वाचनम्
ಭಾಗಸೂಚನಾ
ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ ರಾಮಾಯಣ ಕಾವ್ಯದ ಸಂಕ್ಷೇಪ ನಿರೂಪಣೆ
ಮೂಲಮ್ - 1
ಶ್ರುತ್ವಾ ವಸ್ತು ಸಮಗ್ರಂ ತದ್ಧರ್ಮಾರ್ಥಸಹಿತಂ ಹಿತಮ್ ।
ವ್ಯಕ್ತಮನ್ವೇಷತೇ ಭೂ ಯೋಯದ್ವತ್ತಂ ತಸ್ಯ ಧೀಮತಃ॥
ಅನುವಾದ
ಧರ್ಮಾತ್ಮರಾದ ವಾಲ್ಮೀಕಿ ಮಹರ್ಷಿಗಳು ಧರ್ಮಸಹಿತ ಸಮಗ್ರವಾಗಿ ನಾರದರು ಹೇಳಿದ ಧೀಮಂತನಾದ ರಾಮನ ಚರಿತ್ರೆಯನ್ನು ಕೇಳಿ, ಅಂತರಂಗದಲ್ಲಿ ಅದನ್ನೇ ಪುನಃ ಪುನಃ ಪರ್ಯಾಲೋಚಿಸತೊಡಗಿದರು.॥1॥
ಮೂಲಮ್ - 2
ಉಪಸ್ಪೃಶ್ಯೋದಕಂ ಸಮ್ಯಙ್ಮುನಿಃ ಸ್ಥಿತ್ವಾ ಕೃತಾಂಜಲಿಃ ।
ಪ್ರಾಚೀನಾಗ್ರೇಷು ದರ್ಭೇಷು ಧರ್ಮೇಣಾನ್ವೇಷತೇ ಗತಿಮ್ ॥
ಅನುವಾದ
ವಾಲ್ಮೀಕಿಗಳು ಪೂರ್ವಾಗ್ರ ದರ್ಭೆಗಳಿರುವ ಆಸನದಲ್ಲಿ ಕುಳಿತು, ಶುದ್ಧಾಚಮನ ಮಾಡಿ ಬದ್ಧಾಂಜಲಿಗಳಾಗಿ, ಯೋಗಾ ರೂಢರಾಗಿ ಶ್ರೀರಾಮನ ಕಥೆಯ ಸರಣಿಯನ್ನು ನೆನೆದರು.॥2॥
ಮೂಲಮ್ - 3
ರಾಮಲಕ್ಷ್ಮಣಸೀತಾಭೀ ರಾಜ್ಞಾ ದಶರಥೇನ ಚ ।
ಸಭಾರ್ಯೇಣ ಸರಾಷ್ಟ್ರೇಣ ಯತ್ಪ್ರಾಪ್ತಂ ತತ್ರ ತತ್ತ್ವತಃ ॥
ಮೂಲಮ್ - 4
ಹಸಿತಂ ಭಾಷಿತಂ ಚೈವ ಗತಿರ್ಯಾವಚ್ಚ ಚೇಷ್ಟಿತಮ್ ।
ತತ್ಸರ್ವಂ ಧರ್ಮವೀರ್ಯೇಣ ಯಥಾವತ್ಸಂ ಪ್ರಪಶ್ಯತಿ ॥
ಅನುವಾದ
ನಾರದರು ಹೇಳಿದ ಬೀಜರೂಪವಾದ ರಾಮಾಯಣವನ್ನು ಅನುಸಂಧಾನ ಮಾಡುತ್ತಾ ಶ್ರೀರಾಮ-ಲಕ್ಷ್ಮಣ-ಸೀತೆ ಹಾಗೂ ರಾಜ ಮತ್ತು ರಾಣಿಯರೊಂದಿಗೆ ರಾಜಾ ದಶರಥ ಇವರಿಗೆ ಸಂಬಂಧಿಸಿದ ನಗು ಮಾತು, ನಡೆ ರಾಜ್ಯಪಾಲನೆ ಮೊದಲಾದ ಚೇಷ್ಟೆಗಳೆಲ್ಲವನ್ನು ಮಹರ್ಷಿಗಳು ಯೋಗಮಾರ್ಗದಿಂದ ಚೆನ್ನಾಗಿ ಸಾಕ್ಷಾತ್ಕರಿಸಿಕೊಂಡರು.॥3-4॥
ಮೂಲಮ್ - 5
ಸ್ತ್ರೀತೃತೀಯೇನ ಚ ತಥಾಯತ್ಪ್ರಾಪ್ತಂ ಚರತಾ ವನೇ ।
ಸತ್ಯಸಂಧೇನ ರಾಮೇಣ ತತ್ಸರ್ವಂ ಚಾನ್ವವೈಕ್ಷಿತ ॥
ಅನುವಾದ
ಸತ್ಯಪ್ರತಿಜ್ಞ ಶ್ರೀರಾಮಚಂದ್ರನು ಲಕ್ಷ್ಮಣ ಮತ್ತು ಸೀತೆಯೊಂದಿಗೆ ವನದಲ್ಲಿ ಸಂಚರಿಸುವಾಗ ನಡೆಸಿದ ಲೀಲೆಗಳೆಲ್ಲ ಅವರ ದೃಷ್ಟಿಗೆ ಗೋಚರಿಸಿತು.॥5॥
