೦೧ ಮೊದಲನೆಯ ಅಧ್ಯಾಯ

ಭಾಗಸೂಚನಾ

ಕಲಿಯುಗದ ಸ್ಥಿತಿ, ಕಲಿಕಾಲದ ಮನುಷ್ಯರ ಉದ್ಧಾರದ ಉಪಾಯ, ರಾಮಾಯಣ ಪಾಠದ ಮಹಿಮೆ, ಅದರ ಶ್ರವಣಕ್ಕಾಗಿ ಉತ್ತಮ ಕಾಲ, ಮುಂತಾದ ವರ್ಣನೆ

ಮೂಲಮ್ - 1

ಶ್ರೀರಾಮಃ ಶರಣಂ ಸಮಸ್ತಜಗತಾಂರಾಮಂ ವಿನಾ ಕಾ ಗತೀ
ರಾಮೇಣ ಪ್ರತಿಹನ್ಯತೇ ಕಲಿಮಲಂರಾಮಾಯ ಕಾರ್ಯಂ ನಮಃ ।
ರಾಮಾತ್ ತ್ರಸ್ಯತಿ ಕಾಲಭೀಮಭುಜಗೋರಾಮಸ್ಯ ಸರ್ವಂ ವಶೇ
ರಾಮೇ ಭಕ್ತಿರಖಂಡಿತಾ ಭವತು ಮೇರಾಮ ತ್ವಮೇವಾಶ್ರಯಃ ॥

ಅನುವಾದ

ಶ್ರೀರಾಮಚಂದ್ರನು ಸಮಸ್ತ ಜಗತ್ತಿಗೆ ಆಶ್ರಯ ಕೊಡುವವನು. ಶ್ರೀರಾಮನಿಂದಲ್ಲದೆ ಬೇರೆ ಗತಿ ಯಾವುದಿದೆ? ಶ್ರೀರಾಮನು ಕಲಿಯುಗದ ಎಲ್ಲ ದೋಷಗಳನ್ನು ನಾಶಮಾಡಿಬಿಡುತ್ತಾನೆ, ಆದ್ದರಿಂದ ನಾನು ನಮಸ್ಕಾರ ಮಾಡುತ್ತೇನೆ. ಶ್ರೀರಾಮನಿಗೆ ಕಾಲರೂಪೀ ಭಯಂಕರ ಸರ್ಪವೂ ಹೆದರುತ್ತದೆ. ಜಗತ್ತಿನ ಎಲ್ಲವೂ ಭಗವಾನ್ ಶ್ರೀರಾಮನ ವಶದಲ್ಲಿದೆ. ಶ್ರೀರಾಮನಲ್ಲಿ ನನಗೆ ಅಖಂಡ ಭಕ್ತಿಯು ನೆಲಸಲಿ. ಓ ರಾಮನೇ! ನೀನೇ ನನಗೆ ಆಧಾರವಾಗಿರುವೆ.॥1॥

ಮೂಲಮ್ - 2

ಚಿತ್ರಕೂಟಾಲಯಂ ರಾಮಮಿಂದಿರಾನಂದಮಂದಿರಮ್ ।
ವಂದೇ ಚ ಪರಮಾನಂದಂ ಭಕ್ತಾನಾಮಭಯಪ್ರದಮ್ ॥

ಅನುವಾದ

ಚಿತ್ರಕೂಟದಲ್ಲಿ ವಾಸಿಸುವ ಭಗವತೀ ಲಕ್ಷ್ಮೀ (ಸೀತೆ)ಗೆ ಆನಂದನಿಕೇತನನೂ ಮತ್ತು ಭಕ್ತರಿಗೆ ಅಭಯವನ್ನು ಕೊಡುವ ಪರಮಾನಂದ ಸ್ವರೂಪನೂ ಆದ ಭಗವಾನ್ ಶ್ರೀರಾಮಚಂದ್ರನಿಗೆ ನಾನು ನಮಸ್ಕರಿಸುತ್ತೇನೆ.॥2॥

ಮೂಲಮ್ - 3

ಬ್ರಹ್ಮವಿಷ್ಣುಮಹೇಶಾದ್ಯಾ ಯಸ್ಯಾಂಶಾ ಲೋಕಸಾಧಕಾಃ ।
ನಮಾಮಿ ದೇವಂ ಚಿದ್ರೂಪಂ ವಿಶುದ್ಧಂ ಪರಮಂ ಭಜೇ ॥

ಅನುವಾದ

ಜಗತ್ತಿನ ಸೃಷ್ಟಿ, ಸ್ಥಿತಿ, ಲಯಮಾಡುವ ಬ್ರಹ್ಮ, ವಿಷ್ಣು, ಮಹೇಶ್ವರ ಮುಂತಾದ ದೇವತೆಗಳು ಶ್ರೀರಾಮನ ಅಭಿನ್ನ ಅಂಶರಾಗಿದ್ದಾರೆ. ಆ ಪರಮ ವಿಶುದ್ಧ ಸಚ್ಚಿದಾನಂದಮಯ ಪರಮಾತ್ಮ ಶ್ರೀರಾಮಚಂದ್ರನಿಗೆ ಸಮಸ್ಕರಿಸಿ, ಅವನ ಭಜನ-ಚಿಂತನೆಯಲ್ಲಿ ಮನಸ್ಸನ್ನು ತೊಡಗಿಸುತ್ತೇನೆ.॥3॥

ಮೂಲಮ್ - 4 (ವಾಚನಮ್)

ಋಷಯ ಊಚುಃ

ಮೂಲಮ್

ಭಗವನ್ ಸರ್ವಮಾಖ್ಯಾತಂ ಯತ್ ಪೃಷ್ಟಂ ವಿದುಷಾ ತ್ವಯಾ ।
ಸಂಸಾರಪಾಶಬದ್ಧಾನಾಂ ದುಃಖಾನಿ ಸುಬಹೂನಿ ಚ ॥

