[ಐದನೆಯ ಸರ್ಗ]
ಭಾಗಸೂಚನಾ
ಶ್ರೀರಾಮಗೀತೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ತತೋ ಜಗನ್ಮಂಗಲಮಂಗಲಾತ್ಮನಾ
ವಿಧಾಯ ರಾಮಾಯಣಕೀರ್ತಿಮುತ್ತಮಾಮ್ ।
ಚಚಾರ ಪೂರ್ವಾಚರಿತಂ ರಘೂತ್ತಮೋ
ರಾಜರ್ಷಿವರ್ಯೈರಭಿಸೇವಿತಂ ಯಥಾ ॥
ಅನುವಾದ
ಶ್ರೀಮಹಾದೇವನಿಂತೆಂದನು — ಹೇ ಗಿರಿಜೆ! ತದನಂತರ, ರಘುಶ್ರೇಷ್ಠ ಭಗವಾನ್ ಶ್ರೀರಾಮನು, ಜಗತ್ತಿನ ಕಲ್ಯಾಣಕ್ಕಾಗಿ ಧರಿಸಿರುವ ತನ್ನ ದಿವ್ಯಮಂಗಳ ದೇಹದಿಂದ ರಾಮಾಯಣ ರೂಪೀ ಅತ್ಯುತ್ತಮ ಕೀರ್ತಿಯನ್ನು ಸ್ಥಾಪಿಸಿ, ಹಿಂದಿನ ಕಾಲದಲ್ಲಿ ರಾಜರ್ಷಿಗಳು ಆಚರಣೆ ಮಾಡಿದಂತೆಯೇ ತಾನೂ ಸಹ ಮಾಡುತ್ತಿದ್ದನು. ॥1॥
(ಶ್ಲೋಕ-2)
ಮೂಲಮ್
ಸೌಮಿತ್ರಿಣಾ ಪೃಷ್ಟ ಉದಾರಬುದ್ಧಿನಾ
ರಾಮಃ ಕಥಾಃ ಪ್ರಾಹ ಪುರಾತನೀಃ ಶುಭಾಃ ।
ರಾಜ್ಞಃ ಪ್ರಮತ್ತಸ್ಯ ನೃಗಸ್ಯ ಶಾಪತೋ
ದ್ವಿಜಸ್ಯ ತಿರ್ಯಕ್ತ್ವಮಥಾಹ ರಾಘವಃ ॥
ಅನುವಾದ
ಉದಾರಬುದ್ಧಿಯ ಲಕ್ಷ್ಮಣನು ಕೇಳಿದಾಗ ಅವನು ಪ್ರಾಚೀನಕಾಲದ ಉತ್ತಮ ಕಥೆಗಳನ್ನು ಹೇಳುತ್ತಿದ್ದನು. ಇಂತಹ ಪ್ರಸಂಗದಲ್ಲಿ ರಘುನಾಥನು, ನೃಗರಾಜನು ಪ್ರಮಾದವಶಾತ್ ಬ್ರಾಹ್ಮಣನ ಶಾಪದಿಂದ ತಿರ್ಯ ಗ್ಯೋನಿ ಪಡೆದ ವೃತ್ತಾಂತವನ್ನೂ ಕೂಡ ಹೇಳಿದನು. ॥2॥
(ಶ್ಲೋಕ-3)
ಮೂಲಮ್
ಕದಾಚಿದೇಕಾಂತ ಉಪಸ್ಥಿತಂ ಪ್ರಭುಂ
ರಾಮಂ ರಮಾಲಾಲಿತಪಾದಪಂಕಜಮ್ ।
ಸೌಮಿತ್ರಿರಾಸಾದಿತಶುದ್ಧಭಾವನಃ
ಪ್ರಣಮ್ಯ ಭಕ್ತ್ಯಾ ವಿನಯಾನ್ವಿತೋಽಬ್ರವೀತ್ ॥
ಅನುವಾದ
ಯಾರ ಚರಣಕಮಲಗಳ ಸೇವೆಯನ್ನು ಸಾಕ್ಷಾತ್ ಶ್ರೀಲಕ್ಷ್ಮೀದೇವಿಯು ಮಾಡುತ್ತಾಳೋ, ಆ ಭಗವಾನ್ ಶ್ರೀರಾಮನು ಒಂದು ದಿನ ಏಕಾಂತದಲ್ಲಿ ಕುಳಿತಿದ್ದನು. ಆ ಸಮಯದಲ್ಲಿ ಶುದ್ಧ ವಿಚಾರವುಳ್ಳ ಲಕ್ಷ್ಮಣನು ಅವನ ಬಳಿಗೆ ಬಂದು ಅವನಿಗೆ ಭಕ್ತಿಯಿಂದ ನಮಸ್ಕಾರ ಮಾಡಿ ಅತಿ ನಯ ವಿನಯಭಾವದಿಂದ ಕೇಳಿದನು - ॥3॥
(ಶ್ಲೋಕ-4)
ಮೂಲಮ್
ತ್ವಂ ಶುದ್ಧಬೋಧೋಽಸಿ ಹಿ ಸರ್ವದೇಹಿನಾ-
ಮಾತ್ಮಾಸ್ಯಧೀಶೋಽಸಿ ನಿರಾಕೃತಿಃ ಸ್ವಯಮ್ ।
ಪ್ರತೀಯಸೇ ಜ್ಞಾನದೃಶಾಂ ಮಹಾಮತೇ
ಪಾದಾಜ್ಜಭೃಂಗಾಹಿತಸಂಗಸಂಗಿನಾಮ್ ॥
ಅನುವಾದ
‘‘ಹೇ ಮೇಧಾವಿಯೆ! ನೀನು ಶುದ್ಧಜ್ಞಾನಸ್ವರೂಪಿಯೂ, ಸಮಸ್ತ ದೇಹಧಾರಿಗಳ ಆತ್ಮನೂ, ಎಲ್ಲರ ಒಡೆಯನೂ, ನಿರಾಕಾರ ಸ್ವರೂಪನೂ ಆಗಿರುವೆ. ನಿನ್ನ ಚರಣಕಮಲಗಳಲ್ಲಿ ಭ್ರಮರದಂತೆ ಇರುವ, ಆ ಪರಮಭಾಗವತರ ಸಹವಾಸಗೈದ ಸಜ್ಜನರುಗಳಿಗೇ ನೀನು ಜ್ಞಾನದೃಷ್ಟಿಯಿಂದ ಕಾಣಿಸಿಕೊಳ್ಳುವೆ. ॥4॥
(ಶ್ಲೋಕ-5)
ಮೂಲಮ್
ಅಹಂ ಪ್ರಪನ್ನೋಸ್ಮಿ ಪದಾಂಬುಜಂ ಪ್ರಭೋ
ಭವಾಪವರ್ಗಂ ತವ ಯೋಗಿಭಾವಿತಮ್ ।
ಯಥಾಂಜಸಾಜ್ಞಾನಮಪಾರವಾರಿಧಿಂ
ಸುಖಂ ತರಿಷ್ಯಾಮಿ ತಥಾನುಶಾಧಿ ಮಾಮ್ ॥
ಅನುವಾದ
ಹೇ ಪ್ರಭು! ಯೊಗಿಗಳು ನಿರಂತರ ಚಿಂತನೆ ಮಾಡುವ, ಭವ-ಬಂಧನದಿಂದ ಬಿಡುಗಡೆ ಮಾಡಿಸುವಂತಹ ನಿನ್ನ ಚರಣ ಕಮಲಗಳಿಗೆ ನಾನು ಶರಣಾಗಿದ್ದೇನೆ; ನಾನು ಸುಲಭವಾಗಿ ಅಜ್ಞಾನರೂಪೀ ಅಪಾರ ಸಮುದ್ರವನ್ನು ದಾಟಿ ಹೋಗುವಂತಹ ಉಪದೇಶವನ್ನು ನೀನು ನನಗೆ ಕರುಣಿಸು.’’ ॥5॥
(ಶ್ಲೋಕ-6)
ಮೂಲಮ್
ಶ್ರುತ್ವಾಥ ಸೌಮಿತ್ರಿವಚೋಖಿಲಂ ತದಾ
ಪ್ರಾಹ ಪ್ರಪನ್ನಾರ್ತಿಹರಃ ಪ್ರಸನ್ನಧೀಃ ।
ವಿಜ್ಞಾನಮಜ್ಞಾನತಮಃ ಪ್ರಶಾಂತಯೇ
ಶ್ರುತಿಪ್ರಪನ್ನಂ ಕ್ಷಿತಿಪಾಲಭೂಷಣಃ ॥
ಅನುವಾದ
ಲಕ್ಷ್ಮಣನ ಈ ಎಲ್ಲಾ ಮಾತುಗಳನ್ನು ಕೇಳಿ ಶರಣಾಗತ ವತ್ಸಲನಾದ ಭೂಪಾಲ ಶಿರೋಮಣಿ ಭಗವಾನ್ ಶ್ರೀರಾಮನು, ಕೇಳಲು ಉತ್ಸುಕನಾಗಿರುವ ಲಕ್ಷ್ಮಣನಿಗೆ ಅವನ ಅಜ್ಞಾನಾಂಧ ಕಾರವನ್ನು ನಾಶಮಾಡುವುದಕ್ಕಾಗಿ ಪ್ರಸನ್ನಚಿತ್ತದಿಂದ ಜ್ಞಾನೋ ಪದೇಶ ಮಾಡಲಾರಂಭಿಸಿದನು. ॥6॥
(ಶ್ಲೋಕ-7)
ಮೂಲಮ್
ಆದೌ ಸ್ವವರ್ಣಾಶ್ರಮವರ್ಣಿತಾಃ ಕ್ರಿಯಾಃ
ಕೃತ್ವಾ ಸಮಾಸಾದಿತಶುದ್ಧಮಾನಸಃ ।
ಸಮಾಪ್ಯ ತತ್ಪೂರ್ವಮುಪಾತ್ತಸಾಧನಃ
ಸಮಾಶ್ರಯೇತ್ಸದ್ಗುರುಮಾತ್ಮಲಬ್ಧಯೇ ॥
ಅನುವಾದ
ಶ್ರೀರಾಮಚಂದ್ರನು ಹೇಳುತ್ತಾನೆ — ‘‘ಎಲೈ ಲಕ್ಷ್ಮಣಾ! ಮೊದಲು ತಮ್ಮ-ತಮ್ಮ ಆಶ್ರಮಗಳಿಗೆ ಶಾಸ್ತ್ರಗಳಲ್ಲಿ ಹೇಳಲಾಗಿರುವ ಕಾರ್ಯಗಳನ್ನೂ ಯಥಾವತ್ ಪಾಲಿಸಿ, ಚಿತ್ತಶುದ್ಧಿಯಾದ ನಂತರ, ಆ ಕರ್ಮಗಳನ್ನು ಬಿಟ್ಟುಬಿಡಬೇಕು. ಶಮ-ದಮಾದಿ ಸಾಧನೆಗಳಿಂದ ಪರಿಪೂರ್ಣರಾಗಿ ಆತ್ಮಜ್ಞಾನದ ಪ್ರಾಪ್ತಿಗಾಗಿ ಸದ್ಗುರುವಿಗೆ ಶರಣಾಗಬೇಕು. ॥7॥
(ಶ್ಲೋಕ-8)
ಮೂಲಮ್
ಕ್ರಿಯಾ ಶರೀರೋದ್ಭವಹೇತುರಾದೃತಾ
ಪ್ರಿಯಾಪ್ರಿಯೌ ತೌ ಭವತಃ ಸುರಾಗಿಣಃ ।
ಧರ್ಮೇತರೌ ತತ್ರ ಪುನಃ ಶರೀರಕಂ
ಪುನಃ ಕ್ರಿಯಾ ಚಕ್ರವದೀರ್ಯತೇ ಭವಃ ॥
ಅನುವಾದ
ಕರ್ಮಗಳು ಪುನರ್ಜನ್ಮಕ್ಕೆ ಕಾರಣವಾಗಿವೆ. ಕರ್ಮಗಳಲ್ಲಿ ಪ್ರೇಮವಿಟ್ಟುಕೊಳ್ಳುವವರಿಂದ ಇಷ್ಟ-ಅನಿಷ್ಟ ಈ ಎರಡೂ ಬಗೆಯ ಕ್ರಿಯೆಗಳು ಆಗುತ್ತವೆ. ಅವುಗಳಿಂದ ಧರ್ಮ ಮತ್ತು ಅಧರ್ಮ ಇವೆರಡೂ ಪ್ರಾಪ್ತಿಯಾಗುತ್ತವೆ ಹಾಗೂ ಅವುಗಳ ಕಾರಣದಿಂದ ಶರೀರ ಪ್ರಾಪ್ತಿಯಾಗುತ್ತದೆ. ಅದರಿಂದ ಪುನಃ ಕರ್ಮಗಳಾಗುತ್ತವೆ. ಇದೇ ಪ್ರಕಾರ ಈ ಜಗತ್ತು ಚಕ್ರದಂತೆ ಚಲಿಸುತ್ತಾ ಇರುತ್ತದೆ. ॥8॥
(ಶ್ಲೋಕ-9)
ಮೂಲಮ್
ಅಜ್ಞಾನಮೇವಾಸ್ಯ ಹಿ ಮೂಲಕಾರಣಂ
