[ಏಳನೆಯ ಸರ್ಗ]
ಭಾಗಸೂಚನಾ
ಭಗವಾನ್ ಶ್ರೀ ರಾಮನ ಯಜ್ಞದಲ್ಲಿ ಕುಶ-ಲವರ ಗಾಯನ, ಸೀತೆಯ ಭೂ-ಪ್ರವೇಶ, ತಾಯಿಗೆ ಶ್ರೀರಾಮನ ಉಪದೇಶ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ವಾಲ್ಮೀಕಿನಾ ಬೋಧಿತೋಽಸೌ ಕುಶಃ ಸದ್ಯೋ ಗತಭ್ರಮಃ ।
ಅಂತರ್ಮುಕ್ತೋ ಬಹಿಃ ಸರ್ವಮನುಕುರ್ವಂಶ್ಚಚಾರ ಸಃ ॥
ಅನುವಾದ
ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ವಾಲ್ಮೀಕಿ ಋಷಿಗಳು ಈ ಪ್ರಕಾರ ತಿಳಿಸಿದಾಗ ತತ್ಕ್ಷಣ ಕುಶನ ಎಲ್ಲ ಭ್ರಮೆಯು ಹೊರಟುಹೋಯಿತು. ಅವನು ತನ್ನ ಅಂತಃ ಕರಣದಿಂದ ಮುಕ್ತನಾಗಿ ಹೊರಗಿನಿಂದ ಸಂಪೂರ್ಣ ಕ್ರಿಯೆಗಳನ್ನು ಮಾಡುತ್ತಾ ವ್ಯವಹರಿಸುತ್ತಿದ್ದನು. ॥1॥
(ಶ್ಲೋಕ-2)
ಮೂಲಮ್
ವಾಲ್ಮೀಕಿರಪಿ ತೌ ಪ್ರಾಹ ಸೀತಾಪುತ್ರೌ ಮಹಾಧಿಯೌ ।
ತತ್ರ ತತ್ರ ಚ ಗಾಯಂತೌ ಪುರೇ ವೀಥಿಷು ಸರ್ವತಃ ॥
(ಶ್ಲೋಕ-3)
ಮೂಲಮ್
ರಾಮಸ್ಯಾಗ್ರೇ ಪ್ರಗಾಯೇತಾಂ ಶುಶ್ರೂಷುರ್ಯದಿ ರಾಘವಃ ।
ನ ಗ್ರಾಹ್ಯಂ ವೈ ಯುವಾಭ್ಯಾಂ ತದ್ಯದಿ ಕಿಂಚಿತ್ಪ್ರದಾಸ್ಯತಿ ॥
ಅನುವಾದ
ಆಗ ವಾಲ್ಮೀಕಿಯು ಆ ಮಹಾಬುದ್ಧಿಶಾಲಿಗಳಾದ ಈರ್ವರೂ ಸೀತಾ-ಪುತ್ರರಿಗೆ ಹೇಳಿದರು ‘‘ನೀವಿಬ್ಬರೂ ನಗರದ ಬೀದಿಗಳಲ್ಲಿ, ಎಲ್ಲಾ ಕಡೆಯೂ ರಾಮಾಯಣವನ್ನು ಹಾಡುತ್ತಾ ತಿರುಗಾಡಿರಿ. ಮಹಾರಾಜಾ ಶ್ರೀರಾಮನಿಗೆ ಕೇಳಲು ಇಚ್ಛೆಯಾದರೆ ಆತನ ಮುಂದೆಯೂ ಕೂಡ ಹಾಡಿರಿ. ಆದರೆ ಅವನು ಏನನ್ನಾದರೂ ಕೊಡಲು ಬಂದರೆ ತೆಗೆದುಕೊಳ್ಳ ಬೇಡಿರಿ.’’ ॥2-3॥
(ಶ್ಲೋಕ-4)
ಮೂಲಮ್
ಇತಿ ತೌ ಚೋದಿತೌ ತತ್ರ ಗಾಯಮಾನೌ ವಿಚೇರತುಃ ।
ಯಥೋಕ್ತಮೃಷೀಣಾ ಪೂರ್ವಂ ತತ್ರ ತತ್ರಾಭ್ಯಗಾಯತಾಮ್ ॥
(ಶ್ಲೋಕ-5)
ಮೂಲಮ್
ತಾಂ ಸ ಶುಶ್ರಾವ ಕಾಕುತ್ಸ್ಥಃ ಪೂರ್ವಚರ್ಯಾಂ ತತಸ್ತತಃ ।
ಅಪೂರ್ವಪಾಠಜಾತಿಂ ಚ ಗೇಯೇನ ಸಮಭಿಪ್ಲುತಾಮ್ ॥
(ಶ್ಲೋಕ-6)
ಮೂಲಮ್
ಬಾಲಯೋ ರಾಘವಃ ಶ್ರುತ್ವಾ ಕೌತೂಹಲಮುಪೇಯಿವಾನ್ ।
ಅಥ ಕರ್ಮಾಂತರೇ ರಾಜಾ ಸಮಾಹೂಯ ಮಹಾಮುನೀನ್ ॥
(ಶ್ಲೋಕ-7)
ಮೂಲಮ್
ರಾಜ್ಞಶ್ಚೈವ ನರವ್ಯಾಘ್ರಃ ಪಂಡಿತಾಂಶ್ಚೈವ ನೈಗಮಾನ್ ।
ಪೌರಾಣಿಕಾನ್ ಶಬ್ದವಿದೋ ಯೇ ಚ ವೃದ್ಧಾ ದ್ವಿಜಾತಯಃ ॥
ಅನುವಾದ
ಮುನಿಗಳ ಅಪ್ಪಣೆಯಾದ ಬಳಿಕ ಅವರು ಹಾಡುತ್ತಾ ಸಂಚರಿಸಲಾರಂಭಿಸಿದರು. ಋಷಿಗಳು ಎಲ್ಲೆಲ್ಲಿ ಗಾನ ಮಾಡುವಂತೆ ಮೊದಲು ಹೇಳಿದ್ದರೋ ಆಯಾಯ ಸ್ಥಳಗಳಲ್ಲಿ ಅವರು ಹಾಡಿದರು. ಆಗ ಕಕುತ್ಸ್ಥನಂದನ ಶ್ರೀರಘುನಾಥನು ತನ್ನ ಪೂರ್ವಚರಿತ್ರೆಯನ್ನು ಅಲ್ಲಲ್ಲಿ ಹಾಡುತ್ತಿರುವ ಸಮಾಚಾರವನ್ನು ಕೇಳಿದನು. ಆ ಬಾಲಕರು ಹಾಡುವ ವಿಧಾನ ಅದ್ಭುತವಾಗಿದೆ ಮತ್ತು ಸ್ವರ-ತಾಳಗಳಿಂದ ಕೂಡಿದೆ ಎಂಬುದನ್ನು ಕೇಳಿ ಭಗವಾನ್ ಶ್ರೀರಾಮನಿಗೆ ಅತ್ಯಂತ ಕುತೂಹಲವುಂಟಾಯಿತು. ಆದ್ದರಿಂದ ನರಶಾರ್ದೂಲ ಮಹಾರಾಜಾ ಶ್ರೀರಾಮನು ಯಜ್ಞಕರ್ಮದ ವಿಶ್ರಾಂತಿ ಸಮಯದಲ್ಲಿ ಸಕಲ ಮುನೀಶ್ವರರು, ರಾಜರು, ಪಂಡಿತರು, ಶಾಸ್ತ್ರಜ್ಞರು, ಪುರಾಣಿಕರು, ಶಬ್ದ ಶಾಸ್ತ್ರಿಗಳು, ಹಿರಿಯರು ವೃದ್ಧರು ಮತ್ತು ಬ್ರಾಹ್ಮಣರು ಮುಂತಾದವರನ್ನು ಕರೆಸಿದನು. ॥4-7॥
(ಶ್ಲೋಕ-8)
ಮೂಲಮ್
ಏತಾನ್ಸರ್ವಾನ್ಸಮಾಹೂಯ ಗಾಯಕೌ ಸಮವೇಶಯತ್ ।
ತೇ ಸರ್ವೇ ಹೃಷ್ಟಮನಸೋ ರಾಜಾನೋ ಬ್ರಾಹ್ಮಣಾದಯಃ ॥
(ಶ್ಲೋಕ-9)
ಮೂಲಮ್
ರಾಮಂ ತೌ ದಾರಕೌ ದೃಷ್ಟ್ವಾ ವಿಸ್ಮಿತಾ ಹ್ಯನಿಮೇಷಣಾಃ ।
ಅವೋಚನ್ ಸರ್ವ ಏವೈತೇ ಪರಸ್ಪರಮಥಾಗತಾಃ ॥
ಅನುವಾದ
ಇವರನ್ನೆಲ್ಲಾ ಕರೆಯಿಸಿ ಬಳಿಕ ಅವನು ಹಾಡುವ ಬಾಲಕರನ್ನು ಕರೆಸಿದನು. ಆ ಎಲ್ಲಾ ರಾಜರು ಮತ್ತು ಬ್ರಾಹ್ಮಣರಾದಿಯಾಗಿ ಪ್ರಸನ್ನಚಿತ್ತದಿಂದ ಮಹಾರಾಜ ರಾಮನನ್ನು ಹಾಗೂ ಆ ಇಬ್ಬರು ಬಾಲಕರನ್ನು ನೋಡಿ ಆಶ್ಚರ್ಯಚಕಿತರಾಗಿ ಎವೆಯಿಕ್ಕದೆ ನೋಡುತ್ತಿದ್ದರು. ಆಗ ಅಲ್ಲಿ ನೆರೆದಿದ್ದ ಜನರೆಲ್ಲರೂ ಪರಸ್ಪರ ಮಾತನಾಡಿಕೊಳ್ಳತೊಡಗಿದರು. ॥8-9॥
(ಶ್ಲೋಕ-10)
ಮೂಲಮ್
ಇಮೌ ರಾಮಸ್ಯ ಸದೃಶೌ ಬಿಂಬಾದ್ಬಿಂಬಮಿವೋದಿತೌ ।
ಜಟಿಲೌ ಯದಿ ನ ಸ್ಯಾತಾಂ ನ ಚ ವಲ್ಕಲಧಾರಿಣೌ ॥
(ಶ್ಲೋಕ-11)
ಮೂಲಮ್
ವಿಶೇಷಂ ನಾಧಿಗಚ್ಛಾಮೋ ರಾಘವಸ್ಯಾನಯೋಸ್ತದಾ ।
ಏವಂ ಸಂವದತಾಂ ತೇಷಾಂ ವಿಸ್ಮಿತಾನಾಂ ಪರಸ್ಪರಮ್ ॥
(ಶ್ಲೋಕ-12)
ಮೂಲಮ್
ಉಪಚಕ್ರಮತುರ್ಗಾತುಂ ತಾವುಭೌ ಮುನಿದಾರಕೌ ।
ತತಃ ಪ್ರವೃತ್ತಂ ಮಧುರಂ ಗಾಂಧರ್ವಮತಿಮಾನುಷಮ್ ॥
ಅನುವಾದ
