೦೨

[ಎರಡನೆಯ ಸರ್ಗ]

ಭಾಗಸೂಚನಾ

ರಾಕ್ಷಸರ ರಾಜ್ಯಸ್ಥಾಪನೆಯ ವಿವರಣೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಶ್ರೀರಾಮವಚನಂ ಶ್ರುತ್ವಾ ಪರಮಾನಂದನಿರ್ಭರಃ ।
ಮುನಿಃ ಪ್ರೋವಾಚ ಸದಸಿ ಸರ್ವೇಷಾಂ ತತ್ರ ಶೃಣ್ವತಾಮ್ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ರಘುನಾಥನ ಈ ವಚನಗಳನ್ನು ಕೇಳಿ ಅಗಸ್ತ್ಯ ಮುನಿಗಳು ಅತ್ಯಂತ ಆನಂದ ಭರಿತರಾದರು ಮತ್ತು ಆ ಸಭೆಯಲ್ಲಿ ಎಲ್ಲರೂ ಕೇಳುವಂತೆ ಪುನಃ ಹೇಳಲಾರಂಭಿಸಿದರು ॥1॥

(ಶ್ಲೋಕ-2)

ಮೂಲಮ್

ಅಥ ವಿತ್ತೇಶ್ವರೋ ದೇವಸ್ತತ್ರ ಕಾಲೇನ ಕೇನಚಿತ್ ।
ಆಯಯೌ ಪುಷ್ಪಕಾರೂಢಃ ಪಿತರಂ ದ್ರಷ್ಟುಮಂಜಸಾ ॥

ಅನುವಾದ

‘‘ಹೇ ರಾಮಾ! ಒಮ್ಮೆ ಧನಪತಿ ಕುಬೇರನು ಅಕಸ್ಮಾತ್ತಾಗಿ ತನ್ನ ತಂದೆಯನ್ನು ನೋಡಲು ಪುಷ್ಪಕ ವಿಮಾನವೇರಿ ಬಂದನು. ॥2॥

(ಶ್ಲೋಕ-3)

ಮೂಲಮ್

ದೃಷ್ಟ್ವಾ ತಂ ಕೈಕಸೀ ತತ್ರ ಭ್ರಾಜಮಾನಂ ಮಹೌಜಸಮ್ ।
ರಾಕ್ಷಸೀ ಪುತ್ರಸಾಮೀಪ್ಯಂ ಗತ್ವಾ ರಾವಣಮಬ್ರವೀತ್ ॥

ಅನುವಾದ

ಮಹಾತೇಜಸ್ವೀ ಕುಬೇರನು ತಂದೆಯ ಬಳಿ ಕುಳಿತಿರುವುದನ್ನು ರಾಕ್ಷಸಿ ಕೈಕಸಿಯು ನೋಡಿದಾಗ ಅವಳು ತನ್ನ ಮಗ ರಾವಣನ ಹತ್ತಿರಕ್ಕೆ ಹೋಗಿ ಹೇಳಿದಳು. ॥3॥

(ಶ್ಲೋಕ-4)

ಮೂಲಮ್

ಪುತ್ರ ಪಶ್ಯ ಧನಾಧ್ಯಕ್ಷಂ ಜ್ವಲಂತಂ ಸ್ವೇನ ತೇಜಸಾ ।
ತ್ವಮಪ್ಯೇವಂ ಯಥಾ ಭೂಯಾಸ್ತಥಾ ಯತ್ನಂ ಕುರು ಪ್ರಭೋ ॥

ಅನುವಾದ

‘‘ಮಗೂ ! ತನ್ನ ತೇಜಸ್ಸಿನಿಂದ ಪ್ರಕಾಶಮಾನವಾಗಿರುವ ಈ ಧನಪತಿಯನ್ನು ನೋಡು. ಹೇ ಸಮರ್ಥ ! ನೀನೂ ಸಹ ಹಾಗಾಗುವಂತಹ ಪ್ರಯತ್ನ ಮಾಡು’’ ॥4॥

(ಶ್ಲೋಕ-5)

ಮೂಲಮ್

ತಚ್ಛ್ರುತ್ವಾ ರಾವಣೋ ರೋಷಾತ್ ಪ್ರತಿಜ್ಞಾಮಕರೋದ್ದ್ರುತಮ್ ।
ಧನದೇನ ಸಮೋ ವಾಪಿ ಹ್ಯಧಿಕೋ ವಾಚಿರೇಣ ತು ॥

(ಶ್ಲೋಕ-6)

ಮೂಲಮ್

ಭವಿಷ್ಯಾಮ್ಯಂಬ ಮಾಂ ಪಶ್ಯ ಸಂತಾಪಂ ತ್ಯಜ ಸುವ್ರತೇ ।
ಇತ್ಯುಕ್ತ್ವಾ ದುಷ್ಕರಂ ಕರ್ತುಂ ತಪಃ ಸ ದಶಕಂಧರಃ ॥

(ಶ್ಲೋಕ-7)

ಮೂಲಮ್

ಅಗಮತ್ಫಲಸಿದ್ಧ್ಯರ್ಥಂ ಗೋಕರ್ಣಂ ತು ಸಹಾನುಜಃ ।
ಸ್ವಂ ಸ್ವಂ ನಿಯಮಮಾಸ್ಥಾಯ ಭ್ರಾತರಸ್ತೇ ತಪೋ ಮಹತ್ ॥

(ಶ್ಲೋಕ-8)

ಮೂಲಮ್

ಆಸ್ಥಿತಾ ದುಷ್ಕರಂ ಘೋರಂ ಸರ್ವಲೋಕೈಕತಾಪನಮ್ ।
ದಶವರ್ಷಸಹಸ್ರಾಣಿ ಕುಂಭಕರ್ಣೋಽಕರೋತ್ತಪಃ ॥

ಅನುವಾದ

ಇದನ್ನು ಕೇಳಿ ರಾವಣನು ಕೂಡಲೇ ಬಹುರೋಷದಿಂದ ಪ್ರತಿಜ್ಞೆ ಮಾಡಿದನು - ‘‘ಹೇ ಶುಭವ್ರತವುಳ್ಳ ತಾಯೆ! ನೀನು ದುಃಖಿಸಬೇಡ, ನೋಡು, ನಾನು ಬೇಗನೆ ಕುಬೇರನಿಗೆ ಸಮಾನ ಅಥವಾ ಅದಕ್ಕಿಂತಲೂ ಹೆಚ್ಚು ಐಶ್ಚರ್ಯಶಾಲಿ ಆಗುವೆನು.’’ ಹೀಗೆ ಹೇಳಿ ಸಹೋದರರ ಸಹಿತ ರಾವಣನು ಇಚ್ಛಿಸಿದ ಫಲಪ್ರಾಪ್ತಿಗಾಗಿ ಗೋಕರ್ಣ ಕ್ಷೇತ್ರದಲ್ಲಿ ಕಠಿಣ ತಪಸ್ಸನ್ನಾ ಚರಿಸುವುದಕ್ಕೆ ಹೊರಟುಹೋದನು. ಅಲ್ಲಿ ಆ ಮೂವರು ಸಹೋದರರೂ ತಮ್ಮ-ತಮ್ಮ ವ್ರತದಲ್ಲಿ ದೃಢವಾಗಿದ್ದು ಸಮಸ್ತ ಲೋಕಗಳನ್ನು ಸುಡುವಂತಹ ಅತಿ ಮಹಾನ್ ತಪಸ್ಸನ್ನಾಚರಿಸಲು ತೊಡಗಿದರು. ಅವರುಗಳಲ್ಲಿ ಕುಂಭಕರ್ಣನು ಹತ್ತು ಸಾವಿರ ವರ್ಷ ತಪಸ್ಸು ಮಾಡಿದನು. ॥5-8॥

(ಶ್ಲೋಕ-9)

ಮೂಲಮ್

ವಿಭೀಷಣೋಽಪಿ ಧರ್ಮಾತ್ಮಾ ಸತ್ಯಧರ್ಮಪರಾಯಣಃ ।
ಪಂಚವರ್ಷಸಹಸ್ರಾಣಿ ಪಾದೇನೈಕೇನ ತಸ್ಥಿವಾನ್ ॥

ಅನುವಾದ

ಸತ್ಯಧರ್ಮ ಪರಾಯಣ ಧರ್ಮಾತ್ಮಾ ವಿಭೀಷಣನೂ ಕೂಡ ಐದು ಸಾವಿರ ವರ್ಷಗಳವರೆಗೆ ಒಂದೇ ಕಾಲಿನಲ್ಲಿ ನಿಂತುಕೊಂಡಿದ್ದನು. ॥9॥

(ಶ್ಲೋಕ-10)

ಮೂಲಮ್

ದಿವ್ಯವರ್ಷಸಹಸ್ರಂ ತು ನಿರಾಹಾರೋ ದಶಾನನಃ ।
ಪೂರ್ಣೇ ವರ್ಷಸಹಸ್ರೇ ತು ಶೀರ್ಷಮಗ್ನೌ ಜುಹಾವ ಸಃ ।
ಏವಂ ವರ್ಷಸಹಸ್ರಾಣಿ ನವ ತಸ್ಯಾತಿಚಕ್ರಮುಃ ॥

ಅನುವಾದ

ರಾವಣನು ಒಂದು ಸಾವಿರ ದಿವ್ಯ ವರ್ಷಗಳವರೆಗೆ ನಿರಾಹಾರನಾಗಿದ್ದನು, ಮತ್ತೆ ಸಾವಿರ ವರ್ಷಗಳು ಪೂರ್ಣಗೊಂಡ ನಂತರ ಅವನು ತನ್ನ ಒಂದು ತಲೆಯನ್ನು ಅಗ್ನಿಯಲ್ಲಿ ಹವನ ಮಾಡಿಬಿಟ್ಟನು. ಇದೇ ಪ್ರಕಾರ ಒಂಭತ್ತು ಸಾವಿರ ದಿವ್ಯ ವರ್ಷಗಳು ಕಳೆದವು. ॥10॥

(ಶ್ಲೋಕ-11)

