[ಒಂಭತ್ತನೆಯ ಸರ್ಗ]
ಭಾಗಸೂಚನಾ
ಮಹಾಪ್ರಯಾಣ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ಲಕ್ಷ್ಮಣಂ ತು ಪರಿತ್ಯಜ್ಯ ರಾಮೋ ದುಃಖಸಮನ್ವಿತಃ ।
ಮಂತ್ರಿಣೋ ನೈಗಮಾಂಶ್ಚೈವ ವಸಿಷ್ಠಂ ಚೇದಮಬ್ರವೀತ್ ॥
ಅನುವಾದ
ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ಲಕ್ಷ್ಮಣನನ್ನು ತ್ಯಜಿಸಿದ ಬಳಿಕ ರಘುನಾಥನು ಅತ್ಯಂತ ದುಃಖಿತನಾಗಿ ಮಂತ್ರಿಗಳು, ವೇದವೇತ್ತರು ಮತ್ತು ವಸಿಷ್ಠರೊಡನೆ ಹೀಗೆ ಹೇಳಿದನು — ॥1॥
(ಶ್ಲೋಕ-2)
ಮೂಲಮ್
ಅಭಿಷೇಕ್ಷ್ಯಾಮಿ ಭರತಮಧಿರಾಜ್ಯೇ ಮಹಾಮತಿಮ್ ।
ಅದ್ಯ ಚಾಹಂ ಗಮಿಷ್ಯಾಮಿ ಲಕ್ಷ್ಮಣಸ್ಯ ಪದಾನುಗಃ ॥
ಅನುವಾದ
‘‘ಇಂದು ಮಹಾಮತಿಯುಳ್ಳ ಭರತನಿಗೆ ರಾಜ್ಯಾಭಿಷೇಕ ಮಾಡಿ ನಾನೂ ಕೂಡ ಲಕ್ಷ್ಮಣನ ಮಾರ್ಗವನ್ನು ಅನುಸರಿಸುವೇನು.’’ ॥2॥
(ಶ್ಲೋಕ-3)
ಮೂಲಮ್
ಏವಮುಕ್ತೇ ರಘುಶ್ರೇಷ್ಠೇ ಪೌರಜಾನಪದಾಸ್ತದಾ ।
ದ್ರುಮಾ ಇವ ಚ್ಛಿನ್ನಮೂಲಾ ದುಃಖಾರ್ತಾಃ ಪತಿತಾ ಭುವಿ ॥
ಅನುವಾದ
ರಘುನಾಥನು ಈ ಪ್ರಕಾರ ಹೇಳಿದಾಗ ಪುರವಾಸಿಗಳು ಮತ್ತು ದೇಶವಾಸಿಗಳು ದುಃಖಿತರಾಗಿ ಬುಡ ಕಡಿದ ಮರದಂತೆ ನೆಲಕ್ಕುರುಳಿ ಬಿದ್ದರು. ॥3॥
(ಶ್ಲೋಕ-4)
ಮೂಲಮ್
ಮೂರ್ಚ್ಛಿತೋ ಭರತೋ ವಾಪಿ ಶ್ರುತ್ವಾ ರಾಮಾಭಿಭಾಷಿತಮ್ ।
ಗರ್ಹಯಾಮಾಸ ರಾಜ್ಯಂ ಸ ಪ್ರಾಹೇದಂ ರಾಮಸನ್ನಿಧೌ ॥
ಅನುವಾದ
ರಾಮನ ಮಾತನ್ನು ಕೇಳಿ ಭರತನಿಗೂ ಕೂಡ ಮೂರ್ಛೆ ಬಂದಂತಾಯಿತು. ಎಚ್ಚತ್ತು ಅವನು ರಘುನಾಥನ ಬಳಿ ರಾಜ್ಯಭಾರವನ್ನು ನಿಂದಿಸುತ್ತಾ ಈ ಪ್ರಕಾರ ಹೇಳಿದನು ॥4॥
(ಶ್ಲೋಕ-5)
ಮೂಲಮ್
ಸತ್ಯೇನ ಚ ಶಪೇ ನಾಹಂ ತ್ವಾಂ ವಿನಾ ದಿವಿ ವಾ ಭುವಿ ।
ಕಾಂಕ್ಷೇ ರಾಜ್ಯಂ ರಘುಶ್ರೇಷ್ಠ ಶಪೇ ತ್ವತ್ಪಾದಯೋಃ ಪ್ರಭೋ ॥
ಅನುವಾದ
‘‘ಹೇ ರಘುಶ್ರೇಷ್ಠ! ನಾನು ಸತ್ಯದ ಮೇಲೆ ಆಣೆಯಿಟ್ಟು ಹೇಳುತ್ತೇನೆ, ಹೇ ಪ್ರಭು! ನಿನ್ನ ಪಾದಗಳ ಮೇಲಿನ ಆಣೆ, ನಾನು ನಿನ್ನ ಹೊರತು ಸ್ವರ್ಗಲೋಕ ಅಥವಾ ಭೂಲೋಕದ ಯಾವುದೇ ರಾಜ್ಯವನ್ನೂ ಇಚ್ಛೆಪಡುವುದಿಲ್ಲ. ॥5॥
(ಶ್ಲೋಕ-6)
ಮೂಲಮ್
ಇಮೌ ಕುಶಲವೌ ರಾಜನ್ನಭಿಷಿಂಚಸ್ವ ರಾಘವ ।
ಕೋಶಲೇಷು ಕುಶಂ ವೀರಮುತ್ತರೇಷು ಲವಂ ತಥಾ ॥
ಅನುವಾದ
ಹೇ ಮಹಾರಾಜ ರಾಮಾ! ಈ ಕುಶ ಮತ್ತು ಲವ ಇವರಿಗೇ ರಾಜ್ಯಾಭಿಷೇಕಮಾಡು ಅವಧದಲ್ಲಿ (ಅಯೋಧ್ಯೆ) ವೀರವರ ಕುಶನನ್ನೂ ಮತ್ತು ಉತ್ತರದಲ್ಲಿ ಲವನನ್ನೂ ರಾಜನನ್ನಾಗಿ ಮಾಡು. ॥6॥
(ಶ್ಲೋಕ-7)
ಮೂಲಮ್
ಗಚ್ಛಂತು ದೂತಾಸ್ತ್ವರಿತಂ ಶತ್ರುಘ್ನಾನಯನಾಯ ಹಿ ।
ಅಸ್ಮಾಕಮೇತದ್ಗಮನಂ ಸ್ವರ್ವಾಸಾಯ ಶೃಣೋತು ಸಃ ॥
ಅನುವಾದ
ಶತ್ರುಘ್ನನನ್ನು ಕರೆದುಕೊಂಡು ಬರುವುದಕ್ಕಾಗಿ ಕೂಡಲೇ ದೂತನು ಹೋಗಲಿ. ಏಕೆಂದರೆ ಅವನೂ ಕೂಡ ನಾವು ಸ್ವರ್ಗವಾಸಕ್ಕಾಗಿ ಹೋಗುವ ವೃತ್ತಾಂತವನ್ನು ಕೇಳಿಕೊಳ್ಳಲಿ’’ ॥7॥
(ಶ್ಲೋಕ-8)
ಮೂಲಮ್
ಭರತೇನೋದಿತಂ ಶ್ರುತ್ವಾ ಪತಿತಾಸ್ತಾಃ ಸಮೀಕ್ಷ್ಯ ತಮ್ ।
ಪ್ರಜಾಶ್ಚ ಭಯಸಂವಿಗ್ನಾ ರಾಮವಿಶ್ಲೇಷಕಾತರಾಃ ॥
ಅನುವಾದ
ಭರತನ ಮಾತನ್ನು ಕೇಳಿ ಅವನ ಕಡೆಗೆ ನೋಡುತ್ತಾ ಪ್ರಜೆಗಳೆಲ್ಲಾ ಭಯಭೀತರಾಗಿ, ರಾಮನ ವಿಯೋಗದಿಂದ ವ್ಯಾಕುಲರಾಗಿ ನೆಲಕ್ಕೆ ಕುಸಿದುಬಿದ್ದರು. ॥8॥
(ಶ್ಲೋಕ-9)
ಮೂಲಮ್
ವಸಿಷ್ಠೋ ಭಗವಾನ್ ರಾಮಮುವಾಚ ಸದಯಂ ವಚಃ ।
ಪಶ್ಯ ತಾತಾದರಾತ್ಸರ್ವಾಃ ಪತಿತಾ ಭೂತಲೇ ಪ್ರಜಾಃ ॥
ಅನುವಾದ
ಆಗ ಭಗವಾನ್ ವಸಿಷ್ಠರು ರಘುನಾಥನಲ್ಲಿ ಕರುಣಾಪೂರ್ಣ ವಚನವನ್ನು ಹೇಳಿದರು ಅಪ್ಪಾ! ‘‘ಪ್ರಜೆಗಳೆಲ್ಲರೂ ಭೂಮಿಯ ಮೇಲೆ ಬಿದ್ದು ಬಿಟ್ಟಿದ್ದಾರೆ, ಅವರನ್ನು ಕೃಪಾ ದೃಷ್ಟಿಯಿಂದ ನೋಡು. ॥9॥
(ಶ್ಲೋಕ-10)
ಮೂಲಮ್
ತಾಸಾಂ ಭಾವಾನುಗಂ ರಾಮ ಪ್ರಸಾದಂ ಕರ್ತುಮರ್ಹಸಿ ।
ಶ್ರುತ್ವಾ ವಸಿಷ್ಠವಚನಂ ತಾಃ ಸಮುತ್ಥಾಪ್ಯ ಪೂಜ್ಯ ಚ ॥
(ಶ್ಲೋಕ-11)
ಮೂಲಮ್
ಸಸ್ನೇಹೋ ರಘುನಾಥಸ್ತಾಃ ಕಿಂ ಕರೋಮೀತಿ ಚಾಬ್ರವೀತ್ ।
ತತಃ ಪ್ರಾಂಜಲಯಃ ಪ್ರೋಚುಃ ಪ್ರಜಾ ಭಕ್ತ್ಯಾ ರಘೂದ್ವಹಮ್ ॥
ಅನುವಾದ
ಹೇ ರಾಮಾ! ಇವರ ಭಾವಕ್ಕನುಸಾರವಾಗಿ ನೀನು ಇವರ ಮೇಲೆ ಕೃಪೆಮಾಡ ಬೇಕು.’’ ವಸಿಷ್ಠರ ಈ ಮಾತನ್ನು ಕೇಳಿ ರಘುನಾಥನು ಅವರುಗಳನ್ನೆಲ್ಲಾ ಎಬ್ಬಿಸಿ, ಅವರನ್ನು ಸತ್ಕರಿಸಿ ಪ್ರೇಮಪೂರ್ವಕ ಪ್ರಶ್ನಿಸಿದನು ‘‘ನಾನು ನಿಮಗೋಸ್ಕರವಾಗಿ ಏನು ಮಾಡಲಿ?’’ ಆಗ ಪ್ರಜಾಸಮೂಹವು ಕೈ ಮುಗಿದುಕೊಂಡು ರಘುನಾಥನೊಡನೆ ಭಕ್ತಿಯಿಂದ ಹೇಳಿತು ॥10-11॥
