೦೬

[ಆರನೆಯ ಸರ್ಗ]

ಭಾಗಸೂಚನಾ

ಲವಣಾಸುರ ವಧೆ, ಭಗವಾನ್ ಶ್ರೀರಾಮನ ಯಜ್ಞಕ್ಕೆ ಕುಶ-ಲವರೊಂದಿಗೆ ವಾಲ್ಮೀಕಿಗಳ ಆಗಮನ, ಕುಶನಿಗೆ ಪರಮಾರ್ಥೋಪದೇಶ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಏಕದಾ ಮುನಯಃ ಸರ್ವೇ ಯಮುನಾತೀರವಾಸಿನಃ ।
ಆಜಗ್ಮೂ ರಾಘವಂ ದ್ರಷ್ಟುಂ ಭಯಾಲ್ಲವಣರಕ್ಷಸಃ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹಿಮಗಿರಿನಂದಿನಿ! ಒಂದುದಿನ ಯಮುನಾ ತೀರದಲ್ಲಿರುವ ಸಮಸ್ತ ಮುನಿಜನರು ಲವಣಾಸುರನಿಂದ ಭಯಭೀತರಾಗಿ ಶ್ರೀರಾಮಚಂದ್ರನ ದರ್ಶನ ಮಾಡುವುದಕ್ಕಾಗಿ ಬಂದರು. ॥1॥

(ಶ್ಲೋಕ-2)

ಮೂಲಮ್

ಕೃತ್ವಾಗ್ರೇ ತು ಮುನಿಶ್ರೇಷ್ಠಂ ಭಾರ್ಗವಂ ಚ್ಯವನಂ ದ್ವಿಜಾಃ ।
ಅಸಂಖ್ಯಾತಾಃ ಸಮಾಯಾತಾ ರಾಮಾದಭಯಕಾಂಕ್ಷಿಣಃ ॥

ಅನುವಾದ

ಆ ಅಗಣಿತ ಮುನಿಗಳು ಮುನಿಶ್ರೇಷ್ಠ ಭೃಗುಪುತ್ರ ಚ್ಯವನರನ್ನು ಮುಖಂಡರನ್ನಾಗಿ ಮಾಡಿಕೊಂಡು ಭಗವಾನ್ ರಾಮನಿಂದ ಅಭಯದ ಆಕಾಂಕ್ಷೆಯನ್ನಿಟ್ಟುಕೊಂಡು ಬಂದರು. ॥2॥

(ಶ್ಲೋಕ-3)

ಮೂಲಮ್

ತಾನ್ಪೂಜಯಿತ್ವಾ ಪರಯಾ ಭಕ್ತ್ಯಾ ರಘುಕುಲೋತ್ತಮಃ ।
ಉವಾಚ ಮಧುರಂ ವಾಕ್ಯಂ ಹರ್ಷಯನ್ಮುನಿಮಂಡಲಮ್ ॥

ಅನುವಾದ

ರಘುಕುಲಶ್ರೇಷ್ಠ ಶ್ರೀರಾಮನು ಆ ಮುನೀಶ್ವರರನ್ನು ಅತ್ಯಂತ ಭಕ್ತಿಭಾವದಿಂದ ಸತ್ಕರಿಸಿ ಅವರನ್ನು ಸಂತೋಷಪಡಿಸುತ್ತಾ ಮಧುರವಾಣಿಯಿಂದ ಹೇಳಿದನು. ॥3॥

(ಶ್ಲೋಕ-4)

ಮೂಲಮ್

ಕರವಾಣಿ ಮುನಿಶ್ರೇಷ್ಠಾಃ ಕಿಮಾಗಮನಕಾರಣಮ್ ।
ಧನ್ಯೋಽಸ್ಮಿ ಯದಿ ಯೂಯಂ ಮಾಂ ಪ್ರೀತ್ಯಾ ದ್ರಷ್ಟುಮಿಹಾಗತಾಃ ॥

ಅನುವಾದ

‘‘ಹೇ ಮುನಿಶ್ರೇಷ್ಠರೇ! ತಾವು ಇಲ್ಲಿಗೆ ದಯಮಾಡಿಸಿದ ಕಾರಣವೇನು? ನೀವು ನನಗೆ ಯಾವ ಆಜ್ಞೆಮಾಡುವಿರೋ ಅದನ್ನು ಹಾಗೆಯೇ ನಾನು ಮಾಡುವೆನು. ತಾವುಗಳು ನನ್ನನ್ನು ಪ್ರೀತಿ ಪೂರ್ವಕ ನೋಡುವುದಕ್ಕಾಗಿಯೇ ಇಲ್ಲಿಗೆ ಬಂದಿದ್ದರೆ, ನಾನು ಧನ್ಯನಾದೆ. ॥4॥

(ಶ್ಲೋಕ-5)

ಮೂಲಮ್

ದುಷ್ಕರಂ ಚಾಪಿ ಯತ್ಕಾರ್ಯಂ ಭವತಾಂ ತತ್ಕರೋಮ್ಯಹಮ್ ।
ಆಜ್ಞಾಪಯಂತು ಮಾಂ ಭೃತ್ಯಂ ಬ್ರಾಹ್ಮಣಾ ದೈವತಂ ಹಿ ಮೇ ॥

ಅನುವಾದ

ತಮ್ಮ ಯಾವುದೇ ಅತ್ಯಂತ ಕಠಿಣಕಾರ್ಯವಾದರೂ ಸಹ ನಾನು ಅದನ್ನು ಖಂಡಿತವಾಗಿ ಮಾಡುವೆನು. ತಾವು ಸೇವಕನಾದ ನನಗೆ ಆಜ್ಞೆ ಕೊಡಿರಿ, ಬ್ರಾಹ್ಮಣರೇ ನನ್ನ ಇಷ್ಟದೈವರಾಗಿದ್ದಾರೆ’’ ॥5॥

(ಶ್ಲೋಕ-6)

ಮೂಲಮ್

ತಚ್ಛ್ರುತ್ವಾ ಸಹಸಾ ಹೃಷ್ಟಶ್ಚ್ಯವನೋ ವಾಕ್ಯಮಬ್ರವೀತ್ ।
ಮಧುನಾಮಾ ಮಹಾದೈತ್ಯಃ ಪುರಾ ಕೃತಯುಗೇ ಪ್ರಭೋ ॥

(ಶ್ಲೋಕ-7)

ಮೂಲಮ್

ಆಸೀದತೀವ ಧರ್ಮಾತ್ಮಾ ದೇವಬ್ರಾಹ್ಮಣ ಪೂಜಕಃ ।
ತಸ್ಯ ತುಷ್ಟೋ ಮಹಾದೇವೋ ದದೌ ಶೂಲಮನುತ್ತಮಮ್ ॥

ಅನುವಾದ

ಭಗವಾನ್ ಶ್ರೀರಾಮನ ಈ ಮಾತನ್ನು ಕೇಳಿ ಮಹರ್ಷಿ ಚ್ಯವನರು ಸಂತೋಷಚಿತ್ತರಾಗಿ ಹೇಳಿದರು ‘‘ಪ್ರಭು! ಮೊದಲು ಕೃತಯುಗದಲ್ಲಿ ಬಹುಧರ್ಮಾತ್ಮನೂ, ದೇವತೆಗಳ ಹಾಗೂ ಬ್ರಾಹ್ಮಣರ ಭಕ್ತನಾದ ಮಧು ಎಂಬ ಓರ್ವ ಮಹಾದೈತ್ಯನಿದ್ದನು. ಅವನ ಮೇಲೆ ಪ್ರಸನ್ನನಾಗಿ ಮಹಾದೇವನು ಅವನಿಗೆ ಒಂದು ಅತ್ಯುತ್ತಮವಾದ ತ್ರಿಶೂಲವನ್ನು ಕೊಟ್ಟನು. ॥6-7॥

