[ಮೂರನೆಯ ಸರ್ಗ]
ಭಾಗಸೂಚನಾ
ವಾಲೀ ಮತ್ತು ಸುಗ್ರೀವರ ಪೂರ್ವಚರಿತ್ರೆ ಹಾಗೂ ರಾವಣ ಸನತ್ಕುಮಾರ - ಸಂವಾದ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀರಾಮ ಉವಾಚ
ಮೂಲಮ್
ವಾಲಿಸುಗ್ರೀವಯೋರ್ಜನ್ಮ ಶ್ರೋತುಮಿಚ್ಛಾಮಿ ತತ್ತ್ವತಃ ।
ರವೀಂದ್ರೌ ವಾನರಾಕಾರೌ ಜಜ್ಞಾತ ಇತಿ ನಃ ಶ್ರುತಮ್ ॥
ಅನುವಾದ
ಶ್ರೀರಾಮನಿಂತೆಂದನು — ಹೇ ಋಷಿಗಳೇ! ನಾನು ವಾಲೀ ಮತ್ತು ಸುಗ್ರೀವರ ಜನ್ಮದ ಎಲ್ಲ ವೃತ್ತಾಂತವನ್ನು ಕೇಳಬೇಕೆಂದು ಬಯಸುತ್ತೇನೆ. ಇವರು ಇಂದ್ರ ಮತ್ತು ಸೂರ್ಯರೇ ವಾನರ ರೂಪದಿಂದ ಹುಟ್ಟಿದ್ದರೆಂದು ನಾನು ಕೇಳಿದ್ದೇನೆ. ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಅಗಸ್ತ್ಯ ಉವಾಚ
ಮೂಲಮ್
ಮೇರೋಃ ಸ್ವರ್ಣಮಯಸ್ಯಾದ್ರೇರ್ಮಧ್ಯಶೃಂಗೇ ಮಣಿಪ್ರಭೇ ।
ತಸ್ಮಿನ್ಸಭಾಸ್ತೇ ವಿಸ್ತೀರ್ಣಾ ಬ್ರಹ್ಮಣಃ ಶತಯೋಜನಾ ॥
ಅನುವಾದ
ಅಗಸ್ತ್ಯರಿಂತೆಂದರು — ಹೇ ರಾಮಚಂದ್ರಾ! ಮೇರುಪರ್ವತದಲ್ಲಿ ಪ್ರಕಾಶಮಾನವಾದ ಸುವರ್ಣಮಯ ಮಣಿಯಂತಿರುವ ಮಧ್ಯ ಶಿಖರದ ಮೇಲೆ ನೂರುಯೋಜನ ವಿಸ್ತಾರವುಳ್ಳ ಬ್ರಹ್ಮನ ಸಭೆಯಿದೆ. ॥2॥
(ಶ್ಲೋಕ-3)
ಮೂಲಮ್
ತಸ್ಯಾಂ ಚತುರ್ಮುಖಃ ಸಾಕ್ಷಾತ್ಕದಾಚಿದ್ಯೋಗಮಾಸ್ಥಿತಃ ।
ನೇತ್ರಾಭ್ಯಾಂ ಪತಿತಂ ದಿವ್ಯಮಾನಂದಸಲಿಲಂ ಬಹು ॥
ಅನುವಾದ
ಅದರಲ್ಲಿ ಚತುರ್ಮುಖ ಬ್ರಹ್ಮನು ಒಮ್ಮೆ ಧ್ಯಾನಾಸಕ್ತನಾಗಿ ಕುಳಿತಿದ್ದನು. ಆಗ ಆತನ ಕಣ್ಣುಗಳಿಂದ ದಿವ್ಯವಾದ ಬಹಳಷ್ಟು ಆನಂದಾಶ್ರುಗಳು ಬಿದ್ದವು. ॥3॥
(ಶ್ಲೋಕ-4)
ಮೂಲಮ್
ತದ್ ಗೃಹೀತ್ವಾ ಕರೇ ಬ್ರಹ್ಮಾ ಧ್ಯಾತ್ವಾ ಕಿಂಚಿತ್ತದತ್ಯಜತ್ ।
ಭೂವೌ ಪತಿತಮಾತ್ರೇಣ ತಸ್ಮಾಜ್ಜಾತೋ ಮಹಾಕಪಿಃ ॥
ಅನುವಾದ
ಅವುಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಬ್ರಹ್ಮನು ಸ್ವಲ್ಪಯೋಚಿಸಿ ನೆಲಕ್ಕೆ ಹಾಕಿಬಿಟ್ಟನು. ಭೂಮಿಯ ಮೇಲೆ ಬೀಳುತ್ತಲೇ ಅವುಗಳಿಂದ ಒಬ್ಬ ಬಹಳ ದೊಡ್ಡ ವಾನರನ ಉತ್ಪತ್ತಿಯಾಯಿತು. ॥4॥
(ಶ್ಲೋಕ-5)
ಮೂಲಮ್
ತಮಾಹ ದ್ರುಹಿಣೋ ವತ್ಸ ಕಿಂಚಿತ್ಕಾಲಂ ವಸಾತ್ರ ಮೇ ।
ಸಮೀಪೇ ಸರ್ವಶೋಭಾಢ್ಯೇ ತತಃ ಶ್ರೇಯೋ ಭವಿಷ್ಯತಿ ॥
ಅನುವಾದ
ಅವನಿಗೆ ಬ್ರಹ್ಮನು ಹೇಳಿದನು - ‘‘ವತ್ಸ! ನೀನು ಸ್ವಲ್ಪಕಾಲ ನನ್ನ ಬಳಿಯಲ್ಲಿ ಈ ಸರ್ವಶೋಭಾ ಸಂಪನ್ನವಾದ ಸ್ಥಾನ ದಲ್ಲಿರು, ಅದರಿಂದ ನಿನಗೆ ಶ್ರೇಯಸ್ಸಾಗುವುದು.’’ ॥5॥
(ಶ್ಲೋಕ-6)
ಮೂಲಮ್
ಇತ್ಯುಕ್ತೋ ನ್ಯವಸತ್ತತ್ರ ಬ್ರಹ್ಮಣಾ ವಾನರೋತ್ತಮಃ ।
ಏವಂ ಬಹುತಿಥೇ ಕಾಲೇ ಗತೇ ಋಕ್ಷಾಧಿಪಃ ಸುಧೀಃ ॥
(ಶ್ಲೋಕ-7)
ಮೂಲಮ್
ಕದಾಚಿತ್ಪರ್ಯಟನ್ನದ್ರೌ ಫಲಮೂಲಾರ್ಥಮುದ್ಯತಃ ।
ಅಪಶ್ಯದ್ದಿವ್ಯಸಲಿಲಾಂ ವಾಪೀಂ ಮಣಿಶಿಲಾನ್ವಿತಾಮ್ ॥
ಅನುವಾದ
ಬ್ರಹ್ಮನು ಈ ಪ್ರಕಾರ ಹೇಳಿದಾಗ ಆ ವಾನರಶ್ರೇಷ್ಠನು ಅಲ್ಲಿಯೇ ಇರುತ್ತಿದ್ದನು. ಈ ರೀತಿ ಬಹಳ ಸಮಯ ಕಳೆದು ಹೋದ ಮೇಲೆ ಒಂದು ದಿವಸ ಆ ಪರಮ ಬುದ್ಧಿವಂತನಾದ ಋಕ್ಷರಾಜನು* ಫಲ-ಮೂಲಾದಿಗಳಿಗಾಗಿ ತಿರುಗುತ್ತಾ-ತಿರುಗುತ್ತಾ ಒಂದು ದಿವ್ಯ ಜಲಭರಿತ ಮತ್ತು ರತ್ನಖಚಿತ ಶಿಲೆಗಳಿಂದ ಸುಶೋಭಿತವಾದ ಸರೋವರವನ್ನು ನೋಡಿದನು. ॥6-7॥
ಟಿಪ್ಪನೀ
- ಇದು ಆ ವಾನರನ ಹೆಸರಾಗಿತ್ತು.
