[ನಾಲ್ಕನೆಯ ಸರ್ಗ]
ಭಾಗಸೂಚನಾ
ರಾಮರಾಜ್ಯದ ವರ್ಣನೆ ಹಾಗೂ ಸೀತಾ-ವನವಾಸ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ಏಕದಾ ಬ್ರಹ್ಮಣೋ ಲೋಕಾದಾಯಾಂತಂ ನಾರದಂ ಮುನಿಮ್ ।
ಪರ್ಯಟನ್ ರಾವಣೋ ಲೋಕಾನ್ ದೃಷ್ಟ್ವಾ ನತ್ವಾಬ್ರವೀದ್ವಚಃ ॥
ಅನುವಾದ
ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ಲೋಕಾಂತರಗಳಲ್ಲಿ ತಿರುಗುತ್ತಾ ರಾವಣನು ಒಂದುದಿನ, ನಾರದರು ಬ್ರಹ್ಮಲೋಕದಿಂದ ಬರುತ್ತಿರುವುದನ್ನು ಕಂಡು ಅವರಿಗೆ ನಮಸ್ಕಾರ ಮಾಡಿ ಕೇಳಿದನು. ॥1॥
(ಶ್ಲೋಕ-2)
ಮೂಲಮ್
ಭಗವನ್ ಬ್ರೂಹಿ ಮೇ ಯೋದ್ಧುಂ ಕುತ್ರ ಸಂತಿ ಮಹಾಬಲಾಃ ।
ಯೋದ್ಧುಮಿಚ್ಛಾಮಿ ಬಲಿಭಿಸ್ತ್ವಂ ಜ್ಞಾತಾಸಿ ಜಗತ್ತ್ರಯಮ್ ॥
ಅನುವಾದ
‘‘ಸ್ವಾಮಿ! ನಾನು ಬಲಶಾಲಿಗಳೊಡನೆ ಯುದ್ಧ ಮಾಡಲಿಚ್ಛಿಸುತ್ತೇನೆ, ನಿಮಗೆ ಮೂರು ಲೋಕಗಳೂ ಪರಿಚಿತವೇ. ನನ್ನೊಡನೆ ಯುದ್ಧ ಮಾಡಲು ಯೋಗ್ಯ ಬಲಶಾಲಿಯಾದ ಪುರುಷನು ಎಲ್ಲಿದ್ದಾನೆ ಎಂಬುದನ್ನು ದಯವಿಟ್ಟು ತಿಳಿಸಿರಿ. ॥2॥
(ಶ್ಲೋಕ-3)
ಮೂಲಮ್
ಮುನಿರ್ಧ್ಯಾತ್ವಾಹ ಸುಚಿರಂ ಶ್ವೇತದ್ವೀಪನಿವಾಸಿನಃ ।
ಮಹಾಬಲಾ ಮಹಾಕಾಯಾಸ್ತತ್ರ ಯಾಹಿ ಮಹಾಮತೇ ॥
ಅನುವಾದ
ಆಗ ಮುನಿಗಳು ಬಹಳ ಹೊತ್ತು ಯೋಚಿಸಿ ಹೇಳಿದರು — ‘‘ಎಲೈ ಮಹಾಬುದ್ಧಿಶಾಲಿಯೆ! ಶ್ವೇತದ್ವೀಪದಲ್ಲಿರುವವರು ಬಹುಬಲಾಢ್ಯರು ಮತ್ತು ವಿಶಾಲಕಾಯರು; ನೀನು ಅಲ್ಲಿಗೇ ಹೋಗು. ॥3॥
(ಶ್ಲೋಕ-4)
ಮೂಲಮ್
ವಿಷ್ಣುಪೂಜಾರತಾ ಯೇ ವೈ ವಿಷ್ಣುನಾ ನಿಹತಾಶ್ಚ ಯೇ ।
ತ ಏವ ತತ್ರ ಸಂಜಾತಾ ಅಜೇಯಾಶ್ಚ ಸುರಾಸುರೈಃ ॥
ಅನುವಾದ
ಭಗವಾನ್ ವಿಷ್ಣುವಿನ ಪೂಜೆಯಲ್ಲಿ ತತ್ಪರರಾಗಿರುವವರೇ, ಅಥವಾ ಸ್ವಯಂ ಭಗವಾನ್ ವಿಷ್ಣುವಿನಿಂದಲೇ ಹತರಾದವರೇ ಅಲ್ಲಿ ಹುಟ್ಟಿರುತ್ತಾರೆ. ಅವರನ್ನು ದೇವತೆಗಳು ಅಥವಾ ದಾನವರಾದಿ ಯಾರೂ ಜಯಿಸಲಾರರು.’’ ॥4॥
(ಶ್ಲೋಕ-5)
ಮೂಲಮ್
ಶ್ರುತ್ವಾ ತದ್ರಾವಣೋ ವೇಗಾನ್ಮಂತ್ರಿಭಿಃ ಪುಷ್ಪಕೇಣ ತಾನ್ ।
ಯೋದ್ಧುಕಾಮಃ ಸಮಾಗತ್ಯ ಶ್ವೇತದ್ವೀಪಸಮೀಪತಃ ॥
ಅನುವಾದ
ಇದನ್ನು ಕೇಳಿ ರಾವಣನು ಕೂಡಲೇ ತನ್ನ ಮಂತ್ರಿಗಳೊಡ ಗೂಡಿ ಪುಷ್ಪಕವಿಮಾನವನ್ನೇರಿ ಶ್ವೇತದ್ವೀಪದ ಹತ್ತಿರಕ್ಕೆ ಬಂದನು. ॥5॥
(ಶ್ಲೋಕ-6)
ಮೂಲಮ್
ತತ್ಪ್ರಭಾಹತತೇಜಸ್ಕಂ ಪುಷ್ಪಕಂ ನಾಚಲತ್ತತಃ ।
ತ್ಯಕ್ತ್ವಾ ವಿಮಾನಂ ಪ್ರಯಯೌ ಮಂತ್ರಿಣಶ್ಚ ದಶಾನನಃ ॥
ಅನುವಾದ
ಆ ದ್ವೀಪದ ಪ್ರಭೆಯಿಂದ ತೇಜೋಹೀನವಾದ ಪುಷ್ಪಕವಿಮಾನವು ಇನ್ನು ಮುಂದಕ್ಕೆ ಹೋಗಲಾಗಲಿಲ್ಲ. ಆದುದರಿಂದ ವಿಮಾನ ಮತ್ತು ಮಂತ್ರಿಗಳನ್ನು ಬಿಟ್ಟು ರಾವಣನು ತಾನೊಬ್ಬನೇ ಹೋದನು. ॥6॥
(ಶ್ಲೋಕ-7)
ಮೂಲಮ್
ಪ್ರವಿಶನ್ನೇವ ತದ್ದ್ವೀಪಂ ಧೃತೋ ಹಸ್ತೇನ ಯೋಷಿತಾ ।
ಪೃಷ್ಟಶ್ಚ ತ್ವಂ ಕುತಃ ಕೋಽಸಿ ಪ್ರೇಷಿತಃ ಕೇನ ವಾ ವದ ॥
ಅನುವಾದ
ಆ ದ್ವೀಪದಲ್ಲಿ ನುಗ್ಗಿದ ಕೂಡಲೇ ಓರ್ವ ಸ್ತ್ರೀಯು ಅವನ ಕೈ ಹಿಡಿದುಕೊಂಡು ಕೇಳಿದಳು — ‘‘ನೀನು ಯಾರು? ಎಲ್ಲಿಂದ ಬಂದೆ? ಮತ್ತು ಇಲ್ಲಿಗೆ ನಿನ್ನನ್ನು ಯಾರು ಕಳುಹಿಸಿದರು ಹೇಳು?’’ ॥7॥
(ಶ್ಲೋಕ-8)
ಮೂಲಮ್
ಇತ್ಯುಕ್ತೋ ಲೀಲಯಾ ಸ್ತ್ರೀಭಿರ್ಹಸಂತೀಭಿಃ ಪುನಃ ಪುನಃ ।
ಕೃಚ್ಛ್ರಾದ್ಧಸ್ತಾದ್ವಿನಿರ್ಮುಕ್ತಸ್ತಾಸಾಂ ಸ್ತ್ರೀಣಾಂ ದಶಾನನಃ ॥
ಅನುವಾದ