(ಶ್ಲೋಕ-8)

ಮೂಲಮ್

ಪ್ರಾಹ ಚಾನೇನ ಯಂ ಹಂಸಿ ಸ ತು ಭಸ್ಮೀಭವಿಷ್ಯತಿ ।
ರಾವಣಸ್ಯಾನುಜಾ ಭಾರ್ಯಾ ತಸ್ಯ ಕುಂಭೀನಸೀ ಶ್ರುತಾ ॥

ಅನುವಾದ

ಹಾಗೂ ಹೇಳಿದನು ‘‘ನೀನು ಇದರಿಂದ ಯಾರ ಮೇಲೆ ಪ್ರಹಾರ ಮಾಡುವೆಯೋ ಅವನು ಭಸ್ಮೀಭೂತನಾಗಿ ಹೋಗುವನು. ರಾವಣನ ತಂಗಿ ಕುಂಭೀನಸೀಯು ಅವನ ಪತ್ನಿಯಾಗಿದ್ದಳು’’ ಎಂದು ಹೇಳಲಾಗುತ್ತದೆ. ॥8॥

(ಶ್ಲೋಕ-9)

ಮೂಲಮ್

ತಸ್ಯಾಂ ತು ಲವಣೋ ನಾಮ ರಾಕ್ಷಸೋ ಭೀಮವಿಕ್ರಮಃ ।
ಆಸೀದ್ದುರಾತ್ಮಾ ದುರ್ಧರ್ಷೋ ದೇವಬ್ರಾಹ್ಮಣಹಿಂಸಕಃ ॥

ಅನುವಾದ

ಅವಳಿಂದ ಅವನಿಗೆ ಮಹಾ ಪರಾಕ್ರಮಿಯೂ ದುಷ್ಟಚಿತ್ತನೂ ದುರ್ಜಯನೂ, ದೇವತೆಗಳಿಗೆ, ಬ್ರಾಹ್ಮಣರಿಗೆ ದುಃಖವನ್ನುಂಟು ಮಾಡುವವನೂ ಆದ ಲವಣನೆಂಬ ರಾಕ್ಷಸನು ಹುಟ್ಟಿದನು. ॥9॥

(ಶ್ಲೋಕ-10)

ಮೂಲಮ್

ಪೀಡಿತಾಸ್ತೇನ ರಾಜೇಂದ್ರ ವಯಂ ತ್ವಾಂ ಶರಣಂ ಗತಾಃ ।
ತಚ್ಛ್ರುತ್ವಾ ರಾಘವೋಽಪ್ಯಾಹ ಮಾ ಭೀರ್ವೋ ಮುನಿಪುಂಗವಾಃ ॥

ಅನುವಾದ

ಹೇ ರಾಜೇಂದ್ರಾ! ಅವನಿಂದ ಬಹುವಾಗಿ ಪೀಡಿತರಾಗಿ ನಾವು ನಿನಗೆ ಶರಣಾಗಿ ಬಂದಿದ್ದೇವೆ.’’ ಇದನ್ನು ಕೇಳಿ ರಘುನಾಥನು ಹೇಳಿದನು ‘‘ಹೇ ಮುನಿಶ್ರೇಷ್ಠರೇ ! ನೀವುಗಳು ಯಾವ ರೀತಿಯಿಂದಲೂ ಭಯ ಪಡಬೇಡಿರಿ. ॥10॥

(ಶ್ಲೋಕ-11)

ಮೂಲಮ್

ಲವಣಂ ನಾಶಯಿಷ್ಯಾಮಿ ಗಚ್ಛಂತು ವಿಗತಜ್ವರಾಃ ।
ಇತ್ಯುಕ್ತ್ವಾ ಪ್ರಾಹ ರಾಮೋಽಪಿ ಭ್ರಾತೄನ್ ಕೋ ವಾ ಹನಿಷ್ಯತಿ ॥

(ಶ್ಲೋಕ-12)

ಮೂಲಮ್

ಲವಣಂ ರಾಕ್ಷಸಂ ದದ್ಯಾದ್ ಬ್ರಾಹ್ಮಣೇಭ್ಯೋಽಭಯಂ ಮಹತ್ ।
ತಚ್ಛ್ರುತ್ವಾ ಪ್ರಾಂಜಲಿಃ ಪ್ರಾಹ ಭರತೋ ರಾಘವಾಯ ವೈ ॥

ಅನುವಾದ

ನೀವು ನಿಶ್ಚಿಂತರಾಗಿ ತೆರಳಿರಿ. ನಾನು ಲವಣನನ್ನು ಖಂಡಿತವಾಗಿ ಸಂಹರಿಸುವೆನು’’ ಎಂದು ಮುನೀಶ್ವರರಿಗೆ ಅಭಯವನ್ನಿತ್ತು ಭಗವಾನ್ ಶ್ರೀರಾಮನು ತನ್ನ ಸಹೋದರರನ್ನು ಕೇಳಿದನು ‘‘ನಿಮ್ಮಲ್ಲಿ ಯಾರು ಲವಣಾಸುರನನ್ನು ಕೊಲ್ಲುವಿರಿ ಮತ್ತು ಬ್ರಾಹ್ಮಣರಿಗೆ ಮಹಾನ್ ಅಭಯಕೊಡುವಿರಿ? ಇದನ್ನು ಕೇಳಿ ಭರತನು ಕೈಮುಗಿದುಕೊಂಡು ರಘುನಾಥನಲ್ಲಿ ಹೇಳಿದನು. ॥11-12॥

(ಶ್ಲೋಕ-13)

ಮೂಲಮ್

ಅಹಮೇವ ಹನಿಷ್ಯಾಮಿ ದೇವಾಜ್ಞಾಪಯ ಮಾಂ ಪ್ರಭೋ ।
ತತೋ ರಾಮಂ ನಮಸ್ಕೃತ್ಯ ಶತ್ರುಘ್ನೋ ವಾಕ್ಯಮಬ್ರವೀತ್ ॥

ಅನುವಾದ

‘‘ಅಣ್ಣದೇವಾ! ಲವಣನನ್ನು ನಾನೇ ಕೊಲ್ಲುವೆನು. ಪ್ರಭು! ಇದಕ್ಕೆ ನನಗೆ ಅಪ್ಪಣೆ ಕೊಡು.’’ ಮತ್ತೆ ಶತ್ರುಘ್ನನು ರಾಮಚಂದ್ರನಿಗೆ ನಮಸ್ಕರಿಸಿ ಹೇಳಿದನು ॥13॥

(ಶ್ಲೋಕ-14)

ಮೂಲಮ್

ಲಕ್ಷ್ಮಣೇನ ಮಹತ್ಕಾರ್ಯಂ ಕೃತಂ ರಾಘವ ಸಂಯುಗೇ ।
ನಂದಿಗ್ರಾಮೇ ಮಹಾಬುದ್ಧಿರ್ಭರತೋ ದುಃಖಮನ್ವಭೂತ್ ॥

ಅನುವಾದ

‘‘ಹೇ ರಾಘವಾ! ಲಕ್ಷ್ಮಣನು ಯುದ್ಧದಲ್ಲಿ ಬಹು ದೊಡ್ಡ ಕಾರ್ಯ ಮಾಡಿಬಿಟ್ಟಿದ್ದಾನೆ, ಮಹಾ ಬುದ್ಧಿವಂತನಾದ ಭರತನೂ ಕೂಡ ನಂದಿಗ್ರಾಮದಲ್ಲಿ ಇದ್ದು ಬಹಳ ಕಷ್ಟ ಸಹಿಸಿದ್ದಾನೆ. ॥14॥