(ಶ್ಲೋಕ-8)
ಮೂಲಮ್
ಪಾನೀಯಂ ಪಾತುಮಾಗಚ್ಛತ್ತತ್ರಚ್ಛಾಯಾಮಯಂ ಕಪಿಮ್ ।
ದೃಷ್ಟ್ವಾ ಪ್ರತಿಕಪಿಂ ಮತ್ವಾ ನಿಪಪಾತ ಜಲಾಂತರೇ ॥
ಅನುವಾದ
ಅವನು ನೀರು ಕುಡಿ ಯುವುದಕ್ಕಾಗಿ ಹೋದಾಗ ಆ ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದನು. ಅದನ್ನು ತನ್ನ ಪ್ರತಿದ್ವಂದ್ವೀ ವಾನರನೆಂದು ತಿಳಿದುಕೊಂಡು ಅವನು ನೀರಿಗೆ ಹಾರಿದನು. ॥8॥
(ಶ್ಲೋಕ-9)
ಮೂಲಮ್
ತತ್ರಾದೃಷ್ಟ್ವಾ ಹರಿಂ ಶೀಘ್ರಂ ಪುನರುತ್ಪ್ಲುತ್ಯ ವಾನರಃ ।
ಅಪಶ್ಯತ್ಸುಂದರೀಂ ರಾಮಾಮಾತ್ಮಾನಂ ವಿಸ್ಮಯಂ ಗತಃ ॥
ಅನುವಾದ
ಆದರೆ ಅಲ್ಲಿ ಯಾವ ವಾನರನೂ ಸಿಕ್ಕಲಿಲ್ಲ. ಅದರಿಂದ ಅವನು ಕೂಡಲೇ ಹಾರಿ ಹೊರಕ್ಕೆ ಬಂದನು. ಆಗ ತಾನು ಓರ್ವ ಬಹುಸುಂದರಿಯಾದ ರಮಣಿಯಾಗಿರುವುದನ್ನು ನೋಡಿ ಬಹಳ ಆಶ್ಚರ್ಯಚಕಿತನಾದನು. ॥9॥
(ಶ್ಲೋಕ-10)
ಮೂಲಮ್
ತತಃ ಸುರೇಶೋ ದೇವೇಶಂ ಪೂಜಯಿತ್ವಾ ಚತುರ್ಮುಖಮ್ ।
ಗಚ್ಛನ್ಮಧ್ಯಾಹ್ನಸಮಯೇ ದೃಷ್ಟ್ವಾ ನಾರೀಂ ಮನೋರಮಾಮ್ ॥
(ಶ್ಲೋಕ-11)
ಮೂಲಮ್
ಕಂದರ್ಪಶರವಿದ್ಧಾಂಗಸ್ತ್ಯಕ್ತವಾನ್ವೀರ್ಯಮುತ್ತಮಮ್ ।
ತಾಮಪ್ರಾಪ್ಯೈವ ತದ್ಬೀಜಂ ವಾಲದೇಶೇಪತದ್ಭುವಿ ॥
ಅನುವಾದ
ಆಗಲೇ ದೇವರಾಜ ಇಂದ್ರನು ಮಧ್ಯಾಹ್ನ ಕಾಲದಲ್ಲಿ ಬ್ರಹ್ಮನನ್ನು ಪೂಜಿಸಿ ಅದೇ ದಾರಿಯಿಂದ ಹಿಂದಿರುಗುತ್ತಿದ್ದನು. ಆ ಪರಮ ಸುಂದರೀ ಸ್ತ್ರೀಯನ್ನು ಕಂಡು ಆತನು ಕಾಮದೇವನ ಬಾಣಗಳಿಂದ ಭೇದಿಸಲ್ಟಟ್ಟನು. ಆಗ ಅವನ ಉತ್ತಮ ವೀರ್ಯವು ಸ್ಖಲನವಾಯಿತು. ಆ ವೀರ್ಯವು ಆ ಸೀಗೆ ಪ್ರಾಪ್ತಿಯಾಗದೆ ಅವಳ ಕೂದಲುಗಳನ್ನು ಸ್ಪರ್ಶಿಸುತ್ತಾ ಭೂಮಿಯ ಮೇಲೆ ಬಿದ್ದು ಬಿಟ್ಟಿತು. ॥10-11॥
(ಶ್ಲೋಕ-12)
ಮೂಲಮ್
ವಾಲೀ ಸಮಭವತ್ತತ್ರ ಶಕ್ರತುಲ್ಯಪರಾಕ್ರಮಃ ।
ತಸ್ಯ ದತ್ತ್ವಾ ಸುರೇಶಾನಃ ಸ್ವರ್ಣಮಾಲಾಂ ದಿವಂ ಗತಃ ॥
ಅನುವಾದ
ಅದರಿಂದ ಇಂದ್ರನಿಗೆ ಸಮಾನವಾದ ಪರಾಕ್ರಮೀ ವಾಲಿಯ ಜನ್ಮವಾಯಿತು. ದೇವರಾಜ ಇಂದ್ರನು ಅವನಿಗೆ ಒಂದು ಸುವರ್ಣಮಯ ಹಾರವನ್ನು ಕೊಟ್ಟು ಸ್ವರ್ಗಲೋಕಕ್ಕೆ ಹೊರಟು ಹೋದನು. ॥12॥
(ಶ್ಲೋಕ-13)
ಮೂಲಮ್
ಭಾನುರಪ್ಯಾಗತಸ್ತತ್ರ ತದಾನೀಮೇವ ಭಾಮಿನೀಮ್ ।
ದೃಷ್ಟ್ವಾ ಕಾಮವಶೋ ಭೂತ್ವಾ ಗ್ರೀವಾದೇಶೇಽಸೃಜನ್ಮಹತ್ ॥
(ಶ್ಲೋಕ-14)
ಮೂಲಮ್
ಬೀಜಂ ತಸ್ಯಾಸ್ತತಃ ಸದ್ಯೋ ಮಹಾಕಾಯೋಽಭವದ್ಧರಿಃ ।
ತಸ್ಯ ದತ್ತ್ವಾ ಹನೂಮಂತಂ ಸಹಾಯಾರ್ಥಂ ಗತೋ ರವಿಃ ॥
ಅನುವಾದ
ಅದೇ ಸಮಯಕ್ಕೆ ಅಲ್ಲಿಗೆ ಸೂರ್ಯದೇವನೂ ಬಂದು ಆ ಸುಂದರಿಯನ್ನು ಕಂಡನು. ಅವನೂ ಕಾಮಪರವಶನಾದನು ಹಾಗೂ ಅವಳ ಕೊರಳಿನ ಮೇಲೆ ತನ್ನ ಉಗ್ರವೀರ್ಯವನ್ನು ಬಿಟ್ಟನು. ಅದರಿಂದ ಕೂಡಲೇ ಒಬ್ಬ ಬಹಳ ದೊಡ್ಡ ಶರೀರದ ವಾನರನು ಹುಟ್ಟಿದನು. ಸೂರ್ಯದೇವನು ಅವನ ಸಹಾಯಕ್ಕಾಗಿ ಅವನಿಗೆ ಹನುಮಂತನನ್ನು ಒಪ್ಪಿಸಿ ಹೊರಟು ಹೋದನು. ॥13-14॥
(ಶ್ಲೋಕ-15)
ಮೂಲಮ್
ಪುತ್ರದ್ವಯಂ ಸಮಾದಾಯ ಗತ್ವಾ ಸಾ ನಿದ್ರಿತಾ ಕ್ವಚಿತ್ ।
ಪ್ರಭಾತೇಪಶ್ಯದಾತ್ಮಾನಂ ಪೂರ್ವವದ್ವಾನರಾಕೃತಿಮ್ ॥
ಅನುವಾದ
