वाचनम्
ಭಾಗಸೂಚನಾ
ದಶರಥ ರಾಜನಿಂದ ರಕ್ಷಿತವಾದ ಅಯೋಧ್ಯೆಯ ವರ್ಣನೆ
ಮೂಲಮ್ - 1
ಸರ್ವಾ ಪೂರ್ವಮಿಯಂ ಯೇಷಾಮಾಸೀತ್ ಕೃತ್ಸ್ನಾವಸುಂಧರಾ ।
ಪ್ರಜಾಪತಿಮುಪಾದಾಯ ನೃಪಾಣಾಂ ಜಯಶಾಲಿನಾಮ್ ॥
ಮೂಲಮ್ - 2
ಯೇಷಾಂ ಸ ಸಗರೋ ನಾಮ ಸಾಗರೋ ಯೇನ ಖಾನಿತಃ ।
ಷಷ್ಟಿಪುತ್ರಸಹಸ್ರಾಣಿ ಯಂ ಯಾಂತಂ ಪರ್ಯವಾರಯನ್ ॥
ಮೂಲಮ್ - 3
ಇಕ್ಷ್ವಾಕೂಣಾಮಿದಂ ತೇಷಾಂ ರಾಜ್ಞಾಂ ವಂಶೇ ಮಹಾತ್ಮನಾಮ್ ।
ಮಹದುತ್ಪನ್ನಮಾಖ್ಯಾನಂ ರಾಮಾಯಣಮಿತಿ ಶ್ರುತಮ್ ॥
ಅನುವಾದ
ಸಪ್ತದ್ವೀಪಾತ್ಮಕವಾದ ಈ ಭೂಮಿಯು ಮನು ಪ್ರಜಾಪತಿಯ ವಂಶದಲ್ಲಿ ಜನಿಸಿದ ಜಯಶಾಲಿಗಳಾದ ರಾಜರ ಆಳ್ವಿಕೆಗೆ ಒಳಪಟ್ಟಿತ್ತು. ಅವರಲ್ಲಿ ಸಗರನೆಂಬುವವನು ಪ್ರಸಿದ್ಧನಾಗಿದ್ದನು. ಅವನಿಂದಲೇ ಈ ಸಾಗರವು ನಿರ್ಮಾಣಗೊಂಡಿತ್ತು. ದಂಡ ಯಾತ್ರೆಗೆ ಹೋಗುತ್ತಿದ್ದಾಗ ಅವನ ಅರವತ್ತು ಸಾವಿರ ಪುತ್ರರು ಅವರನ್ನು ಹಿಂಬಾಲಿಸುತ್ತಿದ್ದರು. ಮಹಾತ್ಮರಾದ ಇಕ್ಷ್ವಾಕುವೇ ಮೊದಲಾದ ರಾಜರು ಜನಿಸಿದ್ದ ಆ ಮಹಾವಂಶದಲ್ಲಿ ರಾಮಾಯಣವೆಂದು ಹೇಳುವ ಈ ಮಹಾ ಐತಿಹಾಸಿಕ ಕಾವ್ಯದ ಅವತರಣವಾಯಿತು.॥1-3॥
ಮೂಲಮ್ - 4
ತದಿದಂ ವರ್ತಯಿಷ್ಯಾವಃ ಸರ್ವಂ ನಿಖಿಲಮಾದಿತಃ ।
ಧರ್ಮಕಾಮಾರ್ಥಸಹಿತಂ ಶ್ರೋತವ್ಯಮನಸೂಯತಾ ॥
ಅನುವಾದ
ಬ್ರಹ್ಮನ ವರಪ್ರಸಾದದಿಂದ ರಚಿಸಲ್ಪಟ್ಟ ರಾಮಾಯಣ ಕಾವ್ಯವನ್ನು ಆಮೂಲಾಗ್ರವಾಗಿ ನಾವು ಗಾನ ಮಾಡುವೆವು. ಇದರಿಂದ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳೂ ಸಿದ್ಧಿಸುವುದು. ಆದ್ದರಿಂದ ನೀವೆಲ್ಲರೂ ದೋಷದೃಷ್ಟಿಯನ್ನು ಬಿಟ್ಟು ಇದನ್ನು ಶ್ರವಣಿಸಿರಿ.॥4॥
ಮೂಲಮ್ - 5
