००६ राजानुशासनम्

वाचनम्
ಭಾಗಸೂಚನಾ

ದಶರಥ ರಾಜನ ರಾಜ್ಯಭಾರ ಹಾಗೂ ಅಲ್ಲಿನ ಜನಜೀವನ

ಮೂಲಮ್ - 1

ತಸ್ಯಾಂ ಪುರ್ಯಾಮಯೋಧ್ಯಾಯಾಂ ವೇದವಿತ್ಸರ್ವಸಂಗ್ರಹಃ ।
ದೀರ್ಘದರ್ಶೀ ಮಹಾತೇಜಾಃ ಪೌರಜಾನಪದಪ್ರಿಯಃ ॥

ಮೂಲಮ್ - 2

ಇಕ್ಷ್ವಾಕೂಣಾಮತಿರಥೋ ಯಜ್ವಾ ಧರ್ಮಪರೋ ವಶೀ ।
ಮಹರ್ಷಿಕಲ್ಪೋ ರಾಜರ್ಷಿಸ್ತ್ರಿಷು ಲೋಕೇಷು ವಿಶ್ರುತಃ ॥

ಮೂಲಮ್ - 3

ಬಲವಾನ್ ನಿಹತಾಮಿತ್ರೋ ಮಿತ್ರವಾನ್ ವಿಜಿತೇಂದ್ರಿಯಃ ।
ಧನೈಶ್ಚ ಸಂಚಯೈಶ್ಚಾನ್ಯೈಃ ಶಕ್ರವೈಶ್ರವಣೋಪಮಃ ॥

ಮೂಲಮ್ - 4

ಯಥಾ ಮನುರ್ಮಹಾತೇಜಾ ಲೋಕಸ್ಯ ಪರಿರಕ್ಷಿತಾ ।
ತಥಾ ದಶರಥೋ ರಾಜಾ ಲೋಕಸ್ಯ ಪರಿರಕ್ಷಿತಾ ॥

ಅನುವಾದ

ಆ ಅಯೋಧ್ಯೆಯನ್ನು ಆಳುತ್ತಿದ್ದ ದಶರಥ ಮಹಾರಾಜನು ವೇದಗಳನ್ನು ಸಾಂಗವಾಗಿ ತಿಳಿದಿದ್ದನು. ಶೂರರನ್ನು, ವಿದ್ವಾಂಸರನ್ನೂ, ಧನ-ಮಾನಾದಿಗಳನ್ನು ಸಂಗ್ರಹಿಸುತ್ತಿದ್ದನು. ದೀರ್ಘದರ್ಶಿಯಾಗಿದ್ದು, ಮಹಾತೇಜಸ್ವಿಯೂ ಆಗಿದ್ದನು. ಪ್ರಜೆಗಳಿಗೆ ಅತಿಪ್ರಿಯನಾಗಿದ್ದನು. ಇಕ್ವಾಕು ವಂಶೋತ್ಪನ್ನನಾದ ಅವನು ಅತಿರಥ ವೀರನಾಗಿದ್ದನು. ಅನೇಕ ಯಜ್ಞಗಳನ್ನೂ ಮಾಡಿದ್ದನು. ಧರ್ಮಪರಾಯಣನೂ, ಮಹರ್ಷಿಗಳಂತೆ ದಿವ್ಯಗುಣಸಂಪನ್ನನೂ ಆದ ರಾಜರ್ಷಿಯಾಗಿದ್ದನು. ಮೂರು ಲೋಕಗಳಲ್ಲಿಯೂ ದಶರಥನು ಖ್ಯಾತನಾಗಿದ್ದನು. ಮಹಾಬಲಶಾಲಿಯೂ, ಶತ್ರುರಹಿತನೂ, ಮಿತ್ರರಿಂದ ಕೂಡಿದವನೂ, ಇಂದ್ರಿಯ ವಿಜಯಿಯೂ ಆಗಿದ್ದನು. ಧನ ಹಾಗೂ ಇತರ ವಸ್ತುಗಳ ಸಂಗ್ರಹದಲ್ಲಿ ದೇವೇಂದ್ರ, ಕುಬೇರರಂತೆ ಕಂಡುಬರುತ್ತಿದ್ದನು. ಮಹಾತೇಜಸ್ವಿ ಪ್ರಜಾಪತಿ ಮನು ಸಮಸ್ತ ಜಗತ್ತನ್ನು ರಕ್ಷಿಸುತ್ತಿದ್ದಂತೆ ಮಹಾರಾಜ ದಶರಥನೂ ರಾಜ್ಯವಾಳುತ್ತಿದ್ದನು.॥1-4॥