(ಶ್ಲೋಕ-12)
ಮೂಲಮ್
ಗಂತುಮಿಚ್ಛಸಿ ಯತ್ರ ತ್ವಮನುಗಚ್ಛಾಮಹೇ ವಯಮ್ ।
ಅಸ್ಮಾಕಮೇಷಾ ಪರಮಾ ಪ್ರೀತಿರ್ಧರ್ಮೋಯಮಕ್ಷಯಃ ॥
ಅನುವಾದ
‘‘ನೀನು ಎಲ್ಲಿಗೆ ಹೋಗಲು ಇಚ್ಛೆಪಡುತ್ತಿರುವೆಯೋ ನಾವೂ ಸಹ ಅಲ್ಲಿಗೆ ನಿನ್ನನ್ನು ಹಿಂಬಾಲಿಸುವೆವು. ಇದೇ ನಮಗೆ ಎಲ್ಲಕ್ಕಿಂತ ಹೆಚ್ಚಿನ ಸಂತೋಷ ಮತ್ತು ಅಕ್ಷಯಧರ್ಮವಾಗಿದೆ. ॥12॥
(ಶ್ಲೋಕ-13)
ಮೂಲಮ್
ತವಾನುಗಮನೇ ರಾಮ ಹೃದ್ಗತಾ ನೋ ದೃಢಾ ಮತಿಃ ।
ಪುತ್ರದಾರಾದಿಭಿಃ ಸಾರ್ಧಮನುಯಾಮೋಽದ್ಯ ಸರ್ವಥಾ ॥
(ಶ್ಲೋಕ-14)
ಮೂಲಮ್
ತಪೋವನಂ ವಾ ಸ್ವರ್ಗಂ ವಾ ಪುರಂ ವಾ ರಘುನಂದನ ।
ಜ್ಞಾತ್ವಾ ತೇಷಾಂ ಮನೋದಾರ್ಢ್ಯಂ ಕಾಲಸ್ಯ ವಚನಂ ತಥಾ ॥
(ಶ್ಲೋಕ-15)
ಮೂಲಮ್
ಭಕ್ತಂ ಪೌರಜನಂ ಚೈವ ಬಾಢಮಿತ್ಯಾಹ ರಾಘವಃ ।
ಕೃತ್ವೈವಂ ನಿಶ್ಚಯಂ ರಾಮಸ್ತಸ್ಮಿನ್ನೆವಾಹನಿ ಪ್ರಭುಃ ॥
(ಶ್ಲೋಕ-16)
ಮೂಲಮ್
ಪ್ರಸ್ಥಾಪಯಾಮಾಸ ಚ ತೌ ರಾಮಭದ್ರಃ ಕುಶೀಲವೌ ।
ಅಷ್ಟೌ ರಥಸಹಪ್ರಾಣಿ ಸಹಸ್ರಂ ಚೈವ ದಂತಿನಾಮ್ ॥
(ಶ್ಲೋಕ-17)
ಮೂಲಮ್
ಷಷ್ಟಿಂ ಚಾಶ್ವಸಹಸ್ರಾಣಾಮೇಕೈಕಸ್ಮೈ ದದೌ ಬಲಮ್ ।
ಬಹುರತ್ನೌ ಬಹುಧನೌ ಹೃಷ್ಟಪುಷ್ಟಜನಾವೃತೌ ॥
(ಶ್ಲೋಕ-18)
ಮೂಲಮ್
ಅಭಿವಾದ್ಯ ಗತೌ ರಾಮಂ ಕೃಚ್ಛ್ರೇಣ ತು ಕುಶೀಲವೌ ।
ಶತ್ರುಘ್ನಾನಯನೇ ದೂತಾನ್ಪ್ರೇಷಯಾಮಾಸ ರಾಘವಃ ॥
ಅನುವಾದ
ಹೇ ರಾಮಾ! ನಮ್ಮ ಹೃದಯದಲ್ಲಿ ನಿನ್ನನ್ನು ಹಿಂಬಾ ಲಿಸುವುದಕ್ಕೆ ದೃಢವಾದ ಯೋಚನೆಯಿದೆ. ಆದುದರಿಂದ ಹೇ ರಘುನಂದನಾ! ನೀನು ತಪೋವನ, ನಗರ, ಸ್ವರ್ಗ ಮುಂತಾಗಿ ಎಲ್ಲಿಗಾದರೂ ಹೋಗು. ಈಗ ನಾವೆಲ್ಲರೂ ಪತ್ನೀ ಪುತ್ರಾದಿಗಳ ಸಹಿತ ಖಂಡಿತವಾಗಿಯೂ ನಿನ್ನನ್ನೇ ಅನುಸರಿಸುವೆವು.’’ ಆಗ ರಘುನಾಥನು ಅವರ ಮನಸ್ಸಿನ ದೃಢತೆಯನ್ನು ಮತ್ತು ಕಾಲನ ವಚನಗಳನ್ನು ತಿಳಿದುಕೊಂಡು ಆ ಭಕ್ತ ಪುರ ನಿವಾಸಿಗಳಿಗೆ ‘ಹಾಗೆಯೇ ಆಗಲಿ’ ಎಂದು ಹೇಳಿದನು. ಹೀಗೆ ನಿಶ್ಚಯಿಸಿಕೊಂಡು ಪ್ರಭು ರಾಮನು ಆ ದಿನವೇ ಕುಶ ಮತ್ತು ಲವರನ್ನು ತಮ್ಮ-ತಮ್ಮ ರಾಜ್ಯಗಳಿಗೆ ಕಳುಹಿಸಿದನು. ಅವರಲ್ಲಿ ಪ್ರತಿಯೊಬ್ಬರಿಗೂ ಎಂಟು ಸಾವಿರ ರಥ, ಒಂದು ಸಾವಿರ ಆನೆ, ಅರುವತ್ತು ಸಾವಿರ ಕುದುರೆಗಳನ್ನು ಕೊಟ್ಟನು ಹಾಗೂ ಸಾಕಷ್ಟು ರತ್ನ, ಧನ ಮತ್ತು ದೃಢಕಾಯರಾದ ಅನೇಕ ಜನರನ್ನು ಜೊತೆಯಲ್ಲಿ ಕಳುಹಿಸಿಕೊಟ್ಟನು. ಕುಶ ಮತ್ತು ಲವ ಇಬ್ಬರೂ ಶ್ರೀರಾಮಚಂದ್ರನಿಗೆ ನಮಸ್ಕಾರಮಾಡಿ ಬಹುಕಷ್ಟದಿಂದ ಹೊರಟರು. ಆಗಲೇ ರಘುನಾಥನು ಶತ್ರುಘ್ನನನ್ನು ಕರೆದುಕೊಂಡು ಬರುವುದಕ್ಕಾಗಿ ದೂತರನ್ನು ಅಟ್ಟಿದನು. ॥13-18॥
(ಶ್ಲೋಕ-19)
ಮೂಲಮ್
ತೇ ದೂತಾಸ್ತ್ವರಿತಂ ಗತ್ವಾ ಶತ್ರುಘ್ನಾಯ ನ್ಯವೇದಯನ್ ।
ಕಾಲಸ್ಯಾಗಮನಂ ಪಶ್ಚಾದತ್ರಿಪುತ್ರಸ್ಯ ಚೇಷ್ಟಿತಮ್ ॥
(ಶ್ಲೋಕ-20)
ಮೂಲಮ್
ಲಕ್ಷ್ಮಣಸ್ಯ ಚ ನಿರ್ಯಾಣಂ ಪ್ರತಿಜ್ಞಾಂ ರಾಘವಸ್ಯ ಚ ।
ಪುತ್ರಾಭಿಷೇಚನಂ ಚೈವ ಸರ್ವಂ ರಾಮಚಿಕೀರ್ಷಿತಮ್ ॥
ಅನುವಾದ
ಆ ದೂತರು ತಕ್ಷಣ ಹೋಗಿ ಕಾಲನ ಆಗಮನ, ದುರ್ವಾಸರ ವರ್ತನೆ, ಲಕ್ಷ್ಮಣನ ಮಹಾಪ್ರಯಾಣ, ರಘುನಾಥನ ಪ್ರತಿಜ್ಞೆ, ಪುತ್ರರ ರಾಜ್ಯಾಭಿಷೇಕ ಮತ್ತು ಈಗ ರಾಮನು ಏನು ಮಾಡಬೇಕೆಂದಿದ್ದಾನೆ ಈ ಎಲ್ಲಾ ಸಮಾಚಾರಗಳನ್ನು ಶತ್ರುಘ್ನನಲ್ಲಿ ನಿವೇದಿಸಿಕೊಂಡರು. ॥19-20॥
(ಶ್ಲೋಕ-21)
ಮೂಲಮ್
ಶ್ರುತ್ವಾ ತದ್ ದೂತವಚನಂ ಶತ್ರುಘ್ನಃ ಕುಲನಾಶನಮ್ ।
ವ್ಯಥಿತೋಽಪಿ ಧೃತಿಂ ಲಬ್ಧ್ವಾ ಪುತ್ರಾವಾಹೂಯ ಸತ್ವರಃ ।
ಅಭಿಷಿಚ್ಯ ಸುಬಾಹುಂ ವೈ ಮಥುರಾಯಾಂ ಮಹಾಬಲಃ ॥
(ಶ್ಲೋಕ-22)
ಮೂಲಮ್
ಯೂಪಕೇತು ಚ ವಿದಿಶಾನಗರೇ ಶತ್ರುಸೂದನಃ ।
ಅಯೋಧ್ಯಾಂ ತ್ವರಿತಂ ಪ್ರಾಗಾತ್ಸ್ವಯಂ ರಾಮದಿದೃಕ್ಷಯಾ ॥
ಅನುವಾದ
ಈ ಪ್ರಕಾರ ದೂತರಿಂದ ತನ್ನ ಕುಲನಾಶದ ಸಮಾಚಾರವನ್ನು ಕೇಳಿ ಶತ್ರುಘ್ನನು ಅತ್ಯಂತ ವ್ಯಾಕುಲನಾದನು. ಆದರೂ ಮತ್ತೆ ಧೈರ್ಯತಂದುಕೊಂಡು ತತ್ಕ್ಷಣ ತನ್ನಿಬ್ಬರು ಪುತ್ರರನ್ನು ಕರೆದು ಅವರಲ್ಲಿ ಮಹಾಬಲಶಾಲಿಯಾದ ಸುಬಾಹುವಿಗೆ ಮಥುರೆಯ ಮತ್ತು ಯೂಪಕೇತುವಿಗೆ ವಿದಿಶಾನಗರದ ರಾಜ್ಯಕ್ಕೆ ಪಟ್ಟಾಭಿಷೇಕ ಮಾಡಿ, ತಾನು ಬಹಳ ಬೇಗ ರಘುನಾಥನ ದರ್ಶನಕ್ಕಾಗಿ ಅಯೋಧ್ಯೆಗೆ ಬಂದನು. ॥21-22॥
(ಶ್ಲೋಕ-23)
ಮೂಲಮ್
ದದರ್ಶ ಚ ಮಹಾತ್ಮಾನಂ ತೇಜಸಾ ಜ್ವಲನಪ್ರಭಮ್ ।
ದುಕೂಲಯುಗಸಂವೀತಂ ಋಷಿಭಿಶ್ಚಾಕ್ಷಯೈರ್ವೃತಮ್ ॥
ಅನುವಾದ