ಅನುವಾದ

ಋಷಿಗಳು ಹೇಳಿದರು - ಪೂಜ್ಯರೇ! (ಸನಕಾದಿ ಋಷಿಗಳು ಸೂತಪುರಾಣಿಕರಲ್ಲಿ ಕೇಳುತ್ತಿದ್ದಾರೆ) ತಾವು ವಿದ್ವಾಂಸರೂ, ಜ್ಞಾನಿಗಳೂ ಆಗಿರುವಿರಿ. ಹಿಂದೆ ನಾವು ಕೇಳಿದುದೆಲ್ಲ ನೀವು ಚೆನ್ನಾಗಿ ತಿಳಿಸಿರುವಿರಿ. ಸಂಸಾರ ಬಂಧನದಲ್ಲಿ ಬಿದ್ದ ಜೀವಿಗಳ ದುಃಖಗಳು ಬಹಳ ಇವೆ.॥4॥

ಮೂಲಮ್ - 5

ಏತತ್ ಸಂಸಾರಪಾಶಸ್ಯಛೇದಕಃ ಕತಮಃ ಸ್ಮೃತಃ
ಕಲೌ ವೇದೋಕ್ತಮಾರ್ಗಾಶ್ಚ ನಶ್ಯಂತೀತಿ ತ್ವಯೋದಿತಾಃ ॥

ಅನುವಾದ

ಈ ಸಂಸಾರ ಬಂಧನವನ್ನು ಬಿಡಿಸುವವರು ಯಾರಾಗಿದ್ದಾರೆ? ಕಲಿಯುಗದಲ್ಲಿ ವೇದೋಕ್ತ ಮಾರ್ಗವು ನಾಶವಾಗಿ ಹೋದೀತು ಎಂದು ನೀವು ಹೇಳಿರುವಿರಿ.॥5॥

ಮೂಲಮ್ - 6½

ಅಧರ್ಮನಿರತಾನಾಂ ಚ ಯಾತನಾಶ್ಚ ಪ್ರಕೀರ್ತಿತಾಃ ।
ಘೋರೇ ಕಲಿಯುಗೇ ಪ್ರಾಪ್ತೇ ವೇದಮಾರ್ಗಬಹಿಷ್ಕೃತೇ ॥
ಪಾಖಂಡತ್ವಂ ಪ್ರಸಿದ್ಧಂ ವೈ ಸರ್ವೈಶ್ಚ ಪರಿಕೀರ್ತಿತಮ್ ।

ಅನುವಾದ

ಅಧರ್ಮಪರಾಯಣ ಮನುಷ್ಯರಿಗೆ ಆಗುವ ಘೋರ ಕಷ್ಟಗಳನ್ನು ನೀವು ವರ್ಣಿಸಿರುವಿರಿ. ಘೋರ ಕಲಿಯುಗವು ಬಂದಾಗ ವೇದೋಕ್ತ ಮಾರ್ಗ ಲುಪ್ತವಾಗಿ ಹೋದೀತು, ಆಗ ಪಾಖಂಡವೇ ಹರಡೀತು, ಈ ಮಾತು ಪ್ರಸಿದ್ಧವಾಗಿದೆ. ಪ್ರಾಯಶಃ ಎಲ್ಲ ಜ್ಞಾನಿಗಳೂ ಹೀಗೆ ಹೇಳಿರುವರು.॥6½॥

ಮೂಲಮ್ - 7½

ಕಾಮಾರ್ತ್ತಾ ಹೃಸ್ವದೇಹಾಶ್ಚ ಲುಬ್ಧಾ ಅನ್ಯೋನ್ಯತತ್ಪರಾಃ ॥
ಕಾಲೌ ಸರ್ವೇ ಭವಿಷ್ಯಂತಿ ಸ್ವಲ್ಪಾಯುರ್ಬಹುಪುತ್ರಕಾಃ ।

ಅನುವಾದ

ಕಲಿಯುಗದ ಎಲ್ಲ ಜನರು ಕಾಮಪೀಡಿತರಾಗಿರುವರು. ಕುಳ್ಳ ಶರೀರವಿದ್ದು, ಲೋಭಿಯಾಗಿ ಧರ್ಮ ಮತ್ತು ದೇವರ ಆಶ್ರಯ ಬಿಟ್ಟು ಪರಸ್ಪರ ಅವಲಂಬಿಸಿರುವರು. ಪ್ರಾಯಶಃ ಎಲ್ಲರೂ ಅಲ್ಪಾಯುಗಳೂ, ಹೆಚ್ಚು ಮಕ್ಕಳುಳ್ಳವರೂ ಆಗುವರು.॥7½॥

ಮೂಲಮ್ - 8

ಸ್ತ್ರಿಯಃ ಸ್ವಪೋಷಣಪರಾ ವೇದಶ್ಯಾಚರಣತತ್ಪರಾಃ ॥

ಮೂಲಮ್ - 9

ಪತಿವಾಕ್ಯಮನಾದೃತ್ಯ ಸದಾನ್ಯಗೃಹತತ್ಪರಾಃ ।
ದುಃಶೀಲೇಷು ಕರಿಷ್ಯಂತಿ ಪುರುಷೇಷು ಸದಾ ಸ್ಪೃಹಾಮ್ ॥

ಅನುವಾದ

ಕಲಿಯುಗದ ಸ್ತ್ರೀಯರು ತನ್ನ ಶರೀರ ಪೋಷಣೆಯಲ್ಲಿ ತತ್ಪರರಾಗಿ, ವೇಶ್ಯೆಯರ ಆಚರಣೆಯಲ್ಲಿ ತತ್ಪರರಾಗುವರು. ಅವರು ತಮ್ಮ ಪತಿಯ ಮಾತನ್ನು ಅನಾದರಿಸಿ ಸದಾ ಇತರರ ಮನೆಗೆ ಬಂದು ಹೋಗುತ್ತಾ ಇರುವರು. ಸದಾ ದುರಾಚಾರಿ ಪುರುಷರೊಂದಿಗೆ ಸೇರುವ ಅಭಿಲಾಷೆಯುಳ್ಳವರಾಗುವರು.॥8-9॥

