००१ सङ्क्षेपरामायणम्

वाचनम्
ಭಾಗಸೂಚನಾ

ನಾರದರು ವಾಲ್ಮೀಕಿ ಮುನಿಗಳಿಗೆ ರಾಮಚರಿತ್ರವನ್ನು ಸಂಕ್ಷೇಪವಾಗಿ ವಿವರಿಸಿದುದು

ಮೂಲಮ್ - 1

ಓಂ ತಪಃ ಸ್ವಾಧ್ಯಾಯ ನಿರತಂ ತಪಸ್ವೀ ವಾಗ್ವಿದಾಂ ವರಮ್ ।
ನಾರದಂ ಪರಿಪಪ್ರಚ್ಛ ವಾಲ್ಮೀಕಿರ್ಮುನಿಪುಂಗವಮ್ ॥

ಅನುವಾದ

ತಪಸ್ವಿಗಳಾದ ವಾಲ್ಮೀಕಿ ಮಹರ್ಷಿಗಳು ತಪಸ್ಸಿನಲ್ಲಿ ಮತ್ತು ಸ್ವಾಧ್ಯಾಯದಲ್ಲಿ ನಿರತರಾದ ಮಾತುಬಲ್ಲವರಲ್ಲಿ ಶ್ರೇಷ್ಠರಾದ ನಾರದ ಮುನಿವರ್ಯರನ್ನು ಅರ್ಘ್ಯ-ಪಾದ್ಯಾದಿಗಳಿಂದ ಪೂಜಿಸಿ, ಹೀಗೆ ಪ್ರಶ್ನಿಸಿದರು.॥1॥

ಮೂಲಮ್ - 2

ಕೋನ್ವಸ್ಮಿನ್ ಸಾಂಪ್ರತಂ ಲೋಕೇ ಗುಣವಾನ್ ಕಶ್ಚ ವೀರ್ಯವಾನ್ ।
ಧರ್ಮಜ್ಞಶ್ಚ ಕೃತಜ್ಞಶ್ಚ ಸತ್ಯವಾಕ್ಯೋ ದೃಢವ್ರತಃ ॥

ಅನುವಾದ

ನಾರದ ಮುನಿಗಳೇ! ಈಗ ಲೋಕದಲ್ಲಿ ಸಕಲ ಕಲ್ಯಾಣಗುಣಗಳಿಂದ ಕೂಡಿರುವ, ವೀರ್ಯವಂತನೂ, ಧರ್ಮಜ್ಞನೂ, ಕೃತಜ್ಞನೂ, ಸತ್ಯಭಾಷಿಯೂ, ದೃಢವ್ರತನಿಷ್ಠೆ ಉಳ್ಳವನೂ ಯಾರು ಇರುವನು?॥2॥

ಮೂಲಮ್ - 3

ಚಾರಿತ್ರೇಣ ಚ ಕೋ ಯುಕ್ತಃ ಸರ್ವಭೂತೇಷು ಕೋ ಹಿತಃ ।
ವಿದ್ವಾನ್ ಕಃ ಕಃ ಸಮರ್ಥಶ್ಚ ಕಶ್ಚೈಕ ಪ್ರಿಯದರ್ಶನಃ ॥

ಅನುವಾದ

ಸದಾಚಾರದಿಂದ ಯುಕ್ತನೂ, ಸಕಲ ಪ್ರಾಣಿಗಳ ಹಿತಸಾಧಕನೂ, ಸಕಲ ವಿದ್ಯಾಪಾರಂಗತನಾದ ವಿದ್ವಾಂಸನೂ, ಸರ್ವಕಾರ್ಯ ಸಮರ್ಥನೂ, ಏಕಮಾತ್ರ ಪ್ರಿಯದರ್ಶನ (ಮನೋಹರ) ಪುರುಷನು ಯಾರು ಇರುವನು?॥3॥

ಮೂಲಮ್ - 4

ಆತ್ಮವಾನ್ ಕೋ ಜಿತಕ್ರೋಧೋ ದ್ಯುತಿಮಾನ್ ಕೋಽನಸೂಯಕಃ ।
ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಷಸ್ಯ ಸಂಯುಗೇ ॥

ಅನುವಾದ

ಮನಸ್ಸಿನ ಮೇಲೆ ಅಧಿಕಾರವಿರುವವನೂ, ಕೋಪವನ್ನು ಗೆದ್ದವನೂ, ಸಾಟಿಯಿಲ್ಲದ ಕಾಂತಿಯುಕ್ತನೂ, ಯಾರನ್ನೂ ನಿಂದಿಸದೆ ಇರುವವನೂ ಯಾರಿದ್ದಾರೆ? ಕುಪಿತನಾಗಿ ಯುದ್ಧಕ್ಕೆ ನಿಂತರೆ ದೇವತೆಗಳೂ ಸಹ ಹೆದರುವಂತಹವನು ಯಾರು ಇರುವನು?॥4॥

ಮೂಲಮ್ - 5

ಏತದಿಚ್ಛಾಮ್ಯಹಂ ಶ್ರೋತುಂ ಪರಂ ಕೌತೂಹಲಂ ಹಿ ಮೇ ।
ಮಹರ್ಷೇ ತ್ವಂ ಸಮರ್ಥೋಽಸಿ ಜ್ಞಾತುಮೇವಂ ವಿಧಂ ನರಮ್ ॥

ಅನುವಾದ

ಮಹರ್ಷಿಯೇ! ನಾನು ಇದನ್ನು ಕೇಳಲು ಬಯಸುತ್ತಿರುವೆನು. ಇದರ ಕುರಿತು ನನಗೆ ಬಹಳ ಉತ್ಸುಕತೆ ಇದೆ. ಇಂತಹ ಮಹಾಪುರುಷನ ಕುರಿತು ತಿಳಿಸಲು ತಾವು ಸಮರ್ಥರಾಗಿರುವಿರಿ. ದಯವಿಟ್ಟು ತಿಳಿಸಿರಿ.॥5॥

ಮೂಲಮ್ - 6

ಶ್ರುತ್ವಾ ಚೈತ ತ್ರಿಲೋಕಜ್ಞೋ ವಾಲ್ಮೀಕೇರ್ನಾರದೋ ವಚಃ ।
ಶ್ರೂಯತಾಮಿತಿ ಚಾಮಂತ್ರ್ಯಪ್ರಹೃಷ್ಟೋ ವಾಕ್ಯಮಬ್ರವೀತ್ ॥

ಮೂಲಮ್ - 7

ಬಹವೋ ದುರ್ಲಭಾಶ್ಚೈವ ಯೇ ತ್ವಯಾ ಕೀರ್ತಿತಾ ಗುಣಾಃ ।
ಮುನೇ ವಕ್ಷ್ಯಾಮ್ಯಹಂ ಬುದ್ಧ್ವಾತೈರ್ಯುಕ್ತಃ ಶ್ರೂಯತಾಂ ನರಃ ॥

ಅನುವಾದ

ಮಹರ್ಷಿ ವಾಲ್ಮೀಕಿಗಳ ಈ ಪ್ರಶ್ನೆಗಳನ್ನು ಕೇಳಿ, ಮೂರು ಲೋಕಗಳ ಪ್ರತ್ಯಕ್ಷ ಜ್ಞಾನವುಳ್ಳ ನಾರದರಿಗೆ ಬಹಳ ಸಂತೋಷವಾಯಿತು. ವಾಲ್ಮೀಕಿಗಳನ್ನು ಸಂಬೋಧಿಸುತ್ತಾ ನಾರದರು ಹೇಳತೊಡಗಿದರು - ಮಹರ್ಷಿಗಳೇ! ನೀವು ಅನೇಕ ಗುಣಗಳನ್ನು ವರ್ಣಿಸಿರುವಿರಿ. ಸಕಲಗುಣ ಪರಿಪೂರ್ಣನಾದ ಓರ್ವ ನರಪುಂಗವನ ವಿಷಯವನ್ನು ಜ್ಞಾನದಿಂದ ತಿಳಿದು ಹೇಳುವೆನು ಕೇಳಿರಿ.॥6-7॥

ಮೂಲಮ್ - 8

ಇಕ್ಷ್ವಾಕುವಂಶಪ್ರಭವೋ ರಾಮೋ ನಾಮ ಜನೈಃ ಶ್ರುತಃ ।
ನಿಯತಾತ್ಮಾ ಮಹಾವೀರ್ಯೋ ದ್ಯುತಿಮಾನ್ ಧೃತಿಮಾನ್ ವಶೀ ॥

ಅನುವಾದ

ವೈವಸ್ವತಮನುವಿನ ಜ್ಯೇಷ್ಠ ಪುತ್ರನಾದ ಇಕ್ವಾಕ್ಷುವಿನ ವಂಶದಲ್ಲಿ ಉತ್ಪನ್ನನಾದ ‘‘ರಾಮ ರಾಮ’’ ಎಂದು ಜನರು ಹೊಗಳುತ್ತಿರುವ ಪುರುಷನು ನೀನು ಕೇಳಿದ ಸಕಲ ಲಕ್ಷಣಗಳಿಂದ ಪರಿಪೂರ್ಣನಾಗಿರುವನು. ಅವನು ಮನಸ್ಸನ್ನು ವಶದಲ್ಲಿ ಇಟ್ಟುಕೊಂಡು ಮಹಾಬಲಶಾಲಿಯೂ, ಕಾಂತಿಯುಕ್ತನೂ, ಧೈರ್ಯವಂತನೂ ಮತ್ತು ಜಿತೇಂದ್ರಿಯನೂ ಆಗಿರುವನು.॥8॥

ಮೂಲಮ್ - 9

ಬುದ್ಧಿಮಾನ್ನೀತಿಮಾನ್ ವಾಗ್ಮೀ ಶ್ರೀಮಾನ್ಶತ್ರು ನಿಬರ್ಹಣಃ ।
ವಿಪುಲಾಂಸೋ ಮಹಾಬಾಹುಃ ಕಂಬುಗ್ರೀವೋ ಮಹಾಹನುಃ ॥

ಅನುವಾದ

ಅವನು ಮಹಾ ಬುದ್ಧಿವಂತನೂ, ನೀತಿಕೋವಿದನೂ, ಉತ್ತಮ ವಾಗ್ಮಿಯೂ, ಶೋಭಾಸಂಪನ್ನನೂ, ಶತ್ರು ಸಂಹಾರಕನೂ ಆಗಿರುವನು. ಇದು ಅವನ ಕಲ್ಯಾಣ ಗುಣಗಳು. ಅವನ ಶರೀರ ಲಕ್ಷಣಗಳನ್ನು ಕೇಳಿರಿ. ರಾಮನು ಎತ್ತರವಾದ ಹೆಗಲಿನಿಂದ ಕೂಡಿದವನೂ ಭುಜಗಳು ದುಂಡಾಗಿವೆ. ಶಂಖದಂತೆ ಕೊರಳು ಉಳ್ಳವನೂ, ಪುಷ್ಟವಾದ ಗದ್ದ ಉಳ್ಳವನಾಗಿರುವನು.॥9॥

ಮೂಲಮ್ - 10

ಮಹೋರಸ್ಕೋ ಮಹೇಷ್ವಾಸೋ ಗೂಢಜತ್ರುರರಿಂದಮಃ ।
ಆಜಾನುಬಾಹುಃ ಸುಶಿರಾಃ ಸುಲಲಾಟಃ ಸುವಿಕ್ರಮಃ ॥

ಅನುವಾದ

ಅವನಿಗೆ ವಿಶಾಲವಾದ ಉಬ್ಬಿದ ಎದೆ ಇರುವುದು, ಅವನು ಮಹಾಧನುಸ್ಸನ್ನು ಧರಿಸುತ್ತಾನೆ. ಶ್ರೀರಾಮನ ಹೆಗಲುಗಳ ಸಂಧಿಪ್ರದೇಶವು ತುಂಬಿಕೊಂಡು ಮೂಳೆಗಳು ಕಾಣದಂತಾಗಿದೆ. ಅವನು ಒಳಗಿನ ಅರಿಷಡ್ವರ್ಗಗಳನ್ನು ಹಾಗೂ ಹೊರಗಿನ ಶತ್ರುಗಳನ್ನು ದಮನ ಮಾಡಿರುವನು. ಅವನ ಬಾಹುಗಳೂ ಮಂಡಿಯವರೆಗೆ ನೀಳವಾಗಿರುವವು. ಅವನ ಮಸ್ತಕ ಸುಂದರವಾಗಿದ್ದು, ಲಲಾಟ ಭವ್ಯ ವಿಶಾಲವಾಗಿದೆ ಹಾಗೂ ನಡಿಗೆಯು ಗಜಗಮನದಂತೆ ಮನೋಹರವಾಗಿದೆ.॥10॥