ಕೋಸಲೋ ನಾಮ ಮುದಿತಃ ಸ್ಫೀತೋ ಜನಪದೋ ಮಹಾನ್ ।
ನಿವಿಷ್ಟಃ ಸರಯೂ ತೀರೇ ಪ್ರಭೂತಧನಧಾನ್ಯವಾನ್ ॥
ಅನುವಾದ
ಸರಯೂ ನದೀ ತೀರದಲ್ಲಿ ಸಮೃದ್ಧವಾದ ಜನಸ್ತೋಮದಿಂದಲೂ, ಸಂತುಷ್ಟ ಜನರಿಂದ ತುಂಬಿದ, ಧನ-ಧಾನ್ಯ ಸಮೃದ್ಧಿಯಿಂದಲೂ ಕೂಡಿರುವ ಕೋಸಲ ಎಂಬ ದೇಶವಿದೆ.॥5॥
ಮೂಲಮ್ - 6
ಅಯೋಧ್ಯಾ ನಾಮ ನಗರೀ ತತ್ರಾಸೀಲ್ಲೋಕವಿಶ್ರುತಾ ।
ಮನುನಾ ಮಾನವೇಂದ್ರೇಣ ಯಾ ಪುರೀ ನಿರ್ಮಿತಾ ಸ್ವಯಮ್ ॥
ಅನುವಾದ
ಆ ಕೋಸಲ ದೇಶದಲ್ಲಿ ಸಮಸ್ತ ಲೋಕಗಳಲ್ಲಿ ವಿಖ್ಯಾತವಾದ ‘ಅಯೋಧ್ಯಾ’ ಎಂಬ ನಗರವಿದೆ. ಅದನ್ನು ಮಾನವೇಂದ್ರನಾದ ಮನು ಮಹಾರಾಜನು ನಿರ್ಮಿಸಿ ನೆಲೆಗೊಳಿಸಿದ್ದನು.॥6॥
ಮೂಲಮ್ - 7
ಆಯತಾ ದಶ ಚ ದ್ವೇ ಚ ಯೋಜನಾನಿ ಮಹಾಪುರೀ ।
ಶ್ರೀಮತೀ ತ್ರೀಣಿ ವಿಸ್ತೀರ್ಣಾ ಸುವಿಭಕ್ತಮಹಾಪಥಾ ॥
ಅನುವಾದ
ಸರ್ವದಾ ಶಾಂತಿಯಿಂದ ಕೂಡಿರುವ ಆ ಮಹಾನಗರಿಯು ಹನ್ನೆರಡು ಯೋಜನ ಉದ್ದ ಮತ್ತು ಮೂರು ಯೋಜನ ಅಗಲವಾಗಿದೆ. ಅಲ್ಲಿನ ಬೀದಿಗಳು ಬಹಳ ಅಗಲವಾಗಿಯೂ, ಸಾಲುಮರಗಳಿಂದ ಅಲಂಕೃತವೂ ಆಗಿವೆ.॥7॥
ಮೂಲಮ್ - 8
ರಾಜಮಾರ್ಗೇಣ ಮಹತಾ ಸುವಿಭಕ್ತೇನ ಶೋಭಿತಾ ।
ಮುಕ್ತಪುಷ್ಪಾವಕೀರ್ಣೇನ ಜಲಸಿಕ್ತೇನ ನಿತ್ಯಶಃ ॥
ಅನುವಾದ
ವಿಭಾಗಪೂರ್ವಕ ಸುಂದರವಾದ ರಾಜಮಾರ್ಗಗಳು ಆ ನಗರಿಯ ಶೋಭೆಯನ್ನು ಹೆಚ್ಚಿಸಿದ್ದವು. ಅವುಗಳಲ್ಲಿ ಸಾಲು ಮರಗಳ ಹೂವುಗಳೂ ಹರಡಿಕೊಂಡಿರುತ್ತಿದ್ದವು. ಧೂಳಾಗದಂತೆ ಪ್ರತಿದಿನ ರಾಜಮಾರ್ಗಗಳಿಗೆ ನೀರನ್ನು ಚಿಮುಕಿಸುತ್ತಿದ್ದರು.॥8॥
ಮೂಲಮ್ - 9
ತಾಂ ತು ರಾಜಾ ದಶರಥೋ ಮಹಾರಾಷ್ಟ್ರವಿವರ್ಧನಃ ।
ಪುರೀಮಾವಾಸಯಾಮಾಸ ದಿವಿ ದೇವಪತಿರ್ಯಥಾ ॥
ಅನುವಾದ