ಅಲ್ಲಿಗೆ ಬಂದ ನಂತರ ಅವನು ಅಗ್ನಿಗೆ ಸಮಾನವಾದ ತನ್ನ ತೇಜಸ್ಸಿನಿಂದ ಪ್ರಕಾಶಮಯನಾದ ಮಹಾತ್ಮಾ ರಾಮನು ಎರಡೇ ವಸ್ತ್ರಗಳನ್ನು ಧರಿಸಿಕೊಂಡು ದೀರ್ಘಾಯುಗಳಾದ ಋಷಿಗಳೊಡಗೂಡಿರುವುದನ್ನು ನೋಡಿದನು. ॥23॥
(ಶ್ಲೋಕ-24)
ಮೂಲಮ್
ಅಭಿವಾದ್ಯ ರಮಾನಾಥಂ ಶತ್ರುಘ್ನೋ ರಘುಪುಂಗವಮ್ ।
ಪ್ರಾಂಜಲಿರ್ಧರ್ಮಸಹಿತಂ ವಾಕ್ಯಂ ಪ್ರಾಹ ಮಹಾಮತಿಃ ॥
ಅನುವಾದ
ಮಹಾಮತಿಯುಳ್ಳ ಶತ್ರುಘ್ನನು ಲಕ್ಷ್ಮೀಪತಿ ಶ್ರೀರಘನಾಥನಿಗೆ ನಮಸ್ಕಾರ ಮಾಡಿ ಕೈಮುಗಿದುಕೊಂಡು ಧರ್ಮಯುಕ್ತವಾದ ಈ ವಾಕ್ಯವನ್ನು ಹೇಳಿದನು- ॥24॥
(ಶ್ಲೋಕ-25)
ಮೂಲಮ್
ಅಭಿಷಿಚ್ಯ ಸುತೌ ತತ್ರ ರಾಜ್ಯೇ ರಾಜೀವಲೋಚನ ।
ತವಾನುಗಮನೇ ರಾಜನ್ವಿದ್ಧಿ ಮಾಂ ಕೃತನಿಶ್ಚಯಮ್ ॥
ಅನುವಾದ
‘ಹೇ ಕಮಲನಯನ! ನಾನು ನನ್ನ ರಾಜ್ಯಕ್ಕೆ ಇಬ್ಬರು ಪುತ್ರರಿಗೂ ಪಟ್ಟಾಭಿಷೇಕ ಮಾಡಿ ಬಂದಿದ್ದೇನೆ; ಹೇ ರಾಜಾ! ಈಗ ನಾನೂ ಕೂಡ ನಿನ್ನನ್ನೇ ಹಿಂಬಾಲಿಸಬೇಕೆಂದು ನಿಶ್ಚಯ ಮಾಡಿಕೊಂಡಿದ್ದೇನೆ ಇದನ್ನು ನೀನು ತಿಳಿ.’’ ॥25॥
(ಶ್ಲೋಕ-26)
ಮೂಲಮ್
ತ್ಯಕ್ತುಂ ನಾರ್ಹಸಿ ಮಾಂ ವೀರ ಭಕ್ತಂ ತವ ವಿಶೇಷತಃ ।
ಶತ್ರುಘ್ನಸ್ಯ ದೃಢಾಂ ಬುದ್ಧಿಂ ವಿಜ್ಞಾಯ ರಘುನಂದನಃ ॥
(ಶ್ಲೋಕ-27)
ಮೂಲಮ್
ಸಜ್ಜೀಭವತು ಮಧ್ಯಾಹ್ನೇ ಭವಾನಿತ್ಯಬ್ರವೀದ್ವಚಃ ।
ಅಥ ಕ್ಷಣಾತ್ಸಮುತ್ಪೇತುರ್ವಾನರಾಃ ಕಾಮರೂಪಿಣಃ ॥
(ಶ್ಲೋಕ-28)
ಮೂಲಮ್
ಋಕ್ಷಾಶ್ಚ ರಾಕ್ಷಸಾಶ್ಚೈವ ಗೋಪುಚ್ಛಾಶ್ಚ ಸಹಸ್ರಶಃ ।
ಋಷೀಣಾಂ ದೇವತಾನಾಂ ಚ ಪುತ್ರಾ ರಾಮಸ್ಯ ನಿರ್ಗಮಮ್ ॥
(ಶ್ಲೋಕ-29)
ಮೂಲಮ್
ಶ್ರುತ್ವಾ ಪ್ರೋಚೂ ರಘುಶ್ರೇಷ್ಠಂ ಸರ್ವೇ ವಾನರರಾಕ್ಷಸಾಃ ।
ತವಾನುಗಮನೇ ವಿದ್ಧಿ ನಿಶ್ಚಿತಾರ್ಥಾನ್ ಹಿ ನಃ ಪ್ರಭೋ ॥
(ಶ್ಲೋಕ-30)
ಮೂಲಮ್
ಏತಸ್ಮಿನ್ನಂತರೇ ರಾಮಂ ಸುಗ್ರೀವೋಽಪಿ ಮಹಾಬಲಃ ।
ಯಥಾವದಭಿವಾದ್ಯಾಹ ರಾಘವಂ ಭಕ್ತವತ್ಸಲಮ್ ॥
(ಶ್ಲೋಕ-31)
ಮೂಲಮ್
ಅಭಿಷಿಚ್ಯಾಂಗದಂ ರಾಜ್ಯೇ ಆಗತೋಽಸ್ಮಿ ಮಹಾಬಲಮ್ ।
ತವಾನುಗಮನೇ ರಾಮ ವಿದ್ಧಿ ಮಾಂ ಕೃತನಿಶ್ಚಯಮ್ ॥
ಅನುವಾದ
‘ಹೇ ವೀರನೇ! ನಾನು ನಿನ್ನ ಭಕ್ತನಾಗಿದ್ದೇನೆ. ಆದುದರಿಂದ ನೀನು ನನ್ನನ್ನು ಕೈಬಿಡಬಾರದು.’ ಶತ್ರುಘ್ನನ ದೃಢನಿಶ್ಚಯವನ್ನರಿತು ರಘುನಾಥನು ಹೇಳಿದನು ‘ನೀನು ಇಂದು ಮಧ್ಯಾಹ್ನದ ಸಮಯಕ್ಕೆ ಸಿದ್ಧನಾಗಿರು.’ ಅದೇ ಸಮಯಕ್ಕೆ ಇಚ್ಛಾನುಸಾರ ರೂಪವನ್ನು ಧರಿಸುವ ವಾನರರು, ಕರಡಿಗಳು, ರಾಕ್ಷಸರು ಮತ್ತು ಗೋಪುಚ್ಛ ವಾನರರು ಸಾವಿರಾರು ಸಂಖ್ಯೆಯಲ್ಲಿ ಬಂದು ನೆರೆದರು. ಋಷಿ ಮತ್ತು ದೇವತೆಗಳ ಅಂಶರಾದ ಆ ಸಮಸ್ತ ವಾನರರು ಮತ್ತು ರಾಕ್ಷಸರು ರಘುನಾಥನ ನಿರ್ಯಾಣವನ್ನು ಕೇಳಿ ಅವನಲ್ಲಿ ಹೇಳಲಾರಂಭಿಸಿದರು ‘ಪ್ರಭೋ! ನಾವೂ ಕೂಡ ನಿನ್ನ ಹಿಂದೆ ಹೊರಡಲು ಕಟಿಬದ್ಧರಾಗಿದ್ದೇವೆ ಎಂದು ನೀನು ತಿಳಿದುಕೋ.’ ಅಷ್ಟರಲ್ಲಿ ಮಹಾಬಲಾಢ್ಯನಾದ ಸುಗ್ರೀವನೂ ಕೂಡ ಎಂದಿನಂತೆ ನಮಸ್ಕರಿಸಿ ಭಕ್ತವತ್ಸಲ ಶ್ರೀರಘುನಾಥನಲ್ಲಿ ಹೀಗೆ ಹೇಳಿದನು ‘ಹೇ ರಾಮಾ! ನಾನು ಮಹಾಬಲಶಾಲಿಯಾದ ಅಂಗದನಿಗೆ ರಾಜ್ಯದ ಪಟ್ಟಾಭಿಷೇಕ ಮಾಡಿ ನಿನ್ನ ಜೊತೆಯಲ್ಲಿ ಹೊರಡಲು ನಿಶ್ಚಯಮಾಡಿಕೊಂಡು ಬಂದಿದ್ದೇನೆ ಎಂದು ನೀನು ತಿಳಿದುಕೋ. ॥26-31॥
(ಶ್ಲೋಕ-32)
ಮೂಲಮ್
ಶ್ರುತ್ವಾ ತೇಷಾಂ ದೃಢಂ ವಾಕ್ಯಂ ಋಕ್ಷವಾನರರಕ್ಷಸಾಮ್ ।
ವಿಭೀಷಣಮುವಾಚೇದಂ ವಚನಂ ಮೃದು ಸಾದರಮ್ ॥
ಅನುವಾದ
ಆಗ ಆ ಭಲ್ಲೂಕ, ವಾನರ ಮತ್ತು ರಾಕ್ಷಸರ ಇಂತಹ ದೃಢ ವಾಕ್ಯಗಳನ್ನು ಕೇಳಿ ಶ್ರೀರಘುನಾಥನು ವಿಭೀಷಣನಿಗೆ ಆದರ ಪೂರ್ವಕ ಈ ಪ್ರಕಾರ ಮಧುರ ವಚನಗಳನ್ನು ಹೇಳಿದನು ॥32॥
(ಶ್ಲೋಕ-33)
ಮೂಲಮ್
ಧರಿಷ್ಯತಿ ಧರಾ ಯಾವತ್ಪ್ರಜಾಸ್ತಾವತ್ಪ್ರಶಾಧಿ ಮೇ ।
ವಚನಾದ್ರಾಕ್ಷಸಂ ರಾಜ್ಯಂ ಶಾಪಿತೋಽಸಿ ಮಮೋಪರಿ ॥
ಅನುವಾದ
‘ನಾನು ನಿನಗೆ ನನ್ನ ಅಣೆಯಿಟ್ಟು ಹೇಳುತ್ತೇನೆ ಪೃಥ್ವಿಯು ಪ್ರಜೆಯನ್ನು ಧರಿಸಿಕೊಂಡಿರುವವರೆಗೆ ನಾನು ಹೇಳಿದಂತೆ ನೀನು ರಾಕ್ಷಸರ ರಾಜ್ಯವನ್ನು ಆಳುವವನಾಗು. ॥33॥
(ಶ್ಲೋಕ-34)
ಮೂಲಮ್
ನ ಕಿಂಚಿದುತ್ತರಂ ವಾಚ್ಯಂ ತ್ವಯಾ ಮತ್ಕೃತಕಾರಣಾತ್ ।
ಏವಂ ವಿಭೀಷಣಂ ತೂಕ್ತ್ವಾ ಹನೂಮಂತಮಥಾಬ್ರವೀತ್ ॥
ಅನುವಾದ
ಈಗ ನಾನು ಮಾಡಿರುವ ಈ ವ್ಯವಸ್ಥೆಯ ವಿಷಯದಲ್ಲಿ ನೀನು ಬೇರೆ ಯಾವ ಉತ್ತರವನ್ನು ಕೊಡ ಬೇಡ’. ವಿಭೀಷಣನಿಗೆ ಈ ರೀತಿ ಹೇಳಿದ ಬಳಿಕ ಅವನು ಹನುಮಂತನ ಕೂಡೆ ಹೀಗೆ ಹೇಳಿದನು ॥34॥
(ಶ್ಲೋಕ-35)
ಮೂಲಮ್
ಮಾರುತೇ ತ್ವಂ ಚಿರಂಜೀವ ಮಮಾಜ್ಞಾಂ ಮಾ ಮೃಷಾ ಕೃಥಾಃ ।
