೦೪ ನಾಲ್ಕನೆಯ ಅಧ್ಯಾಯ

ಭಾಗಸೂಚನಾ

ಚೈತ್ರಮಾಸದಲ್ಲಿ ರಾಮಾಯಣದ ಪಾರಾಯಣೆ ಹಾಗೂ ಶ್ರವಣದ ಮಾಹಾತ್ಮ್ಯೆ, ಕಲಿಕ ಎಂಬ ವ್ಯಾಧ ಮತ್ತು ಉತ್ತಂಕ ಮುನಿಯ ಕಥೆ

ಮೂಲಮ್ - 1 (ವಾಚನಮ್)

ನಾರದ ಉವಾಚ

ಮೂಲಮ್

ಅನ್ಯಮಾಸಂ ಪ್ರವಕ್ಷ್ಯಾಮಿ ಶೃಣುಧ್ವಂ ಸುಸಮಾಹಿತಾಃ ।
ಸರ್ವಪಾಪಹರಂ ಪುಣ್ಯಂ ಸರ್ವದುಃಖನಿಬರ್ಹಣಮ್ ॥

ಮೂಲಮ್ - 2

ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚೈವ ಯೋಷಿತಾಮ್ ।
ಸಮಸ್ತಕಾಮಫಲದಂ ಸರ್ವವ್ರತಫಲಪ್ರದಮ್ ॥

ಮೂಲಮ್ - 3

ದುಃಸ್ವಪ್ನನಾಶನಂ ಧನ್ಯಂ ಭುಕ್ತಿಮುಕ್ತಿಫಲಪ್ರದಮ್ ।
ರಾಮಾಯಣಸ್ಯ ಮಾಹಾತ್ಮ್ಯಂ ಶ್ರೋತವ್ಯಂ ಚ ಪ್ರಯತ್ನತಃ ॥

ಅನುವಾದ

ನಾರದರು ಹೇಳುತ್ತಾರೆ - ಮಹರ್ಷಿಗಳೇ! ಈ ರಾಮಾಯಣದ ಪಾರಾಯಣೆ ಮತ್ತು ಶ್ರವಣಕ್ಕೆ ಯೋಗ್ಯವಾದ ಇನ್ನೊಂದು ಮಾಸವನ್ನು ವರ್ಣಿಸುವೆನು. ಏಕಾಗ್ರತೆಯಿಂದ ಕೇಳಿರಿ. ರಾಮಾಯಣದ ಮಾಹಾತ್ಮ್ಯೆಯು ಸಮಸ್ತ ಪಾಪಗಳನ್ನು ಕಳೆಯುವಂತಹುದು. ಎಲ್ಲ ದುಃಖಗಳನ್ನು ನಿವಾರಣೆ ಮಾಡುವಂತಹದೂ ಆಗಿದೆ. ಇದು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಹಾಗೂ ಸ್ತ್ರೀಯರು ಹೀಗೆ ಇವರೆಲ್ಲರಿಗೆ ಬಯಸಿದ ಫಲವನ್ನು ಕೊಡುವುದು. ಆದ್ದರಿಂದ ಎಲ್ಲ ವ್ರತಗಳ ಫಲಗಳೂ ಪ್ರಾಪ್ತಿಯಾಗುತ್ತದೆ. ಅದು ದುಃಸ್ವಪ್ನನಾಶಕವೂ, ಧನದ ಪ್ರಾಪ್ತಿಯಾಗುವುದು. ಭೋಗ ಮತ್ತು ಮೋಕ್ಷರೂಪೀ ಫಲವನ್ನು ನೀಡುವುದೂ ಆಗಿದೆ. ಆದ್ದರಿಂದ ಅದನ್ನು ಪ್ರಯತ್ನಪೂರ್ವಕವಾಗಿ ಕೇಳಬೇಕು.॥1-3॥

ಮೂಲಮ್ - 4

ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್ ।
ಪಠತಾಂ ಶೃಣ್ವತಾಂ ಚೈವ ಸರ್ವಪಾಪಪ್ರಣಾಶನಮ್ ॥

ಅನುವಾದ

ಈ ವಿಷಯದಲ್ಲಿ ಜ್ಞಾನಿಗಳು ಒಂದು ಪ್ರಾಚೀನ ಇತಿಹಾಸವನ್ನು ಉದಾಹರಿಸುತ್ತಾರೆ. ಆ ಇತಿಹಾಸವು ಓದುವವರ, ಕೇಳುವವರ ಎಲ್ಲ ಪಾಪಗಳನ್ನು ನಾಶಮಾಡುವಂತಹುದು.॥4॥

ಮೂಲಮ್ - 5

ಆಸೀತ್ ಪುರಾ ಕಲಿಯುಗೇ ಕಲಿಕೋ ನಾಮ ಲುಬ್ಧಕಃ ।
ಪರದಾರಪರದ್ರವ್ಯಹರಣೇ ಸತತಂ ರತಃ ॥

ಅನುವಾದ

ಪ್ರಾಚೀನ ಕಲಿಯುಗದಲ್ಲಿ ಒಬ್ಬ ಕಲಿಕ ಎಂಬ ವ್ಯಾಧನು ಇದ್ದನು. ಅವನು ಸದಾ ಪರನಾರಿ ಮತ್ತು ಪರದ್ರವ್ಯವನ್ನು ಅಪಹರಣದಲ್ಲೇ ತೊಡಗಿರುತ್ತಿದ್ದನು.॥5॥

