वाचनम्
ಭಾಗಸೂಚನಾ
ವಾಲ್ಮೀಕಿ ಮಹರ್ಷಿಗಳು ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಲ್ಲಿ ರಾಮಾಯಣವನ್ನು ರಚಿಸಿ, ಲವ-ಕುಶರಿಗೆ ಉಪದೇಶಿಸಿದುದು, ಮುನಿಗಳ ಸಮೂಹದಲ್ಲಿ ಲವ-ಕುಶರು ರಾಮಾಯಣವನ್ನು ತಾಳ-ಲಯಬದ್ಧವಾಗಿ ಹಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾದುದು, ಶ್ರೀರಾಮನಿಂದಲೂ ಸಮ್ಮಾನಿತರಾಗಿ ಶ್ರೀರಾಮನ ಆಸ್ಥಾನದಲ್ಲಿ ರಾಮಾಯಣದ ಗಾನ
ಮೂಲಮ್ - 1
ಪ್ರಾಪ್ತರಾಜಸ್ಯ ರಾಮಸ್ಯ ವಾಲ್ಮೀಕಿರ್ಭಗವಾನೃಷಿಃ ।
ಚಕಾರ ಚರಿತಂ ಕೃತ್ಸ್ನಂ ವಿಚಿತ್ರಪದಮರ್ಥವತ್ ॥
ಅನುವಾದ
ಸಕಲಗುಣಾಭಿರಾಮನಾದ ಶ್ರೀರಾಮನಿಗೆ ಸಾಮ್ರಾಜ್ಯ ಪ್ರಾಪ್ತಿಯಾದ ಬಳಿಕ ಪೂಜ್ಯರಾದ ವಾಲ್ಮೀಕಿ ಮುನಿಗಳು ರಾಮನ ಇಡೀ ಚರಿತ್ರೆಯ ಆಧಾರದಲ್ಲಿ ಚಿತ್ರ-ವಿಚಿತ್ರವಾದ ಶಬ್ದಾಲಂಕಾರಗಳಿಂದ ಕೂಡಿದ ರಾಮಾಯಣ ಮಹಾ ಕಾವ್ಯವನ್ನು ರಚಿಸಿದರು.॥1॥
ಮೂಲಮ್ - 2
ಚತುರ್ವಿಂಶತ್ಸಹಸ್ರಾಣಿ ಶ್ಲೋಕಾನಾಮುಕ್ತವಾನೃಷಿಃ ।
ತಥಾ ಸರ್ಗಶತಾನ್ಪಂಚ ಷಟ್ಕಾಂಡಾನಿ ತಥೋತ್ತರಮ್ ॥
ಅನುವಾದ
ಮಹರ್ಷಿಗಳು ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳನ್ನು ಐದು ನೂರು ಸರ್ಗ ಹಾಗೂ ಉತ್ತರ ಸಹಿತ ಏಳು ಕಾಂಡಗಳನ್ನೊಳಗೊಂಡ ಶ್ರೀಮದ್ರಾಮಾಯಣವನ್ನು ರಚಿಸಿದರು.॥2॥
ಮೂಲಮ್ - 3
ಕೃತ್ವಾತು ತನ್ಮಹಾಪ್ರಾಜ್ಞಃ ಸಭವಿಷ್ಯಂ ಸಹೋತ್ತರಮ್ ।
ಚಿಂತಯಾಮಾಸ ಕೋ ನ್ವೇತತ್ಪ್ರಯುಂಜೀಯಾದಿತಿ ಪ್ರಭುಃ ॥
ಅನುವಾದ
ಭವಿಷ್ಯ ಹಾಗೂ ಉತ್ತರಕಾಂಡ ಸಹಿತ ಸಮಸ್ತ ರಾಮಾಯಣವನ್ನು ಪೂರ್ಣಗೊಳಿಸಿದ ಬಳಿಕ, ಮಹಾಜ್ಞಾನಿಗಳಾದ ಮಹರ್ಷಿ ವಾಲ್ಮೀಕಿಗಳು ಈ ಮಹಾಕಾವ್ಯವನ್ನು ಕಲಿತು ಜನಸಮುದಾಯಕ್ಕೆ ಹೇಳಬಲ್ಲ ಸಮರ್ಥಶಾಲಿ ಪುರುಷನು ಯಾರಿರಬಹುದು? ಎಂದು ಯೋಚಿಸಿದರು.॥3॥
ಮೂಲಮ್ - 4
ತಸ್ಯ ಚಿಂತಯಮಾನಸ್ಯ ಮಹರ್ಷೇರ್ಭಾವಿತಾತ್ಮನಃ ।
ಅಗೃಹೀತಾಂ ತತಃ ಪಾದೌ ಮುನಿವೇಷೌ ಕುಶೀಲವೌ ॥