ಇದೇ ಪ್ರಕಾರ ಅಲ್ಲಿ ಬಹಳಷ್ಟು ಹೆಂಗಸರು ವಿನೋದದಿಂದ ನಗುತ್ತಾ-ನಗುತ್ತಾ ಅವನೊಡನೆ ಅದೇ ಮಾತನ್ನು ಕೇಳಿದರು. ರಾವಣನಿಗೆ ಆ ಹೆಂಗಸರ ಕೈಯಿಂದ ಪಾರಾಗಬೇಕಾದರೆ ತುಂಬಾ ಕಷ್ಟವಾಯಿತು. ॥8॥
(ಶ್ಲೋಕ-9)
ಮೂಲಮ್
ಆಶ್ಚರ್ಯಮತುಲಂ ಲಬ್ಧ್ವಾ ಚಿಂತಯಾಮಾಸ ದುರ್ಮತಿಃ ।
ವಿಷ್ಣುನಾ ನಿಹತೋ ಯಾಮಿ ವೈಕುಂಠಮಿತಿ ನಿಶ್ಚಿತಃ ॥
ಅನುವಾದ
ಇದನ್ನು ನೋಡಿ ಅವನಿಗೆ ಅಪಾರ ಆಶ್ಚರ್ಯವಾಯಿತು ಹಾಗೂ ಆ ದುರ್ಬುದ್ಧಿ ಯೋಚಿಸತೊಡಗಿದನು ‘‘ನಾನು ಭಗವಾನ್ ವಿಷ್ಣುವಿನ ಕೈಯಿಂದ ಸತ್ತು ನಿಸ್ಸಂದೇಹವಾಗಿಯೂ ವೈಕುಂಠಕ್ಕೆ ಹೋಗುವೆನು. ॥9॥
(ಶ್ಲೋಕ-10)
ಮೂಲಮ್
ಮಯಿ ವಿಷ್ಣುರ್ಯಥಾ ಕುಪ್ಯೇತ್ತಥಾ ಕಾರ್ಯಂ ಕರೋಮ್ಯಹಮ್ ।
ಇತಿ ನಿಶ್ಚಿತ್ಯ ವೈದೇಹೀಂ ಜಹಾರ ವಿಪಿನೇಽಸುರಃ ॥
ಅನುವಾದ
ಆದುದರಿಂದ ಭಗವಂತನಾದ ವಿಷ್ಣುವು ನನ್ನ ಮೇಲೆ ಕುಪಿತನಾಗುವಂತಹ ಕಾರ್ಯವನ್ನು ನಾನು ಮಾಡಬೇಕು.’’ ಹೀಗೆಂದು ಆಲೋಚಿಸಿ ಆ ಅಸುರನು ಕಾಡಿನಲ್ಲಿ ವೈದೇಹಿಯನ್ನು ಅಪಹರಿಸಿದ್ದನು. ॥10॥
(ಶ್ಲೋಕ-11)
ಮೂಲಮ್
ಜಾನನ್ನೇವ ಪರಾತ್ಮಾನಂ ಸ ಜಹಾರಾವನೀಸುತಾಮ್ ।
ಮಾತೃವತ್ಪಾಲಯಾಮಾಸ ತ್ವತ್ತಃ ಕಾಂಕ್ಷನ್ವಧಂ ಸ್ವಕಮ್ ॥
ಅನುವಾದ
ಹೇ ರಾಮಾ! ನಿನ್ನ ಕೈಯಿಂದಲೇ ತಾನು ಸಾಯುವ ಇಚ್ಛೆಯಿಂದಲೇ ರಾವಣನು ನಿನ್ನನ್ನು ಪರಮಾತ್ಮನೆಂದು ತಿಳಿದುಕೊಂಡಿದ್ದರೂ ಕೂಡ ಸೀತೆಯನ್ನು ಕದ್ದುಕೊಂಡೊಯ್ದನು ಮತ್ತು ಆಕೆಯನ್ನು ತಾಯಿಯಂತೆ ಕಾಪಾಡಿದನು. ॥11॥
(ಶ್ಲೋಕ-12)
ಮೂಲಮ್
ರಾಮ ತ್ವಂ ಪರಮೇಶ್ವರೋಽಸಿ ಸಕಲಂ
ಜಾನಾಸಿ ವಿಜ್ಞಾನದೃಗ್
ಭೂತಂ ಭವ್ಯಮಿದಂ ತ್ರಿಕಾಲಕಲನಾ-
ಸಾಕ್ಷೀ ವಿಕಲ್ಪೋಜ್ಝಿತಃ ।
ಭಕ್ತಾನಾಮನುವರ್ತನಾಯ ಸಕಲಾಂ
ಕುರ್ವನ್ ಕ್ರಿಯಾಸಂಹತಿಂ
ತ್ವಂ ಶೃಣ್ವನ್ಮನುಜಾಕೃತಿರ್ಮುನಿವಚೋ
ಭಾಸೀಶ ಲೋಕಾರ್ಚಿತಃ ॥
ಅನುವಾದ
ಹೇ ರಾಮಾ! ನೀನು ಪರಮೇಶ್ವರನಾಗಿರುವೆ. ನೀನು ತ್ರಿಕಾಲದರ್ಶೀ ಹಾಗೂ ವಿಕಲ್ಪ ರಹಿತನಾಗಿ ತನ್ನ ಜ್ಞಾನದೃಷ್ಟಿಯಿಂದ ಭೂತ, ಭವಿಷ್ಯ ಮತ್ತು ವರ್ತಮಾನ ಇವೆಲ್ಲವನ್ನೂ ತಿಳಿಯುವೆ. ಹೇ ಸ್ವಾಮಿ! ನೀನು ನಿನ್ನ ಭಕ್ತರಿಗೆ ಮಾರ್ಗದರ್ಶನ ಮಾಡುವುದಕ್ಕಾಗಿಯೇ ಎಲ್ಲಾ ಲೀಲೆಗಳನ್ನು ರಚಿಸುತ್ತಾ ನೀನು ಸಕಲ ಲೋಕಗಳಿಂದ ಪೂಜಿತನಾದರೂ ಕೂಡ ಮನುಷ್ಯ ರೂಪದಿಂದ ನಮ್ಮಂತಹ ಮುನಿಗಳ ವಚನಗಳನ್ನು ಕೇಳುತ್ತಿರುವಂತೆ ಕಾಣಿಸಿಕೊಳ್ಳುತ್ತಿರುವೆ.’’ ॥12॥
(ಶ್ಲೋಕ-13)
ಮೂಲಮ್
ಸ್ತುತ್ವೈವಂ ರಾಘವಂ ತೇನ ಪೂಜಿತಃ ಕುಂಭಸಂಭವಃ ।
ಸ್ವಾಶ್ರಮಂ ಮುನಿಭಿಃ ಸಾರ್ಧಂ ಪ್ರಯಯೌ ಹೃಷ್ಟಮಾನಸಃ ॥
ಅನುವಾದ
ಈ ರೀತಿಯಾಗಿ ರಘುನಾಥನನ್ನು ಸ್ತುತಿಸಿ, ಆತನಿಂದ ಸತ್ಕಾರ ಪಡೆದು ಅಗಸ್ತ್ಯರು ಬೇರೆ ಋಷಿಗಳ ಜೊತೆ ಯಲ್ಲಿ ಸಂತೋಷವಾದ ಮನಸ್ಸಿನಿಂದ ತಮ್ಮ ಆಶ್ರಮಕ್ಕೆ ಹೊರಟು ಹೋದರು. ॥13॥
(ಶ್ಲೋಕ-14)
ಮೂಲಮ್
ರಾಮಸ್ತು ಸೀತಯಾ ಸಾರ್ಧಂ ಭ್ರಾತೃಭಿಃ ಸಹ ಮಂತ್ರಿಭಿಃ ।
ಸಂಸಾರೀವ ರಮಾನಾಥೋ ರಮಮಾಣೋಽವಸದ್ ಗೃಹೇ ॥
ಅನುವಾದ
ಲಕ್ಷ್ಮೀಪತಿ ಭಗವಾನ್ ಶ್ರೀರಾಮನು ಸೀತೆ, ಸಹೋದರರು ಹಾಗೂ ಮಂತ್ರಿಗಳ ಸಂಗಡ ಸಂಸಾರೀ ಮನುಷ್ಯರಂತೆ ವ್ಯವಹರಿಸುತ್ತಾ ಅರಮನೆಯಲ್ಲಿರುತ್ತಿದ್ದನು. ॥14॥
(ಶ್ಲೋಕ-15)
ಮೂಲಮ್
ಅನಾಸಕ್ತೋಽಪಿ ವಿಷಯಾನ್ಬುಭುಜೇ ಪ್ರಿಯಯಾ ಸಹ ।
ಹನುಮತ್ಪ್ರಮುಖೈಃ ಸದ್ಭಿರ್ವಾನರೈಃ ಪರಿವೇಷ್ಟಿತಃ ॥
ಅನುವಾದ