ಆ ರಾಷ್ಟ್ರವನ್ನು (ಕೋಸಲ ರಾಜ್ಯವನ್ನು) ಧರ್ಮದಿಂದ ಪರಿಪಾಲಿಸುತ್ತಿದ್ದ ರಾಷ್ಟ್ರವರ್ಧನನಾದ ದಶರಥನು ಅಮರಾವತಿಯಲ್ಲಿ ದೇವೇಂದ್ರನು ವಾಸಿಸುವಂತೆ ಅಯೋಧ್ಯಾನಗರಿಯಲ್ಲಿ ವಾಸಿಸುತ್ತಿದ್ದನು.॥9॥
ಮೂಲಮ್ - 10
ಕಪಾಟತೋರಣವತೀಂ ಸುವಿಭಕ್ತಾಂತರಾಪಣಾಮ್ ।
ಸರ್ವಯಂತ್ರಾಯುಧವತೀಮುಷಿತಾ ಸರ್ವಶಿಲ್ಪಿಭಿಃ ॥
ಅನುವಾದ
ಆ ಪುರಿಯು ಪ್ರಶಸ್ತವಾದ ಬಾಗಿಲುಗಳಿಂದಲೂ ಹೊರ ಬಾಗಿಲುಗಳಿಂದಲೂ ಸುಶೋಭಿತವಾಗಿತ್ತು. ನಗರದೊಳಗೆ ಚಿಕ್ಕ ಚಿಕ್ಕ ಪೇಟೆಗಳಿದ್ದವು. ಅಲ್ಲಿ ಎಲ್ಲ ರೀತಿಯ ಯಂತ್ರ ಮತ್ತು ಅಸ್ತ್ರ-ಶಸ್ತ್ರಗಳು ಸಮೃದ್ಧವಾಗಿದ್ದವು. ಅಲ್ಲಿ ನಾನಾ ವಿಧವಾದ ಕಲೆಗಳ ಶಿಲ್ಪಿಗಳು ವಾಸಿಸುತ್ತಿದ್ದರು.॥10॥
ಮೂಲಮ್ - 11
ಸೂತಮಾಗಧಸಂಬಾಧಾಂ ಶ್ರೀಮತೀಮತುಲಪ್ರಭಾಮ್ ।
ಉಚ್ಚಾಟ್ಟಾಲಧ್ವಜವತೀಂ ಶತಘ್ನೀಶತಸಂಕುಲಾಮ್ ॥
ಅನುವಾದ
ಸ್ತುತಿಪಾಠ ಮಾಡುವ ಸೂತರು, ವಂಶಾವಳಿಯನ್ನು ಹೊಗಳುವ ಮಾಗಧರು ಅನೇಕರಿದ್ದರು. ಆ ನಗರಿಯು ಧನ-ಧಾನ್ಯಗಳಿಂದ ಸಮೃದ್ಧವಾಗಿಯೂ ಅನುಪಮ ಕಾಂತಿಯುತವಾಗಿತ್ತು. ಆ ನಗರಿಯಲ್ಲಿ ಎತ್ತರವಾದ ನೂರಾರು ಮಹಡಿಗಳಿದ್ದವು. ಅವುಗಳ ಮೇಲೆ ಧ್ವಜ ಪತಾಕೆಗಳು ಹಾರಾಡುತ್ತಿದ್ದವು. ನೂರಾರು ತೋಪುಗಳು ಶತ್ರುಗಳ ವಿನಾಶಕ್ಕಾಗಿ ಸ್ಥಾಪಿಸಿದ್ದವು.॥11॥
ಮೂಲಮ್ - 12
ವಧೂನಾಟಕಸಂಘೈಶ್ಚ ಸಂಯುಕ್ತಾಂ ಸರ್ವತಃ ಪುರೀಮ್ ।
ಉದ್ಯಾನಾಮ್ರವಣೋಪೇತಾಂ ಮಹತೀಂ ಸಾಲಮೇಖಲಾಮ್ ॥
ಅನುವಾದ
ಆ ಪಟ್ಟಣದಲ್ಲಿ ಅಲ್ಲಲ್ಲಿ ನರ್ತಕಿಯರ ಸಂಘಗಳೂ, ಸ್ತ್ರೀ ನಾಟಕ ಮಂಡಳಿಗಳೂ ಇದ್ದವು. ಸುತ್ತಲು ಮಾವು, ಹಲಸು, ಮುಂತಾದ ವೃಕ್ಷಗಳಿಂದ ಕೂಡಿದ ಉದ್ಯಾನವನಗಳಿದ್ದವು. ನಗರದ ಸುತ್ತಲೂ ನಿರ್ಮಿಸಿರುವ ಪ್ರಾಕಾರವು ಮೇಖಲೆಯಂತೆ ಶೋಭಿಸುತ್ತಿತ್ತು.॥12॥