ಮೂಲಮ್ - 10

ಅಸದ್ವಾರ್ತ್ತಾ ಭವಿಷ್ಯಂತಿ ಪುರುಷೇಷು ಕುಲಾಂಗನಾಃ ।
ಪುರುಷಾನೃತಭಾಷಿಣ್ಯೋ ದೇಹಸಂಸ್ಕಾರವರ್ಜಿತಾಃ ॥

ಅನುವಾದ

ಉತ್ತಮ ಕುಲದ ಸ್ತ್ರೀಯರೂ ಕೂಡ ಪರಪುರುಷರೊಂದಿಗೆ ಹಾಸ್ಯ ವಿನೋದ ಮಾಡುತ್ತಾ ಕಠೋರ ಮತ್ತು ಸುಳ್ಳು ಮಾತನಾಡುವರು. ಶರೀರವನ್ನು ಶುದ್ಧ ಮತ್ತು ಸುಸಂಸ್ಕೃತವಾಗಿಡುವ ಸದ್ಗುಣಗಳಿಂದ ವಂಚಿತರಾಗುವರು.॥10॥

ಮೂಲಮ್ - 11

ವಾಚಾಲಾಶ್ಚ ಭವಿಷ್ಯಂತಿ ಕಲೌ ಪ್ರಾಯೇಣ ಯೋಷಿತಃ ।
ಭಿಕ್ಷವಶ್ಚಾಪಿ ಮಿತ್ರಾದಿಸ್ನೇಹಸಂಬಂಧಯಂತ್ರಿತಾಃ ॥

ಅನುವಾದ

ಕಲಿಯುಗದಲ್ಲಿ ಹೆಚ್ಚಿನ ಸ್ತ್ರೀಯರು ವಾಚಾಳಿಗಳಾಗುವರು. ಭಿಕ್ಷೆಯಿಂದ ಜೀವನ ನಿರ್ವಹಣೆ ಮಾಡುವ ಸಂನ್ಯಾಸಿಗಳೂ ಕೂಡ ಮಿತ್ರಾದಿಗಳ ಸ್ನೇಹಪಾಶದಲ್ಲಿ ಬಂಧಿತರಾಗಿರುವರು.॥11॥

ಮೂಲಮ್ - 12½

ಅನ್ನೋಪಾನಿಮಿತ್ತೇನ ಶಿಷ್ಯಾನ್ ಬಂಧ್ನಂತಿ ಲೋಲುಪಾಃ ।
ಉಭಾಭ್ಯಾಮಪಿ ಪಾಣಿಭ್ಯಾಂ ಶಿರಃಕಂಡೂಯನಂ ಸ್ತ್ರಿಯಃ ॥
ಕುರ್ವಂತ್ಯೋ ಗೃಹಭರ್ತೄಣಾಮಾಜ್ಞಾಂ ಭೇತ್ಸ್ಯಂತ್ಯತಂದ್ರಿತಾಃ ।

ಅನುವಾದ

ಅವರು ಹೊಟ್ಟೆ ತುಂಬಿಸಿಕೊಳ್ಳುವ ಚಿಂತನೆಯಿಂದ ಲೋಭವಶರಾಗಿ ಶಿಷ್ಯರನ್ನು ಸಂಗ್ರಹಿಸುವರು. ಸ್ತ್ರೀಯರು ಎರಡೂ ಕೈಗಳಿಂದ ತಲೆ ತುರಿಸಿಕೊಳ್ಳುತ್ತಾ ಚಿಂತೆಯಿಂದ ಲೋಭವಶರಾಗಿ ಯಜಮಾನನ ಮಾತನ್ನು ಬೇಕೆಂತಲೇ ಮೀರಿ ನಡೆಯುವರು.॥12½॥

ಮೂಲಮ್ - 13½

ಪಾಖಂಡಾಲಾಪನಿರತಾಃ ಪಾಖಂಡಜನಸಂಗಿನಃ ॥
ಯದಾ ದ್ವಿಜಾ ಭವಿಷ್ಯಂತಿ ತದಾ ವೃದ್ಧಿಂ ಗತಃ ಕಲಿಃ ।

ಅನುವಾದ

ಬ್ರಾಹ್ಮಣರು ಪಾಖಂಡಿಗಳೊಂದಿಗೆ ಇದ್ದು ಪಾಖಂಡ ಪೂರ್ಣ ಮಾತುಗಳನ್ನಾಡುವಾಗ ಕಲಿಯುಗವು ತುಂಬಾ ಹೆಚ್ಚಿದೆ ಎಂದು ತಿಳಿಯಬೇಕು.॥13½॥

ಮೂಲಮ್ - 14½

ಘೋರೇ ಕಲಿಯುಗೇ ಬ್ರಹ್ಮನ್ ಜನಾನಾಂ ಪಾಪಕರ್ಮಿಣಾಮ್ ॥
ಮನಃ ಶುದ್ಧಿವಿಹೀನಾನಾಂ ನಿಷ್ಕೃತಿಶ್ಚ ಕಥಂ ಭವೇತ್ ।

ಅನುವಾದ

ಬ್ರಹ್ಮಜ್ಞಾನಿಗಳೇ! ಈ ಪ್ರಕಾರ ಘೋರ ಕಲಿಯುಗ ಬಂದಾಗ ಸದಾ ಪಾಪ-ಪರಾಯಣರಾಗಿ ಅಂತಃಕರಣ ಶುದ್ಧವಾಗಲಾರದು. ಅಂತಹ ಜನರ ಮುಕ್ತಿ ಹೇಗಾಗುವುದು?॥14½॥

