೦೫ ಐದನೆಯ ಅಧ್ಯಾಯ

ಭಾಗಸೂಚನಾ

ರಾಮಾಯಣದ ನವಾಹ ಶ್ರವಣದ ವಿಧಿ, ಮಹಿಮೆ ಹಾಗೂ ಫಲದ ವರ್ಣನೆ

ಮೂಲಮ್ - 1 (ವಾಚನಮ್)

ಸೂತ ಉವಾಚ

ಮೂಲಮ್

ರಾಮಾಯಣಸ್ಯ ಮಾಹಾತ್ಮ್ಯಂ ಶ್ರುತ್ವಾ ಪ್ರೀತೋ ಮುನೀಶ್ವರಃ ।
ಸನತ್ಕುಮಾರಃ ಪಪ್ರಚ್ಛ ನಾರದಂ ಮುನಿಸತ್ತಮಮ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ - ರಾಮಾಯಣದ ಈ ಮಾಹಾತ್ಮ್ಯವನ್ನು ಕೇಳಿ ಮುನೀಶ್ವರ ಸನತ್ಕುಮಾರರು ಬಹಳ ಪ್ರಸನ್ನರಾಗಿ, ಮುನಿಶ್ರೇಷ್ಠ ನಾರದರಲ್ಲಿ ಪುನಃ ಕೇಳಿದರು.॥1॥

ಮೂಲಮ್ - 2 (ವಾಚನಮ್)

ಸನತ್ಕುಮಾರ ಉವಾಚ

ಮೂಲಮ್

ರಾಮಾಯಣಸ್ಯ ಮಾಹಾತ್ಮ್ಯಂ ಕಥಿತಂ ವೈ ಮುನೀಶ್ವರ ।
ಇದಾನೀಂ ಶ್ರೋತುಮಿಚ್ಛಾಮಿ ವಿಧಿಂ ರಾಮಾಯಣಸ್ಯ ಚ ॥

ಅನುವಾದ

ಸನತ್ಕುಮಾರರು ಕೇಳುತ್ತಾರೆ - ಮುನೀಶ್ವರರೇ! ತಾವು ರಾಮಾಯಣದ ಮಾಹಾತ್ಮ್ಯವನ್ನು ತಿಳಿಸಿದರಿ. ಈಗ ನಾವು ಅದರ ಪಾರಾಯಣ ವಿಧಿಯನ್ನು ಕೇಳಲು ಇಚ್ಛಿಸುವೆವು.॥2॥

ಮೂಲಮ್ - 3

ಏತಚ್ಚಾಪಿ ಮಹಾಭಾಗ ಮುನೇ ತತ್ತ್ವಾರ್ಥಕೋವಿದ ।
ಕೃಪಯಾ ಪರಯಾವಿಷ್ಟೋ ಯಥಾವದ್ ವಕ್ತುಮರ್ಹಸಿ ॥

ಅನುವಾದ

ಮಹಾಭಾಗರಾದ ಮುನಿಯೇ! ತಾವು ತತ್ತ್ವಾರ್ಥ ಜ್ಞಾನದಲ್ಲಿ ಕುಶಲರಾಗಿದ್ದೀರಿ. ಆದ್ದರಿಂದ ಅತ್ಯಂತ ಕೃಪಾಪೂರ್ವಕ ಈ ವಿಷಯವನ್ನು ಯಥಾರ್ಥವಾಗಿ ತಿಳಿಸಿರಿ.॥3॥

ಮೂಲಮ್ - 4 (ವಾಚನಮ್)

ನಾರದ ಉವಾಚ

ಮೂಲಮ್

ರಾಮಾಯಣವಿಧಿಂ ಚೈವ ಶ್ರುಣುಧ್ವಂ ಸುಸಮಾಹಿತಾಃ ।
ಸರ್ವಲೋಕೇಷು ವಿಖ್ಯಾತಂ ಸ್ವರ್ಗಮೋಕ್ಷವಿವರ್ಧನಮ್ ॥

ಅನುವಾದ

ನಾರದರು ಹೇಳಿದರು - ಮಹರ್ಷಿಗಳೇ! ನೀವು ಏಕಾಗ್ರಚಿತ್ತರಾಗಿ ಸಮಸ್ತ ಲೋಕಗಳಲ್ಲಿ ವಿಖ್ಯಾತವಾದ ರಾಮಾಯಣದ ಶ್ರವಣದ ವಿಧಿಯನ್ನು ಕೇಳಿರಿ. ಅದು ಸ್ವರ್ಗ ಮತ್ತು ಮೋಕ್ಷಸಂಪತ್ತನ್ನು ವೃದ್ಧಿಗೊಳಿಸುವುದು.॥4॥

ಮೂಲಮ್ - 5

ವಿಧಾನಂ ತಸ್ಯ ವಕ್ಷ್ಯಾಮಿ ಶೃಣುಧ್ವಂ ಗದತೋ ಮಮ ।
ರಾಮಾಯಣಕಥಾಂ ಕುರ್ವನ್ ಭಕ್ತಿಭಾವೇನ ಭಾವಿತಃ ॥

ಅನುವಾದ

ನಾನು ರಾಮಾಯಣ ಕಥೆಯ ಶ್ರವಣ ವಿಧಿಯನ್ನು ತಿಳಿಸುವೆನು, ನೀವು ಕೇಳಿರಿ. ರಾಮಾಯಣ ಕಥೆಯ ಅನುಷ್ಠಾನ ಮಾಡುವ ಶ್ರೋತಾ ಮತ್ತು ವಕ್ತಾ ಭಕ್ತಿಭಾವದಿಂದ ಆ ವಿಧಿಯನ್ನು ಪಾಲಿಸಬೇಕು.॥5॥

ಮೂಲಮ್ - 6

ಯೇನ ಜೀರ್ಣೇನ ಪಾಪಾನಾಂ ಕೋಟಿಕೋಟಿಃ ಪ್ರಣಶ್ಯತಿ ।
ಚೈತ್ರೇ ಮಾಘೇ ಕಾರ್ತಿಕೇ ಚ ಪಂಚಮ್ಯಾಮಥವಾಽಽರಭೇತ್ ॥

ಅನುವಾದ

ಆ ವಿಧಿಯನ್ನು ಪಾಲಿಸುವುದರಿಂದ ಕೋಟಿ ಪಾಪಗಳು ನಾಶವಾಗಿ ಹೋಗುತ್ತವೆ. ಚೈತ್ರ, ಮಾಘ ಕಾರ್ತಿಕ ಮಾಸಗಳ ಶುಕ್ಲಪಕ್ಷದ ಪಂಚಮಿಗೆ ಕಥೆಯನ್ನು ಪ್ರಾರಂಭಿಸಬೇಕು.॥6॥

ಮೂಲಮ್ - 7

ಸಂಕಲ್ಪಂ ತು ತತಃ ಕುರ್ಯಾತ್ ಸ್ವಸ್ತಿವಾಚನಪೂರ್ವಕಮ್ ।
ಅಹೋಭಿರ್ನವಭಿಃ ಶ್ರಾವ್ಯಂ ರಾಮಾಯಣಕಥಾಮೃತಮ್ ॥

ಅನುವಾದ

ಮೊದಲಿಗೆ ಸ್ವಸ್ತಿವಾಚನ ಮಾಡಿ ಮತ್ತೆ ‘ನಾವು ಒಂಭತ್ತು ದಿನಗಳವರೆಗೆ ರಾಮಾಯಣದ ಅಮೃತಮಯ ಕಥೆಯನ್ನು ಕೇಳುವೆವು’ ಎಂದು ಸಂಕಲ್ಪಮಾಡಬೇಕು.॥7॥

ಮೂಲಮ್ - 8

ಅದ್ಯ ಪ್ರಭೃತ್ಯಹಂ ರಾಮ ಶೃಣೋಮಿ ತ್ವತ್ಕಥಾಮೃತಮ್ ।
ಪ್ರತ್ಯಹಂ ಪೂರ್ಣತಾಮೇತು ತವ ರಾಮ ಪ್ರಸಾದತಃ ॥

ಅನುವಾದ

ಮತ್ತೆ ಭಗವಂತನಲ್ಲಿ ಹೀಗೆ ಪ್ರಾರ್ಥಿಸಬೇಕು - ಶ್ರೀರಾಮಾ! ಇಂದಿನಿಂದ ಪ್ರತಿದಿನ ನಾನು ನಿನ್ನ ಅಮೃತಮಯ ಕಥೆಯನ್ನು ಕೇಳುವೆನು. ಇದು ನಿನ್ನ ಕೃಪಾಪ್ರಸಾದದಿಂದಲೇ ಪೂರ್ಣವಾಗಲಿ.॥8॥