ಅವನು ಸಂಗ ರಹಿತನಾದರೂ ಕೂಡ ತನ್ನ ಪ್ರಿಯೆಯೊಡನೆ ನಾನಾ ಪ್ರಕಾರದ ಸುಖ-ಭೋಗಗಳನ್ನು ಅನುಭವಿಸಿದನು. ಅವನು ಯಾವಾಗಲೂ ಹನುಮಂತನೇ ಮೊದಲಾದ ಶ್ರೇಷ್ಠ ಕಪಿ ಗಳೊಡನೆ ಸುತ್ತುವರಿದು ಇರುತ್ತಿದ್ದನು. ॥15॥
(ಶ್ಲೋಕ-16)
ಮೂಲಮ್
ಪುಷ್ಪಕಂ ಚಾಗಮದ್ರಾಮಮೇಕದಾ ಪೂರ್ವವತ್ಪ್ರಭುಮ್ ।
ಪ್ರಾಹ ದೇವ ಕುಬೇರೇಣ ಪ್ರೇಷಿತಂ ತ್ವಾಮಹಂ ತತಃ ॥
ಅನುವಾದ
ಒಮ್ಮೆ ಮೊದಲಿನ ಹಾಗೆಯೇ ಭಗವಾನ್ ಶ್ರೀರಾಮನ ಬಳಿಗೆ ಪುಷ್ಪಕವಿಮಾನ ಬಂದಿತು ಮತ್ತು ಹೀಗೆ ಹೇಳಿತು ‘‘ಪರಮಾತ್ಮಾ! ಕುಬೇರನು ನನ್ನನ್ನು ಪುನಃ ತನ್ನ ಕಡೆಯಿಂದ ನಿನ್ನ ಸೇವೆಗಾಗಿ ಕಳುಹಿಸಿದ್ದಾನೆ. ॥16॥
(ಶ್ಲೋಕ-17)
ಮೂಲಮ್
ಜಿತಂ ತ್ವಂ ರಾವಣೇನಾದೌ ಪಶ್ಚಾದ್ರಾಮೇಣ ನಿರ್ಜಿತಮ್ ।
ಅತಸ್ತ್ವಂ ರಾಘವಂ ನಿತ್ಯಂ ವಹ ಯಾವದ್ವಸೇದ್ಭುವಿ ॥
ಅನುವಾದ
ಕುಬೇರನು ನನಗೆ ಹೇಳಿರುವನು ಮೊದಲು ನಿನ್ನನ್ನು ರಾವಣನು ಜಯಿಸಿದ್ದ. ಮತ್ತೆ ಅವನಿಂದ ಶ್ರೀರಾಮಚಂದ್ರನು ಗೆದ್ದಿದ್ದಾನೆ. ಆದುದರಿಂದ ಅವನು ಭೂಮಿಯ ಮೇಲೆ ಇರುವವರೆಗೂ ನೀನು ಅವನನ್ನೇ ಅನುಸರಿಸು. ॥17॥
(ಶ್ಲೋಕ-18)
ಮೂಲಮ್
ಯದಾ ಗಚ್ಛೇದ್ರಘುಶ್ರೇಷ್ಠೋ ವೈಕುಂಠಂ ಯಾಹಿ ಮಾಂ ತದಾ ।
ತಚ್ಛ್ರುತ್ವಾ ರಾಘವಃ ಪ್ರಾಹ ಪುಷ್ಪಕಂ ಸೂರ್ಯಸನ್ನಿಭಮ್ ॥
ಅನುವಾದ
ರಘುನಾಥನು ವೈಕುಂಠಕ್ಕೆ ಹೊರಟು ಹೋದಾಗ ನೀನು ನನ್ನ ಹತ್ತಿರಕ್ಕೆ ಬಂದು ಬಿಡುವುದು.’’ ಇದನ್ನು ಕೇಳಿ ರಘುನಾಥನು ಸೂರ್ಯನಂತೆ ಹೊಳೆಯುತ್ತಿರುವ ಪುಷ್ಪಕದೊಡನೆ ಹೇಳಿದನು ॥18॥
(ಶ್ಲೋಕ-19)
ಮೂಲಮ್
ಯದಾ ಸ್ಮರಾಮಿ ಭದ್ರಂ ತೇ ತದಾಗಚ್ಛ ಮಮಾಂತಿಕಮ್ ।
ತಿಷ್ಠಾಂತರ್ಧಾಯ ಸರ್ವತ್ರ ಗಚ್ಛೇದಾನೀಂ ಮಮಾಜ್ಞಯಾ ॥
ಅನುವಾದ
‘‘ನಿನಗೆ ಮಂಗಳವಾಗಲಿ, ನಾನು ನಿನ್ನ ಸ್ಮರಣೆ ಮಾಡಿದಾಗ ನೀನು ನನ್ನ ಬಳಿಗೆ ಬಾ, ಈಗ ನೀನು ಹೋಗಿ ನನ್ನ ಆಜ್ಞೆಯಿಂದ ಗುಪ್ತರೂಪದಲ್ಲಿ ಎಲ್ಲೆಲ್ಲಿಯೂ ಇರು.’’ ॥19॥
(ಶ್ಲೋಕ-20)
ಮೂಲಮ್
ಇತ್ಯುಕ್ತ್ವಾ ರಾಮಚಂದ್ರೋಽಪಿ ಪೌರಕಾರ್ಯಾಣಿ ಸರ್ವಶಃ ।
ಭ್ರಾತೃಭಿರ್ಮಂತ್ರಿಭಿಃ ಸಾರ್ಧಂ ಯಥಾನ್ಯಾಯಂ ಚಕಾರ ಸಃ ॥
ಅನುವಾದ
ಪುಷ್ಪಕಕ್ಕೆ ಈ ಪ್ರಕಾರ ಆಜ್ಞೆಮಾಡಿ ಶ್ರೀರಾಮಚಂದ್ರನು ತನ್ನ ಸಹೋದರರು ಮತ್ತು ಮಂತ್ರಿಗಳ ಜೊತೆಯಲ್ಲಿ ಸೇರಿ ಪುರವಾಸಿಗಳ ಎಲ್ಲ ಕಾರ್ಯಗಳನ್ನು ಯಥಾಯೋಗ್ಯ ರೀತಿಯಿಂದ ಮಾಡಲಾರಂಭಿಸಿದನು. ॥20॥
(ಶ್ಲೋಕ-21)
ಮೂಲಮ್
ರಾಘವೇ ಶಾಸತಿ ಭುವಂ ಲೋಕನಾಥೇ ರಮಾಪತೌ ।
ವಸುಧಾ ಸಸ್ಯಸಂಪನ್ನಾ ಫಲವಂತಶ್ಚ ಭೂರುಹಾಃ ॥
ಅನುವಾದ
ತ್ರೈಲೋಕ್ಯನಾಥ ಲಕ್ಷ್ಮೀಪತಿ ಭಗವಾನ್ ಶ್ರೀರಾಮನ ಆಳ್ವಿಕೆಯ ಕಾಲದಲ್ಲಿ ಪೃಥ್ವಿಯು ಧನ-ಧಾನ್ಯಗಳಿಂದ ತುಂಬಿ ಹೋಗಿತ್ತು. ವೃಕ್ಷಗಳು ಫಲಾದಿಗಳಿಂದ ಸಮೃದ್ಧವಾಗಿದ್ದವು. ॥21॥
(ಶ್ಲೋಕ-22)
ಮೂಲಮ್
ಜನಾ ಧರ್ಮಪರಾಃ ಸರ್ವೇ ಪತಿಭಕ್ತಿಪರಾಃ ಸ್ತ್ರಿಯಃ ।
ನಾಪಶ್ಯತ್ಪುತ್ರಮರಣಂ ಕಶ್ಚಿದ್ರಾಜನಿ ರಾಘವೇ ॥
ಅನುವಾದ
ರಘುನಾಥನ ರಾಜ್ಯದಲ್ಲಿ ಎಲ್ಲ ಜನರೂ ಧರ್ಮ ಪರಾಯಣರಾಗಿದ್ದರು, ಸ್ತ್ರೀಯರು ಪತಿಸೇವೆಯಲ್ಲಿ ತತ್ಪರರಾಗಿರುತ್ತಿದ್ದರು. ಯಾರೂ ಸಹ ತಮ್ಮ ಪುತ್ರನ ಮರಣವನ್ನು ನೋಡಬೇಕಾಗುತ್ತಿರಲಿಲ್ಲ. ॥22॥
(ಶ್ಲೋಕ-23)
ಮೂಲಮ್
ಸಮಾರುಹ್ಯ ವಿಮಾನಾಗ್ರ್ಯಂ ರಾಘವಃ ಸೀತಯಾ ಸಹ ।
ವಾನರೈರ್ಭ್ರಾತೃಭಿಃ ಸಾರ್ಧಂ ಸಂಚಚಾರಾವನಿಂ ಪ್ರಭುಃ ॥
ಅನುವಾದ
ಭಗವಾನ್ ಶ್ರೀರಾಮನು ಸೀತೆ, ಸಹೋದರರು ಮತ್ತು ವಾನರರೊಡಗೂಡಿ ವಿಮಾನದಲ್ಲಿ ಕುಳಿತು ಭೂಮಿಯ ಮೇಲೆ ಸಂಚರಿಸುತ್ತಿದ್ದನು. ॥23॥