‘‘ಬಿಂಬದಿಂದ ಪ್ರಕಟವಾದ ಪ್ರತಿ ಬಿಂಬದಂತೆ ಇವರಿಬ್ಬರೂ ಶ್ರೀರಾಮಚಂದ್ರನ ಹಾಗೆಯೇ ಕಂಡುಬರುತ್ತಿದ್ದಾರೆ. ಇವರು ಜಟಾಜೂಟ ಮತ್ತು ನಾರು ಬಟ್ಟೆಯನ್ನು ಧರಿಸದೇ ಹೋಗಿದ್ದರೆ ಇವರಲ್ಲಿ ಮತ್ತು ರಘುನಾಥನಲ್ಲಿ ಯಾವ ಅಂತರವೂ ತಿಳಿದುಬರುತ್ತಿರಲಿಲ್ಲ.’’ ಈ ಪ್ರಕಾರ ಆ ಜನರೆಲ್ಲಾ ಆಶ್ಚರ್ಯ ಚಕಿತರಾಗಿ ತಮ್ಮ ತಮ್ಮಲ್ಲಿ ಚರ್ಚಿಸುತ್ತಿರುವಾಗ, ಆ ಇಬ್ಬರು ಮುನಿಕುಮಾರರು ಹಾಡಲು ಸಿದ್ಧತೆ ಮಾಡಿಕೊಂಡರು. ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿ ಅತ್ಯಂತ ಮಧುರ ಮತ್ತು ಅಲೌಕಿಕ ಗಾಯನ ಪ್ರಾರಂಭವಾಯಿತು. ॥10-12॥
(ಶ್ಲೋಕ-13)
ಮೂಲಮ್
ಶ್ರುತ್ವಾ ತನ್ಮಧುರಂ ಗೀತಮಪರಾಹ್ಣೇ ರಘೂತ್ತಮಃ ।
ಉವಾಚ ಭರತಂ ಚಾಭ್ಯಾಂ ದೀಯತಾಮಯುತಂ ವಸು ॥
ಅನುವಾದ
ಆ ಮಧುರ ಗಾಯನವನ್ನು ಕೇಳಿ ರಘುನಾಥನು ಸಂಜೆಯಾದ ಬಳಿಕ ಭರತನಿಗೆ ‘‘ಇವರಿಗೆ ಹತ್ತು ಸಾವಿರ ಸುವರ್ಣನಾಣ್ಯಗಳನ್ನು ಕೊಡು’’ ಎಂದು ಹೇಳಿದನು. ॥13॥
(ಶ್ಲೋಕ-14)
ಮೂಲಮ್
ದೀಯಮಾನಂ ಸುವರ್ಣಂ ತು ನ ತಜ್ಜಗೃಹತುಸ್ತದಾ ।
ಕಿಮನೇನ ಸುವರ್ಣೇನ ರಾಜನ್ನೋ ವನ್ಯಭೋಜನೌ ॥
(ಶ್ಲೋಕ-15)
ಮೂಲಮ್
ಇತಿ ಸಂತ್ಯಜ್ಯ ಸಂದತ್ತಂ ಜಗ್ಮತುರ್ಮುನಿಸನ್ನಿಧಿಮ್ ।
ಏವಂ ಶ್ರುತ್ವಾ ತು ಚರಿತಂ ರಾಮಃ ಸ್ವಸ್ಯೈವ ವಿಸ್ಮಿತಃ ॥
ಅನುವಾದ
ಆದರೆ ಆ ಬಾಲಕರು ಕೊಟ್ಟ ಆ ಸುವರ್ಣ ಮುದ್ರೆಗಳನ್ನು ಸ್ವೀಕರಿಸಲಿಲ್ಲ. ‘‘ಹೇ ಮಹಾರಾಜಾ! ನಾವು ಕಾಡಿನಲ್ಲಿ ಕಂದ-ಮೂಲ-ಲಾದಿಗಳನ್ನು ತಿನ್ನುವವರು, ನಾವು ಈ ದ್ರವ್ಯವನ್ನು ತೆಗೆದುಕೊಂಡು ಏನು ಮಾಡುವುದು?’’ ಎಂದು ಹೇಳಿ ಕೊಟ್ಟಿದ್ದ ಆ ಸುವರ್ಣವನ್ನು ಅಲ್ಲಿಯೇ ಬಿಟ್ಟು ಮುನಿಗಳ ಬಳಿಗೆ ಬಂದುಬಿಟ್ಟರು. ಈ ಪ್ರಕಾರ ಭಗವಾನ್ ಶ್ರೀರಾಮನು ತನ್ನ ಚರಿತ್ರೆಯನ್ನೇ ಕೇಳಿ ವಿಸ್ಮಯಗೊಂಡನು. ॥14-15॥
(ಶ್ಲೋಕ-16)
ಮೂಲಮ್
ಜ್ಞಾತ್ವಾ ಸೀತಾಕುಮಾರೌ ತೌ ಶತ್ರುಘ್ನಂ ಚೇದಮಬ್ರವೀತ್ ।
ಹನೂಮಂತಂ ಸುಷೇಣಂ ಚ ವಿಭೀಷಣಮಥಾಂಗದಮ್ ॥
ಅನುವಾದ
ಆ ಬಾಲಕರು ಸೀತಾದೇವಿಯ ಪುತ್ರರೆಂದು ತಿಳಿದುಕೊಂಡು ಶತ್ರುಘ್ನ, ಹನುಮಂತ, ಸುಷೇಣ, ವಿಭೀಷಣ, ಅಂಗದನೇ ಮುಂತಾದವರಲ್ಲಿ ಹೇಳಿದನು ॥16॥
(ಶ್ಲೋಕ-17)
ಮೂಲಮ್
ಭಗವಂತಂ ಮಹಾತ್ಮಾನಂ ವಾಲ್ಮೀಕಿಂ ಮುನಿಸತ್ತಮಮ್ ।
ಆನಯಧ್ವಂ ಮುನಿವರಂ ಸಸೀತಂ ದೇವಸಮ್ಮಿತಮ್ ॥
ಅನುವಾದ
‘‘ದೇವತುಲ್ಯ ಮಹಾನುಭಾವ ಮುನಿಶ್ರೇಷ್ಠ ಭಗವಾನ್ ವಾಲ್ಮೀಕಿಮುನಿ ಗಳನ್ನು ಸೀತೆಯ ಸಹಿತ ಕರೆದುಕೊಂಡು ಬನ್ನಿರಿ. ॥17॥
(ಶ್ಲೋಕ-18)
ಮೂಲಮ್
ಅಸ್ಯಾಸ್ತು ಪರ್ಷದೋ ಮಧ್ಯೇ ಪ್ರತ್ಯಯಂ ಜನಕಾತ್ಮಜಾ ।
ಕರೋತು ಶಪಥಂ ಸರ್ವೇ ಜಾನಂತು ಗತಕಲ್ಮಷಾಮ್ ॥
(ಶ್ಲೋಕ-19)
ಮೂಲಮ್
ಸೀತಾಂ ತದ್ವಚನಂ ಶ್ರುತ್ವಾ ಗತಾಃ ಸರ್ವೇಽತಿವಿಸ್ಮಿತಾಃ ।
ಊಚುರ್ಯಥೋಕ್ತಂ ರಾಮೇಣ ವಾಲ್ಮೀಕಿಂ ರಾಮಪಾರ್ಷದಾಃ ॥
ಅನುವಾದ
ಈ ಸಭೆಯಲ್ಲಿ ಜಾನಕಿಯು ಎಲ್ಲರಿಗೂ ನಂಬಿಕೆಯನ್ನುಂಟು ಮಾಡುವುದಕ್ಕಾಗಿ ಶಪಥ ಮಾಡಲಿ, ಅದರಿಂದ ಎಲ್ಲ ಜನರು ಸೀತೆಯು ನಿಷ್ಕಳಂಕಳೆಂಬುದನ್ನು ತಿಳಿದುಕೊಳ್ಳಲಿ.’’ ಭಗವಾನ್ ಶ್ರೀರಾಮಚಂದ್ರನ ಮಾತನ್ನು ಕೇಳಿ ಅವನ ಆ ದೂತರೆಲ್ಲಾ ಅತ್ಯಂತ ಆಶ್ಚರ್ಯಚಕಿತರಾಗಿ, ವಾಲ್ಮೀಕಿಯ ಬಳಿಗೆ ಹೋದರು ಹಾಗೂ ಶ್ರೀರಾಮನು ಹೇಳಿದುದನ್ನೆಲ್ಲಾ ಅವರಿಗೆ ತಿಳಿಸಿದರು. ॥18-19॥
(ಶ್ಲೋಕ-20)
ಮೂಲಮ್
ರಾಮಸ್ಯ ಹೃದ್ಗತಂ ಸರ್ವಂ ಜ್ಞಾತ್ವಾ ವಾಲ್ಮೀಕಿರಬ್ರವೀತ್ ।
ಶ್ವಃ ಕರಿಷ್ಯತಿ ವೈ ಸೀತಾ ಶಪಥಂ ಜನಸಂಸದೀ ॥
ಅನುವಾದ
ಅದರಿಂದ ಭಗವಾನ್ ರಾಮನ ಆಶಯವನ್ನು ಅರಿತ ವಾಲ್ಮೀಕಿಯು ಹೇಳಿದರು ‘‘ಸೀತಾದೇವಿಯು ನಾಳೆ ಜನತೆಯ ಸಭೆಯಲ್ಲಿ ಶಪಥ ಮಾಡುವಳು.’’ ॥20॥
(ಶ್ಲೋಕ-21)
ಮೂಲಮ್
ಯೋಷಿತಾಂ ಪರಮಂ ದೈವಂ ಪತಿರೇವ ನ ಸಂಶಯಃ ।
ತಚ್ಛ್ರುತ್ವಾ ಸಹಸಾ ಗತ್ವಾ ಸರ್ವೇ ಪ್ರೋಚುರ್ಮುನೇರ್ವಚಃ ॥
(ಶ್ಲೋಕ-22)
ಮೂಲಮ್
ರಾಘವಸ್ಯಾಪಿ ರಾಮೋಽಪಿ ಶ್ರುತ್ವಾ ಮುನಿವಚಸ್ತಥಾ ।
ರಾಜಾನೋ ಮುನಯಃ ಸರ್ವೇ ಶೃಣುಧ್ವಮಿತಿ ಚಾಬ್ರವೀತ್ ॥
(ಶ್ಲೋಕ-23)
ಮೂಲಮ್
ಸೀತಾಯಾಃ ಶಪಥಂ ಲೋಕಾ ವಿಜಾನಂತು ಶುಭಾಶುಭಮ್ ।
ಇತ್ಯುಕ್ತಾ ರಾಘವೇಣಾಥ ಲೋಕಾಃ ಸರ್ವೇ ದಿದೃಕ್ಷವಃ ॥
(ಶ್ಲೋಕ-24)
ಮೂಲಮ್
ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚೈವ ಮಹರ್ಷಯಃ ।
ವಾನರಾಶ್ಚ ಸಮಾಜಗ್ಮುಃ ಕೌತೂಹಲಸಮನ್ವಿತಾಃ ॥
ಅನುವಾದ