ಮೂಲಮ್ - 5

ತೇನ ಸತ್ಯಾಭಿಸಂಧೇನ ತ್ರಿವರ್ಗಮನುತಿಷ್ಠತಾ ।
ಪಾಲಿತಾ ಸಾ ಪುರೀ ಶ್ರೇಷ್ಠಾ ಇಂದ್ರೇಣೇವಾಮರಾವತೀ ॥

ಅನುವಾದ

ಧರ್ಮ, ಅರ್ಥ, ಕಾಮವನ್ನು ಸಂಪಾದಿಸುವ ಕರ್ಮಗಳನ್ನು ಅನುಷ್ಠಾನ ಮಾಡುತ್ತಾ ಆ ಸತ್ಯಪ್ರತಿಜ್ಞನಾದ ದಶರಥ ರಾಜನು ದೇವೇಂದ್ರನು ಅಮರಾವತಿಯನ್ನು ಪಾಲಿಸಿದಂತೆ ಶ್ರೇಷ್ಠ ಅಯೋಧ್ಯೆಯನ್ನು ಪರಿಪಾಲಿಸುತ್ತಿದ್ದನು.॥5॥

ಮೂಲಮ್ - 6

ತಸ್ಮಿನ್ ಪುರವರೇ ಹೃಷ್ಟಾಧರ್ಮಾತ್ಮಾನೋ ಬಹುಶ್ರುತಾಃ ।
ನರಾಸ್ತುಷ್ಟಾ ಧನೈಃ ಸ್ವೈಃ ಸ್ವೈರಲುಬ್ಧಾಃಸತ್ಯವಾದಿನಃ ॥

ಅನುವಾದ

ಆ ಉತ್ತಮ ನಗರದಲ್ಲಿ ವಾಸಿಸುವ ಪ್ರಜೆಗಳೆಲ್ಲರೂ ಸಂತೋಷವಾಗಿದ್ದು, ಧರ್ಮಾತ್ಮರೂ, ನಿರ್ಲೋಭಿಗಳೂ, ಸತ್ಯವಾದಿಗಳೂ, ತಮ್ಮ ಧನದಲ್ಲೇ ಸಂತುಷ್ಟರೂ ಆಗಿದ್ದರು.॥6॥

ಮೂಲಮ್ - 7

ನಾಲ್ಪಸಂನಿಚಯಃ ಕಶ್ಚಿದಾಸೀತ್ ತಸ್ಮಿನ್ಪುರೋತ್ತಮೇ ।
ಕುಟುಂಬೀ ಯೋ ಹ್ಯಸಿದ್ಧಾರ್ಥೋಽಗವಾಶ್ವಧನಧಾನ್ಯವಾನ್ ॥

ಅನುವಾದ

ಆ ಶ್ರೇಷ್ಠ ಅಯೋಧ್ಯಾಪುರಿಯಲ್ಲಿ ಇರುವ ಕುಟುಂಬಗಳ ಬಳಿಯಲ್ಲಿ ಉತ್ತಮ ವಸ್ತುಗಳ ಸಂಗ್ರಹ ಸಾಕಷ್ಟು ಇತ್ತು. ಎಲ್ಲರ ಧರ್ಮ, ಅರ್ಥ, ಕಾಮಮಯ ಪುರುಷಾರ್ಥಗಳು ಸಿದ್ಧವಾಗಿದ್ದವು. ಎಲ್ಲರ ಬಳಿ ಹಸು, ಕುದುರೆ, ಮತ್ತು ಧನ-ಧಾನ್ಯ ಹೆಚ್ಚು ಸಂಖ್ಯೆಯಲ್ಲಿ ಸಂಗ್ರಹವಾಗಿತ್ತು.॥7॥

