ಭಾಗಸೂಚನಾ
ಮಾಘಮಾಸದಲ್ಲಿ ರಾಮಾಯಣ ಶ್ರವಣದ ಫಲ-ರಾಜಾ ಸುಮತಿ ಮತ್ತು ಸತ್ಯವತಿಯ ಪೂರ್ವಜನ್ಮದ ಇತಿಹಾಸ
ಮೂಲಮ್ - 1 (ವಾಚನಮ್)
ಸನತ್ಕುಮಾರ ಉವಾಚ
ಮೂಲಮ್
ಅಹೋ ವಿಪ್ರ ಇದಂ ಪ್ರೋಕ್ತಮಿತಿಹಾಸಂ ಚ ನಾರದ ।
ರಾಮಾಯಣಸ್ಯ ಮಾಹಾತ್ಮ್ಯಂ ತ್ವಂ ಪುನರ್ವದ ವಿಸ್ತರಾತ್ ॥
ಅನುವಾದ
ಸನತ್ಕುಮಾರರು ಹೇಳಿದರು - ಬ್ರಹ್ಮರ್ಷಿ ನಾರದರೇ! ತಾವು ಈ ಅದ್ಭುತ ಇತಿಹಾಸವನ್ನು ಹೇಳಿರುವಿರಿ. ಈಗ ರಾಮಾಯಣದ ಮಾಹಾತ್ಮ್ಯವನ್ನು ಪುನಃ ವಿಸ್ತಾರಪೂರ್ವಕ ವರ್ಣಿಸಿರಿ.॥1॥
ಮೂಲಮ್ - 2
ಅನ್ಯಮಾಸಸ್ಯ ಮಾಹಾತ್ಮ್ಯಂ ಕಥಯಸ್ವ ಪ್ರಸಾದತಃ ।
ಕಸ್ಯ ನೋ ಜಾಯತೇ ತುಷ್ಟಿರ್ಮುನೇ ತ್ವದ್ವಚನಾಮೃತಾತ್ ॥
ಅನುವಾದ
(ತಾವು ಕಾರ್ತಿಕ ಮಾಸದಲ್ಲಿನ ರಾಮಾಯಣ ಶ್ರವಣದ ಮಹಿಮೆ ತಿಳಿಸಿದಿರಿ) ಈಗ ಕೃಪೆಯಿಟ್ಟು ಬೇರೆ ಮಾಸದ ಮಾಹಾತ್ಮ್ಯವನ್ನು ತಿಳಿಸಿರಿ. ಮುನಿಯೇ! ತಮ್ಮ ವಚನಾಮೃತದಿಂದ ಯಾರಿಗೆ ತಾನೆ ಸಂತೋಷವಾಗಲಾರದು?॥2॥
ಮೂಲಮ್ - 3 (ವಾಚನಮ್)
ನಾರದ ಉವಾಚ
ಮೂಲಮ್
ಸರ್ವೇ ಯೂಯಂ ಮಹಾಭಾಗಾಃ ಕೃತಾರ್ಥಾ ನಾತ್ರ ಸಂಶಯಃ ।
ಯತಃ ಪ್ರಭಾವಂ ರಾಮಸ್ಯ ಭಕ್ತಿತಃ ಶ್ರೋತುಮುದ್ಯತಾಃ ॥
ಅನುವಾದ
ನಾರದರು ಹೇಳಿದರು - ಮಹಾತ್ಮರೇ! ನೀವೆಲ್ಲರೂ ನಿಶ್ಚಯವಾಗಿ ಬಹಳ ಭಾಗ್ಯಶಾಲಿಗಳೂ, ಕೃತಕೃತ್ಯರೂ ಆಗಿರುವಿರಿ, ಇದರಲ್ಲಿ ಸಂಶಯವೇ ಇಲ್ಲ; ಏಕೆಂದರೆ ನೀವು ಭಕ್ತಿಭಾವದಿಂದ ಭಗವಾನ್ ಶ್ರೀರಾಮನ ಮಹಿಮೆಯನ್ನು ಕೇಳಲು ಉದ್ಯುಕ್ತರಾಗಿರುವಿರಿ.॥3॥
ಮೂಲಮ್ - 4
ಮಾಹಾತ್ಮ್ಯಶ್ರವಣಂ ಯಸ್ಯ ರಾಘವಸ್ಯ ಕೃತಾತ್ಮನಾಮ್ ।
ದುರ್ಲಭಂ ಪ್ರಾಹುರತ್ಯಂತಂ ಮುನಯೋ ಬ್ರಹ್ಮವಾದಿನಃ ॥
ಅನುವಾದ
ಭಗವಾನ್ ಶ್ರೀರಾಮನ ಮಾಹಾತ್ಮ್ಯದ ಶ್ರವಣವು ಪುಣ್ಯಾತ್ಮ ಪುರುಷರಿಗೆ ಪರಮ ದುರ್ಲಭವೆಂದು ಬ್ರಹ್ಮವಾದೀ ಮುನಿಗಳು ತಿಳಿಸಿರುವರು.॥4॥
ಮೂಲಮ್ - 5
ಶೃಣುಧ್ವಮೃಷಯಶ್ಚಿತ್ರಮಿತಿಹಾಸಂ ಪುರಾತನಮ್ ।
ಸರ್ವಪಾಪಪ್ರಶಮನಂ ಸರ್ವರೋಗವಿನಾಶನಮ್ ॥
ಅನುವಾದ
ಮಹರ್ಷಿಗಳೇ! ಈಗ ನೀವು ಒಂದು ವಿಚಿತ್ರ ಪುರಾತನ ಇತಿಹಾಸವನ್ನು ಕೇಳಿರಿ. ಅದು ಸಮಸ್ತ ಪಾಪಗಳನ್ನು ನಿವಾರಿಸಿ, ಎಲ್ಲ ರೋಗಗಳನ್ನು ನಾಶಮಾಡುತ್ತದೆ.॥5॥
ಮೂಲಮ್ - 6
ಆಸೀತ್ ಪುರಾ ದ್ವಾಪರೇ ಚ ಸುಮತಿರ್ನಾಮ ಭೂಪತಿಃ ।
ಸೋಮವಂಶೋದ್ಭವಃ ಶ್ರೀಮಾನ್ ಸಪ್ತದ್ವೀಪೈಕನಾಯಕಃ ॥
ಅನುವಾದ
ಹಿಂದೆ ದ್ವಾಪರದಲ್ಲಿ ಸುಮತಿ ಎಂಬ ಪ್ರಸಿದ್ಧ ಒಬ್ಬ ರಾಜನಾಗಿ ಹೋಗಿರುವನು. ಅವನು ಚಂದ್ರವಂಶದಲ್ಲಿ ಹುಟ್ಟಿದ್ದು, ಶ್ರೀ ಸಂಪನ್ನ ಮತ್ತು ಏಳು ದ್ವೀಪಗಳಿಗೂ ಏಕಮಾತ್ರ ಸಾಮ್ರಾಟನಾಗಿದ್ದನು.॥6॥
ಮೂಲಮ್ - 7
ಧರ್ಮಾತ್ಮಾ ಸತ್ಯಸಂಪನ್ನಃ ಸರ್ವಸಂಪದ್ವಿಭೂಷಿತಃ ।
ಸದಾ ರಾಮಕಥಾಸೇವೀ ರಾಮಪೂಜಾಪರಾಯಣಃ ॥
ಅನುವಾದ
ಅವನ ಮನಸ್ಸು ಸದಾ ಧರ್ಮದಲ್ಲೇ ತೊಡಗಿದ್ದು, ಸತ್ಯವಾದಿ ಹಾಗೂ ಎಲ್ಲ ಪ್ರಕಾರದ ಸಂಪತ್ತುಗಳಿಂದ ಸುಶೋಭಿತನಾಗಿದ್ದನು. ಯಾವಾಗಲೂ ಶ್ರೀರಾಮನ ಕಥೆಯನ್ನು ಸೇವಿಸುತ್ತಾ ಶ್ರೀರಾಮನ ಆರಾಧನೆಯಲ್ಲೇ ಪರಾಯಣನಾಗಿದ್ದನು.॥7॥
ಮೂಲಮ್ - 8