ಜಾಂಬವಂತಮಥ ಪ್ರಾಹ ತಿಷ್ಠ ತ್ವಂ ದ್ವಾಪರಾಂತರೇ ॥
ಅನುವಾದ
‘ಎಲೈ ಮಾರುತಿಯೆ! ನೀನು ಚಿರಂಜೀವಿಯಾಗಿ ಜೀವಿಸುತ್ತಿರು. ನನ್ನ ಹಿಂದಿನ ಅಪ್ಪಣೆಯನ್ನು ಹುಸಿಯಾಗಿಸ ಬೇಡ’. ಮತ್ತೆ ಜಾಂಬವಂತನಿಗೆ ‘ನೀನು ದ್ವಾಪರಯುಗದ ಅಂತ್ಯದ ವರೆಗೂ ಇರು. ॥35॥
(ಶ್ಲೋಕ-36)
ಮೂಲಮ್
ಮಯಾ ಸಾರ್ಧಂ ಭವೇದ್ಯುದ್ಧಂ ಯತ್ಕಿಂಚಿತ್ಕಾರಣಾಂತರೇ ।
ತತಸ್ತಾನ್ ರಾಘವಃ ಪ್ರಾಹ ಋಕ್ಷರಾಕ್ಷಸವಾನರಾನ್ ।
ಸರ್ವಾನೇವ ಮಯಾ ಸಾರ್ಧಂ ಪ್ರಯಾತೇತಿ ದಯಾನ್ವಿತಃ ॥
ಅನುವಾದ
ಯಾವುದೋ ಕಾರಣ ವಶಾತ್ ನನ್ನ ಸಂಗಡ ನಿನ್ನ ಯುದ್ಧ ನಡೆಯವುದು’ ಎಂದು ಹೇಳಿದನು. ಮತ್ತೆ ರಘುನಾಥನು ಉಳಿದ ಎಲ್ಲಾ ಭಲ್ಲೂಕ, ವಾನರ ಮತ್ತು ರಾಕ್ಷಸರೊಡನೆ ದಯಾಪೂರ್ವಕ ಹೇಳಿದನು ‘ನೀವುಗಳೆಲ್ಲರೂ ನನ್ನ ಜೊತೆ ನಡೆಯಿರಿ.’ ॥36॥
(ಶ್ಲೋಕ-37)
ಮೂಲಮ್
ತತಃ ಪ್ರಭಾತೇ ರಘುವಂಶನಾಥೋ
ವಿಶಾಲವಕ್ಷಾಃ ಸಿತಕಂಜನೇತ್ರಃ ।
ಪುರೋಧಸಂ ಪ್ರಾಹ ವಸಿಷ್ಠಮಾರ್ಯಂ
ಯಾಂತ್ವಗ್ನಿಹೋತ್ರಾಣಿ ಪುರೋ ಗುರೋ ಮೇ ॥
ಅನುವಾದ
ಮರುದಿವಸ ಪ್ರಾತಃಕಾಲದಲ್ಲಿಯೇ ವಿಶಾಲಹೃದಯಿಯಾದ ಕಮಲನಯನ ಭಗವಾನ್ ಶ್ರೀರಾಮನು ಪೂಜ್ಯ ಪುರೋಹಿತರಾದ ವಸಿಷ್ಠರಿಗೆ ಹೇಳಿದನು ‘ಗುರುಗಳೇ! ನನ್ನ ಮುಂದೆ ಅಗ್ನಿ ಹೋತ್ರದ ಆಹವನೀಯಾದಿ ಅಗ್ನಿಗಳನ್ನು ತೆಗೆದುಕೊಂಡು ನಡೆಯಲಿ. ॥37॥
(ಶ್ಲೋಕ-38)
ಮೂಲಮ್
ತತೋ ವಸಿಷ್ಠೋಽಪಿ ಚಕಾರ ಸರ್ವಂ
ಪ್ರಾಸ್ಥಾನಿಕಂ ಕರ್ಮ ಮಹದ್ವಿಧಾನಾತ್ ।
ಕ್ಷೌಮಾಂಬರೋ ದರ್ಭಪವಿತ್ರಪಾಣಿ-
ರ್ಮಹಾಪ್ರಯಾಣಾಯ ಗೃಹೀತಬುದ್ಧಿಃ ॥
(ಶ್ಲೋಕ-39)
ಮೂಲಮ್
ನಿಷ್ಕ್ರಮ್ಯ ರಾಮೋ ನಗರಾತ್ಸಿತಾಭ್ರಾ-
ಚ್ಚಶೀವ ಯಾತಃ ಶಶಿಕೋಟಿಕಾಂತಿಃ ।
ರಾಮಸ್ಯ ಸವ್ಯೇ ಸಿತಪದ್ಮಹಸ್ತಾ
ಪದ್ಮಾ ಗತಾ ಪದ್ಮವಿಶಾಲನೇತ್ರಾ ॥
ಅನುವಾದ
ಆಗ ವಸಿಷ್ಠರು ಅತ್ಯಂತ ವಿಧಿಪೂರ್ವಕ ಸಮಸ್ತ ಪ್ರಾಸ್ಥಾನಿಕ (ಪ್ರಯಾಣ) ಕರ್ಮಗಳನ್ನು ನೆರವೇರಿಸಿದರು. ಆ ಸಮಯದಲ್ಲಿ ಕೋಟ್ಯಂತರ ಚಂದ್ರರಿಗೆ ಸಮಾನವಾದ ಕಾಂತಿಯುಳ್ಳ ಭಗವಾನ್ ಶ್ರೀರಾಮನು ರೇಷ್ಮೆವಸವನ್ನು ಧರಿಸಿ, ದರ್ಭೆಯ ಪವಿತ್ರವನ್ನು ಕೈಯಲ್ಲಿತೊಟ್ಟು ಮಹಾಪ್ರಯಾಣದಲ್ಲಿ ಮನಸ್ಸಿಟ್ಟು, ಬಿಳಿಯ ಮೋಡಗಳೊಳಗಿನಿಂದ ಚಂದ್ರನು ಹೊರಬರುವಂತೆ, ನಗರದಿಂದ ಹೊರಟನು. ಆತನ ಎಡಗಡೆ ಕೈಯಲ್ಲಿ ಬಿಳಿಯ ಕಮಲ ಹಿಡಿದು ಕಮಲದಂತೆ ವಿಶಾಲ ಕಣ್ಣುಗಳುಳ್ಳ ಲಕ್ಷ್ಮಿಯು ಹೊರಟಳು. ॥38-39॥
(ಶ್ಲೋಕ-40)
ಮೂಲಮ್
ಪಾರ್ಶ್ವೇಽಥ ದಕ್ಷೇಽರುಣಕಂಜಹಸ್ತಾ
ಶ್ಯಾಮಾ ಯಯೌ ಭೂರಪಿ ದೀಪ್ಯಮಾನಾ ।
ಶಾಸ್ತ್ರಾಣಿ ಶಸ್ತ್ರಾಣಿ ಧನುಶ್ಚ ಬಾಣಾ
ಜಗ್ಮುಃ ಪುರಸ್ತಾದ್ ಧೃತವಿಗ್ರಹಾಸ್ತೇ ॥
ಅನುವಾದ
ಬಲಭಾಗದಲ್ಲಿ ಕೈಯಲ್ಲಿ ಕೆಂಪು ತಾವರೆಯನ್ನು ಹಿಡಿದುಕೊಂಡು ಅತ್ಯಂತ ಪ್ರಕಾಶವುಳ್ಳ ಶ್ಯಾಮಲವರ್ಣೆಯಾದ ಪೃಥ್ವಿಯು (ಭೂದೇವಿ) ಹೊರಟಳು. ಭಗವಂತನ ಮುಂದೆ ಎಲ್ಲಾ ಶಾಸ್ತ್ರಗಳು, ಶಸ್ತ್ರಗಳು ಮತ್ತು ಅವನ ಧನುರ್ಬಾಣಗಳು ಮೂರ್ತಿಮಂತರಾಗಿ ಹೊರಟವು. ॥40॥
(ಶ್ಲೋಕ-41)
ಮೂಲಮ್
ವೇದಾಶ್ಚ ಸರ್ವೇ ಧೃತವಿಗ್ರಹಾಶ್ಚ
ಯಯುಶ್ಚ ಸರ್ವೇ ಮುನಯಶ್ಚ ದಿವ್ಯಾಃ ।
ಮಾತಾ ಶ್ರುತೀನಾಂ ಪ್ರಣವೇನ ಸಾಧ್ವೀ
ಯಯೌ ಹರಿಂ ವ್ಯಾಹೃತಿಭಿಃ ಸಮೇತಾ ॥
ಅನುವಾದ
ಇದೇ ಪ್ರಕಾರ ಸಮಸ್ತ ವೇದಗಳು, ಸಮಸ್ತ ದಿವ್ಯ ಮುನಿಜನರೂ, ಓಂಕಾರ ಮತ್ತು ವ್ಯಾಹೃತಿಗಳ ಸಹಿತ ವೇದಮಾತಾ ಗಾಯತ್ರಿಯೂ ಇವರೆಲ್ಲರೂ ಶರೀರವನ್ನು ಧರಿಸಿ ಶ್ರೀಹರಿಯ ಜೊತೆಯಲ್ಲಿ ಹೊರಟರು. ॥41॥
(ಶ್ಲೋಕ-42)
ಮೂಲಮ್
ಗಚ್ಛಂತಮೇವಾನುಗತಾ ಜನಾಸ್ತೇ
ಸಪುತ್ರದಾರಾಃ ಸಹ ಬಂಧುವರ್ಗೈಃ ।
ಅನಾವೃತದ್ವಾರಮಿವಾಪವರ್ಗಂ
ರಾಮಂ ವ್ರಜಂತಂ ಯಯುರಾಪ್ತಕಾಮಾಃ
ಸಾಂತಃಪುರಃ ಸಾನುಚರಃ ಸಭಾರ್ಯಃ
ಶತ್ರುಘ್ನಯುಕ್ತೋ ಭರತೋನುಯಾತಃ ॥
ಅನುವಾದ
ಈ ರೀತಿ ರಘುನಾಥನು ಹೊರಟಾಗ ತನ್ನ ಬಂಧು-ಬಾಂಧವರು ಮತ್ತು ಪತ್ನೀ ಪುತ್ರಾದಿಗಳ ಸಹಿತ ಎಲ್ಲ ಪುರಜನರೂ, ಸಲಮನೋರಥಪೂರ್ಣರಾಗಿ ಮೋಕ್ಷದ ತೆರೆದ ಬಾಗಿಲಿಗೆ ಹೋಗುತ್ತಿರುವರೋ ಎಂಬಂತೆ ಹೊರಟರು. ನಂತರ ರಾಣಿವಾಸದವರೂ, ಸೇವಕರುಗಳೂ, ಸೀಯರೂ ಹಾಗೂ ಶತ್ರುಘ್ನರ ಸಹಿತ ಭರತನೂ ಕೂಡ ಹೊರಟನು. ॥42॥
(ಶ್ಲೋಕ-43)
ಮೂಲಮ್
ಗಚ್ಛಂತಮಾಲೋಕ್ಯ ರಮಾಸಮೇತಂ
ಶ್ರೀರಾಘವಂ ಪೌರಜನಾಃ ಸಮಸ್ತಾಃ ।
ಸಬಾಲವೃದ್ಧಾಶ್ಚ ಯಯುರ್ದ್ವಿಜಾಗ್ರ್ಯಾಃ
ಸಾಮಾತ್ಯವರ್ಗಾಶ್ಚ ಸಮಂತ್ರಿಣೋ ಯಯುಃ ॥
ಅನುವಾದ