ಸ್ತ್ರೀಯರಿಗೆ ಎಲ್ಲರಿಗಿಂತ ದೊಡ್ಡ ದೇವರು ಪತಿಯೇ ಆಗಿರುತ್ತಾನೆ ಎಂಬುದರಲ್ಲಿ ಸಂದೇಹವೇ ಇಲ್ಲ.’’ ಮುನಿಗಳ ಈ ಮಾತುಗಳನ್ನು ಕೇಳಿ ಅವರೆಲ್ಲರೂ ತತ್ ಕ್ಷಣ ಶ್ರೀರಘುನಾಥನ ಬಳಿಗೆ ಹೋಗಿ ಎಲ್ಲವನ್ನು ಅರಿಕೆಮಾಡಿಕೊಂಡರು. ಆಗ ಶ್ರೀರಾಮಚಂದ್ರನು ಮುನಿಯ ಸಂದೇಶವನ್ನು ಕೇಳಿ ‘‘ಹೇ ನೃಪತಿಗಳೇ ಮತ್ತು ಮುನಿಜನರೇ! ಈಗ ನೀವುಗಳೆಲ್ಲರೂ ಸೀತೆಯ ಶಪಥವನ್ನು ಕೇಳಿರಿ; ಅದರಿಂದ ಆಕೆಯ ಶುಭಾಶುಭವನ್ನು ಅರಿತುಕೊಳ್ಳಿರಿ.’’ ಭಗವಾನ್ ಶ್ರೀರಾಮನು ಈ ರೀತಿ ಹೇಳಿದ ನಂತರ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರೂ, ಮಹರ್ಷಿಗಳು ಮತ್ತು ವಾನರರೇ ಆದಿ ಎಲ್ಲಾ ಪುರಜನರೂ ಕುತೂಹಲ ಭರಿತರಾಗಿ ಸೀತಾದೇವಿಯ ಶಪಥವನ್ನು ಕೇಳುವುದಕ್ಕಾಗಿ ಬಂದರು. ॥21-24॥
(ಶ್ಲೋಕ-25)
ಮೂಲಮ್
ತತೋ ಮುನಿವರಸ್ತೂರ್ಣಂ ಸಸೀತಃ ಸಮುಪಾಗಮತ್ ।
ಅಗ್ರತಸ್ತಮೃಷಿಂ ಕೃತ್ವಾಯಾಂತಿ ಕಿಂಚಿದವಾಙ್ಮುಖೀ ॥
(ಶ್ಲೋಕ-26)
ಮೂಲಮ್
ಕೃತಾಂಜಲಿರ್ಬಾಷ್ಪಕಂಠಾ ಸೀತಾ ಯಜ್ಞಂ ವಿವೇಶ ತಮ್ ।
ದೃಷ್ಟ್ವಾ ಲಕ್ಷ್ಮೀಮಿವಾಯಾಂತೀಂ ಬ್ರಹ್ಮಾಣಮನುಯಾಯಿನೀಮ್ ॥
(ಶ್ಲೋಕ-27)
ಮೂಲಮ್
ವಾಲ್ಮೀಕೇಃ ಪೃಷ್ಠತಃ ಸೀತಾಂ ಸಾಧುವಾದೋ ಮಹಾನಭೂತ್ ।
ತದಾ ಮಧ್ಯೇ ಜನೌಘಸ್ಯ ಪ್ರವಿಶ್ಯ ಮುನಿಪುಂಗವಃ ॥
(ಶ್ಲೋಕ-28)
ಮೂಲಮ್
ಸೀತಾಸಹಾಯೋ ವಾಲ್ಮೀಕಿರಿತಿ ಪ್ರಾಹ ಚ ರಾಘವಮ್ ।
ಇಯಂ ದಾಶರಥೇ ಸೀತಾ ಸುವ್ರತಾ ಧರ್ಮಚಾರಿಣೀ ॥
(ಶ್ಲೋಕ-29)
ಮೂಲಮ್
ಅಪಾಪಾ ತೇ ಪುರಾ ತ್ಯಕ್ತಾ ಮಮಾಶ್ರಮಸಮೀಪತಃ ।
ಲೋಕಾಪವಾದಭೀತೇನ ತ್ವಯಾ ರಾಮ ಮಹಾವನೇ ॥
ಅನುವಾದ
ಆಗಲೇ ಸೀತಾದೇವಿಯ ಸಹಿತ ಮುನೀಶ್ವರರೂ ಬಂದರು. ಸೀತಾದೇವಿಯು ವಾಲ್ಮೀಕಿ ಋಷಿಗಳನ್ನು ಮುಂದೆ ಮಾಡಿಕೊಂಡು, ಅವರ ಹಿಂದೆ-ಹಿಂದೆ ತಲೆಬಾಗಿ ಕೈಮುಗಿದುಕೊಂಡು ಗದ್ಗದ ಕಂಠದಿಂದ ಯಜ್ಞಶಾಲೆಯನ್ನು ಪ್ರವೇಶ ಮಾಡಿದಳು, ಬ್ರಹ್ಮನ ಹಿಂದೆ ಬರುತ್ತಿರುವ ಲಕ್ಷ್ಮಿಯಂತೆ ವಾಲ್ಮೀಕಿ ಋಷಿಗಳ ಹಿಂದೆ ಸೀತಾದೇವಿಯು ಬರುತ್ತಿರುವುದನ್ನು ನೋಡಿ ಆ ಜನಸಮೂಹದಲ್ಲಿ ಧನ್ಯ-ಧನ್ಯ ಎಂಬ ಭಾರೀ ಗದ್ದಲ ಉಂಟಾಯಿತು. ಆಗ ಸೀತಾದೇವಿಯ ಸಹಿತ ಮುನಿಶ್ರೇಷ್ಠ ವಾಲ್ಮೀಕಿಯು ಆ ಜನಸಮೂಹದಲ್ಲಿ, ಮುಂದೆ ಬಂದು ರಘುನಾಥನಿಗೆ ಹೇಳಿದರು ‘‘ಹೇ ದಶರಥನಂದನಾ! ಈ ಪತಿವ್ರತೆಯೂ, ಧರ್ಮಪರಾಯಣೆಯೂ, ನಿಷ್ಕಳಂಕಳೂ ಆದ ಸೀತಾದೇವಿಯನ್ನು ನೀನು ಲೋಕಾಪವಾದಕ್ಕೆ ಅಂಜಿ ಘೋರಾರಣ್ಯದಲ್ಲಿ ಸ್ವಲ್ಪ ಸಮಯದ ಹಿಂದೆ ನನ್ನ ಆಶ್ರಮದ ಹತ್ತಿರ ಬಿಟ್ಟುಬಿಟ್ಟಿದ್ದೆ. ॥25-29॥
(ಶ್ಲೋಕ-30)
ಮೂಲಮ್
ಪ್ರತ್ಯಯಂ ದಾಸ್ಯತೇ ಸೀತಾ ತದನುಜ್ಞಾತುಮರ್ಹಸಿ ।
ಇಮೌ ತು ಸೀತಾತನಯಾವಿವೌ ಯಮಲಜಾತಕೌ ॥
ಅನುವಾದ
ಈಗ ಈಕೆಯು ತನ್ನ ವಿಶ್ವಾಸವನ್ನು ಪ್ರಕಟಿಸಲು ಇಚ್ಛಿಸುತ್ತಾಳೆ, ನೀನು ಆಕೆಗೆ ಅಪ್ಪಣೆಕೊಡು. ಇವರಿಬ್ಬರೂ ಕುಶ-ಲವ ಸೀತೆಯಲ್ಲಿ ಹುಟ್ಟಿದ ಅವಳಿ-ಜವಳಿ ಪುತ್ರರಾಗಿದ್ದಾರೆ. ॥30॥
(ಶ್ಲೋಕ-31)
ಮೂಲಮ್
ಸುತೌ ತು ತವ ದುರ್ಧರ್ಷೌ ತಥ್ಯಮೇತದ್ಬ್ರವೀಮಿ ತೇ ।
ಪ್ರಚೇತಸೋಽಹಂ ದಶಮಃ ಪುತ್ರೋ ರಘುಕುಲೋದ್ವಹ ॥
ಅನುವಾದ
ನಾನು ನಿಜವನ್ನೇ ಹೇಳುತ್ತೇನೆ, ದುರ್ಜಯ ವೀರರಾದ ಇವರಿಬ್ಬರೂ ನಿನ್ನ ಸಂತಾನವೇ ಆಗಿದ್ದಾರೆ. ಹೇ ರಾಘವಾ! ನಾನು ಪ್ರಜಾಪತಿ ಪ್ರಚೇತಾ ಎಂಬವರ ಹತ್ತನೇ ಮಗನಾಗಿದ್ದೇನೆ. ॥31॥
(ಶ್ಲೋಕ-32)
ಮೂಲಮ್
ಅನೃತಂ ನ ಸ್ಮರಾಮ್ಯುಕ್ತಂ ತಥೇಮೌ ತವ ಪುತ್ರಕೌ ।
ಬಹೂನ್ವರ್ಷಗಣಾನ್ ಸಮ್ಯಕ್ ತಪಶ್ಚರ್ಯಾ ಮಯಾ ಕೃತಾ ॥
ಅನುವಾದ
ನಾನು ಎಂದೂ ಸುಳ್ಳು ಹೇಳಿದಂತೆ ನನಗೆ ಜ್ಞಾಪಕವೇ ಇಲ್ಲ ; ಈ ಬಾಲಕರು ನಿನ್ನ ಪುತ್ರರೇ ಎಂಬುದನ್ನೇ ನಾನು ನಿನಗೆ ಹೇಳುತ್ತೇನೆ. ನಾನು ಅನೇಕ ವರ್ಷಗಳವರೆಗೆ ಚೆನ್ನಾಗಿ ತಪಸ್ಸು ಮಾಡಿದ್ದೇನೆ. ॥32॥
(ಶ್ಲೋಕ-33)
ಮೂಲಮ್
ನೋಪಾಶ್ನೀಯಾಂ ಫಲಂ ತಸ್ಯಾ ದುಷ್ಟೇಯಂ ಯದಿ ಮೈಥಿಲೀ ।
ವಾಲ್ಮೀಕಿನೈವಮುಕ್ತಸ್ತು ರಾಘವಃ ಪ್ರತ್ಯಭಾಷತ ॥
ಅನುವಾದ
ಈ ಮಿಥಿಲೇಶ ನಂದಿನಿಯಲ್ಲಿ ಯಾವುದಾದರೂ ದೋಷವಿದ್ದರೆ ನನಗೆ ಆ ತಪಸ್ಸಿನ ಯಾವುದೇ ಫಲವೂ ಸಿಗದೆ ಹೋಗಲಿ.’’ ವಾಲ್ಮೀಕಿಯು ಈ ಪ್ರಕಾರ ಹೇಳಿದ ಬಳಿಕ ಶ್ರೀರಘುನಾಥ ಇಂತೆಂದನು - ॥33॥
(ಶ್ಲೋಕ-34)
ಮೂಲಮ್
ಏವಮೇತನ್ಮಹಾಪ್ರಾಜ್ಞ ಯಥಾ ವದಸಿ ಸುವ್ರತ ।
ಪ್ರತ್ಯಯೋ ಜನಿತೋ ಮಹ್ಯಂ ತವ ವಾಕ್ಯೈರಕಿಲ್ಬಿಷೈಃ ॥
ಅನುವಾದ