ಮೂಲಮ್

ಅಥ ವರ್ಷಸಹಸ್ರಂ ತು ದಶಮೇ ದಶಮಂ ಶಿರಃ ।
ಛೇತ್ತುಕಾಮಸ್ಯ ಧರ್ಮಾತ್ಮಾ ಪ್ರಾಪ್ತಶ್ಚಾಥ ಪ್ರಜಾಪತಿಃ ।
ವತ್ಸ ವತ್ಸ ದಶಗ್ರೀವ ಪ್ರೀತೋಸ್ಮೀತ್ಯಭ್ಯಭಾಷತ ॥

ಅನುವಾದ

ಹತ್ತು ಸಾವಿರ ವರ್ಷಗಳು ಮುಗಿಯುತ್ತಾ ಬಂದವು. ರಾವಣನು ತನ್ನ ಹತ್ತನೆಯ ತಲೆಯನ್ನು ಕೂಡ ಕತ್ತರಿಸಲು ಮುಂದಾದಾಗ ಧರ್ಮಾತ್ಮಾ ಬ್ರಹ್ಮ ದೇವರು ಪ್ರತ್ಯಕ್ಷನಾಗಿ ಹೇಳಿದರು ‘‘ಮಗು ರಾವಣಾ ! ನಾನು ಪ್ರಸನ್ನನಾಗಿದ್ದೇನೆ. ॥11॥

(ಶ್ಲೋಕ-12)

ಮೂಲಮ್

ವರಂ ವರಯ ದಾಸ್ಯಾಮಿ ಯತ್ತೇ ಮನಸಿ ಕಾಂಕ್ಷಿತಮ್ ।
ದಶಗ್ರೀವೋಽಪಿ ತಚ್ಛ್ರುತ್ವಾ ಪ್ರಹೃಷ್ಟೇನಾಂತರಾತ್ಮನಾ ॥

ಅನುವಾದ

ನೀನು ವರವನ್ನು ಕೇಳಿಕೋ, ನಾನು ನಿನ್ನ ಇಚ್ಛೆಯನ್ನು ಪೂರ್ಣಗೊಳಿಸುವೆನು.’’ ಇದನ್ನು ಕೇಳಿ ರಾವಣನು ಬಹುಸಂತೋಷಗೊಂಡು ಹೇಳಿದನು ॥12॥

(ಶ್ಲೋಕ-13)

ಮೂಲಮ್

ಅಮರತ್ವಂ ವೃಣೋಮೀಶ ವರದೋ ಯದಿ ಮೇ ಭವಾನ್ ।
ಸುಪರ್ಣನಾಗಯಕ್ಷಾಣಾಂ ದೇವತಾನಾಂ ತಥಾಸುರೈಃ ।
ಅವಧ್ಯತ್ವಂ ತು ಮೇ ದೇಹಿ ತೃಣಭೂತಾ ಹಿ ಮಾನುಷಾಃ ॥

ಅನುವಾದ

‘‘ಹೇ ಒಡೆಯಾ! ನೀನು ನನಗೆ ವರವನ್ನು ಕೊಡಬೇಕೆಂದಿದ್ದರೆ, ನಾನು ಅಮರತ್ವವನ್ನು ಬೇಡಿಕೊಳ್ಳುತ್ತೇನೆ. ನಾನು ಗರುಡ, ಸರ್ಪ, ಯಕ್ಷ, ದೇವ ಮತ್ತು ದಾನವ ಮುಂತಾದ ಯಾರಿಂದಲೂ ಸಾಯದಂತಿರಲಿ. (ಸಾಕು, ನಾನು ಇದೇ ವರವನ್ನು ಬೇಡುತ್ತೇನೆ.) ಬಡಪಾಯಿ ಮನುಷ್ಯರಾದರೋ ಹುಲ್ಲುಕಡ್ಡಿಗೆ ಸಮಾನನಾಗಿದ್ದಾನೆ. (ಅವರಿಂದ ನನಗೇನೂ ಭಯವಿಲ್ಲ.)’’ ॥13॥

(ಶ್ಲೋಕ-14)

ಮೂಲಮ್

ತಥಾಸ್ತ್ವಿತಿ ಪ್ರಜಾಧ್ಯಕ್ಷಃ ಪುನರಾಹ ದಶಾನನಮ್ ।
ಅಗ್ನೌ ಹುತಾನಿ ಶೀರ್ಷಾಣಿ ಯಾನಿ ತೇಽಸುರಪುಂಗವ ॥

(ಶ್ಲೋಕ-15)

ಮೂಲಮ್

ಭವಿಷ್ಯಂತಿ ಯಥಾಪೂರ್ವಮಕ್ಷಯಾಣಿ ಚ ಸತ್ತಮ ॥

ಅನುವಾದ

ಆಗ ಬ್ರಹ್ಮನು ‘ಹಾಗೆಯೇ ಆಗಲಿ’ ಎಂದು ಹೇಳಿ ರಾವಣನಿಗೆ ಪುನಃ ಹೇಳಿದನು ‘‘ಹೇ ಅಸುರಶ್ರೇಷ್ಠಾ! ನೀನು ಅಗ್ನಿಯಲ್ಲಿ ಹೋಮಮಾಡಿರುವ ನಿನ್ನ ಶಿರಗಳು ಪುನಃ ಮೊದಲಿನಂತೆಯೇ ಚಿಗುರಿಬಿಡುವುವು. ಸಾಧುಶ್ರೇಷ್ಠನೇ! ಅವು ಎಂದಿಗೂ ನಾಶವಾಗಲಾರವು’’ ॥14-15॥

(ಶ್ಲೋಕ-16)

ಮೂಲಮ್

ಏವಮುಕ್ತ್ವಾ ತತೋ ರಾಮ ದಶಗ್ರೀವಂ ಪ್ರಜಾಪತಿಃ ।
ವಿಭೀಷಣಮುವಾಚೇದಂ ಪ್ರಣತಂ ಭಕ್ತವತ್ಸಲಃ ॥

ಅನುವಾದ

ಹೇ ರಾಮ! ರಾವಣನಿಗೆ ಈ ಪ್ರಕಾರ ಹೇಳಿ ಪುನಃ ಭಕ್ತವತ್ಸಲ ಬ್ರಹ್ಮದೇವನು ಅತ್ಯಂತ ವಿನೀತನಾದ ವಿಭೀಷಣನಿಗೆ ಹೇಳಿದನು ॥16॥

(ಶ್ಲೋಕ-17)

ಮೂಲಮ್

ವಿಭೀಷಣ ತ್ವಯಾ ವತ್ಸ ಕೃತಂ ಧರ್ಮಾರ್ಥಮುತ್ತಮಮ್ ।
ತಪಸ್ತತೋ ವರಂ ವತ್ಸ ವೃಣೀಷ್ವಾಭಿಮತಂ ಹಿತಮ್ ॥

ಅನುವಾದ

‘‘ವತ್ಸ ವಿಭೀಷಣ! ನೀನು ಧರ್ಮ ಸಂಪಾದನೆಗಾಗಿ ಈ ಶ್ರೇಷ್ಠ ತಪಸ್ಸನು ಆಚರಿಸಿರುವೆ, ಆದುದರಿಂದ ಮಗು! ನೀನು ಹಿತಕರವಾದ ಇಷ್ಟವಾಗಿರುವ ವರವನ್ನು ಕೇಳಿಕೋ.’’ ॥17॥

(ಶ್ಲೋಕ-18)

ಮೂಲಮ್

ವಿಭೀಷಣೋಽಪಿ ತಂ ನತ್ವಾ ಪ್ರಾಂಜಲಿರ್ವಾಕ್ಯಮಬ್ರವೀತ್ ।
ದೇವ ಮೇ ಸರ್ವದಾ ಬುದ್ಧಿರ್ಧರ್ಮೇ ತಿಷ್ಠತು ಶಾಶ್ವತೀ ।
ಮಾ ರೋಚಯತ್ವಧರ್ಮಂ ಮೇ ಬುದ್ಧಿಃ ಸರ್ವತ್ರ ಸರ್ವದಾ ॥

ಅನುವಾದ

ಆಗ ವಿಭೀಷಣನು ನಮಸ್ಕಾರ ಮಾಡಿ ಕೈಮುಗಿದುಕೊಂಡು ಹೇಳಿದನು ‘‘ಪರಮಾತ್ಮಾ ! ನನ್ನ ಬುದ್ಧಿಯು ಯಾವಾಗಲೂ ನಿಶ್ಚಲವಾಗಿ ಧರ್ಮದಲ್ಲಿಯೇ ನೆಲಸಲಿ, ಎಂದಿಗೂ ಯಾವ ಸ್ಥಿತಿಯಲ್ಲಿಯೂ ಅಧರ್ಮದಲ್ಲಿ ಅಭಿರುಚಿ ಉಂಟಾಗದಿರಲಿ’’ ॥18॥

(ಶ್ಲೋಕ-19)

ಮೂಲಮ್

ತತಃ ಪ್ರಜಾಪತಿಃ ಪ್ರೀತೋ ವಿಭೀಷಣಮಥಾಬ್ರವೀತ್ ।
ವತ್ಸ ತ್ವಂ ಧರ್ಮಶೀಲೋಽಸಿ ತಥೈವ ಚ ಭವಿಷ್ಯಸಿ ॥

ಅನುವಾದ

ಇದರಿಂದ ಬ್ರಹ್ಮನು ಅತ್ಯಂತ ಪ್ರಸನ್ನನಾಗಿ ವಿಭೀಷಣನಿಗೆ ಹೇಳಿದನು ‘‘ಮಗು! ನೀನು ದೊಡ್ಡ ಧರ್ಮನಿಷ್ಠರಾಗಿರುವೆ; ಬಯಸಿದಂತೆಯೇ ಆಗುವುದು. ॥19॥

(ಶ್ಲೋಕ-20)