(ಶ್ಲೋಕ-15)

ಮೂಲಮ್

ಅಹಮೇವ ಗಮಿಷ್ಯಾಮಿ ಲವಣಸ್ಯ ವಧಾಯ ಚ ।
ತ್ವತ್ಪ್ರಸಾದಾದ್ರಘುಶ್ರೇಷ್ಠ ಹನ್ಯಾಂ ತಂ ರಾಕ್ಷಸಂ ಯುಧಿ ॥

ಅನುವಾದ

ಈಗ ಲವಣನನ್ನು ವಧಿಸುವುದಕ್ಕೆ ನಾನೇ ಹೋಗುವೆನು. ಹೇ ರಘುಶ್ರೇಷ್ಠ! ನಿನ್ನ ಕೃಪೆಯಿಂದ ನಾನು ಆ ರಾಕ್ಷಸನನ್ನು ಯುದ್ಧದಲ್ಲಿ ಖಂಡಿತವಾಗಿ ಸಂಹಾರ ಮಾಡುವೆನು.’’॥15॥

(ಶ್ಲೋಕ-16)

ಮೂಲಮ್

ತಚ್ಛ್ರುತ್ವಾ ಸ್ವಾಂಕಮಾರೋಪ್ಯ ಶತ್ರುಘ್ನಂ ಶತ್ರುಸೂದನಃ ।
ಪ್ರಾಹಾದ್ಯೈವಾಭಿಷೇಕ್ಷ್ಯಾಮಿ ಮಥುರಾರಾಜ್ಯಕಾರಣಾತ್ ॥

ಅನುವಾದ

ಶತ್ರುಘ್ನನ ಈ ವಚನಗಳನ್ನು ಕೇಳಿ ಶತ್ರುದಮನ ರಘುನಾಥನು ಆತನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಹೇಳಿದನು - ‘‘ನಾನು ಇಂದೇ ನಿನಗೆ (ಲವಣನ ರಾಜಧಾನಿ) ಮಥುರಾ ರಾಜ್ಯದ ಪಟ್ಟಾಭಿಷೇಕ ಮಾಡುವೆನು.’’ ॥16॥

(ಶ್ಲೋಕ-17)

ಮೂಲಮ್

ಆನಾಯ್ಯ ಚ ಸುಸಂಭಾರಾಲ್ಲಕ್ಷ್ಮಣೇನಾಭಿಷೇಚನೇ ।
ಅನಿಚ್ಛಂತಮಪಿ ಸ್ನೇಹಾದಭಿಷೇಕಮಕಾರಯತ್ ॥

ಅನುವಾದ

ಈ ರೀತಿ ಹೇಳಿ ಲಕ್ಷ್ಮಣನಿಂದ ಅಭಿಷೇಕದ ಸಾಮಗ್ರಿಗಳನ್ನು ತರಿಸಿ ಶತ್ರುಘ್ನನಿಗೆ ಇಚ್ಛೆ ಇಲ್ಲದಿದ್ದರೂ ಕೂಡ ಶ್ರೀರಾಮನು ಪ್ರೀತಿಯಿಂದ ಆತನಿಗೆ ಪಟ್ಟಕಟ್ಟಿದನು. ॥17॥

(ಶ್ಲೋಕ-18)

ಮೂಲಮ್

ದತ್ತ್ವಾ ತಸ್ಮೈ ಶರಂ ದಿವ್ಯಂ ರಾಮಃ ಶತ್ರುಘ್ನಮಬ್ರವೀತ್ ।
ಅನೇನ ಜಹಿ ಬಾಣೇನ ಲವಣಂ ಲೋಕಕಂಟಕಮ್ ॥

ಅನುವಾದ

ಅನಂತರ ಅವನಿಗೆ ದಿವ್ಯಬಾಣವನ್ನು ಕೊಟ್ಟು ಹೇಳಿದನು — ‘‘ನೀನು ಲೋಕ ಕಂಟಕನಾದ ಲವಣಾಸುರನನ್ನು ಈ ಬಾಣದಿಂದ ಕೊಂದು ಬಿಡು. ॥18॥

(ಶ್ಲೋಕ-19)

ಮೂಲಮ್

ಸ ತು ಸಂಪೂಜ್ಯ ತಚ್ಛೂಲಂ ಗೇಹೇ ಗಚ್ಛತಿ ಕಾನನಮ್ ।
ಭಕ್ಷಣಾರ್ಥಂ ತು ಜಂತೂನಾಂ ನಾನಾಪ್ರಾಣಿವಧಾಯ ಚ ॥

ಅನುವಾದ

ರಾಕ್ಷಸ ಲವಣನುಮನೆಯಲ್ಲಿಯೇ ಆ ತ್ರಿಶೂಲವನ್ನು ಪೂಜಿಸಿ ಅದನ್ನು ಮನೆಯಲ್ಲಿಯೇ ಇಟ್ಟು ನಾನಾ ಪ್ರಕಾರದ ಜೀವಿಗಳನ್ನು ತಿನ್ನುವುದಕ್ಕಾಗಿ ಹಾಗೂ ಕೊಲ್ಲುವುದಕ್ಕಾಗಿ ಕಾಡಿಗೆ ಹೋಗುತ್ತಾ ಇರುತ್ತಾನೆ. ॥19॥

(ಶ್ಲೋಕ-20)

ಮೂಲಮ್

ಸ ತು ನಾಯಾತಿ ಸದನಂ ಯಾವದ್ವನಚರೋ ಭವೇತ್ ।
ತಾವದೇವ ಪುರದ್ವಾರಿ ತಿಷ್ಠ ತ್ವಂ ಧೃತಕಾರ್ಮುಕಃ ॥

ಅನುವಾದ

ಆದುದರಿಂದ ಅವನು ಹಿಂದಿರುಗಿ ಮನೆಗೆ ಬರದೇ, ಕಾಡಿನಲ್ಲಿಯೇ ಇರುವಾಗ, ಅವನಿಗಿಂತ ಮೊದಲೇ ನೀನು ನಗರದ ಹೆಬ್ಬಾಗಿಲಿನಲ್ಲಿ ಧನುರ್ಧಾರಿಯಾಗಿ ನಿಂತಿರು. ॥20॥

(ಶ್ಲೋಕ-21)

ಮೂಲಮ್

ಯೋತ್ಸ್ಯತೇ ಸ ತ್ವಯಾ ಕ್ರುದ್ಧಸ್ತದಾ ವಧ್ಯೋ ಭವಿಷ್ಯತಿ ।
ತಂ ಹತ್ವಾ ಲವಣಂ ಕ್ರೂರಂ ತದ್ವನಂ ಮಧುಸಂಜ್ಞಿತಮ್ ॥

(ಶ್ಲೋಕ-22)

ಮೂಲಮ್

ನಿವೇಶ್ಯ ನಗರಂ ತತ್ರ ತಿಷ್ಠ ತ್ವಂ ಮೇಽನುಶಾಸನಾತ್ ।
ಅಶ್ವಾನಾಂ ಪಂಚಸಾಹಸ್ರಂ ರಥಾನಾಂ ಚ ತದರ್ಧಕಮ್ ॥

(ಶ್ಲೋಕ-23)