ತದ್ಧಾನಮೇವಾತ್ರ ವಿಧೌ ವಿಧೀಯತೇ ।
ವಿದ್ಯೈವ ತನ್ನಾಶವಿಧೌ ಪಟೀಯಸೀ
ನ ಕರ್ಮ ತಜ್ಜಂ ಸವಿರೋಧಮೀರಿತಮ್ ॥
ಅನುವಾದ
ಅಜ್ಞಾನವೇ ಜಗತ್ತಿಗೆ ಮೂಲ ಕಾರಣವಾಗಿದೆ. ಶಾಸ್ತ್ರೀಯ ವಿಧಿವಾಕ್ಯಗಳಲ್ಲಿ ಅಜ್ಞಾನದ ನಾಶವೇ ಜಗತ್ತಿನಿಂದ ಮುಕ್ತರಾಗಲು ಉಪಾಯ ವೆಂದು ತಿಳಿಸಲಾಗಿದೆ. ಅಜ್ಞಾನವನ್ನು ನಾಶಮಾಡುವುದಕ್ಕೆ ಜ್ಞಾನವೇ ಸಮರ್ಥವಾದದ್ದು, ಸಕಾಮ ಕರ್ಮವಲ್ಲ. ಏಕೆಂದರೆ, ಅಜ್ಞಾನ ದಿಂದ ಉಂಟಾಗುವಂತಹ ಕರ್ಮವು ಅಜ್ಞಾನವನ್ನು ನಾಶ ಮಾಡಲಾರದು. ॥9॥
(ಶ್ಲೋಕ-10)
ಮೂಲಮ್
ನಾಜ್ಞಾನಹಾನಿರ್ನ ಚ ರಾಗಸಂಕ್ಷಯೋ
ಭವೇತ್ತತಃ ಕರ್ಮ ಸದೋಷಮುದ್ಭವೇತ್ ।
ತತಃ ಪುನಃ ಸಂಸೃತಿರಪ್ಯವಾರಿತಾ
ತಸ್ಮಾದ್ ಬುಧೋ ಜ್ಞಾನವಿಚಾರವಾನ್ಭವೇತ್ ॥
ಅನುವಾದ
ಸಕಾಮ ಕರ್ಮದ ಮೂಲಕ ಅಜ್ಞಾನದ ನಾಶ ಅಥವಾ ರಾಗದ ಕ್ಷಯ ಉಂಟಾಗಲಾರದು, ಪ್ರತಿಯಾಗಿ ಅದರಿಂದ ಮತ್ತೊಂದು ಸದೋಷವಾದ ಕರ್ಮದ ಉತ್ಪತ್ತಿಯಾಗುತ್ತದೆ ; ಅದರಿಂದ ಪುನಃ ಭವ-ಬಂಧನವು ಅನಿವಾರ್ಯವಾಗುತ್ತದೆ. ಆದುದರಿಂದ ಬುದ್ಧಿವಂತರಾದವರು ಜ್ಞಾನ-ವಿಚಾರದಲ್ಲಿಯೇ ತತ್ಪರರಾಗಬೇಕು. ॥10॥
(ಶ್ಲೋಕ-11)
ಮೂಲಮ್
ನನು ಕ್ರಿಯಾ ವೇದಮುಖೇನ ಚೋದಿತಾ
ತಥೈವ ವಿದ್ಯಾ ಪುರುಷಾರ್ಥಸಾಧನಮ್ ।
ಕರ್ತವ್ಯತಾ ಪ್ರಾಣಭೃತಃ ಪ್ರಚೋದಿತಾ
ವಿದ್ಯಾಸಹಾಯತ್ವಮುಪೈತಿ ಸಾ ಪುನಃ ॥
(ಶ್ಲೋಕ-12)
ಮೂಲಮ್
ಕರ್ಮಾಕೃತೌ ದೋಷಮಪಿ ಶ್ರುತಿರ್ಜಗೌ
ತಸ್ಮಾತ್ಸದಾ ಕಾರ್ಯಮಿದಂ ಮುಮುಕ್ಷುಣಾ ।
ನನು ಸ್ವತಂತ್ರಾ ಧ್ರುವಕಾರ್ಯಕಾರಿಣೀ
ವಿದ್ಯಾ ನ ಕಿಂಚಿನ್ಮನಸಾಪ್ಯಪೇಕ್ಷತೇ ॥
(ಶ್ಲೋಕ-13)
ಮೂಲಮ್
ನ ಸತ್ಯಕಾರ್ಯೋಽಪಿ ಹಿ ಯದ್ವದಧ್ವರಃ
ಪ್ರಕಾಂಕ್ಷತೇಽನ್ಯಾನಪಿ ಕಾರಕಾದಿಕಾನ್ ।
ತಥೈವ ವಿದ್ಯಾ ವಿಧಿತಃ ಪ್ರಕಾಶಿತೈ -
ರ್ವಿಶಿಷ್ಯತೇ ಕರ್ಮಭಿರೇವ ಮುಕ್ತಯೇ ॥
ಅನುವಾದ
ಕೆಲವು ವಿತರ್ಕವಾದಿಗಳು ಈ ರೀತಿ ಹೇಳುತ್ತಾರೆ ವೇದಗಳು ಹೇಳುವಂತೆ ಜ್ಞಾನವು ಪುರುಷಾರ್ಥದ ಸಾಧಕ ವಾಗಿರುವಂತೆಯೇ ಕರ್ಮಗಳು ವೇದವಿಹಿತವಾಗಿವೆ. ಪ್ರಾಣಿಗಳಿಗೋಸ್ಕರ ಅಗತ್ಯವಾದ ಕರ್ತವ್ಯ ಕರ್ಮಗಳ ವಿಧಾನವೂ ವೇದದಲ್ಲೇ ಇದೆ. ಆದುದರಿಂದ ಆ ಕರ್ಮಗಳು ಜ್ಞಾನಕ್ಕೆ ಸಹಕಾರಿಯಾಗುತ್ತವೆ. ಜೊತೆಗೆ ಶ್ರುತಿಯು ಕರ್ಮಮಾಡದೇ ಇರುವುದನ್ನು ದೋಷವೆಂದೂ ಕೂಡ ಹೇಳಿದೆ; ಆದ್ದರಿಂದ ಮುಮುಕ್ಷುಗಳು ಅವುಗಳನ್ನು ಯಾವಾಗಲೂ ಮಾಡುತ್ತಾ ಇರಬೇಕು. ಜ್ಞಾನವೇ ಸ್ವತಂತ್ರವಾದದ್ದು. ನಿಶ್ಚಯವಾಗಿಯೂ ತನ್ನ ಫಲವನ್ನು ಕೊಡುವಂತಹುದು. ಅದಕ್ಕೆ ಮನಸ್ಸಿನಿಂದಲೂ ಕೂಡ ಬೇರೆ ಯಾರ ಸಹಾಯದ ಆವಶ್ಯಕತೆ ಇರುವುದಿಲ್ಲ ಎಂದು ಯಾರಾದರೂ ಹೇಳಿದರೆ, ಅವರ ಈ ಅನಿಸಿಕೆ ಸರಿಯಲ್ಲ; ಏಕೆಂದರೆ ವೇದೋಕ್ತ ಯಜ್ಞವು ಸತ್ಯ ಕರ್ಮವಾದರೂ ಕೂಡ ಬೇರೆ ಕಾರಕಾದಿಗಳನ್ನು (ಕರ್ತೃ, ಕರ್ಮ ಇತ್ಯಾದಿ) ಅಪೇಕ್ಷೆ ಪಡುತ್ತದೆ, ಅದೇ ರೀತಿ ವಿಧಿಯಿಂದ ಪ್ರಕಾಶಿಸಲ್ಪಟ್ಟ ಕರ್ಮಗಳ ಮೂಲಕವೇ ಜ್ಞಾನವು ಮುಕ್ತಿಗೆ ಸಾಧಕವಾಗಬಲ್ಲದು. (ಆದ್ದರಿಂದ ಕರ್ಮಗಳ ತ್ಯಾಗ ಉಚಿತವಲ್ಲ.) ॥11-13॥
(ಶ್ಲೋಕ-14)
ಮೂಲಮ್
ಕೇಚಿದ್ವದಂತೀತಿ ವಿತರ್ಕವಾದಿನ-
ಸ್ತದಪ್ಯಸದ್ ದೃಷ್ಟವಿರೋಧಕಾರಣಾತ್ ।
ದೇಹಾಭಿಮಾನಾದಭಿವರ್ಧತೇ ಕ್ರಿಯಾ
ವಿದ್ಯಾ ಗತಾಹಂಕೃತಿತಃ ಪ್ರಸಿದ್ಧ್ಯತಿ ॥
ಅನುವಾದ
(ಸಿದ್ಧಾಂತಿ) ಹೀಗೆ ಹೇಳುವ ಕುತರ್ಕಿಯ ಮಾತಿನಲ್ಲಿ ಪ್ರತ್ಯಕ್ಷ ವಿರೋಧವಿರುವುದರಿಂದ ಅದು ಸರಿಯಲ್ಲ; ಏಕೆಂದರೆ ಕರ್ಮ ದೇಹಾಭಿಮಾನದಿಂದ ಉಂಟಾಗುತ್ತದೆ. ಜ್ಞಾನವು ಅಹಂಕಾರ ನಾಶವಾದ ನಂತರ ಸಿದ್ಧವಾಗುತ್ತದೆ. ॥14॥
(ಶ್ಲೋಕ-15)
ಮೂಲಮ್
ವಿಶುದ್ಧವಿಜ್ಞಾನವಿರೋಚನಾಂಚಿತಾ
ವಿದ್ಯಾತ್ಮವೃತ್ತಿಶ್ಚರಮೇತಿ ಭಣ್ಯತೇ ।
ಉದೇತಿ ಕರ್ಮಾಖಿಲಕಾರಕಾದಿಭಿ-
ರ್ನಿಹಂತಿ ವಿದ್ಯಾಖಿಲಕಾರಕಾದಿಕಮ್ ॥
ಅನುವಾದ
ವೇದಾಂತವಾಕ್ಯಗಳನ್ನು ವಿಚಾರ ಮಾಡುತ್ತಾ-ಮಾಡುತ್ತಾ ವಿಶುದ್ಧ ವಿಜ್ಞಾನದ ಪ್ರಕಾಶದಿಂದ ಕಂಡು ಬರುವ ಚರಮ ಆತ್ಮವೃತ್ತಿಯನ್ನೇ ವಿದ್ಯೆ (ಆತ್ಮಜ್ಞಾನ) ಎಂದು ಹೇಳುತ್ತಾರೆ. ಇದಲ್ಲದೆ ಕರ್ಮವು ಸಂಪೂರ್ಣ ಕಾರಕಾದಿಗಳ ಸಹಾಯದಿಂದ ಉಂಟಾಗುತ್ತದೆ, ಆದರೆ ವಿದ್ಯೆಯು ಸಮಸ್ತ ಕಾರಕಾದಿಗಳನ್ನು (ಅನಿತ್ಯತ್ವದ ಭಾವನೆಯ ಮೂಲಕ) ನಾಶ ಮಾಡಿ ಬಿಡುತ್ತದೆ. ॥15॥
(ಶ್ಲೋಕ-16)
ಮೂಲಮ್
ತಸ್ಮಾತ್ತ್ಯಜೇತ್ಕಾರ್ಯಮಶೇಷತಃ ಸುಧೀ-
ರ್ವಿದ್ಯಾವಿರೋಧಾನ್ನ ಸಮುಚ್ಚಯೋ ಭವೇತ್ ।
ಆತ್ಮಾನುಸಂಧಾನಪರಾಯಣಃ ಸದಾ
ನಿವೃತ್ತಸರ್ವೇಂದ್ರಿಯವೃತ್ತಿಗೋಚರಃ ॥
ಅನುವಾದ
ಅದಕ್ಕಾಗಿ ಸಮಸ್ತ ಇಂದ್ರಿಯಗಳ ವಿಷಯಗಳಿಂದ ನಿವೃತ್ತರಾಗಿ ನಿರಂತರ ಆತ್ಮಾನುಸಂಧಾನ ಪರಾಯಣರಾದ ಬುದ್ಧಿವಂತರು ಸಂಪೂರ್ಣವಾಗಿ ಕರ್ಮಗಳನ್ನು ಖಂಡಿತ ತ್ಯಾಗಮಾಡಿಬಿಡಬೇಕು. ಏಕೆಂದರೆ ವಿದ್ಯೆಗೆ ವಿರೋಧಿಯಾದ ಕಾರಣ ಕರ್ಮವು ಅದರ ಸಂಗಡ ಸೇರಿಕೊಳ್ಳಲಾರದು. ॥16॥
(ಶ್ಲೋಕ-17)
ಮೂಲಮ್
ಯಾವಚ್ಛರೀರಾದಿಷು ಮಾಯಯಾತ್ಮಧೀ-
ಸ್ತಾವದ್ವಿಧೇಯೋ ವಿಧಿವಾದಕರ್ಮಣಾಮ್ ।
ನೇತೀತಿ ವಾಕ್ಯೈರಖಿಲಂ ನಿಷಿಧ್ಯ ತಜ್
ಜ್ಞಾತ್ವಾ ಪರಾತ್ಮಾನಮಥ ತ್ಯಜೇತ್ಕ್ರಿಯಾಃ ॥