ಮೂಲಮ್

ಅಯಾಚಿತೋಽಪಿ ತೇ ದಾಸ್ಯೇ ಹ್ಯಮರತ್ವಂ ವಿಭೀಷಣ ।
ಕುಂಭಕರ್ಣಮಥೋವಾಚ ವರಂ ವರಯ ಸುವ್ರತ ॥

ಅನುವಾದ

ಹೇ ವಿಭೀಷಣ! ನೀನು ಕೇಳಿಕೊಳ್ಳದೇ ಇದ್ದರೂ ಸಹ ನಾನು ನಿನಗೆ ಅಮರತ್ವದ ವರವನ್ನು ಕೊಡುತ್ತೇನೆ.’’ ಅನಂತರ ಆತನು ಕುಂಭಕರ್ಣನಿಗೆ ಹೇಳಿದನು ‘‘ಹೇ ಸುವ್ರತ! ನೀನು ವರವನ್ನು ಕೇಳು’’ ॥20॥

(ಶ್ಲೋಕ-21)

ಮೂಲಮ್

ವಾಣ್ಯಾ ವ್ಯಾಪ್ತೋಽಥ ತಂ ಪ್ರಾಹ ಕುಂಭಕರ್ಣಃ ಪಿತಾಮಹಮ್ ।
ಸ್ವಪ್ಸ್ಯಾಮಿ ದೇವ ಷಣ್ಮಾಸಾನ್ ದಿನಮೇಕಂ ತು ಭೋಜನಮ್ ॥

ಅನುವಾದ

ಆಗ ಕುಂಭಕರ್ಣನು (ದೇವತೆಗಳ ಪ್ರೇರಣೆಯಿಂದ) ಸರಸ್ವತೀದೇವಿಯ ಮಾಯೆಯಿಂದ ಮೋಹಿತನಾಗಿ ಬ್ರಹ್ಮನಿಗೆ ಹೇಳಿದನು ‘‘ಹೇ ದೇವ! ನಾನು ಆರು ತಿಂಗಳು ಮಲಗಿರುವೆನು ಮತ್ತು ಒಂದು ದಿವಸ ಭೋಜನ ಮಾಡುವೆನು’’ ॥21॥

(ಶ್ಲೋಕ-22)

ಮೂಲಮ್

ಏವಮಸ್ತ್ವಿತಿ ತಂ ಪ್ರಾಹ ಬ್ರಹ್ಮಾ ದೃಷ್ಟ್ವಾ ದಿವೌಕಸಃ ।
ಸರಸ್ವತೀ ಚ ತದ್ವಕಾನ್ನಿರ್ಗತಾ ಪ್ರಯಯೌ ದಿವಮ್ ॥

ಅನುವಾದ

ಬ್ರಹ್ಮನು ದೇವತೆಗಳ ಕಡೆಗೆ ನೋಡುತ್ತಾ ‘‘ಹಾಗೆಯೇ ಆಗಲಿ’’ ಎಂದು ಹೇಳಿದನು. ಹಾಗೆ ಹೇಳುತ್ತಲೇ ಸರಸ್ವತಿಯು ತತ್ಕ್ಷಣ ಅವನ ಮುಖದಿಂದ ಹೊರಟು ಸ್ವರ್ಗಲೋಕಕ್ಕೆ ಹೋಗಿ ಬಿಟ್ಟಳು. ॥22॥

(ಶ್ಲೋಕ-23)

ಮೂಲಮ್

ಕುಂಭಕರ್ಣಸ್ತು ದುಷ್ಟಾತ್ಮಾ ಚಿಂತಯಾಮಾಸ ದುಃಖಿತಃ ।
ಅನಭಿಪ್ರೇತಮೇವಾಸ್ಯಾತ್ಕಿಂ ನಿರ್ಗತಮಹೋ ವಿಧಿಃ ॥

ಅನುವಾದ

ಆಗ ದುಷ್ಟಮನಸ್ಸಿನ ಕುಂಭಕರ್ಣನು ಮನಸ್ಸಿನಲ್ಲಿಯೇ ದುಃಖಪಟ್ಟು ಯೋಚಿಸಿದನು ‘‘ಅಯ್ಯೋ! ನನ್ನ ಭಾಗ್ಯದ ಚಕ್ರವೇ! ನನಗೆ ಇಷ್ಟವೇ ಇಲ್ಲದಿರುವ ಮಾತು ನನ್ನ ಬಾಯಿಂದ ಏಕೆ ಹೊರಟು ಬಂದಿತು?’’ ॥23॥

(ಶ್ಲೋಕ-24)

ಮೂಲಮ್

ಸುಮಾಲೀ ವರಲಬ್ಧಾಂಸ್ತಾನ್ ಜ್ಞಾತ್ವಾ ಪೌತ್ರಾನ್ ನಿಶಾಚರಾನ್ ।
ಪಾತಾಲಾನ್ನಿರ್ಭಯಃ ಪ್ರಾಯಾತ್ ಪ್ರಹಸ್ತಾದಿಭಿರನ್ವಿತಃ ॥

ಅನುವಾದ

ತನ್ನ ಮೊಮ್ಮಕ್ಕಳಾದ ಮೂವರೂ ರಾಕ್ಷಸರಿಗೆ ವರ ದೊರೆತ ಸಮಾಚಾರವನ್ನು ಕೇಳಿ ಸುಮಾಲಿಯು ಪ್ರಹಸ್ತಾದಿ ರಾಕ್ಷಸರನ್ನು ಜೊತೆಯಲ್ಲಿ ಕರೆದುಕೊಂಡು ನಿರ್ಭಯದಿಂದ ಪಾತಾಳ ಲೋಕದಿಂದ ಬಂದನು. ॥24॥

(ಶ್ಲೋಕ-25)

ಮೂಲಮ್

ದಶಗ್ರೀವಂ ಪರಿಷ್ವಜ್ಯ ವಚನಂ ಚೇದಮಬ್ರವೀತ್ ।
ದಿಷ್ಟ್ಯಾ ತೇ ಪುತ್ರ ಸಂವೃತ್ತೋ ವಾಂಛಿತೋ ಮೇ ಮನೋರಥಃ ॥

ಅನುವಾದ

ಹಾಗೂ ರಾವಣನನ್ನು ಆಲಂಗಿಸಿಕೊಂಡು ಹೇಳಿದನು ‘‘ಮಗು! ಬಹಳ ಆನಂದದ ಮಾತು ಇಂದು ನಾನು ಬಯಸಿದ್ದ ಮನೋರಥ ಪೂರ್ಣಗೊಂಡಿತು. ॥25॥

(ಶ್ಲೋಕ-26)

ಮೂಲಮ್

ಯದ್ಭಯಾಚ್ಚ ವಯಂ ಲಂಕಾಂ ತ್ಯಕ್ತ್ವಾ ಯಾತಾ ರಸಾತಲಮ್ ।
ತದ್ಗತಂ ನೋ ಮಹಾಬಾಹೋ ಮಹದ್ವಿಷ್ಣುಕೃತಂ ಭಯಮ್ ॥

ಅನುವಾದ

ಹೇ ಮಹಾಬಾಹುವೇ! ಯಾರ ಭಯದಿಂದ ನಾವು ಲಂಕಾರಪುರವನ್ನು ಬಿಟ್ಟು ಪಾತಾಳ ಲೋಕಕ್ಕೆ ಹೊರಟು ಹೋಗಿದ್ದೆವೋ, ಆ ವಿಷ್ಣುವಿನ ಭಯವು ಇಂದು ಹೊರಟುಹೋಯಿತು. ॥26॥

(ಶ್ಲೋಕ-27)

ಮೂಲಮ್

ಅಸ್ಮಾಭಿಃ ಪೂರ್ವಮುಷಿತಾ ಲಂಕೇಯಂ ಧನದೇನ ತೇ ।
ಭ್ರಾತ್ರಾಕ್ರಾಂತಾಮಿದಾನೀಂ ತ್ವಂ ಪ್ರತ್ಯಾನೇತುಮಿಹಾರ್ಹಸಿ ॥

(ಶ್ಲೋಕ-28)

ಮೂಲಮ್

ಸಾಮ್ನಾ ವಾಥ ಬಲೇನಾಪಿ ರಾಜ್ಞಾಂ ಬಂಧುಃ ಕುತಃ ಸುಹೃತ್ ।
ಇತ್ಯುಕ್ತೋ ರಾವಣಃ ಪ್ರಾಹ ನಾರ್ಹಸ್ಯೇವಂ ಪ್ರಭಾಷಿತುಮ್ ॥

ಅನುವಾದ

ಈಗ ನಿನ್ನ ಅಣ್ಣ ಕುಬೇರನ ಅಧಿಕಾರದಲ್ಲಿರುವ ಈ ಲಂಕಾಪಟ್ಟಣದಲ್ಲಿ ಮೊದಲು ನಾವು ಇರುತ್ತಿದ್ದೆವು. ಈಗ ನೀನು ಇದನ್ನು ಸಾಮ ನೀತಿಯಿಂದ ಅಥವಾ ಬಲಪೂರ್ವಕ ಪುನಃ ಹಿಂದಕ್ಕೆ ತೆಗೆದುಕೊಳ್ಳಬೇಕು, (ಬಂಧುತ್ವದ ವಿಚಾರ ಮಾಡಬಾರದು) ಏಕೆಂದರೆ ರಾಜರುಗಳ ಬಂಧುಗಳು ಅವರಿಗೆ ಯಾವಾಗ ಹಿತಕಾರಿಯಾಗಿದ್ದಾರೆ? ಸುಮಾಲಿಯು ಹೀಗೆ ಹೇಳಿದ ನಂತರ ರಾವಣನು ಹೇಳಿದನು ‘‘ನೀವು ಇಂತಹ ಮಾತನ್ನು ಹೇಳಬಾರದು. ॥27-28॥

(ಶ್ಲೋಕ-29)

ಮೂಲಮ್

ವಿತ್ತೇಶೋ ಗುರುರಸ್ಮಾಕಮೇವಂ ಶ್ರುತ್ವಾ ತಮಬ್ರವೀತ್ ।
ಪ್ರಹಸ್ತಃ ಪ್ರಶ್ರಿತಂ ವಾಕ್ಯಂ ರಾವಣಂ ದಶಕಂಧರಮ್ ॥

ಅನುವಾದ

ಧನಪತಿ ಕುಬೇರ ನಮಗಿಂತ ಹಿರಿಯರು.’’ ಇದನ್ನು ಕೇಳಿ ಪ್ರಹಸ್ತನು ರಾವಣನಿಗೆ ಬಹು ನಮ್ರತೆಯಿಂದ ಹೇಳಿದನು ॥29॥