‘‘ಎಲೈ ಮಹಾಪ್ರಾಜ್ಞರೆ! ಸುವ್ರತರೇ! ನೀವು ಹೇಳುತ್ತಿರುವ, ಮಾತು ಸರಿಯಾಗಿಯೇ ಇದೆ. ನನಗಾದರೋ ನಿಮ್ಮ ನಿರ್ದೋಷ ವಾಕ್ಯಗಳಿಂದ ನಂಬಿಕೆ ಉಂಟಾಯಿತು. ॥34॥
(ಶ್ಲೋಕ-35)
ಮೂಲಮ್
ಲಂಕಾಯಾಮಪಿ ದತ್ತೋ ಮೇ ವೈದೇಹ್ಯಾ ಪ್ರತ್ಯಯೋ ಮಹಾನ್ ।
ದೇವಾನಾಂ ಪುರತಸ್ತೇನ ಮಂದಿರೇ ಸಂಪ್ರವೇಶಿತಾ ॥
ಅನುವಾದ
ಜಾನಕಿಯು ಲಂಕೆಯಲ್ಲಿಯೂ ಕೂಡ ದೇವತೆಗಳ ಮುಂದೆ ಬಹು ಪ್ರಚಂಡ ಪರೀಕ್ಷೆಗೆ ಒಳಗಾಗಿದ್ದಳು, ಅದರಿಂದಾಗಿ ನಾನು ಆಕೆಯನ್ನು ಮನೆಯಲ್ಲಿ ಇರಿಸಿ ಕೊಂಡಿದ್ದೆ. ॥35॥
(ಶ್ಲೋಕ-36)
ಮೂಲಮ್
ಸೇಯಂ ಲೋಕಭಯಾದ್ಬ್ರಹ್ಮನ್ನಪಾಪಾಪಿ ಸತೀ ಪುರಾ ।
ಸೀತಾ ಮಯಾ ಪರಿತ್ಯಕ್ತಾ ಭವಾಂಸ್ತತ್ ಕ್ಷಂತುಮರ್ಹತಿ ॥
ಅನುವಾದ
ಆದರೆ ಎಲೈ ಬ್ರಹ್ಮಜ್ಞಾನಿಯೆ! ಸತೀಸೀತೆಯು ಸರ್ವಥಾ ನಿರ್ದೋಷಿಯಾಗಿದ್ದರೂ ಕೂಡ ಲೋಕನಿಂದೆಯ ಭಯದಿಂದ ಕೆಲವು ದಿನಗಳವರೆಗೆ ನಾನು ಅವಳನ್ನು ಬಿಟ್ಟುಬಿಟ್ಟೆನು. ಆದ್ದರಿಂದ ನನ್ನ ಈ ಅಪರಾಧವನ್ನು ಕ್ಷಮಿಸಿರಿ. ॥36॥
(ಶ್ಲೋಕ-37)
ಮೂಲಮ್
ಮಮೈವ ಜಾತೌ ಜಾನಾಮಿ ಪುತ್ರಾವೇತೌ ಕುಶೀಲವೌ ।
ಶುದ್ಧಾಯಾಂ ಜಗತೀಮಧ್ಯೇ ಸೀತಾಯಾಂ ಪ್ರೀತಿರಸ್ತು ಮೇ ॥
ಅನುವಾದ
ಕುಶ ಮತ್ತು ಲವರೆಂಬ ಈ ಪುತ್ರರಿಬ್ಬರೂ ನನ್ನಿಂದಲೇ ಉತ್ಪನ್ನರಾಗಿದ್ದಾರೆ ಎಂಬುದನ್ನೂ ಕೂಡ ನಾನು ಬಲ್ಲೆನು. ಜಗತ್ತಿನ ಜನರ ಮುಂದೆ ಸೀತೆಯು ನಿರ್ದೋಷಿ ಎಂದು ಖಚಿತಪಡಿಸಲಿ. ನನಗೆ ಅವಳಲ್ಲಿ ಪ್ರೀತಿ ಇದ್ದೇ ಇದೆ. ॥37॥
(ಶ್ಲೋಕ-38)
ಮೂಲಮ್
ದೇವಾಃ ಸರ್ವೇ ಪರಿಜ್ಞಾಯ ರಾಮಾಭಿಪ್ರಾಯಮುತ್ಸುಕಾಃ ।
ಬ್ರಹ್ಮಾಣಮಗ್ರತಃ ಕೃತ್ವಾ ಸಮಾಜಗ್ಮುಃ ಸಹಸ್ರಶಃ ॥
ಅನುವಾದ
ಆಗ ಶ್ರೀರಾಮನ ಅಭಿಪ್ರಾಯವನ್ನು ಅರಿತು ಸಮಸ್ತ ದೇವತೆಗಳು ಅತ್ಯಂತ ಉತ್ಸುಕರಾಗಿ ಬ್ರಹ್ಮದೇವರನ್ನು ಮುಂದಿರಿಸಿಕೊಂಡು ಸಾವಿರಾರು ಸಂಖ್ಯೆಗಳಲ್ಲಿ ಅಲ್ಲಿಗೆ ಬಂದರು. ॥38॥
(ಶ್ಲೋಕ-39)
ಮೂಲಮ್
ಪ್ರಜಾಃ ಸಮಾಗಮನ್ ಹೃಷ್ಟಾಃ ಸೀತಾ ಕೌಶೇಯವಾಸಿನೀ ।
ಉದಙ್ಮುಖೀ ಹ್ಯಧೋದೃಷ್ಟಿಃ ಪ್ರಾಂಜಲಿರ್ವಾಕ್ಯಮಬ್ರವೀತ್ ॥
ಅನುವಾದ
ಬಹಳ ಮಂದಿ ಪ್ರಜೆಗಳೂ ಕೂಡ ಸಂತೋಷದಿಂದ ಅಲ್ಲಿಗೆ ಬಂದು ಸೇರಿದರು. ಆಗ ರೇಷ್ಮೆ ವಸವನ್ನು ಧರಿಸಿ, ಉತ್ತರದ ಕಡೆಗೆ ಮುಖ ಮಾಡಿ, ಅಧೋ ದೃಷ್ಟಿಯುಳ್ಳವಳಾಗಿ ನಿಂತಿರುವ ಸೀತೆಯು ಕೈಮುಗಿದು ಕೊಂಡು ಹೇಳಿದಳು ॥39॥
(ಶ್ಲೋಕ-40)
ಮೂಲಮ್
ರಾಮಾದನ್ಯಂ ಯಥಾಹಂ ವೈ ಮನಸಾಪಿ ನ ಚಿಂತಯೇ ।
ತಥಾ ಮೇ ಧರಣೀ ದೇವೀ ವಿವರಂ ದಾತುಮರ್ಹತಿ ॥
ಅನುವಾದ
‘‘ನಾನು ಭಗವಾನ್ ಶ್ರೀರಾಮನಲ್ಲದೆ ಬೇರೆ ಯಾರನ್ನಾದರೂ ಮನಸ್ಸಿನಲ್ಲಿ ಯೋಚಿಸದೇ ಇದ್ದರೆ, ಭೂದೇವಿಯು ನನಗೆ ಆಶ್ರಯಕೊಡಲಿ’’ ॥40॥
(ಶ್ಲೋಕ-41)
ಮೂಲಮ್
ತಥಾ ಶಪಂತ್ಯಾಃ ಸೀತಾಯಾಃ ಪ್ರಾದುರಾಸೀನ್ಮಹಾದ್ಭುತಮ್ ।
ಭೂತಲಾದ್ದಿವ್ಯಮತ್ಯರ್ಥಂ ಸಿಂಹಾಸನಮನುತ್ತಮಮ್ ॥
ಅನುವಾದ
ಸೀತಾದೇವಿಯು ಈ ಪ್ರಕಾರ ಶಪಥ ಮಾಡಿದ ಕೂಡಲೇ ಭೂಗರ್ಭದಿಂದ ಒಂದು ಅತಿ ಅದ್ಭುತ ಪರಮ ದಿವ್ಯ ಮತ್ತು ಅತ್ಯಂತ ಶ್ರೇಷ್ಠ ಸಿಂಹಾಸನವು ಪ್ರಕಟವಾಯಿತು. ॥41॥
(ಶ್ಲೋಕ-42)
ಮೂಲಮ್
ನಾಗೇಂದ್ರೈರ್ಧ್ರಿಯಮಾಣಂ ಚ ದಿವ್ಯದೇಹೈ ರವಿಪ್ರಭಮ್ ।
ಭೂದೇವೀ ಜಾನಕೀಂ ದೋರ್ಭ್ಯಾಂ ಗೃಹೀತ್ವಾ ಸ್ನೇಹಸಂಯುತಾ ॥
(ಶ್ಲೋಕ-43)
ಮೂಲಮ್
ಸ್ವಾಗತಂ ತಾಮುವಾಚೈನಾಮಾಸನೇ ಸಂನ್ಯವೇಶಯತ್ ।
ಸಿಂಹಾಸನಸ್ಥಾಂ ವೈದೇಹೀಂ ಪ್ರವಿಶಂತೀಂ ರಸಾತಲಮ್ ॥
(ಶ್ಲೋಕ-44)
ಮೂಲಮ್
ನಿರಂತರಾ ಪುಷ್ಪವೃಷ್ಟಿರ್ದಿವ್ಯಾ ಸೀತಾಮವಾಕಿರತ್ ।
ಸಾಧುವಾದಶ್ಚ ಸುಮಹಾನ್ ದೇವಾನಾಂ ಪರಮಾದ್ಭುತಃ ॥
ಅನುವಾದ
ಸೂರ್ಯನಂತೆ ಹೊಳೆಯುತ್ತಿರುವ ಆ ಸಿಂಹಾಸನವು ದಿವ್ಯ ಶರೀರಧಾರೀ ನಾಗರಾಜರುಗಳು ಹೊತ್ತುಕೊಂಡಿದ್ದರು. ಆಗ ಭೂದೇವಿಯು ಜಾನಕಿಯನ್ನು ತನ್ನ ಎರಡು ಬಾಹುಗಳಿಂದ ಪ್ರೇಮಪೂರ್ವಕ ಆಲಿಂಗಿಸಿಕೊಂಡು, ಸ್ವಾಗತಿಸಿ ಸಿಂಹಾಸನದ ಮೇಲೆ ಕುಳ್ಳಿರಿಸಿಕೊಂಡಳು. ಸೀತಾದೇವಿಯು ಸಿಂಹಾಸನದಲ್ಲಿ ಕುಳಿತು ರಸಾತಳಕ್ಕೆ ಹೊರಟಾಗ ಆಕೆಯ ಮೇಲೆ ನಿರಂತರ ಪುಷ್ಪ ವೃಷ್ಟಿಯಾಯಿತು. ದೇವತೆಗಳು ಶುಭದಾಯಕ ಸಾಧು ವಾದಗಳನ್ನು ಹೇಳುತ್ತಾ ಅತ್ಯಂತ ಅದ್ಭುತ ಹಾಗೂ ಮಹಾನ್ ಜಯ ಘೋಷ ಮಾಡಲಾರಂಭಿಸಿದರು. ॥42-44॥
(ಶ್ಲೋಕ-45)
ಮೂಲಮ್
ಊಚುಶ್ಚ ಬಹುಧಾ ವಾಚೋ ಹ್ಯಂತರಿಕ್ಷಗತಾಃ ಸುರಾಃ ।
ಅಂತರಿಕ್ಷೇ ಚ ಭೂಮೌ ಚ ಸರ್ವೇ ಸ್ಥಾವರಜಂಗಮಾಃ ॥
(ಶ್ಲೋಕ-46)
ಮೂಲಮ್
ವಾನರಾಶ್ಚ ಮಹಾಕಾಯಾಃ ಸೀತಾಶಪಥಕಾರಣಾತ್ ।