ಮೂಲಮ್ - 8

ಕಾಮೀ ವಾ ನ ಕದರ್ಯೋ ವಾ ನೃಶಂಸಃ ಪುರುಷಃ ಕ್ವಚಿತ್ ।
ದ್ರಷ್ಟುಂ ಶಕ್ಯಮಯೋಧ್ಯಾಯಾಂ ನಾವಿದ್ವಾನ್ ನ ಚ ನಾಸ್ತಿಕಃ ॥

ಅನುವಾದ

ಅಯೋಧ್ಯೆಯಲ್ಲಿ ಯಾರೂ ಕಾಮುಕ, ಲೋಭಿ, ಕ್ರೂರ, ಮೂರ್ಖ, ನಾಸ್ತಿಕ ಮನುಷ್ಯರು ಎಲ್ಲಿಯೂ ನೋಡಲು ಸಿಗುತ್ತಿರಲಿಲ್ಲ.॥8॥

ಮೂಲಮ್ - 9

ಸರ್ವೇ ನರಾಶ್ಚ ನಾರ್ಯಶ್ಚ ಧರ್ಮಶೀಲಾಃ ಸುಸಂಯತಾಃ ।
ಮುದಿತಾಃ ಶೀಲವೃತ್ತಾಭ್ಯಾಂ ಮಹರ್ಷಯ ಇವಾಮಲಾಃ ॥

ಅನುವಾದ

ಅಲ್ಲಿಯ ಎಲ್ಲ ಸ್ತ್ರೀ ಪುರುಷರು ಧರ್ಮಶೀಲರೂ, ಸಂಯಮಿಗಳೂ, ಸದಾ ಪ್ರಸನ್ನರಾಗಿರುವವರೂ ಆಗಿದ್ದರು ಹಾಗೂ ಶೀಲ-ಸದಾಚಾರ ದೃಷ್ಟಿಯಿಂದ ಮಹರ್ಷಿಗಳಂತೆ ನಿರ್ಮಲರಾಗಿದ್ದರು.॥9॥

ಮೂಲಮ್ - 10

ನಾಕುಂಡಲೀ ನಾಮುಕುಟೀ ನಾಸ್ರಗ್ವೀ ನಾಲ್ಪಭೋಗವಾನ್ ।
ನಾಮೃಷ್ಟೋ ನ ನಲಿಪ್ತಾಂಗೋ ನಾಸುಗಂಧಶ್ಚ ವಿದ್ಯತೇ ॥

ಅನುವಾದ

ಅಯೋಧ್ಯೆಯಲ್ಲಿ ಎಲ್ಲರೂ ಕುಂಡಲ ಕಿರೀಟ, ಪುಷ್ಪಮಾಲೆ ಧರಿಸುತ್ತಿದ್ದರು. ಎಲ್ಲರ ಬಳಿಯಲ್ಲಿ ಭೋಗ ಸಾಮಗ್ರಿಗಳು ಹೇರಳವಾಗಿದ್ದವು. ಅಲ್ಲಿ ಚಂದನಾದಿಗಳನ್ನು ಲೇಪಿಸಿಕೊಳ್ಳದೆ, ಸುಗಂಧದಿಂದ ವಂಚಿತರಾಗಿ ಸ್ನಾನಮಾಡದೆ ಮಲಿನವಾಗಿರುವವನು ಯಾರೂ ಸಿಗುತ್ತಿರಲಿಲ್ಲ.॥10॥

ಮೂಲಮ್ - 11

ನಾಮೃಷ್ಟಭೋಜೀ ನಾದಾತಾ ನಾಪ್ಯನಂಗದನಿಷ್ಕಧೃಕ್ ।
ನಾಹಸ್ತಾಭರಣೋ ವಾಪಿ ದೃಶ್ಯತೇ ನಾಪ್ಯನಾತ್ಮವಾನ್ ॥