ಅನುವಾದ
ಶುದ್ಧಾಂತಃಕರಣವುಳ್ಳ ಆ ಮಹರ್ಷಿಗಳು ಹೀಗೆ ವಿಚಾರ ಮಾಡುತ್ತಿರುವಾಗಲೇ ಮುನಿವೇಷದಲ್ಲಿದ್ದ ರಾಜಕುಮಾರ ಕುಶ ಮತ್ತು ಲವರು ಬಂದು ಅವರ ಚರಣಗಳಲ್ಲಿ ವಂದಿಸಿಕೊಂಡರು.॥4॥
ಮೂಲಮ್ - 5
ಕುಶೀಲವೌ ತು ಧರ್ಮಜ್ಞೌ ರಾಜಪುತ್ರೌ ಯಶಸ್ವಿನೌ ।
ಭ್ರಾತರೌ ಸ್ವರಸಂಪನ್ನೌ ದದರ್ಶಾಶ್ರಮವಾಸಿನೌ ॥
ಮೂಲಮ್ - 6
ಸ ತು ಮೇಧಾವಿನೌ ದೃಷ್ಟ್ವಾ ವೇದೇಷು ಪರಿನಿಷ್ಠಿತೌ ।
ವೇದೋಪಬೃಂಹಣಾರ್ಥಾಯ ತಾವಗ್ರಾಹಯತ ಪ್ರಭುಃ ॥
ಮೂಲಮ್ - 7
ಕಾವ್ಯಂ ರಾಮಾಯಣಂ ಕೃತ್ಸ್ನಂ ಸೀತಾಯಾಶ್ಚರಿತಂ ಮಹತ್ ।
ಪೌಲಸ್ತ್ಯವಧಮಿತ್ಯೇವಂ ಚಕಾರ ಚರಿತವ್ರತಃ ॥
ಅನುವಾದ
ಕುಶ-ಲವ ಸಹೋದರರಿಬ್ಬರು ಧರ್ಮವನ್ನು ತಿಳಿದ ಯಶಸ್ವೀ ರಾಜಕುಮಾರರಾಗಿದ್ದರು. ಅವರ ಸ್ವರವು ಬಹಳ ಮಧುರವಾಗಿದ್ದು, ಮುನಿಗಳ ಆಶ್ರಮದಲ್ಲೇ ಇದ್ದರು. ವೇದಪಾರಂಗತರಾದ ಅವರ ಧಾರಣಾಶಕ್ತಿ ಅದ್ಭುತವಾಗಿತ್ತು. ಪೂಜ್ಯರಾದ ವಾಲ್ಮೀಕಿಗಳು ಅವರನ್ನು ನೋಡಿ, ಇವರೇ ಸುಯೋಗ್ಯರೆಂದು ತಿಳಿದು ಉತ್ತಮ ವ್ರತವನ್ನು ಪಾಲಿಸುವ ಆ ಮಹರ್ಷಿಗಳು ವೇದಾರ್ಥದ ವಿಸ್ತಾರದಿಂದ ಒಳಗೊಂಡ ಸೀತೆಯ ಚರಿತ್ರೆಯಿಂದ ಯುಕ್ತವಾದ, ಪೌಲಸ್ತ್ಯವಧ ಎಂಬ ರಾಮಾಯಣ ಮಹಾಕಾವ್ಯವನ್ನು ಪೂರ್ಣವಾಗಿ ಅವರಿಗೆ ಅಧ್ಯಯನ ಮಾಡಿಸಿದರು.॥5-7॥
ಮೂಲಮ್ - 8
ಪಾಠ್ಯೇ ಗೇಯೇ ಚ ಮಧುರಂ ಪ್ರಮಾಣೈಸ್ತ್ರಿಭಿರನ್ವಿತಮ್ ।
ಜಾತಿಭಿಃ ಸಪ್ತಭಿರ್ಯುಕ್ತಂ ತಂತ್ರೀಲಯಸಮನ್ವಿತಮ್ ॥
ಮೂಲಮ್ - 9
ರಸೈಃ ಶೃಂಗಾರಕಾರುಣ್ಯಹಾಸ್ಯರೌದ್ರಭಯಾನಕೈಃ ।
ವೀರಾದಿಭೀರಸೈರ್ಯುಕ್ತಂ ಕಾವ್ಯಮೇತದಗಾಯತಾಮ್ ॥
ಅನುವಾದ
ಆ ಮಹಾಕಾವ್ಯವು ಓದಲು ಮತ್ತು ಹಾಡಲು ಮಧುರವಾಗಿದ್ದು, ದ್ರುತ, ಮಧ್ಯ, ವಿಲಂಬಿತ ಎಂಬ ಮೂರು ಗತಿಗಳಿಗೆ ಹೊಂದುವ ಷಡ್ಜ, ರಿಷಭ ಆದಿ ಸಪ್ತಸ್ವರಯುಕ್ತ, ವೀಣಾಸ್ವರ - ತಾಲದೊಂದಿಗೆ ಹಾಡಲು ಯೋಗ್ಯವಾಗಿತ್ತು. ಶೃಂಗಾರ, ಕರುಣ, ಹಾಸ್ಯ, ರೌದ್ರ, ಭಯಾನಕ ಮತ್ತು ವೀರ ಮುಂತಾದ ಎಲ್ಲ ರಸಗಳಿಂದ ಯುಕ್ತವಾಗಿತ್ತು. ಇಬ್ಬರು ಸಹೋದರ ಕುಶ-ಲವರು ಆ ಆದಿ ಕಾವ್ಯವನ್ನು ಕಲಿತು ಹಾಡಲು ತೊಡಗಿದರು.॥8-9॥