ಕೇಚಿಚ್ಚಿಂತಾಪರಾಸ್ತಸ್ಯ ಕೇಚಿದ್ಧ್ಯಾನಪರಾಯಣಾಃ ॥
ಅನುವಾದ
ಆಕಾಶದಲ್ಲಿದ್ದ ದೇವತೆಗಳು ನಾನಾಪ್ರಕಾರದಲ್ಲಿ ಮಾತನಾಡಿಕೊಂಡರು. ಸೀತೆಯು ಶಪಥ ಮಾಡಿದ್ದರಿಂದ ಆಕಾಶ ಮತ್ತು ಭೂಮಿಯ ಸಮಸ್ತ ಸ್ಥಾವರ-ಜಂಗಮ ಪ್ರಾಣಿಗಳು ಮತ್ತು ದೊಡ್ಡ-ದೊಡ್ಡ ಆಕೃತಿಯ ವಾನರರಲ್ಲಿ ಹಲವರು ಚಿಂತೆಗೊಳಗಾದರು, ಕೆಲವರು ಧ್ಯಾನಮಗ್ನರಾದರು. ॥45-46॥
(ಶ್ಲೋಕ-47)
ಮೂಲಮ್
ಕೇಚಿದ್ರಾಮಂ ನಿರೀಕ್ಷಂತಃ ಕೇಚಿತ್ಸೀತಾಮಚೇತಸಃ ।
ಮುಹೂರ್ತಮಾತ್ರಂ ತತ್ಸರ್ವಂ ತೂಷ್ಣೀಭೂತಮಚೇತನಮ್ ॥
ಅನುವಾದ
ಕೆಲವರು ರಾಮನನ್ನು ಮತ್ತು ಕೆಲವರು ಸೀತೆಯನ್ನು ನೋಡಿ ನಿಶ್ಚೇಷ್ಟಿತರಾದರು. ಒಂದು ಘಳಿಗೆ ಕಾಲ ಆ ಜನಸಮೂಹವೆಲ್ಲಾ ಸ್ತಬ್ಧವಾಯಿತು ಹಾಗೂ ಚೈತನ್ಯಶೂನ್ಯವಾಯಿತು. ॥47॥
(ಶ್ಲೋಕ-48)
ಮೂಲಮ್
ಸೀತಾಪ್ರವೇಶನಂ ದೃಷ್ಟ್ವಾ ಸರ್ವಂ ಸಮ್ಮೋಹಿತಂ ಜಗತ್ ।
ರಾಮಸ್ತು ಸರ್ವಂ ಜ್ಞಾತ್ವೈವ ಭವಿಷ್ಯತ್ಕಾರ್ಯಗೌರವಮ್ ॥
(ಶ್ಲೋಕ-49)
ಮೂಲಮ್
ಅಜಾನನ್ನಿವ ದುಃಖೇನ ಶುಶೋಚ ಜನಕಾತ್ಮಜಾಮ್ ।
ಬ್ರಹ್ಮಣಾ ಋಷಿಭಿಃ ಸಾರ್ಧಂ ಬೋಧಿತೋ ರಘುನಂದನಃ ॥
ಅನುವಾದ
ಸೀತೆಯ ಪೃಥ್ವೀಪ್ರವೇಶವನ್ನು ನೋಡಿ ಇಡೀ ಜಗತ್ತು ಮುಗ್ಧಗೊಂಡಿತು. ಭಗವಾನ್ ಶ್ರೀರಾಮನು ಮುಂದಿನ ಕಾರ್ಯದ ಮಹತ್ವವನ್ನು ಸಂಪೂರ್ಣವಾಗಿ ತಿಳಿದಿದ್ದನು, ಆದರೂ ಏನೂ ತಿಳಿಯದವನಂತೆ ಸೀತೆಗೋಸ್ಕರ ಶೋಕಪಡಲಾರಂಭಿಸಿದನು. ಆಗ ಋಷಿಗಳ ಸಹಿತ ಬ್ರಹ್ಮದೇವರು ರಘುನಾಥನನ್ನು ಸಮಾಧಾನ ಪಡಿಸಿದರು. ॥48-49॥
(ಶ್ಲೋಕ-50)
ಮೂಲಮ್
ಪ್ರತಿಬುದ್ಧ ಇವ ಸ್ವಪ್ನಾಚ್ಚಕಾರಾನಂತರಾಃ ಕ್ರಿಯಾಃ ।
ವಿಸಸರ್ಜ ಋಷೀನ್ ಸರ್ವಾನೃತ್ವಿಜೋ ಯೇ ಸಮಾಗತಾಃ ॥
(ಶ್ಲೋಕ-51)
ಮೂಲಮ್
ತಾನ್ ಸರ್ವಾನ್ ಧನರತ್ನಾದ್ಯೈಸ್ತೋಷಯಾಮಾಸ ಭೂರಿಶಃ ।
ಉಪಾದಾಯ ಕುಮಾರೌ ತಾವಯೋಧ್ಯಾಮಗಮತ್ಪ್ರಭುಃ ॥
ಅನುವಾದ
ಅನಂತರ ಅವನು ಮಲಗಿದ್ದು ಎದ್ದವನಂತೆ ಯಜ್ಞದ ಉಳಿದಿರುವ ಕರ್ಮಗಳನ್ನು ಸಮಾಪ್ತಿಗೊಳಿಸಿದನು. ಯಜ್ಞಕ್ಕೆ ಋತ್ವಿಜರಾಗಿ ಆಗಮಿಸಿದ್ದ ಋಷಿಗಳೆಲ್ಲರಿಗೂ ರತ್ನ, ಧನ ಮುಂತಾದುವನ್ನು ಕೊಟ್ಟು ಅವರನ್ನು ಚೆನ್ನಾಗಿ ಸಂತೋಷಪಡಿಸಿ ಬೀಳ್ಕೊಟ್ಟನು. ಬಳಿಕ ಪ್ರಭುರಾಮನು ಆ ಇಬ್ಬರು ಕುಮಾರರನ್ನು ಜೊತೆಯಲ್ಲಿ ಕರೆದುಕೊಂಡು ಅಯೋಧ್ಯಾನಗರಕ್ಕೆ ಬಂದನು. ॥50-51॥
(ಶ್ಲೋಕ-52)
ಮೂಲಮ್
ತದಾದಿ ನಿಃ ಸ್ಪೃಹೋ ರಾಮಃ ಸರ್ವಭೋಗೇಷು ಸರ್ವದಾ ।
ಆತ್ಮಚಿಂತಾಪರೋ ನಿತ್ಯಮೇಕಾಂತೇ ಸಮುಪಸ್ಥಿತಃ ॥
ಅನುವಾದ
ಅಂದಿನಿಂದ ಶ್ರೀರಾಮ ಚಂದ್ರನು ಎಲ್ಲಾ ಭೋಗಗಳಿಂದ ವಿರಕ್ತನಾಗಿ ನಿರಂತರ ಆತ್ಮಚಿಂತನೆ ಮಾಡುತ್ತಾ ಏಕಾಂತದಲ್ಲಿ ಇರಲಾರಂಭಿಸಿದನು. ॥52॥
(ಶ್ಲೋಕ-53)
ಮೂಲಮ್
ಏಕಾಂತೇ ಧ್ಯಾನನಿರತೇ ಏಕದಾ ರಾಘವೇ ಸತಿ ।
ಜ್ಞಾತ್ವಾ ನಾರಾಯಣಂ ಸಾಕ್ಷಾತ್ ಕೌಸಲ್ಯಾ ಪ್ರಿಯವಾದಿನೀ ॥
(ಶ್ಲೋಕ-54)
ಮೂಲಮ್
ಭಕ್ತ್ಯಾಗತ್ಯ ಪ್ರಸನ್ನಂ ತಂ ಪ್ರಣತಾ ಪ್ರಾಹ ಹೃಷ್ಟಧೀಃ ।
ರಾಮ ತ್ವಂ ಜಗತಾಮಾದಿರಾದಿಮಧ್ಯಾಂತವರ್ಜಿತಃ ॥
ಅನುವಾದ
ಒಂದು ದಿನ ಶ್ರೀರಘುನಾಥನು ಏಕಾಂತದಲ್ಲಿ ಧ್ಯಾನಮಗ್ನನಾಗಿದ್ದಾಗ ಪ್ರಿಯಭಾಷಿಣೀ ಕೌಸಲ್ಯಾದೇವಿಯು ಅವನನ್ನು ಸಾಕ್ಷಾತ್ ನಾರಾಯಣನೆಂದು ತಿಳಿದು ಅತಿ ಭಕ್ತಿಭಾವದಿಂದ ಅವನ ಬಳಿಗೆ ಬಂದು ಅವನು ಪ್ರಸನ್ನಚಿತ್ತನಾಗಿರುವುದನ್ನು ಅರಿತು ಬಹುಹರ್ಷದಿಂದ ವಿನಯಪೂರ್ವಕವಾಗಿ ಹೇಳಿದಳು — ‘‘ಹೇ ರಾಮಾ! ನೀನು ಜಗತ್ತಿಗೇ ಆದಿಕಾರಣನು ಹಾಗೂ ಸ್ವಯಂ ಆದಿ, ಅಂತ್ಯ ಮತ್ತು ಮಧ್ಯಗಳಿಲ್ಲದವನಾಗಿರುವೆ. ॥53-54॥
(ಶ್ಲೋಕ-55)
ಮೂಲಮ್
ಪರಮಾತ್ಮಾ ಪರಾನಂದಃ ಪೂರ್ಣಃ ಪುರುಷ ಈಶ್ವರಃ ।
ಜಾತೋಽಸಿ ಮೇ ಗರ್ಭಗೃಹೇ ಮಮ ಪುಣ್ಯಾತಿರೇಕತಃ ॥
ಅನುವಾದ
ನೀನು ಪರಮಾತ್ಮನೂ, ಪರಮಾನಂದ ಸ್ವರೂಪಿಯೂ, ಸರ್ವತ್ರ ಪರಿಪೂರ್ಣನೂ, ಜೀವರೂಪದಿಂದ ಶರೀರರೂಪೀ ಪುರದಲ್ಲಿ ಶಯನಮಾಡುವವನೂ, ಹಾಗೂ ಎಲ್ಲರಿಗೂ ಸ್ವಾಮಿಯಾಗಿರುವೆ; ನನ್ನ ಪ್ರಬಲ ಪುಣ್ಯೋದಯದಿಂದಲೇ ನೀನು ನನ್ನ ಗರ್ಭದಿಂದ ಜನ್ಮತಾಳಿರುವೆ. ॥55॥
(ಶ್ಲೋಕ-56)
ಮೂಲಮ್
ಅವಸಾನೇ ಮಮಾಪ್ಯದ್ಯ ಸಮಯೋಽಭೂದ್ರಘೂತ್ತಮ ।
ನಾದ್ಯಾಪ್ಯಬೋಧಜಃ ತೃತ್ಸ್ನೋ ಭವಬಂಧೋ ನಿವರ್ತತೇ ॥
ಅನುವಾದ
ಎಲೈ ರಘುಶ್ರೇಷ್ಠನೆ! ಈಗ ಅಂತ್ಯ ಸಮಯದಲ್ಲಿ ನನಗೆ ಇಂದೇ ನಿನ್ನಲ್ಲಿ ಏನನ್ನಾದರೂ ಕೇಳುವುದಕ್ಕೆ ಸಮಯ ದೊರೆತಿದೆ. ಇಂದಿನವರೆವಿಗೂ ನನ್ನ ಅಜ್ಞಾನಜನ್ಯ ಸಂಸಾರ ಬಂಧನವು ಪೂರ್ತಿಯಾಗಿ ಹರಿದು ಹೋಗಿಲ್ಲ. ॥56॥
