೦೧

[ಮೊದಲನೆಯ ಸರ್ಗ]

ಭಾಗಸೂಚನಾ

ಭಗವಾನ್ ಶ್ರೀರಾಮಾನ ಬಳಿಗೆ ಅಗಸ್ತ್ಯಾದಿ ಮುನೀಶ್ವರರ ಆಗಮನ ಮತ್ತು ರಾವಣಾದಿ ರಾಕ್ಷಸರ ಪೂರ್ವಕಥೆಯನ್ನು ಹೇಳುವುದು

(ಶ್ಲೋಕ-1)

ಮೂಲಮ್

ಜಯತಿ ರಘುವಂಶತಿಲಕಃ ಕೌಸಲ್ಯಾಹೃದಯನಂದನೋ ರಾಮಃ ।
ದಶವದನನಿಧನಕಾರೀ ದಾಶರಥಿಃ ಪುಂಡರೀಕಾಕ್ಷಃ ॥

ಅನುವಾದ

ಕೌಸಲ್ಯೆಯ ಹೃದಯವನ್ನು ಆನಂದಗೊಳಿಸುವ, ದಶವದನ ರಾವಣನನ್ನು ಸಂಹರಿಸುವ, ರಘುವಂಶತಿಲಕ ದಶರಥಕುಮಾರ ಕಮಲನಯನ ಭಗವಾನ್ ರಾಮನಿಗೆ ಜಯವಾಗಲಿ. ॥1॥

(ಶ್ಲೋಕ-2)

ಮೂಲಮ್ (ವಾಚನಮ್)

ಪಾರ್ವತ್ಯುವಾಚ

ಮೂಲಮ್

ಅಥ ರಾಮಃ ಕಿಮಕರೋತ್ಕೌಸಲ್ಯಾನಂದವರ್ಧನಃ ।
ಹತ್ವಾ ಮೃಧೇ ರಾವಣಾದೀನ್ ರಾಕ್ಷಸಾನ್ಭೀಮವಿಕ್ರಮಃ ॥

(ಶ್ಲೋಕ-3)

ಮೂಲಮ್

ಅಭಿಷಿಕ್ತಸ್ತ್ವಯೋಧ್ಯಾಯಾಂ ಸೀತಯಾ ಸಹ ರಾಘವಃ ।
ಮಾಯಾಮಾನುಷತಾಂ ಪ್ರಾಪ್ಯ ಕತಿ ವರ್ಷಾಣಿ ಭೂತಲೇ ॥

(ಶ್ಲೋಕ-4)

ಮೂಲಮ್

ಸ್ಥಿತವಾನ್ ಲೀಲಯಾ ದೇವಃ ಪರಮಾತ್ಮಾ ಸನಾತನಃ ।
ಅತ್ಯಜನ್ಮಾನುಷಂ ಲೋಕಂ ಕಥಮಂತೇ ರಘೂದ್ವಹಃ ॥

ಅನುವಾದ

ಪಾರ್ವತಿ ಕೇಳಿದಳು ನಾಥಾ! ಕೌಸಲ್ಯೆಯ ಆನಂದವನ್ನು ಹೆಚ್ಚಿಸುವ ಮಹಾಪರಾಕ್ರಮೀ ಶ್ರೀರಾಮಚಂದ್ರನು ಯುದ್ಧದಲ್ಲಿ ರಾವಣಾದಿ ರಾಕ್ಷಸರನ್ನು ಕೊಂದು ಅಯೋಧ್ಯಾಪುರದಲ್ಲಿ ಸೀತಾದೇವಿಯ ಸಹಿತ ಪಟ್ಟಾಭಿಷಿಕ್ತನಾದ ಬಳಿಕ ಯಾವ ಕಾರ್ಯ ಮಾಡಿದನು? ಲೀಲೆಯಿಂದಲೇ ಮಾಯಾ-ಮಾನವ ಭಾವವನ್ನು ಪಡೆದ ಆ ಸನಾತನ ಪರಮಾತ್ಮನು ಭೂಲೋಕದಲ್ಲಿ ಎಷ್ಟು ವರ್ಷಗಳಿದ್ದನು? ಹಾಗೂ ಅಂತ್ಯದಲ್ಲಿ ಆ ರಘು ನಂದನನು ಈ ಮರ್ತ್ಯಲೋಕವನ್ನು ಯಾವ ಪ್ರಕಾರ ತ್ಯಾಗ ಮಾಡಿದನು? ॥2-4॥

(ಶ್ಲೋಕ-5)

ಮೂಲಮ್

ಏತದಾಖ್ಯಾಹಿ ಭಗವನ್ ಶ್ರದ್ದಧತ್ಯಾ ಮಮ ಪ್ರಭೋ ।
ಕಥಾಪೀಯೂಷಮಾಸ್ವಾದ್ಯ ತೃಷ್ಣಾ ಮೇತೀವ ವರ್ಧತೇ ।
ರಾಮಚಂದ್ರಸ್ಯ ಭಗವನ್ ಬ್ರೂಹಿ ವಿಸ್ತರಶಃ ಕಥಾಮ್ ॥

ಅನುವಾದ

ಹೇ ಪ್ರಭು! ಶ್ರದ್ಧಾಯುಕ್ತಳಾದ ನನಗೆ ನೀನು ಈ ವೃತ್ತಾಂತವನ್ನೆಲ್ಲಾ ಹೇಳು. ಹೇ ಪರಮೇಶ್ವರಾ! ಶ್ರೀರಾಮಕಥಾಮೃತವನ್ನು ಆಸ್ವಾದಿಸುವುದರಿಂದ ನನ್ನ ದಾಹ ಬಹಳ ಹೆಚ್ಚುತ್ತಾ ಹೋಗುತ್ತಿದೆ. ಆದುದರಿಂದ ನೀನು ಶ್ರೀರಾಮಚಂದ್ರನ ಕಥೆಯನ್ನು ವಿಸ್ತಾರವಾಗಿ ಹೇಳು. ॥5॥

(ಶ್ಲೋಕ-6)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ರಾಕ್ಷಸಾನಾಂ ವಧಂ ಕೃತ್ವಾ ರಾಜ್ಯೇ ರಾಮ ಉಪಸ್ಥಿತೇ ।
ಆಯಯುರ್ಮುನಯಃ ಸರ್ವೇ ಶ್ರೀರಾಮಮಭಿವಂದಿತುಮ್ ॥

ಅನುವಾದ

ಶ್ರೀಮಹಾದೇವನಿಂತೆಂದನು — ಹೇ ಪಾರ್ವತಿ! ರಾಕ್ಷಸರನ್ನು ಸಂಹಾರ ಮಾಡಿದ ನಂತರ ಭಗವಾನ್ ಶ್ರೀರಾಮನು ರಾಜಪದವಿಯಲ್ಲಿ ವಿರಾಜಮಾನನಾದ ಮೇಲೆ ಸಕಲ ಮುನಿಜನರು ಅವನಿಗೆ ಅಭಿನಂದಿಸಲು ಬಂದರು. ॥6॥

(ಶ್ಲೋಕ-7)

ಮೂಲಮ್

ವಿಶ್ವಾಮಿತ್ರೋಽಸಿತಃ ಕಣ್ವೋ ದುರ್ವಾಸಾ ಭೃಗುರಂಗಿರಾಃ ।
ಕಶ್ಯಪೋ ವಾಮದೇವೋಽತ್ರಿಸ್ತಥಾ ಸಪ್ತರ್ಷ ಯೋಮಲಾಃ ॥

(ಶ್ಲೋಕ-8)

ಮೂಲಮ್

ಅಗಸ್ತ್ಯಃ ಸಹ ಶಿಷೈಶ್ಚ ಮುನಿಭಿಃ ಸಹಿತೋಽಭ್ಯಗಾತ್ ।
ದ್ವಾರಮಾಸಾದ್ಯ ರಾಮಸ್ಯ ದ್ವಾರಪಾಲಮಥಾಬ್ರವೀತ್ ॥

ಅನುವಾದ

ಆಗ ವಿಶ್ವಾಮಿತ್ರ, ಅಸಿತ, ಕಣ್ವ, ದುರ್ವಾಸರು, ಭೃಗು, ಅಂಗಿರಾ, ಕಶ್ಯಪ, ವಾಮದೇವ, ಅತ್ರಿ, ನಿರ್ಮಲ ಸ್ವಭಾವದ ಸಪ್ತರ್ಷಿ ಗಣ ಮತ್ತು ತಮ್ಮ ಶಿಷ್ಯರು ಹಾಗೂ ಬೇರೆ ಬೇರೆ ಮುನಿಜನರ ಸಹಿತ ಅಗಸ್ತ್ಯರು ಬಂದರು. ಆ ಅಗಸ್ತ್ಯರು ಭಗವಾನ್ ಶ್ರೀರಾಮನ ಬಾಗಿಲಬಳಿ ಹೋಗಿ ದ್ವಾರಪಾಲಕನಿಗೆ ಹೇಳಿದರು. ॥7-8॥

