००२ ब्रह्मागमनम्

वाचनम्
ಭಾಗಸೂಚನಾ

ರಾಮಾಯಣ ಕಾವ್ಯದ ಉಪಕ್ರಮ-ತಮಸಾನದಿಯ ತೀರದಲ್ಲಿ ಕ್ರೌಂಚವಧೆಯಿಂದ ಸಂತಪ್ತರಾದ ವಾಲ್ಮೀಕಿ ಮಹರ್ಷಿಗಳ ಶೋಕದ ಮಾತು ಶ್ಲೋಕರೂಪವಾದುದು, ರಾಮಾಯಣ ಕಾವ್ಯವನ್ನು ರಚಿಸಲು ಬ್ರಹ್ಮದೇವರಿಂದ ವಾಲ್ಮೀಕಿಗಳಿಗೆ ಆದೇಶ

ಮೂಲಮ್ - 1

ನಾರದಸ್ಯ ತು ತದ್ವಾಕ್ಯಂ ಶ್ರುತ್ವಾ ವಾಕ್ಯವಿಶಾರದಃ ।
ಪೂಜಯಾಮಾಸ ಧರ್ಮಾತ್ಮಾ ಸಹಶಿಷ್ಯೋ ಮಹಾಮುನಿಮ್ ॥

ಅನುವಾದ

ವಾಕ್ಯವಿಶಾರದ, ಧರ್ಮಾತ್ಮರಾದ ಮಹಾಮುನಿಗಳಾದ ವಾಲ್ಮೀಕಿಗಳು ನಾರದರು ಹೇಳಿದ ಸಂಗ್ರಹ ರಾಮಾಯಣವನ್ನು ಕೇಳಿ ತನ್ನ ಶಿಷ್ಯರೊಂದಿಗೆ ನಾರದ ಮಹಾಮುನಿಯನ್ನು ವಿಧಿವತ್ತಾಗಿ ಪೂಜಿಸಿದರು.॥1॥

ಮೂಲಮ್ - 2

ಯಥಾವತ್ ಪೂಜಿತಸ್ತೇನ ದೇವರ್ಷಿರ್ನಾರದಸ್ತದಾ ।
ಆಪೃಚ್ಛಯೇವಾಭ್ಯನುಜ್ಞಾತಃ ಸ ಜಗಾಮ ವಿಹಾಯಸಮ್ ॥

ಅನುವಾದ

ವಾಲ್ಮೀಕಿಗಳಿಂದ ಯಥಾವತ್ತಾಗಿ ಸಮ್ಮಾನಿತರಾದ ದೇವರ್ಷಿ ನಾರದರು ವಾಲ್ಮೀಕಿಗಳಿಂದ ಅನುಮತಿಯನ್ನು ಪಡೆದು ಆಕಾಶಮಾರ್ಗವಾಗಿ ತೆರಳಿದರು.॥2॥

ಮೂಲಮ್ - 3

ಸ ಮುಹೂರ್ತಂ ಗತೇ ತಸ್ಮಿನ್ ದೇವಲೋಕಂ ಮುನಿಸ್ತದಾ ।
ಜಗಾಮ ತಮಸಾತೀರಂ ಜಾಹ್ನವ್ಯಾಸ್ತ್ವವಿದೂರತಃ ॥

ಅನುವಾದ

ನಾರದರು ದೇವಲೋಕಕ್ಕೆ ತೆರಳಿದ ಬಳಿಕ ವಾಲ್ಮೀಕಿಗಳು ಎರಡು ಘಳಿಗೆ ಆಶ್ರಮದಲ್ಲಿದ್ದು, ಮಾಧ್ಯಾಹ್ನಿಕಕ್ಕಾಗಿ ಗಂಗಾ ನದಿಯ ಸಮೀಪದಲ್ಲಿ ತಮಸಾ ನದಿಗೆ ಶಿಷ್ಯರ ಸಹಿತ ಹೋದರು.॥3॥

ಮೂಲಮ್ - 4

ಸ ತು ತೀರಂ ಸಮಾಸಾದ್ಯತಮಸಾಯಾ ಮುನಿಸ್ತದಾ ।
ಶಿಷ್ಯಮಾಹ ಸ್ಥಿತಂ ಪಾರ್ಶ್ವೇ ದೃಷ್ಟ್ವಾ ತೀರ್ಥಮಕರ್ದಮಮ್ ॥

ಅನುವಾದ

ತಮಸಾ ನದೀ ತೀರಕ್ಕೆ ಹೋಗಿ ನದಿಯ ನೀರು ಕೆಸರಿಲ್ಲದೆ ಸ್ವಚ್ಛವಾಗಿರುವುದನ್ನು ಕಂಡು, ಪಕ್ಕದಲ್ಲಿದ್ದ ಭರದ್ವಾಜನೆಂಬ ಶಿಷ್ಯನಲ್ಲಿ ಹೇಳಿದರು.॥4॥

ಮೂಲಮ್ - 5

ಅಕರ್ದಮಮಿದಂ ತೀರ್ಥಂ ಭರದ್ವಾಜ ನಿಶಾಮಯ ।
ರಮಣೀಯಂ ಪ್ರಸನ್ನಾಂಬು ಸನ್ಮನುಷ್ಯಮನೋ ಯಥಾ ॥

ಅನುವಾದ

ಭರದ್ವಾಜನೇ! ಈ ತಮಸಾನದಿಯ ನೀರನ್ನು ನೋಡು ಇದರಲ್ಲಿ ಕೆಸರೆಂಬುದೇ ಇಲ್ಲ, ಬಹಳ ತಿಳಿಯಾಗಿದೆ. ಸತ್ಪುರುಷರ ಮನಸ್ಸಿನಂತೆ ಎಷ್ಟು ಸ್ವಚ್ಛವಾಗಿದೆ.॥5॥