ಮೂಲಮ್ - 6
ತತಃ ಪಶ್ಯತಿ ಧರ್ಮಾತ್ಮಾ ತತ್ಸರ್ವಂ ಯೋಗಮಾಸ್ಥಿತಃ ।
ಪುರಾ ಯತ್ತತ್ರ ನಿರ್ವೃತ್ತಂ ಪಾಣಾವಾಮಲಕಂ ಯಥಾ ॥
ಅನುವಾದ
ಯೋಗವನ್ನು ಆಶ್ರಯಿಸಿ ಆ ಧರ್ಮಾತ್ಮಾ ಮಹರ್ಷಿಯು ಹಿಂದೆ ನಡೆದ ಎಲ್ಲಾ ಘಟನೆಗಳನ್ನು ಅಂಗೈನೆಲ್ಲಿಕಾಯಿಯಂತೆ ಪ್ರತ್ಯಕ್ಷವಾಗಿ ನೋಡಿದರು.॥6॥
ಮೂಲಮ್ - 7
ತತ್ಸರ್ವಂ ತತ್ತ್ವತೋ ದೃಷ್ಟ್ವಾ ಧರ್ಮೇಣ ಸ ಮಹಾಮತಿಃ ।
ಅಭಿರಾಮಸ್ಯ ರಾಮಸ್ಯ ತತ್ಸರ್ವಂ ಕರ್ತುಮುದ್ಯತಃ ॥
ಅನುವಾದ
ಎಲ್ಲರ ಮನಸ್ಸಿಗೆ ಪ್ರಿಯವಾದ ಭಗವಾನ್ ಶ್ರೀರಾಮನ ಚರಿತ್ರವನ್ನು ಯೋಗಧರ್ಮದ, ಸಮಾಧಿಯ ಮೂಲಕ ಯಥಾರ್ಥವಾಗಿ ನಿರೀಕ್ಷಿಸಿ ಮಹಾ ಬುದ್ಧಿವಂತರಾದ ವಾಲ್ಮೀಕಿ ಮಹರ್ಷಿಗಳು ಅದೆಲ್ಲವನ್ನು ಮಹಾಕಾವ್ಯವಾಗಿ ಮಾಡಲು ಪ್ರಯತ್ನಿಸಿದರು.॥7॥
ಮೂಲಮ್ - 8
ಕಾಮಾರ್ಥಗುಣಸಂಯುಕ್ತಂ ಧರ್ಮಾರ್ಥಗುಣವಿಸ್ತರಮ್ ।
ಸಮುದ್ರಮಿವ ರತ್ನಾಢ್ಯಂ ಸರ್ವಶ್ರುತಿಮನೋಹರಮ್ ॥
ಮೂಲಮ್ - 9
ಸ ಯಥಾ ಕಥಿತಂ ಪೂರ್ವಂ ನಾರದೇನ ಮಹರ್ಷಿಣಾ ।
ರಘುವಂಶಸ್ಯ ಚರಿತಂ ಚಕಾರ ಭಗವಾನ್ಮುನಿಃ ॥
ಅನುವಾದ
ಮಹಾತ್ಮಾ ನಾರದರು ಮೊದಲು ವರ್ಣಿಸಿದಂತೆ ಕ್ರಮವಾಗಿ ಪೂಜ್ಯರಾದ ವಾಲ್ಮೀಕಿ ಮುನಿಗಳು ರಘುವಂಶ ಭೂಷಣ ಶ್ರೀರಾಮನ ಚರಿತೆಯನ್ನು ರಾಮಾಯಣ ಕಾವ್ಯವಾಗಿ ನಿರ್ಮಿಸಿದರು. ಸಮುದ್ರವು ಎಲ್ಲ ರತ್ನಗಳ ನಿಧಿಯಿರುವಂತೆಯೇ ಈ ಮಹಾಕಾವ್ಯವು ಗುಣ, ಅಲಂಕಾರ, ಧ್ವನಿ ಮೊದಲಾದ ರತ್ನಗಳ ಭಂಡಾರವಾಗಿದೆ. ಇಷ್ಟೆ ಅಲ್ಲ, ಇದು ಸಮಸ್ತ ಶ್ರುತಿಗಳ ಸಾರಭೂತ ಅರ್ಥವನ್ನು ಪ್ರತಿಪಾದಿಸುವುದರಿಂದ ಎಲ್ಲರ ಕಿವಿಗಳಿಗೆ ಇಂಪಾಗಿದೆ ಹಾಗೂ ಎಲ್ಲರ ಚಿತ್ತವನ್ನು ಸೆಳೆದುಕೊಳ್ಳುವುದಾಗಿದೆ. ಇದು ಧರ್ಮ, ಅರ್ಥ, ಕಾಮ, ಮೋಕ್ಷರೂಪೀ ಗುಣಗಳಿಂದ (ಫಲಗಳಿಂದ) ಕೂಡಿದ್ದು, ಇವುಗಳನ್ನು ವಿಸ್ತಾರವಾಗಿ ಪ್ರತಿಪಾದಿಸುವುದಾಗಿದೆ.॥8-9॥
