೦೮

[ಎಂಟನೆಯ ಸರ್ಗ]

ಭಾಗಸೂಚನಾ

ಕಾಲನ ಆಗಮನ, ಲಕ್ಷ್ಮಣನ ಪರಿತ್ಯಾಗ ಮತ್ತು ಆತನ ಸ್ವರ್ಗಗಮನ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಅಥ ಕಾಲೇ ಗತೇ ಕಸ್ಮಿನ್ ಭರತೋ ಭೀಮವಿಕ್ರಮಃ ।
ಯುಧಾಜಿತಾ ಮಾತುಲೇನ ಹ್ಯಾಹೂತೋಗಾತ್ಸಸೈನಿಕಃ ॥

(ಶ್ಲೋಕ-2)

ಮೂಲಮ್

ರಾಮಾಜ್ಞಯಾ ಗತಸ್ತತ್ರ ಹತ್ವಾ ಗಂಧರ್ವನಾಯಕಾನ್ ।
ತಿಸ್ರಃ ಕೋಟೀಃ ಪುರೇ ದ್ವೇ ತು ನಿವೇಶ್ಯ ರಘುನಂದನಃ ॥

ಅನುವಾದ

ಶ್ರೀಮಹಾದೇವನಿಂತೆಂದನು — ಎಲೈ ಗಿರಿಜೆ! ಸ್ವಲ್ಪ ಕಾಲ ಕಳೆದ ಮೇಲೆ ಉಗ್ರಪರಾಕ್ರಮಿಯಾದ ಭರತನು ತನ್ನ ಸೋದರಮಾವನಾದ ಯುಧಾಜಿತ್ತು ಕರೆ ಕಳಿಸಿದಾಗ ಭಗವಾನ್ ಶ್ರೀರಾಮನ ಅಪ್ಪಣೆ ಪಡೆದು ಸೈನ್ಯಸಮೇತ ಅವನಲ್ಲಿಗೆ ಹೋದನು. ಅಲ್ಲಿಗೆ ಹೋಗಿ ರಘುಕುಲನಂದನ ಭರತನು ಮೂರು ಕೋಟಿ ಪ್ರಮುಖ ಗಂಧರ್ವರನ್ನು ಸಂಹರಿಸಿ ಎರಡು ನಗರಗಳನ್ನು ನೆಲೆಗೊಳಿಸಿದನು. ॥1-2॥

(ಶ್ಲೋಕ-3)

ಮೂಲಮ್

ಪುಷ್ಕರಂ ಪುಷ್ಕರಾವತ್ಯಾಂ ತಕ್ಷಂ ತಕ್ಷಶಿಲಾಹ್ವಯೇ ।
ಅಭಿಷಿಚ್ಯ ಸುತೌ ತತ್ರ ಧನಧಾನ್ಯಸುಹೃದ್ ವೃತೌ ॥

(ಶ್ಲೋಕ-4)

ಮೂಲಮ್

ಪುನರಾಗತ್ಯ ಭರತೋ ರಾಮಸೇವಾಪರೋಽಭವತ್ ।
ತತಃ ಪ್ರೀತೋ ರಘುಶ್ರೇಷ್ಠೋ ಲಕ್ಷ್ಮಣಂ ಪ್ರಾಹ ಸಾದರಮ್ ॥

ಅನುವಾದ

ಅವುಗಳಲ್ಲಿ ಪುಷ್ಕರಾವತಿಯಲ್ಲಿ ಪುಷ್ಕರ ಮತ್ತು ತಕ್ಷಶಿಲಾದಲ್ಲಿ ತಕ್ಷ ಎಂಬ ತನ್ನ ಇಬ್ಬರು ಪುತ್ರರಿಗೂ ಪಟ್ಟಾಭಿಷೇಕ ಮಾಡಿ ಅವರಿಗೆ ಧನಧಾನ್ಯ ಹಾಗೂ ಮಿತ್ರಮಂಡಲಿಗಳಿಂದ ಸಮೃದ್ಧಗೊಳಿಸಿ ಭರತನು ಹಿಂದಿರುಗಿ ಬಂದನು. ಬಳಿಕ ಭಗವಾನ್ ರಾಮನ ಸೇವೆಯಲ್ಲಿ ತತ್ಪರನಾದನು. ಆಗ ರಘು ನಾಥನು ಸಂತೋಷಗೊಂಡು ಪ್ರೀತಿಯಿಂದ ಲಕ್ಷ್ಮಣನಿಗೆ ಹೇಳಿದನು ॥3-4॥

(ಶ್ಲೋಕ-5)

ಮೂಲಮ್

ಉಭೌ ಕುಮಾರೌ ಸೌಮಿತ್ರೇ ಗೃಹೀತ್ವಾ ಪಶ್ಚಿಮಾಂ ದಿಶಮ್ ।
ತತ್ರ ಭಿಲ್ಲಾನ್ವಿನಿರ್ಜಿತ್ಯ ದುಷ್ಟಾನ್ ಸರ್ವಾಪಕಾರಿಣಃ ॥

(ಶ್ಲೋಕ-6)

ಮೂಲಮ್

ಅಂಗದಶ್ಚಿತ್ರಕೇತುಶ್ಚ ಮಹಾಸತ್ತ್ವಪರಾಕ್ರಮೌ ।
ದ್ವಯೋರ್ದ್ವೇ ನಗರೇ ಕೃತ್ವಾ ಗಜಾಶ್ವಧನರತ್ನಕೈಃ ॥

(ಶ್ಲೋಕ-7)

ಮೂಲಮ್

ಅಭಿಷಿಚ್ಯ ಸುತೌ ತತ್ರ ಶೀಘ್ರಮಾಗಚ್ಛ ಮಾಂ ಪುನಃ ।
ರಾಮಸ್ಯಾಜ್ಞಾಂ ಪುರಸ್ಕೃತ್ಯ ಗಜಾಶ್ವಬಲವಾಹನಃ ॥

(ಶ್ಲೋಕ-8)

ಮೂಲಮ್

ಗತ್ವಾ ಹತ್ವಾ ರಿಪೂನ್ ಸರ್ವಾನ್ ಸ್ಥಾಪಯಿತ್ವಾ ಕುಮಾರಕೌ ।
ಸೌಮಿತ್ರಿಃ ಪುನರಾಗತ್ಯ ರಾಮಸೇವಾಪರೋಽಭವತ್ ॥

ಅನುವಾದ

‘‘ಹೇ ಸುಮಿತ್ರಾನಂದನ! ನೀನು ನಿನ್ನ ಕುಮಾರರಿಬ್ಬರನ್ನು ಕರೆದುಕೊಂಡು ಪಶ್ಚಿಮ ದಿಕ್ಕಿಗೆ ಹೋಗು. ಅಲ್ಲಿ ಎಲ್ಲರಿಗೂ ಅಪಕಾರ ವೆಸಗುತ್ತಿರುವ ದುಷ್ಟ ಬೇಡರನ್ನು ಜಯಿಸಿ ನಿನ್ನ ಮಕ್ಕಳಿಬ್ಬರಿಗೂ ಎರಡು ನಗರಗಳನ್ನು ಸಿದ್ಧಪಡಿಸು. ಅದರಲ್ಲಿ ಮಹಾಬಲಶಾಲಿ ಮತ್ತು ಪರಾಕ್ರಮಿ ಅಂಗದ ಹಾಗೂ ಚಿತ್ರಕೇತು ಇವರಿಗೆ ಆನೆ, ಕುದುರೆ, ಧನ ಮತ್ತು ರತ್ನಾದಿ ಉಪಕರಣಗಳಿಂದ ರಾಜ್ಯಾಭಿಷೇಕ ಮಾಡಿದನಂತರ ತತ್ಕ್ಷಣ ನನ್ನ ಬಳಿಗೆ ಹಿಂದಿರುಗಿ ಬಾ.’’ ಭಗವಾನ್ ಶ್ರೀರಾಮನ ಈ ಆಜ್ಞೆಯನ್ನು ಶಿರಸಾವಹಿಸಿ ಲಕ್ಷ್ಮಣನು ಆನೆ-ಕುದುರೆ ಇತ್ಯಾದಿ ಚತುರಂಗ ಬಲದ ಸಹಿತ ಹೋಗಿ ಸಮಸ್ತ ಶತ್ರುಗಳನ್ನು ಸಂಹರಿಸಿ, ಕುಮಾರರಿಬ್ಬರನ್ನು ರಾಜಪದವಿಗೆ ನಿಯುಕ್ತಿಗೊಳಿಸಿ ಹಿಂದಕ್ಕೆ ಬಂದು ರಾಮ-ಸೇವಾ ತತ್ಪರನಾದನು. ॥5-8॥

(ಶ್ಲೋಕ-9)

ಮೂಲಮ್

ತತಸ್ತು ಕಾಲೇ ಮಹತಿ ಪ್ರಯಾತೇ
ರಾಮಂ ಸದಾ ಧರ್ಮಪಥೇ ಸ್ಥಿತಂ ಹರಿಮ್ ।
ದ್ರಷ್ಟುಂ ಸಮಾಗಾದೃಷಿವೇಷಧಾರೀ
ಕಾಲಸ್ತತೋ ಲಕ್ಷ್ಮಣಮಿತ್ಯುವಾಚ ॥

ಅನುವಾದ

ಅನಂತರ ಬಹಳ ಕಾಲ ಗತಿಸಿದ ಬಳಿಕ ಯಾವಾಗಲೂ ಧರ್ಮ-ಮಾರ್ಗವನ್ನು ಅವಲಂಬಿಸುವ ಭಗವಾನ್ ಶ್ರೀರಾಮನ ದರ್ಶನ ಮಾಡುವುದಕ್ಕಾಗಿ ಕಾಲಪುರುಷನು ಋಷಿವೇಷವನ್ನು ಧರಿಸಿ ಅರಮನೆಗೆ ಬಂದು ಲಕ್ಷ್ಮಣನಲ್ಲಿ ಹೀಗೆ ಹೇಳಿದನು.॥9॥