(ಶ್ಲೋಕ-57)
ಮೂಲಮ್
ಇದಾನೀಮಪಿ ಮೇ ಜ್ಞಾನಂ ಭವಬಂಧನಿವರ್ತಕಮ್ ।
ಯಥಾ ಸಂಕ್ಷೇಪತೋ ಭೂಯಾತ್ತಥಾ ಬೋಧಯ ಮಾಂ ವಿಭೋ ॥
ಅನುವಾದ
ವಿಭು! ನನ್ನ ಭವಬಂಧನವು ಪರಿಹರಿಸುವ ಜ್ಞಾನೋದಯ ಉಂಟಾಗುವಂತಹ ಉಪದೇಶವನ್ನು ನನಗೆ ಈಗಲೇ ಸಂಕ್ಷೇಪವಾಗಿ ಮಾಡು.’’ ॥57॥
(ಶ್ಲೋಕ-58)
ಮೂಲಮ್
ನಿರ್ವೇದವಾದಿನೀಮೇವಂ ಮಾತರಂ ಮಾತೃವತ್ಸಲಃ ।
ದಯಾಲುಃ ಪ್ರಾಹ ಧರ್ಮಾತ್ಮಾ ಜರಾಜರ್ಜರಿತಾಂ ಶುಭಾಮ್ ॥
ಅನುವಾದ
ಆಗ ಮಾತೃಭಕ್ತ, ದಯಾಮಯ, ಧರ್ಮಪರಾಯಣ ಭಗವಾನ್ ಶ್ರೀರಾಮನು ಈ ರೀತಿ ವೈರಾಗ್ಯಪೂರ್ಣ ವಚನಗಳನ್ನು ಮುಪ್ಪಿನಿಂದ ಜರ್ಜರಿತಳಾಗಿ, ಶುಭಲಕ್ಷಣೆಯಾದ ತನ್ನ ತಾಯಿಗೆ ಹೇಳಿದನು. ॥58॥
(ಶ್ಲೋಕ-59)
ಮೂಲಮ್
ಮಾಗಾರ್ಗಸ್ತ್ರಯೋ ಮಯಾ ಪ್ರೋಕ್ತಾಃ ಪುರಾ ಮೋಕ್ಷಾಪಿ ಸಾಧಕಾಃ ।
ಕರ್ಮಯೋಗೋ ಜ್ಞಾನಯೋಗೋ ಭಕ್ತಿಯೋಗಶ್ಚ ಶಾಶ್ವತಃ ॥
ಅನುವಾದ
‘‘ನಾನು ಹಿಂದಿನ ಕಾಲದಲ್ಲಿ ಮೋಕ್ಷಪ್ರಾಪ್ತಿಗೆ ಸಾಧನರೂಪಿಯಾದ ಕರ್ಮಯೋಗ, ಜ್ಞಾನಯೋಗ ಮತ್ತು ಭಕ್ತಿಯೋಗವೆಂಬ ಸನಾತನವಾದ ಮೂರು ಮಾರ್ಗಗಳನ್ನು ತಿಳಿಸಿರುತ್ತೇನೆ. ॥59॥
(ಶ್ಲೋಕ-60)
ಮೂಲಮ್
ಭಕ್ತಿರ್ವಿಭಿದ್ಯತೇ ಮಾತಸಿವಿಧಾ ಗುಣಭೇದತಃ ।
ಸ್ವಭಾವೋ ಯಸ್ಯ ಯಸ್ತೇನ ತಸ್ಯ ಭಕ್ತಿರ್ವಿಭಿದ್ಯತೇ ॥
ಅನುವಾದ
ಎಲೈ ತಾಯೆ! ಸಾಧಕನ ಗುಣಗಳನುಸಾರ ಭಕ್ತಿಯಲ್ಲಿ ಮೂರು ಭೇದಗಳಿವೆ. ಯಾರಿಗೆ ಎಂತಹ ಸ್ವಭಾವ ವಿರುತ್ತದೆಯೋ ಅವನ ಭಕ್ತಿಯೂ ಕೂಡ ಅಂತಹುದೇ ಭೇದವುಳ್ಳದ್ದಾಗುತ್ತದೆ. ॥60॥
(ಶ್ಲೋಕ-61)
ಮೂಲಮ್
ಯಸ್ತು ಹಿಂಸಾಂ ಸಮುದ್ದಿಶ್ಯ ದಂಭಂ ಮಾತ್ಸರ್ಯಮೇವ ವಾ ।
ಭೇದದೃಷ್ಟಿಶ್ಚ ಸಂರಂಭೀ ಭಕ್ತೋ ಮೇ ತಾಮಸಃ ಸ್ಮೃತಃ ॥
ಅನುವಾದ
ಯಾರು ಹಿಂಸೆ, ಜಂಭ ಅಥವಾ ಮಾತ್ಸರ್ಯದ ಉದ್ದೇಶದಿಂದ ಭಕ್ತಿ ಮಾಡುತ್ತಾನೋ, ಯಾರು ಭೇದದೃಷ್ಟಿಯುಳ್ಳವನೋ ಮತ್ತು ಕೋಪಿಷ್ಠನೋ ಅವನು ತಾಮಸ ಭಕ್ತನೆಂದು ತಿಳಿಯಲಾಗುತ್ತದೆ. ॥61॥
(ಶ್ಲೋಕ-62)
ಮೂಲಮ್
ಫಲಾಭಿಸಂಧಿರ್ಭೋಗಾರ್ಥೀ ಧನಕಾಮೋ ಯಶಸ್ತಥಾ ।
ಅರ್ಚಾದೌ ಭೇದಬುದ್ಧ್ಯಾ ಮಾಂ ಪೂಜಯೇತ್ಸ ತು ರಾಜಸಃ ॥
ಅನುವಾದ
ಲಾಪೇಕ್ಷೆಯುಳ್ಳವನೂ, ಭೋಗೇಚ್ಛೆಯುಳ್ಳವನೂ, ಹಣ ಮತ್ತು ಕೀರ್ತಿಯನ್ನು ಆಶಿಸುವವನೂ, ಪ್ರತಿಮೆ ಮುಂತಾದವುಗಳಲ್ಲಿ ಭೇದಬುದ್ಧಿಯಿಂದ ನನ್ನನ್ನು ಪೂಜಿಸುವವನೂ ರಜೋಗುಣೀ ಭಕ್ತನಾಗುತ್ತಾನೆ. ॥62॥
(ಶ್ಲೋಕ-63)
ಮೂಲಮ್
ಪರಸ್ಮಿನ್ನರ್ಪಿತಂ ಯಸ್ತು ಕರ್ಮ ನಿರ್ಹರಣಾಯ ವಾ ।
ಕರ್ತವ್ಯಮಿತಿ ವಾ ಕುರ್ಯಾದ್ಭೇದಬುದ್ಧ್ಯಾ ಸ ಸಾತ್ತ್ವಿಕಃ ॥
ಅನುವಾದ
ಪರಮಾತ್ಮನಿಗೆ ಅರ್ಪಿಸಲು ನಿಷ್ಕಾಮ ಬುದ್ಧಿಯಿಂದ ಪಾಪಗಳನ್ನು ಕಳೆದುಕೊಳ್ಳಲು ಕರ್ಮ ಮಾಡುವುದರಿಂದ ಅಥವಾ ‘ಮಾಡಬೇಕು’ ಎಂದು ಕರ್ತವ್ಯವೆಂದರಿತು ಭೇದ ಬುದ್ಧಿಯಿಂದ ಕರ್ಮ ಮಾಡುವವನು ಸಾತ್ತ್ವಿಕ ಭಕ್ತನಾಗುತ್ತಾನೆ. ॥63॥
(ಶ್ಲೋಕ-64)
ಮೂಲಮ್
ಮದ್ಗುಣಾಶ್ರಯಣಾದೇವ ಮಯ್ಯನಂತಗುಣಾಲಯೇ ।
ಅವಿಚ್ಛಿನ್ನಾ ಮನೋವೃತ್ತಿರ್ಯಥಾ ಗಂಗಾಂಬುನೋಽಂಬುಧೌ ॥
(ಶ್ಲೋಕ-65)
ಮೂಲಮ್
ತದೇವ ಭಕ್ತಿಯೋಗಸ್ಯ ಲಕ್ಷಣಂ ನಿರ್ಗುಣಸ್ಯ ಹಿ ।
ಅಹೈತುಕ್ಯವ್ಯವಹಿತಾ ಯಾ ಭಕ್ತಿರ್ಮಯಿ ಜಾಯತೇ ॥
(ಶ್ಲೋಕ-66)
ಮೂಲಮ್
ಸಾ ಮೇ ಸಾಲೋಕ್ಯಸಾಮೀಪ್ಯಸಾರ್ಷ್ಟಿಸಾಯುಜ್ಯಮೇವ ವಾ ।
ದದಾತ್ಯಪಿ ನ ಗೃಹ್ಣಂತಿ ಭಕ್ತಾ ಮತ್ಸೇವನಂ ವಿನಾ ॥
ಅನುವಾದ
ಗಂಗಾ ನದಿಯ ಜಲವು ಸಮುದ್ರದಲ್ಲಿ ಲೀನವಾಗಿ ಹೋಗು ವಂತೆಯೇ ಮನೋವೃತ್ತಿಯು ನನ್ನ ಗುಣಗಳ ಆಶ್ರಯದಿಂದ ಅನಂತ ಗುಣಧಾಮನಾದ ನನ್ನಲ್ಲಿ ನಿರಂತರ ತೊಡಗಿದ್ದರೆ, ಅದೇ ನನ್ನ ನಿರ್ಗುಣ ಭಕ್ತಿಯೋಗದ ಲಕ್ಷಣವಾಗಿದೆ. ನನ್ನ ಕುರಿತು ಉಂಟಾಗುವ ನಿಷ್ಕಾಮ ಮತ್ತು ಅಖಂಡ ಭಕ್ತಿಯು ಸಾಧಕನಿಗೆ, ಸಾಲೋಕ್ಯ, ಸಾಮೀಪ್ಯ, ಸಾರ್ಷ್ಟಿ ಮತ್ತು ಸಾಯುಜ್ಯ* ಎಂಬ ನಾಲ್ಕು ಪ್ರಕಾರದ ಮುಕ್ತಿಯನ್ನು ಕೊಡುತ್ತದೆ; ಆದರೆ ಅದನ್ನು ಕೊಟ್ಟರೂ ಸಹ ಆ ಭಕ್ತರು ನನ್ನ ಸೇವೆಯ ಹೊರತು ಮತ್ತೇನನ್ನೂ ಸ್ವೀಕರಿಸುವುದಿಲ್ಲ. ॥64-66॥
ಟಿಪ್ಪನೀ
- ವೈಕುಂಠಾದಿ ಭಗವಂತನ ಲೋಕಗಳನ್ನು ಪಡೆಯುವುದು ‘ಸಾಲೋಕ್ಯ’ ಮುಕ್ತಿಯಾಗಿದೆ. ಪ್ರತಿಕ್ಷಣದಲ್ಲಿಯೂ ಭಗವಂತನ ಬಳಿಯಲ್ಲಿಯೇ ಇರುವುದು ‘ಸಾಮೀಪ್ಯ’ವಾಗಿದೆ. ಭಗವಂತನಿಗೆ ಸಮಾನವಾದ ಐಶ್ವರ್ಯ ಲಾಭವು ‘ಸಾರ್ಷ್ಟಿ’ ಮತ್ತು ಭಗವಂತನಲ್ಲಿ ಲೀನವಾಗುವುದು ‘ಸಾಯುಜ್ಯ’ ಮುಕ್ತಿಯಾಗಿದೆ.