ಮೂಲಮ್ - 10
ಜನ್ಮ ರಾಮಸ್ಯ ಸುಮಹದ್ವೀರ್ಯಂ ಸರ್ವಾನುಕೂಲತಾಮ್ ।
ಲೋಕಸ್ಯ ಪ್ರಿಯತಾಂ ಕ್ಷಾಂತಿಂ ಸೌಮ್ಯತಾಂ ಸತ್ಯಶೀಲತಾಮ್ ॥
ಅನುವಾದ
ಶ್ರೀರಾಮನ ಅವತಾರ, ಅವನ ಮಹಾನ್ ಪರಾಕ್ರಮ, ಅವನ ಸರ್ವಾನುಕೂಲತೆ, ಲೋಕಪ್ರಿಯತೆ, ಕ್ಷಮೆ, ಸೌಮ್ಯ ಭಾವ ಹಾಗೂ ಸತ್ಯಶೀಲತೆ ಇವುಗಳನ್ನು ಈ ಮಹಾಕಾವ್ಯದಲ್ಲಿ ಮಹರ್ಷಿಗಳು ವರ್ಣಿಸಿದರು.॥10॥
ಮೂಲಮ್ - 11
ನಾನಾ ಚಿತ್ರಾಃ ಕಥಾಶ್ಚಾನ್ಯಾ ವಿಶ್ವಾಮಿತ್ರ ಸಹಾಯನೇ ।
ಜಾನಕ್ಯಾಶ್ಚ ವಿವಾಹಂ ಚ ಧನುಷಶ್ಚ ವಿಭೇದನಮ್ ॥
ಅನುವಾದ
ವಿಶ್ವಾಮಿತ್ರರೊಂದಿಗೆ ಹೋದ ಶ್ರೀರಾಮ-ಲಕ್ಷ್ಮಣರು ನಡೆಸಿದ ನಾನಾ ರೀತಿಯ ವಿಚಿತ್ರ ಲೀಲೆಗಳನ್ನು ಹಾಗೂ ನಡೆದ ಅದ್ಭುತ ಘಟನೆಗಳನ್ನು ಹೀಗೆ ಎಲ್ಲವನ್ನೂ ಮಹರ್ಷಿಗಳು ವರ್ಣಿಸಿರುವರು. ಶ್ರೀರಾಮನಿಂದ ಮಿಥಿಲೆಯಲ್ಲಿ ಧನುರ್ಭಂಗ, ಜನಕನಂದಿನೀ ಸೀತೆ ಮತ್ತು ಊರ್ಮಿಳೆಯೇ ಮೊದಲಾದವರ ವಿವಾಹದ ವರ್ಣನೆಯನ್ನು ಇದರಲ್ಲಿ ಮಾಡಿರುವರು.॥11॥
ಮೂಲಮ್ - 12
ರಾಮರಾಮವಿವಾದಂ ಚ ಗುಣಾನ್ ದಾಶರಥೇಸ್ತಥಾ ।
ತಥಾಭಿಷೇಕಂ ರಾಮಸ್ಯ ಕೈಕೇಯ್ಯಾ ದುಷ್ಟಭಾವತಾಮ್ ॥
ಮೂಲಮ್ - 13
ವಿಘಾತಂ ಚಾಭಿಷೇಕಸ್ಯ ರಾಮಸ್ಯ ಚ ವಿವಾಸನಮ್ ।
ರಾಜ್ಞಃ ಶೋಕಂ ವಿಲಾಪಂ ಚ ಪರಲೋಕಸ್ಯ ಚಾಶ್ರಯಮ್ ॥
ಮೂಲಮ್ - 14
ಪ್ರಕೃತೀನಾಂ ವಿಷಾದಂ ಚ ಪ್ರಕೃತೀನಾಂ ವಿಸರ್ಜನಮ್ ।
ನಿಷಾದಾಧಿಪಸಂವಾದಂ ಸೂತೋಪಾವರ್ತನಂ ತಥಾ ॥
ಅನುವಾದ
ಶ್ರೀರಾಮ-ಪರುಶುರಾಮ ಸಂವಾದ, ದಶರಥ ನಂದನ ಶ್ರೀರಾಮನ ಕಲ್ಯಾಣ ಗುಣಗಳನ್ನು, ಅವನ ಪಟ್ಟಾಭಿಷೇಕ, ಕೈಕೆಯಿಯ ದುಷ್ಟತೆ, ಶ್ರೀರಾಮ ಪಟ್ಟಾಭಿಷೇಕದಲ್ಲಿನ ವಿಘ್ನ, ರಾಮನ ವನವಾಸ, ದಶರಥ ರಾಜನ ಶೋಕ-ವಿಲಾಪ ಮತ್ತು ಪರಲೋಕ ಗಮನ, ಪ್ರಜೆಗಳ ವಿಷಾದ, ಜೊತೆಗೆ ಹೋದ ಪ್ರಜಾ ಜನರನ್ನು ನಡು ದಾರಿಯಲ್ಲೇ ಬಿಡುವುದು, ನಿಷಾದರಾಜ ಗುಹನೊಂದಿಗೆ ಮಾತುಕತೆ, ಸುಮಂತನನ್ನು ಅಯೋಧ್ಯೆಗೆ ಹಿಂದಿರುಗಿಸಿದುದು ಮೊದಲಾದವುಗಳನ್ನು ಉಲ್ಲೇಖಿಸಿರುವರು.॥12-14॥