(ಶ್ಲೋಕ-9)

ಮೂಲಮ್

ಬ್ರೂಹಿ ರಾಮಾಯ ಮುನಯಃ ಸಮಾಗತ್ಯ ಬಹಿಃಸ್ಥಿತಾಃ ।
ಅಗಸ್ತ್ಯಪ್ರಮುಖಾಃ ಸರ್ವೇ ಆಶೀರ್ಭಿರಭಿನಂದಿತುಮ್ ॥

ಅನುವಾದ

‘‘ನೀನು ಹೋಗಿ ಮಹಾರಾಜ ರಾಮನೊಡನೆ ಆಶೀರ್ವಾದಗಳೊಂದಿಗೆ ಅಭಿನಂದಿಸುವುದಕ್ಕಾಗಿ ಅಗಸ್ತ್ಯರೇ ಮುಂತಾದ ಸಮಸ್ತ ಮುನಿಗಡಣ ಬಂದಿದ್ದಾರೆ ಮತ್ತು ಹೊರಗೆ ನಿಂತಿದ್ದಾರೆ’’ ಎಂದು ಹೇಳು. ॥9॥

(ಶ್ಲೋಕ-10)

ಮೂಲಮ್

ಪ್ರತೀಹಾರಸ್ತತೋ ರಾಮಮಗಸ್ತ್ಯವಚನಾದ್ ದ್ರುತಮ್ ।
ನಮಸ್ಕೃತ್ಯಾಬ್ರವೀದ್ವಾಕ್ಯಂ ವಿನಯಾವನತಃ ಪ್ರಭುಮ್ ॥

(ಶ್ಲೋಕ-11)

ಮೂಲಮ್

ಕೃತಾಂಜಲಿರುವಾಚೇದಮಗಸ್ತ್ಯೋ ಮುನಿಭಿಃ ಸಹ ।
ದೇವ ತ್ವದ್ದರ್ಶನಾರ್ಥಾಯ ಪ್ರಾಪ್ತೋ ಬಹಿರುಪಸ್ಥಿತಃ ॥

ಅನುವಾದ

ಆಗ ದ್ವಾರಪಾಲಕನು ಅಗಸ್ತ್ಯರು ಹೇಳಿದ ಕೂಡಲೇ ಹೋಗಿ ಭಗವಾನ್ ಶ್ರೀರಾಮನಿಗೆ ನಮಸ್ಕರಿಸಿ ಅತಿ ವಿನಯದಿಂದ ಕೈ ಮುಗಿದುಕೊಂಡು ಹೇಳಿದನು ‘‘ದೇವ! ನಿನ್ನ ದರ್ಶನಕ್ಕಾಗಿ ಅನೇಕ ಮುನಿಗಳ ಸಹಿತ ಅಗಸ್ತ್ಯರು ಬಂದಿದ್ದಾರೆ ಮತ್ತು ಹೊರಗೆ ನಿಂತುಕೊಂಡಿದ್ದಾರೆ’’ ॥10-11॥

(ಶ್ಲೋಕ-12)

ಮೂಲಮ್

ತಮುವಾಚ ದ್ವಾರಪಾಲಂ ಪ್ರವೇಶಯ ಯಥಾಸುಖಮ್ ।
ಪೂಜಿತಾ ವಿವಿಶುರ್ವೇಶ್ಮ ನಾನಾರತ್ನವಿಭೂಷಿತಮ್ ॥

ಅನುವಾದ

ಭಗವಾನ್ ಶ್ರೀರಾಮನು ದ್ವಾರಪಾಲಕನಿಗೆ ‘‘ಅವರನ್ನು ಆನಂದ ಪೂರ್ವಕ ಒಳಗೆ ಕರೆದುಕೊಂಡು ಬಾ’’ ಎಂದು ಆಜ್ಞಾಪಿಸಿದನು. ಆಗ ಮುನಿಗಳು ವಿಧಿವತ್ತಾಗಿ ಪೂಜಿತರಾಗಿ ನಾನಾ ಪ್ರಕಾರದ ರತ್ನಗಳಿಂದ ವಿಭೂಷಿತವಾದ ಅರಮನೆಯನ್ನು ಪ್ರವೇಶ ಮಾಡಿದರು. ॥12॥

(ಶ್ಲೋಕ-13)

ಮೂಲಮ್

ದೃಷ್ಟ್ವಾ ರಾಮೋ ಮುನೀನ್ ಶೀಘ್ರಂ ಪ್ರತ್ಯುತ್ಥಾಯ ಕೃತಾಂಜಲಿಃ ।
ಪಾದ್ಯಾರ್ಘ್ಯಾದಿಭಿರಾಪೂಜ್ಯ ಗಾಂ ನಿವೇದ್ಯ ಯಥಾವಿಧಿಃ ॥

ಅನುವಾದ

ಭಗವಾನ್ ಶ್ರೀರಾಮನು ಮುನಿಗಳನ್ನು ನೋಡಿದ ಕೂಡಲೇ ಕೈಜೋಡಿಸಿಕೊಂಡು ಎದ್ದು ನಿಂತನು ಮತ್ತು ಅರ್ಘ್ಯ ಪಾದ್ಯಾದಿಗಳಿಂದ ಅವರನ್ನು ಪೂಜಿಸಿ ಅವರಿಗೆ ವಿಧಿಪೂರ್ವಕವಾಗಿ ಒಂದೊಂದು ಹಸುವನ್ನು ಕಾಣಿಕೆಯಾಗಿ ಕೊಟ್ಟನು. ॥13॥

(ಶ್ಲೋಕ-14)

ಮೂಲಮ್

ನತ್ವಾ ತೇಭ್ಯೋ ದದೌ ದಿವ್ಯಾನ್ಯಾಸನಾನಿ ಯಥಾರ್ಹತಃ ।
ಉಪವಿಷ್ಟಾಃ ಪ್ರಹೃಷ್ಟಾಶ್ಚ ಮುನಯೋ ರಾಮಪೂಜಿತಾಃ ॥

ಅನುವಾದ

ಪುನಃ ಅವರೆಲ್ಲರಿಗೂ ನಮಸ್ಕಾರ ಮಾಡಿ ಯಥಾ ಯೋಗ್ಯವಾದ ದಿವ್ಯ ಆಸನವನ್ನು ಕೊಟ್ಟನು. ಅವುಗಳ ಮೇಲೆ ಆ ಮುನಿಗಳು ಭಗವಾನ್ ಶ್ರೀರಾಮನಿಂದ ಪೂಜಿತರಾಗಿ ಅತ್ಯಂತ ಹರ್ಷದಿಂದ ಆಸೀನರಾದರು. ॥14॥

(ಶ್ಲೋಕ-15)

ಮೂಲಮ್

ಸಂಪೃಷ್ಟಕುಶಲಾಃ ಸರ್ವೇ ರಾಮಂ ಕುಶಲಮಬ್ರುವನ್ ।
ಕುಶಲಂ ತೇ ಮಹಾಬಾಹೋ ಸರ್ವತ್ರ ರಘುನಂದನ ॥

ಅನುವಾದ

ಶ್ರೀರಾಮ ಚಂದ್ರನಲ್ಲಿ ಕುಶಲ-ಸಮಾಚಾರವನ್ನು ವಿಚಾರಿಸಿದ ಬಳಿಕ ಎಲ್ಲರೂ ತಮ್ಮ ಯೋಗಕ್ಷೇಮವನ್ನು ಹೇಳಿದರು ಮತ್ತು ಆತನನ್ನು ಕೇಳಿದರರು ‘‘ಹೇ ರಘುನಂದನ! ಹೇ ಮಹಾಬಾಹು! ನಿನ್ನ ರಾಜ್ಯದಲ್ಲಿ ಎಲ್ಲರೂ ಕುಶಲವಷ್ಟೇ? ॥15॥

(ಶ್ಲೋಕ-16)

ಮೂಲಮ್

ದಿಷ್ಟ್ಯೇದಾನೀಂ ಪ್ರಪಶ್ಯಾಮೋ ಹತಶತ್ರುಮರಿಂದಮ ।
ನ ಹಿ ಭಾರಃ ಸ ತೇ ರಾಮ ರಾವಣೋ ರಾಕ್ಷಸೇಶ್ವರಃ ॥

ಅನುವಾದ

ಹೇ ಶತ್ರುದಮನ! ಇಂದು ನಾವು ಬಹುಭಾಗ್ಯದಿಂದ ನೀನು ಶತ್ರುಹೀನ ನಾಗಿರುವುದನ್ನು ನೋಡುತ್ತಿದ್ದೇವೆ. ಹೇ ರಾಮ! ನಿನಗೆ ರಾಕ್ಷಸರಾಜ ರಾವಣನನ್ನು ಕೊಲ್ಲುವುದು ಅಷ್ಟು ಕಷ್ಟದಾಯಕವಾಗಿರಲಿಲ್ಲ. ॥16॥

(ಶ್ಲೋಕ-17)