ಆ ಇಬ್ಬರು ಪುತ್ರರನ್ನು ಕರೆದುಕೊಂಡು ಆ ಸ್ತ್ರೀಯು ಎಲ್ಲಿಯೋ ಹೋಗಿ ಮಲಗಿಕೊಂಡಳು. ಮರುದಿನ ಬೆಳಿಗ್ಗೆ ಎದ್ದಾಗ ತಾನು ಮೊದಲಿನಂತೆಯೇ ವಾನರನಾಗಿರುವುದನ್ನು ಕಂಡನು. ॥15॥
(ಶ್ಲೋಕ-16)
ಮೂಲಮ್
ಲಮೂಲಾದಿಭಿಃ ಸಾರ್ಧಂ ಪುತ್ರಾಭ್ಯಾಂ ಸಹಿತಃ ಕಪಿಃ ।
ನತ್ವಾ ಚತುರ್ಮುಖಸ್ಯಾಗ್ರೇ ಋಕ್ಷರಾಜಃ ಸ್ಥಿತಃ ಸುಧೀಃ ॥
ಅನುವಾದ
ಮತ್ತೆ ಆ ಪರಮ ಬುದ್ಧಿಶಾಲಿ ಋಕ್ಷರಾಜನು ಫಲ-ಮೂಲಾದಿಗಳನ್ನು ತೆಗೆದುಕೊಂಡು ತನ್ನ ಪುತ್ರರ ಸಂಗಡ ಬ್ರಹ್ಮದೇವರ ಸಭೆಗೆ ಬಂದು, ಅವನಿಗೆ ನಮಸ್ಕಾರ ಮಾಡಿ ಅವನ ಮುಂದೆ ನಿಂತುಕೊಂಡನು. ॥16॥
(ಶ್ಲೋಕ-17)
ಮೂಲಮ್
ತತೋಽಬ್ರವೀತ್ಸಮಾಶ್ವಾಸ್ಯ ಬಹುಶಃ ಕಪಿಕುಂಜರಮ್ ।
ತತ್ರೈಕಂ ದೇವತಾದೂತಮಾಹೂಯಾಮರಸನ್ನಿಭಮ್ ॥
ಅನುವಾದ
ಆಗ ಬ್ರಹ್ಮದೇವರು ಆ ವಾನರ-ವೀರನಿಗೆ ಬಹಳವಾಗಿ ಸಮಾಧಾನ ಪಡಿಸಿ, ಒಬ್ಬ ದೇವದೂತನನ್ನು ಕರೆದು ಅವನಿಗೆ ಹೇಳಿದರು ॥17॥
(ಶ್ಲೋಕ-18)
ಮೂಲಮ್
ಗಚ್ಛ ದೂತ ಮಯಾದಿಷ್ಟೋ ಗೃಹೀತ್ವಾ ವಾನರೋತ್ತಮಮ್ ।
ಕಿಷ್ಕಿಂಧಾಂ ದಿವ್ಯನಗರೀಂ ನಿರ್ಮಿತಾಂ ವಿಶ್ವಕರ್ಮಣಾ ॥
ಅನುವಾದ
‘‘ಎಲೈ ದೂತನೇ! ನೀನು ನನ್ನ ಆಜ್ಞೆಯಂತೆ ಈ ವಾನರ ಶ್ರೇಷ್ಠನನ್ನು ಕರೆದುಕೊಂಡು ವಿಶ್ವಕರ್ಮನು ರಚಿಸಿರುವ ಕಿಷ್ಕಿಂಧಾ ಎಂಬ ದಿವ್ಯ ಪಟ್ಟಣಕ್ಕೆ ಹೋಗು. ॥18॥
(ಶ್ಲೋಕ-19)
ಮೂಲಮ್
ಸರ್ವಸೌಭಾಗ್ಯವಲಿತಾಂ ದೇವೈರಪಿ ದುರಾಸದಾಮ್ ।
ತಸ್ಯಾಂ ಸಿಂಹಾಸನೇ ವೀರಂ ರಾಜಾನಮಭಿಷೇಚಯ ॥
ಅನುವಾದ
ಅದು ಸಂಪೂರ್ಣವಾಗಿ ಐಶ್ವರ್ಯ ಸಂಪನ್ನವಾಗಿದೆ ಮತ್ತು ದೇವತೆಗಳಿಗೂ ಸಹ ದುರ್ಜಯವಾಗಿದೆ. ಅದರ ಸಿಂಹಾಸನದ ಮೇಲೆ ಈ ವೀರನ ಪಟ್ಟಾಭಿಷೇಕವನ್ನು ಮಾಡಿಸು. ॥19॥
(ಶ್ಲೋಕ-20)
ಮೂಲಮ್
ಸಪ್ತದ್ವೀಪಗತಾ ಯೇ ಯೇ ವಾನರಾಃ ಸಂತಿ ದುರ್ಜಯಾಃ ।
ಸರ್ವೇ ತೇ ಋಕ್ಷರಾಜಸ್ಯ ಭವಿಷ್ಯಂತಿ ವಶೇನುಗಾಃ ॥
ಅನುವಾದ
ಏಳೂ ದ್ವೀಪಗಳಲ್ಲಿ ಇರುವ ದೊಡ್ಡ ದುರ್ಜಯ ವಾನರ-ವೀರರೆಲ್ಲರೂ ಈ ಋಕ್ಷರಾಜನ ಅಧೀನದಲ್ಲಿರುವರು. ॥20॥
(ಶ್ಲೋಕ-21)
ಮೂಲಮ್
ಯದಾ ನಾರಾಯಣಃ ಸಾಕ್ಷಾದ್ರಾಮೋ ಭೂತ್ವಾ ಸನಾತನಃ ।
ಭೂಭಾರಾಸುರನಾಶಾಯ ಸಂಭವಿಷ್ಯತಿ ಭೂತಲೇ ॥
(ಶ್ಲೋಕ-22)
ಮೂಲಮ್
ತದಾ ಸರ್ವೇ ಸಹಾಯಾರ್ಥೇ ತಸ್ಯ ಗಚ್ಛಂತು ವಾನರಾಃ ।
ಇತ್ಯುಕ್ತೋ ಬ್ರಹ್ಮಣಾ ದೂತೋ ದೇವಾನಾಂ ಸ ಮಹಾಮತಿಃ ॥
(ಶ್ಲೋಕ-23)
ಮೂಲಮ್
ಯಥಾಜ್ಞಪ್ತಸ್ತಥಾ ಚಕ್ರೇ ಬ್ರಹ್ಮಣಾ ತಂ ಹರೀಶ್ವರಮ್ ।
ದೇವದೂತಸ್ತತೋ ಗತ್ವಾ ಬ್ರಹ್ಮಣೇ ತನ್ನ್ಯವೇದಯತ್ ॥
(ಶ್ಲೋಕ-24)
ಮೂಲಮ್
ತದಾದಿ ವಾನರಾಣಾಂ ಸಾ ಕಿಷ್ಕಿಂಧಾಭೂನ್ನೃಪಾಶ್ರಯಃ ॥
ಅನುವಾದ
ಸಾಕ್ಷಾತ್ ಸನಾತನ ಪುರುಷ ಭಗವಾನ್ ಶ್ರೀಮನ್ನಾರಾಯಣನು ಭೂಭಾರವನ್ನು ತಗ್ಗಿಸುವುದಕ್ಕಾಗಿ ಭೂಲೋಕದಲ್ಲಿ ರಾಮರೂಪದಿಂದ ಅವತಾರವೆತ್ತಿದಾಗ ಸಮಸ್ತ ವಾನರ ಸಮೂಹ ಅವನ ಸಹಾಯಕ್ಕೆ ಹೋಗಲಿ!’’ ಬ್ರಹ್ಮದೇವರು ಈ ಪ್ರಕಾರ ಹೇಳಿದಾಗ ಆ ಮಹಾಬುದ್ಧಿಶಾಲಿ ದೇವದೂತನು ಅವನ ಆಜ್ಞೆಯಂತೆ ಆ ವಾನರರಾಜನ ಎಲ್ಲಾ ವ್ಯವಸ್ಥೆಯನ್ನು ಮಾಡಿದನು ಹಾಗೂ ಪುನಃ ಬ್ರಹ್ಮನ ಬಳಿಗೆ ಹೋಗಿ ಅವನಿಗೆ ಎಲ್ಲ ಸಮಾಚಾರವನ್ನು ತಿಳಿಸಿದನು. ಅಂದಿನಿಂದ ಆ ಕಿಷ್ಕಿಂಧೆಯು ವಾನರರ ರಾಜಧಾನಿಯಾಯಿತು ॥21-24॥