ಮೂಲಮ್

ಗಜಾನಾಂ ಷಟ್ ಶತಾನೀಹ ಪತ್ತೀನಾಮಯುತತ್ರಯಮ್ ।
ಆಗಮಿಷ್ಯತಿ ಪಶ್ಚಾತ್ತ್ವಮಗ್ರೇ ಸಾಧಯ ರಾಕ್ಷಸಮ್ ॥

ಅನುವಾದ

ಹಿಂದಿರುಗಿದಾಗ ಅವನು ಕ್ರೋಧದಿಂದ ನಿನ್ನೊಡನೆ ಹೋರಾಡುವನು. ಆಗಲೆ ಅವನು ಸತ್ತು ಹೋಗುವನು. ಈ ಪ್ರಕಾರ ಮಹಾಕ್ರೂರಿಯಾದ ಲವಣಾಸುರನನ್ನು ವಧಿಸಿ ಅವನ ಮಧುವನದಲ್ಲಿ ನಗರವನ್ನು ನೆಲೆಗೊಳಿಸಿ, ನನ್ನ ಆಜ್ಞೆ ಯಂತೆ ಅಲ್ಲಿಯೇ ಇರು. ನೀನು ಮೊದಲು ಹೋಗಿ ಆ ರಾಕ್ಷಸನನ್ನು ಕೊಂದುಬಿಡು. ನಂತರ ನಿನ್ನ ಹಿಂದೆಯೇ ಅಲ್ಲಿಗೆ ಐದು ಸಾವಿರ ಕುದುರೆಗಳು, ಅವುಗಳಲ್ಲಿ ಅರ್ಧದಷ್ಟು (ಎರಡೂವರೆ ಸಾವಿರ) ರಥ, ಆರು ನೂರು ಆನೆ ಮತ್ತು ಮೂವತ್ತು ಸಾವಿರ ಪದಾತಿಗಳೂ ಸಹ ಬರುವರು’’ ॥21-23॥

(ಶ್ಲೋಕ-24)

ಮೂಲಮ್

ಇತ್ಯುಕ್ತ್ವಾ ಮೂರ್ಧ್ನ್ಯವಘ್ರಾಯ ಪ್ರೇಷಯಾಮಾಸ ರಾಘವಃ ।
ಶತ್ರುಘ್ನಂ ಮುನಿಭಿಃ ಸಾರ್ಧಮಾಶೀರ್ಭಿರಭಿನಂದ್ಯ ಚ ॥

ಅನುವಾದ

ಹೀಗೆ ಹೇಳಿ ಶ್ರೀರಘುನಾಥನು ಶತ್ರುಘ್ನನ ಶಿರವನ್ನಾಘ್ರಾಣಿಸಿ, ಅವನನ್ನು ಆಶೀರ್ವದಿಸಿದನು. ಪುನಃ ಮುನಿಗಳ ಸಹಿತ ಆಶೀರ್ವಾದದೊಂದಿಗೆ ಅಭಿನಂದಿಸಿ ಬೀಳ್ಕೊಟ್ಟನು. ॥24॥

(ಶ್ಲೋಕ-25)

ಮೂಲಮ್

ಶತ್ರುಘ್ನೋಽಪಿ ತಥಾ ಚಕ್ರೇ ಯಥಾ ರಾಮೇಣ ಚೋದಿತಃ ।
ಹತ್ವಾ ಮಧುಸುತಂ ಯುದ್ಧೇ ಮಥುರಾಮಕರೋತ್ಪುರೀಮ್ ॥

(ಶ್ಲೋಕ-26)

ಮೂಲಮ್

ಸ್ಫೀತಾಂ ಜನಪದಾಂ ಚಕ್ರೇ ಮಥುರಾಂ ದಾನಮಾನತಃ ।
ಸೀತಾಪಿ ಸುಷುವೇ ಪುತ್ರೌ ದ್ವೌ ವಾಲ್ಮೀಕೇರಥಾಶ್ರಮೇ ॥

ಅನುವಾದ

ಶತ್ರುಘ್ನನು ಭಗವಾನ್ ಶ್ರೀರಾಮನ ಅಪ್ಪಣೆಯಂತೆ ಮಾಡಿದನು. ಅವನು ಲವಣಾಸುರನನ್ನು ಕೊಂದು, ಮಥುರಾ ಪಟ್ಟಣವನ್ನು ನೆಲೆಗೊಳಿಸಿದನು ಹಾಗೂ ದಾನ-ಮಾನಗಳಿಂದ ಜನರನ್ನು ಸಂತುಷ್ಟಗೊಳಿಸಿ ಮಥುರೆಯನ್ನು ಒಂದು ಸಮೃದ್ಧಶಾಲೀ ನಗರವನ್ನಾಗಿ ಮಾಡಿದನು. ಈ ಮಧ್ಯೆ ಸೀತಾದೇವಿಗೆ ವಾಲ್ಮೀಕಿ ಋಷಿಗಳ ಆಶ್ರಮದಲ್ಲಿ ಇಬ್ಬರು ಅವಳಿ-ಜವಳಿ ಪುತ್ರರು ಜನಿಸಿದರು. ॥25-26॥

(ಶ್ಲೋಕ-27)

ಮೂಲಮ್

ಮುನಿಸ್ತಯೋರ್ನಾಮ ಚಕ್ರೇ ಕುಶೋ ಜ್ಯೇಷ್ಠೋಽನುಜೋ ಲವಃ ।
ಕ್ರಮೇಣ ವಿದ್ಯಾಸಂಪನ್ನೌ ಸೀತಾಪುತ್ರೌ ಬಭೂವತುಃ ॥

ಅನುವಾದ

ಋಷಿಗಳು ಅವರುಗಳಲ್ಲಿ ದೊಡ್ಡವನಿಗೆ ಕುಶನೆಂದೂ, ಚಿಕ್ಕವನಿಗೆ ಲವನೆಂದೂ ಹೆಸರು ಇಟ್ಟರು. ಕ್ರಮೇಣ ಸೀತಾದೇವಿಯ ಆ ಇಬ್ಬರು ಪುತ್ರರೂ ವಿದ್ಯಾಸಂಪನ್ನರಾದರು. ॥27॥

(ಶ್ಲೋಕ-28)

ಮೂಲಮ್

ಉಪನೀತೌ ಚ ಮುನಿನಾ ವೇದಾಧ್ಯಯನತತ್ಪರೌ ।
ಕೃತ್ಸ್ನಂ ರಾಮಾಯಣಂ ಪ್ರಾಹ ಕಾವ್ಯಂ ಬಾಲಕಯೋರ್ಮುನಿಃ ॥

ಅನುವಾದ

ಮುನಿಗಳು ಉಪನಯನ ಸಂಸ್ಕಾರ ಮಾಡಿದ ನಂತರ ಅವರು ವೇದಾಧ್ಯಯನದಲ್ಲಿ ತತ್ಪರರಾದರು. ವಾಲ್ಮೀಕಿಗಳು ಆ ಇಬ್ಬರು ಬಾಲಕರಿಗೂ ಸಂಪೂರ್ಣ ರಾಮಾಯಣ ಕಾವ್ಯವನ್ನು ಅಭ್ಯಾಸ ಮಾಡಿಸಿದರು. ॥28॥

(ಶ್ಲೋಕ-29)

ಮೂಲಮ್

ಶಂಕರೇಣ ಪುರಾ ಪ್ರೋಕ್ತಂ ಪಾರ್ವತ್ಯೈ ಪುರಹಾರಿಣಾ ।
ವೇದೋಪಬೃಂಹಣಾರ್ಥಾಯ ತಾವಗ್ರಾಹಯತ ಪ್ರಭುಃ ॥

ಅನುವಾದ

ಹಿಂದಿನ ಕಾಲದಲ್ಲಿ ಇದನ್ನು ತ್ರಿಪುರಾಂತಕ ಭಗವಾನ್ ಶ್ರೀಶಂಕರನು ಪಾರ್ವತಿಗೆ ಹೇಳಿದ್ದನು. ಸಮರ್ಥರಾದ ಮುನಿ ವಾಲ್ಮೀಕಿಗಳು ವೇದಗಳ ಜ್ಞಾನವನ್ನು ವಿಶದಗೊಳಿಸಲಿಕ್ಕಾಗಿ ಅದೇ ಕಥೆಯನ್ನು ಕಾವ್ಯವಾಗಿ ರಚಿಸಿ ಆ ಬಾಲಕರಿಗೆ ಬೋಧಿಸಿದರು. ॥29॥