ಮೂಲಮ್

ಸಧನುಸ್ತ್ವಂ ಹಿ ಲೋಕಾಂಸ್ತ್ರೀನ್ ವಿಜೇತುಂ ಶಕ್ತ ಏವ ಹಿ ।
ದಿಷ್ಟ್ಯಾ ತ್ವಯಾ ಹತಾಃ ಸರ್ವೇ ರಾಕ್ಷಸಾ ರಾವಣಾದಯಃ ॥

ಅನುವಾದ

ಏಕೆಂದರೆ ನೀನು ಧನುಸ್ಸನ್ನು ಹಿಡಿದರೆ ಮೂರು ಲೋಕಗಳನ್ನು ಜಯಿಸಲೂ ಸಮರ್ಥನಾಗಿರುವೆ. ನಮ್ಮ ಸೌಭಾಗ್ಯದಿಂದ ನೀನು ರಾವಣಾದಿ ಎಲ್ಲಾ ರಾಕ್ಷಸರನ್ನೂ ಕೊಂದು ಹಾಕಿದೆ. ॥17॥

(ಶ್ಲೋಕ-18)

ಮೂಲಮ್

ಸಹ್ಯಮೇತನ್ಮಹಾಬಾಹೋ ರಾವಣಸ್ಯ ನಿಬರ್ಹಣಮ್ ।
ಅಸಹ್ಯಮೇತತ್ಸಂಪ್ರಾಪ್ತಂ ರಾವಣೇರ್ಯನ್ನಿಷೂದನಮ್ ॥

ಅನುವಾದ

ಮತ್ತು ಹೇ ಮಹಾಬಾಹುವೇ! ರಾವಣನ ಸಂಹಾರವೇನೋ ಸುಗಮವಾಗಿತ್ತು ಆದರೆ ರಾವಣನ ಮಗ ಇಂದ್ರಜಿತುವನ್ನು ವಧಿಸುವುದು ಬಹಳ ಕಠಿಣವಾದ ಕಾರ್ಯವಾಗಿತ್ತು. ॥18॥

(ಶ್ಲೋಕ-19)

ಮೂಲಮ್

ಅಂತಕಪ್ರತಿಮಾಃ ಸರ್ವೇ ಕುಂಭಕರ್ಣಾದಯೋ ಮೃಧೇ ।
ಅಂತಕಪ್ರತಿಮೈರ್ಬಾಣೈರ್ಹತಾಸ್ತೇ ರಘುಸತ್ತಮ ॥

ಅನುವಾದ

ಈ ಕುಂಭಕರ್ಣಾದಿ ಎಲ್ಲಾ ರಾಕ್ಷಸರು ಯುದ್ಧದಲ್ಲಿ ಕಾಲನಿಗೆ (ಯಮ) ಸಮಾನವಾಗಿದ್ದರು. ಹೇ ರಘುಶ್ರೇಷ್ಠ! ಅವರೆಲ್ಲರೂ ಕಾಲನಿಗೆ ಸಮಾನವಾದ ನಿನ್ನ ಕರಾಳ ಬಾಣಗಳಿಂದ ಹತರಾದರು. ॥19॥

(ಶ್ಲೋಕ-20)

ಮೂಲಮ್

ದತ್ತಾ ಚೇಯಂ ತ್ವಯಾಸ್ಮಾಕಂ ಪುರಾ ಹ್ಯಭಯದಕ್ಷಿಣಾ ।
ಹತ್ವಾ ರಕ್ಷೋಗಣಾನ್ಸಂಖ್ಯೇ ಕೃತಕೃತ್ಯೋಽದ್ಯ ಜೀವಸಿ ॥

ಅನುವಾದ

ನೀನು ನಮಗೆ ಮೊದಲೇ ಅಭಯದಾನ ಕೊಟ್ಟಿದ್ದೆ. ಈಗ ನೀನು ಸ್ವತಃ ಈ ರಾಕ್ಷಸರನ್ನು ಯುದ್ಧದಲ್ಲಿ ಕೊಂದು ಕೃತಕೃತ್ಯನಾಗಿರುವೆ. ॥20॥

(ಶ್ಲೋಕ-21)

ಮೂಲಮ್

ಶ್ರುತ್ವಾ ತು ಭಾಷಿತಂ ತೇಷಾಂ ಮುನೀನಾಂ ಭಾವಿತಾತ್ಮನಾಮ್ ।
ವಿಸ್ಮಯಂ ಪರಮಂ ಗತ್ವಾ ರಾಮಃ ಪ್ರಾಂಜಲಿರಬ್ರವೀತ್ ॥

ಅನುವಾದ

ಆ ಆತ್ಮನಿಷ್ಠ ಮುನೀಶ್ವರರ ಮಾತುಗಳನ್ನು ಕೇಳಿ ಶ್ರೀರಾಮಚಂದ್ರನು ಅತ್ಯಂತ ವಿಸ್ಮಯನಾಗಿ ಕೈ ಮುಗಿದುಕೊಂಡು ಅವರನ್ನು ಕೇಳಿಕೊಂಡನು. ॥21॥

(ಶ್ಲೋಕ-22)

ಮೂಲಮ್

ರಾವಣಾದೀನತಿಕ್ರಮ್ಯ ಕುಂಭಕರ್ಣಾದಿರಾಕ್ಷಸಾನ್ ।
ತ್ರಿಲೋಕಜಯಿನೋ ಹಿತ್ವಾ ಕಿಂ ಪ್ರಶಂಸಥ ರಾವಣಿಮ್ ॥

ಅನುವಾದ

‘‘ಹೇ ಮುನಿಗಳಿರಾ! ತ್ರಿಲೋಕವಿಜಯೀ ರಾವಣ ಮತ್ತು ಕುಂಭಕರ್ಣಾದಿ ರಾಕ್ಷಸರನ್ನು ಬಿಟ್ಟು ರಾವಣನ ಮಗ ಮೇಘನಾದನನ್ನೇ ಏಕೆ ಹೊಗಳುತ್ತಿರುವಿರಿ?’’ ॥22॥

(ಶ್ಲೋಕ-23)

ಮೂಲಮ್

ತತಸ್ತದ್ವಚನಂ ಶ್ರುತ್ವಾ ರಾಘವಸ್ಯ ಮಹಾತ್ಮನಃ ।
ಕುಂಭಯೋನಿರ್ಮಹಾತೇಜಾ ರಾಮಂ ಪ್ರೀತ್ಯಾ ವಚೋಽಬ್ರವೀತ್ ॥

ಅನುವಾದ

ಮಹಾತ್ಮಾ ರಘುನಾಥನ ಈ ಮಾತನ್ನು ಕೇಳಿ ಪರಮ ತೇಜಸ್ವೀ ಮುನಿವರ್ಯ ಅಗಸ್ತ್ಯರು ಅತಿ ಪ್ರೀತಿಯಿಂದ ಅವನಿಗೆ ಹೇಳಿದರು. ॥23॥

(ಶ್ಲೋಕ-24)

ಮೂಲಮ್

ಶೃಣು ರಾಮ ಯಥಾ ವೃತ್ತಂ ರಾವಣೇ ರಾವಣಸ್ಯ ಚ ।
ಜನ್ಮ ಕರ್ಮ ವರಾದಾನಂ ಸಂಕ್ಷೇಪಾದ್ವದತೋ ಮಮ ॥

ಅನುವಾದ

‘‘ಹೇ ರಾಮ! ನೀನು ರಾವಣ ಮತ್ತು ಅವನ ಪುತ್ರರ ಜನ್ಮ, ಕರ್ಮ ಮತ್ತು ವರಪ್ರಾಪ್ತಿ ಮುಂತಾದ ವೃತ್ತಾಂತವನ್ನು ಕೇಳು; ನಾನು ಅವುಗಳನ್ನು ಸಂಕ್ಷೇಪವಾಗಿ ವರ್ಣನೆ ಮಾಡುತ್ತೇನೆ. ॥24॥

(ಶ್ಲೋಕ-25)

ಮೂಲಮ್

ಪುರಾ ಕೃತಯುಗೇ ರಾಮ ಪುಲಸ್ತ್ಯೋ ಬ್ರಹ್ಮಣಃ ಸುತಃ ।
ತಪಸ್ತಪ್ತುಂ ಗತೋ ವಿದ್ವಾನ್ಮೇರೋಃ ಪಾರ್ಶ್ವಂ ಮಹಾಮತಿಃ ॥

ಅನುವಾದ

ಹೇ ರಾಮ! ಹಿಂದೆ ಸತ್ಯಯುಗದಲ್ಲಿ ಬ್ರಹ್ಮನ ಪುತ್ರ ಮಹಾಮತಿಯಾದ ವಿದ್ವಾಂಸನಾದ ಪುಲಸ್ತ್ಯನು ತಪಸ್ಸನ್ನಾಚರಿಸಲು ಸುಮೇರು ಪರ್ವತಕ್ಕೆ ಹೋದನು. ॥25॥