(ಶ್ಲೋಕ-25)
ಮೂಲಮ್
ಸರ್ವೇಶ್ವರಸ್ತ್ವಮೇವಾಸೀರಿದಾನೀಂ ಬ್ರಹ್ಮಣಾರ್ಥಿತಃ ।
ಭೂಮೇರ್ಭಾರೋ ಹೃತಃ ಕೃತ್ಸ್ನಸ್ತ್ವಯಾ ಲೀಲಾನೃದೇಹಿನಾ ।
ಸರ್ವಭೂತಾಂತರಸ್ಥಸ್ಯ ನಿತ್ಯಮುಕ್ತಚಿದಾತ್ಮನಃ ॥
(ಶ್ಲೋಕ-26)
ಮೂಲಮ್
ಅಖಂಡಾನಂತರೂಪಸ್ಯ ಕಿಯಾನೇಷ ಪರಾಕ್ರಮಃ ।
ತಥಾಪಿ ವರ್ಣ್ಯತೇ ಸದ್ಭಿರ್ಲೀಲಾಮಾನುಷರೂಪಿಣಃ ॥
(ಶ್ಲೋಕ-27)
ಮೂಲಮ್
ಯಶಸ್ತೇ ಸರ್ವಲೋಕಾನಾಂ ಪಾಪಹತ್ಯೈ ಸುಖಾಯ ಚ ।
ಯ ಇದಂ ಕೀರ್ತಯೇನ್ಮರ್ತ್ಯೋ ವಾಲಿಸುಗ್ರೀವಯೋರ್ಮಹತ್ ॥
(ಶ್ಲೋಕ-28)
ಮೂಲಮ್
ಜನ್ಮ ತ್ವದಾಶ್ರಯತ್ವಾತ್ಸ ಮುಚ್ಯತೇ ಸರ್ವಪಾತಕೈಃ ॥
ಅನುವಾದ
ಹೇ ರಾಮಚಂದ್ರಾ! ನೀನು ಎಲ್ಲರಿಗೂ ಒಡೆಯ ನಾಗಿರುವೆ. ಬ್ರಹ್ಮನ ಪ್ರಾರ್ಥನೆಯಿಂದ ಈಗ ಮಾಯಾ-ಮಾನವ-ರೂಪವನ್ನು ಧರಿಸಿ ನೀನು ಭೂಮಿಯ ಭಾರವನ್ನೆಲ್ಲಾ ಇಳಿಸಿಬಿಟ್ಟಿರುವೆ. ಎಲ್ಲಾ ಜೀವಿಗಳ ಅಂತರಂಗದಲ್ಲಿರುವ ನಿತ್ಯ ಮುಕ್ತ, ಚೇತನ ಸ್ವರೂಪೀ, ಅಖಂಡ ಮತ್ತು ಅನಂತ ರೂಪಿಯಾದ ನಿನಗೆ ಇದು ಅಂತಹ ಯಾವ ದೊಡ್ಡ ಪರಾಕ್ರಮ? ಆದರೂ ಲೋಕಗಳ ಪಾಪಗಳನ್ನೆಲ್ಲಾ ನಾಶ ಮಾಡುವುದಕ್ಕಾಗಿ ಮತ್ತು ಅವರಿಗೆ ಸೌಖ್ಯವನ್ನುಂಟು ಮಾಡುವುದಕ್ಕಾಗಿ ಸತ್ಪುರುಷರು ಮಾಯಾಮಾನುಷ-ರೂಪದಿಂದಿರುವ ಭಗವಂತನಾದ ನಿನ್ನ ಸತ್ಕೀರ್ತಿಯನ್ನು ವರ್ಣನೆ ಮಾಡುತ್ತಾರೆ. ವಾಲೀ ಮತ್ತು ಸುಗ್ರೀವರ ಈ ಮಹಾನ್ ಚರಿತ್ರೆಯನ್ನು ಕೀರ್ತನೆ ಮಾಡುವ ಮನುಷ್ಯನು ನಿನ್ನ ಸಂಗಡ ಸಂಬಂಧವಿರುವುದರಿಂದ ಎಲ್ಲಾ ಪಾಪಗಳಿಂದ ಪಾರಾಗುವನು. ॥25-28॥
(ಶ್ಲೋಕ-29)
ಮೂಲಮ್
ಅಥಾನ್ಯಾಂ ಸಂಪ್ರವಕ್ಷ್ಯಾಮಿ ಕಥಾಂ ರಾಮ ತ್ವದಾಶ್ರಯಾಮ್ ।
ಸೀತಾ ಹೃತಾ ಯದರ್ಥಂ ಸಾ ರಾವಣೇನ ದುರಾತ್ಮನಾ ॥
ಅನುವಾದ
ಹೇ ರಾಮಾ! ಈಗ ನಿನಗೆ ಸಂಬಂಧವಿರುವ ಇನ್ನೊಂದು ಕಥೆಯನ್ನು ಇನ್ನೂ ತಿಳಿಸುತ್ತೇನೆ ಯಾವ ಕಾರಣದಿಂದ ದುರಾತ್ಮನಾದ ರಾವಣನು ಸೀತಾಪಹರಣ ಮಾಡಿದ್ದನು ಎಂಬುದನ್ನು ಹೇಳುತ್ತೇನೆ. ॥29॥
(ಶ್ಲೋಕ-30)
ಮೂಲಮ್
ಪುರಾ ಕೃತಯುಗೇ ರಾಮ ಪ್ರಜಾಪತಿಸುತಂ ವಿಭುಮ್ ।
ಸನತ್ಕುಮಾರಮೇಕಾಂತೇ ಸಮಾಸೀನಂ ದಶಾನನಃ ।
ವಿನಯಾವನತೋ ಭೂತ್ವಾ ಹ್ಯಭಿವಾದ್ಯೇದಮಬ್ರವೀತ್ ॥
ಅನುವಾದ
ಮೊದಲು ಒಮ್ಮೆ ರಾವಣನು ಏಕಾಂತದಲ್ಲಿ ಕುಳಿತಿರುವ ಬ್ರಹ್ಮ ಮಾನಸಪುತ್ರ ರಾದ ಸನತ್ಕುಮಾರರಿಗೆ ನಮಸ್ಕರಿಸಿ ಅತಿ ನಮ್ರತೆಯಿಂದ ಕೇಳಿದನು. ॥30॥
(ಶ್ಲೋಕ-31)
ಮೂಲಮ್
ಕೋ ನ್ವಸ್ಮಿನ್ ಪ್ರವರೋ ಲೋಕೇ ದೇವಾನಾಂ ಬಲವತ್ತರಃ ।
ದೇವಾಶ್ಚ ಯಂ ಸಮಾಶ್ರಿತ್ಯ ಯುದ್ಧೇ ಶತ್ರುಂ ಜಯಂತಿ ಹಿ ॥
ಅನುವಾದ
‘‘ಯಾರ ಆಶ್ರಯ ಪಡೆದು ದೇವತೆಗಳು ಸಂಗ್ರಾಮದಲ್ಲಿ ಶತ್ರುವನ್ನು ಗೆಲ್ಲುತ್ತಾರೆ? ಈ ಜಗತ್ತಿನಲ್ಲಿ ದೇವತೆಗಳಲ್ಲೆಲ್ಲಾ ಶ್ರೇಷ್ಠ ಮತ್ತು ಅಧಿಕ ಬಲಾಢ್ಯನಾದ ದೇವರು ಯಾರು? ॥31॥
(ಶ್ಲೋಕ-32)
ಮೂಲಮ್
ಕಂ ಯಜಂತಿ ದ್ವಿಜಾ ನಿತ್ಯಂ ಕಂ ಧ್ಯಾಯಂತಿ ಚ ಯೋಗಿನಃ ।