(ಶ್ಲೋಕ-10)

ಮೂಲಮ್

ನಿವೇದಯಸ್ವಾತಿಬಲಸ್ಯ ದೂತಂ
ಮಾಂ ದ್ರಷ್ಟುಕಾಮಂ ಪುರುಷೋತ್ತಮಾಯ ।
ರಾಮಾಯ ವಿಜ್ಞಾಪನಮಸ್ತಿ ತಸ್ಯ
ಮಹರ್ಷಿಮುಖ್ಯಸ್ಯ ಚಿರಾಯ ಧೀಮನ್ ॥

ಅನುವಾದ

‘‘ಹೇ ಬುದ್ಧಿಶಾಲೀಯೆ! ಮಹರ್ಷಿ ಅತಿಬಲನ ದೂತ ನಿನ್ನ ದರ್ಶನಾಪೇಕ್ಷೆಯಿಂದ ಬಂದಿದ್ದಾನೆ ಎಂದು ನೀನು ಪುರುಷೋತ್ತಮ ಮಹಾರಾಜಾರಾಮನಲ್ಲಿ ನಿವೇದಿಸು. ನಾನು ಬಹಳ ಹೊತ್ತಿನವರೆಗೆ ಆತನಿಗೆ ಆ ಮಹರ್ಷಿ ಶ್ರೇಷ್ಠನ ಸಂದೇಶವನ್ನು ಹೇಳಬೇಕಾಗಿದೆ.’’ ॥10॥

(ಶ್ಲೋಕ-11)

ಮೂಲಮ್

ತಸ್ಯ ತದ್ವಚನಂ ಶ್ರುತ್ವಾ ಸೌಮಿತ್ರಿಸ್ತ್ವರಯಾನ್ವಿತಃ ।
ಆಚಚಕ್ಷೇಽಥ ರಾಮಾಯ ಸ ಸಂಪ್ರಾಪ್ತಂ ತಪೋಧನಮ್ ॥

ಅನುವಾದ

ಅವನ ಈ ವಚನಗಳನ್ನು ಕೇಳಿ ಲಕ್ಷ್ಮಣನು ಲಗುಬಗೆಯಿಂದ ರಘುನಾಥನಿಗೆ ಆ ತಪೋಧನನು ಬಂದಿರುವ ಸೂಚನೆಯನ್ನಿತ್ತನು. ॥11॥

(ಶ್ಲೋಕ-12)

ಮೂಲಮ್

ಏವಂ ಬ್ರುವಂತಂ ಪ್ರೋವಾಚ ಲಕ್ಷ್ಮಣಂ ರಾಘವೋ ವಚಃ ।
ಶೀಘ್ರಂ ಪ್ರವೇಶ್ಯತಾಂ ತಾತ ಮುನಿಃ ಸತ್ಕಾರಪೂರ್ವಕಮ್ ॥

ಅನುವಾದ

ಲಕ್ಷ್ಮಣನು ಹೀಗೆ ಹೇಳಿದ ನಂತರ ರಘುನಾಥನು ‘‘ಸೋದರಾ! ಮುನಿವರ್ಯರನ್ನು ಬಹುಬೇಗ ಬಹಳ ಸತ್ಕಾರಪೂರ್ವಕ ಒಳಗಡೆಗೆ ಕರೆದುಕೊಂಡು ಬಾ’’ ಎಂದು ಹೇಳಿದನು. ॥12॥

(ಶ್ಲೋಕ-13)

ಮೂಲಮ್

ಲಕ್ಷ್ಮಣಸ್ತು ತಥೇತ್ಯುಕ್ತ್ವಾ ಪ್ರಾವೇಶಯತ ತಾಪಸಮ್ ।
ಸ್ವತೇಜಸಾ ಜ್ವಲಂತಂ ತಂ ಘೃತಸಿಕ್ತಂ ಯಥಾನಲಮ್ ॥

ಅನುವಾದ

ಆಗ ಲಕ್ಷ್ಮಣನು ‘ಸರಿ ಹಾಗೇ ಆಗಲಿ’ ಎನ್ನುತ್ತಾ ತುಪ್ಪದಾಹುತಿಯಿಂದ ಪ್ರಜ್ವಲಿಸುವ ಅಗ್ನಿಯಂತೆ ತಮ್ಮ ತೇಜಸ್ಸಿನಿಂದ ದೇದೀಪ್ಯಮಾನನಾದ ಆ ತಪಸ್ವಿಯನ್ನು ಒಳಗೆ ಕರೆದು ತಂದನು. ॥13॥

(ಶ್ಲೋಕ-14)

ಮೂಲಮ್

ಸೋಽಭಿಗಮ್ಯ ರಘುಶ್ರೇಷ್ಠಂ ದೀಪ್ಯಮಾನಃ ಸ್ವತೇಜಸಾ ।
ಮುನಿರ್ಮಧುರವಾಕ್ಯೇನ ವರ್ಧಸ್ವೇತ್ಯಾಹ ರಾಘವಮ್ ॥

ಅನುವಾದ

ತಮ್ಮ ಕಾಂತಿಯಿಂದ ಪ್ರಕಾಶಮಾನರಾದ ಆ ಮುನಿಗಳು ರಘುನಾಥನ ಹತ್ತಿರ ಹೋಗಿ ಅತ್ಯಂತ ಮಧುರ ವಾಣಿಯಲ್ಲಿ ಆತನಿಗೆ ‘ನಿನಗೆ ಅಭ್ಯುದಯವಾಗಲಿ’ ಎಂದು ಹೇಳಿದರು. ॥14॥

(ಶ್ಲೋಕ-15)

ಮೂಲಮ್

ತಸ್ಮೈ ಸ ಮುನಯೇ ರಾಮಃ ಪೂಜಾಂ ಕೃತ್ವಾ ಯಥಾವಿಧಿ ।
ಪೃಷ್ಟ್ವಾನಾಮಯಮವ್ಯಗ್ರೋ ರಾಮಃ ಪೃಷ್ಟೋಽಥ ತೇನ ಸಃ ॥

ಅನುವಾದ

ಆಗ ಶ್ರೀರಾಮಚಂದ್ರನು ಆ ಮುನಿಗಳನ್ನು ವಿಧಿಪೂರ್ವಕ ಸತ್ಕರಿಸಿದನು ಹಾಗೂ ಶಾಂತ ಭಾವದಿಂದ ಶ್ರೀರಾಮನು ಮುನಿಯನ್ನು ಮತ್ತು ಮುನಿಯು ಶ್ರೀರಾಮನನ್ನು ಪರಸ್ಪರ ಕುಶಲವನ್ನು ಕೇಳಿದರು. ॥15॥

(ಶ್ಲೋಕ-16)

ಮೂಲಮ್

ದಿವ್ಯಾಸನೇ ಸಮಾಸೀನೋ ರಾಮಃ ಪ್ರೋವಾಚ ತಾಪಸಮ್ ।
ಯದರ್ಥಮಾಗತೋಽಸಿ ತ್ವಮಿಹ ತತ್ಪ್ರಾಪಯಸ್ವ ಮೇ ॥

ಅನುವಾದ

ಅನಂತರ ದಿವ್ಯಾಸನದಲ್ಲಿ ವಿರಾಜಮಾನನಾದ ಮಹಾರಾಜಾ ರಾಮನು ಮುನಿಗಳನ್ನು ಕೇಳಿದನು — ‘‘ನೀವು ಏತಕ್ಕಾಗಿ ಇಲ್ಲಿಗೆ ಆಗಮಿಸಿರುವಿರಿ? ಆ ಸಂದೇಶವನ್ನು ನನಗೆ ಹೇಳಿರಿ.’’ ॥16॥

(ಶ್ಲೋಕ-17)

ಮೂಲಮ್

ವಾಕ್ಯೇನ ಚೋದಿತಸ್ತೇನ ರಾಮೇಣಾಹ ಮುನಿರ್ವಚಃ ।
ದ್ವಂದ್ವಮೇವ ಪ್ರಯೋಕ್ತವ್ಯಮನಾಲಕ್ಷ್ಯಂ ತು ತದ್ವಚಃ ॥

ಅನುವಾದ

ಭಗವಾನ್ ಶ್ರೀ ರಾಮನ ಈ ವಾಕ್ಯಗಳಿಂದ ಪ್ರೇರಿತರಾಗಿ ಮುನಿಗಳು ಹೇಳಿದರು — ‘‘ಆ ಮಾತನ್ನು ಬೇರೆಯಾರಿಗೂ ಗೊತ್ತಾಗದೆ ನಮ್ಮಿಬ್ಬರ ಮಧ್ಯೆಯೇ ಹೇಳಲಾಗುತ್ತದೆ.’’ ॥17॥

(ಶ್ಲೋಕ-18)

ಮೂಲಮ್

ನಾನ್ಯೇನ ಚೈತಚ್ಛ್ರೋತವ್ಯಂ ನಾಖ್ಯಾತವ್ಯಂ ಚ ಕಸ್ಯಚಿತ್ ।
ಶೃಣುಯಾದ್ವಾ ನಿರೀಕ್ಷೇದ್ವಾ ಯಃ ಸ ವಧ್ಯಸ್ತ್ವಯಾ ಪ್ರಭೋ ॥