ಮೂಲಮ್ - 10
ತೌ ತು ಗಾಂಧರ್ವತತ್ತ್ವಜ್ಞೌ ಸ್ಥಾನಮೂರ್ಛನಕೋವಿದೌ ।
ಭ್ರಾತರೌ ಸ್ವರಸಂಪನ್ನೌ ಗಂಧರ್ವಾವಿವ ರೂಪಿಣೌ ॥
ಅನುವಾದ
ಆ ಇಬ್ಬರು ಸಹೋದರರು ಗಂಧರ್ವವಿದ್ಯೆ ಸಂಗೀತಶಾಸ್ತ್ರ ತತ್ವಜ್ಞರೂ, ಸ್ಥಾನ ಮತ್ತು ಮೂರ್ಛನಾದಿಗಳ ಅರಿವಿದ್ದರೂ, ಮಧುರ ಸ್ವರ ಸಂಪನ್ನರೂ, ಗಂಧರ್ವರಂತೆ ಮನೋಹರ ರೂಪ ಉಳ್ಳವರೂ ಆಗಿದ್ದರ.॥10॥
ಮೂಲಮ್ - 11
ರೂಪಲಕ್ಷಣಸಂಪನ್ನೌ ಮಧುರಸ್ವರಭಾಷಿಣೌ।
ಬಿಂಬಾದಿವೋತ್ಥಿತೌ ಬಿಂಬೌ ರಾಮದೇಹಾತ್ತಥಾಪರೌ ॥
ಅನುವಾದ
ಸುಂದರ ರೂಪ ಮತ್ತು ಶುಭಲಕ್ಷಣಗಳು ಅವರ ಸಹಜ ಸಂಪತ್ತಾಗಿತ್ತು. ಅವರಿಬ್ಬರು ಮಧುರ ಸ್ವರದಿಂದ ಮಾತನಾಡುತ್ತಿದ್ದರು. ಬಿಂಬದಿಂದ ಪ್ರತಿಬಿಂಬವು ಮೂಡುವಂತೆ ಆ ಸಹೋದರರಿಬ್ಬರು ಶ್ರೀರಾಮನ ಶರೀರದಿಂದ ಪ್ರಕಟರಾದ ರಾಮನ ಎರಡು ಬಿಂಬಾಕೃತಿಗಳಂತೆಯೇ ಕಾಣುತ್ತಿದ್ದರು.॥11॥
ಮೂಲಮ್ - 12
ತೌ ರಾಜಪುತ್ರೌ ಕಾರ್ತ್ಸ್ನ್ಯೇನ ಧರ್ಮಾಖ್ಯಾನಮುತ್ತಮಮ್ ।
ವಾಚೋವಿಧೇಯಂ ತತ್ಸರ್ವಂ ಕೃತ್ವಾ ಕಾವ್ಯಮನಿಂದಿತೌ ॥
ಮೂಲಮ್ - 13
ಋಷೀಣಾಂ ಚ ದ್ವಿಜಾತೀನಾಂ ಸಾಧೂನಾಂ ಚ ಸಮಾಗಮೇ ।
ಯಥೋಪದೇಶಂ ತತ್ತ್ವಜ್ಞೌ ಜಗತುಃ ಸುಸಮಾಹಿತೌ ॥
ಅನುವಾದ
ಆ ರಾಜಕುಮಾರರಿಬ್ಬರೂ ಎಲ್ಲ ಜನರ ಪ್ರಶಂಸೆಗೆ ಪಾತ್ರರಾಗಿದ್ದರು. ಅವರು ಆ ಧರ್ಮಾನುಕೂಲ ಉತ್ತಮ ಉಪಾಖ್ಯಾನಮಯ ಸಂಪೂರ್ಣ ಕಾವ್ಯವನ್ನು ಬಾಯಿಪಾಠ ಮಾಡಿಕೊಂಡಿದ್ದರು. ಎಂದಾದರೂ ಋಷಿಮುನಿಗಳ, ಬ್ರಾಹ್ಮಣರ, ಸಾಧುಗಳ ಸಮಾಗಮವಾದಾಗ ಅವರ ನಡುವೆ ಕುಳಿತುಕೊಂಡು ತತ್ವಜ್ಞರಾದ ಅವರಿಬ್ಬರೂ ಬಾಲಕರು ಏಕಾಗ್ರಚಿತ್ತರಾಗಿ ರಾಮಾಯಣವನ್ನು ಹಾಡುತ್ತಿದ್ದರು.॥12-13॥
ಮೂಲಮ್ - 14
ಮಹಾತ್ಮಾನೌ ಮಹಾಭಾಗೌ ಸರ್ವಲಕ್ಷಣಲಕ್ಷಿತೌ ।
ತೌ ಕದಾಚಿತ್ಸಮೇತಾನಾಮೃಷೀಣಾಂ ಭಾವಿತಾತ್ಮನಾಮ್ ॥