ಮೂಲಮ್ - 6

ನ್ಯಸ್ಯತಾಂ ಕಲಶಸ್ತಾತ ದೀಯತಾಂ ವಲ್ಕಲಂ ಮಮ ।
ಇದಮೇವಾವಗಾಹಿಷ್ಯೇ ತಮಸಾತೀರ್ಥಮುತ್ತಮಮ್ ॥

ಅನುವಾದ

ಮಗು! ನನ್ನ ಕಮಂಡಲುವನ್ನು ಇಲ್ಲಿಡು. ಸ್ನಾನಕ್ಕಾಗಿ ವಲ್ಕಲಗಳನ್ನು ಕೊಡು. ನಾನು ತಮಸೆಯ ಈ ಉತ್ತಮ ತೀರ್ಥದಲ್ಲಿ ಸ್ನಾನಮಾಡುವೆನು.॥6॥

ಮೂಲಮ್ - 7

ಏವಮುಕ್ತೋ ಭರದ್ವಾಜೋ ವಾಲ್ಮೀಕೇನ ಮಹಾತ್ಮನಾ ।
ಪ್ರಾಯಚ್ಛತ ಮುನೇಸ್ತಸ್ಯ ವಲ್ಕಲಂ ನಿಯತೋ ಗುರೋಃ ॥

ಅನುವಾದ

ಮಹಾತ್ಮರಾದ ವಾಲ್ಮೀಕರು ಹೀಗೆ ಹೇಳಿದಾಗ ಆಜ್ಞಾಧಾರಕ ಶಿಷ್ಯನಾದ ಭರದ್ವಾಜನು ತನ್ನ ಗುರುಗಳಿಗೆ ನಾರು ಬಟ್ಟೆಯನ್ನು ಕೊಟ್ಟನು.॥7॥

ಮೂಲಮ್ - 8

ಸ ಶಿಷ್ಯಹಸ್ತಾದಾದಾಯ ವಲ್ಕಲಂ ನಿಯತೇಂದ್ರಿಯಃ ।
ವಿಚಚಾರ ಹ ಪಶ್ಯಂಸ್ತತ್ ಸರ್ವತೋ ವಿಪುಲಂ ವನಮ್ ॥

ಅನುವಾದ

ಜಿತೇಂದ್ರಿಯರಾದ ವಾಲ್ಮೀಕಿ ಮಹರ್ಷಿಗಳು ಶಿಷ್ಯನಿಂದ ನಾರುಮಡಿಯನ್ನು ತೆಗೆದುಕೊಂಡು ಸುತ್ತಲಿನ ವಿಶಾಲ ವನದ ಶೋಭೆಯನ್ನು ನೋಡುತ್ತಾ ಸಂಚರಿಸುತ್ತಿದ್ದರು.॥8॥

ಮೂಲಮ್
ಮೂಲಮ್ - 9

ತಸ್ಯಾಭ್ಯಾಶೇ ತು ಮಿಥುನಂ ಚರಂತಮನಪಾಯಿನಮ್ ।
ದದರ್ಶ ಭಗವಾಂಸ್ತತ್ರ ಕ್ರೌಂಚಯೋಶ್ಚಾರುನಿಃಸ್ವನಮ್ ॥

ಅನುವಾದ

ಅಲ್ಲಿ ಬಳಿಯಲ್ಲೇ ಎಂದೂ ಒಬ್ಬರನ್ನೊಬ್ಬರು ಅಗಲದೆ ಇರುವ, ಆನಂದಾತಿರೇಕದಿಂದ ಮನೋಹರವಾಗಿ ಧ್ವನಿ ಮಾಡುತ್ತಿದ್ದ ಒಂದು ಕ್ರೌಂಚ ಪಕ್ಷಿಗಳ ಜೋಡಿಯನ್ನು (ಗಂಡು-ಹೆಣ್ಣು ಕೊಕ್ಕರೆಗಳನ್ನು) ಪೂಜ್ಯರಾದ ವಾಲ್ಮೀಕಿಗಳು ನೋಡುತ್ತಿದ್ದರು.॥9॥

ಮೂಲಮ್ - 10

ತಸ್ಮಾತ್ತು ಮಿಥುನಾದೇಕಂ ಪುಮಾಂಸಂ ಪಾಪನಿಶ್ಚಯಃ ।
ಜಘಾನ ವೈರನಿಲಯೋ ನಿಷಾದಸ್ತಸ್ಯ ಪಶ್ಯತಃ ॥

ಅನುವಾದ

ಆಗಲೇ ಪಾಪಪೂರ್ಣ ವಿಚಾರವುಳ್ಳ, ಸಮಸ್ತ ಪ್ರಾಣಿಗಳಲ್ಲಿ ಕಾರಣವಿಲ್ಲದೆ ವೈರವನ್ನಿಟ್ಟುಕೊಂಡಿದ್ದ ಬೇಡನೋರ್ವನು ಬಂದು, ಆ ಪಕ್ಷಿಗಳ ಜೋಡಿಯಲ್ಲಿದ್ದ ಗಂಡು ಪಕ್ಷಿಯನ್ನು ವಾಲ್ಮೀಕಿಗಳು ನೋಡುತ್ತಿರುವಂತೆಯೇ ಬಾಣದಿಂದ ಹೊಡೆದುರುಳಿಸಿದನು.॥10॥

ಮೂಲಮ್ - 11

ತಂ ಶೋಣಿತಪರೀತಾಂಗಂ ಚೇಷ್ಟಮಾನಂ ಮಹೀತಲೇ ।
ಭಾರ್ಯಾ ತು ನಿಹತಂ ದೃಷ್ಟ್ವಾ ರುರಾವ ಕರುಣಾಂ ಗಿರಮ್ ॥

ಅನುವಾದ

ಆ ಪಕ್ಷಿಯು ರಕ್ತಸಿಕ್ತವಾಗಿ ಮರಣಾಸನ್ನ ಸ್ಥಿತಿಯಲ್ಲಿ ನೆಲದಲ್ಲಿ ಹೊರಳಾಡುತ್ತಿರುವುದನ್ನು ಕಂಡು ಹೆಣ್ಣು ಪಕ್ಷಿಯು ಕರುಣಾಜನಕ ಧ್ವನಿಯಿಂದ ರೋದಿಸತೊಡಗಿತು.॥11॥