(ಶ್ಲೋಕ-26)

ಮೂಲಮ್

ತೃಣಬಿಂದೋರಾಶ್ರಮೇಽಸೌ ನ್ಯವಸನ್ಮುನಿಪುಂಗವಃ ।
ತಪಸ್ತೇಪೇ ಮಹಾತೇಜಾಃ ಸ್ವಾಧ್ಯಾಯನಿರತಃ ಸದಾ ॥

ಅನುವಾದ

ಆತನು ಮಹಾತೇಜಸ್ವಿ ಮುನಿಶ್ರೇಷ್ಠ ತೃಣಬಿಂದುವಿನ ಆಶ್ರಮದಲ್ಲಿ ಇರುತ್ತಿದ್ದು, ಅಲ್ಲಿ ನಿರಂತರ ಸ್ವಾಧ್ಯಾಯ(ಪ್ರಣವ-ಜಪ)ದಲ್ಲಿ ತತ್ಪರನಾಗಿದ್ದು ತಪಸ್ಸನ್ನು ಆಚರಿಸುತ್ತಿದ್ದನು. ॥26॥

(ಶ್ಲೋಕ-27)

ಮೂಲಮ್

ತತ್ರಾಶ್ರಮೇ ಮಹಾರಮ್ಯೇ ದೇವಗಂಧರ್ವಕನ್ಯಕಾಃ ।
ಗಾಯಂತ್ಯೋ ನನೃತುಸ್ತತ್ರ ಹಸಂತ್ಯೋ ವಾದಯಂತಿ ಚ ॥

(ಶ್ಲೋಕ-28)

ಮೂಲಮ್

ಪುಲಸ್ತ್ಯಸ್ಯ ತಪೋವಿಘ್ನಂ ಚಕ್ರುಃ ಸರ್ವಾ ಅನಿಂದಿತಾಃ ।
ತತಃ ಕ್ರುದ್ಧೋ ಮಹಾತೇಜಾ ವ್ಯಾಜಹಾರ ವಚೋ ಮಹತ್ ॥

ಅನುವಾದ

ಆ ಮಹಾ ರಮಣೀಯ ಆಶ್ರಮದಲ್ಲಿ ದೇವತೆಗಳ ಮತ್ತು ಗಂಧರ್ವರ ಸುಂದರಕನ್ಯೆಯರು ಹಾಡುತ್ತಾ, ನುಡಿಸುತ್ತಾ ನಗುತ್ತಾ ನರ್ತಿಸಲಾರಂಭಿಸಿ ಪುಲಸ್ತ್ಯನ ತಪಸ್ಸಿಗೆ ವಿಘ್ನವನ್ನೊಡ್ಡಿದರು. ಆಗ ಮಹಾತೇಜಸ್ವಿ ಪುಲಸ್ತ್ಯನು ಅತ್ಯಂತ ಕ್ರೋಧದಿಂದ ಹೇಳಿದನು. ॥27-28॥

(ಶ್ಲೋಕ-29)

ಮೂಲಮ್

ಯಾ ಮೇ ದೃಷ್ಟಿಪಥಂ ಗಚ್ಛೇತ್ಸಾ ಗರ್ಭಂ ಧಾರಯಿಷ್ಯತಿ ।
ತಾಃ ಸರ್ವಾಃ ಶಾಪಸಂವಿಗ್ನಾ ನ ತಂ ದೇಶಂ ಪ್ರಚಕ್ರಮುಃ ॥

ಅನುವಾದ

‘‘ಯಾವ (ದೇವತೆ ಯಾ ಗಂಧರ್ವ) ಕನ್ಯೆಯ ಮೇಲೆ ನನ್ನ ದೃಷ್ಟಿ ಬೀಳುವುದೋ ಆಕೆಯು ಗರ್ಭವತಿಯಾಗಿ ಬಿಡುವಳು.’’ ಆಗ ಆ ಶಾಪದಿಂದ ಭಯಗೊಂಡು ಅವರಲ್ಲಿ ಯಾರೂ ಕೂಡ ಆ ಸ್ಥಳಕ್ಕೆ ಬರಲಿಲ್ಲ. ॥29॥

(ಶ್ಲೋಕ-30)

ಮೂಲಮ್

ತೃಣಬಿಂದೋಸ್ತು ರಾಜರ್ಷೇಃ ಕನ್ಯಾ ತನ್ನಾಶೃಣೋದ್ವಚಃ ।
ವಿಚಚಾರ ಮುನೇರಗ್ರೇ ನಿರ್ಭಯಾ ತಂ ಪ್ರಪಶ್ಯತೀ ॥

ಅನುವಾದ

ಆದರೆ ರಾಜರ್ಷಿ ತೃಣಬಿಂದುವಿನ ಕನ್ಯೆಯು ಈ ವಾಕ್ಯಗಳನ್ನು ಕೇಳಿಸಿಕೊಳ್ಳಲಿಲ್ಲ. ಆದುದರಿಂದ ಆಕೆಯು ಮುನೀಶ್ವರನ ಎದುರಿಗೆ ನಿರ್ಭಯವಾಗಿ ತಿರುಗಾಡುತ್ತಿದ್ದಳು. ॥30॥

(ಶ್ಲೋಕ-31)

ಮೂಲಮ್

ಬಭೂವ ಪಾಂಡುರತನುರ್ವ್ಯಂಜಿತಾಂತಃ ಶರೀರಜಾ ।
ದೃಷ್ಟ್ವಾ ಸಾ ದೇಹವೈವರ್ಣ್ಯಂ ಭೀತಾ ಪಿತರಮನ್ವಗಾತ್ ॥

ಅನುವಾದ

ಇದರಿಂದ ಅವಳು ಗರ್ಭವತಿಯಾಗಿ ಕಾಂತಿ ಹೀನಳಾದಳು, ಹಾಗೂ ಆಕೆಯ ಸ್ತನಗಳು ಉಬ್ಬಿ ಸ್ಪಷ್ಟವಾಗಿ ಪ್ರಕಟಗೊಂಡವು. ತನ್ನ ಶರೀರ ವಿವರ್ಣಗೊಂಡುದನ್ನು ಕಂಡು ಅವಳು ಭಯಪಡುತ್ತಾ ತನ್ನ ತಂದೆಯ ಬಳಿಕೆ ಬಂದಳು. ॥31॥

(ಶ್ಲೋಕ-32)

ಮೂಲಮ್

ತೃಣಬಿಂದುಶ್ಚ ತಾಂ ದೃಷ್ಟ್ವಾ ರಾಜರ್ಷಿರಮಿತದ್ಯುತಿಃ ।
ಧ್ಯಾತ್ವಾ ಮುನಿಕೃತಂ ಸರ್ವಮವೈದ್ವಿಜ್ಞಾನಚಕ್ಷುಷಾ ॥

ಅನುವಾದ

ಮಹಾತೇಜಸ್ವಿಯಾದ ರಾಜರ್ಷಿ ತೃಣಬಿಂದುವು ಅವಳನ್ನು ನೋಡಿದಾಗ ಧ್ಯಾನದ ಮೂಲಕ ತನ್ನ ಜ್ಞಾನದೃಷ್ಟಿಯಿಂದ ಮುನಿವರ ಪುಲಸ್ತ್ಯನ ಕೃತ್ಯವನ್ನೆಲ್ಲಾ ತಿಳಿದುಕೊಂಡನು. ॥32॥

(ಶ್ಲೋಕ-33)

ಮೂಲಮ್

ತಾಂ ಕನ್ಯಾಂ ಮುನಿವರ್ಯಾಯ ಪುಲಸ್ತ್ಯಾಯ ದದೌ ಪಿತಾ ।
ತಾಂ ಪ್ರಗೃಹ್ಯಾಬ್ರವೀತ್ಕನ್ಯಾಂ ಬಾಢಮಿತ್ಯೇವ ಸ ದ್ವಿಜಃ ॥

ಅನುವಾದ

ಆಗ ತಂದೆ ತೃಣಬಿಂದು ಆ ಕನ್ಯೆಯನ್ನು ಮುನಿಶ್ರೇಷ್ಠ ಪುಲಸ್ತ್ಯನಿಗೆ ಕೊಟ್ಟನು ಹಾಗೂ ಆತನು ‘ಒಳ್ಳೆಯದು, ಸರಿ’ ಎಂದು ಹೇಳಿ ಆಕೆಯನ್ನು ಸ್ವೀಕರಿಸಿದನು. ॥33॥

(ಶ್ಲೋಕ-34)

ಮೂಲಮ್

ಶುಶ್ರೂಷಣಪರಾಂ ದೃಷ್ಟ್ವಾ ಮುನಿಃ ಪ್ರೀತೋಽಬ್ರವೀದ್ವಚಃ ।
ದಾಸ್ಯಾಮಿ ಪುತ್ರಮೇಕಂ ತೇ ಉಭಯೋರ್ವಂಶವರ್ಧನಮ್ ॥