(ಶ್ಲೋಕ-24)
ಮೂಲಮ್
ಅಮಾನುಷಾಣಿ ಕಾರ್ಯಾಣಿ ಚಕಾರ ಬಹುಶೋ ಭುವಿ ।
ಬ್ರಾಹ್ಮಣಸ್ಯ ಸುತಂ ದೃಷ್ಟ್ವಾ ಬಾಲಂ ಮೃತಮಕಾಲತಃ ॥
(ಶ್ಲೋಕ-25)
ಮೂಲಮ್
ಶೋಚಂತಂ ಬ್ರಾಹ್ಮಣಂ ಚಾಪಿ ಜ್ಞಾತ್ವಾ ರಾಮೋ ಮಹಾಮತಿಃ ।
ತಪಸ್ಯಂತಂ ವನೇ ಶೂದ್ರಂ ಹತ್ವಾ ಬ್ರಾಹ್ಮಣಬಾಲಕಮ್ ॥
(ಶ್ಲೋಕ-26)
ಮೂಲಮ್
ಜೀವಯಾಮಾಸ ಶೂದ್ರಸ್ಯ ದದೌ ಸ್ವರ್ಗಮನುತ್ತಮಮ್ ।
ಲೋಕಾನಾಮುಪದೇಶಾರ್ಥಂ ಪರಮಾತ್ಮಾ ರಘೂತ್ತಮಃ ॥
(ಶ್ಲೋಕ-27)
ಮೂಲಮ್
ಕೋಟಿಶಃ ಸ್ಥಾಪಯಾಮಾಸ ಶಿವಲಿಂಗಾನಿ ಸರ್ವಶಃ ।
ಸೀತಾಂ ಚ ರಮಯಾಮಾಸ ಸರ್ವಭೋಗೈರಮಾನುಷೈಃ ॥
ಅನುವಾದ
ಅವನು ಜಗತ್ತಿನಲ್ಲಿ ಮನುಷ್ಯರು ಮಾಡಲಾರದ ಬಹಳಷ್ಟು ಲೀಲೆಗಳನ್ನು ಮಾಡಿದನು. ಒಮ್ಮೆ ಓರ್ವ ಬ್ರಾಹ್ಮಣನ ಮಗನು ಬಾಲ್ಯಾವಸ್ಥೆಯಲ್ಲಿಯೇ ಅಕಾಲದಲ್ಲಿ ಸಾವನ್ನಪ್ಪಿದುದನ್ನು ಕಂಡನು, ಆ ಬ್ರಾಹ್ಮಣನು ಬಹಳ ಶೋಕಪಡುತ್ತಿರುವನೆಂದು ತಿಳಿದು ಕೊಂಡು ರಘುಶ್ರೇಷ್ಠನೂ ಮಹಾಬುದ್ಧಿಶಾಲಿಯಾದ ಭಗವಾನ್ ಶ್ರೀರಾಮನು ಕಾಡಿನಲ್ಲಿ ತಪಸ್ಸು ಮಾಡುತ್ತಿರುವ ಶೂದ್ರನನ್ನು ನೋಡಿ, ಬ್ರಾಹ್ಮಣ ಬಾಲಕನ ಸಾವಿಗೆ ಇದೇ ಕಾರಣವೆಂದರಿತು ಅವನನ್ನು ಕೊಂದು ಆ ಬಾಲಕನನ್ನು ಬದುಕಿಸಿದನು. ಹಾಗೂ ಶೂದ್ರನಿಗೆ ಅತ್ಯುತ್ತಮ ವಾದ ಸ್ವರ್ಗಲೋಕವನ್ನು ಕೊಟ್ಟನು. ಅವನು ಜನರಿಗೆ ಉಪದೇಶ ಕೊಡುವುದಕ್ಕಾಗಿ ಅಲ್ಲಲ್ಲಿ ಕೋಟ್ಯಂತರ ಶಿವಲಿಂಗಗಳನ್ನು ಸ್ಥಾಪನೆ ಮಾಡಿದನು ಮತ್ತು ಸೀತಾದೇವಿಯನ್ನು ಎಲ್ಲಾ ಪ್ರಕಾರಗಳ ಅಲೌಕಿಕ ಭೋಗಗಳಿಂದ ಸಂತೋಷಪಡಿಸಿದನು. ॥24-27॥
(ಶ್ಲೋಕ-28)
ಮೂಲಮ್
ಶಶಾಸ ರಾಮೋ ಧರ್ಮೇಣ ರಾಜ್ಯಂ ಪರಮಧರ್ಮವಿತ್ ।
ಕಥಾಂ ಸಂಸ್ಥಾಪಯಾಮಾಸ ಸರ್ವಲೋಕಮಲಾಪಹಾಮ್ ॥
ಅನುವಾದ
ಈ ಪ್ರಕಾರ ಪರಮಧಾರ್ಮಿಕ ಭಗವಾನ್ ಶ್ರೀರಾಮನು ಧರ್ಮದಿಂದ ರಾಜ್ಯಭಾರ ಮಾಡುತ್ತಾ ಇದ್ದನು. ಅವನು ಎಲ್ಲಾ ಲೋಕಗಳ ಪಾಪವನ್ನು ನಾಶಮಾಡುವಂತಹ ತನ್ನ ಪವಿತ್ರವಾದ ಕಥಾ-ಕೀರ್ತಿಯನ್ನು ಜಗತ್ತಿನಲ್ಲಿ ಸ್ಥಾಪಿಸಿದನು. ॥28॥
(ಶ್ಲೋಕ-29)
ಮೂಲಮ್
ದಶವರ್ಷಸಹಸ್ರಾಣಿ ಮಾಯಾಮಾನುಷವಿಗ್ರಹಃ ।
ಚಕಾರ ರಾಜ್ಯಂ ವಿಧಿವಲ್ಲೋಕವಂದ್ಯಪದಾಂಬುಜಃ ॥
ಅನುವಾದ
ಮೂರು ಲೋಕಗಳೂ ಯಾರ ಚರಣಕಮಲಗಳಿಗೆ ವಂದಿಸುತ್ತವೆಯೋ ಆ ಮಾಯಾಮಾನವ-ಶರೀರಧಾರೀ ಶ್ರೀರಾಮ ಚಂದ್ರನು ವಿಧಿಪೂರ್ವಕ ಹತ್ತು ಸಾವಿರ ವರ್ಷಗಳು ರಾಜ್ಯವನ್ನಾಳಿದನು. ॥29॥
(ಶ್ಲೋಕ-30)
ಮೂಲಮ್
ಏಕಪತ್ನೀವ್ರತೋ ರಾಮೋ ರಾಜರ್ಷಿಃ ಸರ್ವದಾ ಶುಚಿಃ ।
ಗೃಹಮೇಧೀಯಮಖಿಲಮಾಚರನ್ ಶಿಕ್ಷಯನ್ ಜನಾನ್ ॥
ಅನುವಾದ
ರಾಜರ್ಷಿ ಭಗವಾನ್ ಶ್ರೀರಾಮನು ಏಕಪತ್ನೀ ವ್ರತವನ್ನು ಪರಿಪಾಲಿಸುತ್ತಿದ್ದನು. ಆ ಪವಿತ್ರ-ಚರಿತ್ರೆಯುಳ್ಳ ಶ್ರೀರಾಮನು ಜನರಿಗೆ ಶಿಕ್ಷಣ ಕೊಡುತ್ತಾ ಗೃಹಸ್ಥಾಶ್ರಮದ ಎಲ್ಲ ಧರ್ಮಗಳನ್ನು ಪಾಲಿಸುತ್ತಾ ಇದ್ದನು. ॥30॥
(ಶ್ಲೋಕ-31)
ಮೂಲಮ್
ಸೀತಾ ಪ್ರೇಮ್ಣಾನುವೃತ್ತ್ಯಾ ಚ ಪ್ರಶ್ರಯೇಣ ದಮೇನ ಚ ।
ಭರ್ತುರ್ಮನೋಹರಾ ಸಾಧ್ವೀ ಭಾವಜ್ಞಾ ಸಾ ಹ್ರಿಯಾ ಭಿಯಾ ॥
(ಶ್ಲೋಕ-32)
ಮೂಲಮ್
ಏಕದಾಕ್ರೀಡವಿಪಿನೇ ಸರ್ವಭೋಗಸಮನ್ವಿತೇ ।
ಏಕಾಂತೇ ದಿವ್ಯಭವನೇ ಸುಖಾಸೀನಂ ರಘೂತ್ತಮಮ್ ॥
(ಶ್ಲೋಕ-33)
ಮೂಲಮ್
ನೀಲಮಾಣಿಕ್ಯಸಂಕಾಶಂ ದಿವ್ಯಾಭರಣಭೂಷಿತಮ್ ।
ಪ್ರಸನ್ನವದನಂ ಶಾಂತಂ ವಿದ್ಯುತ್ಪುಂಜನಿಭಾಂಬರಮ್ ॥
(ಶ್ಲೋಕ-34)
ಮೂಲಮ್
ಸೀತಾ ಕಮಲಪತ್ರಾಕ್ಷೀ ಸರ್ವಾಭರಣಭೂಷಿತಾ ।