ಅನುವಾದ
ಮಾಯೆಯಿಂದ ಮೋಹಿತನಾಗಿರುವ ಕಾರಣ ಮನುಷ್ಯ ನಿಗೆ ಶರೀರಾದಿಗಳಲ್ಲಿ ಆತ್ಮಭಾವವಿರುವವರೆಗೂ ಅವನಿಗೆ ವೈದಿಕ ಕರ್ಮಾನುಷ್ಠಾನವು ಕರ್ತವ್ಯವಾಗಿದೆ. ‘ನೇತಿ-ನೇತಿ’ ಇತ್ಯಾದಿ ವಾಕ್ಯಗಳಿಂದ ಸಂಪೂರ್ಣವಾಗಿ ಅನಾತ್ಮ-ವಸ್ತು ಗಳನ್ನು ನಿಷೇಧಿಸಿ ತನ್ನ ಪರಮಾತ್ಮ ಸ್ವರೂಪವನ್ನು (ಆತ್ಮವನ್ನು) ಅರಿತುಕೊಂಡ ಬಳಿಕ ಅವನು ಸಕಲಕರ್ಮಗಳನ್ನು ಬಿಟ್ಟು ಬಿಡಬೇಕು. ॥17॥
(ಶ್ಲೋಕ-18)
ಮೂಲಮ್
ಯದಾ ಪರಾತ್ಮಾತ್ಮವಿಭೇದಭೇದಕಂ
ವಿಜ್ಞಾನಮಾತ್ಮನ್ಯವಭಾತಿ ಭಾಸ್ವರಮ್ ।
ತದೈವ ಮಾಯಾ ಪ್ರವಿಲೀಯತೇಂಜಸಾ
ಸಕಾರಕಾ ಕಾರಣಮಾತ್ಮಸಂಸೃತೇಃ ॥
ಅನುವಾದ
ಪರಮಾತ್ಮಾ ಮತ್ತು ಜೀವಾತ್ಮರಲ್ಲಿನ ಭೇದವನ್ನು ಪರಿಹರಿಸುವ ಪ್ರಕಾಶಮಯ ವಿಜ್ಞಾನವು ಅಂತಃ ಕರಣದಲ್ಲಿ ಸ್ಪಷ್ಟವಾಗಿ ಭಾಸವಾಗಲು ಪ್ರಾರಂಭವಾದಾಗ ಆತ್ಮನಿಗೆ ಭವ-ಬಂಧನದ ಪ್ರಾಪ್ತಿಗೆ ಕಾರಣವಾದ ಮಾಯೆಯು, ಅನಾಯಾಸವಾಗಿಯೇ ಕಾರಕಾದಿಗಳೊಡನೆ ಲೀನವಾಗಿ ಹೋಗುತ್ತದೆ. ॥18॥
(ಶ್ಲೋಕ-19)
ಮೂಲಮ್
ಶ್ರುತಿಪ್ರಮಾಣಾಭಿವಿನಾಶಿತಾ ಚ ಸಾ
ಕಥಂ ಭವಿಷ್ಯತ್ಯಪಿ ಕಾರ್ಯಕಾರಿಣೀ ।
ವಿಜ್ಞಾನಮಾತ್ರಾದಮಲಾದ್ವಿತೀಯತ-
ಸ್ತಸ್ಮಾದವಿದ್ಯಾ ನ ಪುನರ್ಭವಿಷ್ಯತಿ ॥
ಅನುವಾದ
ಶ್ರುತಿ-ಪ್ರಮಾಣದಿಂದ ಅದನ್ನು ನಾಶಮಾಡಿಬಿಟ್ಟಾಗ ಪುನಃ ಅದು ತನ್ನ ಕಾರ್ಯವನ್ನು ಮಾಡುವುದರಲ್ಲಿ ಹೇಗೆ ತಾನೇ ಸಮರ್ಥವಾಗಬಲ್ಲದು? ಏಕೆಂದರೆ ಪರಮಾತ್ಮ ತತ್ತ್ವವು ಏಕಮಾತ್ರ ಜ್ಞಾನಸ್ವರೂಪೀ, ನಿರ್ಮಲ ಮತ್ತು ಅದ್ವಿತೀಯವಾಗಿದೆ. ಆದುದರಿಂದ ಬೋಧ ಉಂಟಾದಾಗ ಮತ್ತೆ ಅವಿದ್ಯೆಯು ಉಂಟಾಗಲಾರದು. ॥19॥
(ಶ್ಲೋಕ-20)
ಮೂಲಮ್
ಯದಿ ಸ್ಮ ನಷ್ಟಾ ನ ಪುನಃ ಪ್ರಸೂಯತೇ
ಕರ್ತಾಹಮಸ್ಯೇತಿ ಮತಿಃ ಕಥಂ ಭವೇತ್ ।
ತಸ್ಮಾತ್ಸ್ವತಂತ್ರಾ ನ ಕಿಮಪ್ಯಪೇಕ್ಷತೇ
ವಿದ್ಯಾ ವಿಮೋಕ್ಷಾಯ ವಿಭಾತಿ ಕೇವಲಾ ॥
ಅನುವಾದ
ಅವಿದ್ಯೆಯು ಒಂದು ಬಾರಿ ನಾಶವಾಗಿಹೋಗಿಬಿಟ್ಟರೆ ಪುನಃ ಅದು ಹುಟ್ಟುವುದೇ ಇಲ್ಲ. ಹಾಗಿರುವಾಗ ಜ್ಞಾನಿ ಯಾದವನಿಗೆ ‘ನಾನು ಈ ಕರ್ಮದ ಕರ್ತೃವಾಗಿದ್ದೇನೆ’ ಎಂಬ ಬುದ್ಧಿ ಹೇಗೆ ಉಂಟಾಗಬಲ್ಲದು? ಆದ್ದರಿಂದ ಜ್ಞಾನವು ಸ್ವತಂತ್ರ ವಾದದ್ದು, ಅದಕ್ಕೆ ಜೀವಿಯ ಮೋಕ್ಷಕ್ಕಾಗಿ ಬೇರೆ ಯಾವುದರ (ಕರ್ಮಾದಿ) ಆವಶ್ಯಕತೆಯೇ ಇರುವುದಿಲ್ಲ. ವಿದ್ಯೆಯು ಒಂಟಿಯಾಗಿಯೇ ಮುಕ್ತಿಗಾಗಿ ಸಮರ್ಥವಾಗಿದೆ. ॥20॥
(ಶ್ಲೋಕ-21)
ಮೂಲಮ್
ಸಾ ತೈತ್ತಿರೀಯಶ್ರುತಿರಾಹ ಸಾದರಂ
ನ್ಯಾಸಂ ಪ್ರಶಸ್ತಾಖಿಲಕರ್ಮಣಾಂ ಸ್ಫುಟಮ್ ।
ಏತಾವದಿತ್ಯಾಹ ಚ ವಾಜಿನಾಂ ಶ್ರುತಿ-
ರ್ಜ್ಞಾನಂ ವಿಮೋಕ್ಷಾಯ ನ ಕರ್ಮ ಸಾಧನಮ್ ॥
ಅನುವಾದ
ಇದಲ್ಲದೆ ತೈತ್ತಿರೀಯ ಶ್ರುತಿಯು1 ಕೂಡ ಸಮಸ್ತ ಕರ್ಮಗಳನ್ನು ತ್ಯಾಗಮಾಡುವುದೇ ಒಳ್ಳೆಯದು ಎಂದು ಒತ್ತಾಯ ಪೂರ್ವಕ ಸ್ಪಷ್ಟವಾಗಿ ಹೇಳುತ್ತದೆ ಹಾಗೂ ‘ಏತಾವತ್’ ಇತ್ಯಾದಿ ವಾಜಸನೇಯೀ ಶಾಖೆಯ ಶ್ರುತಿಯೂ2 ಕೂಡ ‘ಮೋಕ್ಷದ ಸಾಧನೆಯು ಜ್ಞಾನವೇ ಹೊರತು ಕರ್ಮವಲ್ಲ’ ಎಂದು ಹೇಳುತ್ತದೆ. ॥21॥
ಟಿಪ್ಪನೀ
1 ‘ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವಮಾನಶುಃ’ (ತೈ. ಆ . 10/10)
2 ‘ಏತಾವದರೇ ಖಲ್ವಮೃತತ್ವಮ್’ (ಬೃ. ಉ. 4/5/15)
(ಶ್ಲೋಕ-22)
ಮೂಲಮ್
ವಿದ್ಯಾಸಮತ್ವೇನ ತು ದರ್ಶಿತಸ್ತ್ವಯಾ
ಕ್ರತುರ್ನ ದೃಷ್ಟಾಂತ ಉದಾಹೃತಃ ಸಮಃ ।
ಫಲೈಃ ಪೃಥಕ್ತ್ವಾದ್ಬಹುಕಾರಕೈಃ ಕ್ರತುಃ
ಸಂಸಾಧ್ಯತೇ ಜ್ಞಾನಮತೋ ವಿಪರ್ಯಯಮ್ ॥
ಅನುವಾದ
ನೀನು ಜ್ಞಾನದ ಸಮಾನತೆಯಲ್ಲಿ ಯಜ್ಞಾದಿಗಳ ಉದಾಹರಣೆ ಕೊಟ್ಟಿರುವುದು ಸರಿಯಲ್ಲ. ಏಕೆಂದರೆ ಅವೆರಡರ ಫಲಗಳು ಬೇರೆ-ಬೇರೆಯಾಗಿವೆ. ಇದಲ್ಲದೆ ಯಜ್ಞವಾದರೋ (ಹೋತೃ, ಋತ್ವಿಕ್, ಯಜಮಾನ ಇತ್ಯಾದಿ) ಬಹಳಷ್ಟು ಕಾರಕಗಳಿಂದ ಸಿದ್ಧವಾಗುತ್ತದೆ. ಆದರೆ ಜ್ಞಾನವು ಇದಕ್ಕೆ ವಿರುದ್ಧವಾಗಿದೆ. ಅಂದರೆ, ಅದರಲ್ಲಿ ಕಾರಕಾದಿಗಳು ಅಗತ್ಯವಿಲ್ಲ. ॥22॥
(ಶ್ಲೋಕ-23)
ಮೂಲಮ್
ಸಪ್ರತ್ಯವಾಯೋ ಹ್ಯಹಮಿತ್ಯನಾತ್ಮಧೀ-
ರಜ್ಞಪ್ರಸಿದ್ಧಾ ನ ತು ತತ್ತ್ವದರ್ಶಿನಃ ।
ತಸ್ಮಾದ್ಬುಧೈಸ್ತ್ಯಾಜ್ಯಮವಿಕ್ರಿಯಾತ್ಮಭಿ-
ರ್ವಿಧಾನತಃ ಕರ್ಮ ವಿಧಿಪ್ರಕಾಶಿತಮ್ ॥
ಅನುವಾದ
‘ಕರ್ಮದ ತ್ಯಾಗದಿಂದ ನಾನು ಖಂಡಿತವಾಗಿ ಪ್ರಾಯಶ್ಚಿತ್ತಕ್ಕೆ ಭಾಗಿಯಾಗುವೆನು’ ಇಂತಹ ಅನಾತ್ಮ ಬುದ್ಧಿಯು ಅಜ್ಞಾನಿಯಾದವರಿಗೇ ಉಂಟಾಗುತ್ತದೆ, ತತ್ತ್ವ ಜ್ಞಾನಿಯಾದವರಿಗೆ ಅಲ್ಲ. ಆದುದರಿಂದ ವಿಕಾರರಹಿತ ಮನಸ್ಸುಳ್ಳ ಜ್ಞಾನಿಯಾದವನಿಗೆ ವಿಹಿತಕರ್ಮಗಳನ್ನು ಸಹ ವಿಧಿಪೂರ್ವಕ ತ್ಯಾಗ ಮಾಡಬೇಕು. ॥23॥
(ಶ್ಲೋಕ-24)
ಮೂಲಮ್
ಶ್ರದ್ಧಾನ್ವಿತಸ್ತತ್ತ್ವಮಸೀತಿ ವಾಕ್ಯತೋ
ಗುರೋಃ ಪ್ರಸಾದಾದಪಿ ಶುದ್ಧಮಾನಸಃ ।
ವಿಜ್ಞಾಯ ಚೈಕಾತ್ಮ್ಯಮಥಾತ್ಮಜೀವಯೋಃ
ಸುಖೀ ಭವೇನ್ಮೇರುರಿವಾಪ್ರಕಂಪನಃ ॥
ಅನುವಾದ
ಶುದ್ಧ-ಚಿತ್ತದವನಾಗಿ, ಶ್ರದ್ಧಾಪೂರ್ವಕ ಗುರುವಿನ ಕೃಪೆಯಿಂದ ‘ತತ್ತ್ವಮಸಿ’ ಎಂಬೀ ಮಹಾವಾಕ್ಯಗಳ ಮೂಲಕ ಪರಮಾತ್ಮಾ ಮತ್ತು ಜೀವಾತ್ಮರ ಏಕತೆಯನ್ನು ತಿಳಿದುಕೊಂಡು ಸುಮೇರುವಿನಂತೆ ನಿಶ್ಚಲ ಹಾಗೂ ಸುಖಿಯಾಗಿರಬೇಕು. ॥24॥