ಮೂಲಮ್ - 9

ಪ್ರತ್ಯಹಂ ದಂತಶುದ್ಧಿಂ ಚ ಅಪಾಮಾರ್ಗಸ್ಯ ಶಾಖಯಾ ।
ಕೃತ್ವಾ ಸ್ನಾಯೀತ ವಿಧಿವದ್ ರಾಮಭಕ್ತಿಪರಾಯಣಃ ॥

ಅನುವಾದ

ಪ್ರತಿದಿನ ಅಪಾಮಾರ್ಗ (ಉತ್ತರಣೆ) ಕಡ್ಡಿಯಿಂದ ಹಲ್ಲುಗಳನ್ನು ಉಜ್ಜಿ, ರಾಮಭಕ್ತಿಯಲ್ಲಿ ತತ್ಪರನಾಗಿ ವಿಧಿವತ್ತಾಗಿ ಸ್ನಾನಮಾಡಬೇಕು.॥9॥

ಮೂಲಮ್ - 10

ಸ್ವಯಂ ಚ ಬಂಧುಭಿಃ ಸಾರ್ದ್ಧಂ ಶೃಣುಯಾತ್ ಪ್ರಯತೇಂದ್ರಿಯಃ ।
ಸ್ನಾನಂ ಕೃತ್ವಾ ಯಥಾಚಾರಂ ದಂತಧಾವನಪೂರ್ವಕಮ್ ॥

ಮೂಲಮ್ - 11

ಶುಕ್ಲಾಂಬರಧರಃ ಶುದ್ಧೋ ಗೃಹಮಾಗತ್ಯ ವಾಗ್ಯತಃ ।
ಪ್ರಕ್ಷಾಲ್ಯ ಪಾದಾವಾಚಮ್ಯ ಸ್ಮರೇನ್ನಾರಾಯಣಂ ಪ್ರಭುಮ್ ॥

ಅನುವಾದ

ತನ್ನ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಬಂಧು-ಬಾಂಧವರೊಂದಿಗೆ ಕಥೆಯನ್ನು ಕೇಳಬೇಕು. ಮೊದಲು ತನ್ನ ಕುಲಾಚಾರಕ್ಕನುಸಾರವಾಗಿ ದಂತಧಾವನ ಪೂರ್ವಕ ಸ್ನಾನ ಮಾಡಿ, ಬಿಳಿ ವಸ್ತ್ರವನ್ನುಟ್ಟು ಶುದ್ಧವಾಗಿ ಮನೆಗೆ ಬಂದು ಮೌನಭಾವದಿಂದ ಕೈ-ಕಾಲು ತೊಳೆದು, ಆಚಮನ ಮಾಡಿ, ನಾರಾಯಣನನ್ನು ಸ್ಮರಿಸಬೇಕು.॥10-11॥

ಮೂಲಮ್ - 12

ನಿತ್ಯಂ ದೇವಾರ್ಚನಂ ಕೃತ್ವಾ ಪಶ್ಚಾತ್ ಸಂಕಲ್ಪಪೂರ್ವಕಮ್ ।
ರಾಮಾಯಣಪುಸ್ತಕಂ ಚ ಅರ್ಚಯೇದ್ ಭಕ್ತಿಭಾವತಃ ॥

ಅನುವಾದ

ಮತ್ತೆ ಪ್ರತಿದಿನ ದೇವರ ಪೂಜೆಮಾಡಿ ಸಂಕಲ್ಪಪೂರ್ವಕ ಭಕ್ತಿಯಿಂದ ರಾಮಾಯಣ ಗ್ರಂಥವನ್ನು ಪೂಜಿಸಬೇಕು.॥12॥

ಮೂಲಮ್ - 13

ಆವಾಹನಾಸನಾದೈಶ್ಚ ಗಂಧಪುಷ್ಪಾದಿಭಿರ್ವ್ರತೀ ।
ಓಂ ನಮೋ ನಾರಾಯಣಾಯೇತಿ ಪೂಜಯೇದ್ ಭಕ್ತಿತತ್ಪರಃ ॥

ಅನುವಾದ

ವ್ರತಸ್ಥನಾದ ಪುರುಷನು ಆವಾಹನ, ಆಸನ, ಗಂಧ, ಪುಷ್ಪಾದಿ ಉಪಚಾರಗಳಿಂದ ‘ಓಂ ನಮೋ ನಾರಾಯಣಾಯ’ ಈ ಮಂತ್ರದಿಂದ ಭಕ್ತಿಪರಾಯಣನಾಗಿ ಪೂಜಿಸಬೇಕು.॥13॥

ಮೂಲಮ್ - 14

ಏಕವಾರಂ ದ್ವಿವಾರಂ ವಾ ತ್ರಿವಾರಂ ವಾಪಿ ಶಕ್ತಿತಃ ।
ಹೋಮಂ ಕುರ್ಯಾತ್ ಪ್ರಯತ್ನೇನ ಸರ್ವಪಾಪನಿವೃತ್ತಯೇ ॥

ಅನುವಾದ

ಸಮಸ್ತ ಪಾಪಗಳ ನಿವತ್ತಿಗಾಗಿ ತನ್ನ ಶಕ್ತಿಗನುಸಾರ ಒಮ್ಮೆ ಎರಡು ಬಾರಿ ಅಥವಾ ಮೂರು ಬಾರಿ ಪ್ರಯತ್ನಪೂರ್ವಕ ಹೋಮ ಮಾಡಬೇಕು.॥14॥

ಮೂಲಮ್ - 15

ಏವಂ ಯಃ ಪ್ರಯತಃ ಕುರ್ಯಾದ್ ರಾಮಾಯಣವಿಧಿಂ ತಥಾ ।
ಸ ಯಾತಿ ವಿಷ್ಣುಭವನಂ ಪುನರಾವೃತ್ತಿದುರ್ಲಭಮ್ ॥

ಅನುವಾದ

ಹೀಗೆ ಮನಸ್ಸು, ಇಂದ್ರಿಯಗಳನ್ನು ನಿಗ್ರಹಿಸಿ, ರಾಮಾಯಣ ವಿಧಿಯ ಅನುಷ್ಠಾನ ಮಾಡುವವನು ಭಗವಾನ್ ವಿಷ್ಣುವಿನ ಧಾಮಕ್ಕೆ ಹೋಗುತ್ತಾನೆ. ಅಲ್ಲಿಂದ ಮರಳಿ ಜಗತ್ತಿಗೆ ಬರುವುದಿಲ್ಲ.॥15॥

ಮೂಲಮ್ - 16

ರಾಮಾಯಣವ್ರತಧರೋ ಧರ್ಮಕಾರೀ ಚ ಸತ್ತಮಃ ।
ಚಾಂಡಾಲಂ ಪತಿತಂ ವಾಪಿ ವಸ್ತ್ರಾನ್ನೇನಾಪಿ ನಾರ್ಚಯೇತ್ ॥

ಅನುವಾದ

ರಾಮಾಯಣ ಸಂಬಂಧಿ ವ್ರತವನ್ನು ಧರಿಸುವ ಧರ್ಮಾತ್ಮ ಶ್ರೇಷ್ಠ ಪುರುಷನು ಚಾಂಡಾಲ ಹಾಗೂ ಪತಿತ ಮನುಷ್ಯರನ್ನು ಅನ್ನ ವಸ್ತ್ರಾದಿಗಳಿಂದಲೂ ಸತ್ಕರಿಸಬಾರದು.॥16॥

ಮೂಲಮ್ - 17

ನಾಸ್ತಿಕಾನ್ ಭಿನ್ನಮರ್ಯಾದಾನ್ ನಿಂದಕಾನ್ ಪಿಶುನಾನಪಿ ।
ರಾಮಾಯಣವ್ರತಪರೋ ವಾಙ್ಮಾತ್ರೇಣಾಪಿ ನಾರ್ಚಯೇತ್ ॥

ಅನುವಾದ

ನಾಸ್ತಿಕನೂ, ಧರ್ಮ ಮೇರೆಯನ್ನು ಮೀರಿದವನೂ, ಪರರ ನಿಂದಕನೂ, ಚಾಡಿಕೋರನೂ ಆದವನನ್ನು ರಾಮಾಯಣ ವ್ರತಧಾರಿಯು ಮಾತಿನಿಂದಲೂ ಕೂಡ ಆದರಿಸಬಾರದು.॥17॥

ಮೂಲಮ್ - 18

ಕುಂಡಾಶಿನಂ ಗಾಯಕಂ ಚ ತಥಾ ದೇವಲಕಾಶನಮ್ ।
ಭಿಷಜಂ ಕಾವ್ಯಕರ್ತಾರಂ ದೇವದ್ವಿಜವಿರೋನಮ್ ॥
ಪರಾನ್ನಲೋಲುಪಂ ಚೈವ ಪರಸ್ತ್ರೀನಿರತಂ ತಥಾ ।

ಮೂಲಮ್ - 19

ರಾಮಾಯಣವ್ರತಪರೋ ವಾಜ್ಮಾತ್ರೇಣಾಪಿ ನಾರ್ಚಯೇತ್ ॥

ಅನುವಾದ

ಪರಪುರುಷನ ಸಮಾಗಮದಿಂದ ಹುಟ್ಟಿದ ಜಾರ ಪುತ್ರನನ್ನು ‘ಕುಂಡ’ ಎಂದು ಹೇಳುತ್ತಾರೆ. ಇಂತಹ ಕುಂಡನಲ್ಲಿ ಊಟ ಮಾಡುವವನೂ, ಹಾಡು ಹೇಳಿ ಜೀವನ ನಡೆಸುವವನೂ, ದೇವರಿಗೆ ಅರ್ಪಿಸಿದ ವಸ್ತುಗಳನ್ನು ಉಪಭೋಗಿಸುವವನ ಅನ್ನ ತಿನ್ನುವವನೂ, ವೈದ್ಯಾನ್ನವನ್ನು ತಿನ್ನುವವನೂ, ಜನರನ್ನು ಸುಮ್ಮನೆ ಹೊಗಳಿ ಕವಿತೆ ಬರೆಯುವವನೂ, ದೇವರನ್ನು ಬ್ರಾಹ್ಮಣರನ್ನು ವಿರೋಧಿಸುವವನೂ, ಪರಾನ್ನದಲ್ಲಿ ಆಸಕ್ತಿ ಉಳ್ಳವನೂ, ಪರಸ್ತ್ರೀಯಲ್ಲಿ ಆಸಕ್ತನೂ ಆದ ಇಂತಹ ಮನುಷ್ಯನನ್ನು ರಾಮಾಯಣ ವ್ರತಿಯು ಮಾತಿನಿಂದಲೂ ಆದರಿಸಬಾರದು.॥18-19॥

ಮೂಲಮ್ - 20

ಇತ್ಯೇವಮಾದಿಭಿಃ ಶುದ್ಧೋ ವಶೀ ಸರ್ವಹಿತೇ ರತಃ ।
ರಾಮಾಯಣಪರೋ ಭೂತ್ವಾ ಪರಾಂ ಸಿದ್ಧಿಂ ಗಮಿಷ್ಯತಿ ॥

ಅನುವಾದ

ಇಂತಹ ದೋಷಗಳಿಂದ ದೂರವಿದ್ದು, ಶುದ್ಧನಾಗಿ, ಜಿತೇಂದ್ರಿಯನಾಗಿ, ಎಲ್ಲರ ಹಿತದಲ್ಲಿ ತತ್ಪರನಾಗಿರುತ್ತಾ ರಾಮಾಯಣವನ್ನು ಆಶ್ರಯಿಸುವವನು ಪರಮಸಿದ್ಧಿಯನ್ನು ಪಡೆಯುತ್ತಾನೆ.॥20॥

ಮೂಲಮ್ - 21

ನಾಸ್ತಿ ಗಂಗಾಸಮಂ ತೀರ್ಥ ನಾಸ್ತಿ ಮಾತೃಸಮೋ ಗುರುಃ ।
ನಾಸ್ತಿ ವಿಷ್ಣುಸಮೋ ದೇವೋ ನಾಸ್ತಿ ರಾಮಾಯಣಾತ್ ಪರಮ್ ॥

ಅನುವಾದ

ಗಂಗೆಗೆ ಸಮಾನವಾದ ತೀರ್ಥ, ತಾಯಿಯಂತಹ ಗುರು, ಭಗವಾನ್ ವಿಷ್ಣುವಿನಂತಹ ದೇವರು, ರಾಮಾಯಣಕ್ಕಿಂತ ಮಿಗಿಲಾದ ವಸ್ತು ಯಾವುದೂ ಇಲ್ಲ.॥21॥

ಮೂಲಮ್ - 22

ನಾಸ್ತಿ ದೇವಸಮಂ ಶಾಸ್ತ್ರಂ ನಾಸ್ತಿ ಶಾಂತಿ ಸಮಂ ಸುಖಮ್ ।
ನಾಸ್ತಿ ಶಾಂತಿಪರಂ ಜ್ಯೋತಿರ್ನಾಸ್ತಿ ರಾಮಾಯಣಾತ್ ಪರಮ್ ॥

ಅನುವಾದ

ವೇದಕ್ಕೆ ಸಮಾನ ಶಾಸ್ತ್ರ, ಶಾಂತಿಗೆ ಸಮಾನವಾದ ಸುಖ, ಶಾಂತಿಗಿಂತ ಹೆಚ್ಚಾದ ಜ್ಯೋತಿ ಯಾವುದೂ ಇಲ್ಲ ಹಾಗೂ ರಾಮಾಯಣಕ್ಕಿಂತ ಉತ್ಕೃಷ್ಟವಾದ ಕಾವ್ಯ ಬೇರೆ ಯಾವುದೂ ಇಲ್ಲ.॥22॥

ಮೂಲಮ್ - 23

ನಾಸ್ತಿ ಕ್ಷಮಾಸಮಂ ಸಾರಂ ನಾಸ್ತಿ ಕೀರ್ತಿಸಮಂ ಧನಮ್ ।
ನಾಸ್ತಿ ಜ್ಞಾನಸಮೋ ಲಾಭೋ ನಾಸ್ತಿ ರಾಮಾಯಣಾತ್ ಪರಮ್ ॥

ಅನುವಾದ

ಕ್ಷಮೆಗೆ ಸಮವಾದ ಬಲ, ಕೀರ್ತಿಗೆ ಸಮವಾದ ಧನ, ಜ್ಞಾನಕ್ಕೆ ಸಮವಾದ ಲಾಭ ಯಾವುದೂ ಇಲ್ಲ ಹಾಗೂ ರಾಮಾಯಣಕ್ಕಿಂತ ಮಿಗಿಲಾದ ಉತ್ತಮವಾದ ಗ್ರಂಥ ಯಾವುದೂ ಇಲ್ಲ.॥23॥

ಮೂಲಮ್ - 24

ತದಂತೇ ವೇದವಿದುಷೇ ಗಾಂ ದದ್ಯಾಚ್ಚ ಸದಕ್ಷಿಣಾಮ್ ।
ರಾಮಾಯಣಂ ಪುಸ್ತಕಂ ಚ ವಸ್ತ್ರಾಲಂಕರಣಾದಿಕಮ್ ॥

ಅನುವಾದ

ರಾಮಾಯಣ ಕಥೆಯ ಕೊನೆಯಲ್ಲಿ ವೇದಜ್ಞ ಕಥಾವಾಚಕನಿಗೆ ದಕ್ಷಿಣೆ ಸಹಿತ ಗೋವನ್ನು ದಾನ ಕೊಡಬೇಕು. ಅವರಿಗೆ ರಾಮಾಯಣ ಪುಸ್ತಕ ಹಾಗೂ ವಸ್ತ್ರಾಭೂಷಣಗಳನ್ನು ಕೊಡಬೇಕು.॥24॥

ಮೂಲಮ್ - 25

ರಾಮಾಯಣ ಪುಸ್ತಕಂ ಯೋ ವಾಚಕಾಯ ಪ್ರಯಚ್ಛತಿ ।
ಸ ಯಾತಿ ವಿಷ್ಣುಭವನಂ ಯತ್ರ ಗತ್ವಾ ನ ಶೋಚತಿ ॥

ಅನುವಾದ

ಕಥಾವಾಚಕನಿಗೆ ರಾಮಾಯಣದ ಪುಸ್ತಕವನ್ನು ಕೊಡುವವನು ಭಗವಾನ್ ವಿಷ್ಣುವಿನ ಧಾಮಕ್ಕೆ ಹೋಗುತ್ತಾನೆ. ಅಲ್ಲಿಗೆ ಹೋಗಿ ಅವನಿಗೆ ಎಂದೂ ಶೋಕಿಸಬೇಕಾಗುವುದಿಲ್ಲ.॥25॥

ಮೂಲಮ್ - 26½

ನವಾಹಜಫಲಂ ಕರ್ತುಃ ಶೃಣು ಧರ್ಮವಿದಾಂ ವರ ।
ಪಂಚಮ್ಯಾಂ ತು ಸಮಾರಭ್ಯ ರಾಮಾಯಣಕಥಾಮೃತಮ್ ॥
ಕಥಾಶ್ರವಣಮಾತ್ರೇಣ ಸರ್ವಪಾಪೈಃ ಪ್ರಮುಚ್ಯತೇ ।

ಅನುವಾದ

ಧರ್ಮಾತ್ಮರಲ್ಲಿ ಶ್ರೇಷ್ಠರಾದ ಸನತ್ಕುಮಾರರೇ! ರಾಮಾಯಣದ ನವಾಹ್ನಕಥೆಯನ್ನು ಪ್ರಾರಂಭಿಸಿ, ಅದರ ಶ್ರವಣಮಾತ್ರದಿಂದ ಮನುಷ್ಯನು ಎಲ್ಲ ಪಾಪಗಳಿಂದ ಮುಕ್ತನಾಗಿ ಹೋಗುತ್ತಾನೆ.॥26½॥

ಮೂಲಮ್ - 27

ಯದಿ ದ್ವಯಂ ಕೃತಂ ತಸ್ಯ ಪುಂಡರೀಕಫಲಂ ಲಭೇತ್ ॥

ಮೂಲಮ್ - 28

ವ್ರತಧಾರೀ ತು ಶ್ರವಣಂ ಯಃ ಕುರ್ಯಾತ್ ಸ ಜಿತೇಂದ್ರಿಯಃ ।
ಅಶ್ವಮೇಧಸ್ಯ ಯಜ್ಞಸ್ಯ ದ್ವಿಗುಣಂ ಫಲಮಶ್ನುತೇ ॥

ಮೂಲಮ್ - 29

ಚತುಃಕೃತ್ವಃ ಶ್ರುತಂ ಯೇನ ಕಥಿತಂ ಮುನಿಸತ್ತಮಾಃ ।
ಸ ಲಭೇತ್ ಪರಮಂ ಪುಣ್ಯಮಗ್ನಿಷ್ಟೋಮಾಷ್ಟಸಂಭವಮ್ ॥

ಅನುವಾದ

ಎರಡು ಬಾರಿ ಈ ಕಥೆಯನ್ನು ಶ್ರವಣಿಸಿದರೆ ಶ್ರೋತೃವಿಗೆ ಪುಂಡರೀಕಯಜ್ಞದ ಫಲ ಸಿಗುತ್ತದೆ. ಜಿತೇಂದ್ರಿಯನಾಗಿ ವ್ರತಧಾರಣಪೂರ್ವಕ ರಾಮಾಯಣ ಕಥೆಯನ್ನು ಶ್ರವಣಿಸುವವನು ಎರಡು ಅಶ್ವಮೇಧ ಯಜ್ಞದ ಫಲವನ್ನು ಪಡೆಯುತ್ತಾನೆ. ಮುನಿಗಳೇ! ನಾಲ್ಕು ಬಾರಿ ಕಥೆ ಕೇಳಿದವನು ಎಂಟು ಅಶ್ವಮೇಧ ಪರಮ ಪುಣ್ಯಕ್ಕೆ ಭಾಗಿಯಾಗುತ್ತಾನೆ.॥27-29॥

ಮೂಲಮ್ - 30

ಪಂಚಕೃತ್ವೋ ವ್ರತಮಿದಂ ಕೃತಂ ಯೇನ ಮಹಾತ್ಮನಾ ।
ಅತ್ಯಗ್ನಿಷ್ಟೋಮಜಂ ಪುಣ್ಯಂ ದ್ವಿಗುಣಂ ಪ್ರಾಪ್ನುಯಾನ್ನರಃ ॥

ಅನುವಾದ

ಐದು ಬಾರಿ ರಾಮಾಯಣ ಕಥೆಯನ್ನು ಶ್ರವಣಿಸುವ ಮಹಾತ್ಮನು ಅತ್ಯಗ್ನಿಷ್ಟೋಮಯಜ್ಞದ ಎರಡು ಪಟ್ಟು ಪುಣ್ಯ ಫಲಕ್ಕೆ ಭಾಗಿಯಾಗುತ್ತಾನೆ.॥30॥

ಮೂಲಮ್ - 31

ಏವಂ ವ್ರತಂ ಚ ಷಡ್ವಾರಂ ಕೃರ್ಯಾದ್ ಯಸ್ತು ಸಮಾಹಿತಃ ।
ಅಗ್ನಿಷ್ಟೋಮಸ್ಯ ಯಜ್ಞಸ್ಯ ಫಲಮಷ್ಟಗುಣಂ ಲಭೇತ್ ॥

ಅನುವಾದ

ಏಕಾಗ್ರಚಿತ್ತನಾಗಿ ಆರು ಬಾರಿ ರಾಮಾಯಣ ಕಥೆಯ ವ್ರತಾನುಷ್ಠಾನವನ್ನು ಪೂರ್ಣ ಗೊಳಿಸುವವನು ಅಗ್ನಿಷ್ಟೋಮ ಯಜ್ಞದ ಎಂಟುಪಟ್ಟು ಫಲಕ್ಕೆ ಭಾಗಿಯಾಗುತ್ತಾನೆ.॥31॥

ಮೂಲಮ್ - 32

ನಾರೀ ವಾ ಪುರುಷಃ ಕುರ್ಯಾದಷ್ಟಕೃತ್ವೋ ಮುನೀಶ್ವರಾಃ ।
ನರಮೇಧಸ್ಯ ಯಜ್ಞಸ್ಯ ಫಲಂ ಪಂಚಗುಣಂ ಲಭೇತ್ ॥

ಅನುವಾದ

ಮುನೀಶ್ವರರೇ! ಸ್ತ್ರೀ ಇರಲೀ, ಪುರುಷನಿರಲಿ, ಎಂಟು ಬಾರಿ ರಾಮಾಯಣ ಕಥೆಯನ್ನು ಕೇಳುವವನು ನರಮೇಧ ಯಜ್ಞದ ಐದು ಪಟ್ಟು ಫಲವನ್ನು ಪಡೆಯುತ್ತಾನೆ.॥32॥

ಮೂಲಮ್ - 33

ನರೋ ವಾಪ್ಯಥ ನಾರೀ ವಾ ನವವಾರಂ ಸಮಾಚರೇತ್ ।
ಗೋಮೇಧಸವಜಂ ಪುಣ್ಯಂ ಸ ಲಭೇತ್ ತ್ರಿಗುಣಂ ನರಃ ॥

ಅನುವಾದ

ಸ್ತ್ರೀಯಾಗಲಿ, ಪುರುಷನಾಗಲಿ ಒಂಭತ್ತು ಬಾರಿ ಈ ವ್ರತವನ್ನು ಆಚರಿಸುವವನಿಗೆ ಮೂರು ಗೋಮೇಧ ಯಜ್ಞದ ಪುಣ್ಯಫಲ ಪ್ರಾಪ್ತವಾಗುತ್ತದೆ.॥33॥

ಮೂಲಮ್ - 34

ರಾಮಾಯಣಂ ತು ಯಃ ಕುರ್ಯಾಚ್ಛಾಂತಾತ್ಮಾ ಪ್ರಯತೇಂದ್ರಿಯಃ ।
ಸ ಯತಿ ಪರಮಾನಂದಂ ಯತ್ರ ಗತ್ವಾ ನ ಶೋಚತಿ ॥

ಅನುವಾದ

ಶಾಂತಚಿತ್ತ ಮತ್ತು ಜಿತೇಂದ್ರಿಯನಾಗಿ ರಾಮಾಯಣ ಯಜ್ಞದ ಅನುಷ್ಠಾನ ಮಾಡುವವನು ಪರಮಾನಂದಮಯ ಧಾಮಕ್ಕೆ ಹೋಗುತ್ತಾನೆ. ಅಲ್ಲಿಗೆ ಹೋದ ಬಳಿಕ ಎಂದೂ ಶೋಕಿಸಬೇಕಾಗುವುದಿಲ್ಲ.॥34॥

ಮೂಲಮ್ - 35

ರಾಮಾಯಣಪರೋ ನಿತ್ಯಂ ಗಂಗಾಸ್ನಾನಪರಾಯಣಃ ।
ಧರ್ಮಮಾರ್ಗಪ್ರವಕ್ತಾರೋ ಮುಕ್ತಾ ಏವಂ ನ ಸಂಶಯಃ ॥

ಅನುವಾದ

ಪ್ರತಿದಿನ ರಾಮಾಯಣದ ಪಾರಾಯಣ ಅಥವಾ ಶ್ರವಣ ಮಾಡುವವರು, ಗಂಗಾಸ್ನಾನ ಮಾಡುವವರು, ಧರ್ಮ ಮಾರ್ಗವನ್ನು ಉಪದೇಶಿಸುವವರು ಸಂಸಾರ ಸಾಗರದಿಂದ ಮುಕ್ತರೇ ಆಗಿದ್ದಾರೆ. ಇದರಲ್ಲಿ ಸಂಶಯವೇ ಇಲ್ಲ.॥35॥

ಮೂಲಮ್ - 36

ಯತೀನಾಂ ಬ್ರಹ್ಮಚಾರೀಣಾಂ ಪ್ರವೀರಾಣಾಂ ಚ ಸತ್ತಮಾಃ ।
ನವಾಹ್ನಾ ಕಿಲ ಶ್ರೋತವ್ಯಾ ಕಥಾ ರಾಮಾಯಣಸ್ಯ ಚ ॥

ಅನುವಾದ

ಮಹಾತ್ಮರೇ! ಯತಿಗಳು, ಬ್ರಹ್ಮಚಾರಿಗಳು ಹಾಗೂ ಶ್ರೇಷ್ಠವೀರರೂ ಕೂಡ ರಾಮಾಯಣದ ನವಾಹ್ನ ಕಥೆಯನ್ನು ಕೇಳಬೇಕು.॥36॥

ಮೂಲಮ್ - 37

ಶ್ರುತ್ವಾ ನರೋ ರಾಮಕಥಾಮತಿದೀಪ್ತೋಽತಿಭಕ್ತಿತಃ ।
ಬ್ರಹ್ಮಣಃ ಪದಮಾಸಾದ್ಯ ತತ್ರೈವ ಪರಿಮೋದತೇ ॥

ಅನುವಾದ

ರಾಮಕಥೆಯನ್ನು ಅತ್ಯಂತ ಭಕ್ತಿಪೂರ್ವಕ ಕೇಳಿದ ಮನುಷ್ಯನು ಮಹಾತೇಜದಿಂದ ಬೆಳಗುತ್ತಾನೆ ಮತ್ತು ಬ್ರಹ್ಮ ಲೋಕಕ್ಕೆ ಹೋಗಿ ಅಲ್ಲಿ ಆನಂದವನ್ನು ಅನುಭವಿಸುವನು.॥37॥

ಮೂಲಮ್ - 38

ತಸ್ಮಾತ್ ಶ್ರುಣುಧ್ವಂ ವಿಪ್ರೇಂದ್ರಾ ರಾಮಾಯಣಕಥಾಮೃತಮ್ ।
ಶ್ರೋತೄಣಾಂ ಚ ಪರಂ ಶ್ರಾವ್ಯಂ ಪವಿತ್ರಾಣಾಮನುತ್ತಮಮ್ ॥

ಅನುವಾದ

ವಿಪ್ರೇಂದ್ರಿಯರೇ! ನೀವು ರಾಮಾಯಣದ ಅಮೃತಮಯ ಕಥೆಯನ್ನು ಕೇಳಿರಿ. ಶ್ರೋತೃಗಳಿಗೆ ಇದು ಸರ್ವೋತ್ತಮ ಶ್ರವಣೀಯ ವಸ್ತುವೇ ಆಗಿದೆ. ಪವಿತ್ರಗಳಲ್ಲಿಯೂ ಪರಮೋತ್ತಮವಾಗಿದೆ.॥38॥

ಮೂಲಮ್ - 39

ದುಃಸ್ವಪ್ನನಾಶನಂ ಧನ್ಯಂ ಶ್ರೋತವ್ಯಂ ಚ ಪ್ರಯತ್ನತಃ ।
ನರೋಽತ್ರ ಶ್ರದ್ಧಯಾ ಯುಕ್ತಃ ಶ್ಲೋಕಂ ಶ್ಲೋಕಾರ್ದ್ಧಮೇವ ಚ ॥

ಮೂಲಮ್ - 40

ಪಠತೇ ಮುಚ್ಚತೇ ಸದ್ಯೋ ಹ್ಯುಪಪಾತಕಕೋಟಿಭಿಃ ।
ಸತಾಮೇವ ಪ್ರಯೋಕ್ತವ್ಯಂ ಗುಹ್ಯಾದ್ಗುಹ್ಯತಮಂ ತು ಯತ್ ॥

ಅನುವಾದ

ದುಃಸ್ವಪ್ನವನ್ನು ನಾಶಮಾಡುವಂತಹ ಈ ಕಥೆಯು ಧನ್ಯವಾಗಿದೆ. ಇದನ್ನು ಪ್ರಯತ್ನಪೂರ್ವಕ ಕೇಳಬೇಕು. ಶ್ರದ್ಧಾಯುಕ್ತನಾಗಿ ರಾಮಾಯಣದ ಒಂದು ಶ್ಲೋಕ ಅಥವಾ ಅರ್ಧ ಶ್ಲೋಕ ಹೇಳುವವನು ತತ್ ಕ್ಷಣ ಕೋಟಿ ಉಪಪಾತಕಗಳಿಂದ ಬಿಡುಗಡೆ ಹೊಂದುವನು. ಇದು ಗುಹ್ಯಾತಿಗುಹ್ಯವಸ್ತು ಆಗಿದೆ. ಇದನ್ನು ಸತ್ಪುರುಷರೂ ಕೇಳಬೇಕು.॥39-40॥

ಮೂಲಮ್ - 41½

ವಾಚಯೇದ್ ರಾಮಭವನೇ ಪುಣ್ಯಕ್ಷೇತ್ರೇ ಚ ಸಂಸದೀ ।
ಬ್ರಹ್ಮದ್ವೇಷರತಾನಾಂ ಚ ದಂಭಾಚಾರರತಾತ್ಮನಾಮ್ ॥
ಲೋಕವಂಚಕವೃತ್ತೀನಾಂ ನ ಬ್ರೂಯಾದಿದಮುತ್ತಮಮ್ ।

ಅನುವಾದ

ಭಗವಾನ್ ಶ್ರೀರಾಮನ ಮಂದಿರದಲ್ಲಿ ಅಥವಾ ಯಾವುದೇ ಪುಣ್ಯಕ್ಷೇತ್ರದಲ್ಲಿ ಸತ್ಪುರುಷರ ಸಭೆಯಲ್ಲಿ ರಾಮಾಯಣ ಕಥೆಯನ್ನು ಪ್ರವಚನ ಮಾಡಬೇಕು. ಬ್ರಹ್ಮದ್ರೋಹಿಯಾದವನು, ಡಂಭಾಚಾರ ಉಳ್ಳವನು, ಜನರನ್ನು ವಂಚಿಸುವವನು. ಇವರಿಗೆ ಈ ಪರಮೋತ್ತಮ ಕಥೆಯನ್ನು ಹೇಳಬಾರದು.॥41½॥

ಮೂಲಮ್ - 42½

ತ್ಯಕ್ತಕಾಮಾದಿದೋಷಾಣಾಂ ರಾಮಭಕ್ತಿರತಾತ್ಮನಾಮ್ ॥
ಗುರುಭಕ್ತಿರತಾನಾಂ ಚ ವಕ್ತವ್ಯಂ ಮೋಕ್ಷಸಾಧನಮ್ ।

ಅನುವಾದ

ಕಾಮಾದಿ ದೋಷಗಳನ್ನು ತ್ಯಜಿಸಿದವನು, ರಾಮನ ಭಕ್ತಿಯಲ್ಲಿ ಮನಸ್ಸು ಅನುರಕ್ತವಾಗಿರುವವನು, ಗುರು-ಹಿರಿಯರ ಸೇವೆಯಲ್ಲಿ ತತ್ಪರನು, ಇಂತಹವರ ಮುಂದೆ ಈ ಮೋಕ್ಷಸಾಧನವಾದ ಕಥೆಯನ್ನು ಹೇಳಬೇಕು.॥42½॥

ಮೂಲಮ್ - 43½

ಸರ್ವದೇವಮಯೋ ರಾಮಃ ಸ್ಮೃತಶ್ಚಾರ್ತ್ತಿಪ್ರಣಾಶನಃ ॥
ಸದ್ಭಕ್ತವತ್ಸಲೋ ದೇವೋ ಭಕ್ತ್ಯಾ ತುಷ್ಯತಿ ನಾನ್ಯಥಾ ।

ಅನುವಾದ

ಶ್ರೀರಾಮನು ಸರ್ವದೇವಮಯನಾಗಿರುವನು. ಅವನು ಆರ್ತ ಪ್ರಾಣಿಗಳ ದುಃಖವನ್ನು ನಾಶಮಾಡುವವನೂ, ಶ್ರೇಷ್ಠಭಕ್ತರ ಮೇಲೆ ಸದಾ ಸ್ನೇಹವಿರಿಸುವವನೂ ಆಗಿರುವನು. ಆ ಭಗವಂತನು ಭಕ್ತಿಯಿಂದಲೇ ಸಂತುಷ್ಟನಾಗುವನು. ಇತರ ಯಾವುದೇ ಉಪಾಯಗಳಿಂದ ಅಲ್ಲ.॥43½॥

ಮೂಲಮ್ - 44½

ಅವಶೇನಾಪಿ ಯನ್ನಾಮ್ನಿ ಕೀರ್ತಿತೇ ವಾ ಸ್ಮೃತೇಽಪಿ ವಾ ॥
ವಿಮುಕ್ತಪಾತಕಃ ಸೋಽಪಿ ಪರಮಂ ಪದಮಶ್ನುತೇ ।

ಅನುವಾದ

ಮನುಷ್ಯನು ವಿವಶನಾಗಿದ್ದರೂ ಅವನ ನಾಮವನ್ನು ಕೀರ್ತಿಸಿದರೆ ಅಥವಾ ಸ್ಮರಿಸಿದರೆ ಸಮಸ್ತ ಪಾತಕಗಳಿಂದ ಮುಕ್ತನಾಗಿ ಪರಮ ಪದಕ್ಕೆ ಭಾಗಿಯಾಗುತ್ತಾನೆ.॥44½॥

ಮೂಲಮ್ - 45½

ಸಂಸಾರಘೋರಕಾಂತಾರದಾವಾಗ್ನಿರ್ಮಧುಸೂದನಃ ॥
ಸ್ಮರ್ತೄಣಾಂ ಸರ್ವಪಾಪಾನಿ ನಾಶಯತ್ಯಾಶು ಸತ್ತಮಾಃ ।

ಅನುವಾದ

ಮಹಾತ್ಮರೇ! ಭಗವಾನ್ ಮಧುಸೂದನನು ಸಂಸಾರರೂಪೀ ಭಯಂಕರ, ದುರ್ಗಮ ಕಾಡನ್ನು ಸುಟ್ಟು ಹಾಕಲು ದಾವಾಗ್ನಿಯಂತಿರುವನು. ತನ್ನನ್ನು ಸ್ಮರಿಸುವವರ ಸಮಸ್ತ ಪಾಪಗಳನ್ನು ಬೇಗನೇ ನಾಶಮಾಡಿಬಿಡುತ್ತಾನೆ.॥45½॥

ಮೂಲಮ್ - 46½

ತದಾರ್ಥಕಮಿದಂ ಪುಣ್ಯಂ ಕಾವ್ಯಂ ಶ್ರಾವ್ಯಮನುತ್ತಮಮ್ ॥
ಶ್ರವಣಾತ್ ಪಾಠನಾದ್ ವಾಪಿ ಸರ್ವಪಾಪವಿನಾಶಕೃತ್ ।

ಅನುವಾದ

ಈ ಪವಿತ್ರ ಕಾವ್ಯದ ಪ್ರತಿಪಾದ್ಯ ವಿಷಯ ಅವನೇ ಆಗಿರುವನು. ಆದ್ದರಿಂದ ಈ ಪರಮೋತ್ತಮ ಕಾವ್ಯವನ್ನು ಸದಾ ಕಾಲ ಶ್ರವಣಿಸಲು ಯೋಗ್ಯವಾಗಿದೆ. ಇದರ ಶ್ರವಣ-ಪಾರಾಯಣದಿಂದ ಸಮಸ್ತ ಪಾಪಗಳು ನಾಶವಾಗುತ್ತವೆ.॥46½॥

ಮೂಲಮ್ - 47½

ಯಸ್ಯ ರಾಮರಸೇ ಪ್ರೀತಿರ್ವರ್ತತೇ ಭಕ್ತಿಸಂಯುತಾ ॥
ಸ ಏವ ಕೃತಕೃತ್ಯಶ್ಚ ಸರ್ವಶಾಸ್ತ್ರಾರ್ಥಕೋವಿದಃ ।

ಅನುವಾದ

ಶ್ರೀರಾಮ-ರಸದಲ್ಲಿ ಭಕ್ತಿ-ಪ್ರೀತಿ ಇರುವವನು ಸಮಸ್ತ ಶಾಸ್ತ್ರಗಳ ಅರ್ಥಜ್ಞಾನದಲ್ಲಿ ನಿಪುಣನಾಗಿದ್ದು, ಕೃತಕೃತ್ಯನಾಗಿರುವನು.॥47½॥

ಮೂಲಮ್ - 48½

ತದರ್ಜಿತಂ ತಪಃ ಪುಣ್ಯಂ ತತ್ಸತ್ಯಂ ಸಫಲಂ ದ್ವಿಜಾಃ ॥
ಯದರ್ಥಶ್ರವಣೇ ಪ್ರೀತಿರನ್ಯಥಾ ನ ಹಿ ವರ್ತತೇ ।

ಅನುವಾದ

ಬ್ರಾಹ್ಮಣರೇ! ಅವನು ಗಳಿಸಿದ ತಪಸ್ಸು ಪವಿತ್ರ, ಸತ್ಯ ಮತ್ತು ಸಫಲವಾಗಿದೆ. ಏಕೆಂದರೆ ರಾಮರಸದಲ್ಲಿ ಪ್ರೀತಿ ಉಂಟಾಗದೆ ರಾಮಾಯಣದ ಅರ್ಥಶ್ರವಣದಲ್ಲಿ ಪ್ರೇಮ ಉಂಟಾಗುವುದಿಲ್ಲ.॥48½॥

ಮೂಲಮ್ - 49½

ರಾಮಾಯಣಪರಾ ಯೇ ತು ರಾಮನಾಮಪರಾಯಣಾಃ ॥
ತ ಏವ ಕೃತಕೃತ್ಯಾಶ್ಚ ಘೋರೇ ಕಲಿಯುಗೇ ದ್ವಿಜಾಃ ।

ಅನುವಾದ

ಈ ಭಯಂಕರ ಕಲಿಕಾಲದಲ್ಲಿ ರಾಮಾಯಣ ಹಾಗೂ ಶ್ರೀರಾಮನಾಮವನ್ನು ಆಶ್ರಯಿಸುವವನೇ ಕೃತಕೃತ್ಯನಾಗಿದ್ದಾನೆ.॥49½॥

ಮೂಲಮ್ - 50½

ನವಾಹ್ನಾ ಕಿಲ ಶ್ರೋತವ್ಯಂ ರಾಮಾಯಣಕಥಾಮೃತಮ್ ॥
ತೇ ಕೃತಜ್ಞಾ ಮಹಾತ್ಮಾನಸ್ತೇಭ್ಯೋ ನಿತ್ಯಂ ನಮೋ ನಮಃ ।

ಅನುವಾದ

ರಾಮಾಯಣದ ಈ ಅಮೃತಮಯ ಕಥೆಯನ್ನು ನವಾಹ ಶ್ರವಣಮಾಡಬೇಕು. ಹೀಗೆ ಮಾಡುವ ಮಹಾತ್ಮನು ಕೃತಜ್ಞನಾಗಿದ್ದಾನೆ. ಅಂತಹವನಿಗೆ ಪ್ರತಿದಿನ ನನ್ನ ನಮಸ್ಕಾರಗಳು.॥50½॥

ಮೂಲಮ್ - 51½

ರಾಮನಾಮೈವ ನಾಮೈವ ನಾಮೈವ ಮಮ ಜೀವನಮ್ ॥
ಕಲೌ ನಾಸ್ತ್ಯೇವ ನಾಸ್ತ್ಯೇವ ನಾಸ್ತ್ಯೇವ ಗತಿರನ್ಯಥಾ ।

ಅನುವಾದ

ಶ್ರೀರಾಮನ ನಾಮ, ಕೇವಲ ಶ್ರೀರಾಮನಾಮವೇ ನನ್ನ ಜೀವನವಾಗಿದ್ದು, ಕಲಿಯುಗದಲ್ಲಿ ಬೇರೆ ಯಾವುದೇ ಉಪಾಯದಿಂದ ಜೀವಿಗಳಿಗೆ ಸದ್ಗತಿ ಆಗುವುದಿಲ್ಲ ಎಂಬುದು ತ್ರಿವಾರ ಸತ್ಯ.॥51½॥

ಮೂಲಮ್ - 52½ (ವಾಚನಮ್)

ಸೂತ ಉವಾಚ

ಮೂಲಮ್

ಏವಂ ಸನತ್ಕುಮಾರಸ್ತು ನಾರದೇನ ಮಹಾತ್ಮನಾ ॥
ಸಮ್ಯಕ್ ಪ್ರಬೋಧಿತಃ ಸದ್ಯಃ ಪರಾಂ ನಿರ್ವೃತಿಮಾಪ ಹ ।

ಅನುವಾದ

ಸೂತಪುರಾಣಿಕರು ಹೇಳುತ್ತಾರೆ - ಮಹಾತ್ಮಾ ನಾರದರಿಂದ ಈ ಪ್ರಕಾರ ಉಪದೇಶ ಪಡೆದು ಸನತ್ಕುಮಾರರಿಗೆ ತತ್ ಕ್ಷಣ ಪರಮಾನಂದ ಪ್ರಾಪ್ತಿಯಾಯಿತು.॥52½॥

ಮೂಲಮ್ - 53½

ತಸ್ಮಾತ್ ಶುಣುಧ್ವಂ ವಿಪ್ರೇಂದ್ರಾ ರಾಮಾಯಣ ಕಥಾಮೃತಮ್ ॥
ನವಾಹ್ನಾ ಕಿಲ ಶ್ರೋತವ್ಯಂ ಸರ್ವಪಾಪೈಃ ಪ್ರಮುಚ್ಯತೇ ।

ಅನುವಾದ

ವಿಪ್ರರೇ! ಆದ್ದರಿಂದ ನೀವೆಲ್ಲರೂ ರಾಮಾಯಣದ ಅಮೃತಮಯ ಕಥೆಯನ್ನು ಕೇಳಿರಿ. ರಾಮಾಯಣವನ್ನು ಒಂಭತ್ತು ದಿನಗಳಲ್ಲೇ ಕೇಳಬೇಕು. ಹೀಗೆ ಮಾಡುವವನು ಸಮಸ್ತ ಪಾಪಗಳಿಂದ ಮುಕ್ತನಾಗುತ್ತಾನೆ.॥53½॥

ಮೂಲಮ್ - 54½

ಶ್ರುತ್ವಾ ಚೈತನ್ಮಹಾಕಾವ್ಯಂ ವಾಚಕಂ ಯಸ್ತು ಪೂಜಯೇತ್ ॥
ತಸ್ಯ ವಿಷ್ಣುಃ ಪ್ರಸನ್ನಃ ಸ್ಯಾಚ್ಛ್ರಿಯಾ ಸಹ ದ್ವಿಜೋತ್ತಮಾಃ ।

ಅನುವಾದ

ದ್ವಿಜೋತ್ತಮರೇ! ಈ ಮಹಾಕಾವ್ಯವನ್ನು ಕೇಳಿ, ಓದುವವರ ಮೇಲೆ, ಪೂಜೆ ಮಾಡುವವರ ಮೇಲೆ ಲಕ್ಷ್ಮೀ ಸಹಿತ ಭಗವಾನ್ ವಿಷ್ಣು ಪ್ರಸನ್ನನಾಗುತ್ತಾನೆ.॥54½॥

ಮೂಲಮ್ - 55½

ವಾಚಕೇ ಪ್ರೀತಿಮಾಪನ್ನೇ ಬ್ರಹ್ಮವಿಷ್ಣುಮಹೇಶ್ವರಾಃ ॥
ಪ್ರೀತಾ ಭವಂತಿ ವಿಪ್ರೇಂದ್ರಾ ನಾತ್ರ ಕಾರ್ಯಾ ವಿಚಾರಣಾ ।

ಅನುವಾದ

ವಿಪ್ರೇಂದ್ರ! ಕಥೆ ಓದುವವರು ಪ್ರಸನ್ನಗೊಂಡರೆ ಬ್ರಹ್ಮ, ವಿಷ್ಣು, ಮಹೇಶ್ವರರು ಪ್ರಸನ್ನರಾಗುತ್ತಾರೆ. ಈ ವಿಷಯದಲ್ಲಿ ಯಾವ ವಿಚಾರವನ್ನೂ ಮಾಡಬಾರದು.॥55½॥

ಮೂಲಮ್ - 56½

ರಾಮಾಯಣವಾಚಕಾಯ ಗಾವೋ ವಾಸಾಂಸಿ ಕಾಂಚನಮ್ ॥
ರಾಮಾಯಣಪುಸ್ತಕಂ ಚ ದದ್ಯಾದ್ ವಿತ್ತಾನುಸಾರತಃ ।

ಅನುವಾದ

ರಾಮಾಯಣ ಓದುವವನಿಗೆ ತನ್ನ ವೈಭವಕ್ಕನುಸಾರವಾಗಿ ಗೋವು, ವಸ್ತ್ರ, ಸುವರ್ಣ ಹಾಗೂ ರಾಮಾಯಣದ ಪುಸ್ತಕ ಮೊದಲಾದ ವಸ್ತುಗಳನ್ನು ಕೊಡಬೇಕು.॥56½॥

ಮೂಲಮ್ - 57

ತಸ್ಯ ಪುಣ್ಯಫಲಂ ವಕ್ಷ್ಯೇ ಶೃಣುಧ್ವಂ ಸುಸಮಾಹಿತಾಃ ॥

ಮೂಲಮ್ - 58

ನ ಬಾಧಂತೇ ಗ್ರಹಾಸ್ತಸ್ಯ ಭೂತವೇತಾಲಕಾದಯಃ ।
ತಸ್ಯೈವ ಸರ್ವಶ್ರೇಯಾಂಸಿ ವರ್ಧಂತೇ ಚರಿತೇ ಶ್ರುತೇ ॥

ಅನುವಾದ

ಆ ದಾನದ ಪುಣ್ಯಫಲವನ್ನು ಹೇಳುವೆನು, ತಾವು ಏಕಾಗ್ರಚಿತ್ತರಾಗಿ ಕೇಳಿರಿ. ಆ ದಾನಿಗೆ ಗ್ರಹ-ಭೂತ-ಪ್ರೇತಾದಿಗಳು ಎಂದೂ ಬಾಧಿಸುವುದಿಲ್ಲ. ಶ್ರೀರಾಮ ಚರಿತ್ರೆಯ ಶ್ರವಣ ಮಾಡುವವರ ಎಲ್ಲ ಶ್ರೇಯಗಳು ವೃದ್ಧಿಯಾಗುವುವು.॥57-58॥

ಮೂಲಮ್ - 59½

ನ ಚಾಗ್ನಿರ್ಬಾಧತೇ ತಸ್ಯ ನ ಚೌರಾದಿಭಯಂ ತಥಾ ।
ಏತಜ್ಜನ್ಮಾರ್ಜಿತೈಃ ಪಾಪೈಃ ಸದ್ಯ ಏವ ವಿಮುಚ್ಯತೇ ॥
ಸಪ್ತವಂಶಸಮೇತಸ್ತು ದೇಹಾಂತೇ ಮೋಕ್ಷಮಾಪ್ನುಯಾತ್ ।

ಅನುವಾದ

ಅವನಿಗೆ ಅಗ್ನಿಯ ಬಾಧೆ, ಕಳ್ಳರ ಕಾಟ ಇರುವುದಿಲ್ಲ. ಅವನು ಈ ಜನ್ಮದಲ್ಲಿ ಗಳಿಸಿದ ಎಲ್ಲ ಪಾಪಗಳಿಂದ ತತ್ಕಾಲದಲ್ಲಿ ಮುಕ್ತನಾಗುತ್ತಾನೆ. ಅವನು ಮೃತನಾಗಿ ತನ್ನ ಏಳು ತಲೆಮಾರು ಸಹಿತ ಮೋಕ್ಷಕ್ಕೆ ಭಾಗಿಯಾಗುತ್ತಾನೆ.॥59½॥

ಮೂಲಮ್ - 60½

ಇತ್ಯೇತದ್ವಃ ಸಮಾಖ್ಯಾತಂ ನಾರದೇನ ಪ್ರಭಾಷಿತಮ್ ॥
ಸನತ್ಕುಮಾರಮುನಯೇ ಪೃಚ್ಛತೇ ಭಕ್ತಿತಃ ಪುರಾ ।

ಅನುವಾದ

ಹಿಂದಿನ ಕಾಲದಲ್ಲಿ ಸನತ್ಕುಮಾರರು ಭಕ್ತಿಯಿಂದ ಕೇಳಿದಾಗ, ನಾರದರು ಹೇಳಿದುದೆಲ್ಲವನ್ನು ನಾನು ನಿಮಗೆ ತಿಳಿಸಿರುವೆನು.॥60½॥

ಮೂಲಮ್ - 61

ರಾಮಾಯಣಮಾದಿಕಾವ್ಯಂ ಸರ್ವವೇದಾರ್ಥಸಮ್ಮತಮ್ ॥

ಮೂಲಮ್ - 62

ಸರ್ವಪಾಪಹರಂ ಪುಣ್ಯಂ ಸರ್ವದುಃಖನಿಬರ್ಹಣಮ್ ।
ಸಮಸ್ತಪುಣ್ಯಫಲದಂ ಸರ್ವಯಜ್ಞಫಲಪ್ರದಮ್ ॥

ಅನುವಾದ

ರಾಮಾಯಣವು ಆದಿಕಾವ್ಯವಾಗಿದೆ. ಇದು ಸಮಸ್ತ ವೇದಾರ್ಥ ಸಮ್ಮತವಾಗಿದೆ. ಇದರಿಂದ ಎಲ್ಲ ಪಾಪಗಳ ನಿವಾರಣೆ ಆಗುತ್ತದೆ. ಈ ಪುಣ್ಯಮಯ ಕಾವ್ಯವು ಸಂಪೂರ್ಣ ದುಃಖಗಳ ವಿನಾಶ ಮಾಡಿ ಸಮಸ್ತ ಪುಣ್ಯಗಳನ್ನು ಮತ್ತು ಎಲ್ಲ ಯಜ್ಞಗಳ ಫಲವನ್ನು ಕೊಡುವುದಾಗಿದೆ.॥61-62॥

ಮೂಲಮ್ - 63

ಯೇ ಪಠಂತ್ಯತ್ರ ವಿಬುಧಾಃ ಶ್ಲೋಕಂ ಶ್ಲೋಕಾರ್ದ್ಧಮೇವ ಚ ।
ನ ತೇಷಾಂ ಪಾಪಬಂಧಸ್ತು ಕದಾಚಿದಪಿ ಜಾಯತೇ ॥

ಅನುವಾದ

ಇದರ ಒಂದು ಅಥವಾ ಅರ್ಧ ಶ್ಲೋಕವನ್ನಾದರೂ ಪಠಿಸುವ ವಿದ್ವಾಂಸನನ್ನು ಎಂದೂ ಪಾಪಗಳು ಬಂಧಿಸಲಾರವು.॥63॥

ಮೂಲಮ್ - 64

ರಾಮಾರ್ಪಿತಮಿದಂ ಪುಣ್ಯಂ ಕಾವ್ಯಂ ತು ಸರ್ವಕಾಮದಮ್ ।
ಭಕ್ತ್ಯಾ ಶೃಣ್ವಂತಿ ವಿದಂತಿ ತೇಷಾಂ ಪುಣ್ಯಫಲಂ ಶೃಣು ॥

ಅನುವಾದ

ಶ್ರೀರಾಮನಿಗೆ ಸಮರ್ಪಿತವಾದ ಈ ಪುಣ್ಯ ಕಾವ್ಯವು ಸಮಸ್ತ ಕಾಮನೆಗಳನ್ನು ಕೊಡುವುದಾಗಿದೆ. ಭಕ್ತಿಪೂರ್ವಕ ಇದನ್ನು ಕೇಳುವ ತಿಳಿಯುವ ಜನರಿಗೆ ದೊರೆಯುವ ಪುಣ್ಯ ಫಲದ ವರ್ಣನೆಯನ್ನು ಕೇಳಿರಿ.॥64॥

ಮೂಲಮ್ - 65

ಶತಜನ್ಮಾರ್ಜಿತೈಃ ಪಾಪೈಃ ಸದ್ಯ ಏವ ವಿಮೋಚಿತಾಃ ।
ಸಹಸ್ರಕುಲಸಂಯುಕ್ತೈಃ ಪ್ರಯಾಂತಿ ಪರಮಂ ಪದಮ್ ॥

ಅನುವಾದ

ಅವರು ನೂರು ಜನ್ಮಗಳಲ್ಲಿ ಗಳಿಸಿದ ಪಾಪಗಳಿಂದ ತತ್ಕಾಲ ಮುಕ್ತರಾಗಿ, ತಮ್ಮ ಸಾವಿರಾರು ತಲೆಮಾರುಗಳೊಂದಿಗೆ ಪರಮಪದವನ್ನು ಪಡೆದುಕೊಳ್ಳುವರು.॥65॥

ಮೂಲಮ್ - 66

ಕಿಂ ತಿರ್ಥೈರ್ಗೋಪ್ರದಾನೈರ್ವಾ ಕಿಂ ತಪೋಭಿಃ ಕಿಮಧ್ವರೈಃ ।
ಅಹನ್ಯಹನಿ ರಾಮಸ್ಯ ಕೀರ್ತನಂ ಪರಿಶೃಣ್ವತಾಮ್ ॥

ಅನುವಾದ

ಪ್ರತಿದಿನ ಶ್ರೀರಾಮನ ಕೀರ್ತನೆ ಕೇಳುವವನಿಗೆ ತೀರ್ಥ ಸೇವನೆ, ಗೋದಾನ, ತಪಸ್ಸು, ಯಜ್ಞಗಳ ಅವಶ್ಯಕತೆ ಏನಿದೆ?॥66॥

ಮೂಲಮ್ - 67

ಚೈತ್ರೇ ಮಾಘೇ ಕಾರ್ತಿಕೇ ಚ ರಾಮಾಯಣ ಕಥಾಮೃತಮ್ ।
ನವೈರಹೋಭಿಃ ಶ್ರೋತವ್ಯಂ ರಾಮಾಯಣ ಕಥಾಮೃತಮ್ ॥

ಅನುವಾದ

ಚೈತ್ರ, ಮಾಘ, ಕಾರ್ತಿಕಗಳಲ್ಲಿ ರಾಮಾಯಣದ ಅಮೃತಮಯ ಕಥೆಯನ್ನು ನವಾಹ ಪಾರಾಯಣವಾಗಿ ಕೇಳಬೇಕು.॥67॥

ಮೂಲಮ್ - 68

ರಾಮಪ್ರಸಾದಜನಕಂ ರಾಮಾಭಕ್ತಿವಿವರ್ಧನಮ್ ।
ಸರ್ವಪಾಪಕ್ಷಯಕರಂ ಸರ್ವಸಂಪದ್ವಿವರ್ದ್ಧನಮ್ ॥

ಅನುವಾದ

ರಾಮಾಯಣವು ಶ್ರೀರಾಮಚಂದ್ರನ ಪ್ರಸನ್ನತೆ ದೊರಕಿಸುತ್ತದೆ. ಶ್ರೀರಾಮಭಕ್ತಿಯನ್ನು ಹೆಚ್ಚಿಸುವುದು ಸಮಸ್ತ ಪಾಪಗಳ ವಿನಾಶಕ ಹಾಗೂ ಎಲ್ಲ ಸಂಪತ್ತುಗಳನ್ನು ವೃದ್ಧಿಗೊಳಿಸುವುದು.॥68॥

ಮೂಲಮ್ - 69

ಯಸ್ತ್ವೇತತ್ ಶ್ರುಣುಯಾದ್ ವಾಪಿ ಪಠತೇ ವಾ ಸುಸಮಾಹಿತಃ ।
ಸರ್ವಪಾಪವಿನಿರ್ಮುಕ್ತೋ ವಿಷ್ಣುಲೋಕಂ ಸ ಗಚ್ಛತಿ ॥

ಅನುವಾದ

ಏಕಾಗ್ರಚಿತ್ತನಾಗಿ ರಾಮಾಯಣವನ್ನು ಕೇಳುವವನು, ಓದುವವನು ಎಲ್ಲ ಪಾಪಗಳಿಂದ ಮುಕ್ತನಾಗಿ ಭಗವಾನ್ ವಿಷ್ಣುವಿನ ಲೋಕಕ್ಕೆ ಹೋಗುತ್ತಾನೆ.॥69॥

ಮೂಲಮ್ (ಸಮಾಪ್ತಿಃ)

ಶ್ರೀಸ್ಕಂದ ಪುರಾಣದ ಉತ್ತರಖಂಡದಲ್ಲಿನ ಶ್ರೀನಾರದ ಸನತ್ಕುಮಾರ ಸಂವಾದದಲ್ಲಿ ರಾಮಾಯಣ ಮಾಹಾತ್ಮ್ಯದಲ್ಲಿ ಫಲದ ವರ್ಣನೆ ಎಂಬ ಐದನೆಯ ಅಧ್ಯಾಯ ಪೂರ್ಣವಾಯಿತು.॥5॥