ಮೂಲಮ್ - 15
ಗಂಗಾಯಾಶ್ಚಾಪಿ ಸಂತಾರಂ ಭರದ್ವಾಜಸ್ಯ ದರ್ಶನಮ್ ।
ಭರದ್ವಾಜಾಭ್ಯನುಜ್ಞಾನಾಚ್ಚಿತ್ರಕೂಟಸ್ಯ ದರ್ಶನಮ್ ॥
ಮೂಲಮ್ - 16
ವಾಸ್ತುಕರ್ಮ ನಿವೇಶಂ ಚ ಭರತಾಗಮನಂ ತಥಾ ।
ಪ್ರಸಾದನಂ ಚ ರಾಮಸ್ಯ ಪಿತುಶ್ಚ ಸಲಿಲಕ್ರಿಯಾಮ್ ॥
ಮೂಲಮ್ - 17
ಪಾದುಕಾಗ್ರ್ಯಾಭಿಷೇಕಂ ಚ ನಂದಿಗ್ರಾಮನಿವಾಸನಮ್ ।
ದಂಡಕಾರಣ್ಯಗಮನಂ ವಿರಾಧಸ್ಯ ವಧಂ ತಥಾ ॥
ಮೂಲಮ್ - 18
ದರ್ಶನಂ ಶರಭಂಗಸ್ಯ ಸುತೀಕ್ಷ್ಣೇನ ಸಮಾಗಮಮ್ ।
ಅನಸೂಯಾಸಮಾಖ್ಯಾಂ ಚ ಅಂಗರಾಗಸ್ಯ ಚಾರ್ಪಣಮ್ ॥
ಮೂಲಮ್ - 19
ದರ್ಶನಂ ಚಾಪ್ಯಗಸ್ತ್ಯಸ್ಯ ಧನುಷೋ ಗ್ರಹಣಂ ತಥಾ ।
ಶೂರ್ಪಣಖ್ಯಾಶ್ಚ ಸಂವಾದಂ ವಿರೂಪಕರಣಂ ತಥಾ ॥
ಮೂಲಮ್ - 20
ವಧಂ ಖರತ್ರಿಶಿರಸೋರುತ್ಥಾನಂ ರಾವಣಸ್ಯ ಚ ।
ಮಾರೀಚಸ್ಯ ವಧಂ ಚೈವ ವೈದೇಹ್ಯಾ ಹರಣಂ ತಥಾ ॥
ಮೂಲಮ್ - 21
ರಾಘವಸ್ಯ ವಿಲಾಪಂ ಚ ಗೃಧ್ರರಾಜನಿಬರ್ಹಣಮ್ ।
ಕಬಂಧ ದರ್ಶನಂ ಚೈವ ಪಂಪಾಯಾಶ್ಚಾಪಿ ದರ್ಶನಮ್ ॥
ಮೂಲಮ್ - 22
ಶಬರೀದರ್ಶನಂ ಚೈವ ಫಲಮೂಲಾಶನಂ ತಥಾ ।
ಪ್ರಲಾಪಂ ಚೈವ ಪಂಪಾಯಾಂ ಹನೂಮದ್ ದರ್ಶನಂ ತಥಾ ॥
ಮೂಲಮ್ - 23
ಋಷ್ಯಮೂಕಸ್ಯ ಗಮನಂ ಸುಗ್ರೀವೇಣ ಸಮಾಗಮಮ್ ।
ಪ್ರತ್ಯಯೋತ್ಪಾದನಂ ಸಖ್ಯಂ ವಾಲಿಸುಗ್ರೀವವಿಗ್ರಹಮ್ ॥
ಮೂಲಮ್ - 24
ವಾಲಿಪ್ರಮಥನಂ ಚೈವ ಸುಗ್ರೀವಪ್ರತಿಪಾದನಮ್ ।
ತಾರಾವಿಲಾಪಂ ಸಮಯಂ ವರ್ಷರಾತ್ರನಿವಾಸನಮ್ ॥
ಮೂಲಮ್ - 25
ಕೋಪಂ ರಾಘವಸಿಂಹಸ್ಯ ಬಲಾನಾಮುಪಸಂಗ್ರಹಮ್ ।
ದಿಶಃ ಪ್ರಸ್ಥಾಪನಂ ಚೈವ ಪೃಥಿವ್ಯಾಶ್ಚ ನಿವೇದನಮ್ ॥
ಮೂಲಮ್ - 26
ಅಂಗುಲೀಯಕದಾನಂ ಚ ಋಕ್ಷಸ್ಯ ಬಿಲದರ್ಶನಮ್ ।
ಪ್ರಾಯೋಪವೇಶನಂ ಚೈವ ಸಂಪಾತೇಶ್ಚಾಪಿ ದರ್ಶನಮ್ ॥
ಮೂಲಮ್ - 27
ಪ್ರರ್ವತಾರೋಹಣಂ ಚೈವ ಸಾಗರಸ್ಯ ಚ ಲಂಘನಮ್ ।
ಸಮುದ್ರವಚನಾಚ್ಚೈವ ಮೈನಾಕಸ್ಯಚ ದರ್ಶನಮ್ ॥