(ಶ್ಲೋಕ-30)

ಮೂಲಮ್

ಶೃಣು ರಾವಣ ಯತ್ನೇನ ನೈವಂ ತ್ವಂ ವಕ್ತುಮರ್ಹಸಿ ।
ನಾಧೀತಾ ರಾಜಧರ್ಮಾಸ್ತೇ ನೀತಿಶಾಸ್ತ್ರಂ ತಥೈವ ಚ ॥

ಅನುವಾದ

‘‘ಹೇ ರಾವಣಾ! ನಾನು ಹೇಳುವುದನ್ನು ಗಮನವಿಟ್ಟು ಕೇಳು. ನೀನು ಇಂತಹ ಮಾತನ್ನು ಆಡಬಾರದು. ನೀನಿನ್ನೂ ರಾಜಧರ್ಮ ಮತ್ತು ನೀತಿಶಾಸ್ತ್ರವನ್ನು ಅಧ್ಯಯನ ಮಾಡಿರುವುದಿಲ್ಲ. ॥30॥

(ಶ್ಲೋಕ-31)

ಮೂಲಮ್

ಶೂರಾಣಾಂ ನಹಿ ಸೌಭ್ರಾತ್ರಂ ಶೃಣು ಮೇ ವದತಃ ಪ್ರಭೋ ।
ಕಶ್ಯಪಸ್ಯ ಸುತಾ ದೇವಾ ರಾಕ್ಷಸಾಶ್ಚ ಮಹಾಬಲಾಃ ॥

ಅನುವಾದ

ಪರಾಕ್ರಮಿಗಳಲ್ಲಿ ಸಹೋದರ ಸಂಬಂಧ ಇರುವುದಿಲ್ಲ. ಹೇ ಸಮರ್ಥಶಾಲಿಯೆ! ಈ ವಿಷಯದಲ್ಲಿ ನಾನು ಅರಿಕೆ ಮಾಡಿಕೊಳ್ಳುವುದನ್ನೆಲ್ಲಾ ಕೇಳು. ಮಹರ್ಷಿ ಕಶ್ಯಪರ ಸಂತಾನ ದೇವತೆಗಳು ಮತ್ತು ರಾಕ್ಷಸರು ಬಹು ಪ್ರರಾಕ್ರಮಿಯಾಗಿದ್ದರು. ॥31॥

(ಶ್ಲೋಕ-32)

ಮೂಲಮ್

ಪರಸ್ಪರಮಯುಧ್ಯಂತ ತ್ಯಕ್ತ್ವಾ ಸೌಹೃದಮಾಯುಧೈಃ ।
ನೈವೇದಾನೀಂತನಂ ರಾಜನ್ ವೈರಂ ದೇವೈರನುಷ್ಠಿತಮ್ ॥

ಅನುವಾದ

ಅದಕ್ಕಾಗಿ ಅವರು ಬಂಧುತ್ವಕ್ಕೆ ತಿಲಾಂಜಲಿ ಕೊಟ್ಟು ಪರಸ್ಪರ ಅಸ್ತ್ರ-ಶಸ್ತ್ರಗಳಿಂದ ಹೋರಾಡಲಾರಂಭಿಸಿದರು. ಹೇ ರಾಜ! ದೇವತೆಗಳೊಡನೆ ನಮ್ಮ ವೈರ ಇತ್ತೀಚಿನದೇನೂ ಅಲ್ಲ; ಇದು ಪ್ರಾರಂಭದಿಂದಲೂ ನಡೆದುಕೊಂಡು ಬಂದಿದೆ.’’ ॥32॥

(ಶ್ಲೋಕ-33)

ಮೂಲಮ್

ಪ್ರಹಸ್ತಸ್ಯ ವಚಃ ಶ್ರುತ್ವಾ ದಶಗ್ರೀವೋ ದುರಾತ್ಮನಃ ।
ತಥೇತಿ ಕ್ರೋಧತಾಮ್ರಾಕ್ಷಸ್ತ್ರಿಕೂಟಾಚಲಮನ್ವಗಾತ್ ॥

ಅನುವಾದ

ದುರಾತ್ಮನಾದ ಪ್ರಹಸ್ತನ ಈ ಮಾತುಗಳನ್ನು ಕೇಳಿ ರಾವಣನು ಹೇಳಿದನು ‘ಹಾಗಾದರೆ ಸರಿ’. ಆಗ ಅವನ ಕಣ್ಣುಗಳು ಕ್ರೋಧದಿಂದ ಕೆಂಪೇರಿದವು. ಅವನು ಕೂಡಲೇ ತ್ರಿಕೂಟ ಪರ್ವತಕ್ಕೆ ಹೋದನು. ॥33॥

(ಶ್ಲೋಕ-34)

ಮೂಲಮ್

ದೂತಂ ಪ್ರಹಸ್ತಂ ಸಂಪ್ರೇಷ್ಯ ನಿಷ್ಕಾಸ್ಯ ಧನದೇಶ್ವರಮ್ ।
ಲಂಕಾಮಾಕ್ರಮ್ಯ ಸಚಿವೈ ರಾಕ್ಷಸೈಃ ಸುಖಮಾಸ್ಥಿತಃ ॥

ಅನುವಾದ

ಅವನು ಪ್ರಹಸ್ತನನ್ನು ತನ್ನ ದೂತನನ್ನಾಗಿ ಕಳುಹಿಸಿದನು ಹಾಗೂ ಕುಬೇರನನ್ನು ಲಂಕಾಪಟ್ಟಣದಿಂದ ಹೊರದೂಡಿ ಅದರ ಮೇಲೆ ತನ್ನ ಅಧಿಕಾರವನ್ನು ನಡೆಸಿದನು. ಅಲ್ಲಿ ತನ್ನ ರಾಕ್ಷಸ-ಮಂತ್ರಿಗಳೊಡನೆ ಸುಖದಿಂದ ಇರುತ್ತಿದ್ದನು. ॥34॥

(ಶ್ಲೋಕ-35)

ಮೂಲಮ್

ಧನದಃ ಪಿತೃವಾಕ್ಯೇನ ತ್ಯಕ್ತ್ವಾ ಲಂಕಾಂ ಮಹಾಯಶಾಃ ।
ಗತ್ವಾ ಕೈಲಾಸಶಿಖರಂ ತಪಸಾತೋಷಯಚ್ಛಿವಮ್ ॥

ಅನುವಾದ

ಮಹಾಯಶಸ್ವೀ ಕುಬೇರನು ಲಂಕಾಪಟ್ಟಣವನ್ನು ಬಿಟ್ಟು ತಂದೆಯು ಹೇಳಿದಂತೆ ಕೈಲಾಸ ಪರ್ವತಕ್ಕೆ ಹೋಗಿ ತಪಸ್ಸಿನ ಮೂಲಕ ಮಹಾದೇವನನ್ನು ಪ್ರಸನ್ನಗೊಳಿಸಿದನು. ॥35॥

(ಶ್ಲೋಕ-36)

ಮೂಲಮ್

ತೇನ ಸಖ್ಯಮನುಪ್ರಾಪ್ಯ ತೇನೈವ ಪರಿಪಾಲಿತಃ ।
ಅಲಕಾಂ ನಗರೀಂ ತತ್ರ ನಿರ್ಮಮೇ ವಿಶ್ವಕರ್ಮಣಾ ॥

ಅನುವಾದ

ಆತನೊಡನೆ ಮಿತ್ರತ್ವವನ್ನು ಸ್ಥಾಪಿಸಿಕೊಂಡು ಆತನಿಂದಲೇ ರಕ್ಷಿತನಾಗಿ, ಅಲ್ಲಿ ವಿಶ್ವಕರ್ಮನಿಂದ ಅಲಕಾವತಿ ಎಂಬ ನಗರವನ್ನು ನಿರ್ಮಾಣ ಮಾಡಿಸಿದನು. ॥36॥

(ಶ್ಲೋಕ-37)

ಮೂಲಮ್

ದಿಕ್ಪಾಲತ್ವಂ ಚಕಾರಾತ್ರ ಶಿವೇನ ಪರಿಪಾಲಿತಃ ।
ರಾವಣೋ ರಾಕ್ಷಸೈಃ ಸಾರ್ಧಮಭಿಷಿಕ್ತಃ ಸಹಾನುಜೈಃ ॥

(ಶ್ಲೋಕ-38)

ಮೂಲಮ್

ರಾಜ್ಯಂ ಚಕಾರಾಸುರಾಣಾಂ ತ್ರಿಲೋಕೀಂ ಬಾಧಯನ್ ಖಲಃ ।
ಭಗಿನೀಂ ಕಾಲಖಂಜಾಯ ದದೌ ವಿಕಟರೂಪಿಣೀಮ್ ॥

(ಶ್ಲೋಕ-39)

ಮೂಲಮ್

ವಿದ್ಯುಜ್ಜಿಹ್ವಾಯ ನಾಮ್ನಾಸೌ ಮಹಾಮಾಯೀ ನಿಶಾಚರಃ ।
ತತೋ ಮಯೋ ವಿಶ್ವಕಮಾರ್ಮ ರಾಕ್ಷಸಾನಾಂ ದಿತೇಃ ಸುತಃ ॥

(ಶ್ಲೋಕ-40)