ಮೂಲಮ್ - 15
ಮಧ್ಯೇ ಸಭಂ ಸಮೀಪಸ್ಥಾವಿದಂ ಕಾವ್ಯಮಗಾಯತಾಮ್ ।
ತಚ್ಛ್ರುತ್ವಾ ಮುನಯಃ ಸರ್ವೇ ಬಾಷ್ಪಪರ್ಯಾಕುಲೇಕ್ಷಣಾಃ ॥
ಮೂಲಮ್ - 16
ಸಾಧು ಸಾಧ್ವಿತಿ ತಾವೂಚುಃ ಪರಂ ವಿಸ್ಮಯಮಾಗತಾಃ ।
ತೇ ಪ್ರೀತಮನಸಃ ಸರ್ವೇ ಮುನಯೋ ಧರ್ಮವತ್ಸಲಾಃ ॥
ಅನುವಾದ
ಒಂದು ದಿನ ಬಹಳಷ್ಟು ಶುದ್ಧ ಅಂತಃಕರಣವುಳ್ಳ ಮಹರ್ಷಿಗಳ ಸಂಸತ್ತು ನೆರೆದಿತ್ತು. ಅವರಲ್ಲಿ ಮಹಾಭಾಗ್ಯ ಶಾಲಿಗಳೂ, ಶುಭಲಕ್ಷಣಗಳಿಂದ ಸುಶೋಭಿತರಾದ ಕುಶ-ಲವರೂ ಉಪಸ್ಥಿತರಾಗಿದ್ದರು. ಅವರು ಆ ಸಭೆಯಲ್ಲಿ ಸೇರಿದ ಮಹಾತ್ಮರ ಮುಂದೆ ರಾಮಾಯಣ ಕಾವ್ಯವನ್ನು ಮಧುರವಾಗಿ ಹಾಡಿದರು. ಅದನ್ನು ಕೇಳಿ ಎಲ್ಲ ಮುನಿಗಳ ಕಣ್ಣುಗಳಿಂದ ಆನಂದಾಶ್ರುಗಳು ಸುರಿದವು. ಅವರು ಅತ್ಯಂತ ಆಶ್ಚರ್ಯಗೊಂಡವರಾಗಿ ಸಾಧು! ಸಾಧು! ಎಂದು ಪ್ರಶಂಸಿಸಿದರು. ಮುನಿಗಳು ಧರ್ಮ ವತ್ಸಲರೇ ಆಗಿರುತ್ತಾರೆ. ಆ ಧಾರ್ಮಿಕ ಉಪಾಖ್ಯಾನವನ್ನು ಕೇಳಿ ಎಲ್ಲರ ಮನಸ್ಸಿಗೆ ಬಹಳ ಸಂತೋಷವಾಯಿತು.॥14-16॥
ಮೂಲಮ್ - 17
ಪ್ರಶಶಂಸುಃ ಪ್ರಶಸ್ತವ್ಯೌ ಗಾಯಮಾನೌ ಕುಶೀಲವೌ ।
ಅಹೋ ಗೀತಸ್ಯ ಮಾಧುರ್ಯಂ ಶ್ಲೋಕಾನಾಂ ಚ ವಿಶೇಷತಃ ॥
ಅನುವಾದ
ರಾಮಾಯಣ ಕಥೆಯ ಗಾಯಕರಾದ ಕುಶ-ಲವರು ಪ್ರಶಂಸೆಗೆ ಯೋಗ್ಯರೇ ಆಗಿದ್ದರು. ಮುನಿಗಳು ಈ ಪ್ರಕಾರ ಹೊಗಳತೊಡಗಿದರು. ಆಹಾ! ಈ ಬಾಲಕರ ಗಾಯನದಲ್ಲಿ ಎಷ್ಟು ಮಾಧುರ್ಯವಿದೆ! ಶ್ಲೋಕಗಳ ಮಾಧುರ್ಯವಂತೂ ಇನ್ನೂ ಅದ್ಭುತವಾಗಿದೆ.॥17॥
ಮೂಲಮ್ - 18½
ಚಿರನಿರ್ವೃತ್ತಮಪ್ಯೇತತ್ ಪ್ರತ್ಯಕ್ಷಮಿವ ದರ್ಶಿತಮ್ ।
ಪ್ರವಿಶ್ಯ ತಾವುಭೌ ಸುಷ್ಠು ತಥಾಭಾವಮಗಾಯತಾಮ್ ॥
ಸಹಿತೌ ಮಧುರಂ ರಕ್ತಂ ಸಂಪನ್ನಂ ಸ್ವರಸಂಪದಾ ।
ಅನುವಾದ
ಈ ಕಾವ್ಯದಲ್ಲಿ ವರ್ಣಿತವಾದ ಘಟನೆಗಳು ಬಹಳ ದಿನಗಳ ಹಿಂದೆಯೇ ನಡೆದುಹೋಗಿದ್ದರೂ ಈ ಸಭೆಯಲ್ಲಿ ಈ ಬಾಲಕರಿಬ್ಬರೂ ಒಟ್ಟಿಗೆ ಸುಂದರ ಭಾವ ಸ್ವರಸಂಪನ್ನ, ರಾಗಯುಕ್ತ ಮಧುರವಾಗಿ ಹಾಡಿದಾಗ ಹಿಂದೆ ನಡೆದ ಘಟನೆಗಳು ಈಗಲೇ ನಡೆಯುತ್ತಿವೆಯೋ ಎಂಬಂತೆ ಕಣ್ಮುಂದೆ ಪ್ರತ್ಯಕ್ಷದಂತೆ ಕಂಡುಬರತೊಡಗಿದವು.॥18½॥