ಅನುವಾದ

ಅತ್ಯಂತ ಶುಶ್ರೂಷಾಪರಾಯಣಳಾದ ಆಕೆಯನ್ನು ನೋಡಿ ಮುನಿವರ ಪುಲಸ್ತ್ಯನು ಅವಳಿಂದ ಪ್ರಸನ್ನನಾಗಿ ಹೇಳಿದನು ‘‘ನಾನು ನಿನಗೆ ಎರಡು ವಂಶಗಳನ್ನೂ ಮಾತೃಪಕ್ಷ ಮತ್ತು ಪಿತೃಪಕ್ಷ ವೃದ್ಧಿಗೊಳಿಸುವಂತಹ ಒಬ್ಬ ಪುತ್ರನನ್ನು ಕೊಡುವೆನು’’ ॥34॥

(ಶ್ಲೋಕ-35)

ಮೂಲಮ್

ತತಃ ಪ್ರಾಸೂತ ಸಾ ಪುತ್ರಂ ಪುಲಸ್ತ್ಯಾಲ್ಲೋಕವಿಶ್ರುತಮ್ ।
ವಿಶ್ರವಾ ಇತಿ ವಿಖ್ಯಾತಃ ಪೌಲಸ್ತ್ಯೋ ಬ್ರಹ್ಮವಿನ್ಮುನಿಃ ॥

ಅನುವಾದ

ಆಗ ಆ ಕನ್ಯೆಯು ಪುಲಸ್ತ್ಯನಿಂದ ಒಬ್ಬ ತ್ರಿಲೋಕ-ವಿಖ್ಯಾತ ಪುತ್ರನಿಗೆ ಜನ್ಮನೀಡಿದಳು, ಅವನು ಪುಲಸ್ತ್ಯ-ಪುತ್ರ ಬ್ರಹ್ಮವೇತ್ತಾ ಮುನಿವರ ವಿಶ್ರವಸ್ಸು ಎಂಬ ಹೆಸರಿನಿಂದ ಪ್ರಸಿದ್ಧನಾದನು. ॥35॥

(ಶ್ಲೋಕ-36)

ಮೂಲಮ್

ತಸ್ಯ ಶೀಲಾದಿಕಂ ದೃಷ್ಟ್ವಾ ಭರದ್ವಾಜೋ ಮಹಾಮುನಿಃ ।
ಭಾರ್ಯಾರ್ಥಂ ಸ್ವಾಂ ದುಹಿತರಂ ದದೌ ವಿಶ್ರವಸೇ ಮುದಾ ॥

ಅನುವಾದ

ವಿಶ್ರವಸ್ಸುವಿನ ಶೀಲ-ಸ್ವಭಾವಾದಿಗಳನ್ನು ಕಂಡು ಮಹಾಮುನಿ ಭರದ್ವಾಜರು ಪ್ರಸನ್ನರಾಗಿ ಆತನಿಗೆ ತಮ್ಮ ಪುತ್ರಿಯನ್ನು ವಿವಾಹ ಮಾಡಿ ಕೊಟ್ಟರು. ॥36॥

(ಶ್ಲೋಕ-37)

ಮೂಲಮ್

ತಸ್ಯಾಂ ತು ಪುತ್ರಃ ಸಂಜಜ್ಞೇ ಪೌಲಸ್ತ್ಯಾಲ್ಲೋಕಸಮ್ಮತಃ ।
ಪಿತೃತುಲ್ಯೋ ವೈಶ್ರವಣೋ ಬ್ರಹ್ಮಣಾ ಚಾನುಮೋದಿತಃ ॥

ಅನುವಾದ

ಅವಳಿಂದ ಪುಲಸ್ತ್ಯನಂದನ ವಿಶ್ರವಸನು ತ್ರಿಲೋಕದಲ್ಲಿಯೂ ಪ್ರತಿಷ್ಠಿತನಾದ ಒಬ್ಬ ಪುತ್ರನನ್ನು ಪಡೆದನು. ಆ ವಿಶ್ರವನ ಮಗ ತನ್ನ ತಂದೆಗೆ ಸಮಾನನಾಗಿಯೇ ಇದ್ದನು ಹಾಗೂ ಬ್ರಹ್ಮನೂ ಸಹ ಅವನನ್ನು ಪ್ರಶಂಸೆ ಮಾಡಿದನು. ॥37॥

(ಶ್ಲೋಕ-38)

ಮೂಲಮ್

ದದೌ ತತ್ತಪಸಾ ತುಷ್ಟೋ ಬ್ರಹ್ಮಾ ತಸ್ಮೈ ವರಂ ಶುಭಮ್ ।
ಮನೋಽಭಿಲಷಿತಂ ತಸ್ಯ ಧನೇಶತ್ವಮಖಂಡಿತಮ್ ॥

ಅನುವಾದ

ಅವನ ತಪಸ್ಸಿಗೆ ಮೆಚ್ಚಿ ಬ್ರಹ್ಮನು ಅವನಿಗೆ ಮನೋವಾಂಛಿತ ಶ್ರೇಷ್ಠ ವರವನ್ನು ಕೊಟ್ಟು ಅಖಂಡ ಐಶ್ವರ್ಯಾಧಿಪತಿಯನ್ನಾಗಿ ಮಾಡಿದನು. ॥38॥

(ಶ್ಲೋಕ-39)

ಮೂಲಮ್

ತತೋ ಲಬ್ಧವರಃ ಸೋಽಪಿ ಪಿತರಂ ದ್ರಷ್ಟು ಮಾಗತಃ ।
ಪುಷ್ಪಕೇಣ ಧನಾಧ್ಯಕ್ಷೋ ಬ್ರಹ್ಮದತ್ತೇನ ಭಾಸ್ವತಾ ॥

ಅನುವಾದ

ಬ್ರಹ್ಮನ ವರದಾನದಿಂದ ಧನಾಧ್ಯಕ್ಷನಾಗಿ, ಅವನೇ ಕೊಟ್ಟಿರುವ ಮಹಾತೇಜಸ್ವೀ ಪುಷ್ಪಕ ವಿಮಾನವನ್ನು ಏರಿ ತನ್ನ ತಂದೆಯನ್ನು ಕಾಣಲು ಬಂದನು. ॥39॥

(ಶ್ಲೋಕ-40)

ಮೂಲಮ್

ನಮಸ್ಕೃತ್ಯಾಥ ಪಿತರಂ ನಿವೇದ್ಯ ತಪಸಃ ಫಲಮ್ ।
ಪ್ರಾಹ ಮೇ ಭಗವಾನ್ ಬ್ರಹ್ಮಾ ದತ್ತ್ವಾ ವರಮನಿಂದಿತಮ್ ॥

ಅನುವಾದ

ತಂದೆಗೆ ನಮಸ್ಕಾರ ಮಾಡಿ ತನ್ನ ತಪಸ್ಸಿನ ಫಲವನ್ನು ನಿವೇದಿಸುತ್ತಾ ಹೇಳಿದನು ‘‘ಭಗವಾನ್ ಬ್ರಹ್ಮನು ನನಗೆ ಈ ಅತ್ಯುತ್ತಮ ವರವನ್ನು ಕೊಟ್ಟಿರುವನು. ॥40॥

(ಶ್ಲೋಕ-41)

ಮೂಲಮ್

ನಿವಾಸಾಯ ನ ಮೇ ಸ್ಥಾನಂ ದತ್ತವಾನ್ಪರಮೇಶ್ವರಃ ।
ಬ್ರೂಹಿ ಮೇ ನಿಯತಂ ಸ್ಥಾನಂ ಹಿಂಸಾ ಯತ್ರ ನ ಕಸ್ಯಚಿತ್ ॥

ಅನುವಾದ

ಆದರೆ ಆ ಪರಮೇಶ್ವರನು ನನಗೆ ವಾಸಕ್ಕೆ ಯಾವ ಸ್ಥಾನವನ್ನೂ ಕೊಡಲಿಲ್ಲ. ಆದ್ದರಿಂದ ಯಾರ ಹಿಂಸೆಯೂ ಆಗದಿರುವಂತಹ ಯಾವುದಾದರೂ ಒಂದು ನಿಶ್ಚಿತ ಸ್ಥಾನವನ್ನು ತಾವು ನನಗೆ ತಿಳಿಸಿರಿ’’ ॥41॥

(ಶ್ಲೋಕ-42)

ಮೂಲಮ್

ವಿಶ್ರವಾ ಅಪಿ ತಂ ಪ್ರಾಹ ಲಂಕಾನಾಮ ಪುರಿ ಶುಭಾ ।
ರಾಕ್ಷಸಾನಾಂ ನಿವಾಸಾಯ ನಿರ್ಮಿತಾ ವಿಶ್ವಕರ್ಮಣಾ ॥