ಮೂಲಮ್ - 11

ಸಮಃ ಸಮವಿಭಕ್ತಾಂಗಃ ಸ್ನಿಗ್ಧವರ್ಣಃ ಪ್ರತಾಪವಾನ್ ।
ಪೀನವಕ್ಷಾ ವಿಶಾಲಾಕ್ಷೋ ಲಕ್ಷ್ಮೀವಾನ್ ಶುಭಲಕ್ಷಣಃ ॥

ಅನುವಾದ

ರಾಮನ ಶರೀರವು ಹೆಚ್ಚು ಎತ್ತರವೂ ಅಲ್ಲದ, ಕುಳ್ಳವೂ ಅಲ್ಲದ ಮಧ್ಯಮವಾಗಿದೆ. ಅವನ ಶರೀರದ ಅಂಗಾಂಗಳು ಯುಕ್ತ ಪ್ರಮಾಣದಲ್ಲಿವೆ. ವರ್ಣ ಶ್ಯಾಮಲವಾಗಿದೆ. ಮಹಾ ತೇಜಸ್ವಿಯಾಗಿರುನು. ಅವನ ವಕ್ಷಸ್ಥಳ ಮಾಂಸಲವಾಗಿ ಉಬ್ಬಿರುವುದು. ಪದ್ಮಪತ್ರದಂತೆ ಕಣ್ಣುಗಳು ವಿಶಾಲವಾಗಿವೆ. ಯಾವಾಗಲೂ ಅನುಪಮ ದೇಹಕಾಂತಿಯಿಂದ ಕೂಡಿದ್ದು ಸಕಲ ವಿಧವಾದ ಶುಭ ಸೂಚಕ ಚಿಹ್ನೆಗಳಿಂದ ಕೂಡಿರುವನು.॥11॥

ಮೂಲಮ್ - 12

ಧರ್ಮಜ್ಞಃ ಸತ್ಯಸಂಧಶ್ಚ ಪ್ರಜಾನಾಂ ಚ ಹಿತೇ ರತಃ ।
ಯಶಸ್ವೀ ಜ್ಞಾನಸಂಪನ್ನಃ ಶುಚಿರ್ವಶ್ಯಃ ಸಮಾಧಿಮಾನ್ ॥

ಅನುವಾದ

ಅವನು ಧರ್ಮಸ್ವರೂಪನೂ, ಧರ್ಮವನ್ನು ತಿಳಿದವನೂ, ಸತ್ಯ ಪ್ರತಿಜ್ಞನೂ ಪ್ರಜೆಗಳ ಹಿತದಲ್ಲಿ ತೊಡಗಿರುವನೂ ಆಗಿದ್ದಾನೆ. ಅವನು ಯಶಸ್ವಿಯೂ, ಜ್ಞಾನಿಯೂ, ಪವಿತ್ರನೂ, ಜಿತೇಂದ್ರಿಯನೂ, ಮನಸ್ಸನ್ನು ಏಕಾಗ್ರವಾಗಿ ಉಳ್ಳವನೂ ಆಗಿರುವನು.॥12॥

ಮೂಲಮ್ - 13

ಪ್ರಜಾಪತಿಸಮಃ ಶ್ರೀಮಾನ್ ಧಾತಾ ರಿಪುನಿಷೂದನಃ ।
ರಕ್ಷಿತಾ ಜೀವಲೋಕಸ್ಯ ಧರ್ಮಸ್ಯ ಪರಿರಕ್ಷಿತಾ ॥

ಅನುವಾದ

ಪ್ರಜಾಪತಿಯಂತೆ ಪಾಲಕನೂ, ಪೌರುಷ ಶ್ರೀಸಂಪನ್ನನೂ, ವೈರಿಗಳ ವಿಧ್ವಂಸಕನೂ, ಸಕಲ ಪ್ರಾಣಿಗಳ ಮತ್ತು ಧರ್ಮದ ರಕ್ಷಕನೂ ಆಗಿರುವನು.॥13॥

ಮೂಲಮ್ - 14

ರಕ್ಷಿತಾ ಸ್ವಸ್ಯ ಧರ್ಮಸ್ಯ ಸ್ವಜನಸ್ಯ ಚ ರಕ್ಷಿತಾ ।
ವೇದ ವೇದಾಂಗತತ್ತ್ವಜ್ಞೋ ಧನುರ್ವೇದೇ ಚ ನಿಷ್ಠಿತಃ ॥

ಅನುವಾದ

ಶ್ರೀರಾಮನು ಸ್ವಧರ್ಮ ಮತ್ತು ಸ್ವಜನರನ್ನು ರಕ್ಷಿಸುವವನಾಗಿದ್ದಾನೆ. ವೇದ-ವೇದಾಂಗಗಳ ತತ್ವವನ್ನು ಬಲ್ಲವನು ಹಾಗೂ ಧನುರ್ವೇದದಲ್ಲಿಯೂ ಪ್ರವೀಣನಾಗಿರುವನು.॥14॥

ಮೂಲಮ್ - 15

ಸರ್ವಶಾಸ್ತ್ರಾರ್ಥ ತತ್ತ್ವಜ್ಞಃ ಸ್ಮೃತಿಮಾನ್ ಪ್ರತಿಭಾನವಾನ್ ।
ಸರ್ವಲೋಕಪ್ರಿಯಃ ಸಾಧುರದೀನಾತ್ಮಾ ವಿಚಕ್ಷಣಃ ॥

ಅನುವಾದ

ಸರ್ವಶಾಸ್ತ್ರಗಳ ತತ್ವಗಳನ್ನು ತಿಳಿದಿರುವನು, ಅವನಿಗೆ ವಿಸ್ಮರಣೆಯೆಂಬುದೇ ಇಲ್ಲ. ಪ್ರತಿಭಾ ಸಂಪನ್ನನಾಗಿರುವನು, ಉತ್ತಮ ಉಚ್ಚ ವಿಚಾರವಿದ್ದು ಉದಾರ ಹೃದಯಿಯಾದ ಶ್ರೀರಾಮಚಂದ್ರನು ಮಾತುಕತೆಯಲ್ಲಿ ಕುಶಲನು ಮತ್ತು ಸಮಸ್ತ ಲೋಕಗಳಿಗೂ ಪ್ರಿಯನಾಗಿರುವನು.॥15॥

ಮೂಲಮ್ - 16

ಸರ್ವದಾಭಿಗತಃ ಸದ್ಭಿಃ ಸಮುದ್ರ ಇವ ಸಿಂಧುಭಿಃ ।
ಆರ್ಯಃ ಸರ್ವಸಮಶ್ಚೈವ ಸದೈವ ಪ್ರಿಯದರ್ಶನಃ ॥

ಅನುವಾದ

ನದಿಗಳು ಸಮುದ್ರವನ್ನೇ ಸೇರುವಂತೆ ಸಾಧು-ಸತ್ಪುರುಷರು ಸದಾಕಾಲ ಶ್ರೀರಾಮನನ್ನೇ ಸೇರುವರು. ಅವನು ಆದರ್ಶ ವ್ಯಕ್ತಿಯಾದ ಆರ್ಯನಾಗಿದ್ದು, ಎಲ್ಲರಲ್ಲಿ ಸಮಾನಭಾವ ಉಳ್ಳವನಾಗಿದ್ದಾನೆ. ಅವನ ದರ್ಶನವು ಎಲ್ಲರಿಗೆ ಪ್ರಿಯವಾಗಿದೆ.॥16॥

ಮೂಲಮ್ - 17

ಸ ಚ ಸರ್ವಗುಣೋಪೇತಃ ಕೌಸಲ್ಯಾನಂದವರ್ಧನಃ ।
ಸಮುದ್ರ ಇವ ಗಾಂಭೀರ್ಯೇ ಧೈರ್ಯೇಣ ಹಿಮವಾನಿವ ।।

ಅನುವಾದ

ಸಮಸ್ತ ಗುಣ ಪೂರ್ಣವಾದ ಶ್ರೀರಾಮಚಂದ್ರನು ತನ್ನ ತಾಯಿ ಕೌಸಲ್ಯೆಯ ಆನಂದವನ್ನು ಹೆಚ್ಚಿಸುವವನಾಗಿದ್ದಾನೆ. ಗಂಭೀರತೆಯಲ್ಲಿ ಸಮುದ್ರದಂತೆ ಇದ್ದು, ಧೈರ್ಯದಲ್ಲಿ ಹಿಮಾಲಯದಂತೆ ಆಗಿದ್ದಾನೆ.॥17॥

ಮೂಲಮ್ - 18½

ವಿಷ್ಣುನಾ ಸದೃಶೋ ವೀರ್ಯೇ ಸೋಮವತ್ಪ್ರಿಯದರ್ಶನಃ ।
ಕಾಲಾಗ್ನಿಸದೃಶಃ ಕ್ರೋಧೇ ಕ್ಷಮಯಾ ಪೃಥಿವೀ ಸಮಃ ॥
ಧನದೇನ ಸಮಸ್ತ್ಯಾಗೇ ಸತ್ಯೇ ಧರ್ಮ ಇವಾಪರಃ ।

ಅನುವಾದ

ಅವನು ಭಗವಾನ್ ವಿಷ್ಣುವಿನಂತೆ ಪರಾಕ್ರಮಶಾಲಿಯಾಗಿರುವನು. ಅವನ ದರ್ಶನ ಚಂದ್ರನಂತೆ ಮನೋಹರವಾಗಿದೆ. ಅವನ ಕ್ರೋಧವು ಕಾಲಾಗ್ನಿಯಂತೆ ಇದೆ, ಪೃಥ್ವಿಯಂತೆ ಕ್ಷಮಾಶೀಲನಾಗಿರುವನು. ತ್ಯಾಗದಲ್ಲಿ ಕುಬೇರನಂತೆ ಮತ್ತು ಸತ್ಯಸಂಧತೆಯಲ್ಲಿ ಇನ್ನೊಬ್ಬ ಧರ್ಮ ದೇವತೆಯೋ ಎಂಬಂತೆ ಇರುವನು.॥18½॥

ಮೂಲಮ್ - 19

ತಮೇವಂ ಗುಣಸಂಪನ್ನಂ ರಾಮಂ ಸತ್ಯಪರಾಕ್ರಮಮ್ ।।

ಮೂಲಮ್ - 20½

ಜ್ಯೇಷ್ಠಂ ಜ್ಯೇಷ್ಠ ಗುಣೈರ್ಯುಕ್ತಂ ಪ್ರಿಯಂ ದಶರಥಃ ಸುತಮ್ ।
ಪ್ರಕೃತೀನಾಂ ಹಿತೈರ್ಯುಕ್ತಂ ಪ್ರಕೃತಿ ಪ್ರಿಯಕಾಮ್ಯಯಾ ।।
ಯೌವರಾಜ್ಯೇನ ಸಂಯೋಕ್ತುಮೈಚ್ಛತ್ ಪ್ರೀತ್ಯಾ ಮಹೀಪತಿಃ ।

ಅನುವಾದ

ಸಕಲ ಕಲ್ಯಾಣಗುಣ ಪರಿಪೂರ್ಣನಾದ, ಪ್ರಜೆಗಳ ಪ್ರೀತಿಗೆ ಪಾತ್ರನಾದ, ಸತ್ಯ ಪರಾಕ್ರಮಿಯಾದ ಪ್ರಜೆಗಳ ಹಿತಚಿಂತನೆಯಲ್ಲಿಯೇ ಆಸಕ್ತನಾದ ಜೇಷ್ಠಪುತ್ರನಾದ ಶ್ರೀರಾಮನಿಗೆ-ಪ್ರಜೆಗಳಿಗೆ ಸಂತೋಷವನ್ನುಂಟುಮಾಡುವ ಅಭಿಲಾಷೆಯಿಂದ ದಶರಥ ಮಹಾರಾಜನು ಯುವರಾಜ ಪಟ್ಟಾಭಿಷೇಕ ಮಾಡಲು ಇಚ್ಛಿಸಿದನು.॥19-20½॥