ರಾಮಪೂಜಾಪರಾಣಾಂ ಚ ಶುಶ್ರೂಷುರನಹಂಕೃತಿಃ ।
ಪೂಜ್ಯೇಷು ಪೂಜಾನಿರತಃ ಸಮದರ್ಶೀ ಗುಣಾನ್ವಿತಃ ॥
ಅನುವಾದ
ಶ್ರೀರಾಮನ ಪೂಜೆ-ಅರ್ಚನೆಯಲ್ಲಿ ತೊಡಗಿರುವ ಭಕ್ತರನ್ನು ಅವನು ಸದಾ ಸೇವಿಸುತ್ತಿದ್ದನು. ಅವನಲ್ಲಿ ಅಹಂಕಾರ ಕೊಂಚವೂ ಇರಲಿಲ್ಲ. ಪೂಜ್ಯ ಪುರುಷರ ಪೂಜೆಯಲ್ಲಿ ತತ್ಪರನಾಗಿದ್ದು, ಸಮದರ್ಶಿ ಮತ್ತು ಸದ್ಗುಣ ಸಂಪನ್ನನಾಗಿದ್ದನು.॥8॥
ಮೂಲಮ್ - 9
ಸರ್ವಭೂತಹಿತಃ ಶಾಂತಃ ಕೃತಜ್ಞಃ ಕೀರ್ತಿಮಾನ್ ನೃಪಃ ।
ತಸ್ಯ ಭಾರ್ಯಾ ಮಹಾಭಾಗಾ ಸರ್ವಲಕ್ಷಣಸಂಯುತಾ ॥
ಅನುವಾದ
ರಾಜಾ ಸುಮತಿಯು ಸಮಸ್ತ ಪ್ರಾಣಿಗಳ ಹಿತೈಷಿಯೂ, ಶಾಂತನೂ, ಕತಜ್ಞನೂ, ಯಶಸ್ವಿಯೂ ಆಗಿದ್ದನು. ಅವನ ಪತ್ನಿಯೂ ಪರಮ ಸೌಭಾಗ್ಯಶಾಲಿನಿಯೂ, ಎಲ್ಲ ಶುಭ ಲಕ್ಷಣಗಳಿಂದ ಸುಶೋಭಿತಳಾಗಿದ್ದಳು.॥9॥
ಮೂಲಮ್ - 10
ಪತಿವ್ರತಾ ಪತಿಪ್ರಾಣಾ ನಾಮ್ನಾ ಸತ್ಯವತೀ ಶ್ರುತಾ ।
ತಾವುಭೌ ದಂಪತೀ ನಿತ್ಯಂ ರಾಮಾಯಣಪರಾಯಣೌ ॥
ಅನುವಾದ
ಆಕೆಯ ಹೆಸರು ಸತ್ಯವತಿ ಎಂದಿದ್ದು ಪತಿವ್ರತೆಯಾಗಿ ಪತಿ ಪ್ರಾಣಳಾಗಿದ್ದಳು. ಆ ಇಬ್ಬರೂ ಪತಿ-ಪತ್ನಿಯರು ಸದಾ ರಾಮಾಯಣವನ್ನು ಓದುವುದರಲ್ಲಿ ಮತ್ತು ಕೇಳುವುದರಲ್ಲಿ ಸಂಲಗ್ನರಾಗಿದ್ದರು.॥10॥
ಮೂಲಮ್ - 11
ಅನ್ನದಾನರತೌ ನಿತ್ಯಂ ಜಲದಾನಪರಾಯಣೌ ।
ತಡಾಗಾರಾಮವಾಪ್ಯಾದೀನಸಂಖ್ಯಾತಾನ್ ವಿತೇನತುಃ ॥
ಅನುವಾದ
ಸದಾ ಅನ್ನದಾನ ಮಾಡುತ್ತಾ ಪ್ರತಿದಿನ ಜಲದಾನದಲ್ಲಿ ಪ್ರವೃತ್ತರಾಗಿದ್ದರು. ಅವರು ಅಸಂಖ್ಯ ಕೆರೆ-ಕಟ್ಟೆ, ಬಾವಿಗಳನ್ನು ಉದ್ಯಾನವನಗಳನ್ನು ನಿರ್ಮಿಸಿದ್ದರು.॥11॥
ಮೂಲಮ್ - 12
ಸೋಽಪಿ ರಾಜಾ ಮಹಾಭಾಗೋ ರಾಮಾಯಣಪರಾಯಣಃ ।
ವಾಚಯೇಚ್ಛೃಣುಯಾದ್ ವಾಪಿ ಭಕ್ತಿಭಾವೇನ ಭಾವಿತಃ ॥
ಅನುವಾದ
ಮಹಾಭಾಗ ಸುಮತಿ ರಾಜನೂ ಕೂಡ ಸದಾ ರಾಮಾಯಣವನ್ನು ಅನುಶೀಲನದಲ್ಲಿ ತೊಡಗಿದ್ದನು. ಅವನು ಭಕ್ತಿಭಾವದಿಂದ ಭಾವಿತನಾಗಿ ರಾಮಾಯಣವನ್ನು ಓದುತ್ತಾ ಕೇಳುತ್ತಾ ಇದ್ದನು.॥12॥
ಮೂಲಮ್ - 13
ಏವಂ ರಾಮಪರಂ ನಿತ್ಯಂ ರಾಜಾನಂ ಧರ್ಮಕೋವಿದಮ್ ।
ತಸ್ಯ ಪ್ರಿಯಾಂ ಸತ್ಯವತೀಂ ದೇವಾ ಅಪಿ ಸದಾಸ್ತುವನ್ ॥
ಅನುವಾದ
ಈ ಪ್ರಕಾರ ಆ ಧರ್ಮಜ್ಞ ನರೇಶನು ಸದಾ ಶ್ರೀರಾಮನ ಆರಾಧನೆಯಲ್ಲೇ ತತ್ಪರನಾಗಿರುತ್ತಿದ್ದನು. ಅವನ ಪ್ರಿಯಪತ್ನೀ ಸತ್ಯವತಿಯೂ ಹೀಗೆಯೇ ಇದ್ದಳು. ದೇವತೆಗಳೂ ಕೂಡ ಆ ದಂಪತಿಯರನ್ನು ಪ್ರಶಂಶಿಸುತ್ತಿದ್ದರು.॥13॥
ಮೂಲಮ್ - 14
ವಿಶ್ರುತೌ ತ್ರಿಷು ಲೋಕೇಷು ದಂಪತೀ ತೌ ಹಿ ಧಾರ್ಮಿಕೌ ।
ಆಯಯೌ ಬಹುಭಿಃ ಶಿಷ್ಯೈರ್ದ್ರಷ್ಟುಕಾಮೋ ವಿಭಾಂಡಕಃ ॥
ಅನುವಾದ
ಒಂದು ದಿನ ಆ ತ್ರಿಭುವನ ವಿಖ್ಯಾತ ಧರ್ಮಾತ್ಮಾ ರಾಜ-ರಾಣಿಯರನ್ನು ನೋಡಲು ವಿಭಾಂಡಕಮುನಿಯು ತನ್ನ ಅನೇಕ ಶಿಷ್ಯರೊಂದಿಗೆ ಅಲ್ಲಿಗೆ ಬಂದರು.॥14॥
ಮೂಲಮ್ - 15
ವಿಭಾಂಡಕಂ ಮುನಿಂ ದೃಷ್ಟ್ವಾ ಸುಖಮಾಪ್ತೋ ಜನೇಶ್ವರಃ ।
ಪ್ರತ್ಯುದ್ಯಯೌ ಸಪತ್ನೀಕಃ ಪೂಜಾಭಿರ್ಬಹುವಿಸ್ತರಮ್ ॥
ಅನುವಾದ
ಮುನಿವರ ವಿಭಾಂಡಕರು ಬಂದಿರುವುದನ್ನು ನೋಡಿ ಸುಮತಿರಾಜನಿಗೆ ಬಹಳ ಸಂತೋಷವಾಯಿತು. ಅವನು ಪೂಜಾ ಸಾಮಗ್ರಿಯನ್ನು ಎತ್ತಿಕೊಂಡು ಪತ್ನಿಯೊಂದಿಗೆ ಅವರ ಸ್ವಾಗತಕ್ಕಾಗಿ ಹೊರಟನು.॥15॥