ಅನುವಾದ

ಅದನ್ನು ಯಾರೂ ಕೇಳಿಸಿಕೊಳ್ಳ ಕೂಡದು ಮತ್ತು ಯಾರಿಗೂ ಹೇಳಲೂ ಕೂಡದು. ಅದನ್ನು ಯಾರಾದರೂ ಕೇಳಿಸಿಕೊಂಡರೆ ಅಥವಾ ನೋಡಿದರೆ ಹೇ ಪ್ರಭು! ನೀನು ಅವನನ್ನು ಕೊಲ್ಲ ಬೇಕಾಗುವುದು.’’ ॥18॥

(ಶ್ಲೋಕ-19)

ಮೂಲಮ್

ತಥೇತಿ ಚ ಪ್ರತಿಜ್ಞಾಯ ರಾಮೋ ಲಕ್ಷ್ಮಣಮಬ್ರವೀತ್ ।
ತಿಷ್ಠ ತ್ವಂ ದ್ವಾರಿ ಸೌಮಿತ್ರೇ ನಾಯಾತ್ವತ್ರ ಜನೋ ರಹಃ ॥

ಅನುವಾದ

ಆಗ ಶ್ರೀರಾಮಚಂದ್ರನು ‘ಹಾಗೇ ಆಗಲಿ’ ಎಂದು ಹೇಳಿ ಲಕ್ಷ್ಮಣನಿಗೆ ಹೇಳಿದನು ‘‘ಲಕ್ಷ್ಮಣಾ! ನೀನು ಬಾಗಿಲಿನಲ್ಲಿರು, ಈ ಏಕಾಂತ ಸ್ಥಾನದಲ್ಲಿ ನನ್ನ ಹತ್ತಿರಕ್ಕೆ ಯಾರಿಗೂ ಬರಲು ಬಿಡಬೇಡ.’’ ॥19॥

(ಶ್ಲೋಕ-20)

ಮೂಲಮ್

ಯಥಾಗಚ್ಛತಿ ಕೋ ವಾಪಿ ಸ ವಧ್ಯೋ ಮೇ ನ ಸಂಶಯಃ ।
ತತಃ ಪ್ರಾಹ ಮುನಿಂ ರಾಮೋ ಯೇನ ವಾ ತ್ವಂ ವಿಸರ್ಜಿತಃ ॥

(ಶ್ಲೋಕ-21)

ಮೂಲಮ್

ಯತ್ತೇ ಮನೀಷಿತಂ ವಾಕ್ಯಂ ತದ್ವದಸ್ವ ಮಮಾಗ್ರತಃ ।
ತತಃ ಪ್ರಾಹ ಮುನಿರ್ವಾಕ್ಯಂ ಶೃಣು ರಾಮ ಯಥಾತಥಮ್ ॥

(ಶ್ಲೋಕ-22)

ಮೂಲಮ್

ಬ್ರಹ್ಮಣಾ ಪ್ರೇಷಿತೋಸ್ಮೀಶ ಕಾರ್ಯಾರ್ಥೇ ತೇಽಂತಿಕಂ ಪ್ರಭೋ ।
ಅಹಂ ಹಿ ಪೂರ್ವಜೋ ದೇವ ತವ ಪುತ್ರಃ ಪರಂತಪ ॥

ಅನುವಾದ

‘‘ನಾವಿಬ್ಬರೂ ಇಲ್ಲಿರುವಾಗ ಯಾರಾದರೂ ಬಂದರೆ, ಅವನನ್ನು ಖಂಡಿತವಾಗಿ ವಧಿಸುವೆನು. ಇದರಲ್ಲಿ ಸಂದೇಹವೇ ಇಲ್ಲ.’’ ನಂತರ ಶ್ರೀರಾಮನು ಮುನಿಗಳಿಗೆ ಹೇಳಿದನು ‘‘ನಿಮ್ಮನ್ನು ಯಾರು ಕಳುಹಿಸಿದ್ದಾರೆ? ಮತ್ತು ನಿಮ್ಮ ಮನಸ್ಸಿನಲ್ಲಿರುವ ವಿಚಾರವನ್ನೆಲ್ಲಾ ನನಗೆ ಹೇಳಿ.’’ ಆಗ ಮುನಿಗಳು ಹೇಳಿದರು ‘‘ಹೇ ರಾಮಚಂದ್ರಾ! ನಿಜವಾಗಿರುವ ಮಾತನ್ನು ಕೇಳು. ಹೇ ಈಶನೆ! ಹೇ ಪ್ರಭೋ! ಬ್ರಹ್ಮನು ನನ್ನನ್ನು ಒಂದು ಕಾರ್ಯಾರ್ಥವಾಗಿ ನಿನ್ನ ಬಳಿಗೆ ಕಳುಹಿಸಿದ್ದಾನೆ. ಹೇ ದೇವಾ! ಹೇ ಶತ್ರುದಮನ! ನಾನು ನಿನ್ನ ಜ್ಯೇಷ್ಠಪುತ್ರ ಕಾಲನಾಗಿದ್ದೇನೆ. ॥20-22॥

(ಶ್ಲೋಕ-23)

ಮೂಲಮ್

ಮಾಯಾಸಂಗಮಜೋ ವೀರ ಕಾಲಃ ಸರ್ವಹರಃ ಸ್ಮೃತಃ ।
ಬ್ರಹ್ಮಾ ತ್ವಾಮಾಹ ಭಗವಾನ್ ಸರ್ವದೇವರ್ಷಿಪೂಜಿತಃ ॥

(ಶ್ಲೋಕ-24)

ಮೂಲಮ್

ರಕ್ಷಿತುಂ ಸ್ವರ್ಗಲೋಕಸ್ಯ ಸಮಯಸ್ತೇ ಮಹಾಮತೇ ।
ಪುರಾ ತ್ವಮೇಕ ಏವಾಸೀರ್ಲೋಕಾನ್ ಸಂಹೃತ್ಯ ಮಾಯಯಾ ॥

ಅನುವಾದ

ಹೇ ವೀರ! ಮಾಯೆಯೊಡನೆ ನಿನ್ನ ಸಂಗವುಂಟಾದಾಗ ನಾನು ಪ್ರಕಟವಾಗಿದ್ದೆನು. ಎಲ್ಲರನ್ನು ನಾಶಮಾಡುವವನಾದ ನಾನು ಕಾಲನೆಂಬ ಹೆಸರಿನಿಂದ ಪ್ರಸಿದ್ಧನಾಗಿದ್ದೇನೆ. ಸಮಸ್ತ ದೇವರ್ಷಿಗಳಿಂದ ಪೂಜಿತನಾದ ಭಗವಾನ್ ಬ್ರಹ್ಮದೇವರು ನಿನಗೆ ಈ ರೀತಿ ಹೇಳಿಕಳಿಸಿದ್ದಾರೆ ಹೇ ಮಹಾಮತಿಯೇ! ಈಗ ನೀನು ಸ್ವರ್ಗಲೋಕವನ್ನು ರಕ್ಷಣೆ ಮಾಡುವ ಸಮಯವಾಗಿದೆ. ಪೂರ್ವಕಾಲದಲ್ಲಿ ಸಮಸ್ತ ಲೋಕಗಳನ್ನು ಸಂಹಾರ ಮಾಡಿ ಏಕಮಾತ್ರ ನೀನೊಬ್ಬನೇ ಉಳಿದು ಬಿಟ್ಟಿದ್ದೆ. ॥23-24॥

(ಶ್ಲೋಕ-25)

ಮೂಲಮ್

ಭಾರ್ಯಯಾ ಸಹಿತಸ್ತ್ವಂ ಮಾಮಾದೌ ಪುತ್ರಮಜೀಜನಃ ।
ತಥಾ ಭೋಗವತಂ ನಾಗಮನಂತಮುದಕೇಶಯಮ್ ॥

ಅನುವಾದ

ಬಳಿಕ ನೀನು ನಿನ್ನ ಪತ್ನೀ ಮಾಯೆಯ ಸಂಯೋಗದಿಂದ ಎಲ್ಲರಿಗಿಂತ ಮೊದಲು ನಿನ್ನ ಪುತ್ರನಾದ ನನ್ನನ್ನು ಹಾಗೂ ನೀರಿನಲ್ಲಿ ಮಲಗಲು ಅನಂತನೆಂಬ ಸಾವಿರ ಹೆಡೆಯುಳ್ಳ ಆದಿಶೇಷನನ್ನು ರಚಿಸಿದೆ. ॥25॥

(ಶ್ಲೋಕ-26)

ಮೂಲಮ್

ಮಾಯಯಾ ಜನಯಿತ್ವಾ ತ್ವಂ ದ್ವೌ ಸಸತ್ತ್ವೌ ಮಹಾಬಲೌ ।
ಮಧುಕೈಟಭಕೌ ದೈತ್ಯೌ ಹತ್ವಾ ಮೇದೋಽಸ್ಥಿಸಂಚಯಮ್ ॥

(ಶ್ಲೋಕ-27)

ಮೂಲಮ್

ಇಮಾಂ ಪರ್ವತಸಂಬದ್ಧಾಂ ಮೇದಿನೀಂ ಪುರುಷರ್ಷಭ ।
ಪದ್ಮೇ ದಿವ್ಯಾರ್ಕಸಂಕಾಶೇ ನಾಭ್ಯಾಮುತ್ಪಾದ್ಯ ಮಾಮಪಿ ॥

(ಶ್ಲೋಕ-28)

ಮೂಲಮ್

ಮಾಂ ವಿಧಾಯ ಪ್ರಜಾಧ್ಯಕ್ಷಂ ಮಯಿ ಸರ್ವಂ ನ್ಯವೇದಯತ್ ।
ಸೋಹಂ ಸಂಯುಕ್ತಸಂಭಾರಸ್ತ್ವಾಮವೋಚಂ ಜಗತ್ಪತೇ ॥