ಮೂಲಮ್ - 21

ತಸ್ಯಾಭಿಷೇಕಸಂಭಾರಾನ್ ದೃಷ್ಟ್ವಾಭಾರ್ಯಾಥ ಕೈಕಯೀ ।।

ಮೂಲಮ್ - 22

ಪೂರ್ವಂ ದತ್ತವರಾ ದೇವೀ ವರಮೇ ನಮಯಾಚತ ।
ವಿವಾಸನಂ ಚ ರಾಮಸ್ಯ ಭರತಸ್ಯಾಭಿಷೇಚನಮ್ ॥

ಅನುವಾದ

ಅನಂತರ ರಾಮನ ಪಟ್ಟಾಭಿಷೇಕದ ಸಿದ್ಧತೆಗಳನ್ನು ನೋಡಿ, ರಾಣಿ ಕೈಕೇಯಿಯು ಮೊದಲೇ ಪಡೆದುಕೊಂಡಿದ್ದ ಎರಡು ವರಗಳನ್ನು ದಶರಥ ರಾಜನಲ್ಲಿ- ‘ರಾಮನಿಗೆ ವನವಾಸ ಮತ್ತು ಭರತನಿಗೆ ಪಟ್ಟಾಭಿಷೇಕವಾಗಲಿ’ ಎಂದು ಬೇಡಿಕೊಂಡಳು.॥21-22॥

ಮೂಲಮ್ - 23

ಸ ಸತ್ಯವಚನಾದ್ ಚೈವ ರಾಜಾ ಧರ್ಮಪಾಶೇನ ಸಂಯತಃ ।
ವಿವಾಸಯಾಮಾಸ ಸುತಂ ರಾಮಂ ದಶರಥಃ ಪ್ರಿಯಮ್ ॥

ಅನುವಾದ

ರಾಜಾ ದಶರಥನು ಸತ್ಯ ವಚನದ ಕಾರಣ, ಧರ್ಮ-ಬಂಧನದಲ್ಲಿ ಬಂಧಿತನಾಗಿ ಪ್ರಿಯಪುತ್ರನಾದ ರಾಮನನ್ನು ಕಾಡಿಗೆ ಕಳುಹಿಸಿದನು.॥23॥

ಮೂಲಮ್ - 24

ಸ ಜಗಾಮ ವನಂ ವೀರಃ ಪ್ರತಿಜ್ಞಾಮನುಪಾಲಯನ್ ।
ಪಿತುರ್ವಚನನಿರ್ದೇಶಾತ್ ಕೈಕೇಯ್ಯಾಃ ಪ್ರಿಯಕಾರಣಾತ್ ॥

ಅನುವಾದ

ಕೈಕೇಯಿಗೆ ಪ್ರಿಯನ್ನುಂಟುಮಾಡುವ ಸಲುವಾಗಿ, ತಂದೆಯ ಆಜ್ಞಾಪರಿಪಾಲನೆಗಾಗಿ, ಕೃತಪ್ರತಿಜ್ಞನಾದ, ಸಮರ್ಥನಾದ ರಾಮಚಂದ್ರನು ಕಾಡಿಗೆ ತೆರಳಿದನು.॥24॥

ಮೂಲಮ್ - 25½

ತಂ ವ್ರಜಂತಂ ಪ್ರಿಯೋ ಭ್ರಾತಾ ಲಕ್ಷ್ಮಣೋಽನುಜಗಾಮ ಹ ।
ಸ್ನೇಹಾದ್ ವಿನಯಸಂಪನ್ನಃ ಸುಮಿತ್ರಾನಂದವರ್ಧನಃ ॥
ಭ್ರಾತರಂ ದಯಿತೋ ಭ್ರಾತುಃ ಸೌಭ್ರಾತ್ರಮನುದರ್ಶಯಾನ್ ।

ಅನುವಾದ

ರಾಮನಿಗೆ ಅತಿಪ್ರಿಯನೂ, ವಿನಯ ಸಂಪನ್ನನೂ, ಸುಮಿತ್ರಾದೇವಿಗೆ ಆನಂದದಾಯಕನೂ ಆದ ಲಕ್ಷ್ಮಣನು ರಾಮನ ವಿಷಯದಲ್ಲಿ ಶ್ರೇಷ್ಠವಾದ ಸೋದರಭಾವವನ್ನು ವ್ಯಕ್ತಪಡಿಸುತ್ತಾ, ಪಿತೃವಾಕ್ಯ ಪರಿಪಾಲನೆಗಾಗಿ ಅರಣ್ಯಕ್ಕೆ ಹೊರಟ ರಾಮನನ್ನು ಅನುಸರಿಸಿ ನಡೆದನು.॥25½॥

ಮೂಲಮ್ - 26

ರಾಮಸ್ಯ ದಯಿತಾ ಭಾರ್ಯಾ ನಿತ್ಯಂ ಪ್ರಾಣಸಮಾಹಿತಾ ॥

ಮೂಲಮ್ - 27

ಜನಕಸ್ಯ ಕುಲೇ ಜಾತಾ ದೇವಮಾಯೇವ ನಿರ್ಮಿತಾ ।
ಸರ್ವಲಕ್ಷಣಸಂಪನ್ನಾ ನಾರೀಣಾಮುತ್ತಮಾ ವಧೂಃ ॥

ಮೂಲಮ್ - 28

ಸೀತಾಪ್ಯನುಗತಾ ರಾಮಂ ಶಶಿನಂ ರೋಹಿಣೀ ಯಥಾ ।
ಪೌರೈರನುಗತೋ ದೂರಂ ಪಿತ್ರಾ ದಶರಥೇನ ಚ ॥

ಅನುವಾದ

ಶ್ರೀರಾಮನಿಗೆ ಪ್ರಾಣಸಮಾನಳಾದ ಹಾಗೂ ಹಿತಕರಳಾದ, ಜನಕ ಕುಲೋತ್ಪನ್ನಳಾದ, ದೇವಮಾಯೆಯಂತೆ ಅವತರಿಸಿದ, ಲಾವಣ್ಯ ಸಂಪತ್ತುಗಳಿಂದ ಕೂಡಿದ್ದ, ಸರ್ವಶುಭಲಕ್ಷಣಗಳಿಂದ ಯುಕ್ತಳಾಗಿದ್ದ, ಸ್ತ್ರೀಯರಲ್ಲಿ ಶ್ರೇಷ್ಠಳಾದ, ದಶರಥನ ಸೊಸೆಯಾದ ಸೀತೆಯು ಚಂದ್ರನನ್ನು ಅನುಸರಿಸಿ ಹೋಗುವ ರೋಹಿಣಿಯಂತೆ ರಾಮಚಂದ್ರನ ಹಿಂದೆ ಕಾಡಿಗೆ ಹೋದಳು. ಸೀತಾ ಲಕ್ಷ್ಮಣ ಸಹಿತ ಕಾಡಿಗೆ ಹೊರಟ ಶ್ರೀರಾಮನನ್ನು ಅನುಸರಿಸಿ ಹೋಗುವಂತೆ ದಶರಥನು ತನ್ನ ಸಾರಥಿಯನ್ನು ಕಳಿಸಿದನು. ಪಟ್ಟಣಿಗರು ತಮಸಾ ನದಿಯವರಗೆ ರಾಮನನ್ನು ಹಿಂಬಾಲಿಸಿದರು ಹಾಗೂ ಸ್ವಲ್ಪ ದೂರದವರೆಗೆ ದಶರಥನೂ ಅನುಸರಿಸಿ ಹೋದನು.॥26-28॥

ಮೂಲಮ್ - 29

ಶೃಂಗವೇರಪುರೇ ಸೂತಂ ಗಂಗಾಕೂಲೇ ವ್ಯಸರ್ಜಯತ್ ।
ಗುಹಮಾಸಾದ್ಯ ಧರ್ಮಾತ್ಮಾ ನಿಷಾದಾಧಿಪತಿಂ ಪ್ರಿಯಮ್ ॥

ಅನುವಾದ

ಗಂಗಾತೀರದಲ್ಲಿ ಶಂಗವೇರಪುರಕ್ಕೆ ಹೋದ ಬಳಿಕ ಶ್ರೀರಾಮನು ಸೂತನನ್ನು ಅಯೋಧ್ಯೆಗೆ ಕಳಿಸಿದನು. ಧರ್ಮಾತ್ಮನಾದ ರಾಮನು ತನಗೆ ಪ್ರಿಯನಾದ ನಿಷಾದರಾಜ ಗುಹನೊಡನೆ ಸೇರಿದನು.॥29॥

ಮೂಲಮ್ - 30

ಗುಹೇನ ಸಹಿತೋ ರಾಮೋ ಲಕ್ಷ್ಮಣೇನ ಚ ಸೀತಯಾ ।
ತೇ ವನೇನ ವನಂ ಗತ್ವಾ ನದೀಸ್ತೀರ್ತ್ವಾ ಬಹೂದಕಾಃ ॥

ಮೂಲಮ್ - 31½

ಚಿತ್ರಕೂಟಮನುಪ್ರಾಪ್ಯ ಭರದ್ವಾಜಸ್ಯ ಶಾಸನಾತ್ ।
ರಮ್ಯಮಾವಸಥಂ ಕೃತ್ವಾ ರಮಮಾಣಾ ವನೇ ತ್ರಯಃ ॥
ದೇವಗಂಧರ್ವಸಂಕಾಶಾಸ್ತತ್ರ ತೇ ನ್ಯವಸನ್ ಸುಖಮ್ ।

ಅನುವಾದ

ನಿಷಾದರಾಜನಾದ ಗುಹನು ಸಿದ್ಧಪಡಿಸಿದ ದೋಣಿಯ ಮೂಲಕ ಸೀತಾ-ಲಕ್ಷ್ಮಣ ಸಹಿತ ಶ್ರೀರಾಮನು ಗಂಗಾನದಿಯನ್ನು ದಾಟಿ, ಅನಂತರ ಗುಹನನ್ನು ಬೀಳ್ಕೊಟ್ಟು ಅರಣ್ಯದಲ್ಲಿ ಮುಂದೆ ಮುಂದೆ ನಡೆದನು. ಮೂವರೂ ಜಲಸಮೃದ್ಧವಾದ ಅನೇಕ ನದಿಗಳನ್ನು ದಾಟಿ ಭರದ್ವಾಜರ ಆಶ್ರಮವನ್ನು ಸೇರಿದರು. ಭರದ್ವಾಜರ ನಿರ್ದೇಶನದಂತೆ ಚಿತ್ರಕೂಟ ಪರ್ವತಕ್ಕೆ ಹೋದರು. ಅಲ್ಲಿ ಅವರು ದೇವತೆಗಳಂತೆ ಗಂಧರ್ವರಂತೆ ವನದಲ್ಲಿ ಅನೇಕ ಲೀಲೆಗಳನ್ನು ಮಾಡುತ್ತಾ ಒಂದು ರಮಣೀಯ ಪರ್ಣಕುಟಿಯನ್ನು ನಿರ್ಮಿಸಿಕೊಂಡು ಆನಂದದಿಂದ ಇದ್ದರು.॥30-31½॥

ಮೂಲಮ್ - 32½

ಚಿತ್ರಕೂಟಂ ಗತೇರಾಮೇ ಪುತ್ರಶೋಕಾತುರಸ್ತದಾ ॥
ರಾಜಾ ದಶರಥಃ ಸ್ವರ್ಗಂ ಜಗಾಮ ವಿಲಪನ್ ಸುತಮ್ ।

ಅನುವಾದ

ರಾಮನು ಚಿತ್ರಕೂಟಕ್ಕೆ ಹೋದ ಬಳಿಕ ಪ್ರೀತಿಯ ಪುತ್ರನ ಅಗಲಿಕೆಯ ಶೋಕದಿಂದ ಪೀಡಿತನಾದ ದಶರಥರಾಜನು ರಾಮನನ್ನು ಪದೇ ಪದೇ ನೆನೆಯುತ್ತಾ, ವಿಲಪಿಸುತ್ತಾ ಸ್ವರ್ಗವನ್ನೈದಿದನು.॥32½॥

ಮೂಲಮ್ - 33

ಗತೇ ತು ತಸ್ಮಿನ್ ಭರತೋ ವಸಿಷ್ಠಪ್ರಮುಖೈರ್ದ್ವಿಜೈಃ ॥

ಮೂಲಮ್ - 34

ನಿಯುಜ್ಯಮಾನೋ ರಾಜ್ಯಾಯ ನೈಚ್ಛದ್ ರಾಜ್ಯಂ ಮಹಾಬಲಃ ।
ಸ ಜಗಾಮ ವನಂ ವೀರೋ ರಾಮಪಾದ ಪ್ರಸಾದಕಃ ॥

ಅನುವಾದ

ದಶರಥನು ಸ್ವರ್ಗವಾಸಿಯಾದ ಬಳಿಕ ವಸಿಷ್ಠಾದಿ ಪ್ರಮುಖರು ಭರತನನ್ನು ರಾಜ್ಯವಾಳಲು ನಿಯೋಜಿಸಿದರು. ಆದರೆ ಮಹಾ ಬಲಶಾಲಿಯಾದ ವೀರ ಭರತನು ರಾಜ್ಯವಾಳಲು ಬಯಸದೆ ಪೂಜ್ಯ ರಾಮನನ್ನು ಪ್ರಸನ್ನನನ್ನಾಗಿಸಲು ಅವನಿಗೇ ರಾಜ್ಯವನ್ನೊಪ್ಪಿಸಲು ಅರಣ್ಯಕ್ಕೆ ಹೊರಟನು.॥33-34॥