ಏತನ್ಮೇ ಶಂಸ ಭಗವನ್ ಪ್ರಶ್ನಂ ಪ್ರಶ್ನವಿದಾಂವರ ॥
ಅನುವಾದ
ಬ್ರಾಹ್ಮಣರು ಯಾರನ್ನು ಪೂಜೆ ಮಾಡುತ್ತಾರೆ ಮತ್ತು ಯೋಗಿಗಳು ಯಾರ ಧ್ಯಾನದಲ್ಲಿ ತೊಡಗುತ್ತಾರೆ? ದೇವಾ! ಈ ಎಲ್ಲಾ ಪ್ರಕಾರದ ಪ್ರಶ್ನೆಗಳಿಗೆ ಉತ್ತರವನ್ನು ಬಲ್ಲವರಲ್ಲಿ ನೀನು ಶ್ರೇಷ್ಠನಾಗಿರುವೆ, ಆದುದರಿಂದ ನನ್ನ ಈ ಪ್ರಶ್ನೆಗೆ ಉತ್ತರವನ್ನು ದಯಪಾಲಿಸು.’’ ॥32॥
(ಶ್ಲೋಕ-33)
ಮೂಲಮ್
ಜ್ಞಾತ್ವಾ ತಸ್ಯ ಹೃದಿಸ್ಥಂ ಯತ್ತದಶೇಷೇಣ ಯೋಗದೃಕ್ ।
ದಶಾನನಮುವಾಚೇದಂ ಶೃಣು ವಕ್ಷ್ಯಾಮಿ ಪುತ್ರಕ ॥
ಅನುವಾದ
ಭಗವಾನ್ ಸನತ್ಕುಮಾರನು ಯೋಗದೃಷ್ಟಿಯಿಂದ ರಾವಣನ ಅಂತಃಕರಣದ ಎಲ್ಲ ವಿಚಾರವನ್ನು ತಿಳಿದುಕೊಂಡು ಅವನಿಗೆ ಹೇಳಿದನು ‘‘ವತ್ಸ! ನಾನು ನಿನ್ನ ಪ್ರಶ್ನೆಗೆ ಉತ್ತರ ಕೊಡುತ್ತೇನೆ, ಕೇಳು ॥33॥
(ಶ್ಲೋಕ-34)
ಮೂಲಮ್
ಭರ್ತಾ ಯೋ ಜಗತಾಂ ನಿತ್ಯಂ ಯಸ್ಯ ಜನ್ಮಾದಿಕಂ ನ ಹಿ ।
ಸುರಾಸುರೈರ್ನುತೋ ನಿತ್ಯಂ ಹರಿರ್ನಾರಾಯಣೋವ್ಯಯಃ ॥
ಅನುವಾದ
ಎಂದೆಂದೂ ಇಡೀ ಜಗತ್ತಿನ ಪೋಷಣೆ ಮಾಡುವವನೂ, ಜನನ-ಮರಣಾದಿಗಳು ಇಲ್ಲದವನೂ, ದೇವತೆಗಳಿಂದ ಮತ್ತು ದೈತ್ಯರಿಂದ ಸದಾವಂದಿತನೂ ಆದ, ಅವನನ್ನು ಅವಿನಾಶೀ, ನಾರಾಯಣ, ಶ್ರೀಹರಿ ಎಂದು ಹೇಳುತ್ತಾರೆ. ॥34॥
(ಶ್ಲೋಕ-35)
ಮೂಲಮ್
ಯನ್ನಾಭಿಪಂಕಜಾಜ್ಜಾತೋ ಬ್ರಹ್ಮಾ ವಿಶ್ವಸೃಜಾಂ ಪತಿಃ ।
ಸೃಷ್ಟಂ ಯೇನೈವ ಸಕಲಂ ಜಗತ್ಸ್ಥಾವರಜಂಗಮಮ್ ॥
(ಶ್ಲೋಕ-36)
ಮೂಲಮ್
ತಂ ಸಮಾಶ್ರಿತ್ಯ ವಿಬುಧಾ ಜಯಂತಿ ಸಮರೇ ರಿಪೂನ್ ।
ಯೋಗಿನೋ ಧ್ಯಾನಯೋಗೇನ ತಮೇವಾನುಜಪಂತಿ ಹಿ ॥
ಅನುವಾದ
ಸೃಷ್ಟಿ-ಕರ್ತರ ಒಡೆಯನಾದ ಬ್ರಹ್ಮನೂ ಕೂಡ ಯಾರ ನಾಭಿಕಮಲದಿಂದ ಉತ್ಪತ್ತಿಯಾಗಿದ್ದಾನೋ, ಯಾರು ಈ ಸ್ಥಾವರ ಜಂಗಮ ರೂಪೀ ಇಡೀ ಜಗತ್ತನ್ನು ರಚಿಸಿದ್ದಾನೋ, ಅವನ ಆಶ್ರಯದಿಂದ ದೇವತೆಗಳು ಸಂಗ್ರಾಮದಲ್ಲಿ ಶತ್ರುಗಳನ್ನು ಜಯಿಸುತ್ತಾರೆ ಹಾಗೂ ಯೋಗಿಗಳೂ ಕೂಡ ಧ್ಯಾನಯೋಗದ ಮೂಲಕ ಅವನನ್ನೇ ಜಪಿಸುತ್ತಾರೆ. ॥35-36॥
(ಶ್ಲೋಕ-37)
ಮೂಲಮ್
ಮಹರ್ಷೇರ್ವಚನಂ ಶ್ರುತ್ವಾ ಪ್ರತ್ಯುವಾಚ ದಶಾನನಃ ।
ದೈತ್ಯದಾನವರಕ್ಷಾಂಸಿ ವಿಷ್ಣುನಾ ನಿಹತಾನಿ ಚ ॥
(ಶ್ಲೋಕ-38)
ಮೂಲಮ್
ಕಾಂ ವಾ ಗತಿಂ ಪ್ರಪದ್ಯಂತೇ ಪ್ರೇತ್ಯ ತೇ ಮುನಿಪುಂಗವ ।
ತಮುವಾಚ ಮುನಿಶ್ರೇಷ್ಠೋ ರಾವಣಂ ರಾಕ್ಷಸಾಧಿಪಮ್ ॥
ಅನುವಾದ
ಮಹರ್ಷಿ ಸನತ್ಕುಮಾರರ ಈ ವಚನಗಳನ್ನು ಕೇಳಿ ರಾವಣನು ಪುನಃ ಕೇಳಿದನು ‘‘ಹೇ ಮುನಿಶ್ರೇಷ್ಠರೇ! ಆ ಭಗವಾನ್ ವಿಷ್ಣುವು ಕೊಂದ ದೈತ್ಯ, ದಾನವ ಮತ್ತು ರಾಕ್ಷಸರು ಸತ್ತು ಯಾವ ಗತಿಯನ್ನು ಪಡೆಯುತ್ತಾರೆ?’’ ಆಗ ಮುನಿವರ ಸನತ್ಕುಮಾರರು ರಾಕ್ಷಸರಾಜ ರಾವಣನಿಗೆ ಇಂತೆಂದರು ॥37-38॥
(ಶ್ಲೋಕ-39)
ಮೂಲಮ್
ದೈವತೈರ್ನಿಹತಾ ನಿತ್ಯಂ ಗತ್ವಾ ಸ್ವರ್ಗಮನುತ್ತಮಮ್ ।
ಭೋಗಕ್ಷಯೇ ಪುನಸ್ತಸ್ಮಾದ್ ಭ್ರಷ್ಟಾ ಭೂಮೌ ಭವಂತಿ ತೇ ॥
ಅನುವಾದ
‘‘ಬೇರೆ ಸಾಧಾರಣ ದೇವತೆಗಳ ಕೈಯಿಂದ ಸತ್ತವರು ಅತ್ಯುತ್ತಮ ಸ್ವರ್ಗಲೋಕವನ್ನು ಪಡೆಯುತ್ತಾರೆ ಮತ್ತು ತಮ್ಮ ಪುಣ್ಯ-ಫಲ ಮುಗಿದು ಹೋದಾಗ ಅಲ್ಲಿಂದ ಪತನರಾಗಿ ಪುನಃ ಭೂಲೋಕದಲ್ಲಿ ಹುಟ್ಟುತ್ತಾರೆ. ॥39॥