ಮೂಲಮ್

ಸುತಾಂ ಮಂದೋದರೀಂ ನಾಮ್ನಾ ದದೌ ಲೋಕೈಕ ಸುಂದರೀಮ್ ।
ರಾವಣಾಯ ಪುನಃ ಶಕ್ತಿಮಮೋಘಾಂ ಪ್ರೀತಮಾನಸಃ ॥

ಅನುವಾದ

ಅಲ್ಲಿ ಅವನು ಭಗವಾನ್ ಶಂಕರನ ರಕ್ಷಣೆಯಲ್ಲಿದ್ದು ದಿಕ್ಪಾಲಕತ್ವವನ್ನು (ಒಂದು ದಿಕ್ಕಿನ ಅಧಿಕಾರ) ಅನುಭವಿಸಲಾರಂಭಿಸಿದನು. ಈಕಡೆ, ಮಹಾದುಷ್ಟನಾದ ರಾವಣನು ರಾಕ್ಷಸರಿಂದ ಅಭಿಷಿಕ್ತನಾಗಿ ತನ್ನ ಸಹೋದರರ ಸಹಿತ ಮೂರು ಲೋಕಗಳಿಗೂ ಕಷ್ಟಕೊಡುತ್ತಾ, ರಾಕ್ಷಸರ ರಾಜ್ಯವನ್ನು ಆಳತೊಡಗಿದನು. ಆ ಮಹಾಮಾಯಾವೀ ರಾಕ್ಷಸನು ಕಾಲ ಖಂಜವಂಶದಲ್ಲಿ ಹುಟ್ಟಿದ ವಿದ್ಯುಜ್ಜಿಹ್ವನೆಂಬ ರಾಕ್ಷಸನಿಗೆ ವಿಕರಾಳ ಮುಖದ ತನ್ನ ಸಹೋದರಿಯನ್ನು ಮದುವೆಮಾಡಿಕೊಟ್ಟನು. ಅದೇ ಸಮಯದಲ್ಲಿ ರಾಕ್ಷಸ ಶಿಲ್ಪಿ ದಿತಿ ಪುತ್ರನಾದ ಮಯನು ತ್ರಿಲೋಕಸುಂದರಿಯಾದ ತನ್ನ ಮಗಳು ಮಂದೋದರಿಯನ್ನು ರಾವಣನಿಗೆ ಕೊಟ್ಟನು ಮತ್ತು ಸಂತೋಷಚಿತ್ತದಿಂದ ಅವನಿಗೆ ಒಂದು ಅಮೋಘವಾದ ಶಕ್ತಿಯನ್ನು ಸಹ ಕೊಟ್ಟನು. ॥37-40॥

(ಶ್ಲೋಕ-41)

ಮೂಲಮ್

ವೈರೋಚನಸ್ಯ ದೌಹಿತ್ರೀಂ ವೃತ್ರಜ್ವಾಲೇತಿ ವಿಶ್ರುತಾಮ್ ।
ಸ್ವಯಂದತ್ತಾಮುದವಹತ್ಕುಂಭಕರ್ಣಾಯ ರಾವಣಃ ॥

ಅನುವಾದ

ಬಳಿಕ ರಾವಣನು, ಬಲಿಚಕ್ರವರ್ತಿಯ ಮಗಳ ಮಗಳು ಅವನೇ ತಂದುಕೊಟ್ಟಿರುವ ವೃತ್ರಜ್ವಾಲಾ ಎಂಬುವಳೊಡನೆ ಕುಂಭಕರ್ಣನ ವಿವಾಹ ಮಾಡಿದನು. ॥41॥

(ಶ್ಲೋಕ-42)

ಮೂಲಮ್

ಗಂಧರ್ವರಾಜಸ್ಯ ಸುತಾಂ ಶೈಲೂಷಸ್ಯ ಮಹಾತ್ಮನಃ ।
ವಿಭೀಷಣಸ್ಯ ಭಾರ್ಯಾರ್ಥೇ ಧರ್ಮಜ್ಞಾಂ ಸಮುದಾವಹತ್ ॥

(ಶ್ಲೋಕ-43)

ಮೂಲಮ್

ಸರಮಾಂ ನಾಮ ಸುಭಗಾಂ ಸರ್ವಲಕ್ಷಣಸಂಯುತಾಮ್ ।
ತತೋ ಮಂದೋದರೀ ಪುತ್ರಂ ಮೇಘನಾದ ಮಜೀಜನತ್ ॥

ಅನುವಾದ

ಗಂಧರ್ವರಾಜ ಮಹಾತ್ಮಾ ಶೈಲೂಷನ ಪುತ್ರಿ, ಅತ್ಯಂತ ಸುಂದರಿ ಸರ್ವಸುಲಕ್ಷಣ ಸಂಪನ್ನೆ ಮತ್ತು ಸಮಸ್ತ ಧರ್ಮಗಳನ್ನು ತಿಳಿದವಳಾಗಿದ್ದ ಸರಮಾ ಎಂಬುವಳೊಂದಿಗೆ ರಾವಣನು ವಿಭೀಷಣನ ವಿವಾಹ ಮಾಡಿದನು. ಅನಂತರ ಮಂದೋದರಿಯು ಮೇಘನಾದ ಎಂಬ ಪುತ್ರನಿಗೆ ಜನ್ಮವಿತ್ತಳು. ॥42-43॥

(ಶ್ಲೋಕ-44)

ಮೂಲಮ್

ಜಾತಮಾತ್ರಸ್ತು ಯೋ ನಾದಂ ಮೇಘವತ್ಪ್ರಮುಮೋಚ ಹ ।
ತತಃ ಸರ್ವೇಽಬ್ರುವನ್ಮೇಘನಾದೋಽಯಮಿತಿ ಚಾಸಕೃತ್ ॥

ಅನುವಾದ

ಅವನು ಹುಟ್ಟಿದ ಕೂಡಲೇ ಮೇಘದಂತೆ ಶಬ್ದ ಮಾಡಿದನು. ಆದುದರಿಂದ ಎಲ್ಲರೂ ‘ಇವನು ಮೇಘನಾದ’ ಎಂದು ಪದೇ ಪದೆ ಹೇಳಿದರು. ॥44॥

(ಶ್ಲೋಕ-45)

ಮೂಲಮ್

ಕುಂಭಕರ್ಣಸ್ತತಃ ಪ್ರಾಹ ನಿದ್ರಾ ಮಾಂ ಬಾಧತೇ ಪ್ರಭೋ ।
ತತಶ್ಚ ಕಾರಯಾಮಾಸ ಗುಹಾಂ ದೀರ್ಘಾಂ ಸುವಿಸ್ತರಾಮ್ ॥

ಅನುವಾದ

ಅನಂತರ ಕುಂಭಕರ್ಣನು ಹೇಳಿದ ‘‘ಪ್ರಭು! ನಿದ್ರೆ ನನ್ನನ್ನು ಪೀಡಿಸುತ್ತಾ ಇದೆ.’’ ಬಳಿಕ ರಾವಣನು ಒಂದು ಬಹು ಉದ್ದ-ಅಗಲವಾದ ದೊಡ್ಡ ಗುಹೆಯನ್ನು ಮಾಡಿಸಿದನು. ॥45॥

(ಶ್ಲೋಕ-46)

ಮೂಲಮ್

ತತ್ರ ಸುಷ್ವಾಪ ಮೂಢಾತ್ಮಾ ಕುಂಭಕರ್ಣೋ ವಿಘೂರ್ಣಿತಃ ।
ನಿದ್ರಿತೇ ಕುಂಭಕರ್ಣೇ ತು ರಾವಣೋ ಲೋಕರಾವಣಃ ॥

(ಶ್ಲೋಕ-47)

ಮೂಲಮ್

ಬ್ರಾಹ್ಮಣಾನ್ ಋಷಿಮುಖ್ಯಾಂಶ್ಚ ದೇವದಾನವಕಿನ್ನರಾಮ್ ।
ದೇವಶ್ರೀಯೋ ಮನುಷ್ಯಾಂಶ್ಚ ನಿಜಘ್ನೇ ಸಮಹೋರಗಾನ್ ॥

ಅನುವಾದ

ಅಲ್ಲಿ ಮಂದಮತಿ ಕುಂಭಕರ್ಣನು ಗೊರಕೆ ಹೊಡೆಯುತ್ತಾ ಮಲಗಿಬಿಟ್ಟನು. ಕುಂಭಕರ್ಣನು ಮಲಗಿದ ನಂತರ ಸಮಸ್ತ ಲೋಕಗಳಿಗೂ ತೊಂದರೆ ಕೊಡುತ್ತಿರುವ ರಾವಣನು ಬ್ರಾಹ್ಮಣರು, ಮುಖ್ಯ-ಮುಖ್ಯ ಋಷಿಗಳು, ದೇವತೆಗಳು, ದಾನವರು, ಕಿನ್ನರರು, ಸರ್ಪ ಮತ್ತು ಮನುಷ್ಯರು ಇವರನ್ನೆಲ್ಲಾ ಕೊಂದು ಹಾಕಿದನು. ದೇವತೆಗಳ ಸಂಪತ್ತನ್ನು ನಾಶಮಾಡಿದನು. ॥46-47॥

(ಶ್ಲೋಕ-48)

ಮೂಲಮ್

ಧನದೋಽಪಿ ತತಃ ಶ್ರುತ್ವಾ ರಾವಣಸ್ಯಾಕ್ರಮಂ ಪ್ರಭುಃ ।
ಅಧರ್ಮಂ ಮಾ ಕುರುಷ್ವೇತಿ ದೂತವಾಕ್ಯೈರ್ನ್ಯವಾರಯತ್ ॥

ಅನುವಾದ

ಕುಬೇರನು ರಾವಣನ ಸ್ವೇಚ್ಛಾವರ್ತನೆಯ ಸಮಾಚಾರವನ್ನು ಕೇಳಿದಾಗ ಆತನು ‘ಅಧರ್ಮವನ್ನು ಮಾಡಬೇಡ’ ಎಂಬ ಸಂದೇಶವನ್ನು ದೂತನ ಮೂಲಕ ರಾವಣನಿಗೆ ಕಳುಹಿಸಿ ಅವನನ್ನು ತಡೆದನು ॥48॥

(ಶ್ಲೋಕ-49)

ಮೂಲಮ್

ತತಃ ಕ್ರುದ್ಧೋ ದಶಗ್ರೀವೋ ಜಗಾಮ ಧನದಾಲಯಮ್ ।
ವಿನಿರ್ಜಿತ್ಯ ಧನಾಧ್ಯಕ್ಷಂ ಜಹಾರೋತ್ತಮಪುಷ್ಪಕಮ್ ॥

ಅನುವಾದ

ಇದರಿಂದ ರಾವಣನು ಕುಪಿತನಾಗಿ ಕುಬೇರನ ನಗರಕ್ಕೆ ಮುತ್ತಿಗೆ ಹಾಕಿ ಆತನನ್ನು ಸೋಲಿಸಿ ಅವನ ಅತ್ಯುತ್ತಮವಾದ ಪುಷ್ಪಕ ವಿಮಾನವನ್ನು ಕಿತ್ತುಕೊಂಡನು. ॥49॥