ರಾಮಮಾಹ ಕರಾಭ್ಯಾಂ ಸಾ ಲಾಲಯಂತಿ ಪದಾಂಬುಜೇ ॥
ಅನುವಾದ
ಸಾಧ್ವೀಮಣಿ ಸೀತಾದೇವಿಯೂ ಕೂಡ ಅವರ ಮನಸ್ಸಿನ ಭಾವವನ್ನು ಅರಿತವಳಾಗಿದ್ದಳು. ಆಕೆಯು ಪ್ರೇಮ, ಆಜ್ಞಾ ಪಾಲನೆ, ನಮ್ರತೆ, ಇಂದ್ರಿಯ ಸಂಯಮ, ಲಜ್ಜೆ ಮತ್ತು ಅಂಜಿಕೆ ಇತ್ಯಾದಿ ತನ್ನ ಸದ್ಗುಣಗಳಿಂದ ಪತಿಯ ಮನಸ್ಸನ್ನು ಗೆದ್ದುಕೊಂಡಿದ್ದಳು. ಒಂದುದಿನ ರಘುನಾಥನು ತನ್ನ ಕ್ರೀಡಾವನದ ಎಲ್ಲಾ ಸುಖ-ಸೌಕರ್ಯಗಳಿಂದ ಕೂಡಿದ ಭವನದ ಏಕಾಂತದಲ್ಲಿ ಸುಖವಾಗಿ ಕುಳಿತಿದ್ದನು. ಅವನ ಶರೀರದ ಕಾಂತಿಯು ನೀಲಮಣಿಯಂತೆ ಇತ್ತು. ಅವನು ದಿವ್ಯಾಭರಣಗಳಿಂದ ಭೂಷಿತನಾಗಿದ್ದು, ಅವನ ಮುಖವು ಪ್ರಸನ್ನವಾಗಿದ್ದು ಭಾವ ಗಂಭೀರವಾಗಿತ್ತು. ಅವನು ವಿದ್ಯುತ್ಪುಂಜದಂತೆ ಹೊಳೆಯುತ್ತಿರುವ ಪೀತಾಂಬರವನ್ನು ಧರಿಸಿಕೊಂಡಿದ್ದನು. ಆ ಸಮಯದಲ್ಲಿ ಸರ್ವಾಲಂಕಾರ ಸುಸಜ್ಜಿತಳಾದ ಕಮಲದಳಲೋಚನೆ ಸೀತಾದೇವಿಯು ತನ್ನ ಕರಕಮಲಗಳಿಂದ ಶ್ರೀರಘುನಾಥನ ಚರಣಸೇವೆಯನ್ನು ಮಾಡುತ್ತಾ ಅವನ ಬಳಿ ಹೇಳಿದಳು - ॥31-34॥
(ಶ್ಲೋಕ-35)
ಮೂಲಮ್
ದೇವದೇವ ಜಗನ್ನಾಥ ಪರಮಾತ್ಮನ್ಸನಾತನ ।
ಚಿದಾನಂದಾದಿಮಧ್ಯಾಂತರಹಿತಾಶೇಷಕಾರಣ ॥
(ಶ್ಲೋಕ-36)
ಮೂಲಮ್
ದೇವ ದೇವಾಃ ಸಮಾಸಾದ್ಯ ಮಾಮೇಕಾಂತೇಽಬ್ರುವನ್ವಚಃ ।
ಬಹುಶೋಽರ್ಥಯಮಾನಾಸ್ತೇ ವೈಕುಂಠಾಗಮನಂ ಪ್ರತಿ ॥
ಅನುವಾದ
‘‘ಹೇ ದೇವಾಧಿದೇವ! ಹೇ ಜಗನ್ನಾಥಾ! ಹೇ ಸನಾತನ ಪರಮಾತ್ಮಾ! ಹೇ ಚಿದಾನಂದ ಸ್ವರೂಪಾ! ಹೇ ಆದಿ, ಮಧ್ಯ ಮತ್ತು ಅಂತ್ಯಗಳಿಂದ ರಹಿತನಾದ ಎಲ್ಲಕ್ಕೂ ಕಾರಣನೇ! ಹೇ ದೇವ! ದೇವತೆಗಳು ಬಂದು ನಾನು ಒಬ್ಬಳಿರುವಾಗ ನನ್ನನ್ನು ಬಹಳವಾಗಿ ಪ್ರಾರ್ಥಿಸಿಕೊಳ್ಳುತ್ತಾ ನೀವು ವೈಕುಂಠಕ್ಕೆ ದಯಮಾಡಿಸುವ ವಿಷಯವಾಗಿ ಹೇಳಿದ್ದಾರೆ. ॥35-36॥
(ಶ್ಲೋಕ-37)
ಮೂಲಮ್
ತ್ವಯಾ ಸಮೇತಶ್ಚಿಚ್ಛಕ್ತ್ಯಾ ರಾಮಸ್ತಿಷ್ಠತಿ ಭೂತಲೇ ।
ವಿಸೃಜ್ಯಾಸ್ಮಾನ್ ಸ್ವಕಂ ಧಾಮ ವೈಕುಂಠಂ ಚ ಸನಾತನಮ್ ॥
ಅನುವಾದ
ಅವರು ಹೇಳುತ್ತಾರೆ - ‘ಚಿಚ್ಛಕ್ತಿಯಾದ ನಿನ್ನೊಡನೆಯೇ ಇದ್ದು ರಾಮನು ನಮ್ಮನ್ನೆಲ್ಲಾ ಮತ್ತು ತನ್ನ ಸನಾತನ ಸ್ಥಾನವಾದ ವೈಕುಂಠವನ್ನು ಬಿಟ್ಟು ಭೂಲೋಕದಲ್ಲೇ ನೆಲೆಸಿಬಿಟ್ಟಿದ್ದಾನೆ. ॥37॥
(ಶ್ಲೋಕ-38)
ಮೂಲಮ್
ಆಸ್ತೇ ತ್ವಯಾ ಜಗದ್ಧಾತ್ರೀ ರಾಮಃ ಕಮಲಲೋಚನಃ ।
ಅಗ್ರತೋ ಯಾಹಿ ವೈಕುಂಠಂ ತ್ವಂ ತಥಾ ಚೇದ್ರಘೂತ್ತಮಃ ॥
(ಶ್ಲೋಕ-39)
ಮೂಲಮ್
ಆಗಮಿಷ್ಯತಿ ವೈಕುಂಠಂ ಸನಾಥಾನ್ನಃ ಕರಿಷ್ಯತಿ ।
ಇತಿ ವಿಜ್ಞಾಪಿತಾಹಂ ತೈರ್ಮಯಾ ವಿಜ್ಞಾಪಿತೋ ಭವಾನ್ ॥
ಅನುವಾದ
ಹೇ ಜಗದ್ಧಾತ್ರಿ! ಕಮಲನಯನ ರಾಮನು ಯಾವಾಗಲೂ ನಿನ್ನೊಡನೆಯೇ ಇರುತ್ತಾನೆ. ನೀನು ಮೊದಲು ವೈಕುಂಠಕ್ಕೆ ಹೋದರೆ ರಘುನಾಥನೂ ಕೂಡ ಅಲ್ಲಿಗೆ ಬಂದು ನಮ್ಮನ್ನು ಸನಾಥರನ್ನಾಗಿ ಮಾಡುವನು.’ ಅವರು ನನ್ನೊಡನೆ ಈ ರೀತಿಯಾಗಿ ಹೇಳಿದುದನ್ನು ನಾನು ನಿಮಗೆ ತಿಳಿಸಿದೆನು. ॥38-39॥
(ಶ್ಲೋಕ-40)
ಮೂಲಮ್
ಯದ್ಯುಕ್ತಂ ತತ್ಕುರುಷ್ವಾದ್ಯ ನಾಹಮಾಜ್ಞಾಪಯೇ ಪ್ರಭೋ ।
ಸೀತಾಯಾಸ್ತದ್ವಚಃ ಶ್ರುತ್ವಾ ರಾಮೋ ಧ್ಯಾತ್ವಾಬ್ರವೀತ್ಕ್ಷಣಮ್ ॥
ಅನುವಾದ
ಹೇ ಪ್ರಭು! ನನ್ನದೇನೂ ಒತ್ತಾಯವಾಗಲಿ, ಅಪ್ಪಣೆಯಾಗಲಿ ಇಲ್ಲ. ಈಗ ನಿಮಗೆ ಹೇಗೆ ಉಚಿತವೆಂದು ತೋಚುವುದೋ ಹಾಗೆ ಮಾಡಿರಿ.’’ ಸೀತಾದೇವಿಯ ಈ ಮಾತುಗಳನ್ನು ಕೇಳಿ ರಘುನಾಥನು ಸ್ವಲ್ಪ ಹೊತ್ತು ಯೋಚಿಸಿ ಹೇಳಿದನು- ॥40॥
(ಶ್ಲೋಕ-41)