ಮೂಲಮ್ - 12

ವಿಯುಕ್ತಾ ಪತಿನಾ ತೇನ ದ್ವಿಜೇನ ಸಹಚಾರಿಣಾ ।
ತಾಮ್ರಶೀರ್ಷೇಣ ಮತ್ತೇನ ಪತ್ ತ್ರಿಣಾ ಸಹಿತೇನ ವೈ ॥

ಅನುವಾದ

ಉತ್ತಮ ರೆಕ್ಕೆಗಳಿದ್ದ ಆ ಪಕ್ಷಿಯು ಸದಾಕಾಲ ತನ್ನ ಭಾರ್ಯೆಯೊಂದಿಗೆ ವಿಹರಿಸುತ್ತಿತ್ತು. ಅದರ ತಲೆಯ ಬಣ್ಣ ಕೆಂಪಗಾಗಿದ್ದು ಕಾಮಪೀಡಿತವಾಗಿತ್ತು. ಇಂತಹ ಪತಿಯಿಂದ ಅಗಲಿದ ಹೆಣ್ಣು ಪಕ್ಷಿ ಭಾರೀ ದುಃಖದಿಂದ ಅಳುತ್ತಿತ್ತು.॥12॥

ಮೂಲಮ್ - 13

ತಥಾವಿಧಂ ದ್ವಿಜಂ ದೃಷ್ಟ್ವಾ ನಿಷಾದೇನ ನಿಪಾತಿತಮ್ ।
ಋಷೇರ್ಧರ್ಮಾತ್ಮನಸ್ತಸ್ಯ ಕಾರುಣ್ಯಂ ಸಮಪದ್ಯತ ॥

ಅನುವಾದ

ನಿಷಾದನು ಹೊಡೆದು ಉರುಳಿಸಿದ ಆ ಗಂಡು ಪಕ್ಷಿಯ ಇಂತಹ ದುರ್ದೆಶೆಯನ್ನು ಧರ್ಮಾತ್ಮನಾದ ಮುನಿಯು ನೋಡಿ ಅವರಿಗೆ ಹೃದಯದಲ್ಲಿ ಕರುಣಾ ರಸವು ಉಕ್ಕಿ ಬಂತು.॥13॥

ಮೂಲಮ್ - 14

ತತಃ ಕರುಣವೇದಿತ್ವಾದಧರ್ಮೋಽಯಮಿತಿ ದ್ವಿಜಃ ।
ನಿಶಾಮ್ಯ ರುದತೀಂ ಕ್ರೌಂಚಿಮಿದಂ ವಚನಮಬ್ರವೀತ್ ॥

ಅನುವಾದ

ಸ್ವಭಾವತಃ ಕರುಣಾಮೂರ್ತಿಯಾದ ಬ್ರಹ್ಮರ್ಷಿ ವಾಲ್ಮೀಕರು ಈ ನಿಷಾದನ ಕಾರ್ಯವು ಅಧರ್ಮಮಯವಾಗಿದೆ ಎಂದು ನಿಶ್ಚಯಿಸಿ ಅಳುತ್ತಿರುವ ಹೆಣ್ಣು ಪಕ್ಷಿಯನ್ನು ನೋಡಿ ಅವರು ಅಂತಃಕರಣದಲ್ಲಿ ಉಕ್ಕುತ್ತಿದ್ದ ಕರುಣಾರಸವು ಶ್ಲೋಕರೂಪವಾಗಿ ವಾಲ್ಮೀಕಿಗಳ ಮುಖದಿಂದ ಹೊರಟಿತು.॥14॥

ಮೂಲಮ್ - 15

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ ।
ಯತ್ಕ್ರೌಂಚ ಮಿಥುನಾದೇಕಮವಧೀಃ ಕಾಮಮೋಹಿತಮ್ ॥

ಅನುವಾದ

ಎಲೈ ಬೇಡನೇ! ನೀನು ಬಹಳ ಕಾಲದವರೆಗೆ ಸ್ಥಿರವಾಗಿ ಬದುಕಬೇಡ; ನಿನಗೆ ಶಾಂತಿ ಇಲ್ಲವಾಗಲಿ. ಕಾಮೇಚ್ಛೆಯಿಂದ ಸುತ್ತಾಡುತ್ತಿದ್ದ ಕ್ರೌಂಚ ದಂಪತಿಗಳಲ್ಲಿ ಗಂಡು ಹಕ್ಕಿಯನ್ನು ಕೊಂದಿರುವುದರಿಂದ ನೀನು ಹೆಚ್ಚು ಕಾಲ ಬದುಕಬೇಡ.॥15॥

ಮೂಲಮ್ - 16

ತಸ್ಯೇತ್ಥಂ ಬ್ರುವತಶ್ಚಿಂತಾ ಬಭೂವ ಹೃದಿ ವೀಕ್ಷತಃ ।
ಶೋಕಾರ್ತೇನಾಸ್ಯ ಶಕುನೇಃ ಕಿಮಿದಂ ವ್ಯಾಹೃತಂ ಮಯಾ ॥

ಅನುವಾದ

ಹೀಗೆ ಹೇಳಿದ ಬಳಿಕ ಅವರು ವಿಚಾರ ಮಾಡಿದಾಗ ಅವರ ಮನಸ್ಸಿನಲ್ಲಿ ಚಿಂತೆಯು ಆವರಿಸಿತು. ಅಯ್ಯೋ! ಈ ಪಕ್ಷಿಯ ಶೋಕದಿಂದ ಪೀಡಿತನಾದ ನಾನು ಇದೆಂತಹ ಕಾರ್ಯ ಮಾಡಿಬಿಟ್ಟೆ!॥16॥

ಮೂಲಮ್ - 17

ಚಿಂತಯನ್ ಸ ಮಹಾಪ್ರಾಜ್ಞಶ್ಚಕಾರಮತಿಮಾನ್ಮತಿಮ್ ।
ಶಿಷ್ಯಂ ಚೈವಾಬ್ರವೀದ್ವಾಕ್ಯಮಿದಂ ಸ ಮುನಿಪುಂಗವಃ॥

ಅನುವಾದ

ಇದನ್ನು ಯೋಚಿಸುತ್ತಾ ಮಹಾಜ್ಞಾನೀ ಮತ್ತು ಪರಮಬುದ್ಧಿವಂತರಾದ ಮುನಿವರ ವಾಲ್ಮೀಕಿಗಳು ಒಂದು ನಿಶ್ಚಯಕ್ಕೆ ಬಂದು ತನ್ನ ಶಿಷ್ಯನಲ್ಲಿ ಇಂತೆಂದರು-॥17॥