ಮೂಲಮ್ - 35½

ಗತ್ತ್ವಾ ತು ಸಮಹಾತ್ಮಾನಂ ರಾಮಂ ಸತ್ಯಪರಾಕ್ರಮ್ ।
ಅಯಾಚತ್ ಭ್ರಾತರಂ ರಾಮಮಾರ್ಯಭಾವ ಪುರಸ್ಕೃತಃ ॥
ತ್ವಮೇವ ರಾಜಾ ಧರ್ಮಜ್ಞ ಇತಿ ರಾಮಂ ವಚೋಽಬ್ರವೀತ್ ।

ಅನುವಾದ

ಅಲ್ಲಿಗೆ ಹೋದ ಬಳಿಕ ಸದ್ಭಾವನಾಯುಕ್ತ ಭರತನು ಅಣ್ಣನಾದ ಸತ್ಯಪರಾಕ್ರಮಿ ಮಹಾತ್ಮಾ ಶ್ರೀರಾಮನಲ್ಲಿ ಬದ್ಧಾಂಜಲಿಯಾಗಿ ಹೀಗೆ ಹೇಳಿದನು - ಅಣ್ಣಾ! ಧರ್ಮಜ್ಞನಾದ ನೀನೇ ರಾಜನಾಗಬೇಕು.॥35½॥

ಮೂಲಮ್ - 36

ರಾಮೋಽಪಿ ಪರಮೋದಾರಃ ಸುಮುಖಃ ಸುಮಹಾಯಶಾಃ ॥

ಮೂಲಮ್ - 37½

ನ ಚೈಚ್ಛತ್ ಪಿತುರಾದೇಶಾದ್ ರಾಜ್ಯಂ ರಾಮೋ ಮಹಾಬಲಃ ।
ಪಾದುಕೇ ಚಾಸ್ಯ ರಾಜ್ಯಾಯ ನ್ಯಾಸಂ ದತ್ತ್ವಾ ಪುನಃ ಪುನಃ ॥
ನಿವರ್ತಯಾಮಾಸ ತತೋ ಭರತಂ ಭರತಾಗ್ರಜಃ ।

ಅನುವಾದ

ಆದರೆ ಮಹಾನ್ ಯಶಸ್ವೀ, ಪರಮ ಉದಾರಿ, ಪ್ರಸನ್ನವದನ ಮಹಾಬಲಿ ಶ್ರೀರಾಮನು ತಂದೆಯ ಆದೇಶವನ್ನು ಪಾಲಿಸಲಿಕ್ಕಾಗಿ ರಾಜ್ಯವನ್ನು ಬಯಸದೆ, ಆ ಭರತಾಗ್ರಜನು ತನ್ನ ಪಾದುಕೆಗಳನ್ನು ಅವನಿಗೆ ಇತ್ತು, ಈ ಪಾದುಕೆಗಳನ್ನು ನನ್ನ ಪ್ರತಿನಿಧಿ ಎಂದು ಭಾವಿಸಿ ನೀನು ರಾಜ್ಯಭಾರ ಮಾಡು ಎಂದು ಹೇಳಿ, ದುಃಖಿಸುತ್ತಿದ್ದ ಭರತನನ್ನು ಮತ್ತೆ ಮತ್ತೆ ಸಂತೈಸಿ ಕಳಿಸಿಕೊಟ್ಟನು.॥36-37½॥

ಮೂಲಮ್ - 38½

ಸ ಕಾಮಮನವಾಪ್ಯೈವ ರಾಮಪಾದಾವುಪಸ್ಪೃಶನ್ ॥
ನಂದಿಗ್ರಾಮೇಽಕರೋದ್ರಾಜ್ಯಂ ರಾಮಾಗಮನಕಾಂಕ್ಷಯಾ ।

ಅನುವಾದ

ಭರತನ ಇಚ್ಛೆಯು ಪೂರ್ಣವಾಲಿಲ್ಲ, ಆದರೂ ಅವನು ರಾಮನ ಚರಣಗಳನ್ನು ಸ್ಪರ್ಶಿಸಿ, ಅವನ ಅಪ್ಪಣೆಯಂತೆ ರಾಮನ ಆಗಮನವನ್ನು ಪ್ರತೀಕ್ಷೆ ಮಾಡುತ್ತಾ ನಂದಿಗ್ರಾಮದಲ್ಲಿ ಇದ್ದು ರಾಜ್ಯವಾಳಲು ತೊಡಗಿದನು.॥38½॥

ಮೂಲಮ್ - 39

ಗತೇ ತು ಭರತೇ ಶ್ರೀಮಾನ್ ಸತ್ಯಸಂಧೋ ಜಿತೇಂದ್ರಿಯಃ ॥

ಮೂಲಮ್ - 40

ರಾಮಸ್ತು ಪುನರಾಲಕ್ಷ್ಯ ನಾಗರಸ್ಯ ಜನಸ್ಯ ಚ ।
ತತ್ರಾಗಮನಮೇಕಾಗ್ರೋ ದಂಡಕಾನ್ ಪ್ರವಿವೇಶ ಹ ॥

ಅನುವಾದ

ಭರತನು ಮರಳಿ ಹೋದ ಬಳಿಕ ಸತ್ಯಪ್ರತಿಜ್ಞ, ಜಿತೇಂದ್ರಿಯ ಶ್ರೀಮಾನ್ ರಾಮನು ಅಲ್ಲಿಗೆ ನಾಗರಿಕರು ಪುನಃ ಪುನಃ ಬಂದು ಹೋಗುವುದನ್ನು ನೋಡಿ ಏಕಾಗ್ರಭಾವದಿಂದ ದಂಡಕಾರಣ್ಯವನ್ನು ಪ್ರವೇಶಿಸಿದನು.॥39-40॥

ಮೂಲಮ್ - 41½

ಪ್ರವಿಶ್ಯ ತು ಮಹಾರಣ್ಯಂ ರಾಮೋ ರಾಜೀವಲೋಚನಃ ।
ವಿರಾಧಂ ರಾಕ್ಷಸಂ ಹತ್ವಾ ಶರಭಂಗಂ ದದರ್ಶಹ ॥
ಸುತೀಕ್ಷ್ಣಂ ಚಾಪ್ಯಗಸ್ತ್ಯಂ ಚ ಅಗಸ್ತ್ಯಭ್ರಾತರಂ ತಥಾ ।

ಅನುವಾದ

ರಾಜೀವಲೋಚನನಾದ ಶ್ರೀರಾಮನು ಮಹಾರಣ್ಯವನ್ನು ಪ್ರವೇಶಿಸಿ ವಿರಾಧನೆಂಬ ರಾಕ್ಷಸನನ್ನು ಸಂಹರಿಸಿ, ಶರಭಂಗ, ಸುತೀಕ್ಷ್ಣರೆಂಬ ಮಹರ್ಷಿಗಳನ್ನು ಕಂಡು, ಅಗಸ್ತ್ಯರನ್ನು ಮತ್ತು ಅವರ ತಮ್ಮನನ್ನು ದರ್ಶಿಸಿದನು.॥41½॥

ಮೂಲಮ್ - 42½

ಅಗಸ್ತ್ಯವಚನಾಚ್ಚೈವ ಜಗ್ರಾಹೈಂದ್ರಂ ಶರಾಸನಮ್ ॥
ಖಡ್ಗಂ ಚ ಪರಮಪ್ರೀತ ಸ್ತೂಣೀ ಚಾಕ್ಷಯ ಸಾಯಕೌ ।

ಅನುವಾದ

ಮತ್ತೆ ಅಗಸ್ತ್ಯರ ಮಾತಿನಂತೆ ಐಂದ್ರಧನುಸ್ಸನ್ನು, ಖಡ್ಗವನ್ನು, ಅಕ್ಷಯಬಾಣಗಳುಳ್ಳ ಎರಡು ತೂಣೀರಗಳನ್ನು ಪರಮಪ್ರೀತನಾದ ಶ್ರೀರಾಮನು ಸ್ವೀಕರಿಸಿನು.॥42½॥

ಮೂಲಮ್ - 43½

ವಸತಸ್ತಸ್ಯ ರಾಮಸ್ಯ ವನೇ ವನಚರೈಃ ಸಹ ॥
ಋಷಯೋಭ್ಯಾಗಮನ್ ಸರ್ವೇ ವಧಾಯಾಸುರ ರಕ್ಷಸಾಮ್ ।

ಅನುವಾದ

ಒಂದು ದಿನ ವನಚರರೊಡನೆ ವಾಸಮಾಡುತ್ತಿದ್ದ ಅನೇಕ ಋಷಿಗಳು ಶ್ರೀರಾಮನ ಬಳಿಗೆ ಬಂದು-ತಮ್ಮನ್ನು ಪೀಡಿಸುತ್ತಿದ್ದ ಅಸುರ ಹಾಗೂ ರಾಕ್ಷಸರನ್ನು ವಧಿಸಬೇಕೆಂದು ನಿವೇದಿಸಿಕೊಂಡರು.॥43½॥

ಮೂಲಮ್ - 44

ಸ ತೇಷಾಂ ಪ್ರತಿಶುಶ್ರಾವ ರಾಕ್ಷಸಾನಾಂ ತದಾ ವನೇ ॥

ಮೂಲಮ್ - 45

ಪ್ರತಿಜ್ಞಾತಶ್ಚ ರಾಮೇಣ ವಧಃ ಸಂಯತಿ ರಕ್ಷಸಾಮ್ ।
ಋಷೀಣಾಮಗ್ನಿಕಲ್ಪಾನಾಂ ದಂಡಕಾರಣ್ಯ ವಾಸಿನಾಮ್ ॥

ಅನುವಾದ

ರಾಕ್ಷಸರಿಂದ ನಿಬಿಡವಾದ ಆ ವನದಲ್ಲಿ ಶ್ರೀರಾಮನು ದಂಡಕಾರಣ್ಯ ವಾಸಿಗಳಾದ, ಅಗ್ನಿಯಂತೆ ತೇಜಸ್ವಿಗಳಾದ ಆ ಮಹರ್ಷಿಗಳು ಹೇಳಿದ ಮಾತನ್ನು ಕೇಳಿ ಅವರ ಸಮ್ಮುಖದಲ್ಲಿ ರಾಕ್ಷಸರನ್ನು ಯುದ್ಧದಲ್ಲಿ ಸಂಹಾರ ಮಾಡುವುದಾಗಿ ಪ್ರತಿಜ್ಞೆ ಮಾಡಿದನು.॥44-45॥

ಮೂಲಮ್ - 46

ತೇನ ತತ್ರೈವ ವಸತಾ ಜನಸ್ಥಾನ ನಿವಾಸಿನೀ ।
ವಿರೂಪಿತಾ ಶೂರ್ಪಣಖಾ ರಾಕ್ಷಸೀ ಕಾಮರೂಪಿಣೀ ॥

ಅನುವಾದ

ಅಲ್ಲಿರುವಾಗ ಶ್ರೀರಾಮನು-ಜನಸ್ಥಾನ ನಿವಾಸೀ ಕಾಮರೂಪಿಯಾದ ಶೂರ್ಪನಖಾ ಎಂಬ ರಾಕ್ಷಸಿಯನ್ನು ಲಕ್ಷ್ಮಣನಿಂದ ಆಕೆಯ ಮೂಗನ್ನು ಕತ್ತರಿಸುವಂತೆ ಮಾಡಿ ವಿರೂಪಗೊಳಿಸಿನು.॥46॥

ಮೂಲಮ್ - 47½

ತತಃ ಶೂರ್ಪಣಖಾವಾಕ್ಯಾದುದ್ಯುಕ್ತಾನ್ ಸರ್ವರಾಕ್ಷಸಾನ್ ।
ಖರಂ ತ್ರಿಶಿರಸಂ ಚೈವ ದೂಷಣಂ ಚೈವ ರಾಕ್ಷಸಮ್ ॥
ನಿಜಘಾನ ರಣೇ ರಾಮಸ್ತೇಷಾಂ ಚೈವ ಪದಾನುಗಾನ್ ।

ಅನುವಾದ

ಆಗ ಶೂರ್ಪಣಖಿಯ ಮಾತಿನಂತೆ ಖರ, ದೂಷಣ, ತ್ರಿಶಿರ ಎಂಬುವರನ್ನು ಹಾಗೂ ರಾಕ್ಷಸರನ್ನು ರಾಮನು ವಧಿಸಿದನು.॥47½॥