ಮೂಲಮ್ - 15½

ಯಥಾ ತುಷ್ಯತಿ ದೇವೇಶೋ ದೇವದೇವೋ ಜಗದ್ಗುರುಃ ॥
ತತೋ ವದಸ್ವ ಸರ್ವಜ್ಞ ಸೂತ ಧರ್ಮಭೃತಾಂ ವರ ।

ಅನುವಾದ

ಧರ್ಮಜ್ಞರಲ್ಲಿ ಶ್ರೇಷ್ಠರಾದ ಸರ್ವಜ್ಞ ಸೂತಪುರಾಣಿಕರೇ! ದೇವಾಧಿದೇವ ದೇವೇಶ್ವರ ಜಗದ್ಗುರು ಭಗವಾನ್ ಶ್ರೀರಾಮಚಂದ್ರನು ಸಂತುಷ್ಟನಾಗುವಂತಹ ಉಪಾಯವನ್ನು ತಿಳಿಸಿರಿ.॥15½॥

ಮೂಲಮ್ - 16

ವದ ಸೂತ ಮುನಿಶ್ರೇಷ್ಠ ಸರ್ವಮೇತದಶೇಷತಃ ॥

ಮೂಲಮ್ - 17

ಕಸ್ಯ ನೋ ಜಾಯತೇ ತುಷ್ಟಿಃ ಸೂತ ತ್ವದ್ವಚನಾಮೃತಾತ್ ॥

ಅನುವಾದ

ಮುನಿಶ್ರೇಷ್ಠ ಸೂತಪುರಾಣಿಕರೇ! ಇವೆಲ್ಲ ಮಾತುಗಳನ್ನು ವಿಸ್ತಾರವಾಗಿ ತಿಳಿಸಿರಿ. ತಮ್ಮ ವಚನಾಮೃತವನ್ನು ಪಾನಮಾಡಿ ಯಾರಿಗೆ ತಾನೆ ಸಂತೋಷವಾಗುವುದಿಲ್ಲ.॥16-17॥

ಮೂಲಮ್ - 18 (ವಾಚನಮ್)

ಸೂತ ಉವಾಚ

ಮೂಲಮ್

ಶೃಣುಧ್ವಮೃಷಯಃ ಸರ್ವೇ ಯದಿಷ್ಟಂ ವೋ ವದಾಮ್ಯಹಮ್ ।
ಗೀತಂ ಸನತ್ಕುಮಾರಾಯ ನಾರದೇನ ಮಹಾತ್ಮನಾ ॥

ಮೂಲಮ್ - 19

ರಾಮಾಯಣಂ ಮಹಾಕಾವ್ಯಂ ಸರ್ವವೇದೇಷು ಸಮ್ಮತಮ್ ।
ಸರ್ವಪಾಪಪ್ರಶಮನಂ ದುಷ್ಟಗ್ರಹನಿವಾರಣಮ್ ॥

ಅನುವಾದ

ಸೂತಪುರಾಣಿಕರು ಹೇಳಿದರು - ಮುನಿವರರೇ! ನಿಮಗೆ ಕೇಳಲು ಇಷ್ಟವಾದುದನ್ನು ಹೇಳುವೆನು, ನೀವೆಲ್ಲ ಕೇಳಿರಿ. ಮಹಾತ್ಮರಾದ ನಾರದರು ಸನತ್ಕುಮಾರರಿಗೆ ರಾಮಾಯಣ ಎಂಬ ಮಹಾಕಾವ್ಯವನ್ನು ಹಾಡಿ ಕೇಳಿಸಿದರು. ಅದು ಸಮಸ್ತ ಪಾಪಗಳನ್ನು ನಾಶಮಾಡಿ, ದುಷ್ಟಗ್ರಹದ ಬಾಧೆಯನ್ನು ನಿವಾರಣೆ ಮಾಡುವಂತಹುದು. ಅದು ಸಮಸ್ತ ವೇದಾರ್ಥ ಸಮ್ಮತವಾಗಿದೆ.॥18-19॥

ಮೂಲಮ್ - 20

ದುಃಸ್ವಪ್ನನಾಶನಂ ಧನ್ಯಂ ಭುಕ್ತಿಮುಕ್ತಿಫಲಪ್ರದಮ್ ।
ರಾಮಚಂದ್ರಕಥೋಪೇತಂ ಸರ್ವಕಲ್ಯಾಣಸಿದ್ಧಿದಮ್ ॥

ಅನುವಾದ

ಅದರಿಂದ ಎಲ್ಲ ದುಃಸ್ವಪ್ನಗಳು ನಾಶವಾಗುತ್ತವೆ. ಅದು ಧನ್ಯವಾಗಿದ್ದು, ಭೋಗ ಮತ್ತು ಮೋಕ್ಷಗಳನ್ನು ಕೊಡುವಂತಹದು. ಅದರಲ್ಲಿ ಭಗವಾನ್ ಶ್ರೀರಾಮಚಂದ್ರನ ಲೀಲೆಗಳು ವರ್ಣಿತವಾಗಿವೆ. ಆ ಕಾವ್ಯವು ಓದುವವರಿಗೆ ಕೇಳುವವರಿಗೆ ಶ್ರೇಯಸ್ಕರ ಸಿದ್ಧಿಗಳನ್ನು ಕೊಡುವಂತಹುದು.॥20॥

ಮೂಲಮ್ - 21

ಧರ್ಮಾರ್ಥಕಾಮಮೋಕ್ಷಾಣಾಂ ಹೇತುಭೂತಂ ಮಹಾಫಲಮ್ ।
ಅಪೂರ್ವಂ ಪುಣ್ಯಫಲದಂ ಶೃಣುಧ್ವಂ ಸುಸಮಾಹಿತಾಃ ॥

ಅನುವಾದ

ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳ ಸಾಧಕವಾಗಿದ್ದು, ಮಹಾಫಲಗಳನ್ನು ಕೊಡುವುದು. ಅಪೂರ್ವವಾದ ಈ ಕಾವ್ಯಕ್ಕೆ ಪುಣ್ಯಮಯ ಫಲವನ್ನು ಕೊಡುವ ಶಕ್ತಿ ಇದೆ. ನೀವೆಲ್ಲ ಏಕಾಗ್ರತೆಯಿಂದ ಇದನ್ನು ಕೇಳಿರಿ.॥21॥