ಮೂಲಮ್ - 16
ಕೃತಾತಿಥ್ಯಕ್ರಿಯಂ ಶಾಂತಂ ಕೃತಾಸನಪರಿಗ್ರಹಮ್ ।
ನಿಜಾಸನಗತೋ ಭೂಪಃ ಪ್ರಾಂಜಲಿರ್ಮುನಿಮಬ್ರವೀತ್ ॥
ಅನುವಾದ
ಮುನಿಯ ಸ್ವಾಗತ-ಸತ್ಕಾರ ನಡೆದು ಅವರು ಶಾಂತ ಭಾವದಿಂದ ಆಸೀನರಾದಾಗ ತನ್ನ ಆಸನದಲ್ಲಿ ಕುಳಿತಿರುವ ರಾಜನು ಮುನಿಯಲ್ಲಿ ಕರಮುಗಿದು ಇಂತೆಂದನು.॥16॥
ಮೂಲಮ್ - 17 (ವಾಚನಮ್)
ರಾಜೋವಾಚ
ಮೂಲಮ್
ಭಗವನ್ ಕೃತಕೃತ್ಯೋಽದ್ಯ ತ್ವದಭ್ಯಾಗಮನೇನ ಭೋಃ ।
ಸತಾಮಾಗಮನಂ ಸಂತಃ ಪ್ರಶಂಸಂತಿ ಸುಖಾವಹಮ್ ॥
ಅನುವಾದ
ರಾಜನು ಹೇಳಿದನು - ಪೂಜ್ಯರೇ! ಇಂದು ನಿಮ್ಮ ಶುಭಾಗಮನದಿಂದ ನಾನು ಕೃತಾರ್ಥನಾದೆ. ಏಕೆಂದರೆ ಶ್ರೇಷ್ಠ ಪುರುಷರು-ಸಂತರ ಆಗಮನವನ್ನು ಸುಖದಾಯಕವೆಂದು ಹೇಳಿ, ಅದನ್ನು ಪ್ರಶಂಸಿಸುತ್ತಾರೆ.॥17॥
ಮೂಲಮ್ - 18
ಯತ್ರ ಸ್ಯಾನ್ಮಹತಾಂ ಪ್ರೇಮ ತತ್ರ ಸ್ಯುಃ ಸರ್ವಸಂಪದಃ ।
ತೇಜಃ ಕೀರ್ತಿರ್ಧನಂ ಪುತ್ರ ಇತಿ ಪ್ರಾಹುರ್ವಿಪಶ್ಚಿತಃ ॥
ಅನುವಾದ
ಮಹಾಪುರುಷರ ಪ್ರೇಮವಿರುವಲ್ಲಿ ಎಲ್ಲ ಸಂಪತ್ತುಗಳು ತಾವಾಗಿಯೇ ಇರುತ್ತವೆ. ಅಲ್ಲಿ ತೇಜ, ಕೀರ್ತಿ, ಧನ ಮತ್ತು ಪುತ್ರ ಎಲ್ಲ ವಸ್ತುಗಳು ದೊರೆಯುತ್ತವೆ ಎಂದು ವಿದ್ವಾಂಸರು ಹೇಳಿರುವರು.॥18॥
ಮೂಲಮ್ - 19
ತತ್ರ ವೃದ್ಧಿಂ ಗಮಿಷ್ಯಂತಿ ಶ್ರೇಯಾಂಸ್ಯನುದಿನಂ ಮುನೇ ।
ಯತ್ರ ಸಂತಃ ಪ್ರಕುರ್ವಂತಿ ಮಹತೀಂ ಕರುಣಾಂ ಪ್ರಭೋ ॥
ಅನುವಾದ
ಮುನಿಗಳೇ! ಸ್ವಾಮಿ! ಸಂತ-ಮಹಾತ್ಮರು ಕೃಪೆ ಮಾಡುವಲ್ಲಿ ಪ್ರತಿದಿನ ಕಲ್ಯಾಣಮಯ ಸಾಧನೆಗಳ ವೃದ್ಧಿಯಾಗುತ್ತವೆ.॥19॥
ಮೂಲಮ್ - 20
ಯೋ ಮೂರ್ಧ್ನಿ ಧಾರಯೇದ್ ಬ್ರಹ್ಮನ್ ವಿಪ್ರಪಾದತಲೋದಕಮ್ ।
ಸ ಸ್ನಾತೋ ಸರ್ವತೀರ್ಥೇಷು ಪುಣ್ಯವಾನ್ ನಾತ್ರ ಸಂಶಯಃ ॥
ಅನುವಾದ
ಪೂಜ್ಯರೇ! ತನ್ನ ಮಸ್ತಕದಲ್ಲಿ ಬ್ರಾಹ್ಮಣರ ಚರಣೋದಕವನ್ನು ಧರಿಸಿಕೊಳ್ಳುವ ಪುಣ್ಯಾತ್ಮ ಪುರುಷನು ಎಲ್ಲ ತೀರ್ಥ ಸ್ನಾನಮಾಡಿದಂತೆಯೋ ಆಗಿದೆ. ಇದರಲ್ಲಿ ಸಂಶಯವೇ ಇಲ್ಲ.॥20॥
ಮೂಲಮ್ - 21
ಮಮ ಪುತ್ರಾಶ್ಚ ದಾರಾಶ್ಚ ಸಂಪದಶ್ಚ ಸಮರ್ಪಿತಾಃ ।
ಸಮಾಜ್ಞಾಪಯ ಶಾಂತಾತ್ಮನ್ ವಯಂ ಕಿಂ ಕರವಾಣಿ ತೇ ॥
ಅನುವಾದ
ಶಾಂತ ಸ್ವರೂಪ ಮಹರ್ಷಿಯೇ! ನನ್ನ ಪುತ್ರ, ಪತ್ನೀ ಹಾಗೂ ಎಲ್ಲ ಸಂಪತ್ತು ತಮ್ಮ ಚರಣಗಳಲ್ಲಿ ಸಮರ್ಪಿತವಾಗಿದೆ. ನಾನು ನಿಮಗೆ ಏನು ಸೇವೆ ಮಾಡಲಿ? ಅಪ್ಪಣೆಯಾಗಬೇಕು.॥21॥
ಮೂಲಮ್ - 22
ಇತ್ಥಂ ವದಂತಂ ಭೂಪಂ ತಂ ಸ ನಿರೀಕ್ಷ್ಯ ಮುನೀಶ್ವರಃ ।
ಸ್ಪೃಶನ್ ಕರೇಣ ರಾಜಾನಂ ಪ್ರತ್ಯುವಾಚಾತಿಹರ್ಷಿತಃ ॥
ಅನುವಾದ
ಹೀಗೆ ನುಡಿಯುತ್ತಿರುವ ಸುಮತಿರಾಜನ ಕಡೆಗೆ ನೋಡಿ ಮುನಿವರ ವಿಭಾಂಡಕರು ಬಹಳ ಪ್ರಸನ್ನರಾಗಿ ತನ್ನ ಕೈಯಿಂದ ರಾಜನನ್ನು ಸ್ಪರ್ಶಿಸುತ್ತಾ ಇಂತೆಂದರು.॥22॥
ಮೂಲಮ್ - 23 (ವಾಚನಮ್)
ಋಷಿರುವಾಚ
ಮೂಲಮ್
ರಾಜಾನ್ ಯದುಕ್ತಂ ಭವತಾ ತತ್ಸರ್ವಂ ತ್ವತ್ಕುಲೋಚಿತಮ್ ।
ವಿನಯಾವನತಾಃ ಸರ್ವೇ ಪರಂ ಶ್ರೇಯೋ ಭಜಂತಿ ಹಿ ॥
ಅನುವಾದ
ಋಷಿಗಳು ಹೇಳಿದರು - ರಾಜನೇ! ನೀನು ಹೇಳಿದುದು ನಿನ್ನ ಕುಲಕ್ಕೆ ಅನುರೂಪವಾಗಿದೆ. ಹೀಗೆ ವಿನಯದಿಂದ ಬಾಗಿದವರು ಪರಮ ಶ್ರೇಯಸ್ಸಿಗೆ ಭಾಗಿಯಾಗುತ್ತಾರೆ.॥23॥