(ಶ್ಲೋಕ-67)
ಮೂಲಮ್
ಸ ಏವಾತ್ಯಂತಿಕೋ ಯೋಗೋ ಭಕ್ತಿಮಾರ್ಗಸ್ಯ ಭಾಮಿನಿ ।
ಮದ್ಭಾವಂ ಪ್ರಾಪ್ನುಯಾತ್ತೇನ ಅತಿಕ್ರಮ್ಯ ಗುಣತ್ರಯಮ್ ॥
ಅನುವಾದ
ಅಮ್ಮಾ! ಇದೇ ಭಕ್ತಿಮಾರ್ಗದ ಆತ್ಯಂತಿಕ ಯೋಗವಾಗಿದೆ. ಇದರ ಮೂಲಕ ಭಕ್ತನು ಮೂರು ಗುಣಗಳನ್ನು ದಾಟಿ ನನ್ನ ಸ್ವರೂಪವೇ ಆಗಿಬಿಡುತ್ತಾನೆ. ॥67॥
(ಶ್ಲೋಕ-68)
ಮೂಲಮ್
ಮಹತಾ ಕಾಮಹೀನೇನ ಸ್ವಧರ್ಮಾಚರಣೇನ ಚ ।
ಕರ್ಮಯೋಗೇನ ಶಸ್ತೇನ ವರ್ಜಿತೇನ ವಿಹಿಂಸನಾತ್ ॥
(ಶ್ಲೋಕ-69)
ಮೂಲಮ್
ಮದ್ದರ್ಶನಸ್ತುತಿಮಹಾಪೂಜಾಭಿಃ ಸ್ಮೃತಿವಂದನೈಃ ।
ಭೂತೇಷು ಮದ್ಭಾವನಯಾ ಸಂಗೇನಾಸತ್ಯವರ್ಜನೈಃ ॥
(ಶ್ಲೋಕ-70)
ಮೂಲಮ್
ಬಹುಮಾನೇನ ಮಹತಾಂ ದುಃಖಿನಾಮನುಕಂಪಯಾ ।
ಸ್ವಸಮಾನೇಷು ಮೈತ್ರ್ಯಾ ಚ ಯಮಾದೀನಾಂ ನಿಷೇವಯಾ ॥
(ಶ್ಲೋಕ-71)
ಮೂಲಮ್
ವೇದಾಂತವಾಕ್ಯಶ್ರವಣಾನ್ಮಮ ನಾಮಾನುಕೀರ್ತನಾತ್ ।
ಸತ್ಸಂಗೇನಾರ್ಜವೇನೈವ ಹ್ಯಹಮಃ ಪರಿವರ್ಜನಾತ್ ॥
(ಶ್ಲೋಕ-72)
ಮೂಲಮ್
ಕಾಂಕ್ಷಯಾ ಮಮ ಧರ್ಮಸ್ಯ ಪರಿಶುದ್ಧಾಂತರೋ ಜನಃ ।
ಮದ್ಗುಣಶ್ರವಣಾದೇವ ಯಾತಿ ಮಾಮಂಜಸಾ ಜನಃ ॥
ಅನುವಾದ
ಈಗ ಉತ್ತಮ ಕರ್ಮಯೋಗದ ಸಾಧನೆ ಹೇಳುವೆನು ಕೇಳು ತನ್ನ ಧರ್ಮವನ್ನು ಅತ್ಯಂತ ನಿಷ್ಕಾಮ ಭಾವನೆಯಿಂದ ಆಚರಿಸುವುದರಿಂದ, ಅಹಿಂಸಕ ಕರ್ಮಗಳಿಂದ, ನನ್ನ ದರ್ಶನ, ಸ್ತುತಿ, ಮಹಾಪೂಜೆ, ಸ್ಮರಣೆ ಮತ್ತು ವಂದನೆಯಿಂದ, ಪ್ರಾಣಿಗಳಲ್ಲಿ ನನ್ನ ಭಾವನೆಯಿಡುವುದರಿಂದ, ಅಸತ್ಯದ ತ್ಯಾಗದಿಂದ ಮತ್ತು ಸತ್ಸಂಗದಿಂದ, ಮಹಾಪುರುಷರನ್ನು ಅತ್ಯಂತ ಗೌರವದಿಂದ ಕಾಣುವುದರಿಂದ, ದುಃಖಿಯಾದವರ ಮೇಲೆ ದಯೆ ತೋರಿಸುವುದರಿಂದ, ತನಗೆ ಸಮಾನರಾದವರೊಡನೆ ಮೈತ್ರಿ ಯಿಂದಿರುವುದರಿಂದ, ಯಮನಿಯಮಾದಿಗಳ ಆಚರಣೆಯಿಂದ, ವೇದಾಂತ ವಾಕ್ಯಗಳ ಶ್ರವಣದಿಂದ, ನನ್ನ ನಾಮ ಸಂಕೀರ್ತನೆಯಿಂದ, ಸತ್ಸಂಗ ಮತ್ತು ನಮ್ರತೆಯಿಂದ, ಅಹಂಕಾರದ ತ್ಯಾಗದಿಂದ, ನನ್ನಿಂದ ಪ್ರವರ್ತಿತವಾದ ಭಾಗವತ ಧರ್ಮಗಳನ್ನು ಇಚ್ಛಿಸುವುದರಿಂದ ಯಾರ ಅಂತಃಕರಣವು ಶುದ್ಧವಾಗಿರುವುದೋ, ಅವನು ನನ್ನ ಗುಣಗಳ ಶ್ರವಣದಿಂದಲೇ ಅತಿ ಸುಲಭವಾಗಿ ನನ್ನನ್ನು ಪಡೆದುಕೊಳ್ಳುತ್ತಾನೆ. ॥68-72॥
(ಶ್ಲೋಕ-73)
ಮೂಲಮ್
ಯಥಾವಾಯುವಶಾದ್ಗಂಧಃ ಸ್ವಾಶ್ರಯಾದ್ ಘ್ರಾಣಮಾವಿಶೇತ್ ।
ಯೋಗಾಭ್ಯಾಸರತಂ ಚಿತ್ತಮೇವಮಾತ್ಮಾನಮಾವಿಶೇತ್ ॥
ಅನುವಾದ
ಗಂಧವು ತನ್ನ ಆಶ್ರಯವನ್ನು ಬಿಟ್ಟು ಗಾಳಿಯ ಮೂಲಕ ಘ್ರಾಣೇಂದ್ರಿಯವನ್ನು ಪ್ರವೇಶಿಸುವಂತೆಯೇ, ಯೋಗಾಭ್ಯಾಸದಲ್ಲಿ ತೊಡಗಿರುವ ಚಿತ್ತವು ಆತ್ಮನಲ್ಲಿ ಲೀನಗೊಳ್ಳುತ್ತದೆ. ॥73॥
(ಶ್ಲೋಕ-74)
ಮೂಲಮ್
ಸರ್ವೇಷು ಪ್ರಾಣಿಜಾತೇಷು ಹ್ಯಹಮಾತ್ಮಾ ವ್ಯವಸ್ಥಿತಃ ।
ತಮಜ್ಞಾತ್ವಾ ವಿಮೂಢಾತ್ಮಾ ಕುರುತೇ ಕೇವಲಂ ಬಹಿಃ ॥
ಅನುವಾದ
ಸಮಸ್ತ ಪ್ರಾಣಿಗಳಲ್ಲಿಯೂ ಆತ್ಮರೂಪದಿಂದ ನಾನೇ ಇರುತ್ತೇನೆ. ಅದನ್ನು ತಿಳಿಯದೆ ಮೂಢ ಜನರು ಕೇವಲ ಬಾಹ್ಯ ಭಾವನೆಯಲ್ಲಿರುತ್ತಾರೆ. ॥74॥
(ಶ್ಲೋಕ-75)
ಮೂಲಮ್
ಕ್ರಿಯೋತ್ಪನ್ನೈರ್ನೈಕಭೇದೈರ್ದ್ರವ್ಯೆರ್ಮೇ ನಾಬ ತೋಷಣಮ್ ।
ಭೂತಾವಮಾನಿನಾರ್ಚಾಯಾಮರ್ಚಿತೋಹಂ ನ ಪೂಜಿತಃ ॥
ಅನುವಾದ
ಎಲೈ ತಾಯೆ! ಆದರೆ ಕ್ರಿಯೆಯಿಂದ ಉತ್ಪನ್ನವಾದ ಅನೇಕ ಪದಾರ್ಥಗಳಿಂದಲೂ ಕೂಡ ನನಗೆ ಸಂತೋಷವಾಗುವುದಿಲ್ಲ. ಬೇರೆ ಜೀವಿಗಳನ್ನು ತಿರಸ್ಕರಿಸುವವರಿಂದ ಪ್ರತಿಮೆಯಲ್ಲಿ ಪೂಜಿತನಾದರೂ ಕೂಡ ನಾನು ನಿಜವಾಗಿ ಪೂಜಿತನಾಗುವುದಿಲ್ಲ. ॥75॥
(ಶ್ಲೋಕ-76)
ಮೂಲಮ್
ತಾವನ್ಮಾಮರ್ಚಯೇದ್ಧೇವಂ ಪ್ರತಿಮಾದೌ ಸ್ವಕರ್ಮಭಿಃ ।
ಯಾವತ್ಸರ್ವೇಷು ಭೂತೇಷು ಸ್ಥಿತಂ ಚಾತ್ಮನಿ ನ ಸ್ಮರೇತ್ ॥
ಅನುವಾದ
ಪರಮಾತ್ಮನಾದ ನಾನು ಸಮಸ್ತ ಪ್ರಾಣಿಗಳಲ್ಲಿ ಮತ್ತು ತನ್ನಲ್ಲಿಯೂ ಇದ್ದಾನೆಂಬುದನ್ನು ತಿಳಿದುಕೊಳ್ಳುವವರೆಗೂ ತನ್ನ ಕರ್ಮಗಳ ಮೂಲಕ ಪ್ರತಿಮೆ ಇತ್ಯಾದಿಗಳಲ್ಲಿ ನನ್ನನ್ನು ಪೂಜೆಮಾಡುತ್ತಾ ಇರಬೇಕು. ॥76॥
(ಶ್ಲೋಕ-77)
ಮೂಲಮ್
ಯಸ್ತು ಭೇದಂ ಪ್ರಕುರುತೇ ಸ್ವಾತ್ಮನಶ್ಚ ಪರಸ್ಯ ಚ ।