(ಶ್ಲೋಕ-40)
ಮೂಲಮ್
ಪೂರ್ವಾರ್ಜಿತೈಃ ಪುಣ್ಯಪಾಪೈರ್ಮ್ರಿಯಂತೇ ಚೋದ್ಭವಂತಿ ಚ ।
ವಿಷ್ಣುನಾ ಯೇ ಹತಾಸ್ತೇ ತು ಪ್ರಾಪ್ನುವಂತಿ ಹರೇರ್ಗತಿಮ್ ॥
ಅನುವಾದ
ಮತ್ತೆ ಪೂರ್ವಜನ್ಮದಲ್ಲಿ ಮಾಡಿರುವ ತನ್ನ ಪಾಪ-ಪುಣ್ಯಗಳ ಅನುಸಾರವಾಗಿ ಹುಟ್ಟುತ್ತಾ-ಸಾಯುತ್ತಾ ಇರುತ್ತಾರೆ; ಆದರೆ ಭಗವಾನ್ ಶ್ರೀವಿಷ್ಣುವಿನ ಕೈಯಿಂದ ಹತರಾದವರು ವಿಷ್ಣುಪದ (ಮೋಕ್ಷ)ವನ್ನೇ ಪಡೆದುಕೊಳ್ಳುತ್ತಾರೆ.’’ ॥40॥
(ಶ್ಲೋಕ-41)
ಮೂಲಮ್
ಶ್ರುತ್ವಾ ಮುನಿಮುಖಾತ್ಸರ್ವಂ ರಾವಣೋ ಹೃಷ್ಟಮಾನಸಃ ।
ಯೋತ್ಸ್ಯೇಽಹಂ ಹರಿಣಾ ಸಾರ್ಧಮಿತಿ ಚಿಂತಾಪರೋಽಭವತ್ ॥
ಅನುವಾದ
ಸನತ್ಕುಮಾರರ ಮುಖದಿಂದ ಈ ಎಲ್ಲ ಮಾತುಗಳನ್ನು ಕೇಳಿ ರಾವಣನು ಮನಸ್ಸಿನಲ್ಲಿಯೇ ಬಹು ಸಂತೋಪಟ್ಟನು. ನಾನು ಶ್ರೀಹರಿಯ ಸಂಗಡ ಖಂಡಿತವಾಗಿ ಯುದ್ಧಮಾಡುವೆನೆಂದು ಅವನು ಯೋಚಿಸಲಾರಂಭಿಸಿದನು. ॥41॥
(ಶ್ಲೋಕ-42)
ಮೂಲಮ್
ಮನಃಸ್ಥಿತಂ ಪರಿಜ್ಞಾಯ ರಾವಣಸ್ಯ ಮಹಾಮುನಿಃ ।
ಉವಾಚ ವತ್ಸ ತೇಽಭೀಷ್ಟಂ ಭವಿಷ್ಯತಿ ನ ಸಂಶಯಃ ॥
ಅನುವಾದ
ಮುನಿವರ್ಯರು ರಾವಣನ ಮನದಿಂಗಿತವನ್ನು ತಿಳಿದು ಹೇಳಿದರು ‘‘ವತ್ಸ! ನಿನ್ನ ಇಚ್ಛೆ ಖಂಡಿತವಾಗಿ ಸಲವಾಗುವುದು, ಇದರಲ್ಲಿ ಸಂದೇಹವೇ ಇಲ್ಲ. ॥42॥
(ಶ್ಲೋಕ-43)
ಮೂಲಮ್
ಕಂಚಿತ್ಕಾಲಂ ಪ್ರತೀಕ್ಷಸ್ವ ಸುಖೀ ಭವ ದಶಾನನ ।
ಏವಮುಕ್ತ್ವಾ ಮಹಾಬಾಹೋ ಮುನಿಃ ಪುನರುವಾಚ ತಮ್ ॥
ಅನುವಾದ
ಹೇ ದಶಾನನಾ! ಇನ್ನು ನೆಮ್ಮದಿಯಿಂದಿರು; ಸ್ವಲ್ಪಕಾಲವನ್ನು ಇನ್ನೂ ನಿರೀಕ್ಷಿಸುತ್ತಿರು.’’ ಹೇ ಮಹಾಬಾಹು ರಘುನಾಥಾ! ರಾವಣನೊಡನೆ ಹೀಗೆ ಹೇಳಿ ಮುನಿಗಳು ಅವನಿಗೆ ಪುನಃ ಹೇಳಿದರು ॥43॥
(ಶ್ಲೋಕ-44)
ಮೂಲಮ್
ತಸ್ಯ ಸ್ವರೂಪಂ ವಕ್ಷ್ಯಾಮಿ ಹ್ಯರೂಪಸ್ಯಾಪಿ ಮಾಯಿನಃ ।
ಸ್ಥಾವರೇಷು ಚ ಸರ್ವೇಷು ನದೇಷು ಚ ನದೀಷು ಚ ॥
ಅನುವಾದ
‘‘ರಾವಣಾ! ಅವನು ರೂಪರಹಿತನಾಗಿದ್ದಾನೆ. ಆದರೂ ನಾನು ನಿನಗೆ ಆ ಮಾಯಾಮಯನ (ಮಾಯೆಯಿಂದ ತಾಳಿರುವ) ರೂಪವನ್ನು ತಿಳಿಸುತ್ತೇನೆ. ಅವನು ನದ-ನದಿ ಮುಂತಾದ ಸಮಸ್ತ ಸ್ಥಾವರಗಳಲ್ಲಿ ವ್ಯಾಪ್ತನಾಗಿದ್ದಾನೆ. ॥44॥
(ಶ್ಲೋಕ-45)
ಮೂಲಮ್
ಓಂಕಾರಶ್ಚೈವ ಸತ್ಯಂ ಚ ಸಾವಿತ್ರೀ ಪೃಥಿವೀ ಚ ಸಃ ।
ಸಮಸ್ತಜಗದಾಧಾರಃ ಶೇಷರೂಪಧರೋ ಹಿ ಸಃ ॥
ಅನುವಾದ
ಓಂಕಾರ, ಸತ್ಯ, ಸಾವಿತ್ರೀ, ಪೃಥ್ವೀ ಹಾಗೂ ಇಡೀ ಜಗತ್ತಿಗೇ ಆಧಾರನಾದ ಆದಿಶೇಷನೂ ಅವನೇ ಆಗಿದ್ದಾನೆ. ॥45॥
(ಶ್ಲೋಕ-46)
ಮೂಲಮ್
ಸರ್ವೇ ದೇವಾಃ ಸಮುದ್ರಾಶ್ಚ ಕಾಲಃ ಸೂರ್ಯಶ್ಚ ಚಂದ್ರಮಾಃ ।
ಸೂರ್ಯೋದಯೋ ದಿವಾರಾತ್ರೀ ಯಮಶ್ಚೈವ ತಥಾನಿಲಃ ॥
(ಶ್ಲೋಕ-47)
ಮೂಲಮ್
ಅಗ್ನಿರಿಂದ್ರಸ್ತಥಾ ಮೃತ್ಯುಃ ಪರ್ಜನ್ಯೋ ವಸವಸ್ತಥಾ ।
ಬ್ರಹ್ಮಾ ರುದ್ರಾದಯಶ್ಚೈವ ಯೇ ಚಾನ್ಯೇ ದೇವದಾನವಾಃ ॥
ಅನುವಾದ
ಎಲ್ಲ ದೇವತೆಗಳು, ಸಮುದ್ರ, ಕಾಲ, ಸೂರ್ಯ, ಚಂದ್ರ, ಸೂರ್ಯೋದಯ, ಹಗಲು, ರಾತ್ರಿ, ಯಮ, ವಾಯು, ಅಗ್ನಿ, ಇಂದ್ರ, ಮೃತ್ಯು, ಮೇಘ, ವಸುಗಣ, ಬ್ರಹ್ಮಾ ಮತ್ತು ರುದ್ರ ಇತ್ಯಾದಿ ಹಾಗೂ ಇನ್ನು ಎಷ್ಟು ದೇವತೆಗಳು ಅಥವಾ ದಾನವರಿದ್ದಾರೋ ಅವರೆಲ್ಲರೂ ಆತನ ರೂಪವೇ ಆಗಿದ್ದಾರೆ. ॥46-47॥