ಮೂಲಮ್ - 24
ಪ್ರೀತೋಽಸ್ಮಿ ತವ ಭೂಪಾಲ ಸನ್ಮಾರ್ಗಪರಿವರ್ತಿನಃ ।
ಸ್ವಸ್ತಿ ತೇಽಸ್ತು ಮಹಾಭಾಗ ಯತ್ ಪೃಚ್ಛಾಮಿ ತದುಚ್ಯತಾಮ್ ॥
ಅನುವಾದ
ಭೂಪಾಲನೆ! ನೀನು ಸನ್ಮಾರ್ಗದಲ್ಲಿ ನಡೆಯುವವನು. ನಾನು ನಿನ್ನ ಮೇಲೆ ಬಹಳ ಪ್ರಸನ್ನನಾಗಿರುವೆನು. ಮಹಾಭಾಗನೇ! ನಿನಗೆ ಶ್ರೇಯಸ್ಸಾಗಲೀ. ನಾನು ನಿನ್ನಲ್ಲಿ ಕೇಳುವುದನ್ನು ತಿಳಿಸು.॥24॥
ಮೂಲಮ್ - 25
ಹರಿಸಂತೋಷಕಾನ್ಯಾಸನ್ ಪುರಾಣಾನಿ ಬಹೂನ್ಯಪಿ ।
ಮಾಘೇ ಮಾಸಿ ಚೋದ್ಯತೋಽಸಿ ರಾಮಾಯಣಪರಾಯಣಃ ॥
ಮೂಲಮ್ - 26
ತವ ಭಾರ್ಯಾಪಿ ಸಾಧ್ವೀಯಂ ನಿತ್ಯಂ ರಾಮಪರಾಯಣಾ ।
ಕಿಮರ್ಥಮೇತದ್ ವೃತ್ತಾಂತಂ ಯಥಾವದ್ ವಕ್ತುಮರ್ಹಸಿ ॥
ಅನುವಾದ
ಭಗವಾನ್ ಶ್ರೀಹರಿಯನ್ನು ಸಂತುಷ್ಟಗೊಳಿಸುವ ಅನೇಕ ಪುರಾಣಗಳಿವೆ, ಅವನ್ನು ನೀನು ಪಾರಾಯಣ ಮಾಡಬಲ್ಲೆ, ಆದರೂ ಈ ಮಾಘ ಮಾಸದಲ್ಲಿ ಎಲ್ಲ ರೀತಿಯಿಂದ ಪ್ರಯತ್ನಶೀಲನಾಗಿ ನೀನು ರಾಮಾಯಣದ ಪಾರಾಯಣೆಯಲ್ಲಿಯೇ ತೊಡಗಿರುವೆ ಹಾಗೂ ನಿನ್ನ ಸಾಧ್ವೀ ಪತ್ನಿಯೂ ಕೂಡ ಸದಾ ಶ್ರೀರಾಮನ ಆರಾಧನೆಯಲ್ಲಿ ನಿರತಳಾಗಿರುವಳು. ಇದರ ಕಾರಣವೇನು? ಈ ವತ್ತಾಂತವನ್ನು ಯಥಾವತ್ತಾಗಿ ನನಗೆ ತಿಳಿಸು.॥25-26॥
ಮೂಲಮ್ - 27 (ವಾಚನಮ್)
ರಾಜೋವಾಚ
ಮೂಲಮ್
ಶೃಣುಷ್ವ ಭಗವನ್ ಸರ್ವಂ ಯತ್ಪೃಚ್ಛಸಿ ವದಾಮಿ ತತ್ ।
ಆಶ್ಚರ್ಯಂ ಯದ್ಧಿ ಲೋಕಾನಾಮಾವಯೋಚ್ಛರಿತಂ ಮುನೇ ॥
ಅನುವಾದ
ರಾಜನು ಹೇಳಿದನು - ಪೂಜ್ಯರೇ! ಕೇಳಿರಿ. ನೀವು ಕೇಳಿದುದೆಲ್ಲವನ್ನು ನಾನು ತಿಳಿಸುತ್ತಿದ್ದೇನೆ. ಮುನಿಯೇ! ನಮ್ಮಿಬ್ಬರ ಚರಿತ್ರೆ ಇಡೀ ಜಗತ್ತಿಗೇ ಆಶ್ಚರ್ಯಕರವಾಗಿದೆ.॥27॥
ಮೂಲಮ್ - 28
ಅಹಾಮಾಸಂ ಪುರಾಂ ಶೂದ್ರೋ ಮಾಲತಿರ್ನಾಮ ಸತ್ತಮ ।
ಕುಮಾರ್ಗನಿರತೋ ನಿತ್ಯಂ ಸರ್ವಲೋಕಾಹಿತೇ ರತಃ ॥
ಅನುವಾದ
ಸಾಧು ಶಿರೋಮಣಿಗಳೇ! ಹಿಂದಿನ ಜನ್ಮದಲ್ಲಿ ನಾನು ಮಾಲತಿ ಹೆಸರಿನ ಶೂದ್ರನಾಗಿದ್ದೆ. ಯಾವಾಗಲೂ ಕೆಟ್ಟದಾರಿಯಲ್ಲೇ ನಡೆಯುತ್ತಾ ಎಲ್ಲರ ಅಹಿತ ಮಾಡುವುದರಲ್ಲೇ ಮುಳುಗಿರುತ್ತಿದ್ದೆ.॥28॥
ಮೂಲಮ್ - 29
ಪಿಶುನೋ ಧರ್ಮದ್ವೇಷಿ ದೇವದ್ರವ್ಯಾಪಹಾರಕಃ ।
ಮಹಾಪಾತಕಿಸಂಸರ್ಗೀ ದೇವದ್ರವ್ಯೋಪಜೀವಕಃ ॥
ಅನುವಾದ
ಬೇರೆಯವರ ಕುರಿತು ಚಾಡಿ ಹೇಳುತ್ತಾ, ಧರ್ಮದ್ರೋಹಿ, ದೇವರ ಹಣವನ್ನು ಕದಿಯುವುದು ಹಾಗೂ ಮಹಾ ಪಾಪಿಗಳ ಸಂಸರ್ಗದಲ್ಲೇ ಇರುತ್ತಿದ್ದೆ. ನಾನು ದೇವರ ಸಂಪತ್ತಿನಿಂದಲೇ ಜೀವನ ನಡೆಸುತ್ತಿದ್ದೆ.॥29॥
ಮೂಲಮ್ - 30
ಗೋಧ್ನಶ್ಚ ಬ್ರಹ್ಮಹಾ ಚೌರೇ ನಿತ್ಯಂ ಪ್ರಾಣಿವಧೇ ರತಃ ।
ನಿತ್ಯಂ ನಿಷ್ಠೂರವತ್ತಾ ಚ ಪಾಪೀ ವೇಶ್ಯಾಪರಾಯಣಃ ॥
ಅನುವಾದ
ಗೋಹತ್ಯೆ, ಬ್ರಾಹ್ಮಣ ಹತ್ಯೆ, ಕಳ್ಳತನ ಇದೇ ನನ್ನ ಉದ್ಯೋಗವಾಗಿತ್ತು. ನಾನು ಸದಾ ಬೇರೆ ಪ್ರಾಣಿಗಳ ಹಿಂಸೆಯಲ್ಲೇ ತೊಡಗಿರುತ್ತಿದ್ದೆ. ಬೇರೆಯವರೊಂದಿಗೆ ಕಠೋರವಾಗಿ ಆಡುತ್ತಾ, ಪಾಪ ಮಾಡುತ್ತಾ ವೇಶ್ಯೆಯರಲ್ಲಿ ಆಸಕ್ತನಾಗಿದ್ದೆ.॥30॥
ಮೂಲಮ್ - 31
ಕಿಂಚಿತ್ ಕಾಲೇ ಸ್ಥಿಥೇ ಹ್ಯೇವಮನಾದೃತ್ಯ ಮಹದ್ದಚಃ ।
ಸರ್ವಬಂಧುಪರಿತ್ಯಕ್ತೋ ದುಃಖೀ ವನಮುಪಾಗಮಮ್ ॥
ಅನುವಾದ
ಹೀಗೆ ಕೆಲವು ಕಾಲ ಮನೆಯಲ್ಲಿ ಇದ್ದು ಮತ್ತೆ ಹಿರಿಯರ ಆಜ್ಞೆಯನ್ನು ಮೀರಿದ ಕಾರಣ ನನ್ನ ಸಹೋದರರು, ಬಂಧುಗಳು ನನ್ನನ್ನು ಹೊರಗಟ್ಟಿದರು. ನಾನು ದುಃಖಿಯಾಗಿ ಕಾಡಿಗೆ ಹೊರಟುಹೋದೆ.॥31॥
ಮೂಲಮ್ - 32
ಮೃಗಮಾಂಸಾಶನಂ ನಿತ್ಯಂ ತಥಾ ಮಾರ್ಗವಿರೋಧಕೃತ್ ।
ಏಕಾಕೀ ದುಃಖಬಹುಲೋ ನ್ಯವಸಂ ನಿರ್ಜನೇ ವನೇ ॥
ಅನುವಾದ
ಅಲ್ಲಿ ಪ್ರತಿದಿನ ಮೃಗಗಳ ಮಾಂಸವನ್ನು ತಿನ್ನುತ್ತಾ ಇದ್ದೆ. ಬಂದು ಹೋಗುವವರ ದಾರಿಗೆ ಮುಳ್ಳುಗಳನ್ನು ಹಾಸಿ ದಾರಿ ತಡೆಯುತ್ತಿದ್ದೆ. ಹೀಗೆ ಒಬ್ಬಂಟಿಗನಾಗಿ ಬಹಳ ದುಃಖವನ್ನು ಅನುಭವಿಸುತ್ತಾ ಆ ನಿರ್ಜನ ಕಾಡಿನಲ್ಲಿ ಇರುತ್ತಿದ್ದೆ.॥32॥
ಮೂಲಮ್ - 33
ಏಕದಾ ಕ್ಷುತ್ಪರಿಶ್ರಾಂತೇ ನಿದ್ರಾಘೂರ್ಣಃ ಪಿಪಾಸಿತಃ ।
ವಸಿಷ್ಠಸ್ಯಾಶ್ರಮಂ ದೈವಾದಪಶಯಂ ನಿರ್ಜನೇ ವನೇ ॥
ಅನುವಾದ
ಒಂದು ದಿನ ನಾನು ಹಸಿವು ಬಾಯಾರಿಕೆಗಳಿಂದ ಬಳಲಿ ನಿದ್ದೆಯಲ್ಲಿ ತೂರಾಡುತ್ತಾ ಒಂದು ನಿರ್ಜನ ಕಾಡಿಗೆ ಬಂದೆ, ಅಲ್ಲಿ ದೈವಯೋಗದಿಂದ ವಸಿಷ್ಠರ ಆಶ್ರಮ ಕಣ್ಣಿಗೆ ಬಿತ್ತು.॥33॥
ಮೂಲಮ್ - 34
ಹಂಸಕಾರಂಡವಾಕೀರ್ಣಂ ತತ್ಸಮೀಪೇ ಮಹಾತ್ಸರಃ ।
ಪರ್ಯಂತೇ ವನಪುಷ್ಯೈಘೈಶ್ಛಾದಿತಂ ತನ್ಮುನೀಶ್ವರ ॥
ಅನುವಾದ
ಆ ಆಶ್ರಮದ ಬಳಿ ಒಂದು ವಿಶಾಲ ಸರೋವರವಿತ್ತು. ಅದರಲ್ಲಿ ಹಂಸ, ಕಾರಂಡವ ಮುಂತಾದ ಜಲಪಕ್ಷಿಗಳು ಆಡುತ್ತಿದ್ದವು. ಮುನೀಶ್ವರರೇ! ಆ ಸರೋವರದ ಸುತ್ತಲೂ ಹೂವುಗಳಿಂದ ತುಂಬಿದ ಮರಗಳು ದಟ್ಟವಾಗಿದ್ದವು.॥34॥
ಮೂಲಮ್ - 35
ಅಪಿಬಂ ತತ್ರ ಪಾನೀಯಂ ತತ್ತಟೇ ವಿಗತಶ್ರಮಃ ।
ಉನ್ಮೂಲ್ಯ ವೃಕ್ಷಮೂಲಾನಿ ಮಯಾ ಕ್ಷುಚ್ಚ ನಿವಾರಿತಾ ॥
ಅನುವಾದ
ನಾನು ಅಲ್ಲಿಗೆ ಹೋಗಿ ನೀರು ಕುಡಿದು ತಟದಲ್ಲಿ ಕುಳಿತು ಆಯಾಸ ಪರಿಹರಿಸಿಕೊಂಡೆ, ಮತ್ತೆ ಕೆಲವು ಕಂದ ಮೂಲಗಳನ್ನು ಕಿತ್ತು ತಿಂದು ಹಸಿವು ಇಂಗಿಸಿಕೊಂಡೆ.॥35॥
ಮೂಲಮ್ - 36
ವಸಿಷ್ಠಸ್ಯಾಶ್ರಮೇ ತತ್ರ ನಿವಾಸಂ ಕೃತವಾನಹಮ್ ।
ಶೀರ್ಣಸಟಿಕಸಂಧಾನಂ ತತ್ರ ಚಾಹಮಕಾರಿಷಮ್ ॥
ಅನುವಾದ
ವಸಿಷ್ಠರ ಆ ಆಶ್ರಮದ ಬಳಿಯಲ್ಲೇ ನಾನು ಇರುತ್ತಿದ್ದೆ. ಅಲ್ಲೇ ತುಂಡಾದ ಸ್ಫಟಿಕ ಶಿಲೆಗಳನ್ನು ಜೋಡಿಸಿ ನಾಲ್ಕು ಗೊಡೆಗಳನ್ನು ನಿರ್ಮಿಸಿಕೊಂಡೆ.॥36॥
ಮೂಲಮ್ - 37½
ಪರ್ಣೈಸ್ತೃಣೈಶ್ಚ ಕಾಷ್ಠೈಶ್ಚ ಗೃಹಂ ಸಮ್ಯಕ್ ಪ್ರಕಲ್ಪಿತಮ್ ।
ತತ್ರಾಹಂ ವ್ಯಾಧಸತ್ತ್ವಸ್ಥೋ ಹತ್ವಾ ಬಹುವಿಧಾನ್ ಮೃಗಾನ್ ॥
ಆಜೀವಿಕಾಂ ಚ ಕುರ್ವಾಣೋ ವತ್ಸರಾಣಾಂ ಚ ವಿಂಶತಿಮ್ ।
ಅನುವಾದ
ಮತ್ತೆ ಎಲೆ, ಹುಲ್ಲು, ಕಟ್ಟಿಗೆ ಮೇಲ್ಛಾವಣಿಯಾಗಿಸಿ ಒಂದು ಚೆನ್ನಾದ ಮನೆ ಕಟ್ಟಿಕೊಂಡೆ. ಅದೇ ಮನೆಯಲ್ಲಿ ಇದ್ದು ಬೇಡರ ವೃತ್ತಿಯನ್ನು ಆಶ್ರಯಿಸಿ, ನಾನಾ ರೀತಿಯ ಪ್ರಾಣಿಗಳನ್ನು ಕೊಂದು ಅದರಿಂದ ಇಪ್ಪತ್ತು ವರ್ಷ ಜೀವನ ನಡೆಸಿದೆ.॥37॥
ಮೂಲಮ್ - 38
ಅಥೇಯಮಾಗತಾ ಸಾಧ್ವೀ ವಿಂಧ್ಯದೇಶಸಮುದ್ಭವಾ ॥
ಮೂಲಮ್ - 39
ನಿಷಾದಕುಲಸಂಭೂತಾ ನಾಮ್ನಾ ಕಾಲೀತಿ ವಿಶ್ರುತಾ ।
ಬಂಧುವರ್ಗೈಃ ಪರಿತ್ಯಕ್ತಾ ದುಃಖಿತಾ ಜೀರ್ಣವಿಗ್ರಹಾ ॥