ಶ್ರೀರಘುನಾಥನು ಲಕ್ಷ್ಮಿಯ ಸಂಗಡ ಹೋಗುತ್ತಿರುವುದನ್ನು ನೋಡಿ ಬಾಲಕರು, ವೃದ್ಧರುಗಳ ಸಹಿತ ಸಮಸ್ತ ಪುರಜನರೂ ಹಾಗೂ ಅಮಾತ್ಯರೂ ಮತ್ತು ಮಂತ್ರಿಗಳ ಸಹಿತ ಸಮಸ್ತ ಬ್ರಾಹ್ಮಣರೂ ಹೊರಟರು. ॥43॥
(ಶ್ಲೋಕ-44)
ಮೂಲಮ್
ಸರ್ವೇ ಗತಾಃ ಕ್ಷತ್ರಮುಖಾಃ ಪ್ರಹೃಷ್ಟಾ
ವೈಶ್ಯಾಶ್ಚ ಶೂದ್ರಾಶ್ಚ ತಥಾ ಪರೇ ಚ ।
ಸುಗ್ರೀವಮುಖ್ಯಾ ಹರಿಪುಂಗವಾಶ್ಚ
ಸ್ನಾತಾ ವಿಶುದ್ಧಾಃ ಶುಭಶಬ್ದಯುಕ್ತಾಃ ॥
ಅನುವಾದ
ಅವರ ನಂತರ ಮುಖ್ಯ-ಮುಖ್ಯ ಕ್ಷತ್ರಿಯ, ವೈಶ್ಯ, ಶೂದ್ರ ಮತ್ತು ಬೇರೆ ಎಲ್ಲಾ ಜನರೂ ಬಹು ಸಂತೋಷದಿಂದ ಹೊರಟರು. ಮತ್ತೆ ಸುಗ್ರೀವಾದಿ ಶ್ರೇಷ್ಠ ವಾನರರು ಸ್ನಾನಾದಿಗಳಿಂದ ಶುದ್ಧರಾಗಿ ‘ಶ್ರೀರಾಮಚಂದ್ರನಿಗೆ ಜಯವಾಗಲಿ’ ಮುಂತಾಗಿ ಮಂಗಳ ಮಯ ಜಯಘೋಷ ಮಾಡುತ್ತಾ ಹೊರಟರು. ॥44॥
(ಶ್ಲೋಕ-45)
ಮೂಲಮ್
ನ ಕಶ್ಚಿದಾಸೀದ್ಭವದುಃಖಯುಕ್ತೋ
ದೀನೋಽಥವಾ ಬಾಹ್ಯಸುಖೇಷು ಸಕ್ತಃ ।
ಆನಂದರೂಪಾನುಗತಾ ವಿರಕ್ತಾ
ಯಯುಶ್ಚ ರಾಮಂ ಪಶುಭೃತ್ಯವರ್ಗೈಃ ॥
ಅನುವಾದ
ಅವರಲ್ಲಿ ಯಾರೂ ಪ್ರಾಪಂಚಿಕ-ದುಃಖದಿಂದ ದುಃಖಿತ ರಾಗಲೀ, ದೀನರಾಗಲಿ ಅಥವಾ ಬಾಹ್ಯ ವಿಷಯಗಳಲ್ಲಿ ಆಸಕ್ತರಾಗಲೀ ಇರಲಿಲ್ಲ. ಅವರೆಲ್ಲರೂ ಪರಮಾನಂದ ಸ್ವರೂಪೀ ಭಗವಾನ್ ಶ್ರೀರಾಮನ ಅನುಗಾಮಿಗಳಾಗಿ, ಪ್ರಪಂಚದಿಂದ ವಿರಕ್ತರಾಗಿ, ತಮ್ಮ ಪಶು, ಆಳು-ಕಾಳುಗಳ ಸಹಿತ ರಘುನಾಥನ ಸಂಗಡ ಹೊರಟರು. ॥45॥
(ಶ್ಲೋಕ-46)
ಮೂಲಮ್
ಭೂತಾನ್ಯದೃಶ್ಯಾನಿ ಚ ಯಾನಿ ತತ್ರ
ಯೇ ಪ್ರಾಣಿನಃ ಸ್ಥಾವರಜಂಗಮಾಶ್ಚ ।
ಸಾಕ್ಷಾತ್ಪರಾತ್ಮಾನಮನಂತಶಕ್ತಿಂಃ
ಜಗ್ಮುರ್ವಿರಕ್ತಾಃ ಪರಮೇಕಮೀಶಮ್ ॥
ಅನುವಾದ
ಎಂದೂ ಕಾಣಿಸಿಕೊಳ್ಳದಿರುವ ಪ್ರಾಣಿಗಳೆಲ್ಲವೂ, ಸ್ಥಾವರ-ಜಂಗಮ ಜೀವಿಗಳೆಲ್ಲವೂ ಕೂಡ ಪ್ರಪಂಚದಿಂದ ವಿರಕ್ತರಾಗಿ ಏಕಮಾತ್ರ ಪರಮೇಶ್ವರ ಅನಂತಶಕ್ತಿ ಸಾಕ್ಷಾತ್ ಪರಮಾತ್ಮನಾದ ಶ್ರೀರಾಮನ ಜೊತೆಯಲ್ಲಿ ಹೊರಟವು. ॥46॥
(ಶ್ಲೋಕ-47)
ಮೂಲಮ್
ನಾಸೀದಯೋಧ್ಯಾನಗರೇ ತು ಜಂತುಃ
ಕಶ್ಚಿತ್ತದಾ ರಾಮಮನಾ ನ ಯಾತಃ ।
ಶೂನ್ಯಂ ಬಭೂವಾಖಿಲಮೇವ ತತ್ರ
ಪುರಂ ಗತೇ ರಾಜನಿ ರಾಮಚಂದ್ರೇ ॥
ಅನುವಾದ
ಭಗವಾನ್ ಶ್ರೀರಾಮನಲ್ಲಿ ಚಿತ್ತವನ್ನು ತಲ್ಲೀನಗೊಳಿಸಿ ಅವನ ಅನುಗಾಮಿ ಯಾಗಿರದೆ ಇರುವ ಯಾವ ಜೀವವೂ ಆ ಸಮಯದಲ್ಲಿ ಅಯೋಧ್ಯೆಯಲ್ಲಿರಲಿಲ್ಲ. ಮಹಾರಾಜಾ ಶ್ರೀರಾಮಚಂದ್ರನು ಪ್ರಯಾಣ ಮಾಡಿದ ಕೂಡಲೇ ಆ ನಗರವೆಲ್ಲಾ ಶೂನ್ಯವಾಗಿ ಹೋಯಿತು. ॥47॥
(ಶ್ಲೋಕ-48)
ಮೂಲಮ್
ತತೋಽತಿದೂರಂ ನಗರಾತ್ಸ ಗತ್ವಾ
ದೃಷ್ಟ್ವಾ ನದೀಂ ತಾಂ ಹರಿನೇತ್ರಜಾತಾಮ್ ।
ನನಂದ ರಾಮಃ ಸ್ಮೃತಪಾವನೋಽತೋ
ದದರ್ಶ ಚಾಶೇಷಮಿದಂ ಹೃದಿಸ್ಥಮ್ ॥
ಅನುವಾದ
ನಗರದಿಂದ ಬಹಳ ದೂರ ಹೋದ ಮೇಲೆ ರಘುನಾಥನು ಭಗವಾನ್ ವಿಷ್ಣುವಿನ ಕಣ್ಣಿಂದ ಹೊರ ಹೊಮ್ಮಿದ ಸರಯೂ ನದಿಯನ್ನು ನೋಡಿದನು. ಸ್ಮರಣೆ ಮಾಡಿದಾಗಲೇ ಪವಿತ್ರಗೊಳಿಸುವ ಭಗವಾನ್ ಶ್ರೀರಾಮ ಚಂದ್ರನು ಅದನ್ನು ನೋಡಿ ಬಹು ಪ್ರಸನ್ನನಾದನು ಮತ್ತು ಈ ಇಡೀ ಜಗತ್ತನ್ನು ತನ್ನ ಹೃದಯದಲ್ಲಿ ನೋಡತೊಡಗಿದನು. ॥48॥
(ಶ್ಲೋಕ-49)
ಮೂಲಮ್
ಅಥಾಗತಸ್ತತ್ರ ಪಿತಾಮಹೋ ಮಹಾನ್
ದೇವಾಶ್ಚ ಸರ್ವೇ ಋಷಯಶ್ಚ ಸಿದ್ಧಾಃ ।
ವಿಮಾನಕೋಟೀಭಿರಪಾರಪಾರಂ
ಸಮಾವೃತಂ ಖಂ ಸುರಸೇವಿತಾಭಿಃ ॥
(ಶ್ಲೋಕ-50)
ಮೂಲಮ್
ರವಿಪ್ರಕಾಶಾಭಿರಭಿಸ್ಫುರತ್ಸ್ವಂ
ಜ್ಯೋತಿರ್ಮಯಂ ತತ್ರ ನಭೋ ಬಭೂವ ।
ಸ್ವಯಂಪ್ರಕಾಶೈರ್ಮಹತಾಂ ಮಹದ್ಭಿಃ
ಸಮಾವೃತಂ ಪುಣ್ಯಕೃತಾಂ ವರಿಷ್ಠೈಃ ॥
ಅನುವಾದ
ಅದೇ ಸಮಯಕ್ಕೆ, ಅಲ್ಲಿಗೆ ಪಿತಾಮಹ ಬ್ರಹ್ಮದೇವರು ಹಾಗೂ ದೇವತೆಗಳು, ಋಷಿಗಳು, ಸಿದ್ಧರೂ ಬಂದರು. ಆಗ ದೇವತೆಗಳಿಂದ ವಿರಾಜಮಾನರಾಗಿದ್ದ ಸೂರ್ಯ ಸದೃಶ ತೇಜಸ್ವೀ ಕೋಟ್ಯಂತರ ವಿಮಾನಗಳಿಂದ, ಅನಂತಪಾರ ಆಕಾಶವು ಕಿಕ್ಕಿರಿದು ತುಂಬಿಹೋಯಿತು. ಅವುಗಳ ಪ್ರಕಾಶದಿಂದ ಪ್ರಜ್ವಲಿತಗೊಂಡು ಅದೂ ಕೂಡ ಹೊಳೆಯಲಾರಂಭಿಸಿತು. ಇವರಲ್ಲದೆ ಪುಣ್ಯಲೋಕಗಳಿಂದ ಬಂದಿರುವ ಪುಣ್ಯವಂತರಲ್ಲಿ ಶ್ರೇಷ್ಠರೂ ಹಾಗೂ ಮಹಾತ್ಮರುಗಳಲ್ಲಿ ಮಹಾನ್ ಸ್ವಯಂ ಪ್ರಕಾಶಮಯ ದಿವ್ಯ ಪುರುಷರಿಂದಲೂ ಆಕಾಶವು ಮುಚ್ಚಿಹೋದಂತಾಯಿತು. ॥49-50॥
(ಶ್ಲೋಕ-51)
ಮೂಲಮ್
ವವುಶ್ಚ ವಾತಾಶ್ಚ ಸುಗಂಧವಂತೋ
ವವರ್ಷ ವೃಷ್ಟಿಃ ಕುಸುಮಾವಲೀನಾಮ್ ।
ಉಪಸ್ಥಿತೇ ದೇವಮೃದಂಗನಾದೇ
ಗಾಯತ್ಸು ವಿದ್ಯಾಧರಕಿನ್ನರೇಷು ॥
(ಶ್ಲೋಕ-52)
ಮೂಲಮ್
ರಾಮಸ್ತು ಪದ್ಭ್ಯಾಂ ಸರಯೂಜಲಂ ಸಕೃತ್