(ಶ್ಲೋಕ-30)

ಮೂಲಮ್

ಕುಮಾರೌ ಸ್ವರಸಂಪನ್ನೌ ಸುಂದರಾವಶ್ವಿನಾವಿವ ।
ತಂತ್ರೀತಾಲಸಮಾಯುಕ್ತೌ ಗಾಯಂತೌ ಚೇರತುರ್ವನೇ ॥

ಅನುವಾದ

ಅಶ್ವಿನಿಕುಮಾರರಂತೆ ಅತ್ಯಂತ ಸುಂದರವಾದ ಆ ಬಾಲಕರು ವೀಣೆ ನುಡಿಸುತ್ತಾ, ಸ್ವರ ಸಹಿತವಾಗಿ ಅದನ್ನು ಹಾಡುತ್ತಾ ವನದಲ್ಲಿ ಸಂಚರಿಸುತ್ತಾ ಇದ್ದರು. ॥30॥

(ಶ್ಲೋಕ-31)

ಮೂಲಮ್

ತತ್ರ ತತ್ರ ಮುನೀನಾಂ ತೌ ಸಮಾಜೇ ಸುರರೂಪಿಣೌ ।
ಗಾಯಂತಾವಭಿತೋ ದೃಷ್ಟ್ವಾ ವಿಸ್ಮಿತಾ ಮುನಯೋಽಬ್ರುವನ್ ॥

ಅನುವಾದ

ಆ ದೇವತಾ ಸ್ವರೂಪಿಗಳಾದ ಬಾಲಕರು ಅಲ್ಲಲ್ಲಿ ಮುನಿಗಳ ಸಮಾಜದಲ್ಲಿ ಹಾಡುವುದನ್ನು ನೋಡಿ ಕೇಳಿ ಆ ಮುನಿಗಳು ಅತ್ಯಂತ ಆಶ್ಚರ್ಯಪಟ್ಟು ತಮ್ಮ ತಮ್ಮಲ್ಲೇ ಹೀಗೆ ಮಾತನಾಡಿಕೊಳ್ಳುತ್ತಿದ್ದರು ॥31॥

(ಶ್ಲೋಕ-32)

ಮೂಲಮ್

ಗಂಧರ್ವೇಷ್ವಿವ ಕಿನ್ನರೇಷು ಭುವಿ ವಾ ದೇವೇಷು ದೇವಾಲಯೇ
ಪಾತಾಲೇಷ್ವಥವಾ ಚತುಮುಖಗೃಹೇ ಲೋಕೇಷು ಸರ್ವೇಷು ಚ ।
ಅಸ್ಮಾ ಭಿಶ್ಚಿರಜೀವಿಭಿಶ್ಚಿರತರಂ ದೃಷ್ಟಾ ದಿಶಃ ಸರ್ವತೋ
ನಾಜ್ಞಾಯೀದೃಶಗೀತವಾದ್ಯಗರಿಮಾ ನಾದರ್ಶಿ ನಾಶ್ರಾವಿ ಚ ॥

ಅನುವಾದ

‘‘ಚಿರಂಜೀವಿಗಳಾದ ನಾವು ಬಹಳ ಕಾಲದಿಂದ ಎಲ್ಲಾ ದಿಕ್ಕುಗಳನ್ನು ನೋಡಿದೆವು, ಆದರೆ ಗಂಧರ್ವ, ಕಿನ್ನರ, ಭೂರ್ಲೋಕ, ಸ್ವರ್ಗದಲ್ಲಿರುವ ದೇವತೆಗಳಲ್ಲಿ, ದೇವಾಲಯ, ಪಾತಾಳ ಅಥವಾ ಬ್ರಹ್ಮಲೋಕ ಮುಂತಾದ ಎಲ್ಲ ಲೋಕಗಳಲ್ಲಿಯೂ ಕೂಡ ಹಾಡುವ-ನುಡಿಸುವ ಇಂತಹ ಕುಶಲತೆ ಎಲ್ಲಿಯೂ ನೋಡಲಿಲ್ಲ, ಕೇಳಿಯೂ ಇಲ್ಲ.’’ ॥32॥

(ಶ್ಲೋಕ-33)

ಮೂಲಮ್

ಏವಂ ಸ್ತುವದ್ಭಿರಖಿಲೈರ್ಮುನಿಭಿಃ ಪ್ರತಿವಾಸರಮ್ ।
ಆಸಾತೇ ಸುಖಮೇಕಾಂತೇ ವಾಲ್ಮೀಕೇರಾಶ್ರಮೇ ಚಿರಮ್ ॥

ಅನುವಾದ

ಈ ಪ್ರಕಾರ ಪ್ರತಿದಿನವೂ ಪ್ರಶಂಸೆ ಮಾಡುವ ಸಮಸ್ತ ಮುನಿಗಳ ಜೊತೆಯಲ್ಲಿ ಆ ಇಬ್ಬರು ಬಾಲಕರೂ ಬಹಳ ಸಮಯದವರೆಗೆ ಶ್ರೀವಾಲ್ಮೀಕಿಯ ಏಕಾಂತವಾದ ಆಶ್ರಮದಲ್ಲಿ ಸುಖವಾಗಿ ಇರುತ್ತಿದ್ದರು. ॥33॥

(ಶ್ಲೋಕ-34)

ಮೂಲಮ್

ಅಥ ರಾಮೇಽಶ್ವಮೇಧಾದೀಂಶ್ಚಕಾರ ಬಹುದಕ್ಷಿಣಾನ್ ।
ಯಜ್ಞಾನ್ ಸ್ವರ್ಣಮಯೀಂ ಸೀತಾಂ ವಿಧಾಯ ವಿಪುಲದ್ಯುತಿಃ ॥

ಅನುವಾದ

ಈ ಕಡೆ ಪರಮ ತೇಜಸ್ವಿಯಾದ ಶ್ರೀರಾಮನು ಬಂಗಾರದ ಸೀತೆಯನ್ನು ಮಾಡಿಸಿ ಅಶ್ವಮೇಧ ಮುಂತಾದ ಬಹಳ ಭಾರೀ ದೊಡ್ಡ-ದೊಡ್ಡ ದಕ್ಷಿಣೆಗಳಿಂದ ಕೂಡಿದ ಯಜ್ಞಗಳನ್ನು ಮಾಡಿದನು. ॥34॥

(ಶ್ಲೋಕ-35)

ಮೂಲಮ್

ತಸ್ಮಿನ್ವಿತಾನೇ ಋಷಯಃ ಸರ್ವೇ ರಾಜರ್ಷಯಸ್ತಥಾ ।
ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಸಮಾಜಗ್ಮುರ್ದಿದೃಕ್ಷವಃ ॥

ಅನುವಾದ

ಆ ಯಜ್ಞ ಶಾಲೆಯಲ್ಲಿ ಯಜ್ಞೋತ್ಸವವನ್ನು ನೋಡುವುದಕ್ಕಾಗಿ ಉತ್ಸುಕರಾಗಿ ಎಲ್ಲ ಋಷಿಗಳೂ, ರಾಜರ್ಷಿಗಳೂ, ಬ್ರಾಹ್ಮಣರೂ, ಕ್ಷತ್ರಿಯರೂ ಮತ್ತು ವೈಶ್ಯರೂ ಮುಂತಾದವರೆಲ್ಲರೂ ಬಂದಿದ್ದರು. ॥35॥

(ಶ್ಲೋಕ-36)