(ಶ್ಲೋಕ-50)

ಮೂಲಮ್

ತತೋ ಯಮಂ ಚ ವರುಣಂ ನಿರ್ಜಿತ್ಯ ಸಮರೇಽಸುರಃ ।
ಸ್ವರ್ಗಲೋಕಮಗಾತ್ತೂರ್ಣಂ ದೇವರಾಜಜಿಘಾಂಸಯಾ ॥

ಅನುವಾದ

ಬಳಿಕ ಆ ರಾಕ್ಷಸನು ಯಮ ಮತ್ತು ವರುಣನನ್ನೂ ಯುದ್ಧದಲ್ಲಿ ಜಯಿಸಿ ಇಂದ್ರನನ್ನು ವಧಿಸುವ ಇಚ್ಛೆಯಿಂದ ಕೂಡಲೇ ಸ್ವರ್ಗಲೋಕವನ್ನು ಮುತ್ತಿದನು. ॥50॥

(ಶ್ಲೋಕ-51)

ಮೂಲಮ್

ತತೋಽಭವನ್ಮಹದ್ಯುದ್ಧಮಿಂದ್ರೇಣ ಸಹ ದೈವತೈಃ ।
ತತೋ ರಾವಣಮಭ್ಯೇತ್ಯ ಬಬಂಧ ತ್ರಿದಶೇಶ್ವರಃ ॥

ಅನುವಾದ

ಅಲ್ಲಿ ಇಂದ್ರ ಮತ್ತು ಬೇರೆ ದೇವತೆಗಳೊಡನೆ ಭಯಂಕರ ಯುದ್ಧ ನಡೆಯಿತು. ಆಗ ದೇವರಾಜ ಇಂದ್ರನು ಮುಂದೆ ನುಗ್ಗಿ ರಾವಣನನ್ನು ಬಂಧಿಸಿದನು. ॥51॥

(ಶ್ಲೋಕ-52)

ಮೂಲಮ್

ತಚ್ಛ್ರುತ್ವಾ ಸಹಸಾಗತ್ಯ ಮೇಘನಾದಃ ಪ್ರತಾಪವಾನ್ ।
ಕೃತ್ವಾ ಘೋರಂ ಮಹದ್ಯುದ್ಧಂ ಜಿತ್ವಾ ತ್ರಿದಶಪುಂಗವಾನ್ ॥

(ಶ್ಲೋಕ-53)

ಮೂಲಮ್

ಇಂದ್ರಂ ಗೃಹೀತ್ವಾ ಬಧ್ವಾಸೌ ಮೇಘನಾದೋ ಮಹಾಬಲಃ ।
ಮೋಚಯಿತ್ವಾ ತು ಪಿತರಂ ಗೃಹೀತ್ವೇಂದ್ರಂ ಯಯೌ ಪುರಮ್ ॥

ಅನುವಾದ

ಮಹಾಪ್ರತಾಪೀ ಮೇಘನಾದನು ಈ ಸಮಾಚಾರ ವನ್ನು ಕೇಳಿದಾಗ ಅವನು ಅನಿರೀಕ್ಷಿತವಾಗಿ ಬಂದು ದೇವತೆಗಳೊಡನೆ ಘೋರ ಯುದ್ಧ ಮಾಡಿ, ಅವರನ್ನು ಜಯಿಸಿ ಇಂದ್ರನನ್ನು ಹಿಡಿದು ಬಂಧಿಸಿದನು. ಪುನಃ ಮಹಾಬಲಶಾಲೀ ಮೇಘನಾದನು ತನ್ನ ತಂದೆಯನ್ನು ಬಿಡಿಸಿಕೊಂಡನು; ಇಂದ್ರನನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಲಂಕಾಪಟ್ಟಣಕ್ಕೆ ಹಿಂದಿರುಗಿ ಬಂದನು. ॥52-53॥

(ಶ್ಲೋಕ-54)

ಮೂಲಮ್

ಬ್ರಹ್ಮಾ ತು ಮೋಚಯಾಮಾಸ ದೇವೇಂದ್ರಂ ಮೇಘನಾದತಃ ।
ದತ್ತ್ವಾ ವರಾನ್ಬಹೂಂಸ್ತಸ್ಮೈ ಬ್ರಹ್ಮಾ ಸ್ವಭವನಂ ಯಯೌ ॥

ಅನುವಾದ

ಮತ್ತೆ ಬ್ರಹ್ಮನು ಹೋಗಿ ಇಂದ್ರನನ್ನು ಮೇಘನಾದನಿಂದ ಬಿಡಿಸಿದನು. ಅವನಿಗೆ ಸಾಕಷ್ಟು ವರಗಳನ್ನು ಕೊಟ್ಟು ಅವನು ತನ್ನ ಲೋಕಕ್ಕೆ ಹೊರಟು ಹೋದನು. ॥54॥

(ಶ್ಲೋಕ-55)

ಮೂಲಮ್

ರಾವಣೋ ವಿಜಯೀ ಲೋಕಾನ್ಸರ್ವಾನ್ ಜಿತ್ವಾ ಕ್ರಮೇಣ ತು ।
ಕೈಲಾಸಂ ತೋಲಯಾಮಾಸ ಬಾಹುಭಿಃ ಪರಿಘೋಪಮೈಃ ॥

ಅನುವಾದ

ವಿಜಯೋನ್ಮತ್ತ ರಾವಣನು ಕ್ರಮವಾಗಿ ಎಲ್ಲಾ ಲೋಕಗಳನ್ನು ಜಯಿಸಿಕೊಂಡನು. ಪರಿಘ ಒಂದು ಬಗೆಯ ಆಯುಧದಂತಿರುವ ತನ್ನ ದೊಡ್ಡ-ದೊಡ್ಡ ಬಾಹುಗಳಿಂದ ಕೈಲಾಸ ಪರ್ವತವನ್ನು ಎತ್ತಿದನು. ॥55॥

(ಶ್ಲೋಕ-56)

ಮೂಲಮ್

ತತ್ರ ನಂದೀಶ್ವರೇಣೈವಂ ಶಪ್ತೋಽಯಂ ರಾಕ್ಷಸೇಶ್ವರಃ ।
ವಾನರೈರ್ಮಾನುಷೈಶ್ಚೈವ ನಾಶಂ ಗಚ್ಛೇತಿ ಕೋಪಿನಾ ॥

ಅನುವಾದ

ಅಲ್ಲಿ ನಂದೀಶ್ವರನು ಕ್ರೋಧದಿಂದ ರಾಕ್ಷಸರಾಜ ರಾವಣನಿಗೆ ‘‘ಮನುಷ್ಯ ಮತ್ತು ವಾನರರಿಂದ ನಿನ್ನ ಮೃತ್ಯು ಆಗುವುದು’’ ಎಂದು ಶಾಪ ಕೊಟ್ಟನು. ॥56॥

(ಶ್ಲೋಕ-57)

ಮೂಲಮ್

ಶಪ್ತೋಪ್ಯಗಣಯನ್ ವಾಕ್ಯಂ ಯಯೌ ಹೈಹಯಪತ್ತನಮ್ ।
ತೇನ ಬದ್ಧೋ ದಶಗ್ರೀವಃ ಪುಲಸ್ತ್ಯೇನ ವಿಮೋಚಿತಃ ॥

ಅನುವಾದ

ಆದರೆ ರಾವಣನು ಈ ಶಾಪವನ್ನು ಕಿಂಚಿತ್ತಾದರೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಅವನು ತತ್ಕ್ಷಣ ಹೈಹಯ ರಾಜನ (ಸಹಸ್ರಾರ್ಜುನ) ರಾಜಧಾನಿಗೆ ಹೋದನು. ಅಲ್ಲಿ ಸಹಸ್ರಾರ್ಜುನನು ರಾವಣನನ್ನು ಬಂಧಿಸಿದನು. ಆಗ ಅವನನ್ನು ಪುಲಸ್ತ್ಯರು ಬಿಡಿಸಿ ತಂದರು. ॥57॥

(ಶ್ಲೋಕ-58)

ಮೂಲಮ್

ತತೋಽತಿಬಲಮಾಸಾದ್ಯ ಜಿಘಾಂಸುರ್ಹರಿಪುಂಗವಮ್ ।
ಧೃತಸ್ತೇನೈವ ಕಕ್ಷೇಣ ವಾಲಿನಾ ದಶಕಂಧರಃ ॥

(ಶ್ಲೋಕ-59)

ಮೂಲಮ್

ಭ್ರಾಮಯಿತ್ವಾ ತು ಚತುರಃ ಸಮುದ್ರಾನ್ ರಾವಣಂ ಹರಿಃ ।
ವಿಸರ್ಜಯಾಮಾಸ ತತಸ್ತೇನ ಸಖ್ಯಂ ಚಕಾರ ಸಃ ॥

ಅನುವಾದ

ಅನಂತರ ಅವನು ಅತ್ಯಂತ ಬಲಾಢ್ಯನಾದ ವಾನರರಾಜ ವಾಲಿಯನ್ನು ಕೊಲ್ಲುವುದಕ್ಕಾಗಿ ಸಿದ್ಧನಾದನು, ಆದರೆ ವಾಲಿಯೇ ರಾವಣನನ್ನು ತನ್ನ ಕಂಕುಳಲ್ಲಿ ಒತ್ತಿ ಹಿಡಿದು ನಾಲ್ಕು ಸಮುದ್ರಗಳ ಮೇಲೆ ತಿರುಗಿಸಿ ಅವನನ್ನು ಬಿಟ್ಟುಬಿಟ್ಟನು. ಆಗ ರಾವಣನು ಅವನೊಡನೆ ಸ್ನೇಹವನ್ನು ಬೆಳೆಸಿಕೊಂಡನು. ॥58-59॥

(ಶ್ಲೋಕ-60)