ಮೂಲಮ್ - 18

ಪಾದಬದ್ಧೋಽಕ್ಷರಸಮಸ್ತಂತ್ರೀಲಯಸಮನ್ವಿತಃ ।
ಶೋಕಾರ್ತಸ್ಯ ಪ್ರವೃತ್ತೋ ಮೇ ಶ್ಲೋಕೋ ಭವತು ನಾನ್ಯಥಾ ॥

ಅನುವಾದ

ಮಗು! ಶೋಕದಿಂದ ಪೀಡಿತನಾದ ನನ್ನ ಮುಖದಿಂದ ಹೊರಟ ಈ ವಾಣಿಯು ನಾಲ್ಕು ಪಾದಗಳಿಂದ ಕೂಡಿದ್ದು ಸಮಾಕ್ಷರ ಉಳ್ಳದ್ದಾಗಿ ಪ್ರಾಸ ಬದ್ಧವಾಗಿ ತಂತೀವಾದ್ಯಗಳೊಡನೆ ಹಾಡಲು ಲಯಬದ್ಧವಾಗಿರುವ ಶ್ಲೋಕವಾಗಿ ಪರಿಣಮಿಸಲಿ. ಕೇವಲ ಪದ ಜಾಲವಾಗದಿರಲಿ.॥18॥

ಮೂಲಮ್ - 19

ಶಿಷ್ಯಸ್ತು ತಸ್ಯ ಬ್ರುವತೋ ಮುನೇರ್ವಾಕ್ಯಮನುತ್ತಮಮ್ ।
ಪ್ರತಿಜಗ್ರಾಹ ಸಂತುಷ್ಟಸ್ತಸ್ಯ ತುಷ್ಟೋಽಭವನ್ಮುನಿಃ ॥

ಅನುವಾದ

ಗುರುಗಳ ಈ ಉತ್ತಮ ಮಾತನ್ನು ಕೇಳಿ ಶಿಷ್ಯ ಭರದ್ವಾಜನಿಗೆ ಬಹಳ ಸಂತೋಷವಾಯಿತು ಹಾಗೂ ಅವನು ಅದನ್ನು ಸಮರ್ಥಿಸುತ್ತಾ - ‘ಹೌದು, ನಿಮ್ಮ ಈ ವಾಕ್ಯ ಶ್ಲೋಕ ರೂಪವೇ ಆಗಬೇಕು’ ಎಂದು ಹೇಳಿದನು. ಶಿಷ್ಯನ ಈ ಮಾತಿನಿಂದ ಮುನಿಗಳಿಗೆ ವಿಶೇಷ ಸಂತೋಷವಾಯಿತು.॥19॥

ಮೂಲಮ್ - 20

ಸೋಽಭಿಷೇಕಂ ತತಃ ಕೃತ್ವಾ ತೀರ್ಥೇ ತಸ್ಮಿನ್ಯಥಾವಿಧಿ ।
ತಮೇವ ಚಿಂತಯನ್ನರ್ಥಮುಪಾವರ್ತತ ವೈ ಮುನಿಃ ॥

ಅನುವಾದ

ಅನಂತರ ಅವರು ಆ ಉತ್ತಮ ತೀರ್ಥದಲ್ಲಿ ವಿಧಿವತ್ತಾಗಿ ಸ್ನಾನ ಮಾಡಿದರು. ಹಾಗೂ ತನ್ನ ಬಾಯಿಂದ ಹೊರಟ ಶ್ಲೋಕದ ವಿಷಯವನ್ನು ಚಿಂತಿಸುತ್ತಾ ಆಶ್ರಮಕ್ಕೆ ಹೊರಟರು.॥20॥

ಮೂಲಮ್ - 21

ಭರದ್ವಾಜಸ್ತತಃ ಶಿಷ್ಯೋ ವಿನೀತಃ ಶ್ರುತವಾನ್ ಗುರೋಃ ।
ಕಲಶಂ ಪೂರ್ಣಮಾದಾಯ ಪೃಷ್ಠತೋಽನುಜಗಾಮ ಹ ॥

ಅನುವಾದ

ಅವರ ವಿನೀತ ಹಾಗೂ ಶಾಸ್ತ್ರಜ್ಞ ಶಿಷ್ಯ ಭರದ್ವಾಜನೂ ನೀರು ತುಂಬಿದ ಕಮಂಡಲುವನ್ನೆತ್ತಿಕೊಂಡು ಅವರ ಹಿಂದೆ ನಡೆದನು.॥21॥

ಮೂಲಮ್ - 22

ಸ ಪ್ರವಿಶ್ಯಾಶ್ರಮಪದಂ ಶಿಷ್ಯೇಣ ಸಹ ಧರ್ಮವಿತ್ ।
ಉಪವಿಷ್ಟಃ ಕಥಾಶ್ಚಾನ್ಯಾಶ್ಚಕಾರ ಧ್ಯಾನಮಾಸ್ಥಿತಃ ॥

ಅನುವಾದ

ಶಿಷ್ಯನೊಂದಿಗೆ ಆಶ್ರಮಕ್ಕೆ ಬಂದ ಧರ್ಮಜ್ಞ ಋಷಿ ವಾಲ್ಮೀಕಿಗಳು ಸುಖಾಸೀನರಾಗಿ ಬೇರೆ ಬೇರೆ ಮಾತುಗಳನ್ನಾಡುತ್ತಿದ್ದರೂ, ಪ್ರಯತ್ನವಿಲ್ಲದೆಯೇ ತನ್ನ ಮುಖದಿಂದ ಹೊರಟ ‘ಮಾ ನಿಷಾದ…’ ಎಂಬ ಶ್ಲೋಕದ ವಿಷಯವನ್ನು ಸ್ಮರಿಸುತ್ತಾ ಇದ್ದರು.॥22॥

ಮೂಲಮ್ - 23

ಆಜಗಾಮ ತತೋ ಬ್ರಹ್ಮಾ ಲೋಕಕರ್ತಾ ಸ್ವಯಂ ಪ್ರಭುಃ ।
ಚತುರ್ಮುಖೋ ಮಹಾತೇಜಾ ದ್ರಷ್ಟುಂ ತಂ ಮುನಿಪುಂಗವಮ್ ॥