ಮೂಲಮ್ - 6

ಪರನಿಂದಾಪರೋ ನಿತ್ಯಂ ಜಂತುಪೀಡಾಕರಸ್ತಥಾ ।
ಹತವಾನ್ ಬ್ರಾಹ್ಮಣಾನ್ ಗಾವಃ ಶತಶೋಽಥ ಸಹಸ್ರಶಃ ॥

ಅನುವಾದ

ಬೇರೆಯವರನ್ನು ನಿಂದಿಸುವುದು, ಎಲ್ಲ ಪ್ರಾಣಿಗಳನ್ನು ಪೀಡಿಸುವುದು ಅವನ ನಿತ್ಯದ ಕೆಲಸವಾಗಿತ್ತು. ಅವನು ಎಷ್ಟೋ ಬ್ರಾಹ್ಮಣರನ್ನು, ನೂರಾರು ಸಾವಿರ ಗೋವುಗಳನ್ನು ಕೊಂದುಹಾಕಿದ್ದನು.॥6॥

ಮೂಲಮ್ - 7

ದೇವಸ್ವಹರಣೇ ನಿತ್ಯಂ ಪರಸ್ವಹರಣೇ ತಥಾ ।
ತೇನ ಪಾಪಾನ್ಯನೇಕಾನಿ ಕೃತಾನಿ ಸುಮಹಾಂತಿ ಚ ॥

ಅನುವಾದ

ಪರಧನವನ್ನು ಅಪಹರಿಸುವುದಲ್ಲದೆ ದೇವರ ಹಣವನ್ನು ದೋಚುತ್ತಿದ್ದನು. ಅವನು ತನ್ನ ಜೀವನದಲ್ಲಿ ಅನೇಕ ದೊಡ್ಡ-ದೊಡ್ಡ ಪಾಪಗಳನ್ನು ಮಾಡಿದ್ದನು.॥7॥

ಮೂಲಮ್ - 8

ನ ತೇಷಾಂ ಶಕ್ಯತೋ ವಕ್ತುಂ ಸಂಖ್ಯಾ ವತ್ಸರಕೋಟಿಭಿಃ ।
ಸ ಕದಾಚಿನ್ಮಹಾಪಾಪೋ ಜಂತೂನಾಮಂತಕೋಪಮಃ ॥

ಮೂಲಮ್ - 9½

ಸೌವೀರನಗರಂ ಪ್ರಾಪ್ತಃ ಸರ್ವೈಶ್ವರ್ಯಸಮನ್ವಿತಮ್ ।
ಯೋಷಿದ್ ಭಿರ್ಭೂಷಿತಾಭಿಶ್ಚ ಸರೋಭಿರ್ವಿಮಲೋದಕೈಃ ॥
ಅಲಂಕೃತಂ ವಿಪಣಿಭಿರ್ಯಯೌ ದೇವಪುರೋಪಮಮ್ ।

ಅನುವಾದ

ಅವನ ಪಾಪಗಳನ್ನು ಕೋಟಿ ವರ್ಷಗಳಲ್ಲಿಯೂ ಎಣಿಸಲಾಗುತ್ತಿರಲಿಲ್ಲ. ಒಮ್ಮೆ ಜೀವ-ಜಂತುಗಳಿಗೆ ಯಮನಂತಿದ್ದ ಭಯಂಕರ, ಆ ಮಹಾಪಾಪಿ ವ್ಯಾಧನು ಸೌವೀರ ನಗರಕ್ಕೆ ಹೋದನು. ಆ ನಗರವು ಎಲ್ಲ ಪ್ರಕಾರದ ವೈಭವ ಸಂಪನ್ನವೂ, ವಸ್ತ್ರಾಭೂಷಣಗಳಿಂದ ವಿಭೂಷಿತವೂ, ಯುವತಿಯರಿಂದ ಸುಶೋಭಿತವೂ, ತಿಳಿನೀರಿನ ಸರೋವರದಿಂದ ಅಲಂಕೃತವೂ, ಬಗೆ-ಬಗೆಯ ಅಂಗಡಿಗಳಿಂದ ಸುಸಜ್ಜಿತವೂ ಆಗಿತ್ತು. ದೇವನಗರದಂತೆ ಶೋಭಿಸುವ ಆ ನಗರಕ್ಕೆ ಈ ವ್ಯಾಧನು ಹೋದನು.॥8-9½॥

ಮೂಲಮ್ - 10

ತಸ್ಯೋಪವನಮಧ್ಯಸ್ಥಂ ರಮ್ಯಂ ಕೇಶವಮಂದಿರಮ್ ॥

ಮೂಲಮ್ - 11

ಛಾದಿತಂ ಹೇಮಕಲಶೈರ್ದೃಷ್ಟ್ವಾ ವ್ಯಾಧೋ ಮುದಂ ಯಯೌ ।
ಹರಾಮ್ಯತ್ರ ಸುವರ್ಣಾನಿ ಬಹೂನೀತಿ ವಿನಿಶ್ಚಿತಃ ॥

ಅನುವಾದ

ಸೌವೀರ ನಗರದ ಉಪವನದಲ್ಲಿ ಭಗವಾನ್ ಕೇಶವನ (ರಾಮನ) ಸುಂದರ ಮಂದಿರವಿತ್ತು. ಅದರ ಕಲಶಗಳನ್ನು ಚಿನ್ನದಿಂದ ಮುಚ್ಚಿದ್ದರು. ಅದನ್ನು ನೋಡಿ ಕಲಿಕ ವ್ಯಾಧನಿಗೆ ಬಹಳ ಸಂತೋಷವಾಯಿತು. ನಾನು ಇಲ್ಲಿಂದ ಬಹಳಷ್ಟು ಚಿನ್ನವನ್ನು ಕದ್ದುಕೊಂಡು ಹೋಗುವೆನು ಎಂದು ಅವನು ನಿಶ್ಚಯಿಸಿದನು.॥10-11॥