ಮೂಲಮ್
ದೇವಿ ಜಾನಾಮಿ ಸಕಲಂ ತತ್ರೋಪಾಯಂ ವದಾಮಿ ತೇ ।
ಕಲ್ಪಯಿತ್ವಾ ಮಿಷಂ ದೇವಿ ಲೋಕವಾದಂತ್ವದಾಶ್ರಯಮ್ ॥
(ಶ್ಲೋಕ-42)
ಮೂಲಮ್
ತ್ಯಜಾಮಿ ತ್ವಾಂ ವನೇ ಲೋಕವಾದಾದ್ಭೀತ ಇವಾಪರಃ ।
ಭವಿಷ್ಯತಃ ಕುಮಾರೌ ದ್ವೌ ವಾಲ್ಮೀಕೇರಾಶ್ರಮಾಂತಿಕೇ ॥
ಅನುವಾದ
‘‘ದೇವಿ! ನಾನು ಇದೆಲ್ಲವನ್ನೂ ಬಲ್ಲೆನು. ಅದಕ್ಕೆ ನಾನು ನಿನಗೆ ಉಪಾಯವನ್ನು ತಿಳಿಸುತ್ತೇನೆ. ಲೋಕಾಪವಾದದ ನೆಪದಿಂದ ನಾನು ನಿನ್ನನ್ನು ಲೋಕನಿಂದೆಯಿಂದ ಹೆದರುವ ಬೇರೆ ಪುರುಷರಂತೆ ನನ್ನೊಡನೆ ಇರುವ ಸಂಬಂಧವನ್ನು ತ್ಯಜಿಸಿ, ಕಾಡಿಗೆ ಕಳುಹಿಸಿ ಬಿಡುವೆನು. ಅಲ್ಲಿ ವಾಲ್ಮೀಕಿಯ ಆಶ್ರಮದಲ್ಲಿ ನಿನಗೆ ಇಬ್ಬರು ಬಾಲಕರಾಗುವರು. ॥41-42॥
(ಶ್ಲೋಕ-43)
ಮೂಲಮ್
ಇದಾನೀಂ ದೃಶ್ಯತೇ ಗರ್ಭಃ ಪುನರಾಗತ್ಯ ಮೇಽಂತಿಕಮ್ ।
ಲೋಕಾನಾಂ ಪ್ರತ್ಯಯಾರ್ಥಂ ತ್ವಂ ಕೃತ್ವಾ ಶಪಥಮಾದರಾತ್ ॥
(ಶ್ಲೋಕ-44)
ಮೂಲಮ್
ಭೂಮೇರ್ವಿವರಮಾತ್ರೇಣ ವೈಕುಂಠಂ ಯಾಸ್ಯಸಿ ದ್ರುತಮ್ ।
ಪಶ್ಚಾದಹಂ ಗಮಿಷ್ಯಾಮಿ ಏಷ ಏವ ಸುನಿಶ್ಚಯಃ ॥
ಅನುವಾದ
ಈಗ ನಿನ್ನ ಶರೀರದಲ್ಲಿ ಗರ್ಭಾವಸ್ಥೆಯ ಚಿಹ್ನೆಗಳು ಕಾಣಿಸುತ್ತಾ ಇವೆ. ಬಾಲಕರು ಹುಟ್ಟಿದ ಬಳಿಕ ನೀನು ಪುನಃ ನನ್ನ ಬಳಿಗೆ ಬರುವೆ. ಲೋಕಗಳ ನಂಬಿಕೆಗೋಸ್ಕರ ಆದರದಿಂದ ಪ್ರತಿಜ್ಞೆ ಮಾಡಿ ಕೂಡಲೇ ಪೃಥ್ವಿಯು ಬಿರುಕುಬಿಟ್ಟಾಗ ಅದರ ಮೂಲಕ ನೀನು ವೈಕುಂಠಕ್ಕೆ ಹೊರಟುಹೋಗುವೆ. ಅನಂತರ ನಾನೂ ಸಹ ಅಲ್ಲಿಗೆ ಬಂದು ಬಿಡುವೆನು; ಸರಿ ಈಗ ಇದೇ ನಿಶ್ಚಯವಾಯಿತು’’ ॥43-44॥
(ಶ್ಲೋಕ-45)
ಮೂಲಮ್
ಇತ್ಯುಕ್ತ್ವಾ ತಾಂ ವಿಸೃಜ್ಯಾಥ ರಾಮೋ ಜ್ಞಾನೈಕಲಕ್ಷಣಃ ।
ಮಂತ್ರಿಭಿರ್ಮಂತ್ರತತ್ತ್ವಜ್ಞೈರ್ಬಲಮುಖ್ಯೈಶ್ಚ ಸಂವೃತಃ ॥
(ಶ್ಲೋಕ-46)
ಮೂಲಮ್
ತತ್ರೋಪವಿಷ್ಟಂ ಶ್ರೀರಾಮಂ ಸುಹೃದಃ ಪರ್ಯುಪಾಸತ ।
ಹಾಸ್ಯಪ್ರೌಢಕಥಾಸುಜ್ಞಾ ಹಾಸಯಂತಃ ಸ್ಥಿತಾ ಹರಿಮ್ ॥
ಅನುವಾದ
ಕೇವಲ ಜ್ಞಾನಸ್ವರೂಪೀ ಭಗವಾನ್ ಶ್ರೀರಾಮನು ಸೀತೆಗೆ ಹೀಗೆಂದು ಹೇಳಿ ಆಕೆಯನ್ನು ಅಂತಃಪುರಕ್ಕೆ ಕಳುಹಿಸಿದನು. ಮತ್ತೆ ತಾನು ನೀತಿಶಾಸ್ತ್ರವನ್ನು ತಿಳಿದ ಮಂತ್ರಿಗಳು ಹಾಗೂ ಮುಖ್ಯ-ಮುಖ್ಯ ಸೇನಾಪತಿಗಳೊಡನೆ ಕೂಡಿಕೊಂಡು ಅಲ್ಲಿ ವಿರಾಜಮಾನನಾದನು. ಸಹೃದಯಿಗಳು ಅಲ್ಲಿ ಕುಳಿತಿರುವ ರಾಮನ ಸೇವೆಯಲ್ಲಿ ತೊಡಗಿದ್ದರು. ಹಾಸ್ಯೋಕ್ತಿಗಳಲ್ಲಿ ಚತುರರಾದ ವಿದೂಷಕರು ಆತನನ್ನು ನಗಿಸುತ್ತಿದ್ದರು. ॥45-46॥
(ಶ್ಲೋಕ-47)
ಮೂಲಮ್
ಕಥಾಪ್ರಸಂಗಾತ್ಪಪ್ರಚ್ಛ ರಾಮೋ ವಿಜಯನಾಮಕಮ್ ।
ಪೌರಾ ಜಾನಪದಾ ಮೇ ಕಿಂ ವದಂತೀಹ ಶುಭಾಶುಭಮ್ ॥
(ಶ್ಲೋಕ-48)
ಮೂಲಮ್
ಸೀತಾಂ ವಾ ಮಾತರಂ ವಾ ಮೇ ಭ್ರಾತೃನ್ವಾ ಕೈಕಯೀಮಥ ।
ನ ಭೇತವ್ಯಂ ತ್ವಯಾ ಬ್ರೂಹಿ ಶಾಪಿತೋಸಿ ಮಮೋಪರಿ ॥
ಅನುವಾದ
ಆಗ ಭಗವಾನ್ ಶ್ರೀರಾಮನು ಪ್ರಸಂಗವಶಾತ್ ವಿಜಯ ಎಂಬ ಓರ್ವ ದೂತನನ್ನು ಕೇಳಿದನು ‘‘ನನ್ನ, ಸೀತೆಯ ಕುರಿತಾಗಲಿ, ನನ್ನ ತಾಯಿ ಹಾಗೂ ಸಹೋದರರ ಅಥವಾ ಕೈಕೆಯಿಯ ವಿಷಯದಲ್ಲಿ ನಗರವಾಸೀ ಜನರು ಏನು ಹೇಳುತ್ತಾರೆ? ನಾನು ನಿನಗೆ ಶಪಥಮಾಡಿ ಹೇಳುತ್ತೇನೆ, ನೀನು ಭಯ ಪಡದೆ ನಿಜ-ಸಂಗತಿಯನ್ನು ಹೇಳು’’ ॥47-48॥
(ಶ್ಲೋಕ-49)
ಮೂಲಮ್
ಇತ್ಯುಕ್ತಃ ಪ್ರಾಹ ವಿಜಯೋ ದೇವ ಸರ್ವೇ ವದಂತಿ ತೇ ।
ಕೃತಂ ಸುದುಷ್ಕರಂ ಸರ್ವಂ ರಾಮೇಣ ವಿದಿತಾತ್ಮನಾ ॥
ಅನುವಾದ