ಮೂಲಮ್ - 13
ದುರ್ಗಗಂಭೀರಪರಿಖಾಂ ದುರ್ಗಾಮನ್ಯೈರ್ದುರಾಸದಮ್ ।
ವಾಜಿವಾರಣ ಸಂಪೂರ್ಣಾಂ ಗೋಭಿರುಷ್ಟ್ರೈಃ ಖರೈಸ್ತಥಾ ॥
ಅನುವಾದ
ನಗರದ ಸುತ್ತಲೂ ಆಳವಾದ ಕಂದಕಗಳಿದ್ದು, ಅದನ್ನು ದಾಟುವುದು, ಹಾರುವುದು ಅತ್ಯಂತ ಕಠಿಣವಾಗಿತ್ತು. ಆ ನಗರಿಯು ಶತ್ರುಗಳಿಗೆ ಹಾಗೂ ಇತರರಿಗೆ ದುರ್ಜಯ ದುರ್ಗಮವಾಗಿತ್ತು. ಆನೆ, ಕುದುರೆ, ಎತ್ತು, ಆಕಳು, ಒಂಟೆ ಕತ್ತೆ ಮುಂತಾದ ಉಪಯೋಗಿ ಪಶುಗಳಿಂದ ಆ ಪುರಿಯು ತುಂಬಿ ತುಳುಕುತ್ತಿತ್ತು.॥13॥
ಮೂಲಮ್ - 14
ಸಾಮಂತರಾಜ ಸಂಘೈಶ್ಚ ಬಲಿಕರ್ಮಭಿರಾವೃತಾಮ್ ।
ನಾನಾದೇಶನಿವಾಸೈಶ್ಚ ವಣಿಗ್ಭಿರುಪಶೋಭಿತಾಮ್ ॥
ಅನುವಾದ
ದಶರಥನಿಗೆ ಕಪ್ಪ ಕಾಣಿಕೆ ಹೊತ್ತು ತಂದ ಅನೇಕ ಸಾಮಂತ ರಾಜರಿಂದ ಆ ಪಟ್ಟಣವು ತುಂಬಿಹೋಗಿತ್ತು. ಬೇರೆ ಬೇರೆ ದೇಶಗಳ ವ್ಯಾಪಾರೀ ವೈಶ್ಯರು ಆ ಪುರಿಯ ಶೋಭೆ ಹೆಚ್ಚಿಸಿದ್ದರು.॥14॥
ಮೂಲಮ್ - 15
ಪ್ರಾಸಾದೈ ರತ್ನವಿಕೃತೈಃ ಪರ್ವತೈರಿವ ಶೋಭಿತಾಮ್ ।
ಕೂಟಾಗಾರೈಶ್ಚ ಸಂಪೂರ್ಣಾಮಿಂದ್ರಸ್ಯೇವಾಮರಾವತೀಮ್ ॥
ಅನುವಾದ
ಅಲ್ಲಿನ ರಾಜಗೃಹಗಳು ರತ್ನಖಚಿತವಾಗಿದ್ದವು. ಆ ಗಗನಚುಂಬೀ ಪ್ರಾಸಾದಗಳು ಪರ್ವತದಂತೆ ಕಾಣುತ್ತಿದ್ದವು. ಅದರಿಂದ ಆ ಪುರಿಯ ಸೌಂದರ್ಯ ಇನ್ನೂ ಹೆಚ್ಚಿತ್ತು. ಅನೇಕ ಕೂಟಾಗಾರಗಳಿಂದ (ಗುಪ್ತಗೃಹಗಳು ಅಥವಾ ಸ್ತ್ರೀಯರ ಕ್ರೀಡಾಭವನಗಳು) ಪರಿಪೂರ್ಣವಾದ ಆ ನಗರಿಯು ಇಂದ್ರನ ಅಮರಾವತಿಯಂತೆ ಕಂಡುಬರುತ್ತಿತ್ತು.॥15॥
ಮೂಲಮ್ - 16
ಚಿತ್ರಾಮಷ್ಟಾಪದಾಕಾರಾಂ ವರನಾರೀಗಣಾಯುತಾಮ್ ।
ಸರ್ವರತ್ನ ಸಮಾಕೀರ್ಣಾಂ ವಿಮಾನಗೃಹಶೋಭಿತಾಮ್ ॥
ಅನುವಾದ