ಅನುವಾದ
ಅನಂತರ ನನ್ನ ಈ ಪತ್ನಿಯು ಅಲ್ಲಿ ನನ್ನ ಬಳಿಗೆ ಬಂದಳು. ಹಿಂದಿನ ಜನ್ಮದಲ್ಲಿ ಈಕೆಯು ವಿಂಧ್ಯಪ್ರದೇಶದಲ್ಲಿ ಬೇಡರ ಕನ್ಯೆಯಾಗಿ ಹುಟ್ಟಿದ್ದಳು. ಈಕೆಯ ಹೆಸರು ಕಾಲಿ ಎಂದಿತ್ತು. ಅವಳ ಸಹೋದರರು-ಬಂಧುಗಳು ಈಕೆಯನ್ನು ತ್ಯಜಿಸಿದ್ದರು. ಅವಳು ದುಃಖಿತಳಾಗಿ ಶರೀರ ಬಳಲಿಹೋಗಿತ್ತು.॥38-39॥
ಮೂಲಮ್ - 40
ಬ್ರಹ್ಮನ್ ಕ್ಷುತ್ತೃಟ್ ಪರಿಶ್ರಾಂತಾ ಶೋಚಂತೀ ಭೌಕ್ತಿಕೀಂ ಕ್ರಿಯಾಮ್ ।
ದೈವಯೋಗಾತ್ ಸಮಾಯಾತಾ ಭ್ರಮಂತೀ ವಿಜನೇ ವನೇ ॥
ಅನುವಾದ
ವಿಪ್ರೋತ್ತಮರೇ! ಹಸಿವು - ಬಾಯಾರಿಕೆಯಿಂದ ಪೀಡಿತಳಾಗಿ ಹೊಟ್ಟೆಹೊರೆಯುವುದು ಹೇಗೆ? ಎಂದು ಯೋಚಿಸುತ್ತಿದ್ದಳು. ದೈವಯೋಗದಿಂದ ಅಲೆಯುತ್ತ ಆಕೆಯು ನಾನು ವಾಸಿಸುತ್ತಿದ್ದ ನಿರ್ಜನ ವನಕ್ಕೆ ಬಂದು ತಲುಪಿದಳು.॥40॥
ಮೂಲಮ್ - 41
ಮಾಸೇ ಗ್ರೀಷ್ಮೇ ಚ ತಾಪಾರ್ತ್ತಾ ಹ್ಯಂತಸ್ತಾಪಪ್ರಪೀಡಿತಾ ।
ಇಮಾಂ ದುಃಖವತೀಂ ದೃಷ್ಟ್ವಾ ಜಾತಾ ಮೇ ವಿಪುಲಾ ಘೃಣಾ ॥
ಅನುವಾದ
ಆಗ ಬೇಸಗೆಯ ಕಾಲವಾಗಿತ್ತು, ಹೊರಗೆ ಸೆಕೆ ಸತಾಯಿಸುತ್ತಿತ್ತು. ಒಳಗೆ ಮಾನಸಿಕ ದುಃಖ ಅತ್ಯಂತ ಪೀಡಿಸುತ್ತಿತ್ತು. ಇಂತಹ ದುಃಖಿಯಾದ ಈ ನಾರಿಯನ್ನು ಕಂಡು ನನ್ನ ಮನಸ್ಸಿನಲ್ಲಿ ದಯೆ ಉಂಟಾಯಿತು.॥41॥
ಮೂಲಮ್ - 42
ಮಯಾ ದತ್ತಂ ಜಲಂ ಚಾಸ್ಯೈ ಮಾಂಸಂ ವನಫಲಂ ತಥಾ ।
ಗತಶ್ರಮಾ ತು ಸಾ ಪೃಷ್ಟಾ ಮಯಾ ಬ್ರಹ್ಮಾನ್ ಯಥಾತಥಮ್ ॥
ಅನುವಾದ
ನಾನು ಈಕೆಗೆ ಕುಡಿಯಲು ನೀರು ಮತ್ತು ತಿನ್ನಲು ಮಾಂಸ, ಕಾಡಿನ ಹಣ್ಣುಗಳನ್ನು ಕೊಟ್ಟೆ. ಸ್ವಾಮಿ! ಕಾಲಿಯು ವಿಶ್ರಾಂತಿ ಪಡೆದಾಗ ನಾನು ಆಕೆಯಲ್ಲಿ ಅವಳ ವೃತ್ತಾಂತವನ್ನು ವಿಚಾರಿಸಿದೆ.॥42॥
ಮೂಲಮ್ - 43
ನ್ಯವೇದಯತ್ ಸ್ವಕರ್ಮಾಣಿ ತಾನಿ ಶೃಣು ಮಹಾಮುನೇ ।
ಇಯಂ ಕಾಲೀ ತು ನಾಮ್ನಾ ವೈ ನಿಷಾದಕುಲಸಂಭವಾ ॥
ಅನುವಾದ
ಮಹಾಮುನಿಗಳೇ! ನಾನು ಕೇಳಿದಾಗ ಆಕೆಯು ತನ್ನ ಜನ್ಮ ಕರ್ಮಗಳನ್ನು ತಿಳಿಸಿದುದನ್ನು ಕೇಳೀರಿ - ಆಕೆಯ ಹೆಸರು ಕಾಲಿ ಎಂದಿದ್ದು, ಆಕೆಯು ನಿಷಾದ ಕುಲದ ಕನ್ಯೆಯಾಗಿದ್ದಳು.॥43॥
ಮೂಲಮ್ - 44
ದಾಂಭೀಕಸ್ಯ ಸುತಾ ವಿದ್ವನ್ ನ್ಯವಸದ್ ವಿಂಧ್ಯಪರ್ವತೇ ।
ಪರಸ್ವಹಾರಿಣೀ ನಿತ್ಯಂ ಸದಾ ಪೈಶುನ್ಯವಾದಿನೀ ॥
ಅನುವಾದ
ವಿದ್ವಾಂಸರೇ! ಆಕೆಯ ತಂದೆಯ ಹೆಸರು ದಾಂಭಿಕ ಎಂದಿತ್ತು. ಈಕೆಯು ಅವನ ಮಗಳಾಗಿದ್ದು ವಿಂಧ್ಯಪರ್ವತದಲ್ಲಿ ವಾಸಿಸುತ್ತಿದ್ದಳು. ಸದಾ ಬೇರೆಯವರ ಹಣ ಕಳ್ಳತನ ಮಾಡುವುದು ಹಾಗೂ ಚಾಡಿ ಹೇಳುವುದು ಅವಳ ಕೆಲಸವಾಗಿತ್ತು.॥44॥
ಮೂಲಮ್ - 45
ಬಂಧುವರ್ಗೈಃ ಪರಿತ್ಯಕ್ತಾ ಯತೋ ಹತವತೀ ಪತಿಮ್ ।
ಕಾಂತಾರೇ ವಿಜನೇ ಬ್ರಹ್ಮನ್ ಮತ್ಸಮೀಪಮುಪಾಗತಾ ॥
ಅನುವಾದ
ಒಂದು ದಿನ ಆಕೆಯು ತನ್ನ ಪತಿಯನ್ನು ಕೊಂದುಬಿಟ್ಟಳು, ಇದರಿಂದ ಮನೆಯವರು ಇವಳನ್ನು ಮನೆಯಿಂದ ಹೊರ ಹಾಕಿದರು. ವಿಪ್ರರೇ! ಈ ರೀತಿ ಅಲೆಯುತ್ತಾ ದುರ್ಗಮವೂ ನಿರ್ಜನವೂ ಆದ ವನದಲ್ಲಿ ನನ್ನ ಬಳಿಗೆ ಬಂದಳು.॥45॥
ಮೂಲಮ್ - 46½
ಇತ್ಯೇವಂ ಸ್ವಕೃತಂ ಕರ್ಮ ಸರ್ವಂ ಮಹ್ಯಾಂ ನ್ಯವೇದಯತ್ ।