ಮೂಲಮ್

ವಾಲ್ಮೀಕಿರಪಿ ಸಂಗೃಹ್ಯ ಗಾಯಂತೌ ತೌ ಕುಶೀಲವೌ ।
ಜಗಾಮ ಋಷಿವಾಟಸ್ಯ ಸಮೀಪಂ ಮುನಿಪುಂಗವಃ ॥

ಅನುವಾದ

ಮುನಿಶ್ರೇಷ್ಠರಾದ ವಾಲ್ಮೀಕಿಗಳೂ ಕೂಡ ಗಾನ ಮಾಡುತ್ತಾ ಕುಶ ಮತ್ತು ಲವರನ್ನು ಜೊತೆಯಲ್ಲಿ ಕರೆದುಕೊಂಡು ಅಲ್ಲಿಗೆ ಬಂದು ಮುನಿಗಳು ಇಳಿದುಕೊಂಡಿದ್ದ ಜಾಗದಲ್ಲಿ ತಂಗಿದರು. ॥36॥

(ಶ್ಲೋಕ-37)

ಮೂಲಮ್

ತತ್ರೈಕಾಂತೇ ಸ್ಥಿತಂ ಶಾಂತಂ ಸಮಾಧಿವಿರಮೇ ಮುನಿಮ್ ।
ಕುಶಃ ಪಪ್ರಚ್ಛ ವಾಲ್ಮೀಕಿಂ ಜ್ಞಾನಶಾಸ್ತ್ರಂ ಕಥಾಂತರೇ ॥

ಅನುವಾದ

ಅಲ್ಲಿ ಒಂದು ದಿವಸ ಏಕಾಂತದಲ್ಲಿ ಶಾಂತಭಾವ ದಿಂದ ಕುಳಿತಿರುವ ವಾಲ್ಮೀಕಿ ಮುನಿಗಳ ಸಮಾಧಿಯು ತೆರ ವಾದ ಬಳಿಕ, ಅವರಲ್ಲಿ ಕುಶನು ಕಥೆಯ ಮಧ್ಯದಲ್ಲಿಯೇ ಜ್ಞಾನ ಶಾಸ್ತ್ರದ ವಿಷಯವಾಗಿ ಕೇಳಿದನು ॥37॥

(ಶ್ಲೋಕ-38)

ಮೂಲಮ್

ಭಗವನ್ ಛ್ರೋತುಮಿಚ್ಛಾಮಿ ಸಂಕ್ಷೇಪಾದ್ಭವತೋಽಖಿಲಮ್ ।
ದೇಹಿನಃ ಸಂಸೃತೇರ್ಬಂಧಃ ಕಥಮುತ್ಪದ್ಯತೇ ದೃಢಃ ॥

ಅನುವಾದ

‘‘ಗುರುಗಳೇ ಜೀವಿಗೆ ಈ ಸುದೃಢವಾದ ಸಂಸಾರ ಬಂಧನವು ಹೇಗೆ ಉಂಟಾಗುತ್ತದೆ?’’ ಎಂಬುದನ್ನು ತಮ್ಮ ಮುಖಾರವಿಂದದಿಂದ ಸಂಕ್ಷೇಪವಾಗಿ ಕೇಳಲು ನಾನು ಇಷ್ಟಪಡುತ್ತೇನೆ. ॥38॥

(ಶ್ಲೋಕ-39)

ಮೂಲಮ್

ಕಥಂ ವಿಮುಚ್ಯತೇ ದೇಹೀ ದೃಢಬಂಧಾದ್ಭವಾಭಿಧಾತ್ ।
ವಕ್ತುಮರ್ಹಸಿ ಸರ್ವಜ್ಞ ಮಹ್ಯಂ ಶಿಷ್ಯಾಯ ತೇ ಮುನೇ ॥

ಅನುವಾದ

ಮತ್ತು ‘‘ಈ ಪ್ರಪಂಚವೆಂಬ ದೃಢಬಂಧನದಿಂದ ಅವನಿಗೆ ಬಿಡುಗಡೆ ಹೇಗೆ ಉಂಟಾಗುತ್ತದೆ?’’ ಮುನಿಗಳೇ! ತಾವು ಸರ್ವಜ್ಞರಾಗಿರುವಿರಿ. ಶಿಷ್ಯನಾದ ನನಗೆ ತಾವು ಈ ಸಮಗ್ರ ರಹಸ್ಯವನ್ನು ತಿಳಿಸಿರಿ. ॥39॥

(ಶ್ಲೋಕ-40)

ಮೂಲಮ್ (ವಾಚನಮ್)

ವಾಲ್ಮೀಕಿರುವಾಚ

ಮೂಲಮ್

ಶೃಣು ವಕ್ಷ್ಯಾಮಿ ತೇ ಸರ್ವಂ ಸಂಕ್ಷೇಪಾದ್ಬಂಧಮೋಕ್ಷಯೋಃ ।
ಸ್ವರೂಪಂ ಸಾಧನಂ ಚಾಪಿ ಮತ್ತಃ ಶ್ರುತ್ವಾ ಯಥೋದಿತಮ್ ॥

(ಶ್ಲೋಕ-41)

ಮೂಲಮ್

ತಥೈವಾಚರ ಭದ್ರಂ ತೇ ಜೀವನ್ಮುಕ್ತೋ ಭವಿಷ್ಯಸಿ ।
ದೇಹ ಏವ ಮಹಾಗೇಹಮದೇಹಸ್ಯ ಚಿದಾತ್ಮನಃ ॥

ಅನುವಾದ

ವಾಲ್ಮೀಕಿಗಳು ಹೇಳಿದರು — ‘‘ಮಗು! ನಾನು ನಿನಗೆ ಸಂಕ್ಷೇಪವಾಗಿ ಸಾಧನೆಯ ಸಹಿತ ಬಂಧನ ಮತ್ತು ಮೋಕ್ಷಗಳ ಸಂಪೂರ್ಣ ಸ್ವರೂಪವನ್ನು ತಿಳಿಸುತ್ತೇನೆ. ಅದನ್ನೆಲ್ಲಾ ಕೇಳಿ ಹಾಗೆಯೇ ನೀನು ಆಚರಣೆ ಮಾಡು. ಅದರಿಂದ ನಿನಗೆ ಶ್ರೇಯಸ್ಸಾಗುವುದು ಮತ್ತು ನೀನು ಜೀವನ್ಮುಕ್ತನಾಗಿ ಹೋಗುವೆ. ದೇಹವಿಲ್ಲದ ಚೇತನ ಆತ್ಮನಿಗೆ ಈ ದೇಹವೇ ಬಹುದೊಡ್ಡ ಮನೆಯಾಗಿದೆ. ॥40-41॥

(ಶ್ಲೋಕ-42)

ಮೂಲಮ್

ತಸ್ಯಾಹಂಕಾರ ಏವಾಸ್ಮಿನ್ಮಂತ್ರೀ ತೇನೈವ ಕಲ್ಪಿತಃ ।
ದೇಹಗೇಹಾಭಿಮಾನಂ ಸ್ವಂ ಸಮಾರೋಪ್ಯ ಚಿದಾತ್ಮನಿ ॥

(ಶ್ಲೋಕ-43)

ಮೂಲಮ್

ತೇನ ತಾದಾತ್ಮ್ಯಮಾಪನ್ನಃ ಸ್ವಚೇಷ್ಟಿತಮಶೇಷತಃ ।
ವಿದಧಾತಿ ಚಿದಾನಂದೇ ತದ್ವಾಸಿತವಪುಃ ಸ್ವಯಮ್ ॥

(ಶ್ಲೋಕ-44)