ಅನುವಾದ

ಅಲ್ಲಿ ಎಲ್ಲರೂ ಮೃಷ್ಟಾನ್ನ ಭೋಜನವನ್ನೇ ಮಾಡುತ್ತಿದ್ದರು. ಎಲ್ಲರೂ ದಾನ ಮಾಡುತ್ತಿದ್ದರು. ಅಲ್ಲಿ ಇರುವವರೆಲ್ಲರೂ ತಮ್ಮ ಮನಸ್ಸನ್ನು ಗೆದ್ದುಕೊಂಡಿದ್ದರು. ಎಲ್ಲರೂ ತೋಳ್ಬಳೆಗಳನ್ನು ಕೊರಳಲ್ಲಿ ಧರಿಸುವ ಪದಕವನ್ನು ಹಸ್ತಾಭರಣವನ್ನು ಧರಿಸುತ್ತಿದ್ದರು.॥11॥

ಮೂಲಮ್ - 12

ನಾನಾ ಹಿತಾಗ್ನಿರ್ನಾಯಜ್ವಾ ನ ಕ್ಷುದ್ರೋವಾ ನ ತಸ್ಕರಃ ।
ಕಶ್ಚಿದಾಸೀದಯೋಧ್ಯಾಯಾಂ ನ ಚಾವೃತ್ತೊ ನ ಸಂಕರಃ ॥

ಅನುವಾದ

ಆಹಿತಾಗ್ನಿಗಳಲ್ಲದ ಹಾಗೂ ಯಜ್ಞ ಮಾಡದ ಬ್ರಾಹ್ಮಣರು ಅಯೋಧ್ಯೆಯಲ್ಲಿ ಯಾರೂ ಇರಲಿಲ್ಲ. ಅಲ್ಪ ವಿದ್ಯೆಯುಳ್ಳವರಾಗಲೀ, ಅಲ್ಪ ಐಶ್ವರ್ಯವುಳ್ಳವರಾಗಲೀ ಇರಲಿಲ್ಲ. ಕ್ಷುದ್ರರೂ, ಕಳ್ಳರೂ ಇರಲಿಲ್ಲ. ಸದಾಚಾರ ಶೂನ್ಯರು ಅಥವಾ ವರ್ಣಸಂಕರರು ಯಾರೂ ಇರಲಿಲ್ಲ.॥12॥

ಮೂಲಮ್ - 13

ಸ್ವಕರ್ಮನಿರತಾ ನಿತ್ಯಂ ಬ್ರಾಹ್ಮಣಾ ವಿಜಿತೇಂದ್ರಿಯಾಃ ।
ದಾನಾಧ್ಯಯನಶೀಲಾಶ್ಚ ಸಂಯತಾಶ್ಚ ಪ್ರತಿಗ್ರಹೇ ॥

ಅನುವಾದ

ಅಲ್ಲಿ ವಾಸಿಸುವ ಬ್ರಾಹ್ಮಣರೆಲ್ಲರೂ ಸದಾ ತಮ್ಮ ಕರ್ಮಗಳಲ್ಲಿ ತೊಡಗುತ್ತಿದ್ದರು. ಇಂದ್ರಿಯಗಳನ್ನು ವಶದಲ್ಲಿರಿಸಿಕೊಂಡು, ದಾನ ಮತ್ತು ಸ್ವಾಧ್ಯಾಯ ಮಾಡುತ್ತಾ, ಪ್ರತಿಗ್ರಹದ ಕಡೆಗೆ ನೋಡುತ್ತಿರಲಿಲ್.॥13॥

ಮೂಲಮ್ - 14

ನಾಸ್ತಿಕೋ ನಾನೃತೀ ವಾಪಿ ನ ಕಶ್ಚಿದಬಹುಶ್ರುತಃ ।
ನಾಸೂಯಕೋ ನ ಚಾಶಕ್ತೋ ನಾವಿದ್ವಾನ್ವಿದ್ಯತೇ ಕ್ವಚಿತ್ ॥

ಅನುವಾದ

ನಾಸ್ತಿಕ, ಅಸತ್ಯವಾದಿಯಂತಹ ಬ್ರಾಹ್ಮಣರು ಯಾರೂ ಅಲ್ಲಿ ಇರಲಿಲ್ಲ. ಎಲ್ಲರೂ ಶಾಸ್ತ್ರಜ್ಞಾನ ಸಂಪನ್ನರಾಗಿದ್ದರು. ಬೇರೆಯವರ ದೋಷಗಳನ್ನು ನೋಡುವವರು, ವಿದ್ಯಾಹೀನರು, ಸಾಧನೆಯಲ್ಲಿ ಅಸಮರ್ಥರಾದವರು ಯಾರೂ ಇರಲಿಲ್ಲ.॥14॥