ಮೂಲಮ್ - 48½

ವನೇ ತಸ್ಮಿನ್ನಿವಸತಾ ಜನಸ್ಥಾನನಿವಾಸಿನಾಮ್ ॥
ರಕ್ಷಸಾಂ ನಿಹತಾನ್ಯಾಸನ್ ಸಹಸ್ರಾಣಿ ಚತುರ್ದಶ ।

ಅನುವಾದ

ಆ ವನದಲ್ಲಿ ವಾಸಿಸುತ್ತಾ ಶ್ರೀರಾಮನು ಜನಸ್ಥಾನ ನಿವಾಸಿಗಳಾದ ಹದಿನಾಲ್ಕು ಸಾವಿರ ರಾಕ್ಷಸರನ್ನು ವಧಿಸಿದನು.॥48½॥

ಮೂಲಮ್ - 49½

ತತೋ ಜ್ಞಾತಿವಧಂ ಶ್ರುತ್ವಾ ರಾವಣಃಕ್ರೋಧಮೂರ್ಛಿತಃ ॥
ಸಹಾಯಂ ವರಯಾಮಾಸ ಮಾರೀಚಂ ನಾಮ ರಾಕ್ಷಸಮ್ ।

ಅನುವಾದ

ತನ್ನ ಜ್ಞಾತಿಯಾದ ಖರಾದಿಗಳ ವಧೆಯನ್ನು ಶ್ರೀರಾಮನಿಂದ ಆಯಿತು ಎಂದು ತಿಳಿದ ರಾಕ್ಷಸನಾದ ರಾವಣನು ಕ್ರೋಧದಿಂದ ಉರಿದೆದ್ದನು. ರಾಮನ ಪ್ರತೀಕಾರ ಮಾಡಲು ಅವನು ಮಾರೀಚನೆಂಬ ರಾಕ್ಷಸನ ಸಹಾಯವನ್ನು ಕೋರಿದನು.॥49½॥

ಮೂಲಮ್ - 50

ವಾರ್ಯಮಾಣಃ ಸುಬಹುಶೋ ಮಾರೀಚೇನ ಸ ರಾವಣಃ ॥

ಮೂಲಮ್ - 51½

ನ ವಿರೋಧೋ ಬಲವತಾ ಕ್ಷಮೋ ರಾವಣ ತೇನ ತೇ ।
ಅನಾದೃತ್ಯ ತು ತದ್ವಾಕ್ಯಂ ರಾವಣಃ ಕಾಲಚೋದಿತಃ ॥
ಜಗಾಮ ಸಹಮಾರೀಚಸ್ತಸ್ಯಾಶ್ರಮಪದಂ ತದಾ ।

ಅನುವಾದ

ಮಾರೀಚನು ‘ರಾವಣಾ! ಆ ಬಲಿಷ್ಠ ರಾಮನೊಂದಿಗೆ ನಿನ್ನ ವಿರೋಧ ಸರಿಯಲ್ಲ’ ಎಂದು ಅನೇಕ ಬಾರಿ ತಿಳಿಸಿದರೂ ಕಾಲದ ಪ್ರೇರಣೆಯಿಂದ ರಾವಣನು ಮಾರೀಚನ ಮಾತನ್ನು ತಿರಸ್ಕರಿಸಿ, ಅವನೊಂದಿಗೆ ರಾಮನ ಆಶ್ರಮಕ್ಕೆ ಹೋದನು.॥50-51½॥

ಮೂಲಮ್ - 52½

ತೇನ ಮಾಯಾವಿನಾ ದೂರಮಪವಾಹ್ಯ ನೃಪಾತ್ಮಜೌ ॥
ಜಹಾರ ಭಾರ್ಯಾಂ ರಾಮಸ್ಯ ಗೃಧ್ರಂ ಹತ್ವಾ ಜಟಾಯುಷಮ್ ।

ಅನುವಾದ

ರಾವಣನು ಮಾಯಾವೀ ಮಾರೀಚನಿಂದ ರಾಮ-ಲಕ್ಷ್ಮಣರು ಆಶ್ರಮದಿಂದ ದೂರಹೋಗುವಂತೆ ಮಾಡಿ, ಸ್ವತಃ ರಾಮನ ಪತ್ನಿಯಾದ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ (ದಾರಿಯಲ್ಲಿ ಅಡ್ಡಗಟ್ಟಿದ) ಜಟಾಯು ಎಂಬ ಗೃಧ್ರನನ್ನು ವಧಿಸಿದನು.॥52½॥

(ಶ್ಲೋಕ 53½)

ಮೂಲಮ್

ಗೃಧ್ರಂ ಚ ನಿಹತಂ ದೃಷ್ಟ್ವಾ ಹೃತಾಂ ಶ್ರುತ್ವಾ ಚ ಮೈಥಿಲೀಮ್ ॥
ರಾಘವಃ ಶೋಕಸಂತಪ್ತೋವಿಲಲಾಪಾಕುಲೇಂದ್ರಿಯಃ ।

ಅನುವಾದ

ಆಶ್ರಮದಲ್ಲಿ ಸೀತೆಯನ್ನು ಕಾಣದೆ ರಾಮಲಕ್ಷ್ಮಣರು ಆಕೆಯನ್ನು ಹುಡುಕುತ್ತಾ ಬರುವಾಗ ಮರಣಾಸನ್ನ ಜಟಾಯುವನ್ನು ನೋಡಿದರು. ಸೀತಾಪಹರಣದ ಸುದ್ದಿಯನ್ನು ಅವನು ತಿಳಿಸಿ ಪ್ರಾಣಬಿಟ್ಟನು. ರಾಮಚಂದ್ರನು ಶೋಕದಿಂದ ಪೀಡಿತನಾಗಿ ವಿಲಾಪಿಸತೊಡಗಿದನು. ಆಗ ಅವನ ಎಲ್ಲ ಇಂದ್ರಿಯಗಳು ವ್ಯಾಕುಲಗೊಂಡಿದ್ದವು.॥53½॥

ಮೂಲಮ್ - 54

ತತಸ್ತೇನೈವ ಶೋಕೇನ ಗೃಧ್ರಂ ದಗ್ಥ್ವಾ ಜಟಾಯುಷಮ್ ॥

ಮೂಲಮ್ - 55½

ಮಾರ್ಗಮಾಣೋ ವನೇ ಸೀತಾಂ ರಾಕ್ಷಸಂ ಸಂದದರ್ಶ ಹ ।
ಕಬಂಧಂ ನಾಮ ರೂಪೇಣ ವಿಕೃತಂ ಘೋರದರ್ಶನಮ್ ॥
ತಂ ನಿಹತ್ಯ ಮಹಾಬಾಹುರ್ದದಾಹ ಸ್ವರ್ಗತಶ್ಚ ಸಃ ।

ಅನುವಾದ

ಮತ್ತೆ ಅದೇ ಶೋಕದಲ್ಲಿರುವ ರಾಮನು ಜಟಾಯುವಿನ ಅಗ್ನಿಸಂಸ್ಕಾರ ಮಾಡಿದನು. ವನದಲ್ಲಿ ಸೀತೆಯನ್ನು ಹುಡುಕುತ್ತಾ ವಿಕೃತ ಶರೀರವುಳ್ಳ ಭಯಂಕರವಾಗಿ ಕಾಣುವ ಕಬಂಧನೆಂಬ ರಾಕ್ಷಸನನ್ನು ನೋಡಿದನು. ಮಹಾಬಾಹು ರಾಮನು ಅವನನ್ನು ಕೊಂದು, ಸುಟ್ಟು ಹಾಕಲು, ಅವನು ಉದ್ಧಾರವಾಗಿ ಸ್ವರ್ಗಕ್ಕೆ ತೆರಳಿದನು.॥54-55½॥

(ಶ್ಲೋಕ 56½)

ಮೂಲಮ್

ಸ ಚಾಸ್ಯ ಕಥಯಾಮಾಸ ಶಬರೀಂ ಧರ್ಮಚಾರಿಣೀಮ್ ॥
ಶ್ರಮಣಾಂ ಧರ್ಮನಿಪುಣಾಮಭಿಗಚ್ಛೇತಿ ರಾಘವ ।

ಅನುವಾದ

ಹೋಗುವಾಗ ಅವನು ರಾಮನಲ್ಲಿ ಧರ್ಮಚಾರಿಣೀ ಶಬರಿಯ ಠಾವನ್ನು ತಿಳಿಸಿ, ರಾಮಾ! ನೀನು ಧರ್ಮ ಪರಾಯಣಾ ಸಂನ್ಯಾಸೀ ಶಬರಿಯ ಆಶ್ರಮಕ್ಕೆ ಹೋಗು ಎಂದು ಹೇಳಿದನು.॥56½॥

(ಶ್ಲೋಕ 57½)

ಮೂಲಮ್

ಸೋಽಭ್ಯಗಚ್ಛನ್ಮಹಾತೇಜಾಃ ಶಬರೀಂ ಶತ್ರುಸೂದನಃ ॥
ಶಬರ್ಯಾ ಪೂಜಿತಃ ಸಮ್ಯಗ್ ರಾಮೋ ದಶರಥಾತ್ಮಜಃ ।

ಅನುವಾದ

ಶತ್ರುಹಂತಾ ಮಹಾ ತೇಜಸ್ವೀ ದಶರಥಕುಮಾರ ರಾಮನು ಶಬರಿಯ ಬಳಿಗೆ ಹೋದನು. ಆಕೆಯು ಅವನನ್ನು ಭಕ್ತಿಭಾವದಿಂದ ಚೆನ್ನಾಗಿ ಪೂಜಿಸಿದಳು.॥57½॥

(ಶ್ಲೋಕ 58½)

ಮೂಲಮ್

ಪಂಪಾತೀರೇ ಹನುಮತಾ ಸಂಗತೋ ವಾನರೇಣ ಹ ॥
ಹನುಮದ್ವಚನಾಚ್ಚೈವ ಸುಗ್ರೀವೇಣ ಸಮಾಗತಃ ।

ಅನುವಾದ

ಮತ್ತೆ ರಾಮ-ಲಕ್ಷ್ಮಣರಿಗೆ ಪಂಪಾಸರೋವರದ ತೀರದಲ್ಲಿ ವಾನರ ಶ್ರೇಷ್ಠ ಹನುಮಂತನ ಸಮಾಗಮವಾಯಿತು. ಹನುಮಂತನ ಮಾತಿನಂತೆ ಸುಗ್ರೀವನೊಂದಿಗೆ ಭೇಟಿಯಾದರು.॥58½॥

(ಶ್ಲೋಕ 59½)

ಮೂಲಮ್

ಸುಗ್ರೀವಾಯ ಚ ತತ್ಸರ್ವಂ ಶಂಸದ್ರಾಮೋ ಮಹಾಬಲಃ ॥
ಆದೀತಸ್ತದ್ ಯಥಾವೃತ್ತಂ ಸೀತಾಯಾಶ್ಚ ವಿಶೇಷತಃ ।

ಅನುವಾದ

ಮಹಾಬಲಶಾಲಿಯಾದ ಶ್ರೀರಾಮನು ಸುಗ್ರೀವನಿಗೆ ಮೊದಲಿನಿಂದ ನಡೆದ ವೃತ್ತಾಂತವನ್ನು ತಿಳಿಯಪಡಿಸಿ, ಸೀತೆಯ ಅಪಹರಣದ ವಿಷಯವನ್ನು ವಿಶೇಷವಾಗಿ ವಿವರಿಸಿ ಹೇಳಿದನು.॥59½॥

(ಶ್ಲೋಕ 60½)

ಮೂಲಮ್

ಸುಗ್ರೀವಶ್ಚಾಪಿ ತತ್ಸರ್ವಂ ಶ್ರುತ್ವಾ ರಾಮಸ್ಯ ವಾನರಃ ॥
ಚಕಾರ ಸಖ್ಯಂ ರಾಮೇಣ ಪ್ರತಿಶ್ಚೈವಾಗ್ನಿಸಾಕ್ಷಿಕಮ್ ।

ಅನುವಾದ

ವಾನರ ಸುಗ್ರೀವನು ರಾಮನ ಎಲ್ಲ ಮಾತುಗಳನ್ನು ಕೇಳಿ, ಅವನೊಂದಿಗೆ ಪ್ರೇಮಪೂರ್ವಕ ಅಗ್ನಿ ಸಾಕ್ಷಿಯಾಗಿ ಸಖ್ಯ ಮಾಡಿಕೊಂಡನು.॥60½॥