ಮೂಲಮ್

ತೇನ ಸಂಕಲ್ಪಿತೋ ದೇಹೀ ಸಂಕಲ್ಪನಿಗಡಾವೃತಃ ।
ಪುತ್ರದಾರಗೃಹಾದೀನಿ ಸಂಕಲ್ಪಯತಿ ಚಾನಿಶಮ್ ॥

ಅನುವಾದ

ಇದರಲ್ಲಿ ಅವನು ಅಹಂಕಾರವನ್ನೇ ತನ್ನ ಮಂತ್ರಿಯನ್ನಾಗಿ ಮಾಡಿಕೊಂಡಿದ್ದಾನೆ. ಈ ಅಹಂಕಾರ ರೂಪೀ ಮಂತ್ರಿಯು ದೇಹ-ಗೇಹಾಭಿಮಾನ ರೂಪೀ ತನ್ನನ್ನು ತಾನೇ ಚೇತನ ಆತ್ಮನಲ್ಲಿ ಆರೋಪಿಸಿಕೊಂಡು ಅದರೊಡನೆ ಏಕರೂಪನಾಗಿ ತನ್ನ ಎಲ್ಲ ಚಟುವಟಿಕೆಗಳನ್ನು ಆ ಚಿದಾನಂದ ರೂಪೀ ಆತ್ಮನಲ್ಲೇ ಆರೋಪಿಸುತ್ತಾನೆ. ಆ ಅಹಂಕಾರದಿಂದ ವ್ಯಾಪಿಸಲ್ಪಟ್ಟ ದೇಹಿಯು (ಜೀವಿ) ಅದರ ಸಂಕಲ್ಪದಿಂದ ಪ್ರೇರಿತನಾಗಿ ಸಂಕಲ್ಪರೂಪೀ ಬೇಡಿಗಳಿಂದ ಬಂಧಿತನಾಗುತ್ತಾನೆ. ಹಾಗೂ ಪುನಃ ಹಗಲೂ-ರಾತ್ರಿ ಪುತ್ರ, ಪತ್ನೀ, ಗೃಹ ಮುಂತಾದವುಗಳಿಗಾಗಿ ಸಂಕಲ್ಪ-ವಿಕಲ್ಪ ಮಾಡುತ್ತಾ ಇರುತ್ತಾನೆ. ॥42-44॥

(ಶ್ಲೋಕ-45)

ಮೂಲಮ್

ಸಂಕಲ್ಪಯನ್ ಸ್ವಯಂ ದೇಹೀ ಪರಿಶೋಚತಿ ಸರ್ವದಾ ।
ತ್ರಯಸ್ತಸ್ಯಾಹಮೋ ದೇಹಾ ಅಧಮೋತ್ತಮಮಧ್ಯಮಾಃ ॥

(ಶ್ಲೋಕ-46)

ಮೂಲಮ್

ತಮಃ ಸತ್ತ್ವರಜಃ ಸಂಜ್ಞಾ ಜಗತಃ ಕಾರಣಂ ಸ್ಥಿತೇಃ ।
ತಮೋರೂಪಾದ್ಧಿ ಸಂಕಲ್ಪಾನ್ನಿತ್ಯಂ ತಾಮಸಚೇಷ್ಟಯಾ ॥

(ಶ್ಲೋಕ-47)

ಮೂಲಮ್

ಅತ್ಯಂತಂ ತಾಮಸೋ ಭೂತ್ವಾ ಕೃಮಿಕೀಟತ್ವಮಾಪ್ನುಯಾತ್ ।
ಸತ್ತ್ವರೂಪೋ ಹಿ ಸಂಕಲ್ಪೋ ಧರ್ಮಜ್ಞಾನಪರಾಯಣಃ ॥

(ಶ್ಲೋಕ-48)

ಮೂಲಮ್

ಅದೂರಮೋಕ್ಷಸಾಮ್ರಾಜ್ಯಃ ಸುಖರೂಪೋ ಹಿ ತಿಷ್ಠತಿ ।
ರಜೋರೂಪೋ ಹಿ ಸಂಕಲ್ಪೋ ಲೋಕೇ ಸ ವ್ಯವಹಾರವಾನ್ ॥

(ಶ್ಲೋಕ-49)

ಮೂಲಮ್

ಪರಿತಿಷ್ಠತಿ ಸಂಸಾರೇ ಪುತ್ರದಾರಾನುರಂಜಿತಃ ।
ತ್ರಿವಿಧಂ ತು ಪರಿತ್ಯಜ್ಯ ರೂಪಮೇತನ್ಮಹಾಮತೇ ॥

(ಶ್ಲೋಕ-50)

ಮೂಲಮ್

ಸಂಕಲ್ಪಂ ಪರಮಾಪ್ನೋತಿ ಪದಮಾತ್ಮಪರಿಕ್ಷಯೇ ।
ದೃಷ್ಟೀಃ ಸರ್ವಾಃ ಪರಿತ್ಯಜ್ಯ ನಿಯಮ್ಯ ಮನಸಾ ಮನಃ ॥

(ಶ್ಲೋಕ-51)

ಮೂಲಮ್

ಸಬಾಹ್ಯಾಭ್ಯಂತರಾರ್ಥಸ್ಯ ಸಂಕಲ್ಪಸ್ಯ ಕ್ಷಯಂ ಕುರು ।
ಯದಿ ವರ್ಷಸಹಸ್ರಾಣಿ ತಪಶ್ಚರಸಿ ದಾರುಣಮ್ ॥

(ಶ್ಲೋಕ-52)

ಮೂಲಮ್

ಪಾತಾಲಸ್ಥಸ್ಯ ಭೂಸ್ಥಸ್ಯ ಸ್ವರ್ಗಸ್ಥಸ್ಯಾಪಿ ತೇನಘ ।
ನಾನ್ಯಃ ಕಶ್ಚಿದುಪಾಯೋಽಸ್ತಿ ಸಂಕಲ್ಪೋಪಶಮಾದೃತೇ ॥