ಮೂಲಮ್ - 12

ಜಗಾಮ ರಾಮಭವನಂ ಕೀನಾಶಶ್ಚೌರ್ಯಲೋಲುಪಃ ।
ತತ್ರಾಪಶ್ಯದ್ ದ್ವಿಜವರಂ ಶಾಂತಂ ತತ್ತ್ವಾರ್ಥಕೋವಿದಮ್ ॥

ಮೂಲಮ್ - 13

ಪರಿಚರ್ಯಾಪರಂ ವಿಷ್ಣೋರುತ್ತಂಕಂ ತಪಸಾಂ ನಿಧಿಮ್ ।
ಏಕಾಕಿನಂ ದಯಾಲುಂ ಚ ನಿಃಸ್ಪೃಹಂ ಧ್ಯಾನಲೋಲುಪಮ್ ॥

ಅನುವಾದ

ಹೀಗೆ ನಿಶ್ಚಯಿಸಿ ಅವನು ಕಳ್ಳತನಕ್ಕಾಗಿ ಶ್ರೀರಾಮನ ಮಂದಿರಕ್ಕೆ ಹೋದನು. ಅಲ್ಲಿ ಅವನು ಶಾಂತರೂ, ತತ್ವಾರ್ಥ ವೇತ್ತರೂ, ಭಗವಂತನ ಆರಾಧನೆಯ ತತ್ಪರರೂ, ತಪಸ್ಸಿನ ನಿಧಿಯೂ ಆದ ಉತ್ತಂಕ ಮುನಿಯನ್ನು ದರ್ಶಿಸಿದನು. ಅವರು ಒಬ್ಬರೇ ಅಲ್ಲಿರುತ್ತಿದ್ದರು. ಅವರ ಹೃದಯದಲ್ಲಿ ಎಲ್ಲರ ಕುರಿತು ದಯೆಯು ತುಂಬಿತ್ತು. ಅವರು ನಿಸ್ಪೃಹರಾಗಿದ್ದರು. ಸದಾ ಧ್ಯಾನಲೋಲುಪರಾಗಿದ್ದರು.॥12-13॥

ಮೂಲಮ್ - 14

ದೃಷ್ಟ್ವಾಸೌ ಲುಬ್ದಕೋ ಮೇನೇ ತಂ ಚೌರ್ಯಸ್ಯಾಂತರಾಯಿಣಮ್ ।
ದೇವಸ್ಯ ದ್ರವ್ಯಜಾತಂ ತು ಸಮಾದಾಯ ಮಹಾನಿಶಿ ॥

ಅನುವಾದ

ಅಲ್ಲಿ ಕುಳಿತಿರುವ ಅವರನ್ನು ನೋಡಿ ವ್ಯಾಧನು - ಇವರು ಕಳ್ಳತನಕ್ಕೆ ವಿಘ್ನವನ್ನೊಡ್ಡುವರು ಎಂದು ತಿಳಿದನು. ಅನಂತರ ಅರ್ಧರಾತ್ರಿಯಾದಾಗ ಅವನು ದೇವರಿಗೆ ಸಂಬಂಧಿಸಿದ ಅಪಾರ ದ್ರವ್ಯವನ್ನು ಎತ್ತಿಕೊಂಡು ಹೊರಟನು.॥14॥

ಮೂಲಮ್ - 15

ಉತ್ತಂಕಂ ಹಂತುಮಾರೇಭೇ ಉದ್ಯತಾಸಿರ್ಮದೋದ್ಧತಃ ।
ಪಾದೇನಾಕ್ರಮ್ಯ ತದ್ವಕ್ಷೋ ಗಲಂ ಸಂಗೃಹ್ಯ ಪಾಣಿನಾ ॥

ಅನುವಾದ

ಆ ಮದೋನ್ಮತ್ತ ವ್ಯಾಧನು ಉತ್ತಂಕಮುನಿಯ ಎದೆಯನ್ನು ಒಂದು ಕಾಲಿನಿಂದ ಒತ್ತಿ ಹಿಡಿದು ಕೈಯಿಂದ ಕತ್ತನ್ನು ಹಿಡಿದು ಖಡ್ಗವನ್ನು ಎತ್ತಿ ಅವರನ್ನು ಕೊಲ್ಲಲು ಮುಂದಾದನು. ಉತ್ತಂಕರು ತನ್ನನ್ನು ಕೊಲ್ಲುತ್ತಿರುವ ವ್ಯಾಧನನ್ನು ನೋಡಿ ವ್ಯಾಧನಲ್ಲಿ ಇಂತೆಂದರು.॥15॥

ಮೂಲಮ್ - 16

ಹಂತುಂ ಕೃತಮತಿಂ ವ್ಯಾಧಂ ಉತ್ತಂಕೋ ಪ್ರೇಕ್ಷ್ಯ ಚಾಬ್ರವೀತ್ ।

ಮೂಲಮ್ (ವಾಚನಮ್)

ಉತ್ತಂಕ ಉವಾಚ

ಮೂಲಮ್

ಭೋ ಭೋಃ ಸಾಧೋ ವೃಥಾ ಮಾಂ ತ್ವಂ ಹನಿಷ್ಯಸಿ ನಿರಾಗಸಮ್ ॥

ಅನುವಾದ

ಉತ್ತಂಕರು ಹೇಳಿದರು - ಅಯ್ಯಾ ಒಳ್ಳೆಯ ಮನುಷ್ಯನೇ! ನೀನು ವ್ಯರ್ಥವಾಗಿ ನನ್ನನ್ನು ಕೊಲ್ಲಲು ಬಯಸುತ್ತಿರುವೆ. ನಾನಾದರೋ ಸರ್ವಧಾ ನಿರಪರಾಧಿಯಾಗಿದ್ದೇನೆ.॥16॥

ಮೂಲಮ್ - 17½

ಮಯಾ ಕಿಮಪರಾದ್ಧಂ ತೇ ತದ್ ವದ ತ್ವಂ ಚ ಲುಬ್ದಕ ।
ಕೃತಾಪರಾಧಿನೋ ಲೋಕೇ ಹಿಂಸಾಂ ಕುರ್ವಂತಿ ಯತ್ನತಃ ॥
ನ ಹಿಂಸಂತಿ ವೃಥಾ ಸೌಮ್ಯ ಸಜ್ಜನಾ ಅಪ್ಯಪಾಪಿನಮ್ ।