ಮೂಲಮ್ - 28
ರಾಕ್ಷಸೀತರ್ಜನಂ ಚೈವ ಛಾಯಾಗ್ರಾಹಸ್ಯ ದರ್ಶನಮ್ ।
ಸಿಂಹಿಕಾಯಾಶ್ಚ ನಿಧನಂ ಲಂಕಾಮಲಯದರ್ಶನಮ್ ॥
ಮೂಲಮ್ - 29
ರಾತ್ರೌ ಲಂಕಾಪ್ರವೇಶಂ ಚ ಏಕಸ್ಯಾಪಿ ವಿಚಿಂತನಮ್ ।
ಆಪಾನಭೂಮಿಗಮನಮವರೋಧಸ್ಯ ದರ್ಶನಮ್ ॥
ಮೂಲಮ್ - 30
ದರ್ಶನಂ ರಾವಣಸ್ಯಾಪಿ ಪುಷ್ಪಕಸ್ಯ ಚ ದರ್ಶನಮ್ ।
ಅಶೋಕವನಿಕಾಯಾನಂ ಸೀತಾಯಾಶ್ಚಾಪಿ ದರ್ಶನಮ್ ॥
ಮೂಲಮ್ - 31
ಅಭಿಜ್ಞಾನ ಪ್ರದಾನಂ ಚ ಸೀತಾಯಾಶ್ಚಾಪಿ ಭಾಷಣಮ್ ।
ರಾಕ್ಷಸೀತರ್ಜನಂ ಚೈವ ತ್ರಿಜಟಾಸ್ವಪ್ನದರ್ಶನಮ್ ॥
ಮೂಲಮ್ - 32
ಮಣಿಪ್ರದಾನಂ ಸೀತಾಯಾ ವೃಕ್ಷಭಂಗಂ ತಥೈವಚ ।
ರಾಕ್ಷಸೀವಿದ್ರವಂ ಚೈವ ಕಿಂಕರಾಣಾಂ ನಿಬರ್ಹಣಮ್ ॥
ಮೂಲಮ್ - 33
ಗ್ರಹಣಂ ವಾಯುಸೂನೋಶ್ಚ ಲಂಕಾದಾಹಾಭಿಗರ್ಜನಮ್ ।
ಪ್ರತಿಪ್ಲವನಮೇವಾಥ ಮಧೂನಾಂ ಹರಣಂ ತಥಾ ॥
ಮೂಲಮ್ - 34
ರಾಘವಾಶ್ಚಾಸನಂ ಚೈವ ಮಣಿನಿರ್ಯಾತನಂ ತಥಾ ।
ಸಂಗಮಂ ಚ ಸಮುದ್ರೇಣ ನಲಸೇತೋಶ್ಚ ಬಂಧನಮ್ ॥
ಮೂಲಮ್ - 35
ಪ್ರತಾರಂ ಚ ಸಮುದ್ರಸ್ಯ ರಾತ್ರೌ ಲಂಕಾವರೋಧನಮ್ ।
ವಿಭೀಷಣೇನ ಸಂಸರ್ಗಂ ವಧೋಪಾಯನಿವೇದನಮ್ ॥
ಮೂಲಮ್ - 36
ಕುಂಭಕರ್ಣಸ್ಯ ನಿಧನಂ ಮೇಘನಾದ ನಿಬರ್ಹಣಮ್ ।
ರಾವಣಸ್ಯ ವಿನಾಶಂ ಚ ಸೀತಾವಾಪ್ತಿಮರೇಃ ಪುರೇ ॥
ಮೂಲಮ್ - 37
ವಿಭೀಷಣಾಭಿಷೇಕಂ ಚ ಪುಷ್ಪಕಸ್ಯ ಚ ದರ್ಶನಮ್ ।
ಅಯೋಧ್ಯಾಯಾಶ್ಚ ಗಮನಂ ಭರದ್ವಾಜಸಮಾಗಮಮ್ ॥
ಮೂಲಮ್ - 38
ಪ್ರೇಷಣಂ ವಾಯುಪುತ್ರಸ್ಯ ಭರತೇನ ಸಮಾಗಮಮ್ ।
ರಾಮಾಭಿಷೇಕಾಭ್ಯುದಯಂ ಸರ್ವಸ್ಯೆನ್ಯ ವಿಸರ್ಜನಮ್ ॥
ಸ್ವರಾಷ್ಟ್ರರಂಜನಂ ಚೈವ ವೈದೇಹ್ಯಾಶ್ಚ ವಿಸರ್ಜನಮ್ ॥
ಮೂಲಮ್ - 39
ಅನಾಗತಂ ಚ ಯತ್ಕಿಂಚಿದ್ರಾಮಸ್ಯ ವಸುಧಾತಲೇ ।
ತಚ್ಚಕಾರೋತ್ತರೇ ಕಾವ್ಯೇ ವಾಲ್ಮೀಕಿರ್ಭಗವಾನೃಷಿಃ ॥
ಅನುವಾದ