ಮೂಲಮ್ - 22

ಮಹಾಪಾತಕಯುಕ್ತೋ ವಾ ಯುಕ್ತೋ ವಾ ಸರ್ವಪಾತಕೈಃ ।
ಶ್ರುತ್ವೈತದಾರ್ಷಂ ದಿವ್ಯಂ ಹಿ ಕಾವ್ಯಂ ಶುದ್ಧಿಮಹಾಪ್ನುಯಾತ್ ॥

ಮೂಲಮ್ - 23

ರಾಮಾಯಣೇನ ವರ್ತಂತೇ ಸುತರಾಂ ಯೇ ಜಗದ್ಧಿತಾಃ ।
ತ ಏವ ಕೃತಕೃತ್ಯಾಶ್ಯ ಸರ್ವಶಾಸ್ತ್ರಾರ್ಥಕೋವಿದಾಃ ॥

ಅನುವಾದ

ಮಹಾಪಾಪಗಳಿಂದ ಅಥವಾ ಉಪಪಾಪಗಳಿಂದ ಕೂಡಿದ ಮನುಷ್ಯನೂ ಕೂಡ ಈ ಋಷಿ ಪ್ರಣೀತ ದಿವ್ಯಕಾವ್ಯವನ್ನು ಶ್ರವಣಿಸುವುದರಿಂದ ಶುದ್ಧನಾಗುತ್ತಾನೆ. ಸದಾ ರಾಮಾಯಣಕ್ಕನುಸಾರ ನಡೆಯುವ ಸಮಸ್ತ ಜಗತ್ತಿನ ಹಿತ ಸಾಧನೆಯಲ್ಲಿ ತೊಡಗಿದ ಮನುಷ್ಯನೇ ಸಂಪೂರ್ಣ ಶಾಸ್ತ್ರಗಳ ಮರ್ಮಗಳನ್ನು ತಿಳಿದಿದ್ದು, ಕೃತಾರ್ಥವಾಗಿದ್ದಾನೆ.॥22-23॥

ಮೂಲಮ್ - 24

ಧರ್ಮಾರ್ಥಕಾಮಮೋಕ್ಷಾಣಾಂ ಸಾಧನಂ ಚ ದ್ವಿಜೋತ್ತಮಾಃ ।
ಶ್ರೋತವ್ಯಂ ಚ ಸದಾ ಭಕ್ತ್ಯಾ ರಾಮಾಯಣಪರಾಮೃತಮ್ ॥

ಅನುವಾದ

ವಿಪ್ರವರ್ಯರೇ! ರಾಮಾಯಣವು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಸಾಧನ ಹಾಗೂ ಪರಮ ಅಮೃತ ರೂಪವಾಗಿದೆ. ಆದ್ದರಿಂದ ಸದಾಕಾಲ ಭಕ್ತಿಭಾವದಿಂದ ಅದನ್ನು ಶ್ರವಣಮಾಡಬೇಕು.॥24॥

ಮೂಲಮ್ - 25

ಪುರಾರ್ಜಿತಾನಿ ಪಾಪಾನಿ ನಾಶಮಾಯಾಂತಿ ಯಸ್ಯ ವೈ ।
ರಾಮಾಯಣೇ ಮಹಾಪ್ರೀತಿಸ್ತಸ್ಯ ವೈ ಭವತಿ ಧ್ರುವಮ್ ॥

ಅನುವಾದ

ಹಿಂದಿನ ಜನ್ಮದ ಪಾಪಗಳೆಲ್ಲ ನಾಶವಾದ ಮನುಷ್ಯನಿಗೆ ರಾಮಾಯಣದ ಕುರಿತು ಹೆಚ್ಚು ಪ್ರೇಮವಿರುತ್ತದೆ, ಇದು ನಿಶ್ಚಿವಾದುದು.॥25॥

ಮೂಲಮ್ - 26

ರಾಮಾಯಣೇ ವರ್ತಮಾನೇ ಪಾಪಪಾಶೇನ ಯಂತ್ರಿತಃ ।
ಅನಾದೃತ್ಯ ಅಸದ್ಗಾಥಾಸಕ್ತಬುದ್ಧಿಃ ಪ್ರವರ್ತತೇ ॥

ಅನುವಾದ

ಪಾಪ ಬಂಧನದಲ್ಲಿ ಬಿದ್ದವನು ರಾಮಾಯಣದ ಕಥೆ ಪ್ರಾರಂಭವಾದ ಮೇಲೇ ಅದನ್ನು ಅವಹೇಳನ ಮಾಡಿ ಕೀಳಾದ ಇತರ ಮಾತುಗಳಲ್ಲಿ ಸಿಕ್ಕಿಕೊಳ್ಳುವನು. ಆ ಅಸತ್ ಕಥೆಗಳಲ್ಲಿ ಬುದ್ಧಿ ಆಸಕ್ತವಾಗಿದ್ದ ಕಾರಣ ಅವನು ಅದರಂತೆ ವರ್ತಿಸತೊಡಗುವನು.॥26॥

ಮೂಲಮ್ - 27

ರಾಮಾಯಣಂ ನಾಮ ಪರಂ ತು ಕಾವ್ಯಂಸುಪುಣ್ಯದಂ ವೈ ಶೃಣುತ ದ್ವಿಜೇಂದ್ರಾಃ ।
ಯಸ್ಮಿಂಚ್ಛ್ರುತೇ ಜನ್ಮಜರಾದಿನಾಶೋ ಭವತ್ಯದೋಷಃ ಸ ನರೋಽಚ್ಯುತಃ ಸ್ಯಾತ್ ॥

