ ಹಾಗೂ ಸುಂದರವಾಗಿತ್ತು. ಅವರೆಲ್ಲರೂ ಉತ್ತಮ ವ್ರತವನ್ನು ಪಾಲಿಸುವವರು ಹಾಗೂ ರಾಜನ ಹಿತೈಷಿಯಾಗಿದ್ದರು. ನೀತಿರೂಪೀ ಚಕ್ಷುಗಳಿಂದ ನೋಡುತ್ತಾ ಸದಾ ಎಚ್ಚರವಾಗಿದ್ದರು.॥16॥

ಮೂಲಮ್ - 17

ಗುರೋರ್ಗುಣಗೃಹೀತಾಶ್ಚ ಪ್ರಖ್ಯಾತಾಶ್ಚ ಪರಾಕ್ರಮೈಃ ।
ವಿದೇಶೇಷ್ವಪಿ ವಿಖ್ಯಾತಾಃ ಸರ್ವತೋ ಬುದ್ಧಿ ನಿಶ್ಚಯಾಃ ॥

ಅನುವಾದ

ಆ ಮಂತ್ರಿಗಳು ತಮ್ಮ ಸದ್ಗುಣಗಳಿಂದ ಗುರುಗಳಂತೆ ಆದರಣಿಯರಾಗಿದ್ದು, ರಾಜನ ಅನುಗ್ರಹಕ್ಕೆ ಪಾತ್ರರಾಗಿದ್ದರು. ತಮ್ಮ ಪರಾಕ್ರಮದಿಂದ ಅವರು ಎಲ್ಲೆಡೆ ಖ್ಯಾತರಾಗಿದ್ದರು. ವಿದೇಶಗಳಲ್ಲಿಯೂ ಅವರನ್ನು ಎಲ್ಲರೂ ಅರಿತಿದ್ದರು. ಅವರು ಎಲ್ಲ ಮಾತುಗಳನ್ನು ಬುದ್ಧಿಯಿಂದ ಚೆನ್ನಾಗಿ ವಿಚಾರ ಮಾಡಿ ನಿಶ್ಚಯಕ್ಕೆ ಬರುತ್ತಿದ್ದರು.॥17॥

ಮೂಲಮ್ - 18

ಅಭಿತೋ ಗುಣವಂತಶ್ಚ ನ ಚಾಸನ್ಗುಣವರ್ಜಿತಾಃ ।
ಸಂಧಿವಿಗ್ರಹತತ್ತ್ವಜ್ಞಾಃ ಪ್ರಕೃತ್ಯಾ ಸಂಪದಾನ್ವಿತಾಃ ॥

ಅನುವಾದ

ಎಲ್ಲ ದೇಶಗಳಲ್ಲಿ, ಕಾಲಗಳಲ್ಲಿ ಅವರು ಗುಣವಂತರು ಎಂದು ಪ್ರಸಿದ್ಧರಾಗಿದ್ದರು. ಸಂಧಿ ಮತ್ತು ವಿಗ್ರಹಗಳ ಕುರಿತು ಅವರಿಗೆ ಒಳ್ಳೆಯ ಜ್ಞಾನವಿತ್ತು. ಅವರು ಸ್ವಭಾವತಃ ದೈವೀಸಂಪತ್ತಿನಿಂದ ಕೂಡಿದ್ದರು.॥18॥

ಮೂಲಮ್ - 19

ಮಂತ್ರಸಂವರಣೇ ಶಕ್ತಾಃ ಶಕ್ತಾಃ ಸೂಕ್ಷ್ಮಾಸು ಬುದ್ಧಿಷು ।
ನೀತಿಶಾಸ್ತ್ರ ವಿಶೇಷಜ್ಞಾಃ ಸತತಂ ಪ್ರಿಯವಾದಿನಃ ॥

ಅನುವಾದ

ರಾಜನೀತಿಯ ರಹಸ್ಯಗಳನ್ನು ಗುಪ್ತವಾಗಿಡುವ ಕ್ಷಮತೆ ಅವರಲ್ಲಿ ಪೂರ್ಣವಾಗಿತ್ತು. ಸೂಕ್ಷ್ಮವಿಷಯಗಳಲ್ಲಿಯೂ ಕುಶಲರಾಗಿದ್ದರು. ನೀತಿಶಾಸ್ತ್ರದಲ್ಲಿ ಹೆಚ್ಚಿನ ಪರಿಣತಿ ಇದ್ದು, ಯಾವಾಗಲೂ ಪ್ರಿಯ ಮತ್ತು ಸತ್ಯವನ್ನೇ ಮಾತನಾಡುತ್ತಿದ್ದರು.॥19॥

ಮೂಲಮ್ - 20

ಈದೃಶೈಸ್ತೈರಮಾತ್ಯೈಶ್ಚ ರಾಜಾ ದಶರಥೋಽನಘಃ ।
ಉಪಪನ್ನೋ ಗುಣೋಪೇತೈರನ್ವಶಾಸದ್ ವಸುಂಧರಾಮ್ ॥

ಅನುವಾದ

ಇಂತಹ ಸದ್ಗುಣಸಂಪನ್ನ ಮಂತ್ರಿಗಳೊಂದಿಗೆ ಪುಣ್ಯಾತ್ಮನಾದ ದಶರಥ ರಾಜನು ಭೂಮಂಡಲವನ್ನು ಆಳುತ್ತಿದ್ದನು.॥20॥

ಮೂಲಮ್ - 21

ಅವೇಕ್ಷ್ಯಮಾಣಶ್ಚಾರೇಣ ಪ್ರಜಾ ಧರ್ಮೇಣ ರಂಕ್ಷಯನ್ ।
ಪ್ರಜಾನಾಂ ಪಾಲನಂ ಕುರ್ವನ್ನಧರ್ಮಂ ಪರಿವರ್ಜಯನ್ ॥