ಭಗವಂತನು ಈ ಪ್ರಕಾರ ಕೇಳಿದಾಗ ವಿಜಯನು ಹೇಳಿದನು ‘‘ದೇವಾ! ಆತ್ಮಜ್ಞಾನಿಯಾದ ಮಹಾರಾಜಾ ರಾಮನು ಮಾಡಿರುವ ಕಾರ್ಯಗಳೆಲ್ಲವು ಅತ್ಯಂತ ಕಠಿಣವಾದವುಗಳು ಎಂದು ಜನರೆಲ್ಲ ಹೇಳುತ್ತಾರೆ. ॥49॥
(ಶ್ಲೋಕ-50)
ಮೂಲಮ್
ಕಿಂತು ಹತ್ವಾ ದಶಗ್ರೀವಂ ಸೀತಾಮಾಹೃತ್ಯ ರಾಘವಃ ।
ಅಮರ್ಷಂ ಪೃಷ್ಠತಃ ಕೃತ್ವಾ ಸ್ವಂ ವೇಶ್ಮ ಪ್ರತ್ಯಪಾದಯತ್ ॥
ಅನುವಾದ
ಆದರೆ ಅವನು ರಾವಣನನ್ನು ಕೊಂದು ಯಾವ ಬಗೆಯ ಸಂದೇಹವನ್ನು ಪಡದೆ ಸೀತೆಯನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಬಂದು ಮನೆಯಲ್ಲಿ ಇಟ್ಟುಕೊಂಡಿದ್ದಾನೆ ಇದು ಸರಿಯಲ್ಲ! ॥50॥
(ಶ್ಲೋಕ-51)
ಮೂಲಮ್
ಕೀದೃಶಂ ಹೃದಯೇ ತಸ್ಯ ಸೀತಾಸಂಭೋಗಜಂ ಸುಖಮ್ ।
ಯಾ ಹೃತಾ ವಿಜನೇರಣ್ಯೇ ರಾವಣೇನ ದುರಾತ್ಮನಾ ॥
ಅನುವಾದ
ಸರಿ, ದುರಾತ್ಮಾ ರಾವಣನು ಸೀತೆಯನ್ನು ನಿರ್ಜನವಾದ ಅರಣ್ಯದಲ್ಲಿ ಅಪಹರಿಸಿಕೊಂಡು ಹೋಗಿದ್ದನು. ಅವಳ ಜೊತೆಯಲ್ಲಿ ಭೋಗ ಭೋಗಿಸುತ್ತಾ ಅವನಿಗೆ ಏನು ಸುಖ ಸಿಕ್ಕಿತೋ ಕಾಣೆ? ॥51॥
(ಶ್ಲೋಕ-52)
ಮೂಲಮ್
ಅಸ್ಮಾಕಮಪಿ ದುಷ್ಕರ್ಮ ಯೋಷಿತಾಂ ಮರ್ಷಣಂ ಭವೇತ್ ।
ಯಾದೃಗ್ ಭವತಿ ವೈ ರಾಜಾ ತಾದೃಶ್ಯೋ ನಿಯತಂ ಪ್ರಜಾಃ ॥
ಅನುವಾದ
ಈಗ ನಾವೂ ಸಹ ನಮ್ಮ ಪತ್ನಿಯರ ದುರ್ನಡತೆಯನ್ನು ಸಹಿಸಿಕೊಳ್ಳಬೇಕಾಗುವುದು ; ಏಕೆಂದರೆ ರಾಜ ಹೇಗೋ ಪ್ರಜೆಯೂ ಸಹ ನಿಸ್ಸಂದೇಹವಾಗಿಯೂ ಹಾಗೆಯೇ ಆಗುತ್ತಾರೆ’’ ॥52॥
(ಶ್ಲೋಕ-53)
ಮೂಲಮ್
ಶ್ರುತ್ವಾ ತದ್ವಚನಂ ರಾಮಃ ಸ್ವಜನಾನ್ಪರ್ಯಪೃಚ್ಛತ ।
ತೇಽಪಿ ನತ್ವಾಬ್ರುವನ್ ರಾಮಮೇವಮೇತನ್ನ ಸಂಶಯಃ ॥
ಅನುವಾದ
ಅವನ ಈ ಮಾತುಗಳನ್ನು ಕೇಳಿ ಶ್ರೀರಾಮಚಂದ್ರನು ತನ್ನ ಆತ್ಮೀಯರಲ್ಲಿ ವಿಚಾರಿಸಿದನು. ಅವರೂ ಸಹ ರಘುನಾಥನಿಗೆ ನಮಸ್ಕರಿಸಿ, ನಿಸ್ಸಂದೇಹವಾಗಿಯೂ ಮಾತು ಇದೇ ಆಗಿದೆ ಎಂದು ಹೇಳಿದರು. ॥53॥
(ಶ್ಲೋಕ-54)
ಮೂಲಮ್
ತತೋ ವಿಸೃಜ್ಯ ಸಚಿವಾನ್ವಿಜಯಂ ಸುಹೃದಸ್ತಥಾ ।
ಆಹೂಯ ಲಕ್ಷ್ಮಣಂ ರಾಮೋ ವಚನಂ ಚೇದಮಬ್ರವೀತ್ ॥
(ಶ್ಲೋಕ-55)
ಮೂಲಮ್
ಲೋಕಾಪವಾದಸ್ತು ಮಹಾನ್ಸೀತಾಮಾಶ್ರಿತ್ಯ ಮೇಽಭವತ್ ।
ಸೀತಾಂ ಪ್ರಾತಃ ಸಮಾನೀಯ ವಾಲ್ಮೀಕೆರಾಶ್ರಮಾಂತಿಕೇ ॥
(ಶ್ಲೋಕ-56)
ಮೂಲಮ್
ತ್ಯಕ್ತ್ವಾ ಶೀಘ್ರಂ ರಥೇನ ತ್ವಂ ಪುನರಾಯಾಹಿ ಲಕ್ಷ್ಮಣ ।
ವಕ್ಷ್ಯಸೇ ಯದಿ ವಾ ಕಿಂಚಿತ್ತದಾ ಮಾಂ ಹತವಾನಸಿ ॥
ಅನುವಾದ
ಆಗ ಶ್ರೀರಾಮಚಂದ್ರನು ಮಂತ್ರಿಗಳು, ವಿಜಯ ಮತ್ತು ತನ್ನ ಸಹೃದಯಿಗಳನ್ನು ಬೀಳ್ಕೊಟ್ಟು, ಲಕ್ಷ್ಮಣನನ್ನು ಕರೆದ. ಅವನೊಡನೆ ಈ ಪ್ರಕಾರ ಹೇಳತೊಡಗಿದನು ‘‘ತಮ್ಮ ಲಕ್ಷ್ಮಣಾ! ಸೀತೆಯ ಕಾರಣದಿಂದ ನನಗೆ ಬಹಳ ಲೋಕಾಪ ವಾದವುಂಟಾಗುತ್ತಾ ಇದೆ. ಆದುದರಿಂದ ನೀನು ನಾಳೆ ಬೆಳಿಗ್ಗೆಯೇ ಸೀತೆಯನ್ನು ರಥದ ಮೇಲೆ ಕುಳ್ಳಿರಿಸಿಕೊಂಡು ವಾಲ್ಮೀಕಿ ಮುನಿಗಳ ಆಶ್ರಮದ ಸಮೀಪದಲ್ಲಿ ಬಿಟ್ಟು ಬಾ. ಈ ವಿಷಯದಲ್ಲಿ ನೀನೇನಾದರೂ ಮರುಮಾತನಾಡಿದರೆ ನನ್ನ ಹತ್ಯೆಯನ್ನೇ ಮಾಡಿದಂತಾಗುವುದು.’’ ॥54-56॥
(ಶ್ಲೋಕ-57)
ಮೂಲಮ್
ಇತ್ಯುಕ್ತೋ ಲಕ್ಷ್ಮಣೋ ಭೀತ್ಯಾ ಪ್ರಾತರುತ್ಥಾಯ ಜಾನಕೀಮ್ ।
ಸುಮಂತ್ರೇಣ ರಥೇ ಕೃತ್ವಾ ಜಗಾಮ ಸಹಸಾ ವನಮ್ ॥
ಅನುವಾದ
ಭಗವಂತನ ಇಂತಹ ಅಪ್ಪಣೆಯಿಂದ ಲಕ್ಷ್ಮಣನು ಹೆದರಿ ಹೋದನು. ಅವನು ಬೆಳಿಗ್ಗೆ ಎದ್ದಕೂಡಲೇ ಸುಮಂತ್ರ ನಿಂದ ರಥವನ್ನು ಸಿದ್ಧಗೊಳಿಸಿ ಅದರಲ್ಲಿ ಜಾನಕಿಯನ್ನು ಕುಳ್ಳಿರಿಸಿಕೊಂಡು ಕೂಡಲೇ ಕಾಡಿಗೆ ಹೊರಟನು. ॥57॥
(ಶ್ಲೋಕ-58)
ಮೂಲಮ್