ಅನುವಾದ

ದ್ವಿಜೇಂದ್ರರೇ! ಆದ್ದರಿಂದ ನೀವು ರಾಮಾಯಣ ಎಂಬ ಪರಮ ಪುಣ್ಯದಾಯಕ ಉತ್ತಮ ಕಾವ್ಯವನ್ನು ಶ್ರವಣಿಸಿರಿ. ಅದನ್ನು ಕೇಳುವುದರಿಂದ ಜನ್ಮ, ಜರಾ, ಮೃತ್ಯುವಿನ ಭಯ ನಾಶವಾಗಿ ಹೋಗುತ್ತದೆ ಹಾಗೂ ಶ್ರವಣಿಸುವ ಮನುಷ್ಯನು ಪಾಪ-ದೋಷಗಳಿಂದ ರಹಿತನಾಗಿ ಅಚ್ಯುತ ಸ್ವರೂಪನಾಗುತ್ತಾನೆ.॥27॥

ಮೂಲಮ್ - 28

ವರಂ ವರೇಣ್ಯಂ ವರದಂ ತು ಕಾವ್ಯಂ ಸಂತಾರಯತ್ಯಾಶು ಚ ಸರ್ವಲೋಕಮ್ ।
ಸಂಕಲ್ಪಿತಾರ್ಥಪ್ರದಮಾದಿಕಾವ್ಯಂಶ್ರುತ್ವಾ ಚ ರಾಮಸ್ಯ ಪದಂ ಪ್ರಯಾತಿ ॥

ಅನುವಾದ

ರಾಮಾಯಣ ಕಾವ್ಯವು ಶ್ರೇಷ್ಠಾತಿಶ್ರೇಷ್ಠವಾಗಿದ್ದು, ಮನೋವಾಂಛಿತ ವರವನ್ನು ಕೊಡುವಂತಹುದು. ಅದನ್ನು ಪಾರಾಯಣ ಮತ್ತು ಶ್ರವಣ ಮಾಡುವವರು ಸಮಸ್ತ ಜಗತ್ತನ್ನು ಬೇಗನೇ ಸಂಸಾರಸಾಗರದಿಂದ ದಾಟಿಸಿಬಿಡುತ್ತಾರೆ. ಆ ಆದಿಕಾವ್ಯವನ್ನು ಕೇಳಿ ಮನುಷ್ಯನು ಶ್ರೀರಾಮಚಂದ್ರನ ಪರಮಪದವನ್ನು ಪಡೆದುಕೊಳ್ಳುವನು.॥28॥

ಮೂಲಮ್ - 29

ಬ್ರಹ್ಮೇಶವಿಷ್ಣವಾಖ್ಯಶರೀರಭೇದೈ-ರ್ವಿಶ್ವಂ ಸೃಜತ್ಯತ್ತಿ ಚ ಪಾತಿ ಯಶ್ಚ ।
ತಮಾದಿದೇವಂ ಪರಮಂ ವರೇಣ್ಯ-ಮಾಧಾಯ ಚೇತಸ್ಯುಪಯಾತಿ ಮುಕ್ತಿಮ್ ॥

ಅನುವಾದ

ಬ್ರಹ್ಮ, ವಿಷ್ಣು, ಶಿವ ಎಂಬ ಬೇರೆ ಬೇರೆ ರೂಪಗಳನ್ನಾಧರಿಸಿ ವಿಶ್ವದ ಸೃಷ್ಟಿ, ಪಾಲನೆ, ಸಂಹಾರ ಮಾಡುವ ಆದಿದೇವ, ಪರಮಾತ್ಮಾ, ಸರ್ವೋತ್ತಮ ಶ್ರೀರಾಮಚಂದ್ರನನ್ನು ತನ್ನ ಹೃದಯ ಮಂದಿರದಲ್ಲಿ ಸ್ಥಾಪಿಸಿಕೊಂಡು ಮನುಷ್ಯನು ಮೋಕ್ಷಕ್ಕೆ ಭಾಗಿಯಾಗುತ್ತಾನೆ.॥29॥

ಮೂಲಮ್ - 30

ಯೋ ನಾಮಜಾತ್ಯಾದಿವಿಕಲ್ಪಹೀನಃ ಪರಾವರಾಣಾಂ ಪರಮಃ ಪರಃ ಸ್ಯಾತ್ ।
ವೇದಾಂತವೇದ್ಯಃ ಸ್ವರುಚಾ ಪ್ರಕಾಶಃ ಸ ವೀಕ್ಷ್ಯತೇ ಸರ್ವಪುರಾಣವೇದೈಃ ॥

ಅನುವಾದ

ನಾಮ ಹಾಗೂ ಜಾತಿ ಮುಂತಾದ ವಿಕಲ್ಪಗಳಿಂದ ರಹಿತನೂ, ಕಾರ್ಯ-ಕಾರಣಕ್ಕೆ ಅತೀತನೂ, ಸರ್ವೋತ್ಕೃಷ್ಟನೂ, ವೇದಾಂತಶಾಸ್ತ್ರದ ಮೂಲಕ ತಿಳಿಯಲು ಯೋಗ್ಯನೂ ಮತ್ತು ಸ್ವಯಂ ಪ್ರಕಾಶನೂ ಆದ ಪರಮಾತ್ಮನ ಸಾಕ್ಷಾತ್ಕಾರ ಸಮಸ್ತ ವೇದ ಹಾಗೂ ಪುರಾಣಗಳಿಂದ ಆಗುತ್ತದೆ. (ಈ ರಾಮಾಯಣದ ಅಧ್ಯಯನದಿಂದಲೂ ಆಗುತ್ತದೆ.)॥30॥

ಮೂಲಮ್ - 31

ಊರ್ಜೇ ಮಾಘೇ ಸಿತೇ ಪಕ್ಷೇ ಚೈತ್ರೇ ಚ ದ್ವಿಜಸತ್ತಮಾಃ ।
ನವಾಹ್ನಾ ಖಲು ಶ್ರೋತವ್ಯಂ ರಾಮಾಯಣ ಕಥಾಮೃತಮ್ ॥

ಅನುವಾದ

ವಿಪ್ರರೇ! ಕಾರ್ತಿಕ, ಮಾಘ ಮತ್ತು ಚೈತ್ರ ಶುಕ್ಲಪಕ್ಷದಲ್ಲಿ ಒಂಭತ್ತು ದಿನ ರಾಮಾಯಣದ ಅಮೃತಮಯ ಕಥೆಯನ್ನು ಶ್ರವಣಿಸಬೇಕು.॥31॥