ಅನುವಾದ

ಅಷ್ಟರಲ್ಲಿ ಅಖಿಲ ವಿಶ್ವವನ್ನು ಸೃಷ್ಟಿಸುವ, ಸರ್ವಸಮರ್ಥ, ಮಹಾತೇಜಸ್ವೀ ಚತುರ್ಮುಖ ಬ್ರಹ್ಮದೇವರು ಮುನಿವರ ವಾಲ್ಮೀಕಿ ಮಹರ್ಷಿಯನ್ನು ನೋಡಲು ಅವರ ಆಶ್ರಮಕ್ಕೆ ಬಂದರು.॥23॥

ಮೂಲಮ್ - 24

ವಾಲ್ಮೀಕಿರಥ ತಂ ದೃಷ್ಟ್ವಾಸಹಸೋತ್ಥಾಯ ವಾಗ್ಯತಃ ।
ಪ್ರಾಂಜಲಿಃ ಪ್ರಯತೋ ಭೂತ್ವಾ ತಸ್ಥೌ ಪರಮವಿಸ್ಮಿತಃ ॥

ಅನುವಾದ

ಅವರನ್ನು ನೋಡುತ್ತಲೇ ಮಹರ್ಷಿ ವಾಲ್ಮೀಕಿಗಳು ತತ್ಕ್ಷಣ ಎದ್ದು ನಿಂತರು. ಅವರು ಮನ, ಇಂದ್ರಿಯಗಳನ್ನು ವಶದಲ್ಲಿರಿಸಿಕೊಂಡು ಅತ್ಯಂತ ವಿಸ್ಮಿತರಾಗಿ ಕೈಜೋಡಿಸಿ ಸುಮ್ಮನೆ ಸ್ವಲ್ಪ ಹೊತ್ತು ನಿಂತುಬಿಟ್ಟರು; ಏನನ್ನೂ ಮಾತನಾಡದಾದರು.॥24॥

ಮೂಲಮ್ - 25

ಪೂಜಯಾಮಾಸ ತಂ ದೇವಂ ಪಾದ್ಯಾರ್ಘ್ಯಾಸನವಂದನೈಃ ।
ಪ್ರಣಮ್ಯ ವಿಧಿವಚ್ಚೈನಂಪೃಷ್ಟ್ವಾಚೈವ ನಿರಾಮಯಮ್ ॥

ಅನುವಾದ

ಬಳಿಕ ಅವರು ಅರ್ಘ್ಯ-ಪಾದ್ಯಾದಿಗಳಿಂದ ಹಾಗೂ ಸ್ತೋತ್ರಾದಿಗಳಿಂದ ಭಗವಾನ್ ಬ್ರಹ್ಮದೇವರನ್ನು ಪೂಜಿಸಿದರು. ಅವರ ಚರಣಗಳಲ್ಲಿ ವಿಧಿವತ್ತಾಗಿ ವಂದಿಸಿಕೊಂಡು ಅವರಲ್ಲಿ ಕ್ಷೇಮವನ್ನು ಕೇಳಿದರು.॥25॥

ಮೂಲಮ್ - 26

ಅಥೋಪವಿಶ್ಯ ಭಗವಾನಾಸನೇ ಪರಮಾರ್ಚಿತೇ ।
ವಾಲ್ಮೀಕಯೇ ಚ ಋಷಯೇ ಸಂದಿದೇಶಾಸನಂ ತತಃ ॥

ಅನುವಾದ

ಭಗವಾನ್ ಬ್ರಹ್ಮದೇವರು ಬಂದು ಪರಮೋತ್ತಮ ಆಸನದಲ್ಲಿ ವಿರಾಜಮಾನರಾಗಿ ವಾಲ್ಮೀಕಿ ಮಹರ್ಷಿಗಳಿಗೂ ಕುಳಿತುಕೊಳ್ಳಲು ನಿರ್ದೇಶಿಸಿದರು.॥26॥

ಮೂಲಮ್ - 27

ಬ್ರಹ್ಮಣಾ ಸಮನುಜ್ಞಾತಃ ಸೋಽಪ್ಯುಪಾವಿಶದಾಸನೇ ।
ಉಪವಿಷ್ಟೇ ತದಾ ತಸ್ಮಿನ್ ಸಾಕ್ಷಾಲ್ಲೋಕಪಿತಾಮಹೇ ॥

ಮೂಲಮ್ - 28½

ತದ್ಗತೇನೈವ ಮನಸಾ ವಾಲ್ಮೀಕಿರ್ಧ್ಯಾನಮಾಸ್ಥಿತಃ ।
ಪಾಪಾತ್ಮನಾ ಕೃತಂ ಕಷ್ಟಂ ವೈರಗ್ರಹಣಬುದ್ಧಿನಾ ॥
ಯತ್ ತಾದೃಶಂ ಚಾರುರವಂ ಕ್ರೌಂಚಂ ಹನ್ಯಾದಕಾರಣಾತ್ ।

ಅನುವಾದ

ಬ್ರಹ್ಮದೇವರ ಆಜ್ಞೆಯನ್ನು ಪಡೆದು ವಾಲ್ಮೀಕಿಗಳು ಆಸೀನರಾದರು. ಆಗ ಸಾಕ್ಷಾತ್ ಲೋಕಪಿತಾಮಹ ಬ್ರಹ್ಮದೇವರ ಎದುರಿಗೆ ಕುಳಿತಿದ್ದರೂ ವಾಲ್ಮೀಕಿಗಳ ಮನಸ್ಸು ಆ ಕ್ರೌಂಚಪಕ್ಷಿಯ ವಧೆಯನ್ನು ಹಾಗೂ ತನ್ನ ಬಾಯಿಂದ ಬಂದ ‘ಮಾ ನಿಷಾದ…’ ಶ್ಲೋಕವನ್ನೇ ಚಿಂತಿಸುತ್ತಿತ್ತು. ‘ಅಯ್ಯೋ! ವೈರಭಾವವನ್ನೇ ಗ್ರಹಿಸಿದ ಬುದ್ಧಿಯುಳ್ಳ ಪಾಪಾತ್ಮ ವ್ಯಾಧನು ಯಾವುದೇ ಅಪರಾಧವಿಲ್ಲದೆಯೇ ಮನೋಹರ ಕಲರವ ಮಾಡುತ್ತಿದ್ದ ಪಕ್ಷಿಯನ್ನು ಕೊಂದುಬಿಟ್ಟನಲ್ಲ.॥27-28½॥