(ಶ್ಲೋಕ-48)
ಮೂಲಮ್
ವಿದ್ಯೋತತೇ ಜ್ವಲತ್ಯೇಷ ಪಾತಿ ಚಾತ್ತೀತಿ ವಿಶ್ವಕೃತ್ ।
ಕ್ರೀಡಾಂ ಕರೋತ್ಯವ್ಯಯಾತ್ಮಾ ಸೋಽಯಂ ವಿಷ್ಣುಃ ಸನಾತನಃ ॥
ಅನುವಾದ
ಅವನು ನಿರ್ವಿಕಾರನಾದರೂ ಕೂಡ (ತನ್ನ ಮಾಯೆಯ ಆಶ್ರಯದಿಂದ) ನಾನಾ ಪ್ರಕಾರದ ಲೀಲೆಗಳನ್ನು ಮಾಡುತ್ತಾನೆ. ಅವನು ವಿದ್ಯುತ್ ಆಗಿ ಹೊಳೆಯುತ್ತಾನೆ. ಅಗ್ನಿಯಾಗಿ ಪ್ರಜ್ವಲಿಸುತ್ತಾನೆ, ವಿಷ್ಣುರೂಪದಿಂದ ರಕ್ಷಿಸುತ್ತಾನೆ ಹಾಗೂ ರುದ್ರರೂಪದಿಂದ ಎಲ್ಲವನ್ನು ನುಂಗಿಬಿಡುತ್ತಾನೆ ಮತ್ತು ಬ್ರಹ್ಮರೂಪದಿಂದ ಸೃಷ್ಟಿಮಾಡುತ್ತಾನೆ. ॥48॥
(ಶ್ಲೋಕ-49)
ಮೂಲಮ್
ತೇನ ಸರ್ವಮಿದಂ ವ್ಯಾಪ್ತಂ ತ್ರೈಲೋಕ್ಯಂ ಸಚರಾಚರಮ್ ।
ನೀಲೋತ್ಪಲದಲಶ್ಯಾಮೋ ವಿದ್ಯುದ್ವರ್ಣಾಂಬರಾವೃತಃ ॥
ಅನುವಾದ
ಚರಾಚರ ಗಳಿಂದ ಕೂಡಿದ ಈ ಸಂಪೂರ್ಣ ಮೂರು ಲೋಕಗಳೂ ಏಕಮಾತ್ರ ಅವನಿಂದಲೇ ವ್ಯಾಪ್ತವಾಗಿವೆ. ಅವನು ನೀಲ ಕಮಲದಳದಂತೆ ಶ್ಯಾಮಲವರ್ಣನಾಗಿದ್ದಾನೆ. ಮಿಂಚಿನಂತೆ ಶೋಭಿಸುವ ಪೀತಾಂಬರವನ್ನು ಧರಿಸಿರುತ್ತಾನೆ. ॥49॥
(ಶ್ಲೋಕ-50)
ಮೂಲಮ್
ಶುದ್ಧಜಾಂಬೂನದಪ್ರಖ್ಯಾಂ ಶ್ರಿಯಂ ವಾಮಾಂಕಸಂಸ್ಥಿತಾಮ್ ।
ಸದಾನಪಾಯಿನೀಂ ದೇವೀಂ ಪಶ್ಯನ್ನಾಲಿಂಗ್ಯ ತಿಷ್ಠತಿ ॥
ಅನುವಾದ
ತನ್ನ ವಾಮ ಭಾಗದಲ್ಲಿ ಕುಳಿತಿರುವ ಶುದ್ಧ ಸುವರ್ಣದಂತಹ ಕಾಂತಿಯುಳ್ಳವಳೂ, ನಿರಂತರಳೂ ಆದ ಭಗವತೀ ಲಕ್ಷ್ಮಿಯ ಕಡೆಗೆ ನೋಡುತ್ತಾ ಆಕೆಯನ್ನು ಆಲಿಂಗಿಸಿಕೊಂಡು ವಿರಾಜ ಮಾನನಾಗಿದ್ದಾನೆ. ॥50॥
(ಶ್ಲೋಕ-51)
ಮೂಲಮ್
ದ್ರಷ್ಟುಂ ನ ಶಕ್ಯತೇ ಕೈಶ್ಚಿದ್ದೇವದಾನವಪನ್ನಗೈಃ ।
ಯಸ್ಯ ಪ್ರಸಾದಂ ಕುರುತೇ ಸ ಚೈನಂ ದ್ರಷ್ಟುಮರ್ಹತಿ ॥
ಅನುವಾದ
ದೇವ, ದಾನವ ಅಥವಾ ನಾಗ ಇತ್ಯಾದಿ ಯಾರಿಂದಲೂ ಕೂಡ ಅವನನ್ನು ನೋಡಲಾಗುವುದಿಲ್ಲ; ಅವನು ಪ್ರಸನ್ನನಾಗುವವನೇ ಅವನ ದರ್ಶನವನ್ನು ಮಾಡಬಲ್ಲನು. ॥51॥
(ಶ್ಲೋಕ-52)
ಮೂಲಮ್
ನ ಚ ಯಜ್ಞತಪೋಭಿರ್ವಾ ನ ದಾನಾಧ್ಯಯನಾದಿಭಿಃ ।
ಶಕ್ಯತೇ ಭಗವಾನ್ ದ್ರಷ್ಟುಮುಪಾಯೈರಿತರೈರಪಿ ॥
ಅನುವಾದ
ಯಜ್ಞ, ತಪಸ್ಸು, ದಾನ, ಅಧ್ಯಯನ ಅಥವಾ ಬೇರೆ ಯಾವುದಾದರೂ ಉಪಾಯದಿಂದ ಭಗವಂತನನ್ನು ನೋಡಲು ಸಾಧ್ಯವಾಗಲಾರದು. ॥52॥
(ಶ್ಲೋಕ-53)
ಮೂಲಮ್
ತದ್ಭಕ್ತೈಸ್ತದ್ಗತಪ್ರಾಣೈಸ್ತಚ್ಚಿತ್ತೈರ್ಧೂತಕಲ್ಮಷೈಃ ।
ಶಕ್ಯತೇ ಭಗವಾನ್ವಿಷ್ಣುರ್ವೇದಾಂತಾಮಲದೃಷ್ಟಿಭಿಃ ॥
ಅನುವಾದ
ಅವನ ಭಕ್ತರಾದವರೂ, ಪ್ರಾಣ, ಮನಸ್ಸು ಅವನಲ್ಲಿಯೇ ತೊಡಗಿಸಿರುವರೂ, ಹಾಗೂ ವೇದಾಂತ - ವಿಚಾರದಿಂದ ನಿರ್ಮಲವಾದ ದೃಷ್ಟಿಯುಳ್ಳರೂ ಆದ ನಿಷ್ಪಾಪರಾದ ಮಹಾತ್ಮರಿಗೇ ಭಗವಾನ್ ವಿಷ್ಣುವಿನ ದರ್ಶನ ಉಂಟಾಗ ಬಲ್ಲದು. ॥53॥
(ಶ್ಲೋಕ-54)
ಮೂಲಮ್
ಅಥವಾ ದ್ರಷ್ಟುಮಿಚ್ಛಾ ತೇ ಶೃಣು ತ್ವಂ ಪರಮೇಶ್ವರಮ್ ।
ತ್ರೇತಾಯುಗೇ ಸ ದೇವೇಶೋ ಭವಿತಾ ನೃಪವಿಗ್ರಹಃ ॥
(ಶ್ಲೋಕ-55)
ಮೂಲಮ್
ಹಿತಾರ್ಥಂ ದೇವಮರ್ತ್ಯಾನಾಮಿಕ್ಷ್ವಾಕೂಣಾಂ ಕುಲೇ ಹರಿಃ ।