ಅನುವಾದ

ವ್ಯಾಧನೇ! ನಾನು ನಿನ್ನ ಯಾವ ಅಪರಾಧ ಮಾಡಿರುವೆನು? ಹೇಳು. ಜಗತ್ತಿನಲ್ಲಿ ಜನರು ಅಪರಾಧಿಯನ್ನೇ ಪ್ರಯತ್ನ ಪೂರ್ವಕ ಹಿಂಸೆ ಮಾಡುತ್ತಾರೆ. ಅಯ್ಯಾ! ಸಜ್ಜನನೇ! ನಿರಪರಾಧಿಯನ್ನು ವ್ಯರ್ಥವಾಗಿ ಹಿಂಸಿಸುವುದಿಲ್ಲ.॥17½॥

ಮೂಲಮ್ - 18½

ವಿರೋಧಿಷ್ವಪಿ ಮೂರ್ಖೆಷು ನಿರೀಕ್ಷ್ಯಾವಸ್ಥಿತಾನ್ ಗುಣಾನ್ ॥
ವಿರೋಧಂ ನಾಗಚ್ಛಂತಿ ಸಜ್ಜನಾಃ ಶಾಂತಚೇತಸಃ ।

ಅನುವಾದ

ಶಾಂತಚಿತ್ತ ಸಾಧು ಪುರುಷರು ತನ್ನ ವಿರೋಧಿಯಲ್ಲಿ ಹಾಗೂ ಮೂರ್ಖ ಮನುಷ್ಯನಲ್ಲಿಯೂ ಕೂಡ ಸದ್ಗುಣಗಳ ಸ್ಥಿತಿಯನ್ನು ನೋಡಿ ಅವರನ್ನು ವಿರೋಧಿಸುವುದಿಲ್ಲ.॥18½॥

ಮೂಲಮ್ - 19

ಬಹುಧಾ ವಾಚ್ಯಮಾನೋಽಪಿ ಯೋ ನರಃ ಕ್ಷಮಯಾನ್ವಿತಃ ॥

ಮೂಲಮ್ - 20

ತಮುತ್ತಮಂ ನರಂ ಪ್ರಾಹುರ್ವಿಷ್ಣೋಃ ಪ್ರಿಯತರಂ ತಥಾ ॥

ಅನುವಾದ

ಪದೇ ಪದೇ ಬೇರೆಯವರ ಬೈಗುಳಗಳನ್ನು ಕೇಳಿಯೂ ಕ್ಷಮಾಶೀಲನಾಗಿರುವವನು ಉತ್ತಮನೆಂದು ಹೇಳಲಾಗಿದೆ. ಅವನು ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯನೆಂದು ಹೇಳಲಾಗಿದೆ.॥19-20॥

ಮೂಲಮ್ - 21

ಸುಜನೇ ನ ಯಾತ್ತಿ ವೈರಂ ಪರ ಹಿತನಿರತೋ ವಿನಾಶಕಾಲೇಽಪಿ ।
ಛೇದೇಽಪಿ ಚಂದನತರುಃ ಸುರಭೀಕರೋತಿ ಮುಖಂ ಕುಠಾರಸ್ಯ ॥

ಮೂಲಮ್ - 22

ಅಹೋ ವಿರ್ವೈ ಬಲವಾನ್ ಬಾಧತೇ ಬಹುಧಾ ಜನಾನ್ ।
ಸರ್ವಸಂಗವಿಹೀನೋಽಪಿ ಬಾಧ್ಯತೇ ತು ದುರಾತ್ಮನಾ ॥

ಅನುವಾದ

ಇತರರ ಹಿತಸಾಧನೆಯಲ್ಲೇ ತೊಡಗಿರುವ ಸಾಧುಗಳು ಯಾರಿಂದಲಾದರೂ ತನ್ನ ವಿನಾಶದ ಸಮಯ ಉಪಸ್ಥಿತವಾದರೂ ಅವನೆಂದಿಗೂ ವೈರವನ್ನು ಮಾಡುವುದಿಲ್ಲ. ಗಂಧದ ಮರ ತನ್ನನ್ನು ಕಡಿಯುವ ಕೊಡಲಿಗೂ ಸುಗಂಧವನ್ನೇ ಕೊಡುತ್ತದೆ. ಅಯ್ಯಾ! ವಿಧಿಯು ಬಹಳ ಬಲಿಷ್ಠವಾಗಿದೆ. ಅದು ಜನರಿಗೆ ನಾನಾ ರೀತಿಯ ಕಷ್ಟ ಕೊಡುತ್ತದೆ. ಎಲ್ಲ ವಿಧದ ಸಂಗದಿಂದ ರಹಿತನಾದವನಿಗೂ ದುಷ್ಟ ಜನರು ಸತಾಯಿಸುತ್ತಾರೆ.॥21-22॥

ಮೂಲಮ್ - 23

ಅಹೋ ನಿಷ್ಕಾರಣಂ ಲೋಕೇ ಬಾಧಂತೇ ದುರ್ಜನಾ ಜನಾನ್ ।
ೀವರಾಃ ಪಿಶುನಾ ವ್ಯಾಧಾ ಲೋಕೇಽಕಾರಣವೈರಿಣಃ ॥

ಅನುವಾದ

ಅಯ್ಯಾ! ದುರ್ಜನರು ಈ ಜಗತ್ತಿನಲ್ಲಿ ಅನೇಕ ಜೀವಿಗಳಿಗೆ ಅಪರಾಧವಿಲ್ಲದೇ ಪೀಡಿಸುತ್ತಾರೆ. ಬೆಸ್ತರು ಮೀನುಗಳನ್ನು, ನಿಂದಕರು ಸಜ್ಜನರನ್ನು, ಬೇಡನು ಜಿಂಕೆಗಳನ್ನು ಕಾರಣವಿಲ್ಲದೆ ಹಿಂಸಿಸುತ್ತಾರೆ. ॥23॥