ಮೂಲಮ್ - 19½
ಏವಂ ಪ್ರಶಸ್ಯಮಾನೌತೌ ತಪಃ ಶ್ಲಾಘ್ಯೈರ್ಮಹರ್ಷಿಭಿಃ ॥
ಸಂರಕ್ತತರಮತ್ಯರ್ಥಂ ಮಧುರಂ ತಾವಗಾಯತಾಮ್ ।
ಅನುವಾದ
ಹೀಗೆ ಉತ್ತಮ ತಪಸ್ಸಿನಿಂದ ಕೂಡಿದ ಮಹರ್ಷಿಗಳು ಇಬ್ಬರೂ ಕುಮಾರರನ್ನು ಪ್ರಶಂಸಿಸಿದರು. ಅವರು ಮುನಿಗಳಿಂದ ಪ್ರಶಂಸಿತರಾಗಿ ಅತ್ಯಂತ ಮಧುರ ರಾಗಗಳಿಂದ ರಾಮಾಯಣವನ್ನು ಗಾಯನ ಮಾಡುತ್ತಿದ್ದರು.॥19½॥
ಮೂಲಮ್ - 20
ಪ್ರೀತಃ ಕಶ್ಚಿನ್ಮುನಿಸ್ತಾಭ್ಯಾಂ ಸಂಸ್ಥಿತಃ ಕಲಶಂ ದದೌ ॥
ಮೂಲಮ್ - 21
ಪ್ರಸನ್ನೋ ವಲ್ಕಲಂ ಕಶ್ಚಿದ್ದದೌ ತಾಭ್ಯಾಂ ಮಹಾಯಶಾಃ ।
ಅನ್ಯಃ ಕೃಷ್ಣಾಜಿನಮದಾದ್ ಯಜ್ಞಸೂತ್ರಂ ತಥಾಪರಃ ॥
ಅನುವಾದ
ಅವರ ಗಾನದಿಂದ ಸಂತುಷ್ಟರಾದ ಯಾರೋ ಮುನಿಗಳು ಎದ್ದು ಅವರಿಗೆ ಉಡುಗೊರೆಯಾಗಿ ಒಂದು ಕಲಶವನ್ನು ಕೊಟ್ಟರು. ಇನ್ನೊಬ್ಬ ಮಹಾ ಯಶಸ್ವೀ ಮಹರ್ಷಿಯು ಸಂತೋಷಗೊಂಡು ಅವರಿಬ್ಬರಿಗೆ ನಾರು ಬಟ್ಟೆಯನ್ನು ಕೊಟ್ಟರು. ಯಾರೋ ಕೃಷ್ಣಮೃಗ ಚರ್ಮವನ್ನು ಕೊಟ್ಟರೆ, ಮತ್ತೊಬ್ಬರು ಯಜ್ಞೋಪವೀತವನ್ನು ನೀಡಿದರು.॥20-21॥
ಮೂಲಮ್ - 22
ಕಶ್ಚಿತ್ ಕಮಂಡಲುಂ ಪ್ರಾದಾನ್ ಮೌಂಜೀಮನ್ಯೋ ಮಹಾಮುನಿಃ ।
ಬೃಸೀಮನ್ಯಸ್ತಾದಾ ಪ್ರಾದಾತ್ ಕೌಪೀನಮಪರೋ ಮುನಿಃ ॥
ಮೂಲಮ್ - 23
ತಾಭ್ಯಾಂ ದದೌ ತದಾ ಹೃಷ್ಟಃ ಕುಠಾರಮಪರೋಮುನಿಃ ।
ಕಾಷಾಯಮಪರೋ ವಸ್ತ್ರಂ ಚೀರಮನ್ಯೋದದೌ ಮುನಿಃ ॥
ಅನುವಾದ
ಒಬ್ಬರು ಕಮಂಡಲು ಕೊಟ್ಟರೆ ಮತ್ತೊಬ್ಬ ಮುನಿಯು ಮುಂಜಾಮೇಖಲೆಯನ್ನು ಕೊಟ್ಟರು. ಇನ್ನೊಬ್ಬರು ಆಸನ, ಕೌಪೀನವಿತ್ತರೆ, ಬೇರೆ ಮಹರ್ಷಿಯು ಹರ್ಷಗೊಂಡು ಆ ಬಾಲಕರಿಬ್ಬರಿಗೆ ಕೊಡಲಿಯನ್ನು ನೀಡಿದರು. ಯಾರೋ ಕಾಷಾಯ ಬಟ್ಟೆ ಕೊಟ್ಟರೆ, ಜಪಮಾಲೆ, ವಸ್ತ್ರ ಹೀಗೆ ಉಡುಗೋರೆಯಾಗಿ ಕೊಟ್ಟರು.॥22-23॥
ಮೂಲಮ್ - 24
ಜಟಾಬಂಧನಮನ್ಯಸ್ತು ಕಾಷ್ಠರಜ್ಜುಂ ಮುದಾನ್ವಿತಃ ।