ಅನುವಾದ

ದಶರಥನು ಗುಪ್ತಚರರ ಮೂಲಕ ತನ್ನ ಮತ್ತು ಶತ್ರುರಾಜ್ಯದ ಆಗುಹೋಗುಗಳ ಮೇಲೆ ಕಣ್ಣಿಡುತ್ತಿದ್ದನು. ಧರ್ಮದಿಂದ ಪ್ರಜೆಗಳನ್ನು ಪಾಲಿಸುತ್ತಾ, ಅಧರ್ಮದಿಂದ ಸದಾ ದೂರವಾಗಿದ್ದನು.॥21॥

ಮೂಲಮ್ - 22

ವಿಶ್ರುತಸ್ತ್ರಿಷು ಲೋಕೇಷು ವದಾನ್ಯಃ ಸತ್ಯಸಂಗರಃ ।
ಸ ತತ್ರ ಪುರುಷವ್ಯಾಘ್ರಃ ಶಶಾಸ ಪೃಥಿವೀಮಿಮಾಮ್ ॥

ಅನುವಾದ

ಮೂರು ಲೋಕಗಳಲ್ಲಿಯೂ ಅವನು ಪ್ರಸಿದ್ಧನಾಗಿದ್ದನು. ರಾಜನು ಸತ್ಯಪ್ರತಿಜ್ಞ ಹಾಗೂ ಉದಾರನಾಗಿದ್ದನು. ಪುರುಷಸಿಂಹ ದಶರಥ ರಾಜನು ಅಯೋಧ್ಯೆಯಲ್ಲಿ ಇದ್ದುಕೊಂಡೇ ಪೃಥ್ವಿಯನ್ನು ಆಳುತ್ತಿದ್ದನು.॥22॥

ಮೂಲಮ್ - 23

ನಾಧ್ಯಗಚ್ಛದ್ವಿಶಿಷ್ಟಂ ವಾ ತುಲ್ಯಂ ವಾ ಶತ್ರುಮಾತ್ಮನಃ ।
ಮಿತ್ರವಾನ್ನತಸಾಮಂತಃ ಪ್ರತಾಪಹತಕಂಟಕಃ ।
ಸ ಶಶಾಸ ಜಗದ್ರಾಜಾ ದಿವಿಂ ದೇವಪತಿರ್ಯಥಾ ॥

ಅನುವಾದ

ರಾಜನಿಗೆ ತನ್ನಿಂದ ಬಲಶಾಲಿ ಅಥವಾ ತನಗೆ ಸಮಾನರಾದ ಶತ್ರುಗಳು ಯಾರೂ ಇರಲಿಲ್ಲ. ಎಲ್ಲ ಸಾಮಂತ ರಾಜರು ಮಿತ್ರರಾಗಿದ್ದು, ದಶರಥನ ಚರಣಗಳಲ್ಲಿ ತಲೆ ಬಾಗುತ್ತಿದ್ದರು. ಅವನ ಪ್ರತಾಪದಿಂದ ರಾಜ್ಯದ ಎಲ್ಲ ಕಂಟಕಗಳು, ಶತ್ರುಗಳು, ಕಳ್ಳರು ನಾಶವಾಗಿ ಹೋಗಿದ್ದರು. ದೇವೇಂದ್ರನು ಸ್ವರ್ಗದಲ್ಲಿ ಇದ್ದು ಮೂರು ಲೋಕಗಳನ್ನು ಪಾಲಿಸಿದಂತೆ, ದಶರಥನು ಅಯೋಧ್ಯೆಯಲ್ಲಿ ಇದ್ದುಕೊಂಡು ಇಡೀ ಜಗತ್ತನ್ನು ಆಳುತ್ತಿದ್ದನು.॥23॥

ಮೂಲಮ್ - 24

ತೈರ್ಮಂತ್ರಿಭಿರ್ಮಂತ್ರಹಿತೇನಿವಿಷ್ಟೈ-
ರ್ವೃತೋಽನುರಕ್ತೈಃ ಕುಶಲೈಃ ಸಮರ್ಥೈಃ ।
ಸ ಪಾರ್ಥಿವೋ ದೀಪ್ತಿಮವಾಪ ಯುಕ್ತ-
ಸ್ತೇಜೋಮಯೈರ್ಗೋಭಿರಿವೋದಿತೋಽರ್ಕಃ ॥

ಅನುವಾದ

ಅವನ ಮಂತ್ರಿಗಳು ರಾಜಕೀಯ ರಹಸ್ಯವನ್ನು ಗುಪ್ತವಾಗಿಡಲು ಹಾಗೂ ರಾಜ್ಯದ ಹಿತಸಾಧನೆಯಲ್ಲಿ ತೊಡಗಿರುತ್ತಿದ್ದರು. ಅವರು ರಾಜನ ಕುರಿತು ಅನುರಾಗಿಗಳಾಗಿದ್ದು, ಕಾರ್ಯಕುಶಲರೂ, ಶಕ್ತಿಶಾಲಿಗಳೂ ಆಗಿದ್ದರು. ಸೂರ್ಯನು ತನ್ನ ತೇಜೋಮಯ ಕಿರಣಗಳಿಂದ ಜಗತ್ತನ್ನು ಪ್ರಕಾಶಿಸುವಂತೆಯೇ, ದಶರಥರಾಜನು ಆ ತೇಜಸ್ವಿ ಮಂತ್ರಿಗಳಿಂದ ಸುತ್ತುವರಿದು ಬಹಳ ಶೋಭಿಸುತ್ತಿದ್ದನು.॥24॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಏಳನೆಯ ಸರ್ಗ ಪೂರ್ಣವಾಯಿತು. ॥7॥