ಮೂಲಮ್ - 15

ನಾಷಡಂಗವಿದತ್ರಾಸ್ತಿ ನಾವ್ರತೋ ನಾಸಹಸ್ರದಃ ।
ನ ದೀನಃ ಕ್ಷಿಪ್ತಚಿತ್ತೋ ವಾ ವ್ಯಥಿತೋ ವಾಪಿ ಕಶ್ಚನ ॥

ಅನುವಾದ

ಆ ಪರಿಯಲ್ಲಿ ಎಲ್ಲ ಬ್ರಾಹ್ಮಣರು ಷಡಂಗಸಹಿತ ವೇದಗಳನ್ನು ಬಲ್ಲವರಾಗಿದ್ದರು. ವ್ರತನಿಷ್ಠರಾಗಿದ್ದು, ಸದಾ ಸಾವಿರಕ್ಕಿಂತ ಹೆಚ್ಚಿಗೆ ದಾನ ಮಾಡುತ್ತಿದ್ದರು. ಅಲ್ಲಿ ದೀನರು, ವಿಕ್ಷಿಪ್ತರು, ದುಃಖಿಗಳು ಯಾರೂ ಇರಲಿಲ್ಲ.॥15॥

ಮೂಲಮ್ - 16

ಕಶ್ಚಿನ್ನರೋ ವಾ ನಾರೀ ವಾ ನಾಶ್ರೀಮಾನ್ ನಾಪ್ಯರೂಪವಾನ್ ।
ದ್ರಷ್ಟುಂ ಶಕ್ಯಮಯೋಧ್ಯಾಯಾಂ ನಾಪಿ ರಾಜನ್ಯ ಭಕ್ತಿಮಾನ್ ॥

ಅನುವಾದ

ಅಯೋಧ್ಯೆಯಲ್ಲಿ ಶ್ರೀಹೀನರು (ಬಡವರು), ರೂಪ ರಹಿತರು (ಕುರೂಪಿಗಳು), ರಾಜನಲ್ಲಿ ಆದರ ಭಯ ಭಕ್ತಿ ಇಲ್ಲದವರು ಯಾವುದೇ ಸ್ತ್ರೀ ಪುರುಷರು ಇರಲಿಲ್ಲ.॥16॥

ಮೂಲಮ್ - 17

ವರ್ಣೇಷ್ವಗ್ರ್ಯಚತುರ್ಥೇಷು ದೇವತಾ ತಿಥಿ ಪೂಜಕಾಃ ।
ಕೃತಜ್ಞಾಶ್ಚ ವದಾನ್ಯಾಶ್ಚ ಶೂರಾ ವಿಕ್ರಮಸಂಯುತಾಃ ॥

ಅನುವಾದ

ಬ್ರಾಹ್ಮಣರೇ, ಆದಿ, ನಾಲ್ಕು ವರ್ಣದವರೂ ದೇವತೆಗಳ ಮತ್ತು ಅತಿಥಿಗಳ ಪೂಜಕರೂ, ಕೃತಜ್ಞರೂ, ಉದಾರರೂ, ಶೂರವೀರ ಮತ್ತು ಪರಾಕ್ರಮಿಯಾಗಿದ್ದರು.॥17॥

ಮೂಲಮ್ - 18

ದೀರ್ಘಾಯುಷೋನರಾಃ ಸರ್ವೇ ಧರ್ಮಂ ಸತ್ಯಂ ಚ ಸಂಶ್ರಿತಾಃ ।
ಸಹಿತಾಃ ಪುತ್ರಪೌತ್ರೈಶ್ಚ ನಿತ್ಯಂ ಸ್ತ್ರೀಭಿಃ ಪುರೋತ್ತಮೇ ॥