ಅನುವಾದ

ಸಂಕಲ್ಪ ಮಾಡುವುದರಿಂದ ಜೀವನು ಸ್ವತಃ ಯಾವಾಗಲೂ ಶೋಕಿಸುತ್ತಾ ಇರುತ್ತಾನೆ. ಈ ಅಹಂಕಾರಕ್ಕೆ ಸತ್ತ್ವ, ರಜ, ತಮ ಎಂಬ ಉತ್ತಮ ಅಧಮ ಮತ್ತು ಮಧ್ಯಮ ಎಂಬ ಮೂರು ಪ್ರಕಾರದ ದೇಹಗಳಿವೆ. ಇವೇ ಮೂರೂ ಜಗತ್ತಿನ ಸ್ಥಿತಿಗೆ ಕಾರಣಗಳಾಗಿವೆ. ಇವುಗಳಲ್ಲಿನ ತಾಮಸ ಸಂಕಲ್ಪದಿಂದ ಪ್ರತಿನಿತ್ಯವೂ ತಾಮಸೀ ಚೇಷ್ಟೆಗಳನ್ನು ಮಾಡುವುದರಿಂದಲೇ ಜೀವಿಯು ಅತ್ಯಂತ ತಮೋಗುಣಿಯಾಗಿ ಕ್ರಿಮಿ-ಕೀಟಾದಿ ಯೋನಿಗಳನ್ನು ಪಡೆಯುತ್ತಾನೆ. ಸಾತ್ತ್ವಿಕ ಸಂಕಲ್ಪವುಳ್ಳವನು ಧರ್ಮ ಮತ್ತು ಜ್ಞಾನದಲ್ಲಿಯೇ ತತ್ಪರನಾಗಿರುವ ಕಾರಣ ಮೋಕ್ಷ-ಸಾಮ್ರಾಜ್ಯದ ಬಳಿಯಲ್ಲೇ ಸುಖದಿಂದಿರುತ್ತಾನೆ. ರಾಜಸ ಸಂಕಲ್ಪ ಉಂಟಾಗುವುದರಿಂದ ಲೋಕವ್ಯವಹಾರಗಳನ್ನು ಮಾಡುತ್ತಾ ಸಂಸಾರದಲ್ಲಿ ಪುತ್ರ, ಪತ್ನೀ ಮುಂತಾದವರಲ್ಲಿ ಅನುರಕ್ತನಾಗಿರುತ್ತಾನೆ. ಎಲೈ ಬುದ್ಧಿಶಾಲಿಯೇ! ಈ ಮೂರು ಪ್ರಕಾರದ ಸಂಕಲ್ಪಗಳನ್ನು ಬಿಟ್ಟು ಬಿಡುವವನು ಚಿತ್ತದಲ್ಲಿ ಲೀನವಾದಾಗ ಪರಮ ಪದವನ್ನು ಪಡೆದುಕೊಳ್ಳುತ್ತಾನೆ. ಅದಕ್ಕಾಗಿ ನೀನು ಸಮಸ್ತ ವಿಚಾರಗಳನ್ನು ಬಿಟ್ಟುಬಿಡು. ಆತ್ಮನಿರೀಕ್ಷಣೆಯಿಂದ ಮನಸ್ಸನ್ನು ಸಂಯಮ ಮಾಡಿ, ಬಾಹ್ಯ-ಆಂತರಿಕ ಸಂಪೂರ್ಣ ಸಂಕಲ್ಪಗಳನ್ನೆಲ್ಲಾ ನಾಶಮಾಡಿಬಿಡು. ಹೇ ಪಾಪರಹಿತನೇ! ನೀನು ಪಾತಾಳ, ಪೃಥ್ವಿ ಅಥವಾ ಸ್ವರ್ಗ ಮುಂತಾಗಿ ಎಲ್ಲಿಯಾದರೂ ಇದ್ದುಕೊಂಡು ಸಾವಿರಾರು ವರ್ಷಗಳ ಕಠೋರ ತಪಸ್ಸನ್ನೇ ಮಾಡಿದರೂ ಕೂಡ ಪ್ರಾಪಂಚಿಕ ಬಂಧನದಿಂದ ಮುಕ್ತನಾಗುವುದಕ್ಕೆ ನಿನಗೆ ಸಂಕಲ್ಪ ನಾಶದ ಹೊರತು ಬೇರೆ ಯಾವ ಉಪಾಯವೂ ಇಲ್ಲವೇ ಇಲ್ಲ. ॥45-52॥

(ಶ್ಲೋಕ-53)

ಮೂಲಮ್

ಅನಾಬಾಧೇಽವಿಕಾರೇ ಸ್ವೇ ಸುಖೇ ಪರಮಪಾವನೇ ।
ಸಂಕಲ್ಪೋಪಶಮೇ ಯತ್ನಂ ಪೌರುಷೇಣ ಪರಂ ಕುರು ॥

ಅನುವಾದ

ಆದುದರಿಂದ ದುಃಖರಹಿತ, ವಿಕಾರವಿಲ್ಲದ, ಸ್ವಾನಂದಸ್ವರೂಪೀ ಮತ್ತು ಪರಮ ಪವಿತ್ರವಾಗಿರುವ ಆ ಸಂಕಲ್ಪಗಳ ಶಾಂತಿಗಾಗಿ ನೀನು ಪುರುಷಾರ್ಥದಿಂದೊಡಗೂಡಿ ಪೂರ್ಣ ಪ್ರಯತ್ನವನ್ನು ಮಾಡು. ॥53॥

(ಶ್ಲೋಕ-54)

ಮೂಲಮ್

ಸಂಕಲ್ಪತಂತೌ ನಿಖಿಲಾ ಭಾವಾಃ ಪ್ರೋತಾಃ ಕಿಲಾನಘ ।
ಛಿನ್ನೇತಂತೌ ನ ಜಾನೀಮಃ ಕ್ವಯಾಂತಿ ವಿಭವಾಃ ಪರಾಃ ॥

ಅನುವಾದ

ಹೇ ಪುಣ್ಯಾತ್ಮನೇ! ಈ ಎಲ್ಲ ಭಾವ ಪದಾರ್ಥಗಳು ಸಂಕಲ್ಪದ ದಾರದಲ್ಲಿ ಪೋಣಿಸಲ್ಪಟ್ಟಿವೆ; ಆ ದಾರವು ಕಿತ್ತು ಹೋದಾಗ ಜಗತ್ತಿನ ಈ ಭೌತಿಕ ವೈಭವಗಳು ಎಲ್ಲಿಗೆ ಹೊರಟು ಹೋಗುತ್ತವೆ? ಎಂಬ ಸುಳಿವೇ ಸಿಗುವುದಿಲ್ಲ. ॥54॥

(ಶ್ಲೋಕ-55)

ಮೂಲಮ್

ನಿಃ ಸಂಕಲ್ಪೋ ಯಥಾಪ್ರಾಪ್ತವ್ಯವಹಾರಪರೋ ಭವ ।
ಕ್ಷಯೇ ಸಂಕಲ್ಪಜಾಲಸ್ಯ ಜೀವೋ ಬ್ರಹ್ಮತ್ವಮಾಪ್ನುಯಾತ್ ॥

ಅನುವಾದ

ಆದುದರಿಂದ ಸಂಕಲ್ಪ-ವಿಕಲ್ಪಗಳನ್ನು ಬಿಟ್ಟು, ಪ್ರಾರಬ್ಧ-ಪ್ರವಾಹದಿಂದ ದೊರೆತ ವ್ಯವಹಾರದಲ್ಲಿ ತತ್ಪರನಾಗಿರು. ಸಂಕಲ್ಪಜಾಲವು ಕ್ಷೀಣವಾಗಿ ಹೋದಾಗ ಜೀವನಿಗೆ ಬ್ರಹ್ಮತ್ವ ಪ್ರಾಪ್ತಿಯಾಗಿ ಬಿಡುತ್ತದೆ. ॥55॥

(ಶ್ಲೋಕ-56)

ಮೂಲಮ್

ಅಧಿಗತಪರಮಾರ್ಥತಾಮುಪೇತ್ಯ
ಪ್ರಸಭಮಪಾಸ್ಯ ವಿಕಲ್ಪಜಾಲಮುಚ್ಚೈಃ ।
ಅಧಿಗಮಯ ಪದಂ ತದದ್ವಿತೀಯಂ
ವಿತತಸುಖಾಯ ಸುಷುಪ್ತಚಿತ್ತವೃತ್ತಿಃ ॥

ಅನುವಾದ

ಪರಮಾರ್ಥ ಜ್ಞಾನದಿಂದ ಸಮೃದ್ಧವಾಗಿ ನೀನು ದೃಢತೆಯಿಂದ ಸಂಪೂರ್ಣವಾಗಿ ವಿಕಲ್ಪ ಜಾಲವನ್ನು ತ್ಯಾಗಮಾಡು ಮತ್ತು ಪೂರ್ಣಾನಂದದ ಪ್ರಾಪ್ತಿಗಾಗಿ ಚಿತ್ತವೃತ್ತಿಯನ್ನು ಲೀನಗೊಳಿಸಿ ಆ ಅದ್ವಿತೀಯ ಪದವಿಯನ್ನು ಪಡೆದುಕೋ ॥56॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಉತ್ತರಕಾಂಡೇ ಷಷ್ಠಃ ಸರ್ಗಃ ॥6॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಉತ್ತರಕಾಂಡದಲ್ಲಿ ಆರನೆಯ ಸರ್ಗವು ಮುಗಿಯಿತು.