ವಾಲ್ಮೀಕೇರಾಶ್ರಮಸ್ಯಾಂತೇ ತ್ಯಕ್ತ್ವಾ ಸೀತಾಮುವಾಚ ಸಃ ।
ಲೋಕಾಪವಾದಭೀತ್ಯಾ ತ್ವಾಂ ತ್ಯಕ್ತವಾನ್ ರಾಘವೋ ವನೇ ॥
ಅನುವಾದ
ವಾಲ್ಮೀಕಿ ಋಷಿಗಳ ಆಶ್ರಮವನ್ನು ತಲುಪಿದ ಕೂಡಲೇ ಆತನು ಸೀತೆಯನ್ನು ಇಳಿಸಿದನು ಹಾಗೂ ಆಕೆಗೆ ಹೇಳಿದನು ‘‘ಅಮ್ಮಾ! ಶ್ರೀರಘುನಾಥನು ಲೋಕಾಪವಾದಕ್ಕೆ ಹೆದರಿ ನಿನ್ನನ್ನು ಬಿಟ್ಟು ಬಿಟ್ಟಿರುವನು. ॥58॥
(ಶ್ಲೋಕ-59)
ಮೂಲಮ್
ದೋಷೋ ನ ಕಶ್ಚಿನ್ಮೇ ಮಾತರ್ಗಚ್ಛಾಶ್ರಮಪದಂ ಮುನೇಃ ।
ಇತ್ಯುಕ್ತ್ವಾ ಲಕ್ಷ್ಮಣಃ ಶೀಘ್ರಂ ಗತವಾನ್ ರಾಮಸನ್ನಿಧಿಮ್ ॥
ಅನುವಾದ
ಹೇ ತಾಯಿ! ಇದರಲ್ಲಿ ನನ್ನದೇನೂ ತಪ್ಪಿಲ್ಲ, ಈಗ ನೀನು ಮುನೀಶ್ವರರ ಆಶ್ರಮಕ್ಕೆ ಹೊರಟು ಹೋಗು’’ ಎಂದು ಸೀತೆಗೆ ಹೇಳಿ ಲಕ್ಷ್ಮಣನು ತತ್ಕ್ಷಣ ಶ್ರೀರಾಮಚಂದ್ರನ ಬಳಿಗೆ ಹೊರಟು ಬಂದನು. ॥59॥
(ಶ್ಲೋಕ-60)
ಮೂಲಮ್
ಸೀತಾಪಿ ದುಃಖಸಂತಪ್ತಾ ವಿಲಲಾಪಾತಿಮುಗ್ಧವತ್ ।
ಶಿಷ್ಯೈಃ ಶ್ರುತ್ವಾ ಚ ವಾಲ್ಮೀಕಿಃ ಸೀತಾಂ ಜ್ಞಾತ್ವಾ ಸ ದಿವ್ಯದೃಕ್ ॥
ಅನುವಾದ
ಆಗ ಸೀತೆಯು ಅತ್ಯಂತ ದುಃಖಿತಳಾಗಿ, ಮುಗ್ಧ ಸ್ತ್ರೀಯರಂತೆ ಬಹಳವಾಗಿ ಅಳತೊಡಗಿದಳು. ‘ಓರ್ವ ಸ್ತ್ರೀಯು ಅಳುತ್ತಾ ಆಶ್ರಮದ ಸನಿಹದಲ್ಲಿದ್ದಾಳೆ’ ಎಂಬ ಮಾತನ್ನು ಮಹರ್ಷಿ ವಾಲ್ಮೀಕಿಗಳು ಶಿಷ್ಯರಿಂದ ಕೇಳಿದಾಗ ಅವರು ದಿವ್ಯದೃಷ್ಟಿಯಿಂದ ಆಕೆಯು ಸೀತಾದೇವಿಯೇ ಆಗಿದ್ದಾಳೆಂದು ಅರಿತುಕೊಂಡರು. ॥60॥
(ಶ್ಲೋಕ-61)
ಮೂಲಮ್
ಅರ್ಘ್ಯಾದಿಭಿಃ ಪೂಜಯಿತ್ವಾ ಸಮಾಶ್ವಾಸ್ಯ ಚ ಜಾನಕೀಮ್ ।
ಜ್ಞಾತ್ವಾ ಭವಿಷ್ಯಂ ಸಕಲಮಾರ್ಪಯನ್ಮುನಿಯೋಷಿತಾಮ್ ॥
ಅನುವಾದ
ಮುನಿಗಳು ಭವಿಷ್ಯದಲ್ಲಿ ನಡೆಯುವ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು. ಆದುದರಿಂದ ಅವರು ಅರ್ಘ್ಯಾದಿಗಳಿಂದ ಸೀತೆಯನ್ನು ಪೂಜಿಸಿ-ಸತ್ಕರಿಸಿ ಆಕೆಯನ್ನು ಸಮಾಧಾನ ಪಡಿಸಿ, ಋಷಿ ಪತ್ನಿಯರಿಗೆ ಒಪ್ಪಿಸಿಕೊಟ್ಟರು. ॥61॥
(ಶ್ಲೋಕ-62)
ಮೂಲಮ್
ತಾಸ್ತಾಂ ಸಂಪೂಜಯಂತಿ ಸ್ಮ ಸೀತಾಂ ಭಕ್ತ್ಯಾ ದಿನೇ ದಿನೇ ।
ಜ್ಞಾತ್ವಾ ಪರಾತ್ಮನೋ ಲಕ್ಷ್ಮೀಂ ಮುನಿವಾಕ್ಯೇನ ಯೋಷಿತಃ ।
ಸೇವಾಂ ಚಕ್ರುಃ ಸದಾ ತಸ್ಯಾ ವಿನಯಾದಿಭಿರಾದರಾತ್ ॥
ಅನುವಾದ
ಆ ಋಷಿಪತ್ನಿಯರು ಋಷಿಗಳು ಹೇಳಿದಂತೆ ಆಕೆಯನ್ನು ಸಾಕ್ಷಾತ್ ಪರಮಾತ್ಮನ ಪತ್ನೀ ಲಕ್ಷ್ಮಿಯೆಂದು ತಿಳಿದುಕೊಂಡು ಪ್ರತಿದಿವಸವೂ ಭಕ್ತಿಭಾವದಿಂದ ಆಕೆಯನ್ನು ಪೂಜಿಸುತ್ತಿದ್ದರು. ಸದಾಕಾಲ ಅತ್ಯಂತ ಆದರದಿಂದ ನಮ್ರತೆಯಿಂದ ಆಕೆಯ ಸೇವೆ ಮಾಡುತ್ತಾ ಇದ್ದರು. ॥62॥
(ಶ್ಲೋಕ-63)
ಮೂಲಮ್
ರಾಮೋಽಪಿ ಸೀತಾರಹಿತಃ ಪರಾತ್ಮಾ
ವಿಜ್ಞಾನದೃಕ್ಕೇವಲ ಆದಿದೇವಃ ।
ಸಂತ್ಯಜ್ಯ ಭೋಗಾನಖಿಲಾನ್ವಿರಕ್ತೋ
ಮುನಿವ್ರತೋಽಭೂನ್ಮುನಿಸೇವಿತಾಂಘ್ರಿಃ ॥
ಅನುವಾದ
ಇತ್ತ ಸೀತಾದೇವಿಯನ್ನು ತ್ಯಾಗಮಾಡಿದ ಬಳಿಕ, ಯಾರ ಚರಣಕಮಲಗಳನ್ನು ಋಷಿಗಣಗಳು, ಸೇವಿಸುತ್ತಾರೋ, ಅಂತಹ ವಿಜ್ಞಾನಚಕ್ಷು, ಅದ್ವಿತೀಯ, ಆದಿ ದೇವ ಪರಮಾತ್ಮಾ ಶ್ರೀರಾಮನೂ ಕೂಡ ಎಲ್ಲ ಭೋಗಗಳನ್ನು ತ್ಯಜಿಸಿ ವೈರಾಗ್ಯದಿಂದೊಡಗೂಡಿ ಮುನಿಗಳ ರೀತಿಯಲ್ಲಿಯೇ ಇರತೊಡಗಿದನು. ॥63॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಉತ್ತರಕಾಂಡೇ ಚತುರ್ಥಃ ಸರ್ಗಃ ॥4॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಉತ್ತರಕಾಂಡದಲ್ಲಿ ನಾಲ್ಕನೆಯ ಸರ್ಗವು ಮುಗಿಯಿತು.