ಮೂಲಮ್

ರಾವಣಃ ಪರಮಪ್ರೀತ ಏವಂ ಲೋಕಾನ್ಮಹಾಬಲಃ ।
ಚಕಾರ ಸ್ವವಶೇ ರಾಮ ಬುಭುಜೇ ಸ್ವಯಮೇವ ತಾನ್ ॥

ಅನುವಾದ

ಹೇ ರಾಮಾ! ಈ ಪ್ರಕಾರ ಮಹಾಬಲಶಾಲಿಯಾದ ರಾವಣನು ಎಲ್ಲಾ ಲೋಕಗಳನ್ನು ತನ್ನ ಅಧೀನಮಾಡಿಕೊಂಡು ಅವುಗಳನ್ನು ಸಂತೋಷವಾಗಿ ತಾನು ಅನುಭವಿಸತೊಡಗಿದನು. ॥60॥

(ಶ್ಲೋಕ-61)

ಮೂಲಮ್

ಏವಂಪ್ರಭಾವೋ ರಾಜೇಂದ್ರ ದಶಗ್ರೀವಃ ಸಹೇಂದ್ರಜಿತ್ ।
ತ್ವಯಾ ವಿನಿಹತಃ ಸಂಖ್ಯೇ ರಾವಣೋ ಲೋಕರಾವಣಃ ॥

(ಶ್ಲೋಕ-62)

ಮೂಲಮ್

ಮೇಘನಾದಶ್ಚ ನಿಹತೋ ಲಕ್ಷ್ಮಣೇನ ಮಹಾತ್ಮನಾ ।
ಕುಂಭಕರ್ಣಶ್ಚ ನಿಹತಸ್ತ್ವಯಾ ಪರ್ವತಸನ್ನಿಭಃ ॥

ಅನುವಾದ

ಹೇ ರಾಜೇಂದ್ರಾ! ಈ ದಶಾನನ ಮತ್ತು ಇಂದ್ರಜಿತ್ ಅಂತಹ ಪ್ರಭಾವಶಾಲಿಯಾಗಿದ್ದರು. (ಅವರಲ್ಲಿ) ಲೋಕಗಳಿಗೆ ದುಃಖವನ್ನುಂಟುಮಾಡುವ ರಾವಣನನ್ನು ನೀನು ಕೊಂದೆ ಮತ್ತು ಮಹಾತ್ಮಾ ಲಕ್ಷ್ಮಣನು ಮೇಘನಾದನನ್ನು ವಧಿಸಿದನು. ಪರ್ವತಕ್ಕೆ ಸಮಾನವಾದ ಬೃಹದಾಕಾರ ಶರೀರವುಳ್ಳ ಕುಂಭ ಕರ್ಣನನ್ನು ಕೂಡ ನೀನೇ ಸಂಹಾರ ಮಾಡಿದೆ. ॥61-62॥

(ಶ್ಲೋಕ-63)

ಮೂಲಮ್

ಭವಾನ್ನಾರಾಯಣಃ ಸಾಕ್ಷಾಜ್ಜಗತಾಮಾದಿಕೃದ್ವಿಭುಃ ।
ತ್ವತ್ಸ್ವರೂಪಮಿದಂ ಸರ್ವಂ ಜಗತ್ಸ್ಥಾವರಜಂಗಮಮ್ ॥

ಅನುವಾದ

ನೀನು ಎಲ್ಲಾ ಲೋಕಗಳನ್ನು ರಚಿಸುವ ಸಾಕ್ಷಾತ್ ಸರ್ವ ವ್ಯಾಪಕ ನಾರಾಯಣನಾಗಿರುವೆ. ಈ ಚರಾಚರ ಜಗತ್ತೆಲ್ಲವೂ ನಿನ್ನ ಸ್ವರೂಪವೇ ಆಗಿದೆ. ॥63॥

(ಶ್ಲೋಕ-64)

ಮೂಲಮ್

ತ್ವನ್ನಾಭಿಕಮಲೋತ್ಪನ್ನೋ ಬ್ರಹ್ಮಾ ಲೋಕಪಿತಾಮಹಃ ।
ಅಗ್ನಿಸ್ತೇ ಮುಖತೋ ಜಾತೋ ವಾಚಾ ಸಹ ರಘೂತ್ತಮ ॥

ಅನುವಾದ

ಲೋಕಪಿತಾಮಹ ಬ್ರಹ್ಮನು ನಿನ್ನ ನಾಭಿಯಿಂದ ಪ್ರಕಟವಾದ ಕಮಲದಿಂದ ಉತ್ಪನ್ನನಾಗಿದ್ದಾನೆ. ಹೇ ರಘುಶ್ರೇಷ್ಠ! ವಾಣಿಯ (ವಾಕ್) ಸಹಿತ ಅಗ್ನಿದೇವನು ನಿನ್ನ ಮುಖದಿಂದ ಜನ್ಮ ತಾಳಿದ್ದಾನೆ. ॥64॥

(ಶ್ಲೋಕ-65)

ಮೂಲಮ್

ಬಾಹುಭ್ಯಾಂ ಲೋಕಪಾಲೌಘಾಶ್ಚಕ್ಷುರ್ಭ್ಯಾಂ ಚಂದ್ರಭಾಸ್ಕರೌ ।
ದಿಶಶ್ಚ ವಿದಿಶಶ್ಚೈವ ಕರ್ಣಾಭ್ಯಾಂ ತೇ ಸಮುತ್ಥಿತಾಃ ॥

ಅನುವಾದ

ನಿನ್ನ ಬಾಹುಗಳಿಂದ ಲೋಕ ಪಾಲಕರ ಸಮೂಹ, ಕಣ್ಣುಗಳಿಂದ ಚಂದ್ರ ಮತ್ತು ಸೂರ್ಯ ಹಾಗೂ ಕಿವಿಗಳಿಂದ ದಿಕ್ಕು-ವಿದಿಕ್ಕುಗಳು ಉತ್ಪತ್ತಿಯಾಗಿವೆ. ॥65॥

(ಶ್ಲೋಕ-66)

ಮೂಲಮ್

ಘ್ರಾಣಾತ್ಪ್ರಾಣಃ ಸಮುತ್ಪನ್ನಶ್ಚಾಶ್ವಿನೌ ದೇವಸತ್ತಮೌ ।
ಜಂಘಾಜಾನೂರುಜಘನಾದ್ಭುವರ್ಲೋಕಾದಯೋಽಭವನ್ ॥

ಅನುವಾದ

ಇದೇ ಪ್ರಕಾರ ನಿನ್ನ ಘ್ರಾಣೇಂದ್ರಿಯದಿಂದ ಪ್ರಾಣ ಮತ್ತು ದೇವತೆಗಳಲ್ಲಿ ಶ್ರೇಷ್ಠರಾದ ಅಶ್ವಿನೀಕುಮಾರರು ಪ್ರಕಟಗೊಂಡಿದ್ದಾರೆ. ತೊಡೆ, ಮೊಳಕಾಲು, ಮಂಡಿ ಮತ್ತು ನಿತಂಬಾದಿ ಅಂಗಗಳಿಂದ ಭುವರ್ಲೋಕಾದಿಗಳೂ ಉಂಟಾಗಿವೆ. ॥66॥

(ಶ್ಲೋಕ-67)

ಮೂಲಮ್

ಕುಕ್ಷಿದೇಶಾತ್ಸಮುತ್ಪನ್ನಾಶ್ಚತ್ವಾರಃ ಸಾಗರಾ ಹರೇ ।
ಸ್ತನಾಭ್ಯಾಮಿಂದ್ರವರುಣೌ ವಾಲಖಿಲ್ಯಾಶ್ಚ ರೇತಸಃ ॥

ಅನುವಾದ

ಹೇ ಹರಿ! ನಿನ್ನ ಕುಕ್ಷಿಯಿಂದ ನಾಲ್ಕು ಸಮುದ್ರಗಳೂ, ಸ್ತನಗಳಿಂದ ಇಂದ್ರ ಮತ್ತು ವರುಣರೂ, ವೀರ್ಯದಿಂದ ವಾಲಖಿಲ್ಯಾದಿ ಮುನಿಗಳುಂಟಾದರು. ॥67॥

(ಶ್ಲೋಕ-68)

ಮೂಲಮ್

ಮೇಢ್ರಾದ್ಯಮೋ ಗುದಾನ್ಮೃತ್ಯುರ್ಮನ್ಯೋ ರುದ್ರಸ್ತ್ರಿಲೋಚನಃ ।
ಅಸ್ಥಿಭ್ಯಃ ಪರ್ವತಾ ಜಾತಾಃ ಕೇಶೇಭ್ಯೋ ಮೇಘಸಂಹತಿಃ ॥

(ಶ್ಲೋಕ-69)

ಮೂಲಮ್

ಓಷಧ್ಯಸ್ತವ ರೋಮಭ್ಯೋ ನಖೇಭ್ಯಶ್ಚ ಖರಾದಯಃ ।
ತ್ವಂ ವಿಶ್ವರೂಪಃ ಪುರುಷೋ ಮಾಯಾಶಕ್ತಿಸಮನ್ವಿತಃ ॥

ಅನುವಾದ

ನಿನ್ನ ಉಪಸ್ಥೇಂದ್ರಿಯದಿಂದ ಯಮ, ಗುದದಿಂದ ಮೃತ್ಯು, ಕ್ರೋಧದಿಂದ ತ್ರಿನಯನ ಮಹಾದೇವ, ಅಸ್ಥಿಗಳಿಂದ ಪರ್ವತ ಸಮೂಹ, ಕೇಶಗಳಿಂದ ಮೇಘ, ರೋಮಗಳಿಂದ ಔಷಧಿಗಳು ಹಾಗೂ ಉಗುರುಗಳಿಂದ ಕತ್ತೆ ಮುಂತಾದವು ಉತ್ಪನ್ನವಾಗಿವೆ. ನಿನ್ನ ಮಾಯಾಶಕ್ತಿಯಿಂದ ಕೂಡಿರುವ ನೀನೇ ವಿಶ್ವರೂಪೀ ಪರಮ ಪುರುಷನಾಗಿರುವೆ. ॥68-69॥