ಸ್ಪೃಷ್ಟ್ವಾ ಪರಿಕ್ರಾಮದನಂತಶಕ್ತಿಃ ।
ಬ್ರಹ್ಮಾ ತದಾ ಪ್ರಾಹ ಕೃತಾಂಜಲಿಸ್ತಂ
ರಾಮಂ ಪರಾತ್ಮನ್ ಪರಮೇಶ್ವರಸ್ತ್ವಮ್ ॥
(ಶ್ಲೋಕ-53)
ಮೂಲಮ್
ವಿಷ್ಣುಃ ಸದಾನಂದಮಯೋಸಿ ಪೂರ್ಣೋ
ಜಾನಾಸಿ ತತ್ತ್ವಂ ನಿಜಮೈಶಮೇಕಮ್ ।
ತಥಾಪಿ ದಾಸಸ್ಯ ಮಮಾಖಿಲೇಶ
ಕೃತಂ ವಚೋ ಭಕ್ತಪರೋಸಿ ವಿದ್ವನ್ ॥
ಅನುವಾದ
ಆಗ ಸುಗಂಧಮಯ ವಾಯು ಚಲಿಸುತ್ತಿತ್ತು ಮತ್ತು ಕುಸುಮ ಸಮೂಹಗಳ ಮಳೆಯು ನಿರಂತರ ಸುರಿಯುತ್ತಿತ್ತು. ದೇವತೆಗಳ ಮೃದಂಗನಾದ, ವಿದ್ಯಾಧರ ಹಾಗೂ ಕಿನ್ನರರ ಗಾನವಾಗುತ್ತಿರುವ ಸಮಯದಲ್ಲಿ ಅನಂತಶಕ್ತಿಯ ಭಗವಾನ್ ಶ್ರೀರಾಮನು ಒಂದು ಬಾರಿ ಸರಯೂಜಲವನ್ನು ಸ್ಪರ್ಶಿಸಿ, ಆಚಮನ ಮಾಡಿ ನೆಲದ ಮೇಲೆ ನಡೆಯುವಂತೆ ನೀರಿನ ಮೇಲೆ ನಡೆಯ ತೊಡಗಿದನು. ಆಗ ಬ್ರಹ್ಮದೇವರು ಕೈಮುಗಿದುಕೊಂಡು ಭಗವಾನ್ ಶ್ರೀರಾಮನಿಗೆ ಹೇಳಿದನು ‘‘ಹೇ ಪರಮಾತ್ಮಾ! ನೀನು ಎಲ್ಲರಿಗೂ ಒಡೆಯನೂ, ನಿತ್ಯಾನಂದಮಯನೂ, ಸರ್ವತ್ರ ಪರಿಪೂರ್ಣ ಮತ್ತು ಸಾಕ್ಷಾತ್ ವಿಷ್ಣು ಪರಮಾತ್ಮನಾಗಿರುವೆ. ನಿನ್ನ ಏಕಮಾತ್ರ ಈಶ್ವರೀಯ ತತ್ತ್ವವನ್ನು ನೀನೇ ತಿಳಿದಿರುವೆ. ಆದರೂ ಹೇ ಅಖಿಲೇಶ್ವರಾ! ನೀನು ದಾಸನಾದ ನನ್ನ ಪ್ರಾರ್ಥನೆಯನ್ನು ಪೂರ್ಣಗೊಳಿಸಿದೆ ; ಅದು ಸರಿಯಾಗಿಯೇ ಇದೆ; ಏಕೆಂದರೆ ಹೇ ವೇದವೇದ್ಯನೆ! ನೀನು ಭಕ್ತವತ್ಸಲನಾಗಿರುವೆ. ॥51-53॥
(ಶ್ಲೋಕ-54)
ಮೂಲಮ್
ತ್ವಂ ಭ್ರಾತೃಭಿರ್ವೈಷ್ಣವಮೇವಮಾದ್ಯಂ
ಪ್ರವಿಶ್ಯ ದೇಹಂ ಪರಿಪಾಹಿ ದೇವಾನ್ ।
ಯದ್ವಾ ಪರೋ ವಾ ಯದಿ ರೋಚತೇ ತಂ
ಪ್ರವಿಶ್ಯ ದೇಹಂ ಪರಿಪಾಹಿ ನಸ್ತ್ವಮ್ ॥
ಅನುವಾದ
ಹೇ ಪ್ರಭೋ! ಈಗ ನೀನು ಸಹೋದರರ ಸಹಿತ ನಿನ್ನ ಆದಿವಿಗ್ರಹ ವಿಷ್ಣುದೇಹದಲ್ಲಿ ಪ್ರವೇಶಿಸಿ ದೇವತೆಗಳನ್ನೂ ರಕ್ಷಿಸು, ಅಥವಾ ನಿನಗೆ ಬೇರೆ ಯಾವುದಾದರೂ ಶರೀರ ಪ್ರಿಯವಾದರೆ ಅದನ್ನು ಪ್ರವೇಶ ಮಾಡಿ ನಮ್ಮೆಲ್ಲರನ್ನೂ ಕಾಪಾಡು. ॥54॥
(ಶ್ಲೋಕ-55)
ಮೂಲಮ್
ತ್ವಮೇವ ದೇವಾಧಿಪತಿಶ್ಚ ವಿಷ್ಣು -
ರ್ಜಾನಂತಿ ನ ತ್ವಾಂ ಪುರುಷಾ ವಿನಾ ಮಾಮ್ ।
ಸಹಸ್ರಕೃತ್ವಸ್ತು ನಮೋ ನಮಸ್ತೇ
ಪ್ರಸೀದ ದೇವೇಶ ಪುನರ್ನಮಸ್ತೇ ॥
ಅನುವಾದ
ದೇವಾದಿ ದೇವತೆಗಳೊಡೆಯನಾದ ಭಗವಾನ್ ವಿಷ್ಣುವು ನೀನೇ ಆಗಿರುವೆ; ಈ ಮಾತನ್ನು ನನ್ನ ಹೊರತು ಬೇರೆ ಯಾರೂ ತಿಳಿಯರು. ಹೇ ದೇವೇಶ! ನಿನಗೆ ಸಾವಿರಾರು ಬಾರಿ ನಮಸ್ಕಾರ. ನೀನು ಪ್ರಸನ್ನನಾಗು. ನಿನಗೆ ಪುನಃ ಪುನಃ ನಮಸ್ಕಾರಗಳು.’’ ॥55॥
(ಶ್ಲೋಕ-56)
ಮೂಲಮ್
ಪಿತಾಮಹಪ್ರಾರ್ಥನಯಾ ಸ ರಾಮಃ
ಪಶ್ಯತ್ಸು ದೇವೇಷು ಮಹಾಪ್ರಕಾಶಃ ।
ಮುಷ್ಣಂಶ್ಚ ಚಕ್ಷೂಂಷಿ ದಿವೌಕಸಾಂ ತದಾ
ಬಭೂವ ಚಕ್ರಾದಿಯುತಶ್ಚತುರ್ಭುಜಃ ॥
ಅನುವಾದ
ಆಗ ಪಿತಾಮಹ ಬ್ರಹ್ಮದೇವರು ಪ್ರಾರ್ಥಿಸಿಕೊಂಡಂತೆ ಮಹಾತೇಜೋಮಯ ಭಗವಾನ್ ಶ್ರೀರಾಮನು ಎಲ್ಲಾ ದೇವತೆಗಳು ನೋಡು-ನೋಡುತ್ತಾ ಇದ್ದಂತಯೇ ಅವರ ಕಣ್ಣು ತಪ್ಪಿಸಿ ಚಕ್ರಾದಿ ಆಯುಧಗಳಿಂದ ಕೂಡಿದ ಚತುರ್ಭುಜ ರೂಪನಾದನು. ॥56॥
(ಶ್ಲೋಕ-57)
ಮೂಲಮ್
ಶೇಷೋ ಬಭೂವೇಶ್ವರತಲ್ಪಭೂತಃ
ಸೌಮಿತ್ರಿರತ್ಯದ್ಭುತಭೋಗಧಾರೀ ।
ಬಭೂವತುಶ್ಚಕ್ರದರೌ ಚ ದಿವ್ಯೌ
ಕೈಕೇಯಿಸೂನೂರ್ಲವಣಾಂತಕಶ್ಚ ॥
ಅನುವಾದ
ಲಕ್ಷ್ಮಣನು ಅದ್ಭುತ ಹೆಡೆಗಳನ್ನು ಧರಿಸಿ ಭಗವಂತನ ಶಯ್ಯಾರೂಪೀ ಆದಿಶೇಷನಾದನು ಹಾಗೂ ಕೈಕೆಯಿಯ ಪುತ್ರ ಭರತ ಮತ್ತು ಲವಣಾಂತಕ ಶತ್ರುಘ್ನ ದಿವ್ಯಚಕ್ರ ಮತ್ತು ಶಂಖಗಳಾದರು. ॥57॥
(ಶ್ಲೋಕ-58)
ಮೂಲಮ್
ಸೀತಾ ಚ ಲಕ್ಷ್ಮೀರಭವತ್ಪುರೇವ
ರಾಮೋ ಹಿ ವಿಷ್ಣುಃ ಪುರುಷಃ ಪುರಾಣಃ ।
ಸಹಾನುಜಃ ಪೂರ್ವಶರೀರಕೇಣ
ಬಭೂವ ತೇಜೋಮಯದಿವ್ಯಮೂರ್ತಿಃ ॥
ಅನುವಾದ
ಸೀತೆಯಾದರೋ ಮೊದಲೇ ಲಕ್ಷ್ಮಿಯಾಗಿದ್ದಳು. ಭಗವಾನ್ ಶ್ರೀರಾಮನು ಪುರಾಣಪುರುಷ ಭಗವಾನ್ ವಿಷ್ಣುವೇ ಆಗಿದ್ದಾನೆ. ಅವನು ಸಹೋದರರ ಸಹಿತ ತನ್ನ ಪೂರ್ವ ಶರೀರದಿಂದ ತೇಜೋಮಯ ದಿವ್ಯ-ಸ್ವರೂಪದವನಾಗಿಬಿಟ್ಟನು. ॥58॥
(ಶ್ಲೋಕ-59)
ಮೂಲಮ್
ವಿಷ್ಣುಂ ಸಮಾಸಾದ್ಯ ಸುರೇಂದ್ರಮುಖ್ಯಾ
ದೇವಾಶ್ಚ ಸಿದ್ಧಾ ಮುನಯಶ್ಚ ದಕ್ಷಾಃ ।
ಪಿತಾಮಹಾದ್ಯಾಃ ಪರಿತಃ ಪರೇಶಂ
ಸ್ತವೈರ್ಗೃಣಂತಃ ಪರಿಪೂಜಯಂತಃ ॥
(ಶ್ಲೋಕ-60)
ಮೂಲಮ್
ಆನಂದಸಂಪ್ಲಾವಿತಪೂರ್ಣಚಿತ್ತಾ
ಬಭೂವಿರೇ ಪ್ರಾಪ್ತಮನೋರಥಾಸ್ತೇ ।
ತದಾಹ ವಿಷ್ಣುರ್ದ್ರುಹಿಣಂ ಮಹಾತ್ಮಾ
ಏತೇ ಹಿ ಭಕ್ತಾ ಮಯಿ ಚಾನುರಕ್ತಾಃ ॥
ಅನುವಾದ