ಅನುವಾದ

ಈ ಪ್ರಕಾರ ಮಾಯೆಯಿಂದ ನಮ್ಮನ್ನು ಉಂಟುಮಾಡಿ ನೀನು ಮಹಾಬಲಶಾಲೀ ಮತ್ತು ಭಾರಿ ಪರಾಕ್ರಮಿಗಳಾದ ಮಧು-ಕೈಟಭರೆಂಬ ದೈತ್ಯರಿಬ್ಬರನ್ನು ಕೊಂದೆ. ಅವರ ಮೇದಸ್ಸು ಮತ್ತು ಅಸ್ಥಿಗಳ ಸಮೂಹದಿಂದ ಈ ಪರ್ವತಾದಿಗಳಿಂದ ಕೂಡಿದ ಪೃಥ್ವಿಯನ್ನು ರಚಿಸಿದೆ. ಹೇ ಪುರುಷಶ್ರೇಷ್ಠ! ನಂತರ ನಿನ್ನ ನಾಭಿಯಿಂದ ಪ್ರಕಟವಾದ ಸೂರ್ಯನಂತೆ ತೇಜಸ್ವಿಯಾದ ದಿವ್ಯಕಮಲದಿಂದ ನನ್ನನ್ನು ಉಂಟು ಮಾಡಿ, ನನ್ನನ್ನು ಪ್ರಜಾ ಪತಿಯನ್ನಾಗಿ ಮಾಡಿ ಸೃಷ್ಟಿರಚನೆಯ ಭಾರವನ್ನೆಲ್ಲಾ ನನಗೇ ವಹಿಸಿಬಿಟ್ಟೆ. ಹೇ ಜಗತ್ಪತೆ! ಈ ಪ್ರಕಾರ ಭಾರವನ್ನು ವಹಿಸಿ ಕೊಂಡಮೇಲೆ ನಾನು ನಿನ್ನಲ್ಲಿ ಕೇಳಿಕೊಂಡೆ ॥26-28॥

(ಶ್ಲೋಕ-29)

ಮೂಲಮ್

ರಕ್ಷಾಂ ವಿಧತ್ಸ್ವ ಭೂತೇಭ್ಯೋ ಯೇ ಮೇ ವೀರ್ಯಾಪಹಾರಿಣಃ ।
ತತಸ್ತ್ವಂ ಕಶ್ಯಪಾಜ್ಜಾತೋ ವಿಷ್ಣುರ್ವಾಮನರೂಪಧೃಕ್ ॥

ಅನುವಾದ

‘‘ನನ್ನ ವೀರ್ಯವನ್ನು (ಪ್ರಜೆಯನ್ನು) ನಾಶಮಾಡುವ ಪ್ರಾಣಿಗಳಿಂದ ರಕ್ಷಿಸು.’’ ಆಗ ಪರಮಾತ್ಮ ವಿಷ್ಣುವಾದ ನೀನು ಕಶ್ಯಪರಲ್ಲಿ ವಾಮನ ರೂಪದಿಂದ ಪ್ರಕಟನಾದೆ. ॥29॥

(ಶ್ಲೋಕ-30)

ಮೂಲಮ್

ಹೃತವಾನಸಿ ಭೂಭಾರಂ ವಧಾದ್ರಕ್ಷೋಗಣಸ್ಯ ಚ ।
ಸರ್ವಾಸೂತ್ಸಾರ್ಯಮಾಣಾಸು ಪ್ರಜಾಸು ಧರಣೀಧರ ॥

(ಶ್ಲೋಕ-31)

ಮೂಲಮ್

ರಾವಣಸ್ಯ ವಧಾಕಾಂಕ್ಷೀ ಮರ್ತ್ಯಲೋಕಮುಪಾಗತಃ ।
ದಶವರ್ಷಸಹಸ್ರಾಣಿ ದಶವರ್ಷಶತಾನಿ ಚ ॥

(ಶ್ಲೋಕ-32)

ಮೂಲಮ್

ಕೃತ್ವಾ ವಾಸಸ್ಯ ಸಮಯಂ ತ್ರಿದಶೇಷ್ವಾತ್ಮನಃ ಪುರಾ ।
ಸ ತೇ ಮನೋರಥಃ ಪೂರ್ಣಃ ಪೂರ್ಣೇ ಚಾಯುಷಿ ತೇ ನೃಷು ॥

ಅನುವಾದ

ಮತ್ತೆ ನೀನು ರಾಕ್ಷಸರನ್ನು ನಾಶಮಾಡಿ ಭೂಭಾರವನ್ನು ತಗ್ಗಿಸಿದೆ. ಹೇ ಧರಣೀಧರನೆ! ಈಗಲೂ ಕೂಡ ಪ್ರಜೆಗಳಿಗೆಲ್ಲಾ ದುಃಖವನ್ನು ಕೊಡುವುದನ್ನು ನೋಡಿ ನೀನು ರಾವಣನ ಸಂಹಾರಕ್ಕಾಗಿ ಮರ್ತ್ಯಲೋಕಕ್ಕೆ ಆಗಮಿಸಿದ್ದೆ. ಇಲ್ಲಿರುವುದಕ್ಕಾಗಿ ನೀನು ಹಿಂದಿನ ಕಾಲದಲ್ಲಿ ದೇವತೆಗಳೊಡನೆ ಹನ್ನೊಂದು ಸಾವಿರ ವರ್ಷದ ಸಮಯವನ್ನು ನಿಶ್ಚಯ ಮಾಡಿದ್ದೆ. ಅದರಿಂದ ನಿನ್ನ ಮಾನವ-ಶರೀರದ ಆಯಸ್ಸು ಪೂರ್ಣಗೊಳ್ಳುವುದರ ಜೊತೆಗೇ ನಿನ್ನ ಆ ಮನೋರಥವೂ ಪೂರ್ಣವಾಯಿತು. ॥30-32॥

(ಶ್ಲೋಕ-33)

ಮೂಲಮ್

ಕಾಲಸ್ತಾಪಸರೂಪೇಣ ತ್ವತ್ಸಮೀಪಮುಪಾಗಮತ್ ।
ತತೋ ಭೂಯಶ್ಚ ತೇ ಬುದ್ಧಿರ್ಯದಿ ರಾಜ್ಯಮುಪಾಸಿತುಮ್ ॥

(ಶ್ಲೋಕ-34)

ಮೂಲಮ್

ತತ್ತಥಾ ಭವ ಭದ್ರಂ ತೇ ಏವಮಾಹ ಪಿತಾಮಹಃ ।
ಯದಿ ತೇ ಗಮನೆ ಬುದ್ಧಿರ್ದೇವಲೋಕಂ ಜಿತೇಂದ್ರಿಯ ॥

(ಶ್ಲೋಕ-35)

ಮೂಲಮ್

ಸನಾಥಾ ವಿಷ್ಣುನಾ ದೇವಾ ಭವಂತು ವಿಗತಜ್ವರಾಃ ।
ಚತುರ್ಮುಖಸ್ಯ ತದ್ವಾಕ್ಯಂ ಶ್ರುತ್ವಾ ಕಾಲೇನ ಭಾಷಿತಮ್ ॥

(ಶ್ಲೋಕ-36)

ಮೂಲಮ್

ಹಸನ್ ರಾಮಸ್ತದಾ ವಾಕ್ಯಂ ಕೃತ್ಸ್ನಸ್ಯಾಂತಕಮಬ್ರವೀತ್ ।
ಶ್ರುತಂ ತವ ವಚೋ ಮೇಽದ್ಯ ಮಮಾಪೀಷ್ಟತರಂ ತು ತತ್ ॥

ಅನುವಾದ

ಈಗ, ತಪಸ್ವಿಯ ರೂಪದಲ್ಲಿ ಕಾಲನು ನಿನ್ನ ಬಳಿಗೆ ಬಂದಿದ್ದಾನೆ. ಇನ್ನೂ ಸ್ವಲ್ಪ ಕಾಲ ರಾಜ್ಯಭಾರ ಮಾಡಬೇಕೆಂಬ ವಿಚಾರ ನಿನಗಿದ್ದರೆ, ನಿನಗೆ ಮಂಗಳವಾಗಲಿ, ಹಾಗೆಯೇ ಮಾಡು’’ ಹೀಗೆಂದು ಪಿತಾ ಮಹ ಬ್ರಹ್ಮನು ಹೇಳಿದ್ದಾನೆ. ಹೇ ಜಿತೇಂದ್ರಿಯನೆ! ದೇವ ಲೋಕ್ಕೆ ಹೊರಡಬೇಕೆಂಬ ವಿಚಾರ ನಿನಗಿದ್ದರೆ ವಿಷ್ಣು ಪರಮಾತ್ಮನಾದ ನಿನ್ನಿಂದ ಸನಾಥರಾಗಿ ದೇವತೆಗಳು ನಿಶ್ಚಿಂತರಾಗುವರು.’’ ಕಾಲನ ಮುಖದಿಂದ ಬ್ರಹ್ಮದೇವನ ಈ ವಚನಗಳನ್ನು ಕೇಳಿ ರಾಮನಿಗೆ ನಗುಬಂತು ಹಾಗೂ ಎಲ್ಲವನ್ನು ಅಂತ್ಯಗೊಳಿಸುವ ಕಾಲನಿಗೆ ಹೇಳಿದನು ‘‘ನಾನು ನಿನ್ನ ಎಲ್ಲಾ ಮಾತುಗಳನ್ನು ಕೇಳಿದೆನು. ಅವು ನನಗೂ ಕೂಡ ಬಹಳ ಇಷ್ಟವಾಗಿವೆ. ॥33-36॥