(ಶ್ಲೋಕ 61½)

ಮೂಲಮ್

ತತೋ ವಾನರರಾಜೇನ ವೈರಾನುಕಥನಂ ಪ್ರತಿ ॥
ರಾಮಾಯಾವೇದಿತಂ ಸರ್ವಂ ಪ್ರಣಯಾದ್ ದುಃಖಿತೇನ ಚ ।

ಅನುವಾದ

ಅನಂತರ ವಾನರರಾಜ ಸುಗ್ರೀವನು ಸ್ನೇಹವಶನಾಗಿ ಅಣ್ಣನಾದ ವಾಲಿಯೊಂದಿಗೆ ತನಗೆ ಉಂಟಾದ ವೈರದ ಎಲ್ಲ ಮಾತುಗಳನ್ನು ದುಃಖಿತನಾಗಿ ರಾಮನಲ್ಲಿ ತಿಳಿಸಿದನು.॥61½॥

ಮೂಲಮ್ - 62

ಪ್ರತಿಜ್ಞಾತಂ ಚ ರಾಮೇಣ ತದಾ ವಾಲಿವಧಂ ಪ್ರತಿ ॥

ಮೂಲಮ್ - 63

ವಾಲಿನಶ್ಚ ಬಲಂ ತತ್ರ ಕಥಯಾಮಾಸ ವಾನರಃ ।
ಸುಗ್ರೀವಃ ಶಂಕಿತಶ್ಚಾಸೀ ನ್ನಿತ್ಯಂ ವೀರ್ಯೇಣ ರಾಘವೇ ॥

ಅನುವಾದ

ಒಡನೆಯೇ ರಾಮನು ವಾಲಿಯನ್ನು ವಧಿಸುವುದಾಗಿ ಪ್ರತಿಜ್ಞೆ ಮಾಡಿದನು. ಆಗ ಸುಗ್ರೀವನು ವಾಲಿಯ ಬಲವನ್ನು ವರ್ಣಿಸಿದನು; ಏಕೆಂದರೆ ಸುಗ್ರೀವನಿಗೆ ರಾಮನ ಬಲದ ಕುರಿತು ಸಂಶಯವಿತ್ತು.॥62-63॥

(ಶ್ಲೋಕ 64)

ಮೂಲಮ್

ರಾಘವಪ್ರತ್ಯಯಾರ್ಥಂ ತು ದುಂದುಭೇಃ ಕಾಯಮುತ್ತಮಮ್ ।
ದರ್ಶಯಾಮಾಸ ಸುಗ್ರೀವೋ ಮಹಾಪರ್ವತ ಸನ್ನಿಭಮ್ ॥

ಅನುವಾದ

ರಾಮನಿಗೆ ಅರಿವು ಮೂಡಿಸಲು ಅವನು ದುಂದುಭಿ ದೈತ್ಯನ ಮಹಾ ಪರ್ವತದಂತೆ ಇರುವ ವಿಶಾಲ ಶರೀರವನ್ನು ತೋರಿಸಿದನು.॥64॥

(ಶ್ಲೋಕ 65)

ಮೂಲಮ್

ಉತ್ಸ್ಮಯಿತ್ವಾ ಮಹಾಬಾಹುಃ ಪ್ರೇಕ್ಷ್ಯಚಾಸ್ಥಿ ಮಹಾಬಲಃ ।
ಪಾದಾಂಗುಷ್ಠೇನ ಚಿಕ್ಷೇಪ ಸಂಪೂರ್ಣಂ ದಶಯೋಜನಮ್ ॥

ಅನುವಾದ

ಮಹಾಬಲಶಾಲಿಯಾದ ಮಹಾಬಾಹು ಶ್ರೀರಾಮನು ಸ್ವಲ್ಪ ಮುಗುಳ್ನಕ್ಕು ಆ ಅಸ್ಥಿಸಮೂಹವನ್ನು ನೋಡಿ ಕಾಲಿನ ಹೆಬ್ಬಿಟ್ಟಿನಿಂದ ಅದನ್ನು ಹತ್ತು ಯೋಜನ ದೂರಕ್ಕೆ ಹಾರಿಸಿಬಿಟ್ಟನು.॥65॥

(ಶ್ಲೋಕ 66)

ಮೂಲಮ್

ಬಿಭೇದ ಚ ಪುನಸ್ತಾಲಾನ್ ಸಪ್ತೈಕೇನ ಮಹೇಷುಣಾ ।
ಗಿರಿಂ ರಸಾತಲಂ ಚೈವಜನಯನ್ ಪ್ರತ್ಯಯಂ ತದಾ ॥

ಅನುವಾದ

ಸುಗ್ರೀವನ ಮನೋಗತವಾಗಿದ್ದ ಸಂಶಯವನ್ನು ದೂರಗೊಳಿಸಲು ಶ್ರೀರಾಮನು ಬಿಟ್ಟ ಒಂದೇ ಮಹಾ ಬಾಣವು, ಏಳು ಸಾಲವೃಕ್ಷಗಳನ್ನು ಪರ್ವತಗಳನ್ನು ಏಕಕಾಲದಲ್ಲಿ ಭೇದಿಸಿಕೊಂಡು ರಸಾತಲವನ್ನು ಸೇರಿತು.॥66॥

(ಶ್ಲೋಕ 67)

ಮೂಲಮ್

ತತಃ ಪ್ರೀತಮನಾಸ್ತೇನ ವಿಶ್ವಸ್ತಃ ಸ ಮಹಾಕಪಿಃ ।
ಕಿಷ್ಕಿಂಧಾಂ ರಾಮಸಹಿತೋ ಜಗಾಮ ಚಗುಹಾಂ ತದಾ ॥

ಅನುವಾದ

ಅನಂತರ ರಾಮನ ಈ ಕಾರ್ಯದಿಂದ, ಮಹಾಕಪಿ ಸುಗ್ರೀವನ ಮನಸ್ಸಿನಲ್ಲಿ ಸಂತಸಗೊಂಡು, ರಾಮನ ಮೇಲೆ ವಿಶ್ವಾಸ ಉಂಟಾಗಿ ಮತ್ತೆ ಅವನೊಂದಿಗೆ ಕಿಷ್ಕಿಂಧೆಯ ಗುಹೆಗೆ ಹೋದರು.॥67॥

ಮೂಲಮ್ - 68

ತತೋಽಗರ್ಜದ್ಧರಿವರಃ ಸುಗ್ರೀವೋ ಹೇಮಪಿಂಗಲಃ ।
ತೇನ ನಾದೇನ ಮಹತಾ ನಿರ್ಜಗಾಮ ಹರಿಶ್ಚರಃ ॥

ಮೂಲಮ್ - 69

ಅನುಮಾನ್ಯ ತದಾ ತಾರಾಂ ಸುಗ್ರೀವೇಣ ಸಮಾಗತಃ ।
ನಿಜಘಾನ ಚ ತತ್ರೈನಂ ಶರೇಣೈಕೇನ ರಾಘವಃ ॥

ಅನುವಾದ

ಸುವರ್ಣದಂತೆ ಪಿಂಗಲವರ್ಣದಿಂದಿದ್ದ ಕಪಿಶ್ರೇಷ್ಠ ಸುಗ್ರೀವನು ಕಿಷ್ಕಿಂಧೆಯ ಮಹಾದ್ವಾರದಲ್ಲಿ ನಿಂತು ಸಿಂಹನಾದ ಮಾಡಿದನು. ಆ ಗರ್ಜನೆಯನ್ನು ಕೇಳಿ ವಾನರರಾಜ ವಾಲಿಯು ತನ್ನ ಪತ್ನೀ ತಾರೆಯನ್ನು ಸಂತೈಸಿ, ತತ್ಕ್ಷಣ ಅರಮನೆಯಿಂದ ಹೊರಟು ಬಂದು ಸುಗ್ರೀವನೊಂದಿಗೆ ಯುದ್ಧಕ್ಕೆ ತೊಡಗಿದನು. ಆಗ ರಾಮನು ಒಂದೇ ಬಾಣದಿಂದ ವಾಲಿಯನ್ನು ಕೊಂದನು.॥68-69॥

ಮೂಲಮ್ - 70

ತತಃ ಸುಗ್ರೀವವಚನಾದ್ಧತ್ವಾ ವಾಲಿನಮಾಹವೇ ।
ಸುಗ್ರೀವಮೇವ ತದ್ರಾಜ್ಯೇ ರಾಘವಃ ಪ್ರತ್ಯಪಾದಯತ್ ॥

ಅನುವಾದ

ಸುಗ್ರೀವನು ಹೇಳಿದಂತೆ ಆ ಸಂಗ್ರಾಮದಲ್ಲಿ ವಾಲಿಯನ್ನು ಸಂಹರಿಸಿ, ರಾಮನು ಅವನ ರಾಜ್ಯದಲ್ಲಿ ಸುಗ್ರೀವನಿಗೆ ಪಟ್ಟಾಭಿಷೇಕ ಮಾಡಿದನು.॥70॥

ಮೂಲಮ್ - 71

ಸ ಚ ಸರ್ವಾನ್ ಸಮಾನೀಯ ವಾನರಾನ್ ವಾನರರ್ಷಭಃ ।
ದಿಶಃ ಪ್ರಸ್ಥಾಪಯಾಮಾಸ ದಿದೃಕ್ಷುರ್ಜನಕಾತ್ಮಜಾಮ್ ॥

ಅನುವಾದ

ಆಗ ಆ ವಾನರ ರಾಜನು ರಾಮನಿಗೆ ಪ್ರತ್ಯುಪಕಾರ ಮಾಡಲು ಎಲ್ಲ ವಾನರರನ್ನು ಕರೆಸಿ ಜಾನಕಿಯನ್ನು ಹುಡುಕಲು ಎಲ್ಲ ದಿಕ್ಕುಗಳಿಗೆ ಕಳಿಸಿಕೊಟ್ಟನು.॥71॥

ಮೂಲಮ್ - 72

ತತೋ ಗೃಧ್ರಸ್ಯ ವಚನಾತ್ ಸಂಪಾತೇರ್ಹನುಮಾನ್ ಬಲೀ ।
ಶತಯೋಜನ ವಿಸ್ತೀರ್ಣಂ ಪುಪ್ಲುವೇ ಲವಣಾರ್ಣವಮ್ ॥

ಅನುವಾದ

ಅನಂತರ ಗೃಧ್ರನಾದ ಸಂಪಾತಿಯ ಮಾತಿನಂತೆ ಬಲವಂತನಾದ ಹನುಮಂತನು ನೂರು ಯೋಜನ ವಿಸ್ತಾರವುಳ್ಳ ಕ್ಷಾರ ಸಮುದ್ರವನ್ನು ಹಾರಿ ದಾಟಿಹೋದನು.॥72॥

ಮೂಲಮ್ - 73

ತತ್ರ ಲಂಕಾಂ ಸಮಾಸಾದ್ಯ ಪುರೀಂ ರಾವಣಪಾಲಿತಾಮ್ ।
ದದರ್ಶ ಸೀತಾಂ ಧ್ಯಾಯಂತಿಮಶೋಕವನಿಕಾಂ ಗತಾಮ್ ॥

ಅನುವಾದ

ಅಲ್ಲಿ ರಾವಣನಿಂದ ಪಾಲಿತವಾದ ಲಂಕಾಪುರಿಯಲ್ಲಿ ಪ್ರವೇಶಿಸಿ ಅವನು ಅಶೋಕವನದಲ್ಲಿ ಚಿಂತಾಗ್ರಸ್ತಳಾದ ಸೀತೆಯನ್ನು ನೋಡಿದನು.॥73॥

ಮೂಲಮ್ - 74

ನಿವೇದಯಿತ್ವಾಭಿಜ್ಞಾನಂ ಪ್ರವೃತ್ತಿಂ ವಿನಿವೇದ್ಯ ಚ ।
ಸಮಾಶ್ವಾಸ್ಯ ಚ ವೈದೇಹೀಂ ಮರ್ದಯಾಮಾಸ ತೋರಣಮ್ ॥

ಅನುವಾದ

ಆಗ ಆ ವಿದೇಹನಂದಿನಿಗೆ ತನ್ನ ಪರಿಚಯವನ್ನು ಹೇಳಿ ಕಳಿಸಿದ ರಾಮನ ಸಂದೇಶವನ್ನು ತಿಳಿಸಿದನು ಹಾಗೂ ಸಾಂತ್ವನ ಮಾಡಿ ಅವನು ಅಶೋಕ ವನದ ಹೆಬ್ಬಾಗಿಲನ್ನು ಮುರಿದುಹಾಕಿದನು.॥74॥