(ಶ್ಲೋಕ-25)
ಮೂಲಮ್
ಆದೌ ಪದಾರ್ಥಾವಗತಿರ್ಹಿ ಕಾರಣಂ
ವಾಕ್ಯಾರ್ಥವಿಜ್ಞಾನವಿಧೌ ವಿಧಾನತಃ ।
ತತ್ತ್ವಂಪದಾರ್ಥೌ ಪರಮಾತ್ಮಜೀವಕಾ-
ವಸೀತಿ ಚೈಕಾತ್ಮ್ಯಮಥಾನಯೋರ್ಭವೇತ್ ॥
ಅನುವಾದ
ಪ್ರತಿಯೊಂದು ವಾಕ್ಯದ ಅರ್ಥವನ್ನು ತಿಳಿದುಕೊಳ್ಳಲು, ಮೊದಲು ಅದರ ಪದಗಳ ಅರ್ಥದ ಜ್ಞಾನವೇ ಕಾರಣವಾಗಿರುತ್ತದೆ ಎಂಬುದು ನಿಯಮವೇ ಆಗಿದೆ. ಈ ‘ತತ್ತ್ವಮಸಿ’ ಮಹಾವಾಕ್ಯದ ‘ತತ್’ ಮತ್ತು ‘ತವಮ್’ ಪದಗಳು ಕ್ರಮವಾಗಿ ಪರಮಾತ್ಮಾ ಮತ್ತು ಜೀವಾತ್ಮಾ ಇವುಗಳ ವಾಚಕವಾಗಿವೆ ಹಾಗೂ ‘ಅಸಿ’ ಎಂಬ ಪದವು ಆ ಎರಡರ ಏಕತೆಯನ್ನು ಸೂಚಿಸುತ್ತದೆ. ॥25॥
(ಶ್ಲೋಕ-26)
ಮೂಲಮ್
ಪ್ರತ್ಯಕ್ ಪರೋಕ್ಷಾದಿವಿರೋಧಮಾತ್ಮನೋ-
ರ್ವಿಹಾಯ ಸಂಗೃಹ್ಯ ತಯೋಶ್ಚಿದಾತ್ಮತಾಮ್ ।
ಸಂಶೋಧಿತಾಂ ಲಕ್ಷಣಯಾ ಚ ಲಕ್ಷಿತಾಂ
ಜ್ಞಾತ್ವಾ ಸ್ವಮಾತ್ಮಾನಮಥಾದ್ವಯೋ ಭವೇತ್ ॥
ಅನುವಾದ
ಜೀವಾತ್ಮಾ ಮತ್ತು ಪರಮಾತ್ಮಾ ಇವೆರಡರಲ್ಲಿ ಜೀವಾತ್ಮಾ ಅಂತಃಕರಣದ ಸಾಕ್ಷಿಯಾಗಿದೆ, ಪರಮಾತ್ಮಾ ಇಂದ್ರಿಯಾ ತೀತನಾಗಿದ್ದಾನೆ. ಈ ವಾಚ್ಯಾರ್ಥ ರೂಪೀ ವಿರೋಧವನ್ನು ಬಿಟ್ಟು ಮತ್ತು ಲಕ್ಷಣಾವೃತ್ತಿಯಿಂದ ತಿಳಿಸಲಾಗಿರುವ ಅವುಗಳ ಶುದ್ಧ ಚೇತನ ತತ್ತ್ವವನ್ನು ಗ್ರಹಿಸಿ ಅದನ್ನೇ ತನ್ನ ಆತ್ಮಾ ಎಂದು ಅರಿಯಿರಿ ಹಾಗೂ ಈ ಪ್ರಕಾರ ಒಂದೇ ಭಾವದಿಂದ ಸ್ಥಿರವಾಗಿರಿ. ॥26॥
(ಶ್ಲೋಕ-27)
ಮೂಲಮ್
ಏಕಾತ್ಮಕತ್ವಾಜ್ಜಹತೀ ನ ಸಂಭವೇ-
ತ್ತಥಾಜಹಲ್ಲಕ್ಷಣತಾ ವಿರೋಧತಃ ।
ಸೋಽಯಂಪದಾರ್ಥಾವಿವ ಭಾಗಲಕ್ಷಣಾ
ಯುಜ್ಯೇತ ತತ್ತ್ವಂಪದಯೋರದೋಷತಃ ॥
ಅನುವಾದ
ಈ ‘ತತ್’ ಮತ್ತು ‘ತ್ವಮ್’ ಪದಗಳಲ್ಲಿ ಏಕರೂಪವಿರುವ ಕಾರಣ ಜಹತೀ ಲಕ್ಷಣಾ ಉಂಟಾಗ ಲಾರದು ಮತ್ತು ಪರಸ್ಪರ ವಿರುದ್ಧವಾಗಿರುವ ಕಾರಣ ಅಜಹಲ್ಲಕ್ಷಣಾ ಕೂಡ ಉಂಟಾಗಲಾರದು. ಆದುದರಿಂದ ‘ಸೋಯಮ್’ (ಇದು ಅದೇ) ಈ ಎರಡು ಪದಗಳ ಅರ್ಥದಂತೆಯೇ ಈ ‘ತತ್’ ಮತ್ತು ‘ತ್ವಮ್’ ಪದಗಳಲ್ಲಿಯೂ ಸಹ ಭಾಗತ್ಯಾಗ ಲಕ್ಷಣವೇ ನಿರ್ದೋಷತೆಯಿಂದ ಉಂಟಾಗಬಲ್ಲದು* ॥27॥
ಟಿಪ್ಪನೀ
- ಶಬ್ದಗಳ ವಾಚ್ಯಾರ್ಥವನ್ನು (ಅರ್ಥಾತ್ ಅವುಗಳ ಶಕ್ತಿ ವೃತ್ತಿಯಿಂದ ಸಿದ್ಧವಾಗುವ ಅರ್ಥ) ಬಿಟ್ಟು ಬೇರೆ ಅರ್ಥವನ್ನು ತೆಗೆದುಕೊಂಡಾಗ ಅಲ್ಲಿ ಲಕ್ಷಣಾವೃತ್ತಿಯಾಗುತ್ತದೆ. ಅದು ಜಹತಿ, ಅಜಹತಿ ಮತ್ತು ಜಹತ್ಯಜಹತಿ ಎಂಬುದಾಗಿ ಮೂರು ಪ್ರಕಾರವಾಗಿದೆ. ಜಹತೀ ಲಕ್ಷಣಾದಲ್ಲಿ ಶಬ್ದದ ವಾಚ್ಯಾರ್ಥವನ್ನು ಸರ್ವಥಾ ತ್ಯಜಿಸಿ ಅದರ ಹೊಸದಾದ ಅರ್ಥವನ್ನು ಮಾಡಲಾಗುತ್ತದೆ. ಉದಾ : ‘ಗಂಗಾಯಾಂ ಘೋಷಃ’ (ಗಂಗಾ ನದಿಯ ಮೇಲೆ ಪಶುಶಾಲಾ ಇದೆ ) ಈ ವಾಕ್ಯದ ವಾಚ್ಯಾರ್ಥದಿಂದ ಗಂಗೆಯ ಪ್ರವಾಹದ ಮೇಲೆ ಪಶುಶಾಲೆಯಿದೆ ಎಂದಾಗುತ್ತದೆ. ಆದರೆ ಇದು ಖಂಡಿತವಾಗಿ ಅಸಂಭವವಾಗಿದೆ. ಆದುದರಿಂದ ಇಲ್ಲಿ ‘ಗಂಗಾ’ ಎಂಬ ಶಬ್ದವನ್ನು ‘ಗಂಗಾಪ್ರವಾಹ’ ಎಂದು ಅರ್ಥೈಸದೆ ‘ಗಂಗಾತೀರ’ ಎಂಬ ಅರ್ಥಮಾಡಲಾಗುತ್ತದೆ. ಆದರೆ ‘ತತ್’ ಮತ್ತು ‘ತ್ವಮ್’ ಎಂಬ ಪದಗಳ ವಾಚ್ಯಾರ್ಥ ‘ಈಶ್ವರ’ ಮತ್ತು ‘ಜೀವ’ ಎಂಬುದನ್ನು ಸರ್ವಥಾ ತ್ಯಾಗಮಾಡಿಬಿಡುವುದರಿಂದ ಅವೆರಡರ ಚೈತನ್ಯವೂ ಕೂಡ ತ್ಯಜಿಸಿ ಹೋಗುತ್ತದೆ ಮತ್ತು ಚೈತನ್ಯದ ಏಕತೆಯೇ ಅಭೀಷ್ಟವಾಗಿದೆ; ಆದುದರಿಂದ ಜಹತೀ ಲಕ್ಷಣಾದಿಂದ ಈ ಪದಗಳ ಅರ್ಥದ ಏಕತೆ ಉಂಟಾಗಲಾರದು. ಅಜಹತೀ ಲಕ್ಷಣಾದಲ್ಲಿ ವಾಚ್ಯಾರ್ಥವನ್ನು ತ್ಯಾಗಮಾಡದೆ ಅದರ ಜೊತೆಗೆ ಬೇರೆ ಅರ್ಥವನ್ನೂ ಗ್ರಹಿಸಲಾಗುತ್ತದೆ. ಉದಾಹರಣೆಗೆ : ‘ಕಾಕೇಭ್ಯೋ ದಧಿ ರಕ್ಷ್ಯತಾಮ್’ (ಕಾಗೆಗಳಿಂದ ಮೊಸರನ್ನು ಕಾಪಾಡು). ಈ ವಾಕ್ಯದ ಅಭಿಪ್ರಾಯ ಕೇವಲ ಕಾಗೆಗಳಿಂದ ಮಾತ್ರ ಮೊಸರನ್ನು ಕಾಪಾಡುವುದೇ ಅಲ್ಲದೇ ಅದರ ಜೊತೆಗೆ ನಾಯಿ, ಬೆಕ್ಕು ಇತ್ಯಾದಿ ಬೇರೆ ಜೀವಿಗಳಿಂದಲೂ ಸಂರಕ್ಷಿಸುವುದೇ ಆಗಿರುತ್ತದೆ. ಇಲ್ಲಿ ‘ತತ್’ ಮತ್ತು ‘ತ್ವಮ್’ ಎಂಬ ಪದಗಳ ವಾಚ್ಯಾರ್ಥದಲ್ಲಿ ವಿರೋಧವಿದೆ, ಮತ್ತೆ ಬೇರೆ ಅರ್ಥವನ್ನು ಸೇರಿಸುವುದರಿಂದಲೂ ಆ ವಿರೋಧವು ದೂರವಾಗುವುದಿಲ್ಲ; ಆದ್ದರಿಂದ ಅಜಹಲ್ಲಕ್ಷಣಾದಿಂದಲೂ ಇವುಗಳ ಏಕತೆ ಸಾಧ್ಯವಾಗಲಾರದು. ಇವೆರಡಲ್ಲದೆ ಎಲ್ಲಿ ಸ್ವಲ್ಪ ಅರ್ಥವನ್ನು ಇಟ್ಟುಕೊಂಡು ಸ್ವಲ್ಪವನ್ನು ಬಿಟ್ಟುಬಿಡಲಾಗುತ್ತದೋ ಅದು ಜಹತ್ಯಜಹತೀ (ಭಾಗತ್ಯಾಗ) ಲಕ್ಷಣಾ ಎಂದಾಗುತ್ತದೆ. ಉದಾ : ‘ಸೋಯಮ್’ (ಅದೇ ಇದು) ಈ ವಾಕ್ಯದಲ್ಲಿ ‘ಅಯಮ್’ ಪದದಿಂದ ಹೇಳಲಾಗುವ ಪದಾರ್ಥದ ಅಪರೋಕ್ಷತೆ ಮತ್ತು ‘ಸಃ’ ಎಂಬ ಪದದ ವಾಚ್ಯ ಪದಾರ್ಥದ ಪರೋಕ್ಷತೆ ಇವುಗಳನ್ನು ತ್ಯಜಿಸಿ ಇವೆರಡರಿಂದ ರಹಿತವಾದ ಯಾವ ನಿರ್ವಿಶೇಷ ಪದಾರ್ಥ ಉಂಟೋ ಅದರ ಏಕತೆಯೆಂದು ಹೇಳಲಾಗುತ್ತದೆ. ಇದೇ ಪ್ರಕಾರ ಮಹಾವಾಕ್ಯದ ‘ತತ್’ ಎಂಬ ಪದದ ವಾಚ್ಯ ‘ಈಶ್ವರ’ ಎಂಬುದರ ಗುಣ ಸರ್ವಜ್ಞತೆ, ಪರೋಕ್ಷತೆ ಇತ್ಯಾದಿ ಮತ್ತು ‘ತ್ವಮ್’ ಎಂಬ ಪದದ ವಾಚ್ಯ ‘ಜೀವ’ ಎಂಬುದರ ಗುಣ ಅಲ್ಪಜ್ಞತೆ, ಪ್ರತ್ಯಕ್ತಾ ಮುಂತಾದವುಗಳನ್ನು ತ್ಯಜಿಸಿ ಕೇವಲ ಚೇತನಾಂಶದಲ್ಲಿ ಏಕತೆಯೆಂಬುದನ್ನು ತಿಳಿಸಲಾಗುತ್ತದೆ.