ಅನಂತರ ಆ ಭಗವಾನ್ ವಿಷ್ಣುವಿನ ಬಳಿಯಲ್ಲಿ ಸುತ್ತಲೂ ಇಂದ್ರಾದಿ ದೇವತೆಗಳು, ಸಿದ್ಧರು ಮುನಿಗಳು, ಯಕ್ಷರು ಮತ್ತು ಬ್ರಹ್ಮಾದಿ ಪ್ರಜಾಪತಿಗಳು ಬಂದು ಆ ಪರಮೇಶ್ವರನ ಸ್ತೋತ್ರಗಳ ಮೂಲಕ ಸ್ತುತಿಸುತ್ತಾ ಪೂಜಿಸಲಾರಂಭಿಸಿದರು. ತಮ್ಮ ಮನೋರಥ ಪೂರ್ಣಗೊಂಡ ಪ್ರಯುಕ್ತ ಮನಸ್ಸಿನಲ್ಲಿಯೇ ಆನಂದಮಗ್ನರಾದರು. ಆಗ ಮಹಾತ್ಮಾ ಭಗವಾನ್ ವಿಷ್ಣುವು ಬ್ರಹ್ಮದೇವರಲ್ಲಿ ಹೇಳಿದನು ‘‘ಇವರೆಲ್ಲರೂ ನನ್ನ ಭಕ್ತರು ಮತ್ತು ನನ್ನಲ್ಲಿ ಪ್ರೀತಿಯನ್ನಿಟ್ಟಿರುವವರು. ॥ 59-60॥
(ಶ್ಲೋಕ-61)
ಮೂಲಮ್
ಯಾಂತಂ ದಿವ್ಯಂ ಮಾಮನುಯಾಂತಿ ಸರ್ವೇ
ತಿರ್ಯಕ್ ಶರೀರಾ ಅಪಿ ಪುಣ್ಯಯುಕ್ತಾಃ ।
ವೈಕುಂಠಸಾಮ್ಯಂ ಪರಮಂ ಪ್ರಯಾಂತು
ಸಮಾವಿಶಸ್ವಾಶು ಮಮಾಜ್ಞಯಾ ತ್ವಮ್ ॥
ಅನುವಾದ
ನನ್ನೊಡನೆ ಇವರೆಲ್ಲರೂ ಸಹ ಸ್ವರ್ಗಲೋಕಕ್ಕೆ ಹೋಗಲು ಇಚ್ಛಿತ್ತಾರೆ. ಇವರಲ್ಲಿರುವ ತಿರ್ಯಕ್ ಶರೀರ ಧಾರಿಗಳೂ (ಪಶು, ಪಕ್ಷಿಯಾದಿ ಪ್ರಾಣಿವರ್ಗ) ಕೂಡ ಬಹು ಪುಣ್ಯಾತ್ಮರಾಗಿವೆ. ಇವರೆಲ್ಲರೂ ವೈಕುಂಠಕ್ಕೆ ಸಮಾನವಾದ ಉತ್ತಮ ಲೋಕಗಳನ್ನು ಪಡೆಯಲಿ ; ನನ್ನ ಅಪ್ಪಣೆಯಂತೆ ನೀನು ಬೇಗನೇ ಇವರನ್ನು ಅವರವರ ಲೋಕಗಳಿಗೆ ಪ್ರವೇಶ ಮಾಡಿಸಿಬಿಡು.’’ ॥61॥
(ಶ್ಲೋಕ-62)
ಮೂಲಮ್
ಶ್ರುತ್ವಾ ಹರೇರ್ವಾಕ್ಯಮಥಾಬ್ರವೀತ್ಕಃ
ಸಾಂತಾನಿಕಾನ್ಯಾಂತು ವಿಚಿತ್ರ ಭೋಗಾನ್ ।
ಲೋಕಾನ್ಮದೀಯೋಪರಿ ದೀಪ್ಯಮಾನಾಂ-
ಸ್ತ್ವದ್ಭಾವಯುಕ್ತಾಃ ಕೃತಪುಣ್ಯಪುಂಜಾಃ ॥
ಅನುವಾದ
ಭಗವಂತನ ಈ ಮಾತನ್ನು ಕೇಳಿ ಬ್ರಹ್ಮದೇವರು ಹೇಳಿದನು - ‘‘ಪರಮಾತ್ಮಾ! ನಿನ್ನ ಭಕ್ತಿಯಿಂದ ಕೂಡಿದ ಈ ಮಹಾಪುಣ್ಯಶಾಲೀ ಜನರು ನನ್ನ ಲೋಕಕ್ಕಿಂತಲೂ ಕೂಡ ಮೇಲೆ ಇರುವ ಅತ್ಯಂತ ಪ್ರಕಾಶಮಯ ಮತ್ತು ವಿಚಿತ್ರ ಭೋಗಗಳಿಂದ ಸಮೃದ್ಧವಾದ ಸಾಂತಾನಿಕ ಲೋಕಗಳನ್ನು ಪಡೆಯಲಿ. ॥62॥
(ಶ್ಲೋಕ-63)
ಮೂಲಮ್
ಯೇ ಚಾಪಿ ತೇ ರಾಮ ಪವಿತ್ರನಾಮ
ಗೃಣಂತಿ ಮರ್ತ್ಯಾ ಲಯಕಾಲ ಏವ ।
ಅಜ್ಞಾನತೋ ವಾಪಿ ಭಜಂತು ಲೋಕಾಂ-
ಸ್ತಾನೇವ ಯೋಗೈರಪಿ ಚಾಧಿಗಮ್ಯಾನ್ ॥
ಅನುವಾದ
ಹೇ ರಾಮಾ! ಇನ್ನು ಯಾರು ಮರಣ ಸಮಯದಲ್ಲಿಯೂ ನಿನ್ನ ಪವಿತ್ರನಾಮವನ್ನು ನೆನಸಿಕೊಳ್ಳುವವರೂ ಅಥವಾ ಮರೆತಾದರೂ ನಿನ್ನ ಭಜನೆ ಮಾಡುವವರೂ ಕೂಡ ಯೋಗಿಗಳಿಗೆ ಪ್ರಾಪ್ತಿಯಾಗುವ ಯೋಗ್ಯವಾದ ಅದೇ ಲೋಕಗಳಿಗೇ ಹೋಗುವರು.’’ ॥63॥
(ಶ್ಲೋಕ-64)
ಮೂಲಮ್
ತತೋಽತಿಹೃಷ್ಟಾ ಹರಿರಾಕ್ಷಸಾದ್ಯಾಃ
ಸ್ಪೃಷ್ಟ್ವಾ ಜಲಂ ತ್ಯಕ್ತಕಲೇವರಾಸ್ತೇ ।
ಪ್ರಪೇದಿರೇ ಪ್ರಾಕ್ತನಮೇವ ರೂಪಂ
ಯದಂಶಜಾ ಋಕ್ಷಹರೀಶ್ವರಾಸ್ತೇ ॥
ಅನುವಾದ
ಇದನ್ನು ಕೇಳಿದ ಎಲ್ಲ ವಾನರರಿಗೂ, ರಾಕ್ಷಸಾದಿಗಳಿಗೂ ಬಹು ಸಂತೋಷವಾಯಿತು ಹಾಗೂ ನೀರಿನಲ್ಲಿ ಮುಳುಗಿ ಶರೀರವನ್ನು ಬಿಡಲಾರಂಭಿಸಿದರು. ಆ ಭಲ್ಲೂಕರೂ, ವಾನರರೂ ಯಾವ-ಯಾವ ಅಂಶದಿಂದ ಉತ್ಪನ್ನರಾಗಿದ್ದರೋ ಆಯಾಯಾ ದೇವತೆಗಳ ಪೂರ್ವರೂಪವನ್ನೇ ಪಡೆದುಕೊಂಡರು. ॥64॥
(ಶ್ಲೋಕ-65)
ಮೂಲಮ್
ಪ್ರಭಾಕರಂ ಪ್ರಾಪ ಹರಿಪ್ರವೀರಃ
ಸುಗ್ರೀವ ಆದಿತ್ಯಜವೀರ್ಯವತ್ತ್ವಾತ್ ।
ತತೋ ವಿಮಗ್ನಾಃ ಸರಯೂಜಲೇಷು
ನರಾಃ ಪರಿತ್ಯಜ್ಯ ಮನುಷ್ಯದೇಹಮ್ ॥
(ಶ್ಲೋಕ-66)
ಮೂಲಮ್
ಆರುಹ್ಯ ದಿವ್ಯಾ ಭರಣಾ ವಿಮಾನಂ
ಪ್ರಾಪುಶ್ಚ ತೇ ಸಾಂತನಿಕಾಖ್ಯಲೋಕಾನ್ ।
ತಿರ್ಯಕ್ ಪ್ರಜಾತಾ ಅಪಿ ರಾಮದೃಷ್ಟಾ
ಜಲಂ ಪ್ರವಿಷ್ಟಾ ದಿವಮೇವ ಯಾತಾಃ ॥
ಅನುವಾದ
ವಾನರರಾಜ ಸುಗ್ರೀವನು ಸೂರ್ಯನ ಅಂಶದಿಂದ ಉತ್ಪನ್ನನಾಗಿದ್ದನು, ಆದ್ದರಿಂದ ಅವನು ಸೂರ್ಯನಲ್ಲಿ ಲೀನನಾಗಿ ಹೋದನು. ಅನಂತರ ಅಯೋಧ್ಯಾನಿವಾಸೀ ಜನರು ಸರಯೂನದಿಯ ನೀರಿನಲ್ಲಿ ಮುಳುಗಿ-ಮುಳುಗಿ ಮನುಷ್ಯ-ದೇಹವನ್ನು ಬಿಟ್ಟು ದಿವ್ಯ ಆಭೂಷಣಗಳಿಂದ ಅಲಂಕೃತರಾಗಿ ವಿಮಾನಗಳನ್ನೇರಿ ಸಾಂತಾನಿಕವೆಂಬ ಲೋಕ ಗಳಿಗೆ ಹೋದರು. ತಿರ್ಯಕ್ ಯೋನಿಗಳಲ್ಲಿ ಹುಟ್ಟಿದವರೂ ಕೂಡ ಭಗವಾನ್ ಶ್ರೀರಾಮನ ದೃಷ್ಟಿ ಬಿದ್ದದ್ದರಿಂದ ನೀರಿನಲ್ಲಿ ಮುಳುಗಿ ಸ್ವರ್ಗಲೋಕಕ್ಕೇ ಹೊರಟು ಹೋದರು. ॥65-66॥
(ಶ್ಲೋಕ-67)
ಮೂಲಮ್
ದಿದೃಕ್ಷವೋ ಜಾನಪದಾಶ್ಚ ಲೋಕಾ
ರಾಮಂ ಸಮಾಲೋಕ್ಯ ವಿಮುಕ್ತಸಂಗಾಃ ।
ಸ್ಮೃತ್ವಾ ಹರಿಂ ಲೋಕಗುರುಂ ಪರೇಶಂ
ಸ್ಪೃಷ್ಟ್ವಾ ಜಲಂ ಸ್ವರ್ಗಮವಾಪುರಂಜಃ ॥
ಅನುವಾದ
ದೇಶವಾಸಿ ಜನರು ಇವೆಲ್ಲ ಕೌತುಕವನ್ನು ನೋಡುವುದಕ್ಕಾಗಿ ಬಂದಿದ್ದರು. ಅವರೂ ಕೂಡ ಶ್ರೀರಾಮಚಂದ್ರನ ದರ್ಶನಮಾಡಿ, ಸಾಂಸಾರಿಕ ಆಸಕ್ತಿಯನ್ನು ಬಿಟ್ಟು ಲೋಕಗುರು ಪರಮೇಶ್ವರ ಭಗವಾನ್ ವಿಷ್ಣುವನ್ನು ಸ್ಮರಿಸುತ್ತಾ ಜಲಸ್ಪರ್ಶ ಮಾಡಿ ಅನಾಯಾಸವಾಗಿ ಸ್ವರ್ಗಕ್ಕೆ ಹೋರಟುಹೋದರು. ॥67॥