(ಶ್ಲೋಕ-37)

ಮೂಲಮ್

ಸಂತೋಷಃ ಪರಮೋ ಜ್ಞೇಯಸ್ತ್ವದಾಗಮನಕಾರಣಾತ್ ।
ತ್ರಯಾಣಾಮಪಿ ಲೋಕಾನಾಂ ಕಾರ್ಯಾರ್ಥಂ ಮಮ ಸಂಭವಃ ॥

ಅನುವಾದ

ನೀನು ಬಂದದ್ದರಿಂದ ನನಗೆ ಬಹು ಸಂತೋಷವಾಗಿದೆ. ಮೂರು ಲೋಕಗಳ ಕಾರ್ಯ ಮಾಡುವುದಕ್ಕಾಗಿಯೇ ನನ್ನ ಅವತಾರವಾಗುತ್ತಾ ಇರುತ್ತದೆ. ॥37॥

(ಶ್ಲೋಕ-38)

ಮೂಲಮ್

ಭದ್ರಂ ತೇಽಸ್ತ್ವಾಗಮಿಷ್ಯಾಮಿ ಯತ ಏವಾಹಮಾಗತಃ ।
ಮನೋರಥಸ್ತು ಸಂಪ್ರಾಪ್ತೋ ನ ಮೇಽತ್ರಾಸ್ತಿ ವಿಚಾರಣಾ ॥

ಅನುವಾದ

ನಿನಗೆ ಮಂಗಳವಾಗಲಿ, ಈಗ ನಾನು ಎಲ್ಲಿಂದ ಬಂದಿರುವೆನೋ ಅಲ್ಲಿಗೇ ಪುನಃ ಹೊರಟು ಹೋಗುವೆನು; ನನ್ನ ಎಲ್ಲ ಮನೋರಥವು ಪೂರ್ಣವಾಯಿತು, ಇದರಲ್ಲಿ ನಾನು ಸ್ವಲ್ಪವೂ ಯೋಚಿಸಬೇಕಾಗಿಲ್ಲ. ॥38॥

(ಶ್ಲೋಕ-39)

ಮೂಲಮ್

ಮತ್ಸೇವಕಾನಾಂ ದೇವಾನಾಂ ಸರ್ವಕಾರ್ಯೇಷು ವೈ ಮಯಾ ।
ಸ್ಥಾತವ್ಯಂ ಮಾಯಯಾ ಪುತ್ರ ಯಥಾ ಚಾಹ ಪ್ರಜಾಪತಿಃ ॥

ಅನುವಾದ

ಎಲೈ ಪುತ್ರನೇ! ದೇವತೆಗಳು ನನ್ನ ಸೇವಕರು; ಬ್ರಹ್ಮನು ಹೇಳಿರುವಂತೆ, ನಾನು ಮಾಯೆಯಿಂದ ಅವನ ಕಾರ್ಯಗಳಲ್ಲೆಲ್ಲಾ ಖಂಡಿತ ತತ್ಪರನಾಗಿರಬೇಕು.’’ ॥39॥

(ಶ್ಲೋಕ-40)

ಮೂಲಮ್

ಏವಂ ತಯೋಃ ಕಥಯತೋರ್ದುವಾಸಾ ಮುನಿರಭ್ಯಗಾತ್ ।
ರಾಜದ್ವಾರಂ ರಾಘವಸ್ಯ ದರ್ಶನಾಪೇಕ್ಷಯಾ ದ್ರುತಮ್ ॥

ಅನುವಾದ

ಅವರು ಈ ರೀತಿ ಸಂಭಾಷಣೆ ಮಾಡುತ್ತಿರುವಾಗ ಮುನಿವರ್ಯರಾದ ದುರ್ವಾಸರು ರಘುನಾಥನ ದರ್ಶನಾಪೇಕ್ಷೆಯಿಂದ ಬಹು ಆತುರದಿಂದ ರಾಜದ್ವಾರದ ಬಳಿಗೆ ಬಂದರು. ॥40॥

(ಶ್ಲೋಕ-41)

ಮೂಲಮ್

ಮುನಿರ್ಲಕ್ಷ್ಮಣಮಾಸಾದ್ಯ ದುರ್ವಾಸಾ ವಾಕ್ಯಮಬ್ರವೀತ್ ।
ಶೀಘ್ರಂ ದರ್ಶಯ ರಾಮಂ ಮೇ ಕಾರ್ಯಂ ಮೇಽತ್ಯಂತಮಾಹಿತಮ್ ॥

ಅನುವಾದ

ಅಲ್ಲಿ ದುರ್ವಾಸ ಮುನಿಯು ಲಕ್ಷ್ಮಣನ ಬಳಿಗೆ ಬಂದು ‘‘ನನ್ನನ್ನು ತಕ್ಷಣ ಮಹಾರಾಜಾರಾಮನೊಡನೆ ಭೇಟಿಮಾಡಿಸು; ನನಗೆ ಆತನಲ್ಲಿ ಒಂದು ಅತ್ಯಂತ ಆವಶ್ಯಕ ಕಾರ್ಯ ಬಂದೊದಗಿದೆ, ಎಂದು ಹೇಳಿದರು. ॥41॥

(ಶ್ಲೋಕ-42)

ಮೂಲಮ್

ತಚ್ಛ್ರುತ್ವಾ ಪ್ರಾಹ ಸೌಮಿತ್ರಿರ್ಮುನಿಂ ಜ್ವಲನತೇಜಸಮ್ ।
ರಾಮೇಣ ಕಾರ್ಯಂ ಕಿಂ ತೇದ್ಯ ಕಿಂ ತೇಭೀಷ್ಟಂ ಕರೋಮ್ಯಹಮ್ ॥

ಅನುವಾದ

ಇದನ್ನು ಕೇಳಿ ಲಕ್ಷ್ಮಣನು ಅಗ್ನಿಯಂತೆ ತೇಜಸ್ವಿಯಾದ ಆ ಮುನಿಗಳಿಗೆ ಹೇಳಿದನು ‘‘ಈಗ ಮಹಾರಾಜ ರಾಮನಲ್ಲಿ ತಮಗೇನು ಕೆಲಸವಿದೆ? ತಮ್ಮ ಇಚ್ಛೆಯೇನು? ಅದನ್ನು ನಾನೇ ಪೂರೈಸಿಕೊಡುವೆನು. ॥42॥

(ಶ್ಲೋಕ-43)

ಮೂಲಮ್

ರಾಜಾ ಕಾರ್ಯಾಂತರೇ ವ್ಯಗ್ರೋ ಮುಹೂರ್ತಂ ಸಂಪ್ರತೀಕ್ಷ್ಯತಾಮ್ ।
ತಚ್ಛ್ರುತ್ವಾ ಕ್ರೋಧಸಂತಪ್ತೋ ಮುನಿಃ ಸೌಮಿತ್ರಿಮಬ್ರವೀತ್ ॥

ಅನುವಾದ

ಈ ವೇಳೆಯಲ್ಲಿ ಮಹಾರಾಜರು ಬೇರೊಂದು ಕಾರ್ಯದಲ್ಲಿ ನಿರತರಾಗಿದ್ದಾರೆ, ಸ್ವಲ್ಪ ಹೊತ್ತು ತಾಳಿರಿ.’’ ಇದನ್ನು ಕೇಳಿದ ಕೂಡಲೇ ಮುನಿಯು ಕ್ರೋಧದಿಂದ ಉರಿದೆದ್ದು ಲಕ್ಷ್ಮಣನಿಗೆ ಹೇಳಿದರು - ॥43॥

(ಶ್ಲೋಕ-44)

ಮೂಲಮ್

ಅಸ್ಮಿನ್ ಕ್ಷಣೇ ತು ಸೌಮಿತ್ರೇ ನ ದರ್ಶಯಸಿ ಚೇದ್ವಿಭುಮ್ ।
ರಾಮಂ ಸವಿಷಯಂ ವಂಶಂ ಭಸ್ಮೀಕುರ್ಯಾಂ ನ ಸಂಶಯಃ ॥

ಅನುವಾದ

‘‘ಲಕ್ಷ್ಮಣಾ! ಈ ಕ್ಷಣದಲ್ಲಿಯೇ ನೀನು ನನ್ನನ್ನು ಭಗವಾನ್ ರಾಮನೊಡನೆ ಭೇಟಿಮಾಡಿಸ ದಿದ್ದರೆ, ನಾನು ದೇಶ ಸಹಿತ ನಿನ್ನ ವಂಶವನ್ನು ಈಗಲೇ ಭಸ್ಮ ಮಾಡಿಬಿಡುವೆನು, ಇದರಲ್ಲಿ ಸಂದೇಹವೇ ಇಲ್ಲ’’ ॥44॥

(ಶ್ಲೋಕ-45)

ಮೂಲಮ್

ಶ್ರುತ್ವಾ ತದ್ವಚನಂ ಘೋರಮೃಷೇರ್ದುರ್ವಾಸಸೋ ಭೃಶಮ್ ।
ಸ್ವರೂಪಂ ತಸ್ಯ ವಾಕ್ಯಸ್ಯ ಚಿಂತಯಿತ್ವಾ ಸ ಲಕ್ಷ್ಮಣಃ ॥

(ಶ್ಲೋಕ-46)

ಮೂಲಮ್

ಸರ್ವನಾಶಾದ್ವರಂ ಮೇಽದ್ಯ ನಾಶೋ ಹ್ಯೇಕಸ್ಯ ಕಾರಣಾತ್ ।
ನಿಶ್ಚಿತ್ಯೈವಂ ತತೋ ಗತ್ವಾ ರಾಮಾಯ ಪ್ರಾಹ ಲಕ್ಷ್ಮಣಃ ॥