ವಸಿಷ್ಠಸ್ಯಾಶ್ರಮೇ ಪುಣ್ಯೇ ಅಹಂ ಚೇಯಂ ಚ ವೈ ಮುನೇ ॥
ದಂಪತೀಭಾವಮಾಶ್ರಿತ್ಯ ಸ್ಥಿತೌ ಮಾಂಸಾಶಿನೌ ತದಾ ।
ಅನುವಾದ
ಅವಳೂ ತನ್ನ ಎಲ್ಲ ವೃತ್ತಾಂತವನ್ನು ಹೀಗೆ ನನ್ನಲ್ಲಿ ಹೇಳಿದ್ದಳು. ಮುನಿಯೇ! ಆಗ ವಸಿಷ್ಠರ ಆ ಪವಿತ್ರ ಆಶ್ರಮದ ಬಳಿಯಲ್ಲೇ ನಾನು ಮತ್ತು ಕಾಲಿ ಪತಿ-ಪತ್ನಿಯರಾಗಿ ಇರುತ್ತಾ ಮಾಂಸಾಹಾರದಿಂದ ಜೀವನ ನಡೆಸುತ್ತಿದ್ದೆವು.॥46॥
ಮೂಲಮ್ - 47
ಉದ್ಯಮಾರ್ಥೇ ಗತೌ ಚೈವ ವಸಿಷ್ಠಸ್ಯಾಶ್ರಮಂ ತದಾ ॥
ಮೂಲಮ್ - 48
ದೃಷ್ಟ್ವಾ ಚೈವ ಸಮಾಜಂ ಚ ದೇವರ್ಷೀಣಾಂ ಚ ಸತ್ತಮ ।
ರಾಮಾಯಣಪರಾ ವಿಪ್ರಾ ಮಾಘೇ ದೃಷ್ಟಾ ದಿನೇ ದಿನೇ ॥
ಅನುವಾದ
ಒಂದು ದಿನ ನಾವಿಬ್ಬರೂ ಜೀವನ ನಿರ್ವಾಹಕ್ಕಾಗಿ ಅಲ್ಲೆ ಇರುವ ವಸಿಷ್ಠರ ಆಶ್ರಮಕ್ಕೆ ಹೋದೆವು. ಮಹಾತ್ಮರೇ! ಅಲ್ಲಿ ದೇವರ್ಷಿಗಳ ಸಮಾಜ ಸೇರಿತ್ತು. ಅದನ್ನು ನೋಡಿ ನಾವು ಆ ಕಡೆ ಹೋದೆವು. ಅಲ್ಲಿ ಮಾಘ ಮಾಸದಲ್ಲಿ ಪ್ರತಿದಿನ ಬ್ರಾಹ್ಮಣರು ರಾಮಾಯಣದ ಪಾರಾಯಣ ಮಾಡುತ್ತಿದ್ದರು.॥47-48॥
ಮೂಲಮ್ - 49
ನಿರಾಹಾರೌ ಚ ವಿಕ್ರಾಂತೌ ಕ್ಷುತ್ಪಿಪಾಸಾಪ್ರಪೀಡಿತೌ ।
ಅನಿಚ್ಛಯಾ ಗತೌ ತತ್ರ ವಿಸಿಷ್ಠಸ್ಯಾಶ್ರಮಂ ಪ್ರತಿ ॥
ಮೂಲಮ್ - 50
ರಾಮಾಯಣ ಕಥಾಂ ಶ್ರೋತುಂ ನವಾಹ್ನಾ ಚೈವ ಭಕ್ತಿತಃ ।
ತತ್ಕಾಲ ಏವ ಪಂಚತ್ವಮಾವಯೋರಭವನ್ಮುನೇ ॥
ಅನುವಾದ
ಆಗ ನಾವು ನಿರಾಹಾರಿಯಾಗಿದ್ದೆವು ಹಾಗೂ ಪುರುಷಾರ್ಥ ಮಾಡಲು ಸಮರ್ಥರಾಗಿದ್ದರೂ ಹಸಿವು-ಬಾಯಾರಿಕೆಗಳಿಂದ ಕಷ್ಟಪಡುತ್ತಿದ್ದೆವು. ಆದ್ದರಿಂದ ಇಷ್ಟವಿಲ್ಲದಿದ್ದರೂ ವಸಿಷ್ಠರ ಆಶ್ರಮಕ್ಕೆ ಹೋಗಿದ್ದೆವು ಮತ್ತೆ ಒಂಭತ್ತು ದಿನವೂ ಭಕ್ತಿಪೂರ್ವಕ ರಾಮಾಯಣದ ಕಥೆ ಕೇಳಲು ನಾವು ಅಲ್ಲಿಗೆ ಹೋಗುತ್ತಾ ಇದ್ದೆವು. ಮುನಿಗಳೇ! ಆಗಲೇ ನಾವಿಬ್ಬರೂ ಮೃತ್ಯುಮುಖರಾದೆವು.॥49-50॥
ಮೂಲಮ್ - 51
ಕರ್ಮಣಾ ತೇನ ತುಷ್ಟಾತ್ಮಾ ಭಗವಾನ್ ಮಧುಸೂದನಃ ।
ಸ್ವದೂತಾನ್ ಪ್ರೇಷಯಾಮಾಸ ಮದಾಹರಣಕಾರಣಾತ್ ॥
ಅನುವಾದ
ನಮ್ಮ ಆ ಕರ್ಮದಿಂದ ಭಗವಾನ್ ಮಧುಸೂದನನ ಮನಸ್ಸು ಪ್ರಸನ್ನವಾಗಿತ್ತು. ಆದ್ದರಿಂದ ಅವನು ನಮ್ಮನ್ನು ಕರೆದುಕೊಂಡು ಹೋಗಲು ದೂತರನ್ನು ಕಳಿಸಿದನು.॥51॥
ಮೂಲಮ್ - 52
ಆರೋಪ್ಯ ಮಾಂ ವಿಮಾನೇ ತು ಜಗ್ಮುಸ್ತೇತೋ ಚ ಪರಂ ಪದಮ್ ।
ಆವಾಂ ಸಮೀಪಮಾಪನ್ನೌ ದೇವದೇವಸ್ಯ ಚಕ್ರಿಣಃ ॥
ಅನುವಾದ
ಆ ದೂತರು ನಮ್ಮಿಬ್ಬರನ್ನು ವಿಮಾನದಲ್ಲಿ ಕುಳ್ಳಿರಿಸಿ ಭಗವಂತನ ಪರಮಪದಕ್ಕೆ ಕೊಂಡು ಹೋದರು. ನಾವಿಬ್ಬರೂ ದೇವಾಧಿದೇವ ಚಕ್ರಪಾಣಿಯ ಹತ್ತಿರಕ್ಕೆ ತಲುಪಿದೆವು.॥52॥
ಮೂಲಮ್ - 53
ಭಕ್ತವಂತೌ ಮಹಾಭೋಗಾನ್ ಯಾವತ್ಕಾಲಂ ಶೃಣುಷ್ವ ಮೇ ।
ಯುಗಕೋಟಿಸಹಸ್ರಾಣಿ ಯುಗಕೋಟಿಶತಾನಿ ಚ ॥
ಮೂಲಮ್ - 54
ಉಷಿತ್ವಾ ರಾಮಭವನೇ ಬ್ರಹ್ಮಲೋಕಮುಪಾಗತೌ ।
ತಾವತ್ಕಾಲಂ ಚ ತತ್ರಾಪಿ ಸ್ಥಿತ್ವೈಂದ್ರಪದಮಾಗತೌ ॥
ಅನುವಾದ
ಅಲ್ಲಿ ನಾವು ಅನೇಕ ದಿವ್ಯ ಭೋಗಗಳನ್ನು ಅನುಭವಿಸುತ್ತಾ ಕೋಟಿ ಸಾವಿರ ಯುಗಗಳವರೆಗೆ ಶ್ರೀರಾಮ ಧಾಮದಲ್ಲಿ ವಾಸಿಸಿ, ನಾವು ಬ್ರಹ್ಮಲೋಕಕ್ಕೆ ಹೋದೆವು. ಅಲ್ಲಿಯೂ ಅಷ್ಟೇ ಸಮಯ ಇದ್ದು ನಾವು ಇಂದ್ರಲೋಕಕ್ಕೆ ಹೋದೆವು.॥53-54॥