ಯಜ್ಞಭಾಂಡಮೃಷಿಃ ಕಶ್ಚಿತ್ ಕಾಷ್ಠಭಾರಂ ತಥಾಪರಃ ॥
ಮೂಲಮ್ - 25½
ಔದುಂಬರೀಂ ಬೃಸೀಮನ್ಯಃ ಸ್ವಸ್ತಿ ಕೇಚಿತ್ ತದಾವದನ್ ।
ಆಯುಷ್ಯಮಪರೇ ಪ್ರಾಹುರ್ಮುದಾ ತತ್ರ ಮಹರ್ಷಯಃ ॥
ದದುಶ್ಚೈವಂ ವರಾನ್ ಸರ್ವೇ ಮುನಯಃ ಸತ್ಯವಾದಿನಃ ।
ಅನುವಾದ
ಯಾರೋ ಆನಂದಮಗ್ನರಾಗಿ ಜಟೆಕಟ್ಟಲು ದಾರ, ಇನ್ನೊಬ್ಬರು ಸಮಿಧೆ ಕಟ್ಟಲು ರಜ್ಜು, ಒಬ್ಬ ಮಹರ್ಷಿಯು ಯಜ್ಞಪಾತ್ರೆ ಕೊಟ್ಟರೆ ಮತ್ತೊಬ್ಬರು ಸೌದೆಗಳನ್ನು, ಇನ್ನೊಬ್ಬರು ಔದುಂಬರ ಮಣಿಯನ್ನು ಬಹುಮಾನ ರೂಪವಾಗಿ ಕೊಟ್ಟರು. ಕೆಲವರು ಆಶೀರ್ವದಿಸಿದರು. ಮಕ್ಕಳಿರಾ! ನಿಮಗಿಬ್ಬರಿಗೂ ಕಲ್ಯಾಣವಾಗಲಿ, ಬೇರೆ ಮಹರ್ಷಿಗಳು ‘ದೀರ್ಘಾಯುಷ್ಮಂತೌ ಭವತಾಮ್’ ನಿಮಗೆ ದೀರ್ಘಾಯುಸ್ಸು ಉಂಟಾಗಲಿ, ಎಂದು ಆಶೀರ್ವದಿಸಿದರು. ಹೀಗೆ ಸತ್ಯವಾದಿಗಳಾದ ಮಹರ್ಷಿಗಳು ಅವರಿಗೆ ವರಗಳನ್ನು ಕೊಟ್ಟರು.॥24-25½॥
ಮೂಲಮ್ - 26½
ಆಶ್ಚರ್ಯಮಿದಮಾಖ್ಯಾನಂ ಮುನಿನಾ ಸಂಪ್ರಕೀರ್ತಿತಮ್ ॥
ಪರಂ ಕವೀನಾಮಾಧಾರಂ ಸಮಾಪ್ತಂ ಚ ಯಥಾಕ್ರಮಮ್ ।
ಅನುವಾದ
ಮಹರ್ಷಿ ವಾಲ್ಮೀಕಿಗಳು ವರ್ಣಿಸಿದ ಈ ಆಶ್ಚರ್ಯಮಯ ಕಾವ್ಯವು ಮುಂದಿನ ಕವಿಗಳಿಗೆ ಶ್ರೇಷ್ಠ ಮೂಲಾಧಾರವಾಯಿತು. ಶ್ರೀರಾಮಚಂದ್ರನ ಪೂರ್ಣ ಚರಿತ್ರೆಗಳನ್ನು ಕ್ರಮವಾಗಿ ವರ್ಣಿಸುತ್ತಾ ಪರಿಸಮಾಪ್ತಿಮಾಡಿದರು.॥26½॥
ಮೂಲಮ್ - 27½
ಅಭಿಗೀತಮಿದಂ ಗೀತಂ ಸರ್ವಗೀತಿಷು ಕೋವಿದೌ ॥
ಆಯುಷ್ಯಂ ಪುಷ್ಟಿಜನನಂ ಸರ್ವಶ್ರುತಿ ಮನೋಹರಮ್ ।
ಅನುವಾದ
ಸಂಪೂರ್ಣ ಗೀತೆಗಳ ವಿಶೇಷಜ್ಞರಾದ ರಾಜಕುಮಾರರೇ! ಈ ಕಾವ್ಯವು ಆಯುಸ್ಸು ಮತ್ತು ಪುಷ್ಟಿಯನ್ನು ಕೊಡುವಂತಹುದು. ಎಲ್ಲರ ಕಿವಿ ಮನಸ್ಸನ್ನು ತಣಿಸುವ ಮಧುರ ಸಂಗೀತವಾಗಿದೆ. ನೀವಿಬ್ಬರೂ ಬಹಳ ಚೆನ್ನಾಗಿ ಇದನ್ನು ಹಾಡಿರುವಿರಿ.॥27½॥
(ಶ್ಲೋಕ - 28-32½)
ಮೂಲಮ್
ಪ್ರಶಸ್ಯಮಾನೌ ಸರ್ವತ್ರ ಕದಾಚಿತ್ ತತ್ರ ಗಾಯಕೌ ॥
ಮೂಲಮ್ - 29
ರಥ್ಯಾಸು ರಾಜಮಾರ್ಗೇಷು ದದರ್ಶ ಭರತಾಗ್ರಜಃ ।