ಅನುವಾದ

ಆಗ ವಿಶ್ರವಸ್ಸು ಅವನಿಗೆ ಹೇಳಿದನು ‘‘ದಾನವ ಶಿಲ್ಪಿ ವಿಶ್ವಕರ್ಮನು ಲಂಕೆ ಎಂಬ ಒಂದು ಸುಂದರನಗರವನ್ನು ರಾಕ್ಷಸರ ವಾಸಕ್ಕಾಗಿ ರಚಿಸಿದ್ದಾನೆ. ॥42॥

(ಶ್ಲೋಕ-43)

ಮೂಲಮ್

ತ್ಯಕ್ತ್ವಾ ವಿಷ್ಣುಭಯಾದ್ದೈತ್ಯಾ ವಿವಿಶುಸ್ತೇ ರಸಾತಲಮ್ ।
ಸಾ ಪುರೀ ದುಷ್ಪ್ರಧರ್ಷಾನ್ಯೇರ್ಮಧ್ಯೇಸಾಗರಮಾಸ್ಥಿತಾ ॥

ಅನುವಾದ

ಆದರೆ ದೈತ್ಯರು ಭಗವಾನ್ ವಿಷ್ಣುವಿನ ಭಯದಿಂದ ಅದನ್ನು ಬಿಟ್ಟು ರಸಾತಳಕ್ಕೆ ಹೊರಟು ಹೋಗಿದ್ದಾರೆ. ಆ ಪಟ್ಟಣವನ್ನು ಯಾವ ಶತ್ರುಗಳೂ ಆಕ್ರಮಣ ಮಾಡಲು ಅತ್ಯಂತ ಕಠಿಣವಾಗಿದೆ; ಏಕೆಂದರೆ ಅದು ಸಮುದ್ರದ ಮಧ್ಯದಲ್ಲಿ ನೆಲೆಸಿದೆ. ॥43॥

(ಶ್ಲೋಕ-44)

ಮೂಲಮ್

ತತ್ರ ವಾಸಾಯ ಗಚ್ಛ ತ್ವಂ ನಾನ್ಯೈಃ ಸಾಧಿಷ್ಠಿತಾ ಪುರಾ ।
ಪಿತ್ರಾದಿಷ್ಟಸ್ತ್ವಸೌ ಗತ್ವಾ ತಾಂ ಪುರೀಂ ಧನದೋಽವಿಶತ್ ॥

ಅನುವಾದ

ನೀನು ಅಲ್ಲಿಯೇ ಇರಲು ಹೋಗು. ಇದಕ್ಕಿಂತ ಮೊದಲು ಆ ಪಟ್ಟಣದಲ್ಲಿ ಬೇರೆ ಯಾರ ಅಧಿಕಾರವೂ ಇರಲಿಲ್ಲ.’’ ಆಗ ಧನಪತಿ ಕುಬೇರನು ತಂದೆಯ ಆಜ್ಞೆಯಂತೆ ಹೋಗಿ ಆ ಪಟ್ಟಣವನ್ನು ಪ್ರವೇಶಿಸಿದನು. ॥44॥

(ಶ್ಲೋಕ-45)

ಮೂಲಮ್

ಸ ತತ್ರ ಸುಚಿರಂ ಕಾಲಮುವಾಸ ಪಿತೃಸಮ್ಮತಃ ।
ಕಸ್ಯಚಿತ್ತ್ವಥ ಕಾಲಸ್ಯ ಸುಮಾಲೀ ನಾಮ ರಾಕ್ಷಸಃ ॥

(ಶ್ಲೋಕ-46)

ಮೂಲಮ್

ರಸಾತಲಾನ್ಮರ್ತ್ಯಲೋಕಂ ಚಚಾರ ಪಿಶಿತಾಶನಃ ।
ಗೃಹೀತ್ವಾ ತನಯಾಂ ಕನ್ಯಾಂ ಸಾಕ್ಷಾದ್ದೇವೀಮಿವ ಶ್ರಿಯಮ್ ॥

ಅನುವಾದ

ಅಲ್ಲಿ ತನ್ನ ತಂದೆಯ ಸಮ್ಮತಿಯಂತೆ ಆತನು ಬಹಳ ಕಾಲ ವಾಸ ಮಾಡಿದನು. ಒಮ್ಮೆ ಸುಮಾಲಿ ಎಂಬ ಒಬ್ಬ ಮಾಂಸ-ಭಕ್ಷಕ ರಾಕ್ಷಸನು ಸಾಕ್ಷಾತ್ ಲಕ್ಷ್ಮೀದೇವಿಯಂತೆ ರೂಪವತಿಯಾದ ತನ್ನ ಮಗಳೊಡನೆ ರಸಾತಲದಿಂದ ಬಂದು ಮರ್ತ್ಯಲೋಕದಲ್ಲಿ ತಿರುಗಾಡುತ್ತಾ ಇದ್ದನು. ॥45-46॥

(ಶ್ಲೋಕ-47)

ಮೂಲಮ್

ಅಪಶ್ಯದ್ಧನದಂ ದೇವಂ ಚರಂತಂ ಪುಷ್ಪಕೇಣ ಸಃ ।
ಹಿತಾಯ ಚಿಂತಯಾಮಾಸ ರಾಕ್ಷಸಾನಾಂ ಮಹಾಮನಾಃ ॥

ಅನುವಾದ

ಭಗವಾನ್ ಕುಬೇರನು ಪುಷ್ಪಕ ವಿಮಾನವನ್ನೇರಿ ಸಂಚರಿಸವುದನ್ನು ಅವನು ನೋಡಿದನು. ಆಗ ಮಹಾಬುದ್ಧಿಶಾಲಿ ಸುಮಾಲಿಯು ರಾಕ್ಷಸರ ಹಿತದ ಉಪಾಯವನ್ನು ಯೋಚಿಸಿದನು. ॥47॥

(ಶ್ಲೋಕ-48)

ಮೂಲಮ್

ಉವಾಚ ತನಯಾಂ ತತ್ರ ಕೈಕಸೀಂ ನಾಮ ನಾಮತಃ ।
ವತ್ಸೇ ವಿವಾಹಕಾಲಸ್ತೇ ಯೌವನಂ ಚಾತಿವರ್ತತೇ ॥

ಅನುವಾದ

ಅವನು ಕೈಕಸೀ ಎಂಬ ಹೆಸರಿನ ತನ್ನ ಕನ್ಯೆಗೆ ಹೇಳಿದನು ‘‘ಮಗೂ! ನಿನ್ನ ವಿವಾಹದ ಸಮಯ ಮತ್ತು ಯೌವನಕಾಲ ಕಳೆದು ಹೋಗುತ್ತಾ ಇದೆ. ॥48॥

(ಶ್ಲೋಕ-49)

ಮೂಲಮ್

ಪ್ರತ್ಯಾಖ್ಯಾನಾಚ್ಚ ಭೀತೈಸ್ತ್ವಂ ನ ವರೈರ್ಗೃಹ್ಯಸೇ ಶುಭೇ ।
ಸಾ ತ್ವಂ ವರಯ ಭದ್ರಂ ತೇ ಮುನಿಂ ಬ್ರಹ್ಮಕುಲೊದ್ಭವಮ್ ॥

(ಶ್ಲೋಕ-50)

ಮೂಲಮ್

ಸ್ವಯಮೇವ ತತಃ ಪುತ್ರಾ ಭವಿಷ್ಯಂತಿ ಮಹಾಬಲಾಃ ।
ಈದೃಶಾಃ ಸರ್ವಶೋಭಾಢ್ಯಾ ಧನದೇನ ಸಮಾಃ ಶುಭೇ ॥

ಅನುವಾದ

ಆದರೆ ಹೇ ಸುಂದರೀ! ‘ನೀನು ಅವನನ್ನು ತಿರಸ್ಕರಿಸುವೆ’ ಎಂಬೀ ಭಯದಿಂದ ಯಾವ ವರನೂ ವರಿಸುತ್ತಾ ಇಲ್ಲ. ಆದುದರಿಂದ ನಿನಗೆ ಮಂಗಳವಾಗಲಿ, ನೀನೇ ಸ್ವತಃ ಹೋಗಿ ಬ್ರಹ್ಮನ ವಂಶದಲ್ಲಿ ಹುಟ್ಟಿರುವ ಮುನಿವರ ವಿಶ್ರವನನ್ನು ವರಿಸು. ಹೇ ಶುಭೆ! ಆತನಿಂದ ನಿನಗೆ ಈ ಕುಬೇರನಿಗೆ ಸಮಾನರಾದ ಸರ್ವ ಶೋಭಾಸಂಪನ್ನರಾದ ಮಹಾಬಲಶಾಲಿಗಳಾದ ಪುತ್ರರು ಹುಟ್ಟುವರು’’ ॥49-50॥

(ಶ್ಲೋಕ-51)

ಮೂಲಮ್

ತಥೇತಿ ಸಾಶ್ರಮಂ ಗತ್ವಾ ಮುನೇರಗ್ರೇ ವ್ಯವಸ್ಥಿತಾ ।
ಲಿಖಂತೀ ಭುವಮಗ್ರೇಣ ಪಾದೇನಾಧೋಮುಖೀ ಸ್ಥಿತಾ ॥