ಮೂಲಮ್ - 29½

ಶೋಚನ್ನೇವ ಪುನಃ ಕ್ರೌಂಚೀಮುಪಶ್ಲೋಕಮಿಮಂ ಜಗೌ ॥
ಪುನರಂತರ್ಗತಮನಾ ಭೂತ್ವಾ ಶೋಕ ಪರಾಯಣಃ ।

ಅನುವಾದ

ಇದನ್ನೇ ಯೋಚಿಸುತ್ತಾ ವಾಲ್ಮೀಕಿಗಳು ಕ್ರೌಂಚ ಹೆಣ್ಣು ಪಕ್ಷಿಯ ಆರ್ತನಾದವನ್ನು ಕೇಳಿ ನಿಷಾದನನ್ನು ಉದ್ದೇಶಿಸಿ ನುಡಿದ ಶ್ಲೋಕವನ್ನೇ ಪುನಃ ಬ್ರಹ್ಮದೇವರ ಮುಂದೆ ಹೇಳಿಕೊಂಡರು. ಅದನ್ನು ಪುನಃ ಉಚ್ಚರಿಸುವಾಗ ಮತ್ತೆ ಅವರ ಮನಸ್ಸಿನಲ್ಲಿ ತಮ್ಮ ಶಾಪದ ಅನೌಚಿತ್ಯವು ನೆನಪಾಯಿತು. ಆಗ ಅವರು ಶೋಕ ಮತ್ತು ಚಿಂತೆಯಲ್ಲಿ ಮುಳುಗಿಹೋದರು.॥29½॥

ಮೂಲಮ್ - 30

ತಮುವಾಚ ತತೋ ಬ್ರಹ್ಮಾ ಪ್ರಹಸನ್ ಮುನಿಪುಂಗವಮ್ ॥

ಮೂಲಮ್ - 31

ಶ್ಲೋಕ ಏವಾಸ್ತ್ವಯಂ ಬದ್ಧೋ ನಾತ್ರ ಕಾರ್ಯಾ ವಿಚಾರಣಾ ।
ಮಚ್ಛಂದಾದೇವ ತೇ ಬ್ರಹ್ಮನ್ ಪ್ರವೃತ್ತೇಯಂ ಸರಸ್ವತೀ ॥

ಅನುವಾದ

ಬ್ರಹ್ಮದೇವರು ಅವರ ಮನಃಸ್ಥಿತಿಯನ್ನು ಅರಿತು ನಗುತ್ತಾ ಮುನಿವರ ವಾಲ್ಮೀಕಿಯ ಬಳಿ ಹೀಗೆ ನುಡಿದರು - ಬ್ರಾಹ್ಮಣೋತ್ತಮನೇ! ನಿನ್ನ ಮುಖದಿಂದ ಹೊರಟ ಈ ಛಂದೋಬದ್ಧ ವಾಕ್ಯವು ಶ್ಲೋಕರೂಪವೇ ಆಗಿದೆ. ನೀನು ಈ ವಿಷಯದಲ್ಲಿ ಸಂಶಯ ಪಡದೆ ಚಿಂತಿಸಬೇಡ. ನನ್ನ ಸಂಕಲ್ಪ ಅಥವಾ ಪ್ರೇರಣೆಯಿಂದಲೇ ನಿನ್ನ ಬಾಯಿಂದ ಇಂತಹ ವಾಣಿಯು ಹೊರಬಿದ್ದಿದೆ.॥30-31॥

ಮೂಲಮ್ - 32½

ರಾಮಸ್ಯ ಚರಿತಂ ಕೃತ್ಸ್ನಂ ಕುರು ತ್ವಮೃಷಿಸತ್ತಮ ।
ಧರ್ಮಾತ್ಮನೋ ಭಗವತೋ ಲೋಕೇ ರಾಮಸ್ಯ ಧೀಮತಃ ॥
ವೃತ್ತಂ ಕಥಯ ಧೀರಸ್ಯ ಯಥಾ ತೇ ನಾರದಾಚ್ಛ್ರುತಮ್ ।

ಅನುವಾದ

ಮುನಿಶ್ರೇಷ್ಠನೇ! ಇದೇ ವಿಧವಾದ ತಂತ್ರೀಲಯ ಸಮನ್ವಿತ ನಾಲ್ಕು ಪಾದಗಳುಳ್ಳ ಶ್ಲೋಕಗಳಿಂದ ನೀನು ರಾಮನ ಸಂಪೂರ್ಣ ಚರಿತ್ರೆಯನ್ನು ವರ್ಣಿಸು. ಪರಮ ಬುದ್ಧಿವಂತ ಭಗವಾನ್ ಶ್ರೀರಾಮನೇ ಪ್ರಪಂಚದಲ್ಲಿ ಎಲ್ಲರಿಗಿಂತ ದೊಡ್ಡ ಧರ್ಮಾತ್ಮಾ ಮತ್ತು ಧೀರ ಪುರುಷನಾಗಿದ್ದಾನೆ. ನೀನು ನಾರದರ ಮುಖದಿಂದ ಕೇಳಿದಂತೆಯೇ ರಾಮನ ಚರಿತ್ರೆಯನ್ನು ಚಿತ್ರಿಸು.॥32½॥

ಮೂಲಮ್ - 33

ರಹಸ್ಯಂ ಚ ಪ್ರಕಾಶಂ ಚ ಯದ್ವೃತ್ತಂ ತಸ್ಯ ಧೀಮತಃ ॥

ಮೂಲಮ್ - 34½

ರಾಮಸ್ಯ ಸಹ ಸೌಮಿತ್ರೇ ರಾಕ್ಷಸಾನಾಂ ಚ ಸರ್ವಶಃ ।
ವೈದೇಹ್ಯಾಶ್ಚೈವ ಯದ್ವೃತ್ತಂ ಪ್ರಕಾಶಂ ಯದಿವಾರಹಃ ॥
ತಚ್ಚಾಪ್ಯಾಪ್ಯವಿದಿತಂ ಸರ್ವಂ ವಿದಿತಂ ತೇ ಭವಿಷ್ಯತಿ ।