ಸ್ವವೇಶ್ಮ ಚಾನೀಯ ತತೋ ಭ್ರಾತರೌ ತೌ ಕುಶೀಲವೌ ॥
ಮೂಲಮ್ - 30
ಪೂಜಯಾಮಾಸ ಪೂಜಾರ್ಹೌ ರಾಮಃ ಶತ್ರುನಿಬರ್ಹಣಃ ।
ಆಸೀನಃ ಕಾಂಚನೇದಿವ್ಯೇ ಸ ಚ ಸಿಂಹಾಸನೇ ಪ್ರಭುಃ ॥
ಮೂಲಮ್ - 31
ಉಪೋಪವಿಷ್ಟೈಃ ಸಚಿವೈರ್ಭ್ರಾತೃಭಿಶ್ಚ ಸಮನ್ವಿತಃ ।
ದೃಷ್ಟ್ವಾತು ರೂಪಸಂಪನ್ನೌ ವಿನೀತೌ ಭ್ರಾತರಾವುಭೌ ॥
ಮೂಲಮ್ - 32½
ಉವಾಚ ಲಕ್ಷ್ಮಣಂ ರಾಮಃ ಶತ್ರುಘ್ನಂ ಭರತಂ ತಥಾ ।
ಶ್ರೂಯತಾಮೇತದಾಖ್ಯಾನಮನಯೋರ್ದೇವವರ್ಚಸೋಃ ॥
ವಿಚಿತ್ರಾರ್ಥಪದಂ ಸಮ್ಯಗ್ಗಾಯಕೌ ಸಮಚೋದಯತ್ ।
ಅನುವಾದ
ಎಲ್ಲೆಡೆ ಪ್ರಶಂಸಿತರಾದ ರಾಜಕುಮಾರ ಕುಶ-ಲವರು ಒಮ್ಮೆ ಅಯೋಧ್ಯೆಯ ರಾಜ ಬೀದಿಗಳಲ್ಲಿ ರಾಮಾಯಣದ ಶ್ಲೋಕಗಳನ್ನು ಹಾಡುತ್ತಾ ಹೋಗುತ್ತಿದ್ದರು. ಆಗ ಭರತಾಗ್ರಜ ಶ್ರೀರಾಮನ ದೃಷ್ಟಿ ಅವರ ಮೇಲೆ ಬಿತ್ತು. ಶತ್ರುನಿಬರ್ಹಣನಾದ ಶ್ರೀರಾಮನು ಸನ್ಮಾನಾರ್ಹರಾದ ಸೋದರ ಕುಶ-ಲವರನ್ನು ಅರಮನೆಗೆ ಕರೆಸಿ ಯಥಾಯೋಗ್ಯವಾಗಿ ಉಪಚರಿಸಿದನು. ಮತ್ತೆ ಪ್ರಭುವಾದ ಶ್ರೀರಾಮಚಂದ್ರನು ಸಿಂಹಾಸನದಲ್ಲಿ ಕುಳಿತು, ಮಂತ್ರಿಗಳಿಂದಲೂ, ಲಕ್ಷ್ಮಣ, ಭರತ, ಶತ್ರುಘ್ನಾದಿಗಳೊಂದಿಗೆ ಪರಿವೃತನಾಗಿ ರೂಪ ಸಂಪನ್ನರಾದ ವಿನಯಶೀಲ ಸಹೋದರರನ್ನು ನೋಡಿ, ಭರತ, ಶತ್ರುಘ್ನರಲ್ಲಿ ಈ ದೇವತೆಗಳಂತೆ ತೇಜಸ್ವಿಯಾದ ಈ ಕುಮಾರರು ವಿಚಿತ್ರಾರ್ಥ ಪದ ಸಮೂಹದಿಂದ ಕೂಡಿದ ಮಧುರ ಕಾವ್ಯವನ್ನು ಬಹಳ ಸುಂದರವಾಗಿ ಹಾಡುತ್ತಾರೆ, ನೀವೆಲ್ಲರೂ ಇದನ್ನು ಕೇಳಿರಿ. ಹೀಗೆ ಹೇಳಿ ಅವನು ಕುಶ-ಲವರಿಗೆ ನೀವು ಆಖ್ಯಾನವನ್ನು ಆರಂಭಿಸಬಹುದು ಎಂದು ಆಜ್ಞಾಪಿಸಿದನು.॥28-32½॥
ಮೂಲಮ್ - 33
ತೌ ಚಾಪಿ ಮಧುರಂ ರಕ್ತಂ ಸ್ವಚಿತ್ತಾಯತನಿಃಸ್ವನಮ್ ॥
ಮೂಲಮ್ - 34
ತಂತ್ರೀಲಯವದತ್ಯರ್ಥಂ ವಶ್ರುತಾರ್ಥಮಗಾಯತಾಮ್ ।
ಹ್ಲಾದಯತ್ಸರ್ವಗಾತ್ರಾಣಿ ಮನಾಂಸಿ ಹೃದಯಾನಿ ಚ ॥
ಶ್ರೋತ್ರಾಶ್ರಯಸುಖಂ ಗೇಯಂ ತದ್ ಬಭೌ ಜನಸಂಸದಿ ॥
ಅನುವಾದ