ಮೂಲಮ್ - 32

ಇತ್ಯೇವಂ ಶೃಣುಯಾದ್ ಯಸ್ತು ಶ್ರೀರಾಮಚರಿತಂ ಶುಭಮ್ ।
ಸರ್ವಾನ್ ಕಾಮಾನವಾಪ್ನೋತಿ ಪರತ್ರಾಮುತ್ರ ಚೋತ್ತಮಾನ್ ॥

ಅನುವಾದ

ಈ ಪ್ರಕಾರ ಶ್ರೀರಾಮಚಂದ್ರನ ಮಂಗಲಮಯ ಚರಿತ್ರೆಯನ್ನು ಶ್ರವಣಿಸುವವನು ಈ ಲೋಕ ಮತ್ತು ಪರಲೋಕದಲ್ಲಿಯೂ ತನ್ನ ಎಲ್ಲ ಉತ್ತಮ ಕಾಮನೆಗಳನ್ನು ಪಡೆದುಕೊಳ್ಳುವನು.॥32॥

ಮೂಲಮ್ - 33

ತ್ರಿಸಪ್ತಕುಲಸಂಯುಕ್ತಃ ಸರ್ವಪಾಪವಿವರ್ಜಿತಃ ।
ಪ್ರಯಾತಿ ರಾಮಭವನಂ ಯತ್ರ ಗತ್ವಾ ನ ಶೋಚತೇ ॥

ಅನುವಾದ

ಅವನು ಎಲ್ಲ ಪಾಪಗಳಿಂದ ಮುಕ್ತನಾಗಿ ತನ್ನ ಇಪ್ಪತ್ತೊಂದು ತಲೆಮಾರು ಸಹಿತ ಶ್ರೀರಾಮಚಂದ್ರನ ಪರಮಧಾಮಕ್ಕೆ ಹೋಗುತ್ತಾನೆ. ಅಲ್ಲಿ ಹೋದ ಮನುಷ್ಯನಿಗೆ ಎಂದೂ ಶೋಕ ದುಃಖಗಳಿರುವುದಿಲ್ಲ.॥33॥

ಮೂಲಮ್ - 34

ಚೈತ್ರೇ ಮಾಘೇ ಕಾರ್ತಿಕೇ ಚ ಸಿತೇ ಪಕ್ಷೇ ಚ ವಾಚಯೇತ್ ।
ನವಾಹಸ್ಸು ಮಹಾಪುಣ್ಯಂ ಶ್ರೋತವ್ಯಂ ಚ ಪ್ರಯತ್ನತಃ ॥

ಅನುವಾದ

ಚೈತ್ರ, ಮಾಘ ಮತ್ತು ಕಾರ್ತಿಕ ಶುಕ್ಲಪಕ್ಷದಲ್ಲಿ ಪರಮ ಪುಣ್ಯಪ್ರದ ರಾಮಾಯಣ ಕಥೆಯ ನವಾಹ್ನ ಪಾರಾಯಣ ಮಾಡಬೇಕು ಹಾಗೂ ಒಂಭತ್ತು ದಿನಗಳವರೆಗೆ ಪ್ರಯತ್ನಪೂರ್ವಕ ಕೇಳಬೇಕು.॥34॥

ಮೂಲಮ್ - 35½

ರಾಮಾಯಣಮಾದಿಕಾವ್ಯಂ ಸ್ವರ್ಗಮೋಕ್ಷಪ್ರದಾಯಕಮ್ ।
ತಸ್ಮಾದ್ ಘೋರೇ ಕಲಿಯುಗೇ ಸರ್ವಧರ್ಮಬಹಿಷ್ಕೃತೇ ॥
ನವಭಿರ್ದಿನೈಃ ಶ್ರೋತವ್ಯಂ ರಾಮಾಯಣಕಥಾಮೃತಮ್ ।

ಅನುವಾದ

ರಾಮಾಯಣವು ಆದಿಕಾವ್ಯವಾಗಿದೆ. ಇದು ಸ್ವರ್ಗ ಮತ್ತು ಮೋಕ್ಷವನ್ನು ಕೊಡುವಂತಹುದು. ಆದ್ದರಿಂದ ಸಮಸ್ತ ಧರ್ಮಗಳಿಂದ ರಹಿತವಾದ ಘೋರ ಕಲಿಯುಗ ಬಂದಾಗ ಒಂಭತ್ತು ದಿನಗಳಲ್ಲಿ ರಾಮಾಯಣದ ಅಮೃತಮಯ ಕಥೆಯನ್ನು ಶ್ರವಣಿಸಬೇಕು.॥35½॥

ಮೂಲಮ್ - 36½

ರಾಮನಾಮಪರಾ ಯೇ ತು ಘೋರೇ ಕಲಿಯುಗೇ ದ್ವಿಜಾಃ ॥
ತ ಏವ ಕೃತಕೃತ್ಯಾಶ್ಚ ನ ಕಲಿರ್ಬಾಧತೇ ಹಿ ತಾನ್ ।

ಅನುವಾದ

ಬ್ರಾಹ್ಮಣರೇ! ಭಯಂಕರ ಕಲಿಕಾಲದಲ್ಲಿ ಶ್ರೀರಾಮನಾಮವನ್ನು ಆಶ್ರಯಿಸುವವರು ಕೃತಾರ್ಥರಾಗುತ್ತಾರೆ. ಕಲಿಯುಗವು ಅವರನ್ನು ಬಾಧಿಸುವುದಿಲ್ಲ.॥36½॥

ಮೂಲಮ್ - 37½

ಕಥಾ ರಾಮಾಯಣಸ್ಯಾಪಿ ನಿತ್ಯಂ ಭವತಿ ಯದ್ ಗೃಹೇ ॥
ತದ್ ಗೃಹಂ ತೀರ್ಥರೂಪಂ ಹಿ ದುಷ್ಟಾನಾಂ ಪಾಪನಾಶನಮ್ ।