ಮೂಲಮ್ - 75

ಪಂಚ ಸೇನಾಗ್ರಗಾನ್ ಹತ್ವಾ ಸಪ್ತ ಮಂತ್ರಿ ಸುತಾನಪಿ ।
ಶೂರಮಕ್ಷಂ ಚನಿಷ್ಪಿಷ್ಯ ಗ್ರಹಣಂ ಸಮುಪಾಗಮತ್ ॥

ಅನುವಾದ

ಮತ್ತೆ ಐದು ಸೇನಾಪತಿಗಳನ್ನು, ಏಳು ಮಂತ್ರಿಕುಮಾರರನ್ನು ಕೊಂದು, ರಾವಣ ಪುತ್ರ ಅಕ್ಷಕುಮಾರನನ್ನೂ ಮುಗಿಸಿ, ಇಂದ್ರಜೀತುವು ಪ್ರಯೋಗಿಸಿದ ಬ್ರಹ್ಮಾಸ್ತ್ರಕ್ಕೆ ತಾನಾಗಿಯೇ ಬಂಧಿತನಾದನು.॥75॥

ಮೂಲಮ್ - 76

ಅಸ್ತ್ರೇಣೋಮ್ಮಕ್ತಮಾತ್ಮಾನಂ ಜ್ಞಾತ್ವಾ ಪೈತಾಮಹಾದ್ ವರಾತ್ ।
ಮರ್ಷಯನ್ ರಾಕ್ಷಸಾನ್ ವೀರೋ ಯಂತ್ರಿಣಸ್ತಾನ್ಯದೃಚ್ಛಯಾ ॥

ಅನುವಾದ

ಬ್ರಹ್ಮನ ವರದಿಂದ ತಾನು ಬ್ರಹ್ಮಾಸ್ತ್ರದಿಂದ ಬಿಡುಗಡೆ ಹೊಂದಿದ್ದರೂ ವೀರ ಹನುಮಂತನು ತನ್ನನ್ನು ಬಂಧಿಸಿದ ಆ ರಾಕ್ಷಸರ ಅಪರಾಧವನ್ನು ಇಚ್ಛಾನುಸಾರವಾಗಿ ಸಹಿಸಿದನು.॥76॥

ಮೂಲಮ್ - 77

ತತೋದಗ್ಧ್ವಾ ಪುರೀಂ ಲಂಕಾಮೃತೇ ಸೀತಾಂ ಚಮೈಥಿಲೀಮ್ ।
ರಾಮಾಯ ಪ್ರಿಯಮಾಖ್ಯಾತುಂ ಪುನರಾಯಾನ್ಮಹಾಕಪಿಃ ॥

ಅನುವಾದ

ಅನಂತರ ಮಿಥಿಲೇಶ ಕುಮಾರಿ ಸೀತೆಯ ಸ್ಥಾನವನ್ನು ಬಿಟ್ಟು ಉಳಿದ ಇಡೀ ಲಂಕೆಯನ್ನು ಸುಟ್ಟು ಆ ಮಹಾಕಪಿ ಹನುಮಂತನು ರಾಮನಿಗೆ ಪ್ರಿಯ ಸಂದೇಶವನ್ನು ತಿಳಿಸಲು ಲಂಕೆಯಿಂದ ಮರಳಿ ಬಂದನು.॥77॥

ಮೂಲಮ್ - 78

ಸೋಽಭಿಗಮ್ಯ ಮಹಾತ್ಮಾನಂ ಕೃತ್ವಾ ರಾಮಂ ಪ್ರದಕ್ಷಿಣಮ್ ।
ನ್ಯವೇದಯದಮೇಯಾತ್ಮಾ ದೃಷ್ಟಾ ಸೀತೇತಿ ತತ್ತ್ವತಃ ॥

ಅನುವಾದ

ಮಹಾಬುದ್ಧಿಶಾಲಿ ಹನುಮಂತನು ಮಹಾತ್ಮಾ ರಾಮನಿದ್ದಲ್ಲಿಗೆ ಬಂದು ಅವನಿಗೆ ಪ್ರದಕ್ಷಿಣೆ ಹಾಕಿ ‘ನಾನು ಸೀತೆಯ ದರ್ಶನ ಮಾಡಿದೆ’ ಎಂದು ನಿವೇದಿಸಿಕೊಂಡನು.॥78॥

ಮೂಲಮ್ - 79

ತತಃ ಸುಗ್ರೀವಸಹಿತೋ ಗತ್ವಾ ತೀರಂ ಮಹೋದಧೇಃ ।
ಸಮುದ್ರಂ ಕ್ಷೋಭಯಾಮಾಸ ಶರೈರಾದಿತ್ಯಸಂನಿಭೈಃ ॥

ಅನುವಾದ

ಇದಾದ ಬಳಿಕ ಸುಗ್ರೀವನೊಂದಿಗೆ ಭಗವಾನ್ ರಾಮನು ಮಹಾಸಾಗರ ತೀರಕ್ಕೆ ಬಂದು, ಸೂರ್ಯಸದೃಶ ತೇಜಸ್ವೀ ಬಾಣದಿಂದ ಸಮುದ್ರವನ್ನು ಕ್ಷುಬ್ಧಗೊಳಿಸಿದನು.॥79॥

ಮೂಲಮ್ - 80

ದರ್ಶಯಾಮಾಸ ಚಾತ್ಮಾನಂ ಸಮುದ್ರಃ ಸರಿತಾಂ ಪತಿಃ ।
ಸಮುದ್ರವಚನಾಚ್ಚೈವ ನಲಂ ಸೇತುಮಕಾರಯತ್ ॥

ಅನುವಾದ

ಆಗ ನದಿಗಳ ಪತಿಯಾದ ಸಮುದ್ರವು ಸಾಕಾರನಾಗಿ ಪ್ರಕಟಗೊಂಡು ರಾಮನನ್ನು ಪೂಜಿಸಿದನು. ಮತ್ತೆ ಸಮುದ್ರವು ಹೇಳಿದಂತೆ ರಾಮನು ನಳನಿಂದ ಸಮುದ್ರಕ್ಕೆ ಸೇತುವೆಯನ್ನು ನಿರ್ಮಾಣ ಮಾಡಿಸಿದನು.॥80॥

ಮೂಲಮ್ - 81

ತೇನ ಗತ್ವಾ ಪುರೀಂ ಲಂಕಾಂ ಹತ್ವಾ ರಾವಣಮಾಹವೇ ।
ರಾಮಃ ಸೀತಾಮನುಪ್ರಾಪ್ಯ ಪರಾಂ ವ್ರೀಡಾಮುಪಾಗಮತ್ ॥

ಅನುವಾದ

ಅದೇ ಸೇತುವೆಯ ಮೂಲಕ ಲಕ್ಷ್ಮಣ ಮತ್ತು ವಾನರರೊಂದಿಗೆ ಲಂಕೆಗೆ ಹೋಗಿ ರಾಮನು ಯುದ್ಧದಲ್ಲಿ ರಾವಣನನ್ನು ಕೊಂದು ಸೀತೆಯನ್ನು ಪಡೆದನು.॥81॥

ಮೂಲಮ್ - 82

ತಾಮುವಾಚ ತತೋ ರಾಮಃ ಪುರುಷಂ ಜನಸಂಸದಿ ।
ಅಮೃಷ್ಯಮಾಣಾ ಸಾ ಸೀತಾ ವಿವೇಶ ಜ್ವಲನಂ ಸತೀ ॥

ಅನುವಾದ

ಆಗ ತುಂಬಿದ ಸಭೆಯಲ್ಲಿ ಸೀತೆಯ ಕುರಿತು ಮರ್ಮಭೇದಿ ಮಾತನ್ನು ಕೇಳಿ, ಅದನ್ನು ಸಹಿಸಲಾರದೆ ಸತೀ ಸಾಧ್ವೀ ಸೀತೆಯು ಅಗ್ನಿ ಪರೀಕ್ಷೆಗೆ ಗುರಿಯಾದಳು.॥82॥

ಮೂಲಮ್ - 83½

ತತೋಽಗ್ನಿವಚನಾತ್ ಸೀತಾಂ ಜ್ಞಾತ್ವಾವಿಗತಕಲ್ಮಷಾಮ್ ।
ಕರ್ಮಣಾ ತೇನ ಮಹತಾ ತ್ರೈಲೋಕ್ಯಂಸಚರಾಚರಮ್ ॥
ಸ ದೇವರ್ಷಿಗಣಂ ತುಷ್ಟಂ ರಾಘವಸ್ಯ ಮಹಾತ್ಮನಃ ।

ಅನುವಾದ

ಅನಂತರ ಸೀತೆಯು ನಿಷ್ಕಳಂಕಿತಳು ಎಂದು ಅಗ್ನಿಯು ಹೇಳಿದಾಗ ಎಲ್ಲರೂ ಒಪ್ಪಿಕೊಂಡರು. ಮಹಾತ್ಮ ರಾಮಚಂದ್ರನ ಈ ಮಹತ್ಕಾರ್ಯದಿಂದ ದೇವತೆಗಳು ಮತ್ತು ಋಷಿಗಳ ಸಹಿತ ಚರಾಚರ ಮೂರು ಲೋಕಗಳು ಸಂತಸಗೊಂಡವು.॥83½॥

ಮೂಲಮ್ - 84

ಬಭೌ ರಾಮಃ ಸಂಪ್ರಹೃಷ್ಟಃ ಪೂಜಿತಃ ಸರ್ವದೈವತೈಃ ॥

ಮೂಲಮ್ - 85

ಅಭಿಷಿಚ್ಯ ಚ ಲಂಕಾಯಾಂ ರಾಕ್ಷಸೇಂದ್ರಂ ವಿಭೀಷಣಮ್ ।
ಕೃತಕೃತ್ಯಸ್ತದಾ ರಾಮೋ ವಿಜ್ವರಃ ಪ್ರಮುಮೋದ ಹ ॥

ಅನುವಾದ

ಮತ್ತೆ ಎಲ್ಲ ದೇವತೆಗಳಿಂದ ಪೂಜಿತನಾದ ರಾಮನು ಬಹಳ ಪ್ರಸನ್ನನಾಗಿ ರಾಕ್ಷಸರಾಜ ವಿಭೀಷಣನಿಗೆ ಲಂಕೆಯ ಪಟ್ಟಕಟ್ಟಿ ಕೃತಾರ್ಥನಾದನು. ಆಗ ನಿಶ್ಚಿಂತನಾದ ಕಾರಣ ಅವನ ಆನಂದಕ್ಕೆ ಎಲ್ಲೆಯೇ ಇರಲಿಲ್ಲ.॥84-85॥

ಮೂಲಮ್ - 86

ದೇವತಾಭ್ಯೋ ವರಂ ಪ್ರಾಪ್ಯ ಸಮುತ್ಥಾಪ್ಯ ಚ ವಾನರಾನ್ ।
ಅಯೋಧ್ಯಾಂ ಪ್ರಸ್ಥಿತೋ ರಾಮಃ ಪುಷ್ಪಕೇಣ ಸುಹೃದ್ ವೃತಃ ॥

ಅನುವಾದ

ಇದೆಲ್ಲ ಆದ ಬಳಿಕ ರಾಮನು ದೇವತೆಗಳಿಂದ ವರಪಡೆದು, ಸತ್ತಿರುವ ವಾನರರೆಲ್ಲರನ್ನೂ ಬದುಕಿಸಿ, ತನ್ನ ಎಲ್ಲ ಸಹಚರರೊಂದಿಗೆ ಪುಷ್ಪಕ ವಿಮಾನವನ್ನೇರಿ ಅಯೋಧ್ಯೆಗೆ ಪ್ರಸ್ಥಾನ ಮಾಡಿದನು.॥86॥

ಮೂಲಮ್ - 87

ಭರದ್ವಾಜಾಶ್ರಮಂ ಗತ್ವಾ ರಾಮಃ ಸತ್ಯಪರಾಕ್ರಮಃ ।
ಭರತಸ್ಯಾಂತಿಕೆ ರಾಮೋ ಹನೂಮಂತಂ ವ್ಯಸರ್ಜಯತ್ ॥

ಅನುವಾದ

ಭರದ್ವಾಜ ಮುನಿಯ ಆಶ್ರಮವನ್ನು ತಲುಪಿ ಎಲ್ಲರಿಗೆ ಆನಂದ ಕೊಡುವ ಸತ್ಯಪರಾಕ್ರಮಿ ಶ್ರೀರಾಮನು ಭರತನ ಬಳಿಗೆ ಹನುಮಂತನನ್ನು ಮುಂದಾಗಿ ಕಳಿಸಿದನು.॥87॥