ಅಲ್ಲಿಯ ರಾಜಗೃಹಗಳು ವಿಚಿತ್ರ ರೀತಿಯಲ್ಲಿದ್ದವು. ಆ ಪಟ್ಟಣವು ಅಷ್ಟಾಪದ ಫಲದಂತೆ ಎಂಟು ಭಾಗಗಳಿಂದಲೂ, ಲೋಕಸುಂದರಿಯರಾದ ಸ್ತ್ರೀ ಸಮೂಹದಿಂದಲೂ, ನಾನಾ ವಿಧವಾದ ಬಹುಮೌಲ್ಯವಾದ ವಜ್ರವೈಢೂರ್ಯಾದಿಗಳಿಂದಲೂ, ವಿಮಾನ ಗೃಹಗಳಿಂದಲೂ ಶೋಭಿಸುತ್ತಿದ್ದವು.॥16॥
ಮೂಲಮ್ - 17
ಗೃಹಗಾಢಾಮವಿಚ್ಛಿದ್ರಾಂ ಸಮಭೂಮೌ ನಿವೇಶಿತಾಮ್ ।
ಶಾಲಿತಂಡುಲಸಂಪೂರ್ಣಾಮಿಕ್ಷುಕಾಂಡರಸೋದಕಾಮ್ ॥
ಅನುವಾದ
ಪಟ್ಟಣಿಗರ ಮನೆಗಳು ನಿಬಿಡವಾಗಿಯೂ, ಸುಂದರವಾಗಿಯೂ ಕಟ್ಟಿದ್ದರು. ನಗರಿಯು ಸಮತಟ್ಟಾದ ನೆಲದಲ್ಲಿ ಕಟ್ಟಲಾಗಿತ್ತು. ಅಲ್ಲಿ ಶಾಲಿ-ತಂಡುಲ ಧಾನ್ಯಗಳು ಸಮೃದ್ಧವಾಗಿದ್ದವು ಹಾಗೂ ಕಬ್ಬಿನ ಹಾಲಿನಂತಹ ರುಚಿಕರ ನೀರು ಸಮೃದ್ಧವಾಗಿತ್ತು.॥17॥
ಮೂಲಮ್ - 18
ದುಂದುಭೀಭಿರ್ಮೃದಂಗೈಶ್ಚ ವೀಣಾಭಿಃ ಪಣವೈಸ್ತಥಾ ।
ನಾದಿತಾಂ ಭೃಶಮತ್ಯರ್ಥಂ ಪೃಥಿವ್ಯಾಂ ತಾಮನುತ್ತಮಾಮ್॥
ಅನುವಾದ
ಭೂಮಂಡಲದ ಆ ಸರ್ವೋತ್ತಮ ನಗರಿಯಲ್ಲಿ ಎಲ್ಲೆಡೆ ದುಂದುಭಿ, ಮೃದಂಗ, ವೀಣೆ, ಪಣವ ಮುಂತಾದ ವಾದ್ಯಗಳ ಮಧುರ ಧ್ವನಿಗಳು ಕೇಳಿ ಬರುತ್ತಿದ್ದವು.॥18॥
ಮೂಲಮ್ - 19
ವಿಮಾನಮಿವ ಸಿದ್ಧಾನಾಂ ತಪಸಾಧಿಗತಂ ದಿವಿ ।
ಸುನಿವೇಶಿತವೇಶ್ಮಾಂತಾಂ ನರೋತ್ತಮಸಮಾವೃತಾಮ್ ॥
ಅನುವಾದ
ತಪಃಸಿದ್ಧಿಯಿಂದ ಪಡೆದ ದೇವಲೋಕದ ದೇವವಿಮಾನಗಳಂತೆ ಅಯೋಧ್ಯಾನಗರದಲ್ಲಿ ನಯನ ಮನೋಹರವಾಗಿ ನಿರ್ಮಿತವಾದ ಸುಂದರ ನಿವಾಸಗಳಲ್ಲಿ ಬಹಳಷ್ಟು ಶ್ರೇಷ್ಠ ಪುರುಷರು ವಾಸವಾಗಿದ್ದರು.॥19॥
ಮೂಲಮ್ - 20
ಯೇ ಚ ಬಾಣೈರ್ನವಿಧ್ಯಂತಿ ವಿವಿಕ್ತಮಪರಾಪರಮ್ ।
ಶಬ್ದವೇಧ್ಯಂ ಚ ವಿತತಂ ಲಘುಹಸ್ತಾ ವಿಶಾರದಾಃ ॥
ಮೂಲಮ್ - 21