ಅನುವಾದ

ಬುದ್ಧಿವಂತನಾದ ಶ್ರೀರಾಮನ ವಿಷಯವಾಗಿ ಪ್ರಕಟವಾದ ಅಥವಾ ಅಪ್ರಕಟವಾದ ವೃತ್ತಾಂತವು ಹಾಗೂ ಲಕ್ಷ್ಮಣ ಜಾನಕಿ ಹಾಗೂ ರಾವಣಾದಿ ರಾಕ್ಷಸರ ವಿಷಯವಾಗಿ ಎಲ್ಲರಿಗೂ ತಿಳಿದಿರುವ ಹಾಗೂ ತಿಳಿಯದೇ ಇರುವ ವಿಷಯಗಳೆಲ್ಲವೂ ನಿನಗೆ ಅಂಗೈ ನೆಲ್ಲಿ ಕಾಯಿಯಂತೆ ಗೋಚರವಾಗುತ್ತವೆ.॥33-34½॥

(ಶ್ಲೋಕ 35½)

ಮೂಲಮ್

ನ ತೇ ವಾಗನೃತಾ ಕಾವ್ಯೇ ಕಾಚಿದತ್ರ ಭವಿಷ್ಯತಿ ॥
ಕುರು ರಾಮಕಥಾಂ ಪುಣ್ಯಾಂ ಶ್ಲೋಕಬದ್ಧಾಂ ಮನೋರಮಾಮ್ ।

ಅನುವಾದ

ನೀನು ರಚಿಸಿದ ರಾಮಾಯಣ ಕಾವ್ಯದಲ್ಲಿ ಅಸತ್ಯವಾದುದು ಸ್ವಲ್ಪವೂ ಇರಲಾರದು. ಆದುದರಿಂದ ನೀನು ಶ್ರೀರಾಮಚಂದ್ರನ ಪರಮಪವಿತ್ರ ಹಾಗೂ ಮನೋಹರವಾದ ಕಥೆಯನ್ನು ಶ್ಲೋಕಬದ್ಧವಾಗಿ ರಚಿಸು.॥35½॥

ಮೂಲಮ್ - 36½

ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ ॥
ತಾವದ್ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ ।

ಮೂಲಮ್ - 37½

ಯಾವದ್ ರಾಮಸ್ಯ ಚ ಕಥಾ ತ್ವತ್ಕೃತಾ ಪ್ರಚರಿಷ್ಯತಿ ॥
ತಾವದೂರ್ಧ್ವಮಧಶ್ಚ ತ್ವಂ ಮಲ್ಲೋಕೇಷು ನಿವತ್ಸ್ಯಸಿ ।

ಅನುವಾದ

ಎಂದಿನವರೆಗೆ ಈ ಭೂಮಿಯಲ್ಲಿ ಪರ್ವತ-ಗಿರಿ-ದುರ್ಗಗಳೂ, ನದ-ನದೀ-ಸರೋವರಗಳು ಇರುವವೋ ಅಂದಿನವರೆಗೆ ಪ್ರಪಂಚದಲ್ಲಿ ರಾಮಾಯಣ ಕಥೆಯು ಲೋಕದಲ್ಲಿ ಪ್ರಚಾರವಿರುವುದು. ಅಲ್ಲಿಯ ತನಕ ನೀನು ಸ್ವೇಚ್ಛೆಯಾಗಿ ಮೇಲೆ, ಕೆಳಗೆ ಹಾಗೂ ನಾನು ರಚಿಸಿದ ಎಲ್ಲ ಲೋಕಗಳಲ್ಲಿ ವಾಸ ಮಾಡಲು ಅರ್ಹನಾಗುವೆ.॥36½-37½॥

ಮೂಲಮ್ - 38

ಇತ್ಯುಕ್ತ್ವಾ ಭಗವಾನ್ ಬ್ರಹ್ಮಾ ತತ್ರೈವಾಂತರಧೀಯತ ।
ತತಃ ಸಶಿಷ್ಯೋ ಭಗವಾನ್ಮುನಿರ್ವಿಸ್ಮಯಮಾಯಯೌ ॥

ಅನುವಾದ

ಹೀಗೆ ಹೇಳಿ ಭಗವಾನ್ ಬ್ರಹ್ಮದೇವರು ಅಲ್ಲೇ ಅಂತರ್ಧಾನರಾದರು. ಅವರು ಕಣ್ಮರೆಯಾದುದನ್ನು ನೋಡಿ ಶಿಷ್ಯರ ಸಹಿತ ಪೂಜ್ಯರಾದ ವಾಲ್ಮೀಕಿ ಮುನಿಗಳಿಗೆ ಬಹಳ ವಿಸ್ಮಯವಾಯಿತು.॥38॥

ಮೂಲಮ್ - 39

ತಸ್ಯ ಶಿಷ್ಯಾಸ್ತತಃ ಸರ್ವೇ ಜಗುಃ ಶ್ಲೋಕಮಿಮಂ ಪುನಃ ।
ಮುಹುರ್ಮುಹುಃ ಪ್ರೀಯಮಾಣಾಃ ಪ್ರಾಹುಶ್ಚ ಭೃಶವಿಸ್ಮಿತಾಃ ॥

ಅನುವಾದ

ಅನಂತರ ಅವರ ಎಲ್ಲ ಶಿಷ್ಯರು ಆನಂದಿತರಾಗಿ ಪದೇ ಪದೇ ‘ಮಾ ನಿಷಾದ’ ಎಂಬ ಶ್ಲೋಕವನ್ನು ಹಾಡಿದರು ಮತ್ತು ಅವರು ಪರಮ ವಿಸ್ಮಿತರಾಗಿ ಪರಸ್ಪರ ಹೀಗೆ ಹೇಳಿಕೊಂಡರು.॥39॥