ಅನುವಾದ

ದುರ್ವಾಋಷಿಯ ಈ ಭಯಂಕರ ವಾಕ್ಯವನ್ನು ಕೇಳಿ ಲಕ್ಷ್ಮಣನು ಅದರ ಸ್ವರೂಪವನ್ನು ಚೆನ್ನಾಗಿ ಯೋಚಿಸಿದನು. ನನ್ನೊಬ್ಬನ ಕಾರಣದಿಂದ ಎಲ್ಲರ ನಾಶಕ್ಕಿಂತ ನನ್ನ ನಾಶವೇ ಒಳ್ಳೆಯದು ಎಂಬುದಾಗಿ ನಿಶ್ಚಯಮಾಡಿಕೊಂಡು, ಅವನು ಶ್ರೀರಾಮಚಂದ್ರನ ಹತ್ತಿರಕ್ಕೆ ಹೋಗಿ ವೃತ್ತಾಂತವನ್ನೆಲ್ಲಾ ತಿಳಿಸಿದನು. ॥45-46॥

(ಶ್ಲೋಕ-47)

ಮೂಲಮ್

ಸೌಮಿತ್ರೇರ್ವಚನಂ ಶ್ರುತ್ವಾ ರಾಮಃ ಕಾಲಂ ವ್ಯಸರ್ಜಯತ್ ।
ಶೀಘ್ರಂ ನಿರ್ಗಮ್ಯ ರಾಮೋಽಪಿ ದದರ್ಶಾತ್ರೇಃ ಸುತಂ ಮುನಿಮ್ ॥

ಅನುವಾದ

ಲಕ್ಷ್ಮಣನ ಮಾತನ್ನು ಕೇಳಿ ರಾಮಚಂದ್ರನು ಕಾಲನನ್ನು ಬೀಳ್ಕೊಟ್ಟು, ಬಹುಬೇಗನೇ ಹೊರಕ್ಕೆ ಬಂದು ಅತ್ರಿನಂದನ ದುರ್ವಾಸರನ್ನು ಭೇಟಿ ಮಾಡಿದನು. ॥47॥

(ಶ್ಲೋಕ-48)

ಮೂಲಮ್

ರಾಮೋಽಭಿವಾದ್ಯ ಸಂಪ್ರೀತೋ ಮುನಿಂ ಪಪ್ರಚ್ಛ ಸಾದರಮ್ ।
ಕಿಂ ಕಾರ್ಯಂ ತೇ ಕರೋಮೀತಿ ಮುನಿಮಾಹ ರಘೂತ್ತಮಃ ॥

ಅನುವಾದ

ರಘುಶ್ರೇಷ್ಠ ಶ್ರೀರಾಮಚಂದ್ರನು ಮುನಿಗಳಿಗೆ ಪ್ರಣಾಮಮಾಡಿ ಪ್ರಸನ್ನಚಿತ್ತದಿಂದ ಅವರನ್ನು ಆದರದಿಂದ ಕೇಳಿದನು ‘‘ಹೇ ಮುನಿಗಳೇ! ನಾನು ನಿಮ್ಮ ಯಾವ ಕಾರ್ಯ ಮಾಡಲಿ?’’ ॥48॥

(ಶ್ಲೋಕ-49)

ಮೂಲಮ್

ತಚ್ಛ್ರುತ್ವಾ ರಾಮವಚನಂ ದುರ್ವಾಸಾ ರಾಮಮಬ್ರವೀತ್ ।
ಅದ್ಯ ವರ್ಷ ಸಹಸ್ರಾಣಾಮುಪವಾಸಸಮಾಪನಮ್ ॥

ಅನುವಾದ

ಶ್ರೀರಾಮನ ಈ ವಚನಗಳನ್ನು ಕೇಳಿ ದುರ್ವಾಸರು ಹೇಳಿದರು — ‘‘ಇಂದಿಗೆ ನನ್ನ ಒಂದು ಸಾವಿರ ವರ್ಷಗಳ ಉಪವಾಸ ಸಮಾಪ್ತಿಯಾಯಿತು. ॥49॥

(ಶ್ಲೋಕ-50)

ಮೂಲಮ್

ಅತೋ ಭೋಜನಮಿಚ್ಛಾಮಿ ಸಿದ್ಧಂ ಯತ್ತೇ ರಘೂತ್ತಮ ।
ರಾಮೋ ಮುನಿವಚಃ ಶ್ರುತ್ವಾ ಸಂತೋಷೇಣ ಸಮನ್ವಿತಃ ॥

(ಶ್ಲೋಕ-51)

ಮೂಲಮ್

ಸ ಸಿದ್ಧಮನ್ನಂ ಮುನಯೇ ಯಥಾವತ್ಸಮುಪಾಹರತ್ ।
ಮುನಿರ್ಭುಕ್ತ್ವಾನ್ನಮಮೃತಂ ಸಂತುಷ್ಟಃ ಪುನರಭ್ಯಗಾತ್ ॥

ಅನುವಾದ

ಆದುದರಿಂದ ಹೇ ರಘುಶ್ರೇಷ್ಠನೆ! ನಿಮ್ಮ ಮನೆಯಲ್ಲಿ ಸಿದ್ಧವಿರುವ ಭೋಜನದ ಇಚ್ಛೆ ನನಗಾಗಿದೆ.’’ ಮುನಿಗಳ ಈ ಮಾತನ್ನು ಕೇಳಿ ರಾಮಚಂದ್ರನು ಸಂತೋಷಗೊಂಡು ಅವರಿಗೆ ವಿಧಿಪೂರ್ವಕ ಸಿದ್ಧವಿರುವ ಅಡಿಗೆಯನ್ನು ಬಡಿಸಿದನು. ದುರ್ವಾಸರು ಆ ಅಮೃತತುಲ್ಯ ಆಹಾರವನ್ನು ಸೇವಿಸಿ ತೃಪ್ತರಾಗಿ ಹೊರಟು ಹೋದರು. ॥50-51॥

(ಶ್ಲೋಕ-52)

ಮೂಲಮ್

ಸ್ವಮಾಶ್ರಮಂ ಗತೇ ತಸ್ಮಿನ್ ರಾಮಃ ಸಸ್ಮಾರ ಭಾಷಿತಮ್ ।
ಕಾಲೇನ ಶೋಕದುಃಖಾರ್ತೋ ವಿಮನಾಶ್ಚಾತಿ ವಿಹ್ವಲಃ ॥

ಅನುವಾದ

ದುರ್ವಾಸಮುನಿಗಳು ತಮ್ಮ ಆಶ್ರಮಕ್ಕೆ ಹೊರಟುಹೋದ ಬಳಿಕ ರಘುನಾಥನಿಗೆ ಕಾಲನು ಹೇಳಿದ್ದ ಮಾತುಗಳು ಜ್ಞಾಪಕಕ್ಕೆ ಬಂದವು. ಅದರಿಂದ ಆತನು ಶೋಕ ಮತ್ತು ದುಃಖದಿಂದ ಪೀಡಿತನೂ, ಉದಾಸೀನನೂ ಮತ್ತು ವ್ಯಾಕುಲನೂ ಆದನು. ॥52॥

(ಶ್ಲೋಕ-53)

ಮೂಲಮ್

ಅವಾಙ್ಮುಖೋ ದೀನಮನಾ ನ ಶಶಾಕಾಭಿಭಾಷಿತುಮ್ ।
ಮನಸಾ ಲಕ್ಷ್ಮಣಂ ಜ್ಞಾತ್ವಾ ಹತಪ್ರಾಯಂ ರಘೂದ್ವಹಃ ॥

ಅನುವಾದ

ರಘುಕುಲಭೂಷಣ ಶ್ರೀರಾಮನು ಲಕ್ಷ್ಮಣ ಸತ್ತಂತೆ ಮನಸ್ಸಿನಲ್ಲಿಯೇ ಭಾವಿಸಿಕೊಂಡನು. ಆದರೆ ಅವನು ದೀನ ಮನಸ್ಕನಾಗಿ ತಲೆತಗ್ಗಿಸಿಕೊಂಡು ಕುಳಿತುಕೊಂಡಿದ್ದನು, ಅವನಿಂದ ಏನೂ ಹೇಳಲಾಗಲಿಲ್ಲ. ॥53॥

(ಶ್ಲೋಕ-54)

ಮೂಲಮ್

ಅವಾಙ್ಮುಖೋ ಬಭೂವಾಥ ತೂಷ್ಣೀಮೇವಾಖಿಲೇಶ್ವರಃ ।
ತತೋ ರಾಮಂ ವಿಲೋಕ್ಯಾಹ ಸೌಮಿತ್ರಿರ್ದುಃಖಸಂಪ್ಲುತಮ್ ॥

(ಶ್ಲೋಕ-55)

ಮೂಲಮ್

ತೂಷ್ಣೀಂಭೂತಂ ಚಿಂತಯಂತಂ ಗರ್ಹಂತಂ ಸ್ನೇಹಬಂಧನಮ್ ।
ಮತ್ಕೃತೇ ತ್ಯಜ ಸಂತಾಪಂ ಜಹಿ ಮಾಂ ರಘುನಂದನ ॥

ಅನುವಾದ

ಸರ್ವೇಶ್ವರನಾದ ಭಗವಾನ್ ಶ್ರೀರಾಮನು ಮುಖವನ್ನು ತಗ್ಗಿಸಿಕೊಂಡು ಮೌನವಾಗಿದ್ದನು. ಆಗ ರಘುನಾಥನು ಮೌನವಾಗಿ ಚಿಂತಾಮಗ್ನನಾಗಿ ಸ್ನೇಹಬಂಧನದಿಂದ ಅತ್ಯಂತ ದುಃಖಿತನಾದುದನ್ನು ನೋಡಿ ಲಕ್ಷ್ಮಣನು ಹೇಳಿದನು - ‘‘ಹೇ ರಘುನಂದನ! ನನಗಾಗಿ ಸಂತಾಪಪಡಬೇಡ, ನನ್ನನ್ನು ಬೇಗ ಕೊಂದುಬಿಡು. ॥54-55॥