ಅನುವಾದ

ಶ್ರೇಷ್ಠ ನಗರದಲ್ಲಿ ವಾಸಿಸುವರೆಲ್ಲ ಮನುಷ್ಯರು, ದೀರ್ಘಾಯುಸ್ಸು ಉಳ್ಳವರೂ, ಧರ್ಮ ಮತ್ತು ಸತ್ಯವನ್ನು ಆಶ್ರಯಿಸಿದವರು ಆಗಿದ್ದರು. ಅವರು ಸದಾಕಾಲ ಪತ್ನೀ-ಪುತ್ರ, ಪೌತ್ರರೇ ಪರಿವಾರದೊಂದಿಗೆ ಸುಖವಾಗಿದ್ದರು.॥18॥

ಮೂಲಮ್ - 19

ಕ್ಷತ್ರಂ ಬ್ರಹ್ಮ ಮುಖಂಚಾಸೀದ್ ವೈಶ್ಯಾಃ ಕ್ಷತ್ರಮನುವ್ರತಾಃ ।
ಶೂದ್ರಾಃ ಸ್ವಕರ್ಮನಿರತಾಸ್ತ್ರೀನ್ವರ್ಣಾನುಪಚಾರಿಣಃ ॥

ಅನುವಾದ

ಕ್ಷತ್ರಿಯರು ಬ್ರಾಹ್ಮಣರ ಆಜ್ಞಾನುವರ್ತಿಗಳಾಗಿದ್ದರು. ವೈಶ್ಯರು ಕ್ಷತ್ರಿಯರ ಆಜ್ಞೆಯನ್ನು ಪಾಲಿಸುತ್ತಿದ್ದರು. ಶೂದ್ರರು ತಮ್ಮ ಕರ್ತವ್ಯವನ್ನು ಪಾಲಿಸುತ್ತಾ ಮೂರೂ ವರ್ಣದವರ ಸೇವೆಯಲ್ಲಿ ನಿರತರಾಗಿದ್ದರು.॥19॥

ಮೂಲಮ್ - 20

ಸಾ ತೇನೇಕ್ಷ್ವಾಕುನಾಥೇನ ಪುರೀ ಸುಪರಿರಕ್ಷಿತಾ ।
ಯಥಾ ಪುರಸ್ತಾನ್ಮನುನಾ ಮಾನವೇಂದ್ರೇಣ ಧೀಮತಾ ॥

ಅನುವಾದ

ಬುದ್ಧಿವಂತರಾದ ಮಹಾರಾಜ ಮನುವು ಹಿಂದೆ ಭೂಮಿಯನ್ನು ಪಾಲಿಸುವಂತೆ, ಇಕ್ಷ್ವಾಕು ಕುಲೋತ್ಪನ್ನ ದಶರಥರಾಜನು ಅಯೋಧ್ಯೆಯನ್ನು ಪರಿಪಾಲಿಸುತ್ತಿದ್ದನು.॥20॥

ಮೂಲಮ್ - 21

ಯೋಧಾನಾಮಗ್ನಿ ಕಲ್ಪಾನಾಂ ಪೇಶಲಾನಾಮಮರ್ಷಿಣಾಮ್ ।
ಸಂಪೂರ್ಣಾ ಕೃತವಿದ್ಯಾನಾಂ ಗುಹಾ ಕೇಸರಿಣಾಮಿವ ॥

ಅನುವಾದ

ಅಗ್ನಿಯಂತೆ ಪ್ರತಾಪ ಅತಿಶಯದಿಂದ ಪ್ರಜ್ವಲಿಸುತ್ತಿದ್ದು ಕಪಟವಿಲ್ಲದ, ನಿಷ್ಟಾವಂತ ಯೋಧರಿಂದ ಅಯೋಧ್ಯೆಯು ಸಿಂಹಗಳು ವಾಸಿಸುತ್ತಿದ್ದ ಗುಹೆಗಳಂತೆ ಸುರಕ್ಷಿತವಾಗಿತ್ತು.॥21॥

ಮೂಲಮ್ - 22

ಕಾಂಭೋಜವಿಷಯೇ ಜಾತೈರ್ಬಾಹ್ಲೀಕೈಶ್ಚ ಹಯೋತ್ತಮೈಃ ।
ವನಾಯುಜೈರ್ನದೀಜೈಶ್ಚ ಪೂರ್ಣಾ ಹರಿಹಯೋತ್ತಮೈಃ ॥