ಅನುವಾದ

ಆಗ ಅವಳು ‘ಹಾಗೇ ಆಗಲಿ’ ಎಂದು ಹೇಳಿ ಮುನೀಶ್ವರನ ಆಶ್ರಮಕ್ಕೆ ಹೋಗಿ ನಿಂತುಕೊಂಡು ಮುಖ ತಗ್ಗಿಸಿ ಕಾಲಿನ ಉಗುರಿನಿಂದ ನೆಲವನ್ನು ಕೆದಕುತ್ತಿದ್ದಳು. ॥51॥

(ಶ್ಲೋಕ-52)

ಮೂಲಮ್

ತಾಮಪೃಚ್ಛನ್ಮುನಿಃಕಾ ತ್ವಂ ಕನ್ಯಾಸಿ ವರವರ್ಣಿನಿ ।
ಸಾಬ್ರವೀತ್ಪ್ರಾಂಜಲಿರ್ಬ್ರಹ್ಮನ್ ಧ್ಯಾನೇನ ಜ್ಞಾತುಮರ್ಹಸಿ ॥

ಅನುವಾದ

ಮುನಿಯು ಆಕೆಯನ್ನು ಕೇಳಿದನು - ‘‘ಹೇ ಸುಂದರವರ್ಣದವಳೇ! ನೀನು ಯಾರು ಮತ್ತು ಯಾರ ಮಗಳು? ಹಾಗೂ ಇಲ್ಲಿಗೇಕೆ ಬಂದಿರುವೆ?’’ ಕೈಕಸಿಯು ಕೈಮುಗಿದುಕೊಂಡು ಹೇಳಿದಳು ‘‘ಬ್ರಹ್ಮನ್! ನೀವು ಧ್ಯಾನದಮೂಲಕ ಎಲ್ಲ ವನ್ನೂ ತಿಳಿಯಬಲ್ಲಿರಿ’’ ॥52॥

(ಶ್ಲೋಕ-53)

ಮೂಲಮ್

ತತೋ ಧ್ಯಾತ್ವಾ ಮುನಿಃ ಸರ್ವಂ ಜ್ಞಾತ್ವಾ ತಾಂ ಪ್ರತ್ಯಭಾಷತ ।
ಜ್ಞಾತಂ ತವಾಭಿಲಷಿತಂ ಮತ್ತಃ ಪುತ್ರಾನಭೀಪ್ಸಸಿ ॥

ಅನುವಾದ

ಆಗ ಮುನಿವರನು ಧ್ಯಾನದ ಮೂಲಕ ಎಲ್ಲಾ ವಿಚಾರವನ್ನು ತಿಳಿದುಕೊಂಡು ಆಕೆಗೆ ಹೇಳಿದನು ‘‘ನಾನು ನಿನ್ನ ಅಭಿಲಾಷೆಯನ್ನು ಅರಿತುಕೊಂಡೆನು, ನೀನು ನನ್ನಿಂದ ಪುತ್ರರನ್ನು ಬಯಸುತ್ತಿರುವೆಯಲ್ಲ! ॥53॥

(ಶ್ಲೋಕ-54)

ಮೂಲಮ್

ದಾರುಣಾಯಾಂ ತು ವೇಲಾಯಾಮಾಗತಾಸಿ ಸುಮಧ್ಯಮೇ ।
ಅತಸ್ತೇ ದಾರುಣೌ ಪುತೌ ರಾಕ್ಷಸೌ ಸಂಭವಿಷ್ಯತಃ ॥

ಅನುವಾದ

ಆದರೆ ಹೇ ಸುಂದರಿ! ನೀನು ಈ ಕಠಿಣ ಸಮಯದಲ್ಲಿ ಬಂದಿರುವೆ, ಆದುದರಿಂದ ನಿನ್ನ ಇಬ್ಬರು ಪುತ್ರರೂ ಸಹ ಮಹಾಭಯಂಕರ ರಾಕ್ಷಸರಾಗುವರು’’ ॥54॥

(ಶ್ಲೋಕ-55)

ಮೂಲಮ್

ಸಾಬ್ರವೀನ್ಮುನಿಶಾರ್ದೂಲ ತ್ವತ್ತೋಽಪ್ಯೇವಂವಿಧೌ ಸುತೌ ।
ತಾಮಾಹ ಪಶ್ಚಿಮೋ ಯಸ್ತೇ ಭವಿಷ್ಯತಿ ಮಹಾಮತಿಃ ॥

(ಶ್ಲೋಕ-56)

ಮೂಲಮ್

ಮಹಾಭಾಗವತಃ ಶ್ರೀಮಾನ್ ರಾಮಭಕ್ತ್ಯೇಕತತ್ಪರಃ ।
ಇತ್ಯುಕ್ತಾ ಸಾ ತಥಾ ಕಾಲೇ ಸುಷುವೇ ದಶಕಂಧರಮ್ ॥

(ಶ್ಲೋಕ-57)

ಮೂಲಮ್

ರಾವಣಂ ವಿಂಶತಿಭುಜಂ ದಶಶೀರ್ಷಂ ಸುದಾರುಣಮ್ ।
ತದ್ರಕ್ಷೋಜಾತಮಾತ್ರೇಣ ಚಚಾಲ ಚ ವಸುಂಧರಾ ॥

ಅನುವಾದ

ಆಕೆ ಹೇಳಿದಳು ‘‘ಹೇ ಮುನೀಶ್ವರ! ಏನು ನಿಮ್ಮ ಮೂಲಕವೂ ಅಂತಹ ಪುತ್ರರುಂಟಾಗಬೇಕೇ?’’ ಆಗ ಮುನೀಶ್ವರನು ಆಕೆಗೆ ಹೇಳಿದನು ‘‘ಅವರ ನಂತರ ಹುಟ್ಟುವ ಪುತ್ರನು ಮಹಾ ಬುದ್ಧಿವಂತ, ಪರಮ ಭಗವದ್ಭಕ್ತ, ಶ್ರೀಸಂಪನ್ನ ಹಾಗೂ ಏಕ ಮಾತ್ರ ರಾಮ ಭಕ್ತಿಯಲ್ಲಿಯೇ ತತ್ಪರನಾಗುವನು.’’ ಮುನೀಶ್ವರನು ಹೇಳಿದಂತೆ ಆಕೆಯು ಸರಿಯಾದ ಸಮಯದಲ್ಲಿ ಹತ್ತು ತಲೆ ಮತ್ತು ಇಪ್ಪತ್ತು ಬಾಹುಗಳುಳ್ಳ ಅತಿ ಭಯಂಕರ ರಾವಣನಿಗೆ ಜನ್ಮವಿತ್ತಳು. ಆ ರಾಕ್ಷಸನು ಹುಟ್ಟುತ್ತಲೇ ಭೂಮಿಯು ನಡುಗಿತು. ॥55-57॥

(ಶ್ಲೋಕ-58)

ಮೂಲಮ್

ಬಭೂವುರ್ನಾಶಹೇತೂನಿ ನಿಮಿತ್ತಾನ್ಯಖಿಲಾನ್ಯಪಿ ।
ಕುಂಭಕರ್ಣಸ್ತತೋ ಜಾತೋ ಮಹಾಪರ್ವತಸನ್ನಿಭಃ ॥

ಅನುವಾದ

ಮತ್ತು ಪ್ರಪಂಚದ ನಾಶಕ್ಕೆ ಸಮಸ್ತ ಕಾರಣಗಳೂ ಉಂಟಾದವು. ಅನಂತರ ಮಹಾಪರ್ವತಕ್ಕೆ ಸಮಾನನಾದ ದೊಡ್ಡ ಮೈಕಟ್ಟುಳ್ಳ ಕುಂಭಕರ್ಣ ಹುಟ್ಟಿದನು. ॥58॥

(ಶ್ಲೋಕ-59)

ಮೂಲಮ್

ತತಃ ಶೂರ್ಪಣಖಾ ನಾಮ ಜಾತಾ ರಾವಣಸೋದರೀ ।
ತತೋ ವಿಭೀಷಣೋ ಜಾತಃ ಶಾಂತಾತ್ಮಾ ಸೌಮ್ಯದರ್ಶನಃ ॥

(ಶ್ಲೋಕ-60)

ಮೂಲಮ್

ಸ್ವಾಧ್ಯಾಯೀ ನಿಯತಾಹಾರೋ ನಿತ್ಯಕರ್ಮಪರಾಯಣಃ ।
ಕುಂಭಕರ್ಣಸ್ತು ದುಷ್ಟಾತ್ಮಾ ದ್ವಿಜಾನ್ ಸಂತುಷ್ಟಚೇತಸಃ ॥

(ಶ್ಲೋಕ-61)