(ಶ್ಲೋಕ-56)

ಮೂಲಮ್

ಗತಿಃ ಕಾಲಸ್ಯ ಕಲಿತಾ ಪೂರ್ವಮೇವೇದೃಶೀ ಪ್ರಭೋ ।
ತ್ವಯಿ ಹೀನಪ್ರತಿಜ್ಞೇ ತು ನರಕೋ ಮೇ ಧ್ರುವಂ ಭವೇತ್ ॥

ಅನುವಾದ

ಪ್ರಭೋ! ನಾನು ಮೊದಲೇ ನಿಶ್ಚಯಿಸಿಕೊಂಡಿದ್ದೇನೆ. ಕಾಲದ ಗತಿ ಹೀಗೆಯೇ ಇದೆ. ನಿನ್ನ ಪ್ರತಿಜ್ಞಾ ಭಂಗ ಮಾಡಿದ್ದರಿಂದ ನಾನೂ ಕೂಡ ಖಂಡಿತವಾಗಿ ನರಕವನ್ನು ಅನುಭವಿಸಬೇಕಾಗುವುದು. ॥56॥

(ಶ್ಲೋಕ-57)

ಮೂಲಮ್

ಮಯಿ ಪ್ರೀತಿರ್ಯದಿ ಭವೇದ್ಯದ್ಯನುಗ್ರಾಹ್ಯತಾ ತವ ।
ತ್ಯಕ್ತ್ವಾ ಶಂಕಾಂ ಜಹಿ ಪ್ರಾಜ್ಞ ಮಾ ಮಾ ಧರ್ಮಂ ತ್ಯಜ ಪ್ರಭೋ ॥

ಅನುವಾದ

ಆದುದರಿಂದ ನಿನಗೆ ನನ್ನ ಮೇಲೆ ಪ್ರೀತಿಯಿದ್ದರೆ ಮತ್ತು ನಾನು ಅನುಗ್ರಹಕ್ಕೆ ಯೋಗ್ಯ ಪಾತ್ರನಾಗಿದ್ದರೆ ಹೇ ಬುದ್ಧಿಶಾಲೀ ರಾಮನೆ! ಸಂಶಯವನ್ನು ಬಿಟ್ಟು ನನ್ನನ್ನು ವಧಿಸಿಬಿಡು. ಪ್ರಭು! ಧರ್ಮ-ತ್ಯಾಗ ಮಾಡಬೇಡ. ॥57॥

(ಶ್ಲೋಕ-58)

ಮೂಲಮ್

ಸೌಮಿತ್ರಿಣೋಕ್ತಂ ತಚ್ಛ್ರುತ್ವಾ ರಾಮಶ್ಚಲಿತಮಾನಸಃ ।
ಆಹೂಯ ಮಂತ್ರಿಣಃ ಸರ್ವಾನ್ ವಸಿಷ್ಠಂ ಚೇದಮಬ್ರವೀತ್ ॥

ಅನುವಾದ

ಲಕ್ಷ್ಮಣನ ಈ ಮಾತನ್ನು ಕೇಳಿ ರಘುನಾಥನ ಮನಸ್ಸು ಚಂಚಲವಾಯಿತು. ಆತನು ಮಂತ್ರಿಗಳನ್ನೆಲ್ಲಾ ಕರೆಸಿ ಈ ವೃತ್ತಾಂತವನ್ನೆಲ್ಲಾ ವಸಿಷ್ಠರಿಗೆ ತಿಳಿಸಿದನು. ॥58॥

(ಶ್ಲೋಕ-59)

ಮೂಲಮ್

ಮುನೇರಾಗಮನಂ ಯತ್ತು ಕಾಲಸ್ಯಾಪಿ ಹಿ ಭಾಷಿತಮ್ ।
ಪ್ರತಿಜ್ಞಾಮಾತ್ಮನಶ್ಚೈವ ಸರ್ವಮಾವೇದಯತ್ಪ್ರಭುಃ ॥

ಅನುವಾದ

ಪ್ರಭುರಾಮನು ದುರ್ವಾಸಮುನಿಗಳ ಆಗಮನ, ಕಾಲನ ಮಾತು, ತನ್ನ ಪ್ರತಿಜ್ಞೆ ಈ ಎಲ್ಲಾ ವಿಚಾರಗಳನ್ನು ಅವರಿಗೆ ಹೇಳಿಬಿಟ್ಟನು. ॥59॥

(ಶ್ಲೋಕ-60)

ಮೂಲಮ್

ಶ್ರುತ್ವಾ ರಾಮಸ್ಯ ವಚನಂ ಮಂತ್ರಿಣಃ ಸಪುರೋಹಿತಾಃ ।
ಊಚುಃ ಪ್ರಾಂಜಲಯಃ ಸರ್ವೇ ರಾಮಮಕ್ಲಿಷ್ಟಕಾರಿಣಮ್ ॥

ಅನುವಾದ

ರಾಮಚಂದ್ರನ ಮಾತುಗಳನ್ನು ಕೇಳಿ, ಪುರೋಹಿತರಾದ ವಸಿಷ್ಠರ ಸಹಿತ ಸಮಸ್ತ ಮಂತ್ರಿಗಳು ಅನಾಯಾಸವಾಗಿಯೇ ಎಲ್ಲ ಕಾರ್ಯಗಳನ್ನು ನೆರವೇರಿಸುವ ಭಗವಾನ್ ಶ್ರೀರಾಮನಿಗೆ ಕೈಮುಗಿದುಕೊಂಡು ಹೇಳಿದರು- ॥60॥

(ಶ್ಲೋಕ-61)

ಮೂಲಮ್

ಪೂರ್ವಮೇವ ಹಿ ನಿರ್ದಿಷ್ಟಂ ತವ ಭೂಭಾರಹಾರಿಣಃ ।
ಲಕ್ಷ್ಮಣೇನ ವಿಯೋಗಸ್ತೇ ಜ್ಞಾತೋ ವಿಜ್ಞಾನಚಕ್ಷುಷಾ ॥

ಅನುವಾದ

‘‘ಪ್ರಭು! ಭೂಭಾರ ಹೋಗಲಾಡಿಸುವ ನಿನ್ನ ವಿಯೋಗಕ್ಕಿಂತ ಮೊದಲೇ ಲಕ್ಷ್ಮಣನ ವಿಯೋಗವು ನಿಶ್ಚಯವಾಗಿದೆ ಈ ಮಾತನ್ನು ನಾವು ಜ್ಞಾನದೃಷ್ಟಿಯಿಂದ ತಿಳಿದುಕೊಂಡಿದ್ದೇವೆ. ॥61॥

(ಶ್ಲೋಕ-62)

ಮೂಲಮ್

ತ್ಯಜಾಶು ಲಕ್ಷ್ಮಣಂ ರಾಮ ಮಾ ಪ್ರತಿಜ್ಞಾಂ ತ್ಯಜ ಪ್ರಭೋ ।
ಪ್ರತಿಜ್ಞಾತೇ ಪರಿತ್ಯಕ್ತೇ ಧರ್ಮೋ ಭವತಿ ನಿಷ್ಫಲಃ ॥

ಅನುವಾದ

ಆದ್ದರಿಂದ ಹೇ ರಾಮಾ! ಕೂಡಲೇ ಲಕ್ಷ್ಮಣನನ್ನು ತ್ಯಾಗಮಾಡು. ಪ್ರಭು! ನಿನ್ನ ಪ್ರತಿಜ್ಞೆಯನ್ನು ಭಂಗಗೊಳಿಸಬೇಡ; ಏಕೆಂದರೆ ಪ್ರತಿಜ್ಞಾಭಂಗದಿಂದ ಎಲ್ಲಾ ಧರ್ಮಗಳೂ ನಿಷ್ಫಲವಾಗಿ ಹೋಗುತ್ತವೆ. ॥62॥

(ಶ್ಲೋಕ-63)

ಮೂಲಮ್

ಧರ್ಮೇ ನಷ್ಟೇಽಖಿಲೇ ರಾಮ ತ್ರೈಲೋಕ್ಯಂ ನಶ್ಯತಿ ಧ್ರುವಮ್ ।
ತ್ವಂ ತು ಸರ್ವಸ್ಯ ಲೋಕಸ್ಯ ಪಾಲಕೋಽಸಿ ರಘೂತ್ತಮ ॥

ಅನುವಾದ

ಹೇ ರಾಮಾ! ಧರ್ಮವು ಪೂರ್ಣವಾಗಿ ನಾಶವಾದಾಗ ಖಂಡಿತವಾಗಿಯೂ ಮೂರು ಲೋಕಗಳು ನಾಶವಾಗುತ್ತವೆ. ಹೇ ರಘುಶ್ರೇಷ್ಠ! ನೀನಾದರೋ ಸಕಲ ಲೋಕಗಳನ್ನು ರಕ್ಷಿಸುವವನಾಗಿರುವೆ. ಆದ್ದರಿಂದ ಲಕ್ಷ್ಮಣನೊಬ್ಬನನ್ನೇ ತ್ಯಾಗಮಾಡಿ ನೀನು ಮೂರು ಲೋಕಗಳನ್ನೂ ರಕ್ಷಿಸಬೇಕು.’’ ॥63॥

(ಶ್ಲೋಕ-64)