(ಶ್ಲೋಕ-70)

ಮೂಲಮ್

ನಾನಾರೂಪ ಇವಾಭಾಸಿ ಗುಣವ್ಯತಿಕರೇ ಸತಿ ।
ತ್ವಾಮಾಶ್ರಿತ್ಯೈವ ವಿಬುಧಾಃ ಪಿಬಂತ್ಯಮೃತಮಧ್ವರೇ ॥

ಅನುವಾದ

ಪ್ರಕೃತಿಯ ಗುಣಗಳಿಂದ ಕೂಡಿದಾಗ ನೀನೇ ನಾನಾರೂಪಿಯಾಗಿ ಕಂಡು ಬರುತ್ತಿರುವೆ; ನಿನ್ನ ಆಶ್ರಯದಿಂದಲೇ ದೇವಗಣ ಯಜ್ಞಗಳಲ್ಲಿ ಅಮೃತಪಾನ ಮಾಡುತ್ತಾರೆ. ॥70॥

(ಶ್ಲೋಕ-71)

ಮೂಲಮ್

ತ್ವಯಾ ಸೃಷ್ಟಮಿದಂ ಸರ್ವಂ ವಿಶ್ವಂ ಸ್ಥಾವರಜಂಗಮಮ್ ।
ತ್ವಾಮಾಶ್ರಿತ್ಯೈವ ಜೀವಂತಿ ಸರ್ವೇ ಸ್ಥಾವರಜಂಗಮಾಃ ॥

ಅನುವಾದ

ಈ ಸಮಸ್ತ ಸ್ಥಾವರ-ಜಂಗಮ ಜಗತ್ತನ್ನು ನೀನೇ ರಚಿಸಿರುವೆ ಮತ್ತು ಸಮಸ್ತ ಚರಾಚರ ಪ್ರಾಣಿಗಳು ನಿನ್ನ ಆಶ್ರಯದಿಂದಲೇ ಜೀವಿಸಿರುತ್ತವೆ. ॥71॥

(ಶ್ಲೋಕ-72)

ಮೂಲಮ್

ತ್ವದ್ಯುಕ್ತಮಖಿಲಂ ವಸ್ತು ವ್ಯವಹಾರೇಪಿ ರಾಘವ ।
ಕ್ಷೀರಮಧ್ಯಗತಂ ಸರ್ಪಿರ್ಯಥಾ ವ್ಯಾಪ್ಯಾಖಿಲಂ ಪಯಃ ॥

ಅನುವಾದ

ಹೇ ರಘುನಾಥಾ! ಹಾಲಿನಲ್ಲಿ ಸೇರಿರುವ ತುಪ್ಪವು ಅದರಲ್ಲಿ ಎಲ್ಲೆಲ್ಲಿಯೂ ವ್ಯಾಪಿಸಿರುತ್ತದೆ, ಅದೇ ಪ್ರಕಾರ ವ್ಯವಹಾರ ಕಾಲದಲ್ಲಿ ಕೂಡ ಎಲ್ಲ ವಸ್ತುಗಳಲ್ಲಿ ವ್ಯಾಪಿಸಿಕೊಂಡಿರುವೆ. ॥72॥

(ಶ್ಲೋಕ-73)

ಮೂಲಮ್

ತ್ವದ್ಭಾಸಾ ಭಾಸತೇಽರ್ಕಾದಿ ನ ತ್ವಂ ತೇನಾವಭಾಸಸೇ ।
ಸರ್ವಗಂ ನಿತ್ಯಮೇಕಂ ತ್ವಾಂ ಜ್ಞಾನಚಕ್ಷುರ್ವಿಲೋಕಯೇತ್ ॥

ಅನುವಾದ

ಸೂರ್ಯ - ಚಂದ್ರಾದಿಗಳೂ ಸಹ ಎಲ್ಲರೂ ನಿನ್ನ ಪ್ರಕಾಶದಿಂದಲೇ ಪ್ರಕಾಶಿತ ರಾಗುತ್ತಾರೆ. ಆದರೆ ನೀನು ಅವರಿಂದ ಪ್ರಕಾಶಿತನಾಗುವುದಿಲ್ಲ. ನೀನು ಸರ್ವಗತ, ನಿತ್ಯ ಮತ್ತು ಒಬ್ಬನೇ ಆಗಿರುವೆ; ಜ್ಞಾನದೃಷ್ಟಿ ಪ್ರಾಪ್ತಿಯಾಗಿರುವ ಪುರುಷನೇ ನಿನ್ನನ್ನು ನೋಡಬಲ್ಲನು. ॥73॥

(ಶ್ಲೋಕ-74)

ಮೂಲಮ್

ನಾಜ್ಞಾನಚಕ್ಷುಸ್ತ್ವಾಂ ಪಶ್ಯೇದಂಧದೃಗ್ ಭಾಸ್ಕರಂ ಯಥಾ ।
ಯೋಗಿನಸ್ತ್ವಾಂ ವಿಚಿನ್ವಂತಿ ಸ್ವದೇಹೇ ಪರಮೇಶ್ವರಮ್ ॥

(ಶ್ಲೋಕ-75)

ಮೂಲಮ್

ಅತನ್ನಿರಸನಮುಖೈರ್ವೇದಶೀರ್ಷೈರಹರ್ನಿಶಮ್ ।
ತ್ವತ್ಪಾದಭಕ್ತಿಲೇಶೇನ ಗೃಹೀತಾ ಯದಿ ಯೋಗಿನಃ ॥

(ಶ್ಲೋಕ-76)

ಮೂಲಮ್

ವಿಚಿನ್ವಂತೋ ಹಿ ಪಶ್ಯಂತಿ ಚಿನ್ಮಾತ್ರಂ ತ್ವಾಂ ನ ಚಾನ್ಯಥಾ ।
ಮಯಾ ಪ್ರಲಪಿತಂ ಕಿಂಚಿತ್ಸರ್ವಜ್ಞಸ್ಯ ತವಾಗ್ರತಃ ।
ಕ್ಷಂತುಮರ್ಹಸಿ ದೇವೇಶ ತವಾನುಗ್ರಹಭಾಗಹಮ್ ॥

ಅನುವಾದ

ಕುರುಡನಿಗೆ ಸೂರ್ಯನು ಕಾಣಿಸದಂತೆ ಜ್ಞಾನನೇತ್ರಗಳಿಲ್ಲದವನು ನಿನ್ನ ದರ್ಶನವನ್ನು ಮಾಡಲಾರನು. ಯೋಗಿಗಳು ಅನಾತ್ಮ - ಪದಾರ್ಥಗಳನ್ನು ನಿರಾಕರಣ ಮಾಡುವ ಉಪನಿಷತ್ತಿನ ವಾಕ್ಯಗಳ ಮೂಲಕ ಹಗಲೂ-ರಾತ್ರಿ ಪರಮಾತ್ಮನಾದ ನಿನ್ನನ್ನು ತಮ್ಮ ಹೃದಯದಲ್ಲಿಯೇ ಹುಡುಕುತ್ತಾರೆ. ಆ ಯೋಗಿಗಳ ಮೇಲೆ ನಿನ್ನ ಚರಣಗಳ ಭಕ್ತಿಯ ಪ್ರಭಾವ ಲೇಶಮಾತ್ರವಾದರೂ ಉಂಟಾದಾಗಲೇ ಅವರು ಹುಡುಕುತ್ತಾ - ಹುಡುಕುತ್ತಾ ಅಂತ್ಯದಲ್ಲಿ ಚಿನ್ಮಾತ್ರ ಸ್ವರೂಪಿಯಾದ ನಿನ್ನನ್ನು ನೋಡಬಲ್ಲರು, ಬೇರೆ ಯಾವ ಪ್ರಕಾರದಿಂದಲೂ ಅಲ್ಲ. ನಾನು ಸರ್ವಜ್ಞನಾದ ನಿನ್ನ ಮುಂದೆ ಕೆಲವು ನಿರರ್ಥಕವಾದ ಮಾತುಗಳನ್ನಾಡಿದೆ. ಅದಕ್ಕಾಗಿ ನೀನು ಕ್ಷಮಿಸಬೇಕು, ಏಕೆಂದರೆ ಹೇ ದೇವೇಶ್ವರ! ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದೇನೆ. ॥74-76॥

(ಶ್ಲೋಕ-77)

ಮೂಲಮ್

ದಿಗ್ದೇಶಕಾಲಪರಿಹೀನಮನನ್ಯಮೇಕಂ
ಚಿನ್ಮಾತ್ರಮಕ್ಷರಮಜಂ ಚಲನಾದಿಹೀನಮ್ ।
ಸರ್ವಜ್ಞಮೀಶ್ವರಮನಂತಗುಣಂ ವ್ಯದಸ್ತ-
ಮಾಯಂ ಭಜೇ ರಘುಪತಿಂ ಭಜತಾಮಭಿನ್ನಮ್ ॥

ಅನುವಾದ

ದಿಕ್ಕು, ದೇಶ ಮತ್ತು ಕಾಲ ರಹಿತನೂ, ಅನಂತ, ಅನನ್ಯ, ಅದ್ವಿತೀಯ, ಚಿನ್ಮಾತ್ರ, ಅವಿನಾಶಿ, ಅಜನ್ಮಾ ಮತ್ತು ಚಲನೆಮುಂತಾದ ಕ್ರಿಯಾರಹಿತನೂ ಆದ ಸರ್ವಜ್ಞ, ಸರ್ವೇಶ್ವರ, ಅನಂತ ಗುಣಸಂಪನ್ನ, ಮಾಯಾಹೀನನಾದ, ತನ್ನ ಭಕ್ತರಿಂದ ಸದಾ ಅಭಿನ್ನನಾಗಿರುವ ಶ್ರೀರಘುನಾಥನನ್ನು ನಾನು ಭಜಿಸುತ್ತೇನೆ. ॥77॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಉತ್ತರಕಾಂಡೇ ದ್ವಿತೀಯಃ ಸರ್ಗಃ ॥2॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಉತ್ತರಕಾಂಡದಲ್ಲಿ ಎರಡನೆಯ ಸರ್ಗವು ಮುಗಿಯಿತು.