(ಶ್ಲೋಕ-28)
ಮೂಲಮ್
ರಸಾದಿಪಂಚೀಕೃತಭೂತಸಂಭವಂ
ಭೋಗಾಲಯಂ ದುಃಖಸುಖಾದಿಕರ್ಮಣಾಮ್ ।
ಶರೀರಮಾದ್ಯಂತವದಾದಿಕರ್ಮಜಂ
ಮಾಯಾಮಯಂ ಸ್ಥೂಲಮುಪಾಧಿಮಾತ್ಮನಃ ॥
(ಶ್ಲೋಕ-29)
ಮೂಲಮ್
ಸೂಕ್ಷಂ ಮನೋಬುದ್ಧಿದಶೇಂದ್ರಿಯೈರ್ಯುತಂ
ಪ್ರಾಣೈರಪಂಚೀಕೃತಭೂತಸಂಭವಮ್ ।
ಭೋಕ್ತುಃ ಸುಖಾದೇರನುಸಾಧನಂ ಭವೇ-
ಚ್ಛರೀರಮನ್ಯದ್ವಿದುರಾತ್ಮನೋ ಬುಧಾಃ ॥
ಅನುವಾದ
ಪೃಥ್ವಿಯೇ ಮೊದಲಾದ ಪಂಚೀಕೃತ ಭೂತಗಳಿಂದ ಉತ್ಪತ್ತಿಯಾದ, ಸುಖ-ದುಃಖಾದಿ ಕರ್ಮ- ಭೋಗಗಳಿಗೆ ಆಶ್ರಯವಾದ ಮತ್ತು ಪೂರ್ವೋಪಾರ್ಜಿತ ಕರ್ಮಲದಿಂದ ಪ್ರಾಪ್ತಿಯಾಗುವ ಈ ಮಾಯಾಮಯ ಆದಿ-ಅಂತ್ಯಗಳುಳ್ಳ ಶರೀರವನ್ನು ಪಂಡಿತರು ಆತ್ಮನ ಸ್ಥೂಲ ಉಪಾಧಿಯೆಂದೇ ತಿಳಿಯುತ್ತಾರೆ. ಮನಸ್ಸು, ಬುದ್ಧಿ, ಹತ್ತು ಇಂದ್ರಿಯಗಳು, ಪಂಚ-ಪ್ರಾಣಗಳಿಂದ (ಈ ಹದಿನೇಳು ಅಂಗಗಳು) ಕೂಡಿರುವ ಮತ್ತು ಅಪಂಚೀಕೃತ ಭೂತಗಳಿಂದ ಉತ್ಪನ್ನವಾದ, ಅನುಭವಿಸುವವನ ಸುಖ-ದುಃಖಾದಿ ಅನುಭವ ಗಳಿಗೆ ಸಾಧನವಾದ ಸೂಕ್ಷ್ಮಶರೀರವನ್ನು ಆತ್ಮನ ಮತ್ತೊಂದು ದೇಹವೆಂದು ಭಾವಿಸುತ್ತಾರೆ. ॥28-29॥
(ಶ್ಲೋಕ-30)
ಮೂಲಮ್
ಅನಾದ್ಯ ನಿರ್ವಾಚ್ಯಮಪೀಹ ಕಾರಣಂ
ಮಾಯಾಪ್ರಧಾನಂ ತು ಪರಂ ಶರೀರಕಮ್ ।
ಉಪಾಧಿಭೇದಾತ್ತು ಯತಃ ಪೃಥಕ್ ಸ್ಥಿತಂ
ಸ್ವಾತ್ಮಾನಮಾತ್ಮನ್ಯವಧಾರಯೇತ್ಕ್ರಮಾತ್ ॥
ಅನುವಾದ
ಇವುಗಳಲ್ಲದೆ ಅನಾದಿ ಮತ್ತು ಅನಿರ್ವಾಚ್ಯ ಮಾಯಾಮಯ ಕಾರಣ ಶರೀರವೇ ಜೀವಿಯ ಮೂರನೇ ದೇಹವಾಗಿದೆ. ಈ ಪ್ರಕಾರ ಉಪಾಧಿ-ಭೇದದಿಂದ ಸರ್ವಥಾ ಬೇರೆಯೇ ಇರುವ ತನ್ನ ಆತ್ಮಸ್ವರೂಪವನ್ನು ಕ್ರಮಶಃ ಉಪಾಧಿಗಳನ್ನು ಇಲ್ಲವಾಗಿಸಿ ತನ್ನ ಹೃದಯದಲ್ಲಿ ದೃಢಪಡಿಸಿಕೊಳ್ಳಬೇಕು. ॥30॥
(ಶ್ಲೋಕ-31)
ಮೂಲಮ್
ಕೋಶೇಷ್ವಯಂ ತೇಷು ತು ತತ್ತದಾಕೃತಿ -
ರ್ವಿಭಾತಿ ಸಂಗಾತ್ ಸ್ಫಟಿಕೋಪಲೋ ಯಥಾ ।
ಅಸಂಗರೂಪೋಽಯಮಜೋ ಯತೋಽದ್ವಯೋ
ವಿಜ್ಞಾಯತೇಽಸ್ಮಿನ್ಪರಿತೋ ವಿಚಾರಿತೇ ॥
ಅನುವಾದ
ಸ್ಫಟಿಕಮಣಿಯಂತೆ ಈ ಆತ್ಮವೂ ಸಹ (ಅನ್ನಮಯಾದಿ) ಬೇರೆ-ಬೇರೆ ಕೋಶಗಳಲ್ಲಿ ಅವುಗಳ ಸಂಗದಿಂದ ಅವುಗಳ ಆಕಾರದಲ್ಲಿರುವಂತೆ ಭಾಸವಾಗುತ್ತದೆ. ಆದರೆ ಇದನ್ನು ಚೆನ್ನಾಗಿ ವಿಚಾರ ಮಾಡುವುದರಿಂದ ಇದು ಅದ್ವಿತೀಯವಾದ ಕಾರಣ ಅಸಂಗರೂಪೀ ಮತ್ತು ಅಜನ್ಮಾ ಎಂಬುದಾಗಿ ನಿಶ್ಚಯವಾಗುತ್ತದೆ. ॥31॥
(ಶ್ಲೋಕ-32)
ಮೂಲಮ್
ಬುದ್ಧೇಸ್ತ್ರಿಧಾ ವೃತ್ತಿರಪೀಹ ದೃಶ್ಯತೇ
ಸ್ವಪ್ನಾದಿಭೇದೇನ ಗುಣತ್ರಯಾತ್ಮನಃ ।
ಅನ್ಯೋನ್ಯತೋಸ್ಮಿನ್ ವ್ಯಭಿಚಾರತೋ ಮೃಷಾ
ನಿತ್ಯೇ ಪರೇ ಬ್ರಹ್ಮಣಿ ಕೇವಲೇ ಶಿವೇ ॥
ಅನುವಾದ
ತ್ರಿಗುಣಾತ್ಮಿಕವಾದ ಬುದ್ಧಿಯೇ ಸ್ವಪ್ನ, ಜಾಗ್ರತ್ ಮತ್ತು ಸುಷುಪ್ತಿ ಎಂಬ ಭೇದದಿಂದ ಮೂರು ಪ್ರಕಾರದ ವೃತ್ತಿಗಳು ಕಂಡುಬರುತ್ತವೆ. ಆದರೆ ಈ ಮೂರು ವೃತ್ತಿಗಳಲ್ಲಿ ಪ್ರತಿಯೊಂದೂ ಒಂದು ಮತ್ತೊಂದರಲ್ಲಿ ವ್ಯಭಿಚಾರ ವಾಗುವ ಕಾರಣ, ಏಕಮಾತ್ರ ಕಲ್ಯಾಣಸ್ವರೂಪೀ ನಿತ್ಯ ಪರಬ್ರಹ್ಮನಲ್ಲಿ ಇವು ಮೂರೂ ಮಿಥ್ಯೆಯಾಗಿವೆ. ಅರ್ಥಾತ್ ಆತ್ಮನಲ್ಲಿ ಈ ವೃತ್ತಿಗಳು ಸರ್ವಥಾ ಅಭಾವವಾಗಿವೆ. ॥32॥
(ಶ್ಲೋಕ-33)
ಮೂಲಮ್
ದೇಹೇಂದ್ರಿಯಪ್ರಾಣಮನಶ್ಚಿದಾತ್ಮನಾಂ
ಸಂಘಾದಜಸ್ರಂ ಪರಿವರ್ತತೇ ಧಿಯಃ ।
ವೃತ್ತಿಸ್ತಮೋಮೂಲತಯಾಜ್ಞಲಕ್ಷಣಾ
ಯಾವದ್ಭವೇತ್ತಾವದಸೌ ಭವೋದ್ಭವಃ ॥
ಅನುವಾದ
ದೇಹ, ಇಂದ್ರಿಯ, ಪ್ರಾಣ, ಮನಸ್ಸು, ಮತ್ತು ಚೇತನ ಆತ್ಮದ ಸಂಘಾತರೂಪದಿಂದ ಬುದ್ಧಿಯ ವೃತ್ತಿಯೇ ನಿರಂತರ ಪರಿವರ್ತನೆಗೊಳ್ಳುತ್ತದೆ. ಈ ವೃತ್ತಿಗಳು ತಮೋಗುಣದಿಂದ ಉಂಟಾದ ಕಾರಣ ಅಜ್ಞಾನರೂಪಿಯಾಗಿವೆ. ಇದು ಇರುವವರೆಗೂ ಸಂಸಾರದಲ್ಲಿ ಜನ್ಮವುಂಟಾಗುತ್ತಲೇ ಇರುತ್ತದೆ. ॥33॥
(ಶ್ಲೋಕ-34)
ಮೂಲಮ್
ನೇತಿಪ್ರಮಾಣೇನ ನಿರಾಕೃತಾಖಿಲೋ
ಹೃದಾ ಸಮಾಸ್ವಾದಿತಚಿದ್ ಘನಾಮೃತಃ ।
ತ್ಯಜೇದಶೇಷಂ ಜಗದಾತ್ತಸದ್ರಸಂ
ಪೀತ್ವಾ ಯಥಾಂಭಃ ಪ್ರಜಹಾತಿ ತತ್ಫಲಮ್ ॥
ಅನುವಾದ
‘ನೇತಿ-ನೇತಿ’ ಮುಂತಾದ ಶ್ರುತಿಪ್ರಮಾಣದಿಂದ ಇಡೀ ಪ್ರಪಂಚವನ್ನು ಇಲ್ಲವಾಗಿಸಿ, ಹೃದಯದಲ್ಲಿ ಚಿದ್ಘನಾಮೃತವನ್ನು ಆಸ್ವಾದಿಸಿ, ಎಳೆನೀರನ್ನು ಕುಡಿದು ಚಿಪ್ಪನ್ನು ಮನುಷ್ಯರು ಎಸೆದುಬಿಡುವಂತೇ ಸಾರರೂಪೀ ಸತ್(ಬ್ರಹ್ಮ)ವನ್ನು ಸ್ವೀಕರಿಸಿಕೊಂಡು ಸಂಪೂರ್ಣ ಜಗತ್ತನ್ನು ತ್ಯಾಗಮಾಡಬೇಕು. ॥34॥
(ಶ್ಲೋಕ-35)
ಮೂಲಮ್
ಕದಾಚಿದಾತ್ಮಾ ನ ಮೃತೋ ನ ಜಾಯತೇ
ನ ಕ್ಷೀಯತೇ ನಾಪಿ ವಿವರ್ಧತೇಽನವಃ ।
ನಿರಸ್ತಸರ್ವಾತಿಶಯಃ ಸುಖಾತ್ಮಕಃ
ಸ್ವಯಂಪ್ರಭಃ ಸರ್ವಗತೋಽಯಮದ್ವಯಃ ॥
ಅನುವಾದ
ಆತ್ಮಾ ಎಂದೆಂದಿಗೂ ಸಾಯುವುದಲ್ಲ, ಹುಟ್ಟುವುದೂ ಇಲ್ಲ; ಅದು ಎಂದಿಗೂ ಕ್ಷೀಣವಾಗುವುದೂ ಇಲ್ಲ ಮತ್ತು ವೃದ್ಧಿಯಾಗುವುದೂ ಇಲ್ಲ. ಅದು ಪುರಾತನ, ಎಲ್ಲ ವಿಶೇಷಣಗಳಿಂದ ರಹಿತ, ಸುಖಸ್ವರೂಪಿ, ಸ್ವಯಂಪ್ರಕಾಶವುಳ್ಳದ್ದು, ಸರ್ವಗತ ಮತ್ತು ಅದ್ವಿತೀಯವಾಗಿದೆ. ॥35॥
(ಶ್ಲೋಕ-36)
ಮೂಲಮ್
ಏವಂವಿಧೇ ಜ್ಞಾನಮಯೇ ಸುಖಾತ್ಮಕೇ
ಕಥಂ ಭವೋ ದುಃಖಮಯಃ ಪ್ರತೀಯತೇ ।
ಅಜ್ಞಾನತೋಽಧ್ಯಾಸವಶಾತ್ಪ್ರಕಾಶತೇ
ಜ್ಞಾನೇ ವಿಲೀಯೇತ ವಿರೋಧತಃ ಕ್ಷಣಾತ್ ॥
ಅನುವಾದ
ಈ ಪ್ರಕಾರ ಜ್ಞಾನಮಯನೂ ಸುಖಸ್ವರೂಪಿಯಾದವನಿಗೆ ಈ ದುಃಖಮಯ ಸಂಸಾರವು ಹೇಗೆತಾನೇ ಕಂಡುಬಂದೀತು? ಇದು ಮಿಥ್ಯಾಜ್ಞಾನದ ಕಾರಣದಿಂದ ಅಜ್ಞಾನದಿಂದಲೇ ಕಂಡು ಬರುತ್ತದೆ. ಇದಾದರೋ ಜ್ಞಾನದಿಂದ ಒಂದು ಕ್ಷಣದಲ್ಲಿಯೇ ಲೀನವಾಗಿ ಹೋಗುತ್ತದೆ; ಏಕೆಂದರೆ ಜ್ಞಾನ ಮತ್ತು ಅಜ್ಞಾನಕ್ಕೆ ಪರಸ್ಪರ ವಿರೋಧವಿದೆ. ॥36॥