ಮೂಲಮ್ - 24

ಅಹೋ ಬಲವತೀ ಮಾಯಾ ಮೋಹಯತ್ಯಖಿಲಂ ಜಗತ್ ।
ಪುತ್ರಮಿತ್ರಕಲತ್ರಾದ್ಯೈಃ ಸರ್ವದುಃಖೇನ ಯೋಜ್ಯತೇ ॥

ಅನುವಾದ

ಅಯ್ಯಾ! ಮಾಯೆಯು ಬಹಳ ಪ್ರಬಲವಾಗಿದೆ. ಅದು ಸಮಸ್ತ ಜಗತ್ತನ್ನು ಮೋಹದಲ್ಲಿ ಕೆಡುಹುತ್ತದೆ. ಹೆಂಡತಿ, ಮಕ್ಕಳು, ಮಿತ್ರರು ಮುಂತಾದವರ ಮೂಲಕ ಎಲ್ಲರನ್ನು ಎಲ್ಲ ರೀತಿಯ ದುಃಖಗಳಿಂದ ಜೋಡಿಸಿಬಿಡುತ್ತದೆ.॥24॥

ಮೂಲಮ್ - 25

ಪರದ್ರವ್ಯಾಪಹಾರೇಣ ಕಲತ್ರಂ ಪೋಷಿತಂ ಚ ಯತ್ ।
ಅಂತೇ ತತ್ ಸರ್ವಮುತ್ಸೃಜ್ಯ ಏಕ ಏವ ಪ್ರಯಾತಿ ವೈ ॥

ಅನುವಾದ

ಪರಧನವನ್ನು ಅಪಹರಿಸಿ ತನ್ನ ಹೆಂಡತಿ-ಮಕ್ಕಳನ್ನು ಸಾಕುವ ಮನುಷ್ಯನು ವ್ಯರ್ಥನು, ಏಕೆಂದರೆ ಕೊನೆಗೆ ಅವೆಲ್ಲವನ್ನೂ ಬಿಟ್ಟು ಒಬ್ಬಂಟಿಗನಾಗಿ ಪರಲೋಕದ ದಾರಿ ಹಿಡಿಯುತ್ತಾನೆ.॥25॥

ಮೂಲಮ್ - 26

ಮಮ ಮಾತಾ ಮಮ ಪಿತಾ ಭಾರ್ಯಾ ಮಮಾತ್ಮಜಾಃ ।
ಮಮೇದಮಿತಿ ಜಂತೂನಾಂ ಮಮತಾ ಬಾಧತೇ ವೃಥಾ ॥

ಅನುವಾದ

ನನ್ನ ತಂದೆ, ನನ್ನ ತಾಯಿ, ನನ್ನ ಹೆಂಡತಿ, ನನ್ನ ಮಕ್ಕಳು, ಈ ಮನೆ-ಮಠ ಎಲ್ಲವೂ ನನ್ನದೇ; ಎಂದು ಇಡುವ ವ್ಯರ್ಥ ಮಮತೆಯೇ ಪ್ರಾಣಿಗಳಿಗೆ ಕಷ್ಟಕೊಡುತ್ತಾ ಇರುತ್ತದೆ.॥26॥

ಮೂಲಮ್ - 27½

ಯಾವದರ್ಪಯತಿ ದ್ರವ್ಯಂ ತಾವದ್ ಭವತಿ ಬಾಂಧವಃ ।
ಅರ್ಜಿತಂ ತು ಧನಂ ಸರ್ವೇ ಭುಂಜಂತೇ ಬಾಂಧವಾಃ ಸದಾ ॥
ದುಃಖಮೇಕತಮೋ ಮೂಢಸ್ತತ್ಪಾಪಫಲಮಶ್ರುತೇ ।

ಅನುವಾದ

ಮನುಷ್ಯನು ಗಳಿಸಿದ ಧನವನ್ನು ಕೊಡುತ್ತಾ ಇರುವ ತನಕ ಜನರು ಅವನಿಗೆ ಸಹೋದರ-ಬಂಧುಗಳಾಗಿ ಇರುತ್ತಾರೆ. ಅವನು ಗಳಿಸಿದ ಹಣವನ್ನು ಎಲ್ಲ ಬಂಧು-ಬಾಂಧವರು ಸದಾ ಭೋಗಿಸುತ್ತಾ ಇರುತ್ತಾರೆ. ಆದರೆ ಮೂರ್ಖ ಮನುಷ್ಯನು ತಾನು ಮಾಡಿದ ಪಾಪದ ಫಲರೂಪಿ ದುಃಖಗಳನ್ನು ಒಬ್ಬನೇ ಅನುಭವಿಸುತ್ತಾನೆ. ॥27½॥

ಮೂಲಮ್ - 28½

ಇತಿ ಬ್ರುವಾಣಂ ತಮೃಷಿಂ ವಿಮೃಶ್ಯ ಭಯವಿಹ್ವಲಃ ॥
ಕಲಿಕಃ ಪ್ರಾಂಜಲಿಃ ಪ್ರಾಹ ಕ್ಷಮಸ್ವೇತಿ ಪುನಃ ಪುನಃ ।

ಅನುವಾದ

ಉತ್ತಂಕ ಮುನಿಗಳು ಈ ಪ್ರಕಾರ ಹೇಳುತ್ತಿರುವಾಗ ಅವರ ಮಾತುಗಳ ಕುರಿತು ವಿಚಾರ ಮಾಡಿ ಕಲಿಕ ವ್ಯಾಧನು ಭಯದಿಂದ ವ್ಯಾಕುಲನಾಗಿ, ಕೈಮುಗಿದು ಪದೇ-ಪದೇ ಹೇಳತೊಡಗಿದನು. ಸ್ವಾಮಿ! ನನ್ನ ಅಪರಾಧಗಳನ್ನು ಕ್ಷಮಿಸಿರಿ.॥28½॥