ಮೂಲಮ್ - 40

ಸಮಾಕ್ಷರೈಶ್ಚತುರ್ಭಿರ್ಯಃ ಪಾದೈರ್ಗೀತೋ ಮಹರ್ಷಿಣಾ ।
ಸೋಽನುವ್ಯಾಹರಣಾದ್ಭೂಯಃ ಶೋಕಃ ಶ್ಲೋಕತ್ವಮಾಗತಃ ॥

ಅನುವಾದ

ನಮ್ಮ ಗುರುಗಳಾದ ಮಹರ್ಷಿಗಳು ಕ್ರೌಂಚ ಪಕ್ಷಿಯಿಂದ ದುಃಖಿತರಾಗಿ ಸಮಾನಾಕ್ಷರ ಉಳ್ಳ ನಾಲ್ಕು ಚರಣಗಳಿಂದ ಕೂಡಿದ ವಾಕ್ಯವನ್ನು ಹಾಡಿದುದು ಅವರ ಹೃದಯದ ಶೋಕವಾಗಿತ್ತು, ಆದರೆ ಅದೇ ಅವರ ಬಾಯಿಯಿಂದ ಉಚ್ಚರಿತವಾಗಿ ಶ್ಲೋಕರೂಪವೇ ಆಯಿತು.॥40॥

ಮೂಲಮ್ - 41

ತಸ್ಯ ಬುದ್ಧಿರಿಯಂ ಜಾತಾ ಮಹರ್ಷೇರ್ಭಾವಿತಾತ್ಮನಃ ।
ಕೃತ್ಸ್ನಂ ರಾಮಾಯಣಂ ಕಾವ್ಯಮೀದೃಶೈಃ ಕರವಾಣ್ಯಹಮ್ ॥

ಅನುವಾದ

ಇತ್ತ ಶುದ್ಧ ಅಂತಃಕರಣವುಳ್ಳ ಮಹರ್ಷಿ ವಾಲ್ಮೀಕಿಯ ಮನಸ್ಸಿನಲ್ಲಿ ‘ನಾನು ಇಂತಹ ಶ್ಲೋಕಗಳಲ್ಲೇ ಸಮಗ್ರ ರಾಮಾಯಣ ಕಾವ್ಯವನ್ನು ರಚಿಸುವೆನು’ ಎಂಬ ವಿಚಾರ ಬಂತು.॥41॥

ಮೂಲಮ್ - 42

ಉದಾರವೃತ್ತಾರ್ಥಪದೈರ್ಮನೋರಮೈಃ -
ತದಾಸ್ಯ ರಾಮಸ್ಯ ಚಕಾರ ಕೀರ್ತಿಮಾನ್ ।
ಸಮಾಕ್ಷರೈಃ ಶ್ಲೋಕಶತೈರ್ಯತಸ್ವಿನೋ
ಯಶಸ್ಕರಂ ಕಾವ್ಯಮುದಾರದರ್ಶನಃ ॥

ಅನುವಾದ

ಇದನ್ನು ಯೋಚಿಸಿ ಉದಾರ ದೃಷ್ಟಿಯುಳ್ಳ ಯಶಸ್ವೀ ಮಹರ್ಷಿಗಳು ಭಗವಾನ್ ಶ್ರೀರಾಮಚಂದ್ರನ ಚರಿತ್ರೆಯನ್ನು ಸಾವಿರಾರು ಶ್ಲೋಕಗಳಲ್ಲಿ ಮಹಾಕಾವ್ಯವನ್ನು ರಚಿಸಿದರು. ಇದು ಅವರ ಕೀರ್ತಿಯನ್ನು ಹೆಚ್ಚಿಸುವುದಾಗಿದೆ. ಇದರಲ್ಲಿ ಶ್ರೀರಾಮನ ಉದಾರ ಚರಿತ್ರೆಗಳನ್ನು ಪ್ರತಿಪಾದಿಸುವ ಮನೋಹರ ಪದಗಳ ಪ್ರಯೋಗ ಮಾಡಿರುವರು.॥42॥

ಮೂಲಮ್ - 43

ತದುಪಗತಸಮಾಸಸಂಧಿಯೋಗಂ
ಸಮಮಧುರೋಪನತಾರ್ಥವಾಕ್ಯಬದ್ಧಮ್ ।
ರಘುವರಚರಿತಂ ಮುನಿಪ್ರಣೀತಂ
ದಶಶಿರಸಶ್ಚ ವಧಂ ನಿಶಾಮಯಧ್ವಮ್ ॥

ಅನುವಾದ

ಮಹರ್ಷಿ ವಾಲ್ಮೀಕಿಗಳು ರಚಿಸಿದ ಈ ಕಾವ್ಯದಲ್ಲಿ ತತ್ಪುರುಷ ಮೊದಲಾದ ಸಮಾಸಗಳು, ದೀರ್ಗುಣ ಮೊದಲಾದ ಸಂಧಿಗಳು, ಪ್ರಕೃತಿ-ಪ್ರತ್ಯಯ ಸಂಬಂಧದ ಯಥಾಯೋಗ್ಯ ಉಪಯೋಗವಾಗಿದೆ. ಇದರ ರಚನೆಯಲ್ಲಿ ಸಮತಾ (ಪ್ರತತ್-ಪ್ರಕರ್ಷ ಇತ್ಯಾದಿ ದೋಷಗಳ ಅಭಾವ) ಇದೆ. ಪದಗಳಲ್ಲಿ ಮಾಧುರ್ಯವಿದೆ. ಅರ್ಥದಲ್ಲಿ ಪ್ರಸಾದ ಗುಣಗಳ ಹೆಚ್ಚಳವಾಗಿದೆ. ಭಾವುಕ ಜನರೇ! ಹೀಗೆ ಶಾಸ್ತ್ರೀಯ ಪದ್ಧತಿಗೆ ಅನುಕೂಲವಾದ ಈ ರಘುವರನ ಚರಿತ್ರೆ ಮತ್ತು ರಾವಣ ವಧೆಯ ಪ್ರಸಂಗವನ್ನು ಮನಸ್ಸಿಟ್ಟು ಕೇಳಿರಿ.॥43॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಎರಡನೆಯ ಸರ್ಗ ಪೂರ್ಣವಾಯಿತು. ॥2॥