ಶ್ರೀರಾಮ-ಸೀತಾ-ಲಕ್ಷ್ಮಣರು ಗಂಗೆ ದಾಟಿದುದು, ಭರದ್ವಾಜ ಮುನಿಯನ್ನು ದರ್ಶಿಸಿದುದು, ಭರದ್ವಾಜರ ಆಣತಿಯಂತೆ ಚಿತ್ರಕೂಟಕ್ಕೆ ಹೋದುದು, ಅಲ್ಲಿಯ ನೈಸರ್ಗಿಕ ಶೋಭೆಯನ್ನು ನೋಡುವುದು, ಚಿತ್ರಕೂಟದಲ್ಲಿ ಪರ್ಣಕುಟಿಯನ್ನು ರಚಿಸುವುದು, ಅದರಲ್ಲಿ ವಾಸಿಸುವುದು, ಅಲ್ಲಿಗೆ ಭರತನು ಶ್ರೀರಾಮನನ್ನು ಕಾಣಲು ಬರುವುದು, ಅವನನ್ನು ಅಯೋಧ್ಯೆಗೆ ಮರಳಿ ಹೋಗಲು ಒಪ್ಪಿಸುವುದು, ಶ್ರೀರಾಮನು ತಂದೆಗೆ ಜಲಾಂಜಲಿಯನ್ನು ಅರ್ಪಿಸುವುದು, ಭರತನಿಂದ ಅಯೋಧ್ಯೆಯ ಸಿಂಹಾಸನದಲ್ಲಿ ಶ್ರೀರಾಮನ ಶ್ರೇಷ್ಠ ಪಾದುಕಾ ಪಟ್ಟಾಭಿಷೇಕ, ನಂದಿಗ್ರಾಮದಲ್ಲಿ ಭರತನು ವಾಸಿಸಿದುದು, ಶ್ರೀರಾಮನು ದಂಡಕಾರಣ್ಯಕ್ಕೆ ಹೋದುದು, ಶ್ರೀರಾಮನಿಂದ ವಿರಾಧನ ವಧೆ, ಶರಭಂಗ ಮುನಿಯ ದರ್ಶನ, ಸುತೀಕ್ಷ್ಣರ ಸಮಾಗಮ, ಅನಸೂಯೆಯ ಜೊತೆಗೆ ಸೀತಾದೇವಿಯು ಸ್ವಲ್ಪಕಾಲ ಇರುವುದು. ಆಕೆಯು ಸೀತಾದೇವಿಗೆ ಅಂಗರಾಗವನ್ನು ನೀಡಿದುದು, ಶ್ರೀರಾಮನೇ ಮೊದಲಾದವರಿಂದ ಅಗಸ್ತ್ಯರ ದರ್ಶನ, ಅವರು ನೀಡಿದ ವೈಷ್ಣವ ಧನುಸ್ಸನ್ನು ಸ್ವೀಕರಿಸಿದುದು, ಶೂರ್ಪಣಖಾ ಸಂವಾದ, ರಾಮನ ಅಪ್ಪಣೆಯಂತೆ ಲಕ್ಷ್ಮಣನು ಆಕೆಯ ಮೂಗನ್ನು ಕತ್ತರಿಸಿ ವಿರೂಪಗೊಳಿಸಿದುದು, ಶ್ರೀರಾಮನು ಖರ, ದೂಷಣ, ತ್ರಿಶಿರಾ ಇವರನ್ನು ವಧಿಸಿದುದು, ಶೂರ್ಪನಖೆಯ ಉತ್ತೇಜನದಿಂದ ರಾವಣನು ರಾಮನ ಪ್ರತೀಕಾರಕ್ಕಾಗಿ ಹೊರಟಿದುದು. ಮಾರೀಚನ ವಧೆ, ರಾವಣನು ವಿದೇಹ ನಂದಿನೀ ಸೀತೆಯನ್ನು ಅಪಹರಿಸಿದುದು, ಸೀತೆಗಾಗಿ ಶ್ರೀ ರಘುನಾಥನ ವಿಲಾಪ, ರಾವಣನು ಗೃದ್ಧರಾಜ ಜಟಾಯುವನ್ನು ವಧಿಸಿದುದು, ಶ್ರೀರಾಮ-ಲಕ್ಷ್ಮಣರು ಕಬಂಧನನ್ನು ದರ್ಶಿಸಿದುದು, ಮತ್ತು ವಧೆ, ಪಂಪಾದರ್ಶನ, ಶಬರಿ ನೀಡಿದ ಫಲಗಳನ್ನು ಸ್ವೀಕರಿಸಿದುದು, ಸೀತೆಗಾಗಿ ಶ್ರೀರಾಮನ ವಿಲಾಪ, ಪಂಪಾ ಸರೋವರದ ಬಳಿ ಹನುಮಂತನ ಭೇಟಿ, ಶ್ರೀರಾಮ ಮತ್ತು ಲಕ್ಷ್ಮಣರು ಹನುಮಂತನೊಂದಿಗೆ ಋಷ್ಯಮೂಕ ಪರ್ವತಕ್ಕೆ ಹೋದುದು, ಸುಗ್ರೀವನ ಸಖ್ಯ, ಸುಗ್ರೀವನಿಗೆ ತನ್ನ ಬಲದ ಬಗ್ಗೆ ವಿಶ್ವಾಸ ಉಂಟುಮಾಡಿದುದು, ವಾಲಿ-ಸುಗ್ರೀವರ ಯುದ್ಧ, ಶ್ರೀರಾಮನು ವಾಲಿಯನ್ನು ಕೊಂದುದು, ಸುಗ್ರೀವ ಪಟ್ಟಾಭಿಷೇಕ, ವಾಲಿಪತ್ನೀ ತಾರೆಯ ವಿಲಾಪ, ಶರತ್ಕಾಲದಲ್ಲಿ ಸೀತಾನ್ವೇಷಣೆ ಮಾಡುವುದಾಗಿ ಸುಗ್ರೀವನ ಪ್ರತಿಜ್ಞೆ, ಮಳೆಗಾಲದಲ್ಲಿ ಶ್ರೀರಾಮನು ಮಾಲ್ಯವಂತ ಪರ್ವತದ ಪ್ರಸ್ರವಣ ಎಂಬ ಶಿಖರದಲ್ಲಿ ವಾಸಿಸಿದುದು, ರಘುಕುಲ ಸಿಂಹ ರಾಮನು ಸುಗ್ರೀವನ ಕುರಿತ ಕ್ರೋಧ, ಸುಗ್ರೀವನು ಸೀತಾನ್ವೇಷಣೆಗಾಗಿ ವಾನರರನ್ನು ಕರೆಸಿದುದು, ಸುಗ್ರೀವನು ಎಲ್ಲ ದಿಕ್ಕುಗಳಿಗೆ ವಾನರರನ್ನು ಕಳಿಸಿದುದು, ಅವರಿಗೆ ಪೃಥ್ವಿಯ ದ್ವೀಪ-ಸಮುದ್ರ ಮುಂತಾದವುಗಳ ಪರಿಚಯ ಹೇಳಿದುದು, ಶ್ರೀರಾಮನು ಸೀತೆಯ ನಂಬಿಕೆಗಾಗಿ ಹನುಮಂತನಿಗೆ ಅಂಗುಲೀಯಕವನ್ನು ಕೊಟ್ಟಿದ್ದು, ವಾನರರಿಗೆ ಸ್ವಯಂ ಪ್ರಭೆಯ ಗುಹೆಯ ದರ್ಶನ, ಸಮುದ್ರ ತೀರದಲ್ಲಿ ವಾನರರ ಪ್ರಾಯೋಪವೇಶ, ಸಂಪಾತಿಯ ಭೇಟಿ, ಮಾತು ಕತೆ, ಸಮುದ್ರೋಲ್ಲಂನೆಗಾಗಿ ಹನುಮಂತನು ಮಹೇಂದ್ರ ಪರ್ವತವನ್ನು ಏರಿದುದು, ಸಮುದ್ರೋಲ್ಲಂಘನ, ಸಮುದ್ರನ ಮಾತಿನಂತೆ ಮೇಲೆ ಎದ್ದ ಮೈನಾಕನ ದರ್ಶನ, ರಾಕ್ಷಸೀ ತರ್ಜನ, ಛಾಯಾಗ್ರಾಹೀ ಸಿಂಹಿಕೆಯನ್ನು ಹನುಮಂತನು ಕೊಂದುದು, ಲಂಕೆಯ ಆಧಾರಭೂತ ತ್ರಿಕೂಟಪರ್ವತದ ದರ್ಶನ, ರಾತ್ರಿಯಲ್ಲಿ ಲಂಕಾಪ್ರವೇಶ, ಹನುಮಂತನು ಒಬ್ಬಂಟಿಗನಾದ್ದರಿಂದ ತನ್ನ ಕರ್ತವ್ಯವನ್ನು ಚಿಂತಿಸಿದುದು, ರಾವಣನ ಪಾನಭೂಮಿಗೆ ಆಗಮನ, ಅಂತಃಪುರದ ಸ್ತ್ರೀಯರನ್ನು ನೋಡಿದುದು, ಹನುಮಂತನು ರಾವಣನನ್ನು ನೋಡಿದುದು, ಪುಷ್ಪಕವಿಮಾನದ ನಿರೀಕ್ಷಣ, ಅಶೋಕವನಕ್ಕೆ ಹೋದುದು, ಸೀತೆಯನ್ನು ದರ್ಶಿಸಿದುದು, ಅಭಿಜ್ಞಾನಕ್ಕಾಗಿ ಸೀತೆಗೆ ಉಂಗುರ ನೀಡಿದುದು, ಆಕೆಯೊಂದಿಗೆ ಮಾತುಕತೆ, ರಾಕ್ಷಸಿಯರು ಸೀತೆಯನ್ನು ಹೆದರಿಸಿದುದು, ತ್ರಿಜಟೆಯು ತಿಳಿಸಿದ ಸ್ವಪ್ನ ವೃತ್ತಾಂತ, ಹನುಮಂತನಿಗೆ ಸೀತೆಯು ಚೂಡಾಮಣಿಯನ್ನು