ಮೂಲಮ್

ತ್ಯಕ್ತ್ವಾ ಲಕ್ಷ್ಮಣಮೇವೈಕಂ ತ್ರೈಲೋಕ್ಯಂ ತ್ರಾತುಮರ್ಹಸಿ ।
ರಾಮೋ ಧರ್ಮಾರ್ಥಸಹಿತಂ ವಾಕ್ಯಂ ತೇಷಾಮನಿಂದಿತಮ್ ॥

(ಶ್ಲೋಕ-65)

ಮೂಲಮ್

ಸಭಾಮಧ್ಯೆ ಸಮಾಶ್ರುತ್ಯ ಪ್ರಾಹ ಸೌಮಿತ್ರಿಮಂಜಸಾ ।
ಯಥೇಷ್ಟಂ ಗಚ್ಛ ಸೌಮಿತ್ರೇ ಮಾ ಭೂದ್ಧರ್ಮಸ್ಯ ಸಂಶಯಃ ॥

ಅನುವಾದ

ರಘುನಾಥನು ಸಭೆಯಲ್ಲಿ ಅವರ ಧರ್ಮಾರ್ಥಯುಕ್ತ ಮತ್ತು ನಿರ್ದೋಷ ವಚನಗಳನ್ನು ಕೇಳಿ ತತ್ಕ್ಷಣ ಲಕ್ಷ್ಮಣನಿಗೆ ಹೇಳಿದನು ‘‘ಲಕ್ಷ್ಮಣಾ! ಧರ್ಮದಲ್ಲಿ ಸಂಶಯವುಂಟಾಗದಿರುವಂತೆ ನೀನು ಇಷ್ಟವಿರುವ ಕಡೆಗೆ ಹೋಗು. ॥64-65॥

(ಶ್ಲೋಕ-66)

ಮೂಲಮ್

ಪರಿತ್ಯಾಗೋ ವಧೋ ವಾಪಿ ಸತಾಮೇವೋಭಯಂ ಸಮಮ್ ।
ಏವಮುಕ್ತೇ ರಘುಶ್ರೇಷ್ಠೇ ದುಃಖವ್ಯಾಕುಲಿತೇಕ್ಷಣಃ ॥

(ಶ್ಲೋಕ-67)

ಮೂಲಮ್

ರಾಮಂ ಪ್ರಣಮ್ಯ ಸೌಮಿತ್ರಿಃ ಶೀಘ್ರಂ ಗೃಹಮಗಾತ್ಸ್ವಕಮ್ ।
ತತೋಽಗಾತ್ಸರಯೂತೀರಮಾಚಮ್ಯ ಸ ಕೃತಾಂಜಲಿಃ ॥

(ಶ್ಲೋಕ-68)

ಮೂಲಮ್

ನವ ದ್ವಾರಾಣಿ ಸಂಯಮ್ಯ ಮೂರ್ಧ್ನಿ ಪ್ರಾಣಮಧಾರಯತ್ ।
ಯದಕ್ಷರಂ ಪರಂ ಬ್ರಹ್ಮ ವಾಸುದೇವಾಖ್ಯಮವ್ಯಯಮ್ ॥

(ಶ್ಲೋಕ-69)

ಮೂಲಮ್

ಪದಂ ತತ್ಪರಮಂ ಧಾಮ ಚೇತಸಾ ಸೋಽಭ್ಯಚಿಂತಯತ್ ।
ವಾಯುರೋಧೇನ ಸಂಯುಕ್ತಂ ಸರ್ವೇ ದೇವಾಃ ಸಹರ್ಷಯಃ ॥

(ಶ್ಲೋಕ-70)

ಮೂಲಮ್

ಸಾಗ್ನಯೋ ಲಕ್ಷ್ಮಣಂ ಪುಷ್ಪೈಸ್ತುಷ್ಟುವುಶ್ಚ ಸಮಾಕಿರನ್ ।
ಅದೃಶ್ಯಂ ವಿಬುಧೈಃ ಕೈಶ್ಚಿತ್ಸಶರೀರಂ ಚ ವಾಸವಃ ॥

(ಶ್ಲೋಕ-71)

ಮೂಲಮ್

ಗೃಹೀತ್ವಾ ಲಕ್ಷ್ಮಣಂ ಶಕ್ರಃ ಸ್ವರ್ಗಲೋಕಮಥಾಗಮತ್ ।
ತತೋ ವಿಷ್ಣೋಶ್ಚತುರ್ಭಾಗಂ ತಂ ದೇವಂ ಸುರಸತ್ತಮಾಃ ।
ಸರ್ವೇ ದೇವರ್ಷಯೋ ದೃಷ್ಟ್ವಾ ಲಕ್ಷ್ಮಣಂ ಸಮಪೂಜಯನ್ ॥

ಅನುವಾದ

ಸತ್ಪುರುಷರಿಗೆ ತ್ಯಾಗ ಮತ್ತು ವಧೆ ಎರಡೂ ಸಮಾನವಾಗಿವೆ.’’ ರಘುಶ್ರೇಷ್ಠ ಭಗವಾನ್ ರಾಮನು ಈ ರೀತಿ ಹೇಳಿದಾಗ ಲಕ್ಷ್ಮಣನ ಕಣ್ಣುಗಳಲ್ಲಿ ದುಃಖಾಶ್ರುಗಳು ತುಂಬಿ ಬಂದವು. ಅವನು ಕೂಡಲೇ ಶ್ರೀರಾಮನಿಗೆ ನಮಸ್ಕಾರಮಾಡಿ ತನ್ನ ಅರಮನೆಗೆ ಬಂದನು. ಅಲ್ಲಿಂದ ಅವನು ಸರಯೂ ತೀರಕ್ಕೆ ಹೋಗಿ ಆಚಮನ ಮಾಡಿದ ನಂತರ ಎರಡೂ ಕೈಗಳನ್ನು ಮುಗಿದುಕೊಂಡು, ತನ್ನ ಒಂಭತ್ತು ಇಂದ್ರಿಯ ದ್ವಾರಗಳನ್ನು ತಡೆದು, ಪ್ರಾಣವಾಯುವನ್ನು ಬ್ರಹ್ಮರಂಧ್ರದಲ್ಲಿ ಸ್ಥಿರಗೊಳಿಸಿದನು. ನಂತರ ವಾಸುದೇವ ಎಂಬ ಅವ್ಯಯವೂ, ಅವಿನಾಶಿಯೂ ಆದ ಪರಬ್ರಹ್ಮಪದವಾದ ಆ ಪರಮ ಧಾಮವನ್ನು ಅಂತಃ ಕರಣದಲ್ಲಿ ಧ್ಯಾನಿಸಿದನು. ಈ ಪ್ರಕಾರ ಪ್ರಾಣನಿರೋಧ ಮಾಡಿದ ಮೇಲೆ ಋಷಿಗಳು ಮತ್ತು ಅಗ್ನಿಯ ಸಹಿತ ಸಮಸ್ತ ದೇವತೆಗಳು ಲಕ್ಷ್ಮಣನ ಮೇಲೆ ಪುಷ್ಪವೃಷ್ಟಿಗರೆದರು. ಹಾಗೂ ಅವನನ್ನು ಸ್ತುತಿಸಿದರು. ಅದೇ ಸಮಯದಲ್ಲಿ ಯಾವ ದೇವತೆಗಳಿಗೂ ಕೂಡ ಕಾಣಿಸಿಕೊಳ್ಳದಂತೆ ದೇವೇಂದ್ರನು ಲಕ್ಷ್ಮಣನನ್ನು ಸಶರೀರವಾಗಿ ಕರೆದುಕೊಂಡು ಸ್ವರ್ಗಲೋಕಕ್ಕೆ ಹೊರಟು ಹೋದನು. ಭಗವಾನ್ ವಿಷ್ಣುವಿನ ಚತುರ್ಥಾಂಶ ರೂಪೀ ಆ ಲಕ್ಷ್ಮಣದೇವನನ್ನು ನೋಡಿ ಸಮಸ್ತ ದೇವತೆಗಳು ಮತ್ತು ದೇವರ್ಷಿಗಳೂ ಅವನನ್ನು ಪೂಜಿಸಿದರು. ॥66-71॥

(ಶ್ಲೋಕ-72)

ಮೂಲಮ್

ಲಕ್ಷ್ಮಣೇ ಹಿ ದಿವಮಾಗತೇ ಹರೌ
ಸಿದ್ಧಲೋಕಗತಯೊಗಿನಸ್ತದಾ ।
ಬ್ರಹ್ಮಣಾ ಸಹ ಸಮಾಗಮನ್ಮುದಾ
ದ್ರಷ್ಟುಮಾಹಿತಮಹಾಹಿರೂಪಕಮ್ ॥

ಅನುವಾದ

ಭಗವಾನ್ ಲಕ್ಷ್ಮಣನು ಸ್ವರ್ಗಕ್ಕೆ ಆಗಮಿಸಿದ ಮೇಲೆ ಬ್ರಹ್ಮನ ಸಹಿತ ಸಿದ್ಧಲೋಕ ನಿವಾಸೀ ಸಮಸ್ತ ಯೋಗಿ ಜನರೆಲ್ಲಾ ಬಹಳ ಸಂತೋಷಪಟ್ಟು, ಆದಿಶೇಷ ರೂಪಧಾರೀ ಲಕ್ಷ್ಮಣನ ದರ್ಶನಕ್ಕಾಗಿ ಬಂದರು. ॥72॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಉತ್ತರಕಾಂಡೇ ಅಷ್ಟಮಃ ಸರ್ಗಃ ॥8॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಉತ್ತರಕಾಂಡದಲ್ಲಿ ಎಂಟನೆಯ ಸರ್ಗವು ಮುಗಿಯಿತು.