ಮೂಲಮ್ - 29½

ತತ್ಸಂಗಸ್ಯ ಪ್ರಭಾವೇಣ ಹರಿಸಂನಿಮಾತ್ರತಃ ॥
ಗತಪಾಪೋ ಲುಬ್ಧಕಶ್ಚ ಸಾನುತಾಪೋಽಭವದ್ ಧ್ರುವಮ್ ।

ಅನುವಾದ

ಆ ಮಹಾತ್ಮರ ಸಂಗದ ಪ್ರಭಾವದಿಂದ ಹಾಗೂ ಭಗವಂತನ ಸಾನ್ನಿಧ್ಯ ದೊರೆತುದರಿಂದ ಆ ಬೇಡನ ಎಲ್ಲ ಪಾಪಗಳು ನಾಶವಾದುವು ಹಾಗೂ ಅವನ ಮನಸ್ಸಿನಲ್ಲಿ ಭಾರಿ ಪಶ್ಚಾತ್ತಾಪ ಉಂಟಾಯಿತು.॥29½॥

ಮೂಲಮ್ - 30½

ಮಯಾ ಕೃತಾನಿ ಪಾಪಾನಿ ಮಹಾಂತಿ ಸುಬಹೂನಿ ಚ ॥
ತಾನಿ ಸರ್ವಾಣಿ ನಷ್ಟಾನಿ ವಿಪ್ರೇಂದ್ರ ತವ ದರ್ಶನಾತ್ ।

ಅನುವಾದ

ಅವನು ಹೇಳಿದನು - ವಿಪ್ರವರ್ಯರೇ! ನಾನು ಜೀವನದಲ್ಲಿ ಭಾರೀ ಪಾಪಗಳನ್ನು ಮಾಡಿರುವೆನು. ಆದರೆ ಅವೆಲ್ಲವೂ ನಿಮ್ಮ ದರ್ಶನ ಮಾತ್ರದಿಂದ ನಾಶವಾಗಿ ಹೋದವು.॥30½॥

ಮೂಲಮ್ - 31½

ಅಹಂ ವೈ ಪಾಪಧೀರ್ನಿತ್ಯಂ ಮಹಾಪಾಪಂ ಸಮಾಚರಮ್ ॥
ಕಥಂ ಮೇ ನಿಷ್ಕೃತಿರ್ಭೂಯಾತ್ ಕಂ ಯಾಮಿ ಶರಣಂ ವಿಭೋ ।

ಅನುವಾದ

ಸ್ವಾಮಿ! ನನ್ನ ಬುದ್ಧಿಯು ಸದಾ ಪಾಪದಲ್ಲೇ ಮುಳುಗಿರುತ್ತಿತ್ತು. ನಾನು ನಿರಂತರ ದೊಡ್ಡ ದೊಡ್ಡ ಪಾಪಗಳನ್ನೇ ಆಚರಿಸಿದೆ. ಅವುಗಳಿಂದ ನನ್ನ ಉದ್ಧಾರ ಹೇಗೆ ಆಗುವುದು? ನಾನು ಯಾರಿಗೆ ಶರಣು ಹೋಗಲಿ?॥31½॥

ಮೂಲಮ್ - 32½

ಪೂರ್ವಜನ್ಮಾರ್ಜಿತೈಃ ಪಾಪೈರ್ಲುಬ್ಧಕತ್ವಮವಾಪ್ತವಾನ್ ॥
ಅತ್ರಾಪಿ ಪಾಪಜಾಲಾನಿ ಕೃತ್ವಾ ಕಾಂ ಗತಿಮಾಪ್ನುಯಾಮ್ ।

ಅನುವಾದ

ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಂದಾಗಿ ನನಗೆ ವ್ಯಾಧನಾಗಬೇಕಾಯಿತು. ಇಲ್ಲಿಯೂ ನಾನು ಪಾಪಗಳನ್ನು ಗಳಿಸಿದೆ. ಈ ಪಾಪಗಳನ್ನು ಮಾಡಿ ನನಗೆ ಯಾವ ಗತಿಯು ದೊರೆಯುವುದೋ?॥32½॥

ಮೂಲಮ್ - 33½

ಇತಿ ವಾಕ್ಯಂ ಸಮಾಕರ್ಣ್ಯ ಕಲಿಕಸ್ಯ ಮಹಾತ್ಮನಃ ॥
ಉತ್ತಂಕೋ ನಾಮ ವಿಪ್ರರ್ಷಿರಿದಂ ವಾಕ್ಯಮಥಾಬ್ರವೀತ್ ।

ಅನುವಾದ

ಮಹಾತ್ಮರಾದ ಬ್ರಹ್ಮರ್ಷಿ ಉತ್ತಂಕರು ಕಲಿಕನ ಈ ಮಾತನ್ನು ಕೇಳಿ ಇಂತೆಂದರು-॥33½॥

ಮೂಲಮ್ - 34½ (ವಾಚನಮ್)

ಉತ್ತಂಕ ಉವಾಚ

ಮೂಲಮ್

ಸಾಧು ಸಾಧು ಮಹಾಪ್ರಾಜ್ಞ ಮತಿಸ್ತೇ ವಿಮಲೋಜ್ಜ್ವಲಾ ॥
ಯಸ್ಮಾತ್ ಸಂಸಾರದುಃಖಾನಾಂ ನಾಶೋಪಾಯಮಭೀಪ್ಸಸಿ ।