(ಶ್ಲೋಕ-37)
ಮೂಲಮ್
ಯದನ್ಯದನ್ಯತ್ರ ವಿಭಾವ್ಯತೇ ಭ್ರಮಾ
ದಧ್ಯಾಸಮಿತ್ಯಾಹುರಮುಂ ವಿಪಶ್ಚಿತಃ ।
ಅಸರ್ಪಭೂತೇಽಹಿವಿ ಭಾವನಂ ಯಥಾ
ರಜ್ಜ್ವಾದಿಕೇ ತದ್ವದಪೀಶ್ವರೇ ಜಗತ್ ॥
ಅನುವಾದ
ಭ್ರಮೆಯಿಂದ ಯಾವುದು ಬೇರೆಯದರಲ್ಲಿ ಬೇರೆಯಾಗಿ ಕಂಡುಬರುವುದನ್ನೇ ವಿದ್ವಾಂಸರು ವಿಥ್ಯಾಜ್ಞಾನ ಎಂದು ಹೇಳಿದ್ದಾರೆ. ಸರ್ಪವಲ್ಲದ ಹಗ್ಗ ಇತ್ಯಾದಿಗಳಲ್ಲಿ ಸರ್ಪವೊ ಎಂದು ಕಂಡುಬರುವಂತೆ ಈಶ್ವರನಲ್ಲಿ ಜಗತ್ತು ಕಂಡುಬರುವಂತೆ ಭಾಸವಾಗುತ್ತದೆ. ॥37॥
(ಶ್ಲೋಕ-38)
ಮೂಲಮ್
ವಿಕಲ್ಪಮಾಯಾರಹಿತೇ ಚಿದಾತ್ಮಕೇಽ-
ಹಂಕಾರ ಏಷ ಪ್ರಥಮಃ ಪ್ರಕಲ್ಪಿತಃ ।
ಅಧ್ಯಾಸ ಏವಾತ್ಮನಿ ಸರ್ವಕಾರಣೇ
ನಿರಾಮಯೇ ಬ್ರಹ್ಮಣಿ ಕೇವಲೇ ಪರೇ ॥
ಅನುವಾದ
ವಿಕಲ್ಪ ಮತ್ತು ಮಾಯಾ ರಹಿತನಾದ, ಎಲ್ಲಕ್ಕೂ ಕಾರಣನಾದ ಆ ನಿರಾಮಯ, ಅದ್ವಿತೀಯ ಮತ್ತು ಚಿತ್ ಸ್ವರೂಪೀ ಪರಮಾತ್ಮಾ ಬ್ರಹ್ಮನಲ್ಲಿ ಮೊದಲಿಗೆ ಈ ‘ಅಹಂಕಾರ’ ರೂಪೀ ಮಿಥ್ಯಾಜ್ಞಾನದ ಕಲ್ಪನೆಯೇ ಉಂಟಾಗುತ್ತದೆ. ॥38॥
(ಶ್ಲೋಕ-39)
ಮೂಲಮ್
ಇಚ್ಛಾದಿರಾಗಾದಿಸುಖಾದಿಧರ್ಮಿಕಾಃ
ಸದಾ ಧಿಯಃ ಸಂಸೃತಿಹೇತವಃ ಪರೇ ।
ಯಸ್ಮಾತ್ಪ್ರಸುಪ್ತೌ ತದಭಾವತಃ ಪರಃ
ಸುಖಸ್ವರೂಪೇಣ ವಿಭಾವ್ಯತೇ ಹಿ ನಃ ॥
ಅನುವಾದ
ಎಲ್ಲಕ್ಕೂ ಸಾಕ್ಷಿಯಾದ ಆತ್ಮನಲ್ಲಿ ಇಚ್ಛೆ, ಅನಿಚ್ಛೆ, ರಾಗ-ದ್ವೇಷ ಮತ್ತು ಸುಖ-ದುಃಖಾದಿ ರೂಪವಾದ ಬುದ್ಧಿಯ ವೃತ್ತಿಗಳೇ ಜನನ-ಮರಣರೂಪೀ ಸಂಸಾರದ ಕಾರಣವಾಗಿವೆ; ಏಕೆಂದರೆ ಸುಷುಪ್ತಿ (ಗಾಢನಿದ್ರೆ)ಯಲ್ಲಿ ಇವುಗಳೆಲ್ಲಾ ಅಭಾವ ವಾಗುವುದರಿಂದ ನಮಗೆ ಆತ್ಮನ ಸುಖರೂಪದ ಅರಿವು ಉಂಟಾಗುತ್ತದೆ. ॥39॥
(ಶ್ಲೋಕ-40)
ಮೂಲಮ್
ಅನಾದ್ಯವಿದ್ಯೋದ್ಭವಬುದ್ಧಿಬಿಂಬಿತೋ
ಜೀವಃ ಪ್ರಕಾಶೋಯಮಿತೀರ್ಯತೇ ಚಿತಃ ।
ಆತ್ಮಾಧಿಯಃ ಸಾಕ್ಷಿತಯಾ ಪೃಥಕ್ ಸ್ಥಿತೋ
ಬುದ್ಧ್ಯಾ ಪರಿಚ್ಛಿನ್ನಪರಃ ಸ ಏವ ಹಿ ॥
ಅನುವಾದ
ಅನಾದಿ ಅವಿದ್ಯೆಯಿಂದ ಉತ್ಪತ್ತಿಯಾದ ಬುದ್ಧಿಯಲ್ಲಿ ಪ್ರತಿಬಿಂಬಿತವಾದ ಈ ಚೇತನದ ಪ್ರಕಾಶವೇ ‘ಜೀವ’ ಎಂದು ಹೇಳಲಾಗುತ್ತದೆ. ಬುದ್ಧಿಯ ಸಾಕ್ಷೀರೂಪದಿಂದ ಆತ್ಮನು ಅದರಿಂದ ಬೇರೆಯಾಗಿದ್ದಾನೆ, ಆ ಪರಮಾತ್ಮನಾದರೋ ಬುದ್ಧಿಯಿಂದ ಅತೀತನಾಗಿದ್ದಾನೆ. ॥40॥
(ಶ್ಲೋಕ-41)
ಮೂಲಮ್
ಚಿದ್ಬಿಂಬಸಾಕ್ಷ್ಯಾತ್ಮಧಿಯಾಂ ಪ್ರಸಂಗತ-
ಸ್ತ್ವೇಕತ್ರ ವಾಸಾದನಲಾಕ್ತಲೋಹವತ್ ।
ಅನ್ಯೋನ್ಯಮಧ್ಯಾಸವಶಾತ್ಪ್ರತೀಯತೇ
ಜಡಾಜಡತ್ವಂ ಚ ಚಿದಾತ್ಮಚೇತಸೋಃ ॥
ಅನುವಾದ
ಬೆಂಕಿಯಿಂದ ಕಾದ ಕಬ್ಬಿಣದಂತೆ ಅಂತಃಕರಣದಲ್ಲಿ ಪ್ರತಿಬಿಂಬಿತ, ಸಾಕ್ಷೀ ಆತ್ಮಾ ಹಾಗೂ ಬುದ್ಧಿ ಒಂದೆಡೆ ಸೇರುವುದರಿಂದ ಪರಸ್ಪರ ಅನ್ಯೋನ್ಯಾಧ್ಯಾಸ ಉಂಟಾದ ಕಾರಣ ಕ್ರಮಶಃ ಅವುಗಳ ಚೈತನ್ಯತೆ ಮತ್ತು ಜಡತೆ ಕಂಡುಬರುತ್ತದೆ (ಅರ್ಥಾತ್ ಬೆಂಕಿಯಿಂದ ಕಾದಿರುವ ಕಬ್ಬಿಣದ ಗುಂಡಿನಲ್ಲಿ ಬೆಂಕಿ ಮತ್ತು ಕಬ್ಬಿಣದ ತಾದಾತ್ಮ್ಯತೆ ಉಂಟಾದುದರಿಂದ ಕಬ್ಬಿಣದ ಆಕಾರ ಬೆಂಕಿಯಲ್ಲಿ ಮತ್ತು ಬೆಂಕಿಯ ಉಷ್ಣತೆ ಕಬ್ಬಿಣದಲ್ಲಿ ಕಾಣಿಸಿಕೊಳ್ಳುತ್ತದೆ. ಅದೇ ಪ್ರಕಾರ ಬುದ್ಧಿ ಮತ್ತು ಆತ್ಮದ ತಾದಾತ್ಮ್ಯತೆ ಯುಂಟಾಗುವುದರಿಂದ ಆತ್ಮನ ಚೈತನ್ಯವು ಬುದ್ಧಿ ಇತ್ಯಾದಿಗಳಲ್ಲಿ ಮತ್ತು ಬುದ್ಧಿ ಇತ್ಯಾದಿಗಳ ಜಡತೆ ಆತ್ಮನಲ್ಲಿ ಕಂಡು ಬರುತ್ತದೆ. ಆದುದರಿಂದ ಮಿಥ್ಯಾಜ್ಞಾನ ವಶದಿಂದ ಬುದ್ಧಿಯಿಂದ ಹಿಡಿದು ಶರೀರಪರ್ಯಂತ ಅನಾತ್ಮ ವಸ್ತುಗಳನ್ನೇ ಆತ್ಮಾ ಎಂದು ಭಾವಿಸುತ್ತಾರೆ.) ॥41॥
(ಶ್ಲೋಕ-42)
ಮೂಲಮ್
ಗುರೋಃ ಸಕಾಶಾದಪಿ ವೇದವಾಕ್ಯತಃ
ಸಂಜಾತವಿದ್ಯಾನುಭವೋ ನಿರೀಕ್ಷ್ಯ ತಮ್ ।
ಸ್ವಾತ್ಮಾನಮಾತ್ಮಸ್ಥಮುಪಾಧಿವರ್ಜಿತಂ
ತ್ಯಜೇದಶೇಷಂ ಜಡಮಾತ್ಮಗೋಚರಮ್ ॥
ಅನುವಾದ
ಗುರುವಿನ ಸಮೀಪದಲ್ಲಿರುವುದರಿಂದ ಮತ್ತು ವೇದವಾಕ್ಯಗಳಿಂದ ಆತ್ಮಜ್ಞಾನದ ಅನುಭವ ಉಂಟಾದ ನಂತರ ತನ್ನ ಹೃದಯದಲ್ಲಿರುವ ಉಪಾಧಿ ರಹಿತನಾದ ಆತ್ಮನ ಸಾಕ್ಷಾತ್ಕಾರ ಮಾಡಿಕೊಂಡು, ಆತ್ಮವೆಂಬಂತೆ ಭಾಸವಾಗುವ ದೇಹಾದಿ ಸಂಪೂರ್ಣ ಜಡಪದಾರ್ಥಗಳನ್ನು ತ್ಯಾಗ ಮಾಡಿಬಿಡಬೇಕು. ॥42॥
(ಶ್ಲೋಕ-43)
ಮೂಲಮ್
ಪ್ರಕಾಶರೂಪೋಽಹಮಜೋಽಹಮದ್ವಯೋ-
ಸಕೃದ್ವಿಭಾತೋಽಹಮತೀವ ನಿರ್ಮಲಃ ।
ವಿಶುದ್ಧವಿಜ್ಞಾನಘನೋ ನಿರಾಮಯಃ
ಸಂಪೂರ್ಣ ಆನಂದಮಯೋಽಹಮಕ್ರಿಯಃ ॥
ಅನುವಾದ
ನಾನು ಪ್ರಕಾಶಸ್ವರೂಪೀ, ಅಜನ್ಮಾ, ಅದ್ವಿತೀಯ, ನಿರಂತರ ಭಾಸಮಾನ, ಅತ್ಯಂತ ನಿರ್ಮಲ, ವಿಶುದ್ಧ ವಿಜ್ಞಾನಘನ, ನಿರಾಮಯ, ಕ್ರಿಯಾರಹಿತ ಮತ್ತು ಏಕಮಾತ್ರ ಆನಂದ ಸ್ವರೂಪನಾಗಿದ್ದೇನೆ. ॥43॥
(ಶ್ಲೋಕ-44)
ಮೂಲಮ್
ಸದೈವ ಮುಕ್ತೋಽಹಮಚಿಂತ್ಯಶಕ್ತಿಮಾ-
ನತೀಂದ್ರಿಯಜ್ಞಾನಮವಿಕ್ರಿಯಾತ್ಮಕಃ ।
ಅನಂತಪಾರೋಹಮಹರ್ನಿಶಂ ಬುಧೈ-
ರ್ವಿಭಾವಿತೋಽಹಂ ಹೃದಿ ವೇದವಾದಿಭಿಃ ॥
ಅನುವಾದ
ನಾನು ಸದಾ ಮುಕ್ತ, ಅಚಿಂತ್ಯ ಶಕ್ತಿ, ಅತೀಂದ್ರಿಯ, ಜ್ಞಾನ ಸ್ವರೂಪಿ, ಅವಿಕೃತರೂಪಿ, ಮತ್ತು ಅನಂತಪಾರನಾಗಿದ್ದೇನೆ. ವೇದಾಂತ ಪಂಡಿತರು ಹಗಲೂ-ರಾತ್ರಿ ಹೃದಯದಲ್ಲಿ ನನ್ನ ಚಿಂತನೆಯನ್ನು ಮಾಡುತ್ತಾರೆ. ॥44॥
(ಶ್ಲೋಕ-45)
ಮೂಲಮ್
ಏವಂ ಸದಾತ್ಮಾನಮಖಂಡಿತಾತ್ಮನಾ
ವಿಚಾರಮಾಣಸ್ಯ ವಿಶುದ್ಧಭಾವನಾ ।
ಹನ್ಯಾದವಿದ್ಯಾಮಚಿರೇಣ ಕಾರಕೈ
ರಸಾಯನಂ ಯದ್ವದುಪಾಸಿತಂ ರುಜಃ ॥
ಅನುವಾದ