ಅನುವಾದ

ಪ್ರತಿದಿನವೂ ರಾಮಾಯಣದ ಕಥೆ ನಡೆಯುವ ಮನೆಯು ತೀರ್ಥರೂಪವಾಗುತ್ತದೆ. ಅಲ್ಲಿಗೆ ಹೋಗುವುದರಿಂದ ದುಷ್ಟರ ಪಾಪಗಳೂ ಕೂಡ ನಾಶವಾಗುತ್ತವೆ.॥37½॥

ಮೂಲಮ್ - 38½

ತಾವತ್ಪಾಪಾನಿ ದೇಹೇಽಸ್ಮಿನ್ ನಿವಸಂತಿ ತಪೋಧನಾಃ ॥
ಯಾವನ್ನ ಶ್ರುಯತೇ ಸಮ್ಯಕ್ ಶ್ರೀಮದ್ರಾಮಾಯಣಂ ನರೈಃ ।

ಅನುವಾದ

ತಪೋಧನರೇ! ಮನುಷ್ಯನು ಶ್ರೀರಾಮಾಯಣದ ಕಥೆಯನ್ನು ಚೆನ್ನಾಗಿ ಶ್ರವಣಿಸುವವರೆಗೆ ಅವನ ಶರೀರದಲ್ಲಿ ಎಲ್ಲ ಪಾಪಗಳು ವಾಸಿಸುತ್ತವೆ.॥38½॥

ಮೂಲಮ್ - 39½

ದುರ್ಲಭೈವ ಕಥಾ ಲೋಕೇ ಶ್ರೀಮದ್ರಾಮಾಯಣೋದ್ಭವಾ ॥
ಕೋಟಿಜನ್ಮಸಮುತ್ಥೇನ ಪುಣ್ಯೇನೈವ ತು ಲಭ್ಯತೇ

ಅನುವಾದ

ಜಗತ್ತಿನಲ್ಲಿ ಶ್ರೀರಾಮಾಯಣದ ಕಥೆ ಪರಮ ದುರ್ಲಭವಾಗಿದೆ. ಕೋಟಿ ಜನ್ಮಗಳ ಪುಣ್ಯಗಳು ಉದಯವಾದಾಗ ಅದರ ಪ್ರಾಪ್ತಿಯಾಗುತ್ತದೆ.॥39½॥

ಮೂಲಮ್ - 40½

ಊರ್ಜೇ ಮಾಘೇ ಸಿತೇ ಪಕ್ಷೇ ಚೈತ್ರೇ ಚ ದ್ವಿಜಸತ್ತಮಾಃ ॥
ಯಸ್ಯ ಶ್ರವಣಮಾತ್ರೇಣ ಸೌದಾಸೋಽಪಿ ವಿಮೋಚಿತಃ

ಅನುವಾದ

ಶ್ರೇಷ್ಠ ಬ್ರಾಹ್ಮಣರೇ! ಕಾರ್ತಿಕ, ಮಾಘ, ಚೈತ್ರ ಶುಕ್ಲಪಕ್ಷದಲ್ಲಿ ರಾಮಾಯಣದ ಶ್ರವಣಮಾತ್ರದಿಂದ (ರಾಕ್ಷಸಭಾವಾಪನ್ನ) ಸೌದಾಸನೂ ಕೂಡ ಶಾಪಮುಕ್ತನಾಗಿದ್ದನು.॥40½॥

ಮೂಲಮ್ - 41½

ಗೌತಮಶಾಪತಃ ಪ್ರಾಪ್ತಃ ಸೌದಾಸೋ ರಾಕ್ಷಸೀಂ ತನುಮ್ ॥
ರಾಮಾಯಣ ಪ್ರಭಾವೇಣ ವಿಮುಕ್ತಿಂ ಪ್ರಾಪ್ತವಾನ್ ಪುನಃ ।

ಅನುವಾದ

ಸೌದಾಸನು ಮಹರ್ಷಿ ಗೌತಮರ ಶಾಪದಿಂದ ರಾಕ್ಷಸನಾಗಿದ್ದನು. ಅವನು ರಾಮಾಯಣದ ಪ್ರಭಾವದಿಂದಲೇ ಪುನಃ ಆ ಶಾಪದಿಂದ ಮುಕ್ತನಾಗಿದ್ದನು.॥41½॥

ಮೂಲಮ್ - 42

ಯಸ್ತ್ವೇತಚ್ಛ ಣುಯಾದ್ ಭಕ್ತ್ಯಾ ರಾಮಭಕ್ತಿಪರಾಯಣಃ ॥

ಮೂಲಮ್ - 43

ಸ ಮುಚ್ಯತೇ ಮಹಾಪಾಪೈಃ ಪುರುಷಃ ಪಾತಕಾದಿಭಿಃ ॥

ಅನುವಾದ

ಶ್ರೀರಾಮಚಂದ್ರ ಭಕ್ತಿಯನ್ನು ಆಶ್ರಯಿಸಿ ಪ್ರೇಮಪೂರ್ವಕ ಈ ಕಥೆಯನ್ನು ಶ್ರವಣಿಸುವವನು ಮಹಾಪಾಪಗಳಿಂದ ಮುಕ್ತನಾಗುತ್ತಾನೆ.॥42-43॥

ಮೂಲಮ್ (ಸಮಾಪ್ತಿಃ)

ಶ್ರೀಸ್ಕಂದ ಪುರಾಣದ ಉತ್ತರ ಖಂಡದಲ್ಲಿನ ನಾರದ ಸನತ್ಕುಮಾರ ಸಂವಾದದಲ್ಲಿ ರಾಮಾಯಣ ಮಾಹಾತ್ಮ್ಯದ

ಅನುವಾದ (ಸಮಾಪ್ತಿಃ)

ಅನುಕೀರ್ತನ ಎಂಬ ಮೊದಲನೆಯ ಅಧ್ಯಾಯವು ಪೂರ್ಣವಾಯಿತು.॥1॥