ರಾಮೋ ದಾಶರಥಿರ್ಭೂತ್ವಾ ಮಹಾಸತ್ತ್ವಪರಾಕ್ರಮಃ ॥
ಅನುವಾದ
ಈಗ ನಿನಗೂ ಕೂಡ (ಯಾವ ಉಪಾಯವೂ ಇಲ್ಲದೆ) ಆ ಪರಮೇಶ್ವರನ ದರ್ಶನದ ಇಚ್ಛೆಯಿದ್ದರೆ ಕೇಳು ಆ ದೇವಾಧಿದೇವ ಶ್ರೀಹರಿಯು ತ್ರೇತಾಯುಗದಲ್ಲಿ ದೇವ ಮತ್ತು ಮಾನವರ ಉದ್ಧಾರಕ್ಕಾಗಿ, ರಾಜವೇಷದಲ್ಲಿ, ಇಕ್ಷ್ವಾಕುವಂಶದಲ್ಲಿ ದಶರಥನ ಪುತ್ರ ಮಹಾವೀರ ಮತ್ತು ಪರಾಕ್ರಮೀ ಭಗವಾನ್ ಶ್ರೀರಾಮನಾಗಿ ಅವತರಿಸುವನು. ॥54-55॥
(ಶ್ಲೋಕ-56)
ಮೂಲಮ್
ಪಿತುರ್ನಿಯೋಗಾತ್ಸ ಭ್ರಾತ್ರಾ ಭಾರ್ಯಯಾ ದಂಡಕೇ ವನೇ ।
ವಿಚರಿಷ್ಯತಿ ಧರ್ಮಾತ್ಮಾ ಜಗನ್ಮಾತ್ರಾ ಸ್ವಮಾಯಯಾ ॥
ಅನುವಾದ
ಆ ಪರಮ ಧಾರ್ಮಿಕ ರಘುನಾಥನು ತಂದೆಯ ಆಜ್ಞೆಯಂತೆ ತನ್ನ ಸಹೋದರ ಲಕ್ಷ್ಮಣ ಮತ್ತು ತನ್ನ ಪತ್ನೀ ಜಗಜ್ಜನನೀ ಮಾಯಾರೂಪದಿಂದಿರುವ ಸೀತಾದೇವೀ ಸಹಿತ ದಂಡಕಾರಣ್ಯದಲ್ಲಿ ಸಂಚರಿಸುವನು. ॥56॥
(ಶ್ಲೋಕ-57)
ಮೂಲಮ್
ಏವಂ ತೇ ಸರ್ವಮಾಖ್ಯಾತಂ ಮಯಾ ರಾವಣ ವಿಸ್ತರಾತ್ ।
ಭಜಸ್ವ ಭಕ್ತಿಭಾವೇನ ಸದಾ ರಾಮಂ ಶ್ರಿಯಾ ಯುತಮ್ ॥
ಅನುವಾದ
ಹೇ ರಾವಣಾ! ಈ ಪ್ರಕಾರ ಈ ತತ್ತ್ವವನ್ನೆಲ್ಲಾ ನಾನು ನಿನಗೆ ವಿಸ್ತಾರವಾಗಿ ಹೇಳಿದೆನು. ಈಗ ನೀನು ಲಕ್ಷ್ಮೀಸಹಿತ ಭಗವಾನ್ ಶ್ರೀರಾಮನನ್ನು ಯಾವಾಗಲೂ ಭಕ್ತಿಯಿಂದ ಭಜಿಸುವವನಾಗು.’’ ॥57॥
(ಶ್ಲೋಕ-58)
ಮೂಲಮ್ (ವಾಚನಮ್)
ಅಗಸ್ತ್ಯ ಉವಾಚ
ಮೂಲಮ್
ಏವಂ ಶ್ರುತ್ವಾಸುರಾಧ್ಯಕ್ಷೋ ಧ್ಯಾತ್ವಾ ಕಿಂಚಿದ್ವಿಚಾರ್ಯ ಚ ।
ತ್ವಯಾ ಸಹ ವಿರೋಧೇಪ್ಸುರ್ಮುಮುದೇ ರಾವಣೋ ಮಹಾನ್ ॥
ಅನುವಾದ
ಅಗಸ್ತ್ಯರು ಇಂತೆಂದರು ಹೇ ರಾಮಾ! ಇದನ್ನು ಕೇಳಿ ರಾಕ್ಷಸರಾಜ ರಾವಣನು ಸ್ವಲ್ಪಹೊತ್ತು ಆಲೋಚನೆ ಮಾಡಿ ಅನಂತರ ನಿನ್ನೊಡನೆ ವಿರೋಧಮಾಡಲು ನಿಶ್ಚಯಿಸಿಕೊಂಡನು. ಹೀಗೆ ನಿಶ್ಚಯ ಮಾಡಿ ಅವನು ಮನಸ್ಸಿನಲ್ಲಿಯೇ ಬಹು ಸಂತೋಷಗೊಂಡನು. ॥58॥
(ಶ್ಲೋಕ-59)
ಮೂಲಮ್
ಯುದ್ಧಾರ್ಥೀ ಸರ್ವತೋ ಲೋಕಾನ್ ಪರ್ಯಟನ್ ಸಮವಸ್ಥಿತಃ ।
ಏತದರ್ಥಂ ಮಹಾರಾಜ ರಾವಣೋಽತೀವ ಬುದ್ಧಿಮಾನ್ ।
ಹೃತವಾನ್ ಜಾನಕೀಂ ದೇವೀಂ ತ್ವಯಾತ್ಮವಧಕಾಂಕ್ಷಯಾ ॥
ಅನುವಾದ
ಅವನು ಯುದ್ಧದ ಇಚ್ಛೆಯಿಂದ ಎಲ್ಲಾ ಲೋಕಗಳಿಗೂ ತಿರುಗಲಾರಂಭಿಸಿದನು. ಹೇ ಮಹಾರಾಜಾ! ನಿನ್ನ ಕೈಯಿಂದ ಸಾಯುವ ಆಸೆಯಿಂದಲೇ ಬುದ್ಧಿಶಾಲಿಯಾದ ರಾವಣನು ಜಾನಕೀದೇವಿಯನ್ನು ಅಪಹರಿಸಿದನು. ॥59॥
(ಶ್ಲೋಕ-60)
ಮೂಲಮ್
ಇಮಾಂ ಕಥಾಂ ಯಃ ಶೃಣುಯಾತ್ಪಠೇದ್ವಾ
ಸಂಶ್ರಾವಯೇದ್ವಾ ಶ್ರವಣಾರ್ಥಿನಾಂ ಸದಾ ।
ಆಯುಷ್ಯಮಾರೋಗ್ಯಮನಂತಸೌಖ್ಯಂ
ಪ್ರಾಪ್ನೋತಿ ಲಾಭಂ ಧನಮಕ್ಷಯಂ ಚ ॥
ಅನುವಾದ
ಈ ಕಥೆಯನ್ನು ಕೇಳುವ, ಓದುವ ಅಥವಾ ಕೇಳುವ ಇಚ್ಛೆಯುಳ್ಳವರಿಗೆ ಸದಾ ಹೇಳುವ ಪುರುಷನು ದೀರ್ಘಾಯುಷ್ಯ, ಆರೋಗ್ಯ, ಅನಂತಸುಖ, ಇಚ್ಛಿಸಿದ ಲಾಭ ಮತ್ತು ಅಕ್ಷಯ ಧನವನ್ನು ಪಡೆಯುವನು. ॥60॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಉತ್ತರಕಾಂಡೇ ತೃತೀಯಃ ಸರ್ಗಃ ॥3॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಉತ್ತರಕಾಂಡದಲ್ಲಿ ಮೂರನೆಯ ಸರ್ಗವು ಮುಗಿಯಿತು.