ಅನುವಾದ

ದಶರಥನ ಅಪರೂಪವಾದ ಅಶ್ವಸೇನೆಯಲ್ಲಿ ಕಾಂಬೋಜ ಮತ್ತು ಬಾಹ್ಲೀಕ ದೇಶದ, ವನಾಯು ಮತ್ತು ಸಿಂಧು ದೇಶದಲ್ಲಿ ಹುಟ್ಟಿದವುಗಳಾಗಿದ್ದವು. ಇಂದ್ರನ ಕುದುರೆ ಉಚ್ಚೈಶ್ರವಗಳಂತಹ ಉತ್ತಮ ಲಕ್ಷಣಗಳಿಂದ ಕೂಡಿದ ಕುದುರೆಗಳಿದ್ದವು.॥22॥

ಮೂಲಮ್ - 23

ವಿಂಧ್ಯಪರ್ವತ ಜೈರ್ಮತ್ತೈಃ ಪೂರ್ಣಾ ಹೈಮವತೈರಪಿ ।
ಮದಾನ್ವಿತೈರತಿಬಲೈರ್ಮಾತಂಗೈಃ ಪರ್ವತೋಪಮೈಃ ॥

ಅನುವಾದ

ವಿಂಧ್ಯ ಹಾಗೂ ಹಿಮಾಲಯ ಪರ್ವತಗಳಲ್ಲಿ ಉತ್ಪನ್ನವಾದ ಅತ್ಯಂತ ಬಲಶಾಲಿಗಳೂ ಬೆಟ್ಟದಂತೆ ಇರುವ ಮತ್ತ ಗಜಗಳಿಂದ ಆ ನಗರಿಯು ತುಂಬಿಹೋಗಿತ್ತು.॥23॥

ಮೂಲಮ್ - 24

ಐರಾವತಕುಲೀನೈಶ್ಚ ಮಹಾಪದ್ಮಕುಲೈಸ್ತಥಾ ।
ಅಂಜನಾದಪಿ ನಿಷ್ಕ್ರಾಂತೈರ್ವಾಮನಾದಪಿ ಚ ದ್ವಿಪೈಃ ॥

ಅನುವಾದ

ಐರಾವತ ಕುಲದಲ್ಲಿ ಉತ್ಪನ್ನವಾದ, ಮಹಾಪದ್ಮದ ವಂಶದಲ್ಲಿ ಹುಟ್ಟಿದ ಹಾಗೂ ಅಂಜನ, ವಾಮನ ಎಂಬ ದಿಗ್ಗಜರಿಂದ ಉಂಟಾದ ಅನೇಕ ಆನೆಗಳಿಂದ ದಶರಥನ ಗಜಸೈನ್ಯವು ಸಮೃದ್ಧವಾಗಿತ್ತು.॥24॥

ಮೂಲಮ್ - 25

ಭದ್ರೈರ್ಮಂದ್ರೈರ್ಮೃಗೈಶ್ಚೈವ ಭದ್ರಮಂದ್ರಮೃಗೈಸ್ತಥಾ ।
ಭದ್ರಮಂದ್ರೈರ್ಭದ್ರಮೃಗೈರ್ಮೃಗಮಂದ್ರೈಶ್ಚ ಸಾ ಪುರೀ ॥

ಮೂಲಮ್ - 26

ನಿತ್ಯಮತ್ತೈಃ ಸದಾ ಪೂರ್ಣಾ ನಾಗೈರಚಲಸನ್ನಿಭೈಃ ।
ಸಾ ಯೋಜನೇ ಚ ದ್ವೇ ಭೂಯಃ ಸತ್ಯನಾಮಾ ಪ್ರಕಾಶತೇ ।
ಯಸ್ಯಾಂ ದಶರಥೋ ರಾಜಾ ವಸನ್ ಜಗದಪಾಲಯತ್ ॥