ಶ್ರೀರಾಮನ ಅಪ್ಪಣೆ ಪಡೆದು ಅವರಿಬ್ಬರು ಲಯಕ್ಕನುಸಾರ ಮೊದಲು ರಾಗಾಲಾಪನೆ ಮಾಡಿ, ವೀಣಾ ಮೃದಂಗಾದಿ ವಾದ್ಯಗಳೊಡನೆ ಮಧುರವಾಗಿ ಹಾಡಲು ಉಪಕ್ರಮಿಸಿದರು. ಅವರು ಹಾಡುವಾಗ ಕಾವ್ಯದ ಅರ್ಥವು ಬಹಳ ಸ್ಪಷ್ಟವಾಗಿ ಶ್ರೋತ್ರುಗಳಿಗೆ ತಿಳಿಯುತ್ತಿತ್ತು. ಅವರ ಗಾಯನವನ್ನು ಕೇಳಿದ ಶ್ರೋತ್ರುಗಳಿಗೆ ಹರ್ಷಮಯ ರೋಮಾಂಚನ ಉಂಟಾಗಿ ಎಲ್ಲರ ಮನೋಹೃದಯಗಳು ಆನಂದತುಂದಿಲವಾದವು. ಆ ಜನ ಸಮೂಹದಲ್ಲಿ ನಡೆಯುತ್ತಿದ್ದ ಗಾಯನವು ಎಲ್ಲರ ಶ್ರೋತ್ರೇಂದ್ರಿಯಗಳು ರಸಾನಂದವನ್ನು ಅನುಭವಿಸಿದವು.॥33-34॥
ಮೂಲಮ್ - 35
ಇಮೌ ಮುನೀ ಪಾರ್ಥಿವಲಕ್ಷಣಾನ್ವಿತೌ
ಕುಶೀಲವೌ ಚೈವ ಮಹಾತಪಸ್ವಿನೌ ।
ಮಮಾಪಿ ತದ್ ಭೂತಿಕರಂ ಪ್ರಚಕ್ಷತೇ
ಮಹಾನುಭಾವಂ ಚರಿತಂ ನಿಬೋಧತ ॥
ಅನುವಾದ
ಆಗ ಶ್ರೀರಾಮನು ಸಭ್ಯರನ್ನು, ಸಹೋದರರನ್ನು ಕುರಿತು ಇಂತು ನುಡಿದನು-ಈ ಇಬ್ಬರು ಮುನಿಕುಮಾರರಾಗಿದ್ದರೂ ರಾಜೋಚಿತ ಲಕ್ಷಣಗಳಿಂದ ಕೂಡಿರುವರು. ಸಂಗೀತದಲ್ಲಿ ಪಾರಂಗತರಾಗಿರುವಂತೆಯೇ ತಪಸ್ವಿಗಳೂ ಆಗಿರುವರು. ಇವರು ಹಾಡುತ್ತಿದ್ದ ಪ್ರಬಂಧ ಕಾವ್ಯವು ಶಬ್ದಾರ್ಥ ಅಲಂಕಾರ ಉತ್ತಮ ಗುಣಯುಕ್ತವಾದ ಕಾರಣ ಅತ್ಯಂತ ಪ್ರಭಾವಶಾಲಿಯಾಗಿದೆ. ನಮಗೂ ಕೂಡ ಅಭ್ಯುದಯಕಾರಕವಾಗಿದೆ; ಎಂದು ವೃದ್ಧರು ಹೇಳುತ್ತಾರೆ. ಆದ್ದರಿಂದ ನೀವೆಲ್ಲರೂ ಗಮನವಿಟ್ಟು ಕೇಳಿರಿ.॥35॥
ಮೂಲಮ್ - 36
ತತಸ್ತು ತೌ ರಾಮವಚಃ ಪ್ರಚೋದಿತಾ-
ವಗಾಯತಾಂ ಮಾರ್ಗವಿಧಾನಸಂಪದಾ ।
ಸ ಚಾಪಿ ರಾಮಃ ಪರಿಷದ್ಗತಃ ಶನೈ -
ರ್ಬುಭೂಷಯಾಸಕ್ತಮನಾ ಬಭೂವ ॥
ಅನುವಾದ
ಅನಂತರ ಶ್ರೀರಾಮನ ಅಪ್ಪಣೆಯಂತೆ ಆ ಇಬ್ಬರೂ ಸಹೋದರರು ಮಾರ್ಗ ಸಂಪ್ರದಾಯವನ್ನನುಸರಿಸಿ ರಾಮಾಯಣವನ್ನು ಗಾನ ಮಾಡಿದರು. ಸಭೆಯಲ್ಲಿ ಕುಳಿತ ಭಗವಾನ್ ಶ್ರೀರಾಮನೂ ಕೂಡ ನಿಧಾನವಾಗಿ ಅವರ ಗಾಯನವನ್ನು ಕೇಳುವುದರಲ್ಲಿ ತನ್ಮಯನಾದನು.॥36॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ನಾಲ್ಕನೆಯ ಸರ್ಗ ಪೂರ್ಣವಾಯಿತು. ॥4॥