ಈ ಪ್ರಕಾರ ಸದಾ ಅಖಂಡ ವೃತ್ತಿಯಿಂದ ಚಿಂತನೆ ಮಾಡುವವರ ಅಂತಃಕರಣದಲ್ಲಿ ಉತ್ಪತ್ತಿಯಾದ ವಿಶುದ್ಧ ಭಾವನೆಯು, ನಿಯಮಾನುಸಾರ ಸೇವಿಸಿದ ಔಷಧಿಯು ರೋಗವನ್ನು ನಾಶಮಾಡಿಬಿಡುವಂತೆ ಕೂಡಲೇ ಕಾರಕಾದಿಗಳ ಸಹಿತ ಅವಿದ್ಯೆಯನ್ನು ನಾಶಮಾಡುತ್ತದೆ. ॥45॥
(ಶ್ಲೋಕ-46)
ಮೂಲಮ್
ವಿವಿಕ್ತ ಆಸೀನ ಉಪಾರತೇಂದ್ರಿಯೋ
ವಿನಿರ್ಜಿತಾತ್ಮಾ ವಿಮಲಾಂತರಾಶಯಃ ।
ವಿಭಾವಯೇದೇಕಮನನ್ಯಸಾಧನೋ
ವಿಜ್ಞಾನದೃಕ್ಕೇವಲ ಆತ್ಮಸಂಸ್ಥಿತಃ ॥
ಅನುವಾದ
ಆತ್ಮಚಿಂತನೆ ಮಾಡುವವನು ಇಂದ್ರಿಯಗಳನ್ನು ಅವುಗಳ ವಿಷಯಗಳಿಂದ ಹಿಮ್ಮೆಟ್ಟಿಸಿ ಮತ್ತು ಅಂತಃಕರಣವನ್ನು ತನ್ನ ಅಧೀನ ಮಾಡಿಕೊಂಡು ಏಕಾಂತ ಸ್ಥಳದಲ್ಲಿ ಕುಳಿತು, ಆತ್ಮನಲ್ಲಿ ಸ್ಥಿರಗೊಂಡು, ಬೇರೆ ಯಾವ ಸಾಧನೆಯನ್ನು ಆಶ್ರಯಿಸದೆ ಶುದ್ಧಚಿತ್ತನಾಗಿ, ಕೇವಲ ಜ್ಞಾನದೃಷ್ಟಿಯ ಮೂಲಕ ಆತ್ಮವೊಂದನ್ನೇ ಚಿಂತಿಸಬೇಕು. ॥46॥
(ಶ್ಲೋಕ-47)
ಮೂಲಮ್
ವಿಶ್ವಂ ಯದೇತತ್ಪರಮಾತ್ಮದರ್ಶನಂ
ವಿಲಾಪಯೇದಾತ್ಮನಿ ಸರ್ವಕಾರಣೇ ।
ಪೂರ್ಣಶ್ಚಿದಾನಂದಮಯೋಽವತಿಷ್ಠತೇ
ನ ವೇದ ಬಾಹ್ಯಂ ನ ಚ ಕಿಂಚಿದಾಂತರಮ್ ॥
ಅನುವಾದ
ಈ ವಿಶ್ವವು ಪರಮಾತ್ಮ ರೂಪವಾಗಿದೆ ಎಂದು ತಿಳಿದುಕೊಂಡು ಇದನ್ನು ಎಲ್ಲಕ್ಕೂ ಕಾರಣರೂಪಿಯಾದ ಆತ್ಮನಲ್ಲಿ ಲೀನಗೊಳಿಸಬೇಕು; ಈ ಪ್ರಕಾರ ಪೂರ್ಣಚಿದಾನಂದ ಸ್ವರೂಪದಿಂದ ಸ್ಥಿತನಾಗಿರುವವನಿಗೆ ಬಾಹ್ಯ ಅಥವಾ ಆಂತರಿಕ ಯಾವುದೇ ವಸ್ತುವಿನ ಜ್ಞಾನ ಇರುವುದಿಲ್ಲ. ॥47॥
(ಶ್ಲೋಕ-48)
ಮೂಲಮ್
ಪೂರ್ವಂ ಸಮಾಧೇರಖಿಲಂ ವಿಚಿಂತಯೇ-
ದೋಂಕಾರಮಾತ್ರಂ ಸಚರಾಚರಂ ಜಗತ್ ।
ತದೇವ ವಾಚ್ಯಂ ಪ್ರಣವೋ ಹಿ ವಾಚಕೋ
ವಿಭಾವ್ಯತೇಽಜ್ಞಾನವಶಾನ್ನ ಬೋಧತಃ ॥
(ಶ್ಲೋಕ-49)
ಮೂಲಮ್
ಅಕಾರಸಂಜ್ಞಃ ಪುರುಷೋ ಹಿ ವಿಶ್ವಕೋ
ಹ್ಯುಕಾರಕಸ್ತೈಜಸ ಈರ್ಯತೇ ಕ್ರಮಾತ್ ।
ಪ್ರಾಜ್ಞೋ ಮಕಾರಃ ಪರಿಪಠ್ಯತೇಖಿಲೈಃ
ಸಮಾಧಿಪೂರ್ವಂ ನ ತು ತತ್ತ್ವತೋ ಭವೇತ್ ॥
ಅನುವಾದ
ಸಮಾಧಿ ಪ್ರಾಪ್ತಿಯಾಗುವುದಕ್ಕಿಂತ ಮೊದಲು ಸಂಪೂರ್ಣ ಚರಾಚರ ಜಗತ್ತು ಕೇವಲ ಓಂಕಾರ ಮಾತ್ರವಾಗಿದೆ. ಈ ಪ್ರಪಂಚವು ವಾಚ್ಯವಾಗಿದೆ ಮತ್ತು ಓಂಕಾರ ಇದರ ವಾಚಕವಾಗಿದೆ. ಅಜ್ಞಾನದ ಕಾರಣದಿಂದಲೇ ಇದು ಕಂಡುಬರುತ್ತದೆ. ಜ್ಞಾನ ಪ್ರಾಪ್ತಿಯಾದಾಗ ಇದು ಏನೂ ಉಳಿಯುವುದಿಲ್ಲ. ಓಂಕಾರದಲ್ಲಿ ಅ, ಉ ಮತ್ತು ಮ ಈ ಮೂರು ವರ್ಣಗಳಿವೆ ; ಇವುಗಳಲ್ಲಿ ಅಕಾರವು ವಿಶ್ವದ (ಜಾಗ್ರತಿಯ ಅಭಿಮಾನಿ) ವಾಚಕವಾಗಿದೆ. ಉಕಾರವು ತೈಜಸ (ಸ್ವಪ್ನದ ಅಭಿಮಾನಿ) ಎಂದು ಹೇಳುವರು. ಮಕಾರವು ಪ್ರಾಜ್ಞ (ಸುಷುಪ್ತಿಯ ಅಭಿಮಾನಿ) ಎಂದು ಹೇಳುತ್ತಾರೆ; ಈ ವ್ಯವಸ್ಥೆಯು ಸಮಾಧಿಲಾಭಕ್ಕಿಂತ ಮೊದಲನೆಯದಾಗಿದೆ. ತತ್ತ್ವದೃಷ್ಟಿಯಿಂದ ಇಂತಹ ಯಾವ ಭೇದವೂ ಇರುವುದಿಲ್ಲ. ॥48-49॥
(ಶ್ಲೋಕ-50)
ಮೂಲಮ್
ವಿಶ್ವಂ ತ್ವಕಾರಂ ಪುರುಷಂ ವಿಲಾಪಯೇ
ದುಕಾರಮಧ್ಯೇ ಬಹುಧಾ ವ್ಯವಸ್ಥಿತಮ್ ।
ತತೋ ಮಕಾರೇ ಪ್ರವಿಲಾಪ್ಯ ತೈಜಸಂ
ದ್ವಿತೀಯವರ್ಣಂ ಪ್ರಣವಸ್ಯ ಚಾಂತಿಮೇ ॥
ಅನುವಾದ
ನಾನಾ ಪ್ರಕಾರದಿಂದಿರುವ ಅಕಾರರೂಪೀ ವಿಶ್ವಪುರುಷನನ್ನು ಉಕಾರದಲ್ಲಿ ಲೀನ ಮಾಡಬೇಕು ಮತ್ತು ಓಂಕಾರದ ಎರಡನೇ ವರ್ಣವಾದ ತೈಜಸರೂಪೀ ಉಕಾರವನ್ನು ಅದರ ಅಂತಿಮ ವರ್ಣವಾದ ಮಕಾರದಲ್ಲಿ ಲೀನ ಮಾಡಬೇಕು.॥50॥
(ಶ್ಲೋಕ-51)
ಮೂಲಮ್
ಮಕಾರಮಪ್ಯಾತ್ಮನಿ ಚಿದ್ಘನೇ ಪರೇ
ವಿಲಾಪಯೇತ್ಪ್ರಾಜ್ಞಮಪೀಹ ಕಾರಣಮ್
ಸೋಹಂ ಪರಂ ಬ್ರಹ್ಮ ಸದಾ ವಿಮುಕ್ತಿಮತ್
ವಿಜ್ಞಾನದೃಙ್ಮುಕ್ತ ಉಪಾಧಿತೋಮಲಃ ॥
ಅನುವಾದ
ಬಳಿಕ ಕಾರಣಾತ್ಮಾ ಪ್ರಾಜ್ಞರೂಪೀ ಮಕಾರವನ್ನು ಕೂಡ ಚಿದ್ಘನ ರೂಪೀ ಪರಮಾತ್ಮನಲ್ಲಿ ಲೀನಗೊಳಿಸಬೇಕು; ಆ ನಿತ್ಯಮುಕ್ತ ವಿಜ್ಞಾನ ಸ್ವರೂಪೀ ಉಪಾಧಿರಹಿತನಾದ ನಿರ್ಮಲ ಪರಬ್ರಹ್ಮ ನಾನೇ ಆಗಿದ್ದೇನೆ, ಎಂಬೀ ಭಾವನೆ ಮಾಡಿಕೊಳ್ಳಬೇಕು. ॥51॥
(ಶ್ಲೋಕ-52)
ಮೂಲಮ್
ಏವಂ ಸದಾ ಜಾತಪರಾತ್ಮಭಾವನಃ
ಸ್ವಾನಂದತುಷ್ಟಃ ಪರಿವಿಸ್ಮೃತಾಖಿಲಃ ।
ಆಸ್ತೇ ಸ ನಿತ್ಯಾತ್ಮಸುಖಪ್ರಕಾಶಕಃ
ಸಾಕ್ಷಾದ್ವಿಮುಕ್ತೋಽಚಲವಾರಿಸಿಂಧುವತ್ ॥
ಅನುವಾದ
ಈ ಪ್ರಕಾರ ನಿರಂತರ ಪರಮಾತ್ಮಭಾವನೆ ಮಾಡುತ್ತಾ-ಮಾಡುತ್ತಾ ಆತ್ಮಾ ನಂದದಲ್ಲಿ ಮಗ್ನನಾಗಿರುವವನೂ, ಸಂಪೂರ್ಣ ದೃಶ್ಯ-ಪ್ರಪಂಚವು ಮರೆತುಹೋಗಿರುವವನೂ, ನಿತ್ಯ ಆತ್ಮಾನಂದದ ಅನುಭವ ಮಾಡಿಕೊಳ್ಳುವವನೂ ಆದ ಆ ಜೀವನ್ಮುಕ್ತ ಯೋಗಿಯು ಅಲೆಗಳಿಲ್ಲದ ಸಮುದ್ರದಂತೆ ಸಾಕ್ಷಾತ್ ಮುಕ್ತ ಸ್ವರೂಪನಾಗಿ ಬಿಡುತ್ತಾನೆ. ॥52॥
(ಶ್ಲೋಕ-53)
ಮೂಲಮ್
ಏವಂ ಸದಾಭ್ಯಸ್ತಸಮಾಧಿಯೋಗಿನೋ
ನಿವೃತ್ತಸರ್ವೇಂದ್ರಿಯಗೋಚರಸ್ಯ ಹಿ ।
ವಿನಿರ್ಜಿತಾಶೇಷರಿಪೋರಹಂ ಸದಾ
ದೃಶ್ಯೋ ಭವೇಯಂ ಜಿತಷಡ್ಗುಣಾತ್ಮನಃ ॥
ಅನುವಾದ
ಈ ಪ್ರಕಾರ ನಿರಂತರ ಸಮಾಧಿಯೋಗದ ಅಭ್ಯಾಸ ಮಾಡುವವನಿಗೆ, ಸಂಪೂರ್ಣ ಇಂದ್ರಿಯಗೋಚರ ವಿಷಯಗಳು ನಿವೃತ್ತಿಯಾಗಿ ಹೋಗಿರುವವನಿಗೆ, ಕಾಮ-ಕ್ರೋಧಾದಿ ಶತ್ರುಗಳನ್ನೆಲ್ಲಾ ಪೂರ್ಣವಾಗಿ ಪರಾಜಯಗೊಳಿಸಿರುವವನಿಗೆ, ಆರು ಇಂದ್ರಿಯಗಳನ್ನು ಮನಸ್ಸು ಮತ್ತು ಪಂಚೇಂದ್ರಿಯಗಳನ್ನು ಜಯಿಸಿರುವ ಆ ಮಹಾತ್ಮನಿಗೆ ನಿರಂತರ ನನ್ನ ಸಾಕ್ಷಾತ್ಕಾರ ಉಂಟಾಗುತ್ತದೆ. ॥53॥
(ಶ್ಲೋಕ-54)
ಮೂಲಮ್
ಧ್ಯಾತ್ವೈವಮಾತ್ಮಾನಮಹರ್ನಿಶಂ ಮುನಿ-
ಸ್ತಿಷ್ಠೇತ್ಸದಾ ಮುಕ್ತಸಮಸ್ತಬಂಧನಃ ।
ಪ್ರಾರಬ್ಧಮಶ್ನನ್ನಭಿಮಾನವರ್ಜಿತೋ
ಮಯ್ಯೇವ ಸಾಕ್ಷಾತ್ಪ್ರವಿಲೀಯತೇ ತತಃ ॥