ಅನುವಾದ

ಹಿಮಾಲಯದಲ್ಲಿ ಹುಟ್ಟಿದ ಭದ್ರಜಾತಿಯ ಆನೆಗಳು, ವಿಂಧ್ಯಪರ್ವದಲ್ಲಿ ಹುಟ್ಟಿದ ಮಂದ್ರಜಾತಿಯ ಆನೆಗಳೂ, ಸಹ್ಯ ಪರ್ವತದಲ್ಲಿ ಹುಟ್ಟಿದ ಮೃಗಜಾತಿಯ ಆನೆಗಳಿದ್ದವು. ಭದ್ರ, ಮಂದ್ರ, ಮೃಗ ಈ ಮೂರರ ಕೂಡುವಿಕೆಯಿಂದ ಹುಟ್ಟಿದ ಸಂಕರ ಜಾತಿಯ ಹೀಗೆ ಮದೋನ್ಮತ್ತರಾದ ಆನೆಗಳು ಅಲ್ಲಿ ತುಂಬಿದ್ದವು. ಮೂರು ಯೋಜನ ವಿಸ್ತಾರವುಳ್ಳ ಅಯೋಧ್ಯೆಯ ಮುಂದೆ ಎರಡು ಯೋಜನಗಳವರೆಗೂ ಶತ್ರುಗಳು ಸುಳಿಯುವಂತೆ ಇರಲಿಲ್ಲ. ಅದರಿಂದ ಅಯೋಧ್ಯಾ ಎಂಬ ಹೆಸರು ಅನ್ವರ್ಥವಾಗಿತ್ತು. ಅಂತಹ ವಿಸ್ತಾರವಾದ ಅಯೋಧ್ಯಾಪಟ್ಟಣದಲ್ಲಿ ವಾಸಮಾಡುತ್ತಾ ದಶರಥನು ಕೋಸಲ ದೇಶವನ್ನು ಆಳುತ್ತಿದ್ದನು.॥25-26॥

ಮೂಲಮ್ - 27

ತಾಂ ಪುರೀಂ ಸ ಮಹಾತೇಜಾ ರಾಜಾ ದಶರಥೋ ಮಹಾನ್ ।
ಶಶಾಸ ಶಮಿತಾಮಿತ್ರೋ ನಕ್ಷತ್ರಾಣೀವ ಚಂದ್ರಮಾಃ ॥

ಅನುವಾದ

ಚಂದ್ರನು ನಕ್ಷತ್ರಲೋಕವನ್ನು ಆಳುತ್ತಿದ್ದಂತೆ ಮಹಾತೇಜಸ್ವೀ ದಶರಥ ಮಹಾರಾಜನು ಅಯೋಧ್ಯೆಯನ್ನು ಆಳುತ್ತಿದ್ದನು. ತನ್ನ ಎಲ್ಲ ಶತ್ರುಗಳನ್ನು ನಾಶಮಾಡಿಬಿಟ್ಟಿದ್ದನು.॥27॥

ಮೂಲಮ್ - 28

ತಾಂ ಸತ್ಯನಾಮಾಂ ದೃಢತೋರಣಾರ್ಗಲಾಂ
ಗೃಹೈರ್ವಿಚಿತ್ರೈ ರುಪಶೋಭಿತಾಂ ಶಿವಾಮ್ ।
ಪುರೀಮಯೋಧ್ಯಾಂ ನೃಸಹಸ್ರ ಸಂಕುಲಾಂ
ಶಶಾಸ ವೈ ಶಕ್ರ ಸಮೋ ಮಹೀಪತಿಃ ॥

ಅನುವಾದ

ಸತ್ಯ ಹಾಗೂ ಸಾರ್ಥಕವಾದ ಅಯೋಧ್ಯೆಯ ಹೊರ ಬಾಗಿಲುಗಳು, ಅಗಳಿಗಳು ಭದ್ರವಾಗಿದ್ದವು. ವಿಚಿತ್ರ ಗೃಹಗಳಿಂದ ಅದು ಸದಾ ಸುಶೋಭಿತವಾಗಿತ್ತು. ಸಾವಿರಾರು ಜನರಿಂದ ತುಂಬಿರುವ ಆ ಕಲ್ಯಾಣಮಯ ಪುರಿಯನ್ನು ಇಂದ್ರನಂತೆ ಮಹಾಪರಾಕ್ರಮಿ ದಶರಥನು ನ್ಯಾಯದಿಂದ ಆಳುತ್ತಿದ್ದನು.॥28॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಆರನೆಯ ಸರ್ಗ ಪೂರ್ಣವಾಯಿತು. ॥6॥