ಸಿಂಹವ್ಯಾಘ್ರವರಾಹಾಣಾಂ ಮತ್ತಾನಾಂ ನದತಾಂ ವನೇ ।
ಹಂತಾರೋ ನಿಶಿತೈಃ ಶಸ್ತ್ರೈರ್ಬಲಾದ್ಬಾಹುಬಲೈರಪಿ ॥
ಮೂಲಮ್ - 22
ತಾದೃಶಾನಾಂ ಸಹಸ್ರೈಸ್ತಾಮಭಿಪೂರ್ಣೋ ಮಹಾರಥೈಃ ।
ಪುರೀಮಾವಾಸಯಾಮಾಸ ರಾಜಾ ದಶರಥಸ್ತದಾ ॥
ಅನುವಾದ
ಆ ರಾಷ್ಟ್ರದ ಸೈನಿಕರು ಬಾಣಪ್ರಯೋಗದಲ್ಲಿ ನಿಪುಣರೂ ಕೈಚಳಕವುಳ್ಳವರೂ, ಶಸ್ತ್ರಾಸ್ತ್ರ ವಿಶಾರದರೂ ಆಗಿದ್ದರೂ, ಅವರು ಅಸಹಾಯಕನನ್ನು, ಏಕಮಾತ್ರ ಪುತ್ರನಿರುವವನನ್ನು ಪಲಾಯನ ಮಾಡುವವನನ್ನು, ಅಡಗಿಕೊಂಡಿರುವವನನ್ನು, ಕೊಲ್ಲುತ್ತಿರಲಿಲ್ಲ. ಕಾಡಿನಲ್ಲಿ ಗರ್ಜಿಸುವ ಸಿಂಹ, ಹುಲಿ, ಕಾಡುಹಂದಿ ಮೊದಲಾದ ದುಷ್ಟ ಮೃಗಗಳನ್ನ ಕೊಲ್ಲಲು ಅವರು ಸಮರ್ಥರಾಗಿದ್ದರು. ಇಂತಹ ಸಾವಿರಾರು ಮಹಾರಥಿಗಳಿಂದ ಅಯೋಧ್ಯೆಯು ತುಂಬಿದ್ದಿತು. ಇಂತಹ ಮಹಾನಗರಿಯನ್ನು ದಶರಥ ಮಹಾರಾಜನು ಹಿಂದಿನವರಿಗಿಂತ ಚೆನ್ನಾಗಿ ಆಳುತ್ತಿದ್ದನು.॥20-22॥
ಮೂಲಮ್ - 23
ತಾಮಗ್ನಿಮದ್ಭಿರ್ಗುಣವದ್ಭಿರಾವೃತಾಂ
ದ್ವಿಜೋತ್ತಮೈರ್ವೇದಷಡಂಗಪಾರಗೈಃ ।
ಸಹಸ್ರದೈಃ ಸತ್ಯರತೈರ್ಮಹಾತ್ಮಭಿ-
ರ್ಮಹರ್ಷಿಕಲ್ಪೈರ್ ಋಷಿಭಿಶ್ಚ ಕೇವಲೈಃ ॥
ಅನುವಾದ
ಆ ಮಹಾನಗರಿಯಲ್ಲಿ ಅನೇಕ ಆಹಿತಾಗ್ನಿಗಳೂ, ಶಮದಮಾದಿಗುಣಾನ್ವಿತರೂ, ವೇದ-ವೇದಾಂಗ ಪಾರಂಗತರೂ ಆದ ದ್ವಿಜೋತ್ತಮರಿದ್ದರು. ಸಾವಿರಾರು ಸಂಖ್ಯೆಯಲ್ಲಿ ದಾನ ಮಾಡುವವರೂ, ಸತ್ಯಪ್ರಿಯರಾದ ಮಹಾತ್ಮರೂ, ಆ ಪಟ್ಟಣದಲ್ಲಿ ಇದ್ದರು. ಮಹರ್ಷಿಗಳಿಗೆ ಸಮಾನರಾದ ಅನೇಕ ಮುನಿಗಳಿದ್ದರು. ಇಂತಹ ಶೋಭಿತ ಅಯೋಧ್ಯಾಪುರಿಯನ್ನು ರಾಜಾ ದಶರಥನು ಆಳುತ್ತಿದ್ದನು.॥23॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಐದನೆಯ ಸರ್ಗ ಪೂರ್ಣವಾಯಿತು.॥5॥