ಅನುವಾದ

ಉತ್ತಂಕ ಹೇಳಿದರು - ಬುದ್ಧಿವಂತನಾದ ವ್ಯಾಧನೇ! ನೀನು ಧನ್ಯನಾಗಿರುವೆ! ನಿನ್ನ ಬುದ್ಧಿ ನಿರ್ಮಲ ಮತ್ತು ಉಜ್ವಲವಾಗಿದೆ. ಏಕೆಂದರೆ ನೀನು ಸಂಸಾರ ದುಃಖನಾಶದ ಉಪಾಯವನ್ನು ಬಯಸುತ್ತಿರುವೆ.॥34½॥

ಮೂಲಮ್ - 35

ಚೈತ್ರೇ ಮಾಸಿ ಸಿತೇ ಪಕ್ಷೇ ಕಥಾ ರಾಮಾಯಣಸ್ಯ ಚ ॥

ಮೂಲಮ್ - 36

ನವಾಹ್ನಾ ಕಿಲ ಶ್ರೋತವ್ಯಾ ಭಕ್ತಿಭಾವೇನ ಸಾದರಮ್ ।
ಯಸ್ಯ ಶ್ರವಣಮಾತ್ರೇಣ ಸರ್ವಪಾಪೈಃ ಪ್ರಮುಚ್ಯತೇ ॥

ಅನುವಾದ

ಚೈತ್ರಮಾಸದ ಶುಕ್ಲಪಕ್ಷದಲ್ಲಿ ನೀನು ಭಕ್ತಿಯಿಂದ, ಆದರಪೂರ್ವಕ ರಾಮಾಯಣದ ನವಾಹ ಕಥೆಯನ್ನು ಕೇಳಬೇಕು. ಅದರ ಶ್ರವಣ ಮಾತ್ರದಿಂದ ಮನುಷ್ಯನು ಸಮಸ್ತ ಪಾಪಗಳಿಂದ ಬಿಡುಗಡೆ ಹೊಂದುವನು.॥35-36॥

ಮೂಲಮ್ - 37

ತಸ್ಮಿನ್ ಕ್ಷಣೇಽಸೌ ಕಲಿಕೋ ಲುಬ್ಧಕೋ ವೀತಕಲ್ಮಷಃ ।
ರಾಮಾಯಣಕಥಾಂ ಶ್ರುತ್ವಾ ಸದ್ಯಃ ಪಂಚತ್ವಮಾಗತಃ ॥

ಅನುವಾದ

ಆಗ ಕಲಿಕವ್ಯಾಧನ ಎಲ್ಲ ಪಾಪಗಳು ನಾಶವಾದುವು. ಅವನು ರಾಮಾಯಣದ ಕಥೆಯನ್ನು ಕೇಳಿ ತತ್ ಕ್ಷಣವೇ ಮೃತ್ಯುಮುಖವಾದನು.॥37॥

ಮೂಲಮ್ - 38

ಉತ್ತಂಕಃ ಪತಿತಂ ವೀಕ್ಷ್ಯ ಲುಬ್ಧಕಂ ತಂ ದಯಾಪರಃ ।
ಏತದ್ ದೃಷ್ಟ್ವಾ ವಿಸ್ಮಿತಶ್ಚ ಅಸ್ತೌಷೀತ್ ಕಮಲಾಪತಿಮ್ ॥

ಅನುವಾದ

ವ್ಯಾಧನು ಸತ್ತು ಬಿದ್ದುದನ್ನು ನೋಡಿ ದಯಾಳು ಉತ್ತಂಕ ಮುನಿಗಳು ವಿಸ್ಮಿತರಾದರು ಮತ್ತೆ ಅವರು ಭಗವಾನ್ ಕಮಲಾಪತಿಯನ್ನು ಸ್ತುತಿಸಿದರು.॥38॥

ಮೂಲಮ್ - 39

ಕಥಾಂ ರಾಮಾಯಣಸ್ಯಾಪಿ ಶ್ರುತ್ವಾ ಚ ವೀತಕಲ್ಮಷಃ ।
ದಿವ್ಯಂ ವಿಮಾನಮಾರುಹ್ಯ ಮುನಿಮೇತದಥಾಬ್ರವೀತ್ ॥

ಅನುವಾದ

ರಾಮಾಯಣದ ದಿವ್ಯಕಥೆ ಕೇಳಿ ಪಾಪರಹಿತನಾದ ವ್ಯಾಧನು ದಿವ್ಯ ವಿಮಾನವನ್ನಡರಿ ಉತ್ತಂಕಮುನಿಯಲ್ಲಿ ಇಂತೆಂದನು.॥39॥

ಮೂಲಮ್ - 40

ವಿಮುಕ್ತಸ್ತ್ವತ್ಪ್ರಸಾದೇನ ಮಹಾಪಾತಕಸಂಕಟಾತ್ ।
ತಸ್ಮಾನ್ನತೋಽಸ್ಮಿ ತೇ ವಿದ್ವನ್ ಯತ್ ಕೃತಂ ತತ್ ಕ್ಷಮಸ್ವ ಮೇ ॥

ಅನುವಾದ

ವಿದ್ವಾಂಸರೇ! ತಮ್ಮ ಪ್ರಸಾದದಿಂದ ನಾನು ಮಹಾ ಪಾಪಗಳ ಸಂಕಟದಿಂದ ಮುಕ್ತನಾದೆನು. ಆದ್ದರಿಂದ ನಾನು ನಿಮ್ಮ ಚರಣಗಳಲ್ಲಿ ವಂದಿಸಿಕೊಳ್ಳುವೆನು. ನಾನು ಮಾಡಿದ ಅಪರಾಧವನ್ನು ನೀವು ಕ್ಷಮಿಸಿಬಿಡಿ.॥40॥

ಮೂಲಮ್ - 41 (ವಾಚನಮ್)

ಸೂತ ಉವಾಚ

ಮೂಲಮ್

ಇತ್ಯುಕ್ತ್ವಾ ದೇವಕುಸುಮೈರ್ಮುನಿಶ್ರೇಷ್ಠಮವಾಕಿರತ್ ।
ಪ್ರದಕ್ಷಿಣಾತ್ರಯಂ ಕೃತ್ವಾ ನಮಸ್ಕಾರಂ ಚಕಾರ ಹ ॥