ಕೊಟ್ಟಿದ್ದು, ಹನುಮಂತನು ಅಶೋಕ ವನವನ್ನು ಹಾಳುಗೆಡುವಿದ್ದು, ರಾಕ್ಷಸರು ಓಡಿ ಹೋದುದು, ರಾವಣನ ಸೇವಕರನ್ನು ಹನುಂತನು ಕೊಂದು ಹಾಕಿದುದು, ಹನುಮಂತನು ಬಂಧಿತನಾಗಿ ರಾವಣನ ಸಭೆಗೆ ಹೋದುದು, ಮಾರುತಿ ಗರ್ಜನೆ, ಲಂಕಾದಹನ, ಸಮುದ್ರವನ್ನು ಹಾರಿ ಮರಳಿ ಬಂದು, ವಾನರರೊಂದಿಗೆ ಮಧುಪಾನ, ಹನುಮಂತನು ಶ್ರೀರಾಮಚಂದ್ರನಿಗೆ ಆಶ್ವಾಸನೆ ಇತ್ತುದು, ಸೀತೆಯು ಕೊಟ್ಟ ಚೂಡಾಮಣಿಯನ್ನು ರಾಮನಿಗೆ ಅರ್ಪಿಸುವುದು, ಸುಗ್ರೀವ ಮತ್ತು ವಾನರ ಸೈನ್ಯದೊಂದಿಗೆ ರಾಮನ ಲಂಕಾಯಾತ್ರೆಯಲ್ಲಿ ಸಮುದ್ರನ ಭೇಟಿ, ನಳನು ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದುದು, ವಿಭೀಷಣ ಶರಣಾಗತ, ಸೇತುವೆಯ ಮೂಲಕ ವಾನರ ಸೈನ್ಯ ಸಮುದ್ರ ದಾಟಿದುದು, ರಾತ್ರಿಯಲ್ಲಿ ವಾನರರು ಲಂಕೆಯನ್ನು ಮುತ್ತಿದುದು, ವಿಭೀಷಣನೊಂದಿಗೆ ರಾಮನ ಮೈತ್ರಿ, ವಿಭೀಷಣನು ರಾಮನಿಗೆ ರಾವಣವಧೆಯ ಉಪಾಯ ತಿಳಿಸಿದುದು, ಕುಂಭಕರ್ಣನ ನಿಧನ, ಮೇಘನಾದ ವಧೆ, ರಾವಣನ ವಿನಾಶ, ಸೀತಾ ಪ್ರಾಪ್ತಿ, ಲಂಕೆಯಲ್ಲಿ ವಿಭೀಷಣ ಪಟ್ಟಾಭಿಷೇಕ, ಶ್ರೀರಾಮನು ಪುಷ್ಪಕವಿಮಾನ ನೋಡಿದುದು, ಅದರ ಮೂಲಕ ಅಯೋಧ್ಯೆಗೆ ಪ್ರಸ್ಥಾನ, ಶ್ರೀರಾಮನು ಭರದ್ವಾಜರನ್ನು ಭೆಟ್ಟಿಯಾದುದು, ಅಯೋಧ್ಯೆಗೆ ಹೋಗಿ ಭರತನನ್ನು ಕಾಣುವುದು, ಶ್ರೀರಾಮ ಪಟ್ಟಾಭಿಷೇಕೋತ್ಸವ, ರಾಮನು ಎಲ್ಲ ವಾನರ ಸೇನೆಯನ್ನು ಬೀಳ್ಕೊಟ್ಟಿದ್ದು, ತನ್ನ ರಾಷ್ಟ್ರದ ಪ್ರಜೆಯನ್ನು ಪ್ರಸನ್ನವಾಗಿಸುವುದು, ಸೀತಾ ಪರಿತ್ಯಾಗ ಮುಂತಾದ ವೃತ್ತಾಂತಗಳನ್ನು ಹಾಗೂ ಈ ಪೃಥ್ವಿಯಲ್ಲಿ ಶ್ರೀರಾಮನು ಭವಿಷ್ಯದಲ್ಲಿ ನಡೆಸಿದ ಚರಿತ್ರೆಯನ್ನೂ ಪೂಜ್ಯರಾದ ವಾಲ್ಮೀಕಿ ಮುನಿಗಳು ತಮ್ಮ ಶ್ರೇಷ್ಠ ಮಹಾಕಾವ್ಯದಲ್ಲಿ ದಾಖಲಿಸಿದ್ದಾರೆ.॥15-39॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಮೂರನೆಯ ಸರ್ಗ ಪೂರ್ಣವಾಯಿತು. ॥3॥