ಮೂಲಮ್ - 55
ತತ್ರಾಪಿ ತಾವತ್ಕಾಲಂ ಚ ಭುಕ್ತ್ವಾ ಭೋಗಾನನುತ್ತಮಾನ್ ।
ತತಃ ಪೃಥ್ವೀಂ ವಯಂ ಪ್ರಾಪ್ತಾಃ ಕ್ರಮೇಣ ಮುನಿಸತ್ತಮ ॥
ಅನುವಾದ
ಮುನಿಶ್ರೇಷ್ಠರೇ! ಇಂದ್ರಲೋಕದಲ್ಲಿಯೂ ಅಷ್ಟೇ ಸಮಯ ಪರಮ ಉತ್ತಮ ಭೋಗಗಳನ್ನು ಭೋಗಿಸಿದ ಬಳಿಕ ನಾವು ಕ್ರಮವಾಗಿ ಈ ಭೂಲೋಕಕ್ಕೆ ಬಂದೆವು.॥55॥
ಮೂಲಮ್ - 56
ಅತ್ರಾಪಿ ಸಂಪದತುಲಾ ರಾಮಾಯಣಪ್ರಸಾದತಃ ।
ಅನಿಚ್ಛಯಾ ಕೃತೇನಾಪಿ ಪ್ರಾಪ್ತಮೇವಂವಿಧಂ ಮುನೇ ॥
ಅನುವಾದ
ಇಲ್ಲಿಯೂ ಕೂಡ ರಾಮಾಯಣದ ಪ್ರಸಾದದಿಂದ ನಮಗೆ ಅತುಲ ಸಂಪತ್ತು ಪ್ರಾಪ್ತವಾಗಿದೆ. ಮುನಿಗಳೇ! ಇಚ್ಛೆ ಇಲ್ಲದೆ ರಾಮಾಯಣವನ್ನು ಶ್ರವಣಿಸಿದರೂ ನಮಗೆ ಇಂತಹ ಫಲ ಪ್ರಾಪ್ತವಾಯಿತು.॥56॥
ಮೂಲಮ್ - 57
ನವಾಹ್ನಾ ಕಿಲ ಶ್ರೋತವ್ಯಂ ರಾಮಾಯಣ ಕಥಾಮೃತಮ್ ।
ಭಕ್ತಿಭಾವೇನ ಧರ್ಮಾತ್ಮನ್ ಜನ್ಮಮೃತ್ಯುಜರಾಪಹಮ್ ॥
ಅನುವಾದ
ಧರ್ಮಾತ್ಮರೇ! ಒಂಭತ್ತು ದಿನಗಳವರೆಗೆ ಭಕ್ತಿಭಾವದಿಂದ ರಾಮಾಯಣದ ಅಮೃತಮಯ ಕಥೆ ಕೇಳಿದರೆ, ಅದು ಜನ್ಮ, ಮೃತ್ಯುವನ್ನು ನಾಶಮಾಡುವಂತಹುದು.॥57॥
ಮೂಲಮ್ - 58
ಅವಶೇನಾಪಿ ಯತ್ಕರ್ಮ ಕೃತಂ ತು ಸುಮಹತ್ಫಲಮ್ ।
ದದಾತಿ ಶೃಣು ವಿಪ್ರೇಂದ್ರ ರಾಮಾಯಣಪ್ರಸಾದತಃ ॥
ಅನುವಾದ
ವಿಪ್ರವರ್ಯರೇ! ವಿವಶನಾಗಿ ರಾಮಾಯಣ ಕೇಳಿದರೂ, ಅದರ ಪ್ರಸಾದದಿಂದ ಪರಮ, ಮಹತ್ ಫಲ ದೊರೆಯುವುದು.॥58॥
ಮೂಲಮ್ - 59 (ವಾಚನಮ್)
ನಾರದ ಉವಾಚ
ಮೂಲಮ್
ಏತತ್ಸರ್ವಂ ನಿಶಮ್ಯಾಸೌ ವಿಭಾಂಡಕೋ ಮುನೀಶ್ವರಃ ।
ಅಭಿನಂದ್ಯ ಮಹೀಪಾಲಂ ಪ್ರಯಯೌ ಸ್ವತಪೋವನಮ್ ॥
ಅನುವಾದ
ನಾರದರು ಹೇಳಿದರು - ಇದೆಲ್ಲವನ್ನು ಕೇಳಿ ಮುನೀಶ್ವರ ವಿಭಾಂಡಕರು ರಾಜಾ ಸುಮತಿಯನ್ನು ಅಭಿನಂದಿಸಿ ತಮ್ಮ ತಪೋವನಕ್ಕೆ ತೆರಳಿದರು.॥59॥
ಮೂಲಮ್ - 60
ತಸ್ಮಾಚ್ಛೃಣುಧ್ವಂ ವಿಪ್ರೇಂದ್ರಾ ದೇವದೇವಸ್ಯ ಚಕ್ರಿಣಃ ।
ರಾಮಾಯಣಕಥಾ ಚೈವ ಕಾಮಧೇನೂಪಮಾ ಸ್ಮೃತಾ ॥
ಅನುವಾದ
ವಿಪ್ರವರ್ಯರೇ! ಆದ್ದರಿಂದ ನೀವು ದೇವಾಧಿದೇವ ಚಕ್ರಪಾಣಿ ಭಗವಾನ್ ಶ್ರೀಹರಿಯ ಕಥೆ ಕೇಳಿರಿ. ರಾಮಾಯಣ ಕಥೆ ಕಾಮಧೇನುವಿನಂತೆ ಬಯಸಿದ ಫಲವನ್ನು ಕೊಡುವುದೆಂದು ಹೇಳಲಾಗಿದೆ.॥60॥
ಮೂಲಮ್ - 61
ಮಾಘೇ ಮಾಸೇ ಸಿತೇ ಪಕ್ಷೇ ರಾಮಾಯಣಂ ಪ್ರಯತ್ನತಃ ।
ನವಾಹ್ನಾ ಕಿಲ ಶ್ರೋತವ್ಯಂ ಸರ್ವಧರ್ಮಫಲಪ್ರದಮ್ ॥
ಅನುವಾದ
ಮಾಘಮಾಸದ ಶುಕ್ಲಪಕ್ಷದಲ್ಲಿ ಪ್ರಯತ್ನಪೂರ್ವಕ ರಾಮಾಯಣದ ನವಾಹ್ನ ಕಥೆ ಕೇಳಬೇಕು. ಅದು ಸಮಸ್ತ ಧರ್ಮಗಳ ಫಲವನ್ನು ಕೊಡುವಂತಹದಾಗಿದೆ.॥61॥
ಮೂಲಮ್ - 62
ಯ ಇದಂ ಪುಣ್ಯಮಾಖ್ಯಾನಂ ಸರ್ವಪಾಪಪ್ರಣಾಶನಮ್ ।
ವಾಚಯೇಚ್ಛೃಣುಯಾದ್ ವಾಪಿ ರಾಮಾಭಕ್ತಶ್ಚ ಜಾಯತೇ ॥
ಅನುವಾದ
ಈ ಪವಿತ್ರ ಆಖ್ಯಾನವು ಸಮಸ್ತ ಪಾಪಗಳನ್ನು ನಾಶ ಮಾಡುವಂತಹುದು. ಇದನ್ನು ಓದುವವನು, ಕೇಳುವವನು ಭಗವಾನ್ ಶ್ರೀರಾಮನ ಭಕ್ತನಾಗುತ್ತಾನೆ.॥62॥
ಅನುವಾದ (ಸಮಾಪ್ತಿಃ)
ಶ್ರೀಸ್ಕಂದಪುರಾಣದ ಉತ್ತರ ಖಂಡದಲ್ಲಿನ ಮಾಘಮಾಸದಲ್ಲಿ ರಾಮಾಯಣ ಕಥಾ ಶ್ರವಣ ಫಲದ ವರ್ಣನೆ ಎಂಬ ಮೂರನೇ ಅಧ್ಯಾಯ ಪೂರ್ಣವಾಯಿತು.॥3॥