ಮೂಲಮ್

ಭಕ್ಷಯನ್ನೃಷಿಸಂಘಾಂಶ್ಚ ವಿಚಚಾರಾತಿದಾರುಣಃ ।
ರಾವಣೋಽಪಿ ಮಹಾಸತ್ತ್ವೋ ಲೋಕಾನಾಂ ಭಯದಾಯಕಃ ।
ವವೃಧೇ ಲೋಕನಾಶಾಯ ಹ್ಯಾಮಯೋ ದೇಹಿನಾಮಿವ ॥

ಅನುವಾದ

ಮತ್ತೆ ರಾವಣನ ಸಹೋದರಿ ಶೂರ್ಪಣಖಿಯ ಜನ್ಮವಾಯಿತು ಮತ್ತು ಅವಳ ಹಿಂದೆ ಅತಿ ಶಾಂತಚಿತ್ತ ಸೌಮ್ಯಮೂರ್ತಿ ವಿಭೀಷಣನು ಹುಟ್ಟಿದನು. ಅವನು ಅತ್ಯಂತ ಸ್ವಾಧ್ಯಾಯ ಶೀಲ ಮಿತಾಹಾರೀ ಮತ್ತು ನಿತ್ಯಕರ್ಮಪರಾಯಣನಾಗಿದ್ದನು. ಅತ್ಯಂತ ಭಯಂಕರ ದುರಾತ್ಮಾ ಕುಂಭಕರ್ಣನು ಸಂತುಷ್ಟಚಿತ್ತದ ಬ್ರಾಹ್ಮಣ ಮತ್ತು ಋಷಿಗಳ ಸಮೂಹಗಳನ್ನು ತಿಂದುಹಾಕುತ್ತಾ ಭೂಮಿಯಲ್ಲಿ ಓಡಾಡುತ್ತಿದ್ದನು. ಎಲ್ಲ ಲೋಕಗಳನ್ನು ಭಯ ಭೀತಗೊಳಿ ಸುತ್ತಾ ಮಹಾಬಲಶಾಲಿಯಾದ ರಾವಣನು ಪ್ರಾಣಿಗಳನ್ನು ನಾಶ ಪಡಿಸುವ ರೋಗದಂತೆ ಮೂರು ಲೋಕಗಳನ್ನು ನಾಶ ಮಾಡಲುದ್ಯುಕ್ತನಾದನು. ॥59-61॥

(ಶ್ಲೋಕ-62)

ಮೂಲಮ್

ರಾಮ ತ್ವಂ ಸಕಲಾಂತರಸ್ಥಮಭಿತೋ
ಜಾನಾಸಿ ವಿಜ್ಞಾನದೃಕ್
ಸಾಕ್ಷೀ ಸರ್ವಹೃದಿ ಸ್ಥಿತೋ ಹಿ ಪರಮೋ
ನಿತ್ಯೋದಿತೋ ನಿರ್ಮಲಃ ।
ತ್ವಂ ಲೀಲಾಮನುಜಾಕೃತಿಃ ಸ್ವಮಹಿಮನ್
ಮಾಯಾಗುಣೈರ್ನಾಜ್ಯಸೇ
ಲೀಲಾರ್ಥಂ ಪ್ರತಿಚೋದಿತೋಽದ್ಯ ಭವತಾ
ವಕ್ಷ್ಯಾಮಿ ರಕ್ಷೋದ್ಭವಮ್ ॥

ಅನುವಾದ

ಹೇ ರಾಮಾ! ನೀನು ಎಲ್ಲರ ಅಂತಃಕರಣಗಳಲ್ಲಿ ವಿರಾಜಮಾನನಾಗಿರುವೆ. ಸಾಕ್ಷೀರೂಪದಿಂದ ತನ್ನ ಜ್ಞಾನದೃಷ್ಟಿಯ ಮೂಲಕ ಎಲ್ಲರ ಹೃದಯದಲ್ಲಿರುವ ವಿಚಾರಗಳನ್ನು ಚೆನ್ನಾಗಿ ತಿಳಿದಿರುವೆ. ನೀನು ಪರಮ ಶ್ರೇಷ್ಠ, ನಿತ್ಯ-ಪ್ರಬುದ್ಧ ಮತ್ತು ನಿರ್ಮಲನಾಗಿರುವೆ. ತನ್ನ ಮಹಿಮೆಯಲ್ಲಿರುವ ಪರಮೇಶ್ವರಾ! ನೀನು ಲೀಲೆಯಿಂದಲೇ ಈ ಮನುಷ್ಯರೂಪವನ್ನು ತಾಳಿರುವೆ, ಆದರೆ ನೀನು ಮಾಯೆಯ ಗುಣಗಳಿಂದ ಲಿಪ್ತನಾಗುವುದಿಲ್ಲ. ನೀನು ಎಲ್ಲವನ್ನು ಬಲ್ಲವನಾಗಿದ್ದರೂ ಲೀಲಾವಶನಾಗಿ ನನ್ನನ್ನು ಕೇಳಿದೆ, ಆದುದರಿಂದ ನಾನು ಈ ರಾಕ್ಷಸರ ಜನ್ಮವೃತ್ತಾಂತವನ್ನು ತಿಳಿಸುತ್ತಿದ್ದೇನೆ. ॥62॥

(ಶ್ಲೋಕ-63)

ಮೂಲಮ್

ಜಾನಾಮಿ ಕೇವಲಮನಂತಮಚಿಂತ್ಯಶಕ್ತಿಂ
ಚಿನ್ಮಾತ್ರಮಕ್ಷರಮಜಂ ವಿದಿತಾತ್ಮತತ್ತ್ವಮ್ ।
ತ್ವಾಂ ರಾಮ ಗೂಢನಿಜರೂಪಮನುಪ್ರವೃತ್ತೋ
ಮೂಢೋಽಪ್ಯಹಂ ಭವದನುಗ್ರಹತಶ್ಚರಾಮಿ ॥

ಅನುವಾದ

ಹೇ ರಾಮಾ! ನಾನು ನಿನನ್ನು ಅದ್ವಿತೀಯ, ಅನಂತ, ಅಚಿಂತ್ಯಶಕ್ತಿ, ಸಂಪನ್ನ, ಚಿನ್ಮಾತ್ರ, ಅಕ್ಷರ, ಅಜನ್ಮಾ ಮತ್ತು ಆತ್ಮಬೋಧಸ್ವರೂಪೀ ಎಂದು ತಿಳಿಯುತ್ತೇನೆ. ಮಾಯೆಯ ಮೂಲಕ ತನ್ನ ಸ್ವರೂಪವನ್ನು ಗುಪ್ತವಾಗಿಡುವ ನಿನ್ನಲ್ಲಿ (ಭಜಿಸುವ ಮೂಲಕ) ಪರಾಯಣನಾಗಿ ಮೂಢನಾದ ನಾನೂ ಕೂಡ ನಿನ್ನ ಕೃಪೆಯಿಂದ ಸ್ವಚ್ಛಂದವಾಗಿ ತಿರುಗಾಡುತ್ತಾ ಇರುತ್ತೇನೆ. ॥63॥

(ಶ್ಲೋಕ-64)

ಮೂಲಮ್

ಏವಂ ವದಂತಮಿನವಂಶಪವಿತ್ರಕೀರ್ತಿಃ
ಕುಂಭೋದ್ಭವಂ ರಘುಪತಿಃ ಪ್ರಹಸನ್ಬಭಾಷೇ ।
ಮಾಯಾಶ್ರಿತಂ ಸಕಲಮೇತದನನ್ಯಕತ್ವಾನ್
ಮತ್ಕೀರ್ತನಂ ಜಗತಿ ಪಾಪಹರಂ ನಿಬೋಧ ॥

ಅನುವಾದ

ಅಗಸ್ತ್ಯರು ಈ ಪ್ರಕಾರ ಹೇಳಿದ ಬಳಿಕ ಸೂರ್ಯವಂಶದ ಸುಯಶಸ್ವರೂಪೀ ಶ್ರೀರಘುನಾಥನು ನಕ್ಕು ಅಗಸ್ತ್ಯರಲ್ಲಿ ಹೇಳಿದನು ‘‘ಈ ಸಂಪೂರ್ಣ ಜಗತ್ತು ಮಾಯಾ ಮಯವಾಗಿದೆ, ಏಕೆಂದರೆ ವಾಸ್ತವದಲ್ಲಿ ಇದು ನನ್ನಿಂದ ಬೇರೆಯಾಗಿಲ್ಲ; ಹೇ ಮುನಿಗಳೇ! ನೀವು ನನ್ನ ಗುಣ-ಕೀರ್ತನೆಯನ್ನೇ ಈ ಜಗತ್ತಿನಲ್ಲಿ ಪಾಪಗಳನ್ನೆಲ್ಲಾ ನಾಶಮಾಡುವುದೆಂದು ತಿಳಿಯಿರಿ’’ ॥64॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಉತ್ತರಕಾಂಡೇ ಪ್ರಥಮಃ ಸರ್ಗಃ ॥1॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಉತ್ತರಕಾಂಡದಲ್ಲಿ ಒಂದನೆಯ ಸರ್ಗವು ಮುಗಿಯಿತು.