ಮೂಲಮ್ - 88

ಪುನರಾಖ್ಯಾಯಿಕಾಂ ಜಲ್ಪನ್ ಸುಗ್ರೀವಸಹಿತಸ್ತದಾ ।
ಪುಷ್ಪಕಂ ತತ್ಸಮಾರುಹ್ಯ ನಂದಿಗ್ರಾಮಂ ಯಯೌ ತದಾ ॥

ಅನುವಾದ

ಮತ್ತೆ ಸುಗ್ರೀವನೊಂದಿಗೆ ಮಾತು-ಕತೆಯಾಡುತ್ತಾ ಪುಷ್ಪಕ ವಿಮಾನವನ್ನೇರಿ ಅವನು ನಂದಿ ಗ್ರಾಮಕ್ಕೆ ಹೋದನು.॥88॥

ಮೂಲಮ್ - 89

ನಂದಿಗ್ರಾಮೇ ಜಟಾಂ ಹಿತ್ವಾ ಭ್ರಾತೃಭಿಃ ಸಹಿತೋಽನಘಃ ।
ರಾಮಃ ಸೀತಾಮನುಪ್ರಾಪ್ಯ ರಾಜ್ಯಂ ಪುನರವಾಪ್ತವಾನ್ ॥

ಅನುವಾದ

ನಿಷ್ಪಾಪನಾದ ರಾಮಚಂದ್ರನು ನಂದಿಗ್ರಾಮದಲ್ಲಿ ತನ್ನ ಜಟೆಯನ್ನು ವಿಸರ್ಜಿಸಿ, ತಮ್ಮಂದಿರೊಂದಿಗೆ, ಸೀತಾಸಹಿತನಾಗಿ ಪುನಃ ತನ್ನ ರಾಜ್ಯವನ್ನು ಪಡೆದುಕೊಂಡನು.॥89॥

ಮೂಲಮ್ - 90

ಪ್ರಹೃಷ್ಟ ಮುದಿತೋ ಲೋಕಸ್ತುಷ್ಟಃ ಪುಷ್ಟಃ ಸುಧಾರ್ಮಿಕಃ ।
ನಿರಾಮಯೋ ಹ್ಯರೋಗಶ್ಚ ದುರ್ಭಿಕ್ಷಭಯವರ್ಜಿತಃ ॥

ಅನುವಾದ

ಈಗ ರಾಮನ ರಾಜ್ಯದಲ್ಲಿ ಜನರು ಪ್ರಸನ್ನರಾಗಿದ್ದು, ಸುಖಿಗಳೂ, ಸಂತುಷ್ಟರೂ, ಪರಿಪುಷ್ಟರೂ, ಧಾರ್ಮಿಕರೂ ಆಗಿದ್ದು, ಆಧಿ-ವ್ಯಾಧಿಗಳಿಂದ ಮುಕ್ತರಾಗಿದ್ದರು. ಅವರಿಗೆ ದುರ್ಭಿಕ್ಷದ ಭಯ ಇರಲಿಲ್ಲ.॥90॥

ಮೂಲಮ್ - 91

ನ ಪುತ್ರಮರಣಂ ಕೆಂಚಿದ್ ದ್ರಕ್ಷ್ಯಂತಿ ಪುರುಷಾಃ ಕ್ವಚಿತ್ ।
ನಾರ್ಯಶ್ಚಾವಿಧವಾ ನಿತ್ಯಂ ಭವಿಷ್ಯಂತಿ ಪತಿವ್ರತಾಃ ॥

ಅನುವಾದ

ಯಾರೂ ಎಲ್ಲಿಯೂ ತನ್ನ ಪುತ್ರರ ಮೃತ್ಯುವನ್ನು ನೋಡುವುದಿಲ್ಲ. ಸ್ತ್ರೀಯರೆಲ್ಲರೂ ಮುತ್ತೈದೆಯರಾಗಿ ಪತಿವ್ರತೆಯಾಗಿದ್ದರು.॥91॥

ಮೂಲಮ್ - 92

ನ ಚಾಗ್ನಿಜಂ ಭಯಂ ಕಿಂಚಿನ್ನಾಪ್ಸು ಮಜ್ಜಂತಿ ಜಂತವಃ ।
ನ ವಾತಜಂ ಭಯಂ ಕಿಂಚಿನ್ನಾಪಿ ಜ್ವರಕೃತಂ ತಥಾ ॥

ಅನುವಾದ

ಕೊಂಚವೂ ಅಗ್ನಿಭಯವಿರಲಿಲ್ಲ. ಯಾವ ಪ್ರಾಣಿಯೂ ನೀರಿನಲ್ಲಿ ಮುಳುಗುತ್ತಿರಲಿಲ್ಲ. ವಾತ ಮತ್ತು ಜ್ವರದ ಭಯವು ಸ್ವಲ್ಪವೂ ಇರಲಿಲ್ಲ.॥92॥

ಮೂಲಮ್ - 93½

ನ ಚಾಪಿ ಕ್ಷುದ್ಭಯಂ ತತ್ರ ನ ತಸ್ಕರಭಯಂ ತಥಾ ।
ನಗರಾಣಿ ಚ ರಾಷ್ಟ್ರಾಣಿ ಧನಧಾನ್ಯಯುತಾನಿ ಚ ॥
ನಿತ್ಯಂ ಪ್ರಮುದಿತಾಃ ಸರ್ವೇ ಯಥಾ ಕೃತಯುಗೇ ತಥಾ ।

ಅನುವಾದ

ಹಸಿವು ಹಾಗೂ ಕಳ್ಳರ ಭಯವೂ ಇರಲಿಲ್ಲ. ಇಡೀ ನಗರ ಮತ್ತು ರಾಷ್ಟ್ರ ಧನ-ಧಾನ್ಯದಿಂದ ಸಂಪನ್ನವಾಗಿತ್ತು. ಕೃತಯುಗದಂತೆ ಎಲ್ಲ ಜನರು ಸದಾ ಪ್ರಸನ್ನರಾಗಿದ್ದರು.॥93½॥

ಮೂಲಮ್ - 94

ಅಶ್ವಮೇಧಶತೈರಿಷ್ಟ್ವಾ ತಥಾ ಬಹುಸುವರ್ಣಕೈಃ ॥

ಮೂಲಮ್ - 95

ಗವಾಂ ಕೋಟ್ಯಯುತಂ ದತ್ತ್ವಾ ವಿದ್ವದ್ಭಯೋ ವಿಧಿಪೂರ್ವಕಮ್ ।
ಅಸಂಖ್ಯೇಯಂ ಧನಂ ದತ್ತ್ವಾ ಬ್ರಾಹ್ಮಣೇಭ್ಯೋ ಮಹಾಯಶಾಃ ॥

ಮೂಲಮ್ - 96

ರಾಜವಂಶಾನ್ ಶತಗುಣಾನ್ ಸ್ಥಾಪಯಿಷ್ಯತಿ ರಾಘವಃ ।
ಚಾತುರ್ವರ್ಣ್ಯಂ ಚ ಲೋಕೇಽಸ್ಮಿನ್ ಸ್ವೇ ಸ್ವೇ ಧರ್ಮೇ ನಿಯೋಕ್ಷ್ಯತಿ ॥

ಅನುವಾದ

ಮಹಾಯಶಸ್ವೀ ರಾಮನು ಬಹಳಷ್ಟು ಸುವರ್ಣ ದಕ್ಷಿಣೆಯುಳ್ಳ ನೂರು ಅಶ್ವಮೇಧ ಯಜ್ಞಗಳನ್ನು ಮಾಡಿದನು. ಅವುಗಳಲ್ಲಿ ವಿಧಿವತ್ತಾಗಿ ವಿದ್ವಾಂಸರಿಗೆ ಹತ್ತುಸಾವಿರ ಕೋಟಿ ಗೋವುಗಳನ್ನು ಅಪಾರ ಧನವನ್ನು ಬ್ರಾಹ್ಮಣರಿಗೆ ದಾನ ಮಾಡಿದನು. ರಾಘವನು ಈ ಲೋಕದಲ್ಲಿ ಮುಂದೆ ನೂರಾರು ರಾಜವಂಶಗಳನ್ನು ನೆಲೆಗೊಳಿಸುವನು. ಜಗತ್ತಿನಲ್ಲಿ ನಾಲ್ಕು ವರ್ಣದವರನ್ನು ತಮ್ಮ ತಮ್ಮ ಧರ್ಮದಲ್ಲಿ ನಿಯುಕ್ತಗೊಳಿಸುವನು.॥94-96॥

ಮೂಲಮ್ - 97

ದಶವರ್ಷಸಹಸ್ರಾಣಿ ದಶವರ್ಷಶತಾನಿ ಚ ।
ರಾಮೋ ರಾಜ್ಯಮುಪಾಸಿತ್ವಾ ಬ್ರಹ್ಮಲೋಕಂ ಪ್ರಯಾಸ್ಯತಿ ॥

ಅನುವಾದ

ಮತ್ತೆ ಹನ್ನೊಂದು ಸಾವಿರ ವರ್ಷಗಳವರೆಗೆ ರಾಜ್ಯವಾಳಿದ ಬಳಿಕ ಶ್ರೀರಾಮಚಂದ್ರನು ತನ್ನ ಪರಮಧಾಮಕ್ಕೆ ತೆರಳುವನು.॥97॥

ಮೂಲಮ್ - 98

ಇದಂ ಪವಿತ್ರಂ ಪಾಪಘ್ನಂ ಪುಣ್ಯಂ ವೇದೈಶ್ಚ ಸಮ್ಮಿತಮ್ ।
ಯಃ ಪಠೇದ್ರಾಮಚರಿತಂ ಸರ್ವಪಾಪೈಃ ಪ್ರಮುಚ್ಯತೇ ॥

ಅನುವಾದ

ವೇದಗಳಿಗೆ ಸಮಾನವಾದ, ಪವಿತ್ರ, ಪಾಪನಾಶಕ ಮತ್ತು ಪುಣ್ಯಮಯ ಈ ರಾಮಚರಿತವನ್ನು ಓದುವವನು ಎಲ್ಲ ಪಾಪಗಳಿಂದ ಮುಕ್ತನಾಗಿ ಹೋಗುವನು.॥98॥

ಮೂಲಮ್ - 99

ಏತದಾಖ್ಯಾನಮಾಯುಷ್ಯಂ ಪಠನ್ ರಾಮಾಯಣಂ ನರಃ ।
ಸುಪುತ್ರಪೌತ್ರಃ ಸಗಣಃಪ್ರೇತ್ಯ ಸ್ವರ್ಗೇ ಮಹೀಯತೇ ॥

ಅನುವಾದ

ಆಯಸ್ಸನ್ನು ಹೆಚ್ಚಿಸುವ ಈ ರಾಮಾಯಣ ಕಥೆಯನ್ನು ಓದುವ ಮನುಷ್ಯನು ಮೃತ್ಯುವಿನ ಬಳಿಕ ಪುತ್ರ-ಪೌತ್ರ ಹಾಗೂ ಇತರ ಪರಿಜನರೊಂದಿಗೆ ಸ್ವರ್ಗಲೋಕಕ್ಕೆ ಹೋಗುವನು.॥99॥

ಮೂಲಮ್ - 100

ಪಠನ್ ದ್ವಿಜೋ ವಾಗೃಷಭತ್ವಮೀಯಾತ್
ಸ್ಯಾತ್ ಕ್ಷತ್ರಿಯೋ ಭೂಮಿಪತಿತ್ವಮೀಯಾತ್ ।
ವಣಿಗ್ಜನಃ ಪುಣ್ಯಫಲತ್ವಮೀಯಾತ್
ಜನಶ್ಚ ಶೂದ್ರೋಽಪಿ ಮಹತ್ತ್ವಮೀಯಾತ್ ॥

ಅನುವಾದ

ಬ್ರಾಹ್ಮಣನು ಇದನ್ನು ಓದಿದರೆ ವಿದ್ವಾಂಸನಾಗುವನು. ಕ್ಷತ್ರಿಯನು ಓದಿದರೆ ಪೃಥ್ವಿವಿಯ ರಾಜ್ಯ ದೊರೆಯುತ್ತದೆ. ವೈಶ್ಯರಿಗೆ ವ್ಯಾಪಾರದಲ್ಲಿ ಲಾಭವಾಗುತ್ತದೆ ಮತ್ತು ಶೂದ್ರನು ಓದಿದರೆ ಜನರಲ್ಲಿ ಮಾನ್ಯನಾಗುತ್ತಾನೆ.॥100॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಮೊದಲನೆಯ ಸರ್ಗ ಪೂರ್ಣವಾಯಿತು. ॥1॥