(ಶ್ಲೋಕ-68)
ಮೂಲಮ್
ಏತಾವದೇವೋತ್ತರಮಾಹ ಶಂಭುಃ
ಶ್ರೀರಾಮಚಂದ್ರಸ್ಯ ಕಥಾವಶೇಷಮ್ ।
ಯಃ ಪಾದಮಪ್ಯತ್ರ ಪಠೇತ್ಸ ಪಾಪಾ-
ದ್ವಿಮುಚ್ಯತೇ ಜನ್ಮಸಹಸ್ರಜಾತಾತ್ ॥
ಅನುವಾದ
ಶ್ರೀಮಹಾದೇವನು ಹೇಳಿದ ಭಗವಾನ್ ರಾಮನ ಕಥೆಯ ಪರಿಶಿಷ್ಟರೂಪವಾಗಿ ಇದಿಷ್ಟೇ ಉತ್ತರಕಾಂಡವಾಗಿದೆ. ಇದರ ಒಂದು ಪಾದವನ್ನಾದರೂ ಶ್ಲೋಕದ ನಾಲ್ಕನೇ ಒಂದು ಭಾಗ ಕೂಡ ಓದುವವರು ತನ್ನ ಸಾವಿರಾರು ಜನ್ಮಗಳ ಪಾಪಗಳಿಂದ ಮುಕ್ತನಾಗಿ ಹೋಗುತ್ತಾರೆ. ॥68॥
(ಶ್ಲೋಕ-69)
ಮೂಲಮ್
ದಿನೇ ದಿನೇ ಪಾಪಚಯಂ ಪ್ರಕುರ್ವನ್
ಪಠೇನ್ನರಃ ಶ್ಲೋಕಮಪೀಹ ಭಕ್ತ್ಯಾ ।
ವಿಮುಕ್ತಸರ್ವಾಘಚಯಃ ಪ್ರಯಾತಿ
ರಾಮಸ್ಯ ಸಾಲೋಕ್ಯಮನನ್ಯಲಭ್ಯಮ್ ॥
ಅನುವಾದ
ಪ್ರತಿ ನಿತ್ಯವೂ ಅನೇಕಾನೇಕ ಪಾಪಗಳನ್ನು ಮಾಡುವ ಮನುಷ್ಯರು ಭಕ್ತಿಯಿಂದ ಇದರ ಒಂದು ಶ್ಲೋಕವನ್ನಾದರೂ ಓದಿದರೆ ಸಂಪೂರ್ಣ ಪಾಪರಾಶಿಯಿಂದ ಬಿಡುಗಡೆಹೊಂದಿ ಇತರ ರಿಗೆ ಅಲಭ್ಯವಾದ ಶ್ರೀರಾಮನ ಸಾಲೋಕ್ಯಪದವಿಯನ್ನು ಪಡೆಯುತ್ತಾರೆ. ॥69॥
(ಶ್ಲೋಕ-70)
ಮೂಲಮ್
ಆಖ್ಯಾನಮೇತದ್ರಘುನಾಯಕಸ್ಯ
ಕೃತಂ ಪುರಾ ರಾಘವಚೋದಿತೇನ ।
ಮಹೇಶ್ವರೇಣಾಪ್ತಭವಿಷ್ಯದರ್ಥಂ
ಶ್ರುತ್ವಾ ತು ರಾಮಃ ಪರಿತೋಷಮೇತಿ ॥
ಅನುವಾದ
ರಘುನಾಥನ ಪ್ರೇರಣೆಯಿಂದ ಭವಿಷ್ಯದ ಚರಿತ್ರೆಗಳನ್ನು ಕೂಡ ವರ್ಣಿಸಿರುವ ಶ್ರೀರಾಮನ ಈ ಕಥೆಯನ್ನು ಮೊದಲು ಶ್ರೀಮಹಾದೇವನು ರಚಿಸಿದ್ದನು. ಇದನ್ನು ಕೇಳಿ ಶ್ರೀರಾಮಚಂದ್ರನು ಬಹಳ ಪ್ರಸನ್ನನಾಗುತ್ತಾನೆ. ॥70॥
(ಶ್ಲೋಕ-71)
ಮೂಲಮ್
ರಾಮಾಯಣಂ ಕಾವ್ಯಮನಂತಪುಣ್ಯಂ
ಶ್ರೀಶಂಕರೇಣಾಭಿಹಿತಂ ಭವಾನ್ಯೈ ।
ಭಕ್ತ್ಯಾ ಪಠೇದ್ಯಃ ಶೃಣುಯಾತ್ಸ ಪಾಪೈ-
ರ್ವಿಮುಚ್ಯತೇ ಜನ್ಮಶತೋದ್ಭವೈಶ್ಚ ॥
ಅನುವಾದ
ಅಧ್ಯಾತ್ಮ ರಾಮಾಯಣವೆಂಬ ಈ ಅನಂತ ಪುಣ್ಯಪ್ರದ ಕಾವ್ಯವನ್ನು ಭಗವಾನ್ ಶ್ರೀಶಂಕರನು ಪಾರ್ವತಿಗೆ ಹೇಳಿದ್ದಾನೆ. ಇದನ್ನು ಭಕ್ತಿಯಿಂದ ಓದುವವರು ಅಥವಾ ಕೇಳುವವರು ತಮ್ಮ ನೂರಾರು ಜನ್ಮಗಳ ಪಾಪಪುಂಜದಿಂದ ಮುಕ್ತರಾಗಿ ಬಿಡುತ್ತಾರೆ. ॥71॥
(ಶ್ಲೋಕ-72)
ಮೂಲಮ್
ಅಧ್ಯಾತ್ಮರಾಮಂ ಪಠತಶ್ಚ ನಿತ್ಯಂ
ಶ್ರೋತುಶ್ಚ ಭಕ್ತ್ಯಾ ಲಿಖಿತುಶ್ಚ ರಾಮಃ ।
ಅತಿಪ್ರಸನ್ನಶ್ಚ ಸದಾ ಸಮೀಪೇ
ಸೀತಾಸಮೇತಃ ಶ್ರಿಯಮಾತನೋತಿ ॥
ಅನುವಾದ
ಈ ಅಧ್ಯಾತ್ಮ ರಾಮಾಯಣವನ್ನು ಪ್ರತಿ ದಿವಸವೂ ಓದುವ, ಕೇಳುವ ಅಥವಾ ಭಕ್ತಿಯಿಂದ ಬರೆಯುವವರಿಂದ, ಅತ್ಯಂತ ಪ್ರಸನ್ನನಾಗಿ ಭಗವಾನ್ ಶ್ರೀರಾಮನು ಸೀತಾಸಹಿತನಾಗಿ ಅವರ ಹತ್ತಿರವಿದ್ದು ಅವರ ಸಂಪತ್ತನ್ನು ವೃದ್ಧಿ ಮಾಡುತ್ತಾನೆ. ॥72॥
(ಶ್ಲೋಕ-73)
ಮೂಲಮ್
ರಾಮಾಯಣಂ ಜನಮನೋಹರಮಾದಿಕಾವ್ಯಂ
ಬ್ರಹ್ಮಾದಿಭಿಃ ಸುರವರೈರಪಿ ಸಂಸ್ತುತಂ ಚ ।
ಶ್ರದ್ಧಾನ್ವಿತಃ ಪಠತಿ ಯಃ ಶೃಣುಯಾತ್ತು ನಿತ್ಯಂ
ವಿಷ್ಣೋಃ ಪ್ರಯಾತಿ ಸದನಂ ಸ ವಿಶುದ್ಧದೇಹಃ ॥
ಅನುವಾದ
ಬ್ರಹ್ಮಾದಿ ಸುರಶ್ರೇಷ್ಠರಿಂದ ಪ್ರಶಂಸಿಸಲ್ಟಟ್ಟ ಮತ್ತು ಮನುಷ್ಯರ ಮನಸ್ಸನ್ನು ಅಪಹರಿಸುವ ಈ ಆದಿಕಾವ್ಯ ರಾಮಾಯಣವನ್ನು ಪ್ರತಿದಿವಸವೂ ಶ್ರದ್ಧೆಯಿಂದ ಓದುವ ಅಥವಾ ಕೇಳುವವರು ವಿಶುದ್ಧ ಶರೀರವನ್ನು ಧರಿಸಿ ಭಗವಾನ್ ವಿಷ್ಣುವಿನ ಧಾಮವನ್ನು ಪಡೆಯುತ್ತಾನೆ. ॥73॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಉತ್ತರಕಾಂಡೇ ನವಮಃ ಸರ್ಗಃ ॥9॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಉತ್ತರಕಾಂಡದಲ್ಲಿ ಒಂಭತ್ತನೆಯ ಸರ್ಗವು ಮುಗಿಯಿತು.
ಮೂಲಮ್
ಪಾರ್ವತ್ಯೆ ಪರಮೇಶ್ವರೇಣ ಗದಿತೇ ಹ್ಯಧ್ಯಾತ್ಮರಾಮಾಯಣೇ
ಕಾಂಡೈಃ ಸಪ್ತಭಿರನ್ವಿತೇಽತಿಶುಭದೇ ಸರ್ಗಾಶ್ಚತುಃಷಷ್ಟಿಕಾಃ
ಶ್ಲೋಕಾನಾಂ ತು ಶತ ದ್ವಯೇನ ಸಹಿತಾ ನ್ಯುಕ್ತಾನಿ ಚತ್ವಾರಿ ವೈ
ಸಾಹಸ್ರಾಣಿ ಸಮಾಪ್ತಿತಃ ಶ್ರುತಿಶತಾನ್ಯುಕ್ತಾನಿ ತತ್ತ್ವಾರ್ಥತಃ ॥
ಅನುವಾದ
ಸಾಕ್ಷಾತ್ ಪರಮೇಶ್ವರ ಮಹಾದೇವನು ಪಾರ್ವತಿಗೆ ಹೇಳಿದ ಏಳು ಕಾಂಡಗಳಿಂದ ಕೂಡಿದ ಈ ಶುಭಪ್ರದ ಅಧ್ಯಾತ್ಮ ರಾಮಾಯಣದಲ್ಲಿ ಅರವತ್ತು ನಾಲ್ಕು ಸರ್ಗಗಳಿವೆ. ಇದರಲ್ಲಿ ಒಟ್ಟಿಗೆ ನಾಲ್ಕುಸಾವಿರದ ಎರಡು ನೂರು ಶ್ಲೋಕಗಳನ್ನು ಹೇಳಿದೆ ಹಾಗೂ ತತ್ವಾರ್ಥದ ವಿವೇಚನೆ ಮಾಡುತ್ತಾ ನೂರಾರು ಶ್ರುತಿಗಳನ್ನು ಹೇಳಲಾಗಿದೆ.
ಮೂಲಮ್ (ಸಮಾಪ್ತಿಃ)
॥ ಸಮಾಪ್ತಮಿದಮುತ್ತರಕಾಂಡಮ್ ॥
॥ ಅಧ್ಯಾತ್ಮ ರಾಮಾಯಣಮ್ ಸಮಾಪ್ತಮ್ ॥
Misc Detail
ಕೊನೆಯ ಪುಟ