ಭಿನ್ನದೃಷ್ಟೇರ್ಭಯಂ ಮೃತ್ಯುಸ್ತಸ್ಯ ಕುರ್ಯಾನ್ನ ಸಂಶಯಃ ॥
ಅನುವಾದ
ತನ್ನ ಆತ್ಮಾ ಮತ್ತು ಪರಮಾತ್ಮನಲ್ಲಿ ಭೇದಬುದ್ಧಿಯುಳ್ಳ ಆ ಭೇದದರ್ಶಿಗೆ ಮೃತ್ಯು ಖಂಡಿತ ಭಯವನ್ನುಂಟುಮಾಡುತ್ತದೆ; ಇದರಲ್ಲಿ ಸಂದೇಹವೆಂಬುದೇ ಇಲ್ಲ. ॥77॥
(ಶ್ಲೋಕ-78)
ಮೂಲಮ್
ಮಾಮತಃ ಸರ್ವಭೂತೇಷು ಪರಿಚ್ಛಿನ್ನೇಷು ಸಂಸ್ಥಿತಮ್ ।
ಏಕಂ ಜ್ಞಾನೇನ ಮಾನೇನ ಮೈತ್ರ್ಯಾ ಚಾರ್ಚೇದಭಿನ್ನಧೀಃ ॥
ಅನುವಾದ
ಆದುದರಿಂದ ಅಭೇದದರ್ಶೀ ಭಕ್ತನು ಸಮಸ್ತ ವಿಭಕ್ತ ಪ್ರಾಣಿಗಳಲ್ಲಿರುವ ಏಕಮಾತ್ರ ಪರಮಾತ್ಮನಾದ ನನ್ನನ್ನು ಜ್ಞಾನ, ಮಾನ ಮತ್ತು ಮೈತ್ರಿ ಇತ್ಯಾದಿಗಳಿಂದ ಪೂಜಿಸಬೇಕು. ॥78॥
(ಶ್ಲೋಕ-79)
ಮೂಲಮ್
ಚೇತಸೈವಾನಿಶಂ ಸರ್ವಭೂತಾನಿ ಪ್ರಣಮೇತ್ಸುಧೀಃ ।
ಜ್ಞಾತ್ವಾ ಮಾಂ ಚೇತನಂ ಶುದ್ಧಂ ಜೀವರೂಪೇಣ ಸಂಸ್ಥಿತಮ್ ॥
ಅನುವಾದ
ಈ ಪ್ರಕಾರ ಶುದ್ಧ ಚೇತನನಾದ ನನ್ನನ್ನೇ ಜೀವರೂಪದಿಂದ ಇರುವನೆಂದು ತಿಳಿದು ಬುದ್ಧಿವಂತರಾದವರು ಹಗಲೂರಾತ್ರಿ ಎಲ್ಲಾ ಪ್ರಾಣಿಗಳಿಗೂ ಮನಸ್ಸಿನಿಂದಲೇ ವಂದಿಸುತ್ತಾ ಇರಬೇಕು. ॥79॥
(ಶ್ಲೋಕ-80)
ಮೂಲಮ್
ತಸ್ಮಾತ್ಕದಾಚಿನ್ನೇಕ್ಷೇತ ಭೇದಮೀಶ್ವರಜೀವಯೋಃ ।
ಭಕ್ತಿಯೋಗೋ ಜ್ಞಾನಯೋಗೋ ಮಯಾ ಮಾತರುದೀರಿತಃ ॥
ಅನುವಾದ
ಆದ್ದರಿಂದ ಜೀವ ಮತ್ತು ಈಶ್ವರರ ಭೇದವನ್ನು ಎಂದಿಗೂ ನೋಡಬಾರದು. ಹೇ ಜನನೀ! ನಾನು ನಿನಗೆ ಈ ಭಕ್ತಿಯೋಗ ಮತ್ತು ಜ್ಞಾನಯೋಗವನ್ನು ವರ್ಣಿಸಿರುವೆನು. ॥80॥
(ಶ್ಲೋಕ-81)
ಮೂಲಮ್
ಆಲಂಬ್ಯೈಕತರಂ ವಾಪಿ ಪುರುಷಃ ಶುಭಮೃಚ್ಛತಿ ।
ತತೋ ಮಾಂ ಭಕ್ತಿಯೋಗೇನ ಮಾತಃ ಸರ್ವಹೃದಿ ಸ್ಥಿತಮ್ ॥
(ಶ್ಲೋಕ-82)
ಮೂಲಮ್
ಪುತ್ರರೂಪೇಣ ವಾ ನಿತ್ಯಂ ಸ್ಮೃತ್ವಾ ಶಾಂತಿಮವಾಪ್ಸ್ಯಸಿ ।
ಶ್ರುತ್ವಾ ರಾಮಸ್ಯ ವಚನಂ ಕೌಸಲ್ಯಾನಂದಸಂಯುತಾ ॥
ಅನುವಾದ
ಇವುಗಳಲ್ಲಿ ಒಂದನ್ನಾದರೂ ಸಹ ಅವಲಂಬಿಸುವುದರಿಂದ ಪುರುಷನು ಅತ್ಯಧಿಕ ಶುಭಪ್ರಾಪ್ತಿ ಮಾಡಿಕೊಳ್ಳುತ್ತಾನೆ. ಆದ್ದರಿಂದ ಹೇ ತಾಯೆ! ನನ್ನನ್ನು ಎಲ್ಲಾ ಪ್ರಾಣಿಗಳ ಅಂತಃಕರಣದಲ್ಲಿ ಇರುವವನೆಂದು ತಿಳಿಯುತ್ತಾ ಅಥವಾ ಪುತ್ರರೂಪದಿಂದ ಭಕ್ತಿಯೋಗದ ಮೂಲಕ ಪ್ರತಿ ದಿವಸವೂ ಸ್ಮರಣೆ ಮಾಡುತ್ತಾ ಇರುವುದರಿಂದ ನೀನು ಶಾಂತಿಯನ್ನು ಪಡೆಯುವೆ.’’ ಭಗವಾನ್ ರಾಮನ ಈ ವಚನಗಳನ್ನು ಕೇಳಿ ಕೌಸಲ್ಯೆಯು ಆನಂದಭರಿತಳಾದಳು. ॥81-82॥
(ಶ್ಲೋಕ-83)
ಮೂಲಮ್
ರಾಮಂ ಸದಾ ಹೃದಿ ಧ್ಯಾತ್ವಾ ಛಿತ್ತ್ವಾ ಸಂಸಾರಬಂಧನಮ್ ।
ಅತಿಕ್ರಮ್ಯ ಗತೀಸ್ತಿಸ್ರೋಪ್ಯವಾಪ ಪರಮಾಂ ಗತಿಮ್ ॥
ಅನುವಾದ
ಹಾಗೂ ಹೃದಯದಲ್ಲಿ ನಿರಂತರ ಶ್ರೀರಾಮಚಂದ್ರನನ್ನು ಧ್ಯಾನಿಸುತ್ತಾ ಸಂಸಾರ-ಬಂಧನವನ್ನು ಕಿತ್ತೊಗೆದು ಮೂರು ಪ್ರಕಾರದ ಗತಿಗಳನ್ನು ದಾಟಿ ಪರಮಗತಿಯನ್ನು ಪಡೆದುಕೊಂಡಳು. ॥83॥
(ಶ್ಲೋಕ-84)
ಮೂಲಮ್
ಕೈಕೇಯೀ ಚಾಪಿ ಯೋಗಂ ರಘುಪತಿಗದಿತಂ
ಪೂರ್ವಮೇವಾಧಿಗಮ್ಯ
ಶ್ರದ್ಧಾಭಕ್ತಿಪ್ರಶಾಂತಾ ಹೃದಿ ರಘುತಿಲಕಂ
ಭಾವಯಂತೀ ಗತಾಸುಃ ।
ಗತ್ವಾ ಸ್ವರ್ಗಂ ಸ್ಫುರಂತೀ ದಶರಥಸಹಿತಾ
ಮೋದಮಾನಾವತಸ್ಥೇ
ಮಾತಾ ಶ್ರೀಲಕ್ಷ್ಮಣಸ್ಯಾಪ್ಯತಿವಿಮಲಮತಿಃ
ಪ್ರಾಪ ಭುರ್ತುಃ ಸಮೀಪಮ್ ॥
ಅನುವಾದ
ಕೈಕೆಯಿಯೂ ಕೂಡ ರಘುನಾಥನು ಮೊದಲು ಚಿತ್ರಕೂಟ ಪರ್ವತದಲ್ಲಿ ತಿಳಿಸಿದ ಯೋಗವನ್ನು ಹೃದಯಂಗಮ ಮಾಡಿ ಕೊಂಡು ಶ್ರದ್ಧಾ-ಭಕ್ತಿಭಾವಗಳಿಂದ ಶಾಂತಿಪೂರ್ವಕ ಹೃದಯದಲ್ಲಿ ರಘುಕುಲತಿಲಕ ಭಗವಾನ್ ಶ್ರೀರಾಮನನ್ನು ಧ್ಯಾನಿಸುತ್ತಾ ಪ್ರಾಣತ್ಯಾಗ ಮಾಡಿ ಸ್ವರ್ಗಲೋಕಕ್ಕೆ ಹೋಗಿ ದಶರಥನ ಸಂಗಡ ಸುಶೋಭಿತಳಾಗಿ ಆನಂದದಿಂದ ಇರುತ್ತಿದ್ದಳು. ಇದೇ ಪ್ರಕಾರ ಶ್ರೀಲಕ್ಷ್ಮಣನ ತಾಯಿ ಅತ್ಯಂತ ವಿಮಲಮತಿಯಾದ ಸುಮಿತ್ರೆಯೂ ಕೂಡ ತನ್ನ ಪತಿಯ ಸಾಮೀಪ್ಯವನ್ನು ಪಡೆದುಕೊಂಡಳು. ॥84॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಉತ್ತರಕಾಂಡೇ ಸಪ್ತಮಃ ಸರ್ಗಃ ॥7॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಉತ್ತರಕಾಂಡದಲ್ಲಿ ಏಳನೆಯ ಸರ್ಗವು ಮುಗಿಯಿತು.