ಅನುವಾದ
ಈ ಪ್ರಕಾರ ಹಗಲೂ-ರಾತ್ರಿ ಆತ್ಮನ ಚಿಂತನೆಯನ್ನೇ ಮಾಡುತ್ತಿರುವ ಮುನಿಯು ಸದಾ ಸಮಸ್ತ ಬಂಧನಗಳಿಂದ ಮುಕ್ತನಾಗಿರಬೇಕು ಹಾಗೂ ಕರ್ತೃತ್ವ-ಭೋಕ್ತತ್ವದ ಅಭಿಮಾನವನ್ನು ಬಿಟ್ಟು ಪ್ರಾರಬ್ಧ-ಫಲವನ್ನು ಅನುಭವಿಸುತ್ತಾ ಇರಬೇಕು. ಇದರಿಂದ ಅವನು ಕೊನೆಯಲ್ಲಿ ಸಾಕ್ಷಾತ್ ನನ್ನಲ್ಲಿಯೇ ಲೀನನಾಗಿ ಹೋಗುತ್ತಾನೆ. ॥54॥
(ಶ್ಲೋಕ-55)
ಮೂಲಮ್
ಆದೌ ಚ ಮಧ್ಯೇ ಚ ತಥೈವ ಚಾಂತತೋ
ಭವಂ ವಿದಿತ್ವಾ ಭಯಶೋಕಕಾರಣಮ್ ।
ಹಿತ್ವಾ ಸಮಸ್ತಂ ವಿಧಿವಾದಚೋದಿತಂ
ಭಜೇತ್ಸ್ವಮಾತ್ಮಾನಮಥಾಖಿಲಾತ್ಮನಾಮ್ ॥
ಅನುವಾದ
ಪ್ರಪಂಚವನ್ನು ಆದಿ, ಅಂತ್ಯ ಮತ್ತು ಮಧ್ಯದಲ್ಲಿ ಎಲ್ಲಾ ಪ್ರಕಾರದಲ್ಲೂ ಭಯ ಮತ್ತು ಶೋಕಗಳಿಗೆ ಕಾರಣ ವೆಂದು ತಿಳಿದುಕೊಂಡು ವೇದವಿಹಿತ ಸಮಸ್ತ ಕರ್ಮಗಳನ್ನು ತ್ಯಾಗಮಾಡಬೇಕು ಹಾಗೂ ಎಲ್ಲಾ ಪ್ರಾಣಿಗಳ ಅಂತರಾತ್ಮಾ ರೂಪೀ ನನ್ನ ಆತ್ಮವನ್ನು ಭಜಿಸಬೇಕು. ॥55॥
(ಶ್ಲೋಕ-56)
ಮೂಲಮ್
ಆತ್ಮನ್ಯಭೇದೇನ ವಿಭಾವಯನ್ನಿದಂ
ಭವತ್ಯ ಭೇದೇನ ಮಯಾತ್ಮನಾ ತದಾ ।
ಯಥಾ ಜಲಂ ವಾರಿನಿಧೌ ಯಥಾ ಪಯಃ
ಕ್ಷೀರೇ ವಿಯದ್ ವ್ಯೋಮ್ನ್ಯನಿಲೇ ಯಥಾನಿಲಃ ॥
ಅನುವಾದ
ಸಮುದ್ರದಲ್ಲಿ ನೀರು, ಹಾಲಿನಲ್ಲಿ ಹಾಲು, ಮಹಾಕಾಶದಲ್ಲಿ ಘಟಾಕಾಶಾದಿ ಮತ್ತು ವಾಯುವಿನಲ್ಲಿ ವಾಯು ಸೇರಿಕೊಂಡು ಒಂದಾಗಿ ಹೋಗುತ್ತವೆ, ಅದೇ ರೀತಿ ಈ ಸಂಪೂರ್ಣ ಜಗತ್ತನ್ನು ತನ್ನ ಆತ್ಮನೊಡನೆ ಅಭಿನ್ನರೂಪದಂತೆ ಚಿಂತನೆ ಮಾಡುವುದರಿಂದ ಜೀವನು ಪರಮಾತ್ಮನಾದ ನನ್ನೊಡನೆ ಅಭಿನ್ನ ಭಾವದಿಂದ ಸೇರಿಹೋಗುತ್ತಾನೆ. ॥56॥
(ಶ್ಲೋಕ-57)
ಮೂಲಮ್
ಇತ್ಥಂ ಯದೀಕ್ಷೇತ ಹಿ ಲೋಕಸಂಸ್ಥಿತೋ
ಜಗನ್ಮೃಷೈವೇತಿ ವಿಭಾವಯನ್ಮುನಿಃ ।
ನಿರಾಕೃತತ್ವಾಚ್ಛ್ರುತಿಯುಕ್ತಿಮಾನತೋ
ಯಥೇಂದುಭೇದೋ ದಿಶಿ ದಿಗ್ಭ್ರಮಾದಯಃ ॥
ಅನುವಾದ
ಈ ಜಗತ್ತೇನಿದೆಯೋ ಅದು ಶ್ರುತಿಯುಕ್ತಿ (ತರ್ಕ) ಮತ್ತು ಪ್ರಮಾಣಗಳಿಂದ ಇಲ್ಲವಾದ ಕಾರಣ ಚಂದ್ರಭೇದ (ಚಂದ್ರನ ವೃದ್ಧಿ ಮತ್ತು ಕ್ಷೀಣತೆ) ಮತ್ತು ದಿಕ್ಕುಗಳಲ್ಲಿ ಉಂಟಾಗುವ ದಿಗ್ಭ್ರಮೆ (ದಿಕ್ಕು ತೋರದಿರುವುದು) ಉಂಟಾದಂತೆ (ಜಗತ್ತು) ಮಿಥ್ಯೆಯೇ ಆಗಿದೆ ಎಂಬುದಾಗಿ ಭಾವಿಸುತ್ತಾ ಲೋಕದಲ್ಲಿರುವ (ವ್ಯವಹಾರದಲ್ಲಿ) ಮುನಿಗಳು ಇದನ್ನು ನೋಡಬೇಕು. ॥57॥
(ಶ್ಲೋಕ-58)
ಮೂಲಮ್
ಯಾವನ್ನ ಪಶ್ಯೇದಖಿಲಂ ಮದಾತ್ಮಕಂ
ತಾವನ್ಮದಾರಾಧನತತ್ಪರೋ ಭವೇತ್ ।
ಶ್ರದ್ಧಾಲುರತ್ಯೂರ್ಜಿತಭಕ್ತಿಲಕ್ಷಣೋ
ಯಸ್ತಸ್ಯ ದೃಶ್ಯೋಽಹಮಹರ್ನಿಶಂ ಹೃದಿ ॥
ಅನುವಾದ
ಪ್ರಪಂಚವೆಲ್ಲಾ ನನ್ನ ರೂಪವೇ ಆಗಿದೆ ಎಂದು ಕಾಣಿಸದೇ ಇರುವ ತನಕ ನಿರಂತರ ನನ್ನ ಆರಾಧನೆ ಮಾಡುತ್ತಾ ಇರಬೇಕು. ಶ್ರದ್ಧಾವಂತನೂ ಮತ್ತು ಉತ್ಕಟ ಭಕ್ತನೂ ಆದವನಿಗೆ ತನ್ನ ಹೃದಯದಲ್ಲಿ ಸದಾ ನನ್ನ ಸಾಕ್ಷಾತ್ಕಾರವೇ ಉಂಟಾಗುತ್ತದೆ. ॥58॥
(ಶ್ಲೋಕ-59)
ಮೂಲಮ್
ರಹಸ್ಯಮೇತಚ್ಛ್ರುತಿಸಾರಸಂಗ್ರಹಂ
ಮಯಾ ವಿನಿಶ್ಚಿತ್ಯ ತವೋದಿತಂ ಪ್ರಿಯ ।
ಯಸ್ತ್ವೇತದಾಲೋಚಯತೀಹ ಬುದ್ಧಿಮಾನ್
ಸ ಮುಚ್ಯತೇ ಪಾತಕರಾಶಿಭಿಃ ಕ್ಷಣಾತ್ ॥
ಅನುವಾದ
ಎಲೈ ಪ್ರೀತಿಪಾತ್ರನೇ! ಸಂಪೂರ್ಣ ಶ್ರುತಿಗಳಸಾರ ರೂಪೀ ಈ ರಹಸ್ಯವನ್ನು ನಾನು ನಿಶ್ಚಯಿಸಿ ನಿನಗೆ ಹೇಳಿದ್ದೇನೆ. ಇದನ್ನು ಮನನ ಮಾಡಿಕೊಳ್ಳುವ ಬುದ್ಧಿವಂತನು ತತ್ಕಾಲದಲ್ಲಿಯೇ ಎಲ್ಲ ಪಾಪಗಳಿಂದ ಬಿಡುಗಡೆ ಹೊಂದುವನು. ॥59॥
(ಶ್ಲೋಕ-60)
ಮೂಲಮ್
ಭ್ರಾತರ್ಯದೀದಂ ಪರಿದೃಶ್ಯತೇ ಜಗ-
ನ್ಮಾಯೈವ ಸರ್ವಂ ಪರಿಹೃತ್ಯ ಚೇತಸಾ ।
ಮದ್ಭಾವನಾಭಾವಿತಶುದ್ಧಮಾನಸಃ
ಸುಖೀ ಭವಾನಂದಮಯೋ ನಿರಾಮಯಃ ॥
ಅನುವಾದ
ತಮ್ಮಾ! ಕಂಡುಬರುವ ಈ ಇಡೀ ದೃಶ್ಯ ಜಗತ್ತೆಲ್ಲವೂ ಮಾಯೆಯಾಗಿದೆ. ಇದನ್ನು ನಿನ್ನ ಚಿತ್ತದಿಂದ ಹೊರ ಹಾಕಿ ನನ್ನ ಭಾವನೆಯಿಂದ ಶುದ್ಧಚಿತ್ತನೂ, ಸುಖಿಯಾಗಿಯೂ ಆನಂದಪೂರ್ಣನಾಗಿ ಕ್ಲೇಶಶೂನ್ಯನಾಗಿ ಬಿಡು. ॥60॥
(ಶ್ಲೋಕ-61)
ಮೂಲಮ್
ಯಃ ಸೇವತೇ ಮಾಮಗುಣಂ ಗುಣಾತ್ಪರಂ
ಹೃದಾ ಕದಾ ವಾ ಯದಿ ವಾ ಗುಣಾತ್ಮಕಮ್ ।
ಸೋಹಂ ಸ್ವಪಾದಾಂಚಿತರೇಣುಭಿಃ ಸ್ಪೃಶನ್
ಪುನಾತಿ ಲೋಕತ್ರಿತಯಂ ಯಥಾ ರವಿಃ ॥
ಅನುವಾದ
ತನ್ನ ಮನಸ್ಸಿನಿಂದ ಗುಣಾತೀತ ನಿರ್ಗುಣನಾದ ನನ್ನ ಸ್ವರೂಪವನ್ನು ಅಥವಾ ಎಂದಾದರೂ ನನ್ನ ಸಗುಣ ಸ್ವರೂಪವನ್ನು ಕೂಡ ಸೇವಿಸುವವನು ನನ್ನ ರೂಪವೇ ಆಗಿರುತ್ತಾನೆ. ಅವನು ತನ್ನ ಚರಣರಜದ ಸ್ಪರ್ಶದಿಂದ ಸೂರ್ಯನಂತೆ ಮೂರು ಲೋಕಗಳನ್ನೆಲ್ಲಾ ಪವಿತ್ರಗೊಳಿಸಿ ಬಿಡುತ್ತಾನೆ. ॥61॥
(ಶ್ಲೋಕ-62)
ಮೂಲಮ್
ವಿಜ್ಞಾನ ಮೇತದಖಿಲಂ ಶ್ರುತಿಸಾರಮೇಕಂ
ವೇದಾಂತವೇದ್ಯ ಚರಣೇನ ಮಯೈವ ಗೀತಮ್ ।
ಯಃ ಶ್ರದ್ಧಯಾ ಪರಿಪಠೇದ್ ಗುರುಭಕ್ತಿಯುಕ್ತೋ
ಮದ್ರೂಪಮೇತಿ ಯದಿ ಮದ್ವಚನೇಷು ಭಕ್ತಿಃ ॥
ಅನುವಾದ
ಈ ಅದ್ವಿತೀಯ ಜ್ಞಾನವು ಸಮಸ್ತ ಶ್ರುತಿಗಳ ಏಕಮಾತ್ರ ಸಾರವಾಗಿದೆ. ಇದನ್ನು ವೇದಾಂತವೇದ್ಯ ಭಗವತ್ಪಾದ ನಾನೇ ಹೇಳಿದ್ದೇನೆ. ಇದನ್ನು ಗುರುಭಕ್ತಿಯಿಂದಕೂಡಿ ಶ್ರದ್ಧಾಪೂರ್ವಕ ಪಠಿಸುವವನಿಗೆ ನನ್ನ ವಚನಗಳಲ್ಲಿ ಪ್ರೀತಿಯುಂಟಾದರೆ ಅವನು ನನ್ನ ರೂಪವೇ ಆಗಿಬಿಡುವನು. ॥62॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಉತ್ತರಕಾಂಡೇ ಪಂಚಮಃ ಸರ್ಗಃ ॥5॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಉತ್ತರಕಾಂಡದಲ್ಲಿ ಐದನೆಯ ಸರ್ಗವು ಮುಗಿಯಿತು.