ಅನುವಾದ

ಸೂತ ಪುರಾಣಿಕರು ಹೇಳುತ್ತಾರೆ - ಹೀಗೆ ಹೇಳಿ ಕಲಿಕನು ಮುನಿಶ್ರೇಷ್ಠ ಉತ್ತಂಕರ ಮೇಲೆ ಸುರಕುಸುಮಗಳ ಮಳೆ ಗರೆದನು. ಮೂರು ಬಾರಿ ಅವರಿಗೆ ಪ್ರದಕ್ಷಿಣೆ ಬಂದು ಅವರಿಗೆ ಪದೇ ಪದೇ ನಮಸ್ಕರಿಸಿದನು.॥41॥

ಮೂಲಮ್ - 42

ತತೋ ವಿಮಾನಮಾರುಹ್ಯ ಸರ್ವಕಾಮಸಮನ್ವಿತಮ್ ।
ಅಪ್ಸರೋಗಣಸಂಕೀರ್ಣಂ ಪ್ರಪೇದೇ ಹರಿಮಂದಿರಮ್ ॥

ಅನುವಾದ

ಅನಂತರ ಅಪ್ಸರೆಯರಿಂದ ತುಂಬಿದ ಸಮಸ್ತ ಮನೋವಾಂಛಿತ ಭೋಗಗಳಿಂದ ಸಂಪನ್ನವಾದ ವಿಮಾನದಲ್ಲಿ ಆರೂಢನಾಗಿ ಅವನು ಶ್ರೀಹರಿಯ ಪರಮಧಾಮಕ್ಕೆ ತಲುಪಿದನು.॥42॥

ಮೂಲಮ್ - 43½

ತಸ್ಮಾಚ್ಛೃಣುಧ್ವಂ ವಿಪ್ರೇಂದ್ರಾಃ ಕಥಾಂ ರಾಮಾಯಣಸ್ಯ ಚ ।
ಚೈತ್ರೇ ಮಾಸಿ ಸಿತೇ ಪಕ್ಷೇ ಶ್ರೋತವ್ಯಂ ಚ ಪ್ರಯತ್ನತಃ ॥
ನವಾಹ್ನಾ ಕಿಲ ರಾಮಸ್ಯ ರಾಮಾಯಣಕಥಾಮೃತಮ್ ।

ಅನುವಾದ

ಆದ್ದರಿಂದ ವಿಪ್ರರೇ! ನೀವೆಲ್ಲರೂ ರಾಮಾಯಣದ ಕಥೆ ಕೇಳಿರಿ. ಚೈತ್ರಮಾಸದ ಶುಕ್ಲಪಕ್ಷದಲ್ಲಿ ಪ್ರಯತ್ನಪೂರ್ವಕ ರಾಮಾಯಣದ ಅಮೃತಮಯ ಕಥೆಯನ್ನು, ನವಾಹ ಪಾರಾಯಣೆಯನ್ನು ಅವಶ್ಯವಾಗಿ ಕೇಳಬೇಕು.॥43½॥

ಮೂಲಮ್ - 44½

ತಸ್ಮಾದೃತುಷು ಸರ್ವೇಷು ಹತಕೃದ್ಧರಿಪೂಜಕಃ ॥
ಈಪ್ಸಿತಂ ಮನಸಾ ಯದ್ಯತ್ ತದಾಪ್ನೋತಿ ನ ಸಂಶಯಃ ।

ಅನುವಾದ

ಇದಕ್ಕಾಗಿ ರಾಮಾಯಣವು ಎಲ್ಲ ಋತುಗಳಲ್ಲೂ ಹಿತಕರವಾಗಿದೆ. ಇದರಿಂದ ಭಗವಂತನ ಪೂಜೆ ಮಾಡುವ ಮನುಷ್ಯನು ಮನಸ್ಸಿನಿಂದ ಬಯಸಿದ್ದೆಲ್ಲವನ್ನು ಪಡೆದುಕೊಳ್ಳುವುದರಲ್ಲಿ ಯಾವ ಸಂಶಯವೂ ಇಲ್ಲ.॥44½॥

ಮೂಲಮ್ - 45

ಸನತ್ಕುಮಾರ ಯತ್ ಪೃಷ್ಟಂ ತತ್ ಸರ್ವಂ ಗದಿತಂ ಮಯಾ ॥

ಮೂಲಮ್ - 46

ರಾಮಾಯಣಸ್ಯ ಮಾಹಾತ್ಮ್ಯಂ ಕಿಮನ್ಯಚ್ಛ್ರೋತುಮಿಚ್ಛಸಿ ॥

ಅನುವಾದ

ಸನತ್ಕುಮಾರರೇ! ನೀವು ಕೇಳಿದ ರಾಮಾಯಣದ ಮಾಹಾತ್ಮ್ಯವೆಲ್ಲವನ್ನೂ ನಾನು ತಿಳಿಸಿದೆ. ಇನ್ನು ಏನನ್ನು ಕೇಳಲು ಬಯಸುವಿರಿ?॥45-46॥

ಅನುವಾದ (ಸಮಾಪ್ತಿಃ)

ಶ್ರೀಸ್ಕಂದ ಪುರಾಣದ ಉತ್ತರ ಖಂಡದಲ್ಲಿನ ನಾರದ ಸನತ್ಕುಮಾರ ಸಂವಾದದಲ್ಲಿ ಚೈತ್ರಮಾಸದಲ್ಲಿ ರಾಮಾಯಣ ಕೇಳುವ ಫಲದ ವರ್ಣನೆ ಎಂಬ ನಾಲ್ಕನೆಯ ಅಧ್ಯಾಯ ಪೂರ